Tag: Hyderabad

  • ಕರ್ನೂಲ್‍ನಲ್ಲಿ ಬಸ್ ಪಲ್ಟಿ- ಓರ್ವ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಕರ್ನೂಲ್‍ನಲ್ಲಿ ಬಸ್ ಪಲ್ಟಿ- ಓರ್ವ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಹೈದರಾಬಾದ್/ಮಂಡ್ಯ: ಬಸ್ ಪಲ್ಟಿಯಾಗಿ ಓರ್ವ ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.

    ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಗ್ರಾಮದ ನಿವಾಸಿಗಳು ಖಾಸಗಿ ಬಸ್‍ನಲ್ಲಿ ಮಂತ್ರಾಲಯಕ್ಕೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿ ವಾಪಸ್ ಬರುವಾಗ ಮಂತ್ರಾಲಯ ಕರ್ನೂಲ್ ಮಾರ್ಗ ಮಧ್ಯೆ ಅಪಘಾತ ಸಂಭವಿಸಿದೆ.

    ಎದುರುಗಡೆಯಿಂದ ಬಂದ ಕಾರನ್ನು ಅವಾಯ್ಡ್ ಮಾಡಲು ಹೋಗಿ ಬಸ್ ಪಲ್ಟಿಯಾಗಿದೆ. ಪರಿಣಾಮ ಸ್ಥಳದಲ್ಲೇ ಒಬ್ಬರು ಮೃತರಾಗಿದ್ದಾರೆ. ಬಸ್‍ನಲ್ಲಿ 45 ಜನ ಪ್ರಯಾಣಿಕರಿದ್ದು 20ಕ್ಕೂ ಅಧಿಕ ಜನರಿಗೆ ಗಾಯಗಳಾಗಿದೆ. ಗಾಯಾಳುಗಳನ್ನು ಕರ್ನೂಲ್ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ನಾಲ್ಕು ಜನರ ಸ್ಥಿತಿ ಚಿಂತಾಜನಕವಾಗಿದೆ.

    ಮಂಡ್ಯ ಜಿಲ್ಲೆಗೆ 2018-19 ಕರಾಳ ವರ್ಷವಾಗಿ ಕಾಡುತ್ತಿದೆಯಾ..!? ಬಸ್ ದುರಂತದಲ್ಲಿ ಹತ್ತಾರು ಜೀವ ಕಳೆದುಕೊಳ್ಳಲಾಯಿತು. ಅಂಬರೀಶ್ ಮೃತಪಟ್ಟರು, ವೀರಯೋಧ ಗುರು ಹುತಾತ್ಮರಾದರು. ಆ ಬಳಿಕ ಮಂಡ್ಯದಲ್ಲಿ ಬಸ್ ಅಪಘಾತದಲ್ಲಿ ನವವಿವಾಹಿತೆ ಮೃತಪಟ್ಟಿದ್ದಾರೆ. ಇದೀಗ ಮಂತ್ರಾಲಯ ಪ್ರವಾಸ ಹೋಗಿ ವಾಪಸ್ ಬರುವಾಗ ಭೀಕರ ದುರಂತ ಸಂಭವಿಸಿ ಓರ್ವ ಮೃತಪಟ್ಟರೆ, 20 ಜನ ಗಾಯಗೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಿಯಕರನ ರೂಮಿನಲ್ಲೇ ಪ್ರೇಯಸಿ ಆತ್ಮಹತ್ಯೆ

    ಪ್ರಿಯಕರನ ರೂಮಿನಲ್ಲೇ ಪ್ರೇಯಸಿ ಆತ್ಮಹತ್ಯೆ

    ಹೈದರಾಬಾದ್: ಪ್ರಿಯಕರ ಮದುವೆಯಾಗಲೂ ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ಆತನ ರೂಮಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದದ್ರಿ ಜಿಲ್ಲೆಯ ವಲ್ಲಿಗೊಂಡ ಮಂಡಲದ ಪುಲಿಗಲ್ಲದಲ್ಲಿ ನಡೆದಿದೆ.

    ಪೈಲ್ಲಾ ದಿವ್ಯ ರೆಡ್ಡಿ(20) ಆತ್ಮಹತ್ಯೆಗೆ ಶರಣಾದ ಯುವತಿ. ಈಕೆ ಮೆಡಿಪಲ್ಲಿನಲ್ಲಿರುವ ತನ್ನ ಗೆಳೆಯ ಬೊಗ್ಗಾ ನವೀನ್ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆರೋಪಿ ನವೀನ್ ವಿರುದ್ಧ ಆತ್ಮಹತ್ಯೆ ಪ್ರಕರಣ ಹಾಗೂ ವಂಚನೆ ಪ್ರಕರಣವನ್ನು ಬುಕ್ ಮಾಡಲಾಗಿದ್ದು, ವಿಚಾರಣೆಗೆಂದು ಆತನನ್ನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ದಿವ್ಯಾ ಪದವಿ ವ್ಯಾಸಂಗ ಮಾಡುತ್ತಿದ್ದು, ರಾಮಂತಪುರದಲ್ಲಿ ಹಾಸ್ಟೆಲ್ ನಲ್ಲಿ ಇದ್ದಳು. ನವೀನ್ ಮತ್ತು ದಿವ್ಯಾ ಒಂದು ವರ್ಷದಿಂದ ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ಭರವಸೆ ಕೊಟ್ಟು ಆಕೆಯ ಜೊತೆ ಸಂಬಂಧ ಬೆಳೆಸಿದ್ದನು. ಆದರೆ ಇತ್ತೀಚೆಗೆ ನವೀವ್, ದಿವ್ಯಾಳಿಂದ ದೂರವಿರಲು ಪ್ರಯತ್ನಿಸಿದ್ದಾನೆ. ಹೀಗಾಗಿ ದಿವ್ಯಾ ಬುಧವಾರ ತಮ್ಮ ಮದುವೆಯ ಬಗ್ಗೆ ಮಾತನಾಡಲು ನವೀನ್ ರೂಮಿಗೆ ಹೋಗಿದ್ದಾಳೆ. ಅಲ್ಲಿ ನವೀನ್ ಮದುವೆಯಾಗಲು ನಿರಾಕರಿಸಿ ರೂಮಿನಿಂದ ಹೊರಗಡೆ ಹೋಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಸ್ವಲ್ಪ ಸಮಯದ ನಂತರ ನವೀನ್ ರೂಮಿಗೆ ಹಿಂದಿರುಗಿ ಬಂದಿದ್ದಾನೆ. ಆದರೆ ಒಳಗಡೆಯಿಂದ ರೂಮಿನ ಬಾಗಿಲನ್ನು ಲಾಕ್ ಮಾಡಲಾಗಿತ್ತು. ನಂತರ ಬಾಗಿಲನ್ನು ತೆರೆದು ನೋಡಿದಾಗ ದಿವ್ಯಾ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣ ನವೀನ್ ಪೊಲೀಸರಿಗೆ ಫೋನ್ ಮಾಡಿ ತಿಳಿಸಿದ್ದಾನೆ ಎಂದು ಇನ್ಸ್ ಪೆಕ್ಟರ್ ಅಂಜೀ ರೆಡ್ಡಿ ಹೇಳಿದ್ದಾರೆ.

    ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ದಿವ್ಯಾಳ ಪೋಷಕರಿಗೆ ಮಾಹಿತಿ ತಿಳಿಸಿದ್ದಾರೆ. ದಿವ್ಯಾ ತಂದೆ ಮಧುಸೂಧನ್ ರೆಡ್ಡಿ, ನನ್ನ ಮಗಳಿಗೆ ನವೀನ್ ಮೋಸ ಮಾಡಿದ್ದಾನೆ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೆಪಿಸಿದ್ದಾನೆ ಎಂದು ದೂರು ದಾಖಲಿಸಿದ್ದಾರೆ.

    ಸದ್ಯಕ್ಕೆ ತಂದೆ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಐಪಿಸಿ ಸೆಕ್ಷನ್ 420 (ವಂಚನೆ) ಮತ್ತು 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 100ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಟಾರ್ ಡೈರೆಕ್ಟರ್ ಕೋಡಿ ರಾಮಕೃಷ್ಣ ನಿಧನ

    100ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಟಾರ್ ಡೈರೆಕ್ಟರ್ ಕೋಡಿ ರಾಮಕೃಷ್ಣ ನಿಧನ

    ಹೈದರಾಬಾದ್: ತೆಲುಗು, ತಮಿಳು, ಕನ್ನಡ ಸೇರಿದಂತೆ ಪಂಚ ಭಾಷೆಗಳಲ್ಲಿ 100ಕ್ಕೂ ಅಧಿಕ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಕೋಡಿ ರಾಮಕೃಷ್ಣ ವಿಧಿವಶರಾಗಿದ್ದಾರೆ.

    ಅನಾರೋಗ್ಯದ ನಿಮಿತ್ತ ಹೈದ್ರಾಬಾದ್‍ನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಕೋಡಿ ರಾಮಕೃಷ್ಣ ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ. ಪಂಚ ಭಾಷೆಯಲ್ಲಿ 100 ಕ್ಕೂ ಹೆಚ್ಚು ಸಿನಿಮಾಗಳನ್ನ ನಿರ್ದೇಶಿಸಿದ ಕೋಡಿ ರಾಮಕೃಷ್ಣ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದರು. ಕನ್ನಡದ ನಾಗರಹಾವು, ಮಂಗಮ್ಮಗರಿ, ಅಂಕುಶಂ, ಅಮ್ಮೋರು, ಅರುಂಧತಿ ಇವರು ನಿರ್ದೇಶನ ಕೆಲ ಸೂಪರ್ ಹಿಟ್ ಸಿನಿಮಾಗಳಾಗಿವೆ.

    ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪಲ್ಲಕೊಳ್ಳು ಗ್ರಾಮದಲ್ಲಿ ಜನಿಸಿದ್ದ ಇವರು ಕನ್ನಡ, ತಮಿಳು, ಮಲಯಾಳಂ, ಹಿಂದಿ, ತೆಲುಗು ಭಾಷೆಗಳಲ್ಲಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. 1982 ರಲ್ಲಿ ಇವರ ನಿರ್ದೇಶನದ ಮೊದಲ ಸಿನಿಮಾ ತೆರೆಕಂಡಿತ್ತು. 2016 ರಲ್ಲಿ ಕನ್ನಡ ವಿಷ್ಣುವರ್ಧನ್ ಅಭಿನಯದಲ್ಲಿ ವಿಶೇಷ ತಂತ್ರಜ್ಞಾನದೊಂದಿಗೆ ನಾಗರಹಾವು ಸಿನಿಮಾ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಟಾಲಿವುಡ್‍ನಲ್ಲಿ ‘ನಾಗಭರಣಂ’ ಎಂದು ಬಿಡುಗಡೆಯಾಗಿತ್ತು. ಇದೇ ಇವರ ಅಂತಿಮ ಸಿನಿಮಾ ಆಗಿದೆ.

    ಕೆಲ ವರ್ಷಗಳಿಂದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಇವರಿಗೆ ಹೃದಯಘಾತ ಕೂಡ ಸಂಭವಿಸಿತ್ತು. ಈ ವೇಳೆ ಉತ್ತಮ ಚಿಕಿತ್ಸೆ ಲಭ್ಯವಾದ ಕಾರಣ ಬಹುಬೇಗ ಗುಣಮುಖರಾಗಿದ್ದರು. ಗುರುವಾರ ತೀವ್ರ ಆನಾರೋಗ್ಯಕ್ಕೆ ಒಳಗಾದ ರಾಮಕೃಷ್ಣ ಅವರನ್ನು ಆಸ್ಪತ್ರೆ ದಾಖಲಿಸಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನದ ವೇಳೆಗೆ ನಿಧನರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕತ್ತು ಸೀಳಿ ಪ್ರೇಯಸಿಯ ಕೊಲೆಗೈದು ಠಾಣೆಗೆ ತೆರಳಿದ..!

    ಕತ್ತು ಸೀಳಿ ಪ್ರೇಯಸಿಯ ಕೊಲೆಗೈದು ಠಾಣೆಗೆ ತೆರಳಿದ..!

    ಹೈದರಾಬಾದ್: ಶೀಲ ಶಂಕಿಸಿ ಪ್ರಿಯಕರನೊಬ್ಬ ತನ್ನ ಪ್ರೇಯಸಿಯ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಗುರುವಾರ ಆಂಧ್ರ ಪ್ರದೇಶದ ತೆನಾಲಿಯಲ್ಲಿ ನಡೆದಿದೆ.

    ಸತ್ಯನಾರಾಯಣ ಪ್ರೇಯಸಿಯನ್ನು ಕತ್ತು ಸೀಳಿದ ಪ್ರಿಯಕರ. ಸತ್ಯನಾರಾಯಣ ಹಲವು ವರ್ಷಗಳಿಂದ ಜ್ಯೋತಿಯನ್ನು ಪ್ರೀತಿಸುತ್ತಿದ್ದನು. ಅಲ್ಲದೆ ಇಬ್ಬರು ಬಹಳ ಸಮಯದಿಂದ ಒಟ್ಟಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ.

    ಇಬ್ಬರು ಜೊತೆಯಲ್ಲಿ ವಾಸಿಸುತ್ತಿದ್ದ ವೇಳೆ ಸತ್ಯನಾರಾಯಣ ತನ್ನ ಪ್ರೇಯಸಿ ಜ್ಯೋತಿಯ ಶೀಲದ ಬಗ್ಗೆ ಹೆಚ್ಚು ಅನುಮಾನ ಪಡಲು ಶುರು ಮಾಡಿದ್ದನು. ಅಲ್ಲದೆ ಆಕೆಯ ಬಗ್ಗೆ ಕೆಟ್ಟದಾಗಿ ಮಾತನಾಡಲು ಶುರು ಮಾಡಿದ್ದನು. ಇದೇ ವೊಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ಆಗಾಗ ಜಗಳಗಳು ನಡೆಯುತ್ತಿತ್ತು.

    ಗುರುವಾರ ಸತ್ಯನಾರಾಯಣ ತನ್ನ ಪ್ರೇಯಸಿ ಜ್ಯೋತಿಯ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಪೊಲೀಸ್ ಠಾಣೆಗೆ ಹೋಗಿ ತಾನು ಕೊಲೆ ಮಾಡಿರುವುದಾಗಿ ಸ್ವತಃ ಆತನೇ ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆ ವಿಚಾರವನ್ನು ಪ್ರಸ್ತಾಪಿಸಿ ಪಾಕ್ ಪ್ರಧಾನಿಗೆ ಆರ್‌ಜಿವಿ ಕೊಟ್ಟ ಟಾಂಗ್ ಫುಲ್ ವೈರಲ್

    ಮದ್ವೆ ವಿಚಾರವನ್ನು ಪ್ರಸ್ತಾಪಿಸಿ ಪಾಕ್ ಪ್ರಧಾನಿಗೆ ಆರ್‌ಜಿವಿ ಕೊಟ್ಟ ಟಾಂಗ್ ಫುಲ್ ವೈರಲ್

    ಹೈದರಾಬಾದ್: ಪುಲ್ವಾಮಾ ದಾಳಿಯಲ್ಲಿ ಸಾಕ್ಷ್ಯಾಧಾರಗಳಿಲ್ಲದೇ ಪಾಕಿಸ್ತಾನ ವಿರುದ್ಧ ಭಾರತ ಆರೋಪ ಮಾಡುತ್ತಿದೆ ಎಂದಿದ್ದ ಪಾಕ್ ಪ್ರಧಾನಿಗೆ ನಿರ್ದೇಶಕ ರಾಮ್ ಗೋಪಲ್ ವರ್ಮಾ ಮೈಮುಟ್ಟಿ ನೋಡಿಕೊಳ್ಳುವಂತೆ ಟಾಂಗ್ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಕುರಿತು ಟ್ವಿಟ್ಟರ್ ನಲ್ಲಿ ಫೋಟೋವೊಂದನ್ನು ಶೇರ್ ಮಾಡಿರುವ ಆರ್‍ಜಿವಿ, ಎಲ್ಲಾ ಸಮಸ್ಯೆಗಳು ಮಾತುಕತೆಯಿಂದಲೆ ಬಗೆಹರಿಯುವುದಾದರೇ 3ನೇ ಮದುವೆ ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ. ಪುಲ್ವಾಮಾ ದಾಳಿಯ 3 ದಿನಗಳ ಬಳಿಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ 6 ನಿಮಿಷಗಳ ವಿಡಿಯೋ ಸಂದರ್ಶನವನ್ನು ನೀಡಿದ್ದರು. ಈ ವೇಳೆ ಆಧಾರ ರಹಿತವಾಗಿ ಭಾರತ ಪಾಕಿಸ್ತಾನ ಮೇಲೆ ಆರೋಪ ಮಾಡುತ್ತಿದೆ. ಭಾರತ ಏನಾದರೂ ಕ್ರಮಕ್ಕೆ ಮುಂದಾದರೆ ನಾವು ಪ್ರತ್ಯುತ್ತರವನ್ನು ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.

    ಪುಲ್ವಾಮಾ ದಾಳಿ ಬಗ್ಗೆ ಸರಣಿ ಟ್ವೀಟ್ ಮಾಡಿರುವ ವರ್ಮಾ, ಅಮೆರಿಕ ದೇಶಕ್ಕೆ ಲಾಡೆನ್ ಪಾಕಿಸ್ತಾನದಲ್ಲಿ ವಾಸವಾಗಿದ್ದಾನೆ ಎನ್ನುವ ಅಂಶ ತಿಳಿದಿದ್ದು, ಆದರೆ ಪಾಕಿಸ್ತಾನಕ್ಕೆ ಮಾತ್ರ ಇದರ ಅರಿವು ಆಗಿಲ್ಲ. ನಿಮ್ಮ ದೇಶದಲ್ಲಿ ಯಾರಿದ್ದಾರೆ ಎಂಬುವುದೇ ನಿಮಗೆ ತಿಳಿದಿಲ್ಲವಾ? ದಯಮಾಡಿ ನನಗೆ ಎಜುಕೇಟ್ ಮಾಡಿ ಎಂದು ವ್ಯಂಗ್ಯವಾಗಿ ಕಾಲೆಳೆದಿದ್ದಾರೆ.

    ಮತ್ತೊಂದು ಟ್ವೀಟ್‍ನಲ್ಲಿ ಉಗ್ರ ಸಂಘಟನೆಗಳಾದ ಜೈಶ್ ಇ ಮೊಹಮದ್, ಲಷ್ಕರ್ ಎ ತೋಯಿಬಾ, ತಾಲಿಬಾನ್, ಅಲ್ ಕೈದಾ ಸಂಘಟನೆಗಳು ಪಾಕಿಸ್ತಾನದಲ್ಲಿ ಅಶ್ರಯ ಪಡೆದಿದೆ ಎಂದು ಯಾರು ನನಗೆ ಹೇಳಿಲ್ಲ. ಆದರೆ ಒಮ್ಮೆಯೂ ನೀವು ಉಗ್ರ ಸಂಘಟನೆಗಳು ಪಾಕಿಸ್ತಾನದಲ್ಲಿ ಇಲ್ಲ ಎನ್ನುವ ಹೇಳಿಕೆಯನ್ನೇ ನೀಡಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.

    ನಿರ್ದೇಶಕ ಆರ್ ಜಿವಿ ಸಿನಿಮಾ ಸೇರಿದಂತೆ ಹಲವು ಅಂಶಗಳ ಕುರಿತು ವಿವರಿಸಲು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇರುತ್ತಾರೆ. ಸದ್ಯ ಅವರ ನಿರ್ದೇಶನದ ಬಹು ವಿವಾದಾತ್ಮಕ ಚಿತ್ರ ‘ಲಕ್ಷ್ಮಿಸ್ ಎನ್‍ಟಿಆರ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • `ಅಪ್ಪ’ ಆಗಲಿದ್ದಾರೆ ವಿಜಯ್ ದೇವರಕೊಂಡ

    `ಅಪ್ಪ’ ಆಗಲಿದ್ದಾರೆ ವಿಜಯ್ ದೇವರಕೊಂಡ

    ಹೈದರಾಬಾದ್: ಅರ್ಜುನ್ ರೆಡ್ಡಿ ಖ್ಯಾತಿಯ ಟಾಲಿವುಡ್ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಅವರು ಸದ್ಯ `ಡಿಯರ್ ಕಾಮ್ರೆಡ್’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರದ ನಂತರ ಅವರು ಈಗಾಗಲೇ ಸಹಿ ಹಾಕಿರುವ `ಕ್ರಾಂತಿ ಮಾಧವ್’ ಚಿತ್ರ ಸೆಟ್ಟೆರಲಿದೆ. ಈ ಚಿತ್ರದಲ್ಲಿ ವಿಜಯ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಇಂಟರೆಸ್ಟಿಂಗ್ ವಿಷಯ.

    ಹೌದು. ವಿಜಯ್ ಮೊದಲ ಬಾರಿಗೆ ಇಂತಹ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದು, ಅಭಿಮಾನಿಗಳು ಅವರು ಹೇಗೆ ಈ ಪಾತ್ರದಲ್ಲಿ ಮಿಂಚಲಿದ್ದಾರೆ ಎಂದು ನೋಡಲು ಕಾರರದಿಂದಿದ್ದಾರೆ. ಸದ್ಯ `ಡಿಯರ್ ಕಾಮ್ರೆಡ್’ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರಿಗೆ ಜೋಡಿಯಾಗಿ `ಗೀತ ಗೋವಿಂದಂ’ ಖ್ಯಾತಿಯ ರಶ್ಮಿಕಾ ಮಂದಣ್ಣ ನಟಿಸುತ್ತಿರುವುದು ಸಿನಿರಂಗದಲ್ಲಿ ಬಹಳಷ್ಟು ನಿರೀಕ್ಷೆಯನ್ನು ಹುಟ್ಟಿಸಿದೆ. ಈ ಚಿತ್ರದ ಶೂಟಿಂಗ್ ಇನ್ನೇನೂ ಮುಗಿಯುವ ಹಂತಕ್ಕೆ ಬಂದಿದ್ದು, ಈ ಚಿತ್ರದ ನಂತರ ವಿಜಯ್ ದೇವರಕೊಂಡ ಅಪ್ಪನ ಪಾತ್ರದಲ್ಲಿ ನಟಿಸಲು ರೆಡಿಯಾಗಲಿದ್ದಾರೆ.

    `ಡಿಯರ್ ಕಾಮ್ರೆಡ್’ ನಂತರ `ಕ್ರಾಂತಿ ಮಾಧವ್’ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ. ಈ ಚಿತ್ರದಲ್ಲಿ ವಿಜಯ್ ಎಂಟು ವರ್ಷದ ಮಗುವಿನ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಕ್ರಾಂತಿ ಮಾಧವ್ ಸದ್ಯಕ್ಕೆ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಬಗ್ಗೆ ವಿಜಯ್ ದೇವರಕೊಂಡ ಅವರಿಗೆ ಕೆಲವು ನಿರೀಕ್ಷೆಗಳಿವೆ. ಯಾಕೆಂದರೆ ಅರ್ಜುನ್ ರೆಡ್ಡಿ ಬಳಿಕ ಗೀತ ಗೋವಿಂದಂ ಚಿತ್ರ ಬಿಟ್ಟರೆ ವಿಜಯ್ ದೇವರಕೊಂಡ ನಟಿಸಿದ್ದ ಇತರೇ ಚಿತ್ರಗಳು ಅಷ್ಟೇನೂ ಸದ್ದು ಮಾಡಿರಲಿಲ್ಲ. ಆದ್ದರಿಂದ ಇತ್ತೀಚಿಗೆ ವಿಜಯ್ ಪಾತ್ರಗಳ ಆಯ್ಕೆ ಹಾಗೂ ಸಿನಿಮಾ ಟೀಮ್ ಬಗ್ಗೆ ಬಹಳಷ್ಟು ಯೋಚಿಸಿ ಆಯ್ಕೆ ಮಾಡುತ್ತಿದ್ದಾರಂತೆ.

    ಕ್ರಾಂತಿ ಮಾಧವ್ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರಿಗೆ ನಾಯಕಿಯರಾಗಿ ರಾಶಿ ಖನ್ನ, ಐಶ್ವರ್ಯ ರಾಜೇಶ್ ಹಾಗೂ ಈಜಾಬೆಲ್ಲೆ ಲೈಟೇ ಆಯ್ಕೆಯಾಗಿದ್ದಾರೆ. ಅಂದುಕೊಂಡಂತೆ ಚಿತ್ರದ ಶೂಟಿಂಗ್ ಮುಗಿದರೆ ಈ ವರ್ಷದ ಕೊನೆಯಲ್ಲಿ ಚಿತ್ರ ತೆರೆ ಕಾಣಲಿದೆ ಎಂದು ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶೂಟಿಂಗ್ ಸೆಟ್‍ನಲ್ಲಿ ನಕ್ಕ ‘ಗರ್ಭಿಣಿ’ ಪ್ರಿಯಾಂಕ!

    ಶೂಟಿಂಗ್ ಸೆಟ್‍ನಲ್ಲಿ ನಕ್ಕ ‘ಗರ್ಭಿಣಿ’ ಪ್ರಿಯಾಂಕ!

    ಹೈದರಾಬಾದ್: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಗರ್ಭಿಣಿಯಾಗಿದ್ದಾರೆ ಎಂದು ಹೇಳುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೆಲವು ದಿನಗಳ ಹಿಂದೆ ಪ್ರಿಯಾಂಕಾ ಚೋಪ್ರಾ ಅವರು ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಫೋಟೋ ಶೂಟ್‍ಗೆ ಪೋಸ್ ಕೊಟ್ಟು ಕೊಟ್ಟು ಪ್ರಿಯಾಂಕಾ ಚೋಪ್ರಾ ಸುಸ್ತಾಗಿದ್ದರು. ಈ ವೇಳೆ ಹೊಟ್ಟೆ ಉಬ್ಬಿದ್ದಂತೆ ನಿಂತಿದ್ದು, ಆಗ ಪ್ರಿಯಾಂಕಾ ಅವರ ಫೋಟೋ ಕ್ಲಿಕ್ ಆಗಿದೆ.

    ಆ ಫೋಟೋದಲ್ಲಿ ಪ್ರಿಯಾಂಕಾ ಅವರ ಹೊಟ್ಟೆ ಹುಬ್ಬಿದಂತೆ ಕಾಣುತ್ತಿತ್ತು. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಸಖತ್ ವೈರಲ್ ಆಗಿ, ಪ್ರಿಯಾಂಕಾ ಅವರು ಗರ್ಭಿಣಿ ಆಗಿರಬಹುದು ಎಂದು ಕೆಲವು ಮಂದಿ ಅಭಿಪ್ರಾಯ ಪಟ್ಟಿದ್ದಾರೆ.

    ತನ್ನ ಫೋಟೋದ ಬಗ್ಗೆ ಸೆಟ್ ನಲ್ಲಿ ಮಾತನಾಡುವುದನ್ನು ಕೇಳಿ ಸ್ವತಃ ಪ್ರಿಯಾಂಕ ಅವರೇ ನಕ್ಕಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ತಾಯಿ ಸ್ಪಷ್ಟನೆ?
    ಸಾಮಾಜಿಕ ಜಾಲತಾಣಗಲ್ಲಿ ಸುದ್ದಿ ಹರಡುತ್ತಿದ್ದಂತೆ ನಾನೇ ನನ್ನ ಮಗಳಿಗೆ ಫೋನ್ ಮಾಡಿ ಕೇಳಿದೆ. ಆಗ ತುಂಬಾ ಸುಸ್ತಾಗಿತ್ತು. ಅದಕ್ಕೆ ಆ ರೀತಿ ನಿಂತುಕೊಂಡಿದ್ದೆ ಎಂದು ತಿಳಿಸಿದ್ದಾಳೆ. ಪ್ರಿಯಾಂಕ ಗರ್ಭಿಣಿ ಆಗಿಲ್ಲ. ಸದ್ಯಕ್ಕೆ ಪ್ರಿಯಾಂಕಾ ಕೆಲವು ಸಿನಿಮಾಗಳಲ್ಲಿ ಬ್ಯುಸಿಯಿದ್ದಾಳೆ. ಸದ್ಯಕ್ಕೆ ಮಗು ಬೇಡ ಎಂದು ದಂಪತಿ ನಿರ್ಧರಿಸಿಕೊಂಡಿದ್ದಾರೆ ಎಂದು ಪ್ರಿಯಾಂಕ ತಾಯಿ ಮಧು ಚೋಪ್ರಾ ಸ್ಪಷ್ಟನೆ ಕೊಟ್ಟಿದ್ದಾರೆ.

    ಪ್ರಿಯಾಂಕಾ ಚೋಪ್ರಾ 2018 ಡಿಸೆಂಬರ್ ನಲ್ಲಿ ಅಮೆರಿಕಾದ ಪಾಪ್ ಗಾಯಕ ನಿಕ್ ಜೋನ್ಸ್ ಅವರನ್ನು ಮದುವೆ ಆಗಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರವೂ ತಮ್ಮ ವೃತ್ತಿ ಜೀವನದಲ್ಲಿ ಪ್ರಿಯಾಂಕ ಬ್ಯುಸಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತರಗತಿಯಲ್ಲಿ ಶಿಕ್ಷಕರಿದ್ದಾಗ್ಲೇ ಡ್ರಿಂಕ್ಸ್ ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿನಿಯರು

    ತರಗತಿಯಲ್ಲಿ ಶಿಕ್ಷಕರಿದ್ದಾಗ್ಲೇ ಡ್ರಿಂಕ್ಸ್ ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿನಿಯರು

    ಹೈದಾರಾಬಾದ್: ಆಂಧ್ರಪ್ರದೇಶದ ಸರ್ಕಾರಿ ಶಾಲೆಯೊಂದರಲ್ಲಿ ಇಬ್ಬರು ವಿದ್ಯಾರ್ಥಿನಿಯರು ತರಗತಿಯಲ್ಲೇ ಮದ್ಯ ಸೇವನೆ ಮಾಡಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.

    ಒಂಬತ್ತನೇ ತರಗತಿ ವಿದ್ಯಾರ್ಥಿನಿಯರಿಬ್ಬರು ಈ ರೀತಿ ಮಾಡಿದ್ದು, ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದರು. ಈ ವೇಳೆ ವಿದ್ಯಾರ್ಥಿನಿಯರು ತಂಪು ಪಾನೀಯಾದ ಬಾಟಲಿಗೆ ಮದ್ಯ ಸೇವನೆ ಮಾಡಿ ಕುಡಿದಿದ್ದಾರೆ.

    ಮದ್ಯ ಸೇವನೆ ಮಾಡಿದ ಬಳಿಕ ವಿದ್ಯಾರ್ಥಿನಿಯರು ಬೇರೆ ವಿದ್ಯಾರ್ಥಿಗಳ ಜೊತೆ ಜೋರಾಗಿ ಮಾತನಾಡಲು ಶುರು ಮಾಡಿದ್ದಾರೆ. ಅಷ್ಟೇ ಅಲ್ಲದೇ ತರಗತಿಯಲ್ಲಿ ಮದ್ಯದ ವಾಸನೆ ಬಂದಿದೆ. ಇದರಿಂದ ಶಿಕ್ಷಕರು ಅನುಮಾನಗೊಂಡು ಜ್ಯೂಸ್ ಬಾಟಲನ್ನು ಕಿತ್ತುಕೊಂಡು ಪರಿಶೀಲಿಸಿದಾಗ ಮದ್ಯ ಮಿಕ್ಸ್ ಆಗಿರುವುದು ಪತ್ತೆಯಾಗಿದೆ. ಇದರಿಂದ ಕೋಪಗೊಂಡ ಶಾಲೆಯ ಆಡಳಿತ ಮಂಡಳಿ ತಕ್ಷಣ ಇಬ್ಬರು ವಿದ್ಯಾರ್ಥಿನಿಯರಿಬ್ಬರನ್ನು ಶಾಲೆಯಿಂದ ಅಮಾನತುಗೊಳಿಸಿದೆ.

    “ವಿದ್ಯಾರ್ಥಿನಿಯರು ತರಗತಿಯಲ್ಲಿ ಮದ್ಯಪಾನ ಮಾಡಿರುವುದು ಇದೇ ಮೊದಲ ಬಾರಿಯಲ್ಲ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ಸಿಕ್ಕಿ ಬಿದ್ದಿರುವ ವಿದ್ಯಾರ್ಥಿನಿಯರು, ಪ್ರತಿದಿನ ನಮ್ಮ ತಂದೆ ಮನೆಯಲ್ಲಿಯೇ ಕುಡಿಯುತ್ತಾರೆ. ಒಮ್ಮೆ ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ಬಾಟಲ್ ತೆಗೆದುಕೊಂಡು ಕುಡಿದಿದ್ದೆವು. ಬಳಿಕ ನಮಗೂ ಅದು ಹವ್ಯಾಸವಾಗಿ ಬೆಳೆಯಿತು” ಎಂದು ವಿದ್ಯಾರ್ಥಿನಿಯರು ಹೇಳಿರುವುದಾಗಿ ಮುಖ್ಯೋಪಾಧ್ಯಾಯ ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಇಬ್ಬರು ವಿದ್ಯಾರ್ಥಿನಿಯರ ಕೆಟ್ಟ ಅಭ್ಯಾಸದಿಂದ ಉಳಿದ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರನ್ನು ಶಾಲೆಯಿಂದ ಹೊರಹಾಕಲಾಗಿದೆ ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.

    ಮದ್ಯ ಸೇವನೆ ಒಂದು ಕೆಟ್ಟ ಹವ್ಯಾಸವಾಗಿದೆ. ಇದಕ್ಕೆ ಯುವಕರು ಬೇಗ ಅಡಿಕ್ಟ್ ಆಗುತ್ತಾರೆ. ಆದರೆ ವಿದ್ಯಾರ್ಥಿನಿಯರನ್ನು ಕೌನ್ಸೆಲಿಂಗ್ ಗೆ ಒಳಪಡಿಸಬೇಕಿತ್ತು. ಈ ರೀತಿ ಶಾಲೆಯಿಂದ ಹೊರ ಹಾಕುವುದು ತಪ್ಪು ಎಂದು ಸಾಮಾಜಿಕ ಕಾರ್ಯಕರ್ತರು ಪ್ರಶ್ನೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೇಯಸಿ ಮದ್ವೆಯಾದ ಮರುದಿನವೇ ಯುವಕ ಆತ್ಮಹತ್ಯೆ

    ಪ್ರೇಯಸಿ ಮದ್ವೆಯಾದ ಮರುದಿನವೇ ಯುವಕ ಆತ್ಮಹತ್ಯೆ

    ಹೈದರಾಬಾದ್: 24 ವರ್ಷದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ರಾಜೇಂದ್ರನಗರದಲ್ಲಿ ನಡೆದಿದ್ದು, ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಸಾಧ್ಯವಾಗದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.

    ಸಾಯಿ(24) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಸೋಮವಾರ ರಾಜೇಂದ್ರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ತನ್ನ ನಿವಾಸದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ಸಾಯಿ ಎಸ್‍ಎಸ್‍ಎಲ್‍ಸಿ ವರೆಗೂ ಶಿಕ್ಷಣ ಮಾಡಿದ್ದು, ಮುಂದಕ್ಕೆ ವಿದ್ಯಾಭ್ಯಾಸವನ್ನು ಮುಂದುವರಿಸದೇ ಅಂದಿನಿಂದಲೂ ಮನೆಯಲ್ಲಿಯೇ ಉಳಿದುಕೊಂಡಿದ್ದನು. ಆದರೆ ಸೋಮವಾರ ಸಂಜೆ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ರಾಜೇಂದ್ರನಗರ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಬಳಿಕ ಪೊಲೀಸರು ಬಂದು ಮೃತದೇಹವನ್ನು ಉಸ್ಮಾನಿಯಾ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ.

    ಮೃತ ಸಾಯಿ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ ಭಾನುವಾರ ಆಕೆಗೆ ಬೇರೆ ಹುಡುಗನ ಜೊತೆ ಮದುವೆಯಾಯಿತು. ಆದ್ದರಿಂದ ಖಿನ್ನತೆಗೆ ಒಳಗಾಗಿದ್ದನು ಎಂದು ಸಾಯಿ ಸ್ನೇಹಿತರು ಪೊಲೀಸರಿಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರೀತಿಯ ಕಾರಣದಿಂದಲೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಸದ್ಯಕ್ಕೆ ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೊಲೀಸ್ ಫಿಟ್ನೆಸ್ ಪರೀಕ್ಷೆಯಲ್ಲಿ ಕುಸಿದು ಬಿದ್ದು ಯುವತಿ ದುರ್ಮರಣ

    ಪೊಲೀಸ್ ಫಿಟ್ನೆಸ್ ಪರೀಕ್ಷೆಯಲ್ಲಿ ಕುಸಿದು ಬಿದ್ದು ಯುವತಿ ದುರ್ಮರಣ

    ಹೈದರಾಬಾದ್: ಪೊಲೀಸ್ ಕಾನ್ಸ್ ಟೇಬಲ್ ಫಿಟ್ನೆಸ್ ಪರೀಕ್ಷೆಯ 100 ಮೀಟರ್ ಓಟದಲ್ಲಿ 20 ವರ್ಷದ ಯುವತಿಯೊಬ್ಬಳು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ತೆಲಂಗಾಣದ ಕರಿಂನಗರದಲ್ಲಿ ನಡೆದಿದೆ.

    ಸೋಮವಾರ ಈ ಘಟನೆ ನಡೆದಿದ್ದು, ಮಮತಾ(20) ಮೃತ ಯುವತಿ. ಪೊಲೀಸ್ ತರಬೇತಿ ಕೇಂದ್ರದಲ್ಲಿ ವದ್ಲಕೊಂಡ ಮಮತಾ ಅವರು ಕುಸಿದು ಬಿದ್ದಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿಯೇ ಮಮತಾ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

    ಕರೀಂನಗರ ಪಟ್ಟಣದಲ್ಲಿ ಸೋಮವಾರ ಪೋಲಿಸ್ ತರಬೇತಿ ಕೇಂದ್ರದಲ್ಲಿ ಕಾನ್ಸ್ ಟೇಬಲ್ ನೇಮಕಾತಿ ಪರೀಕ್ಷೆಗಾಗಿ ಮಮತಾ ಭಾಗವಹಿಸಿದ್ದರು. ಅವರು 100 ಮೀ ಓಟದಲ್ಲಿ ಭಾಗವಹಿಸಿ ತಮ್ಮ ಗೋಲ್ ತಲುಪಿದ್ದು, ತಕ್ಷಣ ಕುಸಿದು ಬಿದ್ದಿದ್ದಾರೆ. ಸ್ಥಳದಲ್ಲಿದ್ದ ವೈದ್ಯರು ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದ್ದಾರೆ. ಬಳಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಮತಾ ಮೃತಪಟ್ಟಿದ್ದಾರೆ ಎಂದು ಕರೀಂನಗರ ಕಮೀಷನರ್ ವಿ.ಬಿ ಕಮಲಸಾನ್ ರೆಡ್ಡಿ ತಿಳಿಸಿದ್ದಾರೆ.

    ಮೃತ ಮಮತಾ ರಾಮದುಗು ಮಂಡಲ್ ನ ವೇಲಿಚಾಳ ಗ್ರಾಮದವರಾಗಿದ್ದು, ಎರಡು ತಿಂಗಳು ಪೊಲೀಸ್ ತರಬೇತಿ ಪಡೆದಿದ್ದರು. ಲಿಖಿತ ಪರೀಕ್ಷೆಯ ನಂತರ ಸೋಮವಾರ ಫಿಟ್ನೆಸ್ ಪರೀಕ್ಷೆಗೆಂದು ಬಂದಿದ್ದರು. ಈ ತರಬೇತಿಯಲ್ಲಿ ಮತ್ತಿಬ್ಬರು ನಿಶ್ಯಕ್ತರಾಗಿ ಕುಸಿದು ಬಿದ್ದಿದ್ದರು. ಅವರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಸದ್ಯ ಅವರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಮಮತಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ವರದಿ ಬಂದ ನಂತರ ಯುವತಿ ಸಾವಿಗೆ ನಿಖರ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv