Tag: hyderabad karnataka

  • BMTC ನಿರ್ವಾಹಕ ಹುದ್ದೆಗೆ ಪರೀಕ್ಷೆ, ಕಟ್ಟುನಿಟ್ಟಿನ ನಿಗಾವಹಿಸುವಂತೆ ಕ್ರಮ – ಕೆಇಎ

    BMTC ನಿರ್ವಾಹಕ ಹುದ್ದೆಗೆ ಪರೀಕ್ಷೆ, ಕಟ್ಟುನಿಟ್ಟಿನ ನಿಗಾವಹಿಸುವಂತೆ ಕ್ರಮ – ಕೆಇಎ

    ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಯಲ್ಲಿನ 2,500 ನಿರ್ವಾಹಕ ಹುದ್ದೆಗಳಿಗೆ ಭಾನುವಾರ (ಸೆ.1) ರಾಜ್ಯದ ಆರು ಜಿಲ್ಲೆಗಳ 50 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಈ ಸಲುವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ಸಕಲ ಸಿದ್ಧತೆ ಮಾಡಿಕೊಂಡಿದೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ (H Prasanna), ಹೈದರಾಬಾದ್ ಕರ್ನಾಟಕದವರಿಗಾಗಿ (Hyderabad Karnataka) ಜು.14 ರಂದು ಪರೀಕ್ಷೆ ನಡೆಸಲಾಗಿತ್ತು. ಹೈದರಾಬಾದ್ ಕರ್ನಾಟಕವಲ್ಲದ ಇತರರಿಗೆ ಭಾನುವಾರ ಸೆ.1 ಪರೀಕ್ಷೆ ನಡೆಯಲಿದ್ದು, ಕಟ್ಟುನಿಟ್ಟಿನ ನಿಗಾವಹಿಸುವಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಈ ಪರೀಕ್ಷೆಯಲ್ಲಿ ಹೈದರಾಬಾದ್ ಕರ್ನಾಟಕದವರೂ ಬರೆಯಬಹುದು ಎಂದು ಹೇಳಿದ್ದಾರೆ.ಇದನ್ನೂ ಓದಿ: ಗೌರವ ಡಾಕ್ಟರೇಟ್ ನಿರಾಕರಿಸಿದ್ದು ಯಾಕೆ ಎಂದು ಹೇಳಿ ಮ್ಯಾಕ್ಸ್ ಬಗ್ಗೆ ಅಪ್‌ಡೇಟ್ ಕೊಟ್ಟ ಸುದೀಪ್

    ಈ ಪರೀಕ್ಷೆಗೆ 23,000 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅಭ್ಯರ್ಥಿಗಳಿಗೆ ಡ್ರೆಸ್ ಕೋಡ್ (Dress Code) ಇದ್ದು, ಆ ಪ್ರಕಾರವೇ ಎಲ್ಲರೂ ಪರೀಕ್ಷೆಗೆ ಹಾಜರಾಗಬೇಕು ಎಂದು ಸೂಚಿಸಿದ್ದಾರೆ.

     ಬೆಂಗಳೂರು, ಬಳ್ಳಾರಿ, ಧಾರವಾಡ, ಕಲಬುರಗಿ, ದಾವಣಗೆರೆ, ಮಂಡ್ಯ ಜಿಲ್ಲೆಗಳಲ್ಲಿ ಪರೀಕ್ಷೆ ನಡೆಯಲಿದೆ. ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಪತ್ರಿಕೆಗಳಿಗೆ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ ತ್ವರಿತ ತೀರ್ಪಿನ ಅಗತ್ಯವಿದೆ: ಮೋದಿ

  • ಮೈಸೂರು ಆಯ್ತು ಈಗ ಹೈದರಾಬಾದ್‌ ಕರ್ನಾಟಕದತ್ತ ಕಣ್ಣು – ಬಿಜೆಪಿಯಿಂದ ಟಾರ್ಗೆಟ್‌ 25 ಫಿಕ್ಸ್‌

    ಮೈಸೂರು ಆಯ್ತು ಈಗ ಹೈದರಾಬಾದ್‌ ಕರ್ನಾಟಕದತ್ತ ಕಣ್ಣು – ಬಿಜೆಪಿಯಿಂದ ಟಾರ್ಗೆಟ್‌ 25 ಫಿಕ್ಸ್‌

    ಬೆಂಗಳೂರು: ರಾಜ್ಯ ಬಿಜೆಪಿ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿದ್ದು, ಪ್ರಧಾನಿ ಮೋದಿ ಪ್ರವಾಸದ ಬಳಿಕವಂತೂ ಬಿಜೆಪಿಯಲ್ಲಿ ಹುಮ್ಮಸ್ಸು ಹೆಚ್ಚಾಗಿದ್ದು, ನಾನಾ ಲೆಕ್ಕಾಚಾರಗಳನ್ನು ಕಾರ್ಯಗತಗೊಳಿಸಲು ಸಜ್ಜಾಗಿದೆ. `ಆಪರೇಷನ್ ಓಲ್ಡ್ ಮೈಸೂರು’ಗೆ ಕೈ ಹಾಕಿ ಮೊದಲ ಹಂತದ ಸೇರ್ಪಡೆ ಕಾರ್ಯಕ್ರಮ ಮುಗಿಸಿರುವ ಬಿಜೆಪಿ, 2ನೇ ಹಂತದಲ್ಲಿ ಹೈದರಾಬಾದ್‌ ಕರ್ನಾಟಕದತ್ತ ನೋಟ ನೆಟ್ಟಿದೆ.

    ಕಳೆದ ಬಾರಿ ಕಾಂಗ್ರೆಸ್‍ಗಿಂತ 6 ಸ್ಥಾನಗಳನ್ನು ಕಡಿಮೆ ಪಡೆದಿದ್ದ ಬಿಜೆಪಿ ಈ ಸಲ ಟಾರ್ಗೆಟ್ 25 ಫಿಕ್ಸ್ ಮಾಡಿಕೊಂಡಿದೆ. 40 ಕ್ಷೇತ್ರಗಳಲ್ಲಿ ಟಾರ್ಗೆಟ್ 25 ಅಂತಾ ಫಿಕ್ಸ್ ಮಾಡಿಕೊಂಡಿದ್ದು, ಕಲ್ಯಾಣ ಕರ್ನಾಟಕದ ವೀಕ್ ಪಾಯಿಂಟ್ ಟಾರ್ಗೆಟ್ ಮಾಡಿ ಆಪರೇಷನ್ ಫಿಕ್ಸ್‌ಗೆ ಪ್ಲ್ಯಾನ್ ನಡೆಸಿದೆ.

    ಕಳೆದ ಬಾರಿ ಕೈ ಕೊಟ್ಟಿರುವ ಕಲ್ಯಾಣ ಕರ್ನಾಟಕದ ಹಲವು ಕ್ಷೇತ್ರಗಳ ಜೊತೆಗೆ ಅನ್ಯ ಪಕ್ಷಗಳ ನಾಯಕರನ್ನೂ ಸೆಳೆಯುವ ಪ್ರಯತ್ನ ಮಾಡುತ್ತಿದೆ.

    ಕಲ್ಯಾಣ ಕರ್ನಾಟಕದಲ್ಲಿ ಕಳೆದ ಬಾರಿ ಬಲಾಬಲ
    ಒಟ್ಟು ಕ್ಷೇತ್ರ – 40
    ಕಾಂಗ್ರೆಸ್ – 21
    ಬಿಜೆಪಿ – 15
    ಜೆಡಿಎಸ್ – 04

    ಕಲಬುರಗಿ – 9 ಕ್ಷೇತ್ರಗಳು
    ಕಾಂಗ್ರೆಸ್ – 05
    ಬಿಜೆಪಿ – 04

    ಯಾದಗಿರಿ – 4 ಕ್ಷೇತ್ರಗಳು
    ಕಾಂಗ್ರೆಸ್ – 01
    ಬಿಜೆಪಿ – 02
    ಜೆಡಿಎಸ್ – 01

    ಬೀದರ್ – 6 ಕ್ಷೇತ್ರಗಳು
    ಕಾಂಗ್ರೆಸ್ – 4
    ಬಿಜೆಪಿ – 01
    ಜೆಡಿಎಸ್ – 01

    ಬಳ್ಳಾರಿ – 9 ಕ್ಷೇತ್ರಗಳು
    ಕಾಂಗ್ರೆಸ್ – 06
    ಬಿಜೆಪಿ – 03

    ರಾಯಚೂರು- 7 ಕ್ಷೇತ್ರಗಳು
    ಕಾಂಗ್ರೆಸ್ – 03
    ಬಿಜೆಪಿ – 02
    ಜೆಡಿಎಸ್ – 02

    ಕೊಪ್ಪಳ – 5 ಕ್ಷೇತ್ರಗಳು
    ಕಾಂಗ್ರೆಸ್ – 02
    ಬಿಜೆಪಿ – 03

    Live Tv

  • ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿದ್ದು ಬಿಟ್ಟರೆ ಬಿಜೆಪಿ ಬೇರೇನೂ ಮಾಡಿಲ್ಲ: ಸಿದ್ದರಾಮಯ್ಯ

    ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿದ್ದು ಬಿಟ್ಟರೆ ಬಿಜೆಪಿ ಬೇರೇನೂ ಮಾಡಿಲ್ಲ: ಸಿದ್ದರಾಮಯ್ಯ

    -ವಚನ ಭ್ರಷ್ಟ ಸರ್ಕಾರ

    ಬೆಳಗಾವಿ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹೈದರಾಬಾದ್ ಕರ್ನಾಟಕದ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿದ್ದು ಬಿಟ್ಟರೆ ಆ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಕಳೆದ ಎರಡೂವರೆ ವರ್ಷದಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಸದಸ್ಯರು, ಅಧ್ಯಕ್ಷರ ನೇಮಕವಾಗಿಲ್ಲ. ಹೀಗಿದ್ದಾಗ ಅನುದಾನದ ಸದ್ಬಳಕೆಯಾಗಲು ಹೇಗೆ ಸಾಧ್ಯ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತಾದ ವಿಷಯದ ಕುರಿತು ಅಧಿವೇಶನದಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣ ಮಾಡಿದ ಉದ್ದೇಶವೇ ಉತ್ತರ ಕರ್ನಾಟಕ ಭಾಗದ ಜನರಿಗೆ ನ್ಯಾಯ ಒದಗಿಸಬೇಕು ಎಂಬ ಕಾರಣಕ್ಕೆ. ಬಿಜೆಪಿ ಸರ್ಕಾರದ ಅಲಕ್ಷ್ಯ ಧೋರಣೆಯಿಂದಾಗಿ ಇಂದು ಆ ಉದ್ದೇಶದ ಈಡೇರಿಕೆ ಆಗುತ್ತಿಲ್ಲ ಎಂಬುದು ದುರದೃಷ್ಟಕರ. ಉತ್ತರ ಕರ್ನಾಟಕ ಭಾಗದ ವಿಚಾರ ಬಂದಾಗ ಈ ಭಾಗದ ಎಲ್ಲಾ ಶಾಸಕರಿಗೂ ಮಾತನಾಡಬೇಕು ಎಂಬ ಸಹಜ ಆಸೆ ಇರುತ್ತದೆ. ಸರ್ಕಾರ ಸದನವನ್ನು ಇಂದೇ ಮುಗಿಸಬೇಕು ಎಂಬ ಹಠಕ್ಕೆ ಬಿದ್ದಿರುವುದರಿಂದ ಸಾಕಷ್ಟು ಶಾಸಕರಿಗೆ ಅವಕಾಶವೇ ಇಲ್ಲವಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಹಲವಾರು ವರ್ಷಗಳಿಂದ ಉತ್ತರ ಕರ್ನಾಟಕ್ಕೆ ಅನ್ಯಾಯ ಮಾಡಿದೆ: ಗೋವಿಂದ ಕಾರಜೋಳ

    ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಡಾ.ನಂಜುಂಡಪ್ಪನವರ ನೇತೃತ್ವದಲ್ಲಿ ಉನ್ನತಾಧಿಕಾರದ ಸಮಿತಿ ರಚನೆ ಮಾಡಿದ್ದರು. ಆ ಸಮಿತಿ 2002ರಲ್ಲಿ ಸರ್ಕಾರಕ್ಕೆ ತನ್ನ ವರದಿ ನೀಡಿತ್ತು. ವರದಿಯ ಪ್ರಮುಖ ಸಲಹೆ ಎಂದರೆ ಮುಂದಿನ ಎಂಟು ವರ್ಷಗಳಲ್ಲಿ ರಾಜ್ಯದ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ 31 ಸಾವಿರ ಕೋಟಿ ಹಣವನ್ನು ಖರ್ಚು ಮಾಡಬೇಕು. ಈ 31 ಸಾವಿರ ಕೋಟಿ ಹಣದಲ್ಲಿ 15 ಸಾವಿರ ಕೋಟಿ ವಿವಿಧ ಅಭಿವೃದ್ಧಿ ಯೋಜನೆಗಳ ರೂಪದಲ್ಲಿ ಬರುತ್ತದೆ, ಇನ್ನುಳಿದ 16 ಸಾವಿರ ಕೋಟಿಯನ್ನು ಪ್ರತೀ ವರ್ಷ ಎರಡು ಸಾವಿರ ಕೋಟಿಯಂತೆ ಮುಂದಿನ ಎಂಟು ವರ್ಷಗಳ ಕಾಲ ಖರ್ಚು ಮಾಡಬೇಕು ಎಂದು ವರದಿ ನೀಡಿದ್ದರು. ಇದನ್ನೂ ಓದಿ: ನಮ್ಮ ಭೂಮಿ ಹೋದರೂ ಪರವಾಗಿಲ್ಲ, ಮೇಕೆದಾಟು ಯೋಜನೆ ಬೇಗ ಆರಂಭವಾಗಬೇಕು: ಡಿಕೆಶಿ

    ಅವರ ಈ ವರದಿ ಜಾರಿಯಾಗಿದ್ದು 2007 – 08 ರಲ್ಲಿ. ಅಲ್ಲಿಂದ ಪ್ರತಿ ವರ್ಷ ರೂ. 2000 ಕೋಟಿ ಹಣವನ್ನು 2016ರ ವರೆಗೆ ನೀಡಲಾಗಿತ್ತು. ನಾನು ಮುಖ್ಯಮಂತ್ರಿ ಆಗಿದ್ದಾಗ ಎಂಟು ವರ್ಷದ ಗಡುವು ಮುಗಿದು ಹೋದರೂ ಅದನ್ನು ಮತ್ತೆ ಐದು ವರ್ಷ ಮುಂದುವರೆಸಬೇಕು ಎಂದು ಆದೇಶಿಸಿ, ಪ್ರತೀ ವರ್ಷ ರೂ. 3,000 ಕೋಟಿ ಅನುದಾನ ನೀಡಿದ್ದೆ. ನಂಜುಡಪ್ಪನವರ ವರದಿ ಆಧರಿಸಿ ಈ ವರೆಗೆ ಬಿಡುಗಡೆ ಯಾಗಿರುವ ಹಣ ರೂ. 29,942 ಕೋಟಿ, ಖರ್ಚಾದದ್ದು ರೂ. 28,080 ಕೋಟಿ.

    ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದರು, ಆಗ ರಾಜ್ಯದಲ್ಲಿ ಎಸ್.ಎಂ ಕೃಷ್ಣ ಮುಖ್ಯಮಂತ್ರಿಗಳಾಗಿದ್ದರು. ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಅನುಕೂಲವಾಗುವಂತೆ ಸಂವಿಧಾನ ತಿದ್ದುಪಡಿ ಮಾಡಿ 371(ಎ) ಕಲಂನಡಿ ವಿಶೇಷ ಸ್ಥಾನಮಾನ ನೀಡಬೇಕು ಎಂದು ಎಸ್.ಎಂ ಕೃಷ್ಣ ಪತ್ರ ಬರೆದರು, ಆ ಪತ್ರಕ್ಕೆ ಅಂದಿನ ಉಪ ಪ್ರಧಾನಿಗಳು ಹಾಗೂ ಗೃಹ ಸಚಿವರು ಆಗಿದ್ದ ಅಡ್ವಾಣಿಯವರು ಸಾಧ್ಯವಿಲ್ಲ ಎಂದು ಉತ್ತರ ನೀಡಿದ್ದರು.

    ಕೊನೆಗೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡ ಮೇಲೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಸೋನಿಯಾ ಗಾಂಧಿ ಅವರ ಮಾರ್ಗದರ್ಶನದಲ್ಲಿ ಮನಮೋಹನ್ ಸಿಂಗ್ ಅವರು ಸಂವಿಧಾನದ 370 ನೇ ವಿಧಿಗೆ ತಿದ್ದುಪಡಿ ತಂದು ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿದರು.ನಮ್ಮ ಐದು ವರ್ಷಗಳ ಆಡಳಿತದಲ್ಲಿ ಹೈದರಾಬಾದ್ ಕರ್ನಾಟಕ ವಿಶೇಷ ಮೀಸಲಾತಿ ಸೌಲಭ್ಯದಡಿ 30,000 ಹುದ್ದೆಗಳ ಭರ್ತಿ ಮಾಡಿದ್ದೆವು. ಬಿಜೆಪಿ ಸರ್ಕಾರ ಬಂದಮೇಲೆ ಒಂದೇ ಒಂದು ಹುದ್ದೆ ಭರ್ತಿಯಾದ ಉದಾಹರಣೆ ಇದೆಯಾ? 2021-22ನೇ ಸಾಲಿಗೆ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಘೋಷಣೆಯಾದ ಅನುದಾನ ರೂ. 1,500 ಕೋಟಿ. ಇದರಲ್ಲಿ ಬಿಡುಗಡೆ ಯಾಗಿರುವುದು ರೂ. 378 ಕೋಟಿ. ಇನ್ನು ಉಳಿದಿರೋದು ಕೇವಲ ಎರಡು ತಿಂಗಳು? ಹೆಚ್ಚೆಂದರೆ ರೂ. 200 ಕೋಟಿ ಹಣ ಖರ್ಚಾಗಬಹುದು. ಮುಖ್ಯಮಂತ್ರಿಗಳು ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಿ, ವೀರಾವೇಶದಿಂದ ನೀವು ಅನುದಾನ ಅಷ್ಟನ್ನೂ ಖರ್ಚು ಮಾಡಿ ಈ ವರ್ಷ ರೂ. 3,000 ಕೋಟಿ ಅನುದಾನ ಕೊಡುತ್ತೇನೆ ಎಂದರು. ಎಲ್ಲಿದೆ ಹಣ?.

    ಈ ಹಿಂದೆ ಸಿದ್ದರಾಮಯ್ಯ ಅವರು ಹೊಸಪೇಟೆಯಿಂದ ಕೂಡಲಸಂಗಮದವರೆಗೆ ಪಾದಯಾತ್ರೆ ಮಾಡಿ, ತಾವು ಅಧಿಕಾರಕ್ಕೆ ಬಂದರೆ ಕೃಷ್ಣ ಮೇಲ್ದಂಡೆ ಯೋಜನೆಗೆ ರೂ. 10,000 ಕೋಟಿ ಅನುದಾನ ನೀಡುವುದಾಗಿ ಹೇಳಿ, ಅನುದಾನ ನೀಡದೆ ಜನರಿಗೆ ಮೋಸ ಮಾಡಿದ್ದಾರೆ ಎಂದು ಗೋವಿಂದ ಕಾರಜೋಳ ಹಲವು ಬಾರಿ ನನ್ನ ಬಗ್ಗೆ ಸುಳ್ಳು ಆರೋಪ ಮಾಡಿದ್ದಾರೆ. 2013 ರ ಚುನಾವಣೆ ಪ್ರಣಾಳಿಕೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ ಕೃಷ್ಣ ಹಾಗೂ ಕಾವೇರಿ ನದಿ ಕಣಿವೆ ಪ್ರದೇಶದ ಅಭಿವೃದ್ಧಿ, ಆಧುನೀಕರಣ ಹಾಗೂ ನೀರಾವರಿ ಯೋಜನೆಗಳಿಗಾಗಿ ವಾರ್ಷಿಕ ರೂ. 10,000 ಕೋಟಿ ಅನುದಾನ ನೀಡುತ್ತೇವೆ ಎಂಬ ಭರವಸೆ ನೀಡಿದ್ದೆವು. ನಮ್ಮ ಐದು ವರ್ಷಗಳ ಅವಧಿಯಲ್ಲಿ ರೂ. 52,000 ಕೋಟಿ ಅನುದಾನವನ್ನು ನೀರಾವರಿ ಉದ್ದೇಶಕ್ಕಾಗಿ ಖರ್ಚು ಮಾಡಿದ್ದೇವೆ. ಬಿಜೆಪಿಯವರು 2018ರ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಸುಜಲಾಂ, ಸುಫಲಾಂ ಯೋಜನೆಯಡಿ 1.5 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಕರ್ನಾಟಕದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರು. ಯಡಿಯೂರಪ್ಪ ಅವರು ಸದನದಲ್ಲಿ ಮಾತನಾಡುತ್ತಾ ತಕ್ಷಣ ಆಲಮಟ್ಟಿ ಜಲಾಶಯವನ್ನು 519 ಮೀಟರ್ ನಿಂದ 524 ಮೀಟರ್ ಗೆ ಏರಿಸಿ, ಭೂಮಿ ಕಳೆದುಕೊಂಡವರಿಗೆ 25 – 30 ಲಕ್ಷ ಪರಿಹಾರ ನೀಡಲು ಸುಮಾರು 1.5 ಲಕ್ಷ ಕೋಟಿ ರೂ. ಖರ್ಚು ಮಾಡಬೇಕೆಂದು ಸಂಕಲ್ಪ ಮಾಡಿದ್ದೇನೆ ಎಂದಿದ್ದರು.  ಇದನ್ನೂ ಓದಿ: ಕೊಡಗಿನ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ

    ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷವಾಗುತ್ತಾ ಬಂದಿದೆ, ಅವರ ಪ್ರಣಾಳಿಕೆಯ ಭರವಸೆ ಪ್ರಕಾರ ಈಗ ಕನಿಷ್ಠ 90,000 ಕೋಟಿ ಹಣ ಖರ್ಚು ಮಾಡಬೇಕಿತ್ತಲ್ಲವಾ? ಆದರೆ ಖರ್ಚಾದ ಒಟ್ಟು ಹಣ ರೂ. 33,835 ಕೋಟಿ ಮಾತ್ರ. ಬಿಜೆಪಿ ಸರ್ಕಾರ 2008 ರಿಂದ 2013 ರ ವರೆಗೆ ನೀರಾವರಿ ಉದ್ದೇಶಕ್ಕಾಗಿ ಖರ್ಚು ಮಾಡಿರುವ ಅನುದಾನ ರೂ. 17,734 ಕೋಟಿ. ಬಿಜೆಪಿ ಅವಧಿಯಲ್ಲಿ ಖರ್ಚಾದ ಮೂರು ಪಟ್ಟು ಹಣವನ್ನು ನಮ್ಮ ಸರ್ಕಾರದ ಅವಧಿಯಲ್ಲಿ ನೀರಾವರಿ ಉದ್ದೇಶಕ್ಕೆ ಖರ್ಚು ಮಾಡಿದೆ. ನಮ್ಮ ಐದು ವರ್ಷಗಳ ಆಡಳಿತದಲ್ಲಿ ನೀರಾವರಿ ಸೃಜನೆಗೊಳಪಟ್ಟ ಪ್ರದೇಶ ಒಟ್ಟು 6.54 ಲಕ್ಷ ಎಕರೆ. ನಾವು ನುಡಿದಂತೆ ನಡೆದಿದ್ದೇವೆ, ಬಿಜೆಪಿ ಸರ್ಕಾರ ಕೊಟ್ಟ ಭರವಸೆಗಳನ್ನು ಈಡೇರಿಸದ ವಚನ ಭ್ರಷ್ಟ ಸರ್ಕಾರವಾಗಿದೆ.

  • ನೆರೆ ಹಾವಳಿಯಿಂದ 8 ಸಾವಿರ ಕೋಟಿ ರಸ್ತೆ ನಷ್ಟ, 500 ಕೋಟಿ ಬಿಡುಗಡೆ- ಕಾರಜೋಳ

    ನೆರೆ ಹಾವಳಿಯಿಂದ 8 ಸಾವಿರ ಕೋಟಿ ರಸ್ತೆ ನಷ್ಟ, 500 ಕೋಟಿ ಬಿಡುಗಡೆ- ಕಾರಜೋಳ

    ರಾಯಚೂರು: ರಾಯಚೂರು: ನೆರೆ ಹಾವಳಿಯಿಂದ 8 ಸಾವಿರ ಕೋಟಿ ರೂ.ಗಳ ರಸ್ತೆಗಳು ಹಾಳಾಗಿದ್ದು, ಲೋಕೋಪಯೋಗಿ ಇಲಾಖೆಯಿಂದ 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಎರಡನೇ ಹಂತದಲ್ಲಿ ಇನ್ನಷ್ಟು ಹಣ ಬಿಡುಗಡೆ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

    ನಗರದಲ್ಲಿ ನಡೆದ ಕಲ್ಯಾಣ ಕರ್ನಾಟಕ ಧ್ವಜಾರೋಹಣದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳೆ ಹಾನಿ ಕುರಿತು ಸರ್ವೆ ಬಹುತೇಕ ಮುಗಿದಿದೆ, ಕೆಲ ಜಿಲ್ಲೆಗಳ ವರದಿ ಬರಬೇಕಿದೆ. ಎನ್‍ಡಿಆರ್ ಎಫ್, ಎಸ್‍ಡಿಆರ್ ಎಫ್ ನಿಯಮಗಳ ಪ್ರಕಾರ ಶೀಘ್ರದಲ್ಲೇ ಹಣ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

    ತಗ್ಗು ಪ್ರದೇಶದ ಜನರಿಗೆ 5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲಾಗುತ್ತಿದೆ. ಹಳೇ ಮನೆಗಳನ್ನು ಬಿಟ್ಟು ಬಂದಲ್ಲಿ ಹೊಸ ಮನೆ ಕಟ್ಟಿಕೊಡುತ್ತೇವೆ. ಇಲ್ಲದಿದ್ದರೆ ಮನೆ ರಿಪೇರಿಗೆ ಹಣ ಕೊಡುತ್ತೇವೆ. ಎನ್‍ಡಿಆರ್‍ಎಫ್ ನಿಂದ ಹಣ ಬರುವವರೆಗೆ ಕಾಯುವುದಿಲ್ಲ. ರಾಜ್ಯ ಸರ್ಕಾರದಿಂದಲೇ ಪರಿಹಾರ ನೀಡುತ್ತೇವೆ ಎಂದು ಇದೇ ವೇಳೆ ತಿಳಿಸಿದರು.

    ಹೈದರಾಬಾದ್ ಕರ್ನಾಟಕ(ಕಲ್ಯಾಣ ಕರ್ನಾಟಕ) ಭಾಗದ ಜಿಲ್ಲೆಗಳಲ್ಲಿ ಕೇವಲ ಶೇ.57ರಷ್ಟು ಹಣ ಮಾತ್ರ ಖರ್ಚಾಗಿದೆ. ಡಿಸೆಂಬರ್ ಒಳಗೆ ಶೇ.75ರಷ್ಟು ಅಭಿವೃದ್ಧಿ ಕಾರ್ಯ ಮುಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎನ್‍ಡಿಆರ್‍ಎಫ್ ನಿಯಮದ ಪ್ರಕಾರ ನೀಡುವ ಹಣ ರೈತರಿಗೆ ಸಾಲುವುದಿಲ್ಲ. ಹೀಗಾಗಿ ಹೆಚ್ಚು ಹಣ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಒತ್ತಾಯ ಮಾಡಿದ್ದೇವೆ. ಶೀಘ್ರದಲ್ಲೇ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗಲಿದೆ ಎಂದು ಭರವಸೆ ನೀಡಿದರು.

    ಇದೇ ವೇಳೆ ಹಿಂದಿ ಹೇರಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕನ್ನಡ 2,500 ವರ್ಷಗಳ ಹಳೆಯ ಭಾಷೆಯಾಗಿದ್ದು, ಬೇರೆ ಭಾಷಿಕರು ನಮ್ಮನ್ನ ಆಳಿದರೂ ಸಹ ಕನ್ನಡ ಗಟ್ಟಿಯಾಗಿ ನಿಂತಿದೆ. ಆಗಲೂ ಭಾಷೆ ನಶಿಸಿಹೋಗಿಲ್ಲ, ಹೋಗುವುದೂ ಇಲ್ಲ. ಕನ್ನಡ ಭಾಷೆ ತಾಯಿ ಸಮಾನ ಎಂದು ತಿಳಿಸಿದರು.

  • ಕಲ್ಯಾಣ ಕರ್ನಾಟಕ ಉತ್ಸವ – ಸಿಎಂ ಬಿಎಸ್‍ವೈರಿಂದ ಧ್ವಜಾರೋಹಣ

    ಕಲ್ಯಾಣ ಕರ್ನಾಟಕ ಉತ್ಸವ – ಸಿಎಂ ಬಿಎಸ್‍ವೈರಿಂದ ಧ್ವಜಾರೋಹಣ

    ಬೆಂಗಳೂರು: ಹೈದರಾಬಾದ್ ಕರ್ನಾಟಕ ವಿಮೋಚನಾ ದಿನದ ಹೆಸರು ಇನ್ನು ಮುಂದೇ ಕಲ್ಯಾಣ ಕರ್ನಾಟಕ ದಿನವಾಗಿ ಮಾರ್ಪಡಲಿದೆ. ಕಲ್ಯಾಣ ಕರ್ನಾಟಕ ದಿನಾಚರಣೆ ಅಂಗವಾಗಿ ಕಲಬುರಗಿಯಲ್ಲಿ ಮಂಗಳವಾರ ಸಿಎಂ ಯಡಿಯೂರಪ್ಪ ಧ್ವಜಾರೋಹಣ ಮಾಡಲಿದ್ದಾರೆ.

    ಮಂಗಳವಾರ ಬೆಳಗ್ಗೆ 7.30ಕ್ಕೆ ಎಚ್‍ಎಎಲ್‍ನಿಂದ ಕಲಬುರಗಿಗೆ ಹೊರಡಲಿರುವ ಸಿಎಂ ಬಿಎಸ್‍ವೈ ಅವರು, ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಜೆ 6.30ರ ವೇಳೆಗೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಕಲಬುರಗಿಯಲ್ಲಿ ಧ್ವಜಾರೋಹಣ ಮಾಡಿದ ಬಳಿಕ ಕಲ್ಯಾಣ ಕರ್ನಾಟಕ ಭಾಗದ ಮಠಾಧೀಶರು ಹಮ್ಮಿಕೊಂಡಿರುವ ಅಭಿನಂದನಾ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಇದರ ಜೊತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಇದನ್ನು ಓದಿ: ಜಿಲ್ಲಾ ಉಸ್ತುವಾರಿ ಸಚಿವರ ನೇಮಕ – ಬೆಂಗಳೂರನ್ನು ತನ್ನ ಬಳಿಯೇ ಇಟ್ಟುಕೊಂಡ ಸಿಎಂ

    ಈ ಕುರಿತು ಗೃಹ ಕಚೇರಿ ಕೃಷ್ಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್‍ವೈ ಅವರು, ನಾಳೆ ಕೆಲ ಸಚಿವರು, ನಾವು ಕಲಬುರಗಿಗೆ ಭೇಟಿ ನೀಡುತ್ತೇವೆ. ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಘೋಷಣೆ ಮಾಡಿದ್ದು ಎಲ್ಲರಿಗೂ ಸಂತೋಷ ತಂದಿದೆ. ನೂರಾರು ಸ್ವಾಮೀಜಿಗಳು ಸೇರಿ ದೊಡ್ಡ ಕಾರ್ಯಕ್ರಮ ಮಾಡುತ್ತಾರೆ ಎಂದರು. ಈ ವೇಳೆ ಹಿಂದಿ ಭಾಷಾ ಹೇರಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡದೆ ತೆರಳಿದರು. ಇದನ್ನು ಓದಿ: ಹಿಂದಿ ಬಗ್ಗೆ ಅಭಿಮಾನ ಮೆರೆದಿದ್ದ ಅಮಿತ್ ಶಾಗೆ ಬಿಎಸ್‍ವೈ ಟಾಂಗ್

    ಕಲಬುರಗಿಯಲ್ಲಿ ಸಿಎಂ ಬಿಎಸ್‍ವೈ ಧ್ವಜಾರೋಹಣ ಮಾಡಿದರೆ, ರಾಯಚೂರಿನಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಬಳ್ಳಾರಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಕೊಪ್ಪಳದಲ್ಲಿ ಸಚಿವ ಸಿ.ಸಿ ಪಾಟೀಲ್, ಬೀದರ್ ನಲ್ಲಿ ಪ್ರಭು ಚೌಹಾಣ್ ಹಾಗೂ ಯಾದಗಿರಿಯಲ್ಲಿ ಶ್ರೀರಾಮುಲು ಅವರು ಧ್ವಜಾರೋಹಣ ಮಾಡಲಿದ್ದಾರೆ.

  • ಉತ್ತರ ಕರ್ನಾಟಕ ಭಾಗದಲ್ಲಿ ಇಂದಿನಿಂದ ಮೋಡ ಬಿತ್ತನೆ

    ಉತ್ತರ ಕರ್ನಾಟಕ ಭಾಗದಲ್ಲಿ ಇಂದಿನಿಂದ ಮೋಡ ಬಿತ್ತನೆ

    ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಅಲ್ಲಲ್ಲಿ ಮಳೆಯಾಗಿದ್ದರೂ ಸಹ ಸಮರ್ಪಕವಾಗಿ ಆಗಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಮೋಡ ಬಿತ್ತನೆ ಕೈಗೊಂಡಿದ್ದು, ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗಗಳಲ್ಲಿ ಇಂದಿನಿಂದ ಮೋಡ ಬಿತ್ತನೆ ಕಾರ್ಯ ಆರಂಭಗೊಂಡಿದೆ.

    ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ವರ್ಷಧಾರೆ ಯೋಜನೆಯಡಿ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಇಂದು ಮೋಡ ಬಿತ್ತನೆಗೆ ಚಾಲನೆ ನೀಡಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಮೋಡ ಬಿತ್ತನೆ ವಿಮಾನ ಟೇಕ್ ಆಫ್ ಆಗಿದ್ದು, ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕ ಭಾಗಗಳಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಲಿದೆ.

    ಕೆಲವೆಡೆ ಮಳೆಯಾದರೂ ಸಹ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗದ ಕೆಲ ಪ್ರದೇಶಗಳಲ್ಲಿ ಮಳೆ ಕೊರತೆಯುಂಟಾಗಿತ್ತು. ಅಲ್ಲದೆ ಕೆಲ ಪ್ರದೇಶಗಳಲ್ಲಿ ತೀವ್ರ ಬರ ಆವರಿಸಿತ್ತು. ಹೀಗಾಗಿ ಮೋಡ ಬಿತ್ತನೆ ಕಾರ್ಯ ಪ್ರಾರಂಭಿಸಲಾಗಿದ್ದು, ಪ್ರಾಥಮಿಕ ಹಂತದಲ್ಲಿ ಧಾರವಾಡ ಮತ್ತು ಗದಗ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಲಿದೆ.

    ತೀವ್ರ ಬರದಿಂದ ತತ್ತರಿಸಿರುವ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗಗಳಲ್ಲಿ ಮೋಡ ಬಿತ್ತನೆಯಿಂದಾದರೂ ಮಳೆ ಬರುತ್ತಾ ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಕೆಲವೆಡೆ ಮುಂಗಾರು ಮಳೆ ಕೈಕೊಟ್ಟಿದ್ದು, ಕೆಲವೆಡೆ ಮುಂಗಾರು ತಡವಾಗಿ ಆಗಮಿಸಿ ಬೆಳೆಯನ್ನು ನಾಶ ಪಡಿಸಿದೆ. ಹೀಗಾಗಿ ಮೋಡ ಬಿತ್ತನೆಯಿಂದ ಬೆಳೆಗಳಿಗೆ ಸಹಕಾರಿಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

    ಮಣ್ಣಿನಲ್ಲಿರುವ ತೇವಾಂಶ ಕುರಿತು ಉಪಗ್ರಹಗಳು ಕಳುಹಿಸುವ ಚಿತ್ರವನ್ನು ಆಧರಿಸಿ ಎಲ್ಲಿ ಮೋಡ ಬಿತ್ತನೆ ಮಾಡಬೇಕೆಂಬ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಹಳದಿ ಮತ್ತು ಕಿತ್ತಳೆ ಬಣ್ಣ ಚಿತ್ರಗಳು ಸಿಗುವ ಕಡೆಗಳಲ್ಲಿ ಮಳೆ ಕೊರತೆ ಇದೆ ಎಂದು ಪರಿಗಣಿಸಿ ಅಲ್ಲಿ ಮೋಡ ಬಿತ್ತನೆ ಮಾಡಲಾಗುತ್ತಿದೆ.

    ಮೋಡಗಳ ಕೆಳಗೆ ಸಂಚರಿಸುವ ವಿಮಾನ ತಾನು ಹೊತ್ತು ತಂದಿರುವ ಸೋಡಿಯಂ ಕ್ಲೋರೈಡ್ ಮತ್ತು ಪೊಟಾಷಿಯಂ ಕ್ಲೋರೈಡ್ ಮಿಶ್ರಿತ ಹೊಗೆಯನ್ನು ಮೋಡಗಳ ಮೇಲೆ ಚಿಮ್ಮಿಸುತ್ತದೆ. ಆ ಮೋಡ ಕರಗಿ ಮಳೆ ಬರುತ್ತದೆ. ಮೋಡ ಬಿತ್ತನೆಗಾಗಿ ಸರ್ಕಾರ 45 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ.

  • ಹೈಕಮಾಂಡ್ ಓಲೈಕೆಗೆ ಹೈ.ಕ. ಅಭಿವೃದ್ಧಿ ಹಣ – ಖಮರುಲ್ ಇಸ್ಲಾಂರಿಂದಲೂ ಲೂಟಿ

    ಹೈಕಮಾಂಡ್ ಓಲೈಕೆಗೆ ಹೈ.ಕ. ಅಭಿವೃದ್ಧಿ ಹಣ – ಖಮರುಲ್ ಇಸ್ಲಾಂರಿಂದಲೂ ಲೂಟಿ

    ಕಲಬುರಗಿ: ಸಿದ್ದರಾಮಯ್ಯ ಸರ್ಕಾರಕ್ಕೆ ಒಂದೊಂದೇ ಕಳಂಕ ಸೇರಿಕೊಳ್ತಿದೆ. ಆಹಾರ ಇಲಾಖೆಯಲ್ಲಿ ಹಗರಣ ನಡೆದಿದೆ ಎಂಬ ಆರೋಪದ ಬೆನ್ನಲ್ಲೇ ಇದೀಗ ಹೈ.ಕ. ಅಭಿವೃದ್ಧಿ ಹೆಸರಲ್ಲಿ ಹೈಕಮಾಂಡ್ ಓಲೈಕೆಗೆ ಹಣ ಪೋಲು ಮಾಡಿರುವ ಬಗ್ಗೆ ಗೊತ್ತಾಗಿದೆ.

    ಹೈದರಾಬಾದ್ ಕರ್ನಾಟಕ ರೀಜನಲ್ ಡೆವಲಪ್‍ಮೆಂಟ್ ಬೋರ್ಡ್ ಇರೋದು ಹೈ-ಕ ಪ್ರದೇಶದ ಅಭಿವೃದ್ಧಿಗಾಗಿಯೇ ಅಂತಾ ಜನರು ನಂಬಿದ್ರು. ಆದ್ರೆ ಮಂಡಳಿಗೆ ಬರುವ ಹಣ ರಾಜಕೀಯ ಪ್ರಚಾರಕ್ಕೆ ಪೋಲಾಗ್ತಿದೆ ಅನ್ನೋ ಮಾಹಿತಿ ಹೊರಬಿದ್ದಿದೆ.

    2014-15ರಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಕಲಬುರಗಿಗೆ ಆಗಮಿಸಿದ್ರು. ಈ ವೇಳೆ ಬೃಹತ್ ಸಮಾವೇಶ ನಡೆಸಲಾಯ್ತು. ಈ ಸಮಾವೇಶಕ್ಕೆ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣದಲ್ಲಿ ಸ್ವಾಗತ ಕಮಾನು ನಿರ್ಮಿಸಲಾಗಿದ್ದು, ಬರೋಬ್ಬರಿ 23 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ.

    ಅಲ್ಲದೆ ಮಂಡಳಿ ಅಧ್ಯಕ್ಷರ ಕಾರು ಅಪಘಾತವಾದ್ರೆ ಎಫ್‍ಐಆರ್ ಮಾಡಿಸಿ, ವಿಮಾ ಕಂಪನಿಯಿಂದ ಹಣವನ್ನು ಪಡೀಬೇಕು. ಆದ್ರೆ ಹಿಂದಿನ ಅಧ್ಯಕ್ಷ ಖಮರುಲ್ ಇಸ್ಲಾಂ ಅವರು ನಿಯಮವನ್ನು ಗಾಳಿಗೆ ತೂರಿ ಮಂಡಳಿಯಿಂದ 2 ಲಕ್ಷದ 26 ಸಾವಿರ ರೂಪಾಯಿ ಹಣ ಪಡೆದಿದ್ದಾರೆ ಅನ್ನೋದು 2014-15ನೇ ಸಾಲಿನ ಲೆಕ್ಕ ಪರಿಶೋಧನೆಯಲ್ಲಿ ಬಯಲಾಗಿದೆ.

  • ಹೈದ್ರಾಬಾದ್ ಕರ್ನಾಟಕದಲ್ಲಿ ಮಳೆ -ಸಿಡಿಲು ಬಡಿದು ಇಬ್ಬರ ಸಾವು

    ಹೈದ್ರಾಬಾದ್ ಕರ್ನಾಟಕದಲ್ಲಿ ಮಳೆ -ಸಿಡಿಲು ಬಡಿದು ಇಬ್ಬರ ಸಾವು

    ಹೈದ್ರಾಬಾದ್ ಕರ್ನಾಟಕ: ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಮಳೆರಾಯ ರಾತ್ರಿ ಸದ್ದು ಮಾಡಿದ್ದಾನೆ. ಬಳ್ಳಾರಿ, ರಾಯಚೂರು, ಕೊಪ್ಪಳದಲ್ಲಿ ಮಳೆಯಾಗಿದೆ. ಗಣಿನಾಡಲ್ಲಿ ಗುಡುಗು-ಸಿಡಿಲಿನೊಂದಿಗೆ 2 ಗಂಟೆ ಮಳೆ ಸುರಿದಿದೆ.

    ಮಳೆಯ ಪರಿಣಾಮ ಅನೇಕ ನಗರ ಸೇರಿದಂತೆ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ರಾಯಚೂರಿನ ಲಿಂಗಸುಗೂರು, ಸಿಂಧನೂರು, ಮಾನ್ವಿಯಲ್ಲಿ ಮಳೆಯಾಗಿದೆ. ಲಿಂಗಸುಗೂರಿನಲ್ಲಿ ಭಾರೀ ಗಾಳಿಗೆ ಮನೆ ಹಾಗೂ ಅಂಗಡಿಗಳ ಶೆಡ್‍ಗಳು ಹಾರಿಹೋಗಿವೆ.

    ಕೊಪ್ಪಳ, ಯಲಬುರ್ಗಾದಲ್ಲಿ ಗಾಳಿ ಸಹಿತ ಭಾರೀ ಮಳೆಯಾಗಿದೆ. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಭಾರಿ ಮಳೆಗೆ ಹರನಾಳ, ಓತಿಹಾಳ ಗ್ರಾಮದಲ್ಲಿ ದ್ರಾಕ್ಷಿ, ಬಾಳೆ, ಲಿಂಬೆ ಬೆಳೆ ನಾಶವಾಗಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಸಿಡಿಲು ಬಡಿದು 40 ವರ್ಷದ ಮಲ್ಲಪ್ಪ ಧರೆಪ್ಪ ಹುಣಶ್ಯಾಳ ಅನ್ನೋ ರೈತ ಮೃತಪಟ್ಟಿದ್ದಾರೆ.

    ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕರಜಗಿ ಗ್ರಾಮದಲ್ಲಿ ಸಿಡಿಲು ಬಡಿದು 25 ವರ್ಷದ ಖಾಜಾಹುಸೇನಿ ಮಾಶಾಳಕರ್ ಅನ್ನೋ ಯುವಕ ಸಾವನ್ನಪ್ಪಿದ್ದಾರೆ. ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಕೊಡಗು ಜಿಲ್ಲೆಯಲ್ಲೂ ಮಳೆಯ ಸಿಂಚನವಾಗಿದೆ.

     

     

  • ಕಲಂ 371(ಜೆ) ಅನುಷ್ಠಾನ ಗೊಂದಲ: ರಾಯಚೂರು ಪೊಲೀಸರ ಮುಂಬಡ್ತಿಯಲ್ಲಿ ತಾರತಮ್ಯ

    ರಾಯಚೂರು: ಶೈಕ್ಷಣಿಕ ಹಾಗೂ ಹುದ್ದೆಯ ಮುಂಬಡ್ತಿಗಳಲ್ಲಿ ಮೀಸಲಾತಿ ಒದಗಿಸುವ ಮೂಲಕ ಹೈದ್ರಾಬಾದ್ ಕರ್ನಾಟಕ ಭಾಗದ ಜನರ ಅಭಿವೃದ್ದಿಗೆ ಪೂರಕವಾಗಬೇಕಿದ್ದ ಭಾರತ ಸಂವಿಧಾನದ ಅನುಚ್ಛೇದ 371 (ಜೆ) ರಾಯಚೂರಿನ ಪೊಲೀಸರಲ್ಲಿ ತಾರತಮ್ಯ ಮೂಡಿಸಿದೆ. ಕೇವಲ 5 ವರ್ಷ ಅನುಭವವಿರುವವರಿಗೆ ಬಡ್ತಿ ಸಿಗುತ್ತಿದ್ದರೆ, 15 ವರ್ಷ ದುಡಿದವರಿಗೆ ಯಾವುದೇ ಸೌಲಭ್ಯವಿಲ್ಲದಂತಾಗಿದೆ. ಹೋರಾಟಗಳ ಮೂಲಕ ಪಡೆದ ಸಾಂವಿಧಾನಿಕ ಹಕ್ಕು ಈಗ ಇಲ್ಲಿನ ಪೊಲೀಸರಿಗೆ ಮುಳುವಾಗಿದೆ. ಹೀಗಾಗಿ ಪೊಲೀಸರು ನ್ಯಾಯಕ್ಕಾಗಿ ಧ್ವನಿ ಎತ್ತಲು ಮುಂದಾಗಿದ್ದಾರೆ.

    2017 ಜನವರಿ 27 ರಂದು ರಾಯಚೂರು ಜಿಲ್ಲೆಯಲ್ಲಿ 43 ಜನರಿಗೆ ಸಿವಿಲ್ ಪೊಲೀಸ್ ಕಾನ್ಸಟೇಬಲ್ (ಸಿಪಿಸಿ) ಹುದ್ದೆಯಿಂದ ಸಿವಿಲ್ ಹೆಡ್ ಕಾನ್ಸಟೇಬಲ್ (ಸಿಹೆಚ್‍ಸಿ) ಹುದ್ದೆಗೆ ನೀಡಲಾಗಿರುವ ಮುಂಬಡ್ತಿಯಲ್ಲಿ ತಾರತಮ್ಯವಾಗಿದೆ. ಮುಂಬಡ್ತಿಗೆ ಸ್ಥಳೀಯ ವೃಂದ ಭರ್ತಿಯಾದ ಬಳಿಕ ಪರಸ್ಥಳೀಯ ವೃಂದದ ಹುದ್ದೆಗಳಿಗೆ ಸ್ಥಳೀಯರನ್ನೇ ಪರಿಗಣಿಸಲಾಗಿದೆ. ಆದ್ರೆ ಜೇಷ್ಠತೆಯ ಹಿರಿತನದ ಆಧಾರದ ಮೇಲೆ ಬಡ್ತಿ ಸಿಗದೆ ಇತ್ತೀಚಿಗೆ ಹುದ್ದೆಗೆ ಸೇರಿದವರಿಗೆ ಬಡ್ತಿ ನೀಡುವ ಮೂಲಕ 15 ವರ್ಷಗಳಷ್ಟು ಅನುಭವವಿರುವವರಿಗೆ ಅನ್ಯಾಯವಾಗಿದೆ. 2011 ರಲ್ಲಿ ಕೆಲಸಕ್ಕೆ ಸೇರಿದ 43 ಜನ ಈಗ ಹೆಡ್ ಕಾನ್ಸಟೇಬಲ್‍ಗಳಾಗಿದ್ದಾರೆ. ಆದ್ರೆ 2002, 2005, 2007, 2008 ಹಾಗೂ 2009 ನೇ ಸಾಲಿನಲ್ಲಿ ಕೆಲಸಕ್ಕೆ ಸೇರಿದವರಿಗೆ ಬಡ್ತಿ ನೀಡಲಾಗಿಲ್ಲ. ಕಲಂ 371 (ಜೆ) ಪ್ರಕಾರ ಪರಸ್ಥಳೀಯ ವೃಂದಕ್ಕೆ ಜೇಷ್ಠತೆಯಲ್ಲಿ ಕೆಳಗಿನಿಂದ ಮೇಲಕ್ಕೆ ಆಯ್ಕೆ ಮಾಡುತ್ತಿರುವುದೇ ಯಡವಟ್ಟಿಗೆ ಕಾರಣವಾಗಿದೆ. ಎಂದು ಆರೋಪಿಸಲಾಗಿದೆ.

    ಕಲಂ 371 ಜೆ ಪ್ರಕಾರ ಜಿಲ್ಲೆಯಲ್ಲಿ ಸ್ಥಳೀಯೇತರ ವೃಂದಕ್ಕೆ ಒಟ್ಟು 74 ಸಿಹೆಚ್‍ಸಿ ಹುದ್ದೆಗಳು ಲಭ್ಯವಾಗಿವೆ. ಇದರಲ್ಲಿ 29 ಜನ ಈಗಾಗಲೇ ಸಿವಿಲ್ ಹೆಡ್ ಕಾನ್ಸಟೇಬಲ್‍ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ 43 ಸಿವಿಲ್ ಹೆಡ್ ಕಾನ್ಸಟೇಬಲ್ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. ಆದ್ರೆ ರಾಜ್ಯಮಟ್ಟದಲ್ಲಿ ಜೇಷ್ಠತೆಯಲ್ಲಿ ಮೇಲಿದ್ದರು ಪರಸ್ಥಳೀಯ ವೃಂದದಲ್ಲಿ ಹಿಂದೆ ಬೀಳುವಂತಾಗಿದೆ. ಹೀಗಾಗಿ ಮುಂಬಡ್ತಿ ವಂಚಿತರಾದ ಪೊಲೀಸ್ ಕಾನ್ಸಟೇಬಲ್‍ಗಳು ತಾರತಮ್ಯ ಸರಿಪಡಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿದ್ದಾರೆ. ಸಂವಿಧಾನ ಅಳವಡಿಕೆಯಲ್ಲಿ ಗೊಂದಲಗಳು ಸೃಷ್ಠಿಯಾಗಿದ್ದು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಚೇತನ್ ಸಿಂಗ್ ರಾಥೋರ್ ಹೇಳಿದ್ದಾರೆ.

    ಕಲಂ 371(ಜೆ) ಅಡಿ ಎರಡೆರಡು ವೃಂದಗಳನ್ನಾಗಿ ಮಾಡಿ ಪ್ರಮೋಷನ್ ನೀಡುತ್ತಿರುವುದರಿಂದ ಜೇಷ್ಠತೆಯಲ್ಲಿ ಹಿರಿಯರಾಗಿರುವ ನೌಕರರಿಗೆ ಅನ್ಯಾಯವಾಗುತ್ತಿದೆ. ಪೊಲೀಸ್ ಇಲಾಖೆ ಮಾತ್ರವಲ್ಲದೆ ಶಿಕ್ಷಣ ಇಲಾಖೆಯಲ್ಲೂ ಇದೇ ಸಮಸ್ಯೆ ತಲೆದೋರಿದ್ದು ಸರ್ಕಾರ ಕೂಡಲೇ ಪರಿಹಾರ ಒದಗಿಸಬೇಕಿದೆ ಎಂದು ಹೈದ್ರಾಬಾದ್ ಕರ್ನಾಟಕ ಹೋರಾಟಗಾರ ಡಾ.ರಜಾಕ್ ಉಸ್ತಾದ್ ಆಗ್ರಹಿಸಿದ್ದಾರೆ.