Tag: Hyderabad Encounter

  • ಎನ್‍ಕೌಂಟರ್ ನಡೆಸುವ ವೇಳೆ, ನಡೆಸಿದ ನಂತರ ಯಾವೆಲ್ಲ ಪ್ರಕ್ರಿಯೆ ಮಾಡಬೇಕು? ಸುಪ್ರೀಂ ಕೋರ್ಟ್ ಹೇಳಿದ್ದೇನು?

    ಎನ್‍ಕೌಂಟರ್ ನಡೆಸುವ ವೇಳೆ, ನಡೆಸಿದ ನಂತರ ಯಾವೆಲ್ಲ ಪ್ರಕ್ರಿಯೆ ಮಾಡಬೇಕು? ಸುಪ್ರೀಂ ಕೋರ್ಟ್ ಹೇಳಿದ್ದೇನು?

    ನವದೆಹಲಿ: ತೆಲಂಗಾಣದ ಪಶುವೈದ್ಯೆ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದ ಆರೋಪಿಗಳನ್ನು ಎನ್‍ಕೌಂಟರ್ ಮಾಡಿದ ವಿಚಾರ ರಾಷ್ಟ್ರ ವ್ಯಾಪಿ ಚರ್ಚೆಯಾಗುತ್ತಿದೆ. ಎನ್‍ಕೌಂಟರ್ ಮಾಡಿದ್ದ ಪೊಲೀಸರ ನಡೆಯನ್ನು ಇಡೀ ದೇಶವೇ ಸಮರ್ಥಿಸಿಕೊಂಡರೆ, ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ತೆಲಂಗಾಣದ ಎನ್‍ಕೌಂಟರ್ ಸಂಬಂಧ ವಕೀಲರು ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು ವಕೀಲರಾದ ಜಿ.ಎಸ್.ಮಣಿ ಮತ್ತು ಪ್ರದೀಪ್ ಕುಮಾರ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. 51 ಪುಟಗಳ ಅರ್ಜಿ ಸಲ್ಲಿಸಿರುವ ಇಬ್ಬರು ವಕೀಲರು ತೆಲಂಗಾಣದಲ್ಲಿ ನಡೆದ ಎನ್‍ಕೌಂಟರ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ 2014 ರ ಸುಪ್ರೀಂಕೋರ್ಟ್ ನಿಯಮಗಳನ್ನು ಪೊಲೀಸರು ಉಲ್ಲಂಘಿಸಿದ್ದಾರೆ ಎಂದು ಅರ್ಜಿಯಲ್ಲಿ ದೂರಿದ್ದಾರೆ.

    2014 ರಲ್ಲಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಹಾಗೂ ಮಹಾರಾಷ್ಟ್ರ ಸರ್ಕಾರ ನಡುವಿನ ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಆರ್.ಎಂ.ಲೋಧ ಅವರು 16 ಅಂಶಗಳ ಮಾರ್ಗದರ್ಶನಗಳನ್ನು ರೂಪಿಸಿದ್ದು, ಈ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಜಿ.ಎಸ್.ಮಣಿ ಹೇಳಿದ್ದಾರೆ.

    ಎನ್‍ಕೌಂಟರ್ ಮಾಡಬೇಕಾದ ವೇಳೆ ಮತ್ತು ಎನ್‍ಕೌಂಟರ್ ಆದ ಬಳಿಕ ಯಾವೆಲ್ಲ ನಿಯಮಗಳನ್ನು ಪಾಲಿಸಬೇಕು? ಸುಪ್ರೀಂ ಕೋರ್ಟ್ ರೂಪಿಸಿರುವ ಮಾರ್ಗದರ್ಶನಗಳನ್ನು ಇಲ್ಲಿ ನೀಡಲಾಗಿದೆ.

    1. ಆರೋಪಿಗಳ ಚಲನವಲನ ಮತ್ತು ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕ ತಕ್ಷಣ ಅದನ್ನು ಬರವಣಿಗೆ ಅಥವಾ ಎಲೆಕ್ಟ್ರಾನಿಕ್ ಫಾರ್ಮ್ ನಲ್ಲಿ ದಾಖಲು ಮಾಡಬೇಕು.
    2. ಈ ದಾಖಲೆಯಲ್ಲಿ ಅನುಮಾನ ಇರುವ ಆರೋಪಿ ಮತ್ತು ಆತನ ಸ್ಥಳವನ್ನು ಬಹಿರಂಗ ಪಡಿಸುವ ಅಗತ್ಯ ಇಲ್ಲ.
    3. ಎನ್‍ಕೌಂಟರ್ ಪ್ರಕರಣಗಳಲ್ಲಿ ಪೊಲೀಸ್ ಗನ್ ಬಳಕೆಯಾಗಿದ್ದಾರೆ ಎಫ್‍ಐಆರ್ ದಾಖಲು ಆಗಲೇಬೇಕು.

    4. ಸಿಐಡಿ ಅಥವಾ ಮತ್ತೊಂದು ಪೊಲಿಸ್ ಠಾಣೆಯ ಪೊಲೀಸರಿಂದ ಸ್ವತಂತ್ರ ತನಿಖೆ ಆಗಬೇಕು. ಈ ತನಿಖೆಯನ್ನು ಹಿರಿಯ ಪೊಲೀಸ್ ಅಧಿಕಾರಿ ಮಾಡಬೇಕು
    ಎ. ಎನ್‍ಕೌಂಟರ್ ನಲ್ಲಿ ಭಾಗಿಯಾಗಿದ್ದ ಪೊಲೀಸ್ ಸಿಬ್ಬಂದಿಗಿಂತ ಮೇಲ್ದರ್ಜೆಯ ಅಧಿಕಾರಿಯಿಂದ ತನಿಖೆ ನಡೆಸಬೇಕು.
    ಬಿ. ಎನ್‍ಕೌಂಟರ್ ಮೃತ ಆರೋಪಿಯ ಕಲರ್ ಫೋಟೋ ತೆಗೆಯಬೇಕು.
    ಸಿ. ಸ್ಥಳದಲ್ಲಿನ ಪ್ರಮುಖ ದಾಖಲೆಗಳು ಮತ್ತು ಸಾವಿನ ಸಾಕ್ಷಿಗಳನ್ನು ಸಂಗ್ರಹಿಸಬೇಕು (ಬಟ್ಟೆ, ಕೂದಲು, ರಕ್ತ, ಇತ್ಯಾದಿ ಪೂರಕ ಅಂಶಗಳು)
    ಡಿ. ಎನ್‍ಕೌಂಟರ್ ನಡೆದ ವೇಳೆ ಸ್ಥಳದಲ್ಲಿದ್ದ ಪೊಲೀಸ್ ಮತ್ತು ಸಾರ್ವಜನಿಕರು ಇದ್ದಲ್ಲಿ ಅವರ ಹೆಸರು, ವಿಳಾಸ, ಮೊಬೈಲ್ ನಂಬರ್ ದಾಖಲಿಸಿಕೊಳ್ಳಬೇಕು.
    ಇ. ಎನ್‍ಕೌಂಟರ್‍ಗೆ ಕಾರಣ, ಎನ್‍ಕೌಂಟರ್ ಆದ ರೀತಿ, ಸ್ಥಳ ಹಾಗೂ ಸತ್ತ ಸಮಯ ಎಲ್ಲವನ್ನೂ ದಾಖಲಿಸಬೇಕು. ಸನ್ನಿವೇಶವನ್ನು ಸೃಷ್ಟಿಸಿಡಬೇಕು.
    ಎಫ್. ಮೃತ ಆರೋಪಿಯೂ ಸೇರಿ ಎನ್‍ಕೌಂಟರ್ ವೇಳೆ ಇದ್ದ ಪೊಲೀಸ್ ಸಿಬ್ಬಂದಿಯ ಬೆರಳಚ್ಚು ಪ್ರತಿ ಪಡೆದು ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ತನಿಖೆ ಮಾಡಿಸಬೇಕು.
    ಜಿ. ಜಿಲ್ಲಾಸ್ಪತ್ರೆಯಲ್ಲಿ ಇಬ್ಬರು ವೈದ್ಯರು ಮರಣೋತ್ತರ ಪರೀಕ್ಷೆ ಮಾಡಬೇಕು. ಅದರಲ್ಲಿ ಒಬ್ಬರು ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯ ಅಧಿಕಾರಿ ಆಗಿರಬೇಕು. ಮರಣೋತ್ತರ ಪರೀಕ್ಷೆ ವಿಡಿಯೋ ಚಿತ್ರೀಕರಣ ಆಗಬೇಕು ಅದನ್ನು ಸಂರಕ್ಷಿಸಿಡಬೇಕು.
    ಎಚ್. ಎನ್‍ಕೌಂಟರ್ ನಲ್ಲಿ ಬಳಕೆಯಾದ ಶಸ್ತ್ರಾಸ್ತ್ರ(ಗನ್ ಬಂದೂಕು, ಪಿಸ್ತೂಲ್, ಗುಂಡು, ಬುಲೆಟ್ ಕಾರ್ಟಿಜ್ಡ್) ಸಂರಕ್ಷಣೆ ಮಾಡಬೇಕು.

    5. ಸಹಜವಾಗಿ ಎನ್‍ಕೌಂಟರ್ ನಡೆದಿದೆಯಾ, ಆಕಸ್ಮಿಕವಾಗಿ ಘಟನೆ ನಡೆದಿದ್ದ ಅಥವಾ ಆರೋಪಿ ಪೊಲೀಸ್ ಗನ್ ನಿಂದ ಆತ್ಮಹತ್ಯೆ ಮಾಡಿಕೊಂಡನೇ ಅಥವಾ ಕೊಲೆಯೋ ಎನ್ನುವುದನ್ನು ಪತ್ತೆ ಹಚ್ಚಬೇಕು.
    6. ಮ್ಯಾಜಿಸ್ಟ್ರೇಟ್ ತನಿಖೆ ಆಗಬೇಕು.
    7. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ತಕ್ಷಣ ಮಾಹಿತಿ ನೀಡಬೇಕು.
    8. ಎನ್ ಕೌಂಟರ್ ಬಗ್ಗೆ ಅನುಮಾನ ಇದ್ದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶ ಮಾಡಬಹುದು.
    9. ಎನ್‍ಕೌಂಟರ್ ಆದ ಮೇಲೆ ಆರೋಪಿ ಗಾಯಾಳು ಆದಲ್ಲಿ ಅವನಿಗೆ ವೈದ್ಯಕೀಯ ನೆರವು ನೀಡಬೇಕು ಮತ್ತು ಅವರ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಅಥವಾ ಹಿರಿಯ ವೈದ್ಯಾಧಿಕಾರಿ ದಾಖಲಿಸಿಕೊಳ್ಳಬೇಕು.
    10. ವಿಳಂಬ ಮಾಡದೆ ಎಫ್‍ಐಆರ್ ದಾಖಲು ಮಾಡಿಕೊಳ್ಳಬೇಕು (ಎಫ್‍ಐಆರ್ ಡೈರಿ ಎಂಟ್ರಿ ಪಂಚನಾಮ, ಸ್ಕೆಚ್ ಗಳನ್ನು ತಕ್ಷಣ ಸಂಬಂಧಿಸಿದ ಕೋರ್ಟ್ ನೀಡಬೇಕು)

    11. ವಿಚಾರಣೆ ಅಂತ್ಯದ ಬಳಿಕ ವರದಿಯನ್ನು ಕೋರ್ಟಿಗೆ ನೀಡಬೇಕು.
    12. ಮೃತ ಆರೋಪಿಯ ಹತ್ತಿರದ ಸಂಬಂಧಿಗಳಿಗೆ ತಕ್ಷಣ ಮಾಹಿತಿ ನೀಡಬೇಕು.
    13. ವರ್ಷಕ್ಕೆ ಎರಡು ಬಾರಿ ಎನ್‍ಕೌಂಟರ್ ಆಗಿರುವ ಎಲ್ಲಾ ಮಾಹಿತಿಯನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಡಿಜಿಪಿ ನೀಡಬೇಕು.
    14. ತಪ್ಪಿತಸ್ಥ ಪೊಲೀಸರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು, ಬಲಿಯಾದ ಕುಟುಂಬಕ್ಕೆ ಪರಿಹಾರ ನೀಡಬೇಕು.
    15. ಪೊಲೀಸ್ ಅಧಿಕಾರಿಗಳು ತನಿಖೆ ವೇಳೆ ತಮ್ಮ ಆಯುಧವನ್ನು ತನಿಖಾಧಿಕಾರಿಗಳ ವಶಕ್ಕೆ ನೀಡಬೇಕು, ತನಿಖಾಧಿಕಾರಿಗಳು ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಎನ್‍ಕೌಂಟರ್ ಆಗಿರುವ ಘಟನೆ ಬಗ್ಗೆ ಪೊಲೀಸ್ ಕುಟುಂಬಕ್ಕೆ ಮಾಹಿತಿ ನೀಡಬೇಕು ಅಗತ್ಯ ಇದ್ದಲ್ಲಿ ಕಾನೂನು ನೇರವು ನೀಡಬೇಕು.
    ಎ. ಭಾಗಿಯಾಗಿರುವ ಪೊಲೀಸ್ ಸಿಬ್ಬಂದಿಗೆ ತಕ್ಷಣಕ್ಕೆ ಯಾವುದೇ ಪ್ರಶಸ್ತಿ ನೀಡಬಾರದು.
    ಬಿ. ಬಡ್ತಿ ಅಥವಾ ಶೌರ್ಯ ನೀಡುವಂತಿಲ್ಲ, ತಪ್ಪಿಲ್ಲ ಎನ್ನುವುದು ಸಾಬೀತಾದ ಬಳಿಕ ಮಾತ್ರ ಪ್ರಶಸ್ತಿಗೆ ನೀಡಬೇಕು.
    16. ಎನ್‍ಕೌಂಟರ್ ಗೆ ಬಲಿಯಾದ ಕುಟುಂಬಕ್ಕೆ ತನಿಖೆ ಸರಿಯಾಗಿ ನಡೆದಿಲ್ಲ ಎನ್ನುವ ಅನುಮಾನ ಇದ್ದಲ್ಲಿ ಕೋರ್ಟ್ ಮೊರೆ ಹೋಗಬಹುದು.