Tag: huttari celebration

  • ಕೊಡಗಿನಲ್ಲಿ ಹುತ್ತರಿ ಹಬ್ಬದ ಸಂಭ್ರಮ- ಜಾನಪದ ನೃತ್ಯಲೋಕದ ಅನಾವರಣ

    ಕೊಡಗಿನಲ್ಲಿ ಹುತ್ತರಿ ಹಬ್ಬದ ಸಂಭ್ರಮ- ಜಾನಪದ ನೃತ್ಯಲೋಕದ ಅನಾವರಣ

    ಮಡಿಕೇರಿ: ಕೊಡಗಿನಾದ್ಯಂತ ಇಂದು ಪುತ್ತರಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಕೊಡವರ ವಿಶಿಷ್ಟ ಹಬ್ಬ ಪುತ್ತರಿ ಆಚರಣೆಗೆ ಸಂಭ್ರಮ ಸಡಗರದಿಂದ ತಯಾರಿ ನಡೆಯುತ್ತಿದೆ.

    ವರ್ಷಪೂರ್ತಿ ಅನ್ನ ನೀಡೋ ಧಾನ್ಯಲಕ್ಷ್ಮಿಯನ್ನು ಪೂಜಿಸಿ ಮನೆಗೊಯ್ಯೋ ಸಾಂಪ್ರದಾಯಿಕ ಆಚರಣೆ ಎಲ್ಲರ ಗಮನಸೆಳೆಯುತ್ತಿದೆ. ಪುಲಿ ಪುಲಿ ದೇವಾ ಪೊಲಿಯೇ ದೇವಾ ಘೋಷದೊಂದಿಗೆ ಮನೆಮಂದಿಯೆಲ್ಲ ಧಾನ್ಯವನ್ನು ಮನೆಗೊಯ್ದು ಪೂಜಿಸಿ ಸಂಭ್ರಮಿಸುತ್ತಿದ್ದು ಎಲ್ಲೆಲ್ಲೂ ಹಬ್ಬದ ಸಡಗರ ಮನೆ ಮಾಡಿದೆ.

    ಜಿಲ್ಲೆಯಾದ್ಯಂತ ಇಂದು ಸಂಜೆಯಿಂದಲೇ ಆಚರಣೆ ಕಳೆಗಟ್ಟಲಿದೆ. ಕೊಡಗಿನ ಪ್ರಮುಖ ಹಬ್ಬ ಪುತ್ತರಿ ಧಾನ್ಯಲಕ್ಷ್ಮಿಯನ್ನು ಮನೆಗೊಯ್ಯೋ ಜಾನಪದೀಯ ವಿಶಿಷ್ಟ ಹಬ್ಬ. ನಿಜಕ್ಕೂ ವೈಶಿಷ್ಟ್ಯಪೂರ್ಣ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬೆಟ್ಟಗೇರಿಯಲ್ಲಿಂದು ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನಡೆದ ‘ಪುತ್ತರಿ ನಮ್ಮೆ ಹಬ್ಬ’ ನಡೆಸಲಾಯಿತು.

    ಸಾಂಪ್ರದಾಯಿಕ ಉಡುಗೆತೊಟ್ಟ ನೂರಾರು ಕೊಡವರು ಮನೆಯಲ್ಲಿ ಸಾಂಪ್ರದಾಯಿಕವಾಗಿ ಗುರುವಿಗೆ ನಮಿಸಿ ನೆರೆಕಟ್ಟುತ್ತಾರೆ. ನಂತರ ದುಡಿಕಟ್ಟು ಪಾಟ್ ಸಮೇತ ಕೋವಿಯೊಂದಿಗೆ ಮನೆ ಮಂದಿಯೆಲ್ಲ ಮೆರವಣಿಗೆ ಮೂಲಕ ಗದ್ದೆಗೆ ತೆರಳುತ್ತಾರೆ. ಅಲ್ಲಿ ಸಂಭ್ರಮದಿಂದ ಒಂದು ಸುತ್ತು ಗುಂಡು ಹಾರಿಸಿ ಕದಿರು ಕೊಯ್ಯುತ್ತಾರೆ. ಪುಲಿ ಪುಲಿ ದೇವಾ ಪೊಲಿಯೇ ದೇವಾ ಎಂದು ಸಂತಸದಿಂದ ಕೂಗುತ್ತಾ ಧಾನ್ಯಲಕ್ಷ್ಮಿಯನ್ನು ಶಾಸ್ತ್ರೋಕ್ತವಾಗಿ ತೆಗೆದು ಸಾಂಪ್ರದಾಯಿಕ ಹಾಡಿನೊಂದಿಗೆ ಸಾಗುತ್ತಾರೆ. ಆ ಬಳಿಕ ಭತ್ತದ ಕಣದಲ್ಲಿ ಕದಿರನ್ನಿಟ್ಟು ಪೂಜಿಸಿ ಖುಷಿಯಿಂದ ನೃತ್ಯ ಮಾಡುತ್ತಾರೆ.

    ಪರೆಕಳಿ, ಕೋಲಾಟ್, ತಾಲಿಪಾಟ್ ನೃತ್ಯದ ಮೂಲಕ ಮನೆಯ ಎಲ್ಲರೂ ಒಂದೆಡೆ ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಾರೆ. ಕತ್ತಿ ಕೋವಿ ಸಮೇತ ನೃತ್ಯ ಮಾಡಿ ಖುಷಿಪಟ್ಟು ನಂತರ ಕದಿರನ್ನು ಮನೆಗೊಯ್ಯುತ್ತಾರೆ. ಅಲ್ಲದೇ ಇಂದು ಸಂಜೆ ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ಕೊಡವ ಸಮಾಜದ ಆಶ್ರಯದಲ್ಲಿ ಸಡಗರದ ಪುತ್ತರಿ ಆಚರಣೆ ನಡೆಯಲಿದ್ದು, ದೇವಾಳಯದ ಗದ್ದೆಯಲ್ಲಿ ಕದಿರು ತೆಗೆದು ಜನರು ಸಡಗರದ ಹಬ್ಬಾಚರಣೆ ಮಾಡಲಿದ್ದಾರೆ.

    ಸಾವಿರಾರು ವರ್ಷಗಳಿಂದ ಜಾನಪದ ಹಬ್ಬ ಪುತ್ತರಿಯನ್ನು ಆಚರಿಸಲಾಗುತ್ತಿದ್ದು ಇಂದು ಇದರ ಸಂಭ್ರಮ ಕಡಿಮೆಯಾಗಿದೆ. ಮೊದಲೆಲ್ಲ ಒಂದು ವಾರ ಮುಂಚಿತವಾಗಿಯೇ ಎಲ್ಲರೂ ಸಂಭ್ರಮ ಸಡಗರದಿಂದ ಹಬ್ಬವನ್ನು ಆಚರಿಸುತ್ತಿದ್ದರು. ನಾನಾ ಕಾರಣಗಳಿಗಾಗಿ ಪ್ರಪಂಚದ ಬೇರೆ ಬೇರೆ ಕಡೆ ನೆಲೆಸಿರೋ ಎಲ್ಲಾ ಕೊಡವರು ಈ ಹಬ್ಬಕ್ಕೆ ಬಂದೇ ಬರುತ್ತಾರೆ. ನೆಂಟರಿಷ್ಟರೆಲ್ಲಾ ಒಂದೆಡೆ ಸಂಭ್ರಮಿಸುತ್ತಾರೆ. ಪುತ್ತರಿ ಸಂಭ್ರಮ ಕೇವಲ ಇಂದಿಗೆ ಮಾತ್ರ ಸೀಮಿತವಾಗದೆ ನಾಳೆಯಿಂದ ಕೊಡಗಿನ ಜಾನಪದದ ನೃತ್ಯಲೋಕದ ಅನಾವರಣದ ಜೊತೆಗೆ ಇಡೀ ನಾಡಲ್ಲಿ ಪುತ್ತರಿ ಸಂಭ್ರಮ ಕಳೆಗಟ್ಟಲಿದೆ.