Tag: hut

  • ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ – 3 ಲಕ್ಷ ರೂ. ಮೌಲ್ಯದ ವಸ್ತುಗಳು ಭಸ್ಮ

    ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ – 3 ಲಕ್ಷ ರೂ. ಮೌಲ್ಯದ ವಸ್ತುಗಳು ಭಸ್ಮ

    ಹಾವೇರಿ: ಆಕಸ್ಮಿಕವಾಗಿ ಗುಡಿಸಲು ಮನೆಗೆ ಬೆಂಕಿ ಹತ್ತಿದ ಪರಿಣಾಮ ಗುಡಿಸಲು (Hut) ಮನೆ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಹಾವೇರಿ (Haveri) ಜಿಲ್ಲೆ ರಾಣೇಬೆನ್ನೂರು (Ranebennur) ತಾಲೂಕಿನ ಹೊಳೆ ಆನ್ವೇರಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ನಿಂಗಪ್ಪ ಪೂಜಾರ ಎಂಬವರಿಗೆ ಸೇರಿದ ಗುಡಿಸಲು ಮನೆ ಸುಟ್ಟು ಕರಕಲಾಗಿದೆ. ಮನೆಯಲ್ಲಿದ್ದ ಹಣ, ಬಟ್ಟೆ ಸೇರಿದಂತೆ ಮೂರು ಲಕ್ಷ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದೆ. ದೇವರ ಮುಂದೆ ಹಚ್ಚಿದ ದೀಪದ ಕೆಳಗಡೆ ಬಿದ್ದು ಬೆಂಕಿ ಹತ್ತಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಗೋವಿನ ಕೆಚ್ಚಲು ಕತ್ತರಿಸಿರೋದು ಭವಿಷ್ಯದ ಅಪಾಯವನ್ನು ಸೂಚಿಸುತ್ತಿದೆ: ಸುಗುಣೇಂದ್ರ ಶ್ರೀ

    ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಸ್ತೆಯ ಬದಿಯ ಕ್ಯಾಂಟಿನ್‌ಗೆ ನುಗ್ಗಿದ ಲಾರಿ – ಇಬ್ಬರು ಸ್ಥಳದಲ್ಲೇ ಸಾವು, ಮೂವರ ಸ್ಥಿತಿ ಚಿಂತಾಜನಕ

  • ಗುಡಿಸಲಿಗೆ ಬೆಂಕಿ – ತಾಯಿ, 4 ಮಕ್ಕಳು ದಾರುಣ ಸಾವು

    ಗುಡಿಸಲಿಗೆ ಬೆಂಕಿ – ತಾಯಿ, 4 ಮಕ್ಕಳು ದಾರುಣ ಸಾವು

    ಲಕ್ನೋ: ಗುಡಿಸಲಿಗೆ (Hut) ಹೊತ್ತಿಕೊಂಡ ಬೆಂಕಿಯಿಂದಾಗಿ (Fire) ತಾಯಿ (Mother) ಹಾಗೂ 4 ಮಕ್ಕಳು (Children) ಸಜೀವದಹನವಾಗಿರುಗ ಘಟನೆ ಉತ್ತರ ಪ್ರದೇಶದ (Uttar Pradesh) ಮೌ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.

    ಮೃತ ಮಹಿಳೆಯನ್ನು (Woman) ಗುಡ್ಡಿ ದೇವಿ ಎಂದು ಗುರುತಿಸಲಾಗಿದ್ದು, ತನ್ನ ನಾಲ್ವರು ಮಕ್ಕಳೊಂದಿಗೆ ಗುಡಿಸಲಿನಲ್ಲಿದ್ದಾಗ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಒಲೆಯಲ್ಲಿ ಹಚ್ಚಲಾಗಿದ್ದ ಬೆಂಕಿಯ ಕಿಡಿ ಗುಡಿಸಲಿಗೆ ತಗುಲಿ ಇಡೀ ಗುಡಿಸಲು ಸುಟ್ಟು ಭಸ್ಮವಾಗಿದೆ. ಇದರಿಂದಾಗಿ ಗುಡಿಸಲಿನೊಳಗಿದ್ದ ಮಹಿಳೆ ಹಾಗೂ ಮಕ್ಕಳು ಸಾವನ್ನಪ್ಪಿದ್ದಾರೆ.

    ಘಟನೆಯ ಸಂದರ್ಭ ಮಹಿಳೆಯ ಪತಿ ರಾಮಶಂಕರ್ ಬೇರೆಡೆ ಕೆಲಸಕ್ಕೆ ಹೋಗಿದ್ದರು ಎನ್ನಲಾಗಿದೆ. ಕೋಪಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಉಪ ಪೊಲೀಸ್ ಮಹಾನಿರೀಕ್ಷಕ (DIG) ಅಖಿಲೇಶ್ ಕುಮಾರ್, ಜಿಲ್ಲಾ ಮ್ಯಾಜಿಸ್ಟ್ರೇಟ್ ಅರುಣ್ ಕುಮಾರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅವಿನಾಶ್ ಪಾಂಡೆ ಸ್ಥಳಕ್ಕಾಗಮಿಸಿದ್ದಾರೆ. ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ಆರಂಭಿಸಲಾಗಿದೆ. ಇದನ್ನೂ ಓದಿ: ಮಕ್ಕಳಾಗಿಲ್ಲ ಎಂದು ಪತ್ನಿಯನ್ನು ಥಳಿಸಿದ ಪತಿ- ಖಾಸಗಿ ಅಂಗಕ್ಕೆ ಗಾಯ

    ಮಹಿಳೆ ತನ್ನ 4 ಮಕ್ಕಳೊಂದಿಗೆ ಗುಡಿಸಲಿನಲ್ಲಿ ವಾಸಿಸುತ್ತಿದ್ದರು, ಆದರೆ ಮಂಗಳವಾರ ತಡರಾತ್ರಿ ಗುಡಿಸಲಿಗೆ ಹೊತ್ತಿಕೊಂಡ ಬೆಂಕಿಯಿಂದಾಗಿ ಆಕೆಯ ಪತಿಯನ್ನು ಹೊರತುಪಡಿಸಿ ಇಡೀ ಕುಟುಂಬ ಸುಟ್ಟು ಕರಕಲಾಗಿದೆ. ಮೃತರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಇದನ್ನೂ ಓದಿ: ಮಿನಿ ಬಸ್, ಸಾರಿಗೆ ಬಸ್ ಮುಖಾಮುಖಿ ಡಿಕ್ಕಿ – 12 ವಿದ್ಯಾರ್ಥಿಗಳಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ಕುಂಭಮೇಳದಲ್ಲಿ ಮತ್ತೆ ಬೆಂಕಿ ಅವಘಡ

    ಕುಂಭಮೇಳದಲ್ಲಿ ಮತ್ತೆ ಬೆಂಕಿ ಅವಘಡ

    ಡೆಹರೂಡಾನ್: ಬೈರಗಿ ಕ್ಯಾಂಪ್‍ನಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಭಾನುವಾರ ಹರಿದ್ವಾರದ ಕುಂಭ ಮೇಳದಲ್ಲಿ ಹಲವಾರು ಗುಡಿಸಲುಗಳು ಸುಟ್ಟು ಕರಕಲಾಗಿವೆ.

    ಜೋರಾಗಿ ಗಾಳಿ ಬೀಸಿದ್ದರಿಂದ ಬೆಂಕಿಯು ವೇಗವಾಗಿ ಹರಡಿ ಹಲವಾರು ಗುಡಿಸಲುಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಹೀಗಾಗಿ ಬೆಂಕಿ ನಂದಿಸಲು ಕೂಡಲೇ ಅಗ್ನಿ ಶಾಮಕ ದಳ ವಾಹನವನ್ನು ಸ್ಥಳಕ್ಕೆ ಕರೆಸಲಾಯಿತು ಎಂದು ವೃತ್ತ ಅಧಿಕಾರಿ ಅಭಯ್ ಪ್ರತಾಪ್ ಸಿಂಗ್ ಹೇಳಿದ್ದಾರೆ.

    ಸದ್ಯ ಘಟನೆ ವೇಳೆ ಅದೃಷ್ಟವಶತ್ ಪ್ರಾಣ ಹಾನಿಯಾಗಿಲ್ಲ. ಅಲ್ಲದೆ ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 10 ದಿನಗಳ ಹಿಂದೆ ಕೂಡ ಬೈರಗಿ ಕ್ಯಾಂಪ್‍ನಲ್ಲಿ ಬೆಂಕಿ ಕಾಣಿಸಿಕೊಂಡು ಹಲವಾರು ಗುಡಿಸಲುಗಳು ಸುಟ್ಟು ಹೋಗಿದ್ದವು. ಇದೀಗ ಮತ್ತೆ ಘಟನೆ ಮರುಕಳಿಸಿದೆ.

  • ಕೊಟ್ಟಿಗೆಗೆ ವ್ಯಾಪಿಸಿದ ಬೆಂಕಿ – ಗೋವು ರಕ್ಷಿಸಿ ಗೋಪಾಲಕ ಸಾವು

    ಕೊಟ್ಟಿಗೆಗೆ ವ್ಯಾಪಿಸಿದ ಬೆಂಕಿ – ಗೋವು ರಕ್ಷಿಸಿ ಗೋಪಾಲಕ ಸಾವು

    ನೆಲಮಂಗಲ: ಆಕಸ್ಮಿಕವಾಗಿ ಕೊಟ್ಟಿಗೆಗೆ ಬೆಂಕಿ ತಗುಲಿ ಹಸು ರಕ್ಷಣೆಗೆ ತೆರಳಿದ್ದ ಗೋಪಾಲಕ ಮೃತಪಟ್ಟ ಘಟನೆ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ತಾವರೇಕೆರೆಯಲ್ಲಿ ನಡೆದಿದೆ.

    ಲೋಕೇಶ್ ಮೃತಪಟ್ಟ ಗೋಪಾಲಕ. ಮನೆಯ ನೀರು ಕಾಯಿಸುವ ಒಲೆಯಿಂದ ವ್ಯಾಪಿಸಿದ ಅಗ್ನಿ ಅವಘಡ ಇಡೀ ಕೊಟ್ಟಿಗೆ ಮನೆಗೆ ವ್ಯಾಪಿಸಿದೆ.

    ಬೆಂಕಿ ಬಿದ್ದ ವಿಷಯ ತಿಳಿದು ಲೋಕೇಶ್‌ ಕೂಡಲೇ ಕೊಟ್ಟಿಗೆಗೆ ನುಗ್ಗಿ ಹಸುಗಳನ್ನು ಎಳೆದು ಹೊರ ತಂದಿದ್ದಾರೆ. ಈ ವೇಳೆ ನಾಲ್ಕು ಹಸುಗಳು ಗಂಭೀರವಾಗಿ ಗಾಯಗೊಂಡಿವೆ.

    ರಾತ್ರಿಯೇ ಶೇ.90 ರಷ್ಟು ಲೋಕೇಶ್‌ ಅವರ ದೇಹ ಸುಟ್ಟು ಹೋಗಿತ್ತು. ಗಂಭೀರವಾಗಿದ್ದ ಲೋಕೇಶ್‌ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಲೋಕೇಶ್‌ ಮೃತಪಟ್ಟಿದ್ದಾರೆ.

  • ಅನಧಿಕೃತ ಗುಡಿಸಲು ತೆರವು ಕಾರ್ಯಾಚರಣೆ- ನಿವಾಸಿಗಳಿಂದ ಪ್ರತಿಭಟನೆ

    ಅನಧಿಕೃತ ಗುಡಿಸಲು ತೆರವು ಕಾರ್ಯಾಚರಣೆ- ನಿವಾಸಿಗಳಿಂದ ಪ್ರತಿಭಟನೆ

    ರಾಯಚೂರು: ನಗರದ ಚಂದ್ರಬಂಡಾ ರಸ್ತೆಯಲ್ಲಿನ ಆಶ್ರಯ ಕಾಲೋನಿಯಲ್ಲಿನ ಅನಧಿಕೃತ ಟಿನ್ ಶೆಡ್, ಗುಡಿಸಲುಗಳನ್ನ ತೆರವು ಮಾಡಲಾಯಿತು. ಸುಮಾರು 12 ವರ್ಷಗಳಿಂದ ಅನಧಿಕೃತವಾಗಿ ಶೆಡ್ ಹಾಕಿಕೊಂಡು ವಾಸಿಸುತ್ತಿದ್ದ ಹಕ್ಕುಪತ್ರ ಇಲ್ಲದ ನಿವಾಸಿಗಳನ್ನ ಜಿಲ್ಲಾಡಳಿತ ನೇತೃತ್ವದಲ್ಲಿ ಜಾಗ ಖಾಲಿ ಮಾಡಿಸಲಾಯಿತು.

    ಆಶ್ರಯ ಕಾಲೋನಿಯಲ್ಲಿ ಅನಧಿಕೃತವಾಗಿ ಸಾವಿರಾರು ಜನ ವಾಸಮಾಡುತ್ತಿದ್ದು, ಕೆಲ ಪ್ರಭಾವಿಗಳು ಶೆಡ್‍ಗಳನ್ನ ಬಾಡಿಗೆ ಕೊಟ್ಟಿದ್ದಾರೆ. ತೆರವು ಕಾರ್ಯಾಚರಣೆ ವೇಳೆ ಪೊಲೀಸರು ಹಾಗೂ ನಿವಾಸಿಗಳ ನಡುವೆ ವಾಗ್ವಾದ ನಡೆಯಿತು. ಮನೆಗಳ ತೆರವು ಮಾಡಲು ಬಿಡುವುದಿಲ್ಲ ಅಂತ ಮಹಿಳೆಯರು ಮಕ್ಕಳು ಕಣ್ಣೀರಿಟ್ಟರು. ತೆರವು ಕಾರ್ಯಕ್ಕೆ ಅಡ್ಡಿಪಡಿಸಿದವರನ್ನ ಮನೆಯಿಂದ ಹೊರಹಾಕಿ ಕಾರ್ಯಾಚರಣೆ ಮುಂದುವರೆಸಲಾಯಿತು. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾದ ಹಿನ್ನೆಲೆ ನೂರಾರು ಜನ ಪೋಲೀಸರನ್ನ ನಿಯೋಜಿಸಲಾಗಿತ್ತು.

    ಕಾರ್ಯಾಚರಣೆ ನಿಲ್ಲಿಸುವಂತೆ ನಿವಾಸಿಗಳೆಲ್ಲಾ ಪ್ರತಿಭಟನೆ ನಡೆಸಿದರು. ನಿವಾಸಿಗಳ ಹೋರಾಟಕ್ಕೆ ಕಾಂಗ್ರೆಸ್ ಮುಖಂಡರು ಸಾಥ್ ನೀಡಿ ಕಾರ್ಯಾಚರಣೆ ನಿಲ್ಲಿಸಲು ಮನವಿ ಮಾಡಿದರು. ಉಳಿದವರಿಗೆ ಕೂಡಲೇ ಸ್ವಯಂ ತೆರವು ಮಾಡಿಕೊಳ್ಳಲು ಕಾಲವಕಾಶ ನೀಡಲಾಗಿದೆ. ಅಧಿಕಾರಿಗಳು ಎಚ್ಚರಿಕೆ ನೀಡಿ ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

     

  • ಒಲೆಯ ಕಿಡಿಗೆ ಸುಟ್ಟು ಕರಕಲಾದ ಜೋಪಡಿ – ಬೆಂಕಿಯ ಕೆನ್ನಾಲಿಗೆ ಸಿಲುಕಿ ಮಗು ಸಾವು

    ಒಲೆಯ ಕಿಡಿಗೆ ಸುಟ್ಟು ಕರಕಲಾದ ಜೋಪಡಿ – ಬೆಂಕಿಯ ಕೆನ್ನಾಲಿಗೆ ಸಿಲುಕಿ ಮಗು ಸಾವು

    – ಅಪಾಯದಿಂದ ಪಾರಾದ ಮೂರು ಮಕ್ಕಳು

    ಜೈಪುರ: ಒಲೆಯಲ್ಲಿನ ಕಿಡಿಗೆ ಗುಡಿಸಲು ಸುಟ್ಟು ಕರಕಲಾಗಿ ಎರಡು ವರ್ಷದ ಮಗು ಸಾವನ್ನಪ್ಪಿದೆ. ಶನಿವಾರ ಮಧ್ಯಾಹ್ನ ರಾಜಸ್ಥಾನದ ಸಿಕಾರ ಜಿಲ್ಲೆಯ ತಾರಾನಗರ ಬಳಿಯ ಬೂಚ್ವಾಸ್ ನಲ್ಲಿ ನಡೆದಿದೆ.

    ಎರಡು ವರ್ಷದ ಸೂರಜ್ ಬೆಂಕಿಗಾಹುತಿಯಾದ ಕಂದಮ್ಮ. ಸೂರಜ್ ತಂದೆ ಪಿತರಾಮ್ ಪತ್ನಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ನಾಲ್ವರು ಮಕ್ಕಳಲ್ಲಿ ಮೂವರು ಹೊರಗೆ ಆಟ ಆಡುತ್ತಿದ್ದರು. ಒಲೆಯಲ್ಲಿದ್ದ ಕಿಡಿ ಗಾಳಿಗೆ ಹಾರಿ ಇಡೀ ಗುಡಿಸಲು ಆವರಿಸಿದ ಪರಿಣಾಮ ಒಳಗಡೆ ಇದ್ದ ಸೂರಜ್ ಮೃತಪಟ್ಟಿದ್ದಾನೆ.

    ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರು ದೌಡಾಯಿಸಿದ್ದಾರೆ. ಬೆಂಕಿ ನಂದಿಸಲು ಪ್ರಯತ್ನಿಸುವ ವೇಳಗೆ ಇಡೀ ಗುಡಿಸಲನ್ನ ಅಗ್ನಿ ಆಹುತಿ ತೆಗೆದುಕೊಂಡಿತ್ತು. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕಿದ್ದಾರೆ. ಸುಟ್ಟು ಕರಕಲಾಗಿದ್ದ ಮಗುವಿನ ಮೃತದೇಹವನ್ನ ಮರಣೋತ್ತರ ಶವ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಇನ್ನು ಇಡೀ ಕುಟುಂಬ ಬೀದಿ ಬಂದಿದ್ದನು ಕಂಡ ಸ್ಥಳೀಯರು ಆರ್ಥಿಕ ಸಹಾಯ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

     

  • ತಾನು ತೆಗೆದುಕೊಂಡು ಬಂದ ಹಾಲನ್ನು ಕೊಡುವಂತೆ ಹೇಳಿ ರೇಪ್‍ಗೈದ ಜಮೀನು ಮಾಲೀಕ

    ತಾನು ತೆಗೆದುಕೊಂಡು ಬಂದ ಹಾಲನ್ನು ಕೊಡುವಂತೆ ಹೇಳಿ ರೇಪ್‍ಗೈದ ಜಮೀನು ಮಾಲೀಕ

    – ಮನೆಯಲ್ಲಿ ಒಬ್ಬಳೇ ಇದ್ದೀನಿ ಎಂದಿದ್ದೆ ತಪ್ಪಾಯ್ತು

    ಗಾಂಧಿನಗರ: ಕೃಷಿ ಮಾಲೀಕನೊಬ್ಬ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಗುಜರಾತ್‍ನ ಕಚ್ ಜಿಲ್ಲೆಯಲ್ಲಿ ನಡೆದಿದೆ.

    ಅಹಮದಾಬಾದ್‍ನ ಪೊಲೀಸ್ ಠಾಣೆಯಲ್ಲಿ ಈ ಕುರಿತು ಶೂನ್ಯ ಎಫ್‍ಐಆರ್ ದಾಖಲಿಸಲಾಗಿದೆ. ಆರೋಪಿಯನ್ನು ರಾಂಚೋಡ್ ಅಹೀರ್ ಎಂದು ಗುರುತಿಸಲಾಗಿದೆ. ಸಂತ್ರಸ್ತೆ ಕೃಷಿ ಕಾರ್ಮಿಕ ಕೆಲಸ ಮಾಡುತ್ತಿದ್ದು, ಸೆಪ್ಟೆಂಬರ್ 16 ರಂದು ಆರೋಪಿ ತನ್ನ ಜಮೀನಿನ ಗುಡಿಸಲಿನಲ್ಲಿ ಮಹಿಳೆಯ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಸಂತ್ರಸ್ತೆ ಮತ್ತು ಆಕೆಯ ಪತಿ 2019ರ ಡಿಸೆಂಬರ್‌ನಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡಲು ಕಚ್‍ನ ಅಜ್ನರ್ ತಾಲೂಕಿಗೆ ಬಂದಿದ್ದರು. ಲಾಕ್‍ಡೌನ್ ನಂತರ ದಂಪತಿ ಮತ್ತು ಇತರ ಇಬ್ಬರು ಸಂಬಂಧಿಕರು ಮೇ 25 ರಂದು ಆರೋಪಿ ಅಹೀರ್ ಜಮೀನಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದರು. ಅವರೆಲ್ಲರೂ ಜಮೀನಿನಲ್ಲಿ ತಾತ್ಕಾಲಿಕ ಗುಡಿಸಲುಗಳಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಸೆಪ್ಟೆಂಬರ್ 16 ರಂದು ಸಂಜೆ ನನ್ನ ಪತಿ ಹಳ್ಳಿಗೆ ಹೋಗಿದ್ದರು. ಆದರೆ ಅವರ ಫೋನನ್ನು ನನಗೆ ಕೊಟ್ಟು ಹೋಗಿದ್ದರು. ಈ ವೇಳೆ ರಾಂಚೋಡ್ ಪತಿಯ ಫೋನ್‍ಗೆ ಕರೆ ಮಾಡಿ ಸ್ವಲ್ಪ ಕೆಲಸ ಮಾಡಬೇಕೆಂದು ಕೇಳಿದನು. ಆಗ ನಾನು, ಮನೆಯಲ್ಲಿ ಒಬ್ಬಂಟಿಯಾಗಿದ್ದೇನೆ. ನನ್ನ ಪತಿ ಹಿಂದಿರುಗಿದ ನಂತರ ಬಂದು ಕೆಲಸ ಮಾಡುತ್ತೇವೆ ಎಂದು ಹೇಳಿದೆ. ಸ್ವಲ್ಪ ಸಮಯದ ನಂತರ ರಾಂಚೋಡ್ ಸ್ವಲ್ಪ ಹಾಲು ತೆಗೆದುಕೊಂಡು ನನ್ನ ಗುಡಿಸಲಿಗೆ ಬಂದನು. ಬಳಿಕ ಆ ಹಾಲನ್ನು ತನಗೆ ಕೊಡಬೇಕೆಂದು ಹೇಳಿದನು. ಅಲ್ಲದೆ ಬಲವಂತವಾಗಿ ನನ್ನ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಅಲ್ಲದೇ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನನ್ನ ಪತಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆದರೆ ನನ್ನ ಪತಿ ಮನೆಗೆ ಬಂದ ತಕ್ಷಣ ನಡೆದ ಘಟನೆಯ ಬಗ್ಗೆ ತಿಳಿಸಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ.

    ಮರುದಿನ ದಂಪತಿ ಅಜ್ನರ್ ಬಸ್ ನಿಲ್ದಾಣಕ್ಕೆ ಹೋಗಿ ತಮ್ಮ ಮೊಬೈಲ್ ಫೋನ್ ಅನ್ನು 1,500 ರೂಪಾಯಿಗೆ ಮಾರಾಟ ಮಾಡಿದ್ದಾರೆ. ಅದೇ ಹಣದಲ್ಲಿ ಗುಜರಾತ್‍ನ ದಾಹೋಡ್‍ನಲ್ಲಿರುವ ತಮ್ಮ ಮನೆಗೆ ಟಿಕೆಟ್ ಖರೀದಿಸಿದ್ದಾರೆ. ಅಲ್ಲಿ ಕಾರ್ಮಿಕರ ಸಂಘಟನೆ ಆರೋಪಿ ಅಹೀರ್ ವಿರುದ್ಧ ಎಫ್‍ಐಆರ್ ದಾಖಲಿಸಲು ಸಹಾಯ ಮಾಡಿದೆ. ಅಹಮದಾಬಾದ್‍ನ ಸಾಬರಮತಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ದಾಖಲಿಸಲಾಗಿದೆ.

  • ಬೆಂಕಿ ಹೊತ್ತಿದ್ದ ಗುಡಿಸಲಿನಲ್ಲಿದ್ದ 60 ಸಾವಿರ ಹಣ ತರಲು ಹೋಗಿ ರೈತ ಸಜೀವ ದಹನ

    ಬೆಂಕಿ ಹೊತ್ತಿದ್ದ ಗುಡಿಸಲಿನಲ್ಲಿದ್ದ 60 ಸಾವಿರ ಹಣ ತರಲು ಹೋಗಿ ರೈತ ಸಜೀವ ದಹನ

    ರಾಯಚೂರು: ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿ ರೈತನೊಬ್ಬ ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದಲ್ಲಿ ನಡೆದಿದೆ.

    ನಾಗಪ್ಪ ತಾತೆ (40) ಮೃತ ದುರ್ದೈವಿ ರೈತ. ಈ ಘಟನೆಯಲ್ಲಿ ಒಂದು ಟಗರು ಸಾವನ್ನಪ್ಪಿದ್ದು, ಬೈಕ್ ಸಹ ಬೆಂಕಿಗಾಹುತಿಯಾಗಿದೆ. ಗ್ರಾಮದ ಹೊರವಲಯದ ಜಮೀನಿನಲ್ಲಿ ನಾಗಪ್ಪನ ಕುಟುಂಬ ಗುಡಿಸಲಿನಲ್ಲಿ ವಾಸವಾಗಿತ್ತು.

    ಶುಕ್ರವಾರ ರಾತ್ರಿ ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ಹೊತ್ತಿದೆ. ಕೂಡಲೇ ಗುಡಿಸಲಿನಿಂದ ಕುಟುಂಬದವರೆಲ್ಲಾ ಹೊರಬಂದಿದ್ದಾರೆ. ಆದರೆ ಗುಡಿಸಲಿನಲ್ಲಿದ್ದ 60 ಸಾವಿರ ರೂಪಾಯಿ ಹಣ ತರಲು ಮತ್ತೆ ಒಳಹೋದಾಗ ನಾಗಪ್ಪ ಬೆಂಕಿ ಕೆನ್ನಾಲಿಗೆ ಹೊರಬರಲಾಗದೆ ಗುಡಿಸಿಲಿನಲ್ಲಿ ಸಾವನ್ನಪ್ಪಿದ್ದಾನೆ.

    ಸುತ್ತಮುತ್ತ ಹೆಚ್ಚು ಮನೆಗಳು ಇಲ್ಲದ ಹಿನ್ನೆಲೆಯಲ್ಲಿ ಕೂಡಲೇ ಯಾರೂ ಸಹಾಯಕ್ಕೆ ಬರಲು ಸಾಧ್ಯವಾಗಿಲ್ಲ. ಗುಡಿಸಲಿನಲ್ಲಿದ್ದ ಮೂವರು ಮಕ್ಕಳು ಹಾಗೂ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದವಸ , ಧಾನ್ಯ ಸೇರಿ ನಿತ್ಯದ ಸಾಮಗ್ರಿಗಳು ಸಂಪೂರ್ಣ ಭಸ್ಮವಾಗಿವೆ.

    ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ದೇವದುರ್ಗ ಠಾಣೆ ಪೊಲೀಸರು, ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • ಹಂದಿ ಕಳ್ಳರಿಂದ ತ್ರಿಬಲ್ ಮರ್ಡರ್ – ಓರ್ವನ ಶಿರ ನಾಪತ್ತೆ

    ಹಂದಿ ಕಳ್ಳರಿಂದ ತ್ರಿಬಲ್ ಮರ್ಡರ್ – ಓರ್ವನ ಶಿರ ನಾಪತ್ತೆ

    – ತಂದೆ, ಮಗ, ಅಣ್ಣನ ಮಗ ಸೇರಿದಂತೆ ಮೂವರ ಕೊಲೆ
    – ಆಂಧ್ರ ಮೂಲದ ಕೊಲೆಗಾರರು ಹಂದಿ ಕದ್ದು ಪರಾರಿ ಶಂಕೆ

    ಚಿತ್ರದುರ್ಗ: ಹಂದಿ ಕದಿಯಲು ಬಂದಿದ್ದ ಕಳ್ಳರು ಮೂವರನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ನಡೆದಿದೆ.

    ಮಾರೇಶ್ (50), ಯಲ್ಲೇಶ್ (30) ಮತ್ತು ಸೀನಪ್ಪ (30) ಕೊಲೆಯಾದ ದುರ್ದೈವಿಗಳು. ಒಂದು ವಾರದ ಹಿಂದೆ ನಾಯಕನಹಟ್ಟಿಗೆ ಬುಲೇರೊ ವಾಹನದಲ್ಲಿ ಬಂದಿದ್ದ ಆಂಧ್ರ ಮೂಲದ ಗುಂಪೊಂದು ನಿಮಗೆ ಪಾಠ ಕಲಿಸುವುದಾಗಿ ಎಚ್ಚರಿಕೆ ಕೊಟ್ಟು ತೆರಳಿದ್ದರು. ಹಂದಿ ವ್ಯಾಪಾರದ ವಿಚಾರದಲ್ಲಿ ಪರಸ್ಪರ ದ್ವೇಷವಿರಬಹುದೆಂಬ ಶಂಕೆ ನಾಯಕನಹಟ್ಟಿಯಲ್ಲಿ ವ್ಯಕ್ತವಾಗಿತ್ತು.

    ಇದರ ಬೆನ್ನಲ್ಲೇ ಮಂಗಳವಾರ ತಡರಾತ್ರಿ ದುಷ್ಕರ್ಮಿಗಳ ಗುಂಪೊಂದು ನಾಯಕನಹಟ್ಟಿ ಹೊರವಲಯದಲ್ಲಿರುವ ಹಂದಿ ಸಾಕಣೆ ಗುಡಿಸಲಿಗೆ ಏಕಾಏಕಿ ನುಗ್ಗಿದ್ದಾರೆ. ನಂತರ ಗುಡಿಸಲಿನ ಬಳಿ ಮಲಗಿದ್ದ ಮಾರೇಶನ ತಲೆ ಕಡಿದು ಕೊಲೆಗೈದಿದ್ದಾರೆ. ತಲೆ ಇಲ್ಲದ ದೇಹ ಮಾತ್ರ ಸ್ಥಳದಲ್ಲಿ ಪತ್ತೆಯಾಗಿದ್ದು, ಶಿರ ನಾಪತ್ತೆಯಾಗಿದೆ. ಈ ವೇಳೆ ತಂದೆಯೊಂದಿಗಿದ್ದ ಮಗ ಸೀನಪ್ಪ ಹಾಗೂ ಅಣ್ಣನ ಮಗನಾದ ಯಲ್ಲೇಶನ ಕಣ್ಣಿಗಳಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರ ಹಾಗೂ ಕಲ್ಲಿನಿಂದ ಕೊಲೆಗೈದಿದ್ದಾರೆ.

    ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳಲು ಯಲ್ಲೇಶ್ ಗುಡಿಸಲಿನಿಂದ ದೂರ ಓಡಿಹೋಗಿದ್ದಾನೆ. ಆಗ ರಸ್ತೆ ಬದಿಯಲ್ಲೇ ಆತನನ್ನು ಕಲ್ಲಿನಿಂದ ಹೊಡೆದು ಕೊಂದಿದ್ದಾರೆ. ಮೂವರನ್ನು ಕೊಂದ ಬಳಿಕ 40ಕ್ಕೂ ಹೆಚ್ಚು ಹಂದಿಗಳನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನಾ ಸ್ಥಳದಲ್ಲಿ ಕಣ್ಣೀರು ಹಾಕುತ್ತಾ, ಪತಿ ಮತ್ತು ಮಕ್ಕಳನ್ನು ಕೊಂದವರನ್ನು ತುಂಡಾಗಿ ಕತ್ತರಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಚಿತ್ರದುರ್ಗ ಎಸ್‍ಪಿ ಜಿ.ರಾಧಿಕಾ ಹಾಗೂ ಎಎಸ್‍ಪಿ ನಂದಗಾವಿ ಸೇರಿದಂತೆ ನಾಹಕನಹಟ್ಟಿ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಸ್ಥಳದಲ್ಲಿ ಶ್ವಾನದಳ, ಬೆರಳಚ್ಚು ತಜ್ಞರ ತಂಡದೊಂದಿಗೆ ತನಿಖೆ ಮುಂದುವರಿಸಿದ್ದಾರೆ. ಮೃತರ ಸಂಬಂಧಿಗಳ ಹೇಳಿಕೆ ಪಡೆದು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಈ ಕೃತ್ಯದಿಂದಾಗಿ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

  • ದೆಹಲಿ ಸ್ಲಂನಲ್ಲಿ ಅಗ್ನಿ ಅವಘಡ- 1,500 ಗುಡಿಸಲು ಭಸ್ಮ

    ದೆಹಲಿ ಸ್ಲಂನಲ್ಲಿ ಅಗ್ನಿ ಅವಘಡ- 1,500 ಗುಡಿಸಲು ಭಸ್ಮ

    ನವದೆಹಲಿ: ಆಗ್ನೇಯ ದೆಹಲಿಯ ತುಘಲಕಾಬಾದ್ ಪ್ರದೇಶದ ಕೊಳೆಗೇರಿಗಳಲ್ಲಿ ಸೋಮವಾರ ರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಇದರಿಂದ ಸುಮಾರು 1,500 ಗುಡಿಸಲುಗಳು ಸುಟ್ಟು ಭಸ್ಮವಾಗಿದ್ದು, ನೂರಾರು ಜನರು ನಿರಾಶ್ರಿತರಾಗಿದ್ದಾರೆ.

    ನಮಗೆ ಬೆಂಕಿ ಕಾಣಿಸಿಕೊಂಡ ಬಗ್ಗೆ ರಾತ್ರಿ 12.50ಕ್ಕೆ ಕರೆ ಬಂದಿದ್ದು, 28 ಅಗ್ನಿಶಾಮಕ ವಾಹನವನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿ ತಿಳಿಸಿದ್ದಾರೆ. ಹೆಚ್ಚಿನ ಜನರು ನಿದ್ರೆಯಲ್ಲಿ ಇದ್ದಾಗ ಈ ಅವಘಡ ಸಂಭವಿಸಿದೆ. ಆದರೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಹೇಳಲಾಗಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ದಕ್ಷಿಣದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ರಾಜೇಂದ್ರ ಪ್ರಸಾದ್ ಮೀನಾ, ತುಘಲಕಾಬಾದ್‍ನ ಕೊಳೆಗೇರಿಗಳಲ್ಲಿ ನಸುಕಿನ ಜಾವ 1 ಗಂಟೆ ಸುಮಾರಿಗೆ ಬೆಂಕಿಯ ಕಾಣಿಸಿಕೊಂಡ ಬಗ್ಗೆ ನಮಗೆ ಮಾಹಿತಿ ಬಂದಿತ್ತು. ತಕ್ಷಣ ನಮ್ಮ ಎಲ್ಲ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದೆವು. ಸುಮಾರು 1,000-1,200 ಗುಡಿಸಲುಗಳು ಬೆಂಕಿಗೆ ಆಹುತಿಯಾಗಿವೆ ಎಂದು ಹೇಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

    ಸ್ಥಳೀಯರ ಪ್ರಕಾರ ಅಗ್ನಿ ಅವಘಡ ಹೇಗೆ ಸಂಭವಿಸಿತ್ತು ಎಂಬದರ ಬಗ್ಗೆ ಮಾಹಿತಿ ಇಲ್ಲ. ಆದರೆ ಬೆಂಕಿ ಕಾಣಿಸಿಕೊಂಡ ನಂತರ ಹೆಚ್ಚಿನ ಜನರು ತಮ್ಮ ಗುಡಿಸಲುಗಳಿಂದ ಹೊರಬಂದಿದ್ದಾರೆ. ಆದ್ದರಿಂದ ಯಾವುದೇ ಸಾವು ಸಂಭವಿಸಿಲ್ಲ. ಅಗ್ನಿಶಾಮಕ ದಳ ಮುಂಜಾನೆ 3:40ರ ಸುಮಾರಿಗೆ ಬೆಂಕಿಯನ್ನು ನಂದಿಸಿದ್ದು, ಇನ್ನೂ ಹೆಚ್ಚಿನ ಕಾರ್ಯಾಚರಣೆ ನಡೆಯುತ್ತಿದೆ.