Tag: Hunsur

  • ಹನುಮ ಮಾಲಾಧಾರಿಗಳ ಮೆರವಣಿಗೆ ತಡೆದಿದ್ದಕ್ಕೆ ಸಿಟ್ಟು: ಮೈಸೂರು ಪೊಲೀಸರ ಮೇಲೆ ‘ಪ್ರತಾಪ’

    ಹನುಮ ಮಾಲಾಧಾರಿಗಳ ಮೆರವಣಿಗೆ ತಡೆದಿದ್ದಕ್ಕೆ ಸಿಟ್ಟು: ಮೈಸೂರು ಪೊಲೀಸರ ಮೇಲೆ ‘ಪ್ರತಾಪ’

    ಮೈಸೂರು: ಹನುಮ ಮಾಲಾಧಾರಿಗಳ ಮೆರವಣಿಗೆ ತಡೆದಿದ್ದಕ್ಕೆ ಸಂಸದ ಪ್ರತಾಪ್ ಸಿಂಹ ಆಕ್ರೋಶಗೊಂಡು ಬ್ಯಾರಿಕೇಡ್ ಕಿತ್ತು ಹಾಕಿ ಕಾನೂನು ಉಲ್ಲಂಘಿಸಿ  ಪ್ರತಿಭಟಿಸಿದ್ದಕ್ಕೆ ಪೊಲೀಸರು ಅವರನ್ನು ಬಂಧಿಸಿದ್ದಾರೆ.

    ಹನುಮ ಮಾಲೆ ಧರಿಸಿದ್ದ ಸಂಸದ ಪ್ರತಾಪ್ ಸಿಂಹ ಮತ್ತು ನೂರಾರು ಜನ ಮೈಸೂರಿನ ಹುಣಸೂರು ರಸ್ತೆಯಲ್ಲಿ ಮೆರವಣಿಗೆ ಹೊರಟಿದ್ದರು. ಆದರೆ ಯಾವುದೇ ಗಲಾಟೆ ಆಗಬಾರದು. ಕಾನೂನು ಸುವ್ಯವಸ್ಥೆ ಹಾಳಾಗಬಾರದು ಎಂದು ಪೊಲೀಸರು ಬ್ಯಾರಿಕೇಡ್ ಹಾಕಿ ಮೆರವಣಿಗೆ ತಡೆಯುವ ಪ್ರಯತ್ನ ಮಾಡಿದ್ದರು.

    ಬಿಳಕೆರೆ ಬಳಿ ಸಂಸದರನ್ನು ತಡೆಯಲು ಪೊಲೀಸರು ಮುಂದಾಗಿದ್ದರು. ಆದರೆ ಪೊಲೀಸರು ವಾಹನ ತಡೆಗಾಗಿ ಹಾಕಿದ್ದ ಬ್ಯಾರಿಕೇಡ್ ಭೇದಿಸಿ ಡ್ರೈವರ್ ಇಳಿಸಿ ಪ್ರತಾಪ್‍ಸಿಂಹ ಕಾರನ್ನು ಚಲಾಯಿಸಿದ್ದರು. ಈ ವೇಳೆ ಸ್ವಲ್ಪದರಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂಸದರ ಅತಿವೇಗ ಕಂಡು ಮಹಿಳಾ ಅಧಿಕಾರಿ ದೂರ ಸರಿದಿದ್ದಾರೆ.

    ನಂತರ ಹುಣಸೂರು ಪ್ರವೇಶಕ್ಕೂ ಮುನ್ನವೇ ಪೊಲೀಸರು ಪ್ರತಾಪ್ ಸಿಂಹ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಸಂಸದರು ಇರುವ ಜಾಗಕ್ಕೇ ಮೈಸೂರು ಎಸ್‍ಪಿ ರವಿ ಚನ್ನಣ್ಣವರ್ ಆಗಮಿಸಿದರು. ಈ ವೇಳೆ ಪ್ರತಾಪ್ ಸಿಂಹ ಪೊಲೀಸರ ನಡೆಯನ್ನು ಪ್ರಶ್ನಿಸಿದರು. ಕೊನೆಗೆ ಎಸ್‍ಪಿ ರವಿ ಚನ್ನಣ್ಣವರ್ ಪ್ರತಾಪ್ ಸಿಂಹ ಅವರನ್ನು ಮನವೊಲಿಸುವ ಪ್ರಯತ್ನ ನಡೆಸಿದರು. ಮಾತನ್ನು ಕೇಳದೇ ಇದ್ದಾಗ ಸಂಸದರ ಜೊತೆ ಹನುಮ ಮಾಲಾಧಾರಿಗಳನ್ನು ಪೊಲೀಸರು ಬಂಧಿಸಿದರು.

    ಬಂಧನದ ವಿಚಾರ ತಿಳಿದ ಮೇಲೆ ಹುಣಸೂರಿನ ಬಿಳಿಕೆರೆಯಲ್ಲಿ ಸಂಸದರನ್ನು ಬಿಡುಗಡೆ ಮಾಡಿ ಅಂತ ಕಲ್ಲು ತೂರಾಟ ನಡೆಯಿತು. ಪೊಲೀಸರು ವಿಧಿಯಿಲ್ಲದೇ ಲಾಠಿಚಾರ್ಜ್ ಮಾಡಿ ಹಲವರನ್ನು ಅರೆಸ್ಟ್ ಕೂಡ ಮಾಡಿದ್ದಾರೆ.

    ಸಂಸದ ಪ್ರತಾಪ್ ಸಿಂಹ ಮೇಲೆ ಮೈಸೂರಿನ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲು. ಐಪಿಸಿ 353(ಪೊಲೀಸರ ಕರ್ತವ್ಯಕ್ಕೆ ಅಡ್ಡಿ) ಐಪಿಸಿ 332(ಕರ್ತವ್ಯಕ್ಕೆ ಅಡ್ಡಿ) ಐಪಿಸಿ 279(ಅಜಾಗರೂಕತೆಯಿಂದ ವಾಹನ ಚಲಾಯಿಸಿ ಜೀವಕ್ಕೆ ಕುತ್ತು) ಕಾಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

     

     

    https://youtu.be/f0lk2O1Ndno