Tag: Hundi

  • ಪುನೀತ್ ರಾಜ್‌ಕುಮಾರ್‌ರನ್ನು ಮರಳಿ ಕಳುಹಿಸು – ಅಭಿಮಾನಿಯಿಂದ ದೇವರಿಗೆ ಪತ್ರ

    ಪುನೀತ್ ರಾಜ್‌ಕುಮಾರ್‌ರನ್ನು ಮರಳಿ ಕಳುಹಿಸು – ಅಭಿಮಾನಿಯಿಂದ ದೇವರಿಗೆ ಪತ್ರ

    ಕಲಬುರಗಿ: ಕನ್ನಡ ಚಿತ್ರರಂಗದ ಮೇರು ನಟ ಯುವರತ್ನ ಪುನೀತ್ ರಾಜ್‍ಕುಮಾರ್ ನಮ್ಮನ್ನೆಲ್ಲ ಅಗಲಿ ತಿಂಗಳುಗಳು ಉರುಳಿವೆ. ಆದರೆ, ಅಪ್ಪು ನೆನಪಲ್ಲಿ ಅದೆಷ್ಟೋ ಒಳ್ಳೆ ಕಾರ್ಯಗಳು ನಿತ್ಯವೂ ನಡೆಯುತ್ತಿವೆ. ಅಭಿಮಾನಿಗಳ ಹೃದಯದಲ್ಲಿ ಅಪ್ಪು ಅಜರಾಮರವಾಗಿದ್ದು, ಅದಕ್ಕೆ ಸಾಕ್ಷಿ ಎಂಬಂತೆ ಪುನೀತ್ ರಾಜ್‍ಕುಮಾರ್ ಅವರನ್ನು ಮರಳಿ ಕಳುಹಿಸು ಪ್ರಭುವೇ ಎಂದು ಅಪ್ಪು ಅಭಿಮಾನಿಯೊಬ್ಬರು ಬರೆದಿರುವ ಚೀಟಿ ದೇವರ ಹುಂಡಿಯಲ್ಲಿ ಸಿಕ್ಕಿದೆ.

    ಕಲಬುರಗಿಯ ಅಫಜಲಪುರ ತಾಲೂಕಿನ ಸುಪ್ರಸಿದ್ಧ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದ ಹುಂಡಿಯಲ್ಲಿ ಪುನೀತ್ ರಾಜ್‍ಕುಮಾರ್ ಅವರನ್ನು ಮರಳಿ ಕಳುಹಿಸು ಪ್ರಭು ಎಂದು ಅಭಿಮಾನಿ ಬರೆದಿರುವ ಚೀಟಿ ದೇವಸ್ಥಾನದ ಹುಂಡಿ ಎಣಿಕೆ ಸಂದರ್ಭದಲ್ಲಿ ದೊರೆತಿದೆ. ಅಪ್ಪು ಅವರನ್ನು ಮತ್ತೆ ಕಳುಹಿಸಿ ಎಂದು ದೇವರ ಮೊರೆ ಹೋಗಿರುವ ಈ ವಿಚಾರ ಭಾವನಾತ್ಮಕವಾಗಿದೆ. ಇದನ್ನೂ ಓದಿ: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ

    ಸದ್ಯ ಇತ್ತೀಚೆಗಷ್ಟೇ ಪುನೀತ್ ರಾಜ್‍ಕುಮಾರ್ ಅವರ ಜೇಮ್ಸ್ ಸಿನಿಮಾ ಬಿಡುಗಡೆಗೊಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದಲ್ಲಿ ಅಪ್ಪು ಡ್ಯಾನ್ಸ್, ಫೈಟ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಜೇಮ್ಸ್ ಸಿನಿಮಾಕ್ಕೆ ನಿರ್ದೇಶಕ ಚೇತನ್ ಆ್ಯಕ್ಷನ್ ಕಟ್ ಹೇಳಿದ್ದು, ಅಪ್ಪುಗೆ ಜೋಡಿಯಾಗಿ ಪ್ರಿಯಾ ಆನಂದ್ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಶರತ್ ಕುಮಾರ್, ಪ್ರಿಯಾ ಆನಂದ್, ಸಾಧು ಕೋಕಿಲಾ, ಶ್ರೀಕಾಂತ್, ಆದಿತ್ಯ ಮೆನನ್ ಸೇರಿದಂತೆ ಹಲವಾರು ಕಲಾವಿದರೂ ಅಭಿನಯಿಸಿದ್ದಾರೆ. ಇದನ್ನೂ ಓದಿ: ಜೇಮ್ಸ್ ಸಿನಿಮಾ ನೋಡೋಕೆ 10 ಅಲ್ಲ, 100 ಕಾರಣ

  • ಸವದತ್ತಿ ದೇವಸ್ಥಾನದ ಹುಂಡಿ ಎಣಿಕೆ – ಚಿನ್ನ, ಬೆಳ್ಳಿ ಸೇರಿ 1.46 ಕೋಟಿ ಹಣ ಸಂಗ್ರಹ

    ಸವದತ್ತಿ ದೇವಸ್ಥಾನದ ಹುಂಡಿ ಎಣಿಕೆ – ಚಿನ್ನ, ಬೆಳ್ಳಿ ಸೇರಿ 1.46 ಕೋಟಿ ಹಣ ಸಂಗ್ರಹ

    ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಿ ಹುಂಡಿಯಲ್ಲಿ ಚಿನ್ನ, ಬೆಳ್ಳಿ ಸೇರಿ ಒಂದು ಕೋಟಿ ನಲವತ್ತಾರು ಲಕ್ಷ ರೂ.ಗಿಂತಲೂ ಹೆಚ್ಚು ಹಣ ಸಂಗ್ರಹವಾಗಿದೆ.

    ಫೆಬ್ರವರಿ 1 ರಿಂದ ಮಾರ್ಚ್ 15ರ ಅವಧಿಯಲ್ಲಿ ದಾಖಲೆಯ ಕಾಣಿಕೆ ಸಂಗ್ರಹವಾಗಿದೆ. ನಾಲ್ಕು ದಿನದ ಹುಂಡಿ ಎಣಿಕೆಯಲ್ಲಿ 1,30,96,190 ಹಣ, 12,45,610 ಬಂಗಾರ ಮತ್ತು 3,08,895 ರೂ ಬೆಳ್ಳಿ ಸೇರಿ ಒಟ್ಟು 1,46,50,695 ಹಣ ಸಂಗ್ರಹವಾಗಿದೆ. ಅಲ್ಲದೇ ಹಣ, ಚಿನ್ನಾಭರಣ ಜೊತೆ ಚಿತ್ರ ವಿಚಿತ್ರ ಹರಕೆ ಚೀಟಿಗಳು ಪತ್ತೆಯಾಗಿವೆ. ಇದನ್ನೂ ಓದಿ: ಮನೆ ಮುಂದೆ ಬುಲ್ಡೋಜರ್ ಪ್ರತ್ಯಕ್ಷ – ಪರಾರಿಯಾಗಿದ್ದ ಯುಪಿ ರೇಪ್ ಆರೋಪಿ ಶರಣು

    ನನ್ನ ಮಗಳಿಗೆ ನಮಗಿಂತ ನೂರು ಪಟ್ಟು ಅಧಿಕ ಆಸ್ತಿ ಇರುವ ಯುವಕನ ಜೊತೆ ಕಲ್ಯಾಣ ಪ್ರಾಪ್ತಗೊಳಿಸು ಎಂದು ಭಕ್ತರು ಹಣದ ಜೊತೆ ಹರಕೆ ಚೀಟಿ ಹಾಕಿದ್ದಾರೆ. ಮತ್ತೋರ್ವ ಮಹಿಳೆ ತಾಯಿ ಯಲ್ಲಮ್ಮ ನನ್ನ ಗಂಡನ ಕುಡಿತದ ಚಟ ಬಿಡಿಸು, ಕುಡುಕರ ಜೊತೆ ನನ್ನ ಗಂಡ ಸ್ನೇಹ ಮಾಡದಂತೆ ನೋಡಿಕೋ ಎಂದು ಬೇಡಿಕೊಂಡಿದ್ದಾಳೆ. ಮಾರ್ಚ್ 28, 29 ರಂದು ಎರಡು ದಿನಗಳ ಕಾಲ ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಮುಂದುವರೆಯಲಿದೆ. ಇದನ್ನೂ ಓದಿ: ಮಾತುಬಾರದ ಬಾಲಕನ ಕೊಂದು ಗೋಣಿ ಚೀಲದಲ್ಲಿ ತುಂಬಿ ಎಸೆದ್ರು

  • ಕದ್ದ ಹುಂಡಿ ವಾಪಸ್ ತಂದಿಟ್ಟ ಕಳ್ಳರು

    ಕದ್ದ ಹುಂಡಿ ವಾಪಸ್ ತಂದಿಟ್ಟ ಕಳ್ಳರು

    ತುಮಕೂರು: ದೇವಾಲಯಗಳಿಂದ ಹುಂಡಿ ಕಳ್ಳತವಾಗುವಂತಹ ಪ್ರಕರಣಗಳನ್ನು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಇಲ್ಲೊಂದು ಕದ್ದ ಹುಂಡಿಯನ್ನು ವಾಪಸ್ ತಂದಿಟ್ಟಿರುವ ಘಟನೆಯೊಂದು ನಡೆದಿದೆ.

    ಕುಣಿಗಲ್ ತಾಲೂಕು ರಂಗಸ್ವಾಮಿ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿದ್ದ ಎರಡು ಹುಂಡಿಗಳನ್ನು ಕಳ್ಳರು ಕದ್ದಿದ್ದರು. ಆದರೆ ಕದ್ದಿದ್ದ ಹುಂಡಿಗಳನ್ನು ದೇವರು ಮತ್ತು ಪೊಲೀಸರ ಭಯಕ್ಕೆ ಕಳ್ಳರು ಸೋಮವಾರ ವಾಪಸ್ ತಂದಿಟ್ಟಿದ್ದಾರೆ.

    ರಂಗಸ್ವಾಮಿ ಬೆಟ್ಟದ ಮೇಲಿರುವ ರಂಗನಾಥ ಸ್ವಾಮಿ ದೇವಾಲಯಕ್ಕೆ ಸೇರಿದ್ದ 2 ಹುಂಡಿಗಳನ್ನು ಕಳ್ಳರು ಶನಿವಾರ ರಾತ್ರಿ ಕಳವು ಮಾಡಿದ್ದರು. ಸುಮಾರು 2 ಲಕ್ಷ ರೂ. ಹಣವಿದ್ದ ಹುಂಡಿ ಕಳುವಾಗಿರುವ ಬಗ್ಗೆ ದೇವಾಲಯದ ಧರ್ಮದರ್ಶಿ ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ: 8ಕ್ಕೂ ಹೆಚ್ಚು ಸ್ವಾಮೀಜಿಗಳೊಂದಿಗೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ವೀಕ್ಷಿಸಿದ ಸಿದ್ದಗಂಗಾ ಶ್ರೀ

    POLICE JEEP

    ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಸಿ ದುಷ್ಕರ್ಮಿಗಳ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆಸಿದ್ದರು. ಆದರೆ ಸೋಮವಾರ ಕಳುವಾಗಿದ್ದ ಹುಂಡಿಗಳು ದೇವಾಲಯದ ಬಳಿ ಪ್ರತ್ಯಕ್ಷವಾಗಿದೆ. ಇದನ್ನೂ ಓದಿ: ತಾಲಿಬಾನ್‌ ವಿರುದ್ಧ ಅಂತಾರಾಷ್ಟ್ರೀಯ ಕೋರ್ಟ್‌ಗೆ ದೂರು ಕೊಟ್ಟ ಫೋಟೋ ಜರ್ನಲಿಸ್ಟ್‌ ಡ್ಯಾನಿಶ್‌ ಸಿದ್ಧಿಕಿ ಪೋಷಕರು

    ಕಳ್ಳರು ಹುಂಡಿಯನ್ನು ಕದ್ದುಕೊಂಡು ಹೋಗಿದ್ದರೂ ಅದರ ಬೀಗ ತೆಗೆಯದೇ ಯಥಾಸ್ಥಿತಿಯಲ್ಲಿ ತಂದಿಟ್ಟು ಪರಾರಿಯಾಗಿದ್ದಾರೆ. ಇದೀಗ ಪೊಲೀಸರು ಹುಂಡಿಗಳನ್ನು ವಶಕ್ಕೆ ಪಡೆದಿದ್ದಾರೆ.

  • ನನ್ನ ಪತ್ನಿಗೆ ಹೆಣ್ಣುಮಗುವಾಗಲಿ – ಹುಂಡಿ ಹಣ ಎಣಿಸುವಾಗ ಸಿಕ್ತು ಭಕ್ತನ ಹರಕೆ ಪತ್ರ!

    ನನ್ನ ಪತ್ನಿಗೆ ಹೆಣ್ಣುಮಗುವಾಗಲಿ – ಹುಂಡಿ ಹಣ ಎಣಿಸುವಾಗ ಸಿಕ್ತು ಭಕ್ತನ ಹರಕೆ ಪತ್ರ!

    ಕೊಪ್ಪಳ: ಓಮಿಕ್ರಾನ್ ಸೋಂಕು ಹೆಚ್ಚಳದಿಂದಾಗಿ ಐತಿಹಾಸಿಕ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುವ ಭಕ್ತರ ದರ್ಶನಕ್ಕೆ ಬರುವವರ ಸಂಖ್ಯೆ ಕ್ಷೀಣಿಸಿದೆ. ಆದರೂ, ಇಂದು ನಡೆದ ಹುಂಡಿ ಹಣ ಎಣಿಕೆಯಲ್ಲಿ 10.45 ಲಕ್ಷ ರೂ. ಕಾಣಿಕೆ ಸಂಗ್ರಹವಾಗಿದೆ. 3 ವಿದೇಶಿ ನಾಣ್ಯಗಳು ಕೂಡ ಕಾಣಿಕೆಯಾಗಿ ಬಂದಿವೆ.

    ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮನಹಳ್ಳಿ ಬಳಿರುವ ಅಂಜನಾದ್ರಿ ಬೆಟ್ಟದಲ್ಲಿ ಇಂದು ಗ್ರೇಡ್-2 ತಹಶೀಲ್ದಾರ್ ವಿ.ಹೆಚ್.ಹೊರಪೇಟೆ ಅವರ ನೇತೃತ್ವದಲ್ಲಿ ಬೆಳಗ್ಗೆ ಹುಂಡಿ ಕಾಣಿಕೆ ಎಣಿಕೆ ಕಾರ್ಯ ನಡೆಯಿತು. ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಹುಂಡಿ ಕಾಣಿಕೆ ಎಣಿಕೆ ನಡೆಸಲಾಯಿತು.

    31 ದಿನದ ಅವಧಿಯಲ್ಲಿ ಇಷ್ಟೊಂದು ಹಣ ಸಂಗ್ರಹವಾಗಿರುವುದು ಕಂದಾಯ ಮತ್ತು ಸಾರ್ವಜನಿಕರಲ್ಲಿ ಆಶ್ಚರ್ಯ ಮೂಡಿಸಿದೆ. ಅಮೆರಿಕಾ ಮತ್ತು ಫಿಲಿಫೈನ್ ದೇಶದ ಮೂರು ನಾಣ್ಯಗಳು ಕಾಣಿಕೆ ರೂಪವಾಗಿ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಟೋಯಿಂಗ್ ವಾಹನ ಸಿಬ್ಬಂದಿ ಅಮಾನುಷವಾಗಿ ವರ್ತಿಸಿಲ್ಲ, ಅದೆಲ್ಲಾ ಸುಳ್ಳು: ಆರಗ ಜ್ಞಾನೇಂದ್ರ

    ಹುಂಡಿಯಲ್ಲಿ ಹರಕೆ ಪತ್ರ
    ನನ್ನ ಪತ್ನಿಗೆ ಹೆಣ್ಣು ಮಗುವಾಗಲಿ, ಹೆರಿಗೆ ಸೂಸುತ್ರವಾಗಿ ಆಗಲಿ. ನನ್ನ ಮೇಲೆ ಯಾವುದೇ ಪ್ರಕರಣ ಇಲ್ಲದಂತೆ ಮಾಡು ಭಗವಂತ ಎಂಬ ಹಲವು ಹರಕೆಯಿರುವ ಭಕ್ತನೊಬ್ಬನ ಪತ್ರ ಹುಂಡಿಯಲ್ಲಿ ಸಿಕ್ಕಿದೆ. ಹುಂಡಿ ಎಣಿಕೆಯಲ್ಲಿ ಭಕ್ತನೊಬ್ಬನ ಹರಕೆ ಪತ್ರ ಓದಿದ ಕಂದಾಯ ಇಲಾಖೆ ಸಿಬ್ಬಂದಿ, ದೇವರೇ ಆ ಭಕ್ತನ ಬೇಡಿಕೆ ಈಡೇರಿಸಪ್ಪಾ ಎಂದು ನಗು ಬೀರಿದ್ದಾರೆ.

  • 2021ರಲ್ಲಿ 1 ಕೋಟಿ ಭಕ್ತರು ತಿರುಮಲಕ್ಕೆ ಭೇಟಿ – ಹುಂಡಿಯಲ್ಲಿ 833 ಕೋಟಿ ರೂ. ಸಂಗ್ರಹ

    2021ರಲ್ಲಿ 1 ಕೋಟಿ ಭಕ್ತರು ತಿರುಮಲಕ್ಕೆ ಭೇಟಿ – ಹುಂಡಿಯಲ್ಲಿ 833 ಕೋಟಿ ರೂ. ಸಂಗ್ರಹ

    ಹೈದರಾಬಾದ್: ವಿಶ್ವದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಆಂಧ್ರಪ್ರದೇಶದ ಪ್ರಸಿದ್ಧ ದೇವಾಲಯ ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ಈ ವರ್ಷ ಕೋಟಿ, ಕೋಟಿ ಹಣ ಹರಿದು ಬಂದಿದ್ದು, ಸುಮಾರು 833 ಕೋಟಿ ರೂಪಾಯಿ ಸಂಗ್ರಹವಾಗಿದೆ.

    ತಿರುಪತಿ ದೇವಾಲಯದ (ಟಿಟಿಡಿ) ಮಂಡಳಿಯು ನಡೆಸಿದ ಹುಂಡಿ ಎಣಿಕೆಯಲ್ಲಿ 2021ರ ಜನವರಿ 1 ರಿಂದ ಡಿಸೆಂಬರ್ 30ರವರೆಗೂ 833 ಕೋಟಿ ರೂ. ಸಂಗ್ರಹವಾಗಿದೆ. ಕೊರೊನಾ ಎರಡನೇ ಅಲೆಯ ನಂತರ ಈ ವರ್ಷದಲ್ಲಿ ಸುಮಾರು 1.4 ಕೋಟಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದೇವಾಲಯ ಆಡಳಿತ ಮಂಡಳಿಯು 5.96 ಕೋಟಿ ಲಡ್ಡು ಪ್ರಸಾದವನ್ನು ಭಕ್ತರಿಗೆ ನೀಡಿದೆ ಮತ್ತು ಸುಮಾರು 1.37 ಕೋಟಿ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಗಿದೆ. ದೇವಾಲಯಕ್ಕೆ ಭೇಟಿ ನೀಡಿದ 1.4 ಕೋಟಿ ಭಕ್ತರಲ್ಲಿ 48.75 ಲಕ್ಷ ಮಂದಿ ದೇವರಿಗೆ ಮುಡಿ ನೀಡಿದ್ದಾರೆ. ಇದನ್ನೂ ಓದಿ: ಮತ್ತೆ ಕೋಟ್ಯಧೀಶನಾದ ಮಲೆ ಮಹದೇಶ್ವರ – ಹುಂಡಿಯಲ್ಲಿ 2.27 ಕೋಟಿ ರೂ. ಸಂಗ್ರಹ

    ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿ ಬ್ರಹ್ಮರಥೋತ್ಸವಕ್ಕೆ ಭಕ್ತರಿಗೆ ನಿಷೇಧ ಹೇರಲಾಗಿದೆ. ಇದನ್ನೂ ಓದಿ: ಕೊರೊನಾ ಕಾಲದಲ್ಲೂ ಮಾದಪ್ಪನ ಹುಂಡಿಯಲ್ಲಿ 2.62 ಕೋಟಿ ಸಂಗ್ರಹ

  • ಕೊರೊನಾ ಕಾಲದಲ್ಲೂ ಮಾದಪ್ಪನಿಗೆ ಹಣದ ಹೊಳೆ – 47 ದಿನದಲ್ಲಿ 2.33 ಕೋಟಿ ಸಂಗ್ರಹ

    ಕೊರೊನಾ ಕಾಲದಲ್ಲೂ ಮಾದಪ್ಪನಿಗೆ ಹಣದ ಹೊಳೆ – 47 ದಿನದಲ್ಲಿ 2.33 ಕೋಟಿ ಸಂಗ್ರಹ

    ಚಾಮರಾಜನಗರ: ರಾಜ್ಯದ ಪ್ರಮುಖ ದೇಗುಲಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ನಡೆದಿದ್ದು, ಬರೋಬ್ಬರಿ 2.33 ಕೋಟಿ ಸಂಗ್ರಹವಾಗಿದೆ.

    122 ದಿನಗಳ ಬಳಿಕ ಹುಂಡಿ ಎಣಿಕೆ ಕಾರ್ಯ ನಡೆದರೂ ಕೊರೊನಾ ಲಾಕ್ ಡೌನ್ ಪರಿಣಾಮ 75 ದಿನ ಭಕ್ತರಿಗೆ ದೇವಾಲಯ ಬಂದ್ದಾಗಿದ್ದರಿಂದ ಕೇವಲ 47 ದಿನಗಳಲ್ಲಿ 2,33,57,28 ಕೋಟಿ ರೂ. ಸಂಗ್ರಹವಾಗಿದ್ದು ಭಕ್ತಾದಿಗಳು ಮಾದಪ್ಪನಿಗೆ ಹಣದ ರೂಪದಲ್ಲಿ ಭಕ್ತಿಯ ಹೊಳೆಯನ್ನೇ ಹರಿಸಿದ್ದಾರೆ. ಇಷ್ಟೇ ಅಲ್ಲದೇ ಹುಂಡಿಯಲ್ಲಿ 150 ಗ್ರಾಂ ಚಿನ್ನ, 2.2 ಕೆಜಿ ಬೆಳ್ಳಿಯನ್ನು ಭಕ್ತರು ದೇವರಿಗೆ ಅರ್ಪಿಸಿದ್ದಾರೆ.

    ಇಂದಿನಿಂದ ದಾಸೋಹ ವ್ಯವಸ್ಥೆ: ಮಹಾಮಾರಿ ಕರಿ ಛಾಯೆ ಮಲೆಮಹದೇಶ್ವರ ಬೆಟ್ಟದಲ್ಲಿ ಸ್ಥಗಿತಗೊಂಡಿದ್ದ ದಾಸೋಹ ವ್ಯವಸ್ಥೆ ಇಂದಿನಿಂದ ಪ್ರಾರಂಭವಾಗಲಿದೆ. ಆದರೆ ಲಾಡು ವಿತರಣೆ, ವಿಶೇಷ ಸೇವೆಗಳು, ಮುಡಿ ಸೇವೆಗಳಿಗೆ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ:  ಬಿಎಸ್‍ವೈ ರಾಜೀನಾಮೆ ನೀಡಿದ್ರೆ ಬಿಜೆಪಿಯಿಂದ ಲಿಂಗಾಯತ ಸಮುದಾಯ ದೂರಾಗುತ್ತೆ: ಸಿದ್ದಲಿಂಗ ಸ್ವಾಮೀಜಿ

  • ಮತ್ತೆ ಕೋಟಿ ಒಡೆಯನಾದ ಮುದ್ದು ಮಾದಪ್ಪ-1.48 ಕೋಟಿ ರೂ. ಸಂಗ್ರಹ

    ಮತ್ತೆ ಕೋಟಿ ಒಡೆಯನಾದ ಮುದ್ದು ಮಾದಪ್ಪ-1.48 ಕೋಟಿ ರೂ. ಸಂಗ್ರಹ

    – ಹುಂಡಿಯಲ್ಲಿ 44 ವಿದೇಶಿ ನೋಟುಗಳು ಪತ್ತೆ

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಹುಂಡಿಯಲ್ಲಿ ಈ ಬಾರಿಯೂ ಕೂಡ 1.48 ಕೋಟಿ ರೂಪಾಯಿ(ರೂ1,48,73,233) ನಗದು ಹಣ ಸಂಗ್ರಹವಾಗಿದೆ.

    ನಿನ್ನೆ ಬೆಳಗ್ಗೆಯಿಂದ ಆರಂಭವಾಗಿದ್ದ ಹುಂಡಿ ಎಣಿಕೆ ಕಾರ್ಯ ತಡರಾತ್ರಿವರೆಗೆ ನಡೆದಿದೆ. ನಗದು ಹಣದ ಜೊತೆಗೆ ದೇಗುಲಕ್ಕೆ 31 ಗ್ರಾಂ ಚಿನ್ನ ಹಾಗೂ 2.82 ಕೆ.ಜಿ.ಬೆಳ್ಳಿ ಕಾಣಿಕೆಯಾಗಿ ಬಂದಿದೆ.

    ಹುಂಡಿಯಲ್ಲಿ 44 ವಿದೇಶಿ ನೋಟುಗಳು ಪತ್ತೆಯಾಗಿವೆ. 9 ಅಮೆರಿಕನ್ ಡಾಲರ್ ನೋಟುಗಳು, 15 ಇಂಗ್ಲೆಂಡ್ ಪೌಂಡ್ಸ್, ಹಾಗೂ ಮಲೇಶಿಯಾದ 20 ರಿಂಗ್ ಗಿಟ್ ನೋಟುಗಳನ್ನು ಭಕ್ತರು ಅರ್ಪಿಸಿದ್ದಾರೆ. ಕೋವಿಡ್ ಆರ್ಥಿಕ ಸಂಕಷ್ಟದ ನಡುವೆಯೂ ಭಕ್ತರು ಧಾರಳವಾಗಿ ಕಾಣಿಕೆ ಅರ್ಪಿಸಿದ್ದಾರೆ. ಕಳೆದ ಬಾರಿ ಜನವರಿ 28 ರಂದು ಹುಂಡಿ ಎಣಿಕೆ ಕಾರ್ಯ ನಡೆದಿತ್ತು. 2 ಕೋಟಿ 21 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿತ್ತು. ಈಗ ಒಂದು ತಿಂಗಳು ಪೂರ್ಣವಾಗುವ ಮುಂಚೆಯೇ ಮತ್ತೆ ಹುಂಡಿ ಎಣಿಕೆ ಮಾಡಲಾಗಿದ್ದು, 1.48 ಕೋಟಿ ರೂಪಾಯಿ ಹಣ ಸಂಗ್ರಹಣೆಯಾಗಿದೆ.

  • ಪಕ್ಕದ್ಮನೆ ಮಹಿಳೆಯ ಕಿರಿಕಿರಿ ತಪ್ಪಿಸು, ಪಿಯುಸಿ ಪಾಸ್ ಮಾಡು – ದೇವಿಗೆ ಪತ್ರ ಬರೆದ ಭಕ್ತರು

    ಪಕ್ಕದ್ಮನೆ ಮಹಿಳೆಯ ಕಿರಿಕಿರಿ ತಪ್ಪಿಸು, ಪಿಯುಸಿ ಪಾಸ್ ಮಾಡು – ದೇವಿಗೆ ಪತ್ರ ಬರೆದ ಭಕ್ತರು

    – ಹುಂಡಿಯಲ್ಲಿ ಭಕ್ತರ ವಿಚಿತ್ರ ಬೇಡಿಕೆಗಳ ಪತ್ರಗಳು ಪತ್ತೆ

    ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಅಂಬಾದೇವಿ ಮಠದ ಹುಂಡಿಯಲ್ಲಿ ಅಮ್ಮಾ ಪಿಯುಸಿ ಪಾಸ್ ಮಾಡಿಸು, ಸರಾಯಿ ಸವಾಲ್ ಕೊಡಿಸು, ಎಂಬ ವಿಚಿತ್ರ ಪ್ರಾರ್ಥನೆಯನ್ನು ಕೋರಿ ದೇವರಿಗೆ ಬರೆದಿರುವ ಪತ್ರಗಳು ಪತ್ತೆಯಾಗಿವೆ.

    ಅಂಬಾದೇವಿಯ ಹುಂಡಿಯಲ್ಲಿ ಭಕ್ತರ ವಿಚಿತ್ರ ಕೊರಿಕೆಗಳ ಪತ್ರಗಳು ಪತ್ತೆಯಾಗಿವೆ. ಐತಿಹಾಸಿಕ ಪ್ರಸಿದ್ಧ ದೇವಾಲಯದ ಹುಂಡಿಯಲ್ಲಿ ಭಕ್ತರು ತಮ್ಮ ಪ್ರಾರ್ಥನೆ ಜೊತೆ ನಾನಾ ವಿಲಕ್ಷಣ ಬೇಡಿಕೆಗಳ ಪತ್ರಗಳನ್ನ ಬರೆದು ಹಾಕಿದ್ದಾರೆ. ಈ ಬಾರಿಯ ಜಾತ್ರೆಯ ಹಿನ್ನೆಲೆ ಸಂಗ್ರಹವಾದ ಕಾಣಿಕೆ ಹಣ ಎಣಿಕೆ ವೇಳೆ ಪತ್ರಗಳು ಪತ್ತೆಯಾಗಿವೆ.

    ಅಮ್ಮಾ ಪಿಯುಸಿ ಪಾಸ್ ಮಾಡಿಸು, ಸರಾಯಿ ಸವಾಲ್ ಕೊಡಿಸು, ಕಿರಿಕಿರಿ ಕೊಡುವವರಿಗೆ ದೊಡ್ಡ ಕಾಯಿಲೆ ಬರುವಂತೆ ಮಾಡು, ಅವರನ್ನ ಯಾರೂ ಮುಟ್ಟದಂತ ದೊಡ್ಡ ರೋಗ ಕೊಡು, ಪಕ್ಕದ ಮನೆಯ ಮಹಿಳೆಯರ ಕಿರಿಕಿರಿ ತಪ್ಪಿಸು, ಮನೆ ಕಟ್ಟೊ ಶಕ್ತಿ ಕೊಡು, ಬ್ಯಾಂಕ್‍ನಲ್ಲಿ ಉದ್ಯೋಗ ಕೊಡಿಸು, ಪ್ರೇಮ ವಿಚಾರಗಳು ಸೇರಿದಂತೆ ಹಲವು ಪತ್ರಗಳು ಪತ್ತೆಯಾಗಿವೆ.

    ಜಾತ್ರೆಯ ಸಮಯದಲ್ಲಿ ಸಂಗ್ರಹವಾದ ಕಾಣಿಕೆ ಹಣವನ್ನು ಲೆಕ್ಕಾಚಾರ ಹಾಕುವ ಸಮದಲ್ಲಿ ಪತ್ರಗಳು ಸಿಕ್ಕಿವೆ. ಹುಂಡಿಯಲ್ಲಿ ಈ ಬಾರಿ ಒಟ್ಟು 38 ಲಕ್ಷ ರೂಪಾಯಿ ನಗದು ಕಾಣಿಕೆ ಸಂಗ್ರಹವಾಗಿದೆ.

  • ದೇವಸ್ಥಾನದಲ್ಲಿನ ಹುಂಡಿ ಹೊತ್ತೊಯ್ದ ಕಳ್ಳರು- ಸಿಸಿಟಿವಿಯಲ್ಲಿ ಕೃತ್ಯ ಸೆರೆ

    ದೇವಸ್ಥಾನದಲ್ಲಿನ ಹುಂಡಿ ಹೊತ್ತೊಯ್ದ ಕಳ್ಳರು- ಸಿಸಿಟಿವಿಯಲ್ಲಿ ಕೃತ್ಯ ಸೆರೆ

    – ಭೋಗ ನಂದೀಶ್ವರ ದೇವಾಲಯದಲ್ಲಿ 3ನೇ ಬಾರಿ ಕಳವು

    ಚಿಕ್ಕಬಳ್ಳಾಪುರ: ವಿಶ್ವ ವಿಖ್ಯಾತ ನಂದಿ ಗಿರಿಧಾಮ ತಪ್ಪಲಿನ ಐತಿಹಾಸಿಕ ಪುರಾತನ ಪ್ರಸಿದ್ಧ ನಂದಿ ಗ್ರಾಮದ ಶ್ರೀಭೋಗ ನಂದೀಶ್ವರ ದೇಗುಲದ ಹುಂಡಿಗಳನ್ನ ಕಳ್ಳರು ಹೊತ್ತೊಯ್ದಿರುವ ಘಟನೆ ನಡೆದಿದೆ.

    ದೇವಾಲಯದ ಆವರಣದಲ್ಲಿದ್ದ ಎರಡು ಹುಂಡಿಗಳನ್ನ ದೇವಸ್ಥಾನದ ಮೇಲೆ ಹೊತ್ತುಕೊಂಡು ಹೋಗಿರುವ ಇಬ್ಬರು ಕಳ್ಳರು, ಹುಂಡಿಯಲ್ಲಿದ್ದ ಹಣ ಹಾಗೂ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ.

    ದೇವಸ್ಥಾನದ ಉಮಾಮಹೇಶ್ವರನ ಮುಂದೆ ಇದ್ದ ಒಂದು ಹುಂಡಿ ಹಾಗೂ ಅರುಣಾಚಲೇಶ್ವರನ ಮುಂದೆ ಇದ್ದ ಹುಂಡಿಗಳನ್ನ ಇಬ್ಬರು ಕಳ್ಳರು ಎತ್ತಿಕೊಂಡು ಹೋಗುವ ದೃಶ್ಯ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ದೇವಸ್ಥಾನದ ಮೂಲೆ ಮೂಲೆಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳಿವೆ. ಆದರೂ ಕಳ್ಳರು ರಾಜಾರೋಷವಾಗಿ ದೇವಸ್ಥಾನದಲ್ಲಿನ ತುಂಬಿದ ಹುಂಡಿಗಳನ್ನ ಕಳವು ಮಾಡಿದ್ದಾರೆ. ಸೂಕ್ತ ಭದ್ರತೆ ಇಲ್ಲದ್ದಕ್ಕೆ ಕಳುವಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಭೋಗ ನಂದೀಶ್ವರ ದೇವಸ್ಥಾನದಲ್ಲಿ ಈಗಾಗಲೇ ಮೂರು ಬಾರಿ ಕಳ್ಳತನವಾಗಿದೆ. ಒಮ್ಮೆ ದೇವಸ್ಥಾನದ ಗೋಪುರದ ಮೇಲಿದ್ದ ಕಳಸವನ್ನೇ ಕಳ್ಳರು ಕದ್ದೊಯ್ದಿದ್ದರು. ಮತ್ತೊಮ್ಮೆ, ಇದೇ ದೇವಸ್ಥಾನದಲ್ಲಿ ತುಂಬಿದ್ದ ಹುಂಡಿಯನ್ನ ಕಳ್ಳತನ ಮಾಡಿದ್ದರು. ಈಗ ಮತ್ತೊಮ್ಮೆ ಹುಂಡಿಗಳನ್ನು ಕದ್ದಿರೋದು ದೇವಸ್ಥಾನದ ಆಡಳಿತ ಮಂಡಳಿಯ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ. ಕಳ್ಳರಿಗೆ ತಕ್ಕ ಪಾಠ ಕಲಿಸಬೇಕಾದ ನಂದಿ ಗಿರಿಧಾಮ ಠಾಣೆ ಪೊಲೀಸರು ಸಹ ನಿರ್ಲಕ್ಷ್ಯ ತೋರಿದ್ದಾರೆ. ಕಳ್ಳರ ಕಾಟಕ್ಕೆ ಬ್ರೇಕ್ ಹಾಕಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಈ ಭೋಗ ನಂದೀಶ್ವರನ ದೇವಸ್ಥಾನ ದಕ್ಷಿಣ ಭಾರತದ ಐತಿಹಾಸಿಕ, ಪ್ರಸಿದ್ಧ ಪುಣ್ಯ ಸ್ಥಳ. ದಕ್ಷಿಣ ಕಾಶಿಯೆಂದೇ ಖ್ಯಾತಿ ಪಡೆದಿದೆ. ಪ್ರತಿದಿನ ನೂರಾರು ಜನ ಭಕ್ತರು ಈ ದೇವಸ್ಥಾನಕ್ಕೆ ಆಗಮಿಸಿ, ಚಿನ್ನಾಭರಣ ಸೇರಿದಂತೆ ಹಣವನ್ನು ಹುಂಡಿಗೆ ಹಾಕುತ್ತಾರೆ. ತುಂಬಿದ ಹುಂಡಿಗಳ ಮೇಲೆ ಕಣ್ಣು ಹಾಕಿರುವ ಕಳ್ಳರು, ಹುಂಡಿಗಳನ್ನ ಹೊತ್ತೊಯ್ದು, ಅದರಲ್ಲಿದ್ದ ಲಕ್ಷಾಂತರ ರೂಪಾಯಿ ಹಣ-ಚಿನ್ನಾಭರಣ ದೋಚಿದ್ದಾರೆ.

  • ಕೊರಗಜ್ಜ ಕ್ಷೇತ್ರದ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿ ವಿಕೃತಿ ಮೆರೆದ ಕಿಡಿಗೇಡಿಗಳು

    ಕೊರಗಜ್ಜ ಕ್ಷೇತ್ರದ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿ ವಿಕೃತಿ ಮೆರೆದ ಕಿಡಿಗೇಡಿಗಳು

    – ಕೊರಗಜ್ಜನೇ‌ ಶಿಕ್ಷೆ ನೀಡಲಿ‌ ಎಂದು ಪ್ರಾರ್ಥಿಸಿದ ಭಕ್ತರು

    ಮಂಗಳೂರು: ತುಳುವರ ಆರಾಧ್ಯ ದೈವ ಸ್ವಾಮಿ‌ ಕೊರಗಜ್ಜ ಹಾಗೂ ಗುಳಿಗಜ್ಜನ ಪುಣ್ಯಕ್ಷೇತ್ರದ ಕಾಣಿಕೆ‌ ಹುಂಡಿಗೆ ಕಾಂಡೋಮ್ ಹಾಗೂ ನಿಂದನಾರ್ಹ ಬರಹಗಳನ್ನು ಹಾಕಿ ಕಿಡಿಗೇಡಿಗಳು ವಿಕೃತಿ ಮೆರೆದ ಘಟನೆ ಮಂಗಳೂರು ಸಮೀಪದ ಉಳ್ಳಾಲದಲ್ಲಿ‌ ನಡೆದಿದೆ.

    ಉಳ್ಳಾಲದ ಬಸ್ ನಿಲ್ದಾಣದ ಬಳಿ ಇರುವ‌ ಸಾರ್ವಜನಿಕ‌ ಶ್ರೀ‌ಕೊರಗಜ್ಜ, ಗುಳಿಗಜ್ಜ ಸೇವಾ ಸಮಿತಿ ಕ್ಷೇತ್ರದಲ್ಲಿರುವ ಕಾಣಿಕೆ‌ ಹುಂಡಿಯಲ್ಲಿ‌ ಇಂದು ಮುಂಜಾನೆ ಈ ವಿಕೃತಿ ಪತ್ತೆಯಾಗಿದೆ. ಈ ಕ್ಷೇತ್ರದಲ್ಲಿ ಪ್ರತೀ ಸಂಕ್ರಮಣದಂದು ಕಾಣಿಕೆ‌ ಹುಂಡಿಯ ಹಣ ಎಣಿಕೆ ಕಾರ್ಯ ನಡೆಯುತ್ತದೆ. ಈ ಬಾರಿ ಮಾತ್ರ ತಡವಾಗಿ ಕಾಣಿಕೆ‌ಹುಂಡಿಯನ್ನು ಎಣಿಕೆಗೆ ತೆಗೆಯಲಾಗಿದೆ.

    ಎಣಿಕೆಯ ವೇಳೆ ಕಾಂಡೋಮ್‌ಗಳು ಹಾಗೂ ಸಿಎಂ ಬಿಬಿಸ್ ಯಡಿಯೂರಪ್ಪ‌ ಸೇರಿದಂತೆ ಬಿಜೆಪಿ ನಾಯಕರ ಭಾವ ಚಿತ್ರಗಳನ್ನು ವಿರೋಪಗೊಳಿಸಿ,ಅವಹೇಳನಕಾರಿ ಬರಹಗಳನ್ನು ಬರೆದು ಕಾಣಿಕೆ‌ ಹುಂಡಿಗೆ ಹಾಕಿದ್ದಾರೆ. ಬಳಕೆ ಮಾಡಿದ ಎರಡು ಕಾಂಡೋಮ್‌ ಹಾಕಿದ್ದ ಕಿಡಿಗೇಡಿಗಳು ಅದರ ಜೊತೆಗೆ ಬೆಂಗಳೂರಿನ ಕೆ.ಆರ್‌. ಐಡಿಯಲ್‌ ನಿಗಮಾಧ್ಯಕ್ಷರಾದ ಎಂ ರುದ್ರೇಶ್‌ ಅವರಿಗೆ ಶುಭಕೋರಿದ ಒಂದು ಪೋಸ್ಟರ್ ಹಾಕಿದ್ದಾರೆ. ಪೋಸ್ಟರ್‌ನಲ್ಲಿರುವ ಸಿಎಂ ಬಿಎಸ್‌ವೈ, ಅವರ ಪುತ್ರ ವಿಜಯೇಂದ್ರ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಸೇರಿದಂತೆ ಅನೇಕ ಬಿಜೆಪಿ ನಾಯಕರ ಫೋಟೋವನ್ನು ವಿರೂಪಗೊಳಿಸಲಾಗಿದೆ.

    ಇದೇ ಪೋಸ್ಟರ್ ನಲ್ಲಿ ”ರಾಜಕಾರಣಿಗಳನ್ನು ಹೊಡೆದು ಕೊಲ್ಲಬೇಕು, ದೇವ ಲೋಕದಿಂದ ಹೊರ ಹಾಕಲ್ಪಟ್ಟ ದ್ರೋಹಿ ದೂತರುಗಳು ಸೇಡಿನ ಸ್ವಭಾವ ಹೊಂದಿದ್ದು, ವಿಗ್ರಹಗಳ ಮೂಲಕ ಭೂ ಲೋಕದ ಜನರನ್ನು ಭ್ರಷ್ಟರನ್ನಾಗಿಸಿ, ನಕಲಿ ದೇವರಾಗಿ ಅನಾಧಿಕಾಲದಿಂದ ಮೆರೆಯಲ್ಪಡುತ್ತಿದೆ. ಎಚ್ಚರ, ರಕ್ತ ಹೀರುವ ಸೊಳ್ಳೆಗಳಂತೆ ಜನರನ್ನು ದೋಚಿ ಬಾಚಿ ತಿಂದು ತೇಗುವ ಈ ಅಡಬೆ ರಾಜಕಾರಣಿಗಳನ್ನು ಅಟ್ಟಾಡಿಸಿ ಹಿಡಿದು ಕೊಲ್ಲಬೇಕಾಗಿದ್ದು, ಜನರು ಸಿದ್ದರಾಗಬೇಕು” ಎಂದು ಪ್ರಚೋದನಕಾರಿಯಾಗಿ ಬರೆಯಲಾಗಿದೆ.

    ಕಿಡಿಗೇಡಿಗಳ ಈ ಕೃತ್ಯದ ವಿರುದ್ಧ ಕೊರಗಜ್ಜ ಸೇವಾ ಸಮಿತಿಯವರು ಉಳ್ಳಾಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಕೊರಗಜ್ಜ, ಗುಳಿಗಜ್ಜನ ಸನ್ನಿಧಿಯಲ್ಲಿ ನೂರಾರು ಜನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದು, ಈ ವಿಕೃತಿ ಮೆರೆದ ಕಿಡಿಗೇಡಿಗಳ ವಿರುದ್ದ ಕ್ಷೇತ್ರದ ಕಾರ್ಣಿಕ ಶಕ್ತಿಗಳಾದ ಗುಳಿಗಜ್ಜ ಮತ್ತು ಕೊರಗಜ್ಜ ಶಿಕ್ಷೆಸಬೇಕು ಎಂದು ಸಾಮೂಹಿಕವಾಗಿ ಪ್ರಾರ್ಥನೆ ಮಾಡಲಾಯಿತು.

    ಕೆಲ ದಿನಗಳ‌ ಹಿಂದೆ ಮಂಗಳೂರಿನ ಕೊಟ್ಟಾರದ ಬಬ್ಬುಸ್ವಾಮಿ ಹಾಗೂ ಅತ್ತಾವರದ ಬಾಬುಗುಡ್ಡೆಯ ಕೊರಗಜ್ಜನ ಕಟ್ಟೆಯ ಕಾಣಿಕೆ ಡಬ್ಬಿಯಲ್ಲಿ ಕೂಡಾ ಇದೇ ರೀತಿಯ ಅವಹೇಳನಕಾರಿ ಬರಹದ ಪತ್ರಗಳು ಪತ್ತೆಯಾಗಿದ್ದು, ಅದೇ ತಂಡ ಈ ಕೃತ್ಯ ನಡೆಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ‌ ಬೀಸಿದ್ದಾರೆ.