Tag: hundi collection

  • ತಿರುಪತಿ ತಿಮ್ಮಪ್ಪ ಕೋಟಿ ಕೋಟಿ ಒಡೆಯ – ಒಂದೇ ದಿನಕ್ಕೆ 5.3 ಕೋಟಿ ದಾಖಲೆ ಕಾಣಿಕೆ ಸಂಗ್ರಹ

    ತಿರುಪತಿ ತಿಮ್ಮಪ್ಪ ಕೋಟಿ ಕೋಟಿ ಒಡೆಯ – ಒಂದೇ ದಿನಕ್ಕೆ 5.3 ಕೋಟಿ ದಾಖಲೆ ಕಾಣಿಕೆ ಸಂಗ್ರಹ

    ತಿರುಪತಿ: ತಿರುಮಲದ ವೆಂಕಟೇಶ್ವರ ದೇವಸ್ಥಾನದ (Tirupati) ಹುಂಡಿಯಲ್ಲಿ ಸೋಮವಾರ ಒಂದೇ ದಿನ 5.3 ಕೋಟಿ ರೂ. ದಾಖಲೆಯ ಕಾಣಿಕೆ ಸಂಗ್ರಹವಾಗಿದೆ.

    ಭಕ್ತರ ಸಂಖ್ಯೆ ಸಾಧಾರಣವಾಗಿದ್ದರೂ ಸಹ ಇದು ಕಳೆದ ಒಂದು ವರ್ಷದಲ್ಲಿ ದೇವಸ್ಥಾನಕ್ಕೆ ಬಂದ ಅತಿ ಹೆಚ್ಚು ಕಾಣಿಕೆಯಾಗಿದೆ. ಸೋಮವಾರ ತಿರುಮಲ ದೇವಸ್ಥಾನದಲ್ಲಿ 78,730 ಯಾತ್ರಿಕರು ಪೂಜೆ ಸಲ್ಲಿಸಿದ್ದಾರೆ. ಇದು ಸಾಮಾನ್ಯವಾಗಿ ಹಬ್ಬ ಹರಿದಿನಗಳು ಮತ್ತು ಬೇಸಿಗೆ ಕಾಲದಲ್ಲಿ ದಾಖಲಾಗುವ ಒಂದು ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಯಾತ್ರಾರ್ಥಿಗಳ ಸಂಖ್ಯೆಗಿಂತ ಕಡಿಮೆಯಾಗಿದೆ. ಇದನ್ನೂ ಓದಿ: ಜೈಸ್ವಾಲ್‌ ಅರ್ಧಶತಕ – ಶತಕ ಸಿಡಿಸಿ ಕೊಹ್ಲಿ ಸಾಧನೆ ಸರಿಗಟ್ಟಿದ ಗಿಲ್‌

    ಸಾಮಾನ್ಯ ಜನದಟ್ಟಣೆಯ ಹೊರತಾಗಿಯೂ, ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯದ ಹುಂಡಿಗೆ 5.3 ಕೋಟಿ ರೂ. ಕಾಣಿಕೆ ಹರಿದುಬಂದಿದೆ. ಇದು ಇದುವರೆಗಿನ ವರ್ಷದ ಅತ್ಯಧಿಕ ಕಾಣಿಕೆಯಾಗಿದೆ.

    2023ರ ಜನವರಿ 2 ರಂದು ಒಂದೇ ದಿನದಲ್ಲಿ ಅತಿ ಹೆಚ್ಚು ಹುಂಡಿ ಕಾಣಿಕೆ ಸಂಗ್ರಹವಾಗಿತ್ತು. ಆ ದಿನ ದೇವಾಲಯಕ್ಕೆ 7.68 ಕೋಟಿ ರೂ. ಒಂದೇ ದಿನದಲ್ಲಿ ಹರಿದುಬಂದಿತ್ತು. ಹಿಂದೆಯೂ 6 ಕೋಟಿಗೂ ಹೆಚ್ಚು ಕಾಣಿಕೆ ಸಂಗ್ರಹವಾಗಿರುವ ನಿದರ್ಶನ ಇದೆ. ಇದನ್ನೂ ಓದಿ: 9 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾದ ಮೈಕ್ರೋಸಾಫ್ಟ್‌

    ಸಂಪತ್ತಿಗೆ ಹೆಸರುವಾಸಿಯಾದ ತಿರುಪತಿಗೆ ಪ್ರತಿ ತಿಂಗಳು 100 ಕೋಟಿಯಿಂದ 140 ಕೋಟಿ ರೂ. ಹುಂಡಿ ಹಣ ಸಂಗ್ರಹವಾಗುತ್ತಿದೆ. ಸುಮಾರು 100 ಕೆಜಿಯಿಂದ 140 ಕೆಜಿ ಚಿನ್ನವನ್ನು ಭಕ್ತರಿಂದ ದೇಣಿಗೆಯಾಗಿ ಪಡೆಯಲಾಗುತ್ತದೆ. ಬ್ಯಾಂಕುಗಳಲ್ಲಿ ಟಿಟಿಡಿಯ ಸ್ಥಿರ ಠೇವಣಿಗಳ ಮೊತ್ತ 20,000 ಕೋಟಿ ರೂ.ಗಿಂತ ಸ್ವಲ್ಪ ಹೆಚ್ಚು.

  • ಅಂಜನಾದ್ರಿಯಲ್ಲಿ ಹುಂಡಿ ಎಣಿಕೆ – 26.60 ಲಕ್ಷ ಸಂಗ್ರಹ

    ಅಂಜನಾದ್ರಿಯಲ್ಲಿ ಹುಂಡಿ ಎಣಿಕೆ – 26.60 ಲಕ್ಷ ಸಂಗ್ರಹ

    -3 ಅಮೆರಿಕ ನಾಣ್ಯಗಳು ಸೇರಿದಂತೆ 9 ವಿದೇಶಿ ನಾಣ್ಯಗಳ ಸಂಗ್ರಹ

    ಕೊಪ್ಪಳ: ರಾಮಾಯಣ ಕಾಲದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಅಂಜನಾದಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ಮಾಡಲಾಗಿದ್ದು, 9 ವಿದೇಶಿ ನಾಣ್ಯಗಳು ಕಾಣಿಕೆ ರೂಪದಲ್ಲಿ ಸಂಗ್ರಹಗೊಂಡಿವೆ.

    ಗಂಗಾವತಿ (Gangavathi) ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದೆ. ಒಟ್ಟು 40 ದಿನಗಳಲ್ಲಿ 26 ಲಕ್ಷದ 60 ಸಾವಿರ ರೂ. ಕಾಣಿಕೆ ಸಂಗ್ರಹವಾಗಿದೆ.ಇದನ್ನೂ ಓದಿ: ಜಾನಪದ ವಿವಿ ಘಟಿಕೋತ್ಸವಕ್ಕೆ ಆಹ್ವಾನಿಸದ್ದಕ್ಕೆ ಶಿಗ್ಗಾಂವಿಯ ನೂತನ ಕೈ ಶಾಸಕ, ಬೆಂಬಲಿಗರಿಂದ ದರ್ಪ

    ಜೊತೆಗೆ ವಿದೇಶಿ ನಾಣ್ಯಗಳು ಸಂಗ್ರಹವಾಗಿದ್ದು, 3 ಯುಎಸ್‌ಎ, 1 ಯುಎಇ, 1 ನೇಪಾಳ, 1 ಸೌದಿ ಅರೇಬಿಯಾ, 1 ಹಾಂಕಾಂಗ್, 1 ಸಿಂಗಾಪುರ್, 1 ರಷ್ಯಾ ಸೇರಿ ಒಟ್ಟು 9 ನಾಣ್ಯಗಳು ಕಾಣಿಕೆ ರೂಪದಲ್ಲಿ ಬಂದಿವೆ. ಸಿಸಿಟಿವಿ ಕಣ್ಗಾವಲಿನಲ್ಲಿ ಹುಂಡಿ ಎಣಿಕೆ ಮಾಡಲಾಯಿತು.

    ಕಳೆದ ವರ್ಷ ಡಿ.14 ರಿಂದ 2024ರ ಜ.05 ರವರೆಗೆ ಹುಂಡಿಯಲ್ಲಿ ಒಟ್ಟು 27,27,761 ರೂ. ಕಾಣಿಕೆ ಸಂಗ್ರಹವಾಗಿತ್ತು. ಆಗ ನೇಪಾಳದ 2 ನೋಟು, 3 ನಾಣ್ಯಗಳು ಸಂಗ್ರಹಗೊಂಡಿದ್ದವು.ಇದನ್ನೂ ಓದಿ: ಮರಕ್ಕೆ ಡಿಕ್ಕಿಯಾಗಿ ನಜ್ಜುಗುಜ್ಜಾದ ಕಾರು – ತಂದೆ, ಮಗ ದಾರುಣ ಸಾವು

  • ತಿಮ್ಮಪ್ಪನಿಗೂ ತಟ್ಟಿತು ಆರ್ಥಿಕ ಕುಸಿತದ ಬಿಸಿ – 12.75 ಲಕ್ಷ ಹುಂಡಿ ಕಲೆಕ್ಷನ್ ಇಳಿಕೆ

    ತಿಮ್ಮಪ್ಪನಿಗೂ ತಟ್ಟಿತು ಆರ್ಥಿಕ ಕುಸಿತದ ಬಿಸಿ – 12.75 ಲಕ್ಷ ಹುಂಡಿ ಕಲೆಕ್ಷನ್ ಇಳಿಕೆ

    ತಿರುಮಲ: ಕುಸಿಯುತ್ತಿರುವ ಭಾರತದ ಆರ್ಥಿಕತೆಯ ಬಿಸಿ ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರನ ಹುಂಡಿಗೂ ತಟ್ಟಿದ್ದು, 9 ದಿನಗಳು ನಡೆಯುವ ಬ್ರಹ್ಮೋತ್ಸವದಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರೂ ಹುಂಡಿ ಹಣ ಸಂಗ್ರಹ ಮಾತ್ರ ಇಳಿಮುಖ ಕಂಡಿದೆ.

    ಹೌದು. ಮಂಗಳವಾರ ತಿರುಪತಿ ತಿಮ್ಮಪ್ಪನ 9 ದಿನಗಳ ಬ್ರಹ್ಮೋತ್ಸವಕ್ಕೆ ತೆರೆಬಿದ್ದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಆದರೂ ಕೂಡ ತಿಮ್ಮಪ್ಪನ ಹುಂಡಿ ಕಲೆಕ್ಷನ್ ಮಾತ್ರ ತೀವ್ರವಾಗಿ ಇಳಿಕೆ ಕಂಡಿದೆ. 9 ದಿನಗಳ ಕಾಲ ನಡೆದ ಬ್ರಹ್ಮೋತ್ಸವದಲ್ಲಿ ಸುಮಾರು 7.7 ಲಕ್ಷ ಭಕ್ತಾದಿಗಳು ತಿರುಮಲದ ಶ್ರೀ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಕಳೆದ ವರ್ಷದ ಬ್ರಹ್ಮೋತ್ಸವದ ಸಮಯದಲ್ಲಿ 5.9 ಲಕ್ಷ ಭಕ್ತರು ಪಾಲ್ಗೊಂಡಿದ್ದರು. ಈ ಬಾರಿ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದ್ದರೂ ಕೂಡ ತಿಮ್ಮಪ್ಪನ ಹುಂಡಿ ಸಂಗ್ರಹದ ಹಣ ಮಾತ್ರ ಕಡಿಮೆಯಾಗಿದೆ.

    ಕಳೆದ ವರ್ಷ ಹುಂಡಿ ಸಂಗ್ರಹ 20.52 ಕೋಟಿ ರೂಪಾಯಿ ಆಗಿತ್ತು. ಆದರೆ ಈ ಬಾರಿ 20.40 ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ಹೀಗಾಗಿ ಕಳೆದ ವರ್ಷಕ್ಕಿಂತ ಈ ಬಾರಿ ಬರೋಬ್ಬರಿ 12.75 ಲಕ್ಷ ರೂ. ಹುಂಡಿ ಸಂಗ್ರಹದಲ್ಲಿ ಇಳಿಕೆ ಕಂಡಿದೆ. ಕಳೆದ ಬಾರಿ 2.17 ಲಕ್ಷ ಮಂದಿ ತಿಮ್ಮಪ್ಪನ ಸನ್ನಿಧಾನದಲ್ಲಿ ಮುಡಿ ಕೊಟ್ಟಿದ್ದರು. ಆದರೆ ಈ ಬಾರಿ ಮುಡಿಕೊಟ್ಟವರ ಸಂಖ್ಯೆ 3.23 ಲಕ್ಷಕ್ಕೆ ಏರಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮುಡಿಕೊಟ್ಟ ಭಕ್ತರ ಸಂಖ್ಯೆ ಶೇ.50 ರಷ್ಟು ಹೆಚ್ಚಾಗಿದೆ.

    ಈ ಬಾರಿ ದೇವಸ್ಥಾನ 34.01 ಲಕ್ಷ ರುಚಿಕರ ಲಡ್ಡು ಪ್ರಸಾದವನ್ನು ಭಕ್ತರಿಗೆ ಹಂಚಿದೆ. ಕಳೆದ ಬಾರಿ 24.01 ಲಕ್ಷ ಲಡ್ಡು ಪ್ರಸಾದ ಹಂಚಲಾಗಿತ್ತು. ಆದರೂ ಕೂಡ ಹುಂಡಿ ಹಣ ನೀರಿಕ್ಷೆ ಮಾಡಿದ ಮಟ್ಟದಲ್ಲಿ ಸಂಗ್ರಹವಾಗಿಲ್ಲ. ಭಕ್ತರು ಹೆಚ್ಚು ಆಗಮಿಸಿದ್ದರೂ ಹುಂಡಿಯಲ್ಲಿ ಹಣದ ಪ್ರಮಾಣ ಕುಸಿತ ಕಂಡಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಕ ಅಧಿಕಾರಿ ತಿಳಿಸಿದ್ದಾರೆ.

  • ಸಾಲು ಸಾಲು ರಜೆ: ಶನಿವಾರ ಒಂದೇ ದಿನ ತಿರುಪತಿ ಹುಂಡಿಯಲ್ಲಿ ಬಿದ್ದ ಕಾಣಿಕೆ ಎಷ್ಟು ಗೊತ್ತಾ?

    ಸಾಲು ಸಾಲು ರಜೆ: ಶನಿವಾರ ಒಂದೇ ದಿನ ತಿರುಪತಿ ಹುಂಡಿಯಲ್ಲಿ ಬಿದ್ದ ಕಾಣಿಕೆ ಎಷ್ಟು ಗೊತ್ತಾ?

    ತಿರುಪತಿ: ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ತಿರುಪತಿ ದೇವಾಲಯದದಲ್ಲಿ ಶನಿವಾರ ಒಂದೇ ದಿನ ಹುಂಡಿಯಲ್ಲಿ 3 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ.

    93 ಸಾವಿರಕ್ಕೂ ಹೆಚ್ಚು ಭಕ್ತರು ಶನಿವಾರ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದು, ರೈಲ್ವೇ ನಿಲ್ದಾಣ ಮತ್ತು ಬಸ್ ನಿಲ್ದಾಣದಲ್ಲಿ ವಿಪರೀತ ಜನ ದಟ್ಟನೆ ಇತ್ತು. ಶನಿವಾರ ಒಂದೇ ದಿನ 3 ಕೋಟಿ ರೂ. ಹಣ ಹುಂಡಿಗೆ ಬಿದ್ದಿದ್ದು, ಎಣಿಕೆ ಕಾರ್ಯ ಮುಂದುವರಿಯುತ್ತಿದೆ ಎಂದು ಟಿಟಿಡಿ ಮೂಲಗಳನ್ನು ಆಧರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ರೈಲ್ವೇ ಮುಂಗಡ ಬುಕ್ಕಿಂಗ್, ಬಸ್ ಬುಕ್ಕಿಂಗ್, ವಿಚರಣೆ ಕೊಠಡಿಯಲ್ಲಿ ಸಮಸ್ಯೆ ಸೃಷ್ಟಿಯಾಗಿತ್ತು. ಸಂಖ್ಯೆ ಜಾಸ್ತಿಯಾಗಿದ್ದ ಹಿನ್ನೆಲೆಯಲ್ಲಿ ಜನರನ್ನು ನಿಯಂತ್ರಿಸಲು ಅಧಿಕಾರಿಗಳು ಪೊಲೀಸರು ಹರಸಾಹಸ ಪಟ್ಟಿದ್ದರು. ದೀರ್ಘ ರಜೆ ರುವ ಹಿನ್ನೆಲೆಯಲ್ಲಿ ಭಕ್ತರು ಜಾಸ್ತಿ ಸಂಖ್ಯೆಯಲ್ಲಿ ಬರುವ ಮಾಹಿತಿ ಇದ್ದರೂ ಭಾರತೀಯ ರೈಲ್ವೇ ಯಾವುದೇ ವಿಶೇಷ ರೈಲನ್ನು ಓಡಿಸದ್ದಕ್ಕೆ ಪ್ರಯಾಣಿಕರು ತಮ್ಮ ಅಸಮಾಧಾನವನ್ನು ಹೊರಹಾಕಿದರು.

    ಬೆಂಗಳೂರು ಮತ್ತು ಚೆನ್ನೈ ಕಡೆಯಿಂದ ಜಾಸ್ತಿ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಜನ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ಕಡೆಯಲ್ಲಿ ಹೆಚ್ಚುವರಿ ಬಸ್ ಗಳನ್ನು ಹಾಕಲಾಯಿತು. ಬಹಳಷ್ಟು ಪ್ರಯಾಣಿಕರು ಸ್ಥಳದಲ್ಲಿ ಮುಂಗಡ ಬುಕ್ಕಿಂಗ್ ಮಾಡಲು ಬಂದಿದ್ದರು ಎಂದು ಆಂಧ್ರಪ್ರದೇಶ ಸಾರಿಗೆ ಇಲಾಖೆಯ ಟ್ರಾಫಿಕ್ ಮ್ಯಾನೇಜರ್ ಭಾಸ್ಕರ್ ರೆಡ್ಡಿ ತಿಳಿಸಿದರು.

    ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ನಗರದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು. ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದ್ದರಿಂದ ನಗರದಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆಯಾಗಿತ್ತು.

    ಇದನ್ನೂ ಓದಿ: ತಿರುಪತಿ ದೇಗುಲಕ್ಕೆ ತೆಲಂಗಾಣದಿಂದ ಚಿನ್ನ ಕಾಣಿಕೆ: ಎಷ್ಟು ಚಿನ್ನ? ಬೆಲೆ ಎಷ್ಟು?

  • ನೋಟ್ ಬ್ಯಾನ್ ಬಳಿಕ ಸೋಮವಾರ ತಿಮ್ಮಪ್ಪನ ಹುಂಡಿಗೆ ಬಿತ್ತು ಭಾರೀ ಹಣ

    ನೋಟ್ ಬ್ಯಾನ್ ಬಳಿಕ ಸೋಮವಾರ ತಿಮ್ಮಪ್ಪನ ಹುಂಡಿಗೆ ಬಿತ್ತು ಭಾರೀ ಹಣ

    ತಿರುಪತಿ: ನೋಟ್ ಬ್ಯಾನ್ ಆದ ಬಳಿಕ ಇದೇ ಮೊದಲ ಬಾರಿಗೆ ತಿರುಪತಿ ವೆಂಕಟೇಶ್ವರ ದೇವಾಲಯದ ಕಾಣಿಕೆ ಹುಂಡಿಯಲ್ಲಿ ಸೋಮವಾರ ಒಂದೇ ದಿನ ಬರೋಬ್ಬರಿ 4.75 ಕೋಟಿ ರೂ. ಸಂಗ್ರಹವಾಗಿದೆ.

    ವೆಂಕಟೇಶ್ವರ ದೇವರಿಗಾಗಿ ಸಮರ್ಪಿಸುವ ಬೆಳ್ಳಿ, ಬಂಗಾರದ ಜೊತೆಗೆ 2.5 ಕೋಟಿ ರೂ.ನಿಂದ 3 ಕೋಟಿ ರೂ. ವರೆಗೆ ಪ್ರತಿ ದಿನ ಕಾಣಿಕೆ ಸಂಗ್ರಹವಾಗುತಿತ್ತು. ಆದರೆ 1 ಸಾವಿರ ಮತ್ತು 500 ರೂ. ಮುಖಬೆಲೆಯ ನೋಟುಗಳು ನಿಷೇಧವಾದ ಬಳಿಕ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಕಾಣಿಕೆ ಹಣ ಸಂಗ್ರಹವಾಗಿದೆ ಎಂದು ತಿರುಪತಿ ದೇವಾಲಯದ ಮೂಲಗಳು ಸುದ್ದಿಸಂಸ್ಥೆಗೆ ಮಾಹಿತಿ ನೀಡಿವೆ.

    7 ಅಡಿ ಎತ್ತರದ ಕಾಣಿಕೆ ಹುಂಡಿಯನ್ನು ಸಿಬ್ಬಂದಿ ತೆಗೆದಾಗ ಇಷ್ಟೊಂದು ಮೊತ್ತದ ಹಣಗಳನ್ನು ನೋಡಿ ಆಶ್ಚರ್ಯವಾಗಿತ್ತು. ವಿಶೇಷವಾಗಿ ಎಣಿಕೆ ಮಾಡುವಾಗ ಒಂದೇ ಚೀಲದಲ್ಲಿ 1 ಕೋಟಿ ರೂ. ಮೌಲ್ಯದ ಹಣ ಸಿಕ್ಕಿದೆ ಎಂದು ತಿಳಿಸಿದ್ದಾರೆ.

    ಈ ಹಿಂದೆ 2012ರ ಏಪ್ರಿಲ್‍ನಲ್ಲಿ ಶ್ರೀರಾಮ ನವಮಿ ದಿನದಂದು 5.73 ಕೋಟಿ ರೂ. ಕಾಣಿಕೆ ಹಣ ಸಂಗ್ರಹವಾಗಿತ್ತು. ಇದು ಇದೂವರೆಗೆ ಸಂಗ್ರಹವಾದ ಅತಿ ಹೆಚ್ಚು ಕಾಣಿಕೆಯಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

    2016-17ರ ಹಣಕಾಸು ವರ್ಷದಲ್ಲಿ 2,678 ಕೋಟಿ ರೂ. ಅಂದಾಯ ಸಂಗ್ರಹವಾಗಲಿದೆ ಎಂದು ಎಂದು ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಅಂದಾಜಿಸಿದೆ. ಈ ವರ್ಷ ಹುಂಡಿಯಿಂದಲೇ 1,010 ಕೋಟಿ ರೂ. ಆದಾಯ ಬರುವ ನಿರೀಕ್ಷೆಯಿದೆ.

    ಇದನ್ನೂ ಓದಿ: ತಿರುಪತಿ ದೇಗುಲಕ್ಕೆ ತೆಲಂಗಾಣದಿಂದ ಚಿನ್ನ ಕಾಣಿಕೆ: ಎಷ್ಟು ಚಿನ್ನ? ಬೆಲೆ ಎಷ್ಟು?