Tag: Human Traial

  • ಆಕ್ಸ್‌ಫರ್ಡ್‌ ಕೊರೊನಾ ಲಸಿಕೆಯ ಪ್ರಯೋಗಕ್ಕೆ ತಾತ್ಕಾಲಿಕ ತಡೆ

    ಆಕ್ಸ್‌ಫರ್ಡ್‌ ಕೊರೊನಾ ಲಸಿಕೆಯ ಪ್ರಯೋಗಕ್ಕೆ ತಾತ್ಕಾಲಿಕ ತಡೆ

    ಲಂಡನ್‌: ಇಂಗ್ಲೆಂಡಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸುತ್ತಿರುವ ಕೋವಿಡ್‌ 19 ಲಸಿಕೆಯ ಪ್ರಯೋಗವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

    ಲಸಿಕೆಯನ್ನು ಹಾಕಿಸಿಕೊಂಡ ವ್ಯಕ್ತಿಯ ಆರೋಗ್ಯದಲ್ಲಿ ಅಡ್ಡ ಪರಿಣಾಮ ಕಂಡು ಬಂದ ಹಿನ್ನೆಲೆಯಲ್ಲಿ ಮನುಷ್ಯನ ಮೇಲೆ ನಡೆಯುತ್ತಿರುವ ಪ್ರಯೋಗವನ್ನು ತಡೆ ಹಿಡಿಯಲಾಗಿದೆ.

    ಈ ಲಸಿಕೆ ಹಾಕಿಸಿಕೊಂಡ ವ್ಯಕ್ತಿಯಲ್ಲಿ ಅಡ್ಡ ಪರಿಣಾಮ ಕಂಡು ಬಂದಿದೆ. ಅಡ್ಡ ಪರಿಣಾಮ ಯಾಕೆ ಆಯ್ತು ಎಂಬುದರ ಬಗ್ಗೆ ನಾವು ಅಧ್ಯಯನ ಮಾಡುತ್ತೇವೆ ಎಂದು ವಕ್ತಾರರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಆಕ್ಸ್‌ಫರ್ಡ್‌ ಮತ್ತು ಅಸ್ಟ್ರಾಜೆನೆಕಾ ಜಂಟಿಯಾಗಿ ಅಭಿವೃದ್ಧಿ ಪಡಿಸಿದ AZD1222 ಹೆಸರಿನ ಲಸಿಕೆ ಪ್ರಯೋಗ ವಿಶ್ವದ ಹಲವೆಡೆ ನಡೆಯುತ್ತಿದೆ. ಹೀಗಾಗಿ ಯಾವ ದೇಶದ ವ್ಯಕ್ತಿ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಅಷ್ಟೇ ಅಲ್ಲದೇ ವ್ಯಕ್ತಿಯ ಆರೋಗ್ಯ ಸ್ಥಿತಿ ಹೇಗಿದೆ ಎಂಬುದು ತಿಳಿದು ಬಂದಿಲ್ಲ.

    ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ ವಿಶ್ವದಲ್ಲಿ ಒಟ್ಟು 180 ಲಸಿಕೆಗಳು ಅಭಿವೃದ್ಧಿಯಾಗುತ್ತಿದೆ. ಈ ಪೈಕಿ ಎಲ್ಲರ ನಿರೀಕ್ಷೆ ಆಕ್ಸ್‌ಫರ್ಡ್‌ ಲಸಿಕೆಯ ಮೇಲಿತ್ತು. ಮೊದಲ ಕ್ಲಿನಿಕಲ್‌ ಟ್ರಯಲ್‌ ಯಶಸ್ವಿಯಾಗಿತ್ತು. 1,077 ಮಂದಿ ಆರೋಗ್ಯಕರ ಸ್ವಯಂಸೇವಕರ ಮೇಲೆ ನಡೆಸಿದ ಆರಂಭಿಕ ಹಂತದ ಕ್ಲಿನಿಕಲ್ ಟ್ರಯಲ್‌ ಯಶಸ್ವಿಯಾಗಿದ್ದು, ಈ ವೇಳೆ ಲಸಿಕೆ ರೋಗನಿರೋಧಕ ಪ್ರತಿಕ್ರಿಯೆಯನ್ನು ಉಂಟುಮಾಡಿದೆ ಎಂದು ವೈದ್ಯ ಕ್ಷೇತ್ರಕ್ಕೆ ಸಂಬಂಧಿಸಿದ ‘ದಿ ಲ್ಯಾನ್ಸೆಟ್‌ ಮೆಡಿಕಲ್‌ ಜರ್ನಲ್’‌ನಲ್ಲಿ ಸಂಶೋಧನಾ ವರದಿ ಪ್ರಕಟವಾಗಿತ್ತು.

    ಸ್ವಯಂಸೇವಕರ ಮೇಲೆ ನಡೆದ ಪ್ರಯೋಗದ ಮೇಲೆ ಯಾವುದೇ ಅಡ್ಡ ಪರಿಣಾಮಗಳು ಉಂಟಾಗಿಲ್ಲ. ಲಸಿಕೆ ನೀಡಿದ ಬಳಿಕ ಅವರ ದೇಹದಲ್ಲಿ ಕೊರೊನಾ ವೈರಸ್‌ ವಿರುದ್ಧ ಹೋರಾಡಬಲ್ಲ ಪ್ರತಿಕಾಯಗಳು(ಆಂಟಿಡಿಬಾಡಿಸ್‌) ಮತ್ತು ಟಿ- ಕೋಶಗಳು ಸೃಷ್ಟಿಯಾಗಿದೆ. ಪ್ರಯೋಗದಲ್ಲಿ 56 ದಿನಗಳ ಕಾಲ ಈ ಪ್ರತಿಕಾಯಗಳು ವೈರಸ್‌ ವಿರುದ್ಧ ಹೋರಾಡಿರುವುದು ದೃಢಪಟ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು.

    ಸಂಶೋಧನೆಯ ಪ್ರಮುಖ ಲೇಖಕ ಆಂಡ್ರ್ಯೂ ಪೊಲಾರ್ಡ್ ಪ್ರತಿಕ್ರಿಯಿಸಿ, ಈ ಲಸಿಕೆ ಜನರನ್ನು ಎಷ್ಟು ಕಾಲದವರೆಗೆ ಕೊರೊನಾದಿಂದ ರಕ್ಷಿಸುತ್ತದೆ ಎನ್ನುವುದು ಇನ್ನು ದೃಢಪಟ್ಟಿಲ್ಲ. ಹೀಗಾಗಿ ಮತ್ತಷ್ಟ್ರು ಪ್ರಯೋಗಗಳು ನಡೆಯಬೇಕಿದೆ ಎಂದು ತಿಳಿಸಿದ್ದರು. ಈ ಲಸಿಕೆ ಬಗ್ಗೆ ಭಾರೀ ವಿಶ್ವಾಸ ಇಟ್ಟುಕೊಂಡಿರುವ ಇಂಗ್ಲೆಂಡ್‌ ಸರ್ಕಾರ 1 ಕೋಟಿ ಡೋಸ್‌ಗಳಿಗೆ ಈಗಾಗಲೇ ಆರ್ಡರ್‌ ಕೂಡ ನೀಡಿದೆ.

    ಲಸಿಕೆ ಪ್ರಯೋಗ ಹೇಗೆ?
    ಆರೋಗ್ಯವಂತ ವ್ಯಕ್ತಿಗಳ ಮೇಲೆ ಲಸಿಕೆಗಳ ಪ್ರಯೋಗ ನಡೆಯುತ್ತದೆ. ಲಸಿಕೆ ಹಾಕಿಸಿಕೊಳ್ಳುವ ಮುನ್ನ ಆತನ ದೇಹವನ್ನು ಪರೀಕ್ಷಿಸಲಾಗುತ್ತದೆ. ಈ ವ್ಯಕ್ತಿಯ ದೇಹದ ಮೇಲೆ ಲಸಿಕೆ ಪ್ರಯೋಗ ಮಾಡಬಹುದು ಎಂದು ವೈದ್ಯರು ನಿರ್ಧಾರಕ್ಕೆ ಬಂದ ಬಳಿಕ ಲಸಿಕೆಯನ್ನು ನೀಡಲಾಗುತ್ತದೆ. ಲಸಿಕೆ ಹಾಕಿಸಿಕೊಂಡ ಬಳಿಕ ವ್ಯಕ್ತಿ ನಿಗದಿತ ದಿನಾಂಕದಂದು ಆಸ್ಪತ್ರೆಗೆ ದಾಖಲಾಗಿ ದೇಹವನ್ನು ಪರೀಕ್ಷೆ ಮಾಡಬೇಕಾಗುತ್ತದೆ.

    ಎಲ್ಲರಿಗಿಂತ ಮೊದಲು ಹೇಗೆ?
    ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ತೀವ್ರತೆರನಾದ ಶ್ವಾಸಕೋಶದ ಸಮಸ್ಯೆ ತರಬಲ್ಲ ಸಾರ್ಸ್ (ಸಿವಿಯ‌ ಅಕ್ಯೂಟ್ ರೆಸ್ಪಿರೇಟರಿ ಸಿಂಡೋಮ್) ಹಾಗೂ ಎಂಇಆರ್‌ಎಸ್ (ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡೋಮ್) ಸೋಂಕಿಗೆ ಲಸಿಕೆಯನ್ನು ಕಂಡು ಹಿಡಿಯುವ ಪ್ರಯತ್ನ ನಡೆಸುತ್ತಿತ್ತು. ಈ ನಡುವೆ ಉಸಿರಾಟದ ಸಮಸ್ಯೆಗೆ ಕಾರಣವಾಗಬಲ್ಲ ಕೊರೊನಾ ವೈರಸ್‌ ಬಂದಿದೆ. ಹೀಗಾಗಿ ಕೂಡಲೇ ತಂಡ ಕೋವಿಡ್‌ಗೆ ಲಸಿಕೆ ಕಂಡು ಹಿಡಿಯಲು ಮುಂದಾಗಿದೆ. ಬೇರೆಯವರು ಲಸಿಕೆ ಕಂಡು ಹಿಡಿಯುವ ಪ್ರಯೋಗ ನಡೆಸುವುದಕ್ಕೆ ಮುನ್ನವೇ ಇವರು ವೈರಸ್‌ ಕುರಿತು ಸಾಕಷ್ಟು ಸಂಶೋಧನೆ ನಡೆಸಿರುವ ಕಾರಣ ವಿಶ್ವದಲ್ಲಿ ಈ ಲಸಿಕೆ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.