Tag: Hubli-Dharwad

  • ಎರಡೇ ಕುಟುಂಬಗಳಿಗೆ ಮಣೆಹಾಕುತ್ತಿರುವ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ

    ಎರಡೇ ಕುಟುಂಬಗಳಿಗೆ ಮಣೆಹಾಕುತ್ತಿರುವ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ

    ಧಾರವಾಡ: ಜಿಲ್ಲೆಯ 7 ಕ್ಷೇತ್ರಗಳಲ್ಲಿ ಹುಬ್ಬಳ್ಳಿ-ಧಾರವಾಡ (Hubballi-Dharwad) ಪಶ್ಚಿಮ ಕ್ಷೇತ್ರ ಬೆಲ್ಲದ್ ಹಾಗೂ ಮೋರೆ ಕುಟುಂಬಗಳಿಗೇ ಮಣೆಹಾಕುತ್ತಾ ಬಂದಿದೆ. ಈ ಪೈಕಿ ಬೆಲ್ಲದ ಕುಟುಂಬವೇ ಹೆಚ್ಚಿನ ಗೆಲುವು ಸಾಧಿಸಿದೆ.

    ಚಂದ್ರಕಾಂತ ಬೆಲ್ಲದ್ ರಾಜಕೀಯ ನಿವೃತ್ತಿ ಪಡೆದ ಮೇಲೆ ಅವರ ಮಗನೇ ಎರಡು ಬಾರಿ ಶಾಸಕರಾಗಿದ್ದಾರೆ. ಹಾಗಾದ್ರೆ ಬೆಲ್ಲದ್ ಹಾಗೂ ಮೋರೆ ಕುಟುಂಬ ಎಷ್ಟು ಬಾರಿ ಇಲ್ಲಿ ಶಾಸಕರಾಗಿ ಆಡಳಿತ ನಡೆಸಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

    1983 ರಲ್ಲಿ ಮಾಜಿ ಸಚಿವ ಎಸ್.ಆರ್ ಮೋರೆ (SR More) ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಗೆದ್ದು ಶಾಸಕರಾದರು. ನಂತರ 1985ರ ಚುನಾವಣೆಯಲ್ಲಿ (Elections) ಚಂದ್ರಕಾಂತ ಬೆಲ್ಲದ್ ಮೊದಲ ಬಾರಿಗೆ ಪಕ್ಷೇತರರಾಗಿ ಗೆಲುವು ಸಾಧಿಸಿದರು. ಇದೇ ಕ್ಷೇತ್ರದಲ್ಲಿ 1989ರಲ್ಲಿ ನಡೆದ ಚುನಾವಣೆಯಲ್ಲಿ ಚಂದ್ರಕಾಂತ ಬೆಲ್ಲದ್ ಅವರನ್ನ ಸೋಲಿಸಿದ ಎಸ್.ಆರ್ ಮೋರೆ ಕಾಂಗ್ರೆಸ್ ಪಕ್ಷದಿಂದ 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಇದರಿಂದ ಮತ್ತೆ 2ನೇ ಬಾರಿಗೆ ಮೋರೆಗೆ ಮಣಿಸಲು 1994ರಲ್ಲಿ ಚಂದ್ರಕಾಂತ ಬೆಲ್ಲದ್ ಬಿಜೆಪಿ ಸೇರಿ, ಪಕ್ಷದಿಂದ ಗೆದ್ದು ಶಾಸಕರಾದರು.

    ಹೀಗೆ ಪ್ರತಿ ಚುನಾವಣೆಯಲ್ಲಿ ಎಸ್.ಆರ್ ಮೋರೆ ಒಮ್ಮೆ ಗೆದ್ದರೆ, ಚಂದ್ರಕಾಂತ ಬೆಲ್ಲದ್ ಮತ್ತೊಮ್ಮೆ ಗೆದ್ದು ಬರುವ ಮೂಲಕ ಈ ಕ್ಷೇತ್ರ ಎರಡೇ ಕುಟುಂಬದ ಗೆಲುವಿಗೆ ಸೀಮಿತವಾಗಿದೆ. ಚಂದ್ರಕಾಂತ ಬೆಲ್ಲದ್ ಈ ಕ್ಷೇತ್ರದಲ್ಲಿ 4 ಬಾರಿ ಶಾಸಕರಾಗಿದ್ದರೆ, ಎಸ್.ಆರ್ ಮೋರೆ 3 ಬಾರಿ ಶಾಸಕರಾಗಿ ಆಡಳಿತ ನಡೆಸಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಪಕ್ಷ ನಾನು ಬಿಡ್ಲಿಲ್ಲ, ಅವರೇ ನನ್ನ ಹೊರಗೆ ಹಾಕಿದ್ರು: ಎಟಿ ರಾಮಸ್ವಾಮಿ

    ಇದಾದ ಬಳಿಕ 2013ರ ಚುನಾವಣೆಗೆ ಚಂದ್ರಕಾಂತ ಬೆಲ್ಲದ್ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ ನಂತರವೂ ಅದೇ ಕುಟುಂಬದ ಆಡಳಿತ ಮುಂದುವರಿದಿದೆ. ಏಕೆಂದರೆ 2013 ಚುನಾವಣಾ ರಾಜಕಾರಣದಿಂದ ಚಂದ್ರಕಾಂತ ಬೆಲ್ಲದ್ ಹಿಂದೆ ಸರಿದ ನಂತರ, ತನ್ನ ಮಗನಾದ ಅರವಿಂದ ಬೆಲ್ಲದ್ ಅವರಿಗೆ ಬಿಜೆಪಿಯಿಂದ ಟಿಕೆಟ್ ಕೊಡಲಾಯಿತು. ಅರವಿಂದ ಬೆಲ್ಲದ್ ಭರ್ಜರಿ ಗೆಲುವು ಸಾಧಿಸಿದರು. ಚಂದ್ರಕಾಂತ ಬೆಲ್ಲದ್ ಎದುರು ಸೋತಿದ್ದ ಎಸ್.ಆರ್ ಮೋರೆ, 2013 ರಲ್ಲಿ ಮಗ ಅರವಿಂದ ಬೆಲ್ಲದ್ (Arvind Bellad) ವಿರುದ್ಧವೂ ಸೋತರು. ಈ ಬೆಳವಣಿಗೆ ನಂತರ 2018ರಲ್ಲಿ ಕಾಂಗ್ರೆಸ್ ಎಸ್.ಆರ್ ಮೋರೆ ಅವರಿಗೆ ಟಿಕೆಟ್ ನಿರಾಕರಿಸಿತು.

    ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ರಾಜಕೀಯ ಹಿನ್ನೋಟ ನೋಡುತ್ತಾ ಹೋದರೆ, ಈ ಎರಡೇ ಕುಟುಂಬಗಳಿಗೆ ಮಣೆ ಹಾಕುತ್ತಾ ಬಂದಿರುವುದು ಕಾಣುತ್ತದೆ. ಇದನ್ನೂ ಓದಿ: ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆ ಫಿಕ್ಸಾ?

    2023ರ ವಿಧಾನಸಭಾ ಚುನಾವಣೆಯಲ್ಲೂ ಅರವಿಂದ ಬೆಲ್ಲದ್ ಮತ್ತೆ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲು ಭರ್ಜರಿ ತಯಾರಿ ನಡೆಸಿದ್ದಾರೆ. ಇತ್ತ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿಯಲು ಎಸ್.ಆರ್ ಮೋರೆ ಅವರ ಮಗಳು ಕೀರ್ತಿ ಮೋರೆ ಸಿದ್ಧತೆ ನಡೆಸುತ್ತಿದ್ದು, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಇಬ್ಬರಿಗೂ ಟಿಕೆಟ್ ಸಿಕ್ಕಿದ್ದೇ ಆದಲ್ಲಿ ಮತ್ತೊಮ್ಮೆ ಈ ಕ್ಷೇತ್ರ ಬೆಲ್ಲದ್ ವರ್ಸಸ್ ಮೋರೆಯಾಗಲಿದೆ.

  • ಇನ್ಫೋಸಿಸ್ ಫೌಂಡೇಶನ್‍ನಿಂದ 220ಕ್ಕೂ ಅಧಿಕ ಕಾರ್ಮಿಕರಿಗೆ ಆಹಾರದ ಕಿಟ್

    ಇನ್ಫೋಸಿಸ್ ಫೌಂಡೇಶನ್‍ನಿಂದ 220ಕ್ಕೂ ಅಧಿಕ ಕಾರ್ಮಿಕರಿಗೆ ಆಹಾರದ ಕಿಟ್

    ಹುಬ್ಬಳ್ಳಿ: ಸುಧಾಮೂರ್ತಿ ಅವರ ಇನ್ಫೋಸಿಸ್ ಫೌಂಡೇಶನ್ ನೀಡಿರುವ ಆಹಾರ ಧಾನ್ಯಗಳ ಕಿಟ್‍ಗಳನ್ನು ಭಾನುವಾರ 220ಕ್ಕೂ ಹೆಚ್ಚು ಕಾರ್ಮಿಕರಿಗೆ ವಿತರಿಸಲಾಯಿತು.

    ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿನ ಕರ್ನಾಟಕ ರಾಜ್ಯ ಆಹಾರ ನಿಗಮ (ಕೆಎಸ್‍ಸಿಎಫ್‍ಸಿ) 8 ಗೋದಾಮುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 220ಕ್ಕೂ ಹೆಚ್ಚು ಕಾರ್ಮಿಕರು, ಲಾರಿ ಚಾಲಕರು, ಕ್ಲೀನರ್‌ಗಳಿಗೆ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ಮರ್ಜಿ, ಇಸ್ಕಾನ್‍ನ ಸಾಯಿನಾಥ್ ವಿತರಿಸಿದರು.

    ಇನ್ಫೋಸಿಸ್ ಫೌಂಡೇಶನ್ ನೀಡಿರುವ ಆಹಾರ ಧಾನ್ಯಗಳ ಪ್ರತಿ ಕಿಟ್‍ನಲ್ಲಿ 5 ಕೆ.ಜಿ. ಅಕ್ಕಿ, ಅಡುಗೆ ಎಣ್ಣೆ, ತೊಗರಿಬೇಳೆ ಸೇರಿದಂತೆ ಸುಮಾರು 17 ಆಹಾರ ಪದಾರ್ಥಗಳು ಇವೆ. ಒಂದು ಕಿಟ್‍ನ ಬೆಲೆ ಸುಮಾರು 750 ರೂ. ಮೌಲ್ಯದ್ದಾಗಿದೆ.

    ವೃತ್ತಿ ನಾಟಕ ಕಂಪನಿಯ ಕಲಾವಿದರಿಗೂ ಕಲಘಟಗಿಯ ಜಾತ್ರೆಯಲ್ಲಿ ಬಿಡಾರ ಹೂಡಿ ಈಗ ಲಾಕ್‍ಡೌನ್‍ನಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಅವರಿಗೂ ಈ ಆಹಾರ ಧಾನ್ಯಗಳ ಕಿಟ್ ವಿತರಿಸಲು ವ್ಯವಸ್ಥೆ ಮಾಡಲಾಗಿದೆ.

  • ಅವಳಿ ನಗರದ ಎಪಿಎಂಸಿ ದ್ವಾರದಲ್ಲಿ ಸೋಂಕು ಕಳೆಯುವ ಸುರಂಗ ಸ್ಥಾಪನೆ

    ಅವಳಿ ನಗರದ ಎಪಿಎಂಸಿ ದ್ವಾರದಲ್ಲಿ ಸೋಂಕು ಕಳೆಯುವ ಸುರಂಗ ಸ್ಥಾಪನೆ

    ಹುಬ್ಬಳ್ಳಿ: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಸರ್ಕಾರ ಹತ್ತು ಹಲವು ಕ್ರಮ ಕೈಗೊಳ್ಳುತ್ತಿದೆ. ಧಾರವಾಡ ಜಿಲ್ಲಾಡಳಿತ, ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆಯು ಸ್ಥಳೀಯ ಯಂಗ್ ಇಂಡಿಯಾ(ವೈಐ) ಹಾಗೂ ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ(ಸಿಐಐ) ಸಹಯೋಗದಲ್ಲಿ ಅಮರಗೋಳದ ಎಪಿಎಂಸಿ ಮಹಾದ್ವಾರದ ಬಳಿ ಸೋಂಕು ಕಳೆಯುವ ಸುರಂಗ ನಿರ್ಮಿಸಿದೆ.

    ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರು ಇಂದು ಬೆಳಿಗ್ಗೆ ಈ ಸುರಂಗದ ರಚನೆ ಹಾಗೂ ನಿರ್ಮಾಣ ಪರಿಶೀಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ರೈತರು, ವ್ಯಾಪಾರಸ್ಥರ ಆರೋಗ್ಯ ರಕ್ಷಣೆಗೆ ಇದು ಸಹಕಾರಿಯಾಗಲಿದೆ. ಜಿಲ್ಲಾಡಳಿತ, ಮಹಾನಗರಪಾಲಿಕೆ ಹಾಗೂ ಸ್ಥಳೀಯ ಸಂಘಟನೆಗಳ ಸಹಭಾಗಿತ್ವದಲ್ಲಿ ಈ ಕಾರ್ಯ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ತಮಿಳುನಾಡಿನ ತಿರುಪ್ಪೂರನಲ್ಲಿ ಅಲ್ಲಿನ ಯಂಗ್ ಇಂಡಿಯಾ ಸಂಸ್ಥೆ ಇಂತಹ ಪ್ರಯತ್ನ ಮಾಡಿರುವದನ್ನು ಕಂಡು, ಹುಬ್ಬಳ್ಳಿಯಲ್ಲಿಯೂ ಅದನ್ನು ಅನುಷ್ಠಾನಗೊಳಿಸುವ ಆಸಕ್ತಿ ಉಂಟಾಯಿತು. ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಅಗತ್ಯ ಸಹಕಾರ ನೀಡಲು ಮುಂದಾದಾಗ ನಮ್ಮ ಉತ್ಸಾಹಕ್ಕೆ ಪ್ರೋತ್ಸಾಹ ದೊರೆಯಿತು. ಪಾರಾದಿ ಅವರಿಂದ ಸ್ಟೀಲ್ ಫ್ರೇಮ್ ಸಿದ್ಧಪಡಿಸಿ, ಹೈ ಪ್ರೆಶರ್ ಉಳ್ಳ ಫಾಗರ್ಸ್, 1 ಅಶ್ವಶಕ್ತಿಯ ಪಂಪ್ ಈ ಸೋಂಕು ಕಳೆಯುವ ಸುರಂಗದಲ್ಲಿ ಅಳವಡಿಸಲಾಗಿದೆ. ಸುರಂಗದ 4 ಅಡಿ ಅಂತರದಲ್ಲಿ ವ್ಯಕ್ತಿಗಳು ಬಂದಾಗ ಸೆನ್ಸಾರ್ ಮೂಲಕ ಕಾರ್ಯ ಆರಂಭವಾಗುತ್ತದೆ. ಮನುಷ್ಯ ತೊಯ್ಯದ ಹಾಗೆ ಸೋಂಕು ನಿವಾರಕ ಸಿಂಪಡಣೆಯಾಗುತ್ತದೆ. ಶೇ. 1ರಷ್ಟು ಸೋಡಿಯಂ ಹೈಪೋಕ್ಲೋರೈಡ್ ಮಿಶ್ರಿತ ದ್ರಾವಣವನ್ನು ಮಹಾನಗರಪಾಲಿಕೆ ನಿರಂತರವಾಗಿ ಒದಗಿಸಲಿದೆ. ಯಂಗ್ ಇಂಡಿಯಾ ಮತ್ತು ಸಿಐಐ 1 ಲಕ್ಷ ರೂ. ವೆಚ್ಚದಲ್ಲಿ ಪ್ರಾಯೋಗಿಕವಾಗಿ ಈ ಕಾರ್ಯ ಕೈಗೊಂಡಿದೆ ಎಂದು ಯಂಗ್ ಇಂಡಿಯಾ ಸಂಸ್ಥೆ ಅಧ್ಯಕ್ಷ ಡಾ. ಶ್ರೀನಿವಾಸ್ ಜೋಷಿ ವಿವರಿಸಿದರು.

    ಈ ಬಗ್ಗೆ ಮಹಾನಗರಪಾಲಿಕೆ ಆಯುಕ್ತರು ಮಾತನಾಡಿ, ಹುಬ್ಬಳ್ಳಿ ಎಪಿಎಂಸಿಗೆ ಪ್ರತಿನಿತ್ಯ ಸಾವಿರಾರು ರೈತರು, ವ್ಯಾಪಾರಿಗಳು ಬರುತ್ತಾರೆ. ಅವರಲ್ಲಿ ಸೋಂಕು ಹರಡುವಿಕೆ ತಡೆಯಲು ಈ ಪ್ರಯತ್ನ ಮಾಡಲಾಗಿದೆ. ಸಾರ್ವಜನಿಕರು ಸ್ವಲ್ಪ ತಾಳ್ಮೆಯಿಂದ ವಾಹನದಿಂದ ಇಳಿದು, ಸುರಂಗದಲ್ಲಿ ಒಮ್ಮೆ ಹಾಯ್ದು ಬರುವ ಅಭ್ಯಾಸ ರೂಢಿಸಿಕೊಂಡರೆ ಒಳ್ಳೆಯದು ಎಂದರು.

    ಜಿಲ್ಲಾಧಿಕಾರಿ ದೀಪಾ ಚೋಳನ್, ಮಹಾನಗರ ಪೊಲೀಸ್ ಆಯುಕ್ತ ಆರ್. ದಿಲೀಪ್, ಮಹಾನಗರಪಾಲಿಕೆ ಪರಿಸರ ಇಂಜಿನಿಯರ್ ನಯನ, ಪೊಲೀಸ್ ಇನ್ಸ್‌ಪೆಕ್ಟರ್ ಪ್ರಭು ಸೂರಿನ್, ಯಂಗ್ ಇಂಡಿಯಾದ ಸಚಿನ್, ಡಾ. ನಾಗರಾಜನಾಯಕ, ಕಿರಣ ಮಾಳವದೆ, ಸಿಐಐ ಅಧ್ಯಕ್ಷ ವಿ.ಎಸ್.ವಿ.ಪ್ರಸಾದ, ಉಪಾಧ್ಯಕ್ಷ ಅನುಪಮ ಬೇತಾಳ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

  • ಮೋದಿ ಹೊಗಳಲು ಹೋಗಿ ಅಖಿಲೇಶ್ ರನ್ನು ತೆಗಳಿದ: ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಪೇದೆಯಿಂದ ಎಡವಟ್ಟು

    ಮೋದಿ ಹೊಗಳಲು ಹೋಗಿ ಅಖಿಲೇಶ್ ರನ್ನು ತೆಗಳಿದ: ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಪೇದೆಯಿಂದ ಎಡವಟ್ಟು

    ಹುಬ್ಬಳ್ಳಿ: ಪೇದೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಕುಮಾರಸ್ವಾಮಿ ವಿರುದ್ಧ ಪೋಸ್ಟ್ ಹಾಕಿ ಅಮಾನತಾದ ಬೆನ್ನಲ್ಲೇ ಇದೀಗ ಮತ್ತೊಬ್ಬ ಪೇದೆ ಬಿಜೆಪಿ ಪರ ಹೇಳಿಕೆ ನೀಡಲು ಮುಂದಾಗಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ.

    ರವಿಕುಮಾರ್ ಕುರಿ ಸದ್ಯ ಎಡವಟ್ಟು ಮಾಡಿಕೊಂಡಿರುವ ಪೇದೆ. ರವಿಕುಮಾರ್ ಕುರಿ ಹುಬ್ಬಳ್ಳಿ ದಕ್ಷಿಣ ವಲಯ ಎಸಿಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರವಿಕುಮಾರ್ ಫೇಸ್‍ಬುಕ್ ನಲ್ಲಿ ಫೋಟೋ ಶೇರ್ ಮಾಡುವ ಮೂಲಕ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ಅವಹೇಳನ ಮಾಡಿದ್ದಾರೆ.

    ಪೇದೆ ರವಿಕುಮಾರ್ ಕುರಿ, ತಮ್ಮ ಫೇಸ್‍ಬುಕ್ ನಲ್ಲಿ ಅಖಿಲೇಶ್ ಯಾದವ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೋಲಿಕೆ ಮಾಡಿರುವ ಫೋಟೋ ಶೇರ್ ಮಾಡಿದ್ದಾರೆ. ಫೋಟೋ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಲು ಮುಂದಾಗಿದ್ದು, ಅಖಿಲೇಶ್ ಯಾದವ್ ಅವರಿಗೆ ಅವಮಾನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಈ ಹಿಂದೆಯೂ ರವಿಕುಮಾರ್ ಬಿಜೆಪಿಯನ್ನು ಬೆಂಬಲಿಸಿ ಹಾಗೂ ಹೊಗಳಿ ಅನೇಕ ಪೋಸ್ಟ್ ಗಳನ್ನು ಶೇರ್ ಮಾಡಿದ್ದಾರೆ.  ಇದನ್ನು ಓದಿ:  ಕುಮಾರಸ್ವಾಮಿಯವರೇ ರಾಜೀನಾಮೆ ಯಾವಾಗ?- ಎಫ್‍ಬಿಯಲ್ಲಿ ಪೋಸ್ಟ್ ಪ್ರಕಟಿಸಿದ ಪೇದೆ ಅಮಾನತು

    ಇತ್ತೀಚೆಗಷ್ಟೇ ಪೊಲೀಸ್  ಪೇದೆ ಅರುಣ್ ಡೊಳ್ಳಿನ್, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಹೀಗಾಗಿ ಅವರನ್ನು ಅಮಾನತು ಮಾಡಲಾಗಿತ್ತು. ಈ ಬೆನ್ನಲ್ಲೇ ಈಗ ಮತ್ತೊಬ್ಬ ಹುಬ್ಬಳ್ಳಿಯ ಪೇದೆ ಇಂತದ್ದೇ ಎಡವಟ್ಟು ಮಾಡಿಕೊಂಡಿದ್ದು, ಸಾರ್ವಜನಿಕರು ಪೇದೆ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ. ಒಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್  ಕಮೀಷನರೇಟ್ ಪೊಲೀಸರು ಬಿಜೆಪಿ ಕಾರ್ಯಕರ್ತರಾದರೇ ಎನ್ನುವ ಶಂಕೆ ಇದೀಗ ಜನಸಾಮಾನ್ಯರನ್ನು ಕಾಡುತ್ತಿದೆ.