Tag: Hubli Court

  • ಪಾಕ್ ಪರ ಘೋಷಣೆ- ಕಾಶ್ಮೀರ ವಿದ್ಯಾರ್ಥಿಗಳ ಜಾಮೀನು ಅರ್ಜಿ ವಜಾ

    ಪಾಕ್ ಪರ ಘೋಷಣೆ- ಕಾಶ್ಮೀರ ವಿದ್ಯಾರ್ಥಿಗಳ ಜಾಮೀನು ಅರ್ಜಿ ವಜಾ

    ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಕೆಎಲ್‍ಇ ಕಾಲೇಜಿನಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕಾಶ್ಮೀರ ವಿದ್ಯಾರ್ಥಿಗಳ ಜಾಮೀನು ಅರ್ಜಿಯನ್ನು ಹುಬ್ಬಳ್ಳಿಯ 5ನೇ ಅಪರ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.

    ನ್ಯಾಯಾಧೀಶ ಕೆ.ಎನ್.ಗಂಗಾಧರ ಅವರು ಈ ಹಿಂದೆ ವಿಚಾರಣೆ ನಡೆಸಿ ಮಾ.9ಕ್ಕೆ ತೀರ್ಪು ಕಾಯ್ದಿರಿಸಿ ಆದೇಶ ನೀಡಿದ್ದರು. ಈ ಹಿನ್ನಲೆಯಲ್ಲಿ ಇಂದು ಎಲ್ಲ ರೀತಿಯ ಪರಿಶೀಲನೆ ನಡೆಸಿದ ನ್ಯಾಯಾಧೀಶ ಗಂಗಾಧರ ಅವರು ಕಾಶ್ಮೀರಿ ವಿದ್ಯಾರ್ಥಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ.

    ಮಾರ್ಚ್ 5ರಂದು ಕಾಶ್ಮೀರದ ಮೂವರು ವಿದ್ಯಾರ್ಥಿಗಳ ದೇಶದ್ರೋಹಿ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪರ ವಾದ ಮಂಡಿಸಲು ಹುಬ್ಬಳ್ಳಿಯ ವಕೀಲರು ಹಿಂದೇಟು ಹಾಕಿದ್ದರು. ನಂತರ ಬೆಂಗಳೂರಿನಿಂದ ಆಗಮಿಸಿದ ವಕೀಲರು ಆರೋಪಿಗಳ ಪರ ವಾದ ಮಂಡನೆ ಮಾಡಿದರು. ಮೈತ್ರೇಯಿ ಕೃಷ್ಣನ್ ನೇತೃತ್ವದ ಹತ್ತು ಜನ ವಕೀಲರ ತಂಡದಿಂದ ವಾದ ಮಂಡನೆ ಮಾಡಲಾಗಿತ್ತು.

    ಹಲವು ಪ್ರಕರಣಗಳ ಉದಾಹರಣೆ ಮೂಲಕ ಬೆಂಗಳೂರಿನ ವಕೀಲರ ತಂಡ ವಾದ ಮಂಡನೆ ಮಾಡಿತ್ತು. ವಾದ ಆಲಿಸಿದ 5ನೇ ಜೆ.ಎಂ.ಎಫ್.ಸಿ ನ್ಯಾಯಾಧೀಶರು ಜಾಮೀನು ನೀಡಲು ನಿರಾಕರಿಸಿ ಆದೇಶ ಪ್ರಕಟಿಸಿದರು.

    ಫೆ.15 ರಂದು ಪ್ರತಿಷ್ಠಿತ ಕೆಎಲ್‍ಇ ಕಾಲೇಜಿನ ವಿದ್ಯಾರ್ಥಿಗಳು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಈ ಕುರಿತು ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಮಾತ್ರವಲ್ಲದೆ ಈ ಪ್ರಕರಣದ ನಂತರ ರಾಜ್ಯದ ಯುವತಿ ಅಮೂಲ್ಯಾ ಲಿಯೋನಾ ಸಹ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದಳು. ಇದಾದ ಬಳಿಕ ದೇಶದ್ರೋಹದ ಘೋಷಣೆ ಕೂಗಿದ್ದ ಕಾಶ್ಮೀರಿ ವಿದ್ಯಾರ್ಥಿಗಳ ಪರವಾಗಿ ವಕಾಲತು ವಹಿಸಿದ್ದ ವಕೀಲರ ಕಾರಿನ ಮೇಲೆ ಹುಬ್ಬಳ್ಳಿಯಲ್ಲಿ ದಾಳಿ ನಡೆದಿತ್ತು.