Tag: Hubblli

  • 3 ದಿನಗಳ ಹಿಂದೆ ನಾಪತ್ತೆಯಾಗಿದ್ದ ಸ್ವಾಮೀಜಿ ಬಾವಿಯಲ್ಲಿ ಶವವಾಗಿ ಪತ್ತೆ

    3 ದಿನಗಳ ಹಿಂದೆ ನಾಪತ್ತೆಯಾಗಿದ್ದ ಸ್ವಾಮೀಜಿ ಬಾವಿಯಲ್ಲಿ ಶವವಾಗಿ ಪತ್ತೆ

    ಹುಬ್ಬಳ್ಳಿ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಠದ ಸ್ವಾಮೀಜಿಯೊಬ್ಬರ ಮೃತದೇಹ ಇದೀಗ ಬಾವಿಯಲ್ಲಿ ಪತ್ತೆಯಾಗಿದ್ದು, ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

    ನಗರದ ಮಂಟೂರು ರಸ್ತೆಯ ಕಲಬುರ್ಗಿಮಠದ ಶಿವಮೂರ್ತಿ ಶಿವಮಠ (30) ನಾಪತ್ತೆಯಾಗಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಶಿವಮೂರ್ತಿ ಬಳಲುತ್ತಿದ್ದರು. ಅಲ್ಲದೆ ಮೂರು ದಿನಗಳ ಹಿಂದೆ ಮನೆಯಿಂದ ನಾಪತ್ತೆ ಆಗಿದ್ರು.

    ಸ್ವಾಮೀಜಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಮನೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ಆದ್ರೆ ಗುರುವಾರ ಮಠದ ಪಕ್ಕದಲ್ಲಿರುವ ಬಾವಿಯಲ್ಲಿ ಶಿವಮೂರ್ತಿ ಸ್ವಾಮೀಜಿ ಶವವಾಗಿ ಪತ್ತೆ ಆಗಿದ್ದಾರೆ.

    ಈ ಸಂಬಂಧ ಬಡಿಗೇರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

  • ಆಗಸ್ಟ್ 2 ರಂದು ಉತ್ತರ ಕರ್ನಾಟಕದ 13 ಜಿಲ್ಲೆಗಳು ಬಂದ್!

    ಆಗಸ್ಟ್ 2 ರಂದು ಉತ್ತರ ಕರ್ನಾಟಕದ 13 ಜಿಲ್ಲೆಗಳು ಬಂದ್!

    ಹುಬ್ಬಳ್ಳಿ: ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿರುವ ರೈತ ಸಂಘ 13 ಜಿಲ್ಲೆಗಳ ಬಂದ್ ಕರೆ ನೀಡಿದೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೋರಾಟಗಾರರು, ಉತ್ತರ ಕರ್ನಾಟವನ್ನು ನಿರಂತರವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ರೈತರು ಸಹ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯ ಬಜೆಟ್‍ನಲ್ಲೂ ಉತ್ತರ ಕರ್ನಾಟಕ್ಕೆ ಅನ್ಯಾಯ ಮಾಡಲಾಗಿದೆ. ಅದ್ದರಿಂದ ಪ್ರತ್ಯೇಕ ರಾಜ್ಯ ರಚನೆ ಹೋರಾಟಕ್ಕಾಗಿ ಬೆಂಬಲ ಪಡೆಯಲು 13 ಜಿಲ್ಲೆಗಳದ್ಯಾಂತ ಸಂಚರಿಸಿ ಪ್ರತಿ ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳ ಬೆಂಬಲ ಪಡೆಯಲಾಗುವುದು. ಈ ಹೋರಾಟವನ್ನು ತೀವ್ರಗೊಳಿಸಲು ಆಗಸ್ಟ್ 2 ರಂದು ಬಂದ್ ಕರೆ ನೀಡಲಾಗಿದೆ ಎಂದು ಹೇಳಿದರು.

    ಸಿಎಂ ಕುಮಾರಸ್ವಾಮಿ ಕಳೆದ ಎರಡು ದಿನಗಳ ಹಿಂದೆ ಪ್ರತ್ಯೇಕ ಉತ್ತರ ಕರ್ನಾಟಕ ಸ್ಥಾಪನೆ ಕುರಿತು ನೀಡಿರುವ ಹೇಳಿಕೆ ಹೆಚ್ಚು ನೋವು ತಂದಿದೆ. ಪ್ರತ್ಯೇಕ ರಾಜ್ಯ ಸ್ಥಾಪನೆ ಮಾಡಿದರೆ ಮಾಡಿಕೊಳ್ಳಿ, ಅಭಿವೃದ್ಧಿಗೆ ಎಲ್ಲಿಂದ ಹಣ ತರುತ್ತಿರಾ ಎಂದು ಪ್ರಶ್ನೆ ಮಾಡಿದ್ದಾರೆ. ಸದ್ಯ ಸಿಎಂ ತಮ್ಮ ಮಾತಿಗೆ ಬದ್ಧರಾಗುವ ಮೂಲಕ ಸಂಪುಟದಲ್ಲಿ ಈ ಕುರಿತು ಚರ್ಚೆ ನಡೆಸಿ ಕೇಂದ್ರಕ್ಕೆ ಪ್ರತ್ಯೇಕ ರಾಜ್ಯ ಸ್ಥಾಪನೆ ಮಾಡಲು ಶಿಫಾರಸ್ಸು ಮಾಡಿ. ಈ ಕುರಿತು ಸಮೀಕ್ಷೆ ನಡೆಸಲು ಸಮಿತಿ ರಚನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    ರಾಜ್ಯ ಸರ್ಕಾರವನ್ನು ಅಭಿವೃದ್ಧಿ ಮಾಡಿ ಎಂದು ಮನವಿ ಮಾಡಿಕೊಳ್ಳುವುದು ಬೇಡ. ಕಳಸಾ ಬಂಡೂರಿ ಹೋರಾಟ ನಾವೇ ಮಾಡಿಕೊಳ್ಳುತ್ತೇವೆ. ಸದ್ಯ ಕರೆ ನೀಡಿರುವ ಬಂದ್ ಗೆ 13 ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ದಾವಣಗೆರೆ, ಉತ್ತರ ಕನ್ನಡ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ್, ಬಳ್ಳಾರಿ, ಗದಗ, ಹಾವೇರಿ, ಯಾದಗಿರಿ ಜಿಲ್ಲೆಗಳ ವಿವಿಧ ಮಠಾಧೀಶರು, ಸಾರ್ವಜನಿಕ ಸಂಘ ಸಂಸ್ಥೆಗಳು, ವರ್ತಕರ ಸಂಘ, ವಿದ್ಯಾರ್ಥಿ ಒಕ್ಕೂಟಗಳು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

    ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಸ್ಥಾಪನೆಗೆ ಬೇಕಾದ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಈಗಾಗಲೇ ಸುವರ್ಣಸೌಧ ನಿರ್ಮಾಣ ಮಾಡಲಾಗಿದ್ದು, ಹೈಕೋರ್ಟ್ ಪೀಠ ಸೇರದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ. ಪ್ರತ್ಯೇಕ ರಾಜ್ಯ ಸ್ಥಾಪನೆಗೆ ಅನುಮತಿ ನೀಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರವಿದೆ. ಅದ್ದರಿಂದ ರಾಜ್ಯ ಸರ್ಕಾರ ಕೇವಲ ಪ್ರಸ್ತಾವನೆ ಮಾಡಿದರೆ ಸಾಕು. ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದರು.

    ಇದೇ ವೇಳೆ ಸಂಪೂರ್ಣ ಸಾಲಮನ್ನಾ ಮಾಡದ ರಾಜ್ಯ ಸರ್ಕಾರ ವಿರುದ್ಧ ಕಿಡಿಕಾರಿದ ಹೋರಾಟಗಾರರು, ರೈತರ ಬಗ್ಗೆ ಸಿಎಂ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಹಲವು ರೈತ ಮಹಿಳೆಯರು ಸಹ ಸಾಲ ಮಾಡಿ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ತಮ್ಮ ಹೋರಾಟಕ್ಕೆ ಯಾವುದೇ ರಾಜಕೀಯ ಹೋರಾಟಗಾರರು ಬೆಂಬಲ ನೀಡಿ ಎಂದು ಬೇಡಿಕೆಯಿಟ್ಟಿಲ್ಲ, ಆದರೆ ಅವರು ನಮ್ಮೊಂದಿಗೆ ಹೋರಾಟಕ್ಕೆ ಬೆಂಬಲ ನೀಡಿದರೆ ಸ್ವಾಗತ ಎಂದು ಹೇಳಿದ್ದಾರೆ.

  • ಕಲಬೆರಕೆ ಸರ್ಕಾರದಿಂದ ರಾಜ್ಯದ ಜನ ಏನೂ ನಿರೀಕ್ಷಿಸಲೂ ಸಾಧ್ಯವಿಲ್ಲ – ಪ್ರಹ್ಲಾದ್ ಜೋಶಿ

    ಕಲಬೆರಕೆ ಸರ್ಕಾರದಿಂದ ರಾಜ್ಯದ ಜನ ಏನೂ ನಿರೀಕ್ಷಿಸಲೂ ಸಾಧ್ಯವಿಲ್ಲ – ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ: ರಾಜ್ಯದಲ್ಲಿರುವ ಕಲಬೆರಕೆ ಸರ್ಕಾರದಿಂದ ರಾಜ್ಯದ ಜನ ಏನೂ ನಿರೀಕ್ಷಿಸಲು ಸಾಧ್ಯವಿಲ್ಲ. ಈಗ ನಡೆಯುತ್ತಿರುವ ಬಜೆಟ್ ಮತ್ತು ಬಜೆಟ್ ಅಧಿವೇಶನ ರಾಜ್ಯದ ಜನರ ಮೇಲೆ ಒಳ್ಳೆಯ ಪರಿಣಾಮ ಬೀರುವುದಿಲ್ಲ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಸರ್ಕಾರ ರಚನೆಯಾಗಿ ಒಂದುವರೆ ತಿಂಗಳಾಗಿದ್ದು, ಬಜೆಟ್ ಮಂಡಿಸಬೇಕಾ, ಇಲ್ಲಾ ಮಂಡಿಸಬಾರದು ಎಂಬ ಸ್ಥಿತಿಯಲ್ಲಿದ್ದಾರೆ. ಇಲ್ಲಿಯವರೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗಿಲ್ಲ. ಪ್ರತಿಯೊಂದು ಜಿಲ್ಲೆಯಲ್ಲಿ ಆಡಳಿತ ಸಂಪೂರ್ಣ ವ್ಯವಸ್ಥೆ ನೆಲಕಚ್ಚಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಗಳು ಹುಟ್ಟುತ್ತಿವೆ. ಯಾವ ಜಿಲ್ಲೆಯನ್ನು ಯಾರಿಗೆ ಕೊಡಬೇಕು ಎಂಬುದಕ್ಕೆ ಜಗಳ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಬಜೆಟ್ ಅಧಿವೇಶನ ಅರ್ಥಹೀನ ಕಸರತ್ತು. ಅಕ್ಷರಶಃ ಸಿದ್ದರಾಮಯ್ಯನವರು ಈ ಬಜೆಟ್ ಗೆ ನಮ್ಮ ಬೆಂಬಲ ಇಲ್ಲ ಎಂದಿದ್ದಾರೆ. ಈ ಬಜೆಟ್ ಕೇವಲ 37 ಜನ ಶಾಸಕರ ಬಜೆಟ್ ಎಂದು ಹೇಳಿದ್ದ ಸಿದ್ದರಾಮಯ್ಯನವರು ನಾನು ಬಜೆಟ್ ಮಾಡಲು ವಿರೋಧ ಮಾಡಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ. ಆ ವೀಡಿಯೋ ತುಣುಕುಗಳನ್ನು ಯಾರೋ ಕಿಡಿಗೇಡಿಗಳು ಬಿಡುಗಡೆ ಮಾಡಿದ್ದಾರೆಂದು ಹೇಳಿದ್ದಾರೆ. ಅಂದರೆ ಸಿದ್ದರಾಮಯ್ಯ ಅವರು ಪ್ರತಿದಿನವೂ ಕಿಡಿಗೇಡಿಗಳನ್ನು ಭೇಟಿ ಮಾಡುತ್ತಿದ್ದರಾ? ಅಂದರೆ ಇವರನ್ನ ಭೇಟಿಯಾದ ಶಾಸಕರೆಲ್ಲರೂ ಕಿಡಿಗೇಡಿಗಳು ಎಂದರ್ಥವೇ ಎಂದು ಪ್ರಶ್ನಿಸಿ ವ್ಯಂಗ್ಯವಾಡಿದರು.

    ಸದ್ಯ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಒತ್ತಡದ ನಂತರ ಈ ರೀತಿ ಉಲ್ಟಾ ಹೊಡೆದಿದ್ದಾರೆ. ಈ ಸಮ್ಮಿಶ್ರ ಸರ್ಕಾರ ಆದಷ್ಟು ಬೇಗ ಹೋಗಬೇಕು. ಈ ಸರ್ಕಾರದಿಂದ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಈ ಬಜೆಟ್ ನಲ್ಲಿ ರೈತರ ಸಾಲವನ್ನ ಸಂಪೂರ್ಣ ಮನ್ನಾ ಮಾಡಬೇಕು. ತಮ್ಮ ಪ್ರಣಾಳಿಕೆಯಲ್ಲಿ ಕೊಟ್ಟಂತ ಮಾತನ್ನು ಉಳಿಸಿಕೊಳ್ಳಬೇಕು. ಒಂದು ವೇಳೆ ಮಾಡದೆ ಇದ್ದರೆ ಬಿಜೆಪಿ ರಾಜ್ಯವ್ಯಾಪಿ ಹೋರಾಟ ಮಾಡಲು ಸಿದ್ಧವಾಗಿದೆ ಎಂದರು.

    ಲೋಕಸಭಾ ಚುನಾವಣೆ ಅವಧಿಯಂತೆ ಏಪ್ರಿಲ್, ಮೇ ತಿಂಗಳಲ್ಲಿ ನಡೆಯುತ್ತದೆ. ಚುನಾವಣೆಗೆ ಬಿಜೆಪಿ ಎಲ್ಲಾ ರೀತಿಯ ಸಿದ್ಧವಾಗಿದೆ, ರಾಜ್ಯದಲ್ಲಿ 20 ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಗೆಲ್ಲುತ್ತದೆ. ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ವಿಶ್ವಾಸ ವ್ಯಕ್ತಪಡಿಸಿದರು.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ತಂಬಾಕು ಮಿಶ್ರಿತ ನೀರು ಕುಡಿಸಿ ತಿಂಗಳಿಗೆ ಲಕ್ಷಾಂತರ ಹಣ ಮಾಡ್ತಿದ್ದ ಫರೀದಾ ಪರಾರಿ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ತಂಬಾಕು ಮಿಶ್ರಿತ ನೀರು ಕುಡಿಸಿ ತಿಂಗಳಿಗೆ ಲಕ್ಷಾಂತರ ಹಣ ಮಾಡ್ತಿದ್ದ ಫರೀದಾ ಪರಾರಿ

    ಧಾರವಾಡ: ಅಮಾಯಕ ಜನರಿಗೆ ತಂಬಾಕು ಮಿಶ್ರಿತ ನೀರು ಕುಡಿಸಿ ಲಕ್ಷಾಂತರ ರೂಪಾಯಿ ಹಣ ಸಂಪಾದನೆ ಮಾಡುತ್ತಿದ್ದ ವಂಚಕಿ ಫರೀದಾ ಪಬ್ಲಿಕ್ ಟಿವಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಶೆಡ್ ಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾಳೆ.

    ಮೂಲತಃ ಹುಬ್ಬಳ್ಳಿಯ ನಿವಾಸಿಯಾಗಿರುವ ಫರೀದಾ ಧಾರವಾಡದ ಕುಂದಗೋಳ ಕ್ರಾಸ್ ಬಳಿ ದೆವ್ವ, ಪಿಶಾಚಿ ಬಿಡಿಸುತ್ತೇನೆ ಎಂದು ಲಕ್ಷಾಂತರ ರೂಪಾಯಿ ಹಣ ಸಂಪಾದನೆ ಮಾಡುತ್ತಿದ್ದಳು. ದೆವ್ವ, ಪೀಡೆ, ಭೂತ, ಪಿಶಾಚಿ ಹೀಗೆ ಯಾವುದೇ ದುಷ್ಟ ಶಕ್ತಿ ಇದ್ರೂ ದೂರ ಮಾಡ್ತೀವಿ ಅಂತಾ ಈಕೆ ನಂಬಿಕೆ ಹುಟ್ಟಿಸಿದ್ದಳು. ಕೇವಲ ಒಂದು ಗ್ಲಾಸ್ ನೀರು ಕುಡಿಸುವುದರ ದುಷ್ಟ ಶಕ್ತಿ ಸಂಹಾರ ಮಾಡುತ್ತೇನೆ ಎಂದು ಮಂಕುಬೂದಿ ಎರಚಿ ಚೆನ್ನಾಗಿ ದುಡ್ಡು ಮಾಡುತ್ತಿದ್ದಳು.

    ಕೇವಲ ಎರಡು ತಿಂಗಳಲ್ಲಿ ನಾಲ್ಕು ಅಥವಾ ಐದು ಬಾರಿ ತನ್ನ ಬಳಿಗೆ ಬರುವಂತೆ ಹೇಳಿ ಅವರಿಗೆ ನೀರು ಕುಡಿಸುತ್ತಿದ್ದಳು. ಈ ನೀರು ಕುಡಿದ ಕೆಲವೇ ಕೆಲವು ನಿಮಿಷಗಳಲ್ಲಿ ಜನರಿಗೆ ವಾಂತಿ ಆಗುತ್ತದೆ.  ಅದಕ್ಕೆ ಪೂರ್ವ ಸಿದ್ಧತೆಯಾಗಿ ಬಂದವರಿಗೆಲ್ಲ ಒಂದೊಂದು ಬಕೆಟ್‍ಗಳನ್ನು ರೆಡಿ ಮಾಡಿ ಇಟ್ಟಿರುತ್ತಿದ್ದಳು. ವಾಮಿಟ್ ಮಾಡಿದ್ರೆ ದೆವ್ವ ದೇಹ ಬಿಟ್ಟು ಹೋಗುತ್ತದೆ ಎಂದು ಫರೀದಾ ಹೇಳುತ್ತಿದ್ದಳು.

    ಹಸಿರು ಮಿಶ್ರಿತ ತಂಬಾಕು ನೀರು: ಫರೀದಾ ಬಳಿ ಬರೋ ಜನ 20 ರೂಪಾಯಿ ಕೊಟ್ಟು ಕೂಪನ್ ತೆಗೆದುಕೊಂಡು ನಿಲ್ಲಬೇಕು. ಆಮೇಲೆ 100 ರೂಪಾಯಿ ಕೊಟ್ಟು ಚೆಕ್ ಮಾಡಿಸಬೇಕು. ತನ್ನ ಬಳಿ ಬರೋ ಜನರ ಕಣ್ಣುಗಳನ್ನು ಚೆಕ್ ಮಾಡಿ, ನಂತರ ತಲೆ ಮೇಲೆ ಕೈ ಇಟ್ಟು ನೀರು ಕುಡಿಸುತ್ತಾಳೆ. ಈ ನೀರಿನಲ್ಲಿ ಹಸಿರು ತಂಬಾಕು ಮಿಕ್ಸ್ ಮಾಡಿರೋದ್ರಿಂದ ಸಹಜವಾಗಿ ಜನರಿಗೆ ವಾಮಿಟ್ ಆಗುತ್ತದೆ.

     

    ಇಂದು ಬೆಳಗ್ಗೆ ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಭಯಗೊಂಡ ಫರೀದಾ ಈಗ ನಾಪತ್ತೆಯಾಗಿದ್ದಾಳೆ. ಇನ್ನೂ ದಂಧೆ ನಡೆಸುತ್ತಿದ್ದ ಶೆಡ್‍ಗೆ ಬೀಗ ಹಾಕಲಾಗಿದೆ.

  • ಗಂಡನ ಬೈಕ್ ಕಳ್ಳತನವಾಗಿದ್ದಕ್ಕೆ ಮನನೊಂದು ಪತ್ನಿ ಆತ್ಮಹತ್ಯೆ

    ಗಂಡನ ಬೈಕ್ ಕಳ್ಳತನವಾಗಿದ್ದಕ್ಕೆ ಮನನೊಂದು ಪತ್ನಿ ಆತ್ಮಹತ್ಯೆ

    ಹುಬ್ಬಳ್ಳಿ: ಗಂಡನ ಬೈಕ್ ಕಳ್ಳತನವಾಗಿದ್ದಕ್ಕೆ ಮನನೊಂದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ರಾಯನಾಳ ಗ್ರಾಮದಲ್ಲಿ ನಡೆದಿದೆ.

    ಶಶಿಕಲಾ ಕಮ್ಮಾರ (28) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಶಶಿಕಲಾ ಪತಿ ಮಂಜುನಾಥ್ ಸೋಮವಾರ ಸಾಲ ಮಾಡಿ ಹೊಸ ಬೈಕ್ ಖರೀದಿ ಮಾಡಿದ್ದರು. ಹುಬ್ಬಳ್ಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಂಜುನಾಥ್ ಸೋಮವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಬರುವಾಗ ದುಷ್ಕರ್ಮಿಗಳು ಅಡ್ಡಗಟ್ಟಿ ಥಳಿಸಿ ಬೈಕ್ ಕದ್ದು ಪರಾರಿಯಾಗಿದ್ದರು.

    ಈ ಘಟನೆಯಿಂದ ಮನನೊಂದ ಪತ್ನಿ ಶಶಿಕಲಾ ಸಾಲಮಾಡಿ ತಂದ ಬೈಕ್ ಕಳ್ಳತನವಾಯಿತಲ್ಲ ಎಂದು ನೊಂದುಕೊಂಡಿದ್ದರು. ಬೈಕ್ ಕಳ್ಳತನವಾಗಿದೆ ಎಂದು ಪತಿ ಪೊಲೀಸರಿಗೆ ದೂರು ನೀಡಲು ಹೋದಾಗ ಮನೆಯಲ್ಲಿ ಪತ್ನಿ ಶಶಿಕಲಾ ನೇಣಿಗೆ ಶರಣಾಗಿರುವ ವಿಚಾರ ಬೆಳಕಿಗೆ ಬಂದಿದೆ.

    ಬೈಕ್ ಕಳೆದುಕೊಂಡ ಚಿಂತೆ ಒಂದೆಡೆಯಾದ್ರೆ, ಪತ್ನಿ ಆತ್ಮಹತ್ಯೆ ಮಾಡಿಕೊಂಡಳಲ್ಲ ಎಂಬ ದುಖಃದಲ್ಲಿ ಪತಿ ಮಂಜುನಾಥ್ ಅವರದ್ದಾಗಿದೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.