Tag: hubballi

  • ಕದನ ವಿರಾಮ ಉಲ್ಲಂಘನೆ: ಪಾಕ್‌ನ ಇಬ್ಬಗೆ ನೀತಿಗೆ ಭಾರತೀಯ ಸೇನೆ ಪ್ರತ್ಯುತ್ತರ – ಪ್ರಹ್ಲಾದ್ ಜೋಶಿ

    ಕದನ ವಿರಾಮ ಉಲ್ಲಂಘನೆ: ಪಾಕ್‌ನ ಇಬ್ಬಗೆ ನೀತಿಗೆ ಭಾರತೀಯ ಸೇನೆ ಪ್ರತ್ಯುತ್ತರ – ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ: ಕದನ ವಿರಾಮ ಘೋಷಣೆಯಾದ ಮೇಲೆಯೂ ಪಾಕಿಸ್ತಾನ ದಾಳಿ ಮುಂದುವರೆಸಿ ಇಬ್ಬಗೆ ನೀತಿ ಪ್ರದರ್ಶಿಸಿದ್ದು, ಭಾರತೀಯ ಸೇನೆ (Indian Army) ಇದಕ್ಕೆ ಪ್ರತ್ಯುತ್ತರ ಕೊಡುತ್ತದೆ. ಪಾಕ್ ವಿರುದ್ಧದ ದಾಳಿಗೆ ಕೇಂದ್ರ ಸರ್ಕಾರ ಸೇನೆಗೆ ಮುಕ್ತ ಅಧಿಕಾರ, ಸ್ವಾತಂತ್ರ‍್ಯ ನೀಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ತಿಳಿಸಿದರು.

    ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಯಾವತ್ತೂ ದ್ವಂದ್ವ ನಿಲುವು ಮತ್ತು ಇಬ್ಬಗೆ ನೀತಿ ಅನುಸರಿಸುವಲ್ಲಿ ಎತ್ತಿದ ಕೈ ಎಂಬುದು ಗೊತ್ತಿರುವ ವಿಷಯ. ಅಲ್ಲದೇ, ಅಲ್ಲಿನ ಮಿಲಿಟರಿ ಪಡೆ ಚುನಾಯಿತ ಸರ್ಕಾರದ ಮಾತು ಕೇಳುವುದಿಲ್ಲ ಎಂಬುದು ಈಗ ಮತ್ತೊಮ್ಮೆ ಸಾಬೀತಾಗಿದೆ ಎಂದು ಪ್ರತಿಕ್ರಿಯಿಸಿದರು.ಇದನ್ನೂ ಓದಿ:`ಆಪರೇಷನ್ ಸಿಂಧೂರ’ ಭಾರತದ ರಾಜಕೀಯ, ಸಾಮಾಜಿಕ, ಮಿಲಿಟರಿ ಶಕ್ತಿಯ ಬಲ – ರಾಜನಾಥ್ ಸಿಂಗ್

    ಪಹಲ್ಗಾಮ್ (Pahalgam) ಭಯೋತ್ಪಾದಕ ದಾಳಿಯ ನಂತರ ಗುಳ್ಳೇನರಿ ಬುದ್ಧಿಯ ಪಾಕಿಸ್ತಾನಕ್ಕೆ ಪಾಠ ಕಲಿಸಲು ಭಾರತೀಯ ಸೇನೆಗೆ ನಮ್ಮ ಸರ್ಕಾರ ಮುಕ್ತ ಅವಕಾಶ ನೀಡಿದೆ. ಅದರಂತೆ ಭಾರತೀಯ ಸೇನೆ ಪಾಕಿಸ್ತಾನಕ್ಕೆ ತೀಕ್ಷ್ಣ ಪ್ರತಿಕ್ರಿಯೆ, ಪ್ರತೀಕಾರದಲ್ಲಿ ತೊಡಗಿದೆ. ಬಹುದೊಡ್ಡ ಸಂಖ್ಯೆಯಲ್ಲಿ ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸಿದೆ. ಭಾರತೀಯ ಸೇನೆ ಮೊದಲ ದಿನವೇ ಪಾಕಿಸ್ತಾನದ 9ಕ್ಕಿಂತ ಹೆಚ್ಚು ಭಯೋತ್ಪಾದಕರ ನೆಲೆಗಳನ್ನು ನಾಶಪಡಿಸಿದೆ. ಈ ದಾಳಿಯಿಂದಾಗಿ ದೊಡ್ಡ ಸಂಖ್ಯೆಯಲ್ಲಿ ಭಯೋತ್ಪಾದಕರು ಮತ್ತು ಭಯೋತ್ಪಾದಕ ಕುಟುಂಬಗಳು ಬಲಿಯಾಗಿವೆ. ಸಾಕಷ್ಟು ಭಯೋತ್ಪಾದಕ ಅಡಗುತಾಣಗಳು ಛಿದ್ರವಾಗಿವೆ. ಪ್ರಮುಖ ಉಗ್ರರು ಹತರಾಗಿದ್ದಾರೆ ಎಂದು ತಿಳಿಸಿದರು.

    ಯುದ್ಧವಾಗಿ ಪರಿಗಣಿಸುವ ಕಠಿಣ ನಿಲುವು: ದೇಶದಲ್ಲಿ ಭಯೋತ್ಪಾದನೆ ಸಂಪೂರ್ಣ ನಿರ್ಮೂಲನೆಗೆ ಪಣ ತೊಟ್ಟ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಅತ್ಯಂತ ಕಠೋರ ನಿಲುವು ತೆಗೆದುಕೊಂಡಿದೆ. ಪಾಕ್ ಕದನ ವಿರಾಮಕ್ಕೂ ಮೊದಲೇ ಭಯೋತ್ಪಾದನೆಯನ್ನು ಯುದ್ಧವಾಗಿ ಪರಿಗಣಿಸುವಂತಹ ಅಭೂತಪೂರ್ವ ನಿರ್ಣಯ ಕೈಗೊಂಡಿದೆ ಎಂದು ಹೇಳಿದರು.

    ಕದನ ವಿರಾಮ ಪ್ರಸ್ತಾಪಿಸಿದ್ದ ಪಾಕ್: ಪಾಕಿಸ್ತಾನದ ಮಿಲಿಟರಿ ಪಡೆಗಳ ನಿರ್ದೇಶಕರು ಭಾರತದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಿಗೆ ಫೋನ್ ಮಾಡಿ ಕದನ ವಿರಾಮಕ್ಕೆ ವಿನಂತಿ ಮಾಡಿದ್ದರು. ಆದರೆ ಅದನ್ನು ಈಗ ಉಲ್ಲಂಘಿಸಿದ್ದಾರೆ. ಹೀಗಾಗಿ ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳನ್ನು ಪೋಷಿಸಿಕೊಂಡು ಬಂದ ಪಾಕ್‌ಗೆ ಭಾರತೀಯ ಸೇನೆ ಪ್ರತ್ಯುತ್ತರ ಕೊಡುತ್ತದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ದೇಶದಲ್ಲಿ ಭಯೋತ್ಪಾದನೆ ನಿಗ್ರಹಿಸಲಾಗಿದೆ. 1980ರ ನಂತರ ಪಹಲ್ಗಾಮ್‌ಗಿಂತ ದೊಡ್ಡ ಪ್ರಮಾಣದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಯುತ್ತಿದ್ದವು. ಆದರೆ, ಈಗ ಅಂಥದ್ದಕ್ಕೆಲ್ಲ ಕಡಿವಾಣ ಹಾಕಲಾಗಿದೆ. ಹಿಂದೆಲ್ಲಾ ದೊಡ್ಡ ಪ್ರಮಾಣದ ಭಯೋತ್ಪಾದನೆ ನಡೆದಾಗಲೂ ಸೌಮ್ಯ ಪ್ರತಿಕ್ರಿಯೆ ನೀಡುತ್ತಿದ್ದ ಭಾರತ ಇದೇ ಮೊದಲ ಬಾರಿ ಪಾಕ್‌ಗೆ ನುಗ್ಗಿ ಹೊಡೆಯುತ್ತಿದ್ದೇವೆ ಎಂದರು.

    ಇಡೀ ದೇಶ ಒಂದಾಗಿ ಹೋರಾಡುತ್ತಿದೆ: ಪಹಲ್ಗಾಮ್ ದಾಳಿಯ ನಂತರ ಇದೇ ಮೊದಲ ಬಾರಿ ಭಯೋತ್ಪಾದನೆ ವಿರುದ್ಧ ಇಡೀ ದೇಶವೇ ಒಂದಾಗಿ ಹೋರಾಡುತ್ತಿದೆ. ಭಾರತೀಯ ಸೇನೆ ಅತ್ಯಂತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಪ್ರತೀಕಾರದ ದಾಳಿಯಲ್ಲಿ ಕಂದಹಾರ ಪ್ರಕರಣದಲ್ಲಿದ್ದವರು ಮತ್ತು ಪ್ರಮುಖ ಉಗ್ರರು ಸೇರಿದಂತೆ ಅವರ ಕುಟುಂಬದವರು ಹತರಾಗಿದ್ದಾರೆ.

    ಭಾರತ ಶಾಂತಿಪ್ರಿಯ ರಾಷ್ಟ್ರ. ಭಾರತೀಯರು ಯಾವತ್ತೂ ಶಾಂತಿಪ್ರಿಯರೇ, ನಾವಾಗಿಯೇ ಯಾವತ್ತೂ ಯಾರ ಮೇಲೂ ದಂಡೆತ್ತಿ ಹೋಗುವುದಿಲ್ಲ. ಆದರೆ, ನಮ್ಮ ಮೇಲೆ ಯಾರಾದರೂ ಬಂದರೆ ಸುಮ್ಮನೆ ಬಿಡುವ ಮಾತೇ ಇಲ್ಲ. ಭಾರತ-ಭಾರತೀಯರಿಗೆ ಅಂತದ್ದೊAದು ಶಕ್ತಿಯಿದೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದರು.ಇದನ್ನೂ ಓದಿ: ಪಾಕ್‌ ಕದನ ವಿರಾಮ ಉಲ್ಲಂಘಿಸಿದ್ರೆ ಪ್ರತಿದಾಳಿ ನಡೆಸಿ – ಕಮಾಂಡರ್‌ಗಳಿಗೆ ಭಾರತೀಯ ಸೇನೆ ಪೂರ್ಣ ಅಧಿಕಾರ

  • ಹುಬ್ಬಳ್ಳಿ-ವಿಜಯಪುರ ರಾ.ಹೆದ್ದಾರಿಯಲ್ಲಿ ಭೀಕರ ಅಪಘಾತ – ಐವರು ದುರ್ಮರಣ

    ಹುಬ್ಬಳ್ಳಿ-ವಿಜಯಪುರ ರಾ.ಹೆದ್ದಾರಿಯಲ್ಲಿ ಭೀಕರ ಅಪಘಾತ – ಐವರು ದುರ್ಮರಣ

    ಹುಬ್ಬಳ್ಳಿ: ಲಾರಿ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಐವರು ಭೀಕರವಾಗಿ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ಇಂಗಳಹಳ್ಳಿ ಕ್ರಾಸ್ ಬಳಿ ನಡೆದಿದೆ.

    ಮೃತರನ್ನು ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ ಮೂಲದ ಶ್ವೇತ(29), ಅಂಜಲಿ(26), ಸಂದೀಪ್(26), ವಿಠಲ್(55) ಶಶಿಕಲಾ(40) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಇಂದು ಮಳೆ ಮುನ್ಸೂಚನೆ

    ಮೃತ ಐವರು ಹೋಟೆಲ್ ವ್ಯಾಪಾರಕ್ಕೆಂದು ಬಾಗಲಕೋಟೆಗೆ (Bagalkote) ತೆರಳುತ್ತಿದ್ದರು. ಈ ವೇಳೆ ಕುಸುಗಲ್ ಗ್ರಾಮದ ಇಂಗಳಹಳ್ಳಿ ಕ್ರಾಸ್ ಬಳಿ ಕಾರು ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿವೆ. ಡಿಕ್ಕಿ ಹೊಡೆದ ರಭಸಕ್ಕೆ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

    ಸದ್ಯ ಸ್ಥಳಕ್ಕೆ ಹುಬ್ಬಳ್ಳಿ (Hubballi) ಗ್ರಾಮೀಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ: ಕಾಶ್ಮೀರದಲ್ಲಿ ಮದ್ದುಗುಂಡುಗಳ ಸಹಿತ ಇಬ್ಬರು ಉಗ್ರರು ಅರೆಸ್ಟ್‌

  • ಸಿನಿಮಾ ಭರಾಟೆಲಿ ತೊಗಲು ಬೊಂಬೆ ಕಲೆ ನಶಿಸಿ ಹೋಗುತ್ತಿದೆ: ಪದ್ಮಶ್ರೀ ವಿಜೇತೆ ಭೀಮವ್ವ

    ಸಿನಿಮಾ ಭರಾಟೆಲಿ ತೊಗಲು ಬೊಂಬೆ ಕಲೆ ನಶಿಸಿ ಹೋಗುತ್ತಿದೆ: ಪದ್ಮಶ್ರೀ ವಿಜೇತೆ ಭೀಮವ್ವ

    – ಈ ವಯಸ್ಸಿನಲ್ಲಿ ಕಲೆ ಗುರುತಿಸಿ ಪುರಸ್ಕಾರ ಮಾಡಿದ ಮೋದಿ ಸರ್ಕಾರಕ್ಕೆ ಧನ್ಯವಾದ

    ಹುಬ್ಬಳ್ಳಿ: ಸಿನಿಮಾ ಭರಾಟೆಯಲ್ಲಿ ತೊಗಲು ಬೊಂಬೆ ಕಲೆಯು ನಶಿಸಿ ಹೋಗುತ್ತಿದೆ. ಆದರೆ ಈ ಕಲೆ ಉಳಿಯಬೇಕು ಎಂದು ಪದ್ಮಶ್ರೀ ಪ್ರಶಸ್ತಿ ವಿಜೇತೆ ಭೀಮವ್ವ (Bhimavva) ಹೇಳಿದರು.

    ಹುಬ್ಬಳ್ಳಿ (Hubballi) ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ಜನಾಂಗಕ್ಕೆ, ಮಕ್ಕಳಿಗೆ, ಮೊಮ್ಮಕ್ಕಳಿಗೆ ಈ ತೊಗಲು ಗೊಂಬೆ (Togalu Gombe) ಕಲೆಯನ್ನು ಕಲಿಸುತ್ತೇನೆ. ಈ ವಯಸ್ಸಿನಲ್ಲಿ ಕಲೆ ಗುರುತಿಸಿ ಪುರಸ್ಕಾರ ಮಾಡಿದ ಮೋದಿ ಸರ್ಕಾರಕ್ಕೆ ಧನ್ಯವಾದಗಳು. ನನಗೆ ಬಹಳಷ್ಟು ಸಂತೋಷವಾಗಿದೆ. ದೇಶ, ವಿದೇಶದಲ್ಲಿ ಕಲೆ ಪ್ರದರ್ಶನ ಮಾಡಿದ್ದೇನೆ. ಇನ್ನೂ ಮುಂದೆ ಕಲೆ ಉಳಿಸುವ ಕಾರ್ಯ ಮಾಡುವೆ ಎಂದರು. ಇದನ್ನೂ ಓದಿ: ನಿಮ್ಗೆ ಹುಚ್ಚು ಹಿಡಿದಿದ್ಯಾ? – ಪಾಕಿಸ್ತಾನದಲ್ಲಿ ಈಗ ಸೇನೆ Vs ಪೊಲೀಸ್‌ ಕಿತ್ತಾಟ

    ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ (Padma Shri award) ಪಡೆದಿರುವ ಕೊಪ್ಪಳ ಜಿಲ್ಲೆಯ ಭೀಮವ್ವ ಅವರು ದೆಹಲಿಯಿಂದ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ್ದರು. ಬಳಿಕ ಹುಬ್ಬಳ್ಳಿಯಿಂದ ಕುಟುಂಬಸ್ಥರ ಜೊತೆಗೆ ಸ್ವಗ್ರಾಮಕ್ಕೆ ತೆರಳಿದರು.

  • ಪಾಲಿಕೆಯ ಕಸದ ಲಾರಿ ಹರಿದು ಬಾಲಕಿ ಸಾವು

    ಪಾಲಿಕೆಯ ಕಸದ ಲಾರಿ ಹರಿದು ಬಾಲಕಿ ಸಾವು

    ಹುಬ್ಬಳ್ಳಿ: ಮಹಾನಗರ ಪಾಲಿಕೆ ಟಿಪ್ಪರ್ ಹರಿದು ಬಾಲಕಿ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ (Hubballi) ಸೋನಿಯಾಗಾಂಧಿ ನಗರದಲ್ಲಿ ನಡೆದಿದೆ.

    ಹಮೀದಾಬಾನು ಕಬಾಡೆ (06) ಮೃತ ಬಾಲಕಿ. ರಸ್ತೆ ಪಕ್ಕದಲ್ಲೇ ಇದ್ದ ಬಾಲಕಿಯ ಮೇಲೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ತ್ಯಾಜ್ಯ ವಿಲೇವಾರಿ ಟಿಪ್ಪರ್ ಹರಿದು ಹಮೀದಾಬಾನು ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಮನೆ ಮಾಲೀಕನ ಪತ್ನಿಯನ್ನೇ ಲವ್ ಮಾಡಿ ಮದುವೆಯಾಗಿದ್ದ ವ್ಯಕ್ತಿಯ ಬರ್ಬರ ಹತ್ಯೆ!

    ಟಿಪ್ಪರ್ ಚಾಲಕನ ನಿರ್ಲಕ್ಷ್ಯಕ್ಕೆ ಹಮೀದಾಬಾನು ಮೃತಪಟ್ಟಿದ್ದಾಳೆ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪಾಕಿಸ್ತಾನ ಅವನತಿ ಆರಂಭವಾಗಿದೆ – ಜಗದೀಶ್ ಶೆಟ್ಟರ್ ಎಚ್ಚರಿಕೆ

    ಪಾಕಿಸ್ತಾನ ಅವನತಿ ಆರಂಭವಾಗಿದೆ – ಜಗದೀಶ್ ಶೆಟ್ಟರ್ ಎಚ್ಚರಿಕೆ

    ಹುಬ್ಬಳ್ಳಿ: ಪಾಕಿಸ್ತಾನ (Pakistan) ಪ್ರೋತ್ಸಾಹಿತ ಉಗ್ರಗಾಮಿಗಳು ಕಾಶ್ಮೀರದಲ್ಲಿನ ಪ್ರವಾಸಿಗರ ಮೇಲೆ ದಾಳಿ ಮಾಡಿದ್ದಾರೆ. ಈ ಮೂಲಕ ದೇಶದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ (Jagadish Shettar) ಆಕ್ರೋಶ ಹೊರಹಾಕಿದ್ದಾರೆ.

    ಪಹಲ್ಗಾಮ್ ದಾಳಿಯ (Pahalgam Attack) ಕುರಿತು ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚಿನ ದಿನದಲ್ಲಿ ಶಾಂತಿ ನೆಲೆಸಿತ್ತು. ಪ್ರಧಾನಿ ಮೋದಿ, ಅಮಿತ್ ಶಾ ಅವರು ಕೈಗೊಂಡ ಕ್ರಮಗಳಿಂದ ಶಾಂತಿ ನೆಲೆಸಿತ್ತು. ಹೀಗಾಗಿ ಹೆಚ್ಚಿನ ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಲು ಆರಂಭ ಮಾಡಿದ್ದರು ಎಂದಿದ್ದಾರೆ. ಇದನ್ನೂ ಓದಿ: ಇಂದು ಮನೆಗೆ ಮರಳಬೇಕಿದ್ದ ಉದ್ಯಮಿ ಉಗ್ರರ ಗುಂಡಿಗೆ ಬಲಿ – ಇಡೀ ಗ್ರಾಮದಲ್ಲಿ ಮಡುಗಟ್ಟಿದ ಮೌನ

    ದೇಶದ ಜನತೆ ಕಾಶ್ಮೀರದಲ್ಲಿ (Kashmir) ಶಾಂತಿ ನೆಲೆಸಬೇಕು ಅನ್ನೋ ಇಚ್ಛೆ ಹೊಂದಿದ್ದಾರೆ. ಮೃತ ಕುಟುಂಬದ ಜೊತೆಗೆ ದೇಶ, ಭಾರತ ಸರ್ಕಾರವಿದೆ. ಉಗ್ರಗಾಮಿಗಳ ಹತ್ಯೆಯಾಗುತ್ತದೆ. ಭಾರತ ದೇಶ ಜಗತ್ತಿನಲ್ಲಿ ಪ್ರಬಲವಾಗಿ ಬೆಳೆಯುತ್ತಿದೆ. ಅದನ್ನು ಸಹಿಸಲು ಪಾಕಿಸ್ತಾನಕ್ಕೆ ಆಗುತ್ತಿಲ್ಲ. ಪಾಕಿಸ್ತಾನ ಅವನತಿ ಆರಂಭವಾಗಿದೆ. ಹಿಂದೂಗಳನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡಿದ್ದಾರೆ. ಮೋದಿ ಅವರು ಬಲಾಢ್ಯ ರಾಷ್ಟ್ರ ಕಟ್ಟುತ್ತಿದ್ದಾರೆ. ಮೋದಿ ಅವರು ಆದಷ್ಟು ಬೇಗ ಇದಕ್ಕೆ ತಕ್ಕ ಉತ್ತರ ಕೊಡುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇದು ರಾಜಕೀಯ ಮಾಡುವ ಸಮಯವಲ್ಲ, ಅಮಾಯಕರಿಗೆ ನ್ಯಾಯ ಕೊಡಿಸುವ ಸಮಯ: ಮಲ್ಲಿಕಾರ್ಜುನ ಖರ್ಗೆ

    ಭದ್ರತಾ ವ್ಯವಸ್ಥೆ ಸರಿಯಿದೆ ಎಂದು ಪ್ರವಾಸಿಗರೇ ಹೇಳಿದ್ದಾರೆ. ಆದರೂ ಈ ಘಟನೆ ನಡೆದಿದೆ. ಯಾವ ಸರ್ಕಾರ ಬಂದಾಗ ಕೂಡಾ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಇರಲಿಲ್ಲ. ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಅಲ್ಲಿ ಶಾಂತಿ ನೆಲೆಸಿತ್ತು. ಉಗ್ರಗಾಮಿಗಳನ್ನು ನಾಶ ಮಾಡಬೇಕು. ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಯನ್ನು ನಾಶ ಮಾಡಬೇಕು ಎಂದು ಕಿಡಿಕಾರಿದ್ದಾರೆ.

  • ಹಿಂದೂ ಮಹಾಸಾಗರ, ಬಂಗಾಳಕೊಲ್ಲಿ ಸಮುದ್ರದಲ್ಲಿ 28 ಕಿ.ಮೀ ಈಜಿ ಹುಬ್ಬಳ್ಳಿ ಇನ್ಸ್ಪೆಕ್ಟರ್ ಸಾಧನೆ

    ಹಿಂದೂ ಮಹಾಸಾಗರ, ಬಂಗಾಳಕೊಲ್ಲಿ ಸಮುದ್ರದಲ್ಲಿ 28 ಕಿ.ಮೀ ಈಜಿ ಹುಬ್ಬಳ್ಳಿ ಇನ್ಸ್ಪೆಕ್ಟರ್ ಸಾಧನೆ

    ಹುಬ್ಬಳ್ಳಿ: ಹಿಂದೂ ಮಹಾಸಾಗರ (Indian Ocean) ಹಾಗೂ ಬಂಗಾಳಕೊಲ್ಲಿಯಲ್ಲಿ (Bay of Bengal) 28 ಕಿ.ಮೀ ಈಜಿ ಹುಬ್ಬಳ್ಳಿ ಇನ್ಸ್ಪೆಕ್ಟರ್ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಹುಬ್ಬಳ್ಳಿ (Hubballi) ಗ್ರಾಮೀಣ ಇನ್ಸ್ಪೆಕ್ಟರ್ ಮುರುಗೇಶ್ ಚೆನ್ನಣ್ಣ ಅವರು ಶ್ರೀಲಂಕಾದ ರಾಮಸೇತುಯಿಂದ ಭಾರತದ ಧನುಷ್ ಕೋಡಿವರೆಗೆ ಸ್ವಿಮ್ಮಿಂಗ್ ರಿಲೇ ಮಾಡಿದ್ದಾರೆ.

    ಭೀಕರ ಸಮುದ್ರದಲೆಗಳನ್ನು ಲೆಕ್ಕಿಸಿದೇ ಕೇವಲ 8 ಗಂಟೆ 30 ನಿಮಿಷದಲ್ಲಿ 28 ಕಿ.ಮೀ ಈಜಿದ ಇನ್ಸ್ಪೆಕ್ಟರ್ ಮುರುಗೇಶ್ ಚನ್ನಣ್ಣ ಮತ್ತು ಅವರ 8 ಜನರ ತಂಡ ಈ ಸಾಧನೆ ಮಾಡಿದೆ. ಉತ್ತರಪ್ರದೇಶ ಮತ್ತು ಹರಿಯಾಣದ ಇಬ್ಬರು ಐಎಎಸ್ ಅಧಿಕಾರಿಗಳು, ಪಶ್ಚಿಮ ಬಂಗಾಳ ಮತ್ತು ಹರಿಯಾಣದ ಅಂಗವಿಕಲ ಕ್ರೀಡಾಪಟುಗಳು, ಹುಬ್ಬಳ್ಳಿ ಕಿಮ್ಸ್‌ನ ಎಂಬಿಬಿಎಸ್ ವಿದ್ಯಾರ್ಥಿನಿ ಅಮನ ಶಾನ್‌ಭಾಗ್ ಈ ಸಾಧನೆ ಮಾಡಿದ್ದಾರೆ. ಫಿಟ್ ಇಂಡಿಯಾ ಮತ್ತು ಭಾರತ ಸ್ವಿಮ್ಮಿಂಗ್ ಫೆಡರೇಷನ್ ನೇತೃತ್ವದಲ್ಲಿ ಸ್ವಿಮ್ಮಿಂಗ್ ರಿಲೇ ನಡೆದಿತ್ತು. ಇದನ್ನೂ ಓದಿ: ಪ್ರಣಿತಾ ಮಗನ ನಾಮಕರಣದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

    ಇನ್ನೂ ಜೂನ್ ತಿಂಗಳಲ್ಲಿ ಈ ತಂಡವು ಅತ್ಯಂತ ಅಪಾಯಕಾರಿಯಾಗಿರುವ ಇಂಗ್ಲಿಷ್ ಕಾಲುವೆಯಲ್ಲಿ ಈಜಲು ಸಿದ್ಧವಾಗಿದೆ. ಇಂಗ್ಲೆಂಡ್ ಮತ್ತು ಫ್ರಾನ್ಸ್ ಮಧ್ಯದಲ್ಲಿರುವ 36 ಕಿ.ಮೀ ಇಂಗ್ಲಿಷ್ ಕಾಲುವೆಯಲ್ಲಿ ಈಜಿ ಮತ್ತೊಂದು ಮೈಲಿಗಲ್ಲು ಸಾಧಿಸಲು ಸಜ್ಜಾಗಿದೆ. ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿರುವ ಇನ್ಸ್ಪೆಕ್ಟರ್ ಮುರುಗೇಶ್ ಚೆನ್ನಣ್ಣ ಅವರ ಸಾಧನೆಯು ಎಲ್ಲರ ಮೆಚ್ಚುಗೆಗಳಿಸಿದೆ.

  • ಜನಿವಾರ ತೆಗೆಸಿರುವುದು ಜನರ ನಂಬಿಕೆ ಮೇಲೆ ಪ್ರಹಾರ: ಪ್ರಹ್ಲಾದ್ ಜೋಶಿ

    ಜನಿವಾರ ತೆಗೆಸಿರುವುದು ಜನರ ನಂಬಿಕೆ ಮೇಲೆ ಪ್ರಹಾರ: ಪ್ರಹ್ಲಾದ್ ಜೋಶಿ

    – ಸರ್ಕಾರ ಸ್ಪಷ್ಟ ಮಾರ್ಗಸೂಚಿ ತರಲಿ; ಕೇಂದ್ರ ಸಚಿವ ಆಗ್ರಹ

    ಹುಬ್ಬಳ್ಳಿ: ಸಿಇಟಿ ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿ ಜನಿವಾರ ತೆಗೆಸಿರುವುದು ಜನರ ನಂಬಿಕೆ ಮೇಲೆ ಪ್ರಹಾರ ನಡೆಸಿದಂತೆ ಆಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Prahlad Joshi) ಖಂಡಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮದೊಂದಿಗೆ ಮಾತನಾಡಿ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ಕಾರ ಹೋಂಗಾರ್ಡ್ನನ್ನು ಅಮಾನತ್ತು ಮಾಡಿ ಕೈ ತೊಳೆದುಕೊಂಡಿದ್ದು, ಇದು ಸರಿಯಲ್ಲ. ಕೇವಲ ಬ್ರಾಹ್ಮಣರಷ್ಟೇ ಜನಿವಾರ ಹಾಕುವುದಿಲ್ಲ. ಇದೊಂದು ಧಾರ್ಮಿಕ ನಂಬಿಕೆಯಾಗಿದ್ದು, ಇದರ ಮೇಲೆ ಪ್ರಹಾರ ನಡೆಸಿದೆ. ಇದನ್ನ ಗಂಭೀರವಾಗಿ ಪರಿಗಣಿಸಿ ಸರ್ಕಾರ ಇದಕ್ಕೊಂದು ಸ್ಪಷ್ಟ ಮಾರ್ಗಸೂಚಿ ಹೊರಡಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಮರಾಠಿ ಜನರ ಹಿತಾಸಕ್ತಿಗಾಗಿ ಭಿನ್ನಾಭಿಪ್ರಾಯ ಬದಿಗಿಡಲು ಸಿದ್ಧ – ಮೈತ್ರಿ ಸುಳಿವು ನೀಡಿದ ಉದ್ಧವ್, ರಾಜ್ ಠಾಕ್ರೆ ಸಹೋದರರು

    ವಿವಾದ ಮರೆಮಾಚಲು ಯತ್ನ:
    ರಾಜ್ಯದಲ್ಲಿ ಶುರುವಾದ ಜಾತಿಗಣತಿ ವಿವಾದ, ಆಡಳಿತ ವೈಫಲ್ಯ ಮರೆಮಾಚಲು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರ ಏನಾದರೊಂದು ವಿಷಯಾಂತರ ಮಾಡುತ್ತಲೇ ಇರುತ್ತದೆ ಎಂದು ಟೀಕಿಸಿದರು. ಇದನ್ನೂ ಓದಿ: ಇಬ್ರು ಹುಡ್ಗೀರು ನನ್ನ ಮಗಳ ಜೀವನ ಸರಿ ಮಾಡಿದ್ದಾರೆ: ವೈಷ್ಣವಿ ಗೌಡ ತಾಯಿ

    `ರೋಹಿತ್ ವೇಮುಲಾ ಕಾಯ್ದೆ ಜಾರಿ’ ಕುರಿತು ಪ್ರತಿಕ್ರಿಯಿಸಿ ಕಾಂಗ್ರೆಸ್ ವಿವಾದ ಮೈಮೇಲೆ ಎಳೆದುಕೊಂಡಾಗ ಹೀಗೆ ಜನರ ಗಮನ ಬೇರೆಡೆ ಸೆಳೆಯುವುದು ಹೊಸದೇನಲ್ಲ ಎಂದು ಹೇಳಿದರು.

    ಯಾರ ಮನೆಗೆ ಭೇಟಿ ನೀಡಿದ್ದಾರೆ?
    ಜಾತಿಗಣತಿ ಎಂದು ಯಾರ ಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡಿದ್ದಾರೆ?. ವಿವಾದ, ವಿರೋಧ ವ್ಯಕ್ತವಾಗುತ್ತಲೇ `ಇದು ಜಾತಿ ಗಣತಿಯಲ್ಲ ಆರ್ಥಿಕ ಸಮೀಕ್ಷೆ’ ಎಂದರು. ಇದೆಂಥಾ ಹುಡುಗಾಟ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಸಿದ್ದರಾಮಯ್ಯ ಅವಧಿಯಲ್ಲಿ ಬ್ರಾಹ್ಮಣರು ಸಾಫ್ಟ್‌ ಟಾರ್ಗೆಟ್‌: ಪ್ರತಾಪ್‌ ಸಿಂಹ

    ನೈಜ ಕಾಳಜಿಯಿಲ್ಲ:
    ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ (Congress) ನಾಯಕರಿಗೆ ದೇಶದ ಬಗ್ಗೆ ನೈಜ ಕಾಳಜಿಯಿಲ್ಲ. ರಾಷ್ಟ್ರದ ಸಮಗ್ರತೆ, ನಾಗರಿಕರ ಕ್ಷೇಮ ಯಾವುದರ ಬಗ್ಗೆಯೂ ಒಂದು ಪ್ರಾಮಾಣಿಕ ಮತ್ತು ಪಾರದರ್ಶಕ ನಿಲುವುಗಳಿಲ್ಲ. ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಾರಷ್ಟೇ ಎಂದು ಆರೋಪಿಸಿದರು. ಇದನ್ನೂ ಓದಿ: ಸಾಮಾನ್ಯ ಸಿಬ್ಬಂದಿ ಈ ರೀತಿ ಮಾಡಲು ಸಾಧ್ಯವೇ?: ಜನಿವಾರ ವಿವಾದಕ್ಕೆ ಸರ್ಕಾರದ ವಿರುದ್ಧ ಕೋಟ ಕಿಡಿ

    24/7 ವೋಟ್ ಬ್ಯಾಂಕ್ ರಾಜಕಾರಣ:
    ರಾಹುಲ್ ಗಾಂಧಿ ದೇಶದೊಳಿತಿಗೆ ರಾಜಕೀಯ ಮಾಡುತ್ತಿಲ್ಲ. 24/7 ವೋಟ್ ಬ್ಯಾಂಕ್ ರಾಜಕೀಯದ ಮೇಲೆ ಮಾತ್ರ ಗಮನಹರಿಸಿದ್ದಾರೆ. ರಾಜ್ಯದಲ್ಲಿ `ರೋಹಿತ್ ವೇಮುಲಾ ಕಾಯ್ದೆ’ ಜಾರಿಗೆ ತರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದೂ ಇದರ ಒಂದು ಭಾಗ ಎಂದು ಟೀಕಿಸಿದರು.

  • 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಕೇಸ್‌ – ಗುಂಡೇಟಿಗೆ ಬಲಿಯಾದ ಆರೋಪಿ ಫೋಟೊ ರಿಲೀಸ್‌

    5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಕೇಸ್‌ – ಗುಂಡೇಟಿಗೆ ಬಲಿಯಾದ ಆರೋಪಿ ಫೋಟೊ ರಿಲೀಸ್‌

    – ಶವಾಗಾರದಲ್ಲಿ ಅನಾಥವಾಗಿ ಬಿದ್ದಿರುವ ಹಂತಕನ ಶವ; ಕುಟುಂಬಸ್ಥರ ಪತ್ತೆಗೆ ಮುಂದಾದ ಪೊಲೀಸರು

    ಹುಬ್ಬಳ್ಳಿ: ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಗುಂಡೇಟಿಗೆ ಬಲಿಯಾದ ಹಂತಕನ ಫೋಟೊವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

    ಎನ್‌ಕೌಂಟರ್‌ಗೆ ಬಲಿಯಾದ ರಿತೇಶ್‌ ಕುಮಾರ್‌ (35) ಭಾವಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಶವಗಾರದಲ್ಲಿ ಹಂತಕನ ಶವ ಅನಾಥವಾಗಿ ಬಿದ್ದಿದೆ. ಕುಟುಂಬಸ್ಥರ ಪತ್ತೆಗೆ ಹುಬ್ಬಳ್ಳಿಯ ಅಶೋಕನಗರ ಪೊಲೀಸ್‌ ಠಾಣೆಯು ಭಾವಚಿತ್ರ ಸಹಿತ ಪ್ರಕಟಣೆ ಹೊರಡಿಸಿದೆ. ಇದನ್ನೂ ಓದಿ: ಹುಬ್ಬಳ್ಳಿ ಬಾಲಕಿ ಕೊಲೆ ಕೇಸ್ – ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ನಡೆಸಿರೋ ಬಗ್ಗೆ ಸಾಕ್ಷ್ಯ ಲಭ್ಯ, ಪೋಕ್ಸೋ ಕೇಸ್ ದಾಖಲು

    ಈತ ಗೋದಿ ಮೈಬಣ್ಣ, ತೆಳ್ಳನೆಯ ಮೈಕಟ್ಟು, ಕೋಲು ಮುಖ, 5.3 ಎತ್ತರ, ಅಗಲ ಹಣೆ ಹೊಂದಿದ್ದಾನೆ. ಅಲ್ಲದೇ, ಈತನ ಬಲಗೈಯಲ್ಲಿ ಹಿಂದಿ ಅಕ್ಷರದಲ್ಲಿ ‘ಓಂ ನಮಃ ಶಿವಾಯ ಜಯ ಸಂಜಯ’ ಎಂಬ ಟ್ಯಾಟು ಗುರುತು ಸಹ ಇದೆ. ಈತನ ಗುರುತು ಪರಿಚಯ ಇದ್ದವರು ಕೂಡಲೇ 0836-2233490 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಲಾಗಿದೆ.

    ಕೆಲ ದಿನಗಳ ಹಿಂದಷ್ಟೆ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ನಡೆದಿತ್ತು. ಪ್ರಕರಣ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಆರೋಪಿಯನ್ನು ಬಂಧಿಸುವ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದರು. ಪೊಲೀಸರ ಗುಂಡೇಟಿಗೆ ಹಂತಕ ರಿತೇಶ್‌ ಕುಮಾರ್‌ ಬಲಿಯಾಗಿದ್ದ. ಇದನ್ನೂ ಓದಿ: ಹುಬ್ಬಳ್ಳಿ | ಬಾಲಕಿ ಕೊಲೆ ಕೇಸ್ – ಆರೋಪಿಗೆ ಗುಂಡಿಟ್ಟ `ಲೇಡಿ ಸಿಂಗಂ’ಗೆ ಮುಂದಿನ ತಿಂಗಳಲ್ಲೇ ಮದುವೆ!

  • ಮುಸ್ಲಿಂ ಸಮುದಾಯದ ಜಾತಿಗಳನ್ನು ಒಂದು ಮಾಡಿ ಮುಸ್ಲಿಮರೇ ಹೆಚ್ಚು ಅಂತ ಬಿಂಬಿಸಿದ್ದಾರೆ: ಛಲವಾದಿ ನಾರಾಯಣಸ್ವಾಮಿ

    ಮುಸ್ಲಿಂ ಸಮುದಾಯದ ಜಾತಿಗಳನ್ನು ಒಂದು ಮಾಡಿ ಮುಸ್ಲಿಮರೇ ಹೆಚ್ಚು ಅಂತ ಬಿಂಬಿಸಿದ್ದಾರೆ: ಛಲವಾದಿ ನಾರಾಯಣಸ್ವಾಮಿ

    ಹುಬ್ಬಳ್ಳಿ: ಮುಸ್ಲಿಂ ಸಮುದಾಯದಲ್ಲಿ ಅನೇಕ ಜಾತಿಗಳಿವೆ. ಅದರಲ್ಲಿ ಎಲ್ಲರನ್ನೂ ಒಂದು ಮಾಡಿ ಮುಸ್ಲಿಮರನ್ನು ಅತಿ ಹೆಚ್ಚು ಎಂದು ಬಿಂಬಿಸಿದ್ದಾರೆಂದು ಜಾತಿಗಣತಿ ವಿರುದ್ಧ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಿಡಿಕಾರಿದ್ದಾರೆ.

    ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಷ್ಟು ದಿನ ಯಾರು ಅಲ್ಪಸಂಖ್ಯಾತರು ಇದ್ದರು, ಈಗ ಅವರು ಬಹುಸಂಖ್ಯಾತರು ಆಗಿದ್ದಾರೆ. ಹಾಗಿದ್ದರೆ ಅವರಿಗೆ ಅಲ್ಪಸಂಖ್ಯಾತ ಸೌಲಭ್ಯ ಯಾಕೆ? ಕಾಂಗ್ರೆಸ್ ಮಾಡುತ್ತಿರುವುದು ಮುಸ್ಲಿಮರಿಗೆ ಯಾವುದೂ ಉಪಯೋಗಕ್ಕೆ ಬರೋದಿಲ್ಲಾ. ಮುಸ್ಲಿಮರನ್ನು ಅತಿ ಹೆಚ್ಚು ಅಂತ ತೋರಿಸಿ ಅವರಿಗೆ ಇತರರ ಕೆಂಗಣ್ಣಿಗೆ ಗುರಿ ಮಾಡಿದ್ದೀರಿ. ಇದು ಅಲ್ಪಾಯುಶಿ ಸರ್ಕಾರ, ಈ ಸರ್ಕಾರ‌ ಯಾವತ್ತಾದ್ರೂ ಹೋಗಬಹುದು ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಜಾತಿ ಸಂಖ್ಯೆ ಕಡಿಮೆ ಆಯ್ತು ಅಂತಾ ಮಂಗ್ಯಾಗಳ ತರ ಕಿತ್ತಾಡಬೇಡಿ – ಪ್ರತಾಪ್ ಸಿಂಹ

    ರಾಜ್ಯದಲ್ಲಿ ಜನಾಕ್ರೋಶ ಆರಂಭವಾಗಿ, ಅಭಿವೃದ್ಧಿ ಶೂನ್ಯವಾಗಿದೆ. ಐದು ವರ್ಷ ಆಡಳಿತ ಮುಗಿಸಿದ್ರೆ ಸಾಕು ಎನ್ನುವ ಸ್ಥಿತಿಗೆ ಸರ್ಕಾರ‌ ಬಂದು ತಲುಪಿದೆ. ಇಡೀ ರಾಜ್ಯದಲ್ಲಿ ಗೊಂದಲದಲ್ಲಿದೆ. ಹೀಗಾಗಿ ನಮ್ಮ ಪಕ್ಷ ಜನಾಕ್ರೋಶ ಯಾತ್ರೆ ಕೈಗೊಂಡಿದೆ. ನಾಳೆ ಬೆಳಗಾವಿಯಿಂದ ಎರಡನೇ ಸುತ್ತಿನ ಯಾತ್ರೆ ಆರಂಭವಾಗುತ್ತಿದೆ ಎಂದು ತಿಳಿಸಿದ್ದಾರೆ.

    ಕಾಂಗ್ರೆಸ್ ದೊಡ್ಡ ಗೊಂದಲದ ಗೂಡಾಗಿದೆ. ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಗೌರವದ ಬದಲು ಅಪಮಾನ ಮಾಡುತ್ತಿದೆ. ಬೆಳಗಾವಿ ಗಾಂಧೀಜಿ ಬಂದು ನೂರು ವರ್ಷವಾದ ಹಿನ್ನೆಲೆ ದೊಡ್ಡ ಕಾರ್ಯಕ್ರಮ ಮಾಡಿತು. ಆದರೆ, ಅಂಬೇಡ್ಕರ್ ಬಂದು ನೂರು ವರ್ಷವಾಗಿದೆ. ಯಾಕೆ ಕಾರ್ಯಕ್ರಮ ಮಾಡಿಲ್ಲ. ಈ ಕಾರ್ಯಕ್ರಮವನ್ನು ಬಿಜೆಪಿ ಮಾಡುತ್ತಿದೆ ಎಂದು ಹೇಳಿದ್ದಾರೆ. ಅಂಬೇಡ್ಕರ್‌ರನ್ನು ಸೋಲಿಸಿದ್ದು ಸಾರ್ವಕರ್ ಅಂತ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ಇದನ್ನು ಸಾಬೀತು ಮಾಡಿದ್ರೆ ನನ್ನ ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಅವರು ಸಾಬೀತು ಮಾಡಲು‌ ಆಗದಿದ್ದರೆ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳಬೇಕು ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಒಕ್ಕಲಿಗ ಸಮುದಾಯಕ್ಕೆ ಅನ್ಯಾಯ ಆಗಿರುವ ಸಮೀಕ್ಷೆ ನಾನು ಒಪ್ಪಲ್ಲ – ಕುಮಾರಸ್ವಾಮಿ

    ಕಾಂಗ್ರೆಸ್ ಸುಳ್ಳು ಹೇಳುವ ಫ್ಯಾಕ್ಟರಿ ಓಪನ್ ಮಾಡಿದ್ದೇವೆ. ಅಂಬೇಡ್ಕರ್ ಪ್ರಶಸ್ತಿ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡಿದೆ. ದಲಿತರಲ್ಲೇ ರೈಟು, ಲೆಫ್ಟ್ ಅಂತ ಕಾಂಗ್ರೆಸ್ ಗೊಂದಲ ಸೃಷ್ಟಿ ಮಾಡಿದೆ. ಅವರಿಗೆ ಜಾಸ್ತಿ ಕೊಟ್ಟಿದ್ದೇವೆ, ಇವ್ರಿಗೆ ಜಾಸ್ತಿ ಕೊಟ್ಟಿದ್ದೇವೆ ಅಂತ ಅಸಮಾಧಾನ ಹುಟ್ಟಿಸಿದ್ದಾರೆ. ಒಕ್ಕಲೆಬ್ಬಿಸಿ ಜನರ ನಡುವೆ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ ಎಂದು ಟೀಕಿಸಿದ್ದಾರೆ.

  • ಬೆಳಗಾವಿ ನಿಲ್ದಾಣದ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು – ತಪ್ಪಿದ ಭಾರೀ ಅನಾಹುತ

    ಬೆಳಗಾವಿ ನಿಲ್ದಾಣದ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು – ತಪ್ಪಿದ ಭಾರೀ ಅನಾಹುತ

    ಬೆಳಗಾವಿ: ನಗರದ (Belagavi) ರೈಲು ನಿಲ್ದಾಣದ ಬಳಿ ಗೂಡ್ಸ್ ರೈಲು (Goods Train ) ಹಳಿ ತಪ್ಪಿದ ಘಟನೆ ಇಂದು (ಏ.15) ಮುಂಜಾನೆ ನಡೆದಿದೆ.

    ಬೆಳಗಾವಿ ರೈಲು ನಿಲ್ದಾಣದಿಂದ ಅರ್ಧ ಕಿಮೀ ದೂರದಲ್ಲಿ ಗೂಡ್ಸ್ ರೈಲು ಹಳಿ ತಪ್ಪಿದೆ. ರೈಲು ಬೆಳಗಾವಿ ಕಡೆಯಿಂದ ಹುಬ್ಬಳ್ಳಿ (Hubballi) ಕಡೆಗೆ ಹೊರಟಿತ್ತು. ಈ ವೇಳೆ ಹಳಿ ತಪ್ಪಿ ಮೂರು ಬೋಗಿಗಳು ಪಕ್ಕಕ್ಕೆ ಸರಿದಿವೆ.

    20 ನಿಮಿಷ ಆಗಿದ್ದರೆ ಗೂಡ್ಸ್ ರೈಲಿಗೆ ರಾಣಿ ಚನ್ನಮ್ಮ ರೈಲು ಡಿಕ್ಕಿಯಾಗುವ ಸಂಭವವಿತ್ತು ಎನ್ನಲಾಗಿದೆ.‌ ಆದರೆ ಬೆಂಗಳೂರಿನಿಂದ ಬೆಳಗಾವಿಯತ್ತ ಬರುತ್ತಿದ್ದ ರಾಣಿ ಚನ್ನಮ್ಮ ರೈಲನ್ನು 8 ಕಿಮೀ ಹಿಂದಿನ ದೇಸೂರು ನಿಲ್ದಾಣದಲ್ಲಿಯೇ ಅಧಿಕಾರಿಗಳು ತಡೆದಿದ್ದಾರೆ. ಇದರಿಂದ ಆಗುತ್ತಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ.

    ಸ್ಥಳಕ್ಕೆ ರೇಲ್ವೇ ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಯಾವ ಕಾರಣಕ್ಕೆ ಹಳಿ ತಪ್ಪಿದೆ ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.