Tag: Huballi

  • ಸಿಲಿಂಡರ್ ಸ್ಫೋಟ ಪ್ರಕರಣ – ಗಾಯಾಳು ಸಾವು

    ಸಿಲಿಂಡರ್ ಸ್ಫೋಟ ಪ್ರಕರಣ – ಗಾಯಾಳು ಸಾವು

    ಹುಬ್ಬಳ್ಳಿ: ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ರಾಜಸ್ಥಾನ (Rajasthan) ಜೋಧ್‌ಪುರದ (Jodhpur) ಸುಭಾಶ್ ಮೋಹನರಾಮ್ (26) ಮೃತ ದುರ್ದೈವಿ. ಹುಬ್ಬಳಿಯ ಗಾಮನಗಟ್ಟಿ ಕೈಗಾರಿಕಾ ಪ್ರದೇಶದ ಫಾರ್ಮ್‌ಹೌಸ್‌ನಲ್ಲಿ ಅಡುಗೆ ಅನಿಲ ಸೋರಿಕೆಯಿಂದಾದ ಸ್ಫೋಟದಲ್ಲಿ ಸುಭಾಶ್ ಗಂಭೀರ ಗಾಯಗೊಂಡಿದ್ದರು. ಇದನ್ನೂ ಓದಿ: ತುಮಕೂರು | ಮನೆ ಮುಂದಿದ್ದ ನಾಯಿಯನ್ನು ಹೊತ್ತೊಯ್ದ ಚಿರತೆ – ಭಯಭೀತರಾದ ಗ್ರಾಮಸ್ಥರು

    ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಭಾಶ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

    ಘಟನೆಯಲ್ಲಿ ಗಾಯಗೊಂಡಿದ್ದ ಇನ್ನಿಬ್ಬರನ್ನು ಸುಭಾಶ್ ಕಡೆಯವರು ರಾಜಸ್ಥಾನದ ತಮ್ಮ ಊರಿಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಜನ ಸಾಮಾನ್ಯರ ಬಳಿ ಫಟಾಫಟ್ ವಸೂಲಿ – ಸರ್ಕಾರಿ ಇಲಾಖೆಗಳಿಂದಲೇ 8,000 ಕೋಟಿ ವಿದ್ಯುತ್‌ ಬಿಲ್‌ ಬಾಕಿ!

  • ವಿವಿಧ ಖಾಸಗಿ ಕಂಪನಿಗಳಿಂದ ಕಿಮ್ಸ್ ಗೆ 570 ಬೆಡ್ ಕೊಡುಗೆ

    ವಿವಿಧ ಖಾಸಗಿ ಕಂಪನಿಗಳಿಂದ ಕಿಮ್ಸ್ ಗೆ 570 ಬೆಡ್ ಕೊಡುಗೆ

    ಹುಬ್ಬಳ್ಳಿ: ಹುಬ್ಬಳ್ಳಿಯ ಉದ್ಯಮಿ ವಿ.ಎಸ್.ವಿ ಪ್ರಸಾದ್ ಒಡೆತನದ ಸ್ವರ್ಣ ಗ್ರೂಪ್ ಆಫ್ ಕಂಪನಿಸ್, ಹಾಗೂ ದೇಶಪಾಂಡೆ ಫೌಂಡೇಶನ್, ಟಾಟಾ ಹಿಟಾಚಿ, ಟಾಟಾ ಮಾರ್ಕೊಪೊಲೊ ಕಂಪನಿಗಳ ಸಾರ್ವಜನಿಕ ಹೊಣೆಗಾರಿಕೆ ನಿಧಿಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಇಂದು 570 ಬೆಡ್ ಗಳನ್ನು ಕೊಡುಗೆಯಾಗಿ ನೀಡಲಾಯಿತು.

    ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, 100 ಆಕ್ಸಿಜನ್ ಬೆಡ್‍ಗಳ ಕೋವಿಡ್ ಆಸ್ಪತ್ರೆಯನ್ನು ವೇದಾಂತ ಸಂಸ್ಥೆ ಯವರು ಕಿಮ್ಸ್ ಆವರಣದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ವಿವಿಧ ಜಿಲ್ಲೆಗಳಿಂದ ಆಗಮಿಸುವ ಕೋವಿಡ್ ರೋಗಿಗಳಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ಒದಗಿಸಲಾಗುವುದು. ವಾತಾವರಣದಲ್ಲಿನ ಗಾಳಿಯಿಂದ ಆಕ್ಸಿಜನ್ ಹೀರಿ ಬೇರ್ಪಡಿಸಿ ರೋಗಿಗಳಿಗೆ ನೀಡುವ ಯಂತ್ರೋಪಕರಣಗಳನ್ನು ಖರೀದಿಸಲಾಗುತ್ತಿದೆ. ದೇಶದಲ್ಲಿ ಲಾಕ್‍ಡೌನ್ ಹೇರುವ ಬಗ್ಗೆ ತಜ್ಞರು ಸಲಹೆ ನೀಡುತ್ತಿದ್ದಾರೆ. ಈ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಬಿಜೆಪಿ ಅಸ್ಸಾಂ ಮತ್ತು ಪಾಂಡಿಚೇರಿಯಲ್ಲಿ ಸರ್ಕಾರ ರಚಿಸುವುದು ಖಚಿತ. ಪಶ್ಚಿಮ ಬಂಗಾಳದಲ್ಲಿ ಉತ್ತಮ ಸ್ಪರ್ಧೆಯನ್ನು ತೋರಿದೆ ಎಂದರು.

    ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಕೋವಿಡ್ ರೋಗಿಗಳ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡುವಂತೆ ಖಾಸಗಿ ಆಸ್ಪತ್ರೆಯವರಿಗೆ ಸೂಚನೆ ನೀಡಲಾಗಿದೆ. ಬೇರೆ ಜಿಲ್ಲೆಯಿಂದ ಕಿಮ್ಸ್ ಹಾಗೂ ಖಾಸಗಿ ಆಸ್ಪತ್ರೆಗೆ ಕೋವಿಡ್ ರೋಗಿಗಳು ದಾಖಲಾಗುತ್ತಿದ್ದಾರೆ. ಇಂತಹವರ ಪ್ರಮಾಣ ಶೇ.30 ರಷ್ಟಿದೆ. ಮಾನವೀಯ ದೃಷ್ಟಿಯಿಂದ ಈ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಆಸ್ಪತ್ರೆಗಳನ್ನು ಸಶಕ್ತಗೊಳಿಸುವ ಕಾರ್ಯ ನಡೆಯುತ್ತಿದೆ. ಲಸಿಕೆ ಸಂಗ್ರಹ ಹಾಗೂ ವಿತರಣೆಯಲ್ಲಿ ತೊಂದರೆಯಾಗಿದೆ. ಇದನ್ನು ಅರಿಯಬೇಕು. ಮೇ1 ರಂದು ಲಸಿಕೆ ಏಕೆ ನೀಡಿಲ್ಲ ಎಂದು ರಾಜಕೀಯವಾಗಿ ಟೀಕೆ ಮಾಡಬಾರದು. ವಿರೋಧ ಪಕ್ಷದವರು ಹಿಂದೆ ಆಡಳಿತದಲ್ಲಿ ಇದ್ದವರೇ, ಅವರಿಗೆ ಪರಿಸ್ಥಿತಿಗಳ ಬಗ್ಗೆ ಅರಿವು ಇರುತ್ತದೆ. ಇದನ್ನು ಪರಾಮರ್ಶಿಸುವ ಬದಲು ಬೆಳಗಿನಿಂದ ಸಂಜೆವರೆಗೆ ಟೀಕೆ ಮಾಡುವಂತಾಗಬಾರದು ಎಂದರು.

    ಬಳಿಕ ಹುಬ್ಬಳ್ಳಿ ಎಪಿಎಂಸಿಗೆ ಭೇಟಿ ನೀಡಿದಾಗ ಸದಸ್ಯರು ಹಾಗೂ ವ್ಯಾಪಾರಿಗಳು ಸಂಜೆಯ ವರೆಗೆ ಮಾರಾಟ ಮಾಡುವುದಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದರು. ರೈತಾಪಿ ವರ್ಗ ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಸಹ ಸಮಯ ಸಾಲುತ್ತಿಲ್ಲ. ಅವುಗಳನ್ನು ಕೊಂಡೊಯ್ದು ಮಾರಾಟ ಮಾಡಲು ಸಮಯ ಸಾಲುತ್ತಿಲ್ಲ. ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಕೆಲವು ಸಡಿಲಿಕೆಗಳನ್ನು ನೀಡಬೇಕಿದೆ. ಜನರು ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯವಹರಿಸಿದರೆ ಕೊರೊನಾ ಎದುರಿಸಲು ಸಾಧ್ಯವಿದೆ ತಿಳಿಸಿದರು.

    ಸ್ವರ್ಣ ಗ್ರೂಪ್ ಆಪ್ ಕಂಪನಿಸ್ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ ಪ್ರಸಾದ್ ಮಾತನಾಡಿ, ಕಳೆದ ಬಾರಿಯು ಕಂಪನಿಯಿಂದ ಕಿಮ್ಸ್‍ಗೆ ಸಹಾಯ ಒದಗಿಸಲಾಗಿದೆ. ಈ ಬಾರಿಗೆ ನೆರವು ಒದಗಿಸಲು ಕೋರಿದಾಗ ಕೋವಿಡ್ ಆಸ್ಪತ್ರೆಗಳಿಗೆ ಮಂಚ ಹಾಗೂ ಬೆಡ್ ಹಾಸಿಗೆಗಳ ಅವಶ್ಯಕತೆ ಇದೆ ಎಂದು ತಿಳಿಸಿದ್ದರು. ಹಾಗಾಗಿ ಕಂಪನಿ ವತಿಯಿಂದ ನಿಂದ 100 ಮಂಚ, ಬೆಡ್, ಬೆಡಶೀಟ್, ತಲೆದಿಂಬು, 100 ಸ್ಟ್ಯಾಂಡ್ ಗಳನ್ನು ನೀಡಲಾಗಿದೆ. ಅವಶ್ಯವಿರುವ ಔಷಧ, ಡಿಸ್ಪೋಜಬಲ್ ಸಿರೆಂಜ್, ಗ್ಲೌಸ್, ಲ್ಯಾಬೋರೇಟರಿ ಅಲ್ಲಿ ಅವಶ್ಯಕವಾದ ಔಷಧೋಪರಣಗಳನ್ನು ಕೇಳಿದ್ದಾರೆ. ಇವುಗಳನ್ನು ಸಹ ವಾರದಲ್ಲಿ ಕೊಡುತ್ತವೆ. 5 ಲಕ್ಷ ವೆಚ್ಚದ 5 ಆಕ್ಸಿಜನ್ ಕಾನ್ಸಟ್ರೇಟರ್ಸ್ ಗಳನ್ನು ಸಹ ಇಂಡಸ್ಟ್ರಿ ಒಕ್ಕೂಟದಿಂದ ನೀಡುವುದಾಗಿ ಹೇಳಿದರು.

    ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಇತರರು ಉಪಸ್ಥಿತರಿದ್ದರು.

  • ಪತ್ನಿ ವಿರುದ್ಧವೇ ಪ್ರಕರಣ ದಾಖಲಿಸಿದ್ರು ವೈದ್ಯ!

    ಪತ್ನಿ ವಿರುದ್ಧವೇ ಪ್ರಕರಣ ದಾಖಲಿಸಿದ್ರು ವೈದ್ಯ!

    ಹುಬ್ಬಳ್ಳಿ: ಪ್ರಾಣಭಯದಿಂದ ಪತ್ನಿ ವಿರುದ್ಧವೇ ಹುಬ್ಬಳ್ಳಿಯ ಖ್ಯಾತ ವೈದ್ಯ, ರಾಜಕಾರಣಿ ಡಾ. ಕ್ರಾಂತಿಕಿರಣ್ ದೂರು ನೀಡಿದ್ದಾರೆ.

    ಪತಿಯ ಎದುರಲ್ಲೇ ಪ್ರಿಯಕರ ಕಿರಣ್ ಕುಲಕರ್ಣಿನೊಂದಿಗೆ ಪತ್ನಿ ಫೋನಿನಲ್ಲಿ ಮಾತನಾಡಲು ಶುರು ಮಾಡಿದ್ದಾಳೆ. ಇದರಿಂದ ಕೋಪಗೊಂಡ ವೈದ್ಯ ಕ್ರಾಂತಿಕಿರಣ್ ಪ್ರಶ್ನೆ ಮಾಡಿದ್ದಾರೆ. ಪರಿಣಾಮ ಪತ್ನಿ ಶೋಭಾ, ಪ್ರಿಯಕರನ ಜೊತೆ ಸೇರಿ ಕೊಲೆ ಬೇದರಿಕೆ ಹಾಕಿದ್ದಾಳೆ. ಹೀಗಾಗಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರ ಕಿರಣ್ ಕುಲಕರ್ಣಿ ವಿರುದ್ಧ ಕ್ರಾಂತಿಕಿರಣ್ ಅವರು ಪ್ರಕರಣ ದಾಖಲಿಸಿದ್ದಾರೆ.

    ಕಿರಣ್ ಕುಲಕರ್ಣಿ

    ಕಳೆದ 18 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಪ್ರೀತಿಸಿ ಮದುವೆಯಾಗಿದ್ದ ಈ ಸುಂದರ ಜೋಡಿ ವೈದ್ಯರಾದ ಮೇಲೆ ಹುಬ್ಬಳ್ಳಿಗೆ ಬಂದು ನೆಲೆಸಿತ್ತು. ಅಲ್ಲದೆ ಇವರಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಮೊದಲು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಿದ್ದ ಇಬ್ಬರೂ, ಬಳಿಕ ಅಲ್ಲಿಂದ ಹೊರಬಂದು ಖಾಸಗಿ ನರ್ಸಿಂಗ್ ಹೋಂ ತೆರೆದಿದ್ದರು.

    ಉತ್ತರ ಕರ್ನಾಟಕ ಭಾಗದ ಖ್ಯಾತ ನ್ಯೂರೋಲಜಿಸ್ಟ್ ಆಗಿ ಬೆಳೆದಿದ್ದ ಕ್ರಾಂತಿಕಿರಣ್, ಇತ್ತಿಚಿಗೆ ವೈದ್ಯಕೀಯ ವೃತ್ತಿ ಜೊತೆಗೆ ರಾಜಕೀಯಕ್ಕೂ ಪ್ರವೇಶ ಮಾಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೂಡಾ ಆಗಿದ್ದರು. ಆದರೆ ಕೊನೆಘಳಿಗೆಯಲ್ಲಿ ಪಕ್ಷ ಟಿಕೆಟ್ ನಿರಾಕರಿಸಿತ್ತು. ಸದ್ಯ ತನ್ನ ವೈಯಕ್ತಿಕ ಜೀವನದಿಂದ ಹತಾಶಾರಾದ ವೈದ್ಯ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಸದ್ಯ ಪೊಲೀಸರು ಕೂಡಾ ಐಪಿಸಿ ಸೆಕ್ಷನ್ 504, 506 ಮತ್ತು 323 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಪತ್ನಿ ಹಾಗೂ ಪ್ರಿಯಕರನನ್ನು ಕರೆಸಿ ವಿಚಾರಣೆ ಮಾಡುತ್ತಿದ್ದಾರೆ. ಅಲ್ಲದೇ ಡಾ. ಕ್ರಾಂತಿ ಕಿರಣ್ ಅವರು ತನಗೆ ಸೂಕ್ತ ಭದ್ರತೆ ನೀಡಿ ಅಂತ ಹೇಳುತ್ತಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಡಿಸಿಪಿ ಬಿ.ಎಸ್ ನೇಮಗೌಡ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ ಹುಬ್ಬಳ್ಳಿಗೆ ಬಂದಾಗ ನಿಜವಾಗಿಯೂ ಆಗಿದ್ದೇನು?

    ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ ಹುಬ್ಬಳ್ಳಿಗೆ ಬಂದಾಗ ನಿಜವಾಗಿಯೂ ಆಗಿದ್ದೇನು?

    ಹುಬ್ಬಳ್ಳಿ: ಕರ್ನಾಟಕ ವಿಧಾನಸಭೆಯ ಪ್ರಚಾರಕ್ಕೆ ಆಗಮಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹುಬ್ಬಳ್ಳಿಯ ಬಾನಂಗಳದಲ್ಲೇ ಕೆಲಕಾಲ ಆತಂಕದ ಪರಿಸ್ಥಿತಿ ಎದುರಿಸಬೇಕಾಯಿತು. ತಾಂತ್ರಿಕ ದೋಷದಿಂದ ಆಗಿದೆ ಎನ್ನಲಾದ ಘಟನೆ ಬಗ್ಗೆ ರಾಹುಲ್ ಗಾಂಧಿ ಜೊತೆಗಿದ್ದ ಕೌಶಲ್ ವಿದ್ಯಾರ್ಥಿ ಎಂಬವರು ರಾಜ್ಯ ಡಿಜಿಪಿ ನೀಲಮಣಿ ರಾಜು ಅವರಿಗೆ ದೂರು ನೀಡಿದ್ದಾರೆ. ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

    ಇಂದು ಬೆಳಗ್ಗೆ ಏನಾಯ್ತು?: ಕರಾವಳಿ ಕರ್ನಾಟಕಕ್ಕೆ ಪ್ರಚಾರಕ್ಕೆ ಆಗಮಿಸುತ್ತಿದ್ದ ರಾಹುಲ್ ಗಾಂಧಿ ಅವರು ವಿಶೇಷ ವಿಮಾನದಲ್ಲಿ ದೆಹಲಿಯಿಂದ ಹುಬ್ಬಳ್ಳಿಗೆ ಹೊರಟಿದ್ದರು. ಆದರೆ ವಿಮಾನದ ಲ್ಯಾಂಡಿಂಗ್ ವೇಳೆ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಕೌಶಲ್ ದೂರಿನಲ್ಲಿ ಹೇಳಿದ್ದಾರೆ.

    ನಾನು ರಾಹುಲ್ ಗಾಂಧಿ ಸೇರಿ ನಾಲ್ವರ ಜೊತೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆ. ನಮ್ಮ ಜೊತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇದ್ದರು. ಅಲ್ಲದೆ ರಾಮ್ ಪ್ರೀತ್, ರಾಹುಲ್ ರವಿ ಹಾಗೂ ಎಸ್‍ಪಿಜಿ ಅಧಿಕಾರಿಯಾಗಿದ್ದ ರಾಹುಲ್ ಗೌತಮ್ ಜೊತೆಗಿದ್ದರು. ದೆಹಲಿಯಿಂದ ಸುಮಾರು 9.20ಕ್ಕೆ ಹೊರಟ ವಿಮಾನ 11.45ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು.

    ಆದರೆ ಈ ಪ್ರಯಾಣದ ವೇಳೆ ನಮಗೆ ಹಲವು ತಾಂತ್ರಿಕ ತೊಂದರೆಗಳು ಎದುರಾದವು. ಸುಮಾರು 10.45ರ ವೇಳೆಗೆ ವಿಮಾನ ದಿಢೀರನೇ ಎಡಭಾಗಕ್ಕೆ ವಾಲಿತು. ವೇಗವಾಗಿ ಆಗಸದಿಂದ ಕೆಳಗಿಳಿಯುತ್ತಿರುವಂತೆ ಭಾಸವಾಯಿತು. ಹೊರಗೆ ಬಿಸಿಲು ಹಾಗೂ ಸಾಮಾನ್ಯ ವಾತಾವರಣವಿತ್ತು. ಯಾವುದೇ ರೀತಿಯ ವೇಗದ ಗಾಳಿಯೂ ಬೀಸುತ್ತಿರಲಿಲ್ಲ.

    ವಿಮಾನದ ಒಂದು ಭಾಗದಿಂದ ಸದ್ದು ಕೇಳುತ್ತಿತ್ತು. ಅಲ್ಲದೆ ನಾವು ಹೋಗಿ ಚೆಕ್ ಮಾಡಿದಾಗ ವಿಮಾನದ ಅಟೋ ಪೈಲಟ್ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿರಲಿಲ್ಲ. ಮೂರು ಬಾರಿ ವಿಮಾನವನ್ನು ಲ್ಯಾಂಡ್ ಮಾಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಮೂರನೇ ಯತ್ನದಲ್ಲಿ ವಿಮಾನ ಲ್ಯಾಂಡ್ ಆಯಿತು. ನಾವು ಪ್ರಯಾಣಿಸುತ್ತಿದ್ದ ವಿಮಾನ ಬೆಳಗ್ಗೆ 11.25ರ ವೇಳೆಗೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಯಿತು. ಈ ವೇಳೆ ವಿಮಾನ ಅಲುಗಾಡುತ್ತಿತ್ತು, ಜೊತೆಗೆ ನಮಗೆ ವಿಮಾನದಿಂದ ವಿಚಿತ್ರ ಶಬ್ದ ಕೇಳಿಸುತ್ತಿತ್ತು.

    ವಿಮಾನದಲ್ಲಿದ್ದ ಪೈಲಟ್ ಸೇರಿದಂತೆ ಎಲ್ಲರಿಗೂ ಜೀವಭಯವಾಗಿತ್ತು. ಎಲ್ಲರ ಮುಖದಲ್ಲೂ ಆತಂಕ ಕಾಣಿಸುತ್ತಿತ್ತು. ಅಲ್ಲದೆ ವಿಮಾನದ ಸಿಬ್ಬಂದಿಯೂ ವಿಮಾನದ ವಿಚಿತ್ರ ಅನುಭವವನ್ನು ಖಚಿತಪಡಿಸಿದರು. ವಿಮಾನದಲ್ಲಿ ನಮಗಾದ ಅನುಭವ ಸಾಮಾನ್ಯವಾದುದಾಗಿರಲಿಲ್ಲ. ಹವಾಮಾನಕ್ಕೆ ಸಂಬಂಧಿಸಿದ್ದೂ ಆಗಿರಲಿಲ್ಲ. ವಿಮಾನದ ತಾಂತ್ರಿಕ ದೋಷದಿಂದಾಗಿಯೇ ಇಷ್ಟೆಲ್ಲಾ ಘಟನೆಗಳು ನಡೆಯಿತು. ಉದ್ದೇಶಪೂರ್ವಕವಾಗಿಯೇ ವಿಮಾನವನ್ನು ಈ ಸ್ಥಿತಿಗೆ ತಂದಿದ್ರಾ ಎಂಬುದನ್ನೂ ತಳ್ಳಿ ಹಾಕುವಂತಿಲ್ಲ. ಈ ಬಗ್ಗೆ ಸಮರ್ಪಕ ತನಿಖೆಯಾಗಬೇಕು.

    ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ವಿಮಾನದ ಸೂಕ್ತ ತಪಾಸಣೆ ನಡೆಸಬೇಕು. ವಿಮಾನದ ನಿರ್ವಹಣೆಯನ್ನು ಮಾಡುತ್ತಿದ್ದ ವ್ಯಕ್ತಿಗಳನ್ನು ಕೂಡಾ ವಿಚಾರಣೆಗೊಳಪಡಿಸಬೇಕು. ಈ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಮತ್ತು ತಪ್ಪಿತಸ್ಥರ ವಿರುದ್ಧ ತನಿಖೆ ಮಾಡಬೇಕು. ಈ ವಿಮಾನವನ್ನು ತನಿಖೆ ಮುಗಿಯುವವರೆಗೆ ಹುಬ್ಬಳ್ಳಿಯಲ್ಲೇ ಇಟ್ಟುಕೊಳ್ಳಬೇಕು. ತನಿಖೆ ಮುಗಿಯುವವರೆಗೆ ಈ ವಿಮಾನದ ಹಾರಾಟಕ್ಕೆ ಯಾವುದೇ ಅನುಮತಿ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

    ಪೊಲೀಸರಿಗೆ ನೀಡಿದ ದೂರಿನ ಪ್ರತಿಯನ್ನು ಕಾಂಗ್ರೆಸ್ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.

    ಘಟನೆ ಬಗ್ಗೆ ಟ್ವೀಟ್ ಮಾಡಿರುವ ನಟಿ ಹಾಗೂ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥೆ ರಮ್ಯಾ, ಆಟೋ ಪೈಲಟ್ ಮಾತ್ರವಲ್ಲ, ವಿಮಾನದ ರಾಡಾರ್ ಸಂಪರ್ಕದಲ್ಲೂ ತೊಂದರೆಯಾಗಿತ್ತು ಎಂದು ಟ್ವೀಟ್ ಮಾಡಿದ್ದಾರೆ.

    ಇನ್ನು ಘಟನೆ ವೇಳೆ ವಿಮಾನದಲ್ಲಿದ್ದ ಕೌಶಲ್ ಕೆ ವಿದ್ಯಾರ್ಥಿ ರಾತ್ರಿ 10.09ಕ್ಕೆ ಟ್ವೀಟ್ ಮಾಡಿದ್ದಾರೆ. ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ. ನಾನು ಜೀವಂತವಾಗಿರುವುದಕ್ಕೆ ಧನ್ಯವಾದ. ನನ್ನ ಜೀವನದಲ್ಲಿ ಇಂತಹ ಭಯಾನಕ ಸ್ಥಿತಿ ಎದುರಿಸಿರಲಿಲ್ಲ. ವಿಮಾನ ಬೀಳುತ್ತೆ ಎಂಬಂತೆ ಭಾಸವಾಗುತ್ತಿತ್ತು. ಆದರೆ ನಮ್ಮ ಅಧ್ಯಕ್ಷರು ಶಾಂತಚಿತ್ತರಾಗಿ ಪೈಲಟ್‍ಗಳ ಜೊತೆ ಮಾತನಾಡಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಮಾಡುವ ಬಗ್ಗೆ ಗಮನಹರಿಸಿದ್ದರು ಎಂದು ಟ್ವೀಟ್ ಮಾಡಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ವಿಶೇಷ ವಿಮಾನದ ಇಬ್ಬರು ಪೈಲಟ್‍ಗಳ ವಿರುದ್ಧ ಕರ್ತವ್ಯ ಲೋಪ ಆರೋಪದಡಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಾಕಿರ್ ಸನದಿ ನೀಡಿದ ದೂರಿನ ಅನ್ವಯ ಏರ್ ಕ್ರಾಫ್ಟ್ ಕಾಯ್ದೆ 287, 336, ಐಪಿಸಿ ಸೆಕ್ಷನ್ 11 ಅನ್ವಯ ಹುಬ್ಬಳ್ಳಿಯ ಗೋಕುಲ ಠಾಣೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಧಾರವಾಡ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಘಟನೆ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

    ಮೋದಿ ದೂರವಾಣಿ ಕರೆ: ಸದ್ಯ ಚೀನಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು, ರಾಹುಲ್ ಗಾಂಧಿ ಅವರ ವಿಮಾನ ಸಂಪರ್ಕ ಕಳೆದುಕೊಂಡ ಮಾಹಿತಿ ತಿಳಿದು ಚೀನಾದಿಂದ ರಾಹುಲ್ ಗಾಂಧಿ ಅವರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ ಎಂದು ರಾಷ್ಟ್ರೀಯ ಸುದ್ದಿವಾಹಿನಿಗಳು ವರದಿ ಮಾಡಿವೆ. ಅಲ್ಲದೆ ಪ್ರಧಾನಮಂತ್ರಿ ಕಾರ್ಯಾಲಯವೂ ಘಟನೆಯ ಕುರಿತು ಮಾಹಿತಿ ಪಡೆದುಕೊಂಡಿದೆ ಎನ್ನಲಾಗಿದೆ.

  • ಡಿಸೆಂಬರ್ 27 ರಂದು ಉತ್ತರ ಕರ್ನಾಟಕ ಬಂದ್

    ಡಿಸೆಂಬರ್ 27 ರಂದು ಉತ್ತರ ಕರ್ನಾಟಕ ಬಂದ್

    ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಮಹದಾಯಿ ನೀರಾವರಿ ಹೋರಾಟ ಮತ್ತಷ್ಟು ತೀವ್ರಗೊಂಡಿದ್ದು, ಡಿಸೆಂಬರ್ 27 ರಂದು ಉತ್ತರ ಕರ್ನಾಟಕ ಬಂದ್ ಮಾಡಲು ಕಳಸಾ ಬಂಡೂರಿ ಮಹದಾಯಿ ಹೋರಾಟ ಸಮಿತಿ ಹಾಗೂ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ.

    ಕಳಸಾ ಬಂಡೂರಿ ರೈತ ಹಿತರಕ್ಷಣಾ ಸಮಿತಿ ಮುಖಂಡರು ಶುಕ್ರವಾರ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಬಿಜೆಪಿ ವಿರುದ್ಧ ಪ್ರತಿಭಟಿಸಿದರು. ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಇತ್ಯರ್ಥ ಪಡಿಸುವ ನಿರೀಕ್ಷೆ ಕೊನೆಗೂ ಹುಸಿಯಾಗಿದೆ. ಯೋಜನೆ ಜಾರಿ ವಿಚಾರದಲ್ಲಿ ಸರ್ಕಾರಗಳು ಮಾತು ತಪ್ಪಿವೆ ಎಂದು ಆರೋಪಿಸಿದರು.

    ನಿರೀಕ್ಷೆ ಹುಸಿಯಾದ ಹಿನ್ನೆಲೆಯಲ್ಲಿ ಈ ವೇಳೆ ಮಹದಾಯಿ ಹೋರಾಟ ಸಮಿತಿ ಕರೆ ನೀಡಿದ್ದ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ, ಪ್ರವೀಣ್ ಶೆಟ್ಟಿ ಬಣ, ಆಟೋ ಚಾಲಕರ ಸಂಘ, ಎಪಿಎಂಸಿ ವರ್ತಕರು ಬೆಂಬಲ ನೀಡಿದ್ದಾರೆ.

    ಮಹದಾಯಿ ವಿವಾದವನ್ನು ಬಗೆ ಹರಿಸಿಲು ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಮಧ್ಯಪ್ರವೇಶಿಸಿ, ವಿವಾದಿತ ರಾಜ್ಯಗಳ ನಡುವೆ ಸಂಧಾನ ಮಾತುಕತೆ ಸಭೆ ನಡೆಸಬೇಕು. ಇದನ್ನು ಬಿಟ್ಟು ಪೊಳ್ಳು ಭರವಸೆ ನೀಡಿ ರೈತರ ಕಣ್ಣಿಗೆ ಮಣ್ಣೆರೆಚುವ ಕ್ರಮವನ್ನು ಬಿಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಳಸಾ ಬಂಡೂರಿ ಹೋರಾಟಗಾರರು ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ಪ್ರತಿಭಟನಾನಿರತು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಇಂದಿನಿಂದ ಮಹದಾಯಿ ನೀರಿನ ಚಿಂತೆಯನ್ನು ಬಿಟ್ಟು ಬಿಡಿ: ಬಿಎಸ್‍ವೈ

    ಇದೇ ವೇಳೆ ಬಿಜೆಪಿ ನಾಯಕರು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಹೋರಾಟಗಾರರು, ಬಿಜೆಪಿ ನಾಯಕರು ರಾಜಕೀಯಕ್ಕಾಗಿ ಕಳಸಾ ಬಂಡೂರಿ ಯೋಜನೆಯನ್ನು ಬಳಸಿಕೊಳ್ಳುವದನ್ನು ಬಿಡಬೇಕು. ಬಿಜೆಪಿ ನಾಯಕರಿಗೆ ನಿಜವಾಗಲೂ ಈ ಭಾಗದ ಜನರ ಬಗ್ಗೆ ಕಾಳಜಿ ಇದ್ದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಮಧ್ಯಪ್ರವೇಶ ಮಾಡಲು ಒತ್ತಾಯಿಸಬೇಕು ಎಂದು ಅಗ್ರಹಿಸಿದರು. ಇದನ್ನೂ ಓದಿ: ಮಾತುಕತೆಗಷ್ಟೇ ಒಪ್ಪಿಗೆ, ನಮ್ಮ ಹಕ್ಕುಗಳಿಗೆ ತೊಂದರೆ ಆಗಬಾರದು ಪರಿಕ್ಕರ್ ಬರೆದ ಪತ್ರದಲ್ಲಿ ಏನಿದೆ?

    ಬಂದ್ ಗೆ ಕರೆ ನೀಡಿದ್ದರಿಂದ ಕಳಸಾ ಹೋರಾಟ ತೀವ್ರವಾಗಿರುವ ಗದಗ್, ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ, ಬೆಳಗಾವಿ, ಹಾವೇರಿಯಲ್ಲಿ ಜನಜೀವನ ಅಸ್ತವ್ಯಸ್ತವಾಗುವ ಸಾಧ್ಯತೆಯಿದೆ.

    https://www.youtube.com/watch?v=_JWv-dVmm8E

  • ಇಂದಿನಿಂದ ಮಹದಾಯಿ ನೀರಿನ ಚಿಂತೆಯನ್ನು ಬಿಟ್ಟು ಬಿಡಿ: ಬಿಎಸ್‍ವೈ

    ಇಂದಿನಿಂದ ಮಹದಾಯಿ ನೀರಿನ ಚಿಂತೆಯನ್ನು ಬಿಟ್ಟು ಬಿಡಿ: ಬಿಎಸ್‍ವೈ

    ಹುಬ್ಬಳ್ಳಿ: ಬೇರೆಯವರ ಮಾತಿಗೆ ನೀವು ಯಾರು ಕಿವಿಗೊಡಬೇಡಿ. ಕುಡಿಯಲು ನಾವು ಮಹದಾಯಿ ನೀರನ್ನು ತಂದೇ ತರುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.

    ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಹಲವು ಪ್ರಯತ್ನಗಳ ಫಲವಾಗಿ ಅಮಿತ್ ಶಾ ನೇತೃತ್ವದಲ್ಲಿ ಬುಧವಾರ ರಾಜ್ಯ ಬಿಜೆಪಿ ನಾಯಕರು ಮತ್ತು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಮಾತುಕತೆ ನಡೆಸಿದ್ದೇವೆ. ಕುಡಿಯುವ ನೀರನ್ನು ತರುವ ಜವಾಬ್ದಾರಿಯನ್ನು ನಾನು, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ ತೆಗೆದುಕೊಳ್ಳುತ್ತೇವೆ. ಇಂದಿನಿಂದ ನೀರಿನ ಚಿಂತೆಯನ್ನು ಬಿಟ್ಟು ಬಿಡಿ ಎಂದು ಹೇಳಿದರು.

    ಪರಿಕ್ಕರ್ ಬರೆದ ಪತ್ರವನ್ನು ಇಟ್ಟುಕೊಂಡು ಯಾರೋ ಆಗದವರು ಹೀಗೆ ಮಾಡಿದ್ದಾರೆ. ನೀರನ್ನು ನಾನು ತಂದೆ ತರುವೆ. ಬೇರೆಯವರ ಮಾತಿಗೆ ಕಿವಿ ಗೊಡಬೇಡಿ. ನಾನು ಇಂದು ಹೇಳಿದ ಮಾತಿನಂತೆ ನೀರು ತಂದೆ ತರುವೆ. ಉತ್ತರ ಕರ್ನಾಟಕದ ಎಲ್ಲ ಕೆರೆಗಳ ನೀರು ತುಂಬಿಸುವ ಜವಾಬ್ದಾರಿ ನಮ್ಮದು ಎಂದು ಬಿಎಸ್‍ವೈ ಭರವಸೆ ನೀಡಿದರು. ಇದನ್ನೂ ಓದಿ: ಮಾತುಕತೆಗಷ್ಟೇ ಒಪ್ಪಿಗೆ, ನಮ್ಮ ಹಕ್ಕುಗಳಿಗೆ ತೊಂದರೆ ಆಗಬಾರದು ಪರಿಕ್ಕರ್ ಬರೆದ ಪತ್ರದಲ್ಲಿ ಏನಿದೆ?

    ನಾವು ಅಮಿತ್ ಶಾ ಸಮ್ಮುಖದಲ್ಲಿ ಒಂದು ಗಂಟೆ ಚರ್ಚೆ ಮಾಡಿದ್ದು ನ್ಯಾಯ ಒದಗಿಸಲು ನಾವು ಬದ್ಧರಾಗಿದ್ದೇವೆ. ನಮ್ಮೆಲ್ಲರ ಜವಾಬ್ದಾರಿಯನ್ನು ಪೂರ್ಣ ಮಾಡುತ್ತೇವೆ ಎನ್ನುವ ಭರವಸೆ ನೀಡುತ್ತೇವೆ. ನ್ಯಾಯಾಧಿಕರದಲ್ಲಿ ಸಮರ್ಪಕವಾದ ಮಾಹಿತಿ ಸಲ್ಲಿಸಿ ಅರ್ಜಿ ಹಾಕಿ ಮಹದಾಯಿ ನೀರನ್ನು ತರುತ್ತೇವೆ ಎಂದು ಯಡಿಯೂರಪ್ಪ ಆಶ್ವಾಸನೆ ನೀಡಿದರು.

    https://www.youtube.com/watch?v=TZ9qqTLPXD0

    https://www.youtube.com/watch?v=IgAGJ9tffNg

    https://www.youtube.com/watch?v=k8H4IP59_Sk

    https://www.youtube.com/watch?v=c5Mb4OAwpa8