Tag: HP Manjunath

  • ಹುಣಸೂರು ನಗರಸಭಾ ಚುನಾವಣೆ- 31ರಲ್ಲಿ ಕಾಂಗ್ರೆಸ್‍ಗೆ 14, ಜೆಡಿಎಸ್ 7, ಬಿಜೆಪಿ 3, ಎಸ್‍ಡಿಪಿಐ 2, ಪಕ್ಷೇತರ 5

    ಹುಣಸೂರು ನಗರಸಭಾ ಚುನಾವಣೆ- 31ರಲ್ಲಿ ಕಾಂಗ್ರೆಸ್‍ಗೆ 14, ಜೆಡಿಎಸ್ 7, ಬಿಜೆಪಿ 3, ಎಸ್‍ಡಿಪಿಐ 2, ಪಕ್ಷೇತರ 5

    – ಪ್ರತಿ ವಾರ್ಡ್ ಗೆ ಬಿಜೆಪಿಯಿಂದ 50 ಲಕ್ಷ ಖರ್ಚು-ಕೈ ಶಾಸಕ
    – ಬಿಜೆಪಿಗಿಂತ ಎಸ್‍ಡಿಪಿಐ ಸಾಧನೆ ದೊಡ್ಡದು ಎಂದ ಶಾಸಕ ಮಂಜುನಾಥ್

    ಮೈಸೂರು: ಹುಣಸೂರು ನಗರಸಭೆ ಚುನಾವಣೆ ಫಲಿತಾಂಶ ಹೊರ ಬಂದಿದ್ದು, 31 ವಾರ್ಡ್ ಗಳಲ್ಲಿ ಕಾಂಗ್ರೆಸ್ 14, ಜೆಡಿಎಸ್ 7, ಬಿಜೆಪಿ 3, ಎಸ್‍ಡಿಪಿಐ 2 ಮತ್ತು ಪಕ್ಷೇತರರು 5 ವಾರ್ಡ್ ಗಳಲ್ಲಿ ಗೆಲುವು ದಾಖಲಿಸಿದ್ದಾರೆ. ಬಿಜೆಪಿ ಇಲ್ಲಿ ಕೇವಲ 22 ವಾರ್ಡ್ ಗಳಲ್ಲಿ ಮಾತ್ರ ಸ್ಪರ್ಧೆ ಮಾಡಿತ್ತು.

    ಬಿಜೆಪಿಯಿಂದ ವಾರ್ಡ್ ಗೆ 50 ಲಕ್ಷ ರೂ: ಹುಣಸೂರು ನಗರಸಭೆ ಚುನಾವಣೆ ಫಲಿತಾಂಶದ ಬಗ್ಗೆ ಶಾಸಕ ಹೆಚ್.ಪಿ. ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದು, ಹಣದಿಂದಲೇ ಹುಣಸೂರು ನಗರಸಭೆ ಚುನಾವಣೆ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರತಿ ವಾರ್ಡಿಗೆ 50 ಲಕ್ಷ ಹಣ ಖರ್ಚು ಮಾಡಲಾಗಿದೆ. ಇತ್ತೀಚಿಗೆ ನಡೆದ ಹುಣಸೂರು ಉಪಚುನಾವಣೆಯಲ್ಲಿ ಹಣದ ಹೊಳೆ ಹರಿದಾಗಲೇ ಇದರ ಸೂಚನೆ ಸಿಕ್ಕಿತ್ತು. ಹೀಗಾಗಿಯೇ ಕಾಸಿಗೆ ತಕ್ಕ ಕಜ್ಜಾಯ ಎಂಬಂತೆ ಬಿಜೆಪಿ ಗೆ ಮೂರು ಸ್ಥಾನ ಬಂದಿದೆ. ಇಲ್ಲವಾದಲ್ಲಿ ಇನ್ನಷ್ಟು ಸ್ಥಾನ ಕಾಂಗ್ರೆಸ್ ಪಾಲಾಗುತ್ತಿತ್ತು ಎಂದು ಹೇಳಿದ್ದಾರೆ.

    ಈಗ ಅಧಿಕಾರ ಹಿಡಿಯಲು ಯಾರನ್ನು ಮನವೊಲಿಸಲು ಹೋಗೋಲ್ಲ. ಮನವೊಲಿಕೆ ಮಾಡೋದು ತಮಾಷೆಯ ವಿಚಾರವೂ ಅಲ್ಲ. ಯಾರು ಬೇಷರತ್ ಬೆಂಬಲ ಕೊಡುತ್ತಾರೆ ಅಂತವರನ್ನ ಸೇರಿಸಿಕೊಂಡು ಅಧಿಕಾರ ಹಿಡಿಯಲು ಪ್ರಯತ್ನಿಸುತ್ತೇವೆ. ಈ ನಗರಸಭೆ ನನಗೆ ಯುಗಾದಿ ರೀತಿ ಬೇವು-ಬೆಲ್ಲ ಎರಡು ನೀಡಿದೆ ಎಂದು ಶಾಸಕ ಹೆಚ್.ಪಿ.ಮಂಜುನಾಥ್ ಹೇಳಿದ್ದಾರೆ.

    ಬಿಜೆಪಿಗಿಂತ ಎಸ್‍ಡಿಪಿಐ ಸಾಧನೆ ದೊಡ್ಡದು: ಹುಣಸೂರು ನಗರಸಭೆ ಚುನಾವಣೆಯಲ್ಲಿ ಬಿಜೆಪಿಯದ್ದು ಸಾಧನೆಯಲ್ಲ. ನಗರಸಭೆ ಚುನಾವಣೆಯಲ್ಲಿ ಎರಡು ಸ್ಥಾನ ಗೆದ್ದ ಎಸ್‍ಡಿಪಿಐ ಪಕ್ಷದ್ದು ದೊಡ್ಡ ಸಾಧನೆ ಎಂದು ಶಾಸಕ ಹೆಚ್.ಪಿ.ಮಂಜುನಾಥ್ ಹೇಳಿದ್ದಾರೆ. ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರು 7 ಸಾವಿರ ಇದ್ದ ಮತಗಳನ್ನ 50 ಸಾವಿರಕ್ಕೆ ತೆಗೆದುಕೊಂಡು ಹೋಗಿದ್ದೇನೆ ಅಂತಾರೆ. ಆ ಮತಗಳಿಗೆ ಈ ಸ್ಥಾನಗಳಿಗೆ ಸಾಟಿಯೆ? ಆದರೆ ಏನು ಇಲ್ಲದ ಎಸ್‍ಡಿಪಿಐ 2 ಸ್ಥಾನ ಗೆದ್ದಿರುವುದು ಸಾಧನೆ. 3 ಸ್ಥಾನ ಗೆದ್ದ ಬಿಜೆಪಿ ಗಿಂತಾ 2 ಸ್ಥಾನ ಗೆದ್ದ ಎಸ್‍ಡಿಪಿಐರದ್ದು ಸಾಧನೆ ದೊಡ್ಡದು ಎಂದ್ರು.

    ಅಧಿಕಾರಕ್ಕಾಗಿ ಕಾಂಗ್ರೆಸ್ ಜೊತೆ ಹೋಗಲ್ಲ: ಹುಣಸೂರು ನಗರಸಭೆ ಚುನಾವಣಾ ಫಲಿತಾಂಶದ ಬಗ್ಗೆ ಹುಣಸೂರು ವಿಧಾನಸಭಾ ಉಪ ಚುನಾವಣೆಯಲ್ಲಿ ಸೋತ ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಪ್ರತಿಕ್ರಿಯಿಸಿದ್ದಾರೆ. ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸಮಾಧಾನಕರ ಸಾಧನೆ ಮಾಡಿದೆ. ಹಿಂದೆ ಜಿಟಿಡಿ ಹಾಗೂ ಚಿಕ್ಕಮಾದು ಅವರಂಥ ಘಟಾನುಘಟಿ ನಾಯಕರಿದ್ದು 9 ಸ್ಥಾನ ಗೆದ್ದಿದ್ದೇವು. ಈಗ ಯಾವ ನಾಯಕರು ಇಲ್ಲದೆ 7 ಸ್ಥಾನ ಗೆದ್ದಿದ್ದೇವೆ. ಉಪಚುನಾವಣೆ ಮತಗಳಿಗೂ ನಗರಸಭೆ ಚುನಾವಣೆಗು ವ್ಯತ್ಯಾಸ ಇದೆ. ಅಧಿಕಾರಕ್ಕಾಗಿ ಕಾಂಗ್ರೆಸ್ ಜೊತೆ ಕೈ ಜೋಡಿಸಲ್ಲ. ಪಕ್ಷೇತರರ ಸಹಾಯ ಪಡೆದು ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತೇವೆ. ಎಲ್ಲರ ಜೊತೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಹುಣಸೂರು ನಗರಸಭೆ ಚುನಾವಣೆ ಫಲಿತಾಂಶದ ಸಂಪೂರ್ಣ ವಿವರ.

    1ನೇ ವಾರ್ಡ್-ದೇವರಾಜ್- ಜೆಡಿಎಸ್
    2ನೇ ವಾರ್ಡ್- ಆಶಾರಾಣಿ- ಪಕ್ಷೇತರ
    3ನೇ ವಾರ್ಡ್- ಅನಿಷಾ- ಕಾಂಗ್ರೆಸ್
    4ನೇ ವಾರ್ಡ್- ಭವ್ಯ- ಕಾಂಗ್ರೆಸ್
    5ನೇ ವಾರ್ಡ್- ಸ್ವಾಮಿಗೌಡ- ಕಾಂಗ್ರೆಸ್
    6ನೇ ವಾರ್ಡ್- ದೇವನಾಯ್ಕ- ಕಾಂಗ್ರೆಸ್
    7ನೇ ವಾರ್ಡ್- ಶರವಣ- ಜೆಡಿಎಸ್
    8ನೇ ವಾರ್ಡ್- ಸತೀಶ್- ಪಕ್ಷೇತರ
    9ನೇ ವಾರ್ಡ್- ಸಮೀನಾ ಪರ್ವೇಜ್- ಕಾಂಗ್ರೆಸ್
    10ನೇ ವಾರ್ಡ್- ರಮೇಶ್- ಪಕ್ಷೇತರ
    11ನೇ ವಾರ್ಡ್- ಹರೀಶ್ ಕುಮಾರ್- ಬಿಜೆಪಿ
    12ನೇ ವಾರ್ಡ್- ವಿವೇಕ್- ಬಿಜೆಪಿ
    13ನೇ ವಾರ್ಡ್- ಮಾಲಕ್ ಪಾಷಾ- ಪಕ್ಷೇತರ
    14ನೇ ವಾರ್ಡ್- ಸಾಯಿಂತಾಜ್- ಜೆಡಿಎಸ್
    15ನೇ ವಾರ್ಡ್- ಸೌರಭ ಸಿದ್ದರಾಜು- ಕಾಂಗ್ರೆಸ್
    16ನೇ ವಾರ್ಡ್- ಕೃಷ್ಣರಾಜ ಗುಪ್ತ- ಜೆಡಿಎಸ್
    17ನೇ ವಾರ್ಡ್- ಮನು- ಕಾಂಗ್ರೆಸ್
    18ನೇ ವಾರ್ಡ್- ಹೆಚ್.ಎನ್.ರಮೇಶ್- ಕಾಂಗ್ರೆಸ್
    19ನೇ ವಾರ್ಡ್- ಶ್ರೀನಾಥ್- ಜೆಡಿಎಸ್
    20ನೇ ವಾರ್ಡ್- ಫರ್ವಿನ್ ತಾಜ್- ಪಕ್ಷೇತರ
    21ನೇ ವಾರ್ಡ್- ರಾಣಿ ಪೆರುಮಾಳ್- ಜೆಡಿಎಸ್
    22ನೇ ವಾರ್ಡ್- ಜೆಬಿವುಲ್ಲಾ ಖಾನ್- ಕಾಂಗ್ರೆಸ್
    23ನೇ ವಾರ್ಡ್- ರಂಜಿತಾ- ಕಾಂಗ್ರೆಸ್
    24ನೇ ವಾರ್ಡ್- ಗೀತಾ- ಕಾಂಗ್ರೆಸ್
    25ನೇ ವಾರ್ಡ್- ಮಂಜ- ಕಾಂಗ್ರೆಸ್
    26ನೇ ವಾರ್ಡ್- ಗಣೇಶ್ ಕುಮಾರಸ್ವಾಮಿ- ಬಿಜೆಪಿ
    27ನೇ ವಾರ್ಡ್- ರಾಧಾ- ಜೆಡಿಎಸ್
    28 ನೇ ವಾರ್ಡ್- ಶ್ವೇತಾ ಮಂಜು- ಕಾಂಗ್ರೆಸ್
    29ನೇ ವಾರ್ಡ್- ಪ್ರಿಯಾಂಕ ಥಾಮಸ್- ಕಾಂಗ್ರೆಸ್
    30ನೇ ವಾರ್ಡ್- ಸಮೀನಾಭಾನು- ಎಸ್‍ಡಿಪಿಐ
    31ನೇ ವಾರ್ಡ್- ಸೈಯದ್ ಯೂನಸ್- ಎಸ್‍ಡಿಪಿಐ

  • ಜೋರಾಗಿದೆ ಉಪಕದನ ಕಲಿಗಳ ಟೆಂಪಲ್ ರನ್

    ಜೋರಾಗಿದೆ ಉಪಕದನ ಕಲಿಗಳ ಟೆಂಪಲ್ ರನ್

    ಮೈಸೂರು: ಉಪಚುನಾವಣೆಯ ಫಲಿತಾಂಶಕ್ಕೆ ಇನ್ನೂ ಒಂದು ದಿನ ಬಾಕಿ ಇದ್ದು, ಕ್ಷೇತ್ರಗಳಲ್ಲಿ ತರಾವರಿ ಲೆಕ್ಕಾಚಾರ ಶುರುವಾಗಿವೆ. ಯಾರು ಸೋಲುತ್ತಾರೆ, ಯಾರು ಗೆಲ್ಲುತ್ತಾರೆ ಎಂಬ ಚರ್ಚೆಗಳು ಜೋರಿದ್ದು, ಈ ನಡುವೆ ಹುಣಸೂರು ಉಪ ಚುನಾವಣೆ ಅಖಾಡದಲ್ಲಿದ್ದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಟೆಂಪಲ್ ರನ್ ನಡೆಸಿದ್ದಾರೆ.

    ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಮಹಾರಾಷ್ಟ್ರದ ಶಿರಡಿಗೆ ತೆರಳಿ ಸಾಯಿಬಾಬಾರಿಗೆ ಪೂಜೆ ಸಲ್ಲಿಸಿದ್ದಾರೆ. ತಮ್ಮ ಗೆಲುವಿಗಾಗಿ ಸಾಯಿಬಾಬಾನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಿರಡಿಯ ಸಾಯಿಬಾಬಾನ ದರ್ಶನ ಪಡೆದ ಬಳಿಕ ಮಂತ್ರಾಲಯಕ್ಕೆ ತೆರಳಲಿರುವ ವಿಶ್ವನಾಥ್, ಮಂತ್ರಾಲಯದ ಶ್ರೀ ರಾಘವೇಂದ್ರ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಈ ಪೂಜೆ ಮುಗಿಸಿ ನಾಳೆ ಸಂಜೆ ವೇಳೆಗೆ ಮೈಸೂರಿಗೆ ಆಗಮಿಸಲಿದ್ದಾರೆ.

    ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ಧರ್ಮಸ್ಥಳಕ್ಕೆ ತೆರಳಿ ಶ್ರೀ ಮಂಜುನಾಥ್ ಸ್ವಾಮಿಗೆ ಪೂಜೆ ಸಲ್ಲಿಸಿದ್ದಾರೆ. ತಮ್ಮ ಗೆಲುವಿಗಾಗಿ ಶ್ರೀ ಮಂಜುನಾಥೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನೂ ಜೆಡಿಎಸ್ ಅಭ್ಯರ್ಥಿ ದೇವರಹಳ್ಳಿ ಸೋಮಶೇಖರ್ ಕೂಡ ಹುಣಸೂರು ಕ್ಷೇತ್ರ ವ್ಯಾಪ್ತಿಯಲ್ಲಿನ ದೇವಸ್ಥಾನಗಳಿಗೆ ಕುಟುಂಬ ಸಮೇತರಾಗಿ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಯಾವ ದೇವರು ಯಾರಿಗೆ ಗೆಲುವಿನ ವರ ಕೊಡುತ್ತಾರೆ ಎಂಬುದು ಸೋಮವಾರ ಸ್ಪಷ್ಟವಾಗಲಿದೆ.

  • ವಿಶ್ವನಾಥ್ ಮತ್ತೊಮ್ಮೆ ಗೆದ್ರೆ ತಾಲೂಕನ್ನೇ ಮಾರಿಬಿಡ್ತಾರೆ- ಕಾಂಗ್ರೆಸ್ ಅಭ್ಯರ್ಥಿ ಕಿಡಿ

    ವಿಶ್ವನಾಥ್ ಮತ್ತೊಮ್ಮೆ ಗೆದ್ರೆ ತಾಲೂಕನ್ನೇ ಮಾರಿಬಿಡ್ತಾರೆ- ಕಾಂಗ್ರೆಸ್ ಅಭ್ಯರ್ಥಿ ಕಿಡಿ

    ಮೈಸೂರು: ಹುಣಸೂರಿನಲ್ಲಿ ಎಚ್. ವಿಶ್ವನಾಥ್ ಮತ್ತೊಮ್ಮೆ ಗೆದ್ದರೆ ಇಡೀ ತಾಲೂಕನ್ನೇ ಮಾರಿಬಿಟ್ಟು ಹೋಗೋ ಪ್ಲಾನ್ ಇದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರನ್ನಾಗಿ ಮಾಡಿದ್ದಕ್ಕೆ ಹುಣಸೂರಿಗೆ ಕಪ್ಪು ಮಸಿ ಬಳಿದಿದ್ದು ಸಾಕು. ಮಂತ್ರಿಯಾಗಿ ಜಿಲ್ಲೆ ಮಾರುವುದಕ್ಕೆ ರೆಡಿಯಾಗಿದ್ದಾರಾ? ಯೋಗೇಶ್ವರ್ ಹೆಸರಿನಲ್ಲಿ ಸಿಕ್ಕಿರುವ ಸೀರೆ ಹಿಂದೆ ವಿಶ್ವನಾಥ್ ಕೈವಾಡವಿದೆ ಎಂದು ಅವರು ಆರೋಪಿಸಿದರು.

    ಯೋಗೇಶ್ವರ್ ಫೋಟೋ ಬದಲು ವಿಶ್ವನಾಥ್ ಫೋಟೋ ಅಂಟಿಸುವ ಸಾಧ್ಯತೆ ಇತ್ತು. ಇಂತಹ ನೂರಾರು ಅಕ್ರಮಗಳಿಗೆ ಹುಣಸೂರಿನಲ್ಲಿ ಸಿದ್ಧತೆಯಾಗಿದೆ. ಉಪಚುನಾವಣೆಗಳಲ್ಲಿ ಇಂತಹ ಅಕ್ರಮ ಎಲ್ಲೆ ಮೀರುತ್ತಿದೆ. ಇದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಲಿ ಎಂದು ಮಂಜುನಾಥ್ ಒತ್ತಾಯಿಸಿದರು.

    30 ಸಾವಿರ ಸೀರೆ ವಶ:
    ಮೈಸೂರಿನ ವಿಜಯನಗರ ಬಡಾವಣೆಯ ಮನೆಯಲ್ಲಿ ಉಪಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಅಕ್ರಮವಾಗಿ ಸಂಗ್ರಹಿಸಿದ್ದ ಸೀರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬರೋಬ್ಬರಿ 30 ಸಾವಿರ ಸೀರೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿ ಸೀರೆಯ ಜೊತೆ ಸಿ.ಪಿ ಯೋಗೇಶ್ವರ್‍ಗೆ ಮತ ನೀಡಿ ಎನ್ನುವ ಕರಪತ್ರಗಳಿದ್ದವು.

    ಈ ಕುರಿತು ಸಿ.ಪಿ.ಯೋಗೇಶ್ವರ್ ಚುನಾವಣೆ ಮೊದಲೇ ಸಭೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಸೀರೆಗಳ ಜೊತೆಗೆ ಅಪಾರ ಪ್ರಮಾಣದ ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ರಶ್ನೆ ಮಾಡಿದವರಿಗೆ ಹುಣಸೂರು ಶಾಸಕ ಏಕ ವಚನದಲ್ಲೆ ಅವಾಜ್

    ಪ್ರಶ್ನೆ ಮಾಡಿದವರಿಗೆ ಹುಣಸೂರು ಶಾಸಕ ಏಕ ವಚನದಲ್ಲೆ ಅವಾಜ್

    ಮೈಸೂರು: ಮತದಾರರು ಸಾರ್ವಜನಿಕವಾಗಿ ಶಾಸಕರನ್ನು ಪ್ರಶ್ನಿಸುವುದೇ ತಪ್ಪಾ?. ಒಂದು ವೇಳೆ ಪ್ರಶ್ನಿಸಿದರೆ ಪ್ರಶ್ನೆ ಮಾಡಿದವರ ಕುಟುಂಬಸ್ಥರನ್ನು ಉದಾಹರಣೆಗೆ ತೆಗೆದುಕೊಂಡು ಏಕ ವಚನದಲ್ಲೇ ಮಾತನಾಡುವುದು ಶಾಸಕರು ಸುಸಂಸ್ಕೃತ ವರ್ತನೆಯಾ? ಇಂತಹ ಪ್ರಶ್ನೆ ಮೂಡಿಸುವಂತಹ ವಿಡಿಯೋ ಈಗ ವೈರಲ್ ಆಗಿದೆ.

    ಮೈಸೂರು ಜಿಲ್ಲೆಯ ಹುಣಸೂರು ಕ್ಷೇತ್ರದ ಶಾಸಕ ಎಚ್‍ಪಿ ಮಂಜುನಾಥ್ ಅವರೇ ಸಾರ್ವಜನಿಕ ಸಭೆಯಲ್ಲಿ ಬಹಿರಂಗವಾಗಿ ಪ್ರಶ್ನಿಸಿದ ವ್ಯಕ್ತಿಗಳಿಗೆ ಹೀನಾಮಾನವಾಗಿ ಗದರಿಸಿದ್ದಾರೆ.

    ಹುಣಸೂರು ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಎಚ್‍ಪಿ ಮಂಜುನಾಥ್ ಇಂತಹ ವರ್ತನೆ ಪ್ರದರ್ಶಿಸಿದ್ದಾರೆ. ಭಾಷಣ ಮಾಡುವಾಗ ಮಧ್ಯ ವ್ಯಕ್ತಿಯೊಬ್ಬ ಶೌಚಾಲಯ ಕಟ್ಟುವ ವಿಚಾರದಲ್ಲಿ ಅಧಿಕಾರಿಯೊಬ್ಬರ ನಡೆ ಬಗ್ಗೆ ಪ್ರಶ್ನಿಸಿದ್ದಾರೆ.

    ಕೋಪಗೊಂಡು ಬಾರೋ ನೀನೇ ಮೈಕ್ ಮುಂದೆ ಬಂದು ಮಾತಾಡು. ನಿನ್ನ ಹೆಂಡತಿ ಬೆಳಗ್ಗೆ ನಾಲ್ಕು ಗಂಟೆಗೆ ಬಯಲು ಪ್ರದೇಶದಲ್ಲಿ ಶೌಚಾಲಯಕ್ಕೆ ಕೂತಾಗ ಆಕೆಯನ್ನು ಅಲ್ಲಿಂದ್ದ ಎದ್ದೇಳಿಸಲು ಆ ಅಧಿಕಾರಿ ಬಂದು ಸಿಟಿ ಊದಬೇಕಿತ್ತೇನೋ. ನೀನು ದೊಡ್ಡ ಸ್ವಾಭಿಮಾನಿ ಸುಮ್ನೆ ನಿಂತುಕೋ ಎಂದು ದರ್ಪದಿಂದ ಮಾತನಾಡಿದ್ದಾರೆ.

    ಸಭೆಯಲ್ಲಿ ನಡೆದ ಕೆಲ ಗದ್ದಲದ ವೇಳೆಯೂ ಶಾಸಕ ಎಚ್‍ಪಿ ಮಂಜುನಾಥ್ ಅವರು ತಮ್ಮನ್ನು ಪ್ರಶ್ನಿಸಿದವರ ಮೇಲೆ ಏಕ ವಚನದಲ್ಲೇ ಮಾತನಾಡಿದ್ದಾರೆ.