Tag: Howdy Modi

  • ಪ್ರತಿ ಹಂತದಲ್ಲೂ ನಿಮ್ಮೊಂದಿಗೆ ಇರುತ್ತೇವೆ: ಮೋದಿಗೆ ಟ್ರಂಪ್ ಭರವಸೆ

    ಪ್ರತಿ ಹಂತದಲ್ಲೂ ನಿಮ್ಮೊಂದಿಗೆ ಇರುತ್ತೇವೆ: ಮೋದಿಗೆ ಟ್ರಂಪ್ ಭರವಸೆ

    ಹ್ಯೂಸ್ಟನ್: ನಾವು ಪ್ರತಿ ಹಂತದಲ್ಲೂ ನಿಮ್ಮೊಂದಿಗೆ ಇರುತ್ತೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭರವಸೆ ನೀಡಿದ್ದಾರೆ.

    ಹೌಡಿ ಮೋದಿ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರಿಗಾಗಿ ಅದ್ಭುತ ಕೆಲಸವನ್ನು ಮಾಡುತ್ತಿದ್ದಾರೆ. ಐತಿಹಾಸಿಕ ಸಾಲಿಗೆ ಸೇರುವ ಈ ಕಾರ್ಯಕ್ರಮದಲ್ಲಿ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ಖುಷಿ ತಂದಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ 50 ಸಾವಿರ ಜನ ಅನಿವಾಸಿ ಭಾರತೀಯರಿಗೆ ನನ್ನ ಧನ್ಯವಾದಗಳು ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗ್ಳೂರು ಹೆಸ್ರು ಪ್ರಸ್ತಾಪಿಸಿದ ಪ್ರಧಾನಿ ‘ಹೌಡಿ’ ಮೋದಿ

    ಅನಿವಾಸಿ ಭಾರತೀಯರು ನರೇಂದ್ರ ಮೋದಿ ಹಾಗೂ ಅವರ ತಂಡವನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಈ ಕಾರ್ಯಕ್ರಮ ಆಯೋಜಿಸಲು ನಮ್ಮ ಆಡಳಿತ ಸಿಬ್ಬಂದಿಯೂ ಶ್ರಮಿಸಿದ್ದಾರೆ. ನಮ್ಮ ಸರ್ಕಾರವು ಅನಿವಾಸಿ ಭಾರತೀಯರ ಸೇವೆಗಾಗಿ ಸದಾ ಸಿದ್ಧವಿದೆ. ಎರಡೂ ದೇಶಗಳ ಮಧ್ಯೆ ಉತ್ತಮ ಸಂಬಂಧ ಬೆಳೆಸುತ್ತಿರುವ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ನನ್ನ ಧನ್ಯವಾದ ಎಂದರು. ಇದನ್ನೂ ಓದಿ: ನೀವು ದೇಶದಿಂದ ದೂರ ಇರಬಹುದು, ನಿಮ್ಮೊಂದಿಗೆ ದೇಶವಿದೆ: ಮೋದಿ

    ಪ್ರಧಾನಿ ಮೋದಿಯವರು ಅಮೆರಿಕಗೆ ಭೇಟಿ ನೀಡಿದಾಗ ನನ್ನೊಂದಿಗೆ ಅನೇಕ ಅಭಿವೃದ್ಧಿ ವಿಚಾರವಾಗಿ ಚರ್ಚಿಸುತ್ತಾರೆ. ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ಮೊದಲಿಗಿಂತ ಬಲವಾಗಿದೆ. ಮೋದಿಯವರ ನಾಯಕತ್ವದಲ್ಲಿ ಜಗತ್ತು ಬಲವಾದ ಸಾರ್ವಭೌಮತೆಗೆ ಸಾಕ್ಷಿಯಾಗಿದೆ. ಭಾರತವು 300 ದಶಲಕ್ಷಕ್ಕೂ ಹೆಚ್ಚು ಜನರನ್ನು ಬಡತನದಿಂದ ಹೊರತಂದಿದೆ ಎಂದು ಹೇಳಿದರು. ಇದನ್ನೂ ಓದಿ: ಹ್ಯೂಸ್ಟನ್‍ನಲ್ಲಿ ಕನ್ನಡ ಡಿಂಡಿಮ

    ನಾವು ನಿಮ್ಮನ್ನು ಪ್ರೀತಿಸುತ್ತೇವೆ, ನಿಮ್ಮನ್ನು ಬೆಂಬಲಿಸುತ್ತೇವೆ ಮತ್ತು ಪ್ರತಿ ಹಂತದಲ್ಲೂ ನಿಮ್ಮೊಂದಿಗೆ ಇರುತ್ತೇವೆ. ನಮ್ಮೆರಡೂ ರಾಷ್ಟ್ರಗಳು ಹಿಂದೆಂದಿಗಿಂತಲೂ ಸಮೃದ್ಧಿಯಾಗಲು ನಿಮ್ಮೊಂದಿಗೆ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇನೆ. ಮುಗ್ಧ ನಾಗರಿಕರನ್ನು ಇಸ್ಲಾಮಿಕ್ ಭಯೋತ್ಪಾದನೆಯಿಂದ ರಕ್ಷಿಸಲು ನಾವು ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದರು.

  • ನೀವು ದೇಶದಿಂದ ದೂರ ಇರಬಹುದು, ನಿಮ್ಮೊಂದಿಗೆ ದೇಶವಿದೆ: ಮೋದಿ

    ನೀವು ದೇಶದಿಂದ ದೂರ ಇರಬಹುದು, ನಿಮ್ಮೊಂದಿಗೆ ದೇಶವಿದೆ: ಮೋದಿ

    -ಹೊಸ ಭಾರತಕ್ಕಾಗಿ ಹಳೆಯ ಕೆಲವೊಂದಕ್ಕೆ ಬೀಳ್ಕೊಡುಗೆ

    ಹ್ಯೂಸ್ಟನ್: ಅಮೆರಿಕಾದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನೀವು ದೇಶದಿಂದ ದೂರ ಇರಬಹುದು, ನಿಮ್ಮೊಂದಿಗೆ ದೇಶವಿದೆ ಎಂದು ಹೇಳುವ ಮೂಲಕ ನಿಮ್ಮೊಂದಿಗೆ ಭಾರತ ಸರ್ಕಾರವಿದೆ ಎಂದು ಭರವಸೆ ನೀಡಿದರು.

    ಕೇವಲ ಐದು ವರ್ಷಗಳಲ್ಲಿ 2 ಲಕ್ಷ ಕಿ.ಮೀ. ಗ್ರಾಮಗಳಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಇಂದು ಭಾರತದ ಪ್ರತಿ ಕುಟುಂಬವೂ ಬ್ಯಾಂಕ್ ವ್ಯವಹಾರ ನಡೆಸುತ್ತಿದ್ದಾರೆ. ಇಂದು ಶೇ .95 ರಷ್ಟು ಮನೆಗಳಲ್ಲಿ ಅಡುಗೆ ಅನಿಲ ಇದೆ. ಏನು ಬದಲಾಗಲ್ಲ ಅನ್ನೋದನ್ನು ಮೊದಲ ಕಿತ್ತು ಹಾಕಬೇಕಿದೆ. ಸಾಮಾನ್ಯ ವ್ಯಕ್ತಿ ಉದ್ಯೋಗಿಯಾದಾಗ ಆತನ ಜೀವನಮಟ್ಟ ಸುಧಾರಣೆ ಆಗುತ್ತದೆ. ದೇಶದ ಪ್ರತಿಯೊಬ್ಬರ ಸಬಲೀಕರಣವಾದ್ರೆ ಆರ್ಥಿಕತೆ ವೃದ್ಧಿಸುತ್ತದೆ. ಭಾರತ ನೆಟ್‍ವರ್ಕ್ ಡೇಟಾ ಬಳಕೆಯಲ್ಲಿ ಮುಂದಿದೆ. ಇಂದು ಡಿಜಿಟಲ್ ಇಂಡಿಯಾದತ್ತ ಸಾಗುತ್ತಿದ್ದು ಕಡಿಮೆ ಬೆಲೆಯಲ್ಲಿ ಡೇಟಾ ನೀಡಲಾಗುತ್ತಿದೆ. ಇಂದು ಪಾಸ್‍ಪೋರ್ಟ್ ಒಂದು ವಾರದೊಳಗೆ ನಿಮ್ಮ ಮನೆಗೆ ಬರುತ್ತದೆ. ಮೊದಲಿಗೆ ವೀಸಾಗಾಗಿ ಕಷ್ಟಪಡುತ್ತಿದ್ದರು. ಇಂದು ಎಲ್ಲವನ್ನು ಸರಳೀಕರಣಗೊಳಿಸಲಾಗಿದೆ.

    ಹೊಸ ಕಂಪನಿಗಳ ನೋಂದಣಿ ಇಂದು 24 ಗಂಟೆಯಲ್ಲಿ ಆಗುತ್ತಿದೆ. ಮೊದಲು ಟ್ಯಾಕ್ ರಿಫಂಡ್ ಗಾಗಿ ಎರಡ್ಮೂರು ತಿಂಗಳು ಬೇಕಾಗುತ್ತಿತ್ತು. ಒಂದು ದಿನದಲ್ಲಿಯೇ 50 ಲಕ್ಷ ಜನರು ಇನ್‍ಕಮ್ ಟ್ಯಾಕ್ಸ್ ರಿಟರ್ನ್ ತುಂಬಿದ್ದಾರೆ. ಇದೀಗ ಒಂದು ವಾರದಲ್ಲಿ ನೇರವಾಗಿ ಅವರವರ ಖಾತೆ ನೇರವಾಗಿ ಟಿಡಿಎಸ್ ಜಮೆ ಆಗುತ್ತಿದೆ. ಹೊಸ ಭಾರತದ ನಿರ್ಮಾಣಕ್ಕಾಗಿ ಕೆಲವು ವಿಷಯಗಳಿಗೆ ಬೀಳ್ಕೊಡುಗೆ ನೀಡಲಾಗಿದೆ. ಗಾಂಧಿ ಜಯಂತಿಯಂದು ಪ್ಲಾಸ್ಟಿಕ್ ನಿಷೇಧಿಸಲಾಗುತ್ತಿದೆ. ಹೊಸ ಭಾರತಕ್ಕಾಗಿ ಕೆಲವೊಂದಕ್ಕೆ ನಾವು ಬೀಳ್ಕೊಡಗೆ ನೀಡುತ್ತಿದ್ದೇವೆ. ಬಹು ಟ್ಯಾಕ್ಸ್ ಪದ್ಧತಿಗೆ ಅಂತ್ಯ ಹಾಡಿ ಜಿಎಸ್‍ಟಿ ಯನ್ನು ಜಾರಿಗೆ ತರಲಾಗಿದೆ. ಕೇವಲ ಕಾಗದ ಪತ್ರಗಳಲ್ಲಿದ್ದ ಹೆಸರುಗಳನ್ನು ತೆಗೆದು ಹಾಕುವ ಮೂಲಕ ಭಾರತದ ಅರ್ಥವ್ಯವಸ್ಥೆಯನ್ನು ಬಲಿಷ್ಠಗೊಳಿಸಲಾಗುತ್ತಿದೆ. ಈಗಾಗಲೇ ಭಾರತದಲ್ಲಿ 15 ಕಾನೂನಗಳನ್ನು ತೆಗೆದು ಹಾಕಲಾಗಿದೆ.

    ಇಂದು ಅನುಚ್ಛೇಧ 370 ತೆಗೆದು ಹಾಕುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಜನತೆಗೆ ದೇಶದಲ್ಲಿ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆರ್ಟಿಕಲ್ 370 ರದ್ದತಿಗೆ ಬಹುಮತ ಸಿಕ್ಕಿದೆ. ಭಾರತದ ಎಲ್ಲ ಸಂಸದರಿಗೆ ನೀವು ಎದ್ದು ನಿಂತು ಚಪ್ಪಾಳೆ ತಟ್ಟಬೇಕಿದೆ. ಭಾರತದ ಕಠಿಣ ನಿರ್ಧಾರಗಳಿಂದ ಕೆಲವರಿಗೆ ತೊಂದರೆಯಾಗುತ್ತಿದೆ. ತಮ್ಮ ದೇಶವನ್ನು ಹಿಡಿತದಲ್ಲಿಟ್ಟುಕೊಳ್ಳದೇ ಇರುವವರಿಗೆ ಕಷ್ಟವಾಗಿದೆ ಎಂದು ಪಾಕಿಸ್ತಾನಕ್ಕೆ ತಿರುಗೇಟು ನೀಡಿದರು.

    ಕೆಲವರು ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ದೇಶದಲ್ಲಿ ಶಾಂತಿ ಕದಡುವ ಕೆಲಸವನ್ನು ಮಾಡುತ್ತಿದ್ದು ಅಂತಹವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ. ಅಮೆರಿಕದಲ್ಲಿ 9/11 ಮತ್ತು ಭಾರತದಲ್ಲಿ 26/11 ದಾಳಿಗಳಿಗೆ ಇಂದು ಉತ್ತರ ನೀಡುವ ಸಮಯ ಬಂದಿದೆ. ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವವರ ವಿರುದ್ಧ ನಾವು ನಿಂತಿದ್ದೇವೆ. ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಡೊನಾಲ್ಡ್ ಟ್ರಂಪ್ ಸಹ ಮುಂದಾಗಿದ್ದು, ಹಾಗಾಗಿ ನೀವೆಲ್ಲರೂ ಭಾರತದ ಪರವಾಗಿ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಧನ್ಯವಾದ ತಿಳಿಸಬೇಕು.

    ಹೊಸ ಭಾರತಕ್ಕಾಗಿ ನಾವು ಇಂದು ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಶೇ.100 ರಷ್ಟು ಎಫ್‍ಡಿಐ ಸಾಧ್ಯತೆಗಳಿವೆ. ಇದೇ ವೇಳೆ ಕವಿತೆ ಓದುವ ಮೂಲಕ ಮೋದಿಯವರು ತಮ್ಮ ಗುರಿಯನ್ನು ತಿಳಿಸಿದರು. ಯಾವ ಕಷ್ಟವು ಆಕಾಶಲ್ಲಿದೆಯೋ, ಅದನ್ನೇ ಪಡೆದುಕೊಳ್ಳುವ ಆಸೆ ನನ್ನಲಿದೆ. ಭಾರತ ಕಷ್ಟಗಳನ್ನು ಸೈಡಿನಲ್ಲಿಡುತ್ತಿಲ್ಲ. ಬದಲಾಗಿ ಕಷ್ಟಗಳನ್ನು ಎದುರಿಸಿ ಜಯಶಾಲಿ ಆಗುವತ್ತ ಸಾಗುತ್ತಿದ್ದೇವೆ. ಭಾರತ ತನ್ನ ಸಮಸ್ಯೆಗಳಿಗೆ ಪೂರ್ಣ ಪರಿಹಾರ ಕಂಡುಕೊಳ್ಳುವತ್ತ ನಿರತವಾಗಿದೆ ಎಂದರು.

    ಮುಂದಿನ ಎರಡ್ಮೂರು ದಿನಗಳಲ್ಲಿ ಟ್ರಂಪ್ ಜೊತೆ ಮಾತುಕತೆ ನಡೆಯಲಿದ್ದು, ಫಲಿತಾಂಶ ಸಕರಾತ್ಮಕವಾಗಿರಲಿದೆ. ಇಂದು ನೀವೆಲ್ಲರು ದೇಶದಿಂದ ದೂರ ಇರಬಹದು, ಆದರೆ ದೇಶ ನಿಮ್ಮಿಂದ ದೂರವಿಲ್ಲ. ಟ್ರಂಪ್ ನನ್ನನ್ನು ಕಠಿಣ ನಿರ್ಧಾರ ತೆಗೆದುಕೊಳ್ಳುವ ವ್ಯಕ್ತಿ ಎಂದು ಹೇಳುತ್ತಾರೆ. ಆದ್ರೆ ಟ್ರಂಪ್ ವ್ಯವಹಾರ ಕಲೆಯನ್ನು ಬಲ್ಲವರಾಗಿದ್ದಾರೆ ಎಂದು ತಮ್ಮ ಮಾತನ್ನು ಮುಗಿಸಿದರು.

    ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮಾತು ಮುಗಿಸುತ್ತಿದ್ದಂತೆ ಟ್ರಂಪ್ ಸೇರಿದಂತೆ ಎಲ್ಲ ಅಧಿಕಾರಿಗಳು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಗೌರವ ಸೂಚಿಸಿದರು. ವೇದಿಕೆಯಿಂದ ಕೆಳಗೆ ಮೋದಿಯರು ಟ್ರಂಪ್ ಕೈ ಹಿಡಿದುಕೊಂದೇ ಕಾರ್ಯಕ್ರಮದಿಂದ ನಿರ್ಗಮಿಸಿದರು.

  • ಹ್ಯೂಸ್ಟನ್‍ನಲ್ಲಿ ಕನ್ನಡ ಡಿಂಡಿಮ

    ಹ್ಯೂಸ್ಟನ್‍ನಲ್ಲಿ ಕನ್ನಡ ಡಿಂಡಿಮ

    -ನ್ಯೂ ಇಂಡಿಯಾ ಕನಸಿನತ್ತ ಭಾರತ

    ಹ್ಯೂಸ್ಟನ್: ಹ್ಯೂಸ್ಟನ್ ನಗರದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಹೇಗಿದ್ದೀರಿ ಎಂಬ ಪ್ರಶ್ನೆಗೆ ಕನ್ನಡದಲ್ಲಿ ಚೆನ್ನಾಗಿದ್ದೇವೆ ಎಂದು ಹೇಳಿದರು.

    ಇಂದು ನೋಡುತ್ತಿರುವ ಸನ್ನಿವೇಶ ಕಲ್ಪನೆಗೂ ನಿಲುಕದ್ದು. ಇಲ್ಲಿ ಸೇರಿರುವ ಜನರು ಕೇವಲ ಸಂಖ್ಯೆಗೆ ಸೀಮಿತವಾಗಿಲ್ಲ. ಇಂದು ನಾವೆಲ್ಲರೂ ಹೊಸ ಇತಿಹಾಸ ಮತ್ತು ಹೊಸ ಸಂಬಂಧ ನೋಡುವಂತಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಜನಪ್ರತಿನಿಧಿಗಳಿಗೆ ನಾನು ಧನ್ಯವಾದ ತಿಳಿಸುತ್ತೇನೆ ಎಂದು ಮೋದಿ ಹೇಳಿದರು.

    ಕಾರ್ಯಕ್ರಮಕ್ಕೆ ಬರಲು ಹಲವು ಜನರು ನೋಂದಣಿ ಮಾಡಿಕೊಳ್ಳಲು ಮುಂದಾಗಿದ್ದರು. ಆದರೆ ಸ್ಥಳದ ಅಭಾವದಿಂದಾಗಿ ಬರಲು ಸಾಧ್ಯವಾಗಲಿಲ್ಲ. ಹವಾಮಾನ ವೈಪರೀತ್ಯದ ನಡುವೆ ಆಯೋಜಕರು ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಹಾಗಾಗಿ ಎಲ್ಲರಿಗೂ ಭಾರತದ ಪರವಾಗಿ ಧನ್ಯವಾದ ತಿಳಿಸುತ್ತೇನೆ ಎಂದರು.

    ಈ ಕಾರ್ಯಕ್ರಮದ ಹೆಸರು ಹೌಡಿ ಮೋದಿ. ಅಂದ್ರೆ ಹೇಗಿದ್ದೀರಿ ಎಂದರ್ಥವಾಗುತ್ತದೆ. ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಹೇಳಲು ಇಷ್ಟಪಡುತ್ತೇನೆ. ಎಲ್ಲವೂ ಚೆನ್ನಾಗಿದೆ ಎಂಬ ಮಾತನ್ನು ಮೋದಿಯವರು ಕನ್ನಡ, ತಮಿಳು, ತೆಲುಗು, ಗುಜರಾತಿ ಸೇರಿದಂತೆ ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಎಲ್ಲ ಅನಿವಾಸಿ ಭಾರತೀಯರಿಗೆ ತಿಳಿಸಿದರು.

    2019ರ ಚುನಾವಣೆ ಭಾರತದ ಪ್ರಜಾಪ್ರಭುತ್ವವನ್ನು ಜಾಗತೀಕ ಮಟ್ಟದಲ್ಲಿ ತೋರಿಸಿತು. ಈ ಚುನಾವಣೆಯಲ್ಲಿ ಅಮೆರಿಕದ ಜನಸಂಖ್ಯೆಯ ಎರಡರಷ್ಟು ಜನರು ಮತ ಚಲಾಯಿಸಿದರು. 80 ಲಕ್ಷ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಿದರು. ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಮಹಿಳೆಯರು ಮತ ಚಲಾಯಿಸಿದ್ದು, ಹೆಚ್ಚು ಮಹಿಳಾ ಸಂಸದರು ಆಯ್ಕೆಯಾಗಿ ಬಂದರು ಎಂದು ಹೇಳಲು ಖುಷಿಯಾಗುತ್ತಿದೆ. ಈ ಎಲ್ಲವೂ ಭಾರತೀಯರಿಂದ ಸಾಧ್ಯವಾಗಿದೆಯೇ ವಿನಃ ಮೋದಿಯಿಂದ ಆಗಿಲ್ಲ. ಭಾರತ ಇಂದು ನ್ಯೂ ಇಂಡಿಯಾ ಕನಸನ್ನು ಪೂರ್ಣ ಮಾಡಲು ಹಗಲು-ರಾತ್ರಿ ಅನ್ನದೇ ಕೆಲಸ ಮಾಡುತ್ತಿದೆ. ಇಂದು ನಾವು ಯಾರಂದಿಗೂ ಸ್ಪರ್ಧೆ ಮಾಡುತ್ತಿಲ್ಲ. ನಮಗೆ ನಾವೇ ಚಾಲೆಂಜ್ ಹಾಕಿಕೊಂಡು ಅತಿ ವೇಗವಾಗಿ ಅಭಿವೃದ್ಧಿಯತ್ತ ಸಾಗುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

  • ಬೆಂಗ್ಳೂರು ಹೆಸ್ರು ಪ್ರಸ್ತಾಪಿಸಿದ ಪ್ರಧಾನಿ ‘ಹೌಡಿ’ ಮೋದಿ

    ಬೆಂಗ್ಳೂರು ಹೆಸ್ರು ಪ್ರಸ್ತಾಪಿಸಿದ ಪ್ರಧಾನಿ ‘ಹೌಡಿ’ ಮೋದಿ

    -ಅಬ್ ಕೀ ಬಾರ್ ಟ್ರಂಪ್ ಸರ್ಕಾರ

    ಹ್ಯೂಸ್ಟನ್: ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಹೆಸರನ್ನು ಪ್ರಸ್ತಾಪಿಸಿದರು. ಹ್ಯೂಸ್ಟನ್ ನ ಎನ್‍ಆರ್ ಜಿ ಕ್ರೀಡಾಂಗಣದಲ್ಲಿ ಸುಮಾರು 50 ಸಾವಿರ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿದರು.

    ಇಂದು ಬೆಳಗ್ಗೆ ವಿಶೇಷ ವ್ಯಕ್ತಿಯನ್ನು ಭೇಟಿಯಾಗಿದ್ದೇನೆ. ಇಂದು ವ್ಯಕ್ತಿ ನಮ್ಮ ಜೊತೆಯಲ್ಲಿದ್ದು, ಅವರ ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲ ಎಂದು ಭಾಷಣದ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಗಳಿದರು.

    ಟ್ರಂಪ್ ಇಂದು ಈ ಕಾರ್ಯಕ್ರಮಕ್ಕೆ ಬಂದಿರೋದು ಹೆಮ್ಮೆಯ ವಿಚಾರ. ಸ್ನೇಹಶೀಲತೆ, ವಿಶ್ವಾಸಕ್ಕೆ ಟ್ರಂಪ್ ಉದಾಹರಣೆ. ಅಮೆರಿಕದ ಅರ್ಥ ವ್ಯವಸ್ಥೆಯನ್ನು ಮತ್ತಷ್ಟು ಸದೃಢ ಮಾಡುವ ಗುರಿಯನ್ನು ಟ್ರಂಪ್ ಹೊಂದಿದ್ದಾರೆ. ಅಬ್ ಕೀ ಬಾರ್ ಅಮೆರಿಕದಲ್ಲಿ ಟ್ರಂಪ್ ಸರ್ಕಾರ ಎಂದು ಹೇಳಿದರು.

    ಟ್ರಂಪ್ ಭೇಟಿಯಾಗುವ ಅವಕಾಶ ನನಗೆ ಹಲವು ಬಾರಿ ಸಿಕ್ಕಿದೆ. ಪ್ರತಿ ಬಾರಿಯೂ ಅವರಲ್ಲಿಯೂ ನಾನು ಮಿತ್ರತ್ವ ಭಾವನೆಯನ್ನು ನೋಡಿದ್ದೇನೆ. ಪ್ರತಿಬಾರಿ ಭೇಟಿಯಾದಗಲೂ ನಮ್ಮ ಸ್ನೇಹ ಗಟ್ಟಿಯಾಗುತ್ತಾ ಸಾಗಿದೆ. ವೈಟ್ ಹೌಸ್ ನಲ್ಲಿ ಟ್ರಂಪ್ ಅದ್ಧೂರಿಯಾಗಿ ದೀಪಾವಳಿ ಆಚರಣೆ ಮಾಡಿದ್ದಾರೆ.ನಾನು ಮೊದಲ ಬಾರಿ ಟ್ರಂಪ್ ರನ್ನು ಭೇಟಿಯಾದಾಗ ವೈಟ್ ಹೌಸ್ ನಲ್ಲಿ ಭಾರತದ ಗೆಳೆಯನೊಬ್ಬನಿದ್ದಾನೆ ಎಂದು ಹೇಳಿದ್ದರು. ಇಂದು ನಿಮ್ಮೆಲ್ಲರು ಹಾಜರಿ ಎರಡು ದೇಶಗಳ ಸ್ನೇಹಕ್ಕೆ ಸಾಕ್ಷಿಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಎರಡೂ ದೇಶಗಳ ನಡುವಿನ ಸಂಬಂಧ ಬಹು ಎತ್ತರದತ್ತ ಸಾಗಿದೆ. ಇಂದು ಅಧ್ಯಕ್ಷ ಟ್ರಂಪ್ ನಮ್ಮ ಸಂಬಂಧದ ಹೃದಯ ಬಡಿತವನ್ನು ಕೇಳಬಹುದು.

    ಭಾರತದಲ್ಲಿ ಇಂದು ಭಾನುವಾರದ ರಾತ್ರಿಯಾಗದ್ದರೂ ಜನರು ಟಿವಿ ಮುಂದೆ ಕುಳಿತು ಇತಿಹಾಸ ನಿರ್ಮಾಣ ಆಗೋದನ್ನು ವೀಕ್ಷಿಸುತ್ತಿದ್ದಾರೆ. 2017ರಲ್ಲಿ ಟ್ರಂಪ್ ನಮಗೆ ನಮ್ಮ ಪರಿವಾರದೊಂದಿಗೆ ಸೇರಿಸಿದ್ದರು. ಇಂದು ನಾನು ನಿಮಗೆ ನಮ್ಮ ಪರಿವಾರವನ್ನು ಪರಿಚಯಿಸುವ ಅವಕಾಶ ಲಭಿಸಿದೆ. ಎರಡು ದೇಶಗಳ ನಡುವಿನ ಸಂಬಂಧ ಉತ್ತಮವಾಗಿದ್ದು, ಹ್ಯೂಸ್ಟನ್ ಟು ಹೈದರಾಬಾದ್, ಬೋಸ್ಟನ್ ಟು ಬೆಂಗಳೂರು, ಚಿಕಾಗೋ ಟು ಶಿಮ್ಲಾ, ಲಾಸ್ ಏಂಜೆಲಸ್ ಟು ಲೂಧಿಯಾನ, ನ್ಯೂ ಜೆರ್ಸಿ ಟು ನ್ಯೂ ದೆಹಲಿ ಜನರ ನಾಡಿ ಮಿಡಿತ ಒಂದಾಗಿದೆ.

  • ಮೋದಿ ಸರಳತೆಗೆ ನೆಟ್ಟಿಗರು ಫಿದಾ- ವಿಡಿಯೋ ವೈರಲ್

    ಮೋದಿ ಸರಳತೆಗೆ ನೆಟ್ಟಿಗರು ಫಿದಾ- ವಿಡಿಯೋ ವೈರಲ್

    ಹ್ಯೂಸ್ಟನ್‍: ಪ್ರಧಾನಿ ನರೇಂದ್ರ ಮೋದಿ ಅಮೆರಿಕದಲ್ಲಿ ನಡೆಯುತ್ತಿರುವ ಬಹು ನಿರೀಕ್ಷಿತ ‘ಹೌಡಿ ಮೋದಿ’ ಕಾರ್ಯಕ್ರಮಕ್ಕೆ ತೆರಳಿದ್ದು, ಅಲ್ಲಿಯೂ ಸಹ ಸರಳತೆಯ ಮೂಲಕ ಜನರ ಹೃದಯವನ್ನು ಗೆದ್ದಿದ್ದಾರೆ.

    ಅಮೆರಿಕದ ಹ್ಯೂಸ್ಟನ್‍ನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ವಿಮಾನ ನಿಲ್ದಾಣದಲ್ಲಿ ಮೋದಿಯವರನ್ನು ಸ್ವಾಗತಿಸಲು ಭಾರತೀಯರು ಹಾಗೂ ಯುಎಸ್‍ನ ಗಣ್ಯರು ಆಗಮಿಸಿದ್ದರು. ಸ್ವಾಗತ ಕೋರುವ ವೇಳೆ ಪುಷ್ಪ ಗುಚ್ಛವನ್ನು ನೀಡಿದ್ದಾರೆ. ಈ ವೇಳೆ ಕೆಲ ಹೂವುಗಳು ಕೆಳಗೆ ಬಿದ್ದಿವೆ. ಆಗ ಪ್ರಧಾನಿ ನರೇಂದ್ರ ಮೋದಿ ತಾವೇ ಎತ್ತಿಕೊಂಡು ತಮ್ಮ ಭದ್ರತಾ ಸಿಬ್ಬಂದಿಗೆ ನೀಡುವ ಮೂಲಕ ಸರಳತೆಯನ್ನು ಮೆರೆದಿದ್ದಾರೆ.

    ಪ್ರತಿಷ್ಠಿತ ಹೌಡಿ ಮೋದಿ ಕಾರ್ಯಕ್ರಮಕ್ಕೆ ಸ್ವಾಗತಿಸಲು ವಾಣಿಜ್ಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ನಿರ್ದೇಶಕ ಕ್ರಿಸ್ಟೋಫರ್ ಓಲ್ಸನ್, ಭಾರತದ ಯುಎಸ್ ರಾಯಭಾರಿ ಕೆನ್ನೆತ್ ಜಸ್ಟರ್ ಮತ್ತು ಅಮೆರಿಕದ ಭಾರತೀಯ ರಾಯಭಾರಿ ಹರ್ಷ್ ವರ್ಧನ್ ಶ್ರೀಂಗ್ಲಾ ಅವರು ಆಗಮಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಬರಮಾಡಿಕೊಂಡರು.

    ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿಮಾನದಿಂದ ಹೊರಗೆ ಬರುತ್ತಿದ್ದಂತೆ ಅಧಿಕಾರಿಗಳತ್ತ ನಡೆದು ಅವರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು. ಆಗ ಅವರಿಗೆ ಅಧಿಕಾರಿಗಳು ಹಾಗೂ ಗಣ್ಯರು ಪುಷ್ಪ ಗುಚ್ಛವನ್ನು ನೀಡುತ್ತಾರೆ. ಆಗ ಕೆಲವು ಹೂವುಗಳು ಕಾರ್ಪೆಟ್ ಮೇಲೆ ಬೀಳುತ್ತವೆ. ತಕ್ಷಣವೇ ಅವುಗಳನ್ನು ಎತ್ತಿಕೊಂಡು ಪ್ರಧಾನಿ ಮೋದಿ ತಮ್ಮ ಭದ್ರತಾ ಸಿಬ್ಬಂದಿಗೆ ನೀಡುತ್ತಾರೆ. ಈ ಮೂಲಕ ಸಣ್ಣ ವಿಷಯಗಳಿಗೂ ಪ್ರಧಾನಿ ಮೋದಿ ಗೌರವ ಕೊಡುತ್ತಾರೆ, ಚಿತ್ತ ಹರಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಈ ವಿಡಿಯೋವನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಳಗೆ ಬಿದ್ದ ಹೂವನ್ನು ಸ್ವಯಂ ಪ್ರೇರಿತವಾಗಿ ಮೇಲೆತ್ತಿ ಅದನ್ನು ತಮ್ಮ ಭದ್ರತಾ ಸಿಬ್ಬಂದಿಗೆ ನೀಡುತ್ತಾರೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಸರಳತೆ ಹಾಗೂ ಸೂಕ್ಷ್ಮತೆಯನ್ನು ತೋರಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

    ಶುಭವಾಗಲಿ ನರೇಂದ್ರ ಮೋದಿ ಜೀ, ನೀವು ಎಚ್ಚರಿಕೆಯಿಂದ ಗಮಿನಿಸಿದ್ದೀರಿ, ಪುಷ್ಪಗುಚ್ಛದಿಂದ ಬಿದ್ದ ಹೂವನ್ನು ಎತ್ತಿಕೊಂಡಿದ್ದೀರಿ. ಈ ಮೂಲಕ ನೀರು ಸಣ್ಣ ವಿಷಯಗಳನ್ನೂ ಗಮನಿಸುತ್ತೀರಿ, ಅಲ್ಲದೆ ಅದನ್ನು ಎತ್ತಿ ಕೊಡುವ ಮೂಲಕ ಸರಳತೆಯನ್ನು ಮೆರೆದಿದ್ದೀರಿ. ಇದು ಮಹಾನ್ ನಾಯಕನ ಸರಳತೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪ್ರಧಾನಿ ಮೋದಿಯವರು ಒಂದು ವಾರದವರೆಗೆ ಅಮೆರಿಕ ಪ್ರವಾಸಕ್ಕೆ ತೆರಳಿದ್ದು, ಎರಡನೇ ಬಾರಿ ಗೆದ್ದ ನಂತರ ಇದು ಮೊದಲ ಭೇಟಿಯಾಗಿದೆ. ಇಂದು ಸಂಜೆ ಹ್ಯೂಸ್ಟನ್‍ನಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುತ್ತಿರುವ ‘ಹೌಡಿ ಮೋದಿ’ ಕಾರ್ಯಕ್ರಮಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮೋದಿ ವೇದಿಕೆ ಹಂಚಿಕೊಳ್ಳಲಿದ್ದಾರೆ.

  • ಹೌಡಿ ಮೋದಿ ಕಾರ್ಯಕ್ರಮಕ್ಕೆ ಸಿದ್ಧಗೊಂಡ ಹ್ಯೂಸ್ಟನ್ ಎನ್‍ಆರ್ ಜಿ ಕ್ರೀಡಾಂಗಣ

    ಹೌಡಿ ಮೋದಿ ಕಾರ್ಯಕ್ರಮಕ್ಕೆ ಸಿದ್ಧಗೊಂಡ ಹ್ಯೂಸ್ಟನ್ ಎನ್‍ಆರ್ ಜಿ ಕ್ರೀಡಾಂಗಣ

    ಹ್ಯೂಸ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಜಂಟಿಯಾಗಿ ಭಾಗವಹಿಸುತ್ತಿರುವ ಹೌಡಿ ಮೋದಿ ಕಾರ್ಯಕ್ರಮಕ್ಕೆ ಹ್ಯೂಸ್ಟನ್ ಎನ್‍ಆರ್ ಜಿ ಕ್ರೀಡಾಂಗಣ ಸಿದ್ಧಗೊಂಡಿದೆ. ಕಾರ್ಯಕ್ರಮಕ್ಕೆ ಮುಂಚೆಯೇ ಅನಿವಾಸಿ ಭಾರತೀಯರು ಆಗಮಿಸುತ್ತಿದ್ದಾರೆ. ಕ್ರೀಡಾಂಗಣದ ಪ್ರವೇಶಕ್ಕಾಗಿ ಜನರು ಕಿಲೋ ಮೀಟರ್ ಗಟ್ಟಲೇ ಸರತಿ ಸಾಲಿನಲ್ಲಿ ನಿಂತಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರು ಎನ್‍ಆರ್ ಜಿ ಕ್ರೀಡಾಂಗಣದಲ್ಲಿ 50 ಸಾವಿರ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ವಿಶ್ವದ ಗಮನ ಸೆಳೆದಿರುವ ಹೌಡಿ ಮೋದಿ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ 30 ನಿಮಿಷ ಮಾತನಾಡಲಿದ್ದಾರೆ. ಮೋದಿಯವರ ಭಾಷಣ 9 ಗಂಟೆಗೆ ಆರಂಭವಾಗಲಿದೆ. ಈಗಾಗಲೇ ಅತಿಥಿಗಳು ಸೇರಿದಂತೆ ಅನಿವಾಸಿ ಭಾರತೀಯರು ಆಗಮಿಸಿದ್ದು, 7.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಅಮರಿಕ ಮತ್ತು ಭಾರತದ ನಡುವಿನ ವ್ಯವಹಾರಿಕ ಸಂಬಂಧದ ಬಗ್ಗೆ ಮೋದಿ ಮಾತನಾಡಲಿದ್ದಾರೆ ಎನ್ನಲಾಗಿದೆ.

    ಅಮೆರಿಕಾದ ಹ್ಯೂಸ್ಟನ್ ನಗರ ಮೋದಿಮಯವಾಗಿದ್ದು, ಕಾರ್ಯಕ್ರಮಕ್ಕೆ ನಮ್ಮ ರಾಷ್ಟ್ರಗೀತೆ ಜನಗಣಮನದಿಂದ ಆರಂಭಗೊಳ್ಳಲಿದೆ. ಪಿಎಂ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಜೊತೆಯಾಗಿ ವಿಶೇಷ ಬಾಲಕನೊಬ್ಬ ರಾಷ್ಟ್ರಗೀತೆ ಹಾಡಲಿದ್ದಾನೆ. ಕಾರ್ಯಕ್ರಮಕ್ಕೆ ಇಂಡಿಯನ್ ಮುಸ್ಲಿಂ ಅಸೋಸಿಯೇಶನ್ ಸದಸ್ಯರು ಮೋದಿ ಸ್ವಾಗತಕ್ಕೆ ಕಾದು ಕುಳಿತಿದ್ದಾರೆ. ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿಗಳ ಭಾಷಣವನ್ನು ಮೂರು ಭಾಷೆಗಳಲ್ಲಿ ನೇರ ಪ್ರಸಾರಗೊಳ್ಳಲಿದೆ. ಹಿಂದಿ, ಇಂಗ್ಲಿಷ್ ಮತ್ತು ಸ್ಪ್ಯಾನಿಶ್ ಭಾಷೆಗಳಲ್ಲಿ ಕೇಳಬಹುದಾಗಿದೆ.

    ಏನಿದು ಹೌಡಿ ಮೋಡಿ ಕಾರ್ಯಕ್ರಮ?
    ನೈಋತ್ಯ ಅಮೆರಿಕದಲ್ಲಿ ‘ಹೌ ಡು ಯು ಡು'(ನೀವು ಹೇಗಿದ್ದೀರಿ) ಎಂದು ಕೇಳಲು ಸಂಕ್ಷಿಪ್ತವಾಗಿ ‘ಹೌಡಿ’ ಎಂದು ಕರೆಯುತ್ತಾರೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಹ್ಯೂಸ್ಟನ್ ನಗರದಲ್ಲಿರುವ ಭಾರತೀಯರು ‘ಹೌಡಿ ಮೋದಿ’ ಹೆಸರನ್ನಿಟ್ಟಿದ್ದಾರೆ.

  • ಅಮೆರಿಕದಲ್ಲಿ ದಾಖಲೆ ಬರೆಯಲಿದೆ ‘ಹೌಡಿ ಮೋದಿ’ ಕಾರ್ಯಕ್ರಮ

    ಅಮೆರಿಕದಲ್ಲಿ ದಾಖಲೆ ಬರೆಯಲಿದೆ ‘ಹೌಡಿ ಮೋದಿ’ ಕಾರ್ಯಕ್ರಮ

    ನವದೆಹಲಿ: ಹ್ಯೂಸ್ಟನ್ ನಗರದಲ್ಲಿ ಸೆ.22 ರಂದು ಭಾರತೀಯ ಸಮುದಾಯ ಆಯೋಜಿಸಿರುವ ‘ಹೌಡಿ ಮೋದಿ’ ಕಾರ್ಯಕ್ರಮ ಅಮೆರಿಕ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಲಿದೆ.

    ಹೌದು. ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಲಿದ್ದು, ಈ ಮೂಲಕ ಅಮೆರಿಕದ ಇತಿಹಾಸದಲ್ಲಿ ಎರಡು ದೇಶದ ನಾಯಕರು ಸಾರ್ವಜನಿಕವಾಗಿ ಮಾತನಾಡುವ ಅತಿ ದೊಡ್ಡ ಖಾಸಗಿ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

    ಈ ಕಾರ್ಯಕ್ರಮಕ್ಕೆ ಟ್ರಂಪ್ ಆಗಮಿಸುತ್ತಾರೋ ಇಲ್ಲವೋ ಎನ್ನುವುದು ಖಚಿತವಾಗಿರಲಿಲ್ಲ. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿ ಟ್ರಂಪ್ ಆಗಮಿಸುತ್ತಿರುವ ವಿಚಾರವನ್ನು ಖಚಿತಪಡಿಸಿದ್ದಾರೆ.

    ವಿಶ್ವಸಂಸ್ಥೆಯ ಮಹಾಧಿವೇಶನ ಸೇರಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಂಬಂಧ ಮೋದಿ ಅಮೆರಿಕಕ್ಕೆ ತೆರಳಲಿದ್ದು ಸೆ.27ರ ವರೆಗೆ ಪ್ರವಾಸದಲ್ಲಿ ಇರಲಿದ್ದಾರೆ. ‘ಹೌಡಿ ಮೋಡಿ’ ಕಾರ್ಯಕ್ರಮ ಆಯೋಜಕರು ಕೆಲ ದಿನಗಳಿಂದ ಈ ಕಾರ್ಯಕ್ರಮಕ್ಕೆ ಟ್ರಂಪ್ ಅತಿಥಿಯಾಗಿ ಆಗಮಿಸುತ್ತಾರೆ ಎಂದು ಹೇಳುತ್ತಾ ಬಂದಿದ್ದರೂ ಶ್ವೇತ ಭವನ ಖಚಿತ ಪಡಿಸಿರಲಿಲ್ಲ. ಭಾನುವಾರ ಶ್ವೇತ ಭವನ ಅಧಿಕೃತವಾಗಿ ಟ್ರಂಪ್ ಪಾಲ್ಗೊಳ್ಳುವ ಬಗ್ಗೆ ಖಚಿತಪಡಿಸಿದೆ.

    ಏನಿದು ಹೌಡಿ ಮೋಡಿ ಕಾರ್ಯಕ್ರಮ?
    ನೈಋತ್ಯ ಅಮೆರಿಕದಲ್ಲಿ ‘ಹೌ ಡು ಯು ಡು'(ನೀವು ಹೇಗಿದ್ದೀರಿ) ಎಂದು ಕೇಳಲು ಸಂಕ್ಷಿಪ್ತವಾಗಿ ‘ಹೌಡಿ’ ಎಂದು ಕರೆಯುತ್ತಾರೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಹ್ಯೂಸ್ಟನ್ ನಗರದಲ್ಲಿರುವ ಭಾರತೀಯರು ‘ಹೌಡಿ ಮೋದಿ’ ಹೆಸರನ್ನಿಟ್ಟಿದ್ದಾರೆ.

    ಯಾವೆಲ್ಲ ದಾಖಲೆ ನಿರ್ಮಾಣವಾಗುತ್ತೆ?
    ಎನ್‌ಆರ್‌ಜಿ ಫುಟ್ ಬಾಲ್ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು ಭಾರತೀಯ ಮೂಲದ 50 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವುದರ ಜೊತೆ ಅಮೆರಿಕದ 60 ಸಂಸದರು ಭಾಗವಹಿಸುತ್ತಿದ್ದಾರೆ. ಈಗಾಗಲೇ ಎಲ್ಲ ಟಿಕೆಟ್ ಗಳು ಮಾರಾಟಗೊಂಡಿದೆ. ಅಮೆರಿಕದಲ್ಲಿ ಪೋಪ್ ಹೊರತು ಪಡಿಸಿ ಯಾವೊಬ್ಬ ವಿದೇಶಿ ಅತಿಥಿಯ ಕಾರ್ಯಕ್ರಮಕ್ಕೆ 50 ಸಾವಿರ ಮಂದಿ ಭಾಗವಹಿಸಿದ್ದ ಇತಿಹಾಸವಿಲ್ಲ. ಅಷ್ಟೇ ಅಲ್ಲದೇ ಒಂದು ದೇಶದ ನಾಯಕನೊಬ್ಬ ಅಮೆರಿಕದಲ್ಲಿ 50 ಸಾವಿರ ಮಂದಿಯನ್ನು ಉದ್ದೇಶಿಸಿ ಮಾತನಾಡಿಲ್ಲ. ಹೀಗಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಅಮೆರಿಕ ನೆಲದಲ್ಲಿ ಮೋದಿ ದಾಖಲೆ ಬರೆಯಲಿದ್ದಾರೆ. ಪತಂಜಲಿ ಯೋಗಪೀಠ, ಅಕ್ಷಯ ಪಾತ್ರಾ ಫೌಂಡೇಶನ್, ಐಐಟಿ ಹಳೆ ವಿದ್ಯಾರ್ಥಿ ಸಂಘಟನೆ ಸೇರಿದಂತೆ ಸುಮಾರು 650 ಸಂಘ, ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಕೈಜೋಡಿಸಿವೆ.

    ಭಾರತಕ್ಕೆ ಏನು ಲಾಭ?
    ಜಮ್ಮು ಕಾಶ್ಮೀರ ವಿಚಾರವನ್ನು ಮುಂದಿಟ್ಟುಕೊಂಡು ನಮಗೆ ಸಹಾಯ ಮಾಡಿ ಪಾಕಿಸ್ತಾನ ಹಲವು ದೇಶಗಳಲ್ಲಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಮೋದಿ ಕಾರ್ಯಕ್ರಮದಲ್ಲೇ ಟ್ರಂಪ್ ಭಾಗವಹಿಸುವ ಮೂಲಕ ಭಾರತದ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ ಎಂಬ ಸಂದೇಶದ ರವಾನಿಸಿದಂತೆ ಆಗುತ್ತದೆ. ಇದರ ಜೊತೆಯಲ್ಲೇ ಅಮೆರಿಕ ಮತ್ತು ಚೀನಾದ ನಡುವೆ ವ್ಯಾಪಾರ ಸಮರ ಈಗ ತೀವ್ರಗೊಂಡಿದೆ. ಹೀಗಾಗಿ ಮೋದಿ ಟ್ರಂಪ್ ದ್ವಿಪಕ್ಷೀಯ ಮಾತುಕತೆಯ ವೇಳೆ ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆದರೆ ಭಾರತಕ್ಕೆ ನೆರವಾಗಲಿದೆ.

    ಟ್ರಂಪ್‍ಗೆ ಏನು ಲಾಭ?
    2020ರಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಣಕ್ಕೆ ಇಳಿಯಲಿದ್ದಾರೆ. ಅಮೆರಿಕದ ಚುನಾವಣೆಯಲ್ಲಿ ಭಾರತೀಯರು ಪ್ರಧಾನ ಪಾತ್ರ ವಹಿಸಲಿರುವುದರಿಂದ ಈ ಕಾರ್ಯಕ್ರಮದಲ್ಲಿ ಭಾರತದ ಜೊತೆಗಿನ ನಮ್ಮ ಸಂಬಂಧ ನನ್ನ ಅವಧಿಯಲ್ಲಿ ಉತ್ತಮವಾಗಿದೆ ಎಂದು ಹೇಳಿ ಮತದಾರರನ್ನು ಸೆಳೆಯುವ ಸಾಧ್ಯತೆಯಿದೆ.

    ಭಾಷಣ ಮೊದಲಲ್ಲ:
    ಪ್ರಧಾನಿ ಮೋದಿ ಅವರು ಅಮೆರಿಕದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುತ್ತಿರುವುದು ಇದು ಮೊದಲಲ್ಲ. 2014ರಲ್ಲಿ ಅಮೆರಿಕ ಭೇಟಿ ವೇಳೆ ನ್ಯೂಯಾರ್ಕಿನ ಮ್ಯಾಡಿಸನ್ ಸ್ಕ್ವಾರ್ ನಲ್ಲಿ 20 ಸಾವಿರ ಮಂದಿಯನ್ನು ಉದ್ದೇಶಿಸಿ ಭಾಷಣ ಮಾಡಿದ್ದರೆ 2015ರಲ್ಲಿ ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿ ಕಾರ್ಯಕ್ರಮದಲ್ಲೂ ಸುಮಾರು 20 ಸಾವಿರ ಜನರನ್ನು ಉದ್ದೇಶಿಸಿ ಮಾತನಾಡಿದ್ದರು.

  • ಅಮೆರಿಕದಲ್ಲಿ 50 ಸಾವಿರ ಜನರನ್ನು ಉದ್ದೇಶಿಸಿ ಮೋದಿ ಮಾತು

    ಅಮೆರಿಕದಲ್ಲಿ 50 ಸಾವಿರ ಜನರನ್ನು ಉದ್ದೇಶಿಸಿ ಮೋದಿ ಮಾತು

    ಟೆಕ್ಸಾಸ್: ಅಮೆರಿಕದಲ್ಲಿ ನಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಸುಮಾರು 50 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.

    ಹೋಸ್ಟನ್‍ನ ಐತಿಹಾಸಿಕ ಎನ್‍ಆರ್‍ಜಿ ಕ್ರೀಡಾಂಗಣದಲ್ಲಿ ಸೆ.22 ರಂದು ಕಾರ್ಯಕ್ರಮ ನಡೆಯುತ್ತಿದ್ದು, ಇದಕ್ಕೆ ‘ಹೌಡಿ ಮೋದಿ’ ಎಂದು ಹೆಸರಿಡಲಾಗಿದೆ. ಈ ಕಾರ್ಯಕ್ರಮವನ್ನು ಅಮೆರಿಕದ ಟೆಕ್ಸಾಸ್ ಇಂಡಿಯಾ ಫೋರಂ ಮತ್ತು ಇಂಡಿಯನ್ ಡೈಸ್ಪೋರಾ ಎಂಬ ಸಂಸ್ಥೆಗಳು ಹೋಸ್ಟ್ ಮಾಡುತ್ತಿವೆ.

    ಎನ್‍ಆರ್‍ಜಿ ಕ್ರೀಡಾಂಗಣದಲ್ಲಿ ಈ ಐತಿಹಾಸಿಕ ಕಾರ್ಯಕ್ರಮವನ್ನು ಆಯೋಜಿಸಲು ಉತ್ಸುಕರಾಗಿದ್ದೇವೆ. ಇದು ಭಾರತ-ಅಮೆರಿಕದ ಅತಿ ದೊಡ್ಡ ಕಾರ್ಯಕ್ರಮವಾಗಿದೆ. ದೇಶದ ಸಂಸ್ಕೃತಿ ಹಾಗೂ ವೈವಿಧ್ಯತೆಯ ಪ್ರಾತಿನಿಧಿಕವಾಗಿ ಈ ಕಾರ್ಯಕ್ರಮ ನಡೆಯಲಿದೆ ಎಂದು ‘ಹೌಡಿ ಮೋದಿ’ ಕಾರ್ಯಕ್ರಮ ಆಯೋಜನಾ ಸಮಿತಿಯ ಕನ್ವೀನರ್ ಜುಗಲ್ ಮಲಾನಿ ತಿಳಿಸಿದ್ದಾರೆ.

    ‘ಶೇರ್ಡ್ ಡ್ರೀಮ್ಸ್, ಬ್ರೈಟ್ ಫ್ಯೂಚರ್’ ಎಂಬ ಅಡಿ ಬರಹದೊಂದಿಗೆ ‘ಹೌಡಿ ಮೋದಿ’ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅಮೆರಿಕ ಮತ್ತು ಭಾರತದ ಬೃಹತ್ ಪ್ರಜಾಪ್ರಭುತ್ವವನ್ನು ಒಗ್ಗೂಡಿಸುವ ಉದ್ದೇಶವನ್ನು ಕಾರ್ಯಕ್ರಮ ಪ್ರತಿಬಿಂಬಿಸಲಿದೆ ಎಂದು ಕಾರ್ಯಕ್ರಮದ ಆಯೋಜಕರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

    ದಿ ಟೆಕ್ಸಾಸ್ ಇಂಡಿಯಾ ಫೋರಂ(ಟಿಐಎಫ್) ಲಾಭಕ್ಕಾಗಿ ಇರುವ ಸಂಸ್ಥೆಯಲ್ಲ. ಇದು ಭಾರತಹಾಗೂ ಅಮೆರಿಕದ ಸಹಕಾರವನ್ನು ಪ್ರೋತ್ಸಾಹಿಸುವ ಸಂಸ್ಥೆಯಾಗಿದೆ. ಟಿಐಎಫ್ ಭಾರತ-ಅಮೆರಿಕದ ಸಂಘಟನೆ ಹಾಗೂ ಸಂಸ್ಥೆಗಳ ಜೊತೆಗೆ ಕಾರ್ಯನಿರ್ವಹಿಸಿ ನಮ್ಮ ಪ್ರಾದೇಶಿಕತೆಯನ್ನು ಉತ್ತೇಜಿಸುವುದು ಹಾಗೂ ಅವಕಾಶಗಳನ್ನು ಕಲ್ಪಿಸುವುದು ಇದರ ಉದ್ದೇಶವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.