Tag: Howdy Modi

  • ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿಯಿಂದ ಗಾಂಧೀಜಿಗೆ ಅವಮಾನ – ಸಿದ್ದರಾಮಯ್ಯ

    ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿಯಿಂದ ಗಾಂಧೀಜಿಗೆ ಅವಮಾನ – ಸಿದ್ದರಾಮಯ್ಯ

    – ಮೋದಿಗೆ ಸ್ವಾತಂತ್ರ್ಯ ಪೂರ್ವ ಭಾರತದ ಬಗ್ಗೆ ಗೊತ್ತೇ ಇಲ್ಲ

    ಬೆಂಗಳೂರು: ಅಮೆರಿಕಾದ ಹ್ಯೂಸ್ಟನ್ ನಗರದಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ರಾಷ್ಟ್ರಪಿತ ಗಾಂಧೀಜಿಯನ್ನು ಅವಮಾನಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

    ಇಂದು ನಡೆದ ಜವಾಹರಲಾಲ್ ನೆಹರು ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿ ಇಡೀ ಬದುಕನ್ನೇ ದೇಶಕ್ಕೆ ಅರ್ಪಿಸಿದ್ದಾರೆ. ದೇಶ ಕಟ್ಟಲು ದೇಹವನ್ನೇ ಸವೆಸಿದ ವ್ಯಕ್ತಿಯನ್ನು ಕೆಟ್ಟದಾಗಿ ಬಿಂಬಿಸಲು ಯತ್ನಿಸುತ್ತಿದ್ದಾರೆ. ದೇಶದಲ್ಲಿ ಒಬ್ಬರೆ ರಾಷ್ಟ್ರಪಿತ ಇರೋದು ಅದು ಗಾಂಧಿ ಮಾತ್ರ ಎಂದು ಹೇಳಿದ್ದಾರೆ.

    ಕಾರ್ಯಕ್ರಮದಲ್ಲಿ ಟ್ರಂಪ್ ಮೋದಿ ಅವರನ್ನು ಫಾದರ್ ಆಫ್ ದಿ ನೇಷನ್ ಅಂತಾರೆ. ಟ್ರಂಪ್‍ಗೆ ಜ್ಞಾನದ ಕೊರತೆ ಇತ್ತು. ಆದರೆ ಮೋದಿ ನಾನಲ್ಲ ರಾಷ್ಟ್ರಪಿತ ಗಾಂಧೀಜಿ ಎಂದು ಹೇಳಬಹುದಿತ್ತು. ಆದರೆ ಪ್ರಧಾನಿ ಮೋದಿ ಆ ರೀತಿ ಹೇಳಿಲ್ಲ. ಮೋದಿ ಸ್ವಾತಂತ್ರ ಬಂದ ಬಳಿಕ ಹುಟ್ಟಿದವರು. ಅವರಿಗೆ ಸ್ವಾತಂತ್ರ್ಯ ಪೂರ್ವ ಭಾರತದ ಬಗ್ಗೆ ಗೊತ್ತೇ ಇಲ್ಲ. ಆದರೆ ರಾಷ್ಟ್ರ ಭಕ್ತ, ರಾಷ್ಟ್ರ ಹರಿಕಾರ ಎಂದು ಹೇಳಿಕೊಳ್ಳುತ್ತಾರೆ. ಅವರಿಗೆ ಅವರೇ ಸರ್ಟಿಫಿಕೇಟ್ ಕೊಟ್ಟುಕೊಳ್ಳುತ್ತಾರೆ ಎಂದು ಮೋದಿ ಮೇಲೆ ಕಿಡಿಕಾರಿದರು.

    ಮೋದಿಯ ಆರ್ಥಿಕ ಆಡಳಿತ ಹೇಗಿದೆ ಎಂದರೆ ಜಿಡಿಪಿ ಶೇ.4.2 ಗೆ ಕುಸಿಯುತ್ತೆ ಅಂತ ವರದಿ ಬಂದಿದೆ. ನಿರುದ್ಯೋಗ ತಾಂಡವವಾಡುತ್ತಿದೆ. ಯುವಕ ಯುವತಿಯರೆಲ್ಲಾ ನಮ್ಮನ್ನು ನೋಡಿ ಮೋದಿ ಮೋದಿ ಅಂತಾರೆ. ಪಾಪ ಈಗ ಅವರೆಲ್ಲರೂ ಕೆಲಸ ಕೇಳಿದರೆ ಪಕೋಡ ಮಾರಿ ಎನ್ನುತ್ತಾರೆ. ಈ ಮಟ್ಟಿಗೆ ದೇಶವನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದರು.

    ನ್ಯಾಯಾಲಯಗಳಲ್ಲಿ ಸ್ವಾತಂತ್ರ್ಯ ಹೋಗ್ತಿದೆ. ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ತಮ್ಮ ಕೈಗೊಂಬೆ ಮಾಡ್ಕೊಂಡಿದ್ದಾರೆ. ಇಡಿ ಐಟಿ, ಸಿಬಿಐ ಎಲ್ಲಾ ತಮ್ಮ ಕೈಗೊಂಬೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ.

    ಇದೇ ವೇಳೆ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವಾಗಿ ಮಾತನಾಡಿ, ಹೆಸರು ಬದಲಾವಣೆಯಿಂದ ಏನೂ ಆಗುವುದಿಲ್ಲ. ಮೊದಲು ಅನುದಾನ ಬಿಡುಗಡೆ ಮಾಡಲಿ. ನಂತರ ಕ್ವಾಲಿಟಿ ಕೊಡಲಿ. ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಉಪಚುನಾವಣೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಈ ವೇಳೆ ತಿಳಿಸಿದರು.

  • ಹೌಡಿ ಮೋದಿ ನಂತರ ಈಗ ಹೌಡಿ ಬೆಂಗಳೂರು

    ಹೌಡಿ ಮೋದಿ ನಂತರ ಈಗ ಹೌಡಿ ಬೆಂಗಳೂರು

    ಬೆಂಗಳೂರು: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗಷ್ಟೇ ನಡೆಸಿಕೊಟ್ಟ ಹೌಡಿ ಮೋದಿ ಕಾರ್ಯಕ್ರಮ ವಿಶ್ವದ ಗಮನ ಸೆಳೆದಿತ್ತು. ಇದರಿಂದ ಪ್ರೇರಿತರಾದ ಬೆಂಗಳೂರಿನ ಶಾಲಾ ಮಕ್ಕಳು “ಹೌಡಿ ಬೆಂಗಳೂರು”, “ಹೌಡಿ ಹೆಚ್‍ಎನ್‍ಹಳ್ಳಿ” ಎಂಬ ವಿನೂತನ ಪ್ರತಿಭಟನೆ ಹಮ್ಮಿಕೊಂಡಿದರು.

    ನಗರದ ಹೆಚ್‍ಎನ್ ಹಳ್ಳಿಯ ಸುತ್ತಮುತ್ತಲಿನ ಪ್ರದೇಶಗಳ ನೂರಕ್ಕೂ ಹೆಚ್ಚು ಚಿಕ್ಕ ಮಕ್ಕಳು ಹಾಗೂ ನಾಗರೀಕರು ರಸ್ತೆ ಸರಿಪಡಿಸಬೇಕೆಂದು ಆಗ್ರಹಿಸಿದರು. ಅಲ್ಲದೆ ಮಕ್ಕಳು ಗುಂಡಿಗಳು ಬಿದ್ದ ರಸ್ತೆಯ ನೀರಿನಲ್ಲಿ ಕಾಗದದ ದೋಣಿಗಳ ಆಟವಾಡಿದರು.

    ಪ್ರತಿ ದಿನ ಶಾಲೆಗೆ ಹೋಗಬೇಕಾದರೆ ಗುಂಡಿ, ಧೂಳು, ಮೋರಿಯ ದುರ್ನಾತದಿಂದ ನಾವೆಲ್ಲಾ ಬೇಸತ್ತಿದ್ದೇವೆ. ನಮ್ಮ ಸ್ಕೂಲ್ ವ್ಯಾನ್ ಒಂದು ಕಿ.ಮೀ ರಸ್ತೆ ದಾಟಲು ಮುಕ್ಕಾಲು ಗಂಟೆ ಬೇಕಾಗುತ್ತೆ. ಹೀಗಾಗಿ ಗ್ರ್ಯಾಂಡ್ ಫಾದರ್ ಮೋದಿಯವರು ನಮ್ಮ ರೋಡ್ ಸರಿಪಡಿಸಬೇಕೆಂದು ಕೇಳಿಕೊಂಡರು.

    ಏನಿದು ಹೌಡಿ ಮೋದಿ ಕಾರ್ಯಕ್ರಮ?
    ನೈಋತ್ಯ ಅಮೆರಿಕದಲ್ಲಿ `ಹೌ ಡು ಯು ಡು'(ನೀವು ಹೇಗಿದ್ದೀರಿ) ಎಂದು ಕೇಳಲು ಸಂಕ್ಷಿಪ್ತವಾಗಿ `ಹೌಡಿ’ ಎಂದು ಕರೆಯುತ್ತಾರೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಹ್ಯೂಸ್ಟನ್ ನಗರದಲ್ಲಿರುವ ಭಾರತೀಯರು `ಹೌಡಿ ಮೋದಿ’ ಹೆಸರನ್ನಿಟ್ಟಿದ್ದರು.

    ಸೆಪ್ಟೆಂಬರ್ 22 ಭಾನುವಾರದಂದು ಹ್ಯೂಸ್ಟನ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದರು. ಅಲ್ಲದೆ, 50 ಸಾವಿರ ಭಾರತೀಯ ಅಮೆರಿಕನ್ನರ ದಾಖಲೆಯ ಜನಸಮೂಹವನ್ನು ಉದ್ದೇಶಿಸಿ ಭಾಷಣ ಮಾಡಿದ್ದರು.

  • ವಿಶ್ವ ಮಟ್ಟದಲ್ಲಿ ಭಾರತದ ಗೌರವ ಉನ್ನತ ಶಿಖರಕ್ಕೇರಿದೆ- ಪ್ರಧಾನಿ ಮೋದಿ

    ವಿಶ್ವ ಮಟ್ಟದಲ್ಲಿ ಭಾರತದ ಗೌರವ ಉನ್ನತ ಶಿಖರಕ್ಕೇರಿದೆ- ಪ್ರಧಾನಿ ಮೋದಿ

    – ಏಳು ದಿನಗಳ ಅಮೆರಿಕ ಪ್ರವಾಸದಿಂದ ಮರಳಿದ ಪ್ರಧಾನಿ
    – ಭವ್ಯ ಕಾರ್ಯಕ್ರಮದ ಮೂಲಕ ಮೋದಿಗೆ ಸ್ವಾಗತ

    ನವದೆಹಲಿ: ಕಳೆದ ಐದು ವರ್ಷಗಳಲ್ಲಿ ವಿಶ್ವ ಮಟ್ಟದಲ್ಲಿ ಭಾರತದ ಗೌರವ ಉನ್ನತ ಶಿಖರಕ್ಕೇರಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದರು.

    ಏಳು ದಿನಗಳ ಅಮೆರಿಕ ಪ್ರವಾಸವನ್ನು ಮುಗಿಸಿ ಮರಳಿ ತವರಿಗೆ ಆಗಮಿಸಿದ ಪ್ರಧಾನಿ ಮೋದಿಯನ್ನು ನವದೆಹಲಿಯ ಪಾಲಂ ವಿಮಾನ ನಿಲ್ದಾಣ ಬಳಿ ಭವ್ಯ ಕಾರ್ಯಕ್ರಮದ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಸುಮಾರು 50 ಸಾವಿರಕ್ಕೂ ಅಧಿಕ ಜನ ಮೋದಿಯವರನ್ನು ಬರಮಾಡಿಕೊಂಡರು. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ದೇಶದ ಜನರನ್ನುದ್ದೇಶಿಸಿ ಭಾಷಣ ಮಾಡಿದರು.

    2014ರಲ್ಲಿ ನಾನು ಅಧಿಕಾರ ವಹಿಸಿಕೊಂಡ ನಂತರವೂ ವಿಶ್ವಸಂಸ್ಥೆಗೆ ಹೋಗಿದ್ದೆ, ಈಗಲೂ ವಿಶ್ವಸಂಸ್ಥೆಗೆ ಹೋಗಿದ್ದೇನೆ. ಈ ಐದು ವರ್ಷಗಳಲ್ಲಿ ದೊಡ್ಡ ಬದಲಾವಣೆಯನ್ನು ಕಂಡಿದ್ದೇನೆ. ಭಾರತದ ಮೇಲಿನ ಗೌರವ, ಭಾರತದ ಬಗೆಗಿನ ಉತ್ಸಾಹ ಗಮನಾರ್ಹವಾಗಿ ಹೆಚ್ಚಾಗಿದೆ. ಇದಕ್ಕೆ ಕಾರಣೀಕರ್ತರಾದ 130 ಕೋಟಿ ದೇಶವಾಸಿಗಳಿಗೆ ನಾನು ಧನ್ಯವಾದ ಸಮರ್ಪಿಸುತ್ತೇನೆ ಎಂದು ಮೋದಿ ಭಾವುಕರಾದರು.

    ಇದೇ ವೇಳೆ ಪಾಲಂ ವಿಮಾನ ನಿಲ್ದಾಣದ ಬಳಿ ನೆರೆದಿದ್ದ 50 ಸಾವಿರಕ್ಕೂ ಅಧಿಕ ಜನರಿಗೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಕ್ಕಾಗಿ ನಾನು ನಿಮಗೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಇದು ನಾನು ಮನೆಗೆ ಮರಳಿದ ಸ್ಮರಣೀಯ ಸ್ವಾಗತವಾಗಿದೆ. ಈ ಸಂದರ್ಭದಲ್ಲಿ ನಾನು ಪ್ರತಿಯೊಬ್ಬ ಭಾರತೀಯನಿಗೂ ನಮಸ್ಕರಿಸುತ್ತೇನೆ ಎಂದು ತಿಳಿಸಿದರು.

    ಭಾಷಣದ ವೇಳೆ ಹೌಡಿ ಮೋದಿ ಕಾರ್ಯಕ್ರಮದ ಕುರಿತು ಪ್ರಸ್ತಾಪಿಸಿದ ಮೋದಿ, ಭವ್ಯ ಕಾರ್ಯಕ್ರಮ ಆಯೋಜಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಕ್ಕಾಗಿ ಅಮೆರಿಕದ ಭಾರತೀಯರಿಗೆ ಧನ್ಯವಾದ ಅರ್ಪಿಸಿಸಿದರು.

    ಹ್ಯೂಸ್ಟನ್‍ನಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮ ಭವ್ಯವಾಗಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿ ಕಾರ್ಯಕ್ರಮಕ್ಕೆ ಇನ್ನೂ ಮೆರುಗು ತಂದರು. ಈ ಎಲ್ಲದರ ಜೊತೆಗೆ ಯುಎಸ್‍ಎ, ಟೆಕ್ಸಾಸ್ ಹಾಗೂ ಹ್ಯೂಸ್ಟನ್‍ನಲ್ಲಿರುವ ಭಾರತೀಯ ಸಮುದಾಯ ತಮ್ಮ ಅಸ್ಥಿತ್ವವನ್ನು ಪ್ರದರ್ಶಿಸಿದ ರೀತಿ ಅತ್ಯದ್ಭುತವಾಗಿತ್ತು ಎಂದು ಕೊಂಡಾಡಿದರು.

    2016ರ ಸರ್ಜಿಕಲ್ ಸ್ಟ್ರೈಕ್ ನೆನಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ಕಾರ್ಯಾಚರಣೆ ಸಮಯದಲ್ಲಿ ಶೌರ್ಯ ಹಾಗೂ ಪರಾಕ್ರಮ ಮೆರೆದ ಭಾರತೀಯ ಸೈನಿಕರನ್ನು ಶ್ಲಾಘಿಸಿದರು. ಮೂರು ವರ್ಷಗಳ ಹಿಂದೆ ಸೆಪ್ಟೆಂಬರ್ 28ರಂದು ನನ್ನ ದೇಶದ ಧೈರ್ಯಶಾಲಿ ಸೈನಿಕರು ಶಸ್ತ್ರಸಜ್ಜಿತ ದಾಳಿ ನಡೆಸುವ ಮೂಲಕ ಭಾರತದ ಗತವೈಭವವನ್ನು ಪ್ರದರ್ಶಿಸಿದರು. ಇಂದು ಆ ರಾತ್ರಿಯನ್ನು ನೆನಪಿಸಿಕೊಳ್ಳುತ್ತ, ನಮ್ಮ ಕೆಚ್ಚೆದೆಯ ಸೈನಿಕರ ಧೈರ್ಯವನ್ನು ನಾನು ವಂದಿಸುತ್ತೇನೆ ಎಂದರು.

  • ಹೌಡಿ ಮೋದಿ ಕಾರ್ಯಕ್ರಮದ ಯಶಸ್ಸಿನ ಹಿಂದೆ ಕನ್ನಡಿಗ ಕಿಶೋರ್ ಮಲಾನಿ

    ಹೌಡಿ ಮೋದಿ ಕಾರ್ಯಕ್ರಮದ ಯಶಸ್ಸಿನ ಹಿಂದೆ ಕನ್ನಡಿಗ ಕಿಶೋರ್ ಮಲಾನಿ

    ಬೀದರ್: ಅಮೆರಿಕದ ಹ್ಯೂಸ್ಟನ್ ನಗರದಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದ ಯಶಸ್ಸಿನ ಹಿಂದೆ ಬೀದರ್ ನ ಕನ್ನಡಿಗರೊಬ್ಬರು ಮಹತ್ವದ ಪಾತ್ರವವಹಿಸಿದ್ದಾರೆ.

    ಬೀದರ್ ನ ಜುಗಲ್ ಕಿಶೋರ್ ಮಲಾನಿ ಅವರು ಈ ಕಾರ್ಯಕ್ರಮ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿ 600 ಸಂಘಟನೆಯ ಸದಸ್ಯರುಗಳನ್ನು ಒಂದೆಡೆ ಸೇರಿಸಿದ್ದರು. ಮಲಾನಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಮಲಾನಿ ಫ್ಯಾಮಿಲಿಗೆ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

    ಬೀದರ್ ನ ಉಸ್ಮಾನ್ ಗಂಜ್‍ನಲ್ಲಿ ಕಿಶೋರ್ ಮಲಾನಿಯ ನಿವಾಸವಿದ್ದು ಸಹೋದರ, ಸಹೋದರಿ ಸೇರಿದಂತೆ ಸಂಬಂಧಿಕರು ಇಲ್ಲೇ ವಾಸವಾಗಿದ್ದಾರೆ. ಪ್ರಾಥಮಿಕ ಶಿಕ್ಷಣ ಬೀದರ್ ನಲ್ಲಿ ಮುಗಿಸಿರುವ ಮಲಾನಿ 23 ವರ್ಷಗಳ ಹಿಂದೆ ಅಮೆರಿಕಾಗೆ ಹೋಗಿ ಅಲ್ಲೇ ವಾಸವಾಗಿದ್ದಾರೆ. ವರ್ಷಕ್ಕೆ ಎರಡು ಬಾರಿ ಬೀದರ್ ಗೆ ಬಂದು ಹೋಗುತ್ತಾರೆ.

    “ಹೌಡಿ ಮೋದಿ” ಕಾರ್ಯಕ್ರಮ ಯಶಸ್ವಿಯಾಗಲು ಮಲಾನಿ ಪ್ರಮಖ ಪಾತ್ರ ವಹಿಸಿದ್ದು, ಜಿಲ್ಲೆಯಲ್ಲಿ ಜನರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಹೌಡಿ ಮೋದಿ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದಕ್ಕೆ ಮಲಾನಿಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.

  • ‘ಹೌಡಿ ಮೋದಿ’ಯಲ್ಲಿ ಮೋದಿ, ಟ್ರಂಪ್ ಜೊತೆ ಮಿಂಚಿದ ಉತ್ತರ ಕನ್ನಡದ ಕುವರ

    ‘ಹೌಡಿ ಮೋದಿ’ಯಲ್ಲಿ ಮೋದಿ, ಟ್ರಂಪ್ ಜೊತೆ ಮಿಂಚಿದ ಉತ್ತರ ಕನ್ನಡದ ಕುವರ

    ಕಾರವಾರ: ಅಮೆರಿಕದ ಹ್ಯೂಸ್ಟನ್‍ನಲ್ಲಿ ಭಾನುವಾರ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹಾಗು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ಉತ್ತರ ಕನ್ನಡದ ಕುವರ ಸಾತ್ವಿಕ್ ಹೆಗಡೆ ಸೆಲ್ಫಿ ಕ್ಲಿಕ್ಕಿಸಿದ್ದು ಜಗತ್ತಿನಾದ್ಯಂತ ವೈರಲ್ಲಾಗಿದೆ.

    ಹೌದು, ಭಾನುವಾರ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಮೋದಿಯವರ ಸ್ವಾಗತ ಕಾರ್ಯಕ್ರಮದಲ್ಲಿ ಸಾತ್ವಿಕ್ ಹೆಗಡೆ ಭಾಗವಹಿಸಿದ್ದನು. ಕಾರ್ಯಕ್ರಮದಲ್ಲಿ ಸೂರ್ಯ ನಮಸ್ಕಾರ ಪ್ರದರ್ಶನವನ್ನ ಕೂಡ ಸಾತ್ವಿಕ್ ನೀಡಿದ್ದನು. ನಂತರ ಅಮೆರಿಕ ಅಧ್ಯಕ್ಷ ಟ್ರಂಪ್ ಹಾಗೂ ಪ್ರಧಾನಿ ಮೋದಿಯವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದನು. ಅಮೆರಿಕದ ದಿ ವೈಟ್ ಹೌಸ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಳ್ಳಲಾಗಿತ್ತು. ಈಗ ಮೋದಿ, ಟ್ರಂಪ್ ಜೊತೆಗೆ ಸಾತ್ವಿಕ್ ಇರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ.

    ಟೆಕ್ಸಾಸ್‍ನ ಲೂಯಿಸ್ ಡಿ ಬ್ರಾಂಡಿಸ್ ಶಾಲೆಯಲ್ಲಿ 6ನೇ ತರಗತಿಯಲ್ಲಿ ಸಾತ್ವಿಕ್ ವ್ಯಾಸಂಗ ಮಾಡುತ್ತಿದ್ದಾನೆ. 13 ವರ್ಷ ವಯಸ್ಸಿನ ಸಾತ್ವಿಕ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕರ್ಕಿಸವಲ್‍ನ ಮೇಧಾ ಮತ್ತು ಪ್ರಭಾಕರ ಹೆಗಡೆ ದಂಪತಿಯ ಪುತ್ರನಾಗಿದ್ದಾನೆ. ದಂಪತಿ ಕಳೆದ 17 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದು, ರಜೆಯ ಅವಧಿಯಲ್ಲಿ ಸಿದ್ದಾಪುರ ತಾಲೂಕಿನ ಕರ್ಕಿಸವಲ್ ಗೆ ಬರುತ್ತಾರೆ. ಸಾತ್ವಿಕ್ ಅಜ್ಜ ನಿವೃತ್ತ ಮುಖ್ಯೋಪಾಧ್ಯಾಯರಾಗಿದ್ದು ತಾಯಿ ಕೂಡ ಅಮೆರಿಕದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.

  • ಅಮೆರಿಕದಲ್ಲಿ ಪ್ರವಾಹ ಸಂತ್ರಸ್ತರಿಗೆ ಸಾಂತ್ವನ, ರಾಜ್ಯದಲ್ಲಿರುವವರಿಗೆ ಹೇಳಲ್ಲ- ದಿನೇಶ್ ಗುಂಡೂರಾವ್

    ಅಮೆರಿಕದಲ್ಲಿ ಪ್ರವಾಹ ಸಂತ್ರಸ್ತರಿಗೆ ಸಾಂತ್ವನ, ರಾಜ್ಯದಲ್ಲಿರುವವರಿಗೆ ಹೇಳಲ್ಲ- ದಿನೇಶ್ ಗುಂಡೂರಾವ್

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕದ ಹ್ಯೂಸ್ಟನ್ ಕಾರ್ಯಕ್ರಮಕ್ಕೆ ಹೋಗುತ್ತಾರೆ. ಅಲ್ಲಿನ ಪ್ರವಾಹ ಸಂತ್ರಸ್ತರಿಗೆ ಸಾಂತ್ವನ ಹೇಳುತ್ತಾರೆ. ಆದರೆ ನಮ್ಮ ರಾಜ್ಯದ ಪ್ರವಾಹ ಸಂತ್ರಸ್ತರ ಬಗ್ಗೆ ಮಾತನಾಡಲಿಲ್ಲ, ರಾಜ್ಯಕ್ಕೆ ಬರಲಿಲ್ಲ, ಸಂತ್ರಸ್ತರಿಗೆ ಸಾಂತ್ವನ ಹೇಳಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹದ ಎಲ್ಲ ಜಿಲ್ಲೆಗಳಲ್ಲಿ ಬಿಜೆಪಿ ಸಂಸದರೇ ಇದ್ದಾರೆ ಡಿಸಿಎಂ ಲಕ್ಷ್ಮಣ ಸವದಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಲ್ಲರೂ ಇದ್ದಾರೆ, ಏನು ಮಾಡುತ್ತಿದ್ದಾರೆ. ಜನರ ಪ್ರತಿನಿಧಿಯಾಗಲು ಅವರು ಲಾಯಕ್ ಇಲ್ಲ. ಜನ ವಿರೋಧಿ ನೀತಿಯನ್ನೇ ಬಿಜೆಪಿ ಒಳಗೊಂಡಿದೆ. ಹೀಗಾಗಿಯೇ ನಾಳೆ ಪ್ರವಾಹ ಸಂತ್ರಸ್ತರ ವಿಚಾರವಾಗಿ ಬೆಳಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

    ಅನರ್ಹ ಶಾಸಕರ ವಿರುದ್ಧ ನಮ್ಮ ವಕೀಲರು ಸಮರ್ಥವಾಗಿ ವಾದ ಮಂಡಿಸಲಿದ್ದು, ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯಲಿದೆ. ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ. ಗುರುವಾರ ನಮ್ಮ ವಕೀಲರು ವಾದ ಮಂಡಿಸಲಿದ್ದಾರೆ. ನಾವು ಕೇವಿಯೆಟ್ ಸಲ್ಲಿಸಿದ್ದೆವು. ಹೀಗಾಗಿ ನಮ್ಮ ವಕೀಲರು ಸ್ಪಷ್ಟವಾಗಿ ವಾದ ಮಾಡಲಿದ್ದಾರೆ. ಅನರ್ಹ ಶಾಸಕರು ಪಕ್ಷಾಂತರ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ. ಕಾಯ್ದೆಯ ನಿಯಮ ಅನುಷ್ಠಾನವಾಗಬೇಕು ಎಂದು ತಿಳಿಸಿದ್ದಾರೆ.

    ಉತ್ತಮ ಉದ್ದೇಶದಿಂದ ರಾಜೀವ್ ಗಾಂಧಿ ಈ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಇದನ್ನು ಸ್ಪೀಕರ್ ಎತ್ತಿಹಿಡಿದಿದ್ದಾರೆ. ಜನ ಕೂಡ ಸ್ಪೀಕರ್ ಆದೇಶವನ್ನೇ ಬಯಸಿದ್ದರು. ಹೀಗಾಗಿ ಕೋರ್ಟ್ ಸ್ಪೀಕರ್ ಆದೇಶವನ್ನು ಎತ್ತಿಹಿಡಿಯಲಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಚುನಾವಣಾ ಆಯೋಗ ಹೇಳಿರಬಹುದು. ಆದರೆ ಪ್ರಕರಣಕ್ಕೂ, ಆಯೋಗಕ್ಕೂ ಸಂಬಂಧವಿಲ್ಲ. ಆಯೋಗ ಮಧ್ಯಪ್ರವೇಶ ಮಾಡಿದ್ದು ಸರಿಯಲ್ಲ ಎಂದರು.

    ನಾವು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಈ ಕುರಿತು ಇಂದು ಸಭೆ ಕರೆದಿದ್ದೇವೆ. ನಾಳೆ ಬೆಳಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅದಾದ ಬಳಿಕ ಅಭ್ಯರ್ಥಿ ಆಯ್ಕೆ ನಡೆಸುತ್ತೇವೆ ಎಂದು ಮಾಹಿತಿ ನೀಡಿದರು.

    ಮೇಯರ್ ಚುನಾವಣೆಗೂ ನಾವು ಅಭ್ಯರ್ಥಿ ಹಾಕುತ್ತೇವೆ. ಗೆಲ್ಲುವ ವಿಶ್ವಾಸವಿದೆ, ಬಿಜೆಪಿ ಚುನಾವಣೆ ಮುಂದೂಡುವ ಪ್ರಯತ್ನ ನಡೆಸುತ್ತಿದೆ. ನಾವು ಮೇಯರ್ ಚುನಾವಣೆ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಅಭ್ಯರ್ಥಿ ಯಾರು ಎಂಬುದನ್ನು ಶೀಘ್ರದಲ್ಲೇ ನಿರ್ಧರಿಸುತ್ತೇವೆ ಎಂದು ತಿಳಿಸಿದರು.

  • ನೀವು ನಮ್ಮ ಪ್ರಧಾನಿಯಾಗಿ ಅಮೆರಿಕದಲ್ಲಿದ್ದೀರಿ, ಚುನಾವಣಾ ಪ್ರಚಾರಕರಾಗಲ್ಲ: ಮೋದಿಗೆ ಕಾಂಗ್ರೆಸ್ ಟಾಂಗ್

    ನೀವು ನಮ್ಮ ಪ್ರಧಾನಿಯಾಗಿ ಅಮೆರಿಕದಲ್ಲಿದ್ದೀರಿ, ಚುನಾವಣಾ ಪ್ರಚಾರಕರಾಗಲ್ಲ: ಮೋದಿಗೆ ಕಾಂಗ್ರೆಸ್ ಟಾಂಗ್

    ನವದೆಹಲಿ: ನರೇಂದ್ರ ಮೋದಿಯವರೇ ನೀವು ಭಾರತದ ಪ್ರಧಾನಿಯಾಗಿ ಅಮೆರಿಕದಲ್ಲಿದ್ದೀರಿ, ಚುನಾವಣೆಯ ಸ್ಟಾರ್ ಪ್ರಚಾರಕರಾಗಿ ಅಲ್ಲ ಎಂದು ಕಾಂಗ್ರೆಸ್ ರಾಜ್ಯಸಭಾ ಸಂಸದ ಆನಂದ್ ಶರ್ಮಾ ನಮೋಗೆ ಟಾಂಗ್ ಕೊಟ್ಟಿದ್ದಾರೆ.

    ಮೋದಿ ವಿರುದ್ಧ ಟ್ವಿಟ್ಟರ್‌ನಲ್ಲಿ ವಾಗ್ದಾಳಿ ನಡೆಸಿದ ಅವರು, ನೀವು ಯುಎಸ್‍ಎಯಲ್ಲಿ ನಮ್ಮ ಪ್ರಧಾನಿಯಾಗಿದ್ದೀರಿ. ಚುನಾವಣೆಗಳಲ್ಲಿ ಸ್ಟಾರ್ ಪ್ರಚಾರಕರಲ್ಲ ಎಂಬುದನ್ನು ನಿಮಗೆ ನೆನಪಿಸುತ್ತೇನೆ ಎಂದು ಶರ್ಮಾ ಭಾನುವಾರ ತಡರಾತ್ರಿ ಟ್ವೀಟ್ ಮಾಡಿದ್ದಾರೆ. ಹಾಗೆಯೇ ಇನ್ನೊಂದು ಟ್ವೀಟ್‍ನಲ್ಲಿ ಪ್ರಧಾನಿ ಮೋದಿ ಅವರು ಮತ್ತೊಂದು ದೇಶದ ದೇಶೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಬಾರದು. ಇದು ಭಾರತೀಯ ವಿದೇಶಾಂಗ ನೀತಿಯ ತತ್ವವನ್ನು ಉಲ್ಲಂಘಿಸಿದಂತೆ ಎಂದು ಟ್ವಿಟ್ ಮಾಡಿ ಕಿಡಿಕಾರಿದ್ದಾರೆ.

    ಅಮೆರಿಕದೊಂದಿಗಿನ ನಮ್ಮ ದೇಶ ಉಭಯಪಕ್ಷೀಯ ಸಂಬಂಧ ಹೊಂದಿದೆ. ಎರಡೂ ದೇಶಗಳ ನಡುವೆ ರಿಪಬ್ಲಿಕನ್ ಮತ್ತು ಡೆಮೊಕ್ರಟಿಕ್ ಸಂಬಂಧವಿದೆ. ಟ್ರಂಪ್‍ಗಾಗಿ ನೀವು ಸಕ್ರಿಯವಾಗಿ ಪ್ರಚಾರ ಮಾಡುವುದು ಭಾರತ ಮತ್ತು ಅಮೆರಿಕ ಎರಡೂ ದೇಶದ ಸಾರ್ವಭೌಮತ್ವ ಮತ್ತು ಪ್ರಜಾಪ್ರಭುತ್ವಗಳ ಉಲ್ಲಂಘನೆ ಮಾಡಿದಂತೆ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

    ಭಾನುವಾರ ಹ್ಯೂಸ್ಟನ್‌ನಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಮ್ಮುಖದಲ್ಲಿ ಭಾರತೀಯ-ಅಮೆರಿಕನ್ ಸಮುದಾಯದ ದೊಡ್ಡ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಮೋದಿ ಅವರು ಇಂಡೋ-ಯುಎಸ್ ಸಂಬಂಧಗಳನ್ನು ಶ್ಲಾಘಿಸಿದರು. ಅಲ್ಲದೆ ಭಾರತ ಅಮೆರಿಕ ಎರಡೂ ರಾಷ್ಟ್ರ ಶ್ರೇಷ್ಠ ಸ್ನೇಹಿತರು ಎಂದು ಸಾರಿದರು.

  • ಹೌಡಿ ಮೋದಿ – ಯುಎಸ್ ಸಂಸದನ ಪತ್ನಿ ಬಳಿ ಕ್ಷಮೆ ಕೇಳಿದ ಪ್ರಧಾನಿ

    ಹೌಡಿ ಮೋದಿ – ಯುಎಸ್ ಸಂಸದನ ಪತ್ನಿ ಬಳಿ ಕ್ಷಮೆ ಕೇಳಿದ ಪ್ರಧಾನಿ

    ಹ್ಯೂಸ್ಟನ್: ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಯುಎಸ್ ಟಕ್ಸಾಸ್‍ನ ಸೆನೆಟರ್(ಸಂಸದ) ಜಾನ್ ಕಾರ್ನಿನ್ ಅವರ ಪತ್ನಿಯ ಜನ್ಮದಿನದಂದು ಕ್ಷಮೆಯಾಚಿಸಿದ್ದಾರೆ.

    60ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಕಾರ್ನಿನ್ ಅವರ ಪತ್ನಿ ಸ್ಯಾಂಡಿಯವರನ್ನು ನೇರವಾಗಿ ಉದ್ದೇಶಿಸಿ ಅವರ ಬಳಿ ಮೋದಿ ಕ್ಷಮೆಯಾಚಿಸಿದ್ದಾರೆ. ಅಲ್ಲದೆ, ಸಮೃದ್ಧ ಹಾಗೂ ಶಾಂತಿಯುತ ಭವಿಷ್ಯ ನಿಮ್ಮದಾಗಲೆಂದು ಹಾರೈಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಕಚೇರಿಯ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಟ್ವೀಟ್ ಮಾಡಿದೆ.

    ನಾನು ಕ್ಷಮೆ ಕೇಳಲು ಬಯಸುತ್ತೇನೆ, ಏಕೆಂದರೆ ಇಂದು ನಿಮ್ಮ ಜನ್ಮದಿನ ಮತ್ತು ನಿಮ್ಮ ಉತ್ತಮ ಜೀವನ ಸಂಗಾತಿ ನನ್ನೊಂದಿಗಿದ್ದಾರೆ. ಆದ್ದರಿಂದ ಸ್ವಾಭಾವಿಕವಾಗಿ ನಿಮಗೆ ಜಲಸ್ ಆಗಿರಬೇಕು ಎಂದು ಮೋದಿ ಹೇಳಿದ್ದಾರೆ. ಆಗ ಮೋದಿ ಪಕ್ಕದಲ್ಲೇ ಇದ್ದ 67 ವರ್ಷದ ಸೆನೆಟರ್ ಮೋದಿಯವರನ್ನು ನೋಡಿ ಮುಗುಳುನಕ್ಕಿದ್ದಾರೆ.

    ನಿಮಗೆ ಶುಭ ಹಾರೈಸುತ್ತೇನೆ, ಸಂತೋಷದ, ಸಮೃದ್ಧಯುತ ಶಾಂತಿಯ ಭವಿಷ್ಯ ನಿಮ್ಮದಾಗಲಿ ಎಂದು ಬಯಸುತ್ತೇನೆ. ಆಲ್ ದಿ ಬೆಸ್ಟ್ ಎಂದು ಹೇಳಿದ್ದಾರೆ. ಈ ದಂಪತಿಗೆ ಮದುವೆಯಾಗಿ 40 ವರ್ಷಗಳಾಗಿದ್ದು, ಇಬ್ಬರು ಹೆಣ್ಣುಮಕ್ಕಳಿದ್ದಾರೆ.

    ಭಾನುವಾರ ಹ್ಯೂಸ್ಟನ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದರು. ಅಲ್ಲದೆ, 50 ಸಾವಿರ ಭಾರತೀಯ ಅಮೆರಿಕನ್ನರ ದಾಖಲೆಯ ಜನಸಮೂಹವನ್ನುದ್ದೇಶಿಸಿ ಭಾಷಣ ಮಾಡಿದ್ದರು.

  • ಹೊಟ್ಟೆಕಿಚ್ಚಿನಿಂದ ‘ಹೌಡಿ ಮೋದಿ’ ಫ್ಲಾಪ್ ಶೋ ಎಂದ ಪಾಕ್

    ಹೊಟ್ಟೆಕಿಚ್ಚಿನಿಂದ ‘ಹೌಡಿ ಮೋದಿ’ ಫ್ಲಾಪ್ ಶೋ ಎಂದ ಪಾಕ್

    ಇಸ್ಲಾಮಾಬಾದ್: ಭಾನುವಾರ ಅಮೆರಿಕದ ಹ್ಯೂಸ್ಟನ್ ನಗರದ ಎನ್‍ಆರ್ ಜಿ ಕ್ರೀಡಾಂಗಣದಲ್ಲಿ ‘ಹೌಡಿ ಮೋದಿ’ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಆದರೆ ನೆರೆಯ ಪಾಕಿಸ್ತಾನ ಹೊಟ್ಟೆಕಿಚ್ಚಿನಿಂದ ಹತಾಶೆ ತಾಳಲಾರದೆ ಈ ಕಾರ್ಯಕ್ರಮ ಫ್ಲಾಪ್ ಶೋ ಎಂದಿದೆ.

    ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಹುಸೇನ್ ಚೌಧರಿ ಅವರು ‘ಹೌಡಿ ಮೋದಿ’ ಕಾರ್ಯಕ್ರಮವನ್ನು ಫ್ಲಾಪ್ ಶೋ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಮತ್ತು ‘ಹೌಡಿ ಮೋದಿ’ ಯಶಸ್ವಿ ಕಾರ್ಯಕ್ರಮವನ್ನು ಕಂಡು ಹೊಟ್ಟೆ ಉರಿದುಕೊಂಡು ಈ ರೀತಿ ಟ್ವೀಟ್ ಮಾಡಿ ಪಾಕಿಸ್ತಾನ ಸಚಿವ ತಮ್ಮ ಹತಾಶೆ ಹೊರಹಾಕಿದ್ದಾರೆ. ಇದನ್ನೂ ಓದಿ:ಹ್ಯೂಸ್ಟನ್‍ನಲ್ಲಿ ಕನ್ನಡ ಡಿಂಡಿಮ

    ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಮೋದಿಯ ಪ್ರದರ್ಶನ ನಿರಾಶದಾಯಕವಾಗಿದೆ. ಬಿಲಿಯನ್‍ಗಳಷ್ಟು ಹಣ ಖರ್ಚು ಮಾಡಿ ಅಮೆರಿಕಾ, ಕೆನಡಾ ಮತ್ತು ಇತರೆ ಹಲವು ದೇಶಗಳಿಂದ ಕಾರ್ಯಕ್ರಮಕ್ಕೆ ಜನರನ್ನು ಒಟ್ಟುಗೂಡಿಸಲಾಗಿದೆ ಅಷ್ಟೆ. ಹಣದಿಂದ ಎಲ್ಲವನ್ನು ಖರೀದಿಸಲು ಆಗುವುದಿಲ್ಲ ಎನ್ನುವುದನ್ನು ಇದು ನಿರೂಪಿಸಿದೆ ಎಂದು ಬರೆದು #ModiJanta ಮತ್ತು #ModiInHouston ಹ್ಯಾಷ್‍ಟ್ಯಾಗ್ ಜೊತೆಗೆ ಫವಾದ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:ಮತ್ತೆ ಅಮೆರಿಕದಲ್ಲಿ ಇಮ್ರಾನ್ ಖಾನ್‍ಗೆ ಭಾರೀ ಮುಖಭಂಗ

    ಈ ಟ್ವೀಟ್ ಈಗ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಫವಾದ್ ಅವರ ಟ್ವೀಟ್‍ಗೆ ರೀ-ಟ್ವೀಟ್ ಮಾಡಿ ಭಾರತೀಯರು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿಮ್ಮ ಮೂರ್ಖತನದ ಮಾತನ್ನು ನಂಬಲು ಪಾಕಿಸ್ತಾನದ ಪ್ರಜೆಗಳು ಮೂರ್ಖರಲ್ಲ. ಅವರು ನಿಮ್ಮನ್ನು ನಂಬಲ್ಲ. ಸುಳ್ಳು ಸುದ್ದಿಯ ವಿಡಿಯೋ ಇಟ್ಟುಕೊಂಡು ಮಾತನಾಡಬೇಡಿ. ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಜನಸಾಗರ ಹೇಗಿದೆ ನೋಡಿ ಎಂದು ಕಾರ್ಯಕ್ರಮದ ವಿಡಿಯೋ ರೀ-ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ.

    https://twitter.com/pooja35956823/status/1175799771971252224

    ಹೌಡಿ ಮೋದಿ ಕಾರ್ಯಕ್ರಮದಲ್ಲಿ ಇತರೆ ದೇಶದ ಪ್ರಜೆಗಳನ್ನು ಹೊರತುಪಡಿಸಿ ಅನಿವಾಸಿ ಭಾರತೀಯರೇ ಬರೋಬ್ಬರಿ 50 ಸಾವಿರ ಮಂದಿ ಸೇರಿದ್ದರು. ಮೋದಿ ಜನಪ್ರಿಯತೆ ಏನು ಎಂದು ಇದನ್ನು ನೋಡಿದರೆ ಗೊತ್ತಾಗುತ್ತೆ ಎಂದು ನೆಟ್ಟಿಗರು ಪಾಕ್ ಸಚಿವರಿಗೆ ಟಾಂಗ್ ಕೊಟ್ಟಿದ್ದಾರೆ.