Tag: Houses

  • ಊಟದ ಡಬ್ಬಿಯಲ್ಲಿ ನಿದ್ದೆ ಮಾತ್ರೆ ಹಾಕಿ ಬಂಗಾರದಂಗಡಿ ದೋಚಿದ ಖದೀಮರು ಅರೆಸ್ಟ್

    ಊಟದ ಡಬ್ಬಿಯಲ್ಲಿ ನಿದ್ದೆ ಮಾತ್ರೆ ಹಾಕಿ ಬಂಗಾರದಂಗಡಿ ದೋಚಿದ ಖದೀಮರು ಅರೆಸ್ಟ್

    – ಸೀರೆ ಮಾರೊ ನೆಪದಲ್ಲಿ ಮನೆ ಗುರುತಿಸಿ ಕನ್ನ
    – 32 ಲಕ್ಷ ಮೌಲ್ಯದ ಚಿನ್ನಾಭರಣ, 1.5 ಲಕ್ಷ ಮೌಲ್ಯದ ಬೆಳ್ಳಿ ವಶ

    ಬೆಂಗಳೂರು: ಊಟದ ಡಬ್ಬಿಯಲ್ಲಿ ನಿದ್ದೆ ಮಾತ್ರೆ ಹಾಕಿ ಬಂಗಾರದ ಅಂಗಡಿ ದೋಚಿದ ಖದೀಮರನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಈ ಖದೀಮರು ಕೇವಲ ಬಂಗಾರದ ಅಂಗಡಿ ಮಾತ್ರವಲ್ಲದೆ, ಸೀರೆ ಮಾರುವ ನೆಪದಲ್ಲಿ ಐಷಾರಾಮಿ ಮನೆಗಳಿಗೂ ಕನ್ನ ಹಾಕಿರುವುದು ಬಯಲಾಗಿದೆ.

    ರಾಜಸ್ಥಾನ ಮೂಲದ ಜೋಗಮಲ್ ಪುರೋಹಿತ್, ವಿಷ್ಣುಪೂಜಾ ಬಾಯ್ ತರ್ಪಡೆ, ರಾಮಗಿರಿರಾಮ್ ಬಂಧಿತ ಆರೋಪಿಗಳು. ಈ ಗ್ಯಾಂಗ್ ಬೈಕ್‍ನಲ್ಲಿ ಸೀರೆಗಳನ್ನು ಇಟ್ಟುಕೊಂಡು, ಸೀರೆ ವ್ಯಾಪಾರ ಮಾಡುವ ರೀತಿ ಬಂದು ಹಲವು ಏರಿಯಾದ ಮನೆಗಳನ್ನ ಗುರುತಿಸಿಕೊಂಡು ಅಲ್ಲಿ ಕಳ್ಳತನ ಮಾಡುತ್ತಿದ್ದರು. ಬೆಳಗ್ಗೆ ಹೊತ್ತು ಸೀರೆ ಮಾರುವ ನೆಪದಲ್ಲಿ ಐಷಾರಾಮಿ ಮನೆಗಳನ್ನ ಗುರುತು ಮಾಡಿಕೊಂಡು ರಾತ್ರಿ ಅದೇ ಮನೆಯ ಬೀಗ ಒಡೆದು ಈ ಗ್ಯಾಂಗ್ ಕಳ್ಳತನ ಮಾಡುತ್ತಿತ್ತು.

    ಅಷ್ಟೇ ಅಲ್ಲದೆ ಗುಜರಾತಿ ವ್ಯಕ್ತಿಗಳನ್ನು ಪರಿಚಯ ಮಾಡ್ಕೊಂಡು ಮನೆಯಿಂದ ಜ್ಯುವೆಲ್ಲರಿ ಶಾಪ್‍ಗೆ ಊಟದ ಡಬ್ಬಿ ಸಾಗಿಸುವ ಕೆಲಸ ಗಿಟ್ಟಿಸಿಕೊಂಡು ತಮ್ಮ ಕೈಚಳಕ ತೋರಿಸಿದ್ದಾರೆ. ಒಂದು ವಾರದ ಕಾಲ ತುಂಬಾ ನಿಯತ್ತಾಗಿ ಊಟದ ಡಬ್ಬಿ ಸಾಗಿಸುವ ಕೆಲಸ ಮಾಡಿದ್ದಾರೆ.

    ಮಾಲೀಕ ಅಂಗಡಿಯಲ್ಲಿ ಒಬ್ಬನೇ ಇರುವುದನ್ನು ಖಚಿತ ಮಾಡಿಕೊಂಡು ಊಟದ ಡಬ್ಬಿಗೆ ನಿದ್ದೆ ಮಾತ್ರೆ ಹಾಕಿ ಕೊಟ್ಟಿದ್ದಾರೆ. ಊಟ ತಿಂದ ಮಾಲೀಕರು ನಿದ್ದೆಗೆ ಜಾರುತ್ತಿದ್ದಂತೆ ಅಂಗಡಿಯ ಚಿನ್ನ, ನಗದು ದೋಚಿ ಈ ಖತರ್ನಾಕ್ ಗ್ಯಾಂಗ್ ಎಸ್ಕೇಪ್ ಆಗುತಿತ್ತು.

    ಸದ್ಯ ಈ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಸುಮಾರು 32 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 1.5 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಇವರ ಬಂಧನದಿಂದ ಸುಮಾರು 10 ಕಳ್ಳತನ ಪ್ರಕರಣಗಳು ಪೊಲೀಸರು ಪತ್ತೆ ಮಾಡಿದ್ದಾರೆ.

  • ಮೇಲುಕೋಟೆಯಲ್ಲಿ ಸರಣಿ ಕಳ್ಳತನ – ದೇವರ ತಾಳಿಯನ್ನೂ ಬಿಡದೆ ಕದ್ದೊಯ್ದ ಖದೀಮರು

    ಮೇಲುಕೋಟೆಯಲ್ಲಿ ಸರಣಿ ಕಳ್ಳತನ – ದೇವರ ತಾಳಿಯನ್ನೂ ಬಿಡದೆ ಕದ್ದೊಯ್ದ ಖದೀಮರು

    ಮಂಡ್ಯ: ಪ್ರಮುಖ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲಿ ಸರಣಿ ಕಳ್ಳತನ ನಡೆದಿದ್ದು, ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್, ಸಾವಿರಾರು ರೂ. ನಗದು ಜೊತೆಗೆ ದೇವರ ತಾಳಿಯನ್ನೂ ಬಿಡದೆ ಖದೀಮರು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

    ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ದೇವಾಲಯಗಳು ಹಾಗೂ ಮನೆಗಳಿಗೆ ಖದೀಮರು ಕನ್ನ ಹಾಕಿದ್ದಾರೆ. ಮೇಲುಕೋಟೆಯ ಪ್ರಮುಖ ರಸ್ತೆಯಲ್ಲಿರುವ ಕಾಳಮ್ಮ, ಮುಕ್ತಿನಾಥ, ಶನೇಶ್ವರ ದೇಗುಲದಲ್ಲಿ ಹುಂಡಿ ಹಾಗೂ ಇತರೆ ವಸ್ತುಗಳ ಕಳ್ಳತನ ಮಾಡಿದ್ದಾರೆ. ಕಾಳಮ್ಮ ದೇಗುಲದಲ್ಲಿ ದೇವರ 3 ತಾಳಿ, 5 ಸಾವಿರ ನಗದು ಹಣವನ್ನು ದೋಚಿದ್ದಾರೆ. ಹಾಗೆಯೇ ಶನೇಶ್ವರ ದೇಗುಲದಲ್ಲಿ ಐವತ್ತು ಸಾವಿರ ರೂ. ಕಳವು ಮಾಡಿದ್ದಾರೆ.

    ಸ್ಥಳೀಯ ನಿವಾಸಿ ಭಾನುಮತಿ ಅವರ ಮನೆಯಲ್ಲಿ 1.20 ಲಕ್ಷ ನಗದು ಜೊತೆಗೆ ಸಾವಿರಾರು ರೂ. ಮೌಲ್ಯದ ರೇಷ್ಮೆ ಸೀರೆಗಳನ್ನು ಕಳ್ಳರು ದೋಚಿದ್ದಾರೆ. ಕೆಎಸ್‌ಆರ್‌ಟಿಸಿ ಚಾಲಕ ರಂಗನಾಥ್ ಅವರ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕದ್ದು ತಮ್ಮ ಕೈಚಳಕ ತೋರಿದ್ದಾರೆ.

    ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ಪ್ರವಾಹಕ್ಕೆ ಹಾಳಾದ ಪಠ್ಯಪುಸ್ತಕಕ್ಕಾಗಿ ಕಣ್ಣೀರಿಟ್ಟ ವಿದ್ಯಾರ್ಥಿಗಳು

    ಪ್ರವಾಹಕ್ಕೆ ಹಾಳಾದ ಪಠ್ಯಪುಸ್ತಕಕ್ಕಾಗಿ ಕಣ್ಣೀರಿಟ್ಟ ವಿದ್ಯಾರ್ಥಿಗಳು

    ಮಡಿಕೇರಿ: ಕೊಡಗಿನಲ್ಲಿ ಸುರಿದ ಧಾರಾಕಾರ ಮಳೆಗೆ ಉಂಟಾದ ಪ್ರವಾಹದಿಂದ ಜನರ ಆಸ್ತಿಪಾಸ್ತಿಗಳು ಮಾತ್ರ ನಾಶವಾಗಿಲ್ಲ, ಅದರ ಜೊತೆ ವಿದ್ಯಾರ್ಥಿಗಳ ಪಠ್ಯ ಪುಸ್ತಕ ಸಹ ಕೊಚ್ಚಿಕೊಂಡು ಹೋಗಿದೆ. ಮನೆಗಳಿಗೆ ನುಗ್ಗಿರುವ ಪ್ರವಾಹದ ನೀರಿಗೆ ಇಡೀ ಮನೆಯೇ ಜಲಾವೃತವಾಗಿ, ಮನೆಯಲ್ಲಿದ್ದ ನೋಟ್ಸ್, ರೆಕಾರ್ಡ್ ಸೇರಿದಂತೆ ಇತರೆ ಸಲಕರಣೆಗಳು ನೀರಿನಿಂದ ಹಾಳಾಗಿಹೋಗಿದೆ.

    ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆ ಆಗಿದೆ. ಆದರೆ ಅವಾಂತರ ಮಾತ್ರ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಮಳೆ, ಪ್ರವಾಹ ಕಡಿಮೆ ಅದ ಮೇಲೆ ಸಮಸ್ಯೆಗಳು ಜಿಲ್ಲೆಯಲ್ಲಿ ಆರಂಭವಾಗಿದೆ. ಮಳೆಗೆ ವಿರಾಜಪೇಟೆ ತಾಲೂಕಿನ ಬೇತ್ರಿ ಗ್ರಾಮದ ಬಹುತೇಕ ಮನೆಗಳು ಜಲಾವೃತಗೊಂಡಿತ್ತು. ಸದ್ಯ ಈ ಗ್ರಾಮದಲ್ಲಿ ನೀರು ಇಳಿದಿರುವ ಹಿನ್ನೆಲೆ ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸಲು ಗ್ರಾಮಕ್ಕೆ ಮರಳಿದ್ದಾರೆ. ಈ ವೇಳೆ ಮನೆಯಲ್ಲಿಟ್ಟಿದ್ದ ವಸ್ತುಗಳೆಲ್ಲಾ ನೀರಿಗೆ ಹಾಳಾಗಿರುವುದನ್ನು ಕಂಡು ಕಂಗಾಲಾಗಿದ್ದಾರೆ. ಜೊತೆಗೆ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ಬಳಸುವ ನೋಟ್ಸ್ ಗಳು ಹಾಗೂ ರೆಕಾರ್ಡ್ ಗಳು ನೀರಿಗೆ ಹಾನಿಯಾಗಿರುವುದನ್ನು ನೋಡಿ ಕಣ್ಣೀರಿಡುತ್ತಿದ್ದಾರೆ.

    ಕಷ್ಟಪಟ್ಟು ಬರೆದಿಟ್ಟಿದ್ದ ನೋಟ್ಸ್ ಗಳು, ಪ್ರಾಕ್ಟಿಕಲ್ಸ್‍ಗೆ ಬಳಸುವ ಸಲಕರಣೆಗಳು ನೀರಿನಲ್ಲಿ ಬಿದ್ದು ಉಪಯೋಗಕ್ಕೆ ಬಾರದಂತ ಸ್ಥಿತಿಗೆ ತಲುಪಿದೆ. ಇದೇ ತಿಂಗಳು ನಮಗೆ ಪರೀಕ್ಷೆಯಿದೆ. ನಾವು ಸಾಕಷ್ಟು ತಯಾರಿ ನಡೆಸಿದ್ದೆವು. ಇದೀಗ ನಮ್ಮ ಪರಿಶ್ರಮವೆಲ್ಲ ನೀರಿನಲ್ಲಿ ಕೊಚ್ಚಿಹೋಗಿದೆ ಎಂದು ವಿದ್ಯಾರ್ಥಿಗಳು ಅಳಲನ್ನು ತೋಡಿಕೊಂಡಿದ್ದಾರೆ. ಕೆಲ ದಿನಗಳಿಂದ ಪ್ರವಾಹಕ್ಕೆ ಜನರು ತತ್ತರಿಸಿ ಹೋಗಿದ್ದರು. ಆದರೆ ಈಗ ಪ್ರವಾಹ ತಗ್ಗಿದ್ದರು ಕೂಡ ಜನರು ಸಂಕಷ್ಟದಲ್ಲಿದ್ದಾರೆ. ಕೆಲವರು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ನಮ್ಮ ಬದುಕು ಕಟ್ಟಿಕೊಳ್ಳಲು ಸಹಾಯಮಾಡಿ ಎಂದು ಮನವಿ ಮಾಡುತ್ತಿದ್ದಾರೆ.

    ಇತ್ತ ಮಡಿಕೇರಿ ತಾಲೂಕಿನ ಕೊಟ್ಟಮುಡಿ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಅದರೆ ಈಗ ಪ್ರವಾಹ ಇಳಿದು ಗ್ರಾಮ ಕೆಸರುಮಯವಾಗಿದೆ. ಅಲ್ಲದೆ ಗ್ರಾಮದ ಶಾಲೆಗೆ ನೀರು ನುಗ್ಗಿ ಪೀಠೋಪಕರಣಗಳು ಸೇರಿದಂತೆ ಎಲ್ಲ ನೀರಿನಲ್ಲಿ ಮುಳುಗಿ ಕೆಸರುಮಯವಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಶಾಲೆಗೆ ಹೋಗಿ ಶಾಲೆಯ ಪರಿಸ್ಥಿತಿ ನೋಡಿಕೊಂಡು, ತಾವು ಬೆಳೆಸಿದ ಹೂ ಗಿಡಗಳ ಸ್ಥಿತಿ ಕಂಡು ಬೇಸರ ಪಟ್ಟಿದ್ದಾರೆ.

  • ಕಾಫಿನಾಡಲ್ಲಿ ಮನೆ, ತೋಟದ ಮೇಲೆ ಕುಸಿದ ಬೃಹತ್ ಗುಡ್ಡ

    ಕಾಫಿನಾಡಲ್ಲಿ ಮನೆ, ತೋಟದ ಮೇಲೆ ಕುಸಿದ ಬೃಹತ್ ಗುಡ್ಡ

    – ಮಣ್ಣಿನಡಿ ಸಿಲುಕ್ತು ನಾಲ್ಕು ಎಕ್ರೆ ಕಾಫಿ ತೋಟ
    – ಮೃತದೇಹಗಳನ್ನ ಕೊಂಡೊಯ್ಯಲು ಮಾರ್ಗವಿಲ್ಲ

    ಚಿಕ್ಕಮಗಳೂರು: ವರುಣನ ಆರ್ಭಟಕ್ಕೆ ಕಾಫಿನಾಡು ನಲುಗಿ ಹೋಗಿದೆ. ಭಾರೀ ಮಳೆಗೆ ಚಿಕ್ಕಮಗಳೂರಿನ ಸಿರಿವಾಸೆ ಸಮೀಪದ ಹಡ್ಲುಗದ್ದೆ ಗ್ರಾಮದಲ್ಲಿ ಮನೆ, ತೋಟದ ಮೇಲೆ ಬೃಹತ್ ಗುಡ್ಡ ಕುಸಿದು ಬಿದ್ದು ಅವಾಂತರ ಸೃಷ್ಟಿಯಾಗಿದೆ.

    ಮಳೆಗೆ ಗುಡ್ಡ ಕುಸಿದ ಪರಿಣಾಮ ಗುಡ್ಡದ ಸಮೀಪವಿದ್ದ ಹಡ್ಲುಗದ್ದೆ ಗ್ರಾಮದ ನಿವಾಸಿ ನಿತೀಶ್ ಹಾಗೂ ನಂದೀಶ್ ಅವರ ಮನೆ ಮಣ್ಣಿನಲ್ಲಿ ಮುಚ್ಚಿ ಹೋಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುಡ್ಡ ಕುಸಿತ ಹೆಚ್ಚಾದ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಇಡೀ ಗ್ರಾಮವನ್ನೇ ಗ್ರಾಮಸ್ಥರು ತೊರೆದು ಸುರಕ್ಷಿತ ಸ್ಥಳಕ್ಕೆ ಹೋಗಿದ್ದಾರೆ. ಕೇವಲ ಮನೆ ಮಾತ್ರವಲ್ಲ ನಾಲ್ಕು ಎಕರೆ ಕಾಫಿ ತೋಟ ನೆಲಸಮವಾಗಿದೆ. ಸದ್ಯ ಸಿರಿವಾಸೆ ಸಮೀಪದ ಹಡ್ಲುಗದ್ದೆಯಲ್ಲಿ ಗ್ರಾಮಸ್ಥರು ಆಶ್ರಯ ಪಡೆದಿದ್ದು, ಎಡಬಿಡದೆ ಸುರಿಯುತ್ತಿರುವ ಮಳೆಗೆ ರಸ್ತೆಗಳ ಮೇಲೆ ಗುಡ್ಡ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿದೆ.

    ಇತ್ತ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಕಲ್ಮಕ್ಕಿ ಹಾಗೂ ಕುಕ್ಕೋಡು ಗ್ರಾಮದಲ್ಲಿ ಕೂಡ ಗುಡ್ಡ ಕುಸಿತಗೊಂಡಿದೆ. ಪದೇ- ಪದೇ ಗುಡ್ಡ ಕುಸಿಯುತ್ತಿರುವ ಕಾರಣಕ್ಕೆ ಅದರ ಕೆಳ ಭಾಗ ವಾಸಿಸುವ ಜನರಲ್ಲಿ ಆತಂಕ ಹೆಚ್ಚಾಗಿದೆ. ಕಳಸ ಸುತ್ತಲಿನ ಜನ ಮುಂದೇನಾಗುತ್ತೋ ಎಂಬ ಭೀತಿ ಅಲ್ಲಿನ ಜನರಲ್ಲಿ ಕಾಡುತ್ತಿದೆ.

    ಮೂಡಿಗೆರೆಯ ಬಾಳೂರು ಹೊರಟ್ಟಿಗೆ ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿರುವ ಕಾರಣಕ್ಕೆ ಮೃತದೇಹಗಳನ್ನ ಕೊಂಡೊಯ್ಯಲು ಕೂಡ ಮಾರ್ಗವಿಲ್ಲದಂತಾಗಿದೆ. ರಸ್ತೆ ಇಲ್ಲದೇ ಶನಿವಾರದಿಂದಲೂ ಆಸ್ಪತ್ರೆಯ ಅಂಬುಲೆನ್ಸ್‍ನಲ್ಲಿಯೇ ಮೃತ ದೇಹಗಳನ್ನು ಇರಿಸಲಾಗಿದೆ. ಶನಿವಾರ ಹೊರಟ್ಟಿಯಲ್ಲಿ ಗುಡ್ಡ ಕುಸಿದು ತಾಯಿ, ಮಗ ಸಾವನ್ನಪ್ಪಿದ್ದರು. ಅವರ ಶವವನ್ನು ಕೊಂಡೊಯ್ಯಲು ಸಂಬಂಧಿಕರು ಗೋಳಾಡುತ್ತಿದ್ದಾರೆ.

  • ಅಧಿಕಾರಿಗಳ ಎಡವಟ್ಟು- ಕಾಲುವೆಗೆ ಹರಿಯಬೇಕಿದ್ದ ನೀರು ಮನೆಗೆ ನುಗ್ಗಿತು

    ಅಧಿಕಾರಿಗಳ ಎಡವಟ್ಟು- ಕಾಲುವೆಗೆ ಹರಿಯಬೇಕಿದ್ದ ನೀರು ಮನೆಗೆ ನುಗ್ಗಿತು

    ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳ ಎಡವಟ್ಟಿನಿಂದ ಕಾಲುವೆಗೆ ಹರಿಯಬೇಕಿದ್ದ ನೀರು ಸಾರ್ವಜನಿಕರ ಮನೆಗಳಿಗೆ ನುಗ್ಗಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಆಲಮೇಲ ಪಟ್ಟಣದಲ್ಲಿ ನಡೆದಿದೆ.

    ಆಲಮೇಲ ಪಟ್ಟಣದ ಬಸವ ನಗರದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ. ಕೆಲ ದಿನಗಳ ಹಿಂದೆ ಕೃಷ್ಣಾ ಎಡದಂಡೆ ಕಾಲುವೆಯಿಂದ ಆಲಮಟ್ಟಿ ಅಣೆಕಟ್ಟಿಗೆ ನೀರು ಹರಿಸಲಾಗಿತ್ತು. ಆದರೆ ಕಾಲುವೆಯಲ್ಲಿ ಹೂಳು ತುಂಬಿದ ಪರಿಣಾಮ ಕಾಲುವೆಗೆ ಹೋಗಬೇಕಿದ್ದ ನೀರು ಮನೆಗಳಿಗೆ ನುಗ್ಗಿದೆ.

    16ನೇ ಡಿಸ್ಟ್ರಿಬ್ಯುಟರ್ ಕಾಲುವೆ ಮೂಲಕ ನೀರು ಹರಿಯುತ್ತಿದೆ. ಕಾಲುವೆ ದುರಸ್ತಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಲ್ಲದೆ ಕಾಲುವೆಗಳಿಗೆ ಹರಿಯಬೇಕಿದ್ದ ಅಪಾರ ಪ್ರಮಾಣದ ನೀರು ಪೋಲಾಗಿರುವುದು ಕೂಡ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳು ಕಾಲುವೆ ಬಗ್ಗೆ ತೋರಿದ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ. ಸರಿಯಾದ ಸಮಯಕ್ಕೆ ಹೂಳೆತ್ತುವ ಕಾರ್ಯ ಮಾಡಿದ್ದರೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಜನರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

  • ತಡವಾಗಿದ್ರೂ ಪರವಾಗಿಲ್ಲ, ಉತ್ತಮ ಗುಣಮಟ್ಟದ ಮನೆ ನೀಡ್ತೀವಿ: ಎಂಟಿಬಿ

    ತಡವಾಗಿದ್ರೂ ಪರವಾಗಿಲ್ಲ, ಉತ್ತಮ ಗುಣಮಟ್ಟದ ಮನೆ ನೀಡ್ತೀವಿ: ಎಂಟಿಬಿ

    – ಜುಲೈ ಅಂತ್ಯಗೊಳಗೆ ಕೊಡಗು ನಿರಾಶ್ರಿತರಿಗೆ ಮನೆ ಹಸ್ತಾಂತರ

    ಮಡಿಕೇರಿ: ಜುಲೈ ಅಂತ್ಯದ ಒಳಗಡೆ ಕೊಡಗು ನಿರಾಶ್ರಿತರಿಗೆ ಮನೆ ಹಸ್ತಾಂತರ ಮಾಡುತ್ತೇವೆ. ತಡವಾಗಿದ್ದರೂ ಪರವಾಗಿಲ್ಲ, ಉತ್ತಮ ಗುಣಮಟ್ಟದ ಮನೆ ನೀಡುತ್ತೇವೆ ಎಂದು ಮನೆ ಕಾಮಗಾರಿ ವಿಕ್ಷಣೆ ಬಳಿಕ ವಸತಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಜಂಬೂರು ಗ್ರಾಮಕ್ಕೆ ಇಂದು ಭೇಟಿ ನೀಡಿದ್ದರು. ಕಳೆದ ಬಾರಿ ಕೊಡಗು ಜಿಲ್ಲೆಯಲ್ಲಿ ಆದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರ ಮನೆಗಳನ್ನು ಕಟ್ಟುಕೊಡುತ್ತಿದ್ದು, ಈ ಮನೆಗಳ ಕಾಮಗಾರಿ ವಿಕ್ಷಣೆಯನ್ನು ಮಾಡಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಡವಾಗಿದ್ದರೂ ಪರವಾಗಿಲ್ಲ, ಉತ್ತಮ ಗುಣಮಟ್ಟದ ಮನೆ ನಿಡುತ್ತಿದ್ದೇವೆ. ಕಾಮಗಾರಿ ವಿಳಂಬ ಆಗಿದೆ. ಮೂಲಸೌಕರ್ಯ ಕಲ್ಪಿಸಿದ ಕೂಡಲೇ ಸಂತ್ರಸ್ತರಿಗೆ ಮನೆಗಳನ್ನು ಹಸ್ತಾಂತರ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

    ಕರ್ಣಂಗೇರಿ, ಮದೆನಾಡುವಿನ ಎರಡು ಕಡೆ ನಿರ್ಮಾಣವಾಗಿರುವ ಮನೆಗಳನ್ನು ಹಸ್ತಾಂತರವಾಗಲಿದೆ. ಮನೆ ನೋಡಿ ನನಗೆ ತುಂಬಾ ಖುಷಿಯಾಗಿದೆ. ನಮ್ಮ ಸಮ್ಮಿಶ್ರ ಸರ್ಕಾರದ ವತಿಯಿಂದ ನಿರಾಶ್ರಿತರಿಗೆ ಉತ್ತಮ ಮನೆ ನೀಡೋದು ನಮ್ಮ ಉದ್ದೇಶ ಅಷ್ಟೇ ಎಂದು ಎಂಟಿಬಿ ತಿಳಿಸಿದರು.

    ಸಿಎಂ ಗ್ರಾಮ ವಾಸ್ತವ್ಯಕ್ಕೆ ವಸತಿ ಸಚಿವರು ಫುಲ್ ಮಾರ್ಕ್ಸ್‌ ಕೊಟ್ಟಿದ್ದು, ಗ್ರಾಮದ ವಾಸ್ತವ ಸಮಸ್ಯೆ ಅರಿಯಲು ಸಿಎಂ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಎಲ್ಲೋ ಕುಳಿತು ಆಡಳಿತ ಮಾಡಿದರೆ ಸಮಸ್ಯೆ ಗೊತ್ತಾಗಲ್ಲ ಎಂಬುದು ಸಿಎಂಗೆ ಗೊತ್ತಿದೆ. ಹೀಗಾಗಿ ಗ್ರಾಮಗಳಲ್ಲಿ ವಾಸ್ತವ್ಯ ಮಾಡಿ ಸಮಸ್ಯೆ ಅರಿಯುತ್ತಿದ್ದಾರೆ. ಈ ಹಿಂದೆ ಸಿಎಂ ಆಗಿದ್ದಾಗ ಕೂಡ ಅವರು ಗ್ರಾಮ ವಾಸ್ತವ್ಯ ಮಾಡಿದ್ದರು. ವಿರೋಧ ಪಕ್ಷಗಳಿಗೆ ವಿರೋಧ ಮಾಡೋದೆ ಕೆಲಸ. ಅವರ ವಿರೋಧ ಹೇಳಿಕೆ ಕಾಮನ್ ಎಂದ ಬಿಜೆಪಿಗೆ ಮಾತಿಗೆ ಚಾಟಿ ಬೀಸಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಅವರ ಶಕ್ತಿ ಕುಗ್ಗಿಲ್ಲ. ಅವರ ವ್ಯಾಪ್ತಿಯ ಕೆಲಸವನ್ನು ಅವರು ಚೆನ್ನಾಗಿ ಮಾಡುತ್ತಿದಾರೆ. ಸಿದ್ದರಾಮಯ್ಯ ಅವರು ರಾಜ್ಯದ ಜನರಿಗೆ ಏನೇನು ಒಳ್ಳೆ ಕಾರ್ಯ ಮಾಡಿದ್ದಾರೆ ಎಂದು ಗೊತ್ತಿದೆ. ಜನರು ಅದನ್ನು ತಿಳಿದುಕೊಂಡಿದ್ದಾರೆ. ಬಿಜೆಪಿ ನಾಯಕರ ಹೇಳಿಕೆ ಸುಖಾ ಸುಮ್ಮನೆ. ಸಮ್ಮಿಶ್ರ ಸರ್ಕಾರದಲ್ಲಿ ಏನೂ ಸಮಸ್ಯೆ ಇಲ್ಲ. ಸಿದ್ದರಾಮಯ್ಯ, ಕುಮಾರಸ್ವಾಮಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಮ್ಮ ನಾಯಕರ ಪರ ಬ್ಯಾಟಿಂಗ್ ಮಾಡಿದ್ದಾರೆ.

  • ಉತ್ತರ ಕನ್ನಡದಲ್ಲಿ ಭಾರೀ ಮಳೆ- 40ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ಉತ್ತರ ಕನ್ನಡದಲ್ಲಿ ಭಾರೀ ಮಳೆ- 40ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ಕಾರವಾರ: ಶನಿವಾರದಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಭಾಗದಲ್ಲಿ ಮಳೆರಾಯನ ಆರ್ಭಟ ಜೋರಾಗಿತ್ತು. ಹೀಗಾಗಿ ಭಾರೀ ಮಳೆಗೆ ಗಂಗಾವಳಿ ನದಿ ತೀರ ಹಾಗೂ ಸಮುದ್ರ ತೀರದ ಗ್ರಾಮಗಳ ಸುಮಾರು 40ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

    ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಗಂಗಾವಳಿ ನದಿ ತೀರ ಹಾಗೂ ಸಮುದ್ರ ತೀರದ ಗ್ರಾಮಗಳಾದ ಕೋಡ್ಸಣಿ, ಪೋಜಗೇರಿ, ವಾಸರೆ, ಕುರ್ವೆ ಸೇರಿದಂತೆ ಸುತ್ತಮುತ್ತಲ ಗ್ರಾಮದ 40ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

    ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದ್ದರಿಂದ ಅಂಕೋಲದಲ್ಲಿ ತಾತ್ಕಾಲಿಕ ಗಂಜಿ ಕೇಂದ್ರ ಹಾಗೂ 24 ಘಂಟೆಗಳ ಸಹಾಯವಾಣಿಯನ್ನು ತೆರೆಯಲಾಗಿದೆ. ಹಾಗೆಯೇ ಘಟನಾ ಸ್ಥಳಕ್ಕೆ ಅಂಕೋಲ ತಹಶಿಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಇಂದು ಕೂಡ ಮಳೆಯ ಆರ್ಭಟ ಮುಂದುವರಿದಿದ್ದು, ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದೆ ಎಂದು ವರದಿಯಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಸರ್ಕಾರಕ್ಕೂ ಮುನ್ನ ಕೊಡಗು ಸಂತ್ರಸ್ತರಿಗೆ ಸೂರು ಕೊಟ್ಟ ರೋಟರಿ

    ಸರ್ಕಾರಕ್ಕೂ ಮುನ್ನ ಕೊಡಗು ಸಂತ್ರಸ್ತರಿಗೆ ಸೂರು ಕೊಟ್ಟ ರೋಟರಿ

    ಮಡಿಕೇರಿ: ಕಳೆದ ಬಾರಿ ಕೊಡಗಿನಲ್ಲಾದ ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಮನೆ ಕೊಡುವ ಮುನ್ನವೇ ರೋಟರಿ ಸಂಸ್ಥೆ ಸೂರು ನಿರ್ಮಿಸಿ ಕೊಟ್ಟಿದೆ.

    ಕಳೆದ ವರ್ಷ ಕೊಡಗಿನಲ್ಲಿ ಮಳೆರಾಯನ ಆರ್ಭಟಕ್ಕೆ ಇಡೀ ಜಿಲ್ಲೆಯೇ ತತ್ತರಿಸಿ ಹೋಗಿತ್ತು. ಜಿಲ್ಲೆಯಲ್ಲಿ ನಡೆದ ಪ್ರಾಕೃತಿಕ ವಿಕೋಪದಿಂದ ಸಾವಿರಾರು ಮಂದಿ ಮನೆ ಕಳೆದುಕೊಂಡಿದ್ದರು. ಹೀಗಾಗಿ ಕೊಡಗು ಸಂತ್ರಸ್ಥರಿಗೆ ರೋಟರಿ ಸಂಸ್ಥೆ ರಿ ಬಿಲ್ಡ್ ಕೊಡಗು ಯೋಜನೆಯಡಿ 25 ಮನೆಗಳ ನಿರ್ಮಾಣ ಮಾಡಿಕೊಟ್ಟಿದೆ. ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಇಗ್ಗೋಡ್ಲುವಿನಲ್ಲಿ ಪುನರ್ವಸತಿ ಕಲ್ಪಿಸಿಕೊಟ್ಟಿದೆ.

    ನಿರಾಶ್ರಿತರು ಮನೆ ಕಳೆದುಕೊಂಡು ವರ್ಷ ತುಂಬುತ್ತಿದ್ದರೂ, ರಾಜ್ಯ ಸರ್ಕಾರ ಅವರಿಗೆ ಸೂರು ನೀಡಿಲ್ಲ. ಆದರೆ ಸರ್ಕಾರಕ್ಕೆ ಸೆಡ್ಡು ಹೊಡೆದು 25 ಸಂತ್ರಸ್ತ ಕುಟುಂಬಗಳಿಗೆ ಸಿಂಗಲ್ ಬೆಡ್ ರೂಮ್ ಮನೆ ನಿರ್ಮಿಸಿಕೊಟ್ಟು ರೋಟರಿ ಸಂಸ್ಥೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಸಂತ್ರಸ್ತರ ಜಾಗದಲ್ಲೇ ತಲಾ 5 ಲಕ್ಷ ವೆಚ್ಚದಲ್ಲಿ ಮನೆಗಳ ನಿರ್ಮಾಣ ಮಾಡಲಾಗಿದೆ. ಅಷ್ಟೇ ಅಲ್ಲದೆ ಮನೆ ಜೊತೆಗೆ ಮೂಲಭೂತ ಸೌಕರ್ಯ ವ್ಯವಸ್ಥೆಯನ್ನೂ ಕೂಡ ರೋಟರಿ ಸಂಸ್ಥೆಯ ಕಲ್ಪಸಿದ್ದು, ಈ ಕಾರ್ಯಕ್ಕೆ ಸಂತ್ರಸ್ತ ಕುಟುಂಬಗಳು ಫುಲ್ ಖುಷ್ ಆಗಿವೆ.

  • ಸಿಲಿಂಡರ್ ಸ್ಫೋಟ – ಕೂಲಿಕಾರ್ಮಿಕರ 6 ಜೋಪಡಿ ಮನೆ ಭಸ್ಮ!

    ಸಿಲಿಂಡರ್ ಸ್ಫೋಟ – ಕೂಲಿಕಾರ್ಮಿಕರ 6 ಜೋಪಡಿ ಮನೆ ಭಸ್ಮ!

    ಬಾಗಲಕೋಟೆ: ಆಕಸ್ಮಿಕವಾಗಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಕೂಲಿಕಾರ್ಮಿಕರ ಆರು ಜೋಪಡಿ ಮನೆಗಳು ಭಸ್ಮವಾದ ಘಟನೆ ಜಿಲ್ಲೆಯ ಇಳಕಲ್ ನಗರದಲ್ಲಿ ನಡೆದಿದೆ.

    ಇಳಕಲ್ ನಗರದ ಪೊಲೀಸ್ ಕ್ವಾಟರ್ಸ್ ಹತ್ತಿರದ ಶರಗುರು ಬಾಷಾ ಕೊಳಚೆ ಪ್ರದೇಶದಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಶಾಂತಮ್ಮ ಅವಾರಿ ಎನ್ನುವವರ ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡಿದೆ. ಈ ವೇಳೆ ಅಕ್ಕಪಕ್ಕದಲ್ಲಿದ್ದ ಜೋಪಡಿ ಮನೆಗಳಿಗೂ ಬೆಂಕಿ ತಗುಲಿದ್ದು, ಮೀನಾಕ್ಷಿ ಶೀಲವೇರಿ, ಆನಂದ ರೊಡ್ಡನ್ನವರ, ಬಸವರಾಜ ನೀಲಿ, ಲಕ್ಷ್ಮೀ ಭಗವತಿ, ಅಮೀನಸಾಬ ಗುಣಸಿ ಎನ್ನುವ ಬಡಕೂಲಿಕಾರ್ಮಿಕರ ಜೋಪಡಿಗಳು ಸುಟ್ಟು ಭಸ್ಮವಾಗಿದೆ.

    ಅದೃಷ್ಟವಶಾತ್ ಸಿಲಿಂಡರ್ ಸ್ಪೋಟಗೊಂಡ ಸಮಯದಲ್ಲಿ ಜೋಪಡಿಗಳಲ್ಲಿ ಯಾರು ಇರದ ಕಾರಣ ಯಾವುದೇ ಜೀವಹಾನಿ ಆಗಿಲ್ಲ. ಆದ್ರೆ ಈ ಮನೆಗಳಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿವೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದಾರೆ.

    ಇಳಕಲ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಜಿಎಫ್‍ನಲ್ಲಿ ಕುಡುಕನ ಅವಾಂತರ- 5 ಮನೆಗಳ ಮೇಲ್ಛಾವಣಿ ಧ್ವಂಸ!

    ಕೆಜಿಎಫ್‍ನಲ್ಲಿ ಕುಡುಕನ ಅವಾಂತರ- 5 ಮನೆಗಳ ಮೇಲ್ಛಾವಣಿ ಧ್ವಂಸ!

    ಕೋಲಾರ: ಕುಡಿದ ನಶೆಯಲ್ಲಿ ಕುಡುಕನೊಬ್ಬ ಮನೆಗಳ ಮೇಲ್ಛಾವಣಿ ಹಾಗೂ ಗೃಹಪಯೋಗಿ ವಸ್ತುಗಳನ್ನು ಧ್ವಂಸ ಮಾಡಿರುವ ಘಟನೆ ಜಿಲ್ಲೆಯ ಕೆಜಿಎಫ್ ನಗರದ ಇರುದಯಂ ಕಾಲೋನಿಯಲ್ಲಿ ಸೋಮವಾರ ನಡೆದಿದೆ.

    ಕುಡಿದ ಮತ್ತಿನಲ್ಲಿದ್ದ ಅದೇ ಕಾಲೋನಿಯ ನಿವಾಸಿ ಮಂಜುನಾಥ್ ಎಂಬಾತ 5 ಮನೆಗಳಲ್ಲಿ ಪಿಠೋಪಕರಣ, ಮೇಲ್ಛಾವಣಿಯನ್ನು ಕುಡುಕ ಧ್ವಂಸ ಮಾಡಿದ್ದಾನೆ. ಮಂಜುನಾಥ್ ಅಂದರೆ ಕಾಲೋನಿಯ ಜನರಿಗೆ ಒಂಥರಾ ಭಯ. ಕುಡಿದ ಮತ್ತಿನಲ್ಲಿ ಏನೇನು ಮಾಡ್ತಾನೋ ಎನ್ನುವ ಹೆದರಿಕೆ ಸ್ಥಳೀಯರಲ್ಲಿದೆ. ಹೀಗೆ ಕುಡಿದು ಕಾಲೋನಿ ತುಂಬಾ ಓಡಾಡೋ ಮಂಜುನಾಥ್ ಇಂದು ಸ್ಥಳೀಯರಿಗೆ ವಿಪರೀತ ತಲೆನೋವು ಕೊಟ್ಟಿದ್ದಾನೆ.

    ಕುಡಿದ ನಶೆಯಲ್ಲಿ ಕಾಲೋನಿಯಲ್ಲಿದ್ದ ಸುಮಾರು 5 ಮನೆಗಳ ಮೇಲೆ ಹತ್ತಿ ಮೇಲ್ಛಾವಣಿಗೆ ಕಲ್ಲು ಹಾಗೂ ಹಂಚು ಎಸೆದು ಪುಡಿ ಪುಡಿ ಮಾಡಿದ್ದಾನೆ. ಅಲ್ಲದೆ ಮನೆಗಳಲ್ಲಿದ್ದ ಪೀಠೋಪಕರಣವನ್ನು ಕೂಡ ಹಾಳು ಮಾಡಿದ್ದಾನೆ. ಈ ಕುಡುಕನ ಅವತಾರಕ್ಕೆ ಕಾಲೋನಿಯ ಮಹಿಳೆಯರು ಹಾಗೂ ಮಕ್ಕಳು ಬೆಚ್ಚಿಬಿದ್ದಿದ್ದಾರೆ. ಕೆಲವರು ಈತನ ಅವಾಂತರವನ್ನು ಮೊಬೈಲ್‍ನಲ್ಲಿ ವಿಡಿಯೋ ಕೂಡ ಮಾಡಿದ್ದಾರೆ.

    ಈ ಘಟನೆ ಕುರಿತು ಅಂಡರ್ ಸನ್‍ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕುಡುಕನ ಮೇಲೆ ಪ್ರಕರಣ ದಾಖಲಿಸಿದ್ದಾರೆ.

    https://youtu.be/VpJxEcj9F_w

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv