Tag: Housefull

  • ಹೌಸ್‍ಫುಲ್ ಪ್ರದರ್ಶನಕ್ಕೆ ಅನುಮತಿ, ಚಿತ್ರಮಂದಿರಗಳಲ್ಲಿ ಕಟ್ಟುನಿಟ್ಟಾಗಿ ನಿಯಮ ಪಾಲಿಸಿ: ಶಿವರಾಜ್ ಕುಮಾರ್

    ಹೌಸ್‍ಫುಲ್ ಪ್ರದರ್ಶನಕ್ಕೆ ಅನುಮತಿ, ಚಿತ್ರಮಂದಿರಗಳಲ್ಲಿ ಕಟ್ಟುನಿಟ್ಟಾಗಿ ನಿಯಮ ಪಾಲಿಸಿ: ಶಿವರಾಜ್ ಕುಮಾರ್

    ಬೆಂಗಳೂರು: ಚಿತ್ರ ಮಂದಿರಗಳಲ್ಲಿ ಶೇ.100ರಷ್ಟು ಸೀಟ್ ಭರ್ತಿಗೆ ಸರ್ಕಾರ ಅನುಮತಿ ನೀಡಿದ್ದು, ಚಿತ್ರಮಂದಿರಗಳಲ್ಲಿ ಕೊರೊನಾ ನಿಯಮಗಳನ್ನು ಕಟ್ಟುನಿಟಾಗಿ ಪಾಲಿಸಬೇಕು. ಪ್ರೇಕ್ಷಕರು ಸಹ ಇದಕ್ಕೆ ಸಹಕರಿಸಬೇಕು ಎಂದು ನಟ ಶಿವರಾಜ್ ಕುಮಾರ್ ಕರೆ ನೀಡಿದ್ದಾರೆ.

    ಆರೋಗ್ಯ ಸಚಿವ ಸುಧಾಕರ್ ಜೊತೆ ನಡೆದ ಸಭೆ ಬಳಿಕ ಮಾತನಾಡಿದ ಅವರು, ಸಲಹಾ ಸಮಿತಿ ಸಲಹೆ ಮೇರೆಗೆ ವಾದ ವಿವಾದ ನಡೆಯಿತು. ನಮ್ಮ ಮನವಿ ಅವರ ಕಿವಿ, ಹೃದಯಕ್ಕೆ ಮುಟ್ಟಿದೆ. ಇದು ಇಂಡಸ್ಟ್ರಿಗೆ ಪಾಠವಾಗಿದೆ. ಚಿತ್ರ ಮಂದಿರಗಳಲ್ಲಿ ಸ್ವಚ್ಛತೆ ಇರಬೇಕು. ಎಸಿ ತಾಪಮಾನವನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಇದಕ್ಕೆ ಪ್ರೇಕ್ಷಕರು ಸಹಕರಿಸಬೇಕು. ಸಿಎಂ ಸೇರಿದಂತೆ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.

    ಸಭೆಯಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ನಮ್ಮ ಜೊತೆ ಕುಳಿತು ಚರ್ಚಿಸಿ ನಿರ್ಧಾರ ಕೈಗೊಳ್ಳಬಹುದಿತ್ತು. ಏಕಾ ಏಕಿ ನಿರ್ಧಾರ ಕೈಗೊಂಡಿರೋದು ಕಷ್ಟವಾಗಿದೆ. ಎಲ್ಲ ರೀತಿಯ ಮುನ್ನೆಚ್ಚರಿಗೆ ಕ್ರಮ ಕೈಗೊಳ್ಳುತ್ತೇವೆ. ಏನೇ ನಿಯಮ ಹಾಕಿ ಶೇ.100 ರಷ್ಟಕ್ಕೆ ಅನುಮತಿ ನೀಡಿ ಎಂದು ಸಚಿವರಿಗೆ ಮನವಿ ಮಾಡಿದರು.

    ಕೊರೊನಾ ಬಂದಾಗಿನಿಂದಲೂ ಚಿತ್ರರಂಗ ಸಂಕಷ್ಟದಲ್ಲಿದೆ. ಎಲ್ಲವನ್ನೂ ಎದುರಿಸಿ ಮುನ್ನುಗ್ಗಬೇಕು. ಎಲ್ಲ ಕಳೆದು ಒಳ್ಳೆಯ ಕಾಲ ಬರುವ ಸೂಚನೆಗಳು ಬಂದಿತ್ತು. ಕೇಂದ್ರ ಸರ್ಕಾರ ಶೇ.100ರಷ್ಟು ಭರ್ತಿಗೆ ಅವಕಾಶ ಮಾಡಿಕೊಟ್ಟಿತ್ತು. ಆದರೆ ಈಗ ರಾಜ್ಯ ಸರ್ಕಾರ ಮಾಡಿರುವ ನಿಯಮ ಮತ್ತೆ ಚಿತ್ರ ರಂಗಕ್ಕೆ ಸಂಕಷ್ಟ ತಂದಿದೆ. ಶೇ.50ರಷ್ಟು ನೀಡಿದರೆ ಬದುಕೋಕೆ ಆಗುತ್ತಾ? ಸಾಮಾಜಿಕ ಅಂತರ ಎಲ್ಲಿದೆ ಹೇಳಿ. ಸಿನಿಮಾ ರಂಗಕ್ಕೆ ಮಾತ್ರ ಈ ಬೇಧ ಏಕೆ? ಬೇರೆ ರಾಜ್ಯಗಳಲ್ಲಿ ಈ ರೀತಿ ಮಾಡಿಲ್ಲ. ಈ ನಿರ್ಧಾರ ಮನಸಿಗೆ ನೋವು ತಂದಿದೆ. ರಾಜ್ಯ ಸರ್ಕಾರಕ್ಕೆ ಈಗಾಗಲೇ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಈಗಲೂ ಮನವಿ ಮಾಡುತ್ತೇವೆ ಎಂದು ಶಿವರಾಜ್ ಕುಮಾರ್ ಹೇಳಿದರು.

    ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿಲ್ಲ. ನನಗೂ ನೀಡಿಲ್ಲ, ಸಿಎಂಗೂ ಮಾರ್ಗ ಸೂಚಿಯ ಬಗ್ಗೆ ಮಾಹಿತಿ ನೀಡಿಲ್ಲ. ಹೀಗಾಗಿ ಈ ರೀತಿಯ ತೊಂದರೆ ಆಗಿದೆ. ಅಲ್ಲದೆ ಫೆಬ್ರವರಿಯಲ್ಲಿ ಎರಡನೇ ಅಲೆ ಬರುತ್ತದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ರೀತಿಯ ಕ್ರಮ ಕೈಗೊಂಡಿದ್ದೇವೆ ಎಂದು ಸಚಿವ ಸುಧಾಕರ್ ಇದೇ ವೇಳೆ ಮಾಹಿತಿ ನೀಡಿದರು.

    ಸಾ.ರಾ.ಗೋವಿಂದು ಮಾತನಾಡಿ, ನಮ್ಮ ಜನ ಹೊಟ್ಟೆ ತುಂಬ ಊಟ ಮಾಡಿ ತುಂಬಾ ದಿನ ಆಗಿದೆ. ಬೇರೆ 5 ರಾಜ್ಯಗಳ ಸಿನಿಮಾಗಳು ನಮ್ಮ ಕನ್ನಡ ಚಿತ್ರರಂಗವನ್ನು ನಿರ್ನಾಮ ಮಾಡುತ್ತಿವೆ. ಕಲ್ಯಾಣ ಮಂಟಪದಲ್ಲಿ 250 ಜನಕ್ಕೆ ಅನುಮತಿ ಕೊಟ್ಟಿದ್ದಾರೆ ಆದರೆ ಅಲ್ಲಿ 2,500 ಜನ ಇದ್ದಾರೆ. ದಯವಿಟ್ಟು ಗಮನ ಕೊಟ್ಟು ಶೇ.100 ಮಾಡಿ, ಇಲ್ಲವಾದಲ್ಲಿ ಒಂದು ವರ್ಷ ಹಿಂದೆ ಹೋಗುತ್ತೇವೆ ಎಂದು ತಿಳಿಸಿದರು.

    ಇದಕ್ಕೂ ಮುನ್ನ ಕೊರೊನಾ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಸುದರ್ಶನ್ ಮಾಹಿತಿ ನೀಡಿ, ಕೊರೊನಾ ರಾಜ್ಯಕ್ಕೆ ಯಾವಾಗ ಬಂತು ಎನ್ನುವುದನ್ನು ಗಮನಿಸಿದ್ದೇವೆ. ಯಾವ ಮಟ್ಟದಲ್ಲಿ ನಿಯಂತ್ರಿಸಿದ್ದೇವೆ ಎನ್ನುವುದು ಎಲ್ಲರಿಗೂ ಗೊತ್ತು. ಕಳೆದ 5 ತಿಂಗಳಿಂದ ಕೊರೊನಾ ತಡೆಯಲು ಎಷ್ಟು ಕಷ್ಟ ಪಟ್ಟಿದ್ದೇವೆ ಎಂದು ನಮಗೆ ಗೊತ್ತಿದೆ. ಕೇರಳಕ್ಕೆ ಹೋಲಿಸಿಕೊಂಡರೆ ನಮ್ಮ ರಾಜ್ಯ ಎರಡು ಪಟ್ಟು ದೊಡ್ಡದಿದೆ. ಈಗ ಕೆರಳದಲ್ಲಿ ಪ್ರಕರಣ ಹೆಚ್ಚಾಗುತ್ತಿವೆ. ನಾವು ಎಲ್ಲ ಸರಳೀಕರಣ ಮಾಡಿದರೆ ಕಷ್ಟವಾಗುತ್ತೆ ಎಂದು ತಿಳಿಸಿದರು.

    ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಫಿಲಂ ಚೇಂಬರ್ ಅಧ್ಯಕ್ಷ ಜಯರಾಜ್, ಸಾರಾ ಗೋವಿಂದ್, ನಟಿ ತಾರಾ,ಕೆಪಿ ಶ್ರೀಕಾಂತ್, ಉಮೇಶ್ ಬಣಕಾರ್, ನಿರ್ಮಾಪಕ ಸಂಘದ ಅಧ್ಯಕ್ಷ ಪ್ರವೀಣ್, ಕೆ ಮಂಜು, ನಟ ದೊಡ್ಡಣ್ಣ, ಸುರೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

  • ಚಿತ್ರ ಮಂದಿರಗಳಲ್ಲಿ ಹೌಸ್‍ಫುಲ್ ಪ್ರದರ್ಶನಕ್ಕೆ ರಾಜ್ಯ ಸರ್ಕಾರದಿಂದ ಅನುಮತಿ

    ಚಿತ್ರ ಮಂದಿರಗಳಲ್ಲಿ ಹೌಸ್‍ಫುಲ್ ಪ್ರದರ್ಶನಕ್ಕೆ ರಾಜ್ಯ ಸರ್ಕಾರದಿಂದ ಅನುಮತಿ

    – ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಿದ್ದ ಧ್ರುವ ಸರ್ಜಾ
    – ಪಬ್ಲಿಕ್ ಟಿವಿ ಬಿಗ್ ಇಂಪ್ಯಾಕ್ಟ್

    ಬೆಂಗಳೂರು: ರಾಜ್ಯ ಸರ್ಕಾರ ಕೊನೆಗೂ ಚಿತ್ರ ಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಅನುಮತಿ ನೀಡಿದೆ. ಹೊಸ ಕೋವಿಡ್‌ 19 ಮಾರ್ಗಸೂಚಿಯನ್ನು ಹೊರಡಿಸುವಂತೆ ಸರ್ಕಾರ ಸೂಚಿಸಿದೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಧಾಕರ್‌, ಕೋವಿಡ್‌ 19 ಸಲಹಾ ಸಮಿತಿಯ ನೀಡಿದ ಸಲಹೆಯ ಆಧಾರದ ಮೇರೆಗೆ ನಿನ್ನೆ ಸರ್ಕಾರ ಆದೇಶವನ್ನು ಹೊರಡಿಸಿತ್ತು. ಆದರೆ ಇಂದು ಚಲನ ಚಿತ್ರ ರಂಗದ ಗಣ್ಯರು ಶೇ.100 ರಷ್ಟು ಪ್ರವೇಶಕ್ಕೆ ಅನುಮತಿ ನೀಡದಿದ್ದರೆ ಇದನ್ನೇ ನಂಬಿಕೊಂಡವರ ಜೀವನ ಕಷ್ಟವಾಗುತ್ತದೆ ಎಂದು ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಸ್ಪಂದಿಸಿ ಶೇ.100 ರಷ್ಟು ಭರ್ತಿಗೆ ಅವಕಾಶ ನೀಡುತ್ತೇವೆ. ನಾಳೆ ಚಲನ ಚಿತ್ರ ಮಂದಿರಗಳಲ್ಲಿ ಅನುಸರಿಸಬೇಕಾದ ನಿಯಮಗಳ ಬಗ್ಗೆ ಮಾರ್ಗಸೂಚಿಯನ್ನು ಹೊರಡಿಸಲಾಗುವುದು ಎಂದು ತಿಳಿಸಿದರು.

    ಕೇಂದ್ರ ಸರ್ಕಾರ ಇತ್ತೀಚೆಗೆ ಹೊರಡಿಸಿದ ಕೊರೊನಾ ಮಾರ್ಗಸೂಚಿಗಳಲ್ಲಿ ಚಿತ್ರಮಂದಿರಗಳಿಗೆ ಹೌಸ್‍ಫುಲ್ ಪ್ರದರ್ಶನಕ್ಕೆ ಅನುಮತಿ ನೀಡಿತ್ತು. ಆದರೆ ರಾಜ್ಯ ಸರ್ಕಾರ ಮಾತ್ರ ಒಪ್ಪಿಗೆ ಸೂಚಿಸಿರಲಿಲ್ಲ. ಇದಕ್ಕೆ ಸ್ಯಾಂಡಲ್‍ವುಡ್‍ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ಪಬ್ಲಿಕ್ ಟಿವಿ ಸಹ ನಿರತಂತರವಾಗಿ ಸುದ್ದಿ ಬಿತ್ತರಿಸಿತ್ತು. ಇದೀಗ ವರದಿಯ ಫಲವಾಗಿ ರಾಜ್ಯ ಸರ್ಕಾರ ಹೌಸ್‍ಫುಲ್ ಪ್ರದರ್ಶನಕ್ಕೆ ಅನುಮತಿ ನೀಡಿದೆ.

    ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಭರ್ತಿಗೆ ನಿರ್ಬಂಧ ಹೇರಿ ಶೇ.50 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡುವ ರಾಜ್ಯ ಸರ್ಕಾರದ ಅದೇಶಕ್ಕೆ ನಟ ಧ್ರುವ ಸರ್ಜಾ ಸೇರಿದಂತೆ ಸ್ಯಾಂಡಲ್‍ವುಡ್‍ನ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಪ್ರವೇಶ ಕಲ್ಪಿಸುವ ಸಂಬಂಧ ಇಂದು ಸಂಜೆ 5 ಗಂಟೆಗೆ ಸರ್ಕಾರ ದಿಢೀರ್ ಆರೋಗ್ಯ ಇಲಾಖೆಯ ಜೊತೆ ಸಭೆ ನಡೆಸಿತ್ತು. ಸಭೆಯ ಬಳಿಕ ಹೌಸ್‍ಫುಲ್ ಪ್ರದರ್ಶನಕ್ಕೆ ಅನುಮತಿ ನೀಡಿದೆ.

    ಮಾರ್ಕೆಟ್ ಗಳಲ್ಲಿ ಗಿಜಿಗುಡುವಂತೆ ಜನ, ಬಸ್ ಫುಲ್ ರಶ್, ಚಿತ್ರಮಂದಿರಕ್ಕೆ ಮಾತ್ರ ಶೇ.50 ನಿರ್ಬಂಧ ಎಂದು ನಟ ಧ್ರುವ ಸರ್ಜಾ ಪೋಸ್ಟ್ ಮಾಡುವ ಮೂಲಕ ಅಭಿಯಾನವನ್ನು ಪ್ರಾರಂಭಿಸಿದ್ದರು. ಇದಕ್ಕೆ ಇಡೀ ಚಿತ್ರರಂಗವೇ ಒಟ್ಟಾಗಿ ಸೋಷಿಯಲ್ ಮೀಡಿಯಾದಲ್ಲಿ ಸರ್ಕಾರವನ್ನು ಪ್ರಶ್ನಿಸಿತ್ತು.

    ಖಾಸಗಿ ಕಾರ್ಯಕ್ರಮಗಳು, ದೇವಸ್ಥಾನ, ಚರ್ಚ್, ಮಸೀದಿ, ಮಾರ್ಕೆಟ್, ಸಾರ್ವಜನಿಕ ಸಾರಿಗೆಗಳು, ಪ್ರವಾಸೋದ್ಯಮಗಳು ಯಾಥಾವತ್ತಾಗಿ ತೆರೆದಿರುವಾಗ ಸಿನಿಮಾ ಥಿಯೇಟರ್‍ಗಳು ಯಾಕಿರಬಾರದು ಎಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪ್ರಶ್ನಿಸಿ ಟ್ವೀಟ್ ಮಾಡಿದ್ದರು.

    ಸಿನಿಮಾ ಕೆಲವರಿಗೆ ಎಂಟರ್ಟೈನ್‍ಮೆಂಟ್ ಆದರೆ ಇನ್ನು ಹಲವರಿಗೆ ಅದೇ ಜೀವಾಳವಾಗಿದೆ ಎಂದು ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಟ್ವೀಟ್ ಮಾಡಿ ರಾಜ್ಯ ಸರ್ಕಾರದ ತೆದೆದುಕೊಂಡಿರುವ ನಿರ್ಧಾರದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು.

    ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಸಹ ಚಿತ್ರಮಂದಿರಗಳಲ್ಲಿ ಶೇ.100 ಭರ್ತಿಗೆ ಅವಕಾಶ ನೀಡಬೇಕು. ಚಿತ್ರಮಂದಿರದ ನಾವೆಲ್ಲರೂ ಜೊತೆಯಲ್ಲಿದ್ದೇವೆ. ಸರ್ಕಾರದ ನಿರ್ಧಾರ ಬದಲಾಗಬೇಕು ಎಂದು ಹೇಳಿ ವೀಡಿಯೋ ಶೇರ್ ಮಾಡಿದ್ದರು. ಎಲ್ಲ ಸಾರ್ವಜನಿಕ ಪ್ರದೇಶಗಳು ಜನಸಂದಣಿಯಿಂದ ಕೂಡಿದೆ. ಕರ್ನಾಟಕದಲ್ಲಿ ರಂಗಭೂಮಿಯನ್ನು ಶೇ.50 ಕ್ಕೆ ಮಾತ್ರ ಸೀಮಿತಗೊಳಿಸಿದೆ. ಏಕೆ? ಸಿನೆಮಾ ರಾಜ್ಯಾದ್ಯಂತ ಅನೇಕರಿಗೆ ಜೀವನೋಪಾಯದ ಸಾಧನವಾಗಿದೆ ಎಂಬುದನ್ನು ನಾವು ಮರೆಯುತ್ತಿದ್ದೇವೆ ಎಂದು ರಕ್ಷಿತ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದರು.

    ಬೀದಿಗಳು, ಬಸ್ಸುಗಳು, ಮಾಲ್‍ಗಳು, ಪಬ್‍ಗಳು ಮತ್ತು ಇತರ ಎಲ್ಲ ಸಾರ್ವಜನಿಕ ಪ್ರದೇಶಗಳು ಜನರಿಂದ ತುಂಬಿರುವಾಗ, ಕರ್ನಾಟಕ ಸರ್ಕಾರ ಶೇ.100 ಥಿಯೇಟರ್ ಆಕ್ಯುಪೆನ್ಸೀ ಘೋಷಣೆಯನ್ನು ಏಕೆ ಹಿಂತೆಗೆದುಕೊಂಡಿದೆ ಎಂದು ನೆನಪಿರಲಿ ಪ್ರೇಮ್ ಪ್ರಶ್ನಿಸಿದ್ದರು.

    ಧನಂಜಯ್, ಧುನಿಯಾ ವಿಜಯ್, ಪ್ರೀತಮ್ ಗುಬ್ಬಿ, ಸಿಂಪಲ್ ಸುನಿ ಹೀಗೆ ಸಿನಿಮಾ ಮಂದಿ ಟ್ವೀಟ್ ಮಾಡುವ ಮೂಲಕ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗೆ ಸಿನಿಮಾ ರಂಗದಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ಇದೀಗ ಸರ್ಕಾರ ನಿರ್ಧಾರ ಬದಲಿಸಿದ್ದು, ಹೌಸ್‍ಫುಲ್ ಪ್ರದರ್ಶನಕ್ಕೆ ಅನುಮತಿ ನೀಡಿದೆ.