Tag: house

  • ಮುಂಬೈನಲ್ಲಿ ಮನೆ ಕಟ್ಟಿಸಿದ ಸನ್ನಿ ಲಿಯೋನ್

    ಮುಂಬೈನಲ್ಲಿ ಮನೆ ಕಟ್ಟಿಸಿದ ಸನ್ನಿ ಲಿಯೋನ್

    ಮುಂಬೈ: ಬಾಲಿವುಡ್ ನಟಿ ಸನ್ನಿ ಲಿಯೋನ್ ಮುಂಬೈನಲ್ಲಿ ಮನೆ ಮನೆಕಟ್ಟಿಸಿದ್ದಾರೆ. ಈಗ ಕುಟುಂಬ ಸಮೇತರಾಗಿ ಹೊಸ ಮನೆಗೆ ಕಾಲಿಟ್ಟಿರುವ ನಟಿ, ಮನೆಯ ಕೆಲವು ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಭಾರತದಲ್ಲಿ ನಮ್ಮ ಜೀವನದ ಹೊಸ ಅಧ್ಯಾಯ ಪ್ರಾರಂಭವಾಗುತ್ತದೆ. ನಾವು ಇಲ್ಲಿ ನಿರ್ಮಿಸಿದ ಮನೆ ಮತ್ತು ಜೀವನವನ್ನು ನಾನು ಪ್ರೀತಿಸುತ್ತೇವೆ. ಈ ಸುಂದರವಾದ ಮನೆಯಲ್ಲಿ ನಮ್ಮ 3 ಸುಂದರ ಮಕ್ಕಳೊಂದಿಗೆ ವಾಸಿಸಲಿದ್ದೇವೆ ಎಂದು ಬರೆದು ಕೊಂಡು ಕೆಲವು ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Sunny Leone (@sunnyleone)

    ಸನ್ನಿ ಲಿಯೋನ್ ಬಾಲಿವುಡ್‍ಗೆ ಐಟಂ ಹಾಡುಗಳಿಗೆ ಹೆಜ್ಜೆ ಹಾಕುವ ನಟಿಯಾಗಿ ಕಾಲಿಟ್ಟು ನಂತರ ಸಿನಿಮಾ ನಿರ್ಮಾಣ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ. ಹಿಂದಿ ಸಿನಿಮಾಗಳಲ್ಲಿ ಐಟಂ ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಪಡ್ಡೆ ಹುಡುಗರ ನಿದ್ದೆ ಕದ್ದಿರುವ ಚೆಲುವೆಯಾಗಿದ್ದಾರೆ. ನಿರ್ಮಾಪಕಿಯಾಗಿ ಬಡ್ತಿ ಪಡೆದಿರುವ ಸನ್ನಿ ಲಿಯೋನ್ ಮುಂಬೈನಲ್ಲಿ ಸ್ವಂತ ಮನೆ ಖರೀದಿಸಿದ್ದಾರೆ.

    ಹೊಸ ಮನೆಗೆ ಸನ್ನಿ ಲಿಯೋನ್ ಹಾಗೂ ಕುಟುಂಬದವರು ಗೃಹ ಪ್ರವೇಶ ಮಾಡಿದ್ದಾರೆ. ಈ ವೇಳೆ ಸನ್ನಿ ಲಿಯೋನ್, ಪತಿ ಹಾಗೂ ಮಕ್ಕಳು ಪಿಜ್ಜಾ ಪಾರ್ಟಿ ಮಾಡಿದ್ದಾರೆ. ಮನೆ ಖರೀದಿಸಿರುವ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿರುವ ನಟಿ, ಮನೆಯಲ್ಲಿ ತೆಗೆದ ಕೆಲವು ಫೋಟೋಗಳನ್ನೂ ಶೇರ್ ಮಾಡುವ ಮೂಲಕವಾಗಿ ಅಭಿಮಾನಿಗಳೊಂದಿಗೆ ಸಂತಸವನ್ನು ಹಂಚಿಕೊಂಡಿದ್ದಾರೆ.

  • ಮನೆ ಗೋಡೆ ಕುಸಿತ- ಮೂರು ವರ್ಷದ ಬಾಲಕ ಸಾವು

    ಮನೆ ಗೋಡೆ ಕುಸಿತ- ಮೂರು ವರ್ಷದ ಬಾಲಕ ಸಾವು

    ಚಿತ್ರದುರ್ಗ: ಹಳೇ ಮನೆ ಗೋಡೆ ಕುಸಿದು ಮೂರು ವರ್ಷದ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕೆಲ್ಲೋಡು ಗ್ರಾಮದಲ್ಲಿ ನಡೆದಿದೆ.

    ಮಳೆಯಿಂದ ನೆನೆದಿದ್ದ ಹಳೇ ಮನೆ ಗೋಡೆ ಕುಸಿತದಿಂದಾಗಿ ರಾತ್ರಿ ವೇಳೆ ಮನೆಯಲ್ಲಿ ಮಲಗಿದ್ದ ಬಾಲಕ ಲೋಹಿತ್ (3) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಗುವಿನ ಜೊತೆಯಲ್ಲಿ ತಂದೆ ಓಂಕಾರಪ್ಪ ಹಾಗೂ ತಾಯಿ ಸಾವಿತ್ರಮ್ಮ ಸಹ ಇದ್ದರು. ಪೋಷಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದೂ, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಹೆಚ್ಚಿನ ಚಿಕಿತ್ಸೆ ಗಾಗಿ ದಾವಣಗೆರೆಯ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಈ ಪ್ರಕರಣ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಘಟನಾ ಸ್ಥಳಕ್ಕೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಹಳೆ ಮನೆ ತೆರವುಗೊಳಿಸಿ, ತಕ್ಷಣ ಹೊಸ ಮನೆ ನಿರ್ಮಾಣಮಾಡಿಕೊಳ್ಳಲು ವ್ಯವಸ್ಥೆ ಮಾಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.

  • ಯೋಧನ ಕುಟುಂಬದ ಮೇಲೆ ಹಲ್ಲೆ – ಜಿಲ್ಲಾಧಿಕಾರಿಗಳ ಮೊರೆ ಹೋದ ಸೈನಿಕ

    ಯೋಧನ ಕುಟುಂಬದ ಮೇಲೆ ಹಲ್ಲೆ – ಜಿಲ್ಲಾಧಿಕಾರಿಗಳ ಮೊರೆ ಹೋದ ಸೈನಿಕ

    ಬೆಳಗಾವಿ: ಯೋಧರೊಬ್ಬರ ಮನೆಯ ಮೇಲೆ ಕಲ್ಲುಗಳನ್ನು ಎಸೆದು ಮನೆಯ ಪೀಠೋಪಕರಣಗಳನ್ನು ಧ್ವಂಸ ಮಾಡಿರುವ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

    ಬೆಳಗಾವಿ ಮಹಾನಗರದಿಂದ ಒಂದು ಕಿಲೋ ಮೀಟರ್ ದೂರದಲ್ಲಿರುವ ಗೌಂಡವಾಡ ಗ್ರಾಮದಲ್ಲಿ ಕರ್ತವ್ಯನಿರತರಾಗಿರುವ ಯೋಧ ದೀಪಕ್ ಪಾಟೀಲ್ ಎಂಬವರ ಮನೆಯ ಮೇಲೆ ಹಲ್ಲೆ ನಡೆಸಲಾಗಿದೆ. ಮನೆಯಲ್ಲಿದ್ದ ಫ್ರಿಡ್ಜ್ – ಟಿವಿ ಸೇರಿದಂತೆ ಇತರ ವಸ್ತುಗಳನ್ನು ಧ್ವಂಸ ಮಾಡಿ ಇಡೀ ಕುಟುಂಬವನ್ನು ಊರಿನವರು ಬಹಿಷ್ಕಾರ ಹಾಕಿದ್ದಾರೆ.

    ಸದ್ಯ ಈ ಕಿರುಕಳ ಸಹಿಸಲಾರದೆ ದೇಶ ಕಾಯುವ ಯೋಧನ ಕುಟುಂಬ ಕಾಕತಿ ಪೊಲೀಸ್ ಠಾಣೆಗೆ ಮೊರೆ ಹೋಗಿದ್ದರೂ ಅಲ್ಲಿನ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅಲ್ಲದೆ ಮಕ್ಕಳು ದಿನಸಿ ಅಂಗಡಿಗೆ ಹೋಗಿ ಬಿಸ್ಕತ್ತು ಕೊಡಿ ಎಂದರೆ ಅಂಗಡಿಯವರು ನಮ್ಮಲ್ಲಿ ಬಿಸ್ಕತ್ತು ಇಲ್ಲ ಎಂದು ಮಕ್ಕಳಿಗೆ ಹೇಳಿ ಮರಳಿ ಕಳಿಸುತ್ತಾರೆ. ನಂತರ ಮಕ್ಕಳು ಅಮ್ಮನ ಬಳಿ ಬಂದು ಅಳುತ್ತಾರೆ. ಜೊತೆಗೆ ದೀಪಕ್ ಪಾಟೀಲ್‍ರವರ ದ್ವಿಚಕ್ರ ವಾಹನಕ್ಕೂ ಗ್ರಾಮಸ್ಥರು ಬೆಂಕಿ ಇಟ್ಟಿರುವುದಾಗಿ ಆರೋಪಿಸಿದ್ದಾರೆ.

    ಯೋಧ ದೀಪಕ್ ಸಂಬಂಧಿ ಅಶೋಕ್ ಪಾಟೀಲ್ ಅವರಿಗೆ ಸೇರಿದ ಐದು ಎಕರೆ ಜಮೀನು ವಿವಾದದಲ್ಲಿದ್ದು, ಗ್ರಾಮಸ್ಥರಿಗೂ ಹಾಗೂ ಯೋಧನ ಕುಟುಂಬಕ್ಕೆ ಜಗಳವಾಗಿದೆ ಎಂದು ಹೇಳಲಾಗುತ್ತಿದೆ. ಈಗ ಯೋಧ ನ್ಯಾಯಕ್ಕಾಗಿ ಬೆಳಗಾವಿ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಕೋಕ್ ಬಾಟಲ್ ಕೆಳಗಿಟ್ಟ ರೊನಾಲ್ಡೊ- ಕಂಪನಿಗೆ 29 ಸಾವಿರ ಕೋಟಿ ನಷ್ಟ

  • ಬೆಂಗಳೂರು ನಗರ ಜಿಲ್ಲೆಯಲ್ಲಿ ಬಡವರ ಮನೆ ನಿರ್ಮಾಣ: ಸೋಮಣ್ಣ

    ಬೆಂಗಳೂರು ನಗರ ಜಿಲ್ಲೆಯಲ್ಲಿ ಬಡವರ ಮನೆ ನಿರ್ಮಾಣ: ಸೋಮಣ್ಣ

    – 445 ಎಕರೆ ಸರ್ಕಾರಿ ಭೂಮಿ ಹಸ್ತಾಂತರ ಮಾತುಕತೆ

    ಬೆಂಗಳೂರು: ಜಿಲ್ಲೆಯಲ್ಲಿ ಲಭ್ಯವಿರುವ ಸೇರಿದ 445 ಎಕರೆ ಸರ್ಕಾರಿ ಭೂಮಿಯನ್ನು ಪ್ರಧಾನಮಂತ್ರಿ ವಸತಿ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

    ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ `1 ಲಕ್ಷ ಬಹುಮಹಡಿ ವಸತಿ ಯೋಜನೆ’ಗೆ ಸರ್ಕಾರದ ಜಮೀನು ಹಸ್ತಾಂತರ ಕುರಿತಂತೆ ಇಂದು ನಡೆದ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರ ಜಿಲ್ಲೆಯಲ್ಲಿ ಪ್ರಧಾನಮಂತ್ರಿಗಳು ಎಲ್ಲರಿಗೂ ಸೂರು ಆಶಯದಂತೆ ನಿರ್ಮಾಣ ಮಾಡಲು ಹೊರಟಿರುವ 1 ಲಕ್ಷ ಬಹು ಮಹಡಿ ವಸತಿ ಯೋಜನೆಯಡಿ 316 ಎಕರೆಯಲ್ಲಿ 46,000 ಮನೆಗಳ ನಿರ್ಮಾಣ ವಿವಿಧ ಹಂತಗಳಲ್ಲಿದೆ, ಆಗಸ್ಟ್ 15 ರಂದು ಮುಖ್ಯಮಂತ್ರಿಗಳು 5,000 ಮನೆಗಳನ್ನು ಬಡವರಿಗೆ ವಿತರಿಸಲಿದ್ದಾರೆ ಎಂದು ಪ್ರಕಟಿಸಿದರು.

    ಬೆಂಗಳೂರು ನಗರ ಜಿಲ್ಲೆಯಲ್ಲಿ ಪಕ್ಷ ಬೇಧ ಬಿಟ್ಟು ಎಲ್ಲ ಶಾಸಕರಿಗೂ ತಮ್ಮ ವ್ಯಾಪ್ತಿಯಲ್ಲಿ ಶೇ.50ರಷ್ಟು ಮನೆಗಳನ್ನು ಬಡವರಿಗೆ ವಿತರಿಸಲು ಅವಕಾಶ ಮಾಡಿಕೊಡಲಾಗುವುದು, ಆದರೆ ಅರ್ಹರಿಗೆ ಮಾತ್ರ ಮನೆಗಳನ್ನು ಹಂಚಬೇಕು. ಬಡವರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಮನೆಗಳನ್ನು ನೀಡಲಾಗುತ್ತಿದೆ, ತಲಾ 7 ಲಕ್ಷ ರೂ ನಿಗದಿ ಪಡಿಸಿದ್ದ ದರಗಳನ್ನು 5 ಲಕ್ಷ ರೂ.ಗಳಿಗೆ ತಗ್ಗಿಸಲಾಗಿದೆ. ಪರಿಶಿಷ್ಟ ಜಾತಿ ಹಾಗೂ ವರ್ಗದವರಿಗೆ 4.20 ಲಕ್ಷ ರೂ. ನಿಗದಿ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

    ಬಡವರಿಗೆ ಸೂರು ಒದಗಿಸುವ ಕೆಲಸದಲ್ಲಿ ಯಾವುದೇ ಅಧಿಕಾರಿಗಳು ವಿಳಂಬ, ಕರ್ತವ್ಯಲೋಪ ಮಾಡಿದರೆ ಕಠಿಣ ಕ್ರಮ ಎದುರಿಸಬೇಕಾಗುವುದು ಎಂದು ಸಚಿವ ಸೋಮಣ್ಣ ಎಚ್ಚರಿಕೆ ನೀಡಿದರು.

    ಕೊಳಚೆ ಅಭಿವೃದ್ಧಿ ಮಂಡಳಿ ಮೂಲಕ 1.80 ಲಕ್ಷ ಮನೆ ನಿರ್ಮಾಣ ಮಾಡುವ ಕೆಲಸ ಆರಂಭವಾಗಿದ್ದು, ವಿವಿಧ ಹಂತದಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿದೆ. ಒಂದು ವರ್ಷದ ಅವಧಿಯಲ್ಲಿ ಈ ಮನೆಗಳ ನಿರ್ಮಾಣ ಬಹತೇಕ ಮುಗಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಮತ್ತು ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳು 70,000 ಮನೆಗಳನ್ನು ನಿರ್ಮಿಸುವ ಜವಾಬ್ದಾರಿ ಹೊತ್ತಿವೆ ಎಂದು ಹೇಳಿದರು.

    ಸಭೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರ್.ಮಂಜುನಾಥ್, ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥಪ್ರಸಾದ್, ವಸತಿ ಇಲಾಖೆಯ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ರಾಜೀವ್ ಗಾಂಧಿ ವಸತಿ ನಿಗಮದ ಆಯುಕ್ತ ಬಸವರಾಜ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಹಾಗೂ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ, ಭೂಮಾಪನ ಹಾಗೂ ಭೂ ದಾಖಲೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಾಲೂಕುಗಳ ತಹಶೀಲ್ದಾರರು ಉಪಸ್ಥಿತರಿದ್ದರು.

  • ತೌಕ್ತೆಯ ಅಬ್ಬರಕ್ಕೆ ನಲುಗಿದ 43 ಗ್ರಾಮಗಳು – ಇಳಿಮುಖವಾದ ಸಮುದ್ರದ ಅಬ್ಬರ

    ತೌಕ್ತೆಯ ಅಬ್ಬರಕ್ಕೆ ನಲುಗಿದ 43 ಗ್ರಾಮಗಳು – ಇಳಿಮುಖವಾದ ಸಮುದ್ರದ ಅಬ್ಬರ

    ಕಾರವಾರ: ಕಳೆದ ಎರಡು ದಿನದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರಿಸಿದ ತೌಕ್ತೆ ಚಂಡಮಾರುತದಿಂದಾಗಿ ಜಿಲ್ಲೆಯಲ್ಲಿ ದೊಡ್ಡ ನಷ್ಟ ಸಂಭವಿಸಿದೆ.

    ಚಂಡಮಾರುತದ ಅಬ್ಬರಕ್ಕೆ ಕರಾವಳಿಯ 43 ಗ್ರಾಮಗಳಲ್ಲಿ ಹಾನಿ ಸಂಭವಿಸಿದ್ದು, 153 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಮತ್ತು 22 ಮನೆ ತೀವ್ರ ಹಾಗೂ ಒಂದು ಮನೆ ಸಂಪೂರ್ಣ ನಾಶವಾಗಿದೆ. ತೌಕ್ತೆ ಅಬ್ಬರಕ್ಕೆ ಭಟ್ಕಳದ ಮೀನುಗಾರ ಮೃತಪಟ್ಟಿದ್ದಾನೆ.

    ಕರಾವಳಿ ಭಾಗದಲ್ಲಿ ಬಹುತೇಕ ಮೀನುಗಾರರು ನಷ್ಟ ಅನುಭವಿಸಿದ್ದು 83 ಬೋಟುಗಳು ಹಾನಿಯಾಗೊಳಗಾಗಿದ್ದು, ಮೂರು ಬೋಟುಗಳು ಸಂಪೂರ್ಣ ಧ್ವಂಸಗೊಂಡಿದೆ. ಕಡಲ ಅಲೆಯ ಹೊಡೆತಕ್ಕೆ 37 ಬಲೆಗಳು ಹಾನಿಯಾಗಿದ್ದರೆ, 8 ಬಲೆಗಳು ಸಂಪೂರ್ಣ ನಾಶವಾಗಿದೆ. ಇನ್ನು ಮಳೆ ಹಾಗೂ ಗಾಳಿ ಅಬ್ಬರಕ್ಕೆ ಜಿಲ್ಲೆಯಾದ್ಯಂತ 530 ವಿದ್ಯುತ್ ಕಂಬಗಳು ಧರೆಗುರುಳಿದ್ದರೆ, 139 ಟ್ರಾನ್ಸ್ ಫಾರ್ಮರ್‍ಗಳು ಹಾನಿಗೊಂಡಿದೆ.

    ಜಿಲ್ಲೆಯ ಭಟ್ಕಳ, ಅಂಕೋಲ, ಮುಂಡಗೋಡು ಸೇರಿ 3.57 ಹೆಕ್ಟೇರ್ ತೋಟಗಾರಿಕಾ ಭಾಗಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಹೊನ್ನಾವರ, ಭಟ್ಕಳ, ಕುಮಟಾ ಸೇರಿ ಒಟ್ಟು ಏಳು ಕಾಳಜಿ ಕೇಂದ್ರ ತೆರೆದಿದ್ದು, ಜಿಲ್ಲಾಡಳಿತ ಆಶ್ರಯ ನೀಡಿದೆ. ಇಂದು ಮಳೆ ಅಬ್ಬರ ಕಡಿಮೆಯಾಗಿದ್ದು, ಅಲೆಗಳ ಅಬ್ಬರ ಹಾಗೂ ಗಾಳಿಯ ಅಬ್ಬರ ಇಳಿಮುಖವಾಗುತ್ತಿದೆ.

  • ಬೆಡ್ ಕೊಡಿಸುವಂತೆ ಸಿಎಂ ಮನೆ ಬಳಿ ರೋಗಿ ಸಮೇತ ಪತ್ನಿ ಪ್ರತಿಭಟನೆ- ಆಸ್ಪತ್ರೆ ಸಾಗಿಸುವಷ್ಟರಲ್ಲಿ ಸಾವು

    ಬೆಡ್ ಕೊಡಿಸುವಂತೆ ಸಿಎಂ ಮನೆ ಬಳಿ ರೋಗಿ ಸಮೇತ ಪತ್ನಿ ಪ್ರತಿಭಟನೆ- ಆಸ್ಪತ್ರೆ ಸಾಗಿಸುವಷ್ಟರಲ್ಲಿ ಸಾವು

    ಬೆಂಗಳೂರು: ಬೆಡ್ ಸಿಗದೆ ಜನ ನರಳಾಡುತ್ತಿದ್ದಾರೆ, ಏನೇ ಕಸರತ್ತು ಮಾಡಿದರೂ ಜನ ಸಾಮಾನ್ಯರಿಗೆ ಬೆಡ್ ಸಿಗುತ್ತಿಲ್ಲ. ಈ ಹಿನ್ನೆಲೆ ಜನ ರೋಸಿ ಹೋಗಿದ್ದಾರೆ. ಅದೇ ರೀತಿ ಕೊರೊನಾ ಸೋಂಕಿತ ಪತಿಗೆ ಬೆಡ್ ಸಿಗದ್ದಕ್ಕೆ ಪತ್ನಿ ಗೋಳಾಡುತ್ತಿದ್ದು, ಸಿಎಂ ಮನೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ಆರಂಭದಲ್ಲಿ ಅವರನ್ನು ಸಾಗಾಹಾಕಲು ಪೊಲೀಸರು ಸಮಯ ವ್ಯರ್ಥ ಮಾಡಿದ್ದು, ಮಾಧ್ಯಮದವರು ಆಗಮಿಸುತ್ತಿದ್ದಂತೆ ರಾಮಯ್ಯ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಿದ್ದಾರೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವಾಗ ಸೋಂಕಿತ ಸಾವನ್ನಪ್ಪಿದ್ದಾರೆ.

    ಬೆಡ್ ಸಿಗುತ್ತಿಲ್ಲವೆಂದು ಅಂಬುಲೆನ್ಸ್ ನಲ್ಲಿ ಕೋವಿಡ್ ಸೋಂಕಿತ ಪತಿಯನ್ನು ಕರೆದುಕೊಂಡು ಬಂದು ಪತ್ನಿ ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಎಲ್ಲಿ ಹೋದರೂ ಬೆಡ್ ಸಿಗುತ್ತಿಲ್ಲ ಎಂದು ಸಿಎಂ ನಿವಾಸ ಕಾವೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ರಾಮೋಹಳ್ಳಿಯ ಸತೀಶ್ (45) ಅವರಿಗೆ ಕೋವಿಡ್ ಬಂದಿದೆ. ಸಿಎಂ ನಿವಾಸ ಮುಂದೆ ಆಗಮಿಸಿ ನಮಗೆ ಬೆಡ್ ಬೇಕು ಎಂದು ಅಳಲು ತೊಡಿಕೊಂಡಿದ್ದಾರೆ. ರೋಗಿ ಸತೀಶ್ ಪತ್ನಿ ಸಿಎಂ ನಿವಾಸದ ಮುಂದೆ ಗೇಟ್ ಬಳಿ ಕೂತು ಕಣ್ಣೀರು ಹಾಕಿದ್ದಾರೆ.

    ಹೋಮ್ ಐಸೋಲೇಷನ್ ನಲ್ಲಿದ್ದ ಪಾಸಿಟಿವ್ ರೋಗಿ ಸತೀಶ್ ಗೆ ರಾತ್ರಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ. ರಾತ್ರಿ 1 ಗಂಟೆಯಿಂದ ಕುಟುಂಬಸ್ಥರು ಹತ್ತು ಆಸ್ಪತ್ರೆ ಸುತ್ತಿದ್ದು, ಎಲ್ಲೂ ಬೆಡ್ ಸಿಕಿಲ್ಲ ಎಂದು ರಾಜ್ಯದ ದೊರೆ ಮನೆ ಮುಂದೆಯೇ ಬಂದು ಪ್ರತಿಭಟನೆ ಮಾಡಿದ್ದಾರೆ. ನಮ್ಮ ಕೆಲಸ ನಾವು ಮಾಡಬೇಕು ಎಂದು ರೋಗಿ, ರೋಗಿ ಕುಟುಂಬಸ್ಥರನ್ನು ಸಾಗ ಹಾಕಲು ಪೊಲೀಸರು ಮುಂದಾಗಿದ್ದಾರೆ. ಬೆಡ್ ಸಿಗದ ಹೊರತು ಇಲ್ಲಿಂದ ಹೋಗಲ್ಲ ಎಂದು ರೋಗಿ ಬಾಮೈದ ಪಟ್ಟು ಹಿಡಿದಿದ್ದಾರೆ. ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ಹೇಳಿ ಪೊಲೀಸರು ಅವರನ್ನು ಕಳುಹಿಸಲು ಮುಂದಾಗಿದ್ದಾರೆ. ಮಾಧ್ಯಮದವರು ಪ್ರಶ್ನೆ ಮಾಡಿದ ಬಳಿಕ ರಾಮಯ್ಯ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಿದ್ದಾರೆ.

    ತಕ್ಷಣವೇ ರೋಗಿಯನ್ನು ರಾಮಯ್ಯ ಆಸ್ಪತ್ರೆಗೆ ಕಳುಹಿಸಲಾಗಿದೆ. ರಾಮನಗರ ಜಿಲ್ಲೆ ಚಿಕ್ಕಲ್ಲೂರಿನ ಸತೀಶ್ ಹಾಗೂ ಅವರ ಪತ್ನಿ ಮಂಜುಳಾ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ದಾರಿ ಮಧ್ಯೆಯೇ ರೋಗಿ ಸತೀಶ್ ಸಾವನ್ನಪ್ಪಿದ್ದಾರೆ. ರಾಮಯ್ಯ ಆಸ್ಪತ್ರೆಗೆ ಕರೆದೊಯ್ದಾಗ ರೋಗಿ ಸತ್ತಿರುವ ಕುರಿತು ವೈದ್ಯರು ತಿಳಿಸಿದ್ದಾರೆ. ಈ ಸಾವಿಗೆ ಯಾರು ಹೊಣೆ ಎಂದು ಕುಟುಂಬಸ್ಥರು ಪ್ರಶ್ನಿಸುತ್ತಿದ್ದಾರೆ.

  • ಸಿಡಿಲು ಬಡಿದು ಮನೆ ಕುಸಿತ- ನಾಲ್ವರು ಮಕ್ಕಳು ಸೇರಿ 7 ಜನರಿಗೆ ಗಂಭೀರ ಗಾಯ

    ಸಿಡಿಲು ಬಡಿದು ಮನೆ ಕುಸಿತ- ನಾಲ್ವರು ಮಕ್ಕಳು ಸೇರಿ 7 ಜನರಿಗೆ ಗಂಭೀರ ಗಾಯ

    ಚಿಕ್ಕಬಳ್ಳಾಪುರ: ಸಿಡಿಲು ಬಡಿದ ಪರಿಣಾಮ ಚಪ್ಪಡಿಕಲ್ಲಿನ ಮನೆಯೊಂದು ಕುಸಿದು ಬಿದ್ದಿದ್ದು, ಮನೆಯಲ್ಲಿದ್ದ 4 ಜನ ಮಕ್ಕಳು ಸೇರಿ 7 ಜನ ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸೋಮಯಾಜಲಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಸಾಯಂಕಾಲ ಇದ್ದಕ್ಕಿದ್ದಂತೆ ತುಂತುರು ಶುರುವಾಗಿದ್ದು, ಮಳೆಯ ನಡುವೆ ಸಿಡಿಲು ಬಡಿದು ನೋಡು ನೋಡುತ್ತಿದ್ದಂತೆ ಗ್ರಾಮದ ಅಂಬರೀಶ್ ಹಾಗೂ ಗಾಯತ್ರಿ ದಂಪತಿ ಅವರ ಮನೆಗೆ ಸಿಡಿಲು ಹೊಡೆದು ಮನೆಯಲ್ಲಿದ್ದ ವೃದ್ಧ ಜಗನ್ನ 60, ಅಂಬರೀಶ್ 32, ಗಾಯತ್ರಿ 28, ಗೌತಮ್ 3, ವಾಣಿಶ್ರೀ 6, ದರ್ಶನ್ 1 ಹಾಗೂ 4 ವರ್ಷದ ಲಾವಣ್ಯಗೆ ತೀವ್ರ ರೀತಿಯ ಗಾಯಗಳಾಗಿವೆ.

    ಗಾಯಾಳುಗಳನ್ನು ತಕ್ಷಣವೇ ಚಿಂತಾಮಣಿಯ ತಾಲೂಕು ಆಸ್ಪತ್ರೆಗೆ ರವಾನಿಸಿದ್ದು, ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹಾಗೂ ತಹಶೀಲ್ದಾರ್ ಹನುಮಂತರಾಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಬಾಡಿಗೆ ಮನೆಯ ಲೀಸ್ ಹಣದ ವಿಚಾರ ಜಗಳ – ಇಬ್ಬರ ದುರ್ಮರಣ

    ಬಾಡಿಗೆ ಮನೆಯ ಲೀಸ್ ಹಣದ ವಿಚಾರ ಜಗಳ – ಇಬ್ಬರ ದುರ್ಮರಣ

    ಚಿಕ್ಕಬಳ್ಳಾಪುರ: ಬಾಡಿಗೆ ಮನೆಯ ಲೀಸ್ ಹಣದ ವಿಚಾರದಲ್ಲಿ ಅಣ್ಣ-ತಮ್ಮಂದಿರು ಮಾರಕಾಸ್ತ್ರಗಳಿಂದ ಬಡಿದಾಡಿಕೊಂಡಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

    ಶ್ರೀರಾಮ ನಗರದಲ್ಲಿ ತಡರಾತ್ರಿ ಘಟನೆ ನಡೆದಿದ್ದು, ಅಂಜಿನಪ್ಪ(45) ಹಾಗೂ ಈತನ ಮಗ ವಿಷ್ಣು(18) ಸಾವನ್ನಪ್ಪಿದ್ದಾನೆ. ಅಂದಹಾಗೆ ಸೀನಪ್ಪ ಹಾಗೂ ಸರೋಜಮ್ಮ ಎಂಬವರಿಗೆ ಅಶ್ವಥ್ ನಾರಾಯಣ್ ಎಂಬ ಹಿರಿ ಮಗ ಹಾಗೂ ಅಂಜಿನಪ್ಪ ಎಂಬ ಕಿರಿ ಮಗ ಸೇರಿ 6 ಮಂದಿ ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದರು.

    ಹಿರಿ ಮಗ ಅಶ್ವಥ್ ನಾರಾಯಣ್ ಶ್ರೀರಾಮನಗರದಲ್ಲಿ ವಾಸವಾಗಿದ್ರೆ, ತಮ್ಮ ಅಂಜಿನಪ್ಪ ಬೆಂಗಳೂರಿನಲ್ಲಿ ವಾಸವಾಗಿದ್ದ. ಇತ್ತ ಇವರ ತಂದೆ-ತಾಯಿ ಚಿಂತಾಮಣಿ ನಗರದಲ್ಲೇ ವಾಸವಾಗಿದ್ರು. ತಂದೆ ಸೀನಪ್ಪ ಸಂಪಾದನೆ ಮಾಡಿ ಕಟ್ಟಿಸಿದ್ದ ಬಾಡಿಗೆ ಮನೆಗಳಿಂದ ಬರುತ್ತಿದ್ದ ಹಣವನ್ನ ಅಶ್ವಥ್ ನಾರಾಯಣ್ ಮಾತ್ರ ಪಡೆದುಕೊಳ್ಳುತ್ತಿದ್ದನಂತೆ. ಬಾಡಿಗೆ ಹಣ ಪಡೆಯುತ್ತಿದ್ದ ಅಶ್ವಥ್‍ನಾರಾಯಣ್ ತಂದೆ-ತಾಯಿಯನ್ನ ಸಹ ಚೆನ್ನಾಗಿ ನೋಡಿ ಕೊಳ್ಳುತ್ತಿರಲಿಲ್ಲವಂತೆ. ಈ ವಿಚಾರವಾಗಿ ನಿನ್ನೆ ಅಣ್ಣ ಅಶ್ವಥ್ ನಾರಾಯಣ್ ಹಾಗೂ ತಮ್ಮ ಅಂಜಿನಪ್ಪ ಪೊಲೀಸ್ ಠಾಣೆಗೆ ಹೋಗಿ ಬಂದಿದ್ದಾರೆ.

    ತಡರಾತ್ರಿ ಇದೇ ವಿಚಾರವಾಗಿ ಅಶ್ವಥ್ ನಾರಾಯಣ್ ಹಾಗೂ ವಿಷ್ಣು, ಅಂಜಿನಪ್ಪ ಜೊತೆ ಮಾತನಾಡೋಕೆ ಅಂತ ತಾಯಿ ಸರೋಜಮ್ಮ ಮನೆ ಬಳಿ ತೆರಳಿದ್ರು. ಈ ವೇಳೆ ಮಾತಿಗೆ ಮಾತು ಬೆಳೆದು ಮಚ್ಚು, ಚಾಕುವಿನಿಂದ ಬಡಿದಾಡಿಕೊಂಡಿದ್ದಾರೆ. ಪರಿಣಾಮ ಅಂಜಿನಪ್ಪ ಹಾಗೂ ವಿಷ್ಣು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಅಶ್ವಥ್ ನಾರಾಯಣ್ ಸಹ ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಅಂಜಿನಪ್ಪಗೆ ಮೂರು ಜನ ಗಂಡು ಮಕ್ಕಳಿದ್ರು. ಅಶ್ವಥ್ ನಾರಾಯಣ್ ಗೆ ಮೂರು ಜನ ಹೆಣ್ಣು ಮಕ್ಕಳು. ಹೀಗಾಗಿ ಅಂಜಿನಪ್ಪನ ಮಗ ವಿಷ್ಣು ಎಂಬಾತನನ್ನ ಹುಟ್ಟಿದಾಗಲೇ ಅಶ್ವಥ್ ನಾರಾಯಣ್ ದತ್ತು ಪಡೆದುಕೊಂಡಿದ್ರು.

    ಸದ್ಯ ಚಿಂತಾಮಣಿ ನಗರ ಠಾಣೆಯಲ್ಲಿ ಪರ ವಿರೋಧ ಪ್ರಕರಣಗಳು ದಾಖಲಾಗಿವೆ.

  • ಬಾಡಿಗೆ ಕಟ್ಟುವ ದರದಲ್ಲಿ ಇಎಂಐ ಕಟ್ಟಿ, ಸ್ವಂತ ಮನೆ ನಿಮ್ಮದಾಗಿಸಿಕೊಳ್ಳಿ

    ಬಾಡಿಗೆ ಕಟ್ಟುವ ದರದಲ್ಲಿ ಇಎಂಐ ಕಟ್ಟಿ, ಸ್ವಂತ ಮನೆ ನಿಮ್ಮದಾಗಿಸಿಕೊಳ್ಳಿ

    ನೀವು ಬಾಡಿಗೆ ಮನೆಯಲ್ಲಿದ್ದೀರಾ? ಖರೀದಿಸಲು ಹೊಸ ಮನೆ ಹುಡುಕುತ್ತಿದ್ದೀರಾ? ಅದರಲ್ಲೂ ಕಡಿಮೆ ಬೆಲೆಗೆ ಗುಣಮಟ್ಟದ ಮನೆಯನ್ನೇ ಹುಡುಕುತ್ತಿದ್ದೀರಾ? ಹಾಗಾದ್ರೆ ನಿಮಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಗುಡ್‌ನ್ಯೂಸ್‌ ನೀಡಿದೆ.

    ಬಿಡಿಎ ನಗರದ ವಿವಿಧ ಪ್ರದೇಶಗಳಲ್ಲಿ ನಿರ್ಮಿಸಿರುವ ಫ್ಲಾಟ್‍ಗಳನ್ನು ಖರೀದಿಸಲು ಆನ್‍ಲೈನ್ ಸೇವೆಯನ್ನು ಪ್ರಾರಂಭಿಸಿದೆ. ಮಾಳಗಾಳ(ನಾಗರಬಾವಿ), ಕಣಿಮಿಣಿಕೆ(ಕುಂಬಳಗೋಡು), ಕೊಮ್ಮಘಟ್ಟ(ಕೆಂಗೇರಿ, ನೈಸ್ ರಸ್ತೆ ಬಳಿ), ವಲಗೇರಹಳ್ಳಿ(ಕೆಂಗೇರಿ), ದೊಡ್ಡಬನಹಳ್ಳಿ(ಕೆ.ಆರ್.ಪುರಂ) ಬಡಾವಣೆಗಳಲ್ಲಿ ವಿವಿಧ ಅಳತೆಯ 1,381 ಫ್ಲಾಟ್‍ಗಳು ಆನ್‍ಲೈನ್‍ನಲ್ಲಿ ಲಭ್ಯವಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.

    ಈ ಹಿಂದೆ ಫ್ಲಾಟ್‍ಗಳನ್ನು ಖರೀದಿಸಲು ಪ್ರಾಧಿಕಾರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕಾಗಿತ್ತು. ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಫ್ಲಾಟ್‍ಗಳನ್ನು ಖರೀದಿಸಲು ಆನ್‍ಲೈನ್ ಸೇವೆ ಪ್ರಾರಂಭಿಸಿದೆ. ಸಾರ್ವಜನಿಕರು ಪ್ರಾಧಿಕಾರದ ವೆಬ್‍ಸೈಟ್ www.housing.bdabangalore.org ಗೆ ಭೇಟಿ ನೀಡಿ, ಫ್ಲಾಟ್‍ಗಳ ವಿವರ, ಬಡಾವಣೆಗಳ ಹೆಸರು, ನಕಾಶೆ, ಫ್ಲಾಟ್‍ಗಳ ಫೋಟೋ ಮತ್ತು ವೀಡಿಯೋ, ಫ್ಲಾಟ್‍ಗಳ ಸಂಖ್ಯೆ ಇವೆಲ್ಲವನ್ನೂ ವೀಕ್ಷಿಸಬಹುದು. ಫ್ಲಾಟ್‍ಗಳಿಗೆ ನಿಗದಿಪಡಿಸಿರುವ ದರಗಳಂತೆ ಆನ್‍ಲೈನ್ ಮೂಲಕವೇ ತಮಗಿಷ್ಟವಾದ ಫ್ಲಾಟ್‍ಗಳನ್ನು ಕಾಯ್ದಿರಿಸಬಹುದು.

    ಬಿಡಿಎ ಅಧ್ಯಕ್ಷರು ನಗರದ ವಿವಿಧೆಡೆ ನಿರ್ಮಿಸಿರುವ ವಸತಿ ಸಮುಚ್ಛಯಗಳಿಗೆ ಭೇಟಿ ನೀಡಿ, ವಸತಿ ಸಮುಚ್ಛಯಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವುದನ್ನು ಗಮನಿಸಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾರ್ಯಗಳಿಗೆ ಹಣವನ್ನು ಬಿಡುಗಡೆಗೊಳಿಸಿದ್ದಾರೆ ಹಾಗೂ ಕಾಮಗಾರಿಯೂ ಪೂರ್ಣಗೊಳ್ಳುವ ಹಂತದಲ್ಲಿದೆ. ಆಟದ ಮೈದಾನ, ಉದ್ಯಾನವನ, ಮಕ್ಕಳ ಆಟಿಕೆಗಳು, ಜಿಮ್, ವೆಲ್‍ಫೇರ್ ಅಸೋಸಿಯೇಷನ್‍ಗೆ ಕಚೇರಿ ನಿರ್ಮಿಸಲು ಸ್ಥಳ ಕಾಯ್ದಿರಿಸುವುದು, ವಸತಿ ಸಮುಚ್ಛಯಗಳಿಗೆ ಸೌರ ಫಲಕಗಳನ್ನು ಅಳವಡಿಸುವ ಕಾರ್ಯ ಶೀಘ್ರದಲ್ಲಿ ನಡೆಯಲಿದೆ.

  • ಡಿವೈಡರ್ ದಾಟಿ ಮನೆಗೆ ನುಗ್ಗಿದ ಕಂಟೈನರ್ ಲಾರಿ – ತೆಂಗಿನ ಮರದಿಂದ ತಪ್ಪಿತು ಭಾರೀ ಅನಾಹುತ

    ಡಿವೈಡರ್ ದಾಟಿ ಮನೆಗೆ ನುಗ್ಗಿದ ಕಂಟೈನರ್ ಲಾರಿ – ತೆಂಗಿನ ಮರದಿಂದ ತಪ್ಪಿತು ಭಾರೀ ಅನಾಹುತ

    ನೆಲಮಂಗಲ: ಮಂಗಳೂರು ಕಡೆಗೆ ಸಂಚರಿಸುತಿದ್ದ ಕಂಟೈನರ್‌ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ನಡೆದಿದೆ.

    ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಬಳಿ ಈ ಅವಘಡ ಸಂಭವಿಸಿದೆ. ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ರಾಷ್ಟ್ರೀಯ ಹೆದ್ದಾರಿಯಿಂದ ಡಿವೈಡರ್ ದಾಟಿ ಮನೆಗೆ ನುಗ್ಗಿದ ಪರಿಣಾಮ ತೆಂಗಿನ ಮರದಿಂದ ಭಾರೀ ಅನಾಹುತ ತಪ್ಪಿದೆ. ಪಕ್ಕದ ಮನೆಯ ಗೋಡೆ ಸಂಪೂರ್ಣ ಜಖಂಗೊಂಡಿದ್ದು, ಹಳೆಯ ತೆಂಗಿನ ಮರ ನೆಲಕ್ಕೆ ಬಿದ್ದಿದೆ.

    ವೇಗವಾಗಿ ಬರುತ್ತಿದ್ದ ಲಾರಿ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ವೇಗ ನಿಯಂತ್ರಣಕ್ಕೆ ಬಂದಿದೆ. ಇದರಿಂದಾಗಿ ಮನೆಯಲ್ಲಿ ಇದ್ದ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ನೆರವಿನೊಂದಿಗೆ ಲಾರಿ ತೆರವುಗೊಳಿಸಿದ್ದಾರೆ. ಚಾಲಕನ ಅಜಾಗರೂಕತೆಯ ಚಾಲನೆಯಿಂದ ಈ ಅವಘಡ ನಡೆದಿದೆ ಎನ್ನಲಾಗಿದೆ.