Tag: house

  • ಕೊಡಗು ನಿರಾಶ್ರಿತರಿಗೆ ಕುದುರೆಮುಖದಲ್ಲಿ ವಸತಿ ಸೌಲಭ್ಯ ನೀಡಿ: ಕಳಸಾ ಜನರಿಂದ ಒತ್ತಾಯ

    ಕೊಡಗು ನಿರಾಶ್ರಿತರಿಗೆ ಕುದುರೆಮುಖದಲ್ಲಿ ವಸತಿ ಸೌಲಭ್ಯ ನೀಡಿ: ಕಳಸಾ ಜನರಿಂದ ಒತ್ತಾಯ

    ಚಿಕ್ಕಮಗಳೂರು: ಕೊಡಗು ನಿರಾಶ್ರಿತ ನೂರಾರು ಕುಟುಂಬಗಳಿಗೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುದುರೆಮುಖದಲ್ಲಿ ತಾತ್ಕಾಲಿಕ ವಸತಿ ಸೌಲಭ್ಯ ಕಲ್ಪಿಸುವ ಎಲ್ಲಾ ಸೌಕರ್ಯಗಳು ನೀಡುವಂತೆ ಕಳಸಾದ ಜನರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಕೊಡಗಿನಲ್ಲಿ ಸುರಿದ ಮಹಾಮಳೆಗೆ ಸಾವಿರಾರು ಕುಟುಂಬಗಳು ಬೀದಿ ಪಾಲಾಗಿವೆ. ನೆಲೆ ನಿಲ್ಲೋಕೆ ಒಂದು ಸೂರಿಲ್ಲದೆ ನಿರಾಶ್ರಿತರಾಗಿರೋ ನೂರಾರು ಕುಟುಂಬಗಳಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ. ಸರ್ಕಾರ ಏನೇ ಆಶ್ವಾಸನೆ, ಭರವಸೆ ನೀಡಿದರೂ ಅವರಿಗೆ ಎಲ್ಲಾ ಸೌಕರ್ಯ ಒದಗಿಸಲು ವರ್ಷಗಳೇ ಬೇಕು. ಪುನರ್ವಸತಿ ಕೆಲಸ ಆರಂಭಿಸಲು ಕನಿಷ್ಟ ಮಳೆಗಾಲವಂತೂ ಮುಗಿಯಲೇಬೇಕು. ಮಳೆಗಾಲ ಮುಗಿಯೋದು ಯಾವಾಗ, ಏನೋ ಅನ್ನೋ ಭಯ ಜನ ಹಾಗೂ ಸರ್ಕಾರ ಇಬ್ಬರಿಗೂ ಇದೆ.

    ಕುದುರೆಮುಖದಲ್ಲಿ ಐರನ್ ಅಂಡ್ ಓರ್ ಕಂಪನಿ ಲಿಮಿಟೆಡ್‍ಗೆ ಸೇರಿದ 1800 ಕ್ಕೂ ಅಧಿಕ ಮನೆಗಳಿದ್ದು, ರಸ್ತೆ ಸಂಚಾರ, ವಿದ್ಯುತ್ ಸೌಲಭ್ಯ, ನೀರಿನ ಸೌಲಭ್ಯ, ಮತ್ತು ಸಾಧಾರಣವಾಗಿ ವಿಕೋಪಕ್ಕೆ ಸಿಲುಕುವಂತಹ ಸ್ಥಳವಲ್ಲ ಅಷ್ಟೇ ಅಲ್ಲದೇ ಸದ್ಯಕ್ಕೆ ಅವೆಲ್ಲಾ ಪಾಳು ಬಿದ್ದಿವೆ. 15 ವರ್ಷದ ಹಿಂದೆಯೇ ಕೆಐಓಸಿಎಲ್ ಕಂಪನಿ ಸ್ಥಗಿತಗೊಂಡಿದೆ. ಹಾಗಾಗಿ ಆ ಮನೆಗಳನ್ನ ದುರಸ್ತಿ ಮಾಡಿ ಕೊಡಗಿನ ನಿರಾಶ್ರಿತರಿಗೆ ತಾತ್ಕಾಲಿಕವಾಗಿ ನೀಡಬೇಕೆಂದು ಕಳಸಾದ ಜನರು  ಒತ್ತಾಯಿಸಿದ್ದಾರೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗುಡ್ಡದ ಮೇಲಿನಿಂದ ಹಡಗಿನಂತೆ ಚಲಿಸಿದ ಮನೆ: ಅಜ್ಜಿ, ಮೊಮ್ಮಗು ಪಾರಾದ ಕಥೆ ಓದಿ

    ಗುಡ್ಡದ ಮೇಲಿನಿಂದ ಹಡಗಿನಂತೆ ಚಲಿಸಿದ ಮನೆ: ಅಜ್ಜಿ, ಮೊಮ್ಮಗು ಪಾರಾದ ಕಥೆ ಓದಿ

    ಮಡಿಕೇರಿ: ಕೊಡಗಿನಲ್ಲಿ ಮನೆಯೊಂದು ಸುರಿವ ಮಳೆಯ ಪ್ರಕೋಪಕ್ಕೆ, ಸರ್ರನೆ ಬುಡ ಸಮೇತ ಜಾರಿ ಹೋಗುವ ವಿಡಿಯೋವೊಂದು ವೈರಲ್ ಆಗಿತ್ತು. ಈ ದೃಶ್ಯ ನಿಜಕ್ಕೂ ಎದೆಯೊಡೆಯೋ ಭಯಾನಕ ದೃಶ್ಯವಾಗಿತ್ತು. ಗುಡ್ಡದ ಮೇಲಿಂದ ಮನೆ ಬಿದ್ದರೂ ಮಹಿಳೆ ಹಾಗೂ ಆಕೆಯ ಕುಟುಂಬದವರು ಸುರಕ್ಷಿತವಾಗಿ ಪಾರಾಗಿದ್ದಾರೆ.

    ಬೆಟ್ಟದ ಮೇಲಿಂದ ಮನೆ ನೋಡ ನೋಡುತ್ತಿದ್ದಂತೆ ಜಾರು ಬಂಡಿ ಆಗಿ ಕಣ್ಣೆದುರೇ ಪಾತಾಳಕ್ಕೆ ಕೊಚ್ಚಿ ಹೋಗಿತ್ತು. ಈ ಮನೆ ಮಡಿಕೇರಿಯ ತರಕಾರಿ ವ್ಯಾಪಾರಿ ಅನೀಫ್(54) ಅವರ ಮನೆಯಾಗಿದ್ದು, ಪೈಸೆ ಪೈಸೆ ಸೇರಿಸಿ ಅನಿಫ್ ಹಾಗೂ ಅವರ ಪತ್ನಿ ಅಮೀನಾ ತಮ್ಮದೊಂದು ಪುಟ್ಟ ಗೂಡನ್ನು ಮಡಿಕೇರಿಯ ಮುತ್ತಪ್ಪ ದೇಗುಲದ ಹಿಂಭಾಗದ ಕಟ್ಟಿಕೊಂಡಿದ್ದರು.

    ಆಗಸ್ಟ್ 15ರ ಬೆಳಗ್ಗೆ 7.30ಕ್ಕೆ ಎಂದಿನಂತೆ ತಮ್ಮ ಮಗನೊಟ್ಟಿಗೆ ತರಕಾರಿ ಅಂಗಡಿ ಕೆಲಸಕ್ಕೆ ಹೊರಟ ಅನೀಫ್ ಪಾಲಿಗೆ ಬರಸಿಡಿಲಿನಂಥ ಸುದ್ದಿ ಕಾದಿತ್ತು. ಪಕ್ಕದ ಮನೆ ಬಹುತೇಕ ಕುಸಿಯುವಂತಾಗಿದ್ದನ್ನು ಗಮನಿಸಿದ್ದ ಅನೀಫ್, ಕೇವಲ 8 ವರ್ಷಗಳ ಹಿಂದಷ್ಟೇ ಕಟ್ಟಿದ್ದ ತನ್ನ ಮನೆ ಗಟ್ಟಿಮುಟ್ಟಾಗಿದೆ. ನೆಲ ಕಚ್ಚೋದು ಅಷ್ಟು ಸುಲಭವಲ್ಲ ಅಂತ ಮನಸ್ಸಿನಲ್ಲೇ ಅಂದುಕೊಂಡು ಹೋಗಿದ್ದರು. ಆದರೆ ಬೆಳಗ್ಗೆ 9ರ ವೇಳೆಗೆ ಬಂದ ಕರೆ ಅವರು ನಿಂತಿದ್ದ ನೆಲ ಅದುರುವಂತೆ ಮಾಡಿತ್ತು. ಇದನ್ನೂ ಓದಿ: 20 ದಿನದ ಹಸುಗೂಸಿಗಾಗಿ ಮಳೆಯಲ್ಲೇ ಓಡಿ, ಬದುಕಿಸಿಕೊಳ್ಳಲಾಗದೇ ನರಳಾಡುತ್ತಿರುವ ತಾಯಿ!

    ತನ್ನ ಕನಸಿನ ಸೌಧ ಕುಸಿದ ಸುದ್ದಿಗೆ ತತ್ತರಿಸಿದ್ದ ಅನೀಫ್ ಮನೆಯಿದ್ದ ಸ್ಥಳಕ್ಕೆ ಧಾವಂತದಿಂದ ಬಂದು ನೋಡಿದಾಗ ಕಂಡಿದ್ದು ಆಘಾತಕಾರಿ ದೃಶ್ಯ. ತನ್ನ ಮನೆ ಮಳೆ ನೀರಲ್ಲಿ ಕೊಚ್ಚಿ ಹೋಗೋ ದೃಶ್ಯ ಮೊಬೈಲಿನಲ್ಲಿ ಸೆರೆ ಹಿಡಿದಿದ್ದ ಸ್ಥಳೀಯರು ಘಟನಾವಳಿಯನ್ನು ತೋರಿಸುತ್ತಿದ್ದರೆ, ನೋಡಲಾಗದೆ ಕಣ್ಮುಚ್ಚಿ ಕಂಬನಿ ಮಿಡಿದಿದ್ದ ಅನೀಫ್ ಪಾಲಿಗೆ ಎಲ್ಲವೂ ಮುಗಿದಂತಾಗಿತ್ತು. ಕುಸಿದು ಹೋಗುತ್ತಿದ್ದ ಮನೆಯೊಳಗಿದ್ದ ಅನೀಫ್ ಮಡದಿ ಅಮೀನಾ ಈ ಆಘಾತಕಾರಿ ಘಟನೆ ಕಂಡು ಪ್ರಜ್ಞೆತಪ್ಪಿ ಬಿದ್ದಿದ್ದರು. ಸ್ಥಳೀಯರ ಸಮಯಪ್ರಜ್ಞೆ ಅವರನ್ನು ಬದುಕುಳಿಸಿದೆ. ಇದನ್ನೂ ಓದಿ: ಕೋಟ್ಯಾಧಿಪತಿಯಾಗಿದ್ದ ತಂದೆ ಒಂದು ಪ್ಯಾಂಟು ಶರ್ಟಿಗೆ ಕೈ ಚಾಚಿದ್ದನ್ನು ಕಂಡು ಕಣ್ಣೀರಿಟ್ಟ ಮಗಳು!

    ಈ ವರ್ಷ ಬಕ್ರೀದ್ ಹಬ್ಬವನ್ನು ತುಸು ಜೋರಾಗಿ ಆಚರಿಸುವ ಇರಾದೆ ಇಡೀ ಪರಿವಾರದಾಗಿತ್ತು. ಅದಕ್ಕಾಗಿ ಸಕಲ ಸಂಭ್ರಮದ ಸಿದ್ಧತೆಗಳೂ ಈ ಜಾರಿ ಹೋಗುತ್ತಿರೋ ಮನೆಯೊಳಗೆ ನಡೆದಿದ್ದವು. ಮಗಳು ಅಳಿಯ ಮಂಗಳೂರಿಗೆ ಹೋಗಿ ವಾಪಸ್ಸಾಗುತ್ತಿದ್ದರು. ಇತ್ತ ಮನೆಯಲ್ಲಿ ಅಮೀನಾ ತನ್ನ 6 ತಿಂಗಳ ಮೊಮ್ಮಗುವಿನ ಜೊತೆ ಇದ್ದರು. ಆದರೆ ಇದ್ದಕ್ಕಿದ್ದಂತೆ ಜನರ ಚೀರಾಟ ಕೇಳಿಸಿದೆ. ಈ ವೇಳೆ ಏನಾಯ್ತಪ್ಪಾ ಅಂತ ಅಮೀನ ಮೊಮ್ಮಗು ಸಮೇತ ಮನೆಯಿಂದ ಹೊರ ಬಂದಿದ್ದಾರೆ. ಇಬ್ಬರು ಮನೆಯಿಂದ ಹೊರ ಬಂದಿದ್ದೆ ತಡ ಕ್ಷಣಾರ್ಧದಲ್ಲೇ ಮನೆ ಜಾರಿದೆ. ಅದೃಷ್ಟವಶಾತ್ ಜೀವ ಉಳಿದಿದೆ. ಇದನ್ನೂ ಓದಿ: ಹಸೆಮಣೆ ಏರಬೇಕಿದ್ದ ಯುವತಿಯರು ಇಂದು ನಿರಾಶ್ರಿತರ ಕೇಂದ್ರದಲ್ಲಿ!

    ಸದ್ಯ ಮಡದಿಯೂ ಸೇರಿ ಆ 3 ಜೀವಗಳು ಹೇಗೋ ಬಚಾವಾದ್ವಲ್ಲ ಅನ್ನೋ ತೃಪ್ತಿಯೊಂದೇ ಸದ್ಯ ಅನೀಫ್ ಪಾಲಿಗೆ ನೆಮ್ಮದಿಯ ವಿಚಾರವಾಗಿದೆ. ಬದುಕಿಗೆ ನೆಲೆಯಾಗಿದ್ದ ಮನೆಯನ್ನು ಪ್ರಾಕೃತಿಕ ವಿಕೋಪ ಆಪೋಷನ ತೆಗೆದುಕೊಂಡರೂ ಅಮೂಲ್ಯ ಪ್ರಾಣ ಉಳಿಯಿತಲ್ಲ ಅನ್ನೋ ಕೃತಜ್ಞತೆ ಈ ಪರಿವಾರದ ಕಣ್ಣಂಚಲ್ಲಿ ಕಾಣಿಸದೆ ಇರದು. ಇದು ಒಬ್ಬ ಅನೀಫ್ ಕಥೆಯಲ್ಲ, ಕೊಡಗಿನಾದ್ಯಂತ ಇಂಥ ಆಘಾತಕ್ಕೀಡಾದ ಪರಿವಾರಗಳು ಲೆಕ್ಕವಿಲ್ಲದಷ್ಟು. ಇದನ್ನೂ ಓದಿ: ತಮ್ಮ ನೋವು ಮರೆಯಲು ಸಂತ್ರಸ್ತರಿಂದ ಕೊಡವ ವಾಲಗಕ್ಕೆ ಡ್ಯಾನ್ಸ್- ವಿಡಿಯೋ ನೋಡಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಧ್ವಜಾರೋಹಣ ಮಾಡಿ ಹೊಸ ಮನೆಗೆ ಎಂಟ್ರಿ ಕೊಟ್ಟ ಹುಬ್ಬಳ್ಳಿ ದಂಪತಿ!

    ಧ್ವಜಾರೋಹಣ ಮಾಡಿ ಹೊಸ ಮನೆಗೆ ಎಂಟ್ರಿ ಕೊಟ್ಟ ಹುಬ್ಬಳ್ಳಿ ದಂಪತಿ!

    ಹುಬ್ಬಳ್ಳಿ: ಇಲ್ಲಿನ ದಂಪತಿ ತಾವು ದುಡಿದು ಕಟ್ಟಿದ ಮನೆಯ ಗೃಹಪ್ರವೇಶವನ್ನು ಧ್ವಜಾರೋಹಣ ಮಾಡೋ ಮೂಲಕ ದೇಶಪ್ರೇಮ ಮೆರೆದಿದ್ದಾರೆ.

    ಸಾಯಿನಗರದ ಮಲ್ಲಪ್ಪ ತಡಸದ್ ದಂಪತಿ ಸ್ವಾತಂತ್ರ್ಯ ದಿನಾಚರಣೆಯಂದೇ ಗೃಹ ಪ್ರವೇಶ ಮಾಡಿದ್ರು. ಕುಂಬಳಕಾಯಿ, ಹೋಮ-ಹವನ ಅಂತ ಮೌಢ್ಯಕ್ಕೆ ದಾಸರಾಗದೇ ದೇಶಪ್ರೇಮ ತೋರಿದ್ದಾರೆ. ಸರಳವಾಗಿ, ಸುಂದರವಾಗಿ ಮನೆಕಟ್ಟಿದ್ದಲ್ಲದೇ ಅಷ್ಟೇ ಸರಳತೆಯಿಂದಲೇ ಹೊಸ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

    ಸ್ವಾತಂತ್ರ್ಯಕ್ಕಾಗಿ ತ್ಯಾಗ-ಬಲಿದಾನ ಮಾಡಿದ ಮಹಾಪುರುಷರನ್ನ ನೆನೆಯಬೇಕಿದೆ. ಅಷ್ಟೇ ಅಲ್ಲ, ಇದು ಮುಂದಿನ ಪೀಳಿಗೆ ಮಹಾನ್ ಪುರುಷರ ಜೀವನಗಾಥೆ ಅರಿಯುವಂತಾಗಲಿ ಅನ್ನೋ ಆಶಯವನ್ನು ದಂಪತಿ ಹೊಂದಿದ್ದಾರೆ. ಮಂತ್ರ-ತಂತ್ರ ಹೋಮ ಹವನದ ಬದಲಾಗಿ ಧ್ವಜಾರೋಹಣದ ಬಳಿಕ ರಾಷ್ಟ್ರಗೀತೆ ಹಾಡಿರೋದೇ ಈ ಮನೆಗೆ ಮಂಗಳಕರ ಅಂತ ನಂಬಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕರುಣಾನಿಧಿ ನಿವಾಸವನ್ನು ಬಡವರ ಆಸ್ಪತ್ರೆ ಮಾಡಲು ಮುಂದಾದ ಟ್ರಸ್ಟ್

    ಕರುಣಾನಿಧಿ ನಿವಾಸವನ್ನು ಬಡವರ ಆಸ್ಪತ್ರೆ ಮಾಡಲು ಮುಂದಾದ ಟ್ರಸ್ಟ್

    ಚೆನ್ನೈ: ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ನಾಯಕ ಕರುಣಾನಿಧಿಯವರ ಗೋಪಾಲಪುರಂನಲ್ಲಿರುವ ನಿವಾಸವನ್ನು ಬಡವರ ಆಸ್ಪತ್ರೆಯಾಗಿ ಪರಿವರ್ತಿಸಲಾಗುತ್ತದೆ ಎಂಬುದಾಗಿ ತಿಳಿದುಬಂದಿದೆ.

    ಗೋಪಾಲಪುರಂನಲ್ಲಿರುವ ಅಂಜುಗಂ ಇಲ್ಲಂ ನಲ್ಲಿ ಕರುಣಾನಿಧಿಯವರು ಕಳೆದ ಐದು ದಶಕಗಳಿಗೂ ಹೆಚ್ಚು ಕಾಲ ವಾಸವಾಗಿದ್ದರು. ಹೀಗಾಗಿ ಪ್ರತೀ ದಿನ ಇಲ್ಲಿ ಪಕ್ಷದ ಕಾರ್ಯಕರ್ತರು, ಜನಸಾಮಾನ್ಯರ ಭೇಟಿ ಮಾಡುತ್ತಿದ್ದರು. 2010ರಲ್ಲಿ ತಮ್ಮ 86ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಈ ಮನೆಯನ್ನು ಅಣ್ಣಾ ಅಂಜುಗಂ ಟ್ರಸ್ಟ್ ಗೆ ದೇಣಿಗೆಯಾಗಿದ್ದ ನೀಡಿದ್ದ ಅವರು, ಬಡವರಿಗಾಗಿ ಆಸ್ಪತ್ರೆ ನಡೆಸುವಂತೆ ತಿಳಿಸಿದ್ದರು ಎನ್ನಲಾಗಿದೆ.

    ಈ ಹಿನ್ನೆಲೆಯಲ್ಲಿ ಇದೀಗ ಅವರ ನಿಧನದ ನಂತರ ಟ್ರಸ್ಟ್, ಕಲೈನಾರ್ ಕರುಣಾನಿಧಿ ಆಸ್ಪತ್ರೆ ಎಂಬ ಹೆಸರಿನಡಿ ಆಸ್ಪತ್ರೆಯೊಂದನ್ನು ಆರಂಭಿಸಲು ಮುಂದಾಗಿದೆ. ನಾನು ವಿಚಾರವಾದಿ ಎಂಬ ತೃಪ್ತಿ ನನಗಿದೆ. ಒಂದು ವೇಳೆ ನಾನು ಆಧ್ಯಾತ್ಮದಲ್ಲಿ ನಂಬಿಕೆಯುಳ್ಳ ವ್ಯಕ್ತಿಯಾಗಿದ್ದರೆ ನನ್ನ ಆತ್ಮಕ್ಕೂ ತೃಪ್ತಿಯಾಗುತ್ತಿತ್ತು ಎಂದು ತಮ್ಮ ಮನೆಯನ್ನು ಕೊಡುಗೆಯಾಗಿ ನೀಡುವ ಸಮಾರಂಭದಲ್ಲಿ ಅವರು ತಿಳಿಸಿದ್ದರು.

    ತಮಿಳು ಚಿತ್ರರಂಗದ ಕಥೆಗಾರ, ಸಂಭಾಷಣಾಕಾರರಾಗಿ ಮುಂಚೂಣಿಯಲ್ಲಿದ್ದ ಕರುಣಾನಿಧಿ ಈ ಮನೆಯನ್ನು ಶರಭೇಶ್ವರ ಅಯ್ಯರ್ ಎಂಬವರಿಂದ 1955ರಲ್ಲಿ ಮನೆ ಖರೀದಿ ಮಾಡಿದ್ದರು.

    ತಮಿಳುನಾಡಿನ ಮಾಜಿ ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂ. ಕಲೈನರ್ ಕರುಣಾನಿಧಿ(94) ಅವರು ಉಸಿರಾಟದ ತೊಂದರೆ, ಜ್ವರ ಹಾಗೂ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಜುಲೈ 22ರ ರಾತ್ರಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜುಲೈ 22ರ ಬಳಿಕ ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ ಆರೋಗ್ಯದಲ್ಲಿ ಮತ್ತೇ ಏರಿಳಿತ ಕಂಡು ಬಂದ ಹಿನ್ನೆಲೆಯಲ್ಲಿ ಕರುಣಾನಿಧಿ ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಸಂಜೆ ವಿಧಿವಶರಾದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ತೊಳೆಯಲು ಇಟ್ಟಿದ್ದ ಪಾತ್ರೆಯೊಳಗೆ ಅವಿತು ಕೂತಿದ್ದ ನಾಗರಹಾವು

    ತೊಳೆಯಲು ಇಟ್ಟಿದ್ದ ಪಾತ್ರೆಯೊಳಗೆ ಅವಿತು ಕೂತಿದ್ದ ನಾಗರಹಾವು

    ಚಿಕ್ಕಮಗಳೂರು: ಮನೆಯ ಕಾಂಪೌಂಡ್ ಒಳಗೆ ತೊಳೆಯಲು ಇಟ್ಟಿದ್ದ ಪಾತ್ರೆಯೊಳಗೆ ಅವಿತು ಕೂತಿದ್ದ ಗೋಧಿ ಬಣ್ಣದ ನಾಗರಹಾವನ್ನು ಉರಗತಜ್ಞ ಸೆರೆ ಹಿಡಿದು ರಕ್ಷಿಸಿದ್ದಾರೆ.

    ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಕೆಎಸ್‍ಆರ್ ಟಿಸಿ ಬಸ್ ಸ್ಟ್ಯಾಂಡ್ ಹಿಂಭಾಗದ ಕುವೆಂಪು ನಗರದ ದೇವಣ್ಣ ಮಾಸ್ಟರ್ ಎಂಬವರ ಮನೆಯಲ್ಲಿ ಈ ಗೋಧಿ ನಾಗರ ಸೆರೆಯಾಗಿದ್ದಾನೆ. ಮನೆಯವರು ಹೊರಗಿದ್ದ ಪಾತ್ರೆಯನ್ನ ತೊಳೆಯಲು ಬಂದಾಗ ಹಾವನ್ನ ನೋಡಿ ಗಾಬರಿಯಾಗಿದ್ದಾರೆ. ಕೂಡಲೇ ಉರಗ ತಜ್ಞ ಆರೀಫ್‍ಗೆ ಕರೆ ಮಾಡಿದ್ದಾರೆ.

    ಸ್ಥಳಕ್ಕೆ ಬಂದ ಆರೀಫ್, ಹಾವು ಚಿಕ್ಕದ್ದಾಗಿರೋದ್ರಿಂದ ಅಲ್ಲಿಂದಿಲ್ಲಿಗೆ-ಇಲ್ಲಿಂದಲ್ಲಿಗೆ ಹೋಗ್ತಿದ್ದ ಕಾರಣ ಸುಮಾರು ಅರ್ಧ ಗಂಟೆಗಳ ಕಾಲ ಹರಸಾಹಸಪಟ್ಟು ಹಾವನ್ನ ಸೆರೆ ಹಿಡಿದಿದ್ದಾರೆ. ಸೆರೆ ಹಿಡಿದ ಹಾವನ್ನ ಮನೆಯ ಮುಂಭಾಗವೇ ಸ್ವಲ್ಪ ಹೊತ್ತು ಆಡಿಸಿ ನಂತರ ಸ್ಥಳೀಯ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

  • ಉಡುಪಿಯಲ್ಲಿ ಭಾರೀ ಮಳೆ- ಉದ್ಯಾವರದಲ್ಲಿ ಮನೆ ಕುಸಿತ

    ಉಡುಪಿಯಲ್ಲಿ ಭಾರೀ ಮಳೆ- ಉದ್ಯಾವರದಲ್ಲಿ ಮನೆ ಕುಸಿತ

    ಉಡುಪಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಾಪು ತಾಲೂಕಿನ ಉದ್ಯಾವರದ ಕಲ್ಸಂಕದಲ್ಲಿ ಮನೆಯೊಂದು ಕುಸಿದು ಬಿದ್ದಿದೆ.

    ಕಾಪು ತಾಲೂಕಿನ ಉದ್ಯಾನವರ ಶೇಖರ ಪೂಜಾರಿ ಎಂಬವರಿಗೆ ಸೇರಿದ್ದ ಮನೆ ಸಂಪೂರ್ಣವಾಗಿ ನೆಲಸಮವಾಗಿದೆ. ಮನೆ ಕುಸಿತ ಸಂದರ್ಭದಲ್ಲಿ ಕುಟುಂಬಸ್ಥರು ಹೊರಗಡೆ ಹೋಗಿದ್ದರಿಂದ ಆಗಬಹುದಾದ ದುರಂತ ತಪ್ಪಿದೆ. ಸದ್ಯ ಮನೆ ತೆರವು ಕಾರ್ಯ ನಡೆಯುತ್ತಿದ್ದು, ಪೀಠೋಪಕರಣ, ಪಾತ್ರೆಗಳನ್ನು ಹೊರ ತೆಗೆಯಲು ಸ್ಥಳೀಯರು ಸಹಕರಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ – ಶಾಲಾ, ಕಾಲೇಜುಗಳಿಗೆ ರಜೆ

    ತಗ್ಗು ಪ್ರದೇಶದಲ್ಲಿ ಮನೆ ಇರುವುದರಿಂದ ಮನೆಯ ಅಡಿಪಾಯ ತೋಯ್ದು ಹೋಗಿದೆ. ಹಿಂಬದಿ ಗೋಡೆ ಮತ್ತು ಮುಂಭಾಗದ ಗೋಡೆ ಸಂಪೂರ್ಣ ಕುಸಿದ ಪರಿಣಾಮ ಸಂಪೂರ್ಣ ಮನೆಯೇ ನೆಲಕ್ಕುರುಳಿ ಬಿದ್ದಿದೆ ಎಂದು ಸ್ಥಳೀಯ ನಿವಾಸಿ ಸುಂದರ್ ತಿಳಿಸಿದ್ದಾರೆ.

    ಇದಲ್ಲದೇ ಪಡುಬಿದ್ರೆ ಭಾಗದಲ್ಲಿ ಕೃಷಿಭೂಮಿಗೆ ಮಳೆ ನೀರು ನುಗ್ಗಿದ್ದು, ಭತ್ತದ ಪೈರುಗಳಿಗೆ ಹಾನಿಯಾಗಿದೆ. ಉಳುಮೆ ಮತ್ತು ನಾಟಿ ಕಾರ್ಯಕ್ಕೂ ಮುಂಗಾರು ಮಳೆ ಅಡ್ಡಿಯುಂಟು ಮಾಡಿದೆ. ಒಟ್ಟಿನಲ್ಲಿ ಉಡುಪಿ ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಇದನ್ನೂ ಓದಿ: ಕೊಡಗಲ್ಲಿ ಮಳೆ, ಶಾಲೆ-ಕಾಲೇಜಿಗೆ ರಜೆ – ಉಡುಪಿಯಲ್ಲಿ ಭಾರೀ ಮಳೆ, ಆದ್ರೆ ರಜೆ ಕ್ಯಾನ್ಸಲ್

  • ಅಧಿವೇಶನದ ಮೊದಲ ದಿನವೇ ಸ್ಪೀಕರ್ ರಮೇಶ್ ಕುಮಾರ್ ಫುಲ್ ಕ್ಲಾಸ್

    ಅಧಿವೇಶನದ ಮೊದಲ ದಿನವೇ ಸ್ಪೀಕರ್ ರಮೇಶ್ ಕುಮಾರ್ ಫುಲ್ ಕ್ಲಾಸ್

    ಬೆಂಗಳೂರು: ಸಮ್ಮಿಶ್ರ ಸರ್ಕಾರದ ಜಂಟಿ ಅಧಿವೇಶನ ಮೊದಲ ದಿನವೇ ಮಾನ್ಯ ಎಲ್ಲಾ ಸದಸ್ಯರುಗಳಿಗೆ ಕ್ಲಾಸ್ ತೆಗೆದುಕೊಳ್ಳುವ ಮೂಲಕ ಸ್ಪೀಕರ್ ರಮೇಶ್ ಕುಮಾರ್ ಅವರು ಸುಗಮ ಅಧಿವೇಶನದ ನಡೆಸುವ ಸೂಚನೆ ನೀಡಿದ್ದಾರೆ.

    ಸರ್ಕಾರದ ಜಂಟಿ ಅಧಿವೇಶನ ಕುರಿತು ಗವರ್ನರ್ ಭಾಷಣ ಮುಗಿಯುತ್ತಿದ್ದಂತೆ ಎಲ್ಲಾ ಶಾಸಕರು ಆ ತಮ್ಮ ಸ್ಥಾನಗಳಲ್ಲಿ ಕುಳಿತುಕೊಳ್ಳದೆ ಓಡಾಡುತ್ತಿದ್ದರು. ಇದನ್ನು ನೋಡಿದ ಸ್ಪೀಕರ್ ರಮೇಶ್ ಕುಮಾರ್ ಫುಲ್ ಕ್ಲಾಸ್ ತೆಗೆದುಕೊಂಡರು

    ಶಾಸಕರು ತಮ್ಮ ತಮ್ಮ ಸ್ಥಳಗಳಿಗೆ ಹೋಗುವಂತೆ ಮೊದಲು ಮನವಿ ಮಾಡಿದರು. ಆದರೆ ಸ್ಪೀಕರ್ ಮಾತನ್ನು ಯಾರು ಗಮನಿಸದ ವೇಳೆ ಶಾಸಕರ ಹೆಸರು ಕರೆದ ಸ್ಪೀಕರ್ ಅವರು ರಹೀಂಖಾನ್, ಹ್ಯಾರಿಸ್, ರಾಜೇಗೌಡ ಹೆಸರು ಕೂಗಿ ನಿಮ್ಮ ಸ್ಥಾನದಲ್ಲಿ ನೀವು ಕುಳಿತು ಕೊಳ್ಳಿ ಎಂದು ಸೂಚಿಸಿದರು. ಬಳಿಕ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದರು. ಇದನ್ನು ಓದಿ: ಅರೇ, ಹೊರಟ್ಟಿಯವ್ರೇ ಸೈಡಿಗೆ ಬನ್ರಿ: ಸ್ಪೀಕರ್ ರಮೇಶ್ ಕುಮಾರ್

    ಗಣ್ಯರಿಗೆ ಸಂತಾಪ ಸೂಚಿಸಿದ ಬಳಿಕ ಮಾತನಾಡಿದ ಸ್ಪೀಕರ್, ಸದನದ ನಿಯಮಾವಳಿಗಳು ಕೆಲವು ಬದಲಾವಣೆ ಆಗಿದೆ. ಈ ಕುರಿತು ಮಾಹಿತಿ ನೀಡಲಾಗಿದೆ. ಈ ಬಾರಿ ಸಭೆಯಲ್ಲಿ ಸುಮಾರು 100 ಹೊಸ ಶಾಸಕರಿದ್ದು ಅವರು ಸೇರಿದಂತೆ ಎಲ್ಲರಿಗೂ ಮೊದಲು ಮನವಿ ಮಾಡುತ್ತೇನೆ, ಬಳಿಕ ಸೂಚನೆ ನೀಡುತ್ತೇನೆ. ಸದನ ಕಲಾಪ ಆರಂಭದ ವೇಳೆಗೆ ಶಾಸಕರು ಮುಖ್ಯಮಂತ್ರಿಗಳಿಗೆ ಯಾವುದೇ ಅರ್ಜಿಗಳನ್ನು ಸದನದಲ್ಲಿ ನೀಡುವಂತಿಲ್ಲ. ಇದರಿಂದ ಸದನದ ಚರ್ಚೆ ಬಗ್ಗೆ ಸಿಎಂ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಅದ್ದರಿಂದ ಶಾಸಕರಿಗೆ ಅಂತಹ ತುರ್ತು ಕಾರ್ಯವಿದ್ದರೆ ಶಾಸಕರು ಸಿಎಂ ಅವರನ್ನು ತಮ್ಮ ಕಚೇರಿಗೆ ಕರೆದುಕೊಂಡು ಹೋಗಬಹುದು. ಇದಕ್ಕೆ ನಾನು ಯಾವುದೇ ಆಕ್ಷೇಪ ವ್ಯಕ್ತಪಡಿಸುವುದಿಲ್ಲ. ಒಬ್ಬ ಶಾಸಕನಾಗಿ ಇಂತಹ ಕಾರ್ಯವನ್ನು ನಾನು ಎಂದು ಮಾಡಿಲ್ಲ. ಅದ್ದರಿಂದ ಇದನ್ನು ನಾನು ಹೇಳುವ ನೈತಿಕ ಆರ್ಹತೆ ಹೊಂದಿದ್ದೇನೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮುಜುಗರ ಆಗಿದ್ದ ಸನ್ನಿವೇಶ ಗಮನಿಸಿದ್ದೇನೆ ಅದ್ದರಿಂದ ಯಾವುದೇ ಕಾರಣಕ್ಕೂ ಸದನಕ್ಕೆ ತೊಂದರೆ ನೀಡಬಾರದು ಎಂದು ಎಲ್ಲ ಶಾಸಕರಿಗೆ ಸೂಚನೆ ನೀಡಿದರು. ಇದನ್ನು ಓದಿ: ಕರ್ನಾಟಕ ರಾಜಕೀಯದಲ್ಲಿ ಹೊಸ ದಾಖಲೆ ಬರೆದ ಬಿಎಸ್‍ವೈ!

  • ಸಚಿವ ಜಾರ್ಜ್ ಕಾರ್ ಗಿಫ್ಟ್ ಬೆನ್ನಲ್ಲೇ ಸಿದ್ದರಾಮಯ್ಯಗೆ ಡಬಲ್ ಆಫರ್!

    ಸಚಿವ ಜಾರ್ಜ್ ಕಾರ್ ಗಿಫ್ಟ್ ಬೆನ್ನಲ್ಲೇ ಸಿದ್ದರಾಮಯ್ಯಗೆ ಡಬಲ್ ಆಫರ್!

    ಬಾಗಲಕೋಟೆ: ಸಚಿವ ಕೆ.ಜೆ ಜಾರ್ಜ್ ಅವರು ಮಾಜಿ ಸಿಎಂ ಸಿದ್ದರಾಮಯ್ಯಗೆ ದುಬಾರಿ ಕಾರು ಗಿಫ್ಟ್ ನೀಡಿರೋ ಸುದ್ದಿಯ ಬೆನ್ನಲ್ಲೇ ಇದೀಗ ಅಭಿಮಾನಿಯೊಬ್ಬರು ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ತಂಗಲು ಉಚಿತ ಮನೆ ಕೊಡಲು ಮುಂದಾಗಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ನೂತನ ಶಾಸಕ ಸಿದ್ದರಾಮಯ್ಯ ಮನೆ, ಕಚೇರಿ ಮಾಡೋದಾಗಿ ಈಗಾಗಲೇ ಹೇಳಿದ್ದರು. ಈ ಬೆನ್ನಲ್ಲೇ ಸಿದ್ದರಾಮಯ್ಯ ಅಭಿಮಾನಿ ಶಂಕರಗೌಡ ಕೆಳಗಿನಮನಿ ಎಂಬವರು ಉಚಿತ ಬಾಡಿಗೆ ಮನೆ ಆಫರ್ ಕೊಟ್ಟಿದ್ದಾರೆ.

    ಬಾದಾಮಿಯ ಹೊಸಗೌಡರ ಕಾಲೋನಿಯ ಜಯನಗರದ ಮನೆ ಸುಸಜ್ಜಿತವಾದ 50*50 ಅಳತೆ ಡಬಲ್ ಬೆಡ್ ರೂಂ, ಡೈನಿಂಗ್ ಹಾಲ್, ಆಫೀಸ್ ರೂಂ, ಪೂಜಾ ರೂಂ, ಕಾರ್ ಪಾರ್ಕಿಂಗ್ ಸೇರಿದಂತೆ 186*150 ಅಳತೆಯ ವಿಶಾಲವಾದ ಹೊರಾಂಗಣ ಜಾಗವನ್ನು ಹೊಂದಿದೆ. ಇದನ್ನೂ ಓದಿ:1 ಕೋಟಿಯ ಕಾರು ಜೊತೆಗೆ 1 ವರ್ಷ ಡೀಸೆಲ್ ಭಾಗ್ಯ – ಮಾಜಿ ಸಿಎಂಗೆ ಜಾರ್ಜ್ ಭರ್ಜರಿ ಗಿಫ್ಟ್!

    ಇನ್ನೂ ಶಂಕರಗೌಡ ಕೆಳಗಿನಮನಿ ಎಂಬವರ ಮನೆಯನ್ನು ಈಗಾಗಲೇ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಜೂನ್ 11ರಂದು ಬಾದಾಮಿಗೆ ಆಗಮಿಸಿದ್ದ ವೇಳೆ ನೋಡಿಕೊಂಡು ಹೋಗಿದ್ದಾರೆ. ಇತ್ತ ಬಾದಾಮಿ ಇನ್ನೋರ್ವ ಕಾಂಗ್ರೆಸ್ ಯುವ ಮುಖಂಡ ಮಹೇಶ್ ಹೊಸಗೌಡರ ಮನೆಯನ್ನೂ ಡಾ. ಯತೀಂದ್ರ ನೋಡಿದ್ದು, ಇವರು ಸಹ ಸಿದ್ದರಾಮಯ್ಯಗೆ ಉಚಿತ ಬಾಡಿಗೆ ಮನೆಕೊಡಲು ಸಿದ್ದರಾಗಿದ್ದಾರೆ ಎನ್ನಲಾಗಿದೆ.

    ಮೂಲತಃ ಗುತ್ತಿಗೆದಾರರಾಗಿರೋ ಶಂಕರಗೌಡ ಕೆಳಗಿನಮನಿ, ಐತಿಹಾಸಿಕ ಬಾದಾಮಿ ಕ್ಷೇತ್ರದ ಅಭಿವೃದ್ದಿ ಜೊತೆಗೆ ಮಾಜಿ ಸಿಎಂ ಅನ್ನೋ ಕಾರಣಕ್ಕೆ ಉಚಿತ ಬಾಡಿಗೆ ಮನೆ ಕೊಡುವ ಮಹದಾಸೆ ಹೊಂದಿದ್ದೇನೆ ಎನ್ನುತ್ತಿದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿಯಲ್ಲಿ ಮನೆ ಮಾಡೋ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಉಚಿತ ಬಾಡಿಗೆ ಮನೆಯ ಡಬಲ್ ಆಫರ್ ಬಂದಿವೆ. ಆದರೆ ಸಿದ್ದರಾಮಯ್ಯ ಉಚಿತ ಬಾಡಿಗೆ ಮನೆ ಆಫರ್ ಸ್ವೀಕರಿಸ್ತಾರಾ? ಇಲ್ವಾ? ಅನ್ನೋದನ್ನು ಕಾದು ನೋಡಬೇಕಿದೆ.

  • ನಾಯಿ ಬೇಟೆಯಾಡಲು ಬಂದಿದ್ದ ಚಿರತೆ ಮನೆಯೊಳಗಡೆಯೇ ಸಿಕ್ಕಿಹಾಕೊಳ್ತು!

    ನಾಯಿ ಬೇಟೆಯಾಡಲು ಬಂದಿದ್ದ ಚಿರತೆ ಮನೆಯೊಳಗಡೆಯೇ ಸಿಕ್ಕಿಹಾಕೊಳ್ತು!

    ಹಾಸನ: ಚಿರತೆಯೊಂದು ನಾಯಿಯನ್ನು ಬೇಟೆಯಾಡುವ ಭರದಲ್ಲಿ ಮನೆಗೆ ನುಗ್ಗಿ, ಅಲ್ಲಿಯೇ ಬಂಧಿಯಾಗಿರುವ ಘಟನೆ ತಾಲೂಕಿನ ವಿ.ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ವೇಲಾಪುರಿ ಗೌಡರ ಮನೆಯಲ್ಲಿ ಚಿರತೆ ಬಂಧಿಯಾಗಿದೆ. ಗುರುವಾರ ರಾತ್ರಿ 1 ಗಂಟೆ ಸುಮಾರಿಗೆ ನಾಯಿಯನ್ನು ಬೇಟೆಯಾಡಲು ಚಿರತೆ ದನದ ಕೊಟ್ಟಿಗೆ ಮೂಲಕ ಮನೆಗೆ ನುಗ್ಗಿದ್ದು, ಅಲ್ಲಿಯೇ ಸಿಕ್ಕಿಬಿದ್ದಿದೆ.

    ಚಿರತೆ ನಾಯಿಯನ್ನು ಬೇಟೆಯಾಡಲು ಮನೆಗೆ ನುಗ್ಗಿದೆ. ಆದರೆ ನಾಯಿ ತಪ್ಪಿಸಿಕೊಂಡು ಹೋಗಿದೆ. ಮನೆಯಲ್ಲಿ ಮಲಗಿದ್ದ ಕೃಷ್ಣ ಮತ್ತು ಆತನ ಅಣ್ಣ ನಾಯಿ ಬೊಗಳುತ್ತಿದ್ದರಿಂದ ಗಾಬರಿಯಾಗಿ ಹೊರಗೆ ಬಂದಿದ್ದಾರೆ. ಚಿರತೆ ಮನೆಯೊಳಗೆ ಹೊಕ್ಕಿರುವುದು ಗೊತ್ತಾಗುತ್ತಿದ್ದಂತೆಯೇ ಮನೆಗೆ ಬೀಗ ಹಾಕಿ, ಗ್ರಾಮಸ್ಥರನ್ನು ಎಚ್ಚರಿಸಿದ್ದಾರೆ. ಬೆಳಗ್ಗೆಯವರೆಗೆ ಗ್ರಾಮಸ್ಥರು ಜಿಟಿ ಜಿಟಿ ಮಳೆಯಲ್ಲಿ ಕೊಡೆ ಹಿಡಿದು, ಚಿರತೆ ತಪ್ಪಿಸಿಕೊಂಡು ಹೋಗದಂತೆ ಕಾವಲು ಕಾದಿದ್ದಾರೆ.

    ಬೆಳಗ್ಗೆ ಕೆಲ ಗ್ರಾಮಸ್ಥರು ಮನೆಯ ಹೆಂಚು ತೆಗೆದು ಚಿರತೆ ಇರುವುದನ್ನು ಖಚಿತ ಪಡಿಸಿಕೊಂಡಿದ್ದಾರೆ. ಸದ್ಯ ಚಿರತೆ ಮನೆಯ ಅಟ್ಟದ ಮೇಲೆ ಅಡಗಿ ಕುಳಿತಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸರು ಮನೆಯ ಸುತ್ತ ಕಾವಲು ನಿಂತಿದ್ದಾರೆ. ಅರವಳಿಕೆ ವೈದ್ಯರು ಆಗಮಿಸಿದ್ದು, ಚಿರತೆ ಸೆರೆ ಹಿಡಿಯುವ ಕಾರ್ಯಚರಣೆ ಆರಂಭವಾಗಿದೆ. ಗ್ರಾಮಸ್ಥರಲ್ಲಿ ಒಂದೆಡೆ ಕೌತುಕ ಮತ್ತೊಂದೆಡೆ ಆತಂಕ ಮನೆ ಮಾಡಿದೆ.

    ಮೂರು ವರ್ಷಗಳ ಹಿಂದೆ ಇದೇ ಗ್ರಾಮದಲ್ಲಿ 7 ವರ್ಷದ ಬಾಲಕ ಚಿರತೆಗೆ ಬಲಿಯಾಗಿದ್ದನು.

  • ಮೆಕುನು ಚಂಡಮಾರುತಕ್ಕೆ ಕರಾವಳಿ ತತ್ತರ – ನದಿಯಂತಾದ ರಸ್ತೆ, ಕಾರುಗಳು ಮುಳುಗಡೆ, ಎರಡು  ದಿನ ಮಳೆ

    ಮೆಕುನು ಚಂಡಮಾರುತಕ್ಕೆ ಕರಾವಳಿ ತತ್ತರ – ನದಿಯಂತಾದ ರಸ್ತೆ, ಕಾರುಗಳು ಮುಳುಗಡೆ, ಎರಡು ದಿನ ಮಳೆ

    ಮಂಗಳೂರು: ಮೆಕುನು ಚಂಡಮಾರುತ ಪರಿಣಾಮದಿಂದಾಗಿ ಕರಾವಳಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಮಂಗಳೂರಿನಲ್ಲಿ ನೆರೆಯ ಭೀತಿ ಆವರಿಸಿದೆ.

    ಮಂಗಳೂರು ನಗರದ ಹಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ರಸ್ತೆಯಿಡೀ ನೀರಿನಿಂದ ಆವೃತವಾಗಿದೆ. ತಗ್ಗು ಪ್ರದೇಶದ ಅಂಗಡಿ, ವ್ಯಾಪಾರ ಕೇಂದ್ರಗಳಿಗೆ ನೀರು ನುಗ್ಗಿದೆ. ಹಲವು ಮನೆಗಳಿಗೂ ನೀರು ನುಗ್ಗಿದ್ದು, ಜನ ಆರಂಭಿಕ ಮಳೆಯಲ್ಲೇ ಪರದಾಟ ಆರಂಭಿಸಿದ್ದಾರೆ.

    ಕೊಟ್ಟಾರ, ಅತ್ತಾವರದಲ್ಲಿ ನೆರೆ ನೀರು ಆವರಿಸಿ ಜನರು ಆತಂಕ ಎದುರಿಸುತ್ತಿದ್ದಾರೆ. ಇದರಿಂದಾಗಿ ನಗರದಾದ್ಯಂತ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಮಳೆ ಒಂದೇ ಸಮನೆ ಸುರಿಯುತ್ತಿದ್ದು, ಮಳೆ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಮುಂಜಾಗ್ರತೆ ವಹಿಸದ ಕಾರಣ ಜನ ಕಷ್ಟ ಎದುರಿಸುವಂತಾಗಿದೆ.

    ಇನ್ನು ದೇಶಕ್ಕೆ ನೈರುತ್ಯ ಮುಂಗಾರು ಮಳೆ ಆಗಮನವಾಗಿದ್ದು, ಇನ್ನು 3 ದಿನ ಮೊದಲೇ ಕೇರಳದ ಭಾಗಕ್ಕೆ ಮುಂಗಾರು ಮಳೆ ಎಂಟ್ರಿ ಕೊಟ್ಟಿದೆ. ಆದ್ದರಿಂದ ಇನ್ನೂ ಎರಡು ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಆಗಮನವಾಗುವ ಸಾಧ್ಯತೆ ಇದೆ.

    ಕೇರಳ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಮುಂಗಾರು ಇನ್ನಷ್ಟು ಚುರುಕುಗೊಂಡಿದ್ದು, ಮುಂದಿನ ಎರಡು ದಿನಗಳಲ್ಲಿ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಭಾಗದಲ್ಲಿ ಭಾರೀ ಮಳೆಯಾಗುವ ಸಂಭವಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ವಿಜ್ಞಾನಿ ಗವಾಸ್ಕರ್ ಮಾಹಿತಿ ತಿಳಿಸಿದ್ದಾರೆ.