Tag: house

  • ಬೆಂಗ್ಳೂರಲ್ಲಿ ಮನೆ ಖರೀದಿ ಮಾಡ್ತೀರಾ? ಯಾವ ಪ್ರದೇಶದಲ್ಲಿ ಡಬಲ್ ಬೆಡ್ ರೂಂಗೆ ಎಷ್ಟು ಲಕ್ಷ? ಇಲ್ಲಿದೆ ಮಾಹಿತಿ

    ಬೆಂಗ್ಳೂರಲ್ಲಿ ಮನೆ ಖರೀದಿ ಮಾಡ್ತೀರಾ? ಯಾವ ಪ್ರದೇಶದಲ್ಲಿ ಡಬಲ್ ಬೆಡ್ ರೂಂಗೆ ಎಷ್ಟು ಲಕ್ಷ? ಇಲ್ಲಿದೆ ಮಾಹಿತಿ

    ಬೆಂಗಳೂರು: ರಾಜಧಾನಿಯಲ್ಲಿ ಮನೆ ಖರೀದಿಸುವುದೇ ದೊಡ್ಡ ಕಷ್ಟ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ದರ ನಿಗದಿಯಾಗಿದೆ. ಹೀಗಾಗಿ ಯಾವ ಪ್ರದೇಶದಲ್ಲಿ ಎಷ್ಟು ರೂ. ದರ ಇದೆ ಎನ್ನುವ ಮಾಹಿತಿಯನ್ನು ಮನೆ ಖರೀದಿಸುವ ಜನ ಹುಡುಕುತ್ತಿರುತ್ತಾರೆ.

    ದೇಶದ ರಿಯಲ್ ಎಸ್ಟೇಟ್ ವ್ಯವಹಾರದ ಬಗ್ಗೆ ಮಾಹಿತಿ datalabs.proptiger.ಯಾವ ಪ್ರದೇಶದಲ್ಲಿ ಎಷ್ಟು ದರ ಇದೆ ಎನ್ನುವುದನ್ನು ಅಂದಾಜಿಸಿದೆ. ಇದರಲ್ಲಿ ಸಿಂಗಲ್ ಬೆಡ್ ರೂಂ, ಡಬ್ಬಲ್ ಬೆಡ್ ರೂಂ ಹಾಗೂ ತ್ರಿಬ್ಬಲ್ ಬೆಡ್ ರೂಂ ಮನೆಗಳ ದರವನ್ನು ಪ್ರಕಟಿಸಿದೆ.

    50 ಲಕ್ಷ ರೂಪಾಯಿ, 50 ರಿಂದ 75 ಲಕ್ಷ ರೂಪಾಯಿಯೊಳಗಿನ ಮನೆಗಳು ಹಾಗೂ 75 ಲಕ್ಷ ರೂಪಾಯಿಗಿಂತ ಹೆಚ್ಚಿರುವ ಮನೆಗಳು ಎಂದು ವಿಂಗಡಿಸಿ ಈ ಮಾಹಿತಿಯನ್ನು ಪ್ರಕಟಿಸಿದೆ.

    ಯಾವ ಪ್ರದೇಶದಲ್ಲಿ ಎಷ್ಟು?
    ಚಂದಾಪುರ ಏರಿಯಾದ 1 ಬೆಡ್ ರೂಂನ 970 ಚದರ ಅಡಿಯಲ್ಲಿನ ಮನೆಯ ಪ್ರತಿ ಅಡಿಗೆ 2,550 ರೂಪಾಯಿಯಂತೆ ಅಂದಾಜು 24.76 ಲಕ್ಷ ರೂಪಾಯಿ ಇದ್ದರೆ, ಎಲೆಕ್ಟ್ರಾನಿಕ್ ಸಿಟಿ ಪೇಸ್ 1 ರಲ್ಲಿ 1 ಬೆಡ್ ರೂಂನ 990 ಚದರ ಅಡಿ ಮನೆಯ ಪ್ರತಿ ಅಡಿಗೆ 3,400 ರೂಪಾಯಿಯಂತೆ ಅಂದಾಜು 33.66 ಲಕ್ಷ ರೂಪಾಯಿ ನಿಗದಿಯಾಗಿದೆ.

    ಎಲೆಕ್ಟ್ರಾನಿಕ್ ಸಿಟಿ ಪೇಸ್ 2 ರಲ್ಲಿ 1 ಬೆಡ್ ರೂಂನ 1,030 ಚದರ ಅಡಿ ಮನೆಯ ಪ್ರತಿ ಅಡಿಗೆ 3,600 ರೂಪಾಯಿಯಂತೆ, ಅಂದಾಜು 37.08 ಲಕ್ಷ ರೂಪಾಯಿ ಆಗಲಿದೆ. ಗೊಟ್ಟಿಗೆರೆಯಲ್ಲಿ 2 ಬೆಡ್ ರೂಂನ 1,140 ಚದರ ಅಡಿ ಮನೆಯ ಪ್ರತಿ ಅಡಿಗೆ 3,450 ರೂಪಾಯಿಯಂತೆ ಅಂದಾಜು 39.33 ಲಕ್ಷ ರೂಪಾಯಿ ಆಗಲಿದೆ.

    ಜಕ್ಕೂರು ಪ್ರದೇಶದಲ್ಲಿ 2 ಬೆಡ್ ರೂಂನ 1,110 ಚದರ ಅಡಿ ಮನೆಯ ಪ್ರತಿ ಅಡಿಗೆ 3,900 ರೂಪಾಯಿಯಂತೆ ಅಂದಾಜು 43.29 ಲಕ್ಷ ರೂಪಾಯಿ ಆಗಲಿದೆ. ನಾಗರಭಾವಿ ಪ್ರದೇಶದಲ್ಲಿ 1 ಬೆಡ್ ರೂಂನ 930 ಚದರ ಅಡಿ ಮನೆಯ ಪ್ರತಿ ಅಡಿಗೆ 4,450 ರೂಪಾಯಿಯಂತೆ ಅಂದಾಜು 41.38 ಲಕ್ಷ ರೂಪಾಯಿ ನಿಗದಿಯಾಗಿದೆ

    ಸರ್ಜಾಪುರ ಪ್ರದೇಶದಲ್ಲಿ 1 ಬೆಡ್ ರೂಂನ 1,050 ಚದರ ಅಡಿ ಮನೆಯ ಪ್ರತಿ ಅಡಿಗೆ 3,050 ರೂಪಾಯಿಯಂತೆ ಅಂದಾಜು 32.02 ಲಕ್ಷ ರೂಪಾಯಿ ಆಗಲಿದ್ದು, ಥಣಿಸಂದ್ರ ಪ್ರದೇಶದಲ್ಲಿ 1 ಬೆಡ್ ರೂಂನ 1,020 ಚದರ ಅಡಿ ಮನೆಯ ಪ್ರತಿ ಅಡಿಗೆ 4,300 ರೂಪಾಯಿಯಂತೆ ಅಂದಾಜು 43.86 ಲಕ್ಷ ರೂಪಾಯಿ ಆಗಲಿದೆ.

    ವರ್ತೂರು ಪ್ರದೇಶದಲ್ಲಿ 1 ಬೆಡ್ ರೂಂನ 1,040 ಚದರ ಅಡಿ ಮನೆಯ ಪ್ರತಿ ಅಡಿಗೆ 3,900 ರೂಪಾಯಿಯಂತೆ ಅಂದಾಜು 40.56 ಲಕ್ಷ ರೂಪಾಯಿ ಆಗಲಿದ್ದು, ಯಲಹಂಕ ಪ್ರದೇಶದಲ್ಲಿ 1 ಬೆಡ್ ರೂಂನ 970 ಚದರ ಅಡಿ ಮನೆಯ ಪ್ರತಿ ಅಡಿಗೆ 4,250 ರೂಪಾಯಿಯಂತೆ ಅಂದಾಜು 41.22 ಲಕ್ಷ ರೂಪಾಯಿ ನಿಗದಿಯಾಗಿದೆ.

    50 ರಿಂದ 75 ಲಕ್ಷ ರೂ.:
    ಥಣಿಸಂದ್ರ ಮುಖ್ಯ ರಸ್ತೆ ಕಣ್ಣೂರಿನ ಪ್ರದೇಶದಲ್ಲಿ 2 ಬೆಡ್ ರೂಂನ 1,350 ಚದರ ಅಡಿ ಮನೆಯ ಪ್ರತಿ ಅಡಿಗೆ 4,550 ರೂಪಾಯಿಯಂತೆ ಅಂದಾಜು 61.42 ಲಕ್ಷ ರೂಪಾಯಿ ಆದರೆ, ಕೆಂಗೇರಿ ಪ್ರದೇಶದಲ್ಲಿ 2 ಬೆಡ್ ರೂಂನ 1,440 ಚದರ ಅಡಿ ಮನೆಯ ಪ್ರತಿ ಅಡಿಗೆ 4,050 ರೂಪಾಯಿಯಂತೆ ಅಂದಾಜು 58.32 ಲಕ್ಷ ರೂಪಾಯಿ ನಿಗದಿಯಾಗಿದೆ.

    ಕೆ.ಆರ್.ಪುರಂ ಪ್ರದೇಶದಲ್ಲಿ 2 ಬೆಡ್ ರೂಂನ 1,320 ಚದರ ಅಡಿ ಮನೆಯ ಪ್ರತಿ ಅಡಿಗೆ 4,550 ರೂಪಾಯಿಯಂತೆ ಅಂದಾಜು 60.06 ಲಕ್ಷ ರೂಪಾಯಿ ನಿಗದಿಯಾಗಿದ್ದರೆ, ಸುಬ್ರಹ್ಮಣ್ಯಪುರ ಪ್ರದೇಶದಲ್ಲಿ 2 ಬೆಡ್ ರೂಂನ 1,260 ಚದರ ಅಡಿ ಮನೆಯ ಪ್ರತಿ ಅಡಿಗೆ 5,100 ರೂಪಾಯಿಯಂತೆ ಅಂದಾಜು 64.26 ಲಕ್ಷ ರೂಪಾಯಿ ಆಗಲಿದೆ.

    ವೈಟ್‍ಫೀಲ್ಡ್‍ನ ಹೋಪ್ ಫಾರ್ಮ್ ಜಂಕ್ಷನ್ ಪ್ರದೇಶದಲ್ಲಿ 2 ಬೆಡ್ ರೂಂನ 1,350 ಚದರ ಅಡಿ ಮನೆಯ ಪ್ರತಿ ಅಡಿಗೆ 4,450 ರೂಪಾಯಿಯಂತೆ ಅಂದಾಜು 60.07 ಲಕ್ಷ ರೂಪಾಯಿ ಆಗಲಿದೆ.

    75 ಲಕ್ಷ ರೂ. ಮೇಲ್ಪಟ್ಟು ಎಲ್ಲಿ ಮನೆ ಸಿಗುತ್ತೆ?
    ಹೆಣ್ಣೂರು ಮುಖ್ಯ ರಸ್ತೆಯ ಅಂಗಾಲಾಪುರ ಪ್ರದೇಶದಲ್ಲಿ 3 ಬೆಡ್ ರೂಂನ 2,020 ಚದರ ಅಡಿ ಮನೆಯ ಪ್ರತಿ ಅಡಿಗೆ 6,400 ರೂಪಾಯಿಯಂತೆ ಅಂದಾಜು 129.28 ಲಕ್ಷ ರೂಪಾಯಿ ಆಗಲಿದೆ. ಹೊಸ ರೋಡ್ ಪ್ರದೇಶದಲ್ಲಿ 2 ಬೆಡ್ ರೂಂನ 1,770 ಚದರ ಅಡಿ ಮನೆಯ ಪ್ರತಿ ಅಡಿಗೆ 5,500 ರೂಪಾಯಿಯಂತೆ ಅಂದಾಜು 93.35 ಲಕ್ಷ ರೂಪಾಯಿ ಆಗಲಿದೆ.

    ಕಲ್ಯಾಣ ನಗರ ಪ್ರದೇಶದಲ್ಲಿ 2 ಬೆಡ್ ರೂಂನ 1,870 ಚದರ ಅಡಿ ಮನೆಯ ಪ್ರತಿ ಅಡಿಗೆ 6,400 ರೂಪಾಯಿಯಂತೆ ಅಂದಾಜು 119.68 ಲಕ್ಷ ರೂಪಾಯಿ ಆಗಲಿದೆ. ಕುಮಾರಸ್ವಾಮಿ ಲೇಔಟ್ ಪ್ರದೇಶದಲ್ಲಿ 2 ಬೆಡ್ ರೂಂನ 1,990 ಚದರ ಅಡಿ ಮನೆಯ ಪ್ರತಿ ಅಡಿಗೆ 6,650 ರೂಪಾಯಿಯಂತೆ ಅಂದಾಜು 132.33 ಲಕ್ಷ ರೂಪಾಯಿ ಆಗಲಿದೆ.

    ಮಾರತಹಳ್ಳಿ ಪ್ರದೇಶದಲ್ಲಿ 3 ಬೆಡ್ ರೂಂನ 2,440 ಚದರ ಅಡಿ ಮನೆಯ ಪ್ರತಿ ಅಡಿಗೆ 7,350 ರೂಪಾಯಿಯಂತೆ ಅಂದಾಜು 179.34 ಲಕ್ಷ ರೂಪಾಯಿ ಆಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮನೆಯೊಳಗೆ ನುಗ್ಗಿದ KSRTC ಬಸ್

    ಮನೆಯೊಳಗೆ ನುಗ್ಗಿದ KSRTC ಬಸ್

    ಮಂಡ್ಯ: ಪಾದಚಾರಿಯಾಗಿ ಡಿಕ್ಕಿ ಹೊಡೆಯೋದನ್ನು ತಪ್ಪಿಸಲು ಹೋಗಿ ಸಾರಿಗೆ ಬಸ್ ಮನೆಯೊಳಗೆ ನುಗ್ಗಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು ಬೆಳಗಿನ ಜಾವ ಸುಮಾರು 5.30ಕ್ಕೆ ಮಂಡ್ಯ ಜಿಲ್ಲೆಯ ಮದ್ದೂರು ಮಳವಳ್ಳಿ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.

    45 ವರ್ಷದ ಮಹದೇವು ಸಾವನ್ನಪ್ಪಿದ ಪಾದಚಾರಿ. ಇಂದು ಬೆಳಗ್ಗೆ ಬಸ್ ಕೊಳ್ಳೇಗಾಲದಿಂದ ಬೆಂಗಳೂರಿಗೆ ಬರುತ್ತಿತ್ತು. ದಾರಿ ಮಧ್ಯೆ ಬಂದ ಪಾದಚಾರಿಯಾಗಿ ಡಿಕ್ಕಿ ಆಗೋದನ್ನು ತಪ್ಪಿಸಲು ಹೋದಾಗ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಎರಡು ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಮನೆಯೊಂದರ ಒಳಗೆ ನುಗ್ಗಿದೆ. ಮನೆಯಲ್ಲಿ ಮಲಗಿದ್ದ ಐವರಿಗೂ ಗಾಯಗಳಾಗಿದ್ದು ಎಲ್ಲರನ್ನು ಕೂಡಲೇ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಘಟನೆ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ನಡೆಸಿದ್ದಾರೆ. ಬಸ್ ಮನೆಯೊಳಗೆ ನುಗ್ಗಿದ ಪರಿಣಾಮ ಟಿವಿ, ಫ್ರಿಜ್ ಸೇರಿದಂತೆ ಮನೆ ಸಂಪೂರ್ಣ ಜಖಂಗೊಂಡಿದೆ. ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಆಕಸ್ಮಿಕವಾಗಿ ಹೊತ್ತಿದ ಬೆಂಕಿಗೆ ಸುಟ್ಟು ಕರಕಲಾದವು 5 ಮನೆಗಳು!

    ಆಕಸ್ಮಿಕವಾಗಿ ಹೊತ್ತಿದ ಬೆಂಕಿಗೆ ಸುಟ್ಟು ಕರಕಲಾದವು 5 ಮನೆಗಳು!

    ಚಿಕ್ಕಬಳ್ಳಾಪುರ: ಆಕಸ್ಮಿಕವಾಗಿ ಮನೆಯೊಂದಕ್ಕೆ ಕಿಡಿ ತಗುಲಿ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲಿಯೇ ಇದ್ದ ಎಲ್‍ಪಿಜಿ ಸಿಲಿಂಡರ್ ಸೋರಿಕೆಯಾಗಿ ಆಕ್ಕ-ಪಕ್ಕದ ಮನೆಗಳು ಸುಟ್ಟು ಕರಕಲಾದ ಘಟನೆ ಗೌರಿಬಿದನೂರು ತಾಲೂಕಿನ ಮಣಿವಾಲ ಗ್ರಾಮದಲ್ಲಿ ನಡೆದಿದೆ.

    ಮಣಿವಾಲ ಗ್ರಾಮದ ಆನಂದ್ ಎಂಬವರ ಮನೆಯಲ್ಲಿ ಮೊದಲು ಬೆಂಕಿ ಹೊತ್ತಿಕೊಂಡಿತ್ತು. ಬಿಸಿ ಹೆಚ್ಚಾಗಿದ್ದರಿಂದ ಎಲ್‍ಪಿಜಿ ಸಿಲಿಂಡರ್ ಸೋರಿಕೆಯಾಗಿದ್ದು, ಬೆಂಕಿಯ ವ್ಯಾಪ್ತಿ ಹೆಚ್ಚಾಗಿದೆ. ಇದರಿಂದಾಗಿ ಒಂದೇ ಸಾಲಿನಲ್ಲಿದ್ದ ಆನಂದ್ ಅವರ ಸಹೋದರರಾದ ಆದಿನಾರಾಣಪ್ಪ, ಶ್ರೀನಿವಾಸ್, ನಾರಾಯಣಸ್ವಾಮಿ ಹಾಗೂ ವೆಂಕಟಲಕ್ಷಮ್ಮ ಮನೆಗಳು ಬೆಂಕಿಗೆ ಆಹುತಿಯಾಗಿವೆ. ಮನೆಯ ಮೇಲ್ಛಾವಣಿ ಸೇರಿದಂತೆ ಮನೆಯೊಳಗಿದ್ದ ದಿನಬಳಕೆ ಹಾಗೂ ಗೃಹಪಯೋಗಿ ವಸ್ತುಗಳು ಸುಟ್ಟು ಕರಕಲಾಗಿವೆ.

    ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸಿದ್ದಾರೆ. ಈ ಕುರಿತು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮನೆಗಳಿಗೆ ಮಳೆ ನೀರು ನುಗ್ಗುವುದನ್ನು ತಡೆಯೋದಕ್ಕೆ ಹೈಫೈ ಟೆಕ್ನಾಲಜಿ ಬಳಕೆ

    ಮನೆಗಳಿಗೆ ಮಳೆ ನೀರು ನುಗ್ಗುವುದನ್ನು ತಡೆಯೋದಕ್ಕೆ ಹೈಫೈ ಟೆಕ್ನಾಲಜಿ ಬಳಕೆ

    ಮಂಗಳೂರು: ಮಳೆಗಾಲದಲ್ಲಿ ನದಿಗಳಲ್ಲಿ ನೆರೆ ಬಂದಾಗ ಆಸುಪಾಸಿನ ಮನೆಗಳಿಗೆ ನೀರು ನುಗ್ಗುವುದು ಕಾಮನ್. ಆದರೆ ಇಲ್ಲೊಂದು ಮನೆಯನ್ನು ಹೈ-ಫೈ ಟೆಕ್ನಾಲಜಿಯಲ್ಲಿ ಇದ್ದಲ್ಲಿಂದಲೇ ಎತ್ತರಿಸಿ ನೆರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆದಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪನಡು ಎಂಬಲ್ಲಿನ ಮಹಮ್ಮದ್ ರಿಯಾಝ್ ಮನೆ ಇದಾಗಿದ್ದು, ದೆಹಲಿ ಮೂಲದ ಹರಿ ಓಂ ಶಿವ ಎಂಬ ಹೌಸ್ ಲಿಫ್ಟಿಂಗ್ ಕಂಪನಿಯವರು ಕೇವಲ ಜಾಕ್ ಮೂಲಕ ಮನೆಯನ್ನೇ ಮೇಲಕ್ಕೆ ಎತ್ತರಿಸಲು ಮುಂದಾಗಿದ್ದಾರೆ.

    ಈಗಾಗಲೇ ಎರಡು ಫೀಟ್ ಎತ್ತರಕ್ಕೆ ಎತ್ತರಿಸಲಾಗಿದ್ದು, ಇನ್ನೂ ಎರಡು ಫೀಟ್ ಎತ್ತರಕ್ಕೊಯ್ಯುವ ಪ್ಲಾನ್ ಇದೆ. ಒಂದು ಸಾವಿರ ಚದರ ಅಡಿ ವಿಸ್ತೀರ್ಣ ಇರುವ ಬೃಹತ್ ಮನೆಯನ್ನು ಗೋಡೆಗೆ ಯಾವುದೇ ಹಾನಿಯಾಗದಂತೆ ಎತ್ತರಿಸುತ್ತಿದ್ದಾರೆ.

    ಮನೆಯ ಅಡಿಪಾಯವನ್ನು ಒಂದು ಕಡೆಯಿಂದ ಕೆಂಪು ಕಲ್ಲಿನಿಂದ ಕಟ್ಟುತ್ತಲೇ ಜಾಕ್ ಏರಿಸುವ ತಂತ್ರಜ್ಞಾನ ಅಚ್ಚರಿ ಮೂಡಿಸಿದ್ದು, ಕರ್ನಾಟಕದಲ್ಲಿ ಮೊದಲ ಬಾರಿಗೆ ಇಂಥ ಪ್ರಯೋಗ ನಡೆಯುತ್ತಿದೆ. ಹೀಗಾಗಿ ಜನಸಾಮಾನ್ಯರು ಅಚ್ಚರಿಯಿಂದ ಮನೆ ಎತ್ತರಿಸುವುದನ್ನು ನೋಡಲು ಬರುತ್ತಿದ್ದಾರೆ. ಈ ಹಿಂದೆ ಕೇರಳದಲ್ಲಿ ಹೌಸ್ ಲಿಫ್ಟಿಂಗ್ ಮಾಡುತ್ತಿದ್ದ ಯೂಟ್ಯೂಬ್ ವಿಡಿಯೋ ನೋಡಿ ಇಲ್ಲಿನ ಮನೆಯವರು ಕಂಪನಿ ಸಿಬಂದಿಯನ್ನು ಸಂಪರ್ಕಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇವಾಲಯದ ಕೋಟ್ಯಾಂತರ ರೂ. ಆಭರಣ ಎಗರಿಸಲು ಸ್ಕೆಚ್-ಕೇಳಿದ್ರೆ ಅಚ್ಚರ್ಯ ಪಡ್ತಿರಾ!

    ದೇವಾಲಯದ ಕೋಟ್ಯಾಂತರ ರೂ. ಆಭರಣ ಎಗರಿಸಲು ಸ್ಕೆಚ್-ಕೇಳಿದ್ರೆ ಅಚ್ಚರ್ಯ ಪಡ್ತಿರಾ!

    ಹುಬ್ಬಳ್ಳಿ: ದೇವಸ್ಥಾನದ ಆಭರಣಗಳ ಮೇಲೆ ಕಣ್ಣು ಹಾಕಿದ್ದ ದುಷ್ಕರ್ಮಿಗಳ ತಂಡ ಮನೆಯಿಂದ ದೇವಸ್ಥಾನಕ್ಕೆ ಸುರಂಗ ಮಾರ್ಗ ತೆಗೆಯುತ್ತಿದ್ದ ಘಟನೆ ಹುಬ್ಬಳ್ಳಿಯ ಕರ್ಕಿ ಬಸವೇಶ್ವರ ನಗರದಲ್ಲಿ ನಡೆದಿದೆ.

    ನಗರದ ಹುಲಿಗೆಮ್ಮ ದೇವಸ್ಥಾನದಲ್ಲಿ ದೇವಿಗೆ ಅಲಂಕಾರ ಮಾಡಿರುವ ಆಭರಣಗಳನ್ನು ಕಳ್ಳತನ ಮಾಡಲು ಹಾವೇರಿ ಜಿಲ್ಲೆಯ ಬ್ಯಾಡಗಿ ಮೂಲದ ಬಸವರಾಜ ಮಾಸನಗಿ ಸ್ವಾಮೀಜಿ ಕೃತ್ಯ ಎಸಗಿದ್ದಾನೆ.

    ಸಿಕ್ಕಿಬಿದ್ದಿದ್ದು ಹೇಗೆ:
    ದೇವಾಲಯ ಇರುವ ಕರ್ಕಿ ಬಸವೇಶ್ವರ ನಿವಾಸಿಯಾದ ಮಾರುತಿ ಉಮಚಗಿ ಎಂಬಾತನೊಂದಿಗೆ ಸೇರಿ ಬಸವರಾಜ ದೇವಸ್ಥಾನಕ್ಕೆ ಕನ್ನ ಹಾಕಲು ಯತ್ನಿಸಿದ್ದು, ಇದಕ್ಕಾಗಿ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಮಾರುತಿ ಉಮಚಗಿ ಮನೆಯಲ್ಲಿ ಕಳೆದ ವಾರ ಪೂಜೆ ಪುರಸ್ಕಾರ ಮಾಡಿ ಶನಿವಾರ ರಾತ್ರಿ ಸುರಂಗ ಮಾರ್ಗ ತೆಗೆಯುವ ಕೆಲಸ ಆರಂಭಿಸಿದ್ದಾನೆ. ಆದರೆ ಸುರಂಗ ಮಾರ್ಗ ತೆಗೆಯುವಾಗ ಮನೆಯಿಂದ ಶಬ್ಧ ಕೇಳಿ ಬಂದಿದ್ದು, ಇದರಿಂದ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಹುಲಗೆಮ್ಮ ದೇವಿಗೆ ಕೋಟ್ಯಾಂತರ ರೂಪಾಯಿ ಮೌಲ್ಯದ ವಜ್ರದ ನತ್ತು, ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ನೀಡಲಾಗಿದ್ದು, ಮನೆಯಿಂದ ಸುರಂಗ ಮಾರ್ಗ ತೆಗೆದು ನೇರವಾಗಿ ದೇವಸ್ಥಾನದ ಗರ್ಭಗುಡಿಗೆ ಸಂಪರ್ಕ ಕಲ್ಪಿಸಲು ಆರೋಪಿಗಳು ಯತ್ನಿಸಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಬೆಂಡಿಗೇರಿ ಪೊಲೀಸರು ದಾಳಿ ಮಾಡಿ ಕೃತ್ಯದಲ್ಲಿ ಭಾಗಿಯಾಗಿದ್ದ ರಾಜು ಜೋಳದ, ಮಲೇಶಪ್ಪ ಹರಿಜನ, ಶ್ರೀಕಾಂತ್ ಹುಟ್ಟನ್ನವರ, ಮದನಗೌಡ ಮದಿಗೌಡರ, ಯಲ್ಲಪ್ಪ ಹಳಗಟ್ಟಿ ಹಾಗೂ ಮನೆ ಮಾಲೀಕ ಮಾರುತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಂದಹಾಗೇ ದೇವಿಯ ಆಭರಣ ಕಳ್ಳತನ ಮಾಡಲು ಆರೋಪಿ ಬಸವರಾಜ ಸ್ವಾಮೀಜಿ, ಮಾರುತಿ ಉಮಚಗಿಯಿಂದ 21 ಸಾವಿರ ರೂ. ಹಣ ಪಡೆದು ಪೂಜೆ ಸಲ್ಲಿಸಿದ್ದಾನೆ. ಬಳಿಕ ತನ್ನ ಶಿಷ್ಯರ ಮೂಲಕ ದೇವಿಯ ಆಭರಣ ಕಳ್ಳತನ ಮಾಡಲು ಸುರಂಗ ತೆಗೆಯಲು ಮುಂದಾಗಿದ್ದ ಎಂಬ ಮಾಹಿತಿ ಲಭಿಸಿದೆ.

    ಬಂಧಿತರೆಲ್ಲರು ಹಾವೇರಿ ಮೂಲದವರಾಗಿದ್ದು, ಸದ್ಯ ಕೃತ್ಯಕ್ಕೆ ಮಾಸ್ಟರ್ ಪ್ಲಾನ್ ರೂಪಿಸಿದ್ದ ಬಸವರಾಜ ಸ್ವಾಮೀಜಿ ನಾಪತ್ತೆಯಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಇನ್ನು ಮನೆ ಮೇಲೆ ದಾಳಿ ನಡೆಸಿದ ವೇಳೆ ಕೃತ್ಯಕ್ಕೆ ಬಳಕೆ ಮಾಡಿದ್ದ ಲೋಹ ಶೋಧಕ ಯಂತ್ರ ಸೇರಿದಂತೆ ಸುರಂಗ ನಿರ್ಮಿಸಿಲು ಬಳಸಿದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಾವಣಗೆರೆಯಲ್ಲಿ ಶುಕ್ರವಾರ ಸುರಿದ ಮಳೆಗೆ ಮನೆಗಳು ಸಂಪೂರ್ಣ ಜಲಾವೃತ

    ದಾವಣಗೆರೆಯಲ್ಲಿ ಶುಕ್ರವಾರ ಸುರಿದ ಮಳೆಗೆ ಮನೆಗಳು ಸಂಪೂರ್ಣ ಜಲಾವೃತ

    ದಾವಣಗೆರೆ: ಶುಕ್ರವಾರ ರಾತ್ರಿ ಸುರಿದ ಮಳೆಗೆ ದಾವಣಗೆರೆಯ ಭಾಷಾ ನಗರದ ಆರನೇ ಕ್ರಾಸ್ ನಲ್ಲಿರುವ ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ. ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ಅಲ್ಲಿನ ನಿವಾಸಿಗಳು ನೀರನ್ನು ಹೊರ ಹಾಕುತ್ತಿದ್ದಾರೆ.

    ಪ್ರತಿ ಬಾರಿ ಮಳೆ ಜಾಸ್ತಿ ಬಂದರೆ ಇಲ್ಲಿನ ನಿವಾಸಿಗಳು ನರಕವನ್ನು ಅನುಭವಿಸುವಂತಾಗುತ್ತದೆ. ಮಳೆ ನೀರು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಮಳೆ ನೀರು ಮನೆಗೆ ನುಗ್ಗಿ ಅವಾಂತರ ಸೃಷ್ಟಿ ಮಾಡಿವೆ. ಇದನ್ನೂ ಓದಿ: ಕೇವಲ ಅರ್ಧ ಗಂಟೆ ಮಳೆಗೆ ತತ್ತರಿಸಿದ ಬೆಂಗ್ಳೂರು- 100ಕ್ಕೂ ಹೆಚ್ಚು ಮನೆ ಜಲಾವೃತ

    ಇಲ್ಲಿ ವಾಸಿಸುವ ಜನರು ಬಹುತೇಕ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು, ಮನೆಗಳಿಗೆ ಏಕಾಏಕಿ ನೀರು ನುಗ್ಗಿದ ಹಿನ್ನಲೆ ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು ಹಾಗೂ ಅಡುಗೆ ಸಾಮಗ್ರಿಗಳು ಜಲಾವೃತಗೊಂಡಿದ್ದು, ಸಂಕಷ್ಟ ಅನುಭವಿಸುವಂತಾಗಿದೆ. ಅದರಲ್ಲೂ ಚಿಕ್ಕ ಚಿಕ್ಕ ಕಂದಮ್ಮಗಳಿದ್ದು ಮಾರಕ ರೋಗಕ್ಕೆ ತುತ್ತಾಗಿ ಸಾವನ್ನಪ್ಪುವಂತಾಗಿದೆ.

    ಪ್ರತಿನಿತ್ಯ ನರಕದಲ್ಲಿ ಜೀವನ ಮಾಡುವ ನಮಗೆ ಒಳ್ಳೆಯ ಚರಂಡಿ ವ್ಯವಸ್ಥೆ ಹಾಗೂ ಮಳೆ ನೀರು ಸರಾಗವಾಗಿ ಹರಿಯುವ ರೀತಿ ವ್ಯವಸ್ಥೆ ಮಾಡಬೇಕು ಎಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದರು. ಹಲವು ಬಾರಿ ಇಲ್ಲಿನ ಸ್ಥಳೀಯರು ಜನ ಪ್ರತಿನಿಧಿಗಳಿಗೆ ಮನವಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಕೇವಲ ಚುನಾವಣೆಗೆ ಮಾತ್ರ ಬರ್ತಾರೆ ವಿನಃ ಸಮಸ್ಯೆಗಳನ್ನು ಬಗೆಹರಿಸಲು ಬರುವುದಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೇಲ್ಛಾವಣಿ ಕುಸಿದು ತಾಯಿ ಮಗ ದುರ್ಮರಣ

    ಮೇಲ್ಛಾವಣಿ ಕುಸಿದು ತಾಯಿ ಮಗ ದುರ್ಮರಣ

    ಬಳ್ಳಾರಿ: ಮೇಲ್ಚಾವಣಿ ಕುಸಿದು ಬಿದ್ದ ಪರಿಣಾಮ ಮನೆಯಲ್ಲಿ ಮಲಗಿದ್ದ ತಾಯಿ ಮಗ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಗರದ ಕೌಲಬಜಾರ್ ಪ್ರದೇಶದಲ್ಲಿ ನಡೆದಿದೆ.

    ಹೇಮಲತಾ ಹಾಗೂ ದರ್ಶನ್ ಮೃತ ದುರ್ದೈವಿಗಳು. ಶನಿವಾರ ತಡರಾತ್ರಿ ಮನೆಯಲ್ಲಿ ಮಲಗಿದ್ದ ತಾಯಿ ಹಾಗೂ ಮಗನ ಮೇಲೆ ಏಕಾಏಕಿ ಮನೆಯ ಮೇಲ್ಛಾವಣೆ ಕುಸಿದು ಬಿದ್ದಿದೆ. ಬಿದ್ದ ರಭಸಕ್ಕೆ ಸ್ಥಳದಲ್ಲೇ ಇಬ್ಬರು ಅಸುನೀಗಿದ್ದಾರೆ. ಇಂದು ಬೆಳಗ್ಗೆ ಮನೆ ಕುಸಿದಿರುವುದನ್ನು ಕಂಡ ಸ್ಥಳೀಯರು ಅವಶೇಷಗಳಡಿಯಲ್ಲಿ ಸಿಲುಕಿದ್ದ ಮೃತ ದೇಹಗಳನ್ನು ಹೊರತೆಗೆದಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರೀಶೀಲನೆ ನಡೆಸಿ, ಮನೆಯು ತುಂಬಾ ಹಳೆಯದಾಗಿದ್ದರಿಂದ ಕುಸಿದು ಬಿದ್ದಿದೆ ಎಂದು ತಿಳಿಸಿದ್ದಾರೆ. ಘಟನೆ ಸಂಬಂಧ ಕೌಲ್‍ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅನಿಲ ಸೋರಿಕೆ ತಡೆಗಟ್ಟಲು ಹೋದ ವೇಳೆ ಸಿಲಿಂಡರ್ ಸ್ಫೋಟ!

    ಅನಿಲ ಸೋರಿಕೆ ತಡೆಗಟ್ಟಲು ಹೋದ ವೇಳೆ ಸಿಲಿಂಡರ್ ಸ್ಫೋಟ!

    ಚಾಮರಾಜನಗರ: ಗ್ಯಾಸ್ ಏಜೆನ್ಸಿ ಸಿಬ್ಬಂದಿ ಅಡುಗೆ ಅನಿಲ ಸೋರಿಕೆ ತಡೆಗಟ್ಟಲು ಹೋದ ವೇಳೆ ಸಿಲಿಂಡರ್ ಸ್ಫೋಟಗೊಂಡು ಮನೆ ಆಹುತಿಯಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ಜರುಗಿದೆ.

    ಗ್ರಾಮದ ನಾಗರಾಜು ಮನೆಯಲ್ಲಿ ಗ್ಯಾಸ್ ಸೋರಿಕೆ ಆಗುತ್ತಿದ್ದ ಹಿನ್ನೆಲೆಯಲ್ಲಿ, ನಾಗರಾಜು ಗ್ಯಾಸ್ ಏಜೆನ್ಸಿಗೆ ಫೋನ್ ಮೂಲಕ ವಿಷಯ ತಿಳಿಸಿದ್ದಾರೆ. ನಂತರ ಮನೆಗೆ ಬಂದ ಗ್ಯಾಸ್ ಏಜೆನ್ಸಿ ಸಿಬ್ಬಂದಿ ಸಿಲಿಂಡರ್ ನ ಸೋರಿಕೆ ತಡೆಗಟ್ಟುವಲ್ಲಿ ಮುಂದಾಗಿದ್ದಾನೆ. ಈ ವೇಳೆ ಇದ್ದಕ್ಕಿದ್ದ ಹಾಗೆ ಗ್ಯಾಸ್ ಸ್ಫೋಟಗೊಂಡಿದೆ.

    ಅದೃಷ್ಟವಶಾತ್ ಗ್ಯಾಸ್ ಏಜೆನ್ಸಿ ಸಿಬ್ಬಂದಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಚಾಮಾರಾಜನಗರ ಗ್ರಾಮಾಂತರ ಆಸ್ಪತ್ರೆಯಲಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಲಿಂಡರ್ ಸ್ಫೋಟಗೊಂಡ ಕಾರಣ ಮನೆಯಲ್ಲಿದ್ದ ಅನೇಕ ವಸ್ತಗಳು ಸುಟ್ಟು ಕರಕಲಾಗಿವೆ.

    ಈ ಬಗ್ಗೆ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗು ಪ್ರವಾಹ: ಮಗಳು, ಅಕ್ಕನ ಶವ ಹುಡುಕಿಕೊಡುವಂತೆ ವ್ಯಕ್ತಿ ಕಣ್ಣೀರು

    ಕೊಡಗು ಪ್ರವಾಹ: ಮಗಳು, ಅಕ್ಕನ ಶವ ಹುಡುಕಿಕೊಡುವಂತೆ ವ್ಯಕ್ತಿ ಕಣ್ಣೀರು

    ಮಡಿಕೇರಿ: ಕೊಡಗು ಪ್ರವಾಹದ ಬಳಿಕ ಇದೀಗ ಜಿಲ್ಲೆಯಲ್ಲಿ ಮಳೆರಾಯ ಕೊಂಚ ಬಿಡುವು ನೀಡಿದ್ದು, ಸದ್ಯ ಶವಗಳ ಹುಡುಕಾಟ ನಡೆಯುತ್ತಿದೆ. ಈ ವೇಳೆ ವ್ಯಕ್ತಿಯೊಬ್ಬರು ತನ್ನ ಅಕ್ಕ ಹಾಗೂ ಮಗಳ ಶವವನ್ನು ಹುಡುಕಿಕೊಡುವಂತೆ ಕಣ್ಣೀರು ಹಾಕಿದ ದೃಶ್ಯ ಮನಕಲಕುವಂತಿತ್ತು.

    ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಜೋಡುಪಾಲ ಗುಡ್ಡ ಕುಸಿದು ನಾಲ್ವರು ಕೊಚ್ಚಿಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರ ಮೃತದೇಹಗಳು ಪತ್ತೆಯಾಗಿಲ್ಲ. ಹೀಗಾಗಿ ಅಲ್ಲಿನ ನಿವಾಸಿ ಸೋಮಯ್ಯ ತನ್ನ ಮಗಳು ಹಾಗೂ ಅಕ್ಕನ ಶವಗಳನ್ನ ಹುಡುಕಿಕೊಡುವಂತೆ ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ಮಗಳ ಮದುವೆಗೆ ಕೂಡಿಟ್ಟಿದ್ದ ಚಿನ್ನ, ಹಣ ಕೊನೆಗೂ ಪತ್ತೆ!

    ಮಹಾಮಳೆಗೆ ಗುಡ್ಡ ಕುಸಿದು ಸೋಮಯ್ಯ ಮಗಳು ಮಂಜುಳಾ, ಅಕ್ಕ ಗೌರಮ್ಮ, ಬಾವಾ ಬಸಪ್ಪ, ಅಕ್ಕನ ಮಗಳು ಮೋನಿಷಾ ಕೊಚ್ಚಿಹೋಗಿದ್ದರು. ಆಗಸ್ಟ್ 17ರಂದು ಮನೆ ಸಮೇತ ಈ ನಾಲ್ವರು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಬಳಿಕ ಆಗಸ್ಟ್ 17ರಂದು ಬಸಪ್ಪ ಮೃತದೇಹ, ಆ.18ಕ್ಕೆ ಸಿಕ್ಕಿದ ಮೋನಿಷಾ ಶವ ಪತ್ತೆಯಾಗಿತ್ತು. ಆದ್ರೆ ಸೋಮಯ್ಯ ಮಗಳು ಹಾಗೂ ಅಕ್ಕನ ಮೃತದೇಹ ಇಲ್ಲಿಯವರೆಗೂ ಪತ್ತೆಯಾಗಿಲ್ಲ. ಇದನ್ನೂ ಓದಿ: ಕೊಡಗಿನಲ್ಲಿ 12 ದಿನಗಳ ಬಳಿಕ ಶಾಲೆಗಳು ಆರಂಭ- ಮಕ್ಕಳ ಸಂಖ್ಯೆ ಕಂಡು ಕಣ್ಣೀರಿಟ್ಟ ಶಿಕ್ಷಕರು

    ವಿದ್ಯಾಭ್ಯಾಸಕ್ಕಾಗಿ ಮಗಳನ್ನ ಅಕ್ಕನ ಮನೆಯಲ್ಲಿ ಬಿಟ್ಟಿದ್ದೆ. ನಮ್ಮ ಮನೆಯಿಂದ ಶಾಲೆಗೆ ಹೋಗಬೇಕಾದ್ರೆ ಸುಮಾರು 4 ಕಿ.ಮೀ ನಡೆಯಬೇಕಿತ್ತು. ಅಲ್ಲದೇ ನಮ್ಮ ಗ್ರಾಮದಲ್ಲಿ ಒಂದೇ ಬಸ್ ಇರುವುದು. ಹೀಗಾಗಿ ನಾನು ಆಕೆಯನ್ನು ಅಕ್ಕನ ಮನೆಯಲ್ಲಿ ಶಾಲೆಗೆ ಹೋಗಲೆಂದು ಬಿಟ್ಟಿದ್ದೆ. ಆದ್ರೆ ಮೊನ್ನೆ ಗುಡ್ಡ ಕಲುಸಿತವಾಗಿದ್ದು, ಅಕ್ಕನ ಮೆನೆಯ ಹತ್ತಿರವಿದ್ದ ತೋಡು, ದೊಡ್ಡ ಹೊಳೆಯಾಗಿ ಬಂದು ಅವರ ಮನೆಯನ್ನೇ ಕೊಚ್ಚಿಕೊಂಡು ಹೋಗಿದೆ ಅಂತ ಭಾವುಕರಾದ್ರು.  ಇದನ್ನೂ ಓದಿ: ಗುಡ್ಡದ ಮೇಲಿನಿಂದ ಹಡಗಿನಂತೆ ಚಲಿಸಿದ ಮನೆ: ಅಜ್ಜಿ, ಮೊಮ್ಮಗು ಪಾರಾದ ಕಥೆ ಓದಿ

    ಸದ್ಯ ಕಾರ್ಯಾಚರಣೆ ನಡೆಯುತ್ತಿದೆ. ಆದ್ರೆ ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಅಂತ ಕೇಳ್ಪಟ್ಟೆ. ಘಟನಾ ಪ್ರದೇಶಕ್ಕೆ ನಮಗೂ ಹೋಗಲು ಸಾಧ್ಯವಿಲ್ಲದಂತಾಗಿದೆ ಅಂತ ಸೋಮಯ್ಯ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತನ್ನ ದುಃಖ ತೋಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶೀಘ್ರದಲ್ಲೇ ಮನೆ ರಿಪೇರಿ, ಸಂಪೂರ್ಣ ಕುಸಿದ ಮನೆಗೆ ಹೆಚ್ಚಿನ ಅನುದಾನ – ಯು.ಟಿ ಖಾದರ್

    ಶೀಘ್ರದಲ್ಲೇ ಮನೆ ರಿಪೇರಿ, ಸಂಪೂರ್ಣ ಕುಸಿದ ಮನೆಗೆ ಹೆಚ್ಚಿನ ಅನುದಾನ – ಯು.ಟಿ ಖಾದರ್

    ಮಡಿಕೇರಿ: ಪ್ರಕೃತಿಯ ವಿಕೋಪಕ್ಕೆ ಕೊಡಗು ಬಲಿಯಾಗಿದೆ. ಜಿಲ್ಲೆಯ ಜನ ನೋವಿನಲಿದ್ದಾರೆ. ರಾಜ್ಯ ಸರ್ಕಾರ ಕೊಡಗಿನ ಪರ ಇದ್ದು, ಮನೆ ರಿಪೇರಿಗೆ ಅನುದಾನವನ್ನು ಶೀಘ್ರದಲ್ಲೇ ನೀಡುತ್ತೇವೆ ಎಂದು ವಸತಿ ಸಚಿವ ಯು.ಟಿ ಖಾದರ್ ಭರವಸೆ ನೀಡಿದ್ದಾರೆ.

    ಮಡಿಕೇರಿ ಜಿಲ್ಲಾಡಳಿತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರೀ ಮಳೆಯಿಂದ ಪ್ರವಾಹ ಹಾಗೂ ಭೂಕುಸಿತ ಉಂಟಾದ ಪರಿಣಾಮ ಕೊಡಗಿನ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಸರ್ಕಾರ ಜಿಲ್ಲಾಡಳಿತ ಮೂಲಕ ಸಮರ್ಪಕ ಅನುದಾನ ನೀಡುತ್ತದೆ. ಮನೆ ರಿಪೇರಿಗೆ ಅನುದಾನ ಹಾಗೂ ಸಂಪೂರ್ಣ ಕುಸಿದ ಮನೆಗೆ ಹೆಚ್ಚಿನ ಅನುದಾನ ನೀಡುತ್ತೇವೆ ಅಂತ ಹೇಳಿದ್ರು.

    ಅವೈಜ್ಞಾನಿಕ ಮನೆ ನಿರ್ಮಿಸಬೇಡಿ:
    ಜಾಗ ಕಳೆದುಕೊಂಡವರಿಗೆ ಜಾಗ ಒದಗಿಸುವ ಯೋಜನೆ ಇದೆ. 7 ಕಡೆ ಜಾಗ ಗುರುತು ಮಾಡಲಾಗಿದೆ. ಹೌಸಿಂಗ್ ಕಾರ್ಪೋರೇಶನ್ ತಾತ್ಕಾಲಿಕವಾಗಿ ಜಿಲ್ಲೆಗೆ ಬರಲಿದೆ. ನೂತನ ತಂತ್ರಜ್ಞಾನದ ಮೂಲಕ ಮನೆ ಕಟ್ಟಲಾಗುವುದು. ಕುಶಾಲನಗರ ಭಾಗದಲ್ಲಿ ಜಾಗ ಗುರುತು ಮಾಡಲಾಗಿದೆ. ಮನೆ ಕಳೆದುಕೊಂಡವರ ಸಮೀಕ್ಷೆ ನಡೆಸಲಾಗುವುದು. ಕುಶಾಲನಗರದಲ್ಲಿ ಮನೆ ಕಳೆದುಕೊಂಡವರ 836 ಅರ್ಜಿಗಳು ಬಂದಿವೆ. ನಿಯಮಗಳನ್ನು ಕೂಡ ಜನ ಪಾಲಿಸಬೇಕು. ಜನ ಮನೆ ಕಟ್ಟುವ ಮುನ್ನ ಯೋಚನೆ ಮಾಡಬೇಕು. ಅವೈಜ್ಞಾನಿಕ ಮನೆ ನಿರ್ಮಾಣ ಮಾಡಬಾರದು ಅಂದ್ರು.

    ಕೊಡಗಿನ ಮರುನಿರ್ಮಾಣ:
    ಕಷ್ಟಕಾಲದಲ್ಲಿ ಮಾನವೀಯತೆಯನ್ನು ಮನುಕುಲ ಪ್ರದರ್ಶಿಸಿದೆ. ಕೊಡಗಿಗೆ ಜನಸಾಮಾನ್ಯರು ಸಹಾಯ ಮಾಡಿದ್ದಾರೆ. ಸಮಸ್ಯೆಯನ್ನು ವೈಜ್ಞಾನಿಕ ಪರಿಹಾರಿಸುತ್ತೇವೆ. ನಿರೀಕ್ಷೆಗಿಂತ ಉತ್ತಮವಾಗಿ ಕೊಡಗನ್ನು ಮರು ನಿರ್ಮಾಣ ಮಾಡ್ತೇವೆ ಅಂತ ಖಾದರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=KYPt_BTDW7s