Tag: hotstar

  • ಜಿಯೋ ಹಾಟ್‌ಸ್ಟಾರ್‌ ವಿಲೀನ | ಇನ್ಮುಂದೆ ಐಪಿಎಲ್‌ ಉಚಿತ ವೀಕ್ಷಣೆ ಇಲ್ಲ- ಎರಡನ್ನೂ ಸಬ್‌ಸ್ಕ್ರೈಬ್‌ ಮಾಡಿದವರ ಕಥೆ ಏನು?

    ಜಿಯೋ ಹಾಟ್‌ಸ್ಟಾರ್‌ ವಿಲೀನ | ಇನ್ಮುಂದೆ ಐಪಿಎಲ್‌ ಉಚಿತ ವೀಕ್ಷಣೆ ಇಲ್ಲ- ಎರಡನ್ನೂ ಸಬ್‌ಸ್ಕ್ರೈಬ್‌ ಮಾಡಿದವರ ಕಥೆ ಏನು?

    ಮುಂಬೈ: ಇನ್ನು ಮುಂದೆ ಐಪಿಎಲ್‌ ಕ್ರಿಕೆಟ್‌ (IPL Cricket) ಪಂದ್ಯಗಳನ್ನು ಜಿಯೋ ಸಿನಿಮಾದಲ್ಲಿ (Jio Cinema) ಉಚಿತವಾಗಿ ವೀಕ್ಷಣೆ ಮಾಡಲು ಸಾಧ್ಯವಿಲ್ಲ.

    ಕಳೆದ ಎರಡು ವರ್ಷಗಳಿಂದ ಜಿಯೋ ಸಿನಿಮಾದಲ್ಲಿ ಐಪಿಎಲ್‌ ಪಂದ್ಯಗಳನ್ನು ವೀಕ್ಷಣೆ ಮಾಡಬಹುದಾಗಿತ್ತು. ಆದರೆ ಇನ್ನು ಮುಂದೆ ಜಿಯೋ ಹಾಟ್‌ಸ್ಟಾರ್‌ (Jio Hotstar) ಆಪ್‌ನಲ್ಲಿ ಹಣ ಪಾವತಿಸಿ ಎಲ್ಲಾ ಲೈವ್‌ ಸ್ಟ್ರೀಮ್‌ಗಳನ್ನು ನೋಡಬಹುದು.

    ಡಿಸ್ನಿ-ರಿಲಯನ್ಸ್ (Disney Reliance Joint Venture) ವಿಲೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಜಿಯೋ ಸಿನಿಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ವಿಲೀನಗೊಂಡು ಜಿಯೋಸ್ಟಾರ್ ಆಗಿ ಬದಲಾಗಿದ್ದು ಶುಕ್ರವಾರ ಹೊಸ ಸ್ಟ್ರೀಮಿಂಗ್ ಅಪ್ಲಿಕೇಶನನ್ನು ಬಿಡುಗಡೆ ಮಾಡಲಾಗಿದೆ.

    ಮಾಧ್ಯಮಗಳಲ್ಲಿ ಬಂದಿರುವ ವರದಿ ಪ್ರಕಾರ ಲೈವ್‌ಸ್ಟ್ರೀಮ್‌ ಆರಂಭಗೊಂಡ ಕೆಲ ನಿಮಿಷ ಉಚಿತವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ. ಈ ಉಚಿತ ನಿಮಿಷಗಳು ಕೊನೆಗೊಂಡ ನಂತರ ಚಂದಾದಾರಿಕೆಯ ಆರಂಭಿಕ ಬೆಲೆ 149 ರೂ. ಆಗಿರುವ ಪುಟ ಕಾಣಿಸಲಿದೆ. ಈ ಹಿಂದೆಯೂ ಹಾಟ್‌ಸ್ಟಾರ್‌ ಬಳಕೆದಾರರಿಗೆ ಇದೇ ರೀತಿಯ ಆಫರ್‌ ನೀಡಿತ್ತು.  ಇದನ್ನೂ ಓದಿ: Champions Trophy | ವಿಜೇತ ತಂಡಕ್ಕೆ ಸಿಗಲಿದೆ 19.45 ಕೋಟಿ – ಗೆದ್ದ ಪ್ರತಿ ಪಂದ್ಯಕ್ಕೂ ಸಿಗುತ್ತೆ ಹಣ

    ಈಗಲೂ ಪ್ರವೇಶಿಸಬಹುದು:
    ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಜಿಯೋಸಿನಿಮಾ ಎರಡನ್ನೂ ಸಬ್‌ಸ್ಕ್ರೈಬ್‌ ಮಾಡಿದ ಚಂದಾದಾರರು ತಮ್ಮ ಯೋಜನೆಗಳು ಮತ್ತು ಪ್ರಯೋಜನಗಳನ್ನು ಈಗಲೂ ಪಡೆದುಕೊಳ್ಳಬಹುದು. ಜಿಯೋ ಸಿನಿಮಾ ಸಬ್‌ಸ್ಕ್ರೈಬ್‌ ಮಾಡಿದ ಚಂದದಾರರು ಈಗಲೂ ಆಪ್‌ ಪ್ರವೇಶಿಸಬಹುದು. ಆದರೆ ಕಂಟೆಂಟ್‌ ಜಿಯೋಹಾಟ್‌ಸ್ಟಾರ್‌ನಲ್ಲಿ ಪ್ಲೇ ಆಗುತ್ತದೆ. ಸಕ್ರಿಯ ಜಿಯೋಸಿನಿಮಾ ಚಂದಾದಾರಿಕೆಗಳನ್ನು ಹೊಂದಿರುವವರು ತಮ್ಮ ಯೋಜನೆಯ ಅವಧಿ ಮುಗಿಯುವವರೆಗೆ ಕಾಯಬೇಕು ಅಥವಾ ಹೊಸ ಪ್ಲಾಟ್‌ಫಾರ್ಮ್‌ಗೆ ಬದಲಾಯಿಸಬೇಕು. ಹೀಗಾಗಿ ಈಗಾಗಲೇ ಚಂದಾದಾರರಾಗಿರುವ ಬಳಕೆದಾರರು ತಮ್ಮ ಚಂದಾದಾರಿಕೆಗಳನ್ನು ಕಳೆದುಕೊಳ್ಳುವುದಿಲ್ಲ ಮತ್ತು ಅವರ ಆಯಾ ಪ್ಲ್ಯಾನ್‌ ಮುಗಿಯವರೆಗೂ ಜಿಯೋಹಾಟ್‌ಸ್ಟಾರ್ ಅನ್ನು ಉಚಿತವಾಗಿ ಪ್ರವೇಶಿಸಲು ಸಾಧ್ಯವಾಗುತ್ತದೆ. ಇದನ್ನೂ ಓದಿ:  UnSold ಪ್ಲೇಯರ್‌, ಟೂರ್ನಿ ಅರ್ಧದಲ್ಲೇ ಆರ್‌ಸಿಬಿ ಸೇರ್ಪಡೆ, ಸ್ಫೋಟಕ ಶತಕ ಸಿಡಿಸಿ ದಾಖಲೆ – ಪಾಟಿದಾರ್‌ಗೆ ನಾಯಕ ಪಟ್ಟ ಸಿಕ್ಕಿದ್ದು ಹೇಗೆ?

    ಭಾರೀ ಮೊತ್ತಕ್ಕೆ ಖರೀದಿ:
    2017-22ರ ಅವಧಿಯ ಐಪಿಎಲ್‌ ಟಿವಿ ಮತ್ತು ಡಿಜಿಟಲ್‌ ರೈಟ್ಸ್‌ ಅನ್ನು ಡಿಸ್ನಿ ಹಾಟ್‌ಸ್ಟಾರ್‌ 16,347 ಕೋಟಿ ರೂ. ನೀಡಿ ಪಡೆದುಕೊಂಡಿತ್ತು. 2023ರಲ್ಲಿ ಟಿವಿ ಮತ್ತು ಡಿಜಿಟಲ್‌ ರೈಟ್ಸ್‌ ವಿಂಗಡನೆ ಮಾಡಲಾಗಿತ್ತು. 2023-27ರ 410 ಪಂದ್ಯಗಳಿಗೆ ಡಿಜಿಟಲ್‌ ಹಕ್ಕುಗಳನ್ನು 23,758 ಕೋಟಿ ರೂ.ಗೆ ವಯಾಕಾಮ್ 18 ಪಡೆದುಕೊಂಡಿದ್ದರೆ, ಟಿವಿ ಹಕ್ಕುಗಳನ್ನು ವಾಲ್ಟ್ ಡಿಸ್ನಿ ಕಂಪನಿ 23,575 ಕೋಟಿ ರೂ. ನೀಡಿ ಖರೀದಿಸಿತ್ತು.

    ಯಾರ ಬಳಿ ಯಾವ ಹಕ್ಕು?
    ರಿಲಯನ್ಸ್‌ ಜಿಯೋ ಸಿನಿಮಾ ಐಪಿಎಲ್‌ ಕ್ರಿಕೆಟ್‌, ಚಳಿಗಾಲದ ಒಲಿಂಪಿಕ್ಸ್‌, ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌ ಹಕ್ಕು ಹೊಂದಿದೆ. ಡಿಸ್ನಿ ಹಾಟ್‌ಸ್ಟಾರ್‌ ಐಸಿಸಿ ಆಯೋಜಿಸುವ ಕ್ರಿಕೆಟ್‌ ಪಂದ್ಯಗಳು, ಇಂಗ್ಲಿಷ್ ಪ್ರೀಮಿಯರ್ ಲೀಗ್, ದೇಶೀಯ ಪ್ರೊ ಕಬಡ್ಡಿ ಲೀಗ್‌ನ ಹಕ್ಕುಗಳನ್ನು ಹೊಂದಿದೆ. ವಿಲೀನಗೊಂಡ ಬಳಿಕ ಎಲ್ಲಾ ಕ್ರೀಡೆಗಳನ್ನು ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.

    ಹಾಟ್‌ಸ್ಟಾರ್‌ನಲ್ಲಿ ಐಪಿಎಲ್‌ ಕ್ರಿಕೆಟ್‌ ವೀಕ್ಷಿಸಬೇಕಾದರೆ ಸಬ್‌ಸ್ಕ್ರೈಬ್‌ ಆಗಬೇಕಿತ್ತು. ಆದರೆ 2023 ರಲ್ಲಿ ಜಿಯೋ ರೈಟ್ಸ್‌ ಪಡೆದ ನಂತರ ಐಪಿಎಲ್‌ ಲೈವ್‌ ಸ್ಟ್ರೀಮಿಂಗ್‌ ಉಚಿತವಾಗಿ ನೀಡಿತ್ತು. ಇದರಿಂದಾಗಿ ಐಪಿಎಲ್‌ ವೀಕ್ಷಕರ ಸಂಖ್ಯೆ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಇದನ್ನೂ ಓದಿ: ಡ್ಯಾಂಡ್ರಫ್ ಜಾಹೀರಾತಿನಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿರುಷ್ಕಾ! – ಇಬ್ಬರ ಲವ್‌ ಸ್ಟೋರಿಯನ್ನು ನೀವು ಓದಲೇಬೇಕು

     

    ಜಂಟಿ ಉದ್ಯಮಕ್ಕೆ ಸಹಿ:
    2024ರ ಫೆಬ್ರವರಿಯಲ್ಲಿ ವಯಾಕಾಮ್ 18 ಮೀಡಿಯಾ ಪ್ರೈವೆಟ್‌ ಲಿಮಿಟೆಡ್ ಮತ್ತು ವಾಲ್ಟ್ ಡಿಸ್ನಿ ಕಂಪನಿ 70 ಸಾವಿರ ಕೋಟಿ ರೂ. ಮೊತ್ತದ ಜಂಟಿ ಉದ್ಯಮಕ್ಕೆ ಸಹಿ ಹಾಕಿದ್ದವು. ಈ ವಹಿವಾಟಿನ ಭಾಗವಾಗಿ ವಯಾಕಾಮ್ 18ಕ್ಕೆ ಸೇರಿದ ಮಾಧ್ಯಮ ಸಂಸ್ಥೆಗಳನ್ನು ಕೋರ್ಟ್ ಅನುಮೋದಿತ ವ್ಯವಸ್ಥೆ ಮೂಲಕ ಸ್ಟಾರ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನಲ್ಲಿ ವಿಲೀನಗೊಳಿಸಲು ಅನುಮತಿ ಸಿಕ್ಕಿತ್ತು.

    ರಿಲಯನ್ಸ್ ಇಂಡಸ್ಟ್ರೀಸ್‌, ವಯಾಕಾಮ್ 18 ಮೀಡಿಯಾ ಪ್ರೈವೆಟ್‌ ಲಿಮಿಟೆಡ್ ಮತ್ತು ವಾಲ್ಟ್ ಡಿಸ್ನಿ ಕಂಪನಿಯ ವಿಲೀನದ ಭಾಗವಾಗಿ ಪರವಾನಗಿಯನ್ನು ಸ್ಟಾರ್ ಇಂಡಿಯಾಗೆ ವರ್ಗಾಯಿಸಲು ಕೇಂದ್ರ ಸರ್ಕಾರ ಸೆಪ್ಟೆಂಬರ್‌ 27 ರಂದು ಅನುಮೋದನೆ ನೀಡಿತ್ತು. ಪರವಾನಗಿ ಹಸ್ತಾಂತರಕ್ಕೆ ಅನುಮೋದನೆ ನೀಡಿದ್ದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಇದು ಭಾರತೀಯ ಸ್ಪರ್ಧಾತ್ಮಕ ಆಯೋಗವು (CCI) ವಿಧಿಸಿದ ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದು ಆದೇಶದಲ್ಲಿ ತಿಳಿಸಿತ್ತು.

    ಡಿಸ್ನಿ ಮತ್ತು ರಿಲಯನ್ಸ್ ನಡುವಿನ ವಿಲೀನ ಒಪ್ಪಂದದಿಂದಾಗಿ 120 ಟಿವಿ ಚಾನೆಲ್‌ಗಳು ಮತ್ತು ಎರಡು ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳೊಂದಿಗೆ ಭಾರತದ ಅತಿದೊಡ್ಡ ಮನರಂಜನಾ ಕಂಪನಿಯಾಗಿ ಹೊರಹೊಮ್ಮಿದೆ.

  • JioHotstar ಡೊಮೈನ್‌ ಒಡೆತನ ನಮ್ಮದು ಎಂದ ದುಬೈನ ಮಕ್ಕಳು

    JioHotstar ಡೊಮೈನ್‌ ಒಡೆತನ ನಮ್ಮದು ಎಂದ ದುಬೈನ ಮಕ್ಕಳು

    ಮುಂಬೈ: JioHotstar ಡೊಮೈನ್‌ ಒಡೆತನ ನಮ್ಮದು ಎಂದು ದುಬೈನ (Dubai) ಇಬ್ಬರು ಮಕ್ಕಳು ಹೇಳಿಕೊಂಡಿದ್ದಾರೆ.

    ಹೌದು, ಈ ಮೊದಲು ಈ ಡೊಬೈನ್‌ (Domain) ಮಾಲೀಕತ್ವವನ್ನು ನಾನು ಹೊಂದಿದ್ದೇನೆ ಎಂದು ದೆಹಲಿಯ ಟೆಕ್ಕಿಯೊಬ್ಬರು ಹೇಳಿದ್ದರು. ಈಗ ದುಬೈನಲ್ಲಿ ನೆಲೆಸಿರುವ ಭಾರತ ಮೂಲದ ಜೈನಮ್ ಮತ್ತು ಜೀವಿಕಾ ಜೈನ್‌ ಈ ಡೊಮೈನ್‌ ನಮ್ಮದು ಎಂದಿದ್ದಾರೆ.

    ವೆಬ್‌ಸೈಟ್‌ನ ಲ್ಯಾಂಡಿಂಗ್ ಪುಟದಲ್ಲಿ ಮಕ್ಕಳ ಕಿರು ಪರಿಚಯವನ್ನು ಬರೆಯಲಾಗಿದ್ದು ಕೊನೆಗೆ ದೆಹಲಿಯಿಂದ ಯುವ ಸಾಫ್ಟ್‌ವೇರ್ ಡೆವಲಪರ್ ಅನ್ನು ಬೆಂಬಲಿಸಲು ಈ ಡೊಮೈನ್‌  ಖರೀದಿಸಿ ಮಾರಾಟಕ್ಕೆ ಇಟ್ಟಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೀಪಾವಳಿ ಕೊಡುಗೆ – 699 ರೂ.ಗೆ ಸಿಗಲಿದೆ ಜಿಯೋಭಾರತ್‌ 4ಜಿ ಫೋನ್

    ತಂತ್ರಜ್ಞಾನ ಕಲಿಕೆಯಲ್ಲಿ ನಾವು ಆಸಕ್ತಿ ಹೊಂದಿದ್ದು, ನ್ಯಾಯಯುತವಾಗಿ ಈ ಡೊಮೈನ್‌ ಮಾರಾಟ ಮಾಡಲು ನಮಗೆ ಯಾವುದೇ ಹಿಂಜರಿಕೆ ಇಲ್ಲ ಎಂದು ತಮ್ಮ ಯೂಟ್ಯೂಬ್‌ ವಿಡಿಯೋದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಜಿಯೋದಲ್ಲಿ ಐಪಿಎಲ್‌ ಬರಲ್ಲ, ಇನ್ನು ಮುಂದೆ ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರ!

    ಡೊಮೈನ್‌ ಹೆಸರು ಸುದ್ದಿಯಾಗುತ್ತಿರೋದು ಯಾಕೆ?
    ಡಿಸ್ನಿ-ರಿಲಯನ್ಸ್ (Disney Reliance Joint Venture) ವಿಲೀನ ಪ್ರಕ್ರಿಯೆ ಸುದ್ದಿ ಬರುತ್ತಿದ್ದಂತೆ JioHotstar ಡೊಮೈನ್‌ ಸುದ್ದಿಯಾಗತೊಡಗಿತ್ತು. ಈ ಸಂದರ್ಭದಲ್ಲಿ ದೆಹಲಿಯ ಟೆಕ್ಕಿಯೊಬ್ಬರು ನಾನು 2023 ರಲ್ಲಿ ಈ ಡೊಮೈನ್‌ ಖರೀದಿಸಿದ್ದೇನೆ. ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಓದಲು ನನಗೆ 1 ಕೋಟಿ ರೂ. ನೀಡಿದರೆ ನಾನು ಕೊಡುತ್ತೇನೆ ಎಂದಿದ್ದರು. ಆದರೆ ಜಿಯೋ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದರಿಂದ ಅವರು ಸುಮ್ಮನಾಗಿದ್ದರು. ಆದರೆ ಈಗ ಈ ಡೊಮೈನ್‌ ಅನ್ನು ಇಬ್ಬರು ಮಕ್ಕಳು ಖರೀದಿಸಿದ್ದು ಮತ್ತೆ ಟ್ವಿಸ್ಟ್‌ ಪಡೆದುಕೊಂಡಿದೆ.

     

  • ಜಿಯೋದಲ್ಲಿ ಐಪಿಎಲ್‌ ಬರಲ್ಲ, ಇನ್ನು ಮುಂದೆ ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರ!

    ಜಿಯೋದಲ್ಲಿ ಐಪಿಎಲ್‌ ಬರಲ್ಲ, ಇನ್ನು ಮುಂದೆ ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರ!

    ಮುಂಬೈ: ಇನ್ನು ಮುಂದೆ ಐಪಿಎಲ್‌ (IPL) ಸೇರಿದಂತೆ ಜಿಯೋ ಸಿನಿಮಾದಲ್ಲಿ (Jio Cinema) ಪ್ರಸಾರವಾಗುತ್ತಿದ್ದ ಎಲ್ಲಾ ಕ್ರೀಡೆಗಳ ನೇರ ಪ್ರಸಾರ ಹಾಟ್‌ಸ್ಟಾರ್‌ನಲ್ಲಿ (Disney+ Hotstar) ಮಾತ್ರ ಪ್ರಸಾರವಾಗಲಿದೆ.

    ಡಿಸ್ನಿ-ರಿಲಯನ್ಸ್ (Disney Reliance Joint Venture) ವಿಲೀನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಎಲ್ಲಾ ಲೈವ್‌ಸ್ಟ್ರೀಮ್‌ಗಳು (Stream Live Sports) ಹಾಟ್‌ಸ್ಟಾರ್‌ನಲ್ಲಿ ಮಾತ್ರ ಪ್ರಸಾರವಾಗಲಿದೆ ಎಂದು ಮೂಲಗಳನ್ನುಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ. ಈ ವಿಚಾರದ ಬಗ್ಗೆ ಎರಡೂ ಕಂಪನಿಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿವೆ.

    ಮುಂದಿನ ಜನವರಿಯಲ್ಲಿ ವಿಲೀನ ಪ್ರಕ್ರಿಯೆ ಪೂರ್ಣವಾಗಲಿದೆ. ವಿಲೀನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಜಿಯೋ ಸಿನಿಮಾದಲ್ಲಿರುವ ಕ್ರೀಡೆಗಳ ವಿಡಿಯೋಗಳು ಹಾಟ್‌ಸ್ಟಾರ್‌ನಲ್ಲಿ ಇರುತ್ತಾ ಅಥವಾ ಜಿಯೋ ಸಿನಿಮಾದಲ್ಲೇ ಇರುತ್ತಾ ಎನ್ನುವುದು ದೃಢಪಟ್ಟಿಲ್ಲ.

    ಕಳೆದ ಫೆಬ್ರವರಿಯಲ್ಲಿ ವಯಾಕಾಮ್ 18 ಮೀಡಿಯಾ ಪ್ರೈವೆಟ್‌ ಲಿಮಿಟೆಡ್ ಮತ್ತು ವಾಲ್ಟ್ ಡಿಸ್ನಿ ಕಂಪನಿ 70 ಸಾವಿರ ಕೋಟಿ ರೂ. ಮೊತ್ತದ ಜಂಟಿ ಉದ್ಯಮಕ್ಕೆ ಸಹಿ ಹಾಕಿದ್ದವು. ಈ ವಹಿವಾಟಿನ ಭಾಗವಾಗಿ ವಯಾಕಾಮ್ 18ಕ್ಕೆ ಸೇರಿದ ಮಾಧ್ಯಮ ಸಂಸ್ಥೆಗಳನ್ನು ಕೋರ್ಟ್ ಅನುಮೋದಿತ ವ್ಯವಸ್ಥೆ ಮೂಲಕ ಸ್ಟಾರ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನಲ್ಲಿ ವಿಲೀನಗೊಳಿಸಲು ಅನುಮತಿ ಸಿಕ್ಕಿತ್ತು.

    ರಿಲಯನ್ಸ್ ಇಂಡಸ್ಟ್ರೀಸ್‌, ವಯಾಕಾಮ್ 18 ಮೀಡಿಯಾ ಪ್ರೈವೆಟ್‌ ಲಿಮಿಟೆಡ್ ಮತ್ತು ವಾಲ್ಟ್ ಡಿಸ್ನಿ ಕಂಪನಿಯ ವಿಲೀನದ ಭಾಗವಾಗಿ ಪರವಾನಗಿಯನ್ನು ಸ್ಟಾರ್ ಇಂಡಿಯಾಗೆ ವರ್ಗಾಯಿಸಲು ಕೇಂದ್ರ ಸರ್ಕಾರ ಸೆಪ್ಟೆಂಬರ್‌ 27 ರಂದು ಅನುಮೋದನೆ ನೀಡಿತ್ತು. ಪರವಾನಗಿ ಹಸ್ತಾಂತರಕ್ಕೆ ಅನುಮೋದನೆ ನೀಡಿದ್ದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಇದು ಭಾರತೀಯ ಸ್ಪರ್ಧಾತ್ಮಕ ಆಯೋಗವು (CCI) ವಿಧಿಸಿದ ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದು ಆದೇಶದಲ್ಲಿ ತಿಳಿಸಿತ್ತು. ಇದನ್ನೂ ಓದಿ: ಟ್ರೋಫಿ ಗೆಲ್ಲಲು ಮಾಸ್ಟರ್‌ ಪ್ಲ್ಯಾನ್‌ – ನೂತನ ಮುಖ್ಯಕೋಚ್‌ ಆಗಿ ಹೇಮಂಗ್‌ ಬದಾನಿ ನೇಮಕ

    ಡಿಸ್ನಿ ಮತ್ತು ರಿಲಯನ್ಸ್ ನಡುವಿನ ವಿಲೀನ ಒಪ್ಪಂದದಿಂದಾಗಿ 120 ಟಿವಿ ಚಾನೆಲ್‌ಗಳು ಮತ್ತು ಎರಡು ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳೊಂದಿಗೆ ಭಾರತದ ಅತಿದೊಡ್ಡ ಮನರಂಜನಾ ಕಂಪನಿಯಾಗಿ ಹೊರಹೊಮ್ಮಿದೆ.

    ರಿಲಯನ್ಸ್‌ ಜಿಯೋ ಸಿನಿಮಾ ಐಪಿಎಲ್‌ ಕ್ರಿಕೆಟ್‌, ಚಳಿಗಾಲದ ಒಲಿಂಪಿಕ್ಸ್‌, ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌ ಹಕ್ಕು ಹೊಂದಿದೆ. ಡಿಸ್ನಿ ಹಾಟ್‌ಸ್ಟಾರ್‌ ಐಸಿಸಿ ಆಯೋಜಿಸುವ ಕ್ರಿಕೆಟ್‌ ಪಂದ್ಯಗಳು, ಇಂಗ್ಲಿಷ್ ಪ್ರೀಮಿಯರ್ ಲೀಗ್, ದೇಶೀಯ ಪ್ರೊ ಕಬಡ್ಡಿ ಲೀಗ್‌ನ ಹಕ್ಕುಗಳನ್ನು ಹೊಂದಿದೆ.

    2017-22ರ ಅವಧಿಯ ಐಪಿಎಲ್‌ ಟಿವಿ ಮತ್ತು ಡಿಜಿಟಲ್‌ ರೈಟ್ಸ್‌ ಅನ್ನು ಡಿಸ್ನಿ ಹಾಟ್‌ಸ್ಟಾರ್‌ 16,347 ಕೋಟಿ ರೂ. ನೀಡಿ ಪಡೆದುಕೊಂಡಿತ್ತು. 2023ರಲ್ಲಿ ಟಿವಿ ಮತ್ತು ಡಿಜಿಟಲ್‌ ರೈಟ್ಸ್‌ ವಿಂಗಡನೆ ಮಾಡಲಾಗಿತ್ತು. 2023-27ರ 410 ಪಂದ್ಯಗಳಿಗೆ ಡಿಜಿಟಲ್‌ ಹಕ್ಕುಗಳನ್ನು ವಯಾಕಾಮ್ 18 23,758 ಕೋಟಿ ರೂ.ಗೆ ಪಡೆದುಕೊಂಡಿದ್ದರೆ, ಟಿವಿ ಹಕ್ಕುಗಳನ್ನು ವಾಲ್ಟ್ ಡಿಸ್ನಿ ಕಂಪನಿ 23,575 ಕೋಟಿ ರೂ. ನೀಡಿ ಖರೀದಿಸಿತ್ತು.

    ಹಾಟ್‌ಸ್ಟಾರ್‌ನಲ್ಲಿ ಐಪಿಎಲ್‌ ಕ್ರಿಕೆಟ್‌ ವೀಕ್ಷಸಬೇಕಾದರೆ ಸಬ್‌ಸ್ಕ್ರೈಬ್‌ ಆಗಬೇಕಿತ್ತು. ಆದರೆ 2023 ರಲ್ಲಿ ಜಿಯೋ ರೈಟ್ಸ್‌ ಪಡೆದ ನಂತರ ಐಪಿಎಲ್‌ ಲೈವ್‌ ಸ್ಟ್ರೀಮಿಂಗ್‌ ಉಚಿತವಾಗಿ ನೀಡಿತ್ತು. ಇದರಿಂದಾಗಿ ಐಪಿಎಲ್‌ ವೀಕ್ಷಕರ ಸಂಖ್ಯೆ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿತ್ತು.

     

  • Record… Record… Record: ಇಂಡೋ-ಪಾಕ್‌ ಕದನದಲ್ಲಿ ಎಲ್ಲಾ ದಾಖಲೆ ಉಡೀಸ್‌!

    Record… Record… Record: ಇಂಡೋ-ಪಾಕ್‌ ಕದನದಲ್ಲಿ ಎಲ್ಲಾ ದಾಖಲೆ ಉಡೀಸ್‌!

    ಮುಂಬೈ: ಭಾರತ ಮತ್ತು ಪಾಕಿಸ್ತಾನ ನಡುವಿನ ರೋಚಕ ವಿಶ್ವಕಪ್‌ (World Cup Cricket) ಪಂದ್ಯದಲ್ಲಿ ಡಿಸ್ನಿಪ್ಲಸ್‌ ಹಾಟ್‌ಸ್ಟಾರ್‌ (Disney’s Hotstar) ಏಕಕಾಲಕ್ಕೆ 3.5 ಕೋಟಿ ಜನರಿಂದ ವೀಕ್ಷಣೆ ಕಂಡಿದ್ದು, ಹಿಂದಿನ ಎಲ್ಲಾ ಕ್ರಿಕೆಟ್‌ ಪಂದ್ಯಗಳ ದಾಖಲೆಗಳನ್ನು (Record) ಉಡೀಸ್‌ ಮಾಡಿದೆ.

    ಸೂಪರ್‌ ಸಂಡೇನಲ್ಲಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಭಾರತ (India) ಮತ್ತು ಪಾಕಿಸ್ತಾನ (Pakistan) ಪಂದ್ಯವು ರೋಚಕತೆಯಿಂದ ಕೂಡಿತ್ತು. ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿದ್ದ ಭಾರತ ತಂಡ, ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಎದುರಾಳಿ ಪಾಕಿಸ್ತಾನ ತಂಡಕ್ಕೆ ಬಿಟ್ಟುಕೊಟ್ಟಿತ್ತು. ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನದಿಂದ 191 ರನ್‌ಗಳಿಗೆ ಪಾಕ್‌ ತಂಡವನ್ನು ಕಟ್ಟಿಹಾಕಿದ್ದ ಭಾರತ ಬ್ಯಾಟಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿತು. ನಾಯಕ ರೋಹಿತ್‌ ಶರ್ಮಾ ಸ್ಫೋಟಕ ಬ್ಯಾಟಿಂಗ್‌ಗೆ ಪಾಕ್‌ ತಂಡ ಸಂಪೂರ್ಣ ಧ್ವಂಸವಾಯಿತು.

    ರೋಹಿತ್‌ ಶರ್ಮಾ (Rohit Sharma) 22ನೇ ಓವರ್‌ನಲ್ಲಿ (21.4 ಓವರ್‌) ಔಟಾಗಿ ಕೆಎಲ್‌ ರಾಹುಲ್‌ ಕ್ರೀಸ್‌ಗೆ ಬಂದಾಗ 3.2 ಕೋಟಿಯಿದ್ದ ವೀಕ್ಷಕರ ಸಂಖ್ಯೆ 3.5 ಕೋಟಿಗೆ ಏರಿತ್ತು. ಇದು ಈ ಹಿಂದಿನ ಎಲ್ಲ ದಾಖಲೆಗಳನ್ನ ಉಡೀಸ್‌ ಮಾಡಿದೆ. ಈ ಹಿಂದೇ ಇದೇ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ 2023ರ ಐಪಿಎಲ್‌ ಫೈನಲ್‌ ಪಂದ್ಯವನ್ನು ಜಿಯೋ ಸಿನಿಮಾದಲ್ಲಿ (Jio Cinema) ‌ ಏಕಕಾಲಕ್ಕೆ 3.2 ಕೋಟಿ ಜನರಿಂದ ವೀಕ್ಷಣೆ ಕಂಡಿದ್ದು ಈ ವರೆಗಿನ ದಾಖಲೆಯಾಗಿತ್ತು.  ಇದನ್ನೂ ಓದಿ: 1 ಲಕ್ಷ + ಅಭಿಮಾನಿಗಳ ಮುಂದೆ ಪಾಕ್‌ ಆಟಗಾರನನ್ನು ಟ್ರೋಲ್‌ಗೈದ ಕೊಹ್ಲಿ

    2023ರ ಐಪಿಎಲ್‌ ಆವೃತ್ತಿಯಲ್ಲಿ ಜಿಯೋಸಿನಿಮಾ ಸತತ 4ನೇ ಬಾರಿಗೆ ತನ್ನದೇ ವೀಕ್ಷಕರ ದಾಖಲೆ ಮುರಿದಿತ್ತು. ಜೊತೆಗೆ 2019ರ ಐಸಿಸಿ ಏಕದಿನ ವಿಶ್ವಕಪ್ ವೇಳೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದ ವೇಳೆ ನಿರ್ಮಿಸಲ್ಪಟ್ಟಿದ್ದ ವಿಶ್ವದಾಖಲೆಗಳೆಲ್ಲವನ್ನೂ ನುಚ್ಚುನೂರು ಮಾಡಿತ್ತು. 2013ರ ವಿಶ್ವಕಪ್‌ ಪಂದ್ಯವನ್ನು 2.53 ಕೋಟಿ ಮಂದಿ ವೀಕ್ಷಣೆ ಮಾಡಿದ್ದರು.

    https://twitter.com/DisneyPlusHS/status/1713186458260169023

    ಏಪ್ರಿಲ್ 17ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಪಂದ್ಯದ ವೇಳೆ ಎಂ.ಎಸ್ ಧೋನಿ ಅವರ ಆಟ ವೀಕ್ಷಿಸಲು 2.4 ಕೋಟಿ ವೀಕ್ಷಕರು ಜಿಯೋಸಿನಿಮಾದಲ್ಲಿ ಒಟ್ಟಾಗಿ ಸೇರಿದ್ದು ಹಿಂದಿನ ದಾಖಲೆ ಎನಿಸಿತ್ತು. ಅದಕ್ಕೂ ಮುನ್ನ ಏಪ್ರಿಲ್ 12ರಂದು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಗತವೈಭವ ನೆನಪಿಸುವಂಥ ಬ್ಯಾಟಿಂಗ್ ಪ್ರದರ್ಶಿಸಿದಾಗ ಗರಿಷ್ಠ 2.2 ಕೋಟಿ ವೀಕ್ಷಕರ ದಾಖಲೆ ಕಂಡಿತ್ತು.

    ಭಾನುವಾರ ನಡೆದ ವಿಶ್ವಕಪ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ ತಂಡ 42.5 ಓವರ್‌ಗಳಲ್ಲಿ 191 ರನ್‌ಗಳಿಗೆ ಆಲೌಟ್‌ ಆಯಿತು. ಗುರಿ ಬೆನ್ನತ್ತಿದ್ದ ಭಾರತ ತಂಡ 30.3 ಓವರ್‌ಗಳಲ್ಲೇ 192 ರನ್‌ ಗಳಿಸಿ ಭರ್ಜರಿ ಜಯ ಸಾಧಿಸಿತು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 7 ಸಾವಿರ ಉದ್ಯೋಗಿಗಳನ್ನ ಕೆಲಸದಿಂದ ತೆಗೆಯಲು ಮುಂದಾದ The Walt Disney

    7 ಸಾವಿರ ಉದ್ಯೋಗಿಗಳನ್ನ ಕೆಲಸದಿಂದ ತೆಗೆಯಲು ಮುಂದಾದ The Walt Disney

    ವಾಷಿಂಗ್ಟನ್: ಅಮೆರಿಕದ (US) ದಿ ವಾಲ್ಟ್ ಡಿಸ್ನಿ ಕಂಪನಿ (The Walt Disney Company), ವೆಚ್ಚದಲ್ಲಿ ಉಳಿತಾಯ ಮಾಡುವ ಸಲುವಾಗಿ ಏಕಾಏಕಿ 7 ಸಾವಿರ ಉದ್ಯೋಗಿಗಳನ್ನ ವಜಾಗೊಳಿಸಲು (Layoff) ಮುಂದಾಗಿದೆ. ಕಂಪನಿಗೆ ತಗಲುವ ವೆಚ್ಚ ಕಡಿಮೆ ಮಾಡಲು ಈ ನಿರ್ಧಾರ ಕೈಗೊಂಡಿದೆ.

    ವಿಶ್ವದ ದೈತ್ಯ ಟೆಕ್ ಕಂಪನಿಗಳಲ್ಲಿ (Tech Company) ಸರಣಿಯಾಗಿ ಉದ್ಯೋಗಿಗಳನ್ನು (Employees) ಕೆಲಸದಿಂದ ತೆಗೆಯುವ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಡಿಸ್ನಿ ಕೂಡಾ ಈ ನಿರ್ಧಾರ ಕೈಗೊಂಡಿದೆ. 2022ರ ನವೆಂಬರ್‌ನಲ್ಲಿ ಮಾಜಿ ಸಿಇಒ ಬಾಬ್ ಚಾಪೆಕ್ ಅವರಿಂದ ರಾಬರ್ಟ್ ಇಗರ್ (Robert Iger) ಅವರು ನೂತನ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ನಂತರ ಕಂಪನಿಯ ಆರ್ಥಿಕ ವೆಚ್ಚ ಕಡಿತಗೊಳಿಸಲು ನಿರ್ಧರಿಸಿದ್ದು, ಅದಕ್ಕಾಗಿ ಉದ್ಯೋಗಿಗಳನ್ನ ಕಡಿತಗೊಳಿಸಲು ಮುಂದಾಗಿದ್ದಾರೆ.

    ಡಿಸ್ನಿಯು ತನ್ನ ಪ್ರತಿಸ್ಪರ್ಧಿ ನೆಟ್‌ಫ್ಲಿಕ್ಸ್‌ ನಂತೆಯೇ (Netflix) ಚಂದಾದಾರರ ಬೆಳವಣಿಗೆಯಲ್ಲಿ ನಿಧಾನವಾಗಿದೆ. ಯುಎಸ್ ಮತ್ತು ಕೆನಡಾದಲ್ಲಿ ಕೇವಲ 2 ಲಕ್ಷ ಚಂದಾದಾರರನ್ನು ತಲುಪಿದ್ದು, ಒಟ್ಟು ಬಳಕೆದಾರರ ಸಂಖ್ಯೆ 46.6 ಮಿಲಿಯನ್‌ಗೆ ತಂದಿದೆ. ಹಾಟ್‌ಸ್ಟಾರ್ (Hotstar) ಹೊರತುಪಡಿಸಿ ಸ್ಟ್ರೀಮಿಂಗ್ ಸೇವೆಯು 12 ಲಕ್ಷ ಸದಸ್ಯರ ಸಂಖ್ಯೆಯಷ್ಟು ಹೆಚ್ಚಾಗಿದೆ. ಈ ನಡುವೆ ಇತರ ವೇದಿಕೆಗಳಾದ ಹುಲು ಮತ್ತು ಇಎಸ್‌ಪಿಎನ್ ಪ್ಲಸ್ ಬಳಕೆದಾರರಲ್ಲೂ ಕ್ರಮವಾಗಿ 8 ಮತ್ತು 6 ಲಕ್ಷ ಏರಿಕೆ ಕಂಡಿದೆ. ಇದನ್ನೂ ಓದಿ: 18 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ವಜಾಗೊಳಿಸಲಿದೆ amazon

    ಡಿಸ್ನಿ ತನ್ನ ತ್ರೈಮಾಸಿಕ ಬೆಳವಣಿಗೆಯನ್ನು ಗಮನಿಸಿದ ನಂತರ ಉದ್ಯೋಗಿಗಳನ್ನು ವಜಾಗೊಳಿಸುವ ನಿರ್ಧಾರ ಕೈಗೊಂಡಿದೆ. ವಿಶ್ವದಾದ್ಯಂತ ನಮ್ಮ ಉದ್ಯೋಗಿಗಳ ಪ್ರತಿಭೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಕಂಪನಿಯಾದ್ಯಂತ 5.5 ಶತಕೋಟಿ ಡಾಲರ್ ಉಳಿತಾಯದ ಗುರಿ ಹೊಂದಿದ್ದು, ಅದಕ್ಕಾಗಿ ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡಲು ನಿರ್ಧರಿಸಲಾಗಿದೆ ಎಂದು ಸಿಇಒ ಹೇಳಿದ್ದಾರೆ.

    ನಿರಂತರವಾಗಿ ಬೆಳವಣಿಗೆಯೊಂದಿಗೆ ಲಾಭದಾಯಕತೆ ಸಾಧಿಸುವುದು ನಮ್ಮ ಗುರಿಯಾಗಿದೆ. ಪ್ರಸ್ತುತ ನಮ್ಮ ಈ ನಿರ್ಧಾರದಿಂದ 2024 ಆರ್ಥಿಕ ವರ್ಷದ ವೇಳೆಗೆ ಡಿಸ್ನಿ ಪ್ಲಸ್ ಗರಿಷ್ಠ ಲಾಭದ ಗುರಿ ತಲುಪುತ್ತದೆ ಎಂದು ಇಗರ್ ಹೇಳಿದ್ದಾರೆ. ಆದರೆ, ಯಾವ ವಿಭಾಗಗಳಿಗೆ ಇದರ ಪರಿಣಾಮ ಬೀರುತ್ತದೆ ಅನ್ನುವ ಬಗ್ಗೆ ಬಹಿರಂಗಪಡಿಸಿಲ್ಲ. ಇದನ್ನೂ ಓದಿ: 1,337 ಕೋಟಿ ಪೈಕಿ ಶೇ.10 ರಷ್ಟು ದಂಡವನ್ನು ಠೇವಣಿ ಇಡಿ – ಗೂಗಲ್‌ಗೆ NCALT ಆದೇಶ

    ಈಗಾಗಲೇ ಅಮೆಜಾನ್ 18 ಸಾವಿರ, ಸೇಲ್ಸ್‌ಫೋರ್ಸ್‌ 8 ಸಾವಿರ, ಮೈಕ್ರೋಸಾಫ್ಟ್ (Microsoft) 10 ಸಾವಿರ ಹಾಗೂ ಗೂಗಲ್ 12 ಸಾವಿರ ಸೇರಿದಂತೆ ವಿವಿಧ ಕಂಪನಿಗಳು ಕಳೆದ ಒಂದು ವಾರದಲ್ಲಿ 50 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನ ಮನೆಗೆ ಕಳುಹಿಸಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟಿವಿ, ವೆಬ್‍ಸೈಟ್‍ಗಳಲ್ಲಿ ಬೆಟ್ಟಿಂಗ್ ಜಾಹೀರಾತು ಪ್ರಸಾರ ಮಾಡಬೇಡಿ: ಕೇಂದ್ರ ಖಡಕ್ ಸೂಚನೆ

    ಟಿವಿ, ವೆಬ್‍ಸೈಟ್‍ಗಳಲ್ಲಿ ಬೆಟ್ಟಿಂಗ್ ಜಾಹೀರಾತು ಪ್ರಸಾರ ಮಾಡಬೇಡಿ: ಕೇಂದ್ರ ಖಡಕ್ ಸೂಚನೆ

    ನವದೆಹಲಿ: ಟಿವಿ (TV), ವೆಬ್‍ಸೈಟ್‍ಗಳಲ್ಲಿ (Website) ಬೆಟ್ಟಿಂಗ್ ಜಾಹೀರಾತು (Gambling And Betting Ads) ಪ್ರಸಾರ ಮಾಡದಂತೆ ಕೇಂದ್ರ ಸರ್ಕಾರ ಖಡಕ್ ಸೂಚನೆ ರವಾನಿಸಿದೆ.

    ಸ್ಯಾಟಲೈಟ್ ಟಿವಿ (Satellite TV) ಮತ್ತು ಒಟಿಟಿ (OTT) ಪ್ಲಾಟ್‍ಫಾರ್ಮ್‍ಗಳಾದ ನೆಟ್‍ಫ್ಲಿಕ್ಸ್ (Netflix), ಹಾಟ್‍ಸ್ಟಾರ್ (Hotstar) ಮತ್ತು ಅಮೆಜಾನ್ ಪ್ರೈಮ್ ವೀಡಿಯೋ (Amazon Prime Video) ಮತ್ತು ಇತರ ಡಿಜಿಟಲ್ ಮಾಧ್ಯಮಗಳು ಪ್ರೇಕ್ಷಕರನ್ನು ಗುರಿಯಾಗಿಟ್ಟುಕೊಂಡು ಜೂಜು ಮತ್ತು ಬೆಟ್ಟಿಂಗ್ ಕುರಿತಾಗಿ ಉತ್ತೇಜಿಸುವ ಜಾಹೀರಾತುಗಳನ್ನು (Advertisements) ಪ್ರಸಾರ ಮಾಡುವುದನ್ನು ದೇಶದಲ್ಲಿ ತಕ್ಷಣವೇ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ದಂಡ ಹಾಕಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (Ministry of Information and Broadcasting) ಆದೇಶಿಸಿದೆ. ಇದನ್ನೂ ಓದಿ: ಮನೆಯಲ್ಲಿ ಕತ್ತು ಸೀಳಿ ಐಪಿಎಸ್‌ ಅಧಿಕಾರಿ ಹತ್ಯೆ

    ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಬೆಟ್ಟಿಂಗ್ ಸೈಟ್‍ಗಳ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ಸುದ್ದಿ ವೆಬ್‍ಸೈಟ್‍ಗಳು, ಒಟಿಟಿ ಪ್ಲಾಟ್‍ಫಾರ್ಮ್‍ಗಳು ಮತ್ತು ಖಾಸಗಿ ಉಪಗ್ರಹ ಚಾನೆಲ್‍ಗಳಿಗೆ ಸೂಚನೆ. ಯಾವುದೇ ರೀತಿಯ ಬೆಟ್ಟಿಂಗ್ ಮತ್ತು ಜೂಜಿನ ಕುರಿತಾಗಿ ಉತ್ತೇಜಿಸುವ ಜಾಹೀರಾತನ್ನು ಪ್ರಸಾರ ಮಾಡಬೇಡಿ. ಈ ಸೂಚನೆಯನ್ನು ಉಲ್ಲಂಘಿಸಿದರೆ ಅದಕ್ಕೆ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಶಿಸ್ತುಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಬ್ಯಾನ್ ಬೆನ್ನಲ್ಲೇ ರಸ್ತೆ ಮೇಲೆ ಪಿಎಫ್‍ಐಯಿಂದ ಎಚ್ಚರಿಕೆಯ ಬರಹ

    ಈಗಾಗಲೇ ಡಿಜಿಟಲ್ ಮಾಧ್ಯಮ ಮತ್ತು ಒಟಿಟಿ ಪ್ಲಾಟ್‍ಫಾರ್ಮ್‍ಗಳಲ್ಲಿ ಈ ರೀತಿಯ ಬೆಟ್ಟಿಂಗ್ ಜಾಹೀರಾತುಗಳು ಪ್ರಸಾರ ಆಗುತ್ತಿರುವುದು ಹೆಚ್ಚಾಗಿದೆ. ಹಾಗಾಗಿ ಇಂತಹ ಜಾಹೀರಾತುಗಳಿಗೆ ಕಡಿವಾಣ ಹಾಕಬೇಕಾಗಿದೆ. ಇನ್ಮುಂದೆ ಬೆಟ್ಟಿಂಗ್ ಜಾಹೀರಾತುಗಳಿಗೆ ಸಂಬಂಧಿಸಿದ ಯಾವುದೇ ರೀತಿ ಮಾಹಿತಿಯನ್ನು ಪ್ರಸಾರ ಮಾಡದಂತೆ ಸರ್ಕಾರ ಸೂಚಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಫೇಸ್‍ಬುಕ್  ಇಂಡಿಯಾದ ಎಂಡಿ ಆಗಿ ಹಾಟ್‍ಸ್ಟಾರ್ ಸಿಇಒ ಅಜಿತ್ ಮೋಹನ್ ನೇಮಕ

    ಫೇಸ್‍ಬುಕ್ ಇಂಡಿಯಾದ ಎಂಡಿ ಆಗಿ ಹಾಟ್‍ಸ್ಟಾರ್ ಸಿಇಒ ಅಜಿತ್ ಮೋಹನ್ ನೇಮಕ

    ಹೈದರಾಬಾದ್: ಹಾಟ್‍ಸ್ಟಾರ್ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಜಿತ್ ಮೋಹನ್ ಅವರನ್ನು ಫೇಸ್‍ಬುಕ್ ಸಂಸ್ಥೆ ತನ್ನ ಭಾರತದ ಘಟಕದ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮತ್ತು ಉಪಾಧ್ಯಕ್ಷರಾಗಿ (ವಿಪಿ) ನೇಮಕ ಮಾಡಿದೆ.

    ಭಾರತದ ಫೇಸ್‍ಬುಕ್ ಸಂಸ್ಥೆಯ ಬೆಳವಣಿಗೆಗೆ ಸಹಾಯಕವಾಗುವಂತೆ ಅಜಿತ್ ರನ್ನು ಆಯ್ಕೆ ಮಾಡಲಾಗಿದ್ದು, ಮುಂದಿನ ವರ್ಷದಿಂದ ಅವರು ಫೇಸ್‍ಬುಕ್ ಸಂಸ್ಥೆಯನ್ನು ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಭಾರತದಲ್ಲಿ ಫೇಸ್‍ಬುಕ್ ತನ್ನ ಸಂಬಂಧಗಳನ್ನು ಉತ್ತಮ ಪಡಿಸಿಕೊಳ್ಳಲು ಹಾಗೂ ಜನರೊಂದಿಗೆ ಉತ್ತಮ ಸಂಪರ್ಕ ಪಡೆಯಲು ಅವರ ಮುಂದಾಳತ್ವದಲ್ಲಿ ಸಂಸ್ಥೆ ನಡೆಯಲಿದೆ ಎಂದು ಫೇಸ್‍ಬುಕ್ ಸಂಸ್ಥೆ ಹೇಳಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಜಿತ್ ಅವರು, ಸಂಸ್ಥೆಯ ಜವಾಬ್ದಾರಿ ವಹಿಸಿಕೊಳ್ಳಲು ಸಂತಸವಾಗುತ್ತಿದೆ. ನನ್ನ ಮುಂದಿನ ಗುರಿ ಭಾರತದಲ್ಲಿ ಫೇಸ್‍ಬುಕ್ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವುದಾಗಿದೆ ಎಂದು ತಿಳಿಸಿದ್ದಾರೆ. ಅಜಿತ್ ಅವರು 2016 ರಿಂದ ಹಾಟ್‍ಸ್ಟಾರ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಭಾರತದಲ್ಲಿ ವಿಡಿಯೋ ಸ್ಟ್ರಿಮಿಂಗ್ ಸಂಸ್ಥೆಗಳೊಂದಿಗೆ ಪೈಪೋಟಿ ನಡೆಸುವ ಉದ್ದೇಶದಿಂದ ಅಜಿತ್ ಅವರನ್ನು ಆಯ್ಕೆ ಮಾಡಲಾಗಿದೆ.

    ಭಾರತದ ವಿವಿಧ ಸಮುದಾಯ, ಸಂಸ್ಥೆಗಳು, ವ್ಯವಹಾರ ಸಂಸ್ಥೆ ಹಾಗೂ ಸರ್ಕಾರದೊಂದಿಗೆ ಮತ್ತಷ್ಟು ಧನಾತ್ಮಕವಾಗಿ ಬೆಳೆಯಲು ಅಜಿತ್ ಅವರ ಅನುಭವ ನಮಗೆ ಸಹಾಯವಾಗಲಿದೆ ಎಂದು ಫೇಸ್‍ಬುಕ್ ಉಪಾಧ್ಯಕ್ಷ ಡೇವಿಡ್ ಫೇಚರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv