Tag: Hotel

  • ಇನ್ಮುಂದೆ ಹೋಟೆಲ್, ಏರ್‍ಪೋರ್ಟ್, ಮಾಲ್‍ಗಳಲ್ಲಿ ನೀರಿನ ಬಾಟಲಿಗಳಿಗೆ ಎಂಆರ್‍ಪಿ ಹಣವನ್ನು ಮಾತ್ರ ಕೊಡಿ

    ಇನ್ಮುಂದೆ ಹೋಟೆಲ್, ಏರ್‍ಪೋರ್ಟ್, ಮಾಲ್‍ಗಳಲ್ಲಿ ನೀರಿನ ಬಾಟಲಿಗಳಿಗೆ ಎಂಆರ್‍ಪಿ ಹಣವನ್ನು ಮಾತ್ರ ಕೊಡಿ

    ನವದೆಹಲಿ: ಇನ್ಮುಂದೆ ಹೋಟೆಲ್, ಏರ್‍ಪೋರ್ಟ್ ಹಾಗೂ ಮಾಲ್‍ಗಳಲ್ಲಿ ನೀರಿನ ಬಾಟಲಿಗಳು ಒಂದೇ ಬೆಲೆಯಲ್ಲಿ ಲಭ್ಯವಿರಲಿದೆ ಎಂದು ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಾಮ್‍ವಿಲಾಸ್ ಪಾಸ್ವಾನ್ ಹೇಳಿದ್ದಾರೆ.

    ಈ ಬಗ್ಗೆ ಸೋಮವಾರದಂದು ಟ್ವೀಟ್ ಮಾಡಿರೋ ಪಾಸ್ವಾನ್, ವಿವಿಧ ಕಡೆ ನೀರಿನ ಬಾಟಲಿಯನ್ನು ಬೇರೆ ಬೇರೆ ದರಗಳಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಇಲಾಖೆಯಡಿ ಬರುವ ಗ್ರಾಹಕರ ವೇದಿಕೆಗೆ ಅನೇಕ ದೂರುಗಳು ಬರುತ್ತಿವೆ. ಕಂಪೆನಿಗಳು ಒಂದೇ ರೀತಿಯ ಮಿನರಲ್ ವಾಟರ್ ಬಾಟಲಿಗಳನ್ನು ಏರ್‍ಪೋರ್ಟ್ ಮಾಲ್‍ಗಳಂತಹ ವಿವಿಧ ಸ್ಥಳಗಳಲ್ಲಿ ವಿವಿಧ ದರದಲ್ಲಿ ಮಾರಲು ಅವುಗಳ ಮೇಲೆ ಬೇರೆ ಬೇರೆ ಎಂಆರ್‍ಪಿಯನ್ನ ಮುದ್ರಿಸಿವೆ. ಈ ಬಗ್ಗೆ ವಿವರಣೆ ನೀಡುವಂತೆ ಕಂಪೆನಿಗಳಿಗೆ ಇಲಾಖೆ ಸೂಚಿಸಿದೆ ಎಂದು ಹೇಳಿದ್ದಾರೆ.

    ಅಲ್ಲದೆ ಇನ್ಮುಂದೆ ಏರ್‍ಪೋರ್ಟ್, ಮಾಲ್‍ಗಳು ಹಾಗೂ ಹೋಟೆಲ್‍ಗಳಲ್ಲಿ ಮಿನರಲ್ ವಾಟರ್ ಬಾಟಲಿಗಳು ಒಂದೇ ದರದಲ್ಲಿ ಸಿಗಲಿವೆ ಎಂದು ಪಾಸ್ವಾನ್ ಹೇಳಿದ್ದಾರೆ.

    ಕಳೆದ ವರ್ಷ ಅಕ್ಟೋಬರ್‍ನಲ್ಲಿ ಪಾಸ್ವಾನ್, ಏರ್‍ಪೋರ್ಟ್, ಮಲ್ಟಿಪ್ಲೆಕ್ಸ್ ಹಾಗೂ ಹೋಟೆಲ್‍ಗಳಲ್ಲಿ ಎಂಆರ್‍ಪಿಗಿಂತ ಹೆಚ್ಚಿನ ದರದಲ್ಲಿ ತಂಪು ಪಾನೀಯ ಹಾಗು ನೀರಿನ ಬಾಟಲಿಗಳನ್ನು ಮಾರಾಟ ಮಾಡಿದರೆ ಜೈಲು ಶಿಕ್ಷೆ ಹಾಗೂ ದಂಡ ಕಟ್ಟಬೇಕಾಗುತ್ತದೆ ಎಂದು ಹೇಳಿದ್ದರು. ಎಂಆರ್‍ಪಿ ಗಿಂತ ಹೆಚ್ಚಿನ ಹಣ ಪಡೆಯುವುದು ಕಾನೂನಿನ ಉಲ್ಲಂಘನೆಯಾಗುತ್ತದೆ. ಆದ್ರೂ ಏರ್‍ಪೋರ್ಟ್, ಮಲ್ಟಿಪ್ಲೆಕ್ಸ್ ಹಾಗೂ ಹೋಟೆಲ್‍ಗಳಲ್ಲಿ ನೀರಿನ ಬಾಟಲಿಗಳನ್ನ ಎಂಆರ್‍ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದು ನಿಲ್ಲಬೇಕು ಎಂದು ಹೇಳಿದ್ದರು.

    ನೀರಿನ ಬಾಟಲಿಗಳನ್ನು ನಿಗದಿತ ದರಕ್ಕಿಂತ ಶೇ.10 ರಿಂದ ಶೇ.20 ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗ್ತಿದೆ. ಕೆಲವೊಮ್ಮೆ ನೀರಿನ ಬಾಟಲಿಗಳ ಮೇಲೆ ಎಂಆರ್‍ಪಿಯನ್ನು ನಮೂದಿಸಿರುವುದಿಲ್ಲ. ಅಲ್ಲದೆ ತಂಪು ಪಾನೀಯವನ್ನು ಹೆಚ್ಚಿನ ಬೆಲೆಗೆ ಮಾರ್ತಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ನಮಗೆ ಎಲ್ಲಾ ರೀತಿಯ ಅಧಿಕಾರವಿದೆ. ಗ್ರಾಹಕರು ಈ ಬಗ್ಗೆ ದೂರು ನೀಡಿದ್ರೆ ಖಂಡಿತ ಕ್ರಮ ತೆಗೆದುಕೊಳ್ಳುತ್ತೇವೆ. ಅವರಿಗೆ ದಂಡ ಹಾಕಲಾಗುತ್ತದೆ. ಅಲ್ಲದೆ ಜೈಲು ಶಿಕ್ಷೆ ಕೂಡ ಇದೆ ಎಂದು ಪಾಸ್ವಾನ್ ಹೇಳಿದ್ದರು.

  • ಚೀನಾದ ಐಷಾರಾಮಿ ಹೋಟೆಲ್‍ನಲ್ಲಿ ಬೆಂಕಿ- ಮೂವರ ಸಾವು, ಹಲವರು ಸಿಲುಕಿರುವ ಶಂಕೆ

    ಚೀನಾದ ಐಷಾರಾಮಿ ಹೋಟೆಲ್‍ನಲ್ಲಿ ಬೆಂಕಿ- ಮೂವರ ಸಾವು, ಹಲವರು ಸಿಲುಕಿರುವ ಶಂಕೆ

    ಬೀಜಿಂಗ್: ಚೀನಾದ ನಾನ್ಚಾಂಗ್ ನಗರದ ಐಷಾರಾಮಿ ಹೋಟೆಲೊಂದರಲ್ಲಿ ಅಗ್ನಿ ಅವಘಢ ಸಂಭವಿಸಿದೆ.

    ಜಿಯಾಂಕ್ಸಿ ಪ್ರಾಂತ್ಯದ ಹೆಚ್‍ಎನ್‍ಎ ಪ್ಲಾಟಿನಂ ಮಿಕ್ಸ್ ಹೋಟೆಲ್‍ನ ಎರಡನೇ ಮಹಡಿಯಲ್ಲಿ ಇಂದು ಬೆಳಿಗ್ಗೆ ಸುಮಾರು 8 ಗಂಟೆ ವೇಳೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಸುಮಾರು 14 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಆಂಬುಲೆನ್ಸ್‍ಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಘಟನೆ ನಡೆದ ವೇಳೆ ಸುಮಾರು 10 ಕಾರ್ಮಿಕರು ಎರಡನೇ ಮಹಡಿಯಲ್ಲಿ ಅಲಂಕಾರ ಕೆಲಸ ಮಾಡುತ್ತಿದ್ದರು ಎಂದು ಹೋಟೆಲ್‍ನಿಂದ ರಕ್ಷಣೆ ಮಾಡಲಾದ ಮಹಿಳೆಯೊಬ್ಬರು ಹೇಳಿದ್ದಾರೆ. ಹೋಟೆಲ್‍ನೊಳಗೆ ಹಲವರು ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ.

  • ಹಸಿವು ಅಂತ ಬಂದೋರಿಗೆ ಹೊಟ್ಟೆ ತುಂಬಾ ಊಟ ಹಾಕ್ತಾರೆ ಕೋಲಾರದ ಅಪ್ಸರ್ ಪಾಷಾ

    ಹಸಿವು ಅಂತ ಬಂದೋರಿಗೆ ಹೊಟ್ಟೆ ತುಂಬಾ ಊಟ ಹಾಕ್ತಾರೆ ಕೋಲಾರದ ಅಪ್ಸರ್ ಪಾಷಾ

    – ಮಂಗಳವಾರ, ಶುಕ್ರವಾರ ಬಿರಿಯಾನಿ ಊಟ
    – 6 ಜನ ಅನಾಥರಿಗೆ ಮನೆಯಲ್ಲೇ ಆಶ್ರಯ

    ಕೋಲಾರ: ಜಿಲ್ಲೆಯ ಸೈಯದ್ ಅಪ್ಸರ್ ಪಾಷಾ ಎಂಬವರು ಹಸಿವಿನಿಂದ ನೊಂದು ಅನ್ನದ ಬೆಲೆ ತಿಳಿದವರು. ಮದರ್ ತೆರೇಸಾರಿಂದ ಆಕರ್ಷಿತರಾಗಿ ಅವರಂತೆಯೇ ನಡೆಯುವವರು. ಹಗಲು ರಾತ್ರಿಯೆನ್ನದೇ ಹಸಿದವರ ಹೊಟ್ಟೆ ತುಂಬಿಸುವವರು. ಜೊತೆಗೆ ತಮ್ಮ ಮನೆಯಲ್ಲೇ 6 ಮಂದಿ ಅನಾಥರಿಗೆ ಆಶ್ರಯದಾತರಾಗಿದ್ದಾರೆ.

    ಇವರು ಹೊಟೇಲ್ ಆರಂಭಿಸಿ ಅನಾಥರಿಗೆ ಊಟ ಹಾಕುತ್ತಿಲ್ಲ. ಬದಲಾಗಿ ಪುಟ್ಟ ಧರ್ಮಛತ್ರವನ್ನು ಸ್ಥಾಪಿಸಿ ಈ ಮೂಲಕ ಅನಾಥರು, ಬಡವರು, ವಯಸ್ಸಾದವರು, ಅಂಗವಿಕರು, ವಿದ್ಯಾರ್ಥಿಗಳು ಹೀಗೆ ಯಾರೇ ಹಸಿವು ಅಂತಾ ಬಂದರೂ ಅವರ ಹೊಟ್ಟೆ ತುಂಬಾ ಊಟ ಹಾಕುತ್ತಾರೆ. ಪ್ರತಿದಿನ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆ ತನಕ ಇವರಿಗೆ ಇದೇ ಕಾಯಕ.

    ಕೋಲಾರದ ಬಂಗಾರಪೇಟೆಯ ಈ ಪಬ್ಲಿಕ್ ಹೀರೋಗೆ 2 ಹೊಟೇಲ್‍ಗಳಿವೆ. ಅದರಲ್ಲಿ ಬಂದ ಶೇ.50 ರಷ್ಟು ಹಣವನ್ನು ಹೀಗೆ ಸಮಾಜಸೇವೆಗೆ ಬಳಸ್ತಾರೆ. ವಿಶೇಷತೆ ಅಂದ್ರೆ ಮಂಗಳವಾರ ಹಾಗೂ ಶುಕ್ರವಾರ ಬಿರಿಯಾನಿ ಊಟ ಮಾಡಿ ಬಡಿಸ್ತಾರೆ. ಈ ಸೇವೆಯಲ್ಲೇ ನೆಮ್ಮದಿ ಕಂಡುಕೊಂಡಿದ್ದಾರೆ.

    ಪಾಷಾ ಅವರ ಸಮಾಜಸೇವೆ ಇಷ್ಟೇ ಅಲ್ಲ. 6 ಜನ ಅನಾಥ ಮಕ್ಕಳನ್ನ ತಮ್ಮ ಮನೆಯಲ್ಲಿಯೇ ಸಾಕುತ್ತಿದ್ದಾರೆ. ರಾತ್ರಿ ನಿದ್ದೆ ಬರದಿದ್ದಾಗ ಪಟ್ಟಣದಲ್ಲಿ ಸಂಚಾರ ಮಾಡಿ ಬೀದಿ ಬದಿ ಮಲಗಿರುವ ನಿರ್ಗತಿಕರಿಗೆ ಕಂಬಳಿ ಕೊಡೋದರ ಜೊತೆ ತಮ್ಮ ಕೈಲಾದ ಸಹಾಯ ಮಾಡ್ತಾರೆ.

    ಎಲ್ಲಾ ಇರೋರಿಗೆ ದಾನ ಮಾಡುವ ಮನಸ್ಸಿರಲ್ಲ. ಕೆಲವರಿಗೆ ದಾನ ಮಾಡುವ ಮನಸ್ಸಿದ್ರೆ ದುಡ್ಡಿರಲ್ಲ. ಇಂತಹ ಕಾಲದಲ್ಲೂ ಹಸಿದ ಹೊಟ್ಟೆಗೆ ಅನ್ನ ಹಾಕೋ ಪಾಷಾ ಅವರಿಗೆ ದೊಡ್ಡ ಸಲಾಂ.

    https://www.youtube.com/watch?v=W_feeyDHo-k