Tag: Hotel

  • ಬೆಳ್ಳಂಬೆಳ್ಳಗೆ ಹೋಟೆಲ್‍ನಲ್ಲಿ ಅಗ್ನಿ ಅವಘಡ- 17 ಸಾವು, ಮೂವರು ಗಂಭೀರ

    ಬೆಳ್ಳಂಬೆಳ್ಳಗೆ ಹೋಟೆಲ್‍ನಲ್ಲಿ ಅಗ್ನಿ ಅವಘಡ- 17 ಸಾವು, ಮೂವರು ಗಂಭೀರ

    ನವದೆಹಲಿ: ಬೆಳ್ಳಂಬೆಳ್ಳಗೆ ನವದೆಹಲಿಯ ಕರೋಲ್ ಬಾಗ್ ಏರಿಯಾದ ಹೋಟೆಲ್‍ವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 17 ಜನ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಇಂದು ಬೆಳಗಿನ ಜಾವ ಸುಮಾರು 4 ಗಂಟೆಗೆ ಅರ್ಪಿತ್ ಪ್ಯಾಲೇಸ್ ಹೋಟೆಲ್‍ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬೆಳಗಿನ ಜಾವ ಅಗ್ನಿ ದುರಂತ ನಡೆದಿದ್ದರಿಂದ ಬಹುತೇಕ ನಿದ್ದೆಯ ಮಂಪರಿನಲ್ಲಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ 26 ಅಗ್ನಿ ಶಾಮಕದಳದ ವಾಹನಗಳು ಆಗಮಿಸಿದ್ದು, ಬೆಂಕಿ ನಂದಿಸುವಲ್ಲಿ ನಿರತವಾಗಿದ್ದವು.

    ಹೋಟೆಲ್‍ನಲ್ಲಿ ಬೆಂಕಿ ಹೊತ್ತುಕೊಂಡಿರುವುದುನ್ನು ನೋಡಿದ ಸ್ಥಳೀಯರು ತಮ್ಮ ಮೊಬೈಲ್ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಕೆಲವರು ಅಗ್ನಿ ಅವಘಡದಿಂದ ತಮ್ಮ ಪ್ರಾಣ ಉಳಿಸಿಕೊಳ್ಳಲು ಕಟ್ಟಡದಿಂದ ಹೊರ ಹಾರಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಇಂದು ಬೆಳಗ್ಗೆ 7 ಗಂಟೆಗೆ ಬೆಂಕಿಯನ್ನು ನಿಯಂತ್ರಿಸಲಾಗಿದೆ. 35 ಮಂದಿಯನ್ನು ರಕ್ಷಿಸಿದ್ದು, ಗಾಯಾಳುಗಳನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸಿರಾಡಲು ಸಾಧ್ಯವಾಗದೇ ಹಲವರು ಮೃತಪಟ್ಟಿದ್ದಾರೆ. ಅದರಲ್ಲಿ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನವರು ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಂಗ್ರೆಸ್ಸಿಗೆ ಬಿಗ್ ಶಾಕ್ ಕೊಡಲು ರಮೇಶ್ ಜಾರಕಿಹೊಳಿ ತಯಾರು!

    ಕಾಂಗ್ರೆಸ್ಸಿಗೆ ಬಿಗ್ ಶಾಕ್ ಕೊಡಲು ರಮೇಶ್ ಜಾರಕಿಹೊಳಿ ತಯಾರು!

    ಬೆಳಗಾವಿ: ಕಾಂಗ್ರೆಸ್ ಗೆ ಬಿಗ್ ಶಾಕ್ ಕೊಡಲು ಶಾಸಕ ರಮೇಶ್ ಜಾರಕಿಹೊಳಿ ತಯಾರು ನಡೆಸಿದ್ದು, ರಾತ್ರೋರಾತ್ರಿ ಮುಂಬೈ ಹೋಟೆಲ್ ಖಾಲಿ ಮಾಡಿದ್ದಾರೆ.

    ಶಾಸಕ ರಮೇಶ್ ಜಾರಕಿಹೊಳಿ ಅಷ್ಟೇ ಅಲ್ಲದೇ ಮಹೇಶ್ ಕುಮಟಳ್ಳಿ ಕೂಡ ರಾತ್ರೋರಾತ್ರಿ ಮುಂಬೈ ಹೋಟೆಲಿನಿಂದ ಹೊರಟ್ಟಿದ್ದು, ಈಗ ಬೆಂಗಳೂರಿನತ್ತ ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಳ್ಳಿ ಪ್ರಯಾಣ ಬೆಳಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಶುಕ್ರವಾರ ಸಂಜೆ ವಿಧಾನಸೌಧದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಈ ಸಭೆಗೆ ಇಬ್ಬರು ಹಾಜರಾಗುತ್ತಿದ್ದು, ಸಿಎಲ್‍ಪಿ ಸಭೆಯಲ್ಲಿ ಗದ್ದಲ ಎಬ್ಬಿಸಲು ರಮೇಶ್ ಜಾರಕಿಹೊಳಿ ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರನ್ನೇ ಟಾರ್ಗೆಟ್ ಮಾಡಿಕೊಂಡಿದ್ದು, ಸಭೆಯಲ್ಲಿ ರಾಜಕೀಯ ಹೈಡ್ರಾಮ ಮತ್ತು ಭಿನ್ನಮತ ಚಟುವಟಿಕೆಗಳಿಗೆ ಡಿಕೆಶಿ ಕಾರಣರಾಗಿದ್ದಾರೆ ಎಂದು ಆರೋಪಿಸುವ ಸಾಧ್ಯತೆಯಿದೆ.

    ಅಷ್ಟೇ ಅಲ್ಲದೇ ನಾವು ಈ ರೀತಿ ಊರು ಬಿಟ್ಟು ದೂರ ದೂರ ಅಡ್ಡಾಡುತ್ತಿದ್ದೇವೆ ಎನ್ನುವ ವಿಚಾರ ಹೈಕಮಾಂಡ್‍ಗೂ ಗೊತ್ತಾಗಬೇಕು. ಯಾಕೆ ಮುಂಬೈನಲ್ಲಿ ಇದ್ದೀವಿ? ಮುಂಬೈನಲ್ಲಿ ಏನೆಲ್ಲಾ ಚರ್ಚೆ ನಡೆಸಿದ್ದೇವೆ ಇದೆಲ್ಲವನ್ನು ಸಭೆಯ ಮುಂದಿಡಲಿದ್ದು, ಬಳಿಕ ತಮ್ಮ ಮುಂದಿನ ನಡೆ ಏನೆಂಬುದನ್ನು ಸಭೆಯಲ್ಲಿ ತಿಳಿಸುವ ಸಾಧ್ಯತೆ ಇದೆ.

    ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ ಅತೃಪ್ತ ಶಾಸಕರ ಸಂಧಾನಕ್ಕೆ ಗುರುವಾರ ಬೆಳಗಾವಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಿದ್ದರು. ಆದರೆ ಸಂಧಾನ ವಿಫಲವಾಗಿದೆ. ಸಿದ್ದರಾಮಯ್ಯ ಅವರು ಮುಂಬೈ ಹೋಟೆಲ್ ನಲ್ಲಿ ತಂಗಿದ್ದ ಅತೃಪ್ತ ಶಾಸಕರಿಗೆ ದೂರವಾಣಿ ಮುಖಾಂತರ ಸಂಪರ್ಕ ಸಾಧಿಸಲು ಯತ್ನಿಸಿದ್ದಾರೆ. ಅಷ್ಟೇ ಅಲ್ಲದೇ ರಮೇಶ್ ಜಾರಕಿಹೊಳಿಗೆ ಹಲವು ಬಾರಿ ಫೋನ್ ಮಾಡಿದ್ದಾರೆ. ಆದರೆ ಜಾರಕಿಹೊಳಿ ಸಿದ್ದರಾಮಯ್ಯರ ಫೋನ್ ಸ್ವೀಕರಿಸಿಲ್ಲ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಅತೃಪ್ತ ಶಾಸಕರನ್ನ ಮನವೊಲಿಸಿ ಸಿಎಲ್‍ಪಿ ಸಭೆಗೆ ಹಾಜರಾಗುವಂತೆ ಸಂಧಾನ ಮಾಡಲು ಹೈ ಕಮಾಂಡ್ ಆದೇಶ ನೀಡಿತ್ತು. ಆದರೆ ರಮೇಶ್ ಜಾರಕಿಹೊಳಿ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಸಬೂಬು ಹೇಳಿ ಸಿದ್ದರಾಮಯ್ಯ ಸುಮ್ಮನಾಗಿದ್ದಾರೆ. ಹೀಗಾಗಿ ಇಂದಿನ ಶಾಸಕಾಂಗ ಸಭೆಯಲ್ಲಿ ಅತೃಪ್ತರ ನಡೆ ಏನು ಎನ್ನುವುದು ಕುತೂಹಲಕಾರಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗಳೂರಿನ ಸೂಪರ್ ಸ್ಟಾರ್ ಹೋಟೆಲ್‍ನಲ್ಲಿ ಇವ್ರೇ ದೇವರು!

    ಬೆಂಗಳೂರಿನ ಸೂಪರ್ ಸ್ಟಾರ್ ಹೋಟೆಲ್‍ನಲ್ಲಿ ಇವ್ರೇ ದೇವರು!

    ಬೆಂಗಳೂರು: ಹೋಟೆಲ್, ಆಸ್ಪತ್ರೆ ಸೇರಿದಂತೆ ಪ್ರವೇಶ ದ್ವಾರದ ಬಳಿ ದೇವವ ವಿಗ್ರಹವನ್ನು ಅಥವಾ ಸುಂದರವಾದ ಮೂರ್ತಿ ಅಥವಾ ಹೂ ಕುಂಡವನ್ನು ಇರಿಸಲಾಗುತ್ತದೆ. ಸಾಮಾನ್ಯವಾಗಿ ಪ್ರವೇಶ ದ್ವಾರದಲ್ಲಿ ವಿಘ್ನ ನಿವಾರಕ ಗಣೇಶ್ ಮೂರ್ತಿಗಳನ್ನು ನೋಡಿರುತ್ತೇವೆ. ಸಿಲಿಕಾನ್ ಸಿಟಿಯ ಪ್ರತಿಷ್ಟಿತ ಹೋಟೆಲ್ ಪ್ರವೇಶ ದ್ವಾರದಲ್ಲಿ ಸ್ವಾಮಿ ನಿತ್ಯಾನಂದ ಫೋಟೋ ಕಟೌಟ್ ಇರಿಸಲಾಗಿದ್ದು, ಇದಕ್ಕೆ ಇಲ್ಲಿ ದಿನನಿತ್ಯ ಪೂಜೆ ನಡೆಯುತ್ತದೆ.

    ಬಿಡದಿಯ ನಿತ್ಯಾನಂದ ಸ್ವಾಮಿ ಅಧ್ಯಾತ್ಮಿಕ ವಿಚಾರಗಳಿಗಿಂತ ಬೇರೆ ಸುದ್ದಿಗಳಿಗೆ ಹೆಚ್ಚು ಸುದ್ದಿಯಾದಂತಹ ವ್ಯಕ್ತಿ. ಈಗಲೂ ಹಲವು ಪ್ರಕರಣಗಳು ಸ್ವಾಮಿಯ ಮೇಲಿವೆ. ಬೆಂಗಳೂರಿನ ಹೆಚ್‍ಎಎಲ್ ಬಳಿ ಇರುವ ಸ್ಟೆರ್ಲಿಂಗ್ ಮ್ಯಾಕ್ ಹೋಟೆಲ್‍ನಲ್ಲಿ ನಿತ್ಯಾನಂದ ಸ್ವಾಮಿ ಕಟೌಟ್ ಎರಡು ತ್ರಿಶೂಲದ ಮಧ್ಯೆ ದೊಡ್ಡ ಆಸನದಲ್ಲಿ ಪ್ರತಿಷ್ಟಾಪನೆ ಮಾಡಲಾಗಿದೆ.

    ಹೋಟೆಲ್ ಗೆ ಆಗಮಿಸುವ ಜನರು ನಿತ್ಯಾನಂದ ಸ್ವಾಮೀಜಿ ಕಟೌಟ್ ನೋಡಿ ಒಂದು ಕ್ಷಣ ಗಲಿಬಿಲಿಯಾಗುವುದುಂಟು. ಹೋಟೆಲ್ ಮಾಲೀಕರು ನಿತ್ಯಾನಂದ ಸ್ವಾಮಿಯ ಭಕ್ತರು ಎಂದು ಹೇಳಲಾಗುತ್ತಿದೆ. ಹೋಟೆಲ್ ಗೆ ತೆರಳಿದ ಗ್ರಾಹಕರೊಬ್ಬರು ನಿತ್ಯಾನಂದ ಸ್ವಾಮೀಜಿ ಕಟೌಟ್ ನೋಡಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಸಾಜ್ ಮಾಡುವಾಗ ಆಂಟಿಯನ್ನೇ ರೇಪ್ ಮಾಡಿದ ಯುವಕ

    ಮಸಾಜ್ ಮಾಡುವಾಗ ಆಂಟಿಯನ್ನೇ ರೇಪ್ ಮಾಡಿದ ಯುವಕ

    ಚಂಡೀಗಢ: 28 ವರ್ಷದ ಮಸಾಜ್ ಮಾಡುವ ಯುವಕ 54 ವರ್ಷದ ವಿದೇಶಿ ಮಹಿಳೆಯನ್ನು ಅತ್ಯಾಚಾರ ಮಾಡಿರುವ ಘಟನೆ ಹರಿಯಾಣದ ಐಟಿ ಪಾರ್ಕ್ ನಲ್ಲಿರುವ ಪಂಚತಾರಾ ಹೋಟೆಲ್ ನಲ್ಲಿ ನಡೆದಿದೆ.

    ಸಂತ್ರಸ್ತೆ ಡಿಸೆಂಬರ್ 27 ರಂದು ಪೊಲೀಸರಿಗೆ ಈ ಬಗ್ಗೆ ದೂರು ಕೊಟ್ಟಿದ್ದು, ತಾನು ಪಾದದ ಮಸಾಜ್ ಮಾಡಿಸಿಕೊಳ್ಳುವಾಗ ಸ್ಪಾದಲ್ಲಿ ಅತ್ಯಾಚಾರ ಮಾಡಿದ್ದಾನೆ ಎಂದು ದೂರಿದ್ದಾರೆ. ಸದ್ಯಕ್ಕೆ ಆರೋಪಿ ತಲೆ ಮರೆಸಿಕೊಂಡಿದ್ದು, ಆತನು ಉತ್ತರ ಪ್ರದೇಶದ ಬಿಜ್ನೋರ್ ನಿವಾಸಿ ಅಂತ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ವಿದೇಶಿ ಮಹಿಳೆ ಡಿಸೆಂಬರ್ 19 ರಂದು ತನ್ನ ಪಾಟ್ನರ್ ಜೊತೆ ಪ್ರವಾಸಿ ವೀಸಾದಲ್ಲಿ ಚಂಡೀಗಢಕ್ಕೆ ಬಂದಿದ್ದರು. ಬಳಿಕ ಚಂಡೀಗಢದ ಐಟಿ-ಪಾರ್ಕ್ ನ ಸ್ಟಾರ್ ಹೋಟೆಲೊಂದರಲ್ಲಿ ತಂಗಿದ್ದರು. ಮಹಿಳೆ ಅಲ್ಲಿನ ಸ್ಪಾದಲ್ಲಿ ಮಸಾಜ್ ಗೆಂದು ಹೋಗಿದ್ದಾಗ ಆರೋಪಿ ಅಸಭ್ಯವಾಗಿ ಮುಟ್ಟಿ, ನನ್ನ ಜೊತೆ ಕೆಟ್ಟದ್ದಾಗಿ ವರ್ತಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

    ಅದೇ ದಿನ ಮಹಿಳೆ ಹೋಟೆಲ್ ಆಡಳಿತ ಮಂಡಳಿಗೆ ಈ ಬಗ್ಗೆ ತಿಳಿಸಿದ್ದಾರೆ. ಆದರೆ ಡಿಸೆಂಬರ್ 27 ರಂದು ಶಿಮ್ಲಾದ ಪ್ರವಾಸಕ್ಕೆ ಹೋಗಿ ಅಲ್ಲಿಂದ ವಾಪಸ್ ಬಂದ ಬಳಿಕ ಪೊಲೀಸ್ ಠಾಣೆಗೆ ಬಂದು ದೂರನ್ನು ದಾಖಲಿಸಿದ್ದಾರೆ. ಅದೇ ದಿನ ಹೋಟೆಲ್ ಆಡಳಿತ ಮಂಡಳಿ ಆರೋಪಿಯನ್ನು ಕೆಲಸದಿಂದ ವಜಾ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಂತ್ರಸ್ತೆ ಸ್ಥಳೀಯ ಸಂಪ್ರದಾಯಗಳ ಬಗ್ಗೆ ತಿಳಿದುಕೊಳ್ಳಲು ಭಾರತಕ್ಕೆ ಭೇಟಿ ಕೊಡುತ್ತಿದ್ದರು. ಸದ್ಯಕ್ಕೆ ಆರೋಪಿ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಸಂತ್ರಸ್ತೆಗೆ ಈಗಾಗಲೇ ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಲಾಗಿದೆ. ಅಷ್ಟೇ ಅಲ್ಲದೇ ಸಂತ್ರಸ್ತೆಯ ಹೇಳಿಕೆಯನ್ನು ಮಾಜಿಸ್ಟ್ರೇಟ್ ಅವರು ರೆಕಾರ್ಡ್ ಮಾಡಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ನೀಲಾಂಬರಿ ಜಗ್ದಾಲೆ ತಿಳಿಸಿದ್ದಾರೆ.

    ಐಟಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಈ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಹೊಸ ವರ್ಷ ಆಚರಣೆಗೆ ಚಿಕ್ಕಮಗ್ಳೂರಿಗೆ ಹೋಗುವ ಮುನ್ನ ಈ ಸ್ಟೋರಿ ಓದಿ

    ಹೊಸ ವರ್ಷ ಆಚರಣೆಗೆ ಚಿಕ್ಕಮಗ್ಳೂರಿಗೆ ಹೋಗುವ ಮುನ್ನ ಈ ಸ್ಟೋರಿ ಓದಿ

    ಚಿಕ್ಕಮಗಳೂರು: ಹೊಸ ವರ್ಷವನ್ನ ಕಾಫಿನಾಡು ಚಿಕ್ಕಮಗಳೂರಲ್ಲಿ ಸ್ವಾಗತಿಸೋಣ ಅಂತ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್, ಹೋಟೆಲ್‍ನ ಬುಕ್ ಮಾಡಿದರೆ ಓಕೆ. ಹೋಗಿ ನೋಡೋಣ, ಮಾಡೋಣ, ಹುಡುಕೋಣ ಅನ್ನೋರಿದ್ದರೆ ಬರಲೇಬೇಡಿ. ಯಾಕೆಂದರೆ ಕಾಫಿನಾಡಿನ ಶೇಕಡ 99ರಷ್ಟು ಹೋಂ ಸ್ಟೇ, ರೆಸಾರ್ಟ್, ಲಾಡ್ಜ್ ಗಳು ಬುಕ್ಕಾಗಿವೆ. ಅದು ಒಂದೂವರೆ ಎರಡು ತಿಂಗಳ ಹಿಂದೆಯೇ ರಾಜ್ಯ, ಹೊರರಾಜ್ಯ, ವಿದೇಶಗಳಿಂದಲೂ ಪ್ರವಾಸಿಗರೂ ಚಿಕ್ಕಮಗಳೂರಲ್ಲಿ ಜಮಾಯಿಸಿದ್ದು, ಕಾಫಿನಾಡಲ್ಲೀಗ ಪ್ರವಾಸಿಗರ ಜಾತ್ರೆ ನಡೆಯುತ್ತಿದೆ.

    ಶನಿವಾರ, ಭಾನುವಾರ ವೀಕೆಂಡ್, ಮಂಗಳವಾರ ಹೊಸ ವರ್ಷ, ಸೋಮವಾರ ಅದಕ್ಕಾಗಿ ಸಿದ್ಧತೆ. ಪ್ರಕೃತಿಯ ಸೂರಿನಡಿ ಕಾಫಿನಾಡ ಸೌಂದರ್ಯ ಸವಿಯುತ್ತ ಹೊಸ ವರ್ಷಕ್ಕೆ ವೆಲ್‍ಕಂ ಹೇಳುವುದಕ್ಕೆ ಲಕ್ಷಾಂತರ ಪ್ರವಾಸಿಗರು ಕಾತರದಿಂದ ಕಾಯುತ್ತಿದ್ದಾರೆ. ಈ ವರ್ಷದ ಮಹಾಮಳೆಗೆ ಕೇರಳ-ಕೊಡಗು ಕೊಚ್ಚಿ ಹೋದ ಪರಿಣಾಮ ಕಾಫಿನಾಡಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ, ಸೀತಾಳಯ್ಯನಗಿರಿ, ಶೃಂಗೇರಿ, ಹೊರನಾಡು, ಕುದುರೆಮುಖ ಸೇರಿದಂತೆ ಪ್ರಮುಖ ಗಿರಿಶಿಖರಗಳಲ್ಲಿ ಪ್ರವಾಸಿಗರು ಸೋಮವಾರ ರಾತ್ರಿಗಾಗಿ ಹಾತೊರೆಯುತ್ತಿದ್ದಾರೆ.

    ಪ್ರವಾಸಿಗರು ಅಪರೂಪದ ಪ್ರಕೃತಿ ಸೌಂದರ್ಯ ಕಂಡು ಮಲೆನಾಡ ಮಡಿಲಲ್ಲಿ ಮೈಮರೆಯುತ್ತಿದ್ದಾರೆ. ಬೆಟ್ಟಗುಡ್ಡಗಳ ನಡುವೆ ಹಾದು ಹೋಗುವ ಮೋಡಗಳ ಕಣ್ಣಾಮುಚ್ಚಾಲೆ ಕಂಡು ಪುಳಕಿತರಾಗುತ್ತಿದ್ದು, ಶನಿವಾರ-ಭಾನುವಾರ ಶಾರದಾಂಭೆ ಹಾಗೂ ಅನ್ನಪೂರ್ಣೇಶ್ವರಿಯ ದರ್ಶನ ಪಡೆದು ಡಿಸೆಂಬರ್ 31ರ ರಾತ್ರಿಯನ್ನ ಎದುರು ನೋಡುತ್ತಿದ್ದಾರೆ. ಆದರೆ ಪ್ರವಾಸಿಗರ ಮೋಜು-ಮಸ್ತಿಯಿಂದ ಪ್ಲಾಸ್ಟಿಕ್, ಬಾಟಲಿಗಳು ಪ್ರಕೃತಿಯಲ್ಲಿ ಸೇರಿ ಇಲ್ಲಿನ ಸೌಂದರ್ಯ ಹಾಳಾಗುತ್ತಿದೆ ಎಂದು ಹೋಂ ಸ್ಟೇ ಮಾಲೀಕ ಗಿರೀಶ್ ಹೇಳಿದ್ದಾರೆ.

    ಕಾಂಕ್ರಿಟ್ ಕಾಡಿನ ಮಧ್ಯೆ ವಾಯು ಹಾಗೂ ಶಬ್ಧ ಮಾಲಿನ್ಯದಿಂದ ಕಳೆದು ಹೋಗಿದ್ದ ಪ್ರವಾಸಿಗರಿಗೆ ಭೂಲೋಕದ ಸ್ವರ್ಗ ಕಾಫಿನಾಡು ವಿಶಿಷ್ಟ ಅನುಭವ ನೀಡುತ್ತಿದೆ. ಪರ್ವತ ಶ್ರೇಣಿಗಳಲ್ಲಿ ನಿಮಿಷಕ್ಕೊಮ್ಮೆ ಬದಲಾಗುವ ಪ್ರಕೃತಿಯ ವಿಸ್ಮಯ ಕಂಡು ಪ್ರವಾಸಿಗರು ಮೈಮರೆಯುತ್ತಿದ್ದಾರೆ. ಆದರೆ ಪ್ರವಾಸಿಗರ ದಂಡನ್ನ ಕಂಡ ಹೋಂ ಸ್ಟೇ, ರೆಸಾರ್ಟ್ ಹಾಗೂ ಲಾಡ್ಜ್ ಮಾಲೀಕರು ಪ್ರವಾಸಿಗರಿಂದ ದುಬಾರಿ ಹಣ ಕೇಳುತ್ತಿದ್ದಾರೆ. ಈ ಮಟ್ಟದ ಪ್ರವಾಸಿಗರು ಬಂದಿದ್ದರಿಂದ ವಾಹನಗಳನ್ನ ಕಂಟ್ರೋಲ್ ಮಾಡುವುದಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಜಿಲ್ಲೆಯ ಬಹುತೇಕ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್ ಗಳು ಭರ್ತಿಯಾಗಿದ್ದು, ಬುಕ್ಕಿಂಗ್ ಕ್ಯಾನ್ಸಲ್ ಆದರಷ್ಟೆ ರೂಂ ಸಿಗುವದು ಎಂಬಂತಾಗಿದೆ. ಇನ್ನು ಹೋಂ ಸ್ಟೆ, ರೆಸಾರ್ಟ್ ಮಾಲೀಕರು ಕೂಡ ಬಗೆಬಗೆಯ ಭೋಜನ, ಡಿಜೆ ಪಾರ್ಟಿ, ಫೈರ್ ಕ್ಯಾಂಪ್ ಸೇರಿದಂತೆ ಪ್ರವಾಸಿಗರ ಬೇಡಿಕೆಯನ್ನ ಈಡೇರಿಸೋದಕ್ಕೆ ಸನ್ನದ್ಧರಾಗಿದ್ದಾರೆ ಎಂದು ಹೋಂ ಸ್ಟೇ ಮಾಲೀಕ ಗುರುದತ್ ತಿಳಿಸಿದ್ದಾರೆ.

    ಹೊಸ ವರ್ಷ ವಾರದ ಆರಂಭದ ದಿನದಲ್ಲಿ ಬಂದಿರುವುದು ಪ್ರವಾಸಿಗರಿಗೆ ಹಾಗೂ ಯುವಜನತೆಗೆ ಡಬಲ್ ಧಮಾಕ ಬಂದಂತಾಗಿದೆ. ವೀಕೆಂಡ್‍ನಲ್ಲಿ ಪ್ರಕೃತಿ ಹಾಗೂ ದೈವದ ದರ್ಶನ ಪಡೆದು ಡಿಸೆಂಬರ್ 31ರ ರಾತ್ರಿ ಕಾಯುತ್ತಿದ್ದಾರೆ. ಈ ಸುಮಧುರ ಘಳಿಗೆ ಲಕ್ಷಾಂತರ ಜನಕ್ಕೆ ಚಿಕ್ಕಮಗಳೂರಿನ ಪ್ರಕೃತಿ ಸೌಂದರ್ಯ ಸವಿಯುವ ಅವಕಾಶ ಕಲ್ಪಿಸಿದೆ. ಇನ್ನೂ ನಾಲ್ಕು ದಿನ ಕಾಫಿನಾಡು ಪ್ರವಾಸಿಗರ ನಾಡಾಗಿರುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೈಸೂರಿಗೆ ಹರಿದು ಬಂತು ಪ್ರವಾಸಿಗರ ದಂಡು…!

    ಮೈಸೂರಿಗೆ ಹರಿದು ಬಂತು ಪ್ರವಾಸಿಗರ ದಂಡು…!

    ಮೈಸೂರು: ಸಾಲು ಸಾಲು ರಜೆಯಲ್ಲಿ ಎಂಜಾಯ್ ಮಾಡುವುದ್ದಕ್ಕೆ ಅಂತಾ ಮೈಸೂರಿಗೆ ಪ್ರವಾಸಿಗರ ದಂಡೆ ಹರಿದು ಬಂದಿದೆ. ಇದರಿಂದ ಒಂದು ವಾರಗಳ ಕಾಲ ಮೈಸೂರಿನ ಬಹುತೇಕ ಹೋಟೆಲ್ ಗಳು ಭರ್ತಿಯಾಗಿದ್ದರೆ, ಮತ್ತೊಂದೆಡೆ ಹೆಚ್ಚಾದ ಪ್ರವಾಸಿಗರಿಂದ ಸ್ಥಳೀಯರು ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಿದ್ದಾರೆ.

    ಮೈಸೂರಿನ ಎಲ್ಲಾ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಪ್ರವಾಸಿಗರಿಗೆ ಹಾಟ್ ಫೇವರೆಟ್ ಜಾಗ ಅಂದರೆ ಅದು ಮೈಸೂರು. ಅದರಲ್ಲೂ ಮೈಸೂರಿನ ಅರಮನೆ, ಝೂ, ಚಾಮುಂಡಿ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇಂದು ಕ್ರಿಸ್ ಮಸ್ ಇರುವುದರಿಂದ ಮೈಸೂರಿನ ಸೇಂಟ್ ಫಿಲೋಮಿನಾ ಚರ್ಚ್ ಗೆ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಇದರಿಂದಾಗಿ ಇದೀಗ ಮೈಸೂರಿನ ಬಹುತೇಕ ಹೋಟೆಲ್ ಗಳು ಭರ್ತಿಯಾಗಿದೆ. 95% ರಷ್ಟು ಹೋಟೆಲ್ ಗಳು ಭಾನುವಾರದಿಂದ ಒಂದು ವಾರಗಳ ಕಾಲ ಭರ್ತಿಯಾಗಿದ್ದು ನಾಳೆ ಸಂಪೂರ್ಣ ಭರ್ತಿಯಾಗಲಿದೆ.

    ಮತ್ತೊಂದು ಕಡೆ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಬಂದಿರುವ ಕಾರಣ ಮೈಸೂರಿನ ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಕಿರಿಕಿರಿ ಅನುಭವಿಸಬೇಕಾಗಿದೆ. ಅದರಲ್ಲೂ ಸೋಮವಾರ ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಎರಡು ಕಿ.ಮೀ ನಷ್ಟು ಟ್ರಾಫಿಕ್ ಜಾಮ್ ಆಗಿತ್ತು. ಇದರಿಂದ ಸ್ಥಳೀಯರು ಒಂದು ಕಡೆ ನಮ್ಮೂರನ್ನು ನೋಡಲು ಪ್ರವಾಸಿಗರು ಬರುತ್ತಿದ್ದಾರೆ ಎನ್ನುವುದು ಖುಷಿಯಾದರೆ, ಮತ್ತೊಂದು ಕಡೆ ಟ್ರಾಫಿಕ್ ಕಿರಿಕಿರಿಯಿಂದ 10 ನಿಮಿಷದಲ್ಲಿ ತಲುಪುತಿದ್ದ ಸ್ಥಳಕ್ಕೆ ತೆರಳಲೂ ಅರ್ಧ ತಾಸು ಬೇಕಾಗಿದೆ ಎನ್ನುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನನ್ನ ಹುಡ್ಗಿನಾ ಯಾಕೆ ನೋಡ್ದೆ? ಅಂತ ಹೊಡೆದೇ ಬಿಟ್ಟ

    ನನ್ನ ಹುಡ್ಗಿನಾ ಯಾಕೆ ನೋಡ್ದೆ? ಅಂತ ಹೊಡೆದೇ ಬಿಟ್ಟ

    ಬೆಂಗಳೂರು: ಹೋಟೆಲ್‍ನಲ್ಲಿ ಊಟ ಪಾರ್ಸಲ್ ಮಾಡಿಸುವ ವೇಳೆ ತನ್ನ ಗೆಳತಿಯನ್ನ, ಬೇರೊಬ್ಬ ಯುವಕ ನೋಡುತ್ತಿದ್ದ ಎಂಬ ಕ್ಷುಲ್ಲಕ ವಿಚಾರದಲ್ಲಿ ಗಲಾಟೆ ನಡೆದಿರುವ ಘಟನೆ ನೆಲಮಂಗಲ ಪಟ್ಟಣದಲ್ಲಿ ನಡೆದಿದೆ.

    ನಗರದ ಹೊರವಲಯದ ನೆಲಮಂಗಲ ಪಟ್ಟಣ ನಂದಿಕೇಶ್ವರ ಹೋಟೆಲ್ ಮುಂಭಾಗ ಈ ಘಟನೆ ನಡೆದಿದ್ದು, ರಂಜಿತ್ ಎಂಬ ಯುವಕ ತನ್ನ ಗೆಳತಿ ಸುಚಿತ್ರಾ (ಹೆಸರು ಬದಲಾಯಿಸಲಾಗಿದೆ) ಎಂಬಾಕೆಯೊಂದಿಗೆ ಹೋಟೆಲ್‍ಗೆ ಊಟ ಪರ್ಸಲ್ ಮಾಡಿಸಿಕೊಳ್ಳಲು ಆಗಮಿಸಿದ್ದ. ಈ ವೇಳೆ ಹೋಟೆಲ್ ಬಳಿ ಇದ್ದ ಯುವಕ ಸುಚಿತ್ರಾರನ್ನು ನೋಡಿದ್ದಾನೆ. ಇದನ್ನೇ ಪ್ರಮುಖ ಕಾರಣವಾಗಿಸಿಕೊಂಡ ರಂಜಿತ್ ಯುವಕನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾನೆ. ಯುವಕ ತನ್ನ ತಪ್ಪು ಏನು ಇಲ್ಲ ಎಂದು ಹೇಳಿದರು ಕೇಳದ ರಂಜಿತ್ ಕಾಲಿನಿಂದ ಒದ್ದು ಮತ್ತೆ ಹಲ್ಲೆ ನಡೆಸಿದ್ದಾನೆ.

    ರಂಜಿತ್ ಯುವಕನ ಮೇಲೆ ಹಲ್ಲೆ ನಡೆಸಿದ ದೃಶ್ಯಗಳು ಹೋಟೆಲ್‍ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ವೇಳೆ ಹೋಟೆಲ್ ಮಾಲೀಕ ಕೂಡ ಮಧ್ಯ ಪ್ರವೇಶ ಮಾಡಿ ಜಗಳ ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ ರಂಜಿತ್ ಹೋಟೆಲ್ ಮಾಲೀಕನ ಮೇಲು ಹಲ್ಲೆ ನಡೆಸಿರುವುದನ್ನು ಕಾಣಬಹುದು. ಘಟನೆ ಕುರಿತು ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ರಂಜಿತ್ ಸೇರಿದಂತೆ ಹಲ್ಲೆಗೊಳಗಾದ ಯುವಕನನ್ನು ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೋಟೆಲ್ ಸಿಬ್ಬಂದಿಯ ಹೀನಕೃತ್ಯಕ್ಕೆ 707 ಕೋಟಿ ರೂ. ಪರಿಹಾರ ಕೇಳಿದ ಮಹಿಳೆ

    ಹೋಟೆಲ್ ಸಿಬ್ಬಂದಿಯ ಹೀನಕೃತ್ಯಕ್ಕೆ 707 ಕೋಟಿ ರೂ. ಪರಿಹಾರ ಕೇಳಿದ ಮಹಿಳೆ

    ನ್ಯೂಯಾರ್ಕ್: ಹೋಟೆಲ್‍ನಲ್ಲಿ ತಂಗಿದ್ದ ಮಹಿಳೆಯ ಸ್ನಾನ ಮಾಡುತ್ತಿರುವ ವಿಡಿಯೋವನ್ನು ಪೋರ್ನ್ ವೆಬ್‍ಸೈಟ್‍ಗೆ ಹಾಕಿದ್ದರ ಪರಿಣಾಮ ಸಂತ್ರಸ್ತ ಮಹಿಳೆ ಪರಿಹಾರವಾಗಿ ಬರೋಬ್ಬರಿ 707 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ.

    2015ರಲ್ಲಿ ಚಿಕಾಗೋದ ಹಿಲ್ಟನ್ ಹೋಟೆಲ್‍ನಲ್ಲಿ ಸಂತ್ರಸ್ತ ಮಹಿಳೆ ತಂಗಿದ್ದರು. ಈ ವೇಳೆ ಮಹಿಳೆ ನಗ್ನವಾಗಿ ಸ್ನಾನ ಮಾಡುತ್ತಿರುವುದನ್ನು ವಿಡಿಯೋ ಮಾಡಿ, ಪೋರ್ನ್ ವೆಬ್‍ಸೈಟ್‍ಗಳಿಗೆ ಹಾಕಿದ್ದರು. ಇದನ್ನು ಅರಿತ ಮಹಿಳೆ ಹೋಟೆಲ್ ಸಿಬ್ಬಂದಿ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.

    ಈ ಕುರಿತು ಸ್ಥಳೀಯ ಪತ್ರಿಕೆಗೆ ಪ್ರತಿಕ್ರಿಯಿಸಿರುವ ಅವರು, ನಾನು ಹಿಲ್ಟನ್ ಹೋಟೆಲ್‍ನಲ್ಲಿ ತಂಗಿದ್ದ ವೇಳೆ, ಸ್ನಾನ ಮಾಡುತ್ತಿರುವ ವಿಡಿಯೋವನ್ನು ಹೋಟೆಲ್ ಸಿಬ್ಬಂದಿಗಳು ರಹಸ್ಯವಾಗಿ ಚಿತ್ರೀಕರಿಸಿದ್ದಾರೆ. ಬಳಿಕ ಆ ವಿಡಿಯೋವನ್ನು ಪೋರ್ನ್ ಸೈಟ್‍ಗಳಿಗೆ ಹಾಕಿದ್ದಾರೆ. 2015ರಲ್ಲಿ ನಡೆದ ಘಟನೆ, ಇತ್ತೀಚೆಗೆ ನನ್ನ ಗಮನಕ್ಕೆ ಬಂದಿತ್ತು. ಇದರಿಂದಾಗಿ ನನಗೆ ಮಾನಸಿಕ ಹಾಗೂ ದೈಹಿಕವಾಗಿ ನೋವಾಗಿದೆ. ಅಲ್ಲದೇ ಪರಿಚಯಸ್ಥರ ಮುಂದೆ ತುಂಬಾ ಅವಮಾನವಾಗಿದೆ. ಹೀಗಾಗಿ ಹೋಟೆಲ್‍ನವರು 100 ಮಿಲಿಯನ್ ಡಾಲರ್ (707 ಕೋಟಿ ರೂ.)ಅನ್ನು ಪರಿಹಾರವಾಗಿ ನೀಡಬೇಕೆಂದು ಆಗ್ರಹಿಸಿದ್ದಾರೆ.

    2015ರ ಘಟನೆ ಮಹಿಳೆಗೆ ಗೊತ್ತಾಗಿದ್ದೇಗೆ?
    ಇತ್ತೀಚೆಗೆ ಮಹಿಳೆಯ ಸ್ನೇಹಿತ ಪೋರ್ನ್ ವೆಬ್‍ಸೈಟ್‍ನಲ್ಲಿ ಆಕೆಯ ವಿಡಿಯೋವನ್ನು ನೋಡಿ ಗುರುತು ಹಿಡಿದಿದ್ದಾನೆ. ತಕ್ಷಣ ಅದನ್ನು ಮಹಿಳೆಗೆ ಇ-ಮೇಲ್ ಮಾಡಿದ್ದ. ವಿಡಿಯೋವನ್ನು ನೋಡಿದ್ದ ಮಹಿಳೆ ತಾನು ಹಿಲ್ಟನ್ ಹೋಟೆಲ್‍ನಲ್ಲಿ ತಂಗಿದ್ದರ ಕುರಿತು ಜ್ಞಾಪಿಸಿಕೊಂಡು ಹೋಟೆಲ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೆಬೆಲ್ ಸ್ಟಾರ್ ಗೆ ಮೈಸೂರ್ ಪಾಕ್ ಅಂದ್ರೆ ಪಂಚಪ್ರಾಣ- ಮಂಡ್ಯ, ಬೆಂಗಳೂರು ಕಡೆಗೆ ಹೊರಟ್ರೆ ಪಾರ್ಸೆಲ್ ರೆಡಿ

    ರೆಬೆಲ್ ಸ್ಟಾರ್ ಗೆ ಮೈಸೂರ್ ಪಾಕ್ ಅಂದ್ರೆ ಪಂಚಪ್ರಾಣ- ಮಂಡ್ಯ, ಬೆಂಗಳೂರು ಕಡೆಗೆ ಹೊರಟ್ರೆ ಪಾರ್ಸೆಲ್ ರೆಡಿ

    ರಾಮನಗರ: ರೆಬೆಲ್ ಸ್ಟಾರ್ ಅಂಬರೀಶ್‍ಗೆ ಸಿಹಿ ತಿನಿಸುಗಳಲ್ಲಿ ಮೈಸೂರ್ ಪಾಕ್ ಅಂದರೆ ಪ್ರಿಯವಾದದ್ದು. ಅದರಲ್ಲೂ ರಾಮನಗರದ ಹೋಟೆಲ್‍ನ ಮೈಸೂರ್ ಪಾಕ್ ಅಂದರೆ ಅಚ್ಚುಮೆಚ್ಚಿನದ್ದಾಗಿತ್ತು. ಆ ನಗರ ಸಮೀಪ ಬರುತ್ತಿದ್ದಂತೆ ಮೈಸೂರ್ ಪಾಕ್ ಅಂಬಿಗಾಗಿ ರೆಡಿಯಾಗುತ್ತಿತ್ತು. ಅಂಬಿ ನಮ್ಮನ್ನಗಲುವ 15 ದಿನಗಳ ಮುಂಚೆ ಕೂಡ ಅಲ್ಲಿಯ ಮೈಸೂರ್ ಪಾಕ್‍ನ್ನ ಸವಿದಿದ್ದರು.

    ರೆಬೆಲ್ ಸ್ಟಾರ್ ಅಂಬರೀಶ್‍ಗೆ ಹೋದಲ್ಲಿ ಬಂದಲ್ಲೆಲ್ಲಾ ಹಾಗೂ ದೇಶ-ವಿದೇಶಗಳಲ್ಲೂ ಸ್ನೇಹಿತರು ಇದ್ದಾರೆ. ಮಂಡ್ಯ, ಮೈಸೂರು ಮಾತ್ರವಲ್ಲದೇ ಅಂಬಿಗೆ ರೇಷ್ಮೆನಗರಿ ರಾಮನಗರದಲ್ಲೂ ಉತ್ತಮ ಬಾಂಧವ್ಯವಿದೆ. ಊಟ, ತಿಂಡಿ-ತಿನಿಸಿನ ವಿಚಾರದಲ್ಲೂ ಅಂಬಿಗೆ ರಾಮನಗರ ಸಖತ್ ಪ್ರಿಯವಾಗಿತ್ತು. ಅದರಲ್ಲೂ ಚನ್ನಪಟ್ಟಣದಲ್ಲಿ ನಾಟಿಕೋಳಿ-ಮುದ್ದೆ ಇಷ್ಟಪಟ್ಟರೆ, ರಾಮನಗರದಲ್ಲಿ ಸಿಹಿ ತಿನಿಸು ಮೈಸೂರ್ ಪಾಕ್‍ನ್ನು ಇಷ್ಟಪಟ್ಟು ತಿನ್ನುತ್ತಿದ್ದರು.

    ಬೆಂಗಳೂರಿನಿಂದ ಮಂಡ್ಯ ಇಲ್ಲವೇ ಮೈಸೂರು ಕಡೆಗೆ ಅಂಬಿ ಹೊರಟರೆ ಅವರ ಪರಿಚಿತರು ನಗರದಲ್ಲಿನ ಹೋಟೆಲ್ ಜನಾರ್ದನ್‍ಗೆ ಹೋಗಿ ಮೈಸೂರ್ ಪಾಕ್ ಪಾರ್ಸೆಲ್ ಮಾಡಿ ತೆಗೆದುಕೊಂಡು ಹೋಗುತ್ತಿದ್ದರು. ನಮ್ಮನ್ನಗಲಿದ 15 ದಿನಗಳ ಮುಂಚೆ ರಾಮನಗರಕ್ಕೆ ಆಗಮಿಸಿದ್ದ ಅಂಬರೀಶ್ ತಮ್ಮ ಪರಿಚಿತರನ್ನ ಕಳಿಸಿ 2 ಕೆಜಿಯಷ್ಟು ಮೈಸೂರ್ ಪಾಕ್ ಪಾರ್ಸೆಲ್ ತೆಗೆದುಕೊಂಡಿದ್ದರು.

    1980ರ ಕಾಲದಲ್ಲೇ ಅಂಬಿ ಈ ಹೋಟೆಲ್‍ನ ಮೈಸೂರ್ ಪಾಕ್‍ನ ರುಚಿಯನ್ನ ಸವಿದಿದ್ದರು. 1997ರಲ್ಲಿ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಂಬರೀಶ್ ಎಂ.ಜಿ ರಸ್ತೆಯಲ್ಲಿ ಪ್ರಚಾರ ಮಾಡುವ ವೇಳೆ ಮೈಸೂರ್ ಪಾಕ್‍ನ್ನ ಹೊಗಳಿದ್ದರು. ಅಲ್ಲದೇ ಸ್ಥಳದಲ್ಲಿಯೇ ಮೈಸೂರ್ ಪಾಕ್ ಬೇಕೆಂದು ತರಿಸಿಕೊಂಡು ಸವಿದಿದ್ದರು. ಇಷ್ಟು ಮಾತ್ರವಲ್ಲದೇ ಆಪ್ತಮಿತ್ರ ವಿಷ್ಣು ದಂಪತಿಗೂ ಜನಾರ್ದನ್ ಹೋಟೆಲ್‍ನ ಮೈಸೂರು ಪಾಕ್ ರುಚಿ ತೋರಿಸಿದ್ದರು.

    ಇನ್ನೊಂದು ದಿನ ರಾಮದೇವರ ಬೆಟ್ಟದಲ್ಲಿ ‘ವಂದೇ ಮಾತರಂ’ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಆಗ 1,500 ಕಲಾವಿದರಿಗೆ ಸ್ವಂತ ಖರ್ಚಿನಲ್ಲಿ ಜನಾರ್ದನ್ ಹೋಟೆಲ್‍ನಿಂದ ಮೈಸೂರ್ ಪಾಕ್ ತರಿಸಿ ಕೊಡಿಸಿದ್ದರು. ಕಳೆದ 66ನೇ ವರ್ಷದ ಹುಟ್ಟುಹಬ್ಬದ ವೇಳೆ ಹೆದ್ದಾರಿಯಲ್ಲಿಯೇ ತಮ್ಮ ಕಾರ್ ನಿಲ್ಲಿಸಿ ಗೆಳೆಯರನ್ನು ಕಳುಹಿಸಿ ಮೈಸೂರ್ ಪಾಕ್ ತರಿಸಿಕೊಂಡಿದ್ದರು. ಹೋಟೆಲ್ ಜನಾರ್ದನ್‍ನ ಮೈಸೂರ್ ಪಾಕ್ ಅಂದರೆ ಅಂಬಿಗೆ ಸಾಕಷ್ಟು ಪ್ರಿಯವಾಗಿತ್ತು. ಏನೇ ಸ್ಪೆಷಲ್ ಇದ್ದರೂ ಮೈಸೂರ್ ಪಾಕ್ ಬೇಕು ಎಂದು ಕೇಳುತ್ತಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಲಕ್ಕಿ ನಂಬರ್ ರೂಂನಲ್ಲಿ ಅಂಬಿ ಕಳೆದಿದ್ದು ಹದಿನೇಳು ವರ್ಷ!

    ಲಕ್ಕಿ ನಂಬರ್ ರೂಂನಲ್ಲಿ ಅಂಬಿ ಕಳೆದಿದ್ದು ಹದಿನೇಳು ವರ್ಷ!

    -ನಂಬರ್ 412 ಬದಲಿಸಿದಂತೆ ಅಂಬಿ ಭವಿಷ್ಯ!

    ಬೆಂಗಳೂರು: ನಟ ಅಂಬಿ ಆಗಿನ್ನೂ ಗಾಂಧಿನಗರ ಕಲರ್ ಫುಲ್ ಲೋಕದೊಳಗೆ ಎಂಟ್ರಿ ಕೊಡುವ ಟೈಂ. ಅಷ್ಟೇನೂ ಸಿನಿಮಾ ಕೈ ಹತ್ತಿರಲಿಲ್ಲ. ಅಂಬಿ ಯಾವಾಗ ವಿಠಲ ಮಲ್ಯ ರಸ್ತೆಯ ಈ ವುಡ್ ಲ್ಯಾಂಡ್ ಹೋಟೆಲ್ ನ 412 ನಂಬರ್ ಕೋಣೆ ಪಡೆದು ತಂಗಲು ಶುರುಮಾಡಿದ್ರೋ ಆಗ ಅಂಬಿ ಬದುಕು ಬದಲಾಯ್ತಂತೆ. ಅಂಬಿ ಅಂದು ಜ್ಯೋತಿಷ್ಯರ ಸಲಹೆಯ ಮೇರೆಗೆ ಅದೇ ಕೋಣೆಯಲ್ಲಿ ಫಿಕ್ಸ್ ಆಗಿದ್ದರಂತೆ. ಈ ರೂಂನಲ್ಲಿ ಅಂಬಿ ಬರೋಬ್ಬರಿ ಹದಿನೇಳು ವರ್ಷ ಇದ್ದರು.

    ಹೋಟೆಲ್ ಸಿಬ್ಬಂದಿ ಅಪ್ಪಿ ತಪ್ಪಿ ಬೇರೆಯವರಿ ಈ ಕೋಣೆ ಕೊಟ್ಟರೆ ಅಂಬರೀಶ್ ಫುಲ್ ಗರಂ ಆಗುತ್ತಿದ್ದರಂತೆ. ನನ್ ಲಕ್ಕಿ ರೂಂ ಕಣ್ರೋ ಯಾಕ್ ಬೇರೆಯವರಿಗೆ ಕೊಟ್ಟಿದ್ರಿ ಅಂತ ಗಲಾಟೆ ಮಾಡುತ್ತಿದ್ರಂತೆ. ಇದರಿಂದ ವುಡ್ ಲ್ಯಾಂಡ್ ಹೋಟೆಲ್ ನಲ್ಲಿ 412. ರೂಂ ಅಂಬಿಗೆ ಫಿಕ್ಸ್ ಆಗಿತ್ತಂತೆ. ಸಿಬ್ಬಂದಿಗಳನ್ನು ಕಂದರೆ ಸಿಕ್ಕಾಪಟ್ಟೆ ಇಷ್ಟಪಡುವ ಅಂಬರೀಶ್ ತಮ್ಮ ಸಿನಿಮಾದ ಟಿಕೆಟ್ ಕೊಟ್ಟು ಫಿಲ್ಮ್ ನೋಡಲು ಕಳುಹಿಸುತ್ತಿದ್ದರು ಎಂದು ಅಲ್ಲಿಯ ಕೆಲಸಗಾರ ಆರುಮುಗಂ ನೆನಪು ಮಾಡಿಕೊಳ್ಳುತ್ತಾರೆ.

    ಅಂಬರೀಶ್ ಅವರನ್ನು ಭೇಟಿಯಾಗಲು ನಟರಾದ ವಿಷ್ಣುವರ್ಧನ್, ರಜನೀಕಾಂತ್ ಇಲ್ಲಿಗೆ ಬರುತ್ತಿದ್ದರಂತೆ. ದೀಪಾವಳಿ ಬಂದರೆ ಇಲ್ಲಿನ ಸಿಬ್ಬಂದಿಗಳಿಗೆ ಬಟ್ಟೆ ಕೊಟ್ಟು ಖುಷಿ ಪಡುತ್ತಿದ್ದರು. ವುಡ್ ಲ್ಯಾಂಡ್ ಊಟವನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ರಂತೆ. ಹೀಗೆ ಅಂಬಿಯ ನೆನಪಿನ ಲೋಕಕ್ಕೆ ಜಾರಿದ ಹೋಟೆಲ್ ಸಿಬ್ಬಂದಿ ಅಂಬಿ ಆಗಲಿಕೆಗೆ ಭಾವುಕರಾಗಿದ್ದಾರೆ. ಹಳೆಯ ದಿನ ಸೂಪರ್ ಸ್ಟಾರ್ ಆದ್ರೂ ಅದೇ ಪ್ರೀತಿಯ ಪ್ರತಿರೂಪವಾಗಿ ಬದಲಾಗದ ಅಂಬಿ ಇವರ ಪಾಲಿಗೆ ಎಂದೆಂದೂ ಮರೆಯದ ಹೀರೋ ಆಗಿ ಉಳಿಯುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv