Tag: Hotel

  • ಸ್ಟಾರ್ ಹೋಟೆಲ್ ಮಹಿಳಾ ಉದ್ಯೋಗಿಯಿಂದ ಉದ್ಯಮಿ ಕಿಡ್ನಾಪ್

    ಸ್ಟಾರ್ ಹೋಟೆಲ್ ಮಹಿಳಾ ಉದ್ಯೋಗಿಯಿಂದ ಉದ್ಯಮಿ ಕಿಡ್ನಾಪ್

    – ರೇಪ್ ಬೆದರಿಕೆ ಒಡ್ಡಿ 30 ಲಕ್ಷಕ್ಕೆ ಡಿಮ್ಯಾಂಡ್

    ನವದೆಹಲಿ: ಖಾಸಗಿ ಕಂಪನಿಯ ಉದ್ಯಮಿಯನ್ನು ಅಪಹರಣ ಮಾಡಿದ ಆರೋಪದಲ್ಲಿ ಸ್ಟಾರ್ ಹೋಟೆಲ್ ಮಹಿಳಾ ಉದ್ಯೋಗಿ ಸೇರಿದಂತೆ 6 ಮಂದಿಯನ್ನ ಪೊಲೀಸರು ಬಂಧಿಸಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

    ದೆಹಲಿಯ ಚಾಣಕ್ಯಪುರಿ ಪ್ರದೇಶದ ಪಂಚತಾರಾ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಸೇರಿದಂತೆ ನಾಲ್ವರು ಮಹಿಳೆಯರು ಕೃತ್ಯದಲ್ಲಿ ಭಾಗಿಯಾಗಿದ್ದು, 6 ಗಂಟೆಗಳ ಕಾಲ ನಾಟಕೀಯ ಬೆಳವಣಿಗೆಗಳಲ್ಲಿ ಕೊನೆಗೂ ಪೊಲೀಸರು ಆರೋಪಿಗಳನ್ನು ಬಂಧಿಸಿ ಉದ್ಯಮಿಯನ್ನು ರಕ್ಷಣೆ ಮಾಡಿದ್ದಾರೆ.

    ಏನಿದು ಪ್ರಕರಣ: 64 ವರ್ಷದ ಉದ್ಯಮಿಯೊಬ್ಬರು ಮುಂಬೈಯಿಂದ ದೆಹಲಿಗೆ ಕೆಲಸ ನಿಮಿತ್ತ ಆಗಮಿಸಿದ್ದರು. ಈ ವೇಳೆ ಅನಾಮಿಕ ಮಹಿಳೆಯಿಂದ ಕರೆ ಸ್ವೀಕರಿಸಿದ ಅವರು ಹೋಟೆಲ್ ಕೊಠಡಿಯಲ್ಲಿ ಮಹಿಳೆಯನ್ನು ಭೇಟಿ ಮಾಡಲು ನಿರ್ಧಸಿದ್ದರು. ಉದ್ಯಮಿ ಹೋಟೆಲ್ ಕೊಠಡಿಗೆ ತೆರಳುತ್ತಿದಂತೆ ಅಲ್ಲಿಗೆ ಮತ್ತೆ 3 ಮಹಿಳೆಯರು ಆಗಮಿಸಿದ್ದರು.

    ಮಹಿಳೆ ಉದ್ಯಮಿಯನ್ನ ತನ್ನ ಮನೆಗೆ ಕರೆದುಕೊಂಡು ಹೋಗಲು ಒಪ್ಪಿಸಿದ್ದು, ಆ ಬಳಿಕ ಮನೆಗೆ ತೆರಳಿದ ವೇಳೆ ತನ್ನ ನೈಜ ಸ್ವರೂಪವನ್ನು ತೆರೆದಿಟ್ಟಿದ್ದಾಳೆ. ತನ್ನ ಮಗಳ ಮೇಲೆ ಉದ್ಯಮಿ ರೇಪ್ ಮಾಡಿದ್ದಾನೆ ಎಂದು ಎಲ್ಲರಿಗೂ ತಿಳಿಸುವುದಾಗಿ ಬೆದರಿಕೆ ಹಾಕಿ, 30 ಲಕ್ಷ ರೂ.ಗಳನ್ನು ನಮಗೆ ನೀಡುವಂತೆ ಬೇಡಿಕೆ ಮುಂದಿಟ್ಟಿದ್ದಾಳೆ. ಇದರಿಂದ ಹೆದರಿದ ಆತ ತನ್ನ ಸಂಸ್ಥೆಯ ನೌಕರನಿಗೆ ಕರೆ ಮಾಡಿ ಹಣ ತರಲು ತಿಳಿಸಿದ್ದಾನೆ.

    ಉದ್ಯಮಿ ಏಕಾಏಕಿ ಹಣ ತರಲು ಹೇಳಿದ್ದ ಬಗ್ಗೆ ಅನುಮಾನಗೊಂಡ ಆತ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಹೋಟೆಲ್ ಬಳಿ ಇದ್ದ ಸಿಸಿಟಿವಿ ದೃಶ್ಯ ಹಾಗೂ ಉದ್ಯಮಿ ತೆರಳಿದ್ದ ಕಾರಿನ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಲು ಯಶಸ್ವಿಯಾಗಿದ್ದಾರೆ.

  • ಕೆಲಸ ಮುಗಿಸಿ ಕಟ್ಟಡದ ಮೇಲೆ ಮಲಗಲು ಹೋಗಿ ಹೆಣವಾದ!

    ಕೆಲಸ ಮುಗಿಸಿ ಕಟ್ಟಡದ ಮೇಲೆ ಮಲಗಲು ಹೋಗಿ ಹೆಣವಾದ!

    ಚಿತ್ರದುರ್ಗ: ಕುಡಿದ ಅಮಲಿನಲ್ಲಿ ಕಟ್ಟಡದ ಮೇಲಿನಿಂದ ಬಿದ್ದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯ ದುರ್ಗದ ಸಿರಿ ಹೋಟೆಲ್‍ನಲ್ಲಿ ನಡೆದಿದೆ.

    ಹೊಳಲ್ಕೆರೆ ತಾಲೂಕಿನ ವೆಂಕಟೇಶಪುರ ನಿವಾಸಿ ಪ್ರಮೋದ್ (22) ಮೃತ ಯುವಕ. ಈಗ ಮೂರು ಅಂತಸ್ತಿನ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾನೆ. ಪ್ರಮೋದ್ ದುರ್ಗದ ಸಿರಿ ಹೋಟೆಲ್‍ನಲ್ಲಿ ಕಳೆದ ಎರಡು ವರ್ಷದಿಂದ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.

    ಮೃತ ಪ್ರಮೋದ್ ಗುರುವಾರ ತನ್ನ ಡ್ಯೂಟಿಯನ್ನು ಮುಗಿಸಿಕೊಂಡು ಕಟ್ಟಡದ ಮೇಲೆ ಹೋಗಿ ಮದ್ಯ ಕುಡಿದು ಮಲಗಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ಕಟ್ಟಡದಿಂದ ಜಾರಿ ಬಿದ್ದಿದ್ದಾನೆ. ಪರಿಣಾಮ ಸ್ಥಳದಲ್ಲಿಯೇ ಪ್ರಮೋದ್ ಮೃತಪಟ್ಟಿದ್ದಾನೆ.

    ಈ ಬಗ್ಗೆ ಮಾಹಿತಿ ತಿಳಿದು ಚಿತ್ರದುರ್ಗ ನಗರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಚಿತ್ರದುರ್ಗ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಫ್ರೈಡ್ ರೈಸ್‍ನಲ್ಲಿ ಹಲ್ಲಿ ಪತ್ತೆ – ದೂರು ನೀಡಿದ ಗ್ರಾಹಕ

    ಫ್ರೈಡ್ ರೈಸ್‍ನಲ್ಲಿ ಹಲ್ಲಿ ಪತ್ತೆ – ದೂರು ನೀಡಿದ ಗ್ರಾಹಕ

    ತುಮಕೂರು: ಜಿಲ್ಲೆಯ ಶಿರಾದ ಅರಸು ಹೋಟೆಲ್ ನಲ್ಲಿ ಉಪಾಹಾರ ಸೇವಿಸುತ್ತಿದ್ದ ಗ್ರಾಹಕರೊಬ್ಬರ ತಟ್ಟೆಯಲ್ಲಿ ಹಲ್ಲಿ ಪತ್ತೆಯಾಗಿದೆ.

    ರಮೇಶ್ ಎಂಬವರು ವೆಜ್ ಫ್ರೈಡ್ ರೈಸ್ ಆರ್ಡರ್ ಮಾಡಿ ಸೇವಿಸುತ್ತಿದ್ದರು. ಈ ವೇಳೆ ಇತರ ತರಕಾರಿಗಳೊಂದಿಗೆ ಹಲ್ಲಿಯನ್ನು ಫ್ರೈ ಮಾಡಲಾಗಿತ್ತು. ತಟ್ಟೆಯಲ್ಲಿ ಸತ್ತ ಹಲ್ಲಿಯನ್ನು ಕಂಡು ಗ್ರಾಹಕ ರಮೇಶ್ ಆತಂಕಗೊಂಡಿದ್ದರು.

    ರಮೇಶ್ ಸೇರಿದಂತೆ ಇತರ 20 ಜನರು ರವಿಶಂಕರ್ ಗುರೂಜಿಯನ್ನು ಭೇಟಿ ಮಾಡಲು ಮಹಾರಾಷ್ಟ್ರದಿಂದ ಬೆಂಗಳೂರಿಗೆ ತೆರಳುತ್ತಿದ್ದರು. ಈ ವೇಳೆ ಹೋಟೆಲ್‍ನಲ್ಲಿ ಉಪಾಹಾರ ಸೇವಿಸಲು ಹೋಗಿದ್ದರು. ರಮೇಶ್ ಫ್ರೈಡ್ ರೈಸ್ ಆರ್ಡರ್ ಮಾಡಿದರೆ, ಉಳಿದ ಮಂದಿ ಬೇರೆ ಬೇರೆ ತಿಂಡಿ ಆರ್ಡರ್ ಮಾಡಿ ಅದನ್ನು ಸೇವಿಸುತ್ತಿದ್ದರು.

    ಆಹಾರದಲ್ಲಿ ಹಲ್ಲಿ ಸಿಕ್ಕ ಪರಿಣಾಮ ಆಕ್ರೋಶಗೊಂಡ ಗ್ರಾಹಕರು ಶಿರಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆತಂಕಗೊಂಡ ಕೆಲವರು ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡು ಬೆಂಗಳೂರಿಗೆ ತೆರಳಿದ್ದಾರೆ.

  • ಅವಳಿ ಮಕ್ಕಳಿಗಾಗಿ ಹೋಟೆಲ್‍ನಲ್ಲಿ ಸೌಟು ಹಿಡಿದ ಸನ್ನಿ

    ಅವಳಿ ಮಕ್ಕಳಿಗಾಗಿ ಹೋಟೆಲ್‍ನಲ್ಲಿ ಸೌಟು ಹಿಡಿದ ಸನ್ನಿ

    ಮುಂಬೈ: ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ತನ್ನ ಅವಳಿ ಮಕ್ಕಳಿಗಾಗಿ ಹೋಟೆಲ್‍ವೊಂದರಲ್ಲಿ ಅಡುಗೆ ಮಾಡಿದ್ದಾರೆ. ತಾವು ಅಡುಗೆ ಮಾಡುತ್ತಿರುವ ಫೋಟೋವನ್ನು ಸ್ವತಃ ಸನ್ನಿ ಲಿಯೋನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಸನ್ನಿ ಲಿಯೋನ್ ಖಾಸಗಿ ವಾಹಿನಿಯ ಪ್ರಸಾರವಾಗುವ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಈ ಶೂಟಿಂಗ್‍ಗಾಗಿ ಸನ್ನಿ ಲಿಯೋನ್ ತಮ್ಮ ಅವಳಿ ಮಕ್ಕಳಾದ ನೋಹಾ ಹಾಗೂ ಅಶ್‍ಹರ್ ರನ್ನು ಕರೆದುಕೊಂಡು ಹೋಗಿದ್ದಾರೆ.

    ಈ ರಿಯಾಲಿಟಿ ಶೋಗಾಗಿ ಸನ್ನಿ ಲಿಯೋನ್ ತಮ್ಮ ಮಕ್ಕಳ ಜೊತೆ ಹೋಟೆಲಿನಲ್ಲಿ ತಂಗಿದ್ದಾರೆ. ಈ ವೇಳೆ ಅವರು ಅಲ್ಲಿನ ಹೋಟೆಲ್‍ನಲ್ಲಿ ತಮ್ಮ ಮಕ್ಕಳಿಗಾಗಿ ಅಡುಗೆ ಮಾಡಿದ್ದಾರೆ. ಸನ್ನಿ ಅಡುಗೆ ಮಾಡುತ್ತಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಸನ್ನಿ ಫೋಟೋ ಹಾಕಿ ಅದಕ್ಕೆ, “ನಾನು ನನ್ನ ಮಕ್ಕಳಾದ ನೋಹಾ ಹಾಗೂ ಅಶ್‍ಹರ್ ಗಾಗಿ ಬನಾನಾ ವೀಟ್ ಪ್ಯಾನ್‍ಕೇಕ್ ಹಾಗೂ ಆ್ಯಪಲ್ ಸಾಸ್ ತಯಾರಿಸುತ್ತಿದ್ದೇನೆ. ತಾಯಿಯ ಜೀವನ ಎಂದು ಹ್ಯಾಶ್‍ಟ್ಯಾಗ್ ಬಳಸಿ ಇಲ್ಲಿನ ಸಿಬ್ಬಂದಿ ಮಕ್ಕಳಿಗಾಗಿ ಅಡುಗೆ ಮಾಡಲು ನನಗೆ ಅನುಮತಿ ನೀಡಿದ್ದಾರೆ” ಎಂದು ಪೋಸ್ಟ್ ಮಾಡಿದ್ದಾರೆ.

    ಕಳೆದ ವರ್ಷ ಬಾಡಿಗೆ ತಾಯಿ ಮೂಲಕ ಸನ್ನಿ ಲಿಯೋನ್ ಹಾಗೂ ಅವರ ಪತಿ ಡೇನಿಯಲ್ ವೆಬರ್ ಇಬ್ಬರು ಅವಳಿ ಗಂಡು ಮಕ್ಕಳನ್ನು ಪಡೆದಿದ್ದರು. ಅಲ್ಲದೆ ಸನ್ನಿ 2017ರಲ್ಲಿ ಮಹಾರಾಷ್ಟ್ರದ ಲಾತೂರಿನಲ್ಲಿ ನಿಶಾಳನ್ನು ದತ್ತು ಪಡೆದುಕೊಂಡಿದ್ದರು.

  • ಹೋಟೆಲ್ ರೂಮಿನಲ್ಲಿ ಮಾಜಿ ವಿಶ್ವ ಸುಂದರಿ ಶವವಾಗಿ ಪತ್ತೆ

    ಹೋಟೆಲ್ ರೂಮಿನಲ್ಲಿ ಮಾಜಿ ವಿಶ್ವ ಸುಂದರಿ ಶವವಾಗಿ ಪತ್ತೆ

    ಮೆಕ್ಸಿಕೋ: ಉರುಗ್ವೆಯ ಮಾಜಿ ವಿಶ್ವ ಸುಂದರಿ ಹೋಟೆಲ್ ರೂಮಿನಲ್ಲಿ ಶವವಾಗಿ ಪತ್ತೆಯಾದ ಘಟನೆ ಗುರುವಾರ ಬೆಳಗ್ಗೆ ಮೆಕ್ಸಿಕೋದಲ್ಲಿ ನಡೆದಿದೆ.

    ಫ್ಯಾಟಿಮಿಹ್ ಡವಿಲ್ಲಾ ಸೋಸಾ(31) ಅನುಮಾಸ್ಪದವಾಗಿ ಮೃತಪಟ್ಟ ಮಾಜಿ ಸುಂದರಿ. ಗುರುವಾರ ಬೆಳಗಿನ ಜಾವ ಹೋಟೆಲ್‍ನ ಬಾತ್‍ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಫ್ಯಾಟಮಿಹ್ ಶವ ಪತ್ತೆಯಾಗಿದೆ. ಶವ ಪತ್ತೆಯಾದ ಬಳಿಕ ನಾವು ಪೊಲೀಸರಿಗೆ ಮಾಹಿತಿ ನೀಡಿದ್ದೇವು ಎಂದು ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ.

    ಫ್ಯಾಟಿಮಿಹ್ ರೂಪದರ್ಶಕಿ ಆಗಿದ್ದು, ಕೆಲಸದ ಸಂದರ್ಶನಕ್ಕಾಗಿ ಏಪ್ರಿಲ್ 23ರಂದು ಮೆಕ್ಸಿಕೋಗೆ ಆಗಮಿಸಿದ್ದರು. ಮೆಕ್ಸಿಕೋಗೆ ಆಗಮಿಸಿದ ಬಳಿಕ ಫ್ಯಾಟಿಮಿಹ್ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದಳು. ಆದರೆ ಗುರುವಾರ ಬೆಳಗ್ಗೆ ರೂಪದರ್ಶಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಫ್ಯಾಟಿಮಿಹ್ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಲ್ಲದೆ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಫ್ಯಾಟಿಮಿಹ್ 2006ರಲ್ಲಿ ಉರುಗ್ವೆಯನ್ನು ಪ್ರತಿನಿಧಿಸಿ ಭುವನ ಸುಂದರಿ ಕಿರೀಟವನ್ನು ತನ್ನದಾಗಿಸಿಕೊಂಡಿದ್ದರು. ಬಳಿಕ 2008ರಲ್ಲಿ ವಿಶ್ವ ಸುಂದರಿ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

  • ಸುಮಲತಾ ಸೀಕ್ರೆಟ್ ಮೀಟಿಂಗ್ ವಿಡಿಯೋ ಲೀಕ್-ಒಂದೇ ಏಟಿಗೆ 2 ಹಕ್ಕಿ ಹೊಡೆಯಲು ಸಿಎಂ ಪ್ಲಾನ್ !

    ಸುಮಲತಾ ಸೀಕ್ರೆಟ್ ಮೀಟಿಂಗ್ ವಿಡಿಯೋ ಲೀಕ್-ಒಂದೇ ಏಟಿಗೆ 2 ಹಕ್ಕಿ ಹೊಡೆಯಲು ಸಿಎಂ ಪ್ಲಾನ್ !

    ಬೆಂಗಳೂರು: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಬುಧವಾರ ಸೀಕ್ರೆಟ್ ಮೀಟಿಂಗ್ ಮಾಡಿದ್ದು, ಅವರ ರಹಸ್ಯ ಮೀಟಿಂಗ್ ವಿಡಿಯೋ ಲೀಕ್ ಆಗಿದೆ. ಆದರೆ ಹೋಟೆಲ್‍ವೊಂದರ ಸಿಸಿಟಿವಿ ವಿಡಿಯೋ ಅಷ್ಟು ಸುಲಭವಾಗಿ ಹೇಗೆ ಲೀಕ್ ಆಯಿತು ಎಂಬುವುದೇ ಪ್ರಶ್ನೆಯಾಗಿದೆ.

    ಹೌದು.. ಸಿಎಂ ಕುಮಾರಸ್ವಾಮಿ ಅವರೇ ಸುಮಲತಾ ಅವರ ಸೀಕ್ರೆಟ್ ಮೀಟಿಂಗ್‍ನ ವಿಡಿಯೋ ಲೀಕ್ ಮಾಡಿಸಿದ್ದು, ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯಲು ಪ್ಲಾನ್ ಮಾಡಿ ವಿಡಿಯೋ ಲೀಕ್ ಮಾಡಿಸಿದ್ದಾರೆ. ಅಂದರೆ ಮಾಜಿ ಪ್ರಧಾನಿ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದೂರದ ರೆಸಾರ್ಟ್‌ನಲ್ಲಿ ಕೂತು ವಿಶ್ರಾಂತಿ ಪಡೆಯುತ್ತಾ ಸುಮ್ಮನ್ನೆ ಕುಳಿತಿಲ್ಲ. ಅವರೇ ರೆಸಾರ್ಟ್‌ನಲ್ಲಿ ಕುಳಿತು ವಿಡಿಯೋ ದಾಳ ಉರುಳಿಸಿದ್ದಾರೆ ಎನ್ನಲಾಗಿದೆ.

    ಸುಮಲತಾ ಜೊತೆ ಚಲುವರಾಯಸ್ವಾಮಿ ಅಂಡ್ ಟೀಮ್ ಸಭೆ ನಡೆಸಿದ ವಿಡಿಯೋ ಲೀಕ್ ಮಾಡಿಸುವ ಮೂಲಕ ಚಲುವರಾಯಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕರ ಮೇಲೆ ಒತ್ತಡ ಹೇರಲು ಸಿಎಂ ಪ್ಲಾನ್ ಮಾಡಿದ್ದಾರೆ. ಜೊತೆಗೆ ಸುಮಲತಾ ಪರ ಸಿದ್ದರಾಮಯ್ಯ ತೆರೆಮರೆ ಆಟ ಆಡಿದ್ದಾರೆ ಎಂಬುದನ್ನ ಕಾಂಗ್ರೆಸ್ ಹೈಕಮಾಂಡ್‍ಗೆ ಮನವರಿಕೆ ಮಾಡಿಸಿ ಸಿದ್ದರಾಮಯ್ಯ ಅವರ ಪ್ರಾಬಲ್ಯ ತಗ್ಗಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

    ಹೀಗೆ ತಮ್ಮ ಮಂಡ್ಯ ಜಿಲ್ಲಾ ರಾಜಕೀಯ ವಿರೋಧಿಗಳನ್ನ ಒಂದೇ ಏಟಿಗೆ ರಾಜಕೀಯವಾಗಿ ಮುಗಿಸುವುದು ಸಿಎಂ ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ ಮಾಡಿದ್ದು, ಇದೇ ವಿಡಿಯೋ ಆಧರಿಸಿ ಸಿದ್ದರಾಮಯ್ಯರನ್ನ ಸೈಡ್ ಲೈನ್ ಮಾಡಿಸಿ ಸರ್ಕಾರ ಸುಭದ್ರ ಮಾಡಿಕೊಳ್ಳಲು ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಬುಧವಾರ ಸುಮಲತಾರ ಸಭೆ ಸಂದರ್ಭದಲ್ಲೇ ಗುಪ್ತಚರ ಇಲಾಖೆ ಅಧಿಕಾರಿಗಳು ಹೋಟೆಲ್‍ಗೆ ಬಂದಿದ್ದಾರೆ. ಅದರ ಮಾಹಿತಿ ತಿಳಿದರೂ ಸುಮಲತಾ ಅಂಡ್ ಟೀಮ್ ಸಭೆ ನಡೆಸಿದೆ. ಸಭೆ ಮುಗಿಸಿ ಹೊರಡುತ್ತಿದ್ದಂತೆ ಹೋಟೆಲ್‍ನಿಂದ ಸಿಸಿ ಕ್ಯಾಮರಾ ವಿಡಿಯೋವನ್ನ ಪೊಲೀಸ್ ಅಧಿಕಾರಿಗಳ ಮೂಲಕ ಸಿಎಂ ಹೆಚ್‍ಡಿಕೆ ತೆಗೆಸಿದ್ದು, ಬಳಿಕ ವ್ಯವಸ್ಥಿತವಾಗಿ ಮಾಧ್ಯಮಗಳ ಕೈ ಸೇರುವಂತೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಈ ಮೂಲಕ ತಮ್ಮ ಮಗನ ಸೋಲಿಸಲು ಯತ್ನಿಸಿದ ಮಂಡ್ಯದ ಕಾಂಗ್ರೆಸ್ ನಾಯಕರ ತಲೆದಂಡಕ್ಕೆ ಬಲೆ ಹೆಣಿದಿದ್ದು, ಅಲ್ಲದೇ ಸಿದ್ದರಾಮಯ್ಯರನ್ನ ಶತಾಯಗತಾಯ ಸೈಡ್ ಲೈನ್ ಮಾಡಲು ಸಿಎಂ ಕುಮಾರಸ್ವಾಮಿ ಸ್ಕೆಚ್ ಹಾಕಿ ಆಪರೇಟ್ ಮಾಡಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ನಂತರ ಕೆಪಿಸಿಸಿ ಹಾಗೂ ಎಐಸಿಸಿ ಮಟ್ಟದಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತೆ ಎಂಬುದು ಕುತೂಹಲ ಮೂಡಿಸಿದೆ.

  • ವೋಟ್ ಮಾಡಿ, ಉಚಿತ ಊಟ ಸವಿಯಿರಿ – ಯಾದಗಿರಿಯಲ್ಲಿ ವಿಶಿಷ್ಟ ಮತದಾನ ಜಾಗೃತಿ

    ವೋಟ್ ಮಾಡಿ, ಉಚಿತ ಊಟ ಸವಿಯಿರಿ – ಯಾದಗಿರಿಯಲ್ಲಿ ವಿಶಿಷ್ಟ ಮತದಾನ ಜಾಗೃತಿ

    ಯಾದಗಿರಿ: ರಾಜ್ಯದ ಎರಡನೇ ಹಂತದ ಲೋಕಸಭಾ ಚುನಾವಣೆಯ ಮತದಾನ ಗುರುವಾರ ನಡೆಯಲಿದ್ದು, ಮತದಾನ ಹೆಚ್ಚಳ ಮಾಡಲು ಚುನಾವಣೆ ಆಯೋಗ ಹಲವಾರು ರೀತಿಯಿಂದ ಮತದಾರರಿಗೆ ಜಾಗೃತಿ ಮೂಡಿಸಿದೆ. ಇತ್ತ ಯಾದಗಿರಿಯ ಹೋಟೆಲ್ ಮಾಲೀಕರೊಬ್ಬರು ಸ್ವಯಂ ಪ್ರೇರಿತರಾಗಿ ಮತದಾನ ಜಾಗೃತಿಗೆ ಮುಂದಾಗಿದ್ದು, ಮಂಗಳವಾರ ತಮ್ಮ ಹಕ್ಕು ಚಲಾಯಿಸಿದವರಿಗೆ ಹೊಟ್ಟೆ ತುಂಬ ಉಚಿತ ಉಟ ನೀಡಲು ಮುಂದಾಗಿದ್ದಾರೆ.

    ಜಿಲ್ಲೆಯ ಶಹಾಪುರ ನಗರದಲ್ಲಿರುವ ‘ಅಮ್ಮ ಕ್ಯಾಂಟೀನ್’ ಮಾಲೀಕರಾದ ಮಣಿಕಂಠರವರು ಈ ಬಂಪರ್ ಆಫರ್ ನೀಡಿದ್ದಾರೆ. ಬೆಳಿಗ್ಗೆಯಿಂದಲೇ ಈ ಆಫರ್ ಆರಂಭವಾಗಲಿದ್ದು, ಮತದಾನ ಮಾಡಿದವರು ಕ್ಯಾಂಟೀನ್ ಬಂದು ಕೈ ಬೆರಳು ತೋರಿಸಿದರೆ ಸಾಕು, ಫುಲ್ ಮಿಲ್ಸ್ ಊಟ ನೀಡಲಾಗುತ್ತದೆ.

    ಅಮ್ಮನ ನೆನಪು: ಮಣಿಕಂಠ ಅವರು ಕಳೆದ ಒಂದು ವರ್ಷದ ಹಿಂದೆ ತಮ್ಮ ತಾಯಿಯ ನೆನಪಿನಲ್ಲಿ ಈ ಅಮ್ಮ ಕ್ಯಾಂಟೀನ್ ಆರಂಭಿಸಿದ್ದಾರೆ. ಕಡಿಮೆ ದರದಲ್ಲಿ ಬಡಜನರ ಹೊಟ್ಟೆ ತುಂಬಿಸುತ್ತಿರುವುದು ಈ ಹೋಟೆಲಿನ ಮತ್ತೊಂದು ವಿಶೇಷ. ಮತದಾನ ಪ್ರತಿಯೊಬ್ಬರ ಕರ್ತವ್ಯ ಅದನ್ನು ನಿಭಾಯಿಸಿದರೆ ಅವರು ನಮ್ಮ ದೇಶದ ಉತ್ತಮ ನಾಗರಿಕರಾಗುತ್ತಾರೆ. ಅಂತಹ ನಾಗರಿಕನಿಗೆ ಧನ್ಯವಾದ ಹೇಳಲು ಈ ಉಚಿತ ಊಟದ ಕೊಡುಗೆ ನೀಡಿದ್ದೇನೆ ಎಂದು ಮಣಿಕಂಠ ಅವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಇತ್ತ ದಾವಣಗೆರೆಯಲ್ಲೂ ಕೂಡ ಮತ ಹಾಕಿ ಬಂದ ಗ್ರಾಹಕರಿಗೆ ಊಟದ ಬಿಲ್‍ನಲ್ಲಿ ಶೇ.50 ರಷ್ಟು ಡಿಸ್ಕೌಂಟ್ ನೀಡುವುದಾಗಿ ನಗರದ ಪಿಬಿ ರಸ್ತೆಯಲ್ಲಿರುವ ಭರತ್ ಹೋಟೆಲ್ ಮಾಲೀಕರು ನೀಡಿದ್ದಾರೆ.

  • ಲಾಡ್ಜ್‌ನಲ್ಲಿ ಏಸಿ ಬ್ಲಾಸ್ಟ್- ತಪ್ಪಿತು ಭಾರೀ ಅವಘಡ!

    ಲಾಡ್ಜ್‌ನಲ್ಲಿ ಏಸಿ ಬ್ಲಾಸ್ಟ್- ತಪ್ಪಿತು ಭಾರೀ ಅವಘಡ!

    ಚಿಕ್ಕಮಗಳೂರು: ಲಾಡ್ಜ್‌ನಲ್ಲಿದ್ದ ಏಸಿ ಬ್ಲಾಸ್ಟ್ ಆದ ಪರಿಣಾಮ ರೂಂನಲ್ಲಿದ್ದ ಕಾಟ್, ಬೆಡ್ ಹಾಗೂ ಸೋಫಾ ಸೆಟ್ ಸುಟ್ಟು ಕರಕಲಾಗಿರುವ ಘಟನೆ ಲೋಟಸ್ ಲಾಡ್ಜ್‌ನಲ್ಲಿ ನಡೆದಿದೆ.

    ನಗರದ ಐಜಿ ರಸ್ತೆಯಲ್ಲಿರುವ ಲೋಟಸ್ ಹೋಟಲ್‍ನ ರೂಂ ನಂಬರ್ 205ರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೋಟೆಲ್‍ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸಿಬ್ಬಂದಿ ಭಯದಿಂದ ಹೊರ ಓಡಿ ಬಂದಿದ್ದು, ತಕ್ಷಣ ಅಗ್ನಿಶಾಮಕ ದಳದವರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೋಟೆಲ್ ಮಾಲೀಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದ ಬಹುತೇಕ ಹೋಟೆಲ್ ಮಾಲೀಕರು ಅಗ್ನಿ ಸುರಕ್ಷತಾ ಪತ್ರವನ್ನೇ ಪಡೆದಿಲ್ಲ. ಅಗ್ನಿ ದುರಂತವಾದರೆ ನಾವು ಜವಾಬ್ದಾರರಲ್ಲ, ಕೂಡಲೇ ಅಗ್ನಿ ಸುರಕ್ಷತಾ ಪತ್ರ ಪಡೆಯುವಂತೆ ಹೋಟೆಲ್ ಮಾಲೀಕರಿಗೆ ಮನವಿ ಮಾಡಿದ್ದಾರೆ.

    ಈ ಅವಘಡದಿಂದ ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಮೂಲಕ ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

  • ಈಸ್ಟರ್ ಹಬ್ಬದಂದೇ ಸರಣಿ ಬಾಂಬ್ ಸ್ಫೋಟ- 139 ಮಂದಿ ದುರ್ಮರಣ

    ಈಸ್ಟರ್ ಹಬ್ಬದಂದೇ ಸರಣಿ ಬಾಂಬ್ ಸ್ಫೋಟ- 139 ಮಂದಿ ದುರ್ಮರಣ

    ಕೊಲಂಬೋ: ಶ್ರೀಲಂಕಾ ರಾಜಧಾನಿ ಕೊಲೊಂಬೋದಲ್ಲಿ ಮೂರು ಚರ್ಚ್, ಮೂರು ಫೈವ್‍ಸ್ಟಾರ್ ಹೋಟೆಲ್‍ಗಳು ಸೇರಿದಂತೆ 6 ಕಡೆ ಸರಣಿ ಬಾಂಬ್ ಸ್ಫೋಟ ನಡೆದಿದ್ದು, ಈಸ್ಟರ್ ಹಬ್ಬದ ಹಿನ್ನೆಲೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಸೇರಿದ್ದ 139 ಮಂದಿ ಸಾವನ್ನಪ್ಪಿದ್ದು, 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಈಸ್ಟರ್ ಶುಭ ಸಂದರ್ಭದಲ್ಲಿ ಪ್ರಾರ್ಥನೆಗೆ ಸೇರಿದ್ದವರನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ಶಂಕಿಸಲಾಗಿದೆ. ಚರ್ಚ್ ಗಳಲ್ಲಿ ಕ್ರಿಶ್ಚಿಯನ್ನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ವೇಳೆಯೇ ಬಾಂಬ್ ಸ್ಫೋಟಗೊಂಡಿದೆ. ಪರಿಣಾಮ ಕೊಲಂಬೋ ಬಂದರು ಸಮೀದ ಸೆಬಾಸ್ಟಿಯನ್ ಚರ್ಚ್ ರಕ್ತಸಿಕ್ತವಾಗಿದೆ.

    ಕೊಚ್ಚಿಕೇಡ್‍ನ ಸೆಂಟ್ ಅಂಟೋನಿ ಚರ್ಚ್, ನೆಗೊಂಬೆ ಚರ್ಚ್ ನಲ್ಲಿ ಬಾಂಬ್ ಸ್ಫೋಟವಾಗಿದ್ದು, ಈವರೆಗೆ 139 ಮಂದಿ ಸಾವನ್ನಪ್ಪಿದ್ದು, 400ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಮೃತರಲ್ಲಿ ಭಾರತೀಯರು ಸೇರಿ ಹಲವು ವಿದೇಶಿಯರು ಇರುವ ಸಾಧ್ಯತೆಯಿದೆ.

    ನಗರದಲ್ಲಿರುವ 3 ಫೈವ್ ಸ್ಟಾರ್ ಹೋಟೆಲ್​ಗಳಲ್ಲೂ ಬಾಂಬ್ ಸ್ಪೋಟ ಸಂಭವಿಸಿರುವ ಕುರಿತಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಇಲ್ಲಿನ ಶಾಂಗ್ರಿ ಲಾ ಹಾಗೂ ಸಿನಾಮೊನ್ ಗ್ರ್ಯಾಂಡ್ ಹೋಟೆಲ್​ಗಳಲ್ಲಿ ಸ್ಫೋಟ ನಡೆದಿದೆ. ಭಾರತೀಯರನ್ನು ಗುರಿಯಾಗಿಸಿಕೊಂಡು ಇಸಿಸ್ ಉಗ್ರರು ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಹಾಗೆಯೇ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.