ಬೆಂಗಳೂರು: ಅತೃಪ್ತ ಶಾಸಕರನ್ನು ಮನವೊಲಿಸಲು ಮುಂಬೈಗೆ ಹೋಗಿರುವ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಸಿಟ್ಟಾಗಿದ್ದಾರೆ ಎಂದು ತಿಳಿದು ಬಂದಿದೆ.
ಡಿ.ಕೆ.ಶಿವಕುಮಾರ್ ಮುಂಬೈಗೆ ಹೋಗಿರುವ ಬಗ್ಗೆ ಸಿದ್ದರಾಮಯ್ಯ ಆಪ್ತರ ಬಳಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಡಿ.ಕೆ.ಶಿವಕುಮಾರ್ ಪಕ್ಷಕ್ಕೆ ಹೇಳಿ ಹೋದರಾ? ನಮ್ಮನ್ನ ಯಾರಾದರೂ ಕೇಳಿ ಹೋದರಾ? ಅವರ ಪಾಡಿಗೆ ಅವರು ಹೊರಟು ಹೋದರೆ ಹೇಗೆ? ಸಿಎಲ್‍ಪಿ ನಾಯಕನಾದ ನನ್ನ ಗಮನಕ್ಕೆ ತಂದು ಹೋಗಿದ್ದಾರಾ? ಎಂದು ಸಿದ್ದರಾಮಯ್ಯ ತಮ್ಮ ನಿವಾಸದಲ್ಲಿ ಆತ್ಮೀಯರ ಮುಂದೆ ಅಸಮಧಾನ ಹೊರ ಹಾಕಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ತಿಳಿದು ಬಂದಿದೆ.
ಶಿವಕುಮಾರ್ ಮುಂಬೈಗೆ ಹೋಗುವ ಮೊದಲೇ ಅತೃಪ್ತರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಇದರಿಂದ ಅವರನ್ನು ಒಳಗೆ ಹೋಗುವುದಕ್ಕೆ ಬಿಟ್ಟಿಲ್ಲ. ಹೀಗಾಗಿ ಅವರು ರಸ್ತೆಯಲ್ಲಿ ಕುಳಿತಿದ್ದಾರೆ. ಇದು ಪಕ್ಷಕ್ಕೆ ಮುಜುಗರ ಅಲ್ವಾ. ಸಿಎಂ ಜೊತೆ ಮಾತನಾಡಿಕೊಂಡು ಹೋಗಿ ಒನ್ ಮ್ಯಾನ್ ಶೋ ಕೊಡುತ್ತಿದ್ದಾರೆ. ಇದು ನಮ್ಮ ಪಕ್ಷದ ನಿರ್ಧಾರ ಅಲ್ಲ ಎಂದು ಡಿಕೆಶಿ ನಡೆಯ ಬಗ್ಗೆ ಗುಲಾಂನಬಿ ಆಜಾದ್ ಬಳಿಯು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ.
ಇಂದು ಬೆಳಗ್ಗೆ ಸುಮಾರು 8 ಗಂಟೆಗೆ ಶಿವಕುಮಾರ್ ಮುಂಬೈನ ಹೋಟೆಲ್‍ಗೆ ಹೋಗಿದ್ದಾರೆ. ಆದರೆ ಅಲ್ಲಿನ ಪೊಲೀಸರು ಡಿಕೆಶಿಯನ್ನು ಹೋಟೆಲ್‍ಗೆ ಬಿಡದೆ ಹೊರಗೆ ನಿಲ್ಲಿಸಿದ್ದಾರೆ. ಅತ್ತ ಅತೃಪ್ತರು ಕೂಡ ನಾವು ಯಾರನ್ನೂ ಭೇಟಿ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಡಿಕೆಶಿ ಮಾತ್ರ ನಾನು ನಮ್ಮ ಸ್ನೇಹಿತರನ್ನು ಭೇಟಿಯಾಗಲೇಬೇಕು ಎಂದು ಪಟ್ಟು ಹಿಡಿದು ಹೋಟೆಲ್ ಮುಂಭಾಗ ಕುಳಿತಿದ್ದಾರೆ.
ಮುಂಬೈ: ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಅವರಿಗೆ ಅವಮಾನ ಮಾಡುವ ದೃಷ್ಟಿಯಿಂದ ಹೀಗೆ ಮಾಡುತ್ತಿಲ್ಲ. ಇದು ರಾಜಕಾರಣ. ವಿಶ್ವಾಸ ಬೇರೆ, ರಾಜಕಾರಣ ಬೇರೆ. ಹೀಗಾಗಿ ದಯವಿಟ್ಟು ಮುಂಬೈನಲ್ಲಿ ಶಿವಕುಮಾರ್ ಅವರಿಗೆ ಯಾವ ರೀತಿಯ ಅವಮಾನ ಕೂಡ ಆಗಬಾರದು. ಅದನ್ನು ನಾವು ಕೂಡ ಸಹಿಸಲ್ಲ ಎಂದು ಅತೃಪ್ತ ಶಾಸಕ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.
ಮುಂಬೈ ಹೋಟೆಲ್‍ನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ರಾಜಕಾರಣದ ವಿಷಯದಲ್ಲಿ ಸದ್ಯಕ್ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲು ಸಾಧ್ಯವಿಲ್ಲ. ಇಷ್ಟು ಉನ್ನತ ಸ್ಥಾನಕ್ಕೆ ನಮ್ಮನ್ನು ಶಿವಕುಮಾರ್ ಅವರೇ ಕರೆತಂದಿದ್ದು, ರಾಜಕಾರಣದಲ್ಲಿ ಏನೆಲ್ಲ ಸಹಾಯ ಮಾಡಬೇಕೋ ಅವರು ಮಾಡಿದ್ದಾರೆ. ಆ ದೃಷ್ಟಿಯಿಂದ ಶಿವಕುಮಾರ್ ಸೇರಿದಂತೆ ಯಾರನ್ನೂ ಭೇಟಿ ಮಾಡಲ್ಲ ಎಂದು ಮಾಧ್ಯಮಗಳ ಮೂಲಕ ತಿಳಿಸಿದ್ದೇವೆ. ಹೀಗಾಗಿ ನಾವು ಮಾತುಕತೆಗೆ ಮುಂದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜಕಾರಣದಲ್ಲಿ ಸರಿನೋ, ತಪ್ಪೋ ಒಂದು ಹೆಜ್ಜೆಯನ್ನು ಮುಂದೆ ಇಟ್ಟಿದ್ದೇವೆ. ನಾವು ರಾಜಕೀಯ ದೃಷ್ಟಿಯಿಂದ ಯಾರನ್ನೂ ಭೇಟಿಯಾಗುವುದಿಲ್ಲ. ಹೀಗಾಗಿ ಯಾರೂ ಬರುವುದು ಬೇಡ ಎಂದು ಮಂಗಳವಾರವೇ ಮಾಧ್ಯಮಗಳಿಗೆ ಹೇಳಿದ್ದೇವೆ ಎಂದು ತಿಳಿಸಿದರು.
ಬೆಂಗಳೂರಿಗೆ ಬಂದ ನಂತರ ಮೊದಲೇ ಶಿವಕುಮಾರ್ ಅವರನ್ನು ಭೇಟಿ ಮಾಡಿ ವಾಸ್ತವ ಸ್ಥಿತಿ ಏನಿದೆ ಎಂಬುದನ್ನು ಹೇಳುವ ಕೆಲಸ ಮಾಡುತ್ತೇವೆ. ದಯವಿಟ್ಟು ಮುಂಬೈನಲ್ಲಿ ಶಿವಕುಮಾರ್ ಅವರಿಗೆ ಯಾವ ರೀತಿಯ ಅವಮಾನ ಕೂಡ ಆಗಬಾರದು. ಅದನ್ನು ನಾವು ಕೂಡ ಸಹಿಸಲ್ಲ ಎಂದು ಸೋಮಶೇಖರ್ ತಿಳಿಸಿದರು.
Karnataka Minister DK Shivakumar's booking at Renaissance Mumbai Convention Centre Hotel has been cancelled by the hotel quoting "some emergency in the hotel" https://t.co/9C0tw0eUGE
ಬಿಜೆಪಿಯ ಇಬ್ಬರು ನಾಯಕರು ಅತೃಪ್ತರನ್ನು ಬೇಟಿ ಮಾಡಲು ಮುಂಬೈಗೆ ತೆರಳುತ್ತಿದ್ದಂತೆಯೇ ಇಂದು ಸಚಿವ ಡಿಕೆ ಶಿವಕುಮಾರ್, ಜಿ.ಟಿ ದೇವೇಗೌಡ ಹಾಗೂ ಶಾಸಕ ಶಿವಲಿಂಗೇಗೌಡ ಮುಂಬೈನತ್ತ ಪ್ರಯಾಣ ಬೆಳೆಸಿದ್ದರು. ಆದರೆ ಅವರು ಮುಂಬೈ ತಲುಪುತ್ತಿದ್ದಂತೆಯೇ ಹೋಟೆಲ್ ಸುತ್ತಮುತ್ತ ಬಿಗಿ ಭದ್ರತೆಯನ್ನು ಕೈಗೊಳ್ಳಲಾಯಿತು. ಕಾಂಗ್ರೆಸ್ ನಾಯಕರು ಹೋಟೆಲ್ ಬಳಿ ಬರುತ್ತಿದ್ದಂತೆಯೇ ಮುಂಬೈ ಪೊಲೀಸರು ಅವರನ್ನು ತಡೆದಿದ್ದಾರೆ. ಆದರೆ ಹೋಟೆಲ್ ಒಳಗಡೆ ಹೋಗಲು ಬಿಡದಿದ್ದರೆ ಇಡೀ ದಿನ ಇಲ್ಲೇ ಕಾಯ್ತೀನಿ ಎಂದು ಡಿಕೆಶಿ ಪಟ್ಟು ಹಿಡಿದಿದ್ದಾರೆ.
ಮುಂಬೈನಲ್ಲಿ ಕರ್ನಾಟಕ ರಾಜ್ಯ ರಾಜಕಾರಣದ ಹೈಡ್ರಾಮಾ ನಡೆಯುತ್ತಿದ್ದು, ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ..
ಮುಂಬೈ: ಅತೃಪ್ತರನ್ನು ಭೇಟಿ ಮಾಡಲು ಸಚಿವ ಡಿ.ಕೆ ಶಿವಕುಮಾರ್ ಮುಂಬೈನ ಹೋಟೆಲ್‍ಗೆ ತಲುಪುತ್ತಿದ್ದಂತೆ ಇತ್ತ ಅತೃಪ್ತ ಶಾಸಕರು ಹಿಂಬದಿಯ ಗೇಟಿನಿಂದ ಎಸ್ಕೇಪ್ ಆಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಅತೃಪ್ತ ಶಾಸಕರೆಲ್ಲರೂ ಹೋಟೆಲ್ ಹಿಂಬದಿ ಗೇಟ್‍ನಿಂದ ಎಸ್ಕೇಪ್ ಆಗಿದ್ದಾರೆ. ಡಿ.ಕೆ ಶಿವಕುಮಾರ್ ಹೋಟೆಲ್ ಮುಂಭಾಗದ ಗೇಟಿನಲ್ಲಿ ಅತೃಪ್ತರ ಶಾಸಕರನ್ನು ಭೇಟಿ ಆಗಿಯೇ ಆಗುತ್ತೇನೆ. ಅವರನ್ನು ಭೇಟಿ ಆಗುವವರೆಗೂ ಇಲ್ಲಿಯೇ ಇರುತ್ತೇನೆ ಎಂದು ಪಟ್ಟು ಹಿಡಿದಿದ್ದಾರೆ. ಹಾಗಾಗಿ ಶಾಸಕರು ಹೋಟೆಲ್‍ನಿಂದ ವಿಶೇಷ ಬಸ್ಸಿನಲ್ಲಿ ಎಸ್ಕೇಪ್ ಆಗಿದ್ದಾರೆ.
ಶಾಸಕರಿಗೆ ಮಾಹಿತಿ ಬಂದಿರುವ ಕಾರಣ ಅವರು ಹೋಟೆಲ್‍ನಿಂದ ಹೊರ ಹೋಗಿದ್ದಾರೆ. ಡಿಕೆಶಿ ಹೋಗುವವರೆಗೂ ಶಾಸಕರು ಲಗೇಜ್ ರೂಮಿನಲ್ಲಿಯೇ ಬಿಟ್ಟು ಹೊರ ಹೋಗಿದ್ದಾರೆ ಹೊರತು ಹೋಟೆಲ್ ಖಾಲಿ ಮಾಡಿಲ್ಲ. ಅಲ್ಲದೆ ಡಿಕೆಶಿ ಶಾಸಕರನ್ನು ಭೇಟಿ ಆಗಿಯೇ ಆಗುತ್ತೇನೆ ಎಂದು ಹೇಳುತ್ತಿದ್ದಾರೆ.
ಶಾಸಕರು ಇದ್ದ ರೂಂ ಈಗ ಖಾಲಿ ಆಗಿದೆ. ಶಾಸಕರು ಆ ರೂಂ ಖಾಲಿ ಮಾಡಿ ಬೇರೆ ಹೋಟೆಲಿಗೆ ಶಿಫ್ಟ್ ಆಗಿದ್ದಾರೆ. ಸದ್ಯ ಶಾಸಕರ ಲಗೇಜ್ ರೂಮಿನಲ್ಲಿಯೇ ಇದ್ದು, ಹೋಟೆಲ್ ಸಿಬ್ಬಂದಿ ಮೂಲಕ ತಮ್ಮ ಈಗಿರುವ ಹೋಟೆಲ್‍ಗೆ ತರಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.
ಅತೃಪ್ತರ ಶಾಸಕರನ್ನು ಭೇಟಿ ಮಾಡಲು ಮುಂಬೈಗೆ ತೆರಳಿರುವ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಪೊಲೀಸರು ಹೋಟೆಲ್ ಒಳಗಡೆ ಬಿಡಲು ನಿರಾಕರಿಸಿದ್ದಾರೆ. ಈ ವೇಳೆ ಡಿಕೆಶಿ ಜೊತೆ ಮುಂಬೈ ಪೊಲೀಸರು ಮಾತುಕತೆ ನಡೆಸುವ ಮೂಲಕ ಭಾರೀ ಹೈಡ್ರಾಮವೇ ನಡೆಯುತ್ತಿದೆ.
ಈ ಮಧ್ಯೆ ರಿನೈಸೆನ್ಸ್ ಹೋಟೆಲ್ ಗೇಟ್ ಬಂದ್ ಮಾಡಲಾಗಿದ್ದು, ಡಿಕೆಶಿ ಅವರು ಹೋಟೆಲ್ ಹೊರಗೆ ಬರುತ್ತಿದ್ದಂತೆ ಪೊಲೀಸರು ಅವರನ್ನು ಒಳಗೆ ಹೋಗದಂತೆ ತಡೆದಿದ್ದಾರೆ. ಹೀಗಾಗಿ ಪೊಲೀಸರ ಜೊತೆ ಸಚಿವರು ವಾಗ್ವಾದಕ್ಕೆ ಇಳಿದಿದ್ದರು. ಇದೇ ವೇಳೆ ಗೋಬ್ಯಾಕ್ ಡಿಕೆ ಶಿವಕುಮಾರ್ ಎಂದು ಅತೃಪ್ತ ನಾಯಕರ ಬೆಂಬಲಿಗರು ಘೋಷಣೆ ಕೂಗುತ್ತಿದ್ದಾರೆ. ಆದರೆ ಯಾರು ಏನು ಬೇಕಾದರೂ ಮಾಡಲಿ, ಗೋ ಬ್ಯಾಕ್ ಎಂದಾದರೂ ಹೇಳಲಿ, ಗೋ ಎಸ್ ಎಂದಾದರೂ ಹೇಳಲಿ. ನಾನೂ ಈ ಹೋಟೆಲ್‍ನಲ್ಲಿ ರೂಮ್ ಬುಕ್ ಮಾಡಿದ್ದೇನೆ. ಇಡೀ ದಿನಾ ಇಲ್ಲೆ ಇರುತ್ತೇನೆ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.
ಮುಂಬೈ: ನಮ್ಮ ಸ್ನೇಹಿತರನ್ನು ಭೇಟಿ ಮಾಡಲು ಬಂದಿದ್ದೇವೆ. ನಾವು ಇಲ್ಲಿ ದರೋಡೆ ಅಥವಾ ಕಿಡ್ನಾಪ್ ಮಾಡೋಕೆ ಬಂದಿಲ್ಲ. ಇದು ಬಿಜೆಪಿ ಹೋಟೆಲಾ, ಸಾರ್ವಜನಿಕರಿಗೆ ಬರಬೇಡಿ ಎಂದು ತಡೆಯುವುದು ತಪ್ಪು ಎಂದು ಶಾಸಕ ಶಿವಲಿಂಗೇಗೌಡ ಗರಂ ಆಗಿದ್ದಾರೆ.
ಮುಂಬೈ ಹೋಟೆಲ್ ಮುಂಭಾಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಿವಲಿಂಗೇಗೌಡ, ನಾವು ಬಂದಿರುವುದು ನಮ್ಮ ಶಾಸಕರನ್ನು ಭೇಟಿ ಮಾಡಲು. ಬಿಜೆಪಿಯವರು ನಮ್ಮ ಶಾಸಕರನ್ನು ಬಂಧನದಲ್ಲಿಟ್ಟಿದ್ದಾರೆ. ಈ ಬಗ್ಗೆ ನಮ್ಮ ಶಾಸಕರು ನಮಗೆ ಮಾಹಿತಿ ತಿಳಿಸಿದ್ದಾರೆ. ಹೀಗಾಗಿ ಬಂದಿದ್ದೇವೆ ಎಂದರು.
ಇದು ಖಾಸಗಿ ಹೋಟೆಲ್, ಜೆಡಿಎಸ್ ಎಂಎಲ್‍ಎ ಬರಬೇಡಿ, ಆ ಎಂಎಲ್‍ಎ ಬರಬೇಡಿ ಎಂದರೆ ಹೇಗೆ. ಅವರು ಈ ಹೋಟೆಲ್‍ಗೆ ಕಸ್ಟಮರ್ಸ್, ಅವರ ಪಾಡಿಗೆ ಅವರು ಇದ್ದಾರೆ. ಯಾರನ್ನಾದರೂ ಬಲವಂತವಾಗಿ ಕಿಡ್ನಾಪ್ ಮಾಡಿದರೆ ಮಾತ್ರ ಪೊಲೀಸ್ ಅವರು ಎಂಟ್ರಿ ಆಗಬೇಕು. ಆದರೆ ಈ ರೀತಿ ಹೋಟೆಲ್‍ಗೆ ಹೋಗದಂತೆ ತಡೆಯುವುದು ತಪ್ಪು ಎಂದು ಶಿವಲಿಂಗೇಗೌಡ ಆಕ್ರೊಶ ವ್ಯಕ್ತಪಡಿಸಿದರು.
ರಾತ್ರಿ ಬಿಜೆಪಿ ಅವರು ಭೇಟಿ ಮಾಡಿ ಹೋಗಿದ್ದಾರೆ. ಹೀಗಾಗಿ ನಾವು ಅವರನ್ನು ಭೇಟಿ ಮಾಡಿ, ನಿಮ್ಮನ್ನು ಬಂಧನದಲ್ಲಿಟ್ಟಿದ್ದಾರಾ ಅಥವಾ ಸ್ವತಂತ್ರವಾಗಿ ಇಟ್ಟಿದ್ದಾರಾ ಎಂದು ಕೇಳುತ್ತೇವೆ. ಬಿಜೆಪಿಯವರು ಅವರನ್ನು ಬಲವಂತವಾಗಿ ಕರೆದುಕೊಂಡು ಬಂದಿದ್ದಾರೆ. ಕಳೆದ ದಿನ ಆರ್.ಅಶೋಕ್ ಮತ್ತು ಬೋಪಯ್ಯ ಇಬ್ಬರು ಬಂದು ಬಲವಂತವಾಗಿ ದೂರು ಕೊಟ್ಟಿದ್ದಾರೆ ಎಂದು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದರು.
Police escorts Karnataka Minister DK Shivakumar away from the gates of Renaissance – Mumbai Convention Centre Hotel where 10 rebel Congress-JD(S) MLAs are staying. The MLAs had written to Police stating"We've heard CM&DK Shivakumar are going to storm the hotel,we feel threatened" pic.twitter.com/KCPmJzZjPH
ನಮ್ಮ ಸ್ನೇಹಿತರನ್ನು ಭೇಟಿ ಮಾಡಿ ಅವರು ಸ್ವ-ಇಚ್ಛೆಯಿಂದ ಬಂದಿದ್ದಾರೆ ಎಂದು ತಿಳಿದುಕೊಂಡು ಹೋಗುತ್ತೇವೆ ಎಂದು ಶಿವಲಿಂಗೇಗೌಡ ಹೇಳಿದರು.
ಮುಂಬೈ ಹೋಟೆಲ್ ನಲ್ಲಿ 10 ಮಂದಿ ಅತೃಪ್ತ ಶಾಸಕರು ವಾಸ್ತವ್ಯ ಹೂಡಿದ್ದು, ರಾಜೀನಾಮೆ ಅಂಗೀಕರವಾಗುವವರೆಗೆ ಬೆಂಗಳೂರಿಗೆ ವಾಪಸ್ ಬರಲ್ಲ ಎಂದು ಖಡಕ್ ಆಗಿ ಎಚ್ಚರಿಕೆ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸಚಿವ ಡಿಕೆ ಶಿವಕುಮಾರ್, ಶಾಸಕ ಶಿವಲಿಂಗೇಗೌಡ ಹಾಗೂ ಸಚಿವ ಜಿ.ಟಿ ದೇವೇಗೌಡ ಅವರು ಮುಂಬೈಗೆ ತೆರಳಿದ್ದರು. ಆದರೆ ಇದೀಗ ಅವರನ್ನು ಹೋಟೆಲ್ ಒಳಗಡೆ ಬಿಡಲು ಪೊಲೀಸರು ನಿರಾಕರಿಸುತ್ತಿದ್ದು, ಭಾರೀ ಹೈಡ್ರಾಮವೇ ನಡೆಯುತ್ತಿದೆ.
ಇಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ
ಡಿ.ಕೆ ಶಿವಕುಮಾರ್ ಇಂದು ಮುಂಜಾನೆ ದೇವನಹಳ್ಳಿ ಏರ್ ಪೋರ್ಟಿನಿಂದ ಸುಮಾರು 6.10ಕ್ಕೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಡಿಕೆಶಿ ಜೊತೆ ಜಿ.ಟಿ ದೇವೇಗೌಡ, ಶಿವಲಿಂಗೇಗೌಡ, ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಶಾಸಕರು ಮುಂಬೈಗೆ ಹೊರಟಿದ್ದಾರೆ. ಶಿವಕುಮಾರ್ ಮುಂಬೈಗೆ ತೆರಳುವ ಮುನ್ನ ಸಿಎಂ ಜೊತೆ ಸುಮಾರು 1 ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಇತ್ತ ಶಿವಕುಮಾರ್ ಆಗಮನದ ಸುದ್ದಿ ಕೇಳಿ ಬೆದರಿದ ಅತೃಪ್ತರು, ರಾತ್ರೋರಾತ್ರಿ ಪೊಲೀಸ್ ಕಮಿಷನರ್‌ಗೆ ದೂರು ಸಲ್ಲಿಸಿದ್ದಾರೆ. ಸಿಎಂ ಮತ್ತು ಡಿಕೆಶಿಯಿಂದ ನಮಗೆ ಬೆದರಿಕೆ ಇದೆ. ನಾವು ವಾಸ್ತವ್ಯ ಹೂಡಿರುವ ಹೋಟೆಲ್‍ಗೆ ಡಿಕೆಶಿ ದಾಳಿ ಮಾಡುವ ಸಾಧ್ಯತೆ ಇದೆ. ನಾವು ಹೋಟೆಲ್‍ನಲ್ಲಿ ಯಾರನ್ನೂ ಭೇಟಿ ಮಾಡಲು ಇಷ್ಟ ಪಡುವುದಿಲ್ಲ. ನಮಗೆ ಯಾರೊಂದಿಗೂ ಮಾತನಾಡುವ ಅವಶ್ಯಕತೆಯೂ ಕೂಡ ಇಲ್ಲ. ತಮ್ಮ ಖಾಸಗಿತನಕ್ಕೆ ರಕ್ಷಣೆ ಕೊಡಿ. ಡಿ.ಕೆ ಶಿವಕುಮಾರ್ ಅವರನ್ನು ಹೋಟೆಲ್ ಪ್ರವೇಶಿಸದಂತೆ ತಡೆಯಬೇಕು. ತಮಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಅತೃಪ್ತ ಶಾಸಕರು ಮನವಿ ಮಾಡಿದ್ದಾರೆ.
ಈ ಬೆನ್ನಲ್ಲೇ ಮುಂಬೈ ಪೊಲೀಸರು ಹೋಟೆಲ್‍ಗೆ ಬಿಗಿ ಭದ್ರತೆ ಒದಗಿಸಿದ್ದಾರೆ. ಮಧ್ಯರಾತ್ರಿ ಮಾತನಾಡಿದ ಕೆ.ಆರ್ ಪೇಟೆ ಶಾಸಕ ನಾರಾಯಣಗೌಡ, ಮುಂಬೈಗೆ ಬರಬೇಡಿ ಎಂದು ಸಿಎಂ ಮತ್ತು ಡಿಕೆ ಶಿವಕುಮಾರ್‍ಗೆ ಸಂದೇಶ ರವಾನಿಸಿದ್ದೇವೆ. ನೀವು ಬಂದರೂ ನಾವು ಸಿಗಲ್ಲ. ನಾವು ಯಾರೊಂದಿಗೂ ಮಾತನಾಡಲ್ಲ. ರಾಜೀನಾಮೆಯನ್ನು ವಾಪಸ್ ಪಡೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಪರೇಷನ್ ಕಮಲವನ್ನು ಆರಂಭ ಮಾಡಿರುವ ಬಿಜೆಪಿ ಶಾಸಕರು, ಈಗ ಏನು ತಿಳಿಯದಂತೆ ಮಾತನಾಡುತ್ತಿದ್ದಾರೆ. ಆದ್ದರಿಂದ ನನ್ನ ಸ್ನೇಹಿತರು, ಶಾಸಕರನ್ನು ಭೇಟಿ ಮಾಡಲು ನಾಳೆ ಮುಂಬೈಗೆ ತೆರಳುತ್ತೇನೆ. ಪಕ್ಷದ ವಿರುದ್ಧ ಅಸಮಾಧಾನಗೊಂಡಿರುವ ಶಾಸಕರು ಈ ಹಿಂದೆ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ನಾಯಕರು. ಪಕ್ಷ ಸಂಕಷ್ಟದಲ್ಲಿ ಇದ್ದ ವೇಳೆ ಅವರು ಹೆಗಲು ನೀಡಿ ನಿಂತಿದ್ದರು. ಆದರೆ ಇಂದು ಅವರು ಅಸಮಾಧಾನ ಹೊಂದಿದ್ದಾರೆ. ಅವರ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಡಿಕೆಶಿ ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದರು.
– ರಾಜಕೀಯ ನಿವೃತ್ತಿ ಪಡೆಯಲು ಸಿದ್ಧ – ಬಾಂಬೆಗೆ ಆಟವಾಡಲು ನಾವು ಬಂದಿಲ್ಲ
ಮುಂಬೈ: ಸಿದ್ದರಾಮಯ್ಯನವರು ನಮ್ಮ ಪಕ್ಷಕ್ಕೆ ಬರುವುದಕ್ಕೆ ಮೊದಲೇ ನಾನು ಕಾಂಗ್ರೆಸ್‍ನಲ್ಲಿದ್ದೇವೆ ಎಂದು ಭೈರತಿ ಬಸವರಾಜ್ ಖಡಕ್ ಆಗಿ ಹೇಳಿದ್ದಾರೆ.
ಹೋಟೆಲಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಗ್ರಾಮ ಪಂಚಾಯತ್‍ನಿಂದ ಸ್ಪರ್ಧಿಸಿ ಶಾಸಕನಾಗಿದ್ದೇನೆ. 30 ವರ್ಷಗಳಿಂದ ಪಕ್ಷ ಕಟ್ಟಿದ್ದೇನೆ. ನಾವು ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇವೆಯೇ ಹೊರತು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ ಎಂದರು.
ಈ ವೇಳೆ ಮಾಧ್ಯಮವರು ನಿಮ್ಮ ಅನರ್ಹತೆ ಮಾಡಲು ದೂರು ನೀಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ ಎನ್ನುವ ವಿಚಾರಕ್ಕೆ, ಸಿದ್ದರಾಮಯ್ಯ ಬರುವುದಕ್ಕೆ ಮೊದಲೇ ನಾನು ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದೇವೆ. ಅನರ್ಹತೆ ಮಾಡಿದರೂ ನಮಗೂ ಕಾನೂನು ಏನು ಎನ್ನುವುದು ತಿಳಿದಿದೆ. ರಾಜಕೀಯದಲ್ಲೇ ಇರಬೇಕು ಎನ್ನುವ ಆಸೆಯೂ ನನಗಿಲ್ಲ. ಮನೆಯಲ್ಲೇ ಬೇಕಾದರೆ ಇರುತ್ತೇನೆ ಎಂದು ಹೇಳಿದರು.
ಬಾಂಬೆಗೆ ಆಟವಾಡಲು ನಾವು ಬಂದಿಲ್ಲ. ನಮ್ಮ ಕ್ಷೇತ್ರದ ಜನರು ಅಭಿವೃದ್ಧಿಯಾಗಿಲ್ಲ ಎಂದು ನಮಗೆ ಪ್ರಶ್ನೆ ಮಾಡುತ್ತಿದ್ದರು. ಇದರಿಂದ ನಮಗೆ ಬಹಳಷ್ಟು ನೋವಾಗಿದೆ. ಆ ನೋವನ್ನು ಸಹಿಸಿಕೊಳ್ಳಲಾಗದೇ ನಾವು ರಾಜೀನಾಮೆ ಕೊಟ್ಟಿದ್ದೇವೆ. ನಾವು ಇನ್ನೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದೀವಿ. ಕಾಂಗ್ರೆಸ್ ಪಕ್ಷ ಬಿಟ್ಟಿಲ್ಲ ಎಂದು ಹೇಳಿದರು.
ಸ್ಪೀಕರ್ ಬಗ್ಗೆ ನಮಗೆ ಅಪಾರ ನಂಬಿಕೆ ಇದೆ. ಅವರು ಅನರ್ಹ ಮಾಡುವುದಿಲ್ಲ. ನಮಗೆ ಬಹಳ ನೋವಿತ್ತು. ಆ ನೋವಿಗೆ ಶಾಸಕರ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇವೆ. ಪಾರ್ಟಿಗೆ ರಾಜೀನಾಮೆ ಕೊಟ್ಟಿಲ್ಲ. ಮುಂದೆ ಏನೇ ಆದರೂ ನಾವು ರಾಜೀನಾಮೆಯನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಅವರು ಅನರ್ಹ ಮಾಡಿದರೂ ನಾವು ರಾಜೀನಾಮೆ ವಾಪಸ್ ಪಡೆಯುವುದಿಲ್ಲ. ರಾಜಕಾರಣ ಇಲ್ಲದಿದ್ದದರು ಪರವಾಗಿಲ್ಲ, ನಾವು ನಮ್ಮ ಮನೆಯಲ್ಲಿ ಇರುತ್ತೇವೆ. ರಾಜಕಾರಣ ಮಾಡಿ ಬದುಕಬೇಕು ಎಂಬ ಅನಿವಾರ್ಯತೆ ಇಲ್ಲ ಎಂದು ಭೈರತಿ ಬಸವರಾಜು ಗರಂ ಆಗಿ ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ 35 ವರ್ಷ ಕೆಲಸ ಮಾಡಿಕೊಂಡು ಬಂದಿದ್ದೇನೆ. ಸಿದ್ದರಾಮಯ್ಯ ಅವರಿಗಿಂದ ಮುಂಚೆಯೇ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ನಮಗೆ ಎಷ್ಟು ನೋವಿದೆ ಎಂದು ಹೇಳಲು ಸಾಧ್ಯವಿಲ್ಲ. ಇಂದಿಗೂ ಕೂಡ ನಾನು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿಲ್ಲ. ನನ್ನ ನೋವು, ಕಷ್ಟಗಳನ್ನು ಅವರ ಬಳಿ ಹೇಳಿಕೊಂಡೆ. ಆದರೆ ಸರ್ಕಾರ ಯಾವುದಕ್ಕೂ ಸ್ಪಂದಿಸಲಿಲ್ಲ. ನಾನು ನೋವನ್ನು ಹೇಳಿಕೊಂಡು ತನ್ನ ತಾಯಿ ಮೇಲೆ ಆಣೆ ರಾಜೀನಾಮೆ ಕೊಡುತ್ತಿದ್ದೇನೆ ಎಂದು ಹೇಳಿ ಬಂದಿದ್ದೇನೆ ಎಂದರು.
ಈಗ ರಾಜೀನಾಮೆ ಕೊಟ್ಟು ಆಗಿದೆ. ಅದನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಮುನಿರತ್ನ ಅವರು, ಏಳು ಬಾರಿ ಗೆದ್ದ ರಾಮಲಿಂಗಾ ರೆಡ್ಡಿ ಅವರು ರಾಜೀನಾಮೆ ಕೊಟ್ಟಿದ್ದಾರೆ. ಅವರಿಗೆ ಎಷ್ಟು ನೋವಾಗಿರಬೇಕು. ಇಂದು ರೋಷನ್ ಬೇಗ್ ಕೂಡ ರಾಜೀನಾಮೆ ಕೊಟ್ಟಿದ್ದಾರೆ. ಹೀಗಾಗಿ ಈ ರಾಜಕಾರಣದಿಂದ ಎಲ್ಲರಿಗೂ ಸಾಕಾಗಿದೆ. ಅವರು ಅನರ್ಹಗೊಳಿಸಲಿ, ಏನೇ ಮಾಡಲಿ ರಾಜೀನಾಮೆ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಆಗಿ ತಮ್ಮ ನಿರ್ಧಾರವನ್ನು ತಿಳಿಸಿದರು.
ನಮ್ಮನ್ನು ಯಾರು ಬಂಧನದಲ್ಲಿ ಇಟ್ಟಿಲ್ಲ. ಸ್ಪೀಕರ್ ಈಗ ಫೋನ್ ಮಾಡಿ ಕರೆದರೆ ತಕ್ಷಣ ಬೆಂಗಳೂರಿಗೆ ಹೋಗುತ್ತೇವೆ. ನಮ್ಮ ಸ್ವಂತಃ ಖರ್ಚಿನಿಂದ ಇಲ್ಲಿಗೆ ಬಂದಿರುವುದು. ಯಾರ ಆಶ್ರಯವನ್ನು ಪಡೆದುಕೊಂಡು ಬಂದಿಲ್ಲ. ಪಕ್ಷ ಕಟ್ಟಿ ಬೆಳೆಸಿದವರು ನಾವು. ನಾವು ಯಾಕೆ ಕುದುರೆ ವ್ಯಾಪರಕ್ಕೆ ಬಗ್ಗೋದು. ಅದರ ಅವಶ್ಯಕತೆ ನಮಗೆ ಇಲ್ಲ. 13 ಜನರು ಶಾಸಕರು ಯಾರು ರಾಜೀನಾಮೆ ವಾಪಸ್ ಪಡೆಯಲ್ಲ. ಸಭಾಧ್ಯಕ್ಷರು ಕರೆಯಲಿ ಅವರ ಬಳಿ ನಮ್ಮ ಮನವಿ ಹೇಳಿಕೊಳ್ಳುತ್ತೇವೆ. ನಾವು ರಾಜಕೀಯ ನಿವೃತ್ತಿ ಪಡೆಯಲು ಸಿದ್ಧರಿದ್ದೇವೆ. ಇಲ್ಲಿಯವರೆಗೂ ರಾಜಕಾರಣಲ್ಲಿ ಕೈ-ಬಾಯಿಯನ್ನು ಶುದ್ಧವಾಗಿಟ್ಟುಕೊಂಡು ಕೆಲಸ ಮಾಡಿಕೊಂಡು ಬಂದಿದ್ದೇನೆ. ನಾವು ಮಂತ್ರಿಯನ್ನು ಕೇಳಿಲ್ಲ ಎಂದು ಭೈರತಿ ಬಸವರಾಜ್ ಸ್ಪಷ್ಟಪಡಿಸಿದರು.
ಹಾವೇರಿ: ಜಿಲ್ಲೆಯ ಹಿರೇಕೆರೂರಿನ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕೆ ಬಿ.ಸಿ.ಪಾಟೀಲ್ ಕ್ಷೇತ್ರದ ಕಾರ್ಯಕರ್ತರಲ್ಲಿ ವಾಟ್ಸಪ್ ಗ್ರೂಪ್ ಮೂಲಕ ಕ್ಷಮೆ ಕೇಳಿದ್ದಾರೆ.
ಬಿ.ಸಿ.ಪಾಟೀಲ್ ಅವರು ಮಂತ್ರಿ ಸ್ಥಾನ ಕೊಡದೇ ಪಕ್ಷ ತಾಲೂಕಿಗೆ ಅನ್ಯಾಯ ಮಾಡಿದೆ ಎಂಬ ಸಂದೇಶವನ್ನ ಹಾಕಿದ್ದು, ವಾಟ್ಸಪ್ ಗ್ರೂಪ್ ಮೂಲಕ ಕಾರ್ಯಕರ್ತರಲ್ಲಿ ಕ್ಷಮೆ ಕೇಳಿದ್ದಾರೆ. ನಿಮ್ಮ ಸಲಹೆ ಸೂಚನೆ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳತ್ತೇನೆ ಎಂಬ ಸಂದೇಶವನ್ನ ತಾಲೂಕಿನ ಕಾರ್ಯಕರ್ತರಿಗೆ ರವಾನಿಸಿದ್ದಾರೆ.
ಸಂದೇಶ:
ಆತ್ಮೀಯ ಬಂಧುಗಳೇ ರಾಜಕೀಯ ಗೊತ್ತಿಲ್ಲದ ನನಗೆ ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದಾಗ ಮೂರು ಬಾರಿ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದೀರಿ. ಇದುವರೆಗೂ ನಾನು ನನ್ನ ಕೈಲಾದ ಅಭಿವೃದ್ಧಿ ಕೆಲಸವನ್ನು ಸರ್ಕಾರದಿಂದ ಮಾಡಿ ತಾಲೂಕು ಅಭಿವೃದ್ಧಿಯ ಕಡೆಗೆ ದಾಪುಗಾಲಿಟ್ಟಿದೆ. ಈಗ ತಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ತಾಲೂಕಿಗೆ ಸಾಕಷ್ಟು ಅನ್ಯಾಯವನ್ನು ಮಾಡಿ ಕಾಂಗ್ರೆಸ್ ಪಕ್ಷ ಬೇರೆಯವರಿಗೆ ಮಂತ್ರಿ ಪದವಿಯನ್ನು ಕೊಟ್ಟು ನಮ್ಮ ತಾಲೂಕಿಗೆ ದೊಡ್ಡ ದ್ರೋಹವನ್ನು ಮಾಡಿದೆ. ಇದರಿಂದಾಗಿ ಸರ್ವತೋಮುಖ ಅಭಿವೃದ್ಧಿಗೆ ಕುಂಠಿತವಾಗುತ್ತದೆ.
ಅಲ್ಲದೆ ಮುಂದಿನ ತಾಲೂಕಿನ ಬೃಹತ್ ಭವಿಷ್ಯವನ್ನು ನೆನೆದು ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದೇನೆ. ತಮ್ಮ ಕ್ಷಮೆ ಇರಲಿ, ಮುಂದಿನ ದಿನಗಳಲ್ಲಿ ತಮ್ಮ ಸಲಹೆ ಸೂಚನೆಗಳನ್ನು ಪಡೆದು ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತೇನೆ. ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು, ಸದಾ ನಿಮ್ಮ ಆಶೀರ್ವಾದ ಬೇಕೆಂದು ಕೇಳಿ ಮತ್ತೊಮ್ಮೆ ತಮ್ಮಲ್ಲಿ ಕ್ಷಮೆಯನ್ನು ಕೇಳಿ ತಮ್ಮ ಆಶೀರ್ವಾದವನ್ನು ಬೇಡುತ್ತಿದ್ದೇನೆ ಇಂತಿ ನಿಮ್ಮ ವಿಶ್ವಾಸಿ ಬಿ.ಸಿ ಪಾಟೀಲ್ ಎಂದು ವಾಟ್ಸಪ್ ಗ್ರೂಪಿಗೆ ಸಂದೇಶ ರವಾನೆ ಮಾಡಿದ್ದಾರೆ.
ವಾಪಸ್ ಪಡೆಯಲ್ಲ: ಕಳೆದ ದಿನ ರಾಜೀನಾಮೆ ನೀಡಿದ್ದೇನೆ. ಯಾವುದೇ ಕಾರಣಕ್ಕೂ ರಾಜೀನಾಮೆಯನ್ನು ವಾಪಸ್ಸ್ ಪಡೆಯುವುದಿಲ್ಲ. ಮುಂದೆ ಏನಾಗಬೇಕು, ಎನು ಮಾಡಬೇಕು ಅನ್ನೋ ಚರ್ಚೆ ಆಗಿಲ್ಲ. ಮುಂದೆ ಏನಾಗುತ್ತೆ ಕಾದುನೋಡೋಣ. ಕ್ಷೇತ್ರದ ಜನರ ಹಾಗೂ ಕಾರ್ಯಕರ್ತರ ಅಭಿಪ್ರಾಯ ಕೇಳಿದ್ದೇನೆ. ಕ್ಷೇತ್ರಕ್ಕೆ ಅನ್ಯಾಯವಾದ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿದ್ದೇನೆ. ಅವರು ಸಹ ಸಹಮತ ನೀಡಿದ್ದಾರೆ. ನಾವೆಲ್ಲ ಮುಂಬೈನಲ್ಲಿ ಇದ್ದೇವೆ. ಬಿಜೆಪಿಗೆ ಹೋಗುವ ಬಗ್ಗೆ ಚರ್ಚೆ ಆಗಿಲ್ಲ. ಇನ್ನೂ ಕೆಲವು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಪಬ್ಲಿಕ್ ಟಿವಿಗೆ ದೂರವಾಣಿ ಮೂಲಕ ಬಿಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ದೋಸ್ತಿ ಸರ್ಕಾರ ಪತನಕ್ಕೆ ಕೌಂಟ್‍ಡೌನ್ ಶುರುವಾಗಿದ್ದು, ಈಗಾಗಲೇ 14 ಅತೃಪ್ತ ಶಾಸಕರು ಅಧಿಕೃತವಾಗಿ ರಾಜೀನಾಮೆ ಕೊಟ್ಟಿದ್ದಾರೆ. ಈಗ ಮೈತ್ರಿ ಸರ್ಕಾರದ ಮತ್ತಷ್ಟು ವಿಕೆಟ್‍ಗಳು ಪತನವಾಗುವ ಸಾಧ್ಯತೆ ಇದೆ.
ಇಂದು ಇನ್ನಷ್ಟು ಅತೃಪ್ತ ಶಾಸಕರು ರಾಜೀನಾಮೆ ಕೊಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ, ಎಚ್‍ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಚಿಕ್ಕೋಡಿ ಶಾಸಕ ಗಣೇಶ್ ಹುಕ್ಕೇರಿ, ಖಾನಾಪುರದ ಶಾಸಕಿ ಅಂಜಲಿ ನಿಂಬಾಳ್ಕರ್, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್, ಜಯನಗರ ಶಾಸಕಿ ಸೌಮ್ಯ ರೆಡ್ಡಿ ಮತ್ತು ಶಿಡ್ಲಘಟ್ಟ ಶಾಸಕ ವಿ. ಮುನಿಯಪ್ಪ ರಾಜೀನಾಮೆ ನೀಡುವ ಶಾಸಕರ ಪಟ್ಟಿಯಲ್ಲಿ ಹೆಸರಿದೆ.
ಇಂದು ರಾಜೀನಾಮೆ ಕೊಡುವವರ ಪಟ್ಟಿಯಲ್ಲಿರುವ ಶಾಸಕರು ಈ ಹಿಂದೆಯೇ ರಾಜೀನಾಮೆ ಕೊಡುವ ಬಗ್ಗೆ ಮಾತನಾಡಿದ್ದರು. ಹೀಗಾಗಿ ಇಂದು ಅತೃಪ್ತ ಶಾಸಕರು ರಾಜೀನಾಮೆ ಕೊಡುವ ಸಾಧ್ಯತೆ ಇದೆ. ಕಳೆದ ದಿನ ರಮೇಶ್ ಜಾರಕಿಹೊಳಿ, ಬಿ.ಸಿ. ಪಾಟೀಲ್, ಪ್ರತಾಪ್‍ಗೌಡ ಪಾಟೀಲ್, ಶಿವರಾಮ್ ಹೆಬ್ಬಾರ್, ಮಹೇಶ್ ಕುಮಟಳ್ಳಿ, ಎಚ್. ವಿಶ್ವನಾಥ್, ನಾರಾಯಣಗೌಡ, ಗೋಪಾಲಯ್ಯ, ರಾಮಲಿಂಗಾರೆಡ್ಡಿ, ಎಸ್.ಟಿ ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ, ಮತ್ತು ಆನಂದ ಸಿಂಗ್ ರಾಜೀನಾಮೆ ನೀಡಿದ್ದಾರೆ.
ಶನಿವಾರ ರಾಜೀನಾಮೆ ಕೊಟ್ಟ ನಂತರ ಸಂಜೆ 6.35ಕ್ಕೆ ಎಚ್‍ಎಎಲ್‍ನಿಂದ ವಿಮಾನ ಟೇಕಾಫ್ ಆಗಿ, ರಾತ್ರಿ 8.10ಕ್ಕೆ ಮುಂಬೈನಲ್ಲಿ ಲ್ಯಾಂಡ್ ಆಗಿದೆ. ರಾಮಲಿಂಗಾರೆಡ್ಡಿ, ಮುನಿರತ್ನ ಹಾಗೂ ಆನಂದ್ ಸಿಂಗ್ ಅವರು ಮುಂಬೈಗೆ ಹೋಗಿಲ್ಲ. ಆದರೆ ರೆಸಾರ್ಟ್ ರಾಜಕೀಯವನ್ನು ವಿರೋಧಿಸಿದ್ದ ವಿಶ್ವನಾಥ್ ಅವರೇ ಸಾರಥ್ಯ ವಹಿಸಿ, 10 ಜನರೊಂದಿಗೆ ಮುಂಬೈನ ರಿನೈಸಾನ್ಸ್ ಹೋಟೆಲ್ ತಲುಪಿದ್ದಾರೆ. ಇವರ ಜೊತೆಯಲ್ಲಿ ಮಲ್ಲೇಶ್ವರದ ಬಿಜೆಪಿ ಶಾಸಕ ಡಾ.ಅಶ್ವಥ್ ನಾರಾಯಣ, ಬಿಎಸ್‍ವೈ ಪಿಎ ಸಂತೋಷ್ ಇದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ.
ಬಾಗಲಕೋಟೆ: ಹೋಟೆಲ್‍ನಲ್ಲಿ ಚಹಾ ಕುಡಿಯುವ ವಿಚಾರವಾಗಿ ಎರಡು ಗುಂಪಿನ ಯುವಕರ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ನಡೆದಿದೆ.
ಭಾನುವಾರ ಸಂಜೆ ವಿದ್ಯಾಗಿರಿಯ ಅಕ್ಕಿಮರಡಿ ಎಂಬವರ ಪೆಟ್ರೋಲ್ ಬಂಕ್‍ನಲ್ಲಿ ಈ ಗಲಾಟೆ ನಡೆದಿದೆ. ಮುಚಖಂಡಿ ತಾಂಡ ಹಾಗೂ ಮುರನಾಳ ಗ್ರಾಮದ ಯುವಕರ ಗುಂಪು ಪರಸ್ಪರ ಕೋಲು ಹಾಗೂ ಕೈಯಿಂದ ಬಡಿದಾಡಿಕೊಂಡಿದ್ದಾರೆ. ಯುವಕರು ಬಡಿದಾಟದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸದ್ಯ ಹೊಡೆದಾಡಿಕೊಂಡ ದೃಶ್ಯ ವೈರಲ್ ಆಗಿದೆ. ಚಹಾ ಕುಡಿಯೋಕೆ ಇದೇ ಹೋಟೆಲ್‍ಗೆ ಯಾಕೆ ಬಂದ್ರಿ ಎಂದು ಒಂದು ಗುಂಪಿನ ಯುವಕರು ಪ್ರಶ್ನಿಸಿದ್ರೆ, ನಾವ್ ಬರ್ತೀವಿ ಅದನ್ನ ಕೇಳೋಕೆ ನೀವ್ಯಾರು ಎಂದು ಇನ್ನೊಂದು ಗುಂಪಿನ ಯುವಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ಜಗಳ ವಿಕೋಪಕ್ಕೆ ತೆರಳಿ ಮಾರಾಮಾರಿಯಾಗಿದೆ.
ಎರಡು ಗುಂಪಿನ ನಡುವೆ ನಡೆದ ಗಲಾಟೆಯಿಂದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಬಾಗಲಕೋಟೆ ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಬೆಂಗಳೂರು: ವಿರೋಧ ಇದ್ದರೂ ಸಿಎಂ ಐಷಾರಾಮಿ ಹೊಟೇಲ್ ವ್ಯಾಮೋಹ ಬಿಟ್ಟಿಲ್ಲ. ತಾಜ್ ವೆಸ್ಟ್ ಎಂಡ್‍ನಲ್ಲಿ ಇನ್ನೂ ಸಿಎಂ ವಾಸ್ತವ್ಯವನ್ನು ಮುಂದುವರಿಸಿದ್ದಾರೆ.
ಇತ್ತಿಚೇಗೆ ಸಿಎಂ ತಾಜ್ ಹೊಟೇಲ್ ಬಿಟ್ಟು ಜೆ.ಪಿ ನಗರದ ಮನೆಗೆ ಶಿಫ್ಟ್ ಆಗಿದ್ದಾರೆ. ಜೆ.ಪಿ ನಗರದ ನಿವಾಸದಿಂದಲೇ ಓಡಾಡುವ ಮನಸ್ಸು ಮಾಡಿದ್ದಾರೆ ಅಂತ ಹೇಳಲಾಗಿತ್ತು. ಆದರೆ ಸಿಎಂ ತಾಜ್ ವಾಸ್ತವ್ಯವನ್ನು ಇನ್ನೂ ಬಿಟ್ಟಿಲ್ಲ. ಈಗಲೂ ತಾಜ್‍ನಲ್ಲೆ ಸಿಎಂ ವಾಸ್ತವ್ಯ ಹೂಡಿದ್ದಾರೆ.
ಹೀಗಾಗಿ ಕೇವಲ ತೋರ್ಪಡಿಕೆಗೆ ಸಿಎಂ ವಾಸ್ತವ್ಯ ಬದಲಾವಣೆ ಅಂತ ಹೇಳಿಕೊಂಡ್ರಾ, ತಾಜ್ ಬಿಟ್ಟಿದ್ದಾರೆ ಅಂದ್ರು ಮತ್ತೆ ತಾಜ್‍ನಲ್ಲಿ ವಾಸ್ತವ್ಯ ಹೂಡುತ್ತಿರೋದ್ಯಾಕೆ, ಕೇವಲ ವಿಪಕ್ಷಗಳ ಬಾಯಿ ಮುಚ್ಚಿಸೋಕೆ ಸಿಎಂ ಇಂತಹ ಪ್ಲಾನ್ ಮಾಡಿದ್ರಾ ಎಂಬ ಪ್ರಶ್ನೆಗಳನ್ನು ವಿಪಕ್ಷಗಳು ಕೇಳುತ್ತಿವೆ.
ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಸಿಎಂ ಐಷಾರಾಮಿ ಹೋಟೆಲ್‍ನಲ್ಲಿ ವಾಸ್ತವ್ಯ ಮಾಡುತ್ತಿದ್ದು, ಗ್ರಾಮವಾಸ್ತವ್ಯ ಮಾಡುತ್ತಿಲ್ಲ ಎಂಬ ಚರ್ಚೆ ಶುರುವಾಗಿತ್ತು. ಅದರ ಬೆನ್ನಲ್ಲೇ ಸಿಎಂ ಗ್ರಾಮ ವಾಸ್ತವ್ಯ ಶುರು ಮಾಡುವುದಾಗಿ ಹೇಳಿದ್ದರು. ಇಂದು ಸಿಎಂ ತಮ್ಮ ಸ್ವಕ್ಷೇತ್ರ ಬೊಂಬೆನಗರಿ ಚನ್ನಪಟ್ಟಣಕ್ಕೆ ಭೇಟಿ ನೀಡಿ ಎರಡು ದಿನಗಳ ಕಾಲ ಪ್ರವಾಸವನ್ನ ಹಮ್ಮಿಕೊಂಡಿದ್ದಾರೆ.