Tag: Hotel

  • ಮುಸ್ಲಿಂ ಪುರುಷ, ಹಿಂದೂ ಮಹಿಳೆಗೆ ಪ್ರವೇಶ ನಿರಾಕರಿಸಿದ ಹೋಟೆಲ್

    ಮುಸ್ಲಿಂ ಪುರುಷ, ಹಿಂದೂ ಮಹಿಳೆಗೆ ಪ್ರವೇಶ ನಿರಾಕರಿಸಿದ ಹೋಟೆಲ್

    ಜೈಪುರ: ಮುಸ್ಲಿಂ ಪುರುಷ ಹಾಗೂ ಹಿಂದೂ ಮಹಿಳೆ ಇಬ್ಬರೂ ಬೇರೆ ಬೇರೆ ಧರ್ಮದವರು ಎಂಬ ಕಾರಣಕ್ಕೆ ಜೈಪುರದ ಹೋಟೆಲ್ ಒಂದು ಪ್ರವೇಶ ನೀಡಲು ನಿರಾಕರಿಸಿದೆ.

    ಜೈಪುರದಲ್ಲಿ ಶನಿವಾರ ಸಹಾಯಕ ಪ್ರಾಧ್ಯಾಪಕರು ಓಯೋದ ಸಿಲ್ವರ್‍ಕೆ ಹೋಟೆಲ್‍ಗೆ ಚೆಕ್ ಇನ್ ಮಾಡಲು ಹೋದಾಗ ಪ್ರವೇಶ ನಿರಾಕರಿಸಲಾಗಿದೆ. ನನ್ನ ಸ್ನೇಹಿತರೊಬ್ಬರು ದೆಹಲಿಯಿಂದ ಜೈಪುರಕ್ಕೆ ಆಗಮಿಸುತ್ತಿದ್ದರು ಹೀಗಾಗಿ ಹೋಟೆಲ್‍ಗೆ ತೆರಳಿದ್ದೇವು ಎಂದು ಪ್ರಾಧ್ಯಾಪಕರು ತಿಳಿಸಿದ್ದಾರೆ.

    ವರದಿಯ ಪ್ರಕಾರ 31 ವರ್ಷದ ಪ್ರಾಧ್ಯಾಪಕ ಟ್ರಾವೆಲ್ ಆ್ಯಪ್ ಮೂಲಕ ಇಬ್ಬರಿಗೆ ರೂಂ ಬುಕ್ ಮಾಡಿದ್ದಾರೆ. ನಂತರ ಚೆಕ್ ಇನ್ ಆಗಲು ಹೋದಾಗ ಹೋಟೆಲ್ ಸಿಬ್ಬಂದಿ ಇನ್ನೊಬ್ಬರ ಹೆಸರನ್ನು ಕೇಳಿದ್ದಾರೆ. ಈ ವೇಳೆ ಅಧ್ಯಾಪಕರು ಹಿಂದೂ ಸ್ನೇಹಿತೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಇಬ್ಬರೂ ಬೇರೆ ಬೇರೆ ಧರ್ಮದವರಾಗಿದ್ದರಿಂದ ಸಮಸ್ಯೆ ಇದೆ. ಹೀಗಾಗಿ ಹೋಟೆಲ್ ನೀಡಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

    ಈ ಬಗ್ಗೆ ಪ್ರಾಧ್ಯಾಪಕ ಪ್ರತಿಕ್ರಿಯಿಸಿ, ಆ್ಯಪ್‍ನಲ್ಲಿ ಹಾಗೂ ಹೋಟೆಲ್ ವೆಬ್‍ಸೈಟ್‍ನಲ್ಲಿ ಇಂತಹ ಯಾವುದೇ ಷರತ್ತುಗಳಿಲ್ಲ. ನೀವು ಹೇಳುತ್ತಿರುವುದು ಸಮಾನತೆಯನ್ನು ಸಾರುವ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ.

    ಇದಕ್ಕೆ ಸಿಬ್ಬಂದಿ ಪೊಲೀಸರ ಸೂಚನೆಯ ಮೇರೆಗೆ ಈ ನಿಯಮ ಜಾರಿಗೆ ತಂದಿದ್ದೇವೆ ಎಂದು ಹೇಳಿದ್ದಾರೆ. ಆದರೆ ಈ ಕುರಿತು ಲಿಖಿತ ದಾಖಲೆಯನ್ನು ತೋರಿಸಲು ನಿರಾಕರಿಸಿದ್ದಾರೆ. ಎಲ್ಲಿಯೂ ಅಂತಹ ನಿಯಮ ಅಥವಾ ಕಾನೂನು ಇಲ್ಲ ಎಂದು ನಾನು ವಾದಿಸಿದೆ. ಇಲ್ಲಿ ವಿವಿಧ ಧರ್ಮಗಳು ಮತ್ತು ಲಿಂಗದ ಜನರು ಒಟ್ಟಿಗೆ ಇರುವುದನ್ನು ನಿಷೇಧಿಸಲಾಗಿದೆ ಎಂದು ತಿರಸ್ಕಾರದ ಮಾತುಗಳನ್ನಾಡಿದ್ದಾರೆ. ಈ ಕುರಿತು ಆ್ಯಪ್‍ನಲ್ಲಿ ದೂರು ನೀಡಿದ್ದು, ಬುಕ್ಕಿಂಗ್ ಹಣವನ್ನು ವಾಪಸ್ ಪಡೆದಿದ್ದಾರೆ. ನಂತರ ಬೇರೆ ಹೋಟೆಲ್‍ನ್ನು ಕಾಯ್ದಿರಿಸಿದೆ ಎಂದು ಪ್ರೊಫೆಸರ್ ತಿಳಿಸಿದ್ದಾರೆ.

    ಹೋಟೆಲ್‍ನವರ ನಡವಳಿಕೆಯನ್ನು ಕಂಡು ಆಘಾತವಾಯಿತು. ಇನ್ನೂ 21ನೇ ಶತಮಾನದಲ್ಲಿದ್ದೇವೆಯೇ ಎಂದು ಪ್ರಶ್ನಿಸಿದ್ದಾರೆ. ನಾವಿಬ್ಬರೂ ವರ್ಷಗಳಿಂದ ಸ್ನೇಹಿತರಾಗಿದ್ದೇವೆ. ನಮ್ಮಿಬ್ಬರ ನಡುವೆ ಧರ್ಮವೂ ಎಂದು ಅಡ್ಡಿಬಂದಿಲ್ಲ ಎಂದು ಮಹಿಳೆ ತಿಳಿಸಿದ್ದಾರೆ.

    ಈ ಕುರಿತು ಹೋಟೆಲ್ ವ್ಯವಸ್ಥಾಪಕ ಗೋವರ್ಧನ್ ಸಿಂಗ್ ಪ್ರತಿಕ್ರಿಯಿಸಿ, ಹೋಟೆಲ್ ನೀತಿ ಹಾಗೂ ಪೊಲೀಸ್ ಸೂಚನೆಗಳ ಪ್ರಕಾರ ಬೇರೆ ಬೇರೆ ಧರ್ಮದ ಮಹಿಳೆ ಹಾಗೂ ಪುರುಷರನ್ನು ಒಟ್ಟಿಗೆ ಚೆಕ್-ಇನ್ ಮಾಡಲು ಅನುಮತಿ ಇಲ್ಲ ಎಂದು ತಿಳಿಸಿದ್ದಾರೆ.

    ಜೈಪುರ ಪೊಲೀಸ್ ಆಯುಕ್ತ ಆನಂದ್ ಶ್ರೀವಾಸ್ತವ್ ಈ ಕುರಿತು ಪ್ರತಿಕ್ರಿಯಿಸಿ, ಪೊಲೀಸರಿಂದ ಯಾವುದೇ ರೀತಿಯ ಲಿಖಿತ ಅಥವಾ ಮೌಖಿಕ ಸೂಚನೆಗಳಿಲ್ಲ. ಹೋಟೆಲ್‍ಗಳು ಪೊಲೀಸರ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ದೂರಿದರು. ಓಯೋ ಟ್ರಾವೆಲ್ ಆ್ಯಪ್ ಈ ಕುರಿತು ಸ್ಪಷ್ಟಪಡಿಸಿದ್ದು, ಹೋಟೆಲ್ ವ್ಯವಸ್ಥಾಪಕರ ವಿರುದ್ಧ ತನಿಖೆ ನಡೆಸಲಾಗುವುದು ಎಂದು ತಿಳಿಸಿದೆ.

  • ಶೆಡ್ ಹೊಟೇಲಿನಲ್ಲಿ ಸ್ನೇಹಿತರೊಂದಿಗೆ ತಿಂಡಿ ಸವಿದ ಶಿವಣ್ಣ

    ಶೆಡ್ ಹೊಟೇಲಿನಲ್ಲಿ ಸ್ನೇಹಿತರೊಂದಿಗೆ ತಿಂಡಿ ಸವಿದ ಶಿವಣ್ಣ

    ಮಂಡ್ಯ: ಸ್ಟಾರ್ ನಟರು ಎಂದರೆ ಕೇವಲ ಫೈಸ್ಟಾರ್ ಹಾಗೂ ಐಷಾರಾಮಿ ಹೊಟೇಲ್‍ಗಳಲ್ಲಿ ಮಾತ್ರ ಊಟ-ತಿಂಡಿ ಮಾಡುತ್ತಾರೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಇದಕ್ಕೆ ವಿಭಿನ್ನ ಎಂಬಂತೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಶೆಡ್ ಹೊಟೇಲ್‍ವೊಂದರಲ್ಲಿ ತಿಂಡಿ ತಿನ್ನುವ ಮೂಲಕ ನನಗೂ ಸಾಮಾನ್ಯ ಜನರಂತೆ ಬದುಕಲು ಇಷ್ಟ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ.

    ಶಿವರಾಜ್ ಕುಮಾರ್ ಅವರು ಎರಡು ದಿನಗಳ ಹಿಂದೆ ಸ್ನೇಹಿತರೊಂದಿಗೆ ಮುತ್ತತ್ತಿಗೆ ಹೋಗುತ್ತಿದ್ದರು. ಆಗ ಮಂಡ್ಯ ಜಿಲ್ಲೆಯ ಮಳವಳ್ಳಿ- ಮದ್ದೂರು ರಸ್ತೆಯಲ್ಲಿ ಕಾರು ನಿಲ್ಲಿಸಿ ಬಾಬು ಶೆಡ್ ಹೊಟೇಲಿನಲ್ಲಿ ಇಡ್ಲಿ, ದೋಸೆ ಹಾಗೂ ಚಿತ್ರಾನ್ನ ತಿಂದಿದ್ದಾರೆ. ಈ ವೇಳೆ ಶಿವರಾಜ್ ಕುಮಾರ್‌ಗೆ ನಟ ಗುರುದತ್ ಸೇರಿದಂತೆ ಇನ್ನಿತರ ಸ್ನೇಹಿತರು ಕೂಡ ಸಾಥ್ ನೀಡಿದರು.

    ಈ ವೇಳೆ ಅಭಿಮಾನಿಗಳು ಶಿವರಾಜ್‍ಕುಮಾರ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ. 40 ವರ್ಷಗಳಿಂದ ಬಾಬು ಅವರು ಈ ಶೆಡ್ ಹೊಟೇಲ್ ನಡೆಸುತ್ತಿದ್ದು, ಮಳವಳ್ಳಿ ಭಾಗದಲ್ಲಿ ಈ ಹೊಟೇಲ್ ಫುಲ್ ಫೇಮಸ್ ಆಗಿದೆ.

    ಬಳಿಕ ಮಾತನಾಡಿದ ಶಿವಣ್ಣ, ಈ ಭಾಗದಲ್ಲಿ ನಾನು ಹೋಗುವಾಗ ಇಲ್ಲಿಗೆ ಬಂದು ಊಟ-ತಿಂಡಿ ಮಾಡುತ್ತೇನೆ. ಇಲ್ಲಿ ಇಡ್ಲಿ, ದೋಸೆ ಹಾಗೂ ಚಿತ್ರಾನ್ನ ಸೂಪರ್ ಆಗಿ ಇರುತ್ತದೆ. ಹಲಗೂರಿನ ಭಾಗದಲ್ಲಿ ನಮಗೆ ಸಂಬಂಧಿಕರು ಇದ್ದಾರೆ. ಇದರಿಂದ ಈ ಹೊಟೇಲ್ ನನಗೆ ಹಳೆಯ ಪರಿಚಯ ಎಂದು ಹೇಳಿದರು.

    ಈ ಹಿಂದೆಯೂ ಕೂಡ ಶಿವಣ್ಣ ಸಾಕಷ್ಟು ಬಾರಿ ಮಂಡ್ಯ ಹಾಗೂ ಚಾಮರಾಜನಗರ ಭಾಗದಲ್ಲಿ ಹಲವು ಶೆಡ್ ಹೊಟೇಲ್‍ಗಳಿಗೆ ಹೋಗಿ ಊಟ, ತಿಂಡಿ ಸವಿದಿದ್ದಾರೆ.

  • ಹೋಟೆಲ್ ಗೋಡೆ ಕುಸಿದು ಏಳು ಮಂದಿಗೆ ಗಾಯ

    ಹೋಟೆಲ್ ಗೋಡೆ ಕುಸಿದು ಏಳು ಮಂದಿಗೆ ಗಾಯ

    ಕಾರವಾರ: ಗೋಡೆ ಕುಸಿದು ಏಳು ಮಂದಿ ಗಾಯಗೊಂಡು ಅದರಲ್ಲಿ ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ತೃಪ್ತಿ ಹೋಟೆಲಿನಲ್ಲಿ ನಡೆದಿದೆ.

    ಅಧಿಕ ಮಳೆಯಿಂದಾಗಿ ಗೋಡೆ ಬಿರುಕುಗೊಂಡಿದ್ದು, ಇದನ್ನು ಸರಿಪಡಿಸುತ್ತಿರುವ ವೇಳೆ ಕುಸಿದು ಬಿದ್ದಿದೆ. ಈ ವೇಳೆ ಪಕ್ಕದ ಹೋಟೆಲಿನಲ್ಲಿ ಊಟ ಮಾಡುತ್ತಿದ್ದ ಏಳು ಮಂದಿಗೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಜ್ಯೋತಿ ನಾಯ್ಕ್, ಪರಮೇಶ್ವರ್, ನಾಗೇಶ್ ವೆಂಕಟೇಶ ನಾಯ್ಕ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಈ ಬಗ್ಗೆ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ತೀವ್ರಗೊಂಡಿದೆ. ಮಳೆಯ ಆರ್ಭಟದಿಂದ ಕಾಳಿ ನದಿಯ ಸೂಪಾ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆ ಕಂಡಿದ್ದು, ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಕದ್ರಾ ಜಲಾಶಯದಿಂದ ಕಾಳಿ ನದಿಗೆ ಜಲಾಶಯದಿಂದ ನೀರು ಬಿಡಲಾಗಿದೆ.

    ಕದ್ರಾ ಜಲಾಶಯದಲ್ಲಿ ಗರಿಷ್ಠ ಮಟ್ಟ 34.50 ಇದ್ದು ಜಲಾಶಯದ ಇಂದಿನ ಮಟ್ಟ 32.15 ಇದೆ. ಜಲಾಶಯದಲ್ಲಿ 49,800 ಒಳಹರಿವು, 49,800 ಹೊರಹರಿವು ಇದ್ದು ಜಲಾಶಯದಿಂದ 50,000 ಕ್ಯೂಸೆಕ್ ನೀರು ಕಾಳಿ ನದಿಗೆ ನಾಲ್ಕು ಗೇಟ್‍ಗಳ ಮೂಲಕ ಇಂದು ನೀರು ಬಿಡಲಾಗಿದೆ. ಈ ಕಾರಣದಿಂದ ಜಲಾಶಯದ ತಟದಲ್ಲಿರುವ ನಿವಾಸಿಗಳಿಗೆ ಸುರಕ್ಷಿತ ಸ್ಥಳದಲ್ಲಿ ಇರುವಂತೆ ತಿಳಿಸಲಾಗಿದೆ. ಶರಾವತಿ ನದಿ ನೀರು ಬಿಟ್ಟಿರುವುದರಿಂದ ಕೂಡ ಹೊನ್ನಾವರ ಭಾಗದ ನದಿ ಜಲಾಶಯದ ತಟದ ಹಳ್ಳಿ ಜನರಿಗೂ ಸುರಕ್ಷಿತ ಪ್ರದೇಶದಲ್ಲಿ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

  • ಹೋಟೆಲ್‍ಗೆ ಎಂಟ್ರಿ ಕೊಡಂಗಿಲ್ಲ, ಲೋಟ ಮುಟ್ಟಂಗಿಲ್ಲ – ಕೊಪ್ಪಳದಲ್ಲಿ ಅಸ್ಪೃಶ್ಯತೆ ಜೀವಂತ

    ಹೋಟೆಲ್‍ಗೆ ಎಂಟ್ರಿ ಕೊಡಂಗಿಲ್ಲ, ಲೋಟ ಮುಟ್ಟಂಗಿಲ್ಲ – ಕೊಪ್ಪಳದಲ್ಲಿ ಅಸ್ಪೃಶ್ಯತೆ ಜೀವಂತ

    ಕೊಪ್ಪಳ: ಹೋಟೆಲಿನಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಿರುವ ಪ್ರಕರಣ ಕೊಪ್ಪಳದ ತಾಲೂಕಿನ ತಿಗರಿ ಗ್ರಾಮದಲ್ಲಿ ಬಯಲಿಗೆ ಬಂದಿದೆ.

    ಗ್ರಾಮದ ಹೋಟೆಲ್‍ಗಳಲ್ಲಿ ದಲಿತರಿಗೆ ಹೊರಗಡೆ ನಿಲ್ಲಿಸಿ ನೀರು ಹಾಕಲಾಗುತ್ತಿದೆ. ಸವರ್ಣೀಯರ ಹೋಟೆಲಿನಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಿದ್ದು, ಜಾತಿ ತಾರತಮ್ಯ ಮಾಡಲಾಗುತ್ತಿದೆ. ಹೋಟೆಲಿನಲ್ಲಿ ದಲಿತರಿಗೆ ನೀರು ಎತ್ತಿ ಹಾಕುವ ದೃಶ್ಯಗಳು ಮೊಬೈಲಿನಲ್ಲಿ ಸೆರೆಯಾಗಿದೆ. ದಲಿತರು ಹೋಟೆಲ್‍ಗಳಲ್ಲಿ ನೀರು ಮುಟ್ಟುವ ಹಾಗಿಲ್ಲ. ಹೀಗಾಗಿ ದಲಿತರಿಗೆ ಪ್ಲಾಸ್ಟಿಕ್ ಜಗ್ ಮೂಲಕ ನೀರು ಹಾಕಲಾಗುತ್ತದೆ.

    ಈ ಹೋಟೆಲಿನಲ್ಲಿ ದಲಿತರಿಗೆ ತಿನ್ನಲು ಪ್ಲೇಟ್ ಬದಲಾಗಿ ಪೇಪರ್ ಪ್ಲೇಟಿನಲ್ಲಿ ತಿಂಡಿ ಕೊಡುತ್ತಾರೆ. ಅಲ್ಲದೆ ನೀರು ಕೇಳಿದರೆ, ಮೇಲಿಂದ ಕೈಯಿಗೆ ನೀರು ಹಾಕುತ್ತಾರೆ. ಅವರಿಗೆ ಕುಡಿಯೋಕೆ ನೀರು ಕೊಡುವುದಿಲ್ಲ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಸಿಕ್ಕಿದ್ದು, ಜಿಲ್ಲಾಧಿಕಾರಿಗಳು ಆ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಗೋವಿಂದ ಕಾರಜೋಳ, ನಾನು ತಕ್ಷಣವೇ ಜಿಲ್ಲಾಧಿಕಾರಿ ಹಾಗೂ ಎಸ್‍ಪಿ ಜೊತೆ ಮಾತನಾಡುತ್ತೇನೆ. ಏನೇ ಸಮಸ್ಯೆ ಇದ್ದರೂ ತಕ್ಷಣ ಪರಿಹಾರ ನೀಡಬೇಕು ಎಂದು ಸೂಚನೆ ನೀಡುತ್ತೇನೆ. ಈ ರೀತಿಯ ಘಟನೆಗಳು ನಡೆಯಬಾರದು ಎಂದು ನಾನು ಅವರಿಗೆ ಹೇಳುತ್ತೇನೆ ಎಂದು ಹೇಳಿದರು.

  • ಕಾಶ್ಮೀರದ 50ಕ್ಕೂ ಅಧಿಕ ನಾಯಕರಿಗೆ ಹೋಟೆಲ್ ಬಂಧನ

    ಕಾಶ್ಮೀರದ 50ಕ್ಕೂ ಅಧಿಕ ನಾಯಕರಿಗೆ ಹೋಟೆಲ್ ಬಂಧನ

    -ಜೈಲಾಗಿ ಬದಲಾದ ಸೆಂಟೌರ್ ಹೋಟೆಲ್

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ 50ಕ್ಕೂ ಅಧಿಕ ರಾಜಕೀಯ ಮುಖಂಡರನ್ನು ಶ್ರೀನಗರದ ಹೊರವಲಯದಲ್ಲಿರುವ ಸೆಂಟೌರ್ ಹೋಟೆಲ್ ನಲ್ಲಿ ಇರಿಸಲಾಗಿದೆ. ಹೋಟೆಲ್ ಜೈಲಾಗಿ ಬದಲಾಗಿದೆ ಎಂದು ವರದಿಯಾಗಿದೆ. ಹೋಟೆಲ್ ಬಂಧನದಲ್ಲಿರುವ ಎಲ್ಲ ನಾಯಕರಿಗೆ ಸೋಮವಾರ ತಮ್ಮ ಸಂಬಂಧಿ ಮತ್ತು ಆಪ್ತರನ್ನು ಭೇಟಿಯಾಗಲು ಅವಕಾಶ ಕಲ್ಪಿಸಲಾಗಿತ್ತು.

    ಬಟ್ಟೆ, ಹಣ್ಣು, ಆಹಾರ ಇತರೆ ಅಗತ್ಯ ವಸ್ತುಗಳೊಂದಿಗೆ ರಾಜಕೀಯ ನೇತಾರರ ಸಂಬಂಧಿಗಳು ಹೋಟೆಲ್ ಗೆ ಆಗಮಿಸಿ ಯೋಗಕ್ಷೇಮ ವಿಚಾರಿಸಿದರು. ಆಗಸ್ಟ್ 5ರಂದು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಅನುಚ್ಛೇಧ 370 ರದ್ದುಗೊಳಿಸಲಾಗಿತ್ತು. ಆಗಸ್ಟ್ 5ರಿಂದ 50ಕ್ಕೂ ಅಧಿಕ ಸ್ಥಳೀಯ ಮುಖಂಡರನ್ನು ಹೋಟೆಲ್ ನಲ್ಲಿ ಇರಿಸಲಾಗಿದೆ.

    ಸೆಂಟೌರ್ ಹೋಟೆಲ್ ನಲ್ಲಿ ಸಜ್ಜಾದ್ ಲೋನ್, ಇಮ್ರಾನ್ ಅನ್ಸಾರಿ, ಯಾಸಿರ್ ರೆಸಿ, ಇಶ್ಫಾಕ್ ಜಬ್ಬಾರ್, ಅಶ್ರಫ್ ಮೀರ್, ಸಲ್ಮಾನ್ ಸಾಗರ್, ಮುಬಾರಕ್ ಗುಲ್, ನಯೀಂ ಅಖ್ತರ್, ಖುರ್ಷಿದ್ ಅಲಂ, ವಾಹಿದ್ ಪಾರಾ, ಶೇಖ್ ಇಮ್ರಾನ್ ಆದಿ ಸೇರಿದಂತೆ 50ಕ್ಕೂ ಅಧಿಕ ನಾಯಕರನ್ನು ಬಂಧನದಲ್ಲಿ ಇರಿಸಲಾಗಿದೆ. ನಾಯಕರನ್ನು ಭೇಟಿಯಾದ ಓರ್ವ ವೃದ್ಧ, ಹೋಟೆಲ್ ಜೈಲಿನಂತೆಯೇ ಇದೆ. ಆದ್ರೆ ನನ್ನ ಮಗ ಆರೋಗ್ಯವಾಗಿದ್ದಾನೆ ಎಂಬುವುದೇ ನನಗೆ ಖುಷಿ ಎಂದಿದ್ದಾರೆ.

    ಹೋಟೆಲ್ ಮುಂಭಾಗದ ಗ್ಯಾಲರಿಯಲ್ಲಿ ಮಗನನ್ನು ಭೇಟಿಯಾಗಲು ಅವಕಾಶ ಕಲ್ಪಿಸಲಾಗಿತ್ತು. ಮುಖಂಡರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದು, ಹೊರಗಡೆ ಏನಾಗ್ತಿದೆ ಎಂಬುದರ ಮಾಹಿತಿ ನೀಡುತ್ತಿಲ್ಲ. ಭೇಟಿಯಾಗಲು ಬರುತ್ತಿರುವ ಸಂಬಂಧಿ ಮತ್ತು ಆಪ್ತರಿಂದಲೇ ರಾಜಕೀಯ ನಾಯಕರು ಕೆಲ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಹೋಟೆಲ್ ನಲ್ಲಿ ಪಿಡಿಪಿ, ನ್ಯಾಶನಲ್ ಕಾಂಗ್ರೆಸ್ ಮತ್ತು ಕಾಂಗ್ರೆಸ್ ವರಿಷ್ಠ ನಾಯಕರಿದ್ದಾರೆ ಎಂದು ಹೋಟೆಲ್ ಒಳಗೆ ಹೋಗಿ ಬಂದ ವೃದ್ಧರೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    ಜೈಲಿನಲ್ಲಿ ಕೈದಿಗಳನ್ನು ಭೇಟಿಯಾಗಲು ಅನುಸರಿಸುವ ಕ್ರಮಗಳನ್ನು ಇಲ್ಲಿಯೂ ಪಾಲನೆ ಮಾಡಲಾಗುತ್ತಿದೆ. ಆಪ್ತರಿಗೆ ಸಿಗರೇಟ್ ಸೇರಿದಂತೆ ಯಾವುದೇ ಆರೋಗ್ಯಕ್ಕೆ ಹಾನಿಕಾರಕ ಉತ್ಪನ್ನಗಳನ್ನು ತೆಗೆದುಕೊಂಡು ಹೋಗಲು ಸಂಬಂಧಿಗಳಿಗೆ ಬಿಡುತ್ತಿಲ್ಲ. ಇನ್ನು ಹೋಟೆಲ್ ನಲ್ಲಿರುವ ಎಲ್ಲ ಟಿವಿಗಳನ್ನು ಬಂದ್ ಮಾಡಲಾಗಿದೆ. ಕೇವಲ ದಿನಪತ್ರಿಕೆಗಳ ಮೂಲಕವೇ ರಾಜಕೀಯ ನೇತಾರರು ಹೊರಗಿನ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

    ಮಾಧ್ಯಮದ ಜೊತೆ ಮಾತನಾಡಿದ ಓರ್ವ ಭದ್ರತಾ ಸಿಬ್ಬಂದಿ, ಎಲ್ಲ ಮುಖಂಡರನ್ನು ಜೈಲಿನಲ್ಲಿರುವ ಕೈದಿಗಳ ರೀತಿಯಲ್ಲಿ ನೋಡಿಕೊಳ್ಳಲಾಗುತ್ತಿದೆ. ಹೋಟೆಲ್ ನಲ್ಲಿರುವ ಎಲ್ಲ ಟಿವಿಗಳು ಬಂದ್ ಆಗಿದ್ದು, ದಿನಪತ್ರಿಕೆ ಮತ್ತು ಕೆಲ ಪುಸ್ತಕಗಳನ್ನು ಓದಿ ನಾಯಕರು ಸಮಯ ಕಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

    ನಾನು ಭಾನುವಾರ ಸಂಜೆ 6ಗಂಟೆಗೆ ಹೋಟೆಲ್ ಬಳಿ ಬಂದೆ. ಅಧಿಕಾರಿಗಳು ಪತಿಯನ್ನು ಭೇಟಿಯಾಗಲು ಅವಕಾಶ ಕಲ್ಪಿಸಲಿಲ್ಲ. ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮಾತ್ರ ಭೇಟಿಯ ಸಮಯ ನಿಗದಿಯಾಗಿದೆ ಎಂದು ಹೇಳುತ್ತಾರೆ. ನನ್ನ ಪತಿ ಎಂದೂ ಕಾನೂನಿನ ಉಲ್ಲಂಘನೆ ಮಾಡಿಲ್ಲ. ಆದ್ರೂ ಅವರನ್ನು ಬಂಧಿಸಲಾಗಿದೆ ಎಂದು ಪಿಡಿಪಿ ಶಾಸಕರೊಬ್ಬರ ಪತ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • 2 ಬಾಳೆಹಣ್ಣಿಗೆ 442 ರೂ. – ಹೋಟೆಲ್ ನಡೆಯನ್ನ ಸಮರ್ಥಿಸಿಕೊಂಡ ಫೆಡರೇಶನ್

    2 ಬಾಳೆಹಣ್ಣಿಗೆ 442 ರೂ. – ಹೋಟೆಲ್ ನಡೆಯನ್ನ ಸಮರ್ಥಿಸಿಕೊಂಡ ಫೆಡರೇಶನ್

    ನವದೆಹಲಿ: ನಟ ರಾಹುಲ್ ಬೋಸ್ ಅವರಿಂದ 2 ಬಾಳೆಹಣ್ಣಿಗೆ 442 ರೂ. ಪಡೆದಿದ್ದ ಹೋಟೆಲ್ ನಡೆಯನ್ನು ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಶೀಯೇಷನ್ಸ್ ಆಫ್ ಇಂಡಿಯಾ (FHRAI) ಸಮರ್ಥಿಸಿಕೊಂಡಿದೆ. 442 ರೂ. ಪಡೆದಿದ್ದು ಯಾವುದೇ ಕಾನೂನು ಬಾಹಿರ ಕೆಲಸವಲ್ಲ ಎಂದು ತಿಳಿಸಿದೆ.

    ಬಾಳೆಹಣ್ಣಿನ ಮೇಲೆ ಶೇ.18 ಜಿಎಸ್‍ಟಿ ಪಡೆಯೋದು ತಪ್ಪಲ್ಲ, ಅದು ಕಾನೂನಿನ ಅನಿವಾರ್ಯವಾಗಿದೆ. ಜೆಡಬ್ಲ್ಯೂ ಮ್ಯಾರಿಯಟ್ ಚೈನ್ ಹೋಟೆಲ್ ದೇಶದ ಹಲವು ನಗರಗಳಲ್ಲಿದೆ. ಈ ಎಲ್ಲ ಹೋಟೆಲ್ ಗಳಲ್ಲಿ ಪ್ರಮಾಣೀಕೃತ ಉತ್ತಮ ಶ್ರೇಣಿಯ (Standard operating procedure) ಸೇವೆಯನ್ನು ನೀಡಲಾಗುತ್ತದೆ. ಈ ರೀತಿಯ ಹೋಟೆಲ್ ಗಳು ಕೇವಲ ಹಣ್ಣು, ತರಕಾರಿ ತಂದು ನೇರವಾಗಿ ನೀಡಲ್ಲ. ಸುಸಜ್ಜಿತವಾಗಿ ಸ್ವಚ್ಛವಾದ ಪ್ಲೇಟ್ ನಲ್ಲಿರಿಸಿ ಗ್ರಾಹಕರು ವಾಸ್ತವ್ಯ ಹೂಡಿರುವ ಕೋಣೆಗೆ ತಲುಪಿಸುತ್ತದೆ. ಇದರ ಜೊತೆಗೆ ಪಾನೀಯ ಹಾಗು ಇತರೆ ಖಾದ್ಯಗಳನ್ನು ಜೊತೆಯಾಗಿ ನೀಡುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಫೆಡರೇಶನ್ ಹೇಳಿದೆ.

    ಅಂಗಡಿಗಳಲ್ಲಿ ಮಾರುಕಟ್ಟೆಯ ಬೆಲೆ ನೀಡಿ ವಸ್ತುಗಳನ್ನು ಖರೀದಿಸಲಾಗುತ್ತದೆ. ಹೋಟೆಲ್ ನಲ್ಲಿ ಪ್ಲೇಟ್ ಜೊತೆಗೆ ವಿವಿಧ ಚಮಚಗಳು (Cutlery) ಮತ್ತು ಸ್ವಚ್ಛತೆಯಿಂದ ಕೂಡಿದ ಸೇವೆಯ ಜೊತೆಗೆ ಐಷಾರಾಮಿ ಅನುಭವದೊಂದಿಗೆ ಗ್ರಾಹಕರು ಕೇಳಿದ ವಸ್ತು ಲಭ್ಯವಾಗುತ್ತದೆ. ರಸ್ತೆ ಬದಿಯಲ್ಲಿ 10 ರೂ.ಗೆ ಕಾಫಿ ಸಿಕ್ಕರೆ, ಅದೇ ಲಕ್ಷುರಿ ಹೋಟೆಲ್ ಗಳಲ್ಲಿ 250 ರೂ. ಸಿಗುತ್ತದೆ ಎಂದು ಫೆಡರೇಶನ್ ಉಪಾಧ್ಯಕ್ಷ ಗುರುಭಕ್ಷೀಶ್ ಸಿಂಗ್ ಕೊಹ್ಲಿ ಹೇಳಿದ್ದಾರೆ.

    ನಟ ರಾಹುಲ್ ಬೋಸ್ 2 ಬಾಳೆಹಣ್ಣಿಗೆ 442 ರೂ. ಬಿಲ್ ನೀಡಿರುವ ವಿಡಿಯೋ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ವಿಡಿಯೋದಲ್ಲಿ ನೀವು ಇದನ್ನು ನೋಡಿ ನಂಬಲೇ ಬೇಕು. ಹಣ್ಣು ಆರೋಗ್ಯಕ್ಕೆ ಹಾನಿಕರವಲ್ಲವೆಂದು ಯಾರು ಹೇಳಿದ್ದು? ಎಂದು ಹೋಟೆಲನ್ನು ಟ್ಯಾಂಗ್ ಮಾಡಿ ವ್ಯಂಗ್ಯವಾಡಿದ್ದರು.

  • 2 ಬಾಳೆ ಹಣ್ಣಿಗೆ 442 ರೂ. ಬಿಲ್ – ಹೋಟೆಲ್‍ಗೆ 25 ಸಾವಿರ ರೂ. ದಂಡ

    2 ಬಾಳೆ ಹಣ್ಣಿಗೆ 442 ರೂ. ಬಿಲ್ – ಹೋಟೆಲ್‍ಗೆ 25 ಸಾವಿರ ರೂ. ದಂಡ

    ಚಂಡೀಗಢ: ಬಾಲಿವುಡ್ ನಟ ರಾಹುಲ್ ಬೋಸ್ ಅವರಿಗೆ ಎರಡು ಬಾಳೆ ಹಣ್ಣಿಗೆ 442 ರೂ. ಬಿಲ್ ನೀಡಿದ್ದ ಪಂಚತಾರಾ ಹೋಟೆಲ್‍ಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ.

    ನಟನಿಗೆ ದುಬಾರಿ ಬಿಲ್ ನೀಡಿ ಶಾಕ್ ನೀಡಿದ್ದ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್‍ಗೆ ಗ್ರಾಹಕ ಪ್ರಾಧಿಕಾರ ಕ್ರಮಕೈಗೊಂಡಿದ್ದು, ಈ ಸಂಬಂಧ ವಿಚಾರಣೆ ನಡೆಸಿ ಪ್ರಕರಣದಲ್ಲಿ 25 ಸಾವಿರ ದಂಡ ರೂ. ದಂಡ ವಿಧಿಸಿದೆ.

    51 ವರ್ಷದ ನಟ ರಾಹುಲ್ ಬೋಸ್ ತಮಗೇ ದುಬಾರಿ ಬಿಲ್ ನೀಡಿದ್ದ ಕುರಿತು ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದರು. ಈ ವಿಡಿಯೋದಲ್ಲಿ ಹೋಟೆಲ್ ನೀಡಿದ್ದ ಬಿಲ್ ಕೂಡ ಸ್ಪಷ್ಟವಾಗಿ ಕಂಡಿತ್ತು. ಬಿಲ್ ನಲ್ಲಿ ಹೋಟೆಲ್ ಹಣ್ಣುಗಳಿಗೂ ಕೂಡ ಜಿಎಸ್‍ಟಿ ವಿಧಿಸಿತ್ತು. ಆದರೆ ಹಣ್ಣುಗಳು ಜಿಎಸ್‍ಟಿ ಅಡಿ ಬರುವುದಿಲ್ಲ. ಪರಿಣಾಮ ತೆರಿಗೆ ಅಧಿಕಾರಿಗಳು ಹೋಟೆಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

    ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಂದೀಪ್ ಸಿಂಗ್ ಬರಾರ್ ಅವರು, ನಟ ರಾಹುಲ್ ಬೋಸ್ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಹಾಗೂ ಬಿಲ್ ಆಧಾರದ ಮೇಲೆ ಆ ಪಂಚತಾರಾ ಹೋಟೆಲ್ ಮೇಲೆ ತನಿಖೆ ನಡೆಸಿ ಕ್ರಮಕೈಗೊಳ್ಳಲಾಗಿದೆ ಎಂದಿದ್ದಾರೆ. ಈ ಮೊದಲು ಹೋಟೆಲ್ ಬಾಳೆಹಣ್ಣು ಸರ್ವ್ ಮಾಡಿದ್ದ ಬೆಳ್ಳಿ ತಟ್ಟೆಗೆ ಜಿಎಸ್‍ಟಿ ವಿಧಿಸಿದೆ ಎಂಬ ವಾದ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿತ್ತು.

    ನಟ ರಾಹುಲ್ ಬೋಸ್ ಮಾಡಿರುವ ವಿಡಿಯೋ ಪೋಸ್ಟ್ ನಲ್ಲಿ, ನೀವು ಇದನ್ನು ನೋಡಿ ನಂಬಲೇ ಬೇಕು. ಹಣ್ಣು ಆರೋಗ್ಯಕ್ಕೆ ಹಾನಿಕರವಲ್ಲವೆಂದು ಯಾರು ಹೇಳಿದ್ದು? ಎಂದು ಹೋಟೆಲನ್ನು ಟ್ಯಾಗ್ ಮಾಡಿ ವ್ಯಂಗ್ಯವಾಡಿದ್ದರು. ರಾಹುಲ್ ಬೋಸ್ ತಮ್ಮ ಬೆಳಗಿನ ವ್ಯಾಯಾಮ ಮುಗಿಸಿ ಹೋಟೆಲ್‍ಗೆ ತೆರಳಿದ್ದು, ಈ ಸಂದರ್ಭದಲ್ಲಿ 2 ಬಾಳೆ ಹಣ್ಣು ಆರ್ಡರ್ ಮಾಡಿದ್ದಾರೆ. ಅವರಿಗೆ 445 ರೂ. ಗಳ ಬಿಲ್ ಅನ್ನು ಹೋಟೆಲ್ ಸಿಬ್ಬಂದಿ ನೀಡಿದ್ದರು.

  • ಬಿಜೆಪಿ ಕುಮ್ಮಕ್ಕಿನಿಂದ ಪೊಲೀಸರು ನಮ್ಮನ್ನು ವಶಕ್ಕೆ ಪಡೆದುಕೊಂಡಿದ್ದಾರೆ: ಶಾಸಕ ಬಾಲಕೃಷ್ಣ

    ಬಿಜೆಪಿ ಕುಮ್ಮಕ್ಕಿನಿಂದ ಪೊಲೀಸರು ನಮ್ಮನ್ನು ವಶಕ್ಕೆ ಪಡೆದುಕೊಂಡಿದ್ದಾರೆ: ಶಾಸಕ ಬಾಲಕೃಷ್ಣ

    ಮುಂಬೈ: ಬಿಜೆಪಿಯವರ ಕುಮ್ಮಕ್ಕಿನಿಂದ ಪೊಲೀಸರು ಹೋಟೆಲ್ ಒಳಗೆ ಬಿಡದೇ ನಮ್ಮನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಶಾಸಕ ಬಾಲಕೃಷ್ಣ ಪ್ರತಿಕ್ರಿಯಿಸಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ದೂರವಾಣಿಯಲ್ಲಿ ಮಾತನಾಡಿದ ಶಾಸಕ ಬಾಲಕೃಷ್ಣ, ಡಿ.ಕೆ ಶಿವಕುಮಾರ್ ಅವರನ್ನು ಮುಂದೆ ಕರೆದುಕೊಂಡು ಹೋಗುತ್ತಿದ್ದಾರೆ. ನಮ್ಮ ವಾಹನದ ಮುಂದೆ ಪೊಲೀಸ್ ವಾಹನ ಇದೆ. ಶಿವಕುಮಾರ್ ಎಲ್ಲಿ ಇರುತ್ತಾರೋ ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ನಾವು ಸುಮಾರು 6 ಗಂಟೆಗಳ ಕಾಲ ನಿರಂತರವಾಗಿ ಧರಣಿ ಕುಳಿತ್ತಿದ್ದೆವು. ಬಿಜೆಪಿ ಅವರ ಕುಮ್ಮಕ್ಕಿನಿಂದ ಪೊಲೀಸರು ಹೋಟೆಲ್ ಒಳಗೆ ಬಿಡದೇ ನಮ್ಮನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.

    ಮಂಗಳವಾರ ಕೂಡ ಬಿಜೆಪಿಯ ರಾಜ್ಯ ನಾಯಕರು ಶಾಸಕರನ್ನು ಸಂಪರ್ಕಿಸಿದ್ದಾರೆ. ನಾವು ಖಾಸಗಿಯಾಗಿ ವಾಸ್ತವ ಮಾಡಲು ರೂಂ ಬುಕ್ ಮಾಡಿದ್ದೇವೆ. ಆದರೆ ಬಿಜೆಪಿಯವರು ದುರುದ್ದೇಶದಿಂದ ನಮ್ಮ ಬುಕ್ಕಿಂಗ್ ಕ್ಯಾನ್ಸಲ್ ಮಾಡಿಸಿದ್ದರು. ಪೊಲೀಸರು ಮೊದಲು ಪಾಸಿಟಿವ್ ಆಗಿದ್ದರು. ಬಳಿಕ ದೂರವಾಣಿ ಕರೆಗಳು ಬಂದ ನಂತರ ಹೋಟೆಲ್ ಮಾಲೀಕರನ್ನು ಹೊರಗಡೆ ಕರೆಸಿ ರೂಂ ಖಾಲಿ ಇಲ್ಲ ಎಂದು ಕ್ಯಾನ್ಸಲ್ ಪತ್ರ ಬರೆಸಿ ನಮಗೆ ನೀಡಿದರು ಎಂದು ದೂರಿದರು.

    ನಮ್ಮ ರಾಜ್ಯದ ವಿರೋಧ ಪಕ್ಷದ ನಾಯಕರು ಮಹಾರಾಷ್ಟ್ರ ಸರ್ಕಾರಕ್ಕೆ ತಿಳಿಸಿ ಈ ರೀತಿ ಮಾಡಿಸಿದ್ದಾರೆ. ಪೊಲೀಸರು ಮೊದಲು ನಮಗೆ ಗೌರವ ನೀಡಿ ನೋಡಿಕೊಂಡರು. ಬಳಿಕ ಡಿಕೆ ಶಿವಕುಮಾರ್ ಅವರನ್ನು ಬಲವಂತವಾಗಿ ವಾಹನದಲ್ಲಿ ಹತ್ತಿಸಿಕೊಂಡು ಹೋಗಿದ್ದಾರೆ. ಅವರನ್ನು ಕರೆದುಕೊಂಡು ಹೋದ ಬಳಿಕ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.

    ನಮ್ಮ ರಾಜ್ಯದ ಇಬ್ಬರು ಮಂತ್ರಿಗಳು ಹಾಗೂ ಇಬ್ಬರು ಶಾಸಕರು ಕರ್ನಾಟಕದಿಂದ ಬಂದಿದ್ದಾರೆ ಎಂದು ಮಹಾರಾಷ್ಟ್ರದ ಹಲವು ನಾಯಕರು ನಮಗೆ ಸಹಕಾರ ನೀಡಿದ್ದಾರೆ. ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಮಾಡುವುದು ನಮ್ಮ ಹಕ್ಕು. ನಾವು ಯಾರಿಗೂ ದೌರ್ಜನ್ಯ ಹಾಗೂ ಒತ್ತಡವನ್ನು ನೀಡಿಲ್ಲ. ಶಾಸಕರನ್ನು ಸ್ನೇಹದಿಂದ ಮಾತನಾಡಬೇಕು ಎಂದು ನಮ್ಮ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರು ಇಲ್ಲಿಗೆ ಬಂದಿದ್ದೇವೆ. ಪ್ರಜಾತಂತ್ರಕ್ಕೆ ವಿರುದ್ಧವಾಗಿ ಮುಂಬೈ ಆಡಳಿತ ನಡೆದುಕೊಳ್ಳುತ್ತಿದೆ. ನಾನು ಇದನ್ನು ಖಂಡಿಸುತ್ತೇನೆ ಎಂದು ಬಾಲಕೃಷ್ಣ ತಿಳಿಸಿದರು.

  • ಕೊನೆಗೂ ಹೋಟೆಲ್‍ಗೆ ಟ್ರಬಲ್ ಶೂಟರ್ ಎಂಟ್ರಿ

    ಕೊನೆಗೂ ಹೋಟೆಲ್‍ಗೆ ಟ್ರಬಲ್ ಶೂಟರ್ ಎಂಟ್ರಿ

    ಮುಂಬೈ: ಅತೃಪ್ತ ಶಾಸಕರಿದ್ದ ಹೋಟೆಲ್ ಪ್ರವೇಶಿಸಲು ಡಿ.ಕೆ.ಶಿವಕುಮಾರ್ ಅವರಿಗೆ ಪೊಲೀಸರು ಅನುಮತಿ ನೀಡಿರಲಿಲ್ಲ. ಆದರೂ ಇಂದು ಬೆಳಗ್ಗೆಯಿಂದ ಹೋಟೆಲ್ ಮುಂದೆಯೇ ಧರಣಿ ಕುಳಿತ್ತಿದ್ದರು. ಕೊನೆಗೂ ಹೋಟೆಲ್ ಸಿಬ್ಬಂದಿ ಡಿಕೆಶಿ ಹಠಕ್ಕೆ ಮಣಿದು ರೂಮ್ ಕೊಡಲು ನಿರ್ಧಾರ ಮಾಡಿದ್ದಾರೆ.

    ಹೋಟೆಲ್ ಸಿಬ್ಬಂದಿ ಮತ್ತು ಪೊಲೀಸರು ನಡುವೆ ಮಾತುಕತೆ ನಡೆದಿದ್ದು, ಡಿ.ಕೆ.ಶಿವಕುಮಾರ್ ಅವರಿಗೆ ಹೋಟೆಲ್‍ನಲ್ಲಿ ರೂಮ್ ಕೊಡಲು ಒಪ್ಪಿಗೆ ನೀಡಲಾಗಿದೆ. ಆದರೆ ಅತೃಪ್ತ ಶಾಸಕರ ತಂಗಿರುವ ಬಿಲ್ಡಿಂಗ್ ಬಿಟ್ಟು ಬೇರೆ ಬಿಲ್ಡಿಂಗ್‍ನಲ್ಲಿ ಡಿಕೆಶಿಗೆ ರೂಮ್ ಕೊಡಲು ಸಿಬ್ಬಂದಿ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಹೋಟೆಲ್ ಅವರ ವಾದವನ್ನು ಶಿವಕುಮಾರ್ ತಳ್ಳಿ ಹಾಕಿದ್ದಾರೆ.

    ನನಗೆ ಶಾಸಕರು ಇರುವ ಬಿಲ್ಡಿಂಗ್‍ನಲ್ಲೇ ರೂಮ್ ಬೇಕೇಬೇಕು ಎಂದು ಹೋಟೆಲ್ ಸಿಬ್ಬಂದಿ ಬಳಿ ಶಿವಕುಮಾರ್ ಬಿಗಿ ಪಟ್ಟು ಹಿಡಿದಿದ್ದಾರೆ. ಈ ವೇಳೆ ಪೊಲೀಸರು ಮತ್ತು ಸಿಬ್ಬಂದಿ ಡಿಕೆಶಿ ಅವರ ಮನವೊಲಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಡಿಕೆಶಿ ಬೇರೆ ರೂಮ್ ನೀಡುವುದರ ಬಗ್ಗೆ ಒಪ್ಪಿಗೆ ನೀಡಲಿಲ್ಲ. ಕೊನೆಗೂ ಅತೃಪ್ತ ಶಾಸಕರು ಇರುವ ಹೋಟೆಲ್ ಬಿಲ್ಡಿಂಗ್‍ನಲ್ಲಿ ಶಿವಕುಮಾರ್ ಅವರಿಗೆ ರೂಮ್ ಸಿಕ್ಕಿದೆ.

    ಡಿಐಜಿ ಮನವಿ:
    ಮಹಾರಾಷ್ಟ್ರ ದಕ್ಷಿಣ ವಲಯ ಡಿಐಜಿ ಮನೋಜ್ ಶರ್ಮಾ ಅವರು ಮುಂಬೈ ಹೋಟೆಲ್‍ಗೆ ಬಂದು ಡಿ.ಕೆ.ಶಿವಕುಮಾರ್ ಅವರಿಗೆ ಮನವರಿಕೆ ಮಾಡಲು ಯತ್ನಿಸಿದ್ದರು. ತುರ್ತು ಪರಿಸ್ಥಿತಿಯ ಕಾರಣ ರೂಮ್ ಬುಕ್ ಕ್ಯಾನ್ಸಲ್ ಮಾಡಲಾಗಿದೆ. ಇದರಲ್ಲಿ ಹೋಟೆಲ್ ಆಡಳಿತ ಮಂಡಳಿಯ ತಪ್ಪಿಲ್ಲ. ಯಾವುದೇ ಕಾರಣಕ್ಕೂ ಒಳ ಬಿಡಲು ಸಾದ್ಯವಿಲ್ಲ. ಇದರ ಮೇಲೆ ನಿಮ್ಮ ಇಷ್ಟ, ಯಾವುದೇ ಕಾರಣಕ್ಕೂ ನಾವು ನಿಮ್ಮನ್ನು ಒಳ ಬಿಡುವುದಿಲ್ಲ. ಹೋಟೆಲ್ ಸುತ್ತ ಮುತ್ತ 144 ಸೆಕ್ಷನ್ ಹಾಕಲಾಗಿದೆ ಎಂದು ಮನೋಜ್ ಶರ್ಮಾ ಅವರು ಡಿಕೆಶಿ ಅವರಿಗೆ ಮನವರಿಕೆ ಮಾಡಿ ಸ್ಥಳದಿಂದ ತೆರಳಿದ್ದರು. ಆದರೆ ಡಿಐಜಿ ಹೇಳಿದರೂ ಡಿ.ಕೆ.ಶಿವಕುಮಾರ್ ಸ್ಥಳವನ್ನು ಮಾತ್ರ ಬಿಟ್ಟು ಹೋಗಿರಲಿಲ್ಲ.

  • ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ – ಸಿಎಂ

    ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ – ಸಿಎಂ

    – ನಮಗೆ ಬಹುಮತವಿದೆ

    ಬೆಂಗಳೂರು: ದೇಶದಲ್ಲಿ ಏನು ನಡೆಯುತ್ತಿದೆ ಎಲ್ಲವನ್ನೂ ಗಮನಿಸುತ್ತಿದ್ದೇನೆ. ಮುಂಬೈ ಸರ್ಕಾರ ಡಿಕೆಶಿಯನ್ನು ತಡೆದಿದ್ದು ಯಾಕೆ ಎಂದು ಸಿಎಂ ಪ್ರಶ್ನಿಸಿದ್ದಾರೆ.

    ಇಂದು ಬೆಳಗ್ಗೆ ಮುಂಬೈಗೆ ತೆರಳಿರುವ ಸಚಿವ ಡಿಕೆ ಶಿವಕುಮಾರ್ ಅವರನ್ನು ಹೋಟೆಲ್ ಒಳಗಡೆ ಬಿಡದೆ ಅಲ್ಲಿನ ಪೊಲೀಸರು ತಡೆದ ವಿಚಾರಕ್ಕೆ ಸಿಎಂ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದೆ. ಹೀಗಾಗಿ ಇದರ ತೀರ್ಮಾನವನ್ನು ಜನರಿಗೆ ಬಿಟ್ಟು ಬಿಡುತ್ತೇನೆ. ನಮ್ಮ ಸರ್ಕಾರಕ್ಕೆ ಬಹುಮತ ಇದೆ. ಬಿಜೆಪಿ ಶಾಸಕರಿಗೆ ಹೋಟೆಲ್‍ಗೆ ಹೋಗಲು ಬಿಡುತ್ತಾರೆ. ಆದರೆ ಸಚಿವ ಡಿಕೆ ಶಿವಕುಮಾರ್‍ಗೆ ಬಿಡುತ್ತಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದರು.

    ಶನಿವಾರ 13 ಶಾಸಕರು ರಾಜೀನಾಮೆ ನೀಡಿದ್ದಾರೆ. ಅದರಲ್ಲಿ ಮೂವರನ್ನು ಹೊರತುಪಡಿಸಿ ಉಳಿದ 10 ಮಂದಿ ಶಾಸಕರು ಮುಂಬೈಗೆ ತೆರಳಿದ್ದಾರೆ. ಸದ್ಯ ಮುಂಬೈನಲ್ಲಿ ಬೀಡು ಬಿಟ್ಟ ಶಾಸಕರು, ನಮ್ಮ ರಾಜೀನಾಮೆ ಅಂಗೀಕಾರವಾಗುವವರೆಗೂ ಯಾವುದೇ ಕಾರಣಕ್ಕೂ ಬೆಂಗಳೂರಿಗೆ ಬರಲ್ಲ ಎಂದು ಹೇಳಿದ್ದರು.

    ಈ ಮಧ್ಯೆ ಮಂಗಳವಾರ ಇಬ್ಬರು ಬಿಜೆಪಿ ಮುಖಂಡರು ಅತೃಪ್ತರನ್ನು ಭೇಟಿ ಮಾಡಿದ್ದಾರೆ. ಈ ಬೆನ್ನಲ್ಲೇ ಅತೃಪ್ತರ ಜೊತೆ ಮಾತುಕತೆ ನಡೆಸಲು ಇಂದು ಡಿಕೆಶಿ ತಂಡ ಭೇಟಿ ಕೊಟ್ಟಿದೆ. ಆದರೆ ಅಲ್ಲಿನ ಪೊಲೀಸರು ಇಂದು ಡಿಕೆಶಿ ಅವರನ್ನು ಹೋಟೆಲ್ ಒಳಗಡೆ ಬಿಡಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಡಿಕೆಶಿ, ಜಿಟಿಡಿ ಹಾಗೂ ಶಾಸಕ ಶಿವಲಿಂಗೇ ಗೌಡ ಹೋಟೆಲ್ ಎದುರು ಮಳೆಯಲ್ಲೇ ಠಿಕಾಣಿ ಹೂಡಿದ್ದಾರೆ. ಸದ್ಯ ಅವರಿಗೆ ಅದೇ ಹೋಟೆಲಿನಲ್ಲಿ ಬೇರೆ ಕಡೆ ರೂಂ ಕೊಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.