Tag: Hotel

  • ರಾಮನಗರ ಹೆದ್ದಾರಿಯಲ್ಲಿ ರಾತ್ರಿ 11ಕ್ಕೆ ಡಾಬಾ, ಹೋಟೆಲ್, ಟೀ ಸ್ಟಾಲ್ ವ್ಯಾಪಾರ ಬಂದ್

    ರಾಮನಗರ ಹೆದ್ದಾರಿಯಲ್ಲಿ ರಾತ್ರಿ 11ಕ್ಕೆ ಡಾಬಾ, ಹೋಟೆಲ್, ಟೀ ಸ್ಟಾಲ್ ವ್ಯಾಪಾರ ಬಂದ್

    ರಾಮನಗರ: ಜಿಲ್ಲೆಯಲ್ಲಿನ ಹೆದ್ದಾರಿಯಲ್ಲಿ ಅಪರಾಧ ಕೃತ್ಯಗಳು ಹಾಗೂ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆದ್ದಾರಿ ಬದಿಯ ಹೋಟೆಲ್, ಡಾಬಾ, ಟೀ ಸ್ಟಾಲ್‍ಗಳು ಕೂಡಾ ರಾತ್ರಿ 11 ಗಂಟೆಗೆ ಸಂಪೂರ್ಣ ವ್ಯಾಪಾರವನ್ನ ಬಂದ್ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

    ಈ ಬಗ್ಗೆ ಪೊಲೀಸ್ ಅಧಿನಿಯಮ 1963ರ ಅಡಿಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾರವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನವಿ ಹಿನ್ನೆಲೆಯಲ್ಲಿ ಆದೇಶ ಹೊರಡಿಸಿದ್ದಾರೆ. ಸಣ್ಣ ಪುಟ್ಟ ಹೋಟೆಲ್‍ಗಳಿಂದ ಹಿಡಿದು ದೊಡ್ಡ ಡಾಬಾಗಳು, ಕೆಫೆ ಡೇಗಳು, ರೆಸ್ಟೋರೆಂಟ್‍ಗಳು ಇನ್ನು ಮುಂದೆ ರಾತ್ರಿ 11ರ ಒಳಗೆ ಬಾಗಿಲು ಮುಚ್ಚುವುದು ಕಡ್ಡಾಯವಾಗಿದ್ದು, ರಾತ್ರಿ 11 ಗಂಟೆ ನಂತರವೂ ವ್ಯಾಪಾರ ವಹಿವಾಟು ನಡೆಸಿದರೆ ಕಾನೂನು ಕ್ರಮ ಜರುಗಿಸಲಾಗುವುದು.

    ರಾಮನಗರ ಜಿಲ್ಲೆಯಲ್ಲಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ 275(ರಾಮನಗರ ಮಾರ್ಗ), ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ 209(ಕನಕಪುರ ಮಾರ್ಗ) ಬೆಂಗಳೂರು-ಕುಣಿಗಲ್ ರಾಷ್ಟ್ರೀಯ ಹೆದ್ದಾರಿ 75 (ಮಾಗಡಿ ಮಾರ್ಗ) ಹಾದು ಹೋಗಿವೆ. ಈ ಹೆದ್ದಾರಿಯ ಅಕ್ಕಪಕ್ಕದಲ್ಲಿ ನೂರಾರು ಹೋಟೆಲ್, ಬಾರ್ ಆಂಡ್ ರೆಸ್ಟೋರೆಂಟ್, ರೆಸಾರ್ಟ್ ಗಳು ಭರ್ಜರಿ ವ್ಯಾಪಾರ ನಡೆಸುತ್ತಿದ್ದು, ಇವುಗಳು ರಾತ್ರಿ 11 ಗಂಟೆಗೆ ಬಂದ್ ಮಾಡುವಂತೆ ಆದೇಶಿಸಲಾಗಿದೆ.

    ಜಿಲ್ಲಾಡಳಿತದಿಂದ ಆದೇಶ ಜಾರಿಯಾಗಿದೆ. ರಾತ್ರಿ 11ರ ಬಳಿಕ ಪೊಲೀಸರು ಹೆದ್ದಾರಿಯಲ್ಲಿ ಗಸ್ತು ತಿರುಗಲಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಿದ್ದಾರೆ. ಮತ್ತೆ ತಪ್ಪು ಮುಂದುವರಿಸಿದಲ್ಲಿ ಅಂಗಡಿ, ಹೋಟೆಲ್, ಬಾರ್ ಆಂಡ್ ರೆಸ್ಟೋರೆಂಟ್ ಯಾವುದೇ ರೀತಿಯ ವಹಿವಾಟು ನಡೆಸುವ ಮಾಲೀಕರ ಪರವಾನಗಿ ರದ್ದು ಮಾಡುವ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.

    ಭದ್ರತೆಯ ದೃಷ್ಟಿ, ಅಪರಾಧ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಹಾಗೂ ರಸ್ತೆ ಪ್ರಯಾಣಿಕರ ಸುರಕ್ಷತೆಯೇ ಈ ಆದೇಶಕ್ಕೆ ಮುಖ್ಯ ಕಾರಣವಾಗಿದೆ. ಕಳೆದ 4 ವರ್ಷದ ಅವಧಿಯಲ್ಲಿ ರಾತ್ರಿ ಸಮಯದಲ್ಲಿ ಹೆಚ್ಚು ಅಪರಾಧ ಪ್ರಕರಣಗಳು ವರದಿಯನ್ನ ಆಧರಿಸಿ ಎಸ್‍ಪಿ ಅನೂಪ್ ಶೆಟ್ಟಿರವರು ಇಂತಹದೊಂದು ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆ ಜಿಲ್ಲಾಧಿಕಾರಿಗಳು ಮನವಿಯನ್ನು ಪರಿಗಣಿಸಿ ಆದೇಶ ಹೊರಡಿಸಿದ್ದಾರೆ.

    ಕಳೆದ ನಾಲ್ಕು ವರ್ಷದಲ್ಲಿ ಜಿಲ್ಲೆಯಾದ್ಯಂತ 2015ರ ಸೆಪ್ಟೆಂಬರ್‍ನಿಂದ ಈವರೆಗೆ ರಾತ್ರಿ ವೇಳೆ 66 ಕೊಲೆ, 14 ದರೋಡೆ, 53 ದರೋಡೆ ಯತ್ನ ಪ್ರಕರಣಗಳು ವರದಿ ಆಗಿವೆ. ಇದೇ ಸಮಯದಲ್ಲಿ 55 ಸುಲಿಗೆ, 12 ಸರಗಳ್ಳತನ, 655 ರಾತ್ರಿ ಕಳವು, 75 ಮನೆ ಕಳ್ಳತನ, 375 ಸಾಧಾರಣ ಕಳ್ಳತನ, 517 ವಾಹನ ಕಳ್ಳತನ, 637 ಮಾರಣಾಂತಿಕ ವಲ್ಲದ ರಸ್ತೆ ಅಪಘಾತ, 229 ಮಾರಣಾಂತಿಕ ರಸ್ತೆ ಅಪಘಾತಗಳು ಸಂಭವಿಸಿವೆ. ಈ ಅಪರಾಧ ಕೃತ್ಯಗಳ ನಿಯಂತ್ರಣದ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ.

    ರಾತ್ರಿ ಹೊತ್ತು ರಸ್ತೆ ಬದಿಯ ಡಾಬಾ, ಕೆಫೆಗಳಲ್ಲಿ ಜನರು ಮನೋರಂಜನೆ ಉದ್ದೇಶಕ್ಕೆ ಹೆಚ್ಚು ಸೇರುತ್ತಿದ್ದು, ತಡರಾತ್ರಿ ಮೋಜು-ಮಸ್ತಿ ನಡೆಯುತ್ತಿದೆ. ಇದರಿಂದ ಸಾರ್ವಜನಿಕರ ಶಾಂತಿಗೆ ಭಂಗವಾಗುತ್ತಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಿದ್ದು, ಇದರಿಂದಾಗಿ ಅಪಘಾತ, ಅಪರಾಧ ಪ್ರಮಾಣವೂ ಹೆಚ್ಚುತ್ತಿದೆ. ಹೀಗಾಗಿ ರಾತ್ರಿ ವ್ಯಾಪಾರಕ್ಕೆ ನಿರ್ಬಂಧ ಹೇರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಜಿಲ್ಲಾಧಿಕಾರಿಗೆ ಪತ್ರದ ಮೂಲಕ ಕೋರಿದ್ದರು. ಅದರಂತೆ ರಾತ್ರಿ ವ್ಯಾಪಾರಕ್ಕೆ ಜಿಲ್ಲಾಧಿಕಾರಿಗಳು ಬ್ರೇಕ್ ಹಾಕಿದ್ದಾರೆ.

  • ಜಂಟಿ ಅಧಿಕಾರಿಗಳ ದಾಳಿ – ಶುಚಿ, ರುಚಿ ಇಲ್ಲದ ಹೋಟೆಲ್‌ಗಳಿಗೆ ನೋಟಿಸ್

    ಜಂಟಿ ಅಧಿಕಾರಿಗಳ ದಾಳಿ – ಶುಚಿ, ರುಚಿ ಇಲ್ಲದ ಹೋಟೆಲ್‌ಗಳಿಗೆ ನೋಟಿಸ್

    ಬಾಗಲಕೋಟೆ: ಆರೋಗ್ಯ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ನಗರಸಭೆ ಅಧಿಕಾರಿಗಳು ಶುಚಿ, ರುಚಿ ಕಾಪಾಡದ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ್ದಾರೆ.

    ಶುದ್ಧ ನೀರು ಕೊಡದೆ ಇರುವುದು, ತಿಂಡಿ, ತಿನಿಸುಗಳಲ್ಲಿ ಅತಿಯಾದ ಬಣ್ಣ, ಟೇಸ್ಟಿಂಗ್ ಸಾಲ್ಟ್ ಬಳಕೆ, ಸ್ವಚ್ಛತೆಗೆ ಆದ್ಯತೆ ನೀಡದ ಬಾಗಲಕೋಟೆ ನಗರದ ವಿವಿಧ ಹೋಟೆಲ್‌ಗಳ ಮೇಲೆ ಆರೋಗ್ಯ ಇಲಾಖೆ, ನಗರಸಭೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಮಂಗಳವಾರ ರಾತ್ರಿ ಜಂಟಿ ದಾಳಿ ನಡೆಸಿದರು.

    ನಗರದ ಹತ್ತಕ್ಕೂ ಹೆಚ್ಚು ಹೋಟೆಲ್‌, ಬೇಕರಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಶುಚಿ, ರುಚಿ ಕಾಪಾಡದ ನಾಲ್ಕು ಹೋಟೆಲ್‌ಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅತಿಯಾದ ಬಣ್ಣ ಬಳಕೆ ಮಾಡಿದ್ದ ಆಹಾರ ಪದಾರ್ಥ ವಶಪಡಿಸಿಕೊಂಡ ಅಧಿಕಾರಿಗಳು, ಕರಿದ ಎಣ್ಣೆ ಮರುಬಳಕೆ ಮಾಡಿದಲ್ಲಿ ಹೋಟೆಲ್‌ ಮುಚ್ಚಿಸುವ ಎಚ್ಚರಿಕೆ ನೀಡಿದ್ದಾರೆ.

    ನೋಟಿಸ್ ನೀಡಿರುವ ಹೋಟೆಲ್‌ಗಳ ವಿರುದ್ಧ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳು ತೀರ್ಮಾಸಿದ್ದಾರೆ.

  • ಭೂತಯ್ಯನ ಮಗ ಅಯ್ಯು ನೆನಪು – ಇಂದಿಗೂ ಹಾಗೆಯೇ ಇದೆ ಮನೆ, ಹೋಟೆಲ್

    ಭೂತಯ್ಯನ ಮಗ ಅಯ್ಯು ನೆನಪು – ಇಂದಿಗೂ ಹಾಗೆಯೇ ಇದೆ ಮನೆ, ಹೋಟೆಲ್

    – ಮೆರವಣಿಗೆ ಜಾಗಕ್ಕೆ ಭೂತಯ್ಯನ ಸರ್ಕಲ್ ಹೆಸರು
    – ಕಟ್ಟೆ ಕಟ್ಟಿ ಹೂವಿನ ಗಿಡ ನೆಟ್ಟು ಮರ ರಕ್ಷಣೆ

    ಚಿಕ್ಕಮಗಳೂರು: ಭೂತಯ್ಯನ ಮಗ ಅಯ್ಯು. ಭಾರತೀಯ ಚಿತ್ರರಂಗದ ಜೀವಂತ ದಂತಕಥೆ. 50 ವರ್ಷಗಳಲ್ಲಿ ಸಾವಿರಾರು ಸಿನಿಮಾಗಳು ಬಂದರೂ ಜನಮಾನಸದಲ್ಲಿ ಹಚ್ಚಹಸಿರಾಗಿರೋ ಸಿನಿಮಾ. ಆ ಚಿತ್ರದ ಒಂದೊಂದು ದೃಶ್ಯವೂ ಒಂದೊಂದು ಇತಿಹಾಸ. ದೇವಯ್ಯ ನೇಣು ಹಾಕಿಕೊಂಡಿದ್ದು, ಭೂತಯ್ಯನ ಮೃತನ ದೇಹವನ್ನ ಊರಲ್ಲಿ ಮೆರವಣಿಗೆ ಮಾಡಿದ್ದು, ಎರಡು ರೂಪಾಯಿಯಲ್ಲಿ ನಾಲ್ವರು ಅನ್ನ… ಅನ್ನ…. ಅಂತ ಊಟ ಮಾಡಿದ್ದು. ಎಷ್ಟೇ ಬಾರಿ ನೋಡಿದ್ರು ಮತ್ತೆ ಮತ್ತೆ ನೋಡ್ಬೇಕು ಎನ್ನುವ ದೃಶ್ಯಗಳವು. ಆದ್ರೆ, ದೇವಯ್ಯ ನೇಣು ಹಾಕಿಕೊಂಡ ಮರ, ನಾಲ್ವರು ಊಟ ಮಾಡಿದ ಆ ಮನೆ ಇಂದಿಗೂ ಹಾಗೆಯೇ ಇದೆ.

    ಕಳಸಾಪುರ ಗ್ರಾಮದ ಮಧ್ಯೆ ಇರೋ ಈ ಮರವನ್ನ ಊರಿನ ಯುವಕರು ಮರದ ಸುತ್ತಲೂ ಕಟ್ಟೆ ಕಟ್ಟಿ ಮರದ ಸುತ್ತಲೂ ಹೂವಿನ ಗಿಡ ಹಾಕಿ ರಕ್ಷಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಭೂತಯ್ಯನನ್ನ ಮೆರವಣಿಗೆ ಮಾಡಿದ ಬೀದಿ ಕೂಡ ಹಾಗೆ ಇದ್ದು, ಮನೆಗಳಿಗೆ ಸುಣ್ಣ ಬಣ್ಣ ಬಳಿದಿರುವುದರಿಂದ ಹೊಸತು ಎಂದು ಅನ್ನಿಸಿಕೊಳ್ಳುತ್ತಿದೆ. ಊರಿನ ಜನ ಭೂತಯ್ಯನನ್ನ ಮೆರವಣಿಗೆ ಮಾಡಿದ ಬೀದಿಗೆ ಭೂತಯ್ಯನ ಸರ್ಕಲ್ ಎಂದೇ ಹೆಸರಿಟ್ಟಿದ್ದಾರೆ. ಅಂದು ಚಿಕ್ಕ ಹುಡುಗರಾಗಿದ್ದವರು ವೃದ್ಧರಾಗಿ ಎಲ್ಲಾ ಜಾಗವನ್ನು ನೆನೆದು “ಇದೇ ಆ ಜಾಗ, ಇದೇ ಜಾಗ” ಎಂದು ಚಿತ್ರಕ್ಕಾಗಿ ಸಹಕರಿಸಿದ್ದನ್ನ ನೆನೆಯುತ್ತಿದ್ದಾರೆ. ಇದೇ ಚಿತ್ರದಲ್ಲಿ ವಿಷ್ಣುವರ್ಧನ್ ತಂದೆ ದೇವಯ್ಯನ ಪಾತ್ರಧಾರಿ ನೇಣು ಬಿಗಿದುಕೊಂಡಿದ್ದು ಇದೇ ಮರದಲ್ಲಿ.

    1974 ರಲ್ಲಿ ತೆರೆಕಂಡ ಸಿದ್ದಲಿಂಗಯ್ಯ ನಿರ್ದೇಶನದ ಭೂತಯ್ಯನಮಗ ಅಯ್ಯು ಚಿತ್ರದಲ್ಲಿ ಎರಡು ರೂಪಾಯಿಗೆ ನಾಲ್ವರು “ಅನ್ನ ಅನ್ನ” ಅಂತ ಊಟ ಮಾಡಿದ ಹೋಟೆಲ್ ಈಗಲೂ ಹಾಗೆಯೇ ಇದೆ. ಮನೆ ಚಿತ್ರಕ್ಕಾಗಿ ಹೋಟೆಲ್ ಮಾಡಿಕೊಂಡಿದ್ದರು. ಹೊಟೇಲ್ ಮಾಲೀಕನೊಂದಿಗೆ ನಟ ದಿನೇಶ್ ಹಾಗೂ ಸಹಚರರು ಕೂರುವುದಕ್ಕೂ ದುಡ್ ಕೊಡ್ಬೇಕಾ ಸ್ವಾಮಿ ಅಂದಿದ್ದು ಇದೇ ಜಾಗದಲ್ಲಿ. ಇಂದಿಗೂ ಆ ದೃಶ್ಯ ಕಂಡು ಜನ ಹುಸಿ ನಗ್ತಾರೆ. ಲೋಕನಾಥ್ ಉಪ್ಪಿನಕಾಯಿ ಜಾಡಿ ಕದಿಯುತ್ತಿದ್ದದ್ದು ಮನೆ, ವಿಷ್ಣುವರ್ಧನ್ ಮಚ್ಚನ್ನ ಮಸೆದ ಜಾಗ ಸೇರಿ ಚಿತ್ರದ ಒಂದೊಂದು ದೃಶ್ಯದ ಜಾಗ ಕಂಡು ಸಿನಿಮಾವನ್ನ ನೆನೆಯುತ್ತಿದ್ದಾರೆ.

    ಹತ್ತಾರು ಕೋಟಿ ಬಂಡವಾಳ ಹೂಡಿ ತೆಗೆದ ಸಿನಿಮಾಗಳು ನೂರು ದಿನ ಓಡುವಷ್ಟರಲ್ಲಿ ಮಕಾಡೆ ಮಲಗಿರುತ್ತದೆ. ಸಾಲದಕ್ಕೆ ಸಿನಿಮಾದ ಗೆಲುವಿಗಾಗಿ ಚಿತ್ರತಂಡ ಐಟಂ ಸಾಂಗ್, ಅದು-ಇದು ಅಂತೆಲ್ಲಾ ಸರ್ಕಸ್ ಮಾಡಿರುತ್ತದೆ. ಆದರೆ ಅಪ್ಪಟ ಹಳ್ಳಿ ಸೊಗಡಿನ ಈ ಚಿತ್ರ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. 45 ವರ್ಷವಾದ್ರು ಈ ಚಿತ್ರದ ಒಂದೊಂದು ದೃಶ್ಯ ಕೂಡ ಗ್ರಾಮಸ್ಥರಿಗೆ ಕಣ್ಣಿಗೆ ಕಟ್ಟಿದಂತಿದೆ.

  • ಅಭಿಷೇಕ್ ಹತ್ಯೆಗೆ ಟ್ವಿಸ್ಟ್: ಹೋಟೆಲ್‍ನ ರೂಂನಲ್ಲಿದ್ದ ವ್ಯಕ್ತಿಯಿಂದ ಕೃತ್ಯ

    ಅಭಿಷೇಕ್ ಹತ್ಯೆಗೆ ಟ್ವಿಸ್ಟ್: ಹೋಟೆಲ್‍ನ ರೂಂನಲ್ಲಿದ್ದ ವ್ಯಕ್ತಿಯಿಂದ ಕೃತ್ಯ

    ಮೈಸೂರು: ಅಮೆರಿಕದಲ್ಲಿ ಮೈಸೂರಿನ ಯುವಕ ಅಭಿಷೇಕ್ ಹತ್ಯೆ ಪ್ರಕರಣದಲ್ಲಿ ಟ್ವಿಸ್ಟ್ ಸಿಕ್ಕಿದ್ದು, ಹೋಟೆಲ್‍ನ ರೂಂನಲ್ಲಿದ್ದ ವ್ಯಕ್ತಿಯೇ ಕೊಲೆ ಮಾಡಿರುವುದು ಸ್ಪಷ್ಟವಾಗಿದೆ.

    ಅಮೆರಿಕದ ಸ್ಯಾನ್‍ಬರ್ನಾಡಿಯೊ ಪ್ರದೇಶದ ಹೋಟೆಲ್‍ನಲ್ಲಿ ಅಭಿಷೇಕ್ ಸುದೇಶ್ ಭಟ್ (25) ಕೆಲಸ ಮಾಡುತ್ತಿದ್ದರು. ಎಂದಿನಂತೆ ಹೋಟೆಲ್‍ನ ಕೆಲಸಗಾರರು ಗುರುವಾರ ರೂಂ ಸ್ವಚ್ಛಗೊಳಿಸುತ್ತಿದ್ದರು. ಆದರೆ ಒಂದು ರೂಂನಲ್ಲಿದ್ದ ವ್ಯಕ್ತಿಯೊಬ್ಬ ಮಾತ್ರ ಬಾಗಿಲು ತೆಗೆದಿರಲಿಲ್ಲ. ಈ ವಿಚಾರವನ್ನು ಕೆಲಸಗಾರರು ಅಭಿಷೇಕ್‍ಗೆ ತಿಳಿಸಿದ್ದರು. ಆಗ ಅಭಿಷೇಕ್ ವ್ಯಕ್ತಿ ಇದ್ದ ರೂಂ ಬಾಗಿಲನ್ನು ತಟ್ಟಿದ್ದರು. ಇದರಿಂದ ಕೋಪಗೊಂಡ ವ್ಯಕ್ತಿ ಏಕಾ ಏಕಿ ಅಭಿಷೇಕ್ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಅಭಿಷೇಕ್ ಸ್ನೇಹಿತರು, ದೂರವಾಣಿ ಮೂಲಕ ಅಭಿಷೇಕ್ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

    ಘಟನೆ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕ್ಯಾಮೆರಾ ಫೂಟೇಜ್‍ಗಳನ್ನ ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಅಭಿಷೇಕ್ ಪೋಷಕರು ತಿಳಿಸಿದ್ದಾರೆ.

    ವೀಸಾ ಸಮಸ್ಯೆ:
    ಅಮೆರಿಕದಲ್ಲಿ ರಜೆ ಇರುವುದರಿಂದ ಸೋಮವಾರದ ನಂತರ ಮೃತ ದೇಹ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಅಷ್ಟೇ ಅಲ್ಲದೆ ರಜೆಯಿಂದಾಗಿ ಅಮೆರಿಕಕ್ಕೆ ತೆರಳಲು ಅಭಿಷೇಕ್ ಕುಟುಂಬಸ್ಥರಿಗೆ ವೀಸಾ ಸಮಸ್ಯೆ ಎದುರಾಗಿದೆ.

  • ಅಮೆರಿಕದಲ್ಲಿ ಗುಂಡಿನ ದಾಳಿಗೆ ಮೈಸೂರಿನ ಯುವಕ ಬಲಿ

    ಅಮೆರಿಕದಲ್ಲಿ ಗುಂಡಿನ ದಾಳಿಗೆ ಮೈಸೂರಿನ ಯುವಕ ಬಲಿ

    ವಾಷಿಂಗ್ಟನ್: ಅಮೆರಿಕದಲ್ಲಿ ಅಪರಿಚಿತ ಗುಂಡಿನ ದಾಳಿಗೆ ಮೈಸೂರು ಮೂಲದ ಯುವಕನೋರ್ವ ಮೃತಪಟ್ಟಿದ್ದಾರೆ.

    ಮೃತ ಯುವಕನನ್ನು ಸಾಹಿತಿ ಕೆ.ಶಿವರಾಮ ಐತಾಳ್ ಅವರ ಮೊಮ್ಮಗ ಹಾಗೂ ಮೈಸೂರಿನ ಕುವೆಂಪುನಗರದ ನಿವಾಸಿ ಸುದೇಶ್ ಚಂದ್ ಅವರ ಮಗ ಅಭಿಷೇಕ್ ಸುದೇಶ್ ಭಟ್ (25) ಎಂದು ಗುರುತಿಸಲಾಗಿದೆ. ಅಮೆರಿಕದ ಸ್ಯಾನ್‍ಬರ್ನಾಡಿಯೊ ಎಂಬ ಪ್ರದೇಶದಲ್ಲಿ ಗುಂಡಿನ ದಾಳಿಯಿಂದ ಮೃತಪಟ್ಟಿದ್ದಾರೆ.

    ಅಮೆರಿಕದಲ್ಲಿ ಎಂ.ಎಸ್ ಓದುತ್ತಿದ್ದ ಅಭಿಷೇಕ್ ಕಳೆದ ಒಂದೂವರೆ ವರ್ಷದಿಂದ ಅಮೆರಿಕದಲ್ಲಿ ವಾಸವಿದ್ದರು. ವಿದ್ಯಾಭ್ಯಾಸ ಜೊತೆಗೆ ಹೋಟೆಲ್‍ವೊಂದರಲ್ಲಿ ರಿಸಪ್ಷನಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಭಿಷೇಕ್ ಮೇಲೆ ಗುರುವಾರ ಮಧ್ಯರಾತ್ರಿ 11.30ರ ವೇಳೆಗೆ ಕೆಲಸ ಮುಗಿಸಿ ಹೋಟೆಲ್ ನಿಂದ ಹೊರಬರುವಾಗ ಅಪರಿಚಿತ ವ್ಯಕ್ತಿ ಗುಂಡಿನ ದಾಳಿ ಮಾಡಿದ್ದಾರೆ. ಪರಿಣಾಮ ಅಭಿಷೇಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಅಭಿಷೇಕ್ ಎರಡು ದಿನಗಳ ಹಿಂದೆ ಅವರ ತಂದೆಯ ಜೊತೆ ಫೋನಿನಲ್ಲಿ ಮಾತನಾಡಿದ್ದು, ಘಟನೆ ನಡೆಯುವ 15 ನಿಮಿಷಕ್ಕೂ ಮುಂಚೆ ಮನೆಗೆ ಸಂದೇಶ ಕೂಡ ಕಳುಹಿಸಿದ್ದಾರೆ. ಇದಾದ 15 ನಿಮಿಷಕ್ಕೆ ಅವರು ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲಿ ನಡೆಯುತ್ತಿರುವ ಥ್ಯಾಂಕ್ಸ್ ಗೀವಿಂಗ್ ಡೇ ಆಚರಣೆ ಹಾಗೂ ಸ್ಯಾನ್‍ಬರ್ನಾಡಿಯೊದಲ್ಲಿನ ಭಾರೀ ಹಿಮಪಾತದಿಂದ ಮೃತದೇಹ ತರಲು ತೊಂದರೆಯಾಗಿದೆ. ಈ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ವಿದೇಶಾಂಗ ಇಲಾಖೆ ಜೊತೆ ಮಾತನಾಡಿದ್ದಾರೆ.

  • ಪಾಕ್ ಆಟಗಾರರೊಂದಿಗೆ ಭೋಜನ ಸವಿದ ಭಾರತೀಯ ಕ್ಯಾಬ್ ಡ್ರೈವರ್

    ಪಾಕ್ ಆಟಗಾರರೊಂದಿಗೆ ಭೋಜನ ಸವಿದ ಭಾರತೀಯ ಕ್ಯಾಬ್ ಡ್ರೈವರ್

    ಸಿಡ್ನಿ: ಕಾರಿನಲ್ಲಿ ಡ್ರಾಪ್ ಮಾಡಿ ಹಣ ಪಡೆಯಲು ಒಪ್ಪದ ಭಾರತೀಯ ಕ್ಯಾಬ್ ಡ್ರೈವರ್ ಅನ್ನು ಪಾಕಿಸ್ತಾನಿ ಆಟಗಾರರು ತಮ್ಮ ಜೊತೆ ಊಟಕ್ಕೆ ಕರೆದುಕೊಂಡು ಹೋಗಿದ್ದಾರೆ.

    ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪಾಕಿಸ್ತಾನ ಆಟಗಾರರು ಶಾಹೀನ್ ಶಾ ಅಫ್ರಿದಿ, ಯಾಸಿರ್ ಷಾ ಮತ್ತು ನಸೀಮ್ ಷಾ ಅವರು ಬ್ರಿಸ್ಬೇನ್‍ನಲ್ಲಿ ಊಟಕ್ಕೆ ಹೋಟೆಲ್ ಗೆ ಹೋಗಿದ್ದರು. ಆಟಗಾರರನ್ನು ಹೋಟೆಲಿಗೆ ಕರೆತಂದಿದ್ದ ಭಾರತೀಯ ಕ್ಯಾಬ್ ಚಾಲಕ ಹಣ ಪಡೆದಿರಲಿಲ್ಲ. ಹೀಗಾಗಿ ಆಟಗಾರರೆಲ್ಲರೂ ಚಾಲಕನನ್ನು ತಮ್ಮ ಜೊತೆಗೆ ಊಟಕ್ಕೆ ಕರೆದುಕೊಂಡು ಹೋಗಿದ್ದಾರೆ.

    ಪಾಕಿಸ್ತಾನಿ ಕ್ರಿಕೆಟ್ ಆಟಗಾರರು ಭಾರತೀಯ ಕಾರು ಚಾಲಕನಿಗೆ ಊಟ ಕೊಡಿಸಿರುವ ಕಥೆಯನ್ನು ಟೆಸ್ಟ್ ಪಂದ್ಯದ ಕಾಮೆಂಟ್ರಿ ಮಾಡುವ ವೇಳೆ ಎಬಿಸಿ ರೇಡಿಯೊ ನಿರೂಪಕಿ ಅಲಿಸನ್ ಮಿಚೆಲ್ ಅವರು ಆಸ್ಟ್ರೇಲಿಯಾದ ಮಾಜಿ ವೇಗಿ ಮಿಚೆಲ್ ಜಾನ್ಸನ್‍ಗೆ ಹೇಳಿದ್ದಾರೆ. ಕ್ರಿಕೆಟ್ ಆಟಗಾರರ ಜೊತೆ ಊಟ ಮಾಡುವ ಅವಕಾಶ ಸಿಕ್ಕ ನಂತರ ಕ್ಯಾಬ್ ಚಾಲಕ ಎಷ್ಟು ಉತ್ಸುಕನಾಗಿದ್ದ ಎಂಬುದನ್ನು ಅಲಿಸನ್ ಮಿಚೆಲ್ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    https://twitter.com/abcgrandstand/status/1198442285509357570

    ಈ ವಿಡಿಯೋದಲ್ಲಿ ನಿರೂಪಕಿ ಅಲಿಸನ್ ಮಿಚೆಲ್ ಅವರು ಇಂದು ನಾನು ನಿಮಗೆ ಒಂದು ಕಥೆಯನ್ನು ಹೇಳುತ್ತೇನೆ. ಆ ಮೂಲಕ ಇಂದಿನ ದಿನವನ್ನು ಆರಂಭ ಮಾಡೋಣ. ಆಗ ಮಿಚೆಲ್ ಪಾಕಿಸ್ತಾನಿ ಆಟಗಾರರು ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯಕ್ಕಾಗಿ ಬ್ರಿಸ್ಬೇನ್ ಬಂದಿದ್ದ ಪಾಕಿಸ್ತಾನಿ ಆಟಗಾರರು ಊಟಕ್ಕೆಂದು ಹೋಟೆಲ್ ಗೆ ಹೋಗಲು ಕ್ಯಾಬ್ ಬುಕ್ ಮಾಡುತ್ತಾರೆ.

    ಆಗ ಅಲ್ಲಿಗೆ ಬಂದ ಕ್ಯಾಬ್ ಚಾಲಕ ಒಬ್ಬ ಭಾರತೀಯ, ಅದೂ ಅಲ್ಲದೇ ಆತ ದೊಡ್ಡ ಕ್ರಿಕೆಟ್ ಅಭಿಮಾನಿಯಾಗಿರುತ್ತಾನೆ. ಪಾಕಿಸ್ತಾನ ಆಟಗಾರನ್ನು ಹತ್ತಿಸಿಕೊಂಡ ಆತ ಹೋಟೆಲ್ ಗೆ ಡ್ರಾಪ್ ಮಾಡುತ್ತಾನೆ. ನಂತರ ಆಟಗಾರರು ಅವನಿಗೆ ಹಣ ಕೊಡಲು ಹೋದಾಗ ಆತ ತೆಗೆದುಕೊಳ್ಳುವುದಿಲ್ಲ. ಆಗ ಪಾಕ್ ಆಟಗಾರರು ಆತನನ್ನು ತಮ್ಮ ಜೊತೆಯಲ್ಲೇ ಕರೆದುಕೊಂಡು ಹೋಗಿ ಊಟ ಕೊಡಿಸಿದ್ದಾರೆ ಎಂದು ಮಿಚೆಲ್ ಜಾನ್ಸನ್‍ಗೆ ಹೇಳಿದ್ದಾರೆ.

    ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಹಲವಾರು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಭಾನುವಾರ ಬ್ರಿಸ್ಬೇನ್‍ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಆಸ್ಟ್ರೇಲಿಯಾ ಇನ್ನಿಂಗ್ಸ್ ಮತ್ತು 5 ರನ್‍ಗಳಿಂದ ಸೋಲಿಸಿ, ಎರಡು ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

  • ಕ್ರಿಕೆಟ್ ನೋಡಲು ಲಕ್ನೋಗೆ ಬಂದು ರೂಮ್ ಸಿಗದೆ ಪರದಾಡಿದ ಅಫ್ಘಾನ್ ಕ್ರೀಡಾಭಿಮಾನಿ

    ಕ್ರಿಕೆಟ್ ನೋಡಲು ಲಕ್ನೋಗೆ ಬಂದು ರೂಮ್ ಸಿಗದೆ ಪರದಾಡಿದ ಅಫ್ಘಾನ್ ಕ್ರೀಡಾಭಿಮಾನಿ

    ಲಕ್ನೋ: ಕ್ರಿಕೆಟ್ ನೋಡಲು ಲಕ್ನೋಗೆ ಬಂದ ಅಫ್ಘಾನಿಸ್ತಾನದ ಕ್ರಿಕೆಟ್ ಅಭಿಮಾನಿಯೊಬ್ಬರು ಉಳಿದುಕೊಳ್ಳಲು ಹೋಟೆಲ್ ರೂಮ್ ಸಿಗದೆ ಪರದಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಲಕ್ನೋದಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯನ್ನು ವೀಕ್ಷಿಸಲು ಅಫ್ಘಾನಿಸ್ತಾದಿಂದ ಶೇರ್ ಖಾನ್ ಬಂದಿದ್ದಾರೆ. ಇವರ ಎತ್ತರ 8 ಅಡಿ 2 ಇಂಚು ಇರುವ ಕಾರಣ ಅವರಿಗೆ ಹೋಟೆಲಿನವರು ರೂಮ್ ನೀಡಿರಲಿಲ್ಲ.

    ಕ್ರಿಕೆಟ್ ನೋಡಲು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದು ಹಲವಾರು ಹೋಟೆಲ್‍ಗೆ ತೆರಳಿ ರೂಮ್ ಕೇಳಿದ್ದಾರೆ. ಆದರೆ ಅವರ ಎತ್ತರ ನೋಡಿ ಯಾವ ಹೋಟೆಲ್ ಮಾಲೀಕನು ಉಳಿದುಕೊಳ್ಳಲು ರೂಮ್ ನೀಡಿಲ್ಲ. ಇದರಿಂದ ಬೇಸತ್ತ ಶೇರ್ ಖಾನ್ ನೆರವು ನೀಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಶೇರ್ ಖಾನ್ ನೆರೆವಿಗೆ ಬಂದ ಪೊಲೀಸರು ನಂತರ ನಾಕಾ ಪ್ರದೇಶದಲ್ಲಿ ರೂಮ್ ಮಾಡಿಕೊಟ್ಟು ತಂಗಲು ವ್ಯವಸ್ಥೆ ಮಾಡಿದ್ದಾರೆ.

    ಈ ವೇಳೆ ಈ ಹೋಟೆಲ್‍ನಲ್ಲಿ ಎಂಟು ಆಡಿ ಎತ್ತರದ ಮನುಷ್ಯ ಬಂದಿದ್ದಾನೆ ಎಂದು ತಿಳಿದು ಹೋಟೆಲ್‍ಗೆ ಜನರು ತಂಡ ತಂಡವಾಗಿ ಬಂದು ಅವರನ್ನು ನೋಡಿಕೊಂಡು ಹೋಗಿದ್ದಾರೆ. ಒಂದು ರಾತ್ರಿ ಅಲ್ಲೇ ತಂಗಿದ್ದ ಶೇರ್ ಖಾನ್ ಅನ್ನು ನೋಡಲು ಬೆಳಗ್ಗೆ ಸಮಯದಲ್ಲಿ ಸುಮಾರು 200 ಜನ ಹೋಟೆಲ್ ಬಳಿ ಬಂದಿದ್ದರು. ಹೀಗೆ ಜನ ಬಂದಿದ್ದರಿಂದ ನಮಗೆ ಬಹಳ ಕಷ್ಟವಾಯಿತು ಎಂದು ಹೋಟೆಲ್ ಮಾಲೀಕ ರಾನು ಹೇಳಿದ್ದಾರೆ.

    ಹೋಟೆಲ್ ಬಳಿ ಶೇರ್ ಖಾನ್ ನೋಡಲು ಜನ ಬರುತ್ತಿದ್ದಾರೆ ಎಂದು ತಿಳಿದ ಪೊಲೀಸರು ತಕ್ಷಣ ಹೋಟೆಲ್ ಬಳಿ ಬಂದು ಅವರನ್ನು ಕರೆದುಕೊಂಡು ಹೋಗಿ ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ಪಂದ್ಯ ನಡೆಯುತ್ತಿದ್ದ ಎಕಾನಾ ಮೈದಾನಕ್ಕೆ ಬಿಟ್ಟು ಬಂದಿದ್ದಾರೆ. ಶೇನ್ ಖಾನ್ ನಾನು ಇನ್ನೂ ನಾಲ್ಕೈದು ದಿನ ಭಾರತದಲ್ಲೇ ಇರುತ್ತೇನೆ ಎಂದು ಹೇಳಿದ್ದಾರೆ.

  • ಹಳಸಿದ ಅವಲಕ್ಕಿಯನ್ನು ಗ್ರಾಹಕರಿಗೆ ನೀಡಿದ ಹೋಟೆಲ್ ಸಿಬ್ಬಂದಿ – ವಿಡಿಯೋ ವೈರಲ್

    ಹಳಸಿದ ಅವಲಕ್ಕಿಯನ್ನು ಗ್ರಾಹಕರಿಗೆ ನೀಡಿದ ಹೋಟೆಲ್ ಸಿಬ್ಬಂದಿ – ವಿಡಿಯೋ ವೈರಲ್

    ಬಾಗಲಕೋಟೆ: ಪ್ರವಾಸೋದ್ಯಮ ಇಲಾಖೆ ಅಧೀನದಲ್ಲಿನ ಹೋಟೆಲಿನ ಸಿಬ್ಬಂದಿ ಗ್ರಾಹಕರಿಗೆ  ಹಳಸಿದ ಅವಲಕ್ಕಿ ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ.

    ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದ ಮಯೂರ ಚಾಲುಕ್ಯ ಹೋಟೆಲ್ ನಲ್ಲಿ ನಡೆದಿರುವ ಕರ್ಮಕಾಂಡ ಇದೀಗ ಬಹಿರಂಗವಾಗಿದೆ. ಅಡುಗೆ ಸಿಬ್ಬಂದಿ ಹಿಂದಿನ ದಿನ ಉಳಿದ ಹಳಸಿದ ಅವಲಕ್ಕಿಯನ್ನು ಪುನಃ ಗ್ರಾಹಕರಿಗೆ ಕೊಡುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಭಾರೀ ವೈರಲ್ ಆಗುತ್ತಿದೆ.

    ಅಕ್ಟೋಬರ್ 24 ರಂದು ದೀಪಕ್ ಕಟ್ಟಿಮನಿ ಎಂಬುವರು ಮಯೂರ ಚಾಲುಕ್ಯ ಹೋಟೆಲ್ ಗೆ ಹೋಗಿದ್ದರು. ಈ ವೇಳೆ ಅವಲಕ್ಕಿ ಆರ್ಡರ್ ಮಾಡಿದ್ದ ದೀಪಕ್ ಅವರಿಗೆ ಅಡುಗೆ ಸಿಬ್ಬಂದಿ ಹಿಂದಿನ ದಿನ ಹಳಸಿದ ಅವಲಕ್ಕಿ ನೀಡಿದ್ದಾರೆ. ಸದ್ಯ ಹೋಟೆಲ್ ಅಡುಗೆ ಸಿಬ್ಬಂದಿಗಳ ಕೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ ಈ ಬಗ್ಗೆ ದೀಪಕ್ ಕಟ್ಟಿಮನಿ ಜಿಲ್ಲಾ ಆರೋಗ್ಯ ಇಲಾಖೆಗೆ ದೂರು ನೀಡಿದ್ದಾರೆ.

    ಸದ್ಯ ದೂರು ಪಡೆದಿರುವ ಬಾಗಲಕೋಟೆ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಅಧಿಕಾರಿಗಳು ಹೋಟೆಲಿಗೆ ಭೇಟಿ ನೀಡಿ ತಿಳುವಳಿಕೆ ಪತ್ರ ಕಳುಹಿಸಿಕೊಟ್ಟಿದ್ದಾರೆ. ಹೋಟೆಲ್ ನಲ್ಲಿ ಶುಚಿತ್ವ ಇಲ್ಲದಿರುವುದು, ಗೋಬಿಯಲ್ಲಿ ಹುಳುಗಳು ಕಂಡು ಬಂದಿರುವುದನ್ನು ಕೂಡ ಗಮನಿದ್ದಾರೆ. ನವೆಂಬರ್ ಐದನೇ ದಿನಾಂಕದೊಳಗೆ ಪ್ರಕರಣದ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.

  • ಹಾಸನ ನಿಗೂಢ ಸಾವು ಕೇಸ್ – 18ನೇ ವಯಸ್ಸಿಗೆ ಮನೆ ಬಿಟ್ಟಿದ್ದ ಯುವತಿ

    ಹಾಸನ ನಿಗೂಢ ಸಾವು ಕೇಸ್ – 18ನೇ ವಯಸ್ಸಿಗೆ ಮನೆ ಬಿಟ್ಟಿದ್ದ ಯುವತಿ

    – ರಾತ್ರಿ ಹೋಟೆಲ್‍ಗೆ ಹೋಗಿದ್ದ ಪುನಿತ್
    – ಆತ್ಮಹತ್ಯೆಯೋ? ಕೊಲೆಯೋ ತನಿಖೆ ಆರಂಭ

    ಹಾಸನ: ಜಿಲ್ಲೆಯ ಖಾಸಗಿ ಹೋಟೆಲ್ ಬಳಿ ಅನುಮಾನಾಸ್ಪದವಾಗಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಮೃತ ಯುವತಿ 18ನೇ ವಯಸ್ಸಿನಲ್ಲೇ ಪ್ರೀತಿ ವಿಚಾರವಾಗಿ ಮನೆ ಬಿಟ್ಟಿದ್ದಳು ಎನ್ನುವ ವಿಚಾರ ತನಿಖೆ ವೇಳೆ ತಿಳಿದು ಬಂದಿದೆ. ಇದನ್ನೂ ಓದಿ: ಹೋಟೆಲ್ ಹಿಂಭಾಗ ಯುವತಿಯ ಮೃತದೇಹ ಪತ್ತೆ

    ಅರಕಲಗೂಡು ಮೂಲದ ಭವಿತಾ (23) ಬಿಎಂ ರಸ್ತೆಯಲ್ಲಿರುವ ಸರಾಯು ಹೋಟೆಲ್‍ನ ಹಿಂಭಾಗದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಪೊಲೀಸರು ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಪೊಲೀಸರು ಯುವತಿಯ ಕೈ ಮೇಲೆ ಹಾಕಿಸಿಕೊಂಡಿದ್ದ ಹಚ್ಚೆಯಂತೆ ಪುನಿತ್‍ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

    ಮೃತ ಭವಿತಾ 18ನೇ ವಯಸ್ಸಿನಲ್ಲೇ ಪ್ರೀತಿ ವಿಚಾರವಾಗಿ ಜಗಳವಾಡಿಕೊಂಡು ಮನೆ ಬಿಟ್ಟು ಬಂದಿದ್ದಳು. ನಂತರ ಅವರ ತಂದೆ ಪೊಲೀಸ್ ದೂರು ನೀಡಿದ್ದರು. ಪೊಲೀಸರ ಕೈಗೆ ಸಿಕ್ಕಿದ್ದಳು. ಆದರೆ ಆಕೆ ಮನೆಗೆ ತೆರಳಲು ಎಂದು ನಿರಾಕರಿಸಿದ್ದಳು. ಹೀಗಾಗಿ ಅಂದಿನಿಂದ ಪೋಷಕರು ಕೂಡ ಆಕೆಯನ್ನ ಸಂಪರ್ಕಿಸಿರಲಿಲ್ಲ. ಭವಿತಾ ಹೆಚ್ಚಾಗಿ ವಿದ್ಯಾಭ್ಯಾಸ ಮಾಡಿಲ್ಲ. ಆದರೆ ಈಕೆಗೆ ಮೂವರು ಪ್ರಿಯಕರರು ಇದ್ದರು ಎನ್ನುವ ವಿಚಾರ ತನಿಖೆ ವೇಳೆ ತಿಳಿದು ಬಂದಿದೆ.

    12 ದಿನಗಳಿಂದ ಹೋಟೆಲ್ ರೂಮಿನಲ್ಲಿದ್ದ ಈಕೆ ಫೇಸ್‍ಬುಕ್ ಖಾತೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದೇನೆ ಎನ್ನುವ ವಿಚಾರವನ್ನು ಅಪ್‍ಡೇಟ್ ಮಾಡಿಕೊಂಡಿದ್ದಾಳೆ. ಅಷ್ಟೇ ಅಲ್ಲದೇ ಖಾತೆಯಲ್ಲಿ ಸಾಕಷ್ಟು ಫೋಟೋಶೂಟ್ ಮಾಡಿಸಿಕೊಂಡಿರುವ ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡಿದ್ದಾಳೆ.

    ಶನಿವಾರ ರಾತ್ರಿ ಏನಾಯ್ತು?
    ಶನಿವಾರ ರಾತ್ರಿ ಪುನಿತ್ ಆಕೆಯಿದ್ದ ರೂಮಿಗೆ ಬಂದಿದ್ದಾನೆ. ಆಗ ಇವರಿಬ್ಬರ ಮಧ್ಯೆ ಪ್ರೀತಿ ವಿಚಾರವಾಗಿ ಗಲಾಟೆ ನಡೆದಿದೆ. ಇದರಿಂದ ಬೇಸರ ಮಾಡಿಕೊಂಡು ಆಕೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೋ ಅಥವಾ ಪುನಿತ್ ಕೊಲೆ ಮಾಡಿದ್ದಾನೆಯೇ ಎಂದು ತಿಳಿದು ಬಂದಿಲ್ಲ. ಸದ್ಯಕ್ಕೆ ಪೊಲೀಸ್ ಪುನಿತ್ ಜೊತೆ ಆತನ ಇಬ್ಬರು ಸ್ನೇಹಿತರನ್ನು ವಶಕ್ಕೆ ಪಡೆದ ವಿಚಾರಣೆ ನಡೆಸುತ್ತಿದ್ದಾರೆ.

    ಇಂದು ಬೆಳಗ್ಗೆ ಹೋಟೆಲ್ ಹಿಂಭಾಗ ಭವಿತಾ ಮೃತದೇಹ ಪತ್ತೆಯಾಗಿತ್ತು. ದಾರಿಯಲ್ಲಿ ಓಡಾಡುತ್ತಿದ್ದ ಜನರು ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಯುವತಿ ದೇಹದ ಹಲವು ಭಾಗಗಳಲ್ಲಿ ಹಚ್ಚೆ ಹಾಗೂ ಕೈ ಮೇಲೆ ಪುನಿತ್ ಎಂದು ಹಾಕಿಸಿಕೊಂಡಿರುವುದು ಪತ್ತೆಯಾಗಿತ್ತು.

  • ಹೋಟೆಲ್ ಹಿಂಭಾಗ ಯುವತಿಯ ಮೃತದೇಹ ಪತ್ತೆ

    ಹೋಟೆಲ್ ಹಿಂಭಾಗ ಯುವತಿಯ ಮೃತದೇಹ ಪತ್ತೆ

    ಹಾಸನ: ಜಿಲ್ಲೆಯ ಖಾಸಗಿ ಹೋಟೆಲ್ ಬಳಿ ಅನುಮಾನಾಸ್ಪದವಾಗಿ ಯುವತಿಯೊಬ್ಬಳ ಮೃತ ದೇಹ ಸಿಕ್ಕಿದೆ.

    ಭವಿತಾ (23) ಮೃತ ಯುವತಿ. ಈಕೆ ಅರಕಲಗೂಡು ಮೂಲದವಳಾಗಿದ್ದು, ಕಳೆದ 12 ದಿನಗಳಿಂದ ಬಿಎಂ ರಸ್ತೆಯಲ್ಲಿರುವ ಸರಾಯು ಹೋಟೆಲ್ ನಲ್ಲಿ ರೂಂ ಮಾಡಿಕೊಂಡಿದ್ದಳು. ಆದರೆ ಇಂದು ಬೆಳಗ್ಗೆ ಹೋಟೆಲ್ ಹಿಂಭಾಗ ಯುವತಿಯ ಮೃತದೇಹ ಪತ್ತೆಯಾಗಿದೆ. ದಾರಿಯಲ್ಲಿ ಓಡಾಡುತ್ತಿದ್ದ ಜನರು ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಇದೀಗ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಅನುಮಾನ ಮೂಡಿದೆ.

    ಮೃತ ಯುವತಿ ದೇಹದ ಹಲವು ಭಾಗಗಳಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ ಕೈ ಮೇಲೆ ಪುನಿತ್ ಎಂದು ಹಚ್ಚೆ ಹಾಕಿಸಿಕೊಂಡಿದ್ದಾಳೆ. ಮಾಹಿತಿ ತಿಳಿದ ಪೋಷಕರು ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ಕುರಿತು ತನಿಖೆ ನಡೆಸುವಂತೆ ಬಡಾವಣೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.