Tag: Hotel

  • ವ್ಯಾಪಾರಕ್ಕಲ್ಲ, ಹಸಿದವರ ಹೊಟ್ಟೆ ತುಂಬಿಸಲು ದಿನಪೂರ್ತಿ ಹೋಟೆಲ್ ಓಪನ್

    ವ್ಯಾಪಾರಕ್ಕಲ್ಲ, ಹಸಿದವರ ಹೊಟ್ಟೆ ತುಂಬಿಸಲು ದಿನಪೂರ್ತಿ ಹೋಟೆಲ್ ಓಪನ್

    – ಪೊಲೀಸ್, ನರ್ಸ್, ನಿರ್ಗತಿಕರಿಗೆ ಊಟ
    – ಸ್ವಂತ ಕಾರಿನಲ್ಲಿ ತುಂಬಿ ಆಹಾರ ವಿತರಣೆ

    ಮಡಿಕೇರಿ: ಕೊರೊನಾ ಮಹಾಮಾರಿಯಿಂದ ದೇಶವೇ ಲಾಕ್‍ಡೌನ್ ಆಗಿದ್ದು, ಅಂಗಡಿ ಮುಂಗಟ್ಟು, ಹೋಟೆಲ್ ಗಳು ಸಂಪೂರ್ಣ ಬಂದ್ ಆಗಿದೆ. ಆದರೆ ಈ ಹೋಟೆಲ್ ಮಾತ್ರ ದಿನಪೂರ್ತಿ ತೆರೆದಿದೆ. ಆದರೆ ವ್ಯಾಪಾರಕ್ಕಲ್ಲ, ಬದಲಿಗೆ ಹಸಿದವರ ಹೊಟ್ಟೆ ತುಂಬಿಸಲು.

    ಕುಶಾಲನಗರ ಸಮೀಪದ ಕೊಪ್ಪದಲ್ಲಿರುವ ಸಾಯಿ ಅಮೃತ್ ಹೋಟೆಲ್‍ನ ಮಾಲೀಕ ಚಂದ್ರಶೇಖರ್ ಈ ಮಹತ್ತರ ಕೆಲಸವನ್ನು ಕಳೆದ 11 ದಿನಗಳಿಂದ ಮಾಡುತ್ತಿದ್ದಾರೆ. ಚೆಕ್ ಪೋಸ್ಟ್ ಗಳಲ್ಲಿ, ಜನಸಂದಣಿ ಇರುವಲ್ಲಿ ಕರ್ತವ್ಯ ನಿರತರಾಗಿರುವ ಪೊಲೀಸರಿಗೆ, ದಾದಿಯರಿಗೆ ಅಷ್ಟೇ ಅಲ್ಲ ಭಿಕ್ಷುಕರಿಗೆ ಮೂರು ಹೊತ್ತು ಊಟ ಪೂರೈಕೆ ಮಾಡುತ್ತಿದ್ದಾರೆ.

    ಹೋಟೆಲ್ ತೆರೆದು ಅಲ್ಲಿಯೇ ನಿತ್ಯ ಅಡುಗೆ ತಯಾರಿಸಿ, ಬಳಿಕ ಸ್ವತಃ ತಮ್ಮದೇ ಕಾರಿನಲ್ಲಿ ತುಂಬಿಕೊಂಡು ಪೊಲೀಸರು ಕೆಲಸ ನಿರ್ವಹಿಸುತ್ತಿರುವ ಸ್ಥಳಗಳಿಗೆ ಊಟ ಕೊಂಡೊಯ್ದು, ಹಸಿದ ಹೊಟ್ಟೆಗಳನ್ನು ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಕೊಪ್ಪ, ಕುಶಾಲನಗರ, ಕೂಡಿಗೆ ಮತ್ತು ಗುಡ್ಡೆಹೊಸೂರು ಗ್ರಾಮಗಳ ಸುತ್ತಮುತ್ತ ಇರುವ ನೂರಾರು ನಿರ್ಗತಿಕರನ್ನು ಹುಡುಕಿ ಅವರಿಗೆ ಮೂರು ಹೊತ್ತು ಆಹಾರ ನೀಡಿ ಅವರ ಹಸಿವು ನೀಗಿಸುತ್ತಿದ್ದಾರೆ. ದೇವರು ನಮಗೆ ಕೊಟ್ಟಿದ್ದಾನೆ, ಏನೂ ಇಲ್ಲದವರು ಹಸಿವಿನಿಂದ ಇರಬಾರದು. ಆದ್ದರಿಂದ ಲಾಕ್‍ಡೌನ್ ಮುಗಿಯುವವರೆಗೆ ಆಹಾರ ಪೂರೈಸುತ್ತೇನೆ ಎಂದು ಚಂದ್ರಶೇಖರ್ ಸದ್ದಿಲ್ಲದೆ ನೂರಾರು ಜನರ ಹಸಿವು ನೀಗಿಸುತ್ತಿದ್ದಾರೆ.

  • ಹೋಮ್ ಕ್ವಾರಂಟೈನ್ ಆದ ಹುಬ್ಬಳ್ಳಿಯ ಅಯೋಧ್ಯಾ ಹೋಟೆಲ್

    ಹೋಮ್ ಕ್ವಾರಂಟೈನ್ ಆದ ಹುಬ್ಬಳ್ಳಿಯ ಅಯೋಧ್ಯಾ ಹೋಟೆಲ್

    ಧಾರವಾಡ/ಹುಬ್ಬಳ್ಳಿ: ಕೊರೊನಾ ವೈರಸ್ ನಿಯಂತ್ರಿಸುವ ಸದುದ್ದೇಶದಿಂದ ಹಾಗೂ ಜಿಲ್ಲೆಯಲ್ಲಿ ಕ್ವಾರಂಟೈನ್ ವ್ಯವಸ್ಥೆ ಹೆಚ್ಚು ಮಾಡುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾಡಳಿತ ಹುಬ್ಬಳ್ಳಿಯ ಅಯೋಧ್ಯಾ ಹೋಟೆಲ್‍ನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಂಡಿದೆ.

    ದೆಹಲಿಯ ನಿಜಾಮುದ್ದೀನ್ ತಬ್ಲಿಘ್ ಜಮಾತ್ ಪ್ರಾರ್ಥನಾ ಮಂದಿರದಲ್ಲಿ ಸಭೆ ನಡೆಸಿ ಮರಳಿ ಬಂದ 30 ಜನರು ಸೇರಿ ಒಟ್ಟು 50 ಜನರನ್ನು ಹೋಟೆಲ್ ಗೆ ಶಿಫ್ಟ್ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆ ಹೊಟೇಲ್ ವಶಕ್ಕೆ ತೆಗೆದುಕೊಂಡಿದೆ.

    ಈಗಾಗಲೇ ಅಯೋಧ್ಯೆ ಹೋಟೆಲ್ ಗೆ ಆರೋಗ್ಯ ಇಲಾಖೆ ಸಿಬ್ಬಂದಿ, ತಹಶೀಲ್ದಾರ್ ಶಶಿಧರ್ ಮಾಡ್ಯಾಳ್ ನೇತೃತ್ವದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೋಮ್ ಕ್ವಾರಂಟೈನ ನಲ್ಲಿದ್ದವರನ್ನು ಒಬ್ಬೊಬರನ್ನು ನಿಗಾವಹಿಸಲು ಕಷ್ಟವಾಗುತ್ತಿದ್ದು, ಒಂದೆಡೆಯಲ್ಲಿ ಹೋಮ್ ಕ್ವಾರಂಟೈನ ನಲ್ಲಿದ್ದವರನ್ನು ಹೋಟೆಲ್ ಅಯೋಧ್ಯಾಗೆ ಶಿಫ್ಟ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ.

  • ಐಷಾರಾಮಿ ಹೋಟೆಲಿನಲ್ಲಿ 20 ಮಹಿಳೆಯರ ಜೊತೆ ಐಸೋಲೇಶನ್‍ನಲ್ಲಿ ಥೈಲ್ಯಾಂಡ್ ರಾಜ

    ಐಷಾರಾಮಿ ಹೋಟೆಲಿನಲ್ಲಿ 20 ಮಹಿಳೆಯರ ಜೊತೆ ಐಸೋಲೇಶನ್‍ನಲ್ಲಿ ಥೈಲ್ಯಾಂಡ್ ರಾಜ

    ಬ್ಯಾಂಕಾಕ್: ಕೊರೊನಾ ವೈರಸ್ ಭೀತಿಯಿಂದ ಹೋಂ ಕ್ವಾರಂಟೈನ್‍ನಲ್ಲಿರುವವರು ತಮ್ಮ ಮನೆಯವರಿಂದಲೇ ದೂರ ಒಂದು ರೂಮಿನಲ್ಲಿದ್ದಾರೆ. ಆದರೆ ಥೈಲ್ಯಾಂಡ್ ಮಹಾರಾಜ ಭವ್ಯವಾದ ಹೋಟೆಲ್‍ನಲ್ಲಿ ಅದರಲ್ಲೂ ಜೊತೆಗೆ 20 ಮಹಿಳೆಯರ ಜೊತೆ ಐಸೋಲೇಶನ್‍ನಲ್ಲಿದ್ದಾರೆ ಎಂದು ವರದಿಯಾಗಿದೆ.

    ರಾಜ ಮಹಾ ವಾಜಿರಲಾಂಗ್ ಕಾರ್ನ್ ಕೊರೊನಾ ವೈರಸ್ ಸಮಯದಲ್ಲಿ ತನ್ನ ದೇಶವನ್ನು ಬಿಟ್ಟು ಜರ್ಮನಿಗೆ ಹೋಗಿದ್ದಾರೆ. ಕೊರೊನಾದಿಂದ ಯಾರೂ ಕೂಡ ಮನೆಯಿಂದ ಹೊರ ಬರುತ್ತಿಲ್ಲ. ಆದರೆ ರಾಜ ಮಾತ್ರ ಪ್ರತ್ಯೇಕವಾಗಿ ಜರ್ಮನಿಗೆ ಹೋಗಿ ಐಸೋಲೇಶನ್‍ನಲ್ಲಿದ್ದಾರೆ. ಬವೇರಿಯಾದ ಐಷಾರಾಮಿ ಹೋಟೆಲ್‍ನಲ್ಲಿ ಉಳಿದಿದ್ದಾರೆ. ಅಲ್ಲದೇ ಇಡೀ ಹೋಟೆಲ್ ಅನ್ನು ರಾಜನೇ ಕಾಯ್ದಿರಿಸಿದ್ದಾರೆ. ಈ ವಾಸ್ತವ್ಯಕ್ಕಾಗಿ ಅವರು ಜಿಲ್ಲಾ ಕೌನ್ಸಿಲ್‍ನಿಂದ ವಿಶೇಷ ಅನುಮತಿ ಪಡೆದಿದ್ದಾರೆ ಎನ್ನಲಾಗಿದೆ.

    ಆಶ್ಚರ್ಯಕರ ವಿಚಾರವೆಂದರೆ ರಾಜನ ಜೊತೆಗೆ 20 ಮಹಿಳೆಯರು ಸಹ ಈ ಹೋಟೆಲ್‍ನಲ್ಲಿ ಉಳಿದಿದ್ದಾರೆ. ಅಷ್ಟೇ ಅಲ್ಲದೇ ರಾಜ ಹೆಚ್ಚಿನ ಸಂಖ್ಯೆಯ ಸೇವಕರನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ರಾಜನ 4ನೇ ಪತ್ನಿ ಹೋಟೆಲ್‍ನಲ್ಲಿ ಇದ್ದಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಕೊರೊನಾ ವೈರಸ್ ಬಿಕ್ಕಟ್ಟಿನ ಮಧ್ಯೆ ರಾಜ ಜರ್ಮನಿಯಲ್ಲಿ ವಾಸ್ತವ್ಯ ಮಾಡಿರುವ ಸುದ್ದಿ ವೈರಲ್ ಆಗುತ್ತಿದ್ದಂತೆ, ಥೈಲ್ಯಾಂಡ್ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಥೈಲ್ಯಾಂಡ್‍ನಲ್ಲಿ ರಾಜನನ್ನು ಟೀಕಿಸಿದ್ದಕ್ಕಾಗಿ 15 ವರ್ಷಗಳ ಜೈಲು ಶಿಕ್ಷೆ ಇದೆ. ಆದರೂ ‘ನಮಗೆ ರಾಜ ಏಕೆ ಬೇಕು?’ ಎಂದು ಟ್ವಿಟ್ಟರಿನಲ್ಲಿ ರಾಜನನ್ನು ಟೀಕೆ ಮಾಡಲಾಗುತ್ತಿದೆ.

    ಇದುವರೆಗೂ ಥೈಲ್ಯಾಂಡ್‍ನಲ್ಲಿ 1,524ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ರೋಗಿಗಳು ಕಂಡುಬಂದಿದ್ದಾರೆ. ಇಲ್ಲಿಯವರೆಗೂ ಒಂಭತ್ತು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ಥೈಲ್ಯಾಂಡ್ ರಾಜರಾಗಿ 70 ವರ್ಷ ಆಳ್ವಿಕೆ ನಡೆಸಿದ್ದ ವಜಿರಲೊಂಗ್ ಕಾರ್ನ್ ಅವರ ತಂದೆ 2016ರಲ್ಲಿ ಸಾವನ್ನಪ್ಪಿದ್ದರು. ಆ ಬಳಿಕ ಇವರನ್ನು ರಾಜರನ್ನಾಗಿ ಘೋಷಣೆ ಮಾಡಲಾಗಿತ್ತು. ವಜಿರಲೊಂಗ್ ಕಾರ್ನ್ ಅವರಿಗೆ ಈ ಹಿಂದೆಯೇ 3 ಮದುವೆಯಾಗಿದ್ದು, 7 ಜನ ಮಕ್ಕಳಿದ್ದಾರೆ. ಆದರೆ ಮೂವರು ಪತ್ನಿಯರಿಗೂ ವಜಿರಲೊಂಗ್ ಕಾರ್ನ್ ಅವರಿಗೆ ವಿಚ್ಛೇದನ ನೀಡಿದ್ದು, 2019 ರಲ್ಲಿ 4ನೇ ಪತ್ನಿಯಾಗಿ ಅಂಗರಕ್ಷಕಿಯನ್ನು ಮದುವೆಯಾಗಿದ್ದರು.

  • ಉದ್ಯಮಿ ಕಪಾಲಿ ಮೋಹನ್ ಆತ್ಮಹತ್ಯೆ

    ಉದ್ಯಮಿ ಕಪಾಲಿ ಮೋಹನ್ ಆತ್ಮಹತ್ಯೆ

    ಬೆಂಗಳೂರು: ಉದ್ಯಮಿ ಕಪಾಲಿ ಮೋಹನ್ ಬೆಂಗಳೂರಿನ ಪೀಣ್ಯ ಬಸವೇಶ್ವರ ಬಸ್ ನಿಲ್ದಾಣದ ಹೋಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕಪಾಲಿ ಮೋಹನ್ ಅವರು ತಮ್ಮ ಒಡೆತನದ ಸುಪ್ರೀಂ ಹೋಟೆಲ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೋಹನ್ ಅವರು ವರನಟ ಡಾ. ರಾಜ್ ಕುಮಾರ್ ಫ್ಯಾಮಿಲಿಗೆ ತುಂಬಾ ಹತ್ತಿರವಾಗಿದ್ದರು

    ಈ ಹಿಂದೆ ಸಿಸಿಬಿ ಅಧಿಕಾರಿಗಳು ಗ್ಯಾಂಬ್ಲಿಂಗ್ ರೂವಾರಿ ಹಾಗೂ ಮೀಟರ್ ಬಡ್ಡಿ ಆರೋಪದ ಮೇಲೆ ಕಪಾಲಿ ಮೋಹನ್ ಮನೆ ಮೇಲೆ ರೇಡ್ ಮಾಡಿದ್ದರು. ಆಗ ಅಕ್ರಮವಾಗಿ ಸಂಗ್ರಹಿಸಿದ್ದ ವಿದೇಶಿ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

    ಸದ್ಯ ಮೋಹನ್ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ವಿಷಯ ತಿಳಿದ ಗಂಗಮ್ಮನಗುಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

  • ಕೊರೊನಾ ಭೀತಿ- ಆನ್‍ಲೈನ್ ಫುಡ್ ಡೆಲಿವರಿ ಬಾಯ್‍ಗಳಿಗೂ ತಟ್ಟಿದ ಎಫೆಕ್ಟ್

    ಕೊರೊನಾ ಭೀತಿ- ಆನ್‍ಲೈನ್ ಫುಡ್ ಡೆಲಿವರಿ ಬಾಯ್‍ಗಳಿಗೂ ತಟ್ಟಿದ ಎಫೆಕ್ಟ್

    ಬೆಂಗಳೂರು: ಕೊರೊನಾ ಭೀತಿ ಆನ್‍ಲೈನ್ ಫುಡ್ ಡೆಲಿವರಿ ಬಾಯ್‍ಗಳಿಗೂ ತಟ್ಟಿದೆ. ನಿತ್ಯ ನೂರಾರು ಮನೆಗಳಿಗೆ ಹೋಗಿ ಆರ್ಡರ್ ಕೊಟ್ಟು ಬರುವ ಡೆಲಿವರಿ ಬಾಯ್‍ಗಳಲ್ಲಿ ಆತಂಕ ಶುರುವಾಗಿದ್ದು, ಬೆಂಗಳೂರು ಬಿಟ್ಟು ತಮ್ಮ ಊರುಗಳತ್ತ ತೆರಳಿದ್ದಾರೆ.

    ಮನೆ ಮನೆಗಳಿಗೆ ಫುಡ್ ಆರ್ಡರ್ ಕೊಟ್ಟು ಬರುವ ಸಮಯದಲ್ಲಿ ಎಲ್ಲಿ ಸೋಂಕು ನಮಗೆ ಹರಡುತ್ತೋ ಎನ್ನುವ ಭಯದಿಂದ ಬೆಂಗಳೂರು ತೊರೆದಿದ್ದಾರೆ. ನಿತ್ಯ ನೂರಾರು ಡೆಲಿವರಿ ಬಾಯ್‍ಗಳು ಅಪಾರ್ಟ್‌ಮೆಂಟ್‌, ಮನೆ ಇತರೆ ಜಣದಟ್ಟಣೆ ಸ್ಥಳಗಳಿಗೆ ಹೋಗಿ ಆರ್ಡರ್ ಕೊಟ್ಟು ಬರುತ್ತಾರೆ.

    ಈಗಾಗಲೇ ಹೋಟೆಲ್‍ಗಳಲ್ಲಿ ವ್ಯಾಪಾರ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಆನ್‍ಲೈನ್‍ನಲ್ಲಿಯೂ ಫುಡ್ ಆರ್ಡರ್ ಮಾಡುತ್ತಿದ್ದಾರೆ. ಒಂದೆಡೆ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಗ್ರಾಹಕರಿಗೆ ಆರ್ಡರ್ ತಲುಪಿಸುವ ಫುಡ್ ಡೆಲವರಿ ಬಾಯ್‍ಗಳ ಸಂಖ್ಯೆ ಕಡಿಮೆಯಾಗುತ್ತಿದೆ.

    ಆನ್‍ಲೈನ್‍ನಲ್ಲಿ ಫುಡ್ ಆರ್ಡರ್ ಮಾಡಿದರೆ ಡೆಲಿವರಿ ಬಾಯ್‍ಗಳು ಬಾಕ್ಸ್ ಅನ್ನು ಗ್ರಾಹಕರ ಕೈಗೆ ಕೊಡುವ ಬದಲು ಮನೆಯ ಡೋರ್ ಬಳಿಯೇ ಇಟ್ಟು ಹೋಗುತ್ತಾರೆ. ಕೊರೊನಾ ಆತಂಕ ಹಿನ್ನೆಲೆಯಲ್ಲಿ ಗ್ರಾಹಕರ ಕೈಗೆ ಫುಡ್ ಬಾಕ್ಸ್ ನೀಡದಿರಲು ಡೆಲಿವರಿ ಬಾಯ್ಸ್ ನಿರ್ಧರಿಸಿದ್ದಾರೆ. ಈಗಾಗಲೇ ಸ್ವಿಗ್ಗಿ ಕಂಪನಿಯಿಂದ ಗ್ರಾಹಕರ ಕೈಗೆ ಪಾರ್ಸೆಲ್ ಬಾಕ್ಸ್ ನೀಡದಂತೆ ತನ್ನ ಸಿಬ್ಬಂದಿಗೆ ಸೂಚಿಸಿದೆ.

  • ಕೊರೊನಾ ಭೀತಿ – ಎರಡೇ ದಿನದಲ್ಲಿ 15 ಸಾವಿರ ವಿದ್ಯಾರ್ಥಿಗಳು ಮನೆಗೆ ವಾಪಸ್

    ಕೊರೊನಾ ಭೀತಿ – ಎರಡೇ ದಿನದಲ್ಲಿ 15 ಸಾವಿರ ವಿದ್ಯಾರ್ಥಿಗಳು ಮನೆಗೆ ವಾಪಸ್

    ಧಾರವಾಡ: ಇಡೀ ವಿಶ್ವದ ಜನಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿರುವ ಮಹಾಮಾರಿ ಕೊರೊನಾ ಭಯಕ್ಕೆ ಧಾರವಾಡದ ಹಾಸ್ಟೆಲ್ ವಿದ್ಯಾರ್ಥಿಗಳು ಜಾಗ ಖಾಲಿ ಮಾಡಿದ್ದಾರೆ.

    ಧಾರವಾಡ ನಗರದ ಸಪ್ತಾಪೂರದಲ್ಲಿ ಬಹುತೇಕ ಕೋಚಿಂಗ್ ಕ್ಲಾಸ್‍ಗಳಿವೆ. ಆದರೆ ಆ ಕ್ಲಾಸ್‍ಗಳೆಲ್ಲವೂ ಈಗ ಬಂದ್ ಮಾಡಲಾಗಿದ್ದು, ಸದ್ಯ ಕೋಚಿಂಗ್‍ಗೆ ಬಂದ ವಿದ್ಯಾರ್ಥಿಗಳು ತಮ್ಮ ತಮ್ಮ ಊರಿಗೆ ವಾಪಸ್ ಹೋಗುತ್ತಿದ್ದಾರೆ. ಕೊರೊನಾ ಸೋಂಕು ಬರಬಹುದು ಎಂಬ ಭಯದಿಂದ ಎಲ್ಲಾ ಕೋಚಿಂಗ್ ಕ್ಲಾಸಿನ ಮಾಲಿಕರು ವಿದ್ಯಾರ್ಥಿಗಳಿಗೆ ತಮ್ಮ ಊರಿಗೆ ವಾಪಸ್ ಹೋಗಲು ಹೇಳಿದ್ದಾರೆ.

    ಎರಡೇ ದಿನಗಳಲ್ಲಿ ಸಪ್ತಾಪೂರ ಬಡಾವಣೆಯಿಂದ ಬರೋಬ್ಬರಿ 15 ಸಾವಿರ ವಿದ್ಯಾರ್ಥಿಗಳು ಕಾಲ್ಕಿತ್ತಿದ್ದಾರೆ. ಅಲ್ಲದೇ ಇನ್ನೂ ಕೆಲವು ವಿದ್ಯಾರ್ಥಿಗಳು ಇಂದು ಹಾಗೂ ನಾಳೆ ಜಾಗ ಖಾಲಿ ಮಾಡಲಿದ್ದಾರೆ. ಈ ವಿದ್ಯಾರ್ಥಿಗಳು ತಮ್ಮ ಊರಿಗೆ ವಾಪಸ್ ಆಗಿದ್ದಕ್ಕೆ ಹೋಟೆಲ್‍ಗಳಿಗೆ ತುಂಬಲಾಗದ ನಷ್ಟವಾಗಿದೆ. ಯಾಕಂದರೆ ಬೆಳಗ್ಗೆಯಿಂದ ಸಂಜೆಯವರೆಗೆ ಹೋಟೆಲ್‍ಗಳಲ್ಲಿ ವಿದ್ಯಾರ್ಥಿಗಳು ಬಂದು ಊಟ, ತಿಂಡಿ ಮಾಡುತ್ತಿದ್ದರು. ಆದರೆ ಈಗ ವಿದ್ಯಾರ್ಥಿಗಳೇ ಇಲ್ಲದೆ ಇರುವುದರಿಂದ ಹೋಟೆಲ್ ವ್ಯಾಪಾರ ಸ್ಥಬ್ಧವಾಗಿದೆ.

  • ಐಷಾರಾಮಿ ಹೋಟೆಲ್ ಉದ್ಯಮದ ಮೇಲೆ ಕೊರೊನಾ ಎಫೆಕ್ಟ್

    ಐಷಾರಾಮಿ ಹೋಟೆಲ್ ಉದ್ಯಮದ ಮೇಲೆ ಕೊರೊನಾ ಎಫೆಕ್ಟ್

    – ಫೈವ್ ಸ್ಟಾರ್, ಥ್ರಿ ಸ್ಟಾರ್ ಹೋಟೆಲ್‍ಗಳ ಬುಕ್ಕಿಂಗ್ ಕ್ಯಾನ್ಸಲ್

    ಬೆಂಗಳೂರು: ಇಡೀ ವಿಶ್ವದೆಲ್ಲೆಡೆ ಕೊರೊನಾ ಭೀತಿ ಎದುರಾಗಿದೆ. ಈ ಮಹಾಮಾರಿ ಬೆಂಗಳೂರಿಗೂ ವಕ್ಕರಿಸಿದ್ದು, ಸಿಲಿಕಾನ್ ಸಿಟಿಯ ಐಷಾರಾಮಿ ಹೋಟೆಲ್ ಉದ್ಯಮ ಪಾತಾಳಕ್ಕೆ ಕುಸಿಯುತ್ತಿದೆ.

    ಕೊರೊನಾ ವೈರಸ್ ಕೇವಲ ಆರೋಗ್ಯದ ಮೇಲೆ ಮಾತ್ರವಲ್ಲದೆ, ಜಾಗತಿಕ ಶೇರು ಮಾರುಕಟ್ಟೆ, ಚಿನ್ನ, ಪ್ರವಾಸೋದ್ಯಮ ಹೀಗೆ ಹತ್ತು ಹಲವು ಪರಿಣಾಮ ಬೀರಿದೆ. ಜೊತೆಗೆ ಹೋಟೆಲ್ ಉದ್ಯಮ ಅದರಲ್ಲೂ ಬೆಂಗಳೂರಿನ ಐಷಾರಾಮಿ ಹೋಟೆಲ್ ಉದ್ಯಮದ ಮೇಲೆ ಪ್ರಭಾವ ಬೀರಿದೆ. ನಗರದಲ್ಲಿ 17 ಸಾವಿರ ಹೋಟೆಲ್‍ಗಳಿದ್ದು, ಅದರಲ್ಲಿ 580 ಫೈವ್ ಸ್ಟಾರ್, ಥ್ರಿ ಸ್ಟಾರ್ ಹೋಟೆಲ್‍ಗಳಿವೆ.

    ಈ ಸ್ಟಾರ್ ಹೋಟೆಲ್‍ಗಳ ಶೇ.20-30 ಬುಕಿಂಗ್‍ಗಳು ಕ್ಯಾನ್ಸಲ್ ಆಗಿವೆ. ಇದರಿಂದ ಪ್ರತಿ ದಿನ 1 ಕೋಟಿಯಷ್ಟು ನಷ್ಟವಾಗುತ್ತಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ. ಈ ಫೈವ್ ಸ್ಟಾರ್ ಹೋಟೆಲ್‍ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರೇ ಸ್ಟೇ ಮಾಡುತ್ತಾರೆ.

    ವಿದೇಶಿಗರಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗಿರುವುದರಿಂದ ತಮಗೆ ಎಲ್ಲಿ ಕೊರೊನಾ ಬರುತ್ತೋ ಎನ್ನೋ ಭೀತಿಯಿಂದ ಜನ ಫೈ ಸ್ಟಾರ್ ಹೋಟೆಲ್‍ಗಳಲ್ಲಿ ಉಳಿಯಲು ಹೆದರುತ್ತಿದ್ದಾರೆ. ಕೊರೊನಾ ಹರಡದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜೊತೆಗೆ ಸಿಬ್ಬಂದಿಗೆ ಸ್ವಚ್ಛತೆ ಬಗ್ಗೆ ತರಬೇತಿ ಕೂಡ ನೀಡಲಾಗಿದೆ. ಅಲ್ಲದೇ ರೂಮ್‍ಗಳನ್ನು ಶುಚಿಯಾಗಿ ಇಡಲಾಗಿದೆ  ಎಂದು ಹೋಟೆಲ್ ಅಸೋಸಿಯೇಷನ್ ಅವರು ತಿಳಿಸಿದ್ದಾರೆ.

     

  • ಕೊರೊನಾ ಭೀತಿ- ಹೋಟೆಲ್‍ಗೆ ಆಗಮಿಸುವ ಪ್ರವಾಸಿಗರ ಮಾಹಿತಿ ತಕ್ಷಣ ನೀಡಲು ಡಿಸಿ ಸೂಚನೆ

    ಕೊರೊನಾ ಭೀತಿ- ಹೋಟೆಲ್‍ಗೆ ಆಗಮಿಸುವ ಪ್ರವಾಸಿಗರ ಮಾಹಿತಿ ತಕ್ಷಣ ನೀಡಲು ಡಿಸಿ ಸೂಚನೆ

    ಬಳ್ಳಾರಿ: ತಮ್ಮ ಹೋಟೆಲ್‍ಗಳಿಗೆ ದೇಶ ಮತ್ತು ವಿದೇಶಗಳಿಂದ ಆಗಮಿಸುವ ಪ್ರವಾಸಿಗರ ಮಾಹಿತಿಯನ್ನು ತಕ್ಷಣ ಗಮನಕ್ಕೆ ತರುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಅವರು ಹೋಟಲ್ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

    ಕೊರೊನಾಗೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲೆಯ ಹೋಟೆಲ್‍ ಮಾಲೀಕರೊಂದಿಗೆ ಡಿಸಿ ನಕುಲ್ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ದೇಶದ ವಿವಿಧ ರಾಜ್ಯಗಳ ಹಾಗೂ ವಿದೇಶಗಳ ಅದರಲ್ಲೂ ವಿಶೇಷವಾಗಿ ಕೊರೊನಾ ಸೊಂಕು ಕಂಡುಬಂದ ದೇಶಗಳಿಂದ ಬರುವ ಪ್ರವಾಸಿಗರ ಮಾಹಿತಿಯನ್ನು ತಕ್ಷಣ ನೀಡಲೇಬೇಕು ಎಂದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಜನಸ್ಪಂದನಾ ಕೇಂದ್ರಕ್ಕೆ ಮಾಹಿತಿ ನೀಡಬಹುದಾಗಿದೆ. ಈ ಕೇಂದ್ರದ ರೂಂ ಮೊ.ನಂ: 82778 88866 ಹಾಗೂ ದೂ: 08392-277100ಗೆ ಕರೆ ಮಾಡಬಹುದು ಮತ್ತು ವಾಟ್ಸಾಪ್ ಮಾಡಬಹುದು. 1077 ಉಚಿತ ಸಹಾಯವಾಣಿಗೂ ಕರೆ ಮಾಡಿ ಮಾಹಿತಿ ನೀಡಬಹುದು. ಈ ಕೇಂದ್ರದಲ್ಲಿ ವೈದ್ಯಕೀಯ ಸಿಬ್ಬಂದಿ ಲಭ್ಯವಿರುತ್ತಾರೆ. ನಮ್ಮ ಸಿಬ್ಬಂದಿ 24 ಗಂಟೆಗಳ ಕಾಲ ಈ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಡಿಸಿ ನಕುಲ್ ತಿಳಿಸಿದರು.

    ಕೊರೊನಾ ವೈರಸ್‍ಗೆ ಸಂಬಂಧಿಸಿದ ಲಕ್ಷಣಗಳ ಬಗ್ಗೆ ಸಭೆಯಲ್ಲಿ ವಿವರಿಸಿದ ಡಿಸಿ ನಕುಲ್ ಅವರು, ಈ ರೀತಿಯ ಲಕ್ಷಣಗಳು ಪ್ರವಾಸಿಗರಲ್ಲಿ ಕಂಡು ಬಂದಲ್ಲಿಯೂ ಸಹ ಮಾಹಿತಿ ನೀಡಿ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಭಯಬೇಡ ಜಾಗೃತಿಯಿರಲಿ ಎಂದು ಹೇಳಿದರು.

  • ಬೆಂಗ್ಳೂರು ವೈದ್ಯೆಯ ಮೇಲೆ ಕಾಲೇಜ್‍ಮೆಟ್‍ನಿಂದ ಅತ್ಯಾಚಾರ

    ಬೆಂಗ್ಳೂರು ವೈದ್ಯೆಯ ಮೇಲೆ ಕಾಲೇಜ್‍ಮೆಟ್‍ನಿಂದ ಅತ್ಯಾಚಾರ

    – ಹೋಟೆಲ್‍ಗೆ ಡಾಕ್ಟರ್ ಹೋಗಿದ್ದೇ ತಪ್ಪಾಯ್ತು
    – ಕಾಲೇಜು ವಾಶ್ ರೂಮಿನಲ್ಲಿ ವಿಡಿಯೋ ರೆಕಾರ್ಡ್

    ಬೆಂಗಳೂರು: ವೈದ್ಯೆಯ ಮೇಲೆ ಆಕೆಯ ಕಾಲೇಜ್‍ಮೆಟ್‍ ಯುವಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಆರೋಪಿಯನ್ನು ದೀಪಕ್ ರಥೀ (25) ಎಂದು ಗುರುತಿಸಲಾಗಿದೆ. ಆರೋಪಿ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾಗ ಸಂತ್ರಸ್ತೆಯನ್ನು ಪರಿಚಯ ಮಾಡಿಕೊಂಡಿದ್ದನು. ನಂತರ ಹೋಟೆಲ್ ರೂಮಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರ ಎಸಗಿದ ನಂತರ ಆಕೆಯನ್ನು ದೂರು ಮಾಡಲು ಪ್ರಯತ್ನಿಸಿದ್ದಾನೆ. ನಂತರ ಸಂತ್ರಸ್ತೆ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ದೀಪಕ್ ಹರಿಯಾಣದ ಗುರುಗ್ರಾಮ್ ನಿವಾಸಿ ಎಂದು ತಿಳಿದುಬಂದಿದೆ. ಆರೋಪಿ ಮತ್ತು ಸಂತ್ರಸ್ತೆ ವೈದ್ಯೆ ಒಂದೇ ಕಾಲೇಜು ಆಗಿದ್ದರಿಂದ ಇಬ್ಬರಿಗೂ ಪರಿಚಯವಿತ್ತು. ಈ ವೇಳೆ ಆರೋಪಿ ಸಂತ್ರಸ್ತೆ ಕಾಲೇಜಿನ ವಾಶ್ ರೂಮಿನಲ್ಲಿದ್ದಾಗ ಅದನ್ನು ರೆಕಾರ್ಡ್ ಮಾಡಿಕೊಂಡಿದ್ದನು. ಫೆ. 16 ರಂದು ವ್ಯಯಕ್ತಿಕ ವಿಚಾರದ ಬಗ್ಗೆ ಮಾತನಾಡುವ ನೆಪದಲ್ಲಿ ಜಯನಗರದಲ್ಲಿರುವ ಹೋಟೆಲ್‍ವೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆರೋಪಿ ಸಂತ್ರಸ್ತೆಯ ಹೆಸರಿನಲ್ಲಿ ಹೋಟೆಲ್ ರೂಮ್ ಬುಕ್ ಮಾಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ದೂರು ದಾಖಲಾದ ನಂತರ ನಾವು ಹೋಟೆಲ್ ಹೋಗಿ ದಾಖಲೆಗಳನ್ನು ಪರಿಶೀಲಿಸಿದ್ದೇವೆ. ಜೊತೆಗೆ ಅವರಿಬ್ಬರು ಹೋಟೆಲ್‍ಗೆ ಬಂದಿರುವ ಬಗ್ಗೆ ಅಲ್ಲಿನ ಸಿಬ್ಬಂದಿಯನ್ನು ವಿಚಾರಣೆ ಮಾಡಿದ್ದೇವೆ. ಸಂತ್ರಸ್ತೆ ಕೂಡ ನಾವಿಬ್ಬರು ಸಂಬಂಧ ಹೊಂದಿದ್ದೆವು. ಆದರೆ ಆತನ ನನ್ನನ್ನು ದೂರ ಮಾಡಲು ಪ್ರಯತ್ನಿಸಿದ್ದನು ಎಂದು ಹೇಳಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಅತ್ಯಾಚಾರ ಎಸಗಿದ ನಂತರ ಆರೋಪಿ ದೀಪಕ್ ತನ್ನ ಪೋಷಕರ ಮನವೊಲಿಸಿ, ಮುಂದಿನ ವರ್ಷ ಮದುವೆಯಾಗುವುದಾಗಿ ಸಂತ್ರಸ್ತೆಗೆ ಭರವಸೆ ನೀಡಿದ್ದನು. ಅಲ್ಲದೇ ಅತ್ಯಾಚಾರದ ಬಗ್ಗೆ ತನ್ನ ಕುಟುಂಬ ಮತ್ತು ಪೊಲೀಸರಿಗೆ ಹೇಳಬಾರದು ಎಂದು ತಿಳಿಸಿದ್ದನು. ಆದರೆ ಆರೋಪಿ ಅತ್ಯಾಚಾರದ ನಂತರ ಸಂತ್ರಸ್ತೆಯಿಂದ ದೂರವಾಗಲು ಬ್ಲ್ಯಾಕ್‍ಮೇಲ್ ಮಾಡಲು ಶುರು ಮಾಡಿದ್ದನು.

    ಫೆ. 23 ರಂದು ನಾನು ವಾಶ್ ರೂಮ್‍ಗೆ ಹೋದಾಗ ಹಿಂಬಾಲಿಸಿಕೊಂಡು ಬಂದು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದನು. ನಂತರ ಆ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುವ ಪ್ರಯತ್ನ ಮಾಡಿದ್ದಾನೆ. ಅಲ್ಲದೇ ಒಂದು ದಿನ ದೀಪಕ್ ಆಸ್ಪತ್ರೆಗೆ ಬಂದು ಮೊಬೈಲ್ ಕಿತ್ತುಕೊಂಡು ನನ್ನ ಫೋನ್‍ನಲ್ಲಿದ್ದ ಫೋಟೋಗಳನ್ನು ಡಿಲೀಟ್ ಮಾಡಿದ್ದಾನೆ. ಜೊತೆಗೆ ಇತರರೊಂದಿಗೆ ಸಂಬಂಧ ಹೊಂದಿದ್ದೀಯಾ ಎಂದು ಆರೋಪಿಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ  ಉಲ್ಲೇಖಿಸಿದ್ದಾಳೆ.

  • ಮಧ್ಯಪ್ರದೇಶದಲ್ಲಿ ತಡರಾತ್ರಿ ಆಪರೇಷನ್ ಕಮಲ – ಚಿಕ್ಕಮಗಳೂರು ರೆಸಾರ್ಟಿಗೆ ಶಾಸಕರು ಶಿಫ್ಟ್

    ಮಧ್ಯಪ್ರದೇಶದಲ್ಲಿ ತಡರಾತ್ರಿ ಆಪರೇಷನ್ ಕಮಲ – ಚಿಕ್ಕಮಗಳೂರು ರೆಸಾರ್ಟಿಗೆ ಶಾಸಕರು ಶಿಫ್ಟ್

    – ಕರ್ನಾಟಕ ಮಾದರಿಯಲ್ಲಿ ಆಪರೇಷನ್
    – ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ ಶಾಸಕರು
    – ತಡರಾತ್ರಿ ಚಿಕ್ಕಮಗಳೂರಿಗೆ ಶಿಫ್ಟ್

    ನವದೆಹಲಿ/ಬೆಂಗಳೂರು: ಕರ್ನಾಟಕದಲ್ಲಿ ನಡೆದ ಆಪರೇಷನ್ ಕಮಲ ಮಾದರಿಯಲ್ಲಿ ತಡರಾತ್ರಿ ಮಧ್ಯಪ್ರದೇಶದಲ್ಲಿ ಆಪರೇಷನ್ ಆರಂಭಗೊಂಡಿದ್ದು 12 ಮಂದಿ ಶಾಸರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ. ಈ ಸಂಬಂಧ 8 ಮಂದಿ ಶಾಸಕರು ದೆಹಲಿಗೆ ಶಿಫ್ಟ್ ಆಗಿದ್ದರೆ ರಾತ್ರೋರಾತ್ರಿ 4 ಮಂದಿ ಶಾಸಕರು ಕರ್ನಾಟಕಕ್ಕೆ ಶಿಫ್ಟ್ ಆಗಿದ್ದಾರೆ.

    ತಡರಾತ್ರಿ 4 ಶಾಸಕರು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದು ಅವರು ಈಗ ಚಿಕ್ಕಮಗಳೂರಿನ ರೆಸಾರ್ಟಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ರಾಜ್ಯದ ಡಿಸಿಎಂ ಒಬ್ಬರ ಕಣ್ಗಾವಲಿನಲ್ಲಿ ಚಿಕ್ಕಮಗಳೂರಿನಲ್ಲಿ ನಾಲ್ವರು ಕೈ ಶಾಸಕರು ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಹರಿಯಾಣದ ಗುರುಗ್ರಾಮದಲ್ಲಿರುವ ಐಟಿಸಿ ರೆಸಾರ್ಟ್‍ನಲ್ಲಿ ಬಿಜೆಪಿ ಬಲವಂತವಾಗಿ ಶಾಸಕರನ್ನು ಹಿಡಿದಿಟ್ಟುಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಮಧ್ಯ ಪ್ರದೇಶದ ಸಚಿವ, ಕಾಂಗ್ರೆಸ್ ನಾಯಕರಾದ ಜಿತು ಪಟ್‍ವಾರಿ ಮತ್ತು ಜೈವರ್ಧನ್ ಸಿಂಗ್ ಅವರು ಐಟಿಸಿ ರೆಸಾರ್ಟ್‍ಗೆ ತೆರಳಿ ಉಚ್ಚಾಟಿತ ಬಿಎಸ್‍ಪಿ ಶಾಸಕಿ ರಮಾಬಾಯಿ ಅವರ ಜತೆ ತೆರಳುತ್ತಿರುವ ವಿಡಿಯೋ ಲಭ್ಯವಾಗಿದೆ.

    ಬಿಜೆಪಿಯ ರಾಂಪಾಲ್ ಸಿಂಗ್, ನರೋತ್ತಮ್ ಮಿಶ್ರಾ, ಅರವಿಂದ ಬದೌರಿಯಾ ಮತ್ತು ಸಂಜಯ್ ಪಾಠಕ್ ಶಾಸಕರಿಗೆ ಹಣ ನೀಡಿದ್ದಾರೆ. ಈ ಎಲ್ಲ ಶಾಸಕರು ಕಾಂಗ್ರೆಸ್ಸಿಗೆ ಮರಳಲಿದ್ದಾರೆ ಎಂದು ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಮುಖ್ಯಮಂತ್ರಿ ಕಮಲನಾಥ್ ಪ್ರತಿಕ್ರಿಯಿಸಿ, ನಮ್ಮ ಸರ್ಕಾರಕ್ಕೆ ಏನು ಆಗುವುದಿಲ್ಲ. ಎಲ್ಲ ಶಾಸಕರು ವಾಪಸ್ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಎರಡು ದಿನಗಳ ದಿಗ್ವಿಜಯ್ ಸಿಂಗ್ ಮಾತನಾಡಿ, ಕರ್ನಾಟಕದಲ್ಲಿ ನಡೆದಂತೆ ಮಧ್ಯಪ್ರದೇಶದಲ್ಲಿ ಸರ್ಕಾರ ಬೀಳಿಸಲು ನಾವು ಬಿಡುವುದಿಲ್ಲ. 25-30 ಕೋಟಿ ರೂ. ನೀಡಿ ಬಿಜೆಪಿ ಶಾಸಕರನ್ನು ಖರೀದಿಸಲು ಮುಂದಾಗುತ್ತಿದೆ. ಮೊದಲ ಕಂತಿನಲ್ಲಿ 5 ಕೋಟಿ ನಂತರ ರಾಜ್ಯಸಭಾಗೆ ಆಯ್ಕೆ ಮಾಡುವುದು, ಕೊನೆಗೆ ಉಳಿದ ಹಣ ಹಂಚಿಕೆ ಸಂಬಂಧ ಒಪ್ಪಂದ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದರು.

    ಈ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಗೋಪಾಲ್ ಭಾರ್ಗವ್, ಬಿಜೆಪಿ ಯಾರನ್ನು ಸಂಪರ್ಕಿಸಿಲ್ಲ. ಅಧಿಕಾರದಲ್ಲಿರುವ ಶಾಸಕರ ತಾವಾಗಿಯೇ ಬಿಜೆಪಿಗೆ ಬಂದರೆ ಸ್ವಾಗತ ಎಂದಿದ್ದರು. ಪ್ರಸ್ತುತ 230 ಸದಸ್ಯರನ್ನು ಹೊಂದಿರುವ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಪರ ಸ್ಪೀಕರ್ ಸೇರಿ 121 ಶಾಸಕರ ಬಲವನ್ನು ಹೊಂದಿದೆ.

    ಕಳೆದ ಜುಲೈನಲ್ಲಿ ಪ್ರತಿಕ್ರಿಯೆ ನೀಡಿದ್ದ ವಿಪಕ್ಷ ನಾಯಕ ಗೋಪಾಲ್ ಭಾರ್ಗವ್ ಅವರು, ಪಕ್ಷದ ನಂಬರ್ 1 ಮತ್ತು ನಂಬರ್ 2 ವ್ಯಕ್ತಿಗಳಿಂದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಆದೇಶ ಬಂದಲ್ಲಿ 24 ಗಂಟೆಯ ಒಳಗಡೆ ಕಮಲ್‍ನಾಥ್ ಸರ್ಕಾರ ಬೀಳಲಿದೆ ಎಂದು ಹೇಳಿದ್ದರು.

    ಕಮಲ್‍ನಾಥ್ ಸರ್ಕಾರವನ್ನು ಬೀಳಿಸಲು ನಾವು ಕಾಯುತ್ತಿದ್ದೇವೆ. ಮಧ್ಯಪ್ರದೇಶದ ಪರಿಸ್ಥಿತಿ ಕರ್ನಾಟಕಕ್ಕಿಂತ ಅತ್ಯಂತ ಕೆಟ್ಟದಾಗಿದೆ. ಇಲ್ಲಿನ ಸರ್ಕಾರವು ಏಳು ತಿಂಗಳು ಪೂರ್ಣಗೊಳಿಸಿದ್ದೆ ಆಶ್ಚರ್ಯಕರ ಹಾಗೂ ಇಲ್ಲಿಗೆ ಕಮಲ್‍ನಾಥ್ ಆಡಳಿತವನ್ನು ನಿಲ್ಲಿಸಬೇಕಿದೆ. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ನಾವು ಸರ್ಕಾರ ರಚನೆಯ ಆತುರದಲ್ಲಿ ಇರಲಿಲ್ಲ. ಆದರೆ ಇಂದಿನ ಪರಿಸ್ಥಿತಿ ನಮಗೆ ಅನುಕೂಲವಾಗಿದೆ ಎಂದು ತಿಳಿಸಿದ್ದರು.

    ಒಟ್ಟು 230 ವಿಧಾನಸಭಾ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ 2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 114, ಬಿಜೆಪಿ 109, ಪಕ್ಷೇತರ 1, ಬಿಎಸ್‍ಪಿ 2, ಎಸ್‍ಪಿ 2 ಕ್ಷೇತ್ರದಲ್ಲಿ ಜಯಗಳಿಸಿದೆ. 2019ರ ಲೋಕಸಭಾ ಚುನಾವಣೆಯ ಒಟ್ಟು 29 ಕ್ಷೇತ್ರಗಳ ಪೈಕಿ ಬಿಜೆಪಿ 28 ರಲ್ಲಿ ಗೆದ್ದಿದ್ದರೆ 1 ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. ಚಿಂದ್ವಾರಾ ಕ್ಷೇತ್ರದಿಂದ ಸಿಎಂ ಕಮಲ್‍ನಾಥ್ ಪುತ್ರ ನಕುಲ್ ನಾಥ್ ಜಯಗಳಿಸಿದ್ದರು.