Tag: Hotel

  • ಕೋವಿಡ್ 19 ರೋಗಿಗಳಿದ್ದ ಹೋಟೆಲ್‍ನಲ್ಲಿ ಅಗ್ನಿ ಅವಘಡ- 7 ಮಂದಿ ದುರ್ಮರಣ

    ಕೋವಿಡ್ 19 ರೋಗಿಗಳಿದ್ದ ಹೋಟೆಲ್‍ನಲ್ಲಿ ಅಗ್ನಿ ಅವಘಡ- 7 ಮಂದಿ ದುರ್ಮರಣ

    – ಹೋಟೆಲ್‍ನಲ್ಲಿದ್ದ 30 ಮಂದಿಯ ರಕ್ಷಣೆ

    ಹೈದರಾಬಾದ್: ಕೋವಿಡ್ 19 ಸೌಲಭ್ಯವಿದ್ದ ಹೋಟೆಲಿನಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಏಳು ಮಂದಿ ಸಜೀವ ದಹನವಾದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

    ಘಟನೆಯ ಮಾಹಿತಿ ಅರಿತ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಹರಸಾಹಸಪಟ್ಟು ಬೆಂಕಿ ನಂದಿಸಿದ್ದಾರೆ. ಹೋಟೆಲ್‍ನಲ್ಲಿದ್ದ ಸುಮಾರು 30 ಮಂದಿಯನ್ನು ರಕ್ಷಿಸಲಾಗಿದೆ ವಿಜಯವಾಡ ಪೊಲೀಸರು ಮಾಹಿತಿ ನೀಡಿದ್ದಾರೆ.

    ಈ ಘಟನೆ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ನಡೆದಿದೆ. ಸುಮಾರು 22 ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಕಟ್ಟಡದಲ್ಲಿದ್ದ ಎಲ್ಲರನ್ನೂ ಸ್ಥಳಾಂತರಿಸಿದ್ದೇವೆ. ಶಾರ್ಟ್ ಸರ್ಕ್ಯೂಟ್ ನಿಂದ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯ ವೇಳೆ ಬೆಳಕಿಗೆ ಬಂದಿದ್ದು, ಘಟನೆಗೆ ನಿಖರ ಕಾರಣವೇನೆಂದು ತನಿಖೆ ನಡೆಸಲಾಗುತ್ತಿದೆ ಎಂದು ಕೃಷ್ಣ ಡಿಸಿ ಮೊಹಮ್ಮದ್ ಇಮ್ತಿಯಾಜ್ ತಿಳಿಸಿದ್ದಾರೆ.

    ಮೃತಪಟ್ಟ 7 ಮಂದಿ ಕೂಡ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂಬ ಮಾಹಿ ಲಭ್ಯವಾಗಿದೆ.

  • ಹೋಟೆಲ್ ರೂಮಿನೊಳಗೆ ಜೋಡಿಯ ಮೃತದೇಹ ಪತ್ತೆ

    ಹೋಟೆಲ್ ರೂಮಿನೊಳಗೆ ಜೋಡಿಯ ಮೃತದೇಹ ಪತ್ತೆ

    – ಹಾಸಿಗೆ ಮೇಲೆ ಯುವತಿ, ನೇಣು ಬಿಗಿದ ಸ್ಥಿತಿಯಲ್ಲಿ ಯುವಕ ಪತ್ತೆ

    ಲಕ್ನೋ: ಹೋಟೆಲ್ ಒಳಗೆ ಜೋಡಿಯೊಂದು ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಕೃಷ್ಣನಗರದಲ್ಲಿ ನಡೆದಿದೆ.

    ಮೃತರನ್ನು ರಾಹುಲ್ ಮತ್ತು ನ್ಯಾನ್ಸಿ ಎಂದು ಗುರುತಿಸಲಾಗಿದೆ. ಹೋಟೆಲ್‍ನ ಸಿಬ್ಬಂದಿ ರೂಮಿಗೆ ಹೋಗಿ ನೋಡಿದಾಗ ಜೋಡಿಯ ಮೃತದೇಹ ಪತ್ತೆಯಾಗಿದೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.

    ಘಟನೆ ಸ್ಥಳದಲ್ಲಿ ಯಾವುದೇ ಡೆತ್‍ನೋಟ್ ಪತ್ತೆಯಾಗಿಲ್ಲ. ಹಾಸಿಗೆಯ ಮೇಲೆ ನ್ಯಾನ್ಸಿಯ ಮೃತದೇಹ ಪತ್ತೆಯಾಗಿದ್ದು, ರಾಹುಲ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮೃತ ರಾಹುಲ್ ನಾನ್ಸಿಗೆ ಆಮಿಷವೊಡ್ಡಿದ್ದಾನೆ ಎಂದು ಆರೋಪಿಸಿ ನ್ಯಾನ್ಸಿಯ ಕುಟುಂಬ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ ಎಂದು ಎಸಿಪಿ ದೀಪಕ್ ಕುಮಾರ್ ಹೇಳಿದ್ದಾರೆ.

    ಇಬ್ಬರ ಗುರುತನ್ನು ಆಯಾ ಕುಟುಂಬಗಳು ಮಾಡಿದ್ದು, ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟಣಾ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡವನ್ನು ಕರೆಯಲಾಗಿದೆ ಎಂದು ಎಸಿಪಿ ತಿಳಿಸಿದ್ದಾರೆ.

    ನಾವು ಎರಡು ಕುಟುಂಬದವರನ್ನು ಮತ್ತು ಹೋಟೆಲ್ ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದ್ದೇವೆ. ಕಳೆದ ನಾಲ್ಕು ವರ್ಷಗಳಿಂದ ನ್ಯಾನ್ಸಿ ಮತ್ತು ರಾಹುಲ್ ಪರಸ್ಪರ ಪರಿಚಯರಿದ್ದರು. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇನೆ. ಆದರೆ ಇಬ್ಬರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಎಸಿಪಿ ಹೇಳಿದ್ದಾರೆ.

  • ಕರೆಯದೆ ಬಂದ ಅತಿಥಿ ಮಾಡಿದ ಅವಾಂತರ ನೋಡಿ ಹೋಟೆಲ್ ಮಾಲೀಕ ಕಂಗಾಲು

    ಕರೆಯದೆ ಬಂದ ಅತಿಥಿ ಮಾಡಿದ ಅವಾಂತರ ನೋಡಿ ಹೋಟೆಲ್ ಮಾಲೀಕ ಕಂಗಾಲು

    ಹಾಸನ: ಮೊದಲೇ ಕೊರೊನಾದಿಂದಾಗಿ ಗ್ರಾಹಕರಿಲ್ಲದೆ ತತ್ತರಿಸಿರುವ ಹೋಟೆಲ್‍ಗೆ ಬಂದ ಬಂದ ಅಪರೂಪದ ಅತಿಥಿ ಮಾಲೀಕರನ್ನು ಕಂಗಾಲು ಆಗುವಂತೆ ಮಾಡಿದೆ.

    ಹಾಸನದ ಬಿಕ್ಕೋಡಿನ ಮುಖ್ಯ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್ ಪಕ್ಕದಲ್ಲಿರುವ ಗಗನ್ ಹೋಟೆಲ್ ಗೆ ಏಕಾಏಕಿ ಜಿಂಕೆಯೊಂದು ಆಗಮಿಸಿತ್ತು. ಜಿಂಕೆ ನೋಡಿ ಹೋಟೆಲ್ ನಲ್ಲಿದ್ದವರು ಓಡಿ ಹೊರಗಡೆ ಬಂದಿದ್ದಾರೆ. ಹೋಟೆಲ್ ಪ್ರವೇಶಿಸಿದ ಜಿಂಗೆ ಗಾಬರಿಗೊಂಡು ಪೀಟೋಪಕರಣಗಳನ್ನು ಚೆಲ್ಪಾಪಿಲ್ಲಿ ಮಾಡಿ ಪರಾರಿಯಾಗಿದೆ.

    ಕೊರೊನಾದಿಂದಾಗಿ ವ್ಯವಹಾರವಿಲ್ಲದೆ ಸಂಕಷ್ಟದಲ್ಲಿದ್ದ ಹೋಟೆಲ್ ಮಾಲೀಕರಿಗೆ ಜಿಂಕೆ ಮತ್ತಷ್ಟು ನಷ್ಟವನ್ನುಂಟು ಮಾಡಿದೆ. ಜಿಂಕೆಯ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ.

  • ಕೊರೊನಾ ಆತಂಕ- ಉಡುಪಿಯ ಹಲವು ಹೋಟೆಲ್‍ಗಳು ಸ್ವಯಂಪ್ರೇರಿತ ಬಂದ್

    ಕೊರೊನಾ ಆತಂಕ- ಉಡುಪಿಯ ಹಲವು ಹೋಟೆಲ್‍ಗಳು ಸ್ವಯಂಪ್ರೇರಿತ ಬಂದ್

    ಉಡುಪಿ: ಮಹಾಮಾರಿ ಕೊರೊನಾಕ್ಕೆ ಉಡುಪಿ ಜಿಲ್ಲೆಯಲ್ಲಿ ಲಗಾಮು ಬೀಳುತ್ತಿಲ್ಲ. ದಿನಕ್ಕೆ 20-30 ಪಾಸಿಟಿವ್ ಕೇಸ್‍ಗಳು ನಿರಂತರವಾಗಿ ಬರುತ್ತಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,400ರ ಗಡಿ ದಾಟಿದೆ. ಕೊರೊನಾ ಸಮುದಾಯಕ್ಕೆ ಹಬ್ಬಿದೆ ಎಂದು ಆತಂಕಿತರಾದ ಹೋಟೆಲ್ ಮಾಲೀಕರು ಸ್ವಯಂ ಪ್ರೇರಿತ ಬಂದ್ ಮಾಡುತ್ತಿದ್ದಾರೆ.

    ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕೊರೊನಾ ಹತೋಟಿಗೆ ಬರುವ ಲಕ್ಷಣ ಕಾಣುತ್ತಿಲ್ಲ. ಆರಂಭದಿಂದ ಈವರೆಗೂ ಕೊರೊನಾ ಪೀಡಿತರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಕೊರೊನಾ ಸಮುದಾಯಕ್ಕೆ ಹಬ್ಬಿದೆ ಅನ್ನುವ ಆತಂಕ ಜನರಲ್ಲಿ ಶುರುವಾಗಿದೆ. ಜಿಲ್ಲೆಯಲ್ಲಿ ಮೂರ್ನಾಲ್ಕು ಹೋಟೆಲ್ ಮಾಲೀಕರಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೆಲ ಸಿಬ್ಬಂದಿಗಳಿಗೂ ಸೋಂಕು ತಗುಲಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

    ಅನ್ಲಾಕ್ ನಂತರ ಹೋಟೆಲ್ ಗಳು ತೆಗೆದುಕೊಳ್ಳುತ್ತಿದ್ದರೂ ಜನ ಹೋಟೆಲ್ ಕಡೆ ಮುಖ ಮಾಡುತ್ತಿಲ್ಲ. ಈ ನಡುವೆ ಹೊಟೆಲ್ ಸಿಬ್ಬಂದಿಗೆ ಕೊರೊನಾ ಆವರಿಸುತ್ತಿರುವುದರಿಂದ ಕೊರೊನಾದ ಸಹವಾಸವೇ ಬೇಡ ಅಂತ ಕೆಲ ಹೋಟೆಲ್ ಮಾಲೀಕರು ಬಂದ್ ಮಾಡುತ್ತಿದ್ದಾರೆ. ಉಡುಪಿ ನಗರದ ಹತ್ತಾರು ಹೋಟೆಲ್ ಗಳು ಈಗಾಗಲೇ ಬಂದಾಗಿದೆ. ಕೆಲ ದಿನಗಳ ಕಾಲ ನಾವು ಬಂದ್ ಇಡುತ್ತೇವೆ ಹೋಟೆಲ್ ಸಿಬ್ಬಂದಿಗೆ, ನಮಗೆ ಕರೋನಾ ಆವರಿಸಿದರೆ ಕಷ್ಟ ಇದೆ. ಮುಂದೆ ವ್ಯಾಪಾರ ಕೂಡ ನಡೆಯಲಿಕ್ಕಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಹೋಟೆಲ್ ಮಾಲೀಕರು ಸಿಬ್ಬಂದಿ, ಅಂಗಡಿಯವರು, ಮಾಲ್, ಸಪ್ಲೈ ವಿಭಾಗದವರು ಕಡ್ಡಾಯವಾಗಿ ಕೊರೊನಾ ಟೆಸ್ಟ್ ಮಾಡಿಸಬೇಕು ಎಂದು ಜಿಲ್ಲಾಡಳಿತ ಸೂಚನೆ ಕೊಟ್ಟಿದೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಜಿ. ಜಗದೀಶ್, ನಾವು ಸರ್ಕಾರದ ವೆಚ್ವದಲ್ಲಿ ಅಂಗಡಿ ಹೊಟೇಲ್ ಮಾಲಕರಿಗೆ ಗಂಟಲ ದ್ರವ ಟೆಸ್ಟ್ ಮಾಡಿಸುತ್ತೇವೆ. ಎಲ್ಲರೂ ಸ್ವಯಂ ಪ್ರೇರಿತವಾಗಿ ಮುಂದೆ ಬಂದು ಕೊರೊನಾ ಟೆಸ್ಟ್ ಮಾಡಿಸಬೇಕು. ಯಾರಿಗೂ ಅಂಜಿಕೆ ಆತಂಕ ಬೇಡ, ಸಮುದಾಯಕ್ಕೆ ಕೊರೊನಾ ಹಬ್ಬುವುದನ್ನು ತಪ್ಪಿಸಲು ಇದೊಂದು ಪರಿಣಾಮಕಾರಿ ಮಾರ್ಗ ಎಂದರು.

    ವ್ಯಾಪಾರ ಇಲ್ಲದೇ ಈಗಾಗಲೇ ನಷ್ಟದಲ್ಲಿರುವ ನಾವು ಇನ್ನು ಕೋವಿಡ್ ತಂದುಕೊಂಡು ಮತ್ತಷ್ಟು ದುಡ್ಡನ್ನು ಆಸ್ಪತ್ರೆಗೆ ಸುರಿಯಲು ಸಿದ್ಧರಿಲ್ಲ ಎಂದು ಹೋಟೆಲ್ ಮಾಲೀಕ ದೇವ್ ತಮ್ಮ ಆತಂಕ ಮತ್ತು ಅಳಲನ್ನು ತೋಡಿಕೊಂಡರು. ಕೊರೊನಾ ಒಂದು ಹಂತಕ್ಕೆ, ಹತೋಟಿಗೆ ಬರುವ ತನಕ ನಾವು ಹೋಟೆಲ್ ತೆರೆಯುವುದಿಲ್ಲ ಎಂದು ಹೇಳಿದ್ದಾರೆ.

  • ಖಾಸಗಿ ಹೋಟೆಲ್‌ನಲ್ಲೂ ಇನ್ನುಮುಂದೆ ಐಸೋಲೇಷನ್‌ – ಒಂದು ದಿನಕ್ಕೆ ಎಷ್ಟು?

    ಖಾಸಗಿ ಹೋಟೆಲ್‌ನಲ್ಲೂ ಇನ್ನುಮುಂದೆ ಐಸೋಲೇಷನ್‌ – ಒಂದು ದಿನಕ್ಕೆ ಎಷ್ಟು?

    ಬೆಂಗಳೂರು: ಖಾಸಗಿ ಹೋಟೆಲ್ ನಲ್ಲಿ ಕೋವಿಡ್ ಕೇರ್ ಕೇಂದ್ರ ತೆರೆಯಲು ಆರೋಗ್ಯ ಇಲಾಖೆ ಸುತ್ತೋಲೆ ಪ್ರಕಟಿಸಿದೆ.

    ಈ ಮೂಲಕ ರೋಗ ಲಕ್ಷಣ ಇಲ್ಲದ ರೋಗಿಗಳು ಮನೆಯಲ್ಲೇ ಐಸೊಲೇಶನ್ ಆಗಬಹುದು. ಇದರ ಜೊತೆ ಸರ್ಕಾರಿ ಕೇಂದ್ರ ಅಲ್ಲದೇ ಖಾಸಗಿ ಹೋಟೆಲ್ ನಲ್ಲೂ ಐಸೊಲೇಶನ್ ಆಗಬಹುದು.

    ಹೋಟೆಲ್ ಐಸೋಲೇಷನ್ ಮೂರು ವಿಭಾಗ ಮಾಡಿರುವ ಸರ್ಕಾರ ದರವನ್ನು ನಿಗದಿ ಮಾಡಿದೆ. ಬಜೆಟ್‌ ಹೋಟೆಲಿಗೆ 8 ಸಾವಿರ ರೂ., 3 ಸ್ಟಾರ್‌ ಹೋಟೆಲಿಗೆ 10 ಸಾವಿರ ರೂ., 5ಸ್ಟಾರ್‌ ಹೋಟೆಲಿಗೆ 12 ಸಾವಿರ ರೂ. ದರವನ್ನು ನಿಗದಿ ಮಾಡಿದೆ.

    ಹೋಟೆಲ್‌ನಲ್ಲಿ‌ ಐಸೊಲೇಶನ್ ಆಗುವ ಸೋಂಕಿತ ವ್ಯಕ್ತಿಯ ಆರೋಗ್ಯ ತಪಾಸಣೆ ಸೇರಿದಂತೆ ಇತರ ಎಲ್ಲ ವ್ಯವಸ್ಥೆ ಬಿಬಿಎಂಪಿ ಮತ್ತು ಆರೋಗ್ಯ ‌ಇಲಾಖೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

  • ರಾಜ್ಯದ ಹಲವೆಡೆ ಸ್ವಯಂ ಲಾಕ್‍ಡೌನ್ ಘೋಷಣೆ- ಮೈಸೂರಲ್ಲಿಂದು ಚಾಮುಂಡಿ ದರ್ಶನ ಸಿಗಲ್ಲ

    ರಾಜ್ಯದ ಹಲವೆಡೆ ಸ್ವಯಂ ಲಾಕ್‍ಡೌನ್ ಘೋಷಣೆ- ಮೈಸೂರಲ್ಲಿಂದು ಚಾಮುಂಡಿ ದರ್ಶನ ಸಿಗಲ್ಲ

    – ನಮ್ಮ ರಕ್ಷಣೆ ನಮ್ಮ ಹೊಣೆ ಎಂದ ಜನ

    ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವ್ಯಾಪಕವಾಗಿ ಬೇರೂರಿದೆ. ಅದರಲ್ಲೂ ಅನ್‍ಲಾಕ್ ಬಳಿಕ ಸೋಂಕು ದಿನದಿನಕ್ಕೆ ಹೆಚ್ಚಳವಾಗುತ್ತಿದೆ. ಅನ್‍ಲಾಕ್ ಮಾಡಿದ ಸರ್ಕಾರ ಸೋಂಕಿಗೆ ಕಡಿವಾಣ ಹಾಕುವಲ್ಲಿ ವಿಫಲವಾಯ್ತಾ ಅನ್ನೋ ಪ್ರಶ್ನೆ ಮೂಡಿದೆ. ಈ ಹಿನ್ನೆಲೆಯಲ್ಲಿ ಕೊರೊನಾದಿಂದ ರಕ್ಷಣೆ ಮಾಡಿಕೊಳ್ಳಲು ರಾಜ್ಯದ ಹಲವೆಡೆ ಸ್ವಯಂ ಲಾಕ್‍ಡೌನ್ ಘೋಷಣೆ ಮಾಡಿಕೊಳ್ಳಲಾಗುತ್ತಿದೆ.

    ಮೈಸೂರಿನಲ್ಲಿ 3 ದಿನ ಸೆಲ್ಫ್ ಲಾಕ್‍ಡೌನ್
    ಮೈಸೂರು ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಲಾಕ್‍ಡೌನ್‍ಗೆ ಜಿಲ್ಲಾಡಳಿತ ತೀರ್ಮಾನಿಸಿದೆ. ಇಂದು ಮೊದಲ ಆಷಾಡ ಶುಕ್ರವಾರವಾದರೂ ಕೊರೊನಾ ಭಯಕ್ಕೆ ಚಾಮುಂಡೇಶ್ವರಿ ದೇಗುಲು ತೆರೆಯುತ್ತಿಲ್ಲ. ಬರೀ ಚಾಮುಂಡಿ ಬೆಟ್ಟ ಅಷ್ಟೇ ಅಲ್ಲ, ಮೈಸೂರಿನ ಬೇರೆ ಯಾವುದೇ ದೇವಾಲಯಗಳು ಕೂಡ ಮೂರು ದಿನ ದರ್ಶನಕ್ಕೆ ಲಭ್ಯ ಇರಲ್ಲ.

    ಜೊತೆಗೆ ಶನಿವಾರ ಹಾಗೂ ಭಾನುವಾರ ಮೈಸೂರು ಅರಮನೆ ಹಾಗೂ ಮೃಗಾಲಯ ಬಂದ್‍ಗೆ ಪಾಲಿಕೆ ಆದೇಶಿಸಿದೆ. ಪ್ರಮುಖ 5 ಮಾರುಕಟ್ಟೆಗಳಾದ ದೇವರಾಜ ಮಾರುಕಟ್ಟೆ, ಸಂತೇಪೇಟೆ, ಶಿವರಾಂಪೇಟೆ, ಮನ್ನಾರ್ಸ್ ಮಾರ್ಕೆಟ್ ಮತ್ತು ಬೋಟಿ ಬಜಾರ್ ಗುರುವಾರದಿಂದ ನಾಲ್ಕು ದಿನ ಬಂದ್ ಮಾಡಲಾಗಿದೆ.

    ಕನಕಪುರ, ಮಾಗಡಿ, ರಾಮನಗರದಲ್ಲಿ ಲಾಕ್‍ಡೌನ್
    ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ಕನಕಪುರ, ಮಾಗಡಿ ಹಾಗೂ ರಾಮನಗರ ಪಟ್ಟಣಗಳಲ್ಲಿ ಸ್ವಯಂ ಪ್ರೇರಿತವಾಗಿ ಲಾಕ್‍ಡೌನ್ ಏರಲಾಗಿದೆ. ಬೆಳಗ್ಗೆ 6 ಗಂಟೆಯಿಂದ 11 ಗಂಟೆವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳು ಓಪನ್ ಮಾಡಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. 11 ಗಂಟೆ ಬಳಿಕ ಕಂಪ್ಲೀಟ್ ಲಾಕ್‍ಡೌನ್ ಮಾಡಲಾಗುತ್ತಿದೆ. ಅಗತ್ಯ, ತುರ್ತು ಸೇವೆ ಹೊರೆತುಪಡಿಸಿ ಎಲ್ಲವನ್ನು ಜಿಲ್ಲಾಡಳಿತ ಬಂದ್ ಮಾಡಿದೆ.

    ಚನ್ನಗಿರಿ ಹಾಗೂ ಹರಿಹರದಲ್ಲಿ ಸೆಲ್ಫ್ ಲಾಕ್‍ಡೌನ್
    ದಾವಣಗೆರೆಯ ಚನ್ನಗಿರಿ ಹಾಗೂ ಹರಿಹರದಲ್ಲಿ ಸ್ಥಳೀಯ ಶಾಸಕರು, ಸಂಘ-ಸಂಸ್ಥೆಯವರು, ವಿವಿಧ ಪಕ್ಷದ ಮುಖಂಡರು ಸೇರಿ ಸ್ವಯಂ ಪ್ರೇರಿತವಾಗಿ ಲಾಕ್‍ಡೌನ್ ಮಾಡುತ್ತಿದ್ದಾರೆ. ಚನ್ನಗಿರಿಯಲ್ಲಿ ಬೆಳಗ್ಗೆ 8 ರಿಂದ 12 ರ ವರೆಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಹರಿಹರದಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೂ ಮಾತ್ರ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ.

    ಶಿಡ್ಲಘಟ್ಟದಲ್ಲಿ ವ್ಯಾಪಾರಿಗಳಿಂದ ಸೆಲ್ಫ್ ಲಾಕ್‍ಡೌನ್
    ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸ್ವತಃ ವ್ಯಾಪಾರಸ್ಥರೇ ಸ್ವಯಂಪ್ರೇರಿತವಾಗಿ ವ್ಯಾಪಾರ ವಹಿವಾಟಿಗೆ ಸಮಯ ನಿಗದಿ ಮಾಡಿದ್ದಾರೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಲಾಗುತ್ತಿದ್ದು, ಸಂಜೆ 4 ಗಂಟೆಗೆ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿ ವರ್ತಕರೇ ಸ್ವಯಂ ಲಾಕ್‍ಡೌನ್ ಹೇರಿಕೊಳ್ಳುತ್ತಿದ್ದಾರೆ.

    ಶಿಗ್ಗಾಂವಿಯಲ್ಲಿ ಹೋಟೆಲ್ ಕಂಪ್ಲೀಟ್ ಬಂದ್
    ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿ ಕೊರೊನಾ ಸೋಂಕಿತರು ಹೆಚ್ಚುತ್ತಿರೋ ಹಿನ್ನೆಲೆ ಶಿಗ್ಗಾಂವಿ ಪಟ್ಟಣದಲ್ಲಿ ಸ್ವಯಂ ಪ್ರೇರಿತವಾಗಿ ಜೂನ್ 30ರವರೆಗೆ ಹೊಟೇಲ್‍ಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ದಿನಸಿ ಅಂಗಡಿಗಳ ಓಪನ್ ಮಾಡಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಗ್ರಾಮದಲ್ಲಿ ಅನ್‍ಲಾಕ್‍ನಲ್ಲೂ ಲಾಕ್‍ಡೌನ್ ಪಾಲಿಸುತ್ತಿದ್ದಾರೆ.

    ರಾಜ್ಯಾದ್ಯಂತ ಅನ್‍ಲಾಕ್ ಆಗಿದ್ದರೂ ಕೊಲ್ಲೂರು ಗ್ರಾಮದಲ್ಲಿ ಮಾತ್ರ ಅಂಗಡಿಗಳು, ಹೋಟೆಲ್ ಓಪನ್ ಆಗಿಲ್ಲ. ಮಾಲೀಕರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದಾರೆ. ಕೊಲ್ಲೂರು ಗ್ರಾಮಕ್ಕೆ ಹೆಚ್ಚಾಗಿ ಕೇರಳ, ತಮಿಳುನಾಡು ಭಕ್ತರು ಆಗಮಿಸುವ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಆಗಸ್ಟ್ ವರೆಗೂ ಇಡೀ ಗ್ರಾಮಕ್ಕೆ ಸ್ವಯಂ ಪ್ರೇರಿತವಾಗಿ ಬಂದ್ ಹೇರಿಕೊಂಡಿದ್ದಾರೆ.

    21 ದಿನ ಹೋಂ ಸ್ಟೇ, ರೆಸಾರ್ಟ್, ಹೊಟೇಲ್ ಬಂದ್
    ಧಾರವಾಡ ಜಿಲ್ಲೆಯ ಮೊರಬ ಗ್ರಾಮದಲ್ಲಿ ಇಲ್ಲಿವರೆಗೆ 40 ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆ ಸಂಪೂರ್ಣ ಸಿಲ್‍ಡೌನ್ ಮಾಡಲಾಗಿದೆ. ಗ್ರಾಮದಿಂದ ಯಾರೂ ಹೊರಗೆ ಹೋಗುವಂತಿಲ್ಲ. ಗ್ರಾಮಕ್ಕೆ ಹೊರಗಿನವರು ಯಾರೂ ಒಳಗೆ ಬರುವಂತಿಲ್ಲ. ಗ್ರಾಮದ ಎಲ್ಲ ಕಡೆ ಬ್ಯಾರಿಕೇಡ್ ಹಾಕಿ ಸೀಲ್‍ಡೌನ್ ಮಾಡಲಾಗಿದೆ. ಕೊಡಗಿನಲ್ಲಿ ಕೊರೊನಾ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ಗುರುವಾರದಿಂದ 21 ದಿನ ಹೋಂ ಸ್ಟೇ, ರೆಸಾರ್ಟ್, ಹೊಟೇಲ್‍ಗಳನ್ನ ಬಂದ್ ಮಾಡಲಾಗಿದೆ. ಹೋಂ ಸ್ಟೇ ನಡೆಸುತ್ತಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್ ಹಿನ್ನೆಲೆ ಎಚ್ಚೆತ್ತುಕೊಂಡ ಹೋಂ ಸ್ಟೇ, ರೆಸಾರ್ಟ್, ಹೊಟೇಲ್ ಮಾಲೀಕರ ಸಂಘ ಹಾಗೂ ಜಿಲ್ಲೆಯ ಜನರು, ಅತಿಥಿಗಳ ಹಿತದೃಷ್ಟಿಯಿಂದ ಬಂದ್ ಸ್ವಯಂ ಲಾಕ್ ಏರಿಕೊಂಡಿದ್ದಾರೆ.

     

    ಅಷ್ಟೇ ಅಲ್ಲ, ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಇಂದಿನಿಂದ 3 ದಿನ ಸೆಲ್ಪ್ ಲಾಕ್‍ಡೌನ್ ಏರಲಾಗಿದೆ. ಜೂನ್ 29 ರಿಂದ ಜುಲೈ 10ರ ವರೆಗೂ ಬೆಳಗ್ಗೆ 07 ರಿಂದ ಮಧ್ಯಾಹ್ನ 12 ರವರೆಗೆ ಮಾತ್ರ ವಹಿವಾಟು ಮಾಡಲು ನಿರ್ಧರಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಎಲ್ಲಾ ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಸಂಜೆ 6 ರಿಂದ ಬೆಳಗ್ಗೆ 6 ರವರೆಗೆ ವ್ಯಾಪಾರ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ.

  • ಬಿಕಿನಿ ಫೋಟೋ ಪೋಸ್ಟ್ ಮಾಡಿದ ಬೆನ್ನಲ್ಲೇ ಸಲಿಂಗಿ ಜೋಡಿ ಸಾವು

    ಬಿಕಿನಿ ಫೋಟೋ ಪೋಸ್ಟ್ ಮಾಡಿದ ಬೆನ್ನಲ್ಲೇ ಸಲಿಂಗಿ ಜೋಡಿ ಸಾವು

    – ರಾತ್ರಿ ಕುಟುಂಬಸ್ಥರ ಜೊತೆ ಪಾರ್ಟಿ
    – ಬೆಳಗ್ಗೆ ರೂಮಿನಲ್ಲಿ ಶವವಾಗಿ ಪತ್ತೆ

    ಬ್ಯಾಂಕಾಕ್: ಸಲಿಂಗಿ ಜೋಡಿಯೊಂದು ಪರಸ್ಪರ ಚಾಕುವಿನಿಂದ ಇರಿದುಕೊಂಡು ಮೃತಪಟ್ಟಿರುವ ಘಟನೆ ಯ್ಲೆಂಡ್‍ನ ಪ್ರವಾಸಿ ಹೋಟೆಲ್ ರೂಮಿನಲ್ಲಿ ನಡೆದಿದೆ.

    ಮೃತರನ್ನು ರಾಟ್ರೀ ಸ್ರಿವಿಬೂನ್ (24) ಮತ್ತು ಪಟ್ಸಾನನ್ ಚನ್‍ಪ್ರಪಾತ್ (29) ಎಂದು ಗುರುತಿಸಲಾಗಿದೆ. ಬ್ಯಾಂಕಾಕ್‍ನಿಂದ 100 ಕಿ.ಮೀ ದೂರದಲ್ಲಿರುವ ಪಟ್ಟಾಯದಲ್ಲಿನ ಸಮುದ್ರ ತೀರದ ರೆಸಾರ್ಟ್ ನಲ್ಲಿರುವ ಹೋಟೆಲ್ ರೂಮಿನಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಕುಟುಂಬದವರು ಬೆಳಗ್ಗೆ ರೂಮಿಗೆ ಹೋಗಿ ನೋಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

    ಪಟ್ಸಾನನ್ ಮತ್ತು ರಾಟ್ರೀ ಇಬ್ಬರಿಗೂ ಕುತ್ತಿಗೆ ಸೇರಿದಂತೆ ಅನೇಕ ಕಡೆ ಚಾಕುವಿನಿಂದ ಇರಿದ ಗಾಯಗಳಾಗಿದ್ದವು. ಇಬ್ಬರು ಸಾಯುವ ಕೆಲ ಗಂಟೆಗಳ ಮೊದಲು ಆನ್‍ಲೈನಲ್ಲಿ ಪೋಸ್ಟ್ ಮಾಡಿದ್ದ ಫೋಟೋದ ಬಗ್ಗೆ ವಾಗ್ವಾದ ನಡೆದಿದೆ. ರಾಟ್ರೀ ಸ್ವಿಮ್ಮಿಂಗ್ ಪೂಲ್ ಅಂಚಿನಲ್ಲಿ ಕುಳಿತು ಹಸಿರು ಬಣ್ಣದ ಬಿಕಿನಿಯಲ್ಲಿ ತೆಗೆಸಿಕೊಂಡಿದ್ದ ಫೋಟೋವನ್ನು ಪೋಸ್ಟ್ ಮಾಡಿದ್ದರು ಎಂದು ತಿಳಿದುಬಂದಿದೆ.

    ಪಟ್ಸಾನನ್ ಮತ್ತು ರಾಟ್ರೀ ಸಾಯುವ ಮುನ್ನ ಅಂದರೆ ರಾತ್ರಿಯಷ್ಟೇ ಕುಟುಂಬದ ಜೊತೆ ಒಟ್ಟಿಗೆ ಸೇರಿ ಊಟ ಮಾಡಿದ್ದರು. ಅಲ್ಲದೇ ಅವರೊಂದಿಗೆ ಸಂತಸದಿಂದ ಕಾಲ ಕಳೆದಿದ್ದರು. ಆದರೆ ಬೆಳಗ್ಗೆ ಸಲಿಂಗಿ ಜೋಡಿ ಶವವಾಗಿ ಪತ್ತೆಯಾಗಿದ್ದಾರೆ. ಇದನ್ನು ನೋಡಿ ಕುಟುಂಬಸ್ಥರು ಶಾಕ್ ಆಗಿದ್ದಾರೆ.

    ಪಾರ್ಟಿ ವೇಳೆ ಎಲ್ಲರೂ ಖುಷಿಯಿಂದ ಇದ್ದೆವು. ಆಗ ಪಟ್ಸಾನನ್ ಮತ್ತು ರಾಟ್ರೀ ಇಬ್ಬರ ಸಂಬಂಧವೂ ಚೆನ್ನಾಗಿತ್ತು. ಆದರೆ ನನ್ನ ಸಹೋದರಿಯ ಗೆಳತಿ ಸ್ವಲ್ಪ ಹೊಟ್ಟೆಕಿಚ್ಚಿನ ಸ್ವಭಾವದವಳಾಗಿದ್ದಳು. ಹೀಗಾಗಿ ಇಬ್ಬರ ಸಾವಿನಿಂದ ನಾವು ಆಘಾತಗೊಂಡಿದ್ದೇವೆ ಎಂದು ರಾಟ್ರೀ ಸಹೋದರ ಪೈರೋಜ್ ತಿಳಿಸಿದ್ದಾರೆ.

    ಘಟನೆ ಸ್ಥಳದಲ್ಲಿ ಚಾಕು ಪತ್ತೆಯಾಗಿದೆ. ಇಬ್ಬರ ನಡುವೆ ವಾದ-ವಿವಾದ ನಡೆದಿದ್ದು, ನಂತರ ಪರಸ್ಪರ ಚಾಕುವಿನಿಂದ ಹಲ್ಲೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆದರೂ ನಾವು ಕುಟುಂಬದವರನ್ನು ವಿಚಾರಣೆ ಮಾಡುತ್ತಿದ್ದೇವೆ. ಆದರೆ ಯಾರ ಮೇಲೆ ಅನುಮಾನ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಲ್ಲದೇ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುರಿಸಿದ್ದಾರೆ.

  • ಮಂಡ್ಯದಲ್ಲಿ ದಂಡುಪಾಳ್ಯ ರೀತಿಯ ಮರ್ಡರ್

    ಮಂಡ್ಯದಲ್ಲಿ ದಂಡುಪಾಳ್ಯ ರೀತಿಯ ಮರ್ಡರ್

    ಮಂಡ್ಯ: ಮಹಿಳೆಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

    ಜಿಲ್ಲೆಯ ಶ್ರೀರಂಗಪಟ್ಟಣದ ಲಾಡ್ಜ್ ನಲ್ಲಿ ಘಟನೆ ನಡೆದಿದ್ದು, ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಜೋಡಿಯೊಂದು ಲಾಡ್ಜ್ ಗೆ ಆಗಮಿಸಿದೆ. ರಾತ್ರಿ ವೇಳೆಗೆ ಮಹಿಳೆಯನ್ನು ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದಾನೆ.

    ಜೋಡಿ ಇದ್ದ ರೂಮ್‍ನಿಂದ ರಕ್ತ ಹೊರ ಬರುತ್ತಿದ್ದದನ್ನು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯ ಕತ್ತು ಕೊಯ್ದು ಚಾಕು ಸ್ಥಳದಲ್ಲೇ ಬಿಟ್ಟು ಆರೋಪಿ ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ. ಭೀಕರ ಕೊಲೆ ನಡೆದ ಘಟನೆಯಿಂದ ಶ್ರೀರಂಗಪಟ್ಟಣ ಜನತೆ ಬೆಚ್ಚಿ ಬಿದ್ದಿದ್ದಾರೆ. ಪ್ರಕರಣ ಸಂಬಂಧ ಶ್ರೀರಂಗಪಟ್ಟಣ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಮೂರನೇ ಸ್ಥಾನಕ್ಕೇರಿದ ಯಾದಗಿರಿ- ರಸ್ತೆಗಿಳಿಯದ ಜನತೆ

    ಮೂರನೇ ಸ್ಥಾನಕ್ಕೇರಿದ ಯಾದಗಿರಿ- ರಸ್ತೆಗಿಳಿಯದ ಜನತೆ

    – ಬಣಗುಡುತ್ತಿವೆ ಹೋಟೆಲ್, ಬಸ್‍ಗಳು

    ಯಾದಗಿರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಮಹಾಸ್ಪೋಟಗೊಳ್ಳುತ್ತಿರವ ಹಿನ್ನೆಲೆ ಜನ ರಸ್ತೆಗಿಳಿಯುವ ಪ್ರಮಾಣದಲ್ಲಿ ಭಾರೀ ಇಳಿತ ಕಂಡಿದೆ. ವಾರದ ಏಳು ದಿನಗಳಲ್ಲಿಯೂ ನಗರದ ಎಲ್ಲ ವಲಯಗಳ ವ್ಯಾಪಾರ-ವಹಿವಾಟು ಕುಂಟುತ್ತ ಸಾಗಿದೆ.

    ಜಿಲ್ಲೆಯಲ್ಲಿ 787 ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದಿದೆ. ಇದರದಿಂದ ಜಿಲ್ಲೆಯ ಜನ ಸರ್ಕಾರಿ ಬಸ್‍ನಲ್ಲಿ ಪ್ರಯಾಣಿಸುವುದನ್ನು ಕಡಿಮೆ ಮಾಡಿದ್ದಾರೆ. ಶೇ.50ಕ್ಕಿಂತಲೂ ಕಡಿಮೆ ಜನ ಬಸ್ ಪ್ರಯಾಣ ಮಾಡದೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಯಾದಗಿರಿಯ ಕೇಂದ್ರ ಬಸ್ ನಿಲ್ದಾಣ ಸಂಪೂರ್ಣ ಖಾಲಿ ಖಾಲಿಯಾಗಿ, ಬಿಕೋ ಎನ್ನುತ್ತಿದೆ.

    ಈಶಾನ್ಯ ಸಾರಿಗೆ ಸಂಸ್ಥೆಯ 87 ಬಸ್‍ಗಳು ಪ್ರತಿ ದಿನ ಜಿಲ್ಲೆ ಮತ್ತು ಅಂತರ್ ಜಿಲ್ಲೆಗಳಲ್ಲಿ ಸಂಚಾರ ಮಾಡುತ್ತಿವೆ. ಆದರೆ ಜನ ಮಾತ್ರ ಕೊರೊನಾ ಭೀತಿಯಿಂದ ಬಸ್ ಹತ್ತುವುದನ್ನು ಕಡಿಮೆ ಮಾಡಿದ್ದಾರೆ. ಯಾದಗಿರಿ ಹಾಗೂ ಗುರುಮಠಕಲ್ ತಾಲೂಕಿನಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಯಾದಗಿರಿಯಿಂದ, ಬೆಂಗಳೂರು, ಕಲಬುರಗಿ, ವಿಜಯಪುರದ ಬಸ್‍ಗಳನ್ನು ಹತ್ತಲು ಭಯ ಪಡುತ್ತಿದ್ದಾರೆ.

    ಇಷ್ಟೇ ಅಲ್ಲದೆ ಕೊರೊನಾ ಭೀತಿ ನಗರದ ಹೋಟೆಲ್ ಉದ್ಯಮಕ್ಕೂ ತಟ್ಟಿದೆ. ಭಾನುವಾರವೂ ಯಾದಗಿರಿಯಲ್ಲಿ ಹೋಟೆಲ್‍ಗಳು ಖಾಲಿ ಖಾಲಿಯಾಗಿವೆ. ಗ್ರಾಹಕರಿಲ್ಲದೆ ನಗರದ ಹೊಟೇಲ್ ಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಸ್ಯಾನಿಟೈಸರ್, ಸಮಾಜಿಕ ಅಂತರ ಕಾಪಾಡಿ ಮುಂಜಾಗೃತಾ ಕ್ರಮ ಕೈಗೊಂಡಿದ್ದರೂ ಜನ ಮಾತ್ರ ಹೋಟೆಲ್ ಗಳತ್ತ ಮುಖ ಮಾಡುತ್ತಿಲ್ಲ. ಹೀಗಾಗಿ ಮಾಲೀಕರು ಚಿಂತಾಕ್ರಾಂತರಾಗಿದ್ದಾರೆ.

  • ಊರಿಗೆ ಹೋಗಲು ಸಾಧ್ಯವಾಗದ್ದಕ್ಕೆ ಹತಾಶೆಗೊಂಡು ಬೆಂಕಿ ಹಚ್ಚಿಕೊಂಡ

    ಊರಿಗೆ ಹೋಗಲು ಸಾಧ್ಯವಾಗದ್ದಕ್ಕೆ ಹತಾಶೆಗೊಂಡು ಬೆಂಕಿ ಹಚ್ಚಿಕೊಂಡ

    ಚಾಮರಾಜನಗರ: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಊರಿಗೆ ಹೋಗಲಾಗದೆ ಹತಾಶೆಗೊಂಡಿದ್ದ ಕೇರಳದ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ.

    ಮೂಲತಃ ಕೇರಳದ ಮಲ್ಲಪ್ಪುರಂನ ನಿವಾಸಿ ಅಂಜುಂ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಅಂಜುಂ ನಗರದ ಕೆಎಸ್‍ಆರ್‍ಟಿಸಿ ಬಳಿ ಇರುವ ಮಯೂರು ಹೋಟೆಲ್‍ನಲ್ಲಿ ಕೆಲಸ ಮಾಡಿಕೊಂಡಿದ್ದ.

    ಲಾಕ್‍ಡೌನ್‍ನಿಂದಾಗಿ ಕಳೆದ ಎರಡು ತಿಂಗಳಿಂದ ಹೋಟೆಲ್ ನಲ್ಲೇ ಉಳಿದುಕೊಂಡಿದ್ದ. ಕೆಲ ದಿನಗಳಿಂದ ತನ್ನನ್ನು ಊರಿಗೆ ಕಳುಹಿಸಿಕೊಡುವಂತೆ ಮಾಲೀಕರಲ್ಲಿ ಈಗ ಹಠ ಹಿಡಿದಿದ್ದ. ಆದರೆ ಲಾಕ್‍ಡೌನ್ ಹಿನ್ನೆಲೆ ಕೇರಳಕ್ಕೆ ಬಸ್ ಸಂಚಾರ ಇನ್ನೂ ಆರಂಭಗೊಂಡಿಲ್ಲ. ಹಾಗಾಗಿ ಬಸ್ ಸಂಚಾರ ಆರಂಭವಾದ ಮೇಲೆ ಕಳುಹಿಸಿಕೊಡುವುದಾಗಿ ಹೋಟೆಲ್ ಮಾಲೀಕರು ಹೇಳಿದ್ದರು ಎನ್ನಲಾಗಿದೆ.

    ಅಂಜುಂ ಗುರುವಾರ ರಾತ್ರಿ ಹೋಟೆಲ್ ರೂಮ್‍ನಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಅಂಜುಂ ಮೃತಪಟ್ಟಿದ್ದಾನೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಕೇರಳದಲ್ಲಿರುವ ಅಂಜುಂ ಪೋಷಕರಿಗೆ ವಿಷಯ ತಿಳಿಸಿದ್ದು, ಅವರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.