Tag: Hot Seat

  • ಮಗಳ ಹೆಸರಿನಲ್ಲಿ 100 ಕೋಟಿ ರೂ. ಆಸ್ತಿ ಹೇಗೆ: ಸಂದರ್ಶನದಲ್ಲಿ ಉತ್ತರ ಕೊಟ್ರು ಡಿಕೆ ಶಿವಕುಮಾರ್

    ಮಗಳ ಹೆಸರಿನಲ್ಲಿ 100 ಕೋಟಿ ರೂ. ಆಸ್ತಿ ಹೇಗೆ: ಸಂದರ್ಶನದಲ್ಲಿ ಉತ್ತರ ಕೊಟ್ರು ಡಿಕೆ ಶಿವಕುಮಾರ್

    ಬೆಂಗಳೂರು: ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಮೊದಲ ಗುರಿ. ನಾನು ಯಾವುದೇ ಒತ್ತಡ, ದಾಳಿಗೆ ಹೆದರುವುದಿಲ್ಲ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. ಪಬ್ಲಿಕ್ ಟಿವಿ ಹಾಟ್ ಸೀಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ನೇರ ಪ್ರಶ್ನೆಗಳಿಗೆ ಉತ್ತರಿಸಿದರು.

    ಪ್ರಶ್ನೆ: ಚಿಕ್ಕ ವಯಸ್ಸಿನಲ್ಲೇ ನಿಮ್ಮ ಮಗಳ ಹೆಸರಲ್ಲಿ 100 ಕೋಟಿ ರೂ. ಆಸ್ತಿ ಹೇಗೆ ಬಂತು?
    ನನ್ನ ಮಗಳ ಹೆಸರಿನಲ್ಲಿ 100 ಕೋಟಿ ಆಸ್ತಿ ಇರುವುದು ನನ್ನ ಸ್ವ ಸಂಪಾದನೆ. ನನ್ನ ಮಗಳು ಈಗಾಗಲೇ ಪದವಿ ಪೂರ್ಣಗೊಳಿಸಿದ್ದು ನನ್ನ ಬಿಸಿನೆಸ್ ನೋಡಿಕೊಳ್ಳುತ್ತಿದ್ದಾಳೆ. ಅವಳ ಹೆಸರಿನಲ್ಲಿ ತಂದೆಯಾಗಿ ಆಸ್ತಿ ಮಾಡಿದ್ದೇನೆ. ನನ್ನ ಕರ್ತವ್ಯ ಮಾಡಿದ್ದೇನೆ. ನನ್ನ ಮಗಳ ಹೆಸರಿನಲ್ಲಿ ಇರುವ ಎಲ್ಲಾ ಆಸ್ತಿಗೂ ಲೆಕ್ಕ ನೀಡಿದ್ದೇನೆ.

    ಪ್ರಶ್ನೆ: ಐಟಿ ದಾಳಿ ನಿಮ್ಮ ರಾಜಕೀಯ ಅಬ್ಬರದ ಮೇಲೆ ಪ್ರಭಾವ ಉಂಟುಮಾಡಿದೆಯಾ?
    ಐಟಿ ದಾಳಿಯಿಂದ ನನ್ನ ರಾಜಕೀಯ ಮೇಲೆ ಜೀವನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಆದರೆ ನನ್ನ ಬೆಂಬಲಕ್ಕೆ ನಿಂತಿರುವ ಕಾರ್ಯಕರ್ತರ, ಜನರ, ಸ್ನೇಹಿತರ ಸೇವೆ ಮಾಡಲು ಕಷ್ಟವಾಯಿತು. ಐಟಿ ದಾಳಿಯ ವೇಳೆ ಅದರ ಪ್ರಕಿಯೆಯಿಂದಾಗಿ ಸಾಕಷ್ಟು ಸಮಯ ವ್ಯರ್ಥವಾಯಿತು.

    ಪ್ರಶ್ನೆ: ನಿಮ್ಮ ನಿವಾಸದಲ್ಲಿ ಹಣ ಸಿಕ್ಕಿದೆ, ಫೋಟೋಗಳು ಪ್ರಕಟವಾಗಿದೆಯಲ್ಲ?
    ನನ್ನ ಮೇಲೆ ದಾಳಿ ನಡೆಸಿದ ವೇಳೆ ಪ್ರಸಾರ ಮಾಡಲಾದ ಫೋಟೋ, ವಿಡಿಯೋಗಳು ನಕಲಿ ಎಂದು ಐಟಿ ವಿಭಾಗವೇ ಸ್ಪಷ್ಟಪಡಿಸಿದೆ. ಈ ಕುರಿತು ಜನರಿಗೆ ಅರಿವಿದೆ. ನಾನು 90% ಸಾಲ ಮಾಡಿದ್ದೇನೆ. ನನ್ನ ಪ್ರತಿ ಹಣಕ್ಕೆ ಲೆಕ್ಕ ಇದೆ.

    ಪ್ರಶ್ನೆ: ಐಟಿ ದಾಳಿ ವೇಳೆ ಬಿಜೆಪಿ ಅಫರ್ ಬಂದಿತ್ತಾ?
    ಈ ಕುರಿತು ಉತ್ತರಿಸಲು ನನಗೆ ಇನ್ನೂ ಸೂಕ್ತ ಸಮಯ ಸಿಕ್ಕಿಲ್ಲ. ಯಾವುದೇ ಒಂದು ವಿಷಯದ ಬಗ್ಗೆ ಸ್ಪಷ್ಟಪಡಿಸಲು ಸೂಕ್ತ ಸಮಯ ಹಾಗೂ ಅವುಗಳಿಗೆ ಬೇಕಾದ ಸಾಕ್ಷ್ಯಧಾರಗಳ ಅವಶ್ಯಕತೆ ಇರುತ್ತದೆ.

    ಪ್ರಶ್ನೆ: ಮುಂದಿನ ಬಾರಿ ರಾಜ್ಯದಲ್ಲಿ ಸಿಎಂ ಯಾರು ಆಗುತ್ತಾರೆ?
    ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಮೊದಲ ಗುರಿ. ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಚುನಾವಣೆ ನಡೆಯುತ್ತದೆ. ಮುಂದಿನ ಅವಧಿಗೂ ಸಿದ್ದರಾಮಯ್ಯ ಅವರೇ ಸಿಎಂ ಎಂದು ನಮ್ಮ ನಾಯಕರು ಈಗಾಗಲೇ ಹೇಳಿದ್ದಾರೆ.

    ಪ್ರಶ್ನೆ: ರಾಜ್ಯದಲ್ಲಿ ಒಕ್ಕಲಿಗ ಜನರನ್ನು ಸೆಳೆಯುವಲ್ಲಿ ಜೆಡಿಎಸ್, ಬಿಜೆಪಿ ಯಶಸ್ವಿಯಾಗಿದೆ. ನೀವು ಇನ್ನು ಒಕ್ಕಲಿಗ ನಾಯಕನಾಗಿಲ್ಲ?
    ಇಲ್ಲ ಈ ಮಾತನ್ನು ನಾನು ಒಪ್ಪಲ್ಲ. ಮೈಸೂರು, ಹಾಸನ, ರಾಮನಗರದಲ್ಲಿ ಒಕ್ಕಲಿಗರು ಕಾಂಗ್ರೆಸ್ ಬೆಂಬಲಿಸುತ್ತಾರೆ. ನಾನು ಹುಟ್ಟಿನಿಂದಲೇ ಒಕ್ಕಲಿಗ. ಒಕ್ಕಲಿಗ ಎಂದು ಹೇಳಿಕೊಳ್ಳುವ ಅಗತ್ಯ ನನಗಿಲ್ಲ.

    ಪ್ರಶ್ನೆ: ರಾಮನಗರದಲ್ಲಿ ಕುಮಾರಸ್ವಾಮಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೀರಾ?
    ನಾನು ಆರಂಭದಿಂದಲೂ ಮಾಜಿ ಪ್ರಧಾನಿ ದೇವೇಗೌಡ ಅವರ ಮೇಲೆ ಹೋರಾಟ ನಡೆಸಿದ್ದೇನೆ. ಕುಮಾರಸ್ವಾಮಿಯವರ ಮೇಲೆಯೂ ನಾನು ಹೋರಾಟ ನಡೆಸಿದ್ದೇನೆ. ಆದರೆ ಅನಿತಾ ಕುಮಾರಸ್ವಾಮಿ ಅವರಿಗೆ ಗೌರವ ನೀಡಿದ್ದೇನೆ. ನಮ್ಮ ಮನೆಯ ಮಗಳಿಗೆ ನೀಡಿದ ಗೌರವ ಮಾತ್ರ ನೀಡಿದ್ದೇನೆ ಅಷ್ಟೇ ಇದರಲ್ಲಿ ಯಾವುದೇ ಉದ್ದೇಶ ಇಲ್ಲ ಎಂದರು.

    ಈ ಚುನಾವಣೆಯಲ್ಲಿ ರಾಮನಗರ, ಚನ್ನಪಟ್ಟಣದಲ್ಲಿ ಸೇರಿದಂತೆ ಮೂರು ಕೇತ್ರದಲ್ಲಿ ಗೆಲುವು ಪಡೆಯುತ್ತೇವೆ. ಆದರೆ ಕೆಲವರು ನಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ. ಇದರಿಂದ ಆರಂಭದಲ್ಲಿ ಸ್ವಲ್ಪ ಹಿನ್ನಡೆಯಾಗಿದೆ. ಚೆನ್ನಪಟ್ಟಣದಲ್ಲಿ ನಾವು ದೊಡ್ಡ ನಾಯಕನನ್ನು ಬೆಳೆಸದ ಕಾರಣ ಹಿನ್ನಡೆಯಾಗಿದೆ. ಆದರೆ ಈ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ. ಕಾಂಗ್ರೆಸ್ ನೀಡಿದ ಕೊಡುಗೆಯನ್ನು ಯೋಗೇಶ್ವರ್ ಮರೆತಿದ್ದಾರೆ.

    ಪ್ರಶ್ನೆ: ಕಾಂಗ್ರೆಸ್ ಪಕ್ಷದಲ್ಲಿ ನಿಮ್ಮನ್ನು ಮೂಲೆ ಗುಂಪು ಮಾಡಲಾಗುತ್ತಿದೆ?
    ಪಕ್ಷ ನನಗೆ ನೀಡಿದ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದೇನೆ. ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುವುದು ನನ್ನ ಕರ್ತವ್ಯ. ನಾಯಕರು ನನ್ನನ್ನು ಸೇವೆಯನ್ನು ಗುರುತಿಸಿದ ಮೇಲೆ ನನಗೆ ಯಾವ ಸ್ಥಾನ ನೀಡಬೇಕೆಂದು ನಿರ್ಧರಿಸುತ್ತಾರೆ.

    ಪ್ರಶ್ನೆ: ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗೋದು ಯಾವಾಗ?
    ನನಗೆ ಈಗ ಪಕ್ಷವನ್ನು ಸಂಘಟಿಸುವ ಜವಾಬ್ದಾರಿ ಇದೆ. ದೇವೇಗೌಡರು ಯಾವ ವಯಸ್ಸಿನಲ್ಲಿ ಆಗಿದ್ದು? ಸಿದ್ದರಾಮಯ್ಯನವರು ಯಾವ ವಯಸ್ಸಿನಲ್ಲಿ ಆಗಿದ್ದು? ನನಗೆ ಈಗ ವಯಸ್ಸು ಕಡಿಮೆ ಇದೆ. ಎಲ್ಲವೂ ಸಮಯ ಬಂದಾಗ ನಿರ್ಧಾರ ಆಗುತ್ತದೆ. ನನಗೆ ಸಿಎಂ ಆಗುವ ವಯಸ್ಸು ಇನ್ನು ಇದೇ ಬಿಡ್ರಿ.

    ಪ್ರಶ್ನೆ: ಎಲ್ಲ ಸಮೀಕ್ಷೆಗಳಲ್ಲಿ ಯಾರಿಗೂ ಬಹುಮತ ಬರಲ್ಲ ಎನ್ನುವ ಫಲಿತಾಂಶ ಬರುತ್ತಿದೆ. ಈ ಕಾರಣಕ್ಕೆ ನೀವು ಕುಮಾರಸ್ವಾಮಿ ಜೊತೆ ಮೃದು ಧೋರಣೆ ತೋರಿಸುತ್ತಿದ್ದೀರಿ?
    ನಾನು ಹಿಂದೆಯೇ ದೇವೇಗೌಡರ ವಿರುದ್ಧ ಕಣಕ್ಕೆ ನಿಂತಿದ್ದೇನೆ. ಮೃದು ಧೋರಣೆ ಇಲ್ಲವೇ ಇಲ್ಲ. ನಿಮ್ಮ ಸಮೀಕ್ಷೆಯಲ್ಲಿ ಬಹುಮತ ಬಾರದೇ ಇರಬಹುದು. ಆದರೆ ನಮ್ಮ ಸಮೀಕ್ಷೆ ಪ್ರಕಾರ ನಮಗೆ 132 ಸ್ಥಾನ ಸಿಗುತ್ತದೆ. ಇದರಲ್ಲಿ ನಂಬಿಕೆ ಇದ್ದು ಮತ್ತೆ ನಾವು ಅಧಿಕಾರಕ್ಕೆ ಬರುತ್ತೇವೆ.

    ಪ್ರಶ್ನೆ: 2013ರಲ್ಲಿ ಬಿಜೆಪಿ ಆಂತರಿಕ ಗಲಾಟೆ, ರೆಸಾರ್ಟ್ ಪಾಲಿಟಿಕ್ಸ್ ನಿಂದ ಜನ ಬದಲಾವಣೆ ಬಯಸಿದ್ರು. ಆದರೆ ಈಗ ಈ ಪರಿಸ್ಥಿತಿ ಇಲ್ಲ?
    ನಮ್ಮ ಸರ್ಕಾರ ಉತ್ತಮ ಕೆಲಸ ಮಾಡಿದೆ. ಯಾರು ಏನು ಬೇಕಾದರೂ ಹೇಳಲಿ ಮತ್ತೆ ನಾವು ಅಧಿಕಾರಕ್ಕೆ ಬರುವುದು ನಿಶ್ಚಿತ.

    ಪ್ರಶ್ನೆ: ನೀವು ಈಗಾಗಲೇ ಹಲವು ರಾಜ್ಯಗಳನ್ನು ಕಳೆದುಕೊಂಡಿದ್ದೀರಿ. ಬಿಜೆಪಿಗೆ ಕೇಂದ್ರದಲ್ಲಿ ಮೋದಿ ಇದ್ದಾರೆ. ಹೀಗಿರುವಾಗಲೂ ನೀವು ಕರ್ನಾಟಕದಲ್ಲಿ ಗೆಲ್ಲುತ್ತಿರಾ?
    ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಗೆಲುವು ಅಷ್ಟು ಸುಲಭವಲ್ಲ, ಆಂಧ್ರದಲ್ಲಿ ಆಗಿಲ್ಲ. ಕರ್ನಾಟಕ ಸಿಗಲ್ಲ. ಜನರಲ್ಲಿ ಹಣ ಎಲ್ಲಿದೆ. ಲಕ್ಷ್ಮಿಯನ್ನು ಫೋಟೋದಲ್ಲಿ ನೋಡಬಾರದು. ಕೈಯಲ್ಲಿ ನೋಡಬೇಕು. ಈ ಬಾರಿ ಜನ ನಮ್ಮ ಕೈಯನ್ನು ಹಿಡಿಯುತ್ತಾರೆ. ಕಾಂಗ್ರೆಸ್ ಒಂದೇ ಜಾತ್ಯಾತೀತ ಪಕ್ಷ. ನಮ್ಮಲ್ಲಿ ಎಲ್ಲರಿಗೂ ಗೌರವವಿದೆ.

    ಪ್ರಶ್ನೆ: ಹಾಗಾದ್ರೆ ನೀವು ಈ ಬಾರಿ ಅಧಿಕಾರ ಏರುವುದು  ನಿಶ್ಚಿತ?
    ಖಂಡಿತ ಜನ ನಮಗೆ ಆಶೀರ್ವಾದ ಮಾಡುತ್ತಾರೆ. ರಾಜ್ಯದ ಜನ ಮುಂದಿನ ಅವಧಿಯಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಎಂಬುವುದು ಅವರೇ ನಿರ್ಧಾರ ಮಾಡುತ್ತಾರೆ. ಸುಳ್ಳು ಭರವಸೆಗಳಿಗೆ ಜನ ಮರಳಾಗುವುದಿಲ್ಲ. ಕರ್ನಾಟಕದಲ್ಲಿ 75% ರಷ್ಟು ಯುವ ಜನರಿದ್ದಾರೆ. ಅವರು ತುಂಬಾ ಬುದ್ಧಿವಂತರು ಅವರೇ ತೀರ್ಮಾನಿಸುತ್ತಾರೆ.

  • ‘ಅನುಭವ’ ರಿ ರಿಲೀಸ್ ಮಾಡಿದ ಕಥೆಯನ್ನು ಹಾಟ್ ಸೀಟ್ ನಲ್ಲಿ ವಿವರಿಸಿದ್ದ ಕಾಶಿನಾಥ್

    ‘ಅನುಭವ’ ರಿ ರಿಲೀಸ್ ಮಾಡಿದ ಕಥೆಯನ್ನು ಹಾಟ್ ಸೀಟ್ ನಲ್ಲಿ ವಿವರಿಸಿದ್ದ ಕಾಶಿನಾಥ್

    ಬೆಂಗಳೂರು: ಚಂದನವನದ ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಇಂದು ವಿಧಿವಶರಾಗಿದ್ದಾರೆ. ಈ ಹಿಂದೆ ನಟ ಕಾಶಿನಾಥ್ ಪಬ್ಲಿಕ್ ಟಿವಿ ‘ಹಾಟ್ ಸೀಟ್’ ಸಂದರ್ಶನದಲ್ಲಿ ಭಾಗಿಯಾಗಿದ್ದು, ಹೆಚ್.ಆರ್.ರಂಗನಾಥ್ ನೇರ ಪ್ರಶ್ನೆಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರವನ್ನು ನೀಡಿದ್ದರು.

    ನಿಮ್ಮ ಆಸೆ ಏನಾಗಿತ್ತು?
    ಉತ್ತರ: ನಾನು ಚಿಕ್ಕವನಿದ್ದಾಗ ವಿಜ್ಞಾನಿ ಆಗಬೇಕೆಂದು ಆಸೆಯಿತ್ತು. ನಮ್ಮ ಚಿಕ್ಕಪ್ಪರನ್ನು ನೋಡಿ ಯಾವಾಗಲೂ ಹೊಸತನ್ನು ಕಂಡುಹಿಡಿಯಬೇಕು ಎಂಬುದು ಮನದಲ್ಲಿತ್ತು. ನನ್ನ ಹೊಸತನವನ್ನು ಸಿನಿಮಾದಲ್ಲಿ ಕಂಡುಹಿಡಿದೆ.

    ಅನುಭವ ಸಿನಿಮಾ ರಿಲೀಸ್ ಆಗಿದ್ದು ಹೇಗೆ?
    ಸತ್ಯ ಘಟನೆ ಆಧಾರಿತ ಸಿನಿಮಾ ಮಾಡಲಾಯಿತು. ಈ ಹಿಂದೆ ಚಿಕ್ಕ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳ ಮದುವೆಯನ್ನು ಮಾಡಲಾಗುತ್ತಿತ್ತು. ಸಿನಿಮಾ ರಿಲೀಸ್ ಮಾಡಬೇಕಾದ್ರೆ ಸೆನ್ಸಾರ್ ತೊಂದರೆ ಆಗಿತ್ತು. ಆ ವೇಳೆ ನಾನು ಮದ್ರಾಸ್ ನಿಂದ ಮರಳಿ ಬಂದು ಇಲ್ಲಿ ಕೆಲವು ಹಿರಿಯನರನ್ನು ಭೇಟಿಯಾದೆ. ಆವತ್ತು 20 ವರ್ಷದ ಮುಂದೆ ಮಾಡಬೇಕಿದ್ದ ಸಿನಿಮಾವನ್ನು ಇವತ್ತು ಯಾಕೆ ಮಾಡಿದ್ದೀಯಾ ಅಂತಾ ಪ್ರಶ್ನೆ ಮಾಡಿದ್ದರು.

    ಅನುಭವ ರೀ ರಿಲೀಸ್ ಆಗಿದ್ದು ಯಾಕೆ?
    ಅನುಭವ ಸಿನಿಮಾ ರಿಲೀಸ್ ಮಾಡಿದ್ದಾಗ ಇದು 20 ವರ್ಷ ಮುಂದೆ ಮಾಡಬೇಕಿತ್ತು ಅಂತಾ ಕೆಲವರು ಹೇಳಿದ್ದರು. ಹಾಗಾಗಿ ಸಿನಿಮಾ ಮತ್ತೊಮ್ಮೆ ರಿಲೀಸ್ ಮಾಡಲಾಯಿತು. ಅನುಭವ ಸಿನಿಮಾ ಸಾರ್ವಕಾಲಿಕ ಸತ್ಯದ ಕಥೆಯನ್ನು ಹೊಂದಿದೆ. ಅನುಭವ ಸಿನಿಮಾವನ್ನು ಇಂದಿನ ಪೀಳಿಗೆಯ ಜನರು ನೋಡಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿಯಲು ಸಿನಿಮಾ ಮತ್ತೊಮ್ಮೆ ಬಿಡುಗಡೆ ಮಾಡಲಾಯಿತು.

    ಡಿಫರೆಂಟ್ ಸಿನಿಮಾದ ಐಡಿಯಾ ಬಂದಿದ್ದು ಹೇಗೆ?
    ಫಸ್ಟ್ ‘ಅಪರೂಪದ ಅತಿಥಿಗಳು’ ಎಂಬ ಕಾಮಿಡಿ ಸಿನಿಮಾ ಮಾಡಿದೆ. ನಂತರ ‘ಅಪರಿಚಿತ’ ಎಂಬ ಹಾರರ್ ಸಿನಿಮಾ. ಎರಡು ವಿಭಿನ್ನ ಸಿನಿಮಾ ಮಾಡಿದ ನಂತರ ಮುಂದೆ ಏನು ಎಂಬ ಪ್ರಶ್ನೆ ಬಂದಾಗ ಒಮ್ಮೆ ಸತ್ಯಜಿತ್ ರೇ ಅವರ ‘ಬಾಲಿಕಾ ಮಧು’ ಸಿನಿಮಾ ನೋಡಿದಾಗ ಅನುಭವ ಚಿತ್ರದ ಐಡಿಯಾ ಬಂತು. ಅಲ್ಲಿ ಶರ್ಮಿಳಾ ಟ್ಯಾಗೋರ್ ಚಿಕ್ಕ ಬಾಲಕಿಯಾಗಿ ನಟಿಸಿದ್ದರು. ಸಿನಿಮಾ ನೋಡುವ ಮುಂಚೆ ಒಂದು ದಿನ ನಮ್ಮ ತಾಯಿ, ದೂರದ ಸಂಬಂಧಿಕರ ಮನೆಯಲ್ಲಿ ಚಿಕ್ಕ ಹುಡುಗಿ ಜೊತೆ ನಡೆದಿರುವ ಘಟನೆ ಬಗ್ಗೆ ಹೇಳಿದ್ದರು. ಆ ಸತ್ಯ ಕಥೆಯನ್ನು ಆಧಾರವಾಗಿಟ್ಟುಕೊಂಡು ಅನುಭವ ಸಿನಿಮಾ ಮಾಡಲಾಗಿತ್ತು.

    ಇಂದಿನ ಸಿನಿಮಾ ಹೇಗಿದೆ?
    ಇಂದು ಸಿನಿಮಾದ ಕಥೆಯನ್ನು ಹೇಳುವ ಶೈಲಿ ಬದಲಾಗಿದೆ. ಅನುಭವ ಚಿತ್ರದ ಕಥೆ ಇಂದಿಗೂ ಚರ್ಚೆಗೆ ಒಳಪಡುತ್ತದೆ. ಇಂದು ಎಕ್ಸ್ ಪೋಸ್ ಅಂತಾ ಹೇಳುವ ಯಾವ ಸೀನ್‍ಗಳು ಅನುಭವ ಸಿನಿಮಾ ಹೊಂದಿಲ್ಲ. ಅಂದು ಸಿನಿಮಾ ನೋಡಿದ ಬಹಳಷ್ಟು ಜನ ತಮ್ಮ ಸುತ್ತಮುತ್ತಲಿನ ಘಟನೆಗಳೊಂದಿಗೆ ಹೋಲಿಕೆ ಮಾಡಿಕೊಂಡಿದ್ದಾರೆ.

    ಎರಡು ದಿನಗಳ ಹಿಂದೆ ಆನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಗಿನ ಜಾವ ಸುಮಾರು 3.30ಕ್ಕೆ ನಿಧನ ಹೊಂದಿದ್ದಾರೆ. ಬಸವನಗುಡಿಯ ಎನ್‍ಆರ್ ಕಾಲೋನಿಯ ಎಪಿಎಸ್ ಕಾಲೇಜ್ ಗ್ರೌಂಡ್‍ನಲ್ಲಿ ಕಾಶಿನಾಥ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕಾಶಿನಾಥ್ ಅವರ ಮಗಳು ದುಬೈನಿಂದ ಇಂದು ಸಂಜೆ ನಾಲ್ಕು ಗಂಟೆಗೆ ಬೆಂಗಳೂರಿಗೆ ಬಂದ ನಂತರ ಅಂತಿಮ ವಿಧಿವಿಧಾನಗಳು ನಡೆಯಲಿವೆ.

    https://www.youtube.com/watch?v=LxyUcIpnDwg