Tag: hot air

  • ಉತ್ತರ ಭಾರತದ ಎಂಟು ರಾಜ್ಯಗಳಲ್ಲಿ ಬಿಸಿ ಬಿರುಗಾಳಿ ಸಹಿತ ಮಳೆ – 41 ಸಾವು

    ಉತ್ತರ ಭಾರತದ ಎಂಟು ರಾಜ್ಯಗಳಲ್ಲಿ ಬಿಸಿ ಬಿರುಗಾಳಿ ಸಹಿತ ಮಳೆ – 41 ಸಾವು

    ನವದೆಹಲಿ: ಮಂಗಳವಾರ ಉತ್ತರ ಭಾರತದ ಎಂಟು ರಾಜ್ಯಗಳಲ್ಲಿ ಹವಾಮಾನ ಬದಲಾಗಿದ್ದು, ಬಿರುಗಾಳಿಗೆ 41 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ನವದೆಹಲಿಯಲ್ಲಿ ಬಿರುಗಾಳಿ ಜೊತೆ ಮಳೆರಾಯ ಅಬ್ಬರಿಸಿದ್ದಾನೆ. ಬುಧವಾರ ಮತ್ತು ಗುರುವಾರ ಸಹ ಇದೇ ರೀತಿ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಮಾಧ್ಯಮಗಳ ಜೊತೆ ಮಾತನಾಡಿರುವ ಭಾರತೀಯ ಹವಾಮಾನ ವಿಭಾಗದ ನಿರ್ದೇಶಕ ಕೆ.ಜೆ.ರಮೇಶ್, ಕಳೆದ ಮೂರ್ನಾಲ್ಕು ದಿನಗಳಿಂದ ಪಾಕಿಸ್ತಾನದಿಂದ ಭಾರತದ ಪಶ್ಚಿಮ ಭಾಗ ಮಾರ್ಗವಾಗಿ ಬಿಸಿ ಗಾಳಿ ಬೀಸುತ್ತಿದೆ. ಇದು ಭಾರತದ ಮಧ್ಯಭಾಗದಿಂದ ಪಶ್ಚಿಮ ಬಂಗಾಳದ ಉತ್ತರ ಭಾಗದವರೆಗೂ ಬಿಸಿ ಗಾಳಿ ಬೀಸುವ ಸಾಧ್ಯತೆಗಳಿವೆ. ಗುಡುಗು, ಸಿಡಿಲು ಸಹಿತ ಬುಧವಾರ ಮತ್ತು ಗುರುವಾರ ಮಳೆ ಆಗಲಿದೆ. ಬಿಸಿಗಾಳಿ ಜೊತೆಯಲ್ಲಿಯೇ ಮಳೆ ಆಗಲಿದೆ ಎಂದು ತಿಳಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಕೂಡಲೇ ರಕ್ಷಣಾ ಕಾರ್ಯಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಅಡಿಯಲ್ಲಿ ಮೃತರ ಕುಟುಂಬಸ್ಥರಿಗೆ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರವನ್ನು ನೀಡಬೇಕೆಂದು ಆದೇಶಿಸಿದ್ದಾರೆ.

    ರಾಜಸ್ಥಾನ 11, ಮಧ್ಯ ಪ್ರದೇಶ 16, ರಾಜಸ್ಥಾನ 7, ಪಂಜಾಬ್ 2, ಹರಿಯಾಣ 01 ಮತ್ತು ಜಾರ್ಖಂಡ್, ಮಹಾರಾಷ್ಟ್ರ, ಉತ್ತರ ಪ್ರದೇಶ, ಹಿಮಾಚಲದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

  • ಇನ್ನೆರಡು ದಿನ ಹೆಚ್ಚಾಗಲಿದೆ ಬಿಸಿಗಾಳಿ ಪ್ರಭಾವ!

    ಇನ್ನೆರಡು ದಿನ ಹೆಚ್ಚಾಗಲಿದೆ ಬಿಸಿಗಾಳಿ ಪ್ರಭಾವ!

    ಬೆಂಗಳೂರು: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಇನ್ನೆರಡು ದಿನಗಳಲ್ಲಿ ಬಿಸಿಗಾಳಿ ಪ್ರಭಾವ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

    ತಮಿಳುನಾಡು, ಕೇರಳ, ಆಂಧ್ರದ ರಾಯಲ್ ಸೀಮಾ ಪ್ರದೇಶಗಳಲ್ಲಿ ಉಷ್ಣಾಂಶ ಹೆಚ್ಚಿದ್ದು ಈ ಭಾಗದಲ್ಲಿ 40 ಡಿಗ್ರಿಗೆ ಏರಿದೆ. ಈ ರಾಜ್ಯಗಳಿಗೆ ಹೊಂದಿ ಕೊಂಡಂತಿರುವ ಕರ್ನಾಟಕದ ಗಡಿ ಜಿಲ್ಲೆಗಳಾದ ಕಲಬುರಗಿ, ಕೋಲಾರ, ಚಾಮರಾಜನಗರ ಭಾಗಗಳಲ್ಲಿ ವಾಡಿಕೆಗಿಂತ 2 ರಿಂದ 3 ಡಿಗ್ರಿ ಉಷ್ಣಾಂಶ ಹೆಚ್ಚಾಗಲಿದೆ ಎಂದು ಎಚ್ಚರಿಸಿದೆ.

    ಬಿಸಿಗಾಳಿ ತಾಪದಿಂದ ಜನರು ತತ್ತರಿಸಿ ಹೋಗಿದ್ದಾರೆ. ಬೇಸಿಗೆ ಆರಂಭದಲ್ಲೇ ಬಿಸಿಲಿನ ಪ್ರಭಾವ ಹೆಚ್ಚಾಗಿದ್ದು, ಉತ್ತರ ಭಾರತದಲ್ಲಿ ಚಳಿಗಾಲ ಹೆಚ್ಚುವರಿ ಅವಧಿಗೆ ವಿಸ್ತರಣೆಗೆ ಕಾರಣವಾಗಿದೆ. ಜಮ್ಮು ಕಾಶ್ಮೀರದ ಹಿಮ ಪರ್ವತ ಶ್ರೇಣಿಗಳಲ್ಲಿ ಹಿಮ ಸುರಿಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಈ ವರ್ಷವೂ ದೇಶದಲ್ಲಿ ಬೀಸುತ್ತೆ ಮಾರಣಾಂತಿಕ ಬಿಸಿಗಾಳಿ! ಉಷ್ಣಾಂಶ ಹೆಚ್ಚಾದ್ರೆ ಎಲ್ಲೆಲ್ಲಿ ಏನಾಗುತ್ತೆ?

    ಈ ವರ್ಷವೂ ದೇಶದಲ್ಲಿ ಬೀಸುತ್ತೆ ಮಾರಣಾಂತಿಕ ಬಿಸಿಗಾಳಿ! ಉಷ್ಣಾಂಶ ಹೆಚ್ಚಾದ್ರೆ ಎಲ್ಲೆಲ್ಲಿ ಏನಾಗುತ್ತೆ?

    ನಾಗ್ಪುರ: 2015ರಲ್ಲಿ ಸಂಭವಿಸಿದಂತೆ ಈ ವರ್ಷ ಕೂಡ ದೇಶದಲ್ಲಿ ಮಾರಣಾಂತಿಕ ಬಿಸಿಗಾಳಿ ಬೀಸುವ ಸಾಧ್ಯತೆಗಳಿವೆ ಎಂದು ಇಂಟರ್  ಗವರ್ನ್ಮೆಂಟಲ್ ಪ್ಯಾನಲ್ ಆನ್ ಕ್ಲೈಮೇಟ್ ಚೇಂಜ್ (ಐಪಿಸಿಸಿ) ಹೇಳಿದೆ.

    ಐಪಿಸಿಸಿ ವರದಿ ಜಾಗತಿಕ ಮಟ್ಟದ ಅತಿ ದೊಡ್ಡ ಅವಲೋಕನ ವರದಿ ಎಂದೇ ಪ್ರಸಿದ್ಧಿ ಪಡೆದಿದ್ದು, ಕೈಗಾರಿಕಾ ಕ್ರಾಂತಿ ಅವಧಿಯ ಹಿಂದಿನ ಮಟ್ಟ (ಪ್ರಿ ಇಂಡಸ್ಟ್ರಿಯಲ್ ಲೆವಲ್) ಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಜಾಸ್ತಿಯಾದರೆ ಭಾರತಕ್ಕೆ ಭಾರೀ ಅಪಾಯವಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

    ಕೋಲ್ಕತಾ ಮತ್ತು ಕರಾಚಿಗೆ ಉಷ್ಣ ಅಲೆಗಳ ಅಪಾಯ ಹೆಚ್ಚಿದೆ. 2015ರಲ್ಲಿ ಸಂಭವಿಸಿದ ಮಾರಣಾಂತಿಕ ಬಿಸಿಗಾಳಿಯಂತೆ ಇಲ್ಲೂ ಮರಣಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ವಿಶೇಷವಾಗಿ ತನ್ನ ವರದಿಯಲ್ಲಿ ಐಪಿಸಿ ಹೇಳಿದೆ.

    ಸೋಮವಾರ ಈ ವರದಿ ಬಿಡುಗಡೆಯಾಗಿದ್ದು, ಡಿಸೆಂಬರ್ ತಿಂಗಳಲ್ಲಿ ಪೋಲೆಂಡ್‍ನಲ್ಲಿ ನಡೆಯಲಿರುವ ಕಟೋವೈಸ್ ಹವಾಮಾನ ಬದಲಾವಣೆ ಸಮಾವೇಶದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯಲಿದೆ. ವಿಶ್ವದಲ್ಲೇ ಅತಿ ಹೆಚ್ಚು ಇಂಗಾಲ ಹೊರಸೂಸುವ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತ ಈ ಜಾಗತಿಕ ಸಮ್ಮೇಳನದಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.

    2015ರಲ್ಲಿ ದೇಶವನ್ನು ಬಾಧಿಸಿದ್ದ ಬಿಸಿಗಾಳಿ ಕನಿಷ್ಠ 2,500 ಜನರನ್ನು ಬಲಿ ತೆಗೆದುಕೊಡಿತ್ತು. ಒಂದು ವೇಳೆ ಇದೇ ರೀತಿಯಲ್ಲಿ ಉಷ್ಣಾಂಶ ಹೆಚ್ಚಾದರೆ 2030- 2052ರೊಳಗೆ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್ ತಲುಪುವ ಅಪಾಯವಿದೆ ಎಂದು ಹೇಳಿದೆ. 1.5 ಡಿಗ್ರಿ ಹೆಚ್ಚಾದರೆ ಮೆಕ್ಕೆಜೋಳ, ಭತ್ತ, ಗೋಧಿ ಇನ್ನಿತರ ಆಹಾರ ಬೆಳೆಗಳ ಉತ್ಪಾದನೆ ಕುಂಠಿತವಾಗುತ್ತದೆ.

    ಸಾವಿರಾರು ವಿಜ್ಞಾನಿಗಳು ಕಳೆದ ಮೂರು ವರ್ಷಗಳಿಂದ ಅಧ್ಯಯನ ನಡೆಸಿ ಈ ವರದಿಯನ್ನು ತಯಾರಿಸಿದ್ದು ಈ ತಂಡದಲ್ಲಿ ಕೆಲಸ ಮಾಡಿದ್ದ ಜೊಯಾಶ್ರೀ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ ಜಾಗತಿಕ ತಾಪಮಾನದ ಬಿಸಿ ದೆಹಲಿ, ಮುಂಬೈ, ಕೋಲ್ಕತ್ತಾ, ಬೆಂಗಳೂರಿಗೆ ತಟ್ಟಿದೆ. ಹವಾಮಾನ ಬದಲಾವಣೆ ಭಾರತಕ್ಕೆ ತಟ್ಟಿದ್ದು, ಕೇದರನಾಥ, ಶ್ರೀನಗರ, ಚೆನ್ನೈ, ಇತ್ತೀಚಿನ ಕೇರಳವೇ ಇದಕ್ಕೆ ಉದಾಹರಣೆ. ಈಗಾಗಲೇ ಹಲವು ಕಡೆ ಬರ ಬಂದಿದೆ. ಈಗಲೇ ನಾವು ಎಚ್ಚೆತ್ತುಕೊಳ್ಳದೇ ಇದ್ದರೆ ಭವಿಷ್ಯದಲ್ಲಿ ಭಾರೀ ಅಪಾಯವಿದೆ ಎಂದು ಹೇಳಿದ್ದಾರೆ.

    ಕಳೆದ ಹಣಕಾಸು ವರ್ಷದಲ್ಲಿ ಉಷ್ಣ ವಿದ್ಯುತ್ ಘಟಕದಿಂದ ಭಾರತ ವಾರ್ಷಿಕವಾಗಿ 929 ದಶಲಕ್ಷ ಟನ್ ಇಂಗಾಲದ ಡೈ ಆಕ್ಸೈಡ್ ಹೊರ ಬಿಟ್ಟಿದೆ. ದೇಶದ ಒಟ್ಟು ವಿದ್ಯುತ್ ಉತ್ಪಾದನೆಯ ಪೈಕಿ 79% ವಿದ್ಯುತ್ ಉಷ್ಣ ವಿದ್ಯುತ್ ಸ್ಥಾವರಿಂದಲೇ ಉತ್ಪಾದನೆಯಾಗುತ್ತದೆ.

    ಉಷ್ಣಾಂಶ ಹೆಚ್ಚಾದ್ರೆ ಏನಾಗುತ್ತೆ?
    ಜಾಗತಿಕ ತಾಪಮಾನ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾದ್ರೆ ಭಾರತದಲ್ಲಿ ಉಷ್ಣಾಂಶ 4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುತ್ತದೆ. ಜಾಗತಿಕ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್‍ನಷ್ಟು ಏರಿದ್ರೆ, ಭಾರತದಲ್ಲಿ ಉಷ್ಣಾಂಶ 3 ಡಿಗ್ರಿ ಸೆಲ್ಸಿಯಸ್‍ನ್ನಷ್ಟು ಜಾಸ್ತಿ ಆಗಲಿದೆ. ಜಾಗತಿಕ ತಾಪಮಾನ 2 ಡಿಗ್ರಿ ಸೆಲ್ಸಿಯಸ್‍ನ್ನಷ್ಟು ಹೆಚ್ಚಾದ್ರೆ ಬೇಸಿಗೆಯಲ್ಲಿ ಆರ್ಕ್ಟಿಕ್ ಮಹಾಸಾಗರದಲ್ಲಿ ಮಂಜುಗಡ್ಡೆ ಕರಗುತ್ತದೆ. ಅಷ್ಟೇ ಅಲ್ಲದೇ ಹವಳ ದ್ವೀಪಗಳೇ ಇರುವುದಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv