Tag: Hosapete-Kottur Railway

  • ದೇವೇಗೌಡ್ರು ಅಡಿಗಲ್ಲು ಇಟ್ರು, ಆದ್ರೆ ಹಣ ನೀಡಲು ಮೋದಿ ಬರಬೇಕಾಯ್ತು: ಸುರೇಶ್ ಅಂಗಡಿ

    ದೇವೇಗೌಡ್ರು ಅಡಿಗಲ್ಲು ಇಟ್ರು, ಆದ್ರೆ ಹಣ ನೀಡಲು ಮೋದಿ ಬರಬೇಕಾಯ್ತು: ಸುರೇಶ್ ಅಂಗಡಿ

    ಬಳ್ಳಾರಿ: ಈ ಹಿಂದೆ ಹಲವಾರು ರೈಲ್ವೇ ಯೋಜನೆಗೆ ಮಾಜಿ ಪ್ರಧಾನಿ ದೇವೇಗೌಡರು ಅಡಿಗಲ್ಲು ಹಾಕಿದ್ದರು. ಆದರೆ ಅದಕ್ಕೆ ಹಣ ಕೊಡಲಿಲ್ಲ. ಈ ಎಲ್ಲಾ ಯೋಜನೆಗೆ ಹಣ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರೇ ಬರಬೇಕಾಯಿತು ಎಂದು ಕೇಂದ್ರದ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.

    ಹೊಸಪೇಟೆ-ಕೊಟ್ಟೂರು ನೂತನ ರೈಲು ಮಾರ್ಗಕ್ಕೆ ಚಾಲನೆ ನೀಡಿದ ಬಳಿಕ ವೇದಿಕೆ ಮೇಲೆ ಮಾತನಾಡಿದ ಸಚಿವರು, ನಾವು ಯಾವುದೇ ಹೊಸ ರೈಲನ್ನು ಘೋಷಣೆ ಮಾಡುತ್ತಿಲ್ಲ. ರಾಜ್ಯಕ್ಕೆ ಈ ಹಿಂದೆ ಮಂಜೂರಾಗಿದ್ದ ರೈಲುಗಳನ್ನು ತರುವ ವ್ಯವಸ್ಥೆ ಮಾಡುತ್ತಿದ್ದೇವೆ. ಈ ಯೋಜನೆಗೆ ರಾಯರೆಡ್ಡಿ ಹಾಗೂ ದೇವೇಗೌಡರು ಅಡಿಗಲ್ಲು ಇಟ್ಟಿದ್ದರು ಎಂದು ಎಂದು ವೇದಿಕೆ ಮೇಲಿರುವ ಗಣ್ಯರು ಹೇಳುತ್ತಿದ್ದರು. ಅವರು ಅಡಿಗಲ್ಲು ಇಡುವುದನ್ನು ಮಾಡಿದರು. ಆದರೆ ಹಣ ಮಂಜೂರು ಮಾಡಿರಲಿಲ್ಲ. ಇದಕ್ಕೆ ಹಣ ನೀಡಲು ಮೋದಿ ಅವರೇ ಬರಬೇಕಾಯ್ತು. ಈಗ ಹಣವಿದೆ ಆದ್ದರಿಂದ ಯೋಜನೆಗೆ ಬೇಕಾದ ಜಮೀನು ನೀಡಿದರೆ ತ್ವರಿತಗತಿಯಲ್ಲಿ ನಾವು ಕೆಲಸ ಮಾಡಿ ಕೊಡುತ್ತೇವೆ ಎಂದು ಭರವಸೆ ಕೊಟ್ಟರು.

    ಪ್ರಧಾನಿ ನರೇಂದ್ರ ಮೋದಿ ಜಗತ್ತಿನೊಂದಿಗೆ ದೇಶವನ್ನು ಜೋಡಣೆ ಮಾಡಿದ್ದಾರೆ. ಯೋಗ ಕಾರ್ಯಕ್ರಮ ಮಾಡುವ ಮೂಲಕ 197 ರಾಷ್ಟ್ರಗಳನ್ನು ಒಂದು ಮಾಡಿ, ಜಗತ್ತು ಜೋಡಣೆ ಮಾಡಿದರು. ಹಾಗೆಯೇ ರಾಜ್ಯಕ್ಕೆ ಹೆಚ್ಚಿನ ರೈಲು ಸೇವೆ ನೀಡುವ ಮೂಲಕ ರಾಜ್ಯವನ್ನು ಜೋಡಣೆ ಮಾಡಿದ್ದಾರೆ. ಹೊಸಪೇಟೆ-ಕೊಟ್ಟೂರು ರೈಲು ಮಾರ್ಗ ಈ ಜನರ ಹೋರಾಟದ ಪ್ರತೀಕ ಎಂದು ಮೋದಿ ಕಾರ್ಯವೈಖರಿಯನ್ನು ಹಾಡಿ ಹೊಗಳಿದರು.

    ಒಂದು ವರ್ಷದಲ್ಲಿ ರಾಜ್ಯಕ್ಕೆ ಹತ್ತು ಹೊಸ ರೈಲು ಕೊಡಲಾಗಿದೆ. ಈ ಹಿಂದೆ ಮೂಗು ಮುಚ್ಚಿಕೊಂಡು ರೈಲು ನಿಲ್ದಾಣಕ್ಕೆ ಬರಬೇಕಿತ್ತು. ಆದರೆ ಈಗ ರೈಲು ನಿಲ್ದಾಣದಲ್ಲಿ ಯುವಕರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕೆ ಇಲಾಖೆಯ ಸ್ವಚ್ಛತಾ ಸಿಬ್ಬಂದಿ ಕಾರಣ. ಅವರು ಶ್ರಮಪಟ್ಟು ಕೆಲಸ ಮಾಡಿ ರೈಲ್ವೇ ನಿಲ್ದಾಣಗಳನ್ನು ಸ್ವಚ್ಛವಾಗಿ ಇಡುತ್ತಿದ್ದಾರೆ. ಇದಕ್ಕೆ ನಮ್ಮ ಪ್ರಧಾನಿ ಅವರ ಸ್ವಚ್ಛ ಭಾರತ ಅಭಿಯಾನ ಪ್ರೇರಣೆ ಎಂದು ತಿಳಿಸಿದರು.