Tag: hosaguddadahalli

  • ಹೊಸಗುಡ್ಡದಹಳ್ಳಿ ಅಗ್ನಿ ದುರಂತ ಪ್ರಕರಣ- ಪೊಲೀಸರಿಗೆ ಖಡಕ್ ಸೂಚನೆ ಕೊಟ್ಟ ಕಮಿಷನರ್

    ಹೊಸಗುಡ್ಡದಹಳ್ಳಿ ಅಗ್ನಿ ದುರಂತ ಪ್ರಕರಣ- ಪೊಲೀಸರಿಗೆ ಖಡಕ್ ಸೂಚನೆ ಕೊಟ್ಟ ಕಮಿಷನರ್

    – ಅಗ್ನಿ ಅವಘಡ ತಡೆಯಲು ಪೊಲೀಸರಿಂದ ಕ್ರಮ

    ಬೆಂಗಳೂರು: ಇತ್ತೀಚೆಗೆ ಹೊಸಗುಡ್ಡದಹಳ್ಳಿಯಲ್ಲಿ ಸಂಭವಿಸಿದ ಅಗ್ನಿ ದುರಂತದಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು, ಇದರಿಂದಾಗಿ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಹೀಗಾಗಿ ಕೆಮಿಕಲ್ ಸ್ಟೋರೇಜ್‍ಗಳ ಮೇಲೆ ಹದ್ದಿನ ಕಣ್ಣಿಡಲು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಸವರು ಸಿಬ್ಬಂದಿಗೆ ತಿಳಿಸಿದ್ದಾರೆ.

    ಹೊಸಗುಡ್ಡದಹಳ್ಳಿ ಅಗ್ನಿ ದುರಂತದ ಬಳಿಕ ಪೊಲೀಸರು ಫುಲ್ ಅಲರ್ಟ್ ಆಗಿದ್ದು, ನಗರದಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲು ಯೋಜನೆ ರೂಪಿಸಿದ್ದಾರೆ. ನಗರದಲ್ಲಿನ ಬೀಟ್ ಪೊಲೀಸರಿಗೆ ಮತ್ತೊಂದು ಜವಾಬ್ದಾರಿ ವಹಿಸಿದ್ದು, ತಮ್ಮ ಬೀಟ್ ವ್ಯಾಪ್ತಿಯಲ್ಲಿನ ಕೆಮಿಕಲ್ ಸ್ಟೋರೇಜ್‍ಗಳನ್ನು ಪರಿಶೀಲಿಸುವಂತೆ ಸೂಚಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರು ಈ ಕುರಿತು ಮೆಮೋ ಹೊರಡಿಸಿದ್ದು, ಎಲ್ಲ ಪೊಲೀಸ್ ಠಾಣೆಗಳಿಗೆ ಮೆಮೋ ಕಳುಹಿಸಿದ್ದಾರೆ.

    ತಮ್ಮ ಬೀಟ್ ವ್ಯಾಪ್ತಿಯ ಕೆಮಿಕಲ್ ಸ್ಟೋರೆಜ್‍ಗಳನ್ನು ಪರಿಶೀಲಿಸಲು ಸೂಚನೆ ನೀಡಿದ್ದಾರೆ. ಸ್ಟೋರೇಜ್‍ಗಳ ಸ್ಥಿತಿಗತಿ ಬಗ್ಗೆ ಇನ್ಸ್‍ಪೆಕ್ಟರ್ ಗಮನಕ್ಕೆ ತರಲು ಬೀಟ್ ಪಿಸಿಗಳಿಗೆ ಸೂಚಿಸಿದ್ದಾರೆ. ನಗರದ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಮ ಕೆಮಿಕಲ್ ಸ್ಟೋರೇಜ್‍ಗಳನ್ನು ಪಟ್ಟಿ ಮಾಡುವಂತೆ ತಿಳಿಸಿದ್ದಾರೆ. ಸಂಗ್ರಹವಾದ ಮಾಹಿತಿಯನ್ನು ಅಗ್ನಿಶಾಮಕ ಇಲಾಖೆಯೊಂದಿಗೆ ಹಂಚಿಕೊಳ್ಳುವಂತೆ ಹಾಗೂ ಮುಂದೆ ಈ ರೀತಿ ಅವಘಡ ಸಂಭವಿಸದಂತೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಜಂಟಿ ರೇಡ್ ನಡೆಸಲು ಯೋಜನೆ ರೂಪಿಸಿದ್ದಾರೆ. ಅಲ್ಲದೆ ವಸತಿ ಪ್ರದೇಶದಲ್ಲಿನ ಕೆಮಿಕಲ್ ಗೋದಾಮು ತಡೆಯಲು ಕ್ರಮ ಕೈಗೊಳ್ಳಲಾಗಿದೆ.

    ಸಾರ್ವಜನಿಕರಿಗೂ ಕಮಿಷನರ್ ಮನವಿ ಮಾಡಿದ್ದು, ನಿಮ್ಮ ಸುತ್ತಮುತ್ತ ಅನುಮಾನಾಸ್ಪದ ಗೋದಾಮು ಇದ್ದಲ್ಲಿ ಬೀಟ್ ಪೊಲೀಸರಿಗೆ ತಿಳಿಸಿ. ಬೆಂಕಿ ಅವಘಡ ತಡೆಯಲು ಸಹಕರಿಸಿ ಎಂದು ಕಮಲ್ ಪಂಥ್ ಮನವಿ ಮಾಡಿದ್ದಾರೆ.

  • ಹೊಸಗುಡ್ಡದಹಳ್ಳಿ ಕೆಮಿಕಲ್ ಫ್ಯಾಕ್ಟರಿ ಅಗ್ನಿ ಅವಘಡ ಕೇಸ್‍ನಲ್ಲಿ ಮತ್ತೊಂದು ಎಫ್‍ಐಆರ್

    ಹೊಸಗುಡ್ಡದಹಳ್ಳಿ ಕೆಮಿಕಲ್ ಫ್ಯಾಕ್ಟರಿ ಅಗ್ನಿ ಅವಘಡ ಕೇಸ್‍ನಲ್ಲಿ ಮತ್ತೊಂದು ಎಫ್‍ಐಆರ್

    ಬೆಂಗಳೂರು: ನಗರದ ಹೊಸಗುಡ್ಡದಹಳ್ಳಿ ಬೆಂಕಿ ಅವಘಡ ಘಟನೆಗೆ ಸಂಬಂಧಿಸಿದಂತೆ ಸದ್ಯ ಕೆಮಿಕಲ್ ಗೋದಾಮು ನಡೆಸುತ್ತಿದ್ದ ಕಂಪನಿಯ ಮಾಲೀಕರ ವಿರುದ್ಧ 2ನೇ ಎಫ್‍ಐಆರ್ ದಾಖಲಾಗಿದೆ.

    ಶಂಭುಲಿಂಗ ಎಂಬುವರು ರೇಖಾ ಕೆಮಿಕಲ್ಸ್ ವಿರುದ್ಧ ಸ್ಫೋಟಕ ನಿಯಂತ್ರಣ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 427, 338, 285 ಅಡಿ ಎಫ್‍ಐಆರ್ ದಾಖಲು ಮಾಡಲಾಗಿದೆ. ಟೀ ಕುಡಿದು ಬರುವಷ್ಟರಲ್ಲಿ ತಮ್ಮ ಲಗೇಜ್ ಟೆಂಪೋಗೆ ಬೆಂಕಿ ತಾಗಿತ್ತು. ಇದೇ ರೀತಿ ಸ್ಥಳದಲ್ಲಿದ್ದ ಉಳಿದ ಐದು ಕಾರು ಹಾಗೂ ಎರಡು ಬೈಕ್‍ಗಳು ಸಹ ಬೆಂಕಿಗಾಹುತಿ ಎಂದು ಮಾಹಿತಿ ನೀಡಿದ್ದಾರೆ.

    ರೇಖಾ ಕೆಮಿಕಲ್ಸ್ ಗೋದಾಮಿನಲ್ಲಿ ಕೆಲಸದ ವೇಳೆ ಬೆಂಕಿ ಅವಘಡ ಸಂಭವಿಸಿತ್ತು. ಮಾಲೀಕರ ಎಡವಟ್ಟಿನಿಂದಲೇ ಇಂತಹ ಅವಘಡ ಸಂಭವಿಸಿದೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಶಂಭುಲಿಂಗ ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ. ಘಟನೆಯಲ್ಲಿ ಬರೊಬ್ಬರಿ 40 ಲಕ್ಷಕ್ಕೂ ಅಧಿಕ ಮೌಲ್ಯದ ವಾಹನಗಳು ಭಸ್ಮವಾಗಿದ್ದು, ವಿವಿಧ ಮಾದರಿಯ ಎಂಟು ವಾಹನಗಳು ಬೆಂಕಿಗಾಹುತಿಯಾಗಿದ್ದವು.

    ಘಟನೆ ಸಂಬಂಧ ಮೊದಲು ಅಯಾಜ್ ಪಾಷ ಎಂಬುವವರು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸದ್ಯ ರೇಖಾ ಕೆಮಿಕಲ್ಸ್ ಕಂಪನಿ ಮಾಲೀಕರ ವಿರುದ್ಧ ಎರಡನೇ ಪ್ರಕರಣ ದಾಖಲಾಗಿದ್ದು, ಇದರ ಜೊತೆಗೆ ಮತ್ತಷ್ಟು ದೂರುಗಳ ಕಂಪನಿ ವಿರುದ್ಧ ದಾಖಲಾಗುವ ಸಾಧ್ಯತೆ. ಮಂಗಳವಾರ ನಡೆದಿದ್ದ ಭಾರೀ ಪ್ರಮಾಣದ ಬೆಂಕಿ ಅವಘಡದಲ್ಲಿ ಗೋಡೌನ್ ಸುತ್ತಮುತ್ತಲು ಇದ್ದ ಮನೆಗಳು ಕೂಡ ಸುಟ್ಟು ಕರಕಲಾಗಿದ್ದವು.

  • ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ- ಹಣ, ಚಿನ್ನಾಭರಣ ಬೆಂಕಿಗೆ ಕರಕಲು

    ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ- ಹಣ, ಚಿನ್ನಾಭರಣ ಬೆಂಕಿಗೆ ಕರಕಲು

    – ಮನೆಯಲ್ಲಿದ್ದ ಪಾತ್ರೆಗಳೇ ಕರಗಿ ಹೋಗಿದೆ
    – ಅನಾಹುತದಲ್ಲಿ ಜೀವ ಉಳಿದಿದ್ದೇ ಹೆಚ್ಚು

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಂಡುಕೇಳರಿಯದ ಬೆಂಕಿ ಅನಾಹುತ ಸಂಭವಿಸಿದ್ದು, ನಿನ್ನೆ ನಗರದ ಹೊಸಗುಡ್ಡದಹಳ್ಳಿಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸಂಭವಿಸಿದ್ದ ಅವಘಡದಲ್ಲಿ 19 ಗಂಟೆಯಾದರೂ ಇನ್ನೂ ಬೆಂಕಿ ನಂದಿಲ್ಲ. ಇದೆಲ್ಲದರ ನಡುವೆ ಘಟನೆಯಲ್ಲಿ ಅಕ್ಕ-ಪಕ್ಕದ ಮನೆಗಳು, ವಾಹನಗಳು ಸುಟ್ಟು ಕರಕಲಾಗಿದ್ದು, ಧಗಧಗಿಸಿದ ಬೆಂಕಿಯಿಂದ ಸುಮಾರು 3 ಕೋಟಿ ರೂ.ವರೆಗೂ ನಷ್ಟ ಸಂಭವಿಸಿದೆ ಎಂಬ ಮಾಹಿತಿ ಲಭಿಸಿದೆ.

    ಹೊಸಗುಡ್ಡದಹಳ್ಳಿಯಲ್ಲಿಯ ರೇಖಾ ಇಂಡಸ್ಟ್ರಿ ಕೆಮಿಕಲ್ ಫ್ಯಾಕ್ಟರಿಗೆ ಅನುಮತಿಯೇ ಇರಲಿಲ್ಲ ಎನ್ನಲಾಗಿದ್ದು, ಬೊಮ್ಮಸಂದ್ರದಲ್ಲಿ ಫ್ಯಾಕ್ಟರಿಗೆ ಅನುಮತಿ ಪಡೆದಿದ್ದ ಮಾಲೀಕರು ಹೊಸಗುಡ್ಡದಹಳ್ಳಿಲ್ಲೂ ಫ್ಯಾಕ್ಟರಿ ಆರಂಭಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ನಿನ್ನೆಯಿಂದ ಸುಮಾರು 50ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಕಾರ್ಯನಿರ್ವಹಿಸಿದ್ದು, ಈಗಲೂ ಫ್ಯಾಕ್ಟರಿಯ ಹಲವು ಕಡೆ ಬೆಂಕಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ. ಫ್ಯಾಕ್ಟರಿಯ ಹಿಂಭಾಗ ಹಾಗೂ ಸುತ್ತಮುತ್ತ ಇದ್ದ ಹತ್ತಾರು ಮನೆಗಳು, ವಾಹನಗಳು ಅವಘಡದಲ್ಲಿ ಸುಟ್ಟು ಭಸ್ಮವಾಗಿದೆ.

    ಘಟನೆ ಕುರಿತಂತೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಸ್ಥಳೀಯರು, ನಿನ್ನೆಯಿಂದ ಬೆಂಕಿ ನಂದಿಸುವ ಕಾರ್ಯವನ್ನ ಮಾಡುತ್ತಿದ್ದಾರೆ. ಬೆಂಕಿ ಹತ್ತಿಕೊಂಡ ತಕ್ಷಣವೇ ಅಕ್ಕಪಕ್ಕದ ಮನೆಯವರನ್ನು ರಕ್ಷಣೆ ಮಾಡುವ ಪ್ರಯತ್ನ ಮಾಡಿದ್ದೆವು. ಇಲ್ಲಿ ಒಂದೇ ಮುಖ್ಯ ರಸ್ತೆ ಇಂದ ಕಾರಣ ಅಗ್ನಿಶಾಮಕ ವಾಹನಗಳು ಬೇಗ ಬರಲು ಆಗಲಿಲ್ಲ. ಆದರೂ ಅವರು ಹೆಚ್ಚು ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಫ್ಯಾಕ್ಟರಿ ಪಕ್ಕದ 2 ಮನೆಗಳು ಬೆಂಕಿಗೆ ಸಂಪೂರ್ಣ ಆಹುತಿಯಾಗಿದೆ. ಅನಾಹುತದಲ್ಲಿ ಜೀವ ಉಳಿದಿದ್ದೇ ಹೆಚ್ಚು ಎಂದು ತಿಳಿಸಿದ್ದಾರೆ.

    ಸ್ಥಳೀಯ ವ್ಯಕ್ತಿ ಪ್ರಸನ್ನ ನೀಡಿರುವ ಮಾಹಿತಿ ಅನ್ವಯ, ಘಟನೆ ನಡೆದ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ಯಾರು ಇರಲಿಲ್ಲ. ಸ್ಥಳೀಯ ವ್ಯಕ್ತಿಗಳು ನೀಡಿದ ಮಾಹಿತಿ ಮೇರೆಗೆ ನಾನು ಮನೆ ಬಳಿ ಬಂದೆ. ಆದಾಗಲೇ ಮನೆಗೆ ಬೆಂಕಿ ಹೊತ್ತಿಕೊಂಡಿತ್ತು. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದೆ. ಕಳೆದ 5 ವರ್ಷದ ಹಿಂದೆ ಮನೆ ನಿರ್ಮಾಣ ಮಾಡಿದ್ದೇವು. ಮನೆಯಲ್ಲಿ ಇಟ್ಟಿದ್ದ 80 ಸಾವಿರ ನಗದು, ಚಿನ್ನಾಭರಣ ಬೆಂಕಿಯಲ್ಲಿ ಸುಟ್ಟು ಹೋಗಿದೆ. ಮನೆಯಲ್ಲಿದ್ದ ಅಲ್ಯೂಮಿನಿಯಂ ಪಾತ್ರೆಗಳೇ ಬೆಂಕಿಯ ತೀವ್ರತೆಗೆ ಕರಗಿ ಹೋಗಿದೆ ಎಂದರೇ ತೀವ್ರತೆ ಎಷ್ಟಿತ್ತು ಎಂಬ ಅಂದಾಜು ಬರುತ್ತದೆ. ಮನೆಯ ಗೋಡೆಗಳಿಗೆ ಮಾಡಿದ್ದ ಸಿಮೆಂಟ್ ಸಹ ಕಿತ್ತು ಬಂದಿದ್ದು, ಗೋಡೆಗಳು ಬಿರುಕು ಬಿಟ್ಟಿದೆ. ನಮ್ಮ ಮನೆ ಮಾತ್ರವಲ್ಲದೇ ಸುಮಾರು 7 ರಿಂದ 8 ಮನೆಗಳಿಗೆ ನಷ್ಟವಾಗಿದೆ. ಈ ಬಗ್ಗೆ ಪೊಲೀಸ್ ದೂರು ದಾಖಲಿಸಲು ಮುಂದಾಗುತ್ತಿದ್ದೇವೆ ಎಂದು ತಿಳಿಸಿದರು.

  • ಕೆಮಿಕಲ್ ಫ್ಯಾಕ್ಟರಿಯಲ್ಲಿ 1 ಬ್ಯಾರಲ್ ಸ್ಯಾನಿಟೈಸರ್ ಬಿದ್ದು ಅನಾಹುತ – ಸುಮಾರು 3 ಕೋಟಿ ನಷ್ಟ

    ಕೆಮಿಕಲ್ ಫ್ಯಾಕ್ಟರಿಯಲ್ಲಿ 1 ಬ್ಯಾರಲ್ ಸ್ಯಾನಿಟೈಸರ್ ಬಿದ್ದು ಅನಾಹುತ – ಸುಮಾರು 3 ಕೋಟಿ ನಷ್ಟ

    ಬೆಂಗಳೂರು: ಸಿಲಿಕಾನ್ ಸಿಟಿಯ ಹೊಸಗುಡ್ಡದಹಳ್ಳಿಯಲ್ಲಿ ಬೆಂಕಿ ದುರಂತಕ್ಕೆ ಸಂಬಂಧಪಟ್ಟಂತೆ 1 ಬ್ಯಾರಲ್ ಸ್ಯಾನಿಟೈಸರ್ ಬಿದ್ದು ಅನಾಹುತ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಘಟನೆ ನಡೆದು 20 ಗಂಟೆ ಕಳೆದರೂ ಇನ್ನೂ ಬೆಂಕಿ ಜ್ವಾಲೆ ಆರಿಲ್ಲ. ಕೆಮಿಕಲ್ ಫ್ಯಾಕ್ಟರಿಯಿಂದ ಬೆಂಕಿಯ ಜ್ವಾಲೆ ಬಾನೆತ್ತರಕ್ಕೆ ಚಿಮ್ಮುತ್ತಿದೆ. ಅಕ್ಕ-ಪಕ್ಕದ ಕಟ್ಟಡಗಳಿಗೆ ಬೆಂಕಿ ಆವರಿಸುವ ಆತಂಕ ಸ್ಥಳೀಯರಿಗೆ ಉಂಟಾಗಿದೆ. ಗೋಡೌನ್ ಅಕ್ಕಪಕ್ಕದ ಹತ್ತಾರು ಮನೆಗಳ ನಿವಾಸಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಶಿಫ್ಟ್ ಮಾಡಲಾಗಿದೆ. ಇದನ್ನೂ ಓದಿ: ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ – ರಾತ್ರಿಯಿಡೀ ಕಾರ್ಯಾಚರಣೆ ನಡೆದ್ರೂ ಆರದ ಜ್ವಾಲೆ

    ನಿನ್ನೆ ಮಧ್ಯಾಹ್ನ ಅವಘಡ ಸಂಭವಿಸುತ್ತಿದ್ದಂತೆಯೇ ಅಗ್ನಿಶಾಮಕದ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದರು. ರಾತ್ರಿಯಿಡೀ ಕಾರ್ಯಾಚರಣೆ ನಡೆದರೂ ಜ್ವಾಲೆ ಮಾತ್ರ ಆರಿಲ್ಲ. ಈ ಮೂಲಕ ಬೆಂಕಿ ಇನ್ನೂ ಸಂಪೂರ್ಣವಾಗಿ ತಹಬದಿಗೆ ಬಂದಿಲ್ಲ. ಈಗಲೂ ನೂರಾರು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

    ಬೆಂಕಿ ದುರಂತದಲ್ಲಿ ಹತ್ತಾರು ವಾಹನ ಧಗಧಗನೆ ಹೊತ್ತಿ ಉರಿದಿವೆ. 1 ಬ್ಯಾರಲ್ ಸ್ಯಾನಿಟೈಸರ್ ಬಿದ್ದು ಬೆಂಕಿ ಅನಾಹುತ ಸಂಭವಿಸಿದ ಪರಿಣಾಮ 7 ವಾಹನಗಳು, 2 ವಿದ್ಯುತ್ ಕಂಬಗಳು ಸುಟ್ಟು ಭಸ್ಮವಾಗಿವೆ. ಈ ಬೆಂಕಿ ಅವಘಡದಲ್ಲಿ 2 ರಿಂದ 3 ಕೋಟಿ ನಷ್ಟ ಉಂಟಾಗಿದೆ ಎಂದು ಹೇಳಲಾಗುತ್ತಿದೆ.

  • ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ – ರಾತ್ರಿಯಿಡೀ ಕಾರ್ಯಾಚರಣೆ ನಡೆದ್ರೂ ಆರದ ಜ್ವಾಲೆ

    ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ – ರಾತ್ರಿಯಿಡೀ ಕಾರ್ಯಾಚರಣೆ ನಡೆದ್ರೂ ಆರದ ಜ್ವಾಲೆ

    – ವಾಹನಗಳು ಧಗಧಗ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿರುವ ಹೊಸಗುಡ್ಡದಹಳ್ಳಿಯಲ್ಲಿರುವ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಅವಘಡದಲ್ಲಿ ಇನ್ನೂ ಬೆಂಕಿ ಸಂಪೂರ್ಣವಾಗಿ ನಂದಿಲ್ಲ. ಕಳೆದ 20 ಗಂಟೆಯಿಂದ ಬೆಂಕಿ ಧಗ ಧಗನೇ ಉರಿಯುತ್ತಿದೆ.

    ಸ್ಥಳಕ್ಕೆ ನೂರಾರು ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಕಾರ್ಯಾಚರಣೆ ನಡೆಯುತ್ತಿದೆ. ರಾತ್ರಿಯಿಡೀ ಬೆಂಕಿ ನಂದಿಸೋ ಕಾರ್ಯದಲ್ಲಿ ಸಿಬ್ಬಂದಿ ನಿರತರಾಗಿದ್ದರು. ಬೆಂಕಿ ಅವಘಡದಲ್ಲಿ 2 ರಿಂದ 3 ಕೋಟಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. 7 ವಾಹನಗಳು, 2 ವಿದ್ಯುತ್ ಕಂಬ ನಾಶವಾಗಿವೆ. ಘಟನೆ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಜಾಯ್ ಪಾಷ ಎಂಬವರ ದೂರಿನ ಮೇಲೆ ಈ ಕೇಸ್ ದಾಖಲಾಗಿದೆ.

    ನಿನ್ನೆ ಮಧ್ಯಾಹ್ನ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೃಹತ್ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಎಷ್ಟೇ ಪ್ರಯತ್ನಿಸಿದರೂ ಬೆಂಕಿ ನಿಯಂತ್ರಣಕ್ಕೆ ಬರುತ್ತಿರಲಿಲ್ಲ. ಬೃಹತ್ ಪ್ರಮಾಣದಲ್ಲಿ ವ್ಯಾಪಿಸಿರುವುದರಿಂದ ಅಕ್ಕ ಪಕ್ಕದ ಮನೆಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಅಕ್ಕಪಕ್ಕದ ಮನೆಯವರನ್ನು ಸ್ಥಳಾಂತರಿಸಲು ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸಪಟ್ಟಿದ್ದರು. ಇಡೀ ರಸ್ತೆಯಲ್ಲಿ ಎಲ್ಲಿ ನೋಡಿದರೂ ಬೆಂಕಿಮಯವಾಗಿದ್ದು, ಸಂಪೂರ್ಣ ಹೊಗೆ ಆವರಿಸಿಕೊಂಡಿತ್ತು. ಫ್ಯಾಕ್ಟರಿ ಅಕ್ಕ-ಪಕ್ಕ ನಿಲ್ಲಿಸಿದ್ದ ವಾಹನಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದವು.