Tag: Horticulture Department

  • ಮನೆ ಮನೆಗೆ ಹಣ್ಣು, ತರಕಾರಿ ಮಾರಾಟ ಮಾಡಿ – ಸರ್ಕಾರದಿಂದ ಸೂಚನೆ

    ಮನೆ ಮನೆಗೆ ಹಣ್ಣು, ತರಕಾರಿ ಮಾರಾಟ ಮಾಡಿ – ಸರ್ಕಾರದಿಂದ ಸೂಚನೆ

    ಬೆಂಗಳೂರು: ಹಣ್ಣು, ತರಕಾರಿ ಸರಬರಾಜಿನಲ್ಲಿ ತೊಂದರೆ ಆಗದಂತೆ ಕ್ರಮ ವಹಿಸಿ ಎಂದು ತೋಟಗಾರಿಕಾ ಸಚಿವ ಡಾ. ನಾರಾಯಣ ಗೌಡ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ ತೋಟಗಾರಿಕಾ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವರು ರೈತರಿಂದ ನೇರವಾಗಿ ರೈತರ ಉತ್ಪನ್ನಗಳನ್ನು ಆಯ್ದ ಭಾಗಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು. ಜಿಲ್ಲಾ ಮಟ್ಟದಲ್ಲಿ ಹಾಪ್ ಕಾಮ್ಸ್ ಸಹಯೋಗದೊಂದಿಗೆ ತೋಟಗಾರಿಕಾ ಇಲಾಖೆಯಿಂದ ಮೊಬೈಲ್ ವ್ಯಾನ್‍ಗಳ ಮೂಲಕ ಮನೆಮನೆಗೆ ಹಣ್ಣು, ತರಕಾರಿ ಮಾರಾಟ ಮಾಡಬೇಕು. ಇಲಾಖೆಯ ರೈತ ಉತ್ಪಾದಕಾ ಸಂಸ್ಥೆಗಳ ಮೂಲಕ ಹಣ್ಣು ತರಕಾರಿ ಮಾರಾಟಕ್ಕೆ ಸೂಚನೆ ನೀಡಿದ್ದಾರೆ.

    ಈಗಾಗಲೇ ಹಾಪ್‌ ಕಾಮ್ಸ್‌ಗಳ ಮೂಲಕ ಬೆಂಗಳೂರಿನಲ್ಲಿ 225 ಮಳಿಗೆಗಳು, ಜಿಲ್ಲೆಗಳಲ್ಲಿನ 257 ಮಳಿಗೆಗಳ ಮೂಲಕ ಹಣ್ಣು, ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಹಾಪ್‌ ಕಾಮ್ಸ್‌ಗಳ ಮೂಲಕ ಪ್ರತಿ ದಿನ 100 ಟನ್‍ಗಳಷ್ಟು ಹಣ್ಣು ತರಕಾರಿಗಳು ಮಾರಾಟವಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

    ಹಿರಿಯ ಅಧಿಕಾರಿಗಳ ತಂಡದಿಂದ ಜಿಲ್ಲೆಗಳ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕ ಹೊಂದುವಂತೆ ತಿಳಿಸಲಾಗಿದೆ. ಹಣ್ಣು ತರಕಾರಿ ಸರಬರಾಜಿನಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಹಾಗೆಯೇ ದ್ರಾಕ್ಷಿ ಬೇಡಿಕೆ ಇರುವ ಸ್ಥಳಗಳನ್ನು ಗುರುತಿಸಿ ಮಾರಾಟ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲು ಸಭೆಯಲ್ಲಿ ಚರ್ಚಿಸಲಾಗಿದೆ.

  • ಮಂಜಿನ ನಗರಿ ಮಡಿಕೇರಿಗೆ ಪುಷ್ಪರಾಣಿಯರ ಆಗಮನ

    ಮಂಜಿನ ನಗರಿ ಮಡಿಕೇರಿಗೆ ಪುಷ್ಪರಾಣಿಯರ ಆಗಮನ

    – ಮೇಳೈಸಲಿದೆ ಕೊಡಗಿನ ವಿಶೇಷತೆ
    – ಫೆ 7ರಿಂದ ಫಲಪುಷ್ಪ ಪ್ರದರ್ಶನ

    ಮಡಿಕೇರಿ: ಹೂವಿನ ರಾಣಿಯರ ಆಗಮನಕ್ಕೆ ಮಡಿಕೇರಿ ಸಂಪೂರ್ಣ ಸಿದ್ಧವಾಗಿದ್ದು, ವಿವಿಧ ರೀತಿಯ ಪುಷ್ಪಗಳ ಪ್ರದರ್ಶನಕ್ಕೆ ರಾಜಾಸೀಟ್ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.

    ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಪ್ರವಾಸಿ ತಾಣವಾದ ರಾಜಾಸೀಟ್ ನ ಉದ್ಯಾನವನದಲ್ಲಿ ತೋಟಗಾರಿಕಾ ಇಲಾಖೆಯ ವತಿಯಿಂದ ವಾರ್ಷಿಕವಾಗಿ ಆಯೋಜಿಸುವ ಫಲಪುಷ್ಪ ಪ್ರದರ್ಶನ ಕಳೆದ ಒಂದೆರಡು ವರ್ಷಗಳಿಂದ ಕಾರಣಾಂತರಗಳಿಂದ ವಿಳಂಬವಾಗುತ್ತಿತ್ತು. ಇದರಿಂದಾಗಿ ಪುಷ್ಪ ಪ್ರಿಯರಿಗೆ ನಿರಾಸೆಯ ಭಾವ ಎದುರಾಗುತ್ತಿತ್ತು. ಆದರೆ ಈ ವರ್ಷ ಫಲಪುಷ್ಪ ಪ್ರದರ್ಶನವನ್ನು ಬೇಸಿಗೆ ಆರಂಭದ ಈ ಸನ್ನಿವೇಶದಲ್ಲೇ ಆಯೋಜಿಸಲು ತೋಟಗಾರಿಕಾ ಇಲಾಖೆ ಮುಂದಾಗಿದೆ.

    ಈ ನಿಟ್ಟಿನಲ್ಲಿ ಈಗಾಗಲೇ ದಿನಾಂಕವೂ ನಿಗಿದಿಗೊಂಡಿದ್ದು, ಸಿದ್ಧತೆ ಭರದಿಂದ ಸಾಗಿದೆ. ಪ್ರಸಕ್ತ ವರ್ಷದ ಫೆ.7 ರಿಂದ 10ರ ವರೆಗೆ ನಾಲ್ಕು ದಿನಗಳ ಕಾಲ ಉದ್ಯಾನವನ ಪುಷ್ಪರಾಣಿಯರಿಂದ, ಮತ್ತಿತರ ಹಲವು ಆಕರ್ಷಣೆಗಳಿಂದ ಕಂಗೊಳಿಸಲಿದೆ. ರಾಜಾಸೀಟ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಸಲಹೆ-ಸೂಚನೆಯಂತೆ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್, ಸಹಾಯಕ ನಿರ್ದೇಶಕರಾದ ಸಿ.ಎಂ. ಪ್ರಮೋದ್ ನೇತೃತ್ವದಲ್ಲಿ ಸಮಿತಿ ಮೂಲಕ ಅಗತ್ಯ ಸಿದ್ಧತೆಗಳು ಉದ್ಯಾನವನದಲ್ಲಿ ನಡೆಯುತ್ತಿವೆ. ಇದರಿಂದಾಗಿ ಪುಷ್ಪ ಪ್ರಿಯರು ಮತ್ತು ಪ್ರವಾಸಿಗರು ಮತ್ತಷ್ಟು ಸಂತಸಗೊಂಡಿದ್ದಾರೆ.

  • ಮಂಜಿನ ನಗರಿಯ ರಾಜಾಸೀಟ್‍ನಲ್ಲಿ ಪ್ರವಾಸಿಗರನ್ನು ಸೆಳೆಯಲು ವಿನೂತನ ಪ್ರಯತ್ನ

    ಮಂಜಿನ ನಗರಿಯ ರಾಜಾಸೀಟ್‍ನಲ್ಲಿ ಪ್ರವಾಸಿಗರನ್ನು ಸೆಳೆಯಲು ವಿನೂತನ ಪ್ರಯತ್ನ

    ಮಡಿಕೇರಿ: ಪ್ರವಾಸಿಗರ ಸ್ವರ್ಗ ಕೊಡಗು. ಇಲ್ಲಿನ ಒಂದೊಂದು ತಾಣವೂ ಮನಮೋಹಕ. ಮಡಿಕೇರಿಯ ಪ್ರವಾಸಿ ತಾಣಗಳ ಮುಕುಟ ರಾಜಾಸೀಟ್. ಇಲ್ಲಿನ ಸೂರ್ಯಾಸ್ಥದ ವಿಹಂಗಮ ನೋಟ ಪ್ರಕೃತಿಯ ನೈಜ ಸೌಂದರ್ಯವನ್ನು ಅನಾವರಣಗೊಳಿಸುತ್ತೆ. ಇಂತಹ ರಾಜಾಸೀಟ್‍ಗೆ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲು ತೋಟಗಾರಿಕೆ ಇಲಾಖೆ ವಿನೂತನ ಪ್ರಯತ್ನಕ್ಕೆ ಕೈಹಾಕಿದೆ.

    ತೋಟಗಾರಿಕೆ ಇಲಾಖೆಯವರು ಪ್ರತಿ ತಿಂಗಳ 2ನೇ ಶನಿವಾರ, ರಾಜ್ಯದ ವಿವಿಧ ಭಾಷೆಯನ್ನು ಬಿಂಬಿಸುವ ಕಾರ್ಯಕ್ರಮವನ್ನು ರಾಜಾಸೀಟ್ ವ್ಯೂ ಪಾಯಿಂಟ್‍ನ ಸ್ಥಳದಲ್ಲಿ ಆಯೋಜಿಸುತ್ತಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ ಕೊಡಗಿನತ್ತ ಲಗ್ಗೆಯಿಡುವ ಪ್ರಕೃತಿ ಪ್ರೇಮಿಗಳು ಜಿಲ್ಲೆಯ ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಸದ್ಯ ತೋಟಗಾರಿಕೆ ಇಲಾಖೆಯ ವಿನೂತನ ಪ್ರಯತ್ನದಿಂದ ಕೊಡಗು ಹಾಗೂ ರಾಜ್ಯದ ಸಂಸ್ಕೃತಿಗಳನ್ನು ತಿಳಿಯಲು ಪ್ರವಾಸಿಗರಿಗೆ ನೆರವಾಗಿದೆ.

    ಮೊದಲ ಬಾರಿಗೆ ರಾಜಾಸೀಟ್‍ನಲ್ಲಿ ತೋಟಗಾರಿಗೆ ಇಲಾಖೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಬಾರಿ ಇಲಾಖೆ ಡೋಲು ಕುಣಿತ, ಸ್ಥಳೀಯ ಕಲಾವಿದರಿಂದ ಸುಗಮ ಸಂಗೀತ. ಕನ್ನಡ ಚಿತ್ರರಂಗ, ಹಿಂದಿ, ಕೊಡವ ಹಾಡು, ವಾದ್ಯ ಸೇರಿದಂತೆ ರಾಜ್ಯದ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸದಾ ಪ್ರವಾಸಿಗರಿಂದ ತುಂಬಿತುಳುಕುವ ರಾಜಾಸೀಟ್‍ಗೆ ಬಂದ ಪ್ರವಾಸಿಗರಿಗೆ ನಾಡಿನ ಸಂಸ್ಕೃತಿ ಹಾಗೂ ಪರಿಸರದ ಬಗ್ಗೆ ಕಾಳಜಿ ಹೊಂದಿರುವ ಕಾರ್ಯಕ್ರಮ ಮುದ ನೀಡಿದೆ.

  • ಗದಗ ಸುತ್ತಮುತ್ತ ಆಲಿಕಲ್ಲು ಸಹಿತ ಧಾರಾಕಾರ ಮಳೆ

    ಗದಗ ಸುತ್ತಮುತ್ತ ಆಲಿಕಲ್ಲು ಸಹಿತ ಧಾರಾಕಾರ ಮಳೆ

    – ಅಪಾರ ಪ್ರಮಾಣದ ಮಾವು, ಸಪೋಟ ಬೆಳೆ ನಾಶ

    ಗದಗ: ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಸಂಜೆ ವೇಳೆಗೆ ಗುಡುಗು, ಸಿಡಿಲು ಸಹಿತ ಧಾರಕಾರ ಆಲಿಕಲ್ಲು ಮಳೆಯಾಗಿದ್ದು, ಬೇಸಿಗೆಯ ಬಿಸಿಲಿನಲ್ಲಿ ಬೆಂಡಾದ ಭೂಮಿಗೆ ಮಳೆ ತಂಪೆರಿದಿದೆ.

    ಮಳೆಯೊಂದಿಗೆ ಬಿರುಸಿನ ಗಾಳಿ ಬೀಸಿದ ಪರಿಣಾಮ ಹಲವೆಡೆ ಮರ, ವಿದ್ಯುತ್ ಕಂಬಗಳು ಧರೆಗುರಳಿದ ಮಾಹಿತಿ ಲಭಿಸಿದೆ. ಇತ್ತ ನಿನ್ನೆ ರಾತ್ರಿಯೂ ಕೂಡ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯಾಗಿದ್ದು, ಅಕಾಲಿಕ ಮಳೆಗೆ ಬೇಸಿಗೆಯ ನಡುವೆಯೂ ನೀರುಣಿಸಿ ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದ ಮಾವು, ಸಪೋಟ ಬೆಳೆದ ರೈತರಿಗೆ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ.

    ರಾತ್ರೋರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಸಾವಿರಾರು ಎಕರೆಯಲ್ಲಿ ಬೆಳೆದ ಮಾವಿನ ಗಿಡಗಳ ಫಸಲು ನೆಲಕ್ಕುರುಳಿದೆ. ಅಕಾಲಿಕ ಮಳೆಯ ಹೊಡೆತಕ್ಕೆ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ.

    ಗದಗ ತಾಲೂಕಿನ ಹುಲಕೋಟಿ, ಹೊಸಹಳ್ಳಿ, ಶಾಗೋಟಿ, ದುಂದೂರ ಗ್ರಾಮಗಳ ಭಾಗದಲ್ಲಿ ಮಳೆಯಾಗಿದ್ದು, ಈ ಭಾಗದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಮಾವು ಬೆಳೆದಿದ್ದಾರೆ. ಇಲ್ಲಿ ಬೆಳೆದ ಮಾವಿನ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದ್ದು, ಸತತ ನಾಲ್ಕು ವರ್ಷಗಳ ಬರಕ್ಕೆ ಮಂಕಾಗಿದ್ದ ಮಾವು ಬೆಳೆಗಾರರ ಮುಖದಲ್ಲಿ ಈ ಬಾರಿ ಮಂದಹಾಸ ಮೂಡಿತ್ತು. ಹೀಗಾಗಿ ಒಳ್ಳೆಯ ಲಾಭದ ನಿರೀಕ್ಷೆಯಲ್ಲಿ ಇದ್ದ ರೈತರಿಗೆ ಸಿಡಿಲು ಬಡಿದಂತಾಗಿದೆ.

    ಮಾವು ಮಾತ್ರವಲ್ಲ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಸಪೋಟ ಹಣ್ಣಿನ ಗಿಡಗಳು ಮುರಿದಿದ್ದು, ರೈತರಿಗೆ ತುಂಬಲಾರದ ನಷ್ಟ ಉಂಟಾಗಿದೆ. ಈ ಬಗ್ಗೆ ರೈತರು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಕೂಡ ಯಾವೊಬ್ಬ ಅಧಿಕಾರಿಗಳು ತೋಟದ ಕಡೆ ಸುಳಿದಿಲ್ಲ ಎಂದು ರೈತರು ಆರೋಪ ಮಾಡಿದ್ದಾರೆ. ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದು, ಸರ್ಕಾರದಿಂದ ಪರಿಹಾರಕ್ಕೆ ಆಗ್ರಹಿಸಿದ್ದಾರೆ.

  • ಕೋಟೆನಾಡಿನಲ್ಲಿ ಸೃಷ್ಟಿಯಾಗಿದೆ ಅದ್ಭುತ ಲೋಕ- ಭಕ್ತರನ್ನು ಆಕರ್ಷಿಸ್ತಿದ್ದಾರೆ ಸಿದ್ದಗಂಗಾ ಶ್ರೀಗಳು

    ಕೋಟೆನಾಡಿನಲ್ಲಿ ಸೃಷ್ಟಿಯಾಗಿದೆ ಅದ್ಭುತ ಲೋಕ- ಭಕ್ತರನ್ನು ಆಕರ್ಷಿಸ್ತಿದ್ದಾರೆ ಸಿದ್ದಗಂಗಾ ಶ್ರೀಗಳು

    ಚಿತ್ರದುರ್ಗ: ವಿವಿಧ ತರಕಾರಿಗಳು ಹಾಗು ಹಣ್ಣುಗಳಲ್ಲಿ ಕಣ್ಮನ ತಣಿಸುವ ಹೂಗಳ ಉದ್ಯಾನವನದಲ್ಲಿ, ಭಕ್ತರನ್ನು ಆಕರ್ಷಿಸುತ್ತಿರೋ ಸಿದ್ದಗಂಗಾ ಶ್ರೀಗಳು ಹಾಗು ಭೂಮಿತಾಯಿಯ ಕಲಾಕೃತಿಗಳನ್ನು ನೋಡಲು ಎರಡು ಕಣ್ಣುಗಳು ಸಾಲದು. ಅಂಥದ್ದೊಂದು ಅದ್ಭುತ ಲೋಕ ಕೋಟೆನಾಡು ಚಿತ್ರದುರ್ಗದಲ್ಲಿ ಸೃಷ್ಟಿಯಾಗಿದೆ.

    ಹೌದು. ಚಿತ್ರದುರ್ಗದ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು 28ನೇ ಫಲಪುಷ್ಪ ಪ್ರದರ್ಶನವನ್ನು ವಿಶೇಷವಾಗಿ ಆಯೋಜಿಸಿದ್ದಾರೆ. ಬಗೆಬಗೆಯ ಕಲರ್ ಫುಲ್ ಹೂಗಳ ಲೋಕವೇ ಇಲ್ಲಿ ಅನಾವರಣಗೊಂಡಿದೆ. ಇಂತಹ ಬರಗಾಲದಲ್ಲೂ ಎಲ್ಲಿಂದ ಇಷ್ಟೊಂದು ಹೂವು, ಹಣ್ಣುಗಳನ್ನು ಬೆಳೆದರು ಎಂಬಂತೆ ಎಲ್ಲರನ್ನು ಅಚ್ಚರಿಗೊಳಿಸುವ ಸುಮಾರು 1ಲಕ್ಷಕ್ಕೂ ಅಧಿಕ ಕಲರ್‍ಫುಲ್ ಹೂವಿನ ಗಿಡಗಳಲ್ಲಿವೆ.

    ವಿಶೇಷ ಕುಬ್ಜ ಗಿಡಗಳು, ವಿವಿಧ ಬಗೆಯ ತರಕಾರಿಗಳು ರೈತರಿಗೆ ಅಗತ್ಯ ಮಾಹಿತಿ ನೀಡುವುದರ ಜೊತೆಗೆ ಅದ್ಭುತವಾದ ದೀಪಾಲಂಕಾರ ಹಾಗೂ ಅಪರೂಪದ ಚಿತ್ರಕಲೆ ಪ್ರದರ್ಶನ ಜನಸಾಗರವನ್ನೇ ಕೈಬೀಸಿ ಕರೆಯುತ್ತಿದ್ದು, ವಿಶೇಷ ಆಕರ್ಷಣೆಯಾಗಿ ತ್ರಿವಿಧ ಧಾಸೋಹಿ ಡಾ. ಶಿವಕುಮಾರ ಶ್ರೀಗಳ ಆಕರ್ಷಕ ಕಲಾಕೃತಿ ಫಲಪುಷ್ಪ ಪ್ರದರ್ಶನದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ವಿವಿಧ ರೂಪಗಳಲ್ಲಿ ಕಲ್ಲಂಗಡಿಯಲ್ಲಿ ದರ್ಶನ ನೀಡ್ತಿರೋ ನಡೆದಾಡುವ ದೇವರ ಆಶೀರ್ವಾದ ಇಲ್ಲಿ ಲಭಿಸುವಂತೆ ಭಾಸವಾಗುವ ವಿಶೇಷ ಪ್ರದರ್ಶನ ಇಲ್ಲಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಸವಿತಾ ಹೇಳಿದ್ದಾರೆ.

    ಈ ಜಿಲ್ಲೆಯ ಪ್ರಗತಿಪರ ರೈತರು ಬೆಳೆದ ಅಪರೂಪದ ಹಣ್ಣು, ತರಕಾರಿ, ತೋಟದ ಬೆಳೆಗಳ ಆಕರ್ಷಕ ಪ್ರದರ್ಶಿಕೆಯೂ ಇಲ್ಲಿ ಇದೆ. ಅಲ್ಲದೆ ಬರದನಾಡಲ್ಲಿ ಬೆಳೆಯಬಹುದಾದ ಅಣಬೆ ಹಾಗು ಹುಲ್ಲು ಬೆಳೆಯ ಮಾಹಿತಿ ಕೂಡ ಇಲ್ಲಿ ಲಭ್ಯವಾಗುತ್ತಿದ್ದು, ಶೈಕ್ಷಣಿಕವಾಗಿಯೂ ಉಪಯುಕ್ತವೆನಿಸಿ, ಝಗಝಗಿಸೋ ವಿದ್ಯುತ್ ದೀಪಗಳ ಅಲಂಕಾರದಲ್ಲಿ ಮಿನುಗುತ್ತಿರೋ ಕಲಾಕೃತಿಗಳು ಹಾಗೂ ಫಲಪುಷ್ಪಗಳನ್ನು ವೀಕ್ಷಿಸಲು ಜನಸಾಗರವೇ ಹರಿದು ಬರುತ್ತಿದೆ. ಮೂರು ದಿನಗಳ ಕಾಲ ನಡೆಯುವ ಈ ಪ್ರದರ್ಶನ ಯಶಸ್ವಿಯತ್ತ ಹೆಜ್ಜೆ ಹಾಕ್ತಿದೆ ಎಂದು ಸ್ಥಳೀಯರಾದ ರಶ್ಮಿ ಹೇಳುತ್ತಾರೆ.

    ಒಟ್ಟಾರೆಯಾಗಿ ಕೋಟೆನಾಡಿನಲ್ಲಿ ತೋಟಗಾರಿಕಾ ಇಲಾಖೆ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ದುರ್ಗದ ಜನರ ಕಣ್ಮನ ತಣಿಸುತ್ತಿದೆ. ಮಳೆಯಿಲ್ಲದೆ ಬಿಸಿಲಿನಿಂದ ಬಸವಳಿದ ಬರದನಾಡಿನ ಜನರಿಗೆ ಫಲ ಪುಷ್ಪದ ರಸದೌತಣ ನೀಡುವ ಮೂಲಕ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಸ್ಫೂರ್ತಿ ತುಂಬ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಬ್ಬನ್ ಪಾರ್ಕ್ ನಲ್ಲಿ ರೊಮ್ಯಾನ್ಸ್ ಮಾಡುವ ಪ್ರೇಮಿಗಳೇ ಹುಷಾರ್..!

    ಕಬ್ಬನ್ ಪಾರ್ಕ್ ನಲ್ಲಿ ರೊಮ್ಯಾನ್ಸ್ ಮಾಡುವ ಪ್ರೇಮಿಗಳೇ ಹುಷಾರ್..!

    ಬೆಂಗಳೂರು: ಕಬ್ಬನ್ ಪಾರ್ಕ್ ಗೆ ಹೋದರೆ ಸಾಕು ಪ್ರೇಮಿಗಳು ಪಕ್ಕ-ಪಕ್ಕ ಕುಳಿತುಕೊಂಡು ರೊಮ್ಯಾನ್ಸ್ ಮಾಡುತ್ತಿರುವ ದೃಶ್ಯಗಳು ಕಾಣಸಿಗುತ್ತವೆ. ಕಬ್ಬನ್ ಪಾರ್ಕ್ ಗೆ ಹೋಗುವ ಪ್ರೇಮಿಗಳು ಇನ್ನು ಮುಂದೆ ಹುಷಾರಾಗಿರಬೇಕು.

    ಹೌದು… ಖಾಲಿ ಜಾಗ ಸಿಕ್ಕರೆ ಸಾಕು ಪ್ರೇಮಿಗಳು ಪ್ರೇಮ ಸಲ್ಲಾಪದಲ್ಲಿ ತೊಡಗಿಕೊಳ್ಳುತ್ತಾರೆ. ಈಗ ಅದಕ್ಕೆಲ್ಲಾ ತೋಟಗಾರಿಕೆ ಇಲಾಖೆ ಬ್ರೇಕ್ ಹಾಕಲು ಮುಂದಾಗಿದೆ. ಕಬ್ಬನ್ ಪಾರ್ಕ್ ನಲ್ಲಿ ಭದ್ರತೆ ಮತ್ತು ಅನೈತಿಕ ಚಟುವಟಿಕೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಇವುಗಳಿಗೆ ಬ್ರೇಕ್ ಹಾಕಲು ತೋಟಗಾರಿಕಾ ಇಲಾಖೆ 120 ಸಿಸಿಟಿವಿ ಅಳವಡಿಕೆಗೆ ಮುಂದಾಗಿದೆ.

    ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯ, ಸಂಸದ ಪಿ.ಸಿ ಮೋಹನ್ ಅವರು 1 ಕೋಟಿ ರೂಪಾಯಿ ಅನುದಾನದಲ್ಲಿ ಸಿಸಿಟಿವಿ ಅಳವಡಿಕೆ ಮಾಡಿಸುತ್ತಿದ್ದಾರೆ. ಪ್ರಥಮ ಹಂತದಲ್ಲಿ 60 ಲಕ್ಷ ರೂಪಾಯಿ ಅನುದಾನದಲ್ಲಿ ಕಾಮಗಾರಿ ಶುರು ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಸಿಸಿಟಿವಿ ಸೇರಿದಂತೆ ಶೌಚಾಲಯ ನಿರ್ಮಾಣ ಕಾಮಗಾರಿಗಳಿಗೂ ಚಾಲನೆ ನೀಡಲಿದ್ದಾರೆ. ಸದ್ಯದಲ್ಲೇ ಸಿಸಿಟಿವಿ ಅಳವಡಿಕೆ ಕಾರ್ಯ ಶುರು ಮಾಡಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪರ್ಫ್ಯೂಮ್  ಹಾಕಿಕೊಂಡು ಈಗ ಲಾಲ್ ಬಾಗ್‍ಗೆ ಹೋಗಬೇಡಿ!

    ಪರ್ಫ್ಯೂಮ್ ಹಾಕಿಕೊಂಡು ಈಗ ಲಾಲ್ ಬಾಗ್‍ಗೆ ಹೋಗಬೇಡಿ!

    ಬೆಂಗಳೂರು: ಲಾಲ್‍ಬಾಗ್‍ನಲ್ಲಿ ಜೇನುಹುಳುಗಳ ಹಾವಳಿ ಹೆಚ್ಚಾಗಿದ್ದು ಪರ್ಫ್ಯೂಮ್ ಹಾಕಿಕೊಂಡು ಹೋಗಬೇಡಿ. ಕಪ್ಪು ಬಟ್ಟೆ ಅಂತೂ ಮೊದ್ಲೇ ಬೇಡ. ಏಕೆಂದರೆ ಅಂತವರನ್ನು ಜೇನುಹುಳುಗಳು ಹುಡುಕಿ ಹುಡುಕಿ ಕಚ್ಚುತ್ತಿವೆ.

    2016ನೇ ರಲ್ಲಿ ಈ ರೀತಿಯಾಗಿ ಜೇನುಹುಳುಗಳ ಕಿರಿಕ್ ನಡೆದಿತ್ತು. ಮಾರ್ಚ್, ಏಪ್ರಿಲ್ ನಲ್ಲಿ ಲಾಲ್‍ಬಾಗ್ ನಲ್ಲಿ ಜೇನು ಹುಳಗಳು ಹೆಚ್ಚಾಗಿ ಗೂಡು ಕಟ್ಟುತ್ತದೆ. ಈಗ ಲಾಲ್ ಬಾಗ್ ನ ಐದು ಕಡೆ ಜೇನುಹುಳಗಳು ದೊಡ್ಡ ಗೂಡು ಕಟ್ಟಿದ್ದು ಅಧಿಕಾರಿಗಳು ಮರದ ಹತ್ತಿರ ಗ್ರಿಲ್ ಹಾಕಿದ್ದಾರೆ.

    ಈಗಾಗಲೇ ಒಂದೇ ತಿಂಗಳಲ್ಲಿ ಐದು ಜನ ಬುರ್ಖಾ ಹಾಕಿಕೊಂಡು ಬಂದ ಮಹಿಳೆಯರಿಗೆ ಜೇನುಹುಳುಗಳು ಕಚ್ಚಿದೆ. ಪರ್ಫ್ಯೂಮ್ ಸ್ಮೆಲ್ ಮತ್ತು ಕಪ್ಪು ಬಟ್ಟೆ ಕಂಡರೆ ಜೇನುಗಳಿಗೆ ಆಗುವುದಿಲ್ಲ. ಇದರಿದಾಗಿ ಹೆಚ್ಚಾಗಿ ಅವರ ಮೇಲೆ ದಾಳಿ ನಡೆಸುತ್ತಿದೆ ಎಂದು ತಜ್ಞರು ವರದಿಯಲ್ಲಿ ತಿಳಿಸಿದ್ದಾರೆ.

    ಜೇನು ಹುಳುಗಳ ದಾಳಿಯಿಂದ ಎಚ್ಚೆತ್ತ ತೋಟಾಗಾರಿಕಾ ಇಲಾಖೆಯ ಸಿಬ್ಬಂದಿ, ಕಪ್ಪು ಬಟ್ಟೆ, ಪರ್ಫ್ಯೂಮ್ ಹಾಕಿಕೊಂಡು ಬಂದವರನ್ನು ದೂರ ಕಳುಹಿಸುತ್ತಿದ್ದಾರೆ. ಲಾಲ್‍ಬಾಗ್ ಹೊರಗಡೆಯಿಂದ ವಿಹಾರಿಗಳಿಗೆ ಎಚ್ಚರಿಕೆ ಕೊಟ್ಟು ಕಳುಹಿಸುತ್ತಿದ್ದೇವೆ ಎಂದು ತೋಟಗಾರಿಕಾ ಇಲಾಖೆಯ ಜಂಟಿ ಆಯುಕ್ತ ಚಂದ್ರಶೇಖರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.