ಬೆಂಗಳೂರು: ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಚಿತ್ರಿಕರಣದ ವೇಳೆ ಕುದುರೆ ಮೇಲಿನಿಂದ ಬಿದ್ದು, ಪ್ರಾಣಾಪಾಯದಿಂದ ಪಾರಾಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶ್ರೀಮನ್ನಾರಾಯಣ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. 10 ದಿನಗಳಿಂದ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಈ ವೇಳೆ ರಕ್ಷಿತ್ ಶೆಟ್ಟಿ ಕುದುರೆ ಮೇಲೆ ಕುಳಿತು ಸವಾರಿ ಮಾಡುತ್ತಿರುತ್ತಾರೆ. ಅದೇ ಸಂದರ್ಭದಲ್ಲಿ ಕುದುರೆ ಏಕಾಏಕಿ ಕೆನೆದು ನಿಂತಿದೆ. ಆಗ ಆಯಾ ತಪ್ಪಿ ರಕ್ಷಿತ್ ಶೆಟ್ಟಿ ಹಾಗೂ ಕುದುರೆ ನೆಲದ ಮೇಲೆ ಹಿಮ್ಮುಖವಾಗಿ ಬಿದ್ದಿದ್ದಾರೆ. ಘಟನೆಯಲ್ಲಿ ಯಾವುದೇ ಅಪಾಯಗಳು ಸಂಭವಿಸಿಲ್ಲ.
ಈ ಘಟನೆ ವೇಳೆ ಎಲ್ಲರೂ ಅವರವರ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಕುದುರೆ ನೋಡಿಕೊಳ್ಳುವವರು ಬಳಿ ಇದ್ದರೂ ಏಕಾಏಕಿ ಕೆನೆದು ನಿಂತಿದ್ದು ಯಾಕೆ ಎನ್ನುವುದು ತಿಳಿದು ಬಂದಿಲ್ಲ. ಕುದುರೆಯಿಂದ ಬಿದ್ದರೂ ರಕ್ಷಿತ್ ಶೆಟ್ಟಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು ಎಂದು ಚಿತ್ರತಂಡ ತಿಳಿಸಿದೆ.
ಗದಗ: ಮಲಪ್ರಭಾ ಬಲದಂಡೆ ಕಾಲುವೆಗೆ ಬಿದ್ದು ಪರದಾಟ ನಡೆಸಿದ್ದ ಕುದುರೆಯೊಂದನ್ನು ರಕ್ಷಿಸಿರುವ ಘಟನೆ ಜಿಲ್ಲೆಯ ರೋಣ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಕುದುರೆ ಕಾಲುವೆ ಪಕ್ಕ ನಡೆದು ಹೋಗುವ ವೇಳೆ ಕಾಲುಜಾರಿ ಕಾಲುವೆಯಲ್ಲಿ ಸಿಲುಕಿ ಪರದಾಟ ನಡೆಸಿದ್ದನ್ನು ಕಂಡ ಸ್ಥಳೀಯರು ರಕ್ಷಣೆ ಮಾಡಲು ಮುಂದಾಗಿದ್ದರು. ಆದರೆ ಸೂಕ್ತ ಸಲಕರಣೆ ಹಾಗೂ ಕಾಲುವೆ ಜೇಡಿ ಮಣ್ಣಿನಿಂದ ಕೂಡಿದ್ದ ಕಾರಣ ರಕ್ಷಣೆ ಮಾಡಲು ವಿಫಲರಾಗಿದ್ದರು.
ಈ ವೇಳೆ ಅಗ್ನಿಶಾಮಕ ರಕ್ಷಣಾ ತಂಡಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳೀಯರ ಮಾಹಿತಿ ಪಡೆದು ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ 2 ಗಂಟೆಗಳಿಗೂ ಕಾಲ ಸಿಲುಕಿ ನರಳಾಡುತ್ತಿದ್ದ ಕುದುರೆಯನ್ನು ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ಸೇರಿ ರಕ್ಷಣೆ ಮಾಡಿದ್ದಾರೆ.
ಹೆಚ್ಚಿನ ಅವಧಿ ಕೆಸರಿನಲ್ಲಿ ಸಿಲುಕಿ ನರಳಾಡಿದ್ದ ಕುದುರೆ ರಕ್ಷಣೆ ಮಾಡಿದ ಬಳಿಕವೂ ನಿತ್ರಾಣಗೊಂಡಿತ್ತು. ಅಲ್ಲದೇ ಎದ್ದು ನಿಲ್ಲಲಾಗದ ಕುದುರೆಯ ಪರದಾಟ ಕಣ್ಣೀರು ತರುವಂತಿತ್ತು. ಈ ವೇಳೆ ಕುದುರೆಗೆ ನೀರು, ಆಹಾರ ನೀಡಿ ಪೋಷಣೆ ಮಾಡಿ ರಕ್ಷಣೆ ಮಾಡಿದ್ದಾರೆ.
ಬೆಂಗಳೂರು: ಸಾಫ್ಟ್ ವೇರ್ ಉದ್ಯೋಗಿಯೊಬ್ಬರು ತಮ್ಮ ಉದ್ಯೋಗದ ಕೊನೆಯ ದಿನದ ಆಫೀಸಿಗೆ ಕುದುರೆ ಏರಿ ಬಂದು ಅಚ್ಚರಿ ಮೂಡಿಸಿದ್ದಾರೆ.
ರೂಪೇಶ್ ಕುಮಾರ್ ವರ್ಮಾ ಕುದುರೆ ಹೇರಿ ಬಂದ ಟೆಕ್ಕಿಯಾಗಿದ್ದು, ತಮ್ಮ ಉದ್ಯೋಗದ ಕೊನೆ ದಿನ ವಿಶೇಷವಾಗಿ ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆ ಕುರಿತು ಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಸದ್ಯ ತಮ್ಮದೇ ಸಂಸ್ಥೆ ಸ್ಥಾಪಿಸುವ ಉದ್ದೇಶ ಹೊಂದಿರುವ ವರ್ಮಾ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದು, ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಬೇಸತ್ತು ಪ್ರತಿಭಟನೆ ನಡೆಸುತ್ತಿದ್ದೇನೆ. ಟ್ರಾಫಿಕ್ ಸಮಸ್ಯೆ ಕಾರಣದಿಂದಲೇ ನಾನು ಕುದುರೆ ಸವಾರಿ ಕಲಿತಿರುವುದಾಗಿ ತಿಳಿಸಿದ್ದಾರೆ.
ತಾನು ಏರಿ ಬಂದ ಕುದುರೆಗೆ ಬೋರ್ಡ್ ಸಹ ಹಾಕಿದ್ದ ವರ್ಮಾ, ತನ್ನ ಸಾಫ್ಟ್ ವೇರ್ ಕೆಲಸಕ್ಕೆ ಕೊನೆ ದಿನ ಹಾಜರಾಗುತ್ತಿದ್ದಾಗಿ ಬರೆದಿದ್ದು, ಕಚೇರಿಗೆ ಬಳಿ ತೆರಳಿದ ಅದ ತನ್ನ ಕುದುರೆಯನ್ನು ಪಾರ್ಕಿಂಗ್ ನಲ್ಲಿ ಕಟ್ಟಿ ತೆರಳಿದ್ದಾರೆ.
ಇದೇ ವೇಳೆ ತಮ್ಮ ಈ ಕಾರ್ಯಕ್ಕೆ ಸಮರ್ಥನೆಯನ್ನು ನೀಡಿರುವ ಅವರು ದೇಶದಲ್ಲಿ ಹಲವು ಸಮಸ್ಯೆಗಳಿದ್ದು, ಪ್ರತಿಯೊಬ್ಬರು ಒಂದು ಸಮಸ್ಯೆ ಕುರಿತಾದರೂ ಗಮನಹರಿಸಬೇಕಿದೆ ಎಂದು ಹೇಳಿದ್ದಾರೆ. ಅಲ್ಲದೇ ತಮ್ಮಂತೇ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಇತರೇ ಉದ್ಯೋಗಿಗಳು ಕೇವಲ ಕೆಲಸಕ್ಕೆ ಸೀಮಿತವಾಗದೇ ತಮ್ಮದೇ ಕಂಪೆನಿ ನಿರ್ಮಾಣ ಮಾಡಲು ಮುಂದಾಗಿ ಎಂದು ತಿಳಿಸಿದ್ದಾರೆ.
ಸದ್ಯ ಈ ಕುರಿತ ಫೋಟೋ ಹಾಗೂ ವಿಡಿಯೋ ವನ್ನು ಸತೀಶ್ ಸರ್ವೋದಯ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Roopesh Kumar Verma, the techie who quit in style, many of his colleagues who saw him today wanted to be in his shoes…he rode a horse from Mathikere to Embassy Golf Link only to put down his papers on the last day as a "software engineer". pic.twitter.com/vz6mYengdN
ರಿಯೋ ಡಿ ಜನೈರೋ: ಬೆಲೆ ಏರಿಕೆ ಖಂಡಿಸಿ ರೈತರು ತರಕಾರಿ, ಹಾಲು ಗಳನ್ನು ರಸ್ತೆಗೆ ಚೆಲ್ಲುವುದರ ಮೂಲಕ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸುವುದು ನಮ್ಮಲ್ಲಿ ಸಾಮಾನ್ಯ. ಆದರೆ ದೂರದ ಬ್ರೆಜಿಲ್ ನಲ್ಲಿ ಪಿಜ್ಜಾ ವಿತರಿಸಲು ಯುವಕನೊಬ್ಬ ಕುದುರೆ ಏರಿ ಬಂದ ವಿಶೇಷ ರೀತಿಯಲ್ಲಿ ಪ್ರತಿಭಟನೆ ನಡೆಸಿ ವಿಶ್ವದೆಲ್ಲೆಡೆ ಸುದ್ದಿಯಾಗಿದ್ದಾನೆ.
ಬ್ರೆಜಿಲ್‍ನಲ್ಲಿ ಈಗ ಇಂಧನ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಬ್ರೆಜಿಲ್ ತೈಲ ಕಂಪೆನಿಯ ಸಿಇಓ ಪೆಡ್ರೂ ಎಂಬವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗಳು ಆರಂಭವಾಗಿವೆ. ಈ ಎಲ್ಲದರ ನಡುವೆ ಬ್ರೆಜಿಲ್ ಪೆಟ್ರೋಲ್ ಮತ್ತು ಡಿಸೇಲ್ ಸಹ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಎಂದು ಎನ್ನುವ ಆರೋಪ ಕೇಳಿ ಬಂದಿದೆ.
ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಪಿಜ್ಜಾ ಬಾಯ್ ಕುದುರೆ ಬಳಸಿ ಆಕ್ರೋಶವನ್ನು ಹೊರ ಹಾಕಿದ್ದಾರೆ. ಕುದುರೆ ಏರಿ ಬಂದು ಮನೆಯೊಂದಕ್ಕೆ ಬಂದಿದ್ದ ಪಿಜ್ಜಾ ಬಾಯ್ ಫೋಟೋವನ್ನು ಸ್ಥಳೀಯರು ಮೊಬೈಲ್ ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.
ಮುಂಬೈ: ಕುದುರೆ ಸವಾರಿ ಮಾಡುತ್ತಿದ್ದ ಸಂದರ್ಭದಲ್ಲಿ ಕೆಳಗೆ ಬಿದ್ದು 7 ವರ್ಷದ ಬಾಲಕಿಯ ತಲೆಗೆ ಗಂಭೀರ ಗಾಯವಾಗಿರೋ ಆಘಾತಕಾರಿ ಘಟನೆ ನಡೆದಿದೆ.
ರಶೀದಾ ಹಾಸನ್ ರೇಡಿಯೋವಾಲಾ ಗಾಯಗೊಂಡ ಬಾಲಕಿ. ಈಕೆ ನಗರದ ಲಮಿಂಗ್ಟನ್ ರಸ್ತೆಯ ನಿವಾಸಿಯಾಗಿದ್ದು, 2ನೇ ತರಗತಿ ಓದುತ್ತಿದ್ದಾಳೆ. ಸದ್ಯ ರಶೀದಾ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಘಟನೆ ವಿವರ: ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ರಶೀದಾ ಮತ್ತು ಆಕೆಯ ತಾಯಿ ಇಬ್ಬರೂ ಬೇರೆ ಬೇರೆ ಕುದುರೆಗಳ ಮೇಲೆ ಕುಳಿತುಕೊಂಡು ಸವಾರಿ ಮಾಡುತ್ತಿದ್ದರು. ಈ ವೇಳೆ ಕೋತಿಯೊಂದು ಮರದಿಂದ ಮರಕ್ಕೆ ಹಾರಿದೆ. ಪರಿಣಾಮ ರಶೀದಾ ಕೂತಿದ್ದ ಕುದುರೆ ತಬ್ಬಿಬ್ಬುಗೊಂಡಿದೆ. ಈ ವೇಳೆ ನಿಯಂತ್ರಕನಿಗೆ ಕುದುರೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ರಶೀದಾ ಕುದುರೆ ಮೇಲಿಂದ ಎಸೆಯಲ್ಪಟ್ಟಿದ್ದಾಳೆ. ಪರಿಣಾಮ ತಲೆಗೆ ಗಂಭೀರವಾಗಿ ಏಟು ಬಿದ್ದಿದೆ.
ಗಾಯಗೊಂಡ ರಶೀದಾಳನ್ನು ಕೂಡಲೇ ಆಕೆಯ ಕುಟುಂಬಸ್ಥರು ನಗರದ ಸೈಫೀ ಆಸ್ಪತ್ರೆಗೆ ದಾಖಲಿಸಿ, ಐಸಿಯುವಿನಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಬಾಲಕಿಯ ಮೆದುಳಿಗೆ ಗಂಭೀರ ಗಾಯಗಳಾಗಿವೆ. ಹೀಗಾಗಿ ತಲೆಗೆ 8 ಸ್ಟಿಚ್ ಹಾಕಲಾಗಿದೆ. ಅಲ್ಲದೇ ತಲೆಯ ಬಲ ಬದಿ ಊದಿಕೊಂಡಿದೆ ಅಂತ ಆಸ್ಪತ್ರೆಯ ವೈದ್ಯ ಡಾ. ಉದಯ್ ತಂಬೆ ತಿಳಿಸಿದ್ದಾರೆ.
ತಾಯಿ ಸೇರಿ 10 ಜನರೊಂದಿಗೆ ಬಾಲಕಿ ಕುದುರೆ ಸವಾರಿಗೆ ಬಂದಿದ್ದಾಳೆ. ಘಟನೆಯ ಬಳಿಕ ಈ ಕುರಿತು ಯಾರೊಬ್ಬರು ಹೇಳಿಕೆ ನೀಡಿಲ್ಲ. ಕುದುರೆ ನಿಯಂತ್ರಕ 45 ವರ್ಷದ ಮುಸ್ತಾಫಾ ಶೇಖ್ ಮಾತ್ರ, ಕೋತಿಯೊಂದು ಮರದಲ್ಲಿ ಹಾರುವ ಮೂಲಕ ಕುದುರೆಯನ್ನು ತಬ್ಬಿಬ್ಬುಗೊಳಿಸಿತ್ತು ಅಂತ ಹೇಳಿರುವುದಾಗಿ ಪೊಲೀಸ್ ಇನ್ಸ್ ಪೆಕ್ಟರ್ ಹೇಳಿದ್ದಾರೆ.
ಈ ಕುರಿತು ರಶೀದಾ ತಂದೆ ಮಾತನಾಡಿ, ನಮ್ಮ ಕುಟುಂಬ ಮಾಥೆರಾನ್ ಗೆ ಶುಕ್ರವಾರ ತೆರಳಿತ್ತು. ಶನಿವಾರ ಬೆಳಗ್ಗೆ ಎಂಜಾಯ್ ಮಾಡಲೆಂದು ಹೊರಗಡೆ ತೆರಳಿದ್ದೆವು ಅಂತ ಅಂದಿದ್ದಾರೆ.
ಅಹಮದಾಬಾದ್: ಕುದುರೆ ಏರಿ ಸವಾರಿ ಹೊರಟಿದ್ದ ದಲಿತ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆಗೈದ ಆಘತಕಾರಿ ಘಟನೆಯೊಂದು ಗುಜರಾತಿನ ಭಾವ್ ನಗರ್ ಜಿಲ್ಲೆಯಲ್ಲಿ ನಡೆದಿದೆ.
21 ವರ್ಷದ ಪ್ರದೀಪ್ ರಾಥೋಡ್ ಮೃತ ದುರ್ದೈವಿ ಯುವಕ. ಘಟನೆಗೆ ಸಂಬಂಧಿಸಿದಂತೆ ಗುರುವಾರ ಸಂಜೆ ಭಾವ್ ನಗರ್ ಜಿಲ್ಲೆಯ ಉಮ್ರಾಲ ತಾಲೂಕಿನ ಟಿಂಬಿ ಗ್ರಾಮದಲ್ಲಿ ಮೂವರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿ ಎಎಂ ಸೈಯದ್ ತಿಳಿಸಿದ್ದಾರೆ.
ಪ್ರಕರಣ ಸಂಬಂಧಿಸಿದಂತೆ ಈಗಾಗಲೇ ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಅಲ್ಲದೇ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದೇವೆ. ಪ್ರದೀಪ್ ಶವಪತ್ತೆಯಾದ ಪ್ರದೇಶದಲ್ಲಿ ಸಾವಿಗೂ ಮುನ್ನ ಕುದುರೆ ಮೇಲೆ ಕುಳಿತು ಸವಾರಿ ನಡೆಸುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಘಟನೆ ಸಂಬಂಧ ಹಳೆ ದ್ವೇಷ ಹಾಗೂ ಪ್ರೀತಿ-ಪ್ರೇಮ ಹೀಗೆ ವಿವಿಧ ರೀತಿಯಲ್ಲಿ ತನಿಖೆ ನಡೆಸಲಾಗುವುದು ಅಂತ ಅವರು ತಿಳಿಸಿದ್ದಾರೆ.
ಮಗನನ್ನು ಕಳೆದುಕೊಂಡ ತಂದೆ ಕುಲ್ ಭಾಯ್ ರಾಥೋಡ್ ಉಮ್ರಾಲ್ ಪೊಲೀಸರಿಗೆ ದೂರು ನೀಡಿದ್ದು, ನನ್ನ ಮಗ ಇತ್ತೀಚೆಗೆ ಕುದುರೆಯೊಂದನ್ನು ಖರೀದಿಸಿದ್ದನು. ಆ ಬಳಿಕ ಕೆಲ ಮೇಲ್ವರ್ಗದ ಜನ ಮಗನ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿದ್ದರು. ಅಲ್ಲದೇ ಕುದುರೆ ಮಾರದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದರು ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಗುರುವಾರ ಮಗ ತನ್ನ ಕುದುರೆಯೊಂದಿಗೆ ಫಾರ್ಮ್ ಹೌಸ್ ಹೋಗಿದ್ದನು. ಬಳಿಕ ಸಂಜೆ ಅಲ್ಲಿಂದ ಕರೆ ಮಾಡಿ ರಾತ್ರಿಯ ಊಟಕ್ಕೆ ಮನೆಗೆ ಬರುತ್ತೇನೆ ಅಂತ ಹೇಳಿದ್ದನು. ಆದ್ರೆ ರಾತ್ರಿಯಾದ್ರೂ ಆತ ಮನೆಗೆ ಬರಲಿಲ್ಲ. ಹೀಗಾಗಿ ನಾವು ಆತನ ಹುಡುಕಾಟ ಶುರುಮಾಡಿದೆವು. ಈ ವೇಳೆ ಆತ ಫಾರ್ಮ್ ಹೌಸ್ ಗೆ ಹೋಗೋ ಮಾರ್ಗದ ಬದಿಯಲ್ಲೆ ಕೊಲೆಯಾಗಿ ಹೋಗಿದ್ದನು. ಕುದುರೆಯೊಂದಿಗೆ ತನ್ನ ಮನೆಗೆ ವಾಪಾಸ್ಸಾಗುತ್ತಿದ್ದ ಸಂದರ್ಭದಲ್ಲಿ ಕೆಲ ರಜಪೂತ ವ್ಯಕ್ತಿಗಳು ಹರಿತವಾದ ಆಯುಧಗಳನ್ನು ಬಳಸಿ ನನ್ನ ಮಗನನ್ನು ಕೊಲೆ ಮಾಡಿದ್ದಾರೆ ಅಂತ ಪ್ರದೀಪ್ ತಂದೆ ತಮ್ಮ ದುಃಖ ತೋಡಿಕೊಂಡಿದ್ದಾರೆ.
ಘಟನೆಗೆ ಕಾರಣವಾದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವೆಂದಲ್ಲಿ ಮನಗ ಶವಸಂಸ್ಕಾರ ಮಾಡುವುದಿಲ್ಲ ಎಂದು ಪ್ರದೀಪ್ ಪೋಷಕರು ಹಾಗೂ ಕುಟುಂಬಸ್ಥರು ಆಗ್ರಹಿಸಿದ್ದಾರೆ.
Bhavnagar (Gujarat): 21-yr-old Dalit man, named Pradeep Rathod, killed, allegedly because he rode a horse. Rathod's father got him the horse last month, many villagers objected to him riding it & threatened him to not do so. He was killed on Thursday,Police has arrested 3 accused pic.twitter.com/YmuQXHvKkI
ಮೈಸೂರು: ಜೋಡಿ ಹುಚ್ಚು ಕುದುರೆಗಳು ರಂಪಾಟ ಮಾಡಿ ಜನರಲ್ಲಿ ಆತಂಕ ಸೃಷ್ಟಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಈ ಜೋಡಿ ಕುದುರೆಗಳು ಅರಸು ರಸ್ತೆಯಿಂದ ಚಾಮರಾಜ ಜೋಡಿ ರಸ್ತೆವರೆಗೆ ಹುಚ್ಚೆದ್ದು ಓಡಾಡಲು ಪ್ರಾರಂಭಿಸಿವೆ. ರಸ್ತೆಯಲ್ಲಿ ಸಿಕ್ಕ ಸಿಕ್ಕವರಿಗೆಲ್ಲಾ ಕಚ್ಚುತ್ತಾ ರಂಪಾಟ ಮಾಡಿವೆ. ಇನ್ನು ಜನರು ಕುದುರೆಗಳ ಹುಚ್ಚಾಟಕ್ಕೆ ಭಯಭೀತರಾಗಿ ದಿಕ್ಕು ಪಾಲಾಗಿ ಓಡಿದ್ದಾರೆ. ಕುದರೆ ದಾಳಿಯಿಂದ ಕೆಲವರು ಗಾಯಗೊಂಡಿದ್ದಾರೆ.
ಸ್ಥಳೀಯರು ತಕ್ಷಣ ಎಚ್ಚೆತ್ತುಕೊಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ನಂತರ ಪೊಲೀಸರು ಹಾಗೂ ಪಾಲಿಕೆ ಸಿಬ್ಬಂದಿ ಮಾಹಿತಿ ತಿಳಿದು ಕಾರ್ಯಚರಣೆ ಆರಂಭಿಸಿದ್ದಾರೆ. ಆ ಜೋಡಿ ಹುಚ್ಚು ಕುದುರೆಗಳನ್ನು ಸೆರೆ ಹಿಡಿಯಲು ಹರಸಾಹಸ ಪಟ್ಟಿದ್ದಾರೆ. ಕೊನೆಗೆ ಪಾಲಿಕೆಯ ಅಭಯ ತಂಡದವರು ಜೋಡಿ ಕುದುರೆಗಳನ್ನು ಸೆರೆ ಹಿಡಿದು ಸಾರ್ವಜನಿಕರ ಆತಂಕವನ್ನು ದೂರು ಮಾಡಿದ್ದಾರೆ.
ಥಾಣೆ: ಐಫೋನ್ ಕೊಳ್ಳೋದು ಅಂದ್ರೆ ಕೆಲವರಿಗೆ ಪ್ರತಿಷ್ಠೆಯಿದ್ದಂತೆ. ಇನ್ನೂ ಕೆಲವರು ಹೊಸ ಐಫೋನ್ ಬಿಡುಗಡೆಯಾಗ್ತಿದ್ದಂತೆ ಪ್ರೀ ಬುಕಿಂಗ್ ಮಾಡಿ, ಅದನ್ನ ಪಡೆಯಲು ಆಪಲ್ ಅಂಗಡಿ ಮುಂದೆ ಕ್ಯೂ ನಿಲ್ತಾರೆ. ಇಲ್ಲೊಬ್ಬ ಯುವಕ ಇವೆಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, ಐಫೋನ್ ತೆಗೆದುಕೊಳ್ಳೋಕೆ ಬ್ಯಾಂಡ್ ಸಮೇತ ಕುದುರೆಯಲ್ಲಿ ಹೋಗಿದ್ದಾನೆ.
ಹೊಸ ಐಫೋನ್-ಎಕ್ಸ್ ಮೊಬೈಲ್ ಭಾರತೀಯ ಸ್ಟೋರ್‍ಗಳಿಗೆ ಬರುತ್ತಿದ್ದಂತೆ ಆಪಲ್ ಅಭಿಮಾನಿಗಳು ಅಂಗಡಿ ಮುಂದೆ ಕ್ಯೂ ನಿಂತಿದ್ರು. ಅಂಗಡಿ ತೆರೆಯೋಕೂ ಮುನ್ನವೇ ಗಂಟೆಗಟ್ಟಲೆ ಸಾಲುಗಟ್ಟಿ ನಿಂತಿದ್ರು. ಆದ್ರೆ ಅಭಿಮಾನಿ ಸಾಗರದ ಮಧ್ಯೆ ಐಫೋನ್ ಎಕ್ಸ್ ಗಿಂತ ಹೆಚ್ಚು ಎಲ್ಲರ ಗಮನ ಸೆಳೆದಿದ್ದು ಈ ಯುವಕ.
ಗುರುವಾರದಂದು ಮಹೇಶ್ ಪಲಿವಾಲ್ ಬ್ಯಾಂಡ್‍ನವರೊಂದಿಗೆ ಥಾಣೆಯ ರಸ್ತೆಗಳಲ್ಲಿ ಕುದುರೆ ಸವಾರಿ ಮಾಡುತ್ತಾ ಐಫೋನ್ ತೆಗೆದುಕೊಳ್ಳಲು ಬಂದಿದ್ದ. ಈಗಾಗಲೇ ಪ್ರೀ ಆರ್ಡರ್ ಮಾಡಿದ್ದ ಐಫೋನ್ ತೆಗೆದುಕೊಳ್ಳಲು ಹೋಗ್ತಿದ್ದ ಯುವಕ, ಈ ಲವ್ ಐಫೋನ್ ಎಕ್ಸ್ ಎಂಬ ಬ್ಯಾನರ್ ಹಿಡಿದು ಕುದುರೆ ಮೇಲೆ ಕುಳಿತಿದ್ದ.
ಪಲಿವಾಲ್ ಕುದರೆ ಮೇಲೆ ಕುಳಿತುಕೊಂಡೇ ಐಫೋನ್ ಸ್ವೀಕರಿಸಿದ್ದಾನೆ. ಆತನ ಅದೃಷ್ಟಕ್ಕೆ ಸ್ಟೋರ್ ಮಾಲೀಕ ಖುಷಿಯಿಂದಲೇ ಕುದರೆ ಏರಿದ್ದ ಪಲಿವಾಲ್‍ಗೆ ಐಫೋನ್ ನೀಡಿದ್ದಾರೆ.
ಆಪಲ್‍ನ 64 ಜಿಬಿ ಆಂತರಿಕ ಮೆಮೊರಿಯ ಐಫೋನ್ ಎಕ್ಸ್ ಬೆಲೆ 84 ಸಾವಿರ ರೂ. ಇದ್ದರೆ, 256 ಜಿಬಿ ಆಂತರಿಕ ಮೆಮರಿಯ ಫೋನಿಗೆ 1 ಲಕ್ಷದ ಎರಡು ಸಾವಿರ ರೂ. ಬೆಲೆಯಿದೆ. ಸಿಲ್ವರ್ ಮತ್ತು ಬೂದಿ ಬಣ್ಣದಲ್ಲಿ ಹೊಸ ಐಫೋನ್ ಎಕ್ಸ್ ಹ್ಯಾಂಡ್ ಸೆಟ್‍ಗಳು ಲಭ್ಯವಿದೆ.
ಚಂಡೀಗಢ: ಕುದುರೆಯೊಂದಕ್ಕೆ ಚಿತ್ರಹಿಂಸೆ ಕೊಟ್ಟು ಹಗ್ಗದಿಂದ ಬಿಗಿದು ಕೊಂದಿರುವ ಅಮಾನವೀಯ ಘಟನೆ ಹರಿಯಾಣಾದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾನುಕುಲವೇ ತಲೆತಗ್ಗಿಸುವ ಇಂತಹದ್ದೊಂದು ಘಟನೆ ಮಂಗಳವಾರದಂದು ಹರಿಯಾಣದ ಜಿಂದ್ ಪ್ರದೇಶದ ಗೊಹಾನಾ ರಸ್ತೆಯಲ್ಲಿ ನಡೆದಿದೆ. ಈ ಅಮಾನವೀಯ ಕೃತ್ಯದ ಹಿನ್ನೆಲೆಯಲ್ಲಿ ಪೊಲೀಸರು 10 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೆಲವು ವ್ಯಕ್ತಿಗಳು ಕುದುರೆಯನ್ನ ದೊಣ್ಣೆಯಿಂದ ಹೊಡೆದು ಹಗ್ಗದಿಂದ ಬಿಗಿಯಾಗಿ ಎಳೆದಿದ್ದಾರೆ. ಕುದುರೆಯ ಕಾಲುಗಳು ಹಾಗು ಬಾಯಿಗೆ ಹಗ್ಗ ಕಟ್ಟಿ ಎಲ್ಲಾ ದಿಕ್ಕಿನಿಂದ ಎಳೆಯುತ್ತಿರೋದನ್ನ ವಿಡಿಯೋದಲ್ಲಿ ಕಾಣಬಹುದು. ಇವರ ಹಿಂಸೆಯಿಂದ 10 ನಿಮಿಷಕ್ಕೂ ಹೆಚ್ಚು ಕಾಲ ಒದ್ದಾಡಿದ ಕುದುರೆ ಕೊನೆಗೆ ಸಾವನ್ನಪ್ಪಿದೆ.
ಈ ಕುದುರೆ ಬೀದಿಗಳಲ್ಲಿ ಅಲೆದಾಡಿಕೊಂಡಿದ್ದು, ಹತ್ತಿರದ ಮಾರುಕಟ್ಟೆ ಪ್ರದೇಶದಲ್ಲಿ ಜನರ ಮೇಲೆ ದಾಳಿ ಮಾಡಿ, ಆಸ್ತಿಪಾಸ್ತಿಗೆ ಹಾನಿ ಮಾಡುತ್ತಿತ್ತು ಎಂದು ಇಲ್ಲಿನ ವ್ಯಾಪಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ಆದ್ರೆ ಪೊಲೀಸರು ಪಶುಸಂಗೋಪನಾ ಇಲಾಖೆಯ ಪ್ರಾಣಿ ತಜ್ಞರಿಗೆ ವಿಷಯ ತಿಳಿಸಿರಲಿಲ್ಲ ಎಂದು ವರದಿಯಾಗಿದೆ. ಪೊಲೀಸರ ಸಹಾಯ ಪಡೆದು ಸ್ಥಳೀಯರೇ ಕುದುರೆಯನ್ನ ಕೊಂದಿದ್ದಾರೆ.
ಈ ಕೃತ್ಯಕ್ಕೆ ಎಎಸ್‍ಐ ರಾಜಿಂದರ್ ಕುಮಾರ್ ಮತ್ತು ವಿಶೇಷ ರಕ್ಷಣಾ ಅಧಿಕಾರಿ ಸುಭಾಷ್ ಸಹಾಯ ಮಾಡಿದ್ದಾರೆ. ಸದ್ಯ ಇಬ್ಬರನ್ನೂ ವರ್ಗಾವಣೆ ಮಾಡಿದ್ದು, ಇವರ ವಿರುದ್ಧ ತನಿಖೆ ಆರಂಭವಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರೋ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಉಸ್ತುವಾರಿಯಾದ ಇನ್ಸ್ ಪೆಕ್ಟರ್ ದಿನೇಶ್ ಕುಮಾರ್, ಕುದುರೆ ತುಂಬಾ ಒದ್ದಾಡುತ್ತಿದ್ದರಿಂದ ಅದನ್ನು ನಿಯಂತ್ರಿಸಲು ಮಾತ್ರ ಪೊಲೀಸರು ಸಹಾಯ ಮಾಡಿದ್ದಾರೆ ಅಂತ ಹೇಳಿದ್ದಾರೆ. ಕುದುರೆಯನ್ನ ನಿಯಂತ್ರಿಸಲು ಹಗ್ಗದಿಂದ ಕಟ್ಟಿ ಈ ರೀತಿ ಹಿಂಸೆ ನೀಡೋ ಬದಲು ಬೇರೆ ಯಾವುದೇ ಮಾರ್ಗ ಇರಲಿಲ್ವಾ ಎಂದು ಕೇಳಿದ್ದಕ್ಕೆ, ನೀವು ಬಂದು ನಿಯಂತ್ರಿಸಬೇಕಿತ್ತು ಎಂದು ದಿನೇಶ್ ಉಡಾಫೆಯ ಉತ್ತರ ನೀಡಿದ್ದಾರೆ.
ಕುದುರೆಯ ಮೃತದೇಹವನ್ನ ಮರಣೋತ್ತರ ಪರೀಕ್ಷೆ ಹಾಗೂ ವಿಧಿ ವಿಜ್ಞಾನ ಪರೀಕ್ಷೆಗೆ ಕಳಿಸಲಾಗಿದೆ. ವರದಿಯಲ್ಲಿ ಕುದುರೆ ಹಿಂಸೆಯಿಂದ ಸಾವನ್ನಪ್ಪಿದೆ ಎಂಬ ಕಾರಣವಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.