Tag: horse race

  • ಮಗನ 2ನೇ ವರ್ಷದ ಬರ್ತ್‍ಡೇಗೆ ಕುದುರೆ ಓಟದ ಸ್ಪರ್ಧೆ ಆಯೋಜಿಸಿದ್ದ ತಂದೆ

    ಮಗನ 2ನೇ ವರ್ಷದ ಬರ್ತ್‍ಡೇಗೆ ಕುದುರೆ ಓಟದ ಸ್ಪರ್ಧೆ ಆಯೋಜಿಸಿದ್ದ ತಂದೆ

    ಚಿಕ್ಕೋಡಿ: ಸಾಮಾನ್ಯವಾಗಿ ಜಾತ್ರೆಗಳಲ್ಲಿ ಕುದುರೆ ಗಾಡಿಯ ಶರ್ತು(ಕುದುರೆ ಓಟ) ಆಯೋಜನೆ ಮಾಡೋದು ಸಾಮಾನ್ಯವಾಗಿರುತ್ತೆ. ಆದರೆ ಇಲ್ಲೊಬ್ಬ ತಂದೆ ತನ್ನ ಮಗನ ಎರಡನೇ ವರ್ಷದ ಹುಟ್ಟುಹಬ್ಬದ ನಿಮಿತ್ತ ಕುದುರೆ ಓಟ ಆಯೋಜನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾನೆ.

    ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕಂಕಣವಾಡಿ ಗ್ರಾಮ ಇಂತದೊಂದು ವಿಶೇಷ ಘಟನೆಗೆ ಸಾಕ್ಷಿಯಾಗಿದೆ. ತಂದೆ ಮಲಕಾರಿ ನಾಯಿಕವಾಡಿ ಅವರು ತಮ್ಮ ಮಗ ರಾಯಣ್ಣ ನಾಯಿಕವಾಡಿ ಬರ್ತ್‍ಡೇಗೆ ಶರ್ತು ಆಯೋಜನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೇ ಶರ್ತು ಆಯೋಜನೆ ಮಾಡಿದ ಅವರು ಅಕ್ಕಪಕ್ಕದ ಗ್ರಾಮದ ಕುದುರೆ ಸ್ಪರ್ಧಿಗಳಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೊನೆಗೂ ನನಸಾಯ್ತು ಅಮ್ಮ, ಮಗಳ ಕನಸು – ಒಂದೇ ವಿಮಾನಕ್ಕೆ ಇಬ್ಬರೂ ಪೈಲಟ್

    20ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿ
    ಸ್ಪರ್ಧೆಯಲ್ಲಿ ಒಟ್ಟು 20ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ ಅದರಲ್ಲಿಯೂ ಪ್ರಥಮ, ದ್ವಿತೀಯ ಹಾಗೂ ತೃತಿಯ ಬಹುಮಾನ ನೀಡಲಾಗಿದೆ. ಪ್ರಥಮ ಬಹುಮಾನ 7,000, ದ್ವಿತೀಯ ಬಹುಮಾನ 5,000 ಮತ್ತು ತೃತಿಯ ಬಹುಮಾನ 3,000 ಸಾವಿರ ರೂ. ಜೊತೆಗೆ ಆಕರ್ಷಕ ಟ್ರೋಪಿ ನೀಡಿ ವಿಜೇತರನ್ನು ಗೌರವಿಸಲಾಗಿದೆ.

    ಮಕ್ಕಳ ಬರ್ತ್‍ಡೇ ಗ್ರ್ಯಾಂಡ್ ಪಾರ್ಟಿ ಆಯೋಜನೆ ಮಾಡುವ ಜನರ ನಡುವೆ ತನ್ನ ಮಗ ಬರ್ತ್‍ಡೇಗೆ ಸ್ಪರ್ಧೆ ಆಯೋಜನೆ ಮಾಡಿದ ಮಲಕಾರಿ ಅವರ ಕಾರ್ಯಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ:  ಸಚಿವರಾಗಿ ಒಂದು ವರ್ಷ – ಆಂಜನೇಯನ ದರ್ಶನ ಪಡೆದ ಆರಗ

    Live Tv
    [brid partner=56869869 player=32851 video=960834 autoplay=true]

  • ಕುದುರೆ ರೇಸ್ ಬೆಟ್ಟಿಂಗ್ ದಂಧೆ – 19 ಮಂದಿ ಅರೆಸ್ಟ್

    ಕುದುರೆ ರೇಸ್ ಬೆಟ್ಟಿಂಗ್ ದಂಧೆ – 19 ಮಂದಿ ಅರೆಸ್ಟ್

    ಬೆಂಗಳೂರು: ಕುದುರೆ ರೇಸ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ 19 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ನಗರದ ಬಸವೇಶ್ವರ ನಗರದ ಠಾಣಾ ವ್ಯಾಪ್ತಿಯಲ್ಲಿರುವ ಕಿಂಗ್ಸ್ ಪೋರಂ, ಸ್ಪೋಟ್ರ್ಸ್, ಕಲ್ಚರಲ್ ಅಸೋಸಿಯೇಷನ್ ಕ್ಲಬ್ ಬೆಟ್ಟಿಂಗ್ ದಂಧೆ ನಡೆಯುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೋಲಿಸರು ದಾಳಿ ನಡೆಸಿದ್ದಾರೆ.

    ಈ ವೇಳೆ ಬುಕ್ ಮೇಕರ್ಸ್ ಲೈಸನ್ಸ್ ಪಡೆಯದೇ ಜೂಜಾಟವಾಡುತ್ತಿದ್ದವರನ್ನು ಸೇರಿದಂತೆ ಜೂಜಾಟವಾಡಿಸುತ್ತಿದ್ದ 19 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಆರೋಪಿಗಳ ಬಳಿ ಇದ್ದ 2,56,500 ರೂ. ಗಳನ್ನು ಪೊಲೀರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತಂತೆ ಇದೀಗ ಬಸವೇಶ್ವರ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ಟರ್ಫ್ ಕ್ಲಬ್‍ನಲ್ಲಿ ಮುಗ್ಗರಿಸಿದ ಕುದುರೆ- ಬಾಜಿದಾರರಿಂದ ಟರ್ಫ್ ಕ್ಲಬ್‍ನ ಮೇಜು, ಕುರ್ಚಿಗಳು ಪುಡಿ ಪುಡಿ

    ಬೆಂಗಳೂರು: ನಗರದ ಟರ್ಫ್ ಕ್ಲಬ್ ನಲ್ಲಿ ಕುದುರೆ ರೇಸ್ ಆಡಲು ಬಂದ ಕೆಲ ಬಾಜಿದಾರರು ದಾಂಧಲೆ ನಡೆಸಿರುವ ಘಟನೆ ನಡೆದಿದೆ.

    ಇಂದು ಟರ್ಫ್ ಕ್ಲಬ್‍ನಲ್ಲಿ ರೇಸ್ ನಡೆಯುತ್ತಿದ್ದ ಕಾರಣ ಕುದುರೆಗಳ ಮೇಲೆ ಬಾಜಿ ಕಟ್ಟಲು ಆಗಮಿಸಿದ್ದರು. ಆದರೆ ರೇಸ್ ನಡೆಯುತ್ತಿದ್ದ ವೇಳೆ ವಿಲ್ ಟು ವಿನ್ ಹೆಸರಿನ ಕುದುರೆ ಜಾರಿ ಬಿದ್ದಿದ್ದು, ಪರಿಣಾಮ ಕುದುರೆಯ ಕಾಲು ಮುರಿದಿದೆ. ಅಲ್ಲದೇ ರೇಸ್ ವೇಳೆ ಕುದುರೆ ಬಿದ್ದ ಪರಿಣಾಮ ಅದರ ಹಿಂದೆ ಬರುತ್ತಿದ್ದ ಮತ್ತೆರಡು ಕುದುರೆಗಳು ಬಿದ್ದಿದ್ದವು.

    ಮೊದಲು ಬಿದ್ದ ಕುದುರೆ ಸಂಜಯ್ ಆರ್ ಠಕ್ಕರ್ ಅವರ ಮಾಲೀಕತ್ವದಾಗಿದ್ದು, ಪಾರ್ವತಿ ಡಿ ಭೈರಾಂಜಿ ಟ್ರೈನರ್ ಆಗಿದ್ದಾರೆ. ಇಂದು ರೇಸ್‍ನಲ್ಲಿ ವಿಲ್ ಟು ವಿನ್ ಕುದುರೆಯನ್ನು ಜಾಕಿ ಸೂರಜ್ ನೆರಡು ಓಡಿಸುತ್ತಿದ್ದರು. ಇಂದಿನ ರೇಸ್‍ನಲ್ಲಿ ನಯಾಬ್ ಹೆಸರಿನ ಕುದುರೆ ರೇಸ್ ಗೆದ್ದಿದ್ದು, ಪರಿಣಾಮ ವಿಲ್ ಟು ವಿನ್ ಕುದುರೆಗೆ ಬಾಜಿ ಕಟ್ಟಿದ್ದ ಜನ ಆಕ್ರೋಶ ವ್ಯಕ್ತಪಡಿಸಿ ಟರ್ಫ್ ಕ್ಲಬ್ ಮೇಜು, ಕುರ್ಚಿಗಳನ್ನು ಪುಡಿ ಪುಡಿ ಮಾಡಿದ್ದಾರೆ. ಕೂಡಲೇ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಎಲ್ಲರನ್ನು ಕ್ಲಬ್‍ನಿಂದ ಹೊರಕ್ಕೆ ಕಳುಹಿಸಿದ್ದಾರೆ.

    ಸದ್ಯ ಘಟನೆಗೆ ಟರ್ಫ್ ಕ್ಲಬ್ ಮ್ಯಾನೇಜ್ ಮೆಂಟ್ ನಿರ್ಲಕ್ಷ್ಯವೇ ಎಂಬ ಆರೋಪ ಕೇಳಿ ಬಂದಿದ್ದು, ರೇಸ್ ಜಾಕಿಗಳು ಟ್ರ್ಯಾಕ್ ಸಮಸ್ಯೆ ಕುರಿತು ರಿಪೋರ್ಟ್ ಕೊಟ್ಟಿದ್ದರೂ ಮ್ಯಾನೇಜ್‍ಮೆಂಟ್ ನಿರ್ಲಕ್ಷ್ಯ ವಹಿಸಿದೆ. ಇದರಿಂದ ರೇಸ್ ವೇಳೆ ಕುದುರೆ ಕಾಲು ಮುರಿದುಕೊಂಡಿದೆ ಎಂದು ಬಾಜಿ ಕಟ್ಟಿದವರು ಆರೋಪಿಸಿದ್ದಾರೆ. ಕಳೆದ ವಾರವೇ ರೇಸ್‍ನ ಟ್ರ್ಯಾಕ್ ಸರಿಯಿಲ್ಲ ಎಂದು ಜಾಕಿಗಳು ಟರ್ಫ್ ಕ್ಲಬ್ ಮ್ಯಾನೇಜ್‍ಮೆಂಟ್‍ಗೆ ದೂರು ನೀಡಿದ್ದರು. ಆದರೂ ಜಾಕಿಗಳ ದೂರನ್ನು ನಿರ್ಲಕ್ಷ್ಯ ಮಾಡಿದ್ದ ಕ್ಲಬ್ ರೇಸ್ ನಡೆಸಿ ಅವಘಡಕ್ಕೆ ಕಾರಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

    https://twitter.com/Surajsn1/status/1195305718821212160

  • ಬಿದ್ದರೂ ಹಠ ಬಿಡದೆ ಮತ್ತೆ ಕುದುರೆ ಏರಿ ರೇಸ್ ಗೆದ್ದ 9ರ ಪೋರ!

    ಬಿದ್ದರೂ ಹಠ ಬಿಡದೆ ಮತ್ತೆ ಕುದುರೆ ಏರಿ ರೇಸ್ ಗೆದ್ದ 9ರ ಪೋರ!

    ಬೆಳಗಾವಿ (ಚಿಕ್ಕೋಡಿ): ಕುದುರೆ ರೇಸ್ ಸಂದರ್ಭದಲ್ಲಿ ದಾರಿ ಮಧ್ಯ ಕೆಳಗೆ ಬಿದ್ದ 9ರ ಪೋರ, ಮತ್ತೆ ಕುದುರೆ ಏರಿ ಗೆಲುವು ಸಾಧಿಸಿದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದಲ್ಲಿ ನಡೆದಿದೆ.

    ಗೋಕಾಕ ತಾಲೂಕಿನ ವಡ್ಡರಹಟ್ಟಿ ಗ್ರಾಮದ ಲೋಕೇಶ ಸತ್ತಿಗೇರಿ ಬಾಲಕನ ಸಾಹಸದ ಕುರಿತು ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕುದುರೆಯ ಮುಂದೆ ಬೈಕಿನಲ್ಲಿ ಹೋಗುತ್ತಿದ್ದ ಕೆಲವರು ತಮ್ಮ ಮೊಬೈಲ್‍ನಲ್ಲಿ ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಾಲಕನ ಸಾಹಸಕ್ಕೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದು, ಬೆಳಗಾವಿಯ ಮಗಧೀರ ಎಂದು ಹೊಗಳಿದ್ದಾರೆ.

    ಕೆರೂರು ಗ್ರಾಮದ ಅರಣ್ಯಸಿದ್ದೇಶ್ವರ ಹಾಗೂ ಮಲಕಾರಿ ಸಿದ್ದೇಶ್ವರ ಜಾತ್ರೆಯ ನಿಮಿತ್ತ ಕುದುರೆ ರೇಸ್ ಸ್ಪರ್ಧೆ ನಡೆಸಲಾಗಿತ್ತು. ಈ ಸ್ಪರ್ಧೆಗೆ ಜಿಲ್ಲೆಯ ವಿವಿಧ ಭಾಗಗಳಿಂದ ಯುವಕರು ಕುದುರೆ ತೆಗೆದುಕೊಂಡು ಬಂದಿದ್ದರು. ವಡ್ಡರಹಟ್ಟಿ ಗ್ರಾಮದ ಲೋಕೇಶ ಸತ್ತಿಗೇರಿ ಬಾಲಕ ಕೂಡ ಸ್ಪರ್ಧೆಯಲ್ಲಿ ಭಾಗವಹಿಸಿದ್ದ.

    ವಿಡಿಯೋದಲ್ಲಿ ಏನಿದೆ?:
    ಕುದುರೆ ರೇಸ್‍ನಲ್ಲಿ ಲೋಕೇಶ ಎಲ್ಲರಿಗಿಂತ ಮುಂದೆಯಿದ್ದ. ಆದರೆ ದಾರಿ ಮಧ್ಯದಲ್ಲಿ ಕುದುರೆ ಕಾಲು ಜಾರಿಗೆ ನೆಲಕ್ಕೆ ಬಿತ್ತು. ಪರಿಣಾಮ ಲೋಕೇಶ ಕೂಡ ಕುದುರೆಯ ಮೇಲಿಂದ ಭಾರೀ ದೂರದಲ್ಲಿ ಬಿದ್ದ. ಹಿಂದೆ ಬರುತ್ತಿದ್ದ ಮತ್ತೊಬ್ಬ ಸ್ಪರ್ಧಿ ಲೋಕೇಶನನ್ನು ಹಿಂದಿಕ್ಕಿದ್ದ. ಆದರೆ ಕುದುರೆ ಕಡಿಮೆ ಸಮಯದಲ್ಲಿ ಚೇತರಿಸಿಕೊಂಡು ಏಕಾಂಗಿಯಾಗಿ ಓಡಲು ಆರಂಭಿಸಿತ್ತು. ಲೋಕೇಶನನ್ನು ಪ್ರೋತ್ಸಾಹಿಸಿದ ಬೈಕ್ ಸವಾರರು ಆತನನ್ನು ಕರೆದುಕೊಂಡು ಬಂದು ಓಡುತ್ತಿದ್ದ ಕುದುರೆಯ ಮೇಲೆ ಮತ್ತೆ ಕೂರಿಸಿದರು. ಬಳಿಕ ಬಾಲಕ ಲೋಕೇಶ ಯಶಸ್ವಿಯಾಗಿ ಗುರಿ ಮುಟ್ಟಿದ್ದಾನೆ.

  • ಕುದುರೆ ರೇಸ್ ಹೆಸರಲ್ಲಿ ನಡೆಯುತ್ತಿದ್ದ ಬೆಟ್ಟಿಂಗ್ ದಂಧೆಗೆ ಕೊಪ್ಪಳ ಪೊಲೀಸರಿಂದ ಬ್ರೇಕ್!

    ಕುದುರೆ ರೇಸ್ ಹೆಸರಲ್ಲಿ ನಡೆಯುತ್ತಿದ್ದ ಬೆಟ್ಟಿಂಗ್ ದಂಧೆಗೆ ಕೊಪ್ಪಳ ಪೊಲೀಸರಿಂದ ಬ್ರೇಕ್!

    ಕೊಪ್ಪಳ: ತಾಲೂಕಿನ ಗಿಣಗೇರಿಯಲ್ಲಿ ಕುದುರೆ ರೇಸ್ ಹೆಸರಿನಲ್ಲಿ ನಡೆಯುತ್ತಿದ್ದ ಬೆಟ್ಟಿಂಗ್ ದಂಧೆಗೆ ಪೊಲೀಸರು ತಡೆ ನೀಡಿದ್ದಾರೆ. ಈ ಸಂಬಂಧ ಓರ್ವ ಬೆಟ್ಟಿಂಗ್ ದಂಧೆಕೋರನನ್ನು ಬಂಧಿಸುವಲ್ಲಿಪೊಲೀಸರು ಯಶಸ್ವಿಯಾಗಿದ್ದಾರೆ.

    ತಾಲೂಕಿನ ಗಿಣಗೇರಿಯಲ್ಲಿ ಆಚರಣೆ ಹೆಸರಿನಲ್ಲಿ ಕಳೆದ ಮೂವತ್ತು ವರ್ಷಗಳಿಂದ ಕುದುರೆ ರೇಸ್ ನಡೆಯುತ್ತಿತ್ತು. ಕುದುರೆ ರೇಸ್ ನಲ್ಲಿ ಕೋಟ್ಯಾಂತರ ರೂಪಾಯಿ ಬೆಟ್ಟಿಂಗ್ ನಡೆಯುತ್ತಿದ್ದರಿಂದ ವ್ಯಾಪಕವಾಗಿ ಹೆಸರುಗಳಿಸಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಕುದುರೆ ರೇಸ್‍ನ್ನು ಆಯೋಜಿಸಲಾಗಿತ್ತು.

    ಕುದುರೆ ರೇಸ್ ಗೆ ಮೊದಲ ಬಾರಿ ಪೊಲೀಸರು ಬಂದೋಬಸ್ತು ಹಾಕಿದ್ದರಿಂದ ಆಯೋಜಕರು ಕುದುರೆ ರೇಸ್ ಅನ್ನು ಸ್ಥಗಿತಗೊಳಿಸಿದ್ದಾರೆ. ಈ ಮೂಲಕ ಕೊಪ್ಪಳ ಪೊಲೀಸರು ಕುದುರೆ ರೇಸ್ ಗೆ ಬ್ರೇಕ್ ಹಾಕಿದ್ದಾರೆ. ಇದೇ ಮೊದಲ ಬಾರಿಗೆ ಕುದುರೆ ರೇಸನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾದ ಪೊಲೀಸರು ಓರ್ವ ಬೆಟ್ಟಿಂಗ್ ದಂಧೆಕೋರನನ್ನು ಬಂಧಿಸಿದ್ದಾರೆ.

    ಕುದುರೆ ರೇಸ್ ಇದೆ ಎಂದು ಗುಂಪು ಗುಂಪಾಗಿ ಬರುತ್ತಿರುವ ಜನರನ್ನು ಪೊಲೀಸರು ಚದುರಿಸಿ ಕಳುಹಿಸಿದ್ದಾರೆ.