Tag: Hornbill

  • ಸುವ್ವಿ ರಾಗ ಕೇಳಿದಿರಾ, ಕಾಡಿನ ರೈತನ ನೋಡಿದಿರಾ..? – ಈಗ ಕೇಳಿ ಮಧುರಕಂಠದ ʻಐಯೋರʼ ಗಾನ

    ಸುವ್ವಿ ರಾಗ ಕೇಳಿದಿರಾ, ಕಾಡಿನ ರೈತನ ನೋಡಿದಿರಾ..? – ಈಗ ಕೇಳಿ ಮಧುರಕಂಠದ ʻಐಯೋರʼ ಗಾನ

    ಪಕ್ಷಿಗಳ (Birds) ಸಮೂಹ ಕಾಣುತ್ತಿದ್ದರೆ, ಅವುಗಳ ಚಿಲಿಪಿಲಿ ಸದ್ದನು ಕೇಳುತ್ತಿದ್ದರೆ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ತಾನೂ ರೆಕ್ಕೆಬಿಚ್ಚಿ ನೀಲಮೇಘಗಳಲ್ಲಿ ಹಾರಬೇಕು ಎಂದೆನಿಸುತ್ತದೆ. ನೆನಪಿದೆಯಾ ಅಂದು ನಾವು ಪುಟ್ಟ ಮಕ್ಕಳಿದ್ದಾಗ ಪಕ್ಷಿಯ ಚಿತ್ರ ಬರೆಯಲು ಹೇಳಿದ್ರೆ ಚೂಪಾದ ಕೊಕ್ಕು, ದುಂಡಗಿನ ಕಣ್ಣು, ಕೆಂಪನೆಯ ಮುಂಗುರುಳು… ಹೀಗೆ ನಮಗೆ ಇಷ್ಟ ಬಂದ ಆಕಾರ ನೀಡುತ್ತಾ ಅವುಗಳನ್ನ ನಮ್ಮ ಪುಟಗಳಲ್ಲಿ ಹಾರಿಸುತ್ತಿದ್ದ ನೆನಪು ನಿನ್ನೆ ಮೊನ್ನೆಯದೋ ಎಂದೇ ಭಾಸವಾಗುತ್ತಿದೆ. ಆದ್ರೆ ನಗರಗಳು ಬೆಳೆದಂತೆ ಪಕ್ಷಿಗಳು ಮಾಯವಾಗುತ್ತಿವೆ. ಮೃಗಾಲಯ, ಕಾಡುಗಳಲ್ಲಿ ಪ್ರವಾಸಕ್ಕೆ ಹೋಗಿ ಹಕ್ಕಿಗಳನ್ನು ಕಣ್ತುಂಬಿಕೊಳ್ಳಬೇಕಿದೆ.

    ಸಾಮಾನ್ಯವಾಗಿ ಪಕ್ಷಿ ವೀಕ್ಷಣೆಗೆ ಮುಂಜಾನೆ 6 ರಿಂದ 10 ಅಥವಾ ಸಂಜೆ 4 ರಿಂದ 6 ಗಂಟೆಯ ಸಮಯ ಸೂಕ್ತವೆಂದು ಪಕ್ಷಿ ತಜ್ಞರು ಹೇಳುತ್ತಾರೆ. ಬನ್ನಿ ಹಾಗಿದ್ರೆ ಪಕ್ಷಿ ತಜ್ಞರು ಏನು ಹೇಳಿದ್ದಾರೆ.. ಅವುಗಳ ಸುತ್ತ ಒಂದು ಸುತ್ತು ಹಾಕೋಣ…

    ಸುಂದರ ಸುವ್ವಿ ಹಕ್ಕಿ:
    ಸುವ್ವಿ ಹಕ್ಕಿ ಗುಬ್ಬಚ್ಚಿಗಿಂತಲೂ ಸಣ್ಣದಾದ ಪಕ್ಷಿ, ಪ್ರಿನಿಯಾ ಸೊಸಿಯಾಲಿಸ್ ಎಂಬುದು ವೈಜ್ಞಾನಿಕ ಹೆಸೆರು. ಗುಬ್ಬಚ್ಚಿಗಿಂತ ಚಿಕ್ಕದಾದ ಹಕ್ಕಿ. ನೆತ್ತಿ, ಕತ್ತಿನ ಹಿಂಭಾಗ, ರೆಕ್ಕೆ, ಬಾಲದ ಮೇಲ್ಬಾಗದಲ್ಲಿ ಕಡು ಬೂದು ಮಿಶ್ರಿತ ಪಾಚಿ ಬಣ್ಣವಿರುತ್ತದೆ. ಉದ್ದ ಬಾಲ ಅದರ ಅಂಚು ಕಪ್ಪು-ಬಿಳಿ; ನೀಳವಾದ ಕಾಲುಗಳು ಹಾಗೂ ಚಿಕ್ಕದಾದ ಕಪ್ಪು ಕೊಕ್ಕು ಇರುತ್ತದೆ.

    ನೀಳವಾದ ಕಾಲುಗಳು ಗುಲಾಬಿ ಬಣ್ಣದಿಂದ ಕಂಡುಬರುತ್ತದೆ. ಇದರ ಚಿಕ್ಕದಾದ ಕೊಕ್ಕು ಕಪ್ಪಾಗಿರುತ್ತದೆ. ಕುರುಚಲು ಕಾಡು, ಹೂದೋಟ ಮುಂತಾದ ಕಡೆ ಪೊದೆ, ಜೊಂಡು, ವಾಟೆಗಳಲ್ಲಿ ವಾಸಿಸುತ್ತವೆ. ಸಂತಾನೋತ್ಪತ್ತಿ ಸಮಯದಲ್ಲಿ ದೊಡ್ದ ಎಲೆಗಳನ್ನ ಹೆಣೆದು ಮಧ್ಯದಲ್ಲಿ ಹತ್ತಿ, ನಾರು ಇತ್ಯಾದಿಗಳಿಂದ ಬಟ್ಟಲಿನಾಕಾರದ ಗೂಡನ್ನು ಕಟ್ಟುತ್ತವೆ. ಮಾರ್ಚ್ ತಿಂಗಳಿಂದ ಸೆಪ್ಟೆಂಬರ್ ತಿಂಗಳೊಳಗೆ 3 ರಿಂದ 4 ಕೆಂಪು ಮೊಟ್ಟೆಗಳಿಗೆ ಕಾವು ಕೊಟ್ಟು ಮರಿ ಮಾಡಡುತ್ತದೆ.

    ಕಾಡಿನ ರೈತ ಮಂಗಟ್ಟೆ (Hornbill):
    ಒಮ್ಮೆ ನೋಡಿದ್ರೆ ಮೆರಯುವುದೇ ಇಲ್ಲ ಅಂತಹ ಹಕ್ಕಿ ಇದು. ಮಂಗಟ್ಟೆ ಹಕ್ಕಿಗಳು ಕೀಟ, ಸಣ್ಣ-ದೊಡ್ಡ ಜೀವಿಗಳನ್ನು ತಿನ್ನುತ್ತದೆಯಾದರೂ ಫಲಾಹಾರಿ ಹಕ್ಕಿಗಳು. ಇವು ಹಣ್ಣುತಿಂದು ಕಾಡಿನ ದೂರದೂರದವರೆಗೂ ಹೋಗಿ ವಿಸರ್ಜಿಸುವುದರಿಂದ ಕಾಡಿನ ಬೆಳವಣಿಗೆಗೆ ಮತ್ತು ಮರಗಳ ಹರವು ವಿಸ್ತಾರವಾಗಲು ನೆರವಾಗುತ್ತದೆ. ಆದ್ದರಿಂದಲೇ ಅನೇಕರು ಇದನ್ನೂ ಕಾಡಿನ ರೈತ ಎಂದೂ ಕರೆಯುತ್ತಾರೆ.

    ಇನ್ನೂ ಇದರ ಸಂತಾನೋತ್ಪತ್ತಿಯ ವಿಶಿಷ್ಟ ಕ್ರಮ ಆಶ್ಚರ್ಯವನ್ನು ತರುತ್ತದೆ. ಹಳೆಯ, ದೊಡ್ಡ ಮರಗಳ ಪೊಟರೆ ಇದರ ಗೂಡು. ಹೆಣ್ಣು ಹಕ್ಕಿ ಇದರ ಒಳಗೆ ಹೋಗಿ ಕೂತ ನಂತರ ಗಂಡು ಹೊರಗಿನಿಂದ ಗೂಡಿನ ಬಾಯನ್ನು ಸಣ್ಣ ಕಿಂಡಿಯೊಂದನ್ನ ಬಿಟ್ಟು ಪೂರ್ತಿ ಮುಚ್ಚಿಬಿಡುತ್ತದೆ. ಒಳಗೆ ಮೊಟ್ಟೆಗಳು ಮರಿಯಾಗಿ ಅವು ತುಸು ಬೆಳೆಯುವವರೆಗೂ ಗಂಡು, ಹೆಣ್ಣು ಹಾಗೂ ಮರಿಗಳಿಗೆ ಆಹಾರವನ್ನ ತಂದು ಒದಗಿಸುತ್ತದೆ. ಮರಿಗಳು ತುಸು ದೊಡ್ಡವಾದನಂತರ ಹೆಣ್ಣು ಗೂಡಿನ ʻಬಾಗಿಲನ್ನುʼ ಒಡೆದುಕೊಂಡು, ಹೊರಬರುತ್ತದೆ. ಮರಿಗಳು ತಮ್ಮ ಮಲದಿಂದ ಮತ್ತೆ ಗೂಡಿನ ಬಾಯಿಯನ್ನು ಒಂದು ಸಣ್ಣ ರಂದ್ರದಷ್ಟು ಬಿಟ್ಟು ಉಳಿದಂತೆ ಮುಚ್ಚಿಬಿಡುತ್ತವೆ. ಆನಂತರ ಗಂಡು ಹೆಣ್ಣು ಎರಡೂ ಸೇರಿ ಮರಿಗಳಿಗೆ ಆಹಾರ ಒದಗಿಸುತ್ತದೆ.

    ದಾಸಮಂಗಟ್ಟೆ: ಇದು ಹದ್ದಿಗಿಂತ ದೊಡ್ಡದಾಗಿದ್ದು, ರಣಹದ್ದಿಗಿಂತ ಚಿಕ್ಕದಾದ ಬೃಹತ್‌ ಪಕ್ಷಿ. ಇದರ ತಲೆ, ಕತ್ತು, ಕೊಕ್ಕು ಹಳದಿ ಬಣ್ಣದಿಂದ ಕೂಡಿರುತ್ತದೆ. ಇದರ ಕಣ್ಣಿನ ಭಾಗದಲ್ಲಿ ಅಗಲವಾದ ಅಡ್ಡ ಕಪ್ಪು ಪಟ್ಟಿಯನ್ನ ಕಾಣಬಹುದು. ನೆತ್ತಿಯಿಂದ ಕೊಕ್ಕಿನ ಮಧ್ಯದವರೆಗೆ ಹಳದಿ ಟೋಪಿ ಕಂಡುಬರುತ್ತದೆ. ಕತ್ತಿನ ತಳಭಾಗ ಮತ್ತು ದೇಹ ಹಾಗೂ ರೆಕ್ಕೆ ಕಪ್ಪು ಬಣ್ಣದ್ದಾಗಿರುತ್ತದೆ. ಇದರ ಹೊಟ್ಟೆ ಮತ್ತು ಬಾಲ ಬಿಳಿಯಾಗಿರುತ್ತದೆ. ಬಾಲದ ಮೇಲೆ ಅಗಲವಾದ ಕಪ್ಪು ಪಟ್ಟಿಯನ್ನ ಕಾಣಬಹುದು. ಅಲ್ಲದೆ ಕಪ್ಪು ರೆಕ್ಕೆಯ ಮೇಲೆ ಅಗಲವಾದ ಬಿಳಿ ಪಟ್ಟಿ ಹಾಗೂ ಬಾಲದ ಮೇಲಿನ ಪಟ್ಟಿಗಳು ಹಾರುವಾಗ ಸ್ಪಷ್ಟವಾಗಿ ಗೋಚರಿಸುತ್ತವೆ. ಇವುಗಳು ಹೆಚ್ಚಾಗಿ ನಿತ್ಯಹರಿದ್ವರ್ಣ, ತೇವ ಪರ್ಣಪಾತಿ ಕಾಡುಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು, ದಾಂಡೇಲಿ, ಅಣಶಿ, ಕುದುರೆಮುಖ, ಮೂಕಾಂಬಿಕಾ ಅರಣ್ಯಗಳಲ್ಲಿ ಕಾಣಬಹುದು. ಸಂತಾನೋತ್ಪತ್ತಿ ಸಮಯದಲ್ಲಿ ಮರದ ಪೊಟ್ಟರೆಗಳಲ್ಲಿ ಗೂಡು ನಿರ್ಮಿಸಿ ಫೆಬ್ರುವರಿ ತಿಂಗಳಿಂದ ಏಪ್ರಿಲ್ ತಿಂಗಳೊಳಗೆ 2 ಮೊಟ್ಟೆಗಳಿಗೆ ಜನ್ಮ ನೀಡುತ್ತವೆ.

    ಕರ್ನಾಟಕದಲ್ಲಿ ದಾಸ ಮಂಗಟ್ಟೆಹಕ್ಕಿ, ಮಲಬಾರ್ ಮಂಗಟ್ಟೆ ಹಾಗೂ ಸಾಮಾನ್ಯ ಮಂಗಟ್ಟೆ ಹಕ್ಕಿಗಳನ್ನು ನೋಡಬಹುದು. ದುರದೃಷ್ಟವಶಾತ್‌ ಈ ಮಂಗಟ್ಟೆ ಪಕ್ಷಿಗಳಿಂದು ಅಳಿವಿನ ಅಂಚಿನಲ್ಲಿದೆ.

    ಕೆನ್ನೀಲಿ ಬಕ:
    ಸುಮಾರು 90 ಸೆಂ.ಮೀ. ಎತ್ತರದ, ಬೂದು ಬಕ ಪಕ್ಷಿಯಷ್ಟಿರುವ ಈ ಹಕ್ಕಿಯ ಮೇಲ್ಭಾಗದ ಮೈ ನೀಲಿ ಬೂದು ಬಣ್ಣವಾಗಿದ್ದು, ಉದ್ದನೆಯ ಕೊಕ್ಕು, ಕೆನ್ನೆಯಿಂದ ಹೊರಚಾಚುವ ಕರೀಬಣ್ಣದ ಉದ್ದನೆಯ ಪುಕ್ಕ, ಕತ್ತು ಹಾಗೂ ತಲೆಯು ಇಟ್ಟಿಗೆಯ ಬಣ್ಣ ಹೊಂದಿದ್ದು, ಕತ್ತಿನ ಕೆಳಗೆ ಕಪ್ಪು ಹಾಗೂ ತಿಳಿ ಕಂದು ಬಣ್ಣವಿರುತ್ತದೆ. ಸೂರ್ಯನ ಪ್ರಕಾಶದಲ್ಲಿ ನೇರಳೆ ಬಣ್ಣ ಕಾಣುತ್ತದೆ. ಪಕ್ಷಿ ಪ್ರೇಮಿಗಳ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ.

    ಭಾರತದ ಎಲ್ಲಾ ಭಾಗಗಳಲ್ಲಿ, ಶ್ರೀಲಂಕಾದಲ್ಲಿ ಸ್ಥಳೀಕವಾಗಿಯೂ ಪ್ರಾದೇಶಿಕ ವಲಸೆ ಹಕ್ಕಿಗಳಾಗಿಯೂ ಇವು ಕಂಡುಬರುತ್ತವೆ. ಏಕಾಂಗಿಗಳಾಗಿ ನೀರಿನ ಝರಿಗಳ ಬಳಿ, ನೀರಿನ ಮಡುವುಗಳ ಹತ್ತಿರ ಇವು ಕಾಣಿಸಿಕೊಳ್ಳುತ್ತವೆ. ಮೀನು, ಕಪ್ಪೆ, ಹಾವು ಇದರ ಆಹಾರ. ಜೂನ್-ಮಾರ್ಚ್ ತಿಂಗಳ ಮಧ್ಯೆ ಮರಿ ಮಾಡುತ್ತವೆ. ಈ ಹಕ್ಕಿಗಳು ತಮ್ಮ ಜಾತಿಗೆ ಸೇರಿದ ಹಕ್ಕಿಗಳಿರುವ ಕಾಲೋನಿಗಳಲ್ಲಿಯೇ ಸಾಮಾನ್ಯವಾಗಿ ಮರಿ ಮಾಡುತ್ತವೆ. ಗಿಡಗಳಲ್ಲಿ, ಜೊಂಡು ಹುಲ್ಲಿನ ಹಾಸಿನ ಮೇಲೆ ಕಡ್ಡಿಗಳಿಂದ ಗೂಡನ್ನು ಕಟ್ಟಿ, ನೀಲಿ-ಹಸಿರು ಮಿಶ್ರ ಬಣ್ಣದ 3-5 ಮೊಟ್ಟೆಗಳನ್ನು ಇಡುತ್ತವೆ.

    ಸೌಂದರ್ಯಕ್ಕೆ ಮತ್ತೊಂದು ಹೆಸರು ಬಾಲದಂಡೆಯ ಹಕ್ಕಿ (Asian Paradise):
    ಕಣ್ಣಿಗೆ ಸುಂದರ ನೋಟ ಬೀರುವ ಹಕ್ಕಿಗಳನ್ನು ಪಟ್ಟಿ ಮಾಡುತ್ತಾ ಹೋದ್ರೆ ಅವುಗಳಲ್ಲಿ ಪ್ರಮುಖವಾದುದು ಬಾಲದಂಡೆಯ ಹಕ್ಕಿ. ಅದರ ಬಾಲವೇ ಅದಕ್ಕೇ ಸೌಂದರ್ಯ. ಛಾಯಾಗ್ರಾಹಕನೂ ಇದರ ಫೋಟೋ ಕ್ಲಿಕ್ಕಿಸಬೇಕೆಂದರೆ ಹರಸಾಹಸ ಮಾಡಲೇಬೇಕು. ಏಕೆಂದರೆ ಇದರ ಬಾಲ ಪೂರ್ಣ ನೋಡಿಕೊಂಡು ಫೋಟೋ ಕ್ಲಿಕ್ಕಿಸುವಷ್ಟರಲ್ಲೇ ಸರ್ರನೆ ಹಾರಿಬಿಡುತ್ತೆ.

    ಗಂಡು ರಾಜಹಕ್ಕಿಗೆ ಕಡು ನೀಲಿಗಪ್ಪು ತಲೆ, ಜುಟ್ಟು, ಗಲ್ಲ, ಹೊಳೆಯುವ ಬಿಳಿದೇಹ, ರೆಕ್ಕೆಯಲ್ಲಿ ಅಲ್ಲಲ್ಲಿ ಕಪ್ಪು ಗರಿಗಳು. ಮೊದಲೇ ತಿಳಿಸಿದಂತೆ ಒಂದೂವರೆ ಅಡಿ ಉದ್ದದ ಬಿಳಿ ರಿಬ್ಬನ್ ತರಹದ ಬಾಲ. ಇದರಲ್ಲಿ ಮತ್ತೊಂದು ಒಳಪ್ರಭೇದವಿದೆ. ಈ ಪ್ರಭೇದದಲ್ಲಿ ಬಿಳಿದೇಹದ ಬದಲು ಕೆಂಗಂದು ದೇಹ ಮತ್ತು ಕೆಂಗಂದು ರಿಬ್ಬನ್ ಬಾಲ ಇರುತ್ತದೆ. ವರ್ಷದಿಂದ ವರ್ಷಕ್ಕೆ ಇದರ ಬಾಲ ಬೆಳೆಯುತ್ತಾ ಹೋಗುತ್ತದೆ, 3 ವರ್ಷಗಳ ನಂತರ ಒಂದು ಅಡಿ ಮೀರುತ್ತದೆ. ಜೊತೆಗೆ ಬಾಲ್ಯದ ಕೆಂಪು ಬಿಳಿಯತ್ತ ಹೊರಳುತ್ತದೆ. ಕೆಂಗಂದು ಮತ್ತು ಬಿಳಿ ಮಿಶ್ರಿತ ರಾಜಹಕ್ಕಿಯನ್ನು ನಾವು ಕೆಲವೊಮ್ಮೆ ಕಂಡರೆ ಅದನ್ನು ಟ್ರಾನಿಯೆಂಟ್‌ ಫೇಸ್‌ ಎಂದು ತಿಳಿಯಬೇಕು. ಹೀಗೆ ಅಚ್ಚ ಬಿಳಿದೇಹ ಹೊಂದಿದ ರಾಜಹಕ್ಕಿಯನ್ನು ಹಿಂದಿಯಲ್ಲಿ ದೂದ್‍ರಾಜ ಎಂದು ಹೇಳುತ್ತಾರೆ.

    ಈ ಪಕ್ಷಿ ಬೇಸಿಗೆಯಲ್ಲಿ ಮೇಲುಕೋಟೆ, ಬಂಡೀಪುರ, ನಂದಿಬೆಟ್ಟ, ಸಾವನ ದುರ್ಗ, ದೇವರಾಯನ ದುರ್ಗ, ಬನ್ನೇರುಘಟ್ಟ, ಮುತ್ತತ್ತಿಯಂಥಾ ಕಾಡುಗಳಲ್ಲಿ ಕಾಣಸಿಗುತ್ತವೆ. ಚಳಿಗಾಲದಲ್ಲಿ ದಕ್ಷಿಣಭಾರತದ ಅನೇಕ ಜಾಗಗಳಲ್ಲಿ ಚದುರಿ ಹೋಗುತ್ತವೆ. ಮರಗಳು ದಟ್ಟವಿರುವ, ವಿವಿಧ ಬೆಳೆಗಳಿಂದ ಕೂಡಿದ ತೋಟ, ಬಿದುರು ಕಾಡುಗಳೆಂದರೆ ಇವಕ್ಕೆ ಬಲು ಪ್ರಿಯ.

    ಮಧುರ ಕಂಠ:
    ನಮ್ಮ ಅತಿ ಸುಂದರ ಹಕ್ಕಿಗಳಲ್ಲಿ ಈ ಮಧುರಕಂಠವೂ ಒಂದು. ಹೆಸರಿಗೆ ತಕ್ಕಂತೆ ಇದು ಶ್ರಾವ್ಯವಾಗಿ ಹಾಡುತ್ತದೆ. ಇಂಗ್ಲಿಷಿನಲ್ಲಿ ಇದನ್ನು ಐಯೋರ ಎಂಬ ಇಂಪಾದ ಹೆಸರಿನಿಂದಲೇ ಕರೆಯುತ್ತಾರೆ.

    ದಕ್ಷಿಣ ಏಷ್ಯಾದಲ್ಲಿ ಎರಡು ಜಗತ್ತಿನಲ್ಲಿ 4 ಬಗೆಯ ಮಧುರಕಂಠಗಳು ಕಂಡುಬರುತ್ತವೆ. ಎಲ್ಲವೂ ಹಸಿರು, ಹಳದಿ, ಬಿಳಿ ಹಾಗೂ ಕಪ್ಪು ವರ್ಣಗಳ ಸಂಯೋಜನೆಯ ಹಕ್ಕಿಗಳೇ. ಗಂಡು ಹೆಣ್ಣಿನ ವರ್ಣ ಸಂಯೋಜನೆ ಬೇರೆ ಬೇರೆ. ಮರಿ ಮಾಡುವ ಕಾಲದಲ್ಲಿ ಗಂಡು ಹಕ್ಕಿ ಕಪ್ಪು ಟೋಪಿಯನ್ನು ಮೆರೆಸುತ್ತದೆ. ಇದರ ಪ್ರೇಮಯಾಚನಾ ಪ್ರಸಂಗ ಪ್ರಸಿದ್ಧವಾದದ್ದು. ಎಲೆಗಳ ನಡುವೆ ನುಸುಳಿ ಕೀಟಗಳನ್ನು ಹೆಕ್ಕಿಕೊಳ್ಳುವುದು ಇದರ ಆಹಾರ ಸಂಪಾದನೆಯ ಕ್ರಮ. ಕಂಬಳಿ ಹುಳುಗಳೂ ಇದರ ಆಹಾರ ಕ್ರಮವಾಗಿದೆ.

    ದಕ್ಷಿಣ ಭಾರತದಲ್ಲಿ ಕಂಡುರುವುದು ಸಾಮಾನ್ಯ ಮಧುರಕಂಠ. ಉತ್ತರ-ಪಶ್ಚಿಮ ಭಾರತದಲ್ಲಿ ಮಾರ್ಷಲ್ ಮಧುರಕಂಠ ಕಂಡುಬರುತ್ತದೆ. ದಕ್ಷಿಣ ಭಾರತದಲ್ಲಿಯೂ ಮಾರ್ಷಲ್ಸ್ ಕಂಡುಬರುತ್ತದೆ. ಇದರ ಬಾಲದಿಂದಲೇ ಇದನ್ನು ಗುರುತಿಸಬಹುದು ಎಂದು ಪಕ್ಷಿ ತಜ್ಞರು ಹೇಳುತ್ತಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಕಣ್ಮನ ಸೆಳೆಯುತ್ತಿವೆ ಕಾಡಿನ ರೈತ ಪಕ್ಷಿಗಳ ಉತ್ಸವ

    ಕಣ್ಮನ ಸೆಳೆಯುತ್ತಿವೆ ಕಾಡಿನ ರೈತ ಪಕ್ಷಿಗಳ ಉತ್ಸವ

    ಕಾರವಾರ: ಬೆಳೆಯುತ್ತಿರುವ ನಾಗರೀಕತೆಯಲ್ಲಿ ಪ್ರಾಣಿ ಪಕ್ಷಿಗಳ ಸಂತತಿ ನಾಶವಾಗುತ್ತಿವೆ. ಮುಂದಿನ ಪೀಳಿಗೆಗಳಿಗೆ ಚಿತ್ರಪಟದಲ್ಲಿ ಪಕ್ಷಿ ಪ್ರಾಣಿಗಳ ಫೋಟೋಗಳನ್ನು ತೋರಿಸಿ ಸಮಾಧಾನ ಪಟ್ಟುಕೊಳ್ಳುವ ಪರಿಸ್ಥಿತಿ ಬಂದಿದೆ. ಇಂತಹ ಕಾಲಘಟ್ಟದಲ್ಲಿ ಪ್ರಾಣಿ ಪಕ್ಷಿಗಳನ್ನ ರಕ್ಷಣೆ ಮಾಡುವ ಹೊಣೆ ನಮ್ಮದು.

    ಇದೇ ಮೊದಲ ಬಾರಿಗೆ ಹಾರ್ನ್ ಬಿಲ್ ಉತ್ಸವವನ್ನು ಅರಣ್ಯ ಇಲಾಖೆ ಆಯೋಜನೆ ಮಾಡಿತ್ತು. ದೇಶದಲ್ಲಿಯೇ ಅವಸಾನದ ಅಂಚಿನಲ್ಲಿರುವ ಈ ಹಾರ್ನ್‍ಬಿಲ್ ಗಳು ಕಾಳಿ ನದಿಯ ಪ್ರದೇಶವಾದ ದಾಂಡೇಲಿಯ ದಟ್ಟ ಕಾಡಿನಲ್ಲಿ ತಮ್ಮ ಬದುಕು ರೂಪಿಸಿಕೊಂಡಿವೆ.

    ಕಾಡಿನ ರೈತ ಎಂದೇ ಪ್ರಸಿದ್ಧವಾಗಿರುವ ಈ ಹಕ್ಕಿಗಳ ನಾಲ್ಕು ಪ್ರಬೇಧಗಳು ಈ ಭಾಗದಲ್ಲಿ ನೋಡಲು ಸಿಗುತ್ತವೆ. ಹೀಗಾಗಿ ಪಕ್ಷಿ ಪ್ರಿಯರಿಗಾಗಿ ಅರಣ್ಯ ಇಲಾಖೆ ಮೂರು ದಿನಗಳ ಹಾರ್ನ್ ಬಿಲ್ ಉತ್ಸವ ಮಾಡುವ ಮೂಲಕ ಪಕ್ಷಿ ಪ್ರಿಯರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಸೆಳೆಯುತ್ತಿದೆ. ಪಕ್ಷಿವೀಕ್ಷಣೆ, ಛಾಯಾಚಿತ್ರ ಪ್ರದರ್ಶನ ಮತ್ತು ಮಾಹಿತಿ ಕಾರ್ಯಗಾರವನ್ನು ಮೂರು ದಿನಗಳವರೆಗೆ ಆಯೋಜನೆ ಮಾಡಿದ್ದಾರೆ.

    ಹಾರ್ನ್ ಬಿಲ್ ಪಕ್ಷಿಯ ಮಹತ್ವವೇನು?
    ಗ್ರೇಟ್ ಹಾರ್ನ್ ಬಿಲ್ (ಬ್ಯುಸೆರೊಸ್ ಬೈಕಾರ್ ನಿಸ್), ಇದನ್ನು ಗ್ರೇಟ್ ಇಂಡಿಯನ್ ಹಾರ್ನ್ ಬಿಲ್ ಅಥವಾ ಗ್ರೇಟ್ ಪೈಡ್ ಹಾರ್ನ್ ಬಿಲ್ (ಬಣ್ಣಬಣ್ಣದ ಮಹಾ ಹಾರ್ನ್ ಬಿಲ್) ಎಂದು ಕೂಡ ಕರೆಯಲಾಗುತ್ತದೆ. ಕನ್ನಡದಲ್ಲಿ `ಮಂಗಟ್ಟೆ’ ಎಂದು ಕರೆಯುತ್ತಾರೆ. ಹಾರ್ನ್ ಬಿಲ್ ಕುಟುಂಬದ ದೊಡ್ಡ ಪ್ರಭೇದಗಳ ಪೈಕಿ ಇದು ಒಂದಾಗಿದೆ. ಗ್ರೇಟ್ ಹಾರ್ನ್ ಬಿಲ್ ಭಾರತ, ಮಲಯ್ ಪರ್ಯಾಯ ದ್ವೀಪ ಮತ್ತು ಸುಮಾತ್ರಾ, ಇಂಡೋನೇಷ್ಯಾದ ಅರಣ್ಯಗಳಲ್ಲಿ ಕಂಡುಬರುತ್ತದೆ. ಅವುಗಳ ಆಕರ್ಷಕ ಗಾತ್ರ ಮತ್ತು ಬಣ್ಣ ಅನೇಕ ಬುಡಕಟ್ಟು ಜನಾಂಗದ ಸಂಸ್ಕೃತಿಗಳಲ್ಲಿ ಮತ್ತು ಆಚರಣೆಗಳಲ್ಲಿ ಅವುಗಳನ್ನು ಪ್ರಮುಖವಾಗಿಸಿವೆ.

    ಗ್ರೇಟ್ ಹಾರ್ನ್ ಬಿಲ್ ದೀರ್ಘಕಾಲದವರೆಗೆ ಜೀವಿಸುವ ಪಕ್ಷಿಯಾಗಿದ್ದು, 50 ವರ್ಷಗಳವರೆಗೆ ಬದುಕುಳಿಯುತ್ತವೆ. ಇವುಗಳು ಹೆಚ್ಚಾಗಿ ಫಲಾಹಾರಿಗಳಾದರೂ ಕೂಡ ಇವು ಅನುಕೂಲವರ್ತಿಗಳಾಗಿದ್ದು, ಸಣ್ಣ ಸಸ್ತನಿ, ಸರೀಸೃಪ ಮತ್ತು ಪಕ್ಷಿಗಳನ್ನು ಬೇಟೆಯಾಡುತ್ತವೆ. ಇವುಗಳು ಸೇವಿಸಿದ ಹಣ್ಣುಗಳು ಅದರ ಹಿಕ್ಕಿಯಿಂದ ಬೀಜವಾಗಿ ಸಸಿಗಳಾಗಿ ಅರಣ್ಯ ಹೆಚ್ಚಲು ಕಾರಣವಾಗಿದೆ. ಈ ಕಾರಣದಿಂದ ಅರಣ್ಯದ ರೈತ ಎಂಬ ಹೆಸರು ಕೂಡ ಈ ಪಕ್ಷಿಗಳ ಹೆಗ್ಗಳಿಕೆಗೆ ಸೇರಿಕೊಂಡಿವೆ. ಸ್ಥಳೀಯ ಜನರು ಇವುಗಳ ಬೇಟೆಯಾಡಿ ಮಾಂಸ ಹಾಗೂ ಔಷಧಕ್ಕೆ ಬಳಕೆ ಮಾಡುತ್ತಿದ್ದರು.

    ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ನಾಲ್ಕು ಪ್ರಬೇಧಗಳಿವೆ. ಇವುಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಭಾಗದಲ್ಲಿ ಹೆಚ್ಚು ಕಂಡುಬರುತ್ತವೆ. ಈ ಕಾರಣದಿಂದ 2008 ರಲ್ಲಿ ಹಾರ್ನ್ ಬಿಲ್ ರಕ್ಷಿತ ಪ್ರದೇಶವಾಗಿ ಈ ಭಾಗವನ್ನು ಘೋಷಿಸಲಾಗಿದೆ. ಇದಲ್ಲದೇ ಪರಿಸರ ಪ್ರಿಯರು ಈ ಭಾಗದಲ್ಲಿ ಇವುಗಳ ಅಧ್ಯಯನದಲ್ಲಿ ನಿರತರಾಗಿದ್ದಾರೆ. ಪ್ರತಿ ವರ್ಷವೂ ಅರಣ್ಯ ಇಲಾಖೆ ಪಕ್ಷಿಗಳ ವೀಕ್ಷಣೆಗಾಗಿ ಅವಕಾಶ ಮಾಡಿಕೊಡುತ್ತಿದ್ದು, ಬರ್ಡ್ ವಾಚ್ ಕಾರ್ಯಗಾರಗಳನ್ನು ಮಾಡುವ ಮೂಲಕ ಅನೇಕ ಹೊಸ ಪಕ್ಷಿಗಳನ್ನ ಈ ಭಾಗದಲ್ಲಿ ಗುರುತಿಸಿವೆ. ಅವಸಾನದ ಅಂಚಿಗೆ ತಲುಪಿರುವ ಈ ಹಾರ್ನ್ ಬಿಲ್‍ಗಳನ್ನು ರಕ್ಷಿಸುವ ಸಲವಾಗಿ ಇವುಗಳಿಗೆ ಬೇಕಾದ ಪೂರಕ ವಾತಾವರಣಕ್ಕೆ ತೊಂದರೆಯಾಗದಂತೆ ಅರಣ್ಯ ಇಲಾಖೆ ಹಲವು ಕ್ರಮಗಳನ್ನು ತೆಗೆದುಕೊಂಡು ಸಂತತಿ ರಕ್ಷಿಸುವಲ್ಲಿ ಪ್ರಯತ್ನಿಸುತ್ತಿದೆ.

    ಈ ಪಕ್ಷಿಗಳ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ರಕ್ಷಣೆಗಾಗಿ ಹಾರ್ನ್ ಬಿಲ್ ಉತ್ಸವ ಆಯೋಜನೆ ಮಾಡಿದ್ದು, ದೇಶ ವಿದೇಶದಿಂದ 150 ಕ್ಕೂ ಹೆಚ್ಚು ಪಕ್ಷಿ ವೀಕ್ಷಕರು ಹಾಗೂ ವನ್ಯ ಜೀವಿ ಛಾಯಾಗ್ರಾಹಕರು ಕಳೆದ ಮೂರು ದಿನಗಳಲ್ಲಿ ಉತ್ಸವದಲ್ಲಿ ಭಾಗವಹಿಸಿ ಮಂಗಟ್ಟೆ ಹಕ್ಕಿಯ ಮಧುರ ಕ್ಷಣಗಳನ್ನು ಯಾಂತ್ರಿಕ ಕಣ್ಣಿನಲ್ಲಿ ಸೆರೆಹಿಡಿದಿದ್ದಾರೆ. ಆಸಕ್ತಿ ಇದ್ದರೂ ಬಿಡುವಿಲ್ಲದೆ ಪಕ್ಷಿ ವೀಕ್ಷಣೆಯನ್ನು ಮಿಸ್ ಮಾಡಿಕೊಂಡವರಿಗಾಗಿ ವನ್ಯಜೀವಿ ಛಾಯಾಗ್ರಾಹಕ ಕೈಗಾದ ಪುಟ್ಟರಾಜುರವರು ತೆಗೆದ ಕೆಲವು ಅಪರೂಪದ ಚಿತ್ರಗಳನ್ನು ನಾವಿಲ್ಲಿ ನೀಡಿದ್ದೇವೆ. ಮುಂದಿನ ಬಾರಿ ನೀವೂ ಈ ಸ್ಥಳಕ್ಕೆ ಬಂದು ವೀಕ್ಷಿಸಬಹುದು. ಪಕ್ಷಿ ಪ್ರಿಯರಿಗೆ ಅರಣ್ಯ ಇಲಾಖೆ ಜಂಗಲ್ ರೆಸಾರ್ಟ್ ನಿಂದ ಹಿಡಿದು ಖಾಸಗಿ ಹೋಂ ಸ್ಟೇ ವ್ಯವಸ್ಥೆಗಳಿವೆ. ಆನ್‍ಲೈನ್ ನಲ್ಲಿ ಕೂಡ ಬುಕ್ ಮಾಡಿ ಬಿಡುವು ಮಾಡಿಕೊಂಡು ಹೋಗಬಹುದು. ಇದಲ್ಲದೇ ಕಾಳಿ ನದಿಯಲ್ಲಿ ಜಲಕ್ರೀಡೆ, ವನ್ಯಜೀವಿ ವೀಕ್ಷಣೆಗೂ ಅವಕಾಶವಿದೆ.