Tag: Hope

  • ನಮೋ 2.0ಗೆ 100 ದಿನ- ನಮ್ಮ ಸರ್ಕಾರ ಭರವಸೆಯ ಸಂಕೇತ ಎಂದ ಅಮಿತ್ ಶಾ

    ನಮೋ 2.0ಗೆ 100 ದಿನ- ನಮ್ಮ ಸರ್ಕಾರ ಭರವಸೆಯ ಸಂಕೇತ ಎಂದ ಅಮಿತ್ ಶಾ

    ನವದೆಹಲಿ: ಪ್ರಧಾನಿ ಮೋದಿ ಅವರ ಸತತ ಎರಡನೇ ಬಾರಿ ಅಧಿಕಾರ ವಹಿಸಿಕೊಂಡು ಇಂದಿಗೆ ನೂರು ದಿನ ಆಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಮ್ಮ ಸರ್ಕಾರ ದೇಶದ ಎಲ್ಲಾ ಜನರಿಗೂ ಭರವಸೆಯ ಸಂಕೇತ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಅಮಿತ್ ಶಾ ಅವರು, ನರೇಂದ್ರ ಮೋದಿ ಸರ್ಕಾರವು ಬಡವರ ರಾಷ್ಟ್ರೀಯ ಭದ್ರತೆ, ಅಭಿವೃದ್ಧಿ ಮತ್ತು ಕಲ್ಯಾಣಕ್ಕೆ ಸಮಾನಾರ್ಥಕವಾಗಿದೆ ಮತ್ತು ಸಮಾಜದ ಪ್ರತಿಯೊಂದು ವರ್ಗಕ್ಕೂ “ಭರವಸೆಯ ಸಂಕೇತ” ವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಮೋದಿ ಸರ್ಕಾರದ 100 ದಿನಗಳ ಪೂರ್ಣಗೊಂಡ ನಂತರ ಸರಣಿ ಟ್ವೀಟ್ ಮಾಡಿರುವ ಅಮಿತ್ ಶಾ ಅವರು, ನಮ್ಮ ಸರ್ಕಾರದ ಅವಧಿಯಲ್ಲಿ, ಜಮ್ಮು ಮತ್ತು ಕಾಶ್ಮೀರಕ್ಕೆ 370 ನೇ ವಿಧಿ ಅಡಿಯಲ್ಲಿ ನೀಡಲಾದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವುದು ಸೇರಿದಂತೆ ಹಲವಾರು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದೆ. ಈ ಮೂಲಕ ಮೋದಿ ಸರ್ಕಾರವು ರಾಷ್ಟ್ರೀಯ ಭದ್ರತೆ, ಅಭಿವೃದ್ಧಿ ಮತ್ತು ಬಡವರ ಕಲ್ಯಾಣಕ್ಕೆ ಸಮಾನಾರ್ಥಕವಾಗಿದೆ ಎಂದು ಅವರು ಸರಣಿ ಟ್ವೀಟ್‍ಗಳಲ್ಲಿ ಹೇಳಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದಿಂದ ಆರ್ಟಿಕಲ್ 370, ಆರ್ಟಿಕಲ್ 35 ಎ ಅನ್ನು ತೆಗೆದುಹಾಕುವುದು. ಮುಸ್ಲಿಂ ಮಹಿಳೆಯರನ್ನು ತ್ರಿಪಲ್ ತಲಾಖ್ ಶಾಪದಿಂದ ಮುಕ್ತಗೊಳಿಸುವ ನಿರ್ಧಾರ ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ರಾಷ್ಟ್ರದ ಭದ್ರತಾ ವಿಚಾರವನ್ನು ಬಲಪಡಿಸುವ ನಿರ್ಧಾರಗಳು ಮೋದಿಯವರ ನಿರ್ಣಾಯಕ ನಾಯಕತ್ವದ ಫಲಿತಾಂಶವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

    # MODIfied100 ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಅಮಿತ್ ಶಾ ಅವರು. ಮೋದಿ ಅವರ ಸರ್ಕಾರ ಎರಡನೇ ಅವಧಿಯಲ್ಲಿ 100 ದಿನವನ್ನು ಪೂರ್ಣಗೊಳಿಸಿದ್ದಕ್ಕೆ ಪಿಎಂ ಮೋದಿ ಮತ್ತು ನನ್ನ ಎಲ್ಲಾ ಮಂತ್ರಿ ಸಹದ್ಯೋಗಿಗಳಿಗೆ ಅಭಿನಂದಿಸುತ್ತೇನೆ. ನಮ್ಮ ರಾಷ್ಟ್ರದ ಅಭಿವೃದ್ಧಿ ಮತ್ತು ರಕ್ಷಣೆ ಯಾವುದೇ ತೊಂದರೆ ಬಾರದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ನಾನು ನಮ್ಮ ಎಲ್ಲ ದೇಶವಾಸಿಗಳಿಗೆ ಭರವಸೆ ನೀಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

     

  • ಕುಮಾರಣ್ಣ ನನ್ನ ಜೀವ ಉಳಿಸಿ, ಕೊಟ್ಟ ಭರವಸೆ ನೆರವೇರಿಸಿ- ಸಿಎಂ ಎಚ್‍ಡಿಕೆಗೆ ಬಾಲಕ ಮನವಿ

    ಕುಮಾರಣ್ಣ ನನ್ನ ಜೀವ ಉಳಿಸಿ, ಕೊಟ್ಟ ಭರವಸೆ ನೆರವೇರಿಸಿ- ಸಿಎಂ ಎಚ್‍ಡಿಕೆಗೆ ಬಾಲಕ ಮನವಿ

    ಬೆಂಗಳೂರು: ಜೀವ ಉಳಿಸಿಕೊಡುತ್ತೇನೆಂದು ನೀಡಿದ್ದ ಭರವಸೆಯನ್ನು ಈಡೇರಿಸುವಂತೆ ಬಾಲಕನೋರ್ವ ತಮ್ಮ ಪೋಷಕರೊಂದಿಗೆ ಸಿಎಂ ಕುಮಾರಸ್ವಾಮಿಗೆ ಅಂಗಲಾಚಿಕೊಳ್ಳುತ್ತಿದ್ದಾನೆ.

    ಮನೋಜ್ ಕುಮಾರ್ ಜೀವ ಉಳಿಸಿಕೊಳ್ಳಲು ಅಂಗಲಾಚುತ್ತಿರುವ ಬಾಲಕ. ಮೂಲತಃ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಲಕ್ಕರಸನಪಾಳ್ಯದ ಮಹದೇವಪ್ಪ ಹಾಗೂ ಜ್ಯೋತಿ ದಂಪತಿಯ ಒಬ್ಬನೇ ಮಗನಾಗಿದ್ದು, ಎಲ್ಲರಂತೆ ಚೆನ್ನಾಗಿ ಆಟವಾಡಿಕೊಂಡು ಶಾಲೆಗೆ ಹೋಗಬೇಕಾದ ವಯಸ್ಸಿನಲ್ಲಿ ಭೀಕರ ಕಾಯಿಲೆಯಿಂದಾಗಿ ಆಸ್ಪತ್ರೆಯ ಬೆಡ್ ಮೇಲೆಯೇ ಮಲಗುವ ಸ್ಥಿತಿಯಲ್ಲಿದ್ದಾನೆ.

    ಇನ್ನೂ ಒಂದು ತಿಂಗಳಲ್ಲಿ ಬಾಲಕ ಮನೋಜ್‍ಗೆ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡದೇ ಹೋದರೆ, ಒಂದು ತಿಂಗಳು ಮಾತ್ರ ಬದುಕಿರುವುದಾಗಿ ವೈದ್ಯರು ಹೇಳಿದ್ದಾರೆ. ಆದರೆ ಶಸ್ತ್ರಚಿಕಿತ್ಸೆಗೆ ಸುಮಾರು 13 ಲಕ್ಷ ರೂಪಾಯಿ ಹಣ ಬೇಕಾಗಿರುವುದರಿಂದ, ಹಣ ಭರಿಸಲು ಶಕ್ತವಿಲ್ಲದ ಕುಟುಂಬ ಸಿಎಂ ಕುಮಾರಸ್ವಾಮಿಯವರ ಮೊರೆ ಹೋಗಿದ್ದಾರೆ. ಇದನ್ನೂ ಓದಿ:  ದತ್ತು ಪಡೆದ ಬಾಲಕನನ್ನ ನಡುನೀರಿನಲ್ಲಿ ಕೈ ಬಿಟ್ಟ ಬಿಎಸ್‍ವೈ!

    ಪೋಷಕರು ಈ ಮೊದಲು ಕೊಳ್ಳೇಗಾಲದಲ್ಲಿ ನಡೆದ ವಿಕಾಸ ಪರ್ವದ ವೇಳೆ ಮನೋಜ್‍ನ ಅನಾರೋಗ್ಯದ ಕುರಿತು ಕುಮಾರಸ್ವಾಮಿಯವರಿಗೆ ಮನವಿ ಮಾಡಿಕೊಂಡಿದ್ದರು. ಆಗ ಬಾಲಕನನ್ನು ಉಳಿಸಿಕೊಡುವುದು ನನ್ನ ಜವಬ್ದಾರಿ ಎಂದು ಕುಮಾರಸ್ವಾಮಿ ಮಾತು ಕೊಟ್ಟಿದ್ದರು. ಇದಾದ ಬಳಿಕ ಪುನಃ ಶಿರಾ ಹಾಗೂ ಹಾಸನದ ವಿಕಾಸ ಪರ್ವದ ಸಮಯದಲ್ಲಿ ಪ್ರಸ್ತಾಪಿಸಿದಾಗ, ಚಿಕಿತ್ಸೆ ನೀಡುವ ಕುರಿತು ಮಾತನಾಡಿದ್ದರು. ಅಲ್ಲದೇ ಅವರು ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ಜನತಾ ದರ್ಶನದಲ್ಲೂ ಪಾಲ್ಗೊಂಡು ಮಗನನ್ನು ಉಳಿಸಿಕೊಡುವಂತೆ ಅಂಗಲಾಚಿದ್ದರು. ಆದರೆ ಬರೀ ಭರವಸೆಗಳನ್ನೇ ನೀಡುತ್ತಿದ್ದರೆ, ನಮ್ಮ ಮಗ ನಮ್ಮಿಂದ ದೂರವಾಗುತ್ತಾನೆ. ಕೂಡಲೇ ಅವನಿಗೆ ಚಿಕಿತ್ಸೆಗೆ ನೆರವು ನೀಡಿ ಎಂಬುದು ಪೋಷಕರ ಮನವಿಯಾಗಿದೆ.

    ಈಗಾಗಲೇ ಬಾಲಕನ ಜೀವ ಇಂಚಿಂಚಾಗಿ ಅಳಿದು ಹೋಗುತ್ತಿದ್ದು, ದೇಹದಲ್ಲಿ ರಕ್ತ ಕೂಡ ಉತ್ಪತ್ತಿಯಾಗುತ್ತಿಲ್ಲ. ಬಾಲಕನಿಗೆ ಮೂರು ದಿನಗಳಿಗೊಮ್ಮೆ ಕಡ್ಡಾಯವಾಗಿ ರಕ್ತ ಕೊಡಿಸಲೇಬೇಕು. ಸದ್ಯ ಎರಡು ಹೊಟ್ಟೆ ಆಪರೇಷನ್ ಮಾಡಿದ್ದು, ಅದರಲ್ಲಿ ಸಣ್ಣ ಕರುಳನ್ನ 23 ಸೆಂ.ಮೀ ಕತ್ತರಿಸಿದ್ದಾರೆ. ಇದರಿಂದಾಗಿ ರಾತ್ರಿ ನೋವಿನಲ್ಲೇ ನರಳಾಡಿ ಒದ್ದಾಡುತ್ತಿದ್ದಾನೆ. ಈಗಲಾದರೂ ನಮ್ಮ ಮಗನನ್ನು ಸಿಎಂ ಕುಮಾರಸ್ವಾಮಿಯವರು ಉಳಿಸಿ ಕೋಡುತ್ತಾರೆಯೇ ಎನ್ನುವ ನಿರೀಕ್ಷೆಯಲ್ಲಿ ಪೋಷಕರು ಕಾಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv