Tag: hopal

  • ಕೇಸರಿ ಬಟ್ಟೆ ಧರಿಸಿ, ದೇವಸ್ಥಾನದಲ್ಲಿ ರೇಪ್: ದಿಗ್ವಿಜಯ್ ಸಿಂಗ್

    ಕೇಸರಿ ಬಟ್ಟೆ ಧರಿಸಿ, ದೇವಸ್ಥಾನದಲ್ಲಿ ರೇಪ್: ದಿಗ್ವಿಜಯ್ ಸಿಂಗ್

    ಭೋಪಾಲ್: ಕೇಸರಿ ಬಟ್ಟೆ ಧರಿಸಿದ ವ್ಯಕ್ತಿಗಳಿಂದ ಅತ್ಯಾಚಾರ ನಡೆಯುತ್ತಿದೆ ಎಂದು ಕಾಂಗ್ರೆಸ್‍ನ ಹಿರಿಯ ನಾಯಕ, ಮಾಜಿ ಸಂಸದ ದಿಗ್ವಿಜಯ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಮಧ್ಯಪ್ರದೇಶದ ಭೋಪಾಲ್‍ನಲ್ಲಿ ಮಾತನಾಡಿದ ಅವರು, ದೇವಸ್ಥಾನಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಇದು ನಮ್ಮ ಹಿಂದೂ ಸಂಸ್ಕೃತಿಯೇ? ನಮ್ಮ ಸನಾತನ ಧರ್ಮವನ್ನು ಹಾನಿ ಮಾಡುತ್ತಿರುವವರನ್ನು ದೇವರು ಸುಮ್ಮನೆ ಬಿಡುವುದಿಲ್ಲ. ಅವರಿಗೆ ಶಿಕ್ಷೆಯಾಗುತ್ತದೆ ಎಂದು ಹೇಳಿದ್ದಾರೆ.

    ದಿಗ್ವಿಜಯ್ ಸಿಂಗ್ ಅವರ ಈ ಹೇಳಿಕೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಪ್ರತಿ ಅಪರಾಧವನ್ನು ಸನಾತನ ಧರ್ಮದೊಂದಿಗೆ ಸಂಯೋಜಿಸುವ ಮೂಲಕ ಹಿಂದೂಗಳನ್ನು ಕೆಣಕುವ ಅಭ್ಯಾಸವನ್ನು ದಿಗ್ವಿಜಯ್ ಸಿಂಗ್ ಹೊಂದಿದ್ದಾರೆ. ಆದರೆ ಮುಸ್ಲಿಂ ಸಮುದಾಯದ ಅಪರಾಧಗಳ ವಿಷಯ ಬಂದಾಗ ಅವರಿಗೆ ಯಾವುದೇ ಧರ್ಮವಿಲ್ಲ ಎಂದು ಹೇಳುತ್ತಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಇಂದು ಕಾಂಗ್ರೆಸ್‍ನ ಸಿದ್ಧಾಂತ ಎಂದು ದೇವಿಕಾ ಎಂಬವರು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

    ಈ ಹಿಂದೆಯೂ ದಿಗ್ವಿಜಯ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಮಧ್ಯಪ್ರದೇಶದ ಭಿಂಡ್‍ನಲ್ಲಿ ಮಹಾರಾಣಾ ಪ್ರತಾಪ್ ಅವರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ್ದ ಅವರು, ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‍ಐ)ನಿಂದ ಬಿಜೆಪಿ ಹಾಗೂ ಬಜರಂಗ ದಳ ಹಣ ಪಡೆಯುತ್ತಿವೆ. ಮುಸ್ಲಿಮರಿಗಿಂತ ಮುಸ್ಲಿಮೇತರರೇ ಹೆಚ್ಚಾಗಿ ಪಾಕಿಸ್ತಾನದ ಐಎಸ್‍ಐಗೆ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಹೇಳಿದ್ದರು.

    ಬಿಜೆಪಿ ಹಾಗೂ ಹಿಂದೂ ಸಂಘಟನೆಯಾಗಿರುವ ಬಜರಂಗ ದಳಕ್ಕೆ ಪಾಕಿಸ್ತಾನದ ಐಎಸ್‍ಐನಿಂದ ಹಣ ವರ್ಗಾವಣೆಯಾಗುತ್ತಿದೆ. ಇದನ್ನು ಎಲ್ಲರೂ ಗಮನಿಸಬೇಕು, ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷವು ಬಿಜೆಪಿ ಹಾಗೂ ಸಂಘ ಪರಿವಾರ ಸಿದ್ಧಾಂತದ ವಿರುದ್ಧ ಹೋರಾಡುತ್ತಿದೆ. ಸ್ವಾತಂತ್ರ್ಯ ಹೋರಾಟದ ವೇಳೆ ಬಿಜೆಪಿ- ಸಂಘ ಪರಿವಾರ ಇರಲಿಲ್ಲ. ಹೀಗಾಗಿ ಅವರಿಂದ ನಾವು ದೇಶ ಪ್ರೇಮವನ್ನು ಕಲಿಯುವ ಅಗತ್ಯವಿಲ್ಲ ಎಂದು ಹೇಳಿದ್ದರು.