Tag: Honnavalli Krishna

  • ತೆರೆಯ ಮೇಲೂ ನಿರ್ದೇಶಕನಾಗಿ ನಟಿಸಿದ ಯೋಗರಾಜ್ ಭಟ್

    ತೆರೆಯ ಮೇಲೂ ನಿರ್ದೇಶಕನಾಗಿ ನಟಿಸಿದ ಯೋಗರಾಜ್ ಭಟ್

    ಮ್ಮ ನಿರ್ದೇಶನದ ಬ್ಯುಸಿ ನಡುವೆಯೂ ಯೋಗರಾಜ್ ಭಟ್ ಆಗೊಂದು ಈಗೊಂದು ಸಿನಿಮಾದಲ್ಲಿ ನಟಿಸುತ್ತಲೇ ಇರುತ್ತಾರೆ. ಈ ಹಿಂದೆ ರಿಷಭ್ ಶೆಟ್ಟಿ ನಟನೆಯ ‘ಬೆಲ್ ಬಾಟಮ್’ ಸಿನಿಮಾದಲ್ಲಿ ಯೋಗರಾಜ್ ಭಟ್ ವಿಶೇಷ ಪಾತ್ರವೊಂದನ್ನು ಮಾಡಿದ್ದರು. ಆ ಪಾತ್ರದಲ್ಲಿ ನಿಜವಾಗಿಯೂ ಕಾಣಿಸಿಕೊಂಡಿದ್ದು ಯೋಗರಾಜ್ ಭಟ್ ಅವರಾ? ಎನ್ನುವಂತೆ ಅವರನ್ನು ಮೇಕ್ ಓವರ್ ಮಾಡಲಾಗಿತ್ತು. ಇದೀಗ ರಿಷಭ್ ಜತೆ ಮತ್ತೊಂದು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಭಟ್. ಇದನ್ನೂ ಓದಿ : ಪೊಲೀಸ್ ಪೇದೆ ನನ್ನನ್ನು ಸೆಕ್ಸ್ ವರ್ಕರ್ ರೀತಿ ನೋಡಿದ : ಮಲಯಾಳಿ ನಟಿ ಅರ್ಚನಾ ಆರೋಪ

    ರಿಷಭ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ‘ಹರಿಕಥೆ ಅಲ್ಲ, ಗಿರಿಕಥೆ’ ಸಿನಿಮಾದಲ್ಲಿ ಯೋಗರಾಜ್ ಭಟ್ ವಿಶೇಷ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಆ ಪಾತ್ರವು ಸಿನಿಮಾ ನಿರ್ದೇಶಕನನ್ನು ಪ್ರತಿನಿಧಿಸಲಿದೆಯಂತೆ. ಆ ಪಾತ್ರವನ್ನು ಇವರು ನಿರ್ವಹಿಸಿದ್ದಾರೆ. ‘ಹರಿಕಥೆ ಅಲ್ಲ, ಗಿರಿಕಥೆ’ ಸಿನಿಮಾದ ಕಥೆಯೇ ವಿಶೇಷವಾಗಿದೆಯಂತೆ. ಇದು ಸಹಾಯಕ ನಿರ್ದೇಶಕರ ಬದುಕಿನ ಕುರಿತಾಗಿದ್ದು, ಅವರಿಗೆ ಸ್ಫೂರ್ತಿ ನೀಡುವಂತ ಪಾತ್ರದಲ್ಲಿ ಭಟ್ ನಟಿಸಿದ್ದಾರಂತೆ. ಇದನ್ನೂ ಓದಿ : ಕಾಶ್ಮೀರ ಟಿವಿ ಸ್ಟಾರ್ ನಟಿ ಹತ್ಯೆ ಮಾಡಿದ ಭಯೋತ್ಪಾದಕರು

    ಈ ಸಿನಿಮಾದ ಮತ್ತೊಂದು ವಿಶೇಷ ಎಂದರೆ, ಇಬ್ಬರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕರಣ್ ಅನಂತ್ ಮತ್ತು ಅನಿರುದ್ಧ ಮಹೇಶ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ವಿಶೇಷ. ರಿಷಭ್ ಶೆಟ್ಟಿ ನಾಯಕನಾದರೆ, ವಾಸುಕಿ ವೈಭವ್ ಅವರ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬಂದಿವೆ. ಇದನ್ನೂ ಓದಿ : ತಮಿಳು ಖ್ಯಾತ ನಟ ಸಿಂಬು ಮನೆಮುಂದೆ ಹೈಡ್ರಾಮಾ, ಸೀರಿಯಲ್ ನಟಿ ಧರಣಿ

    ರಿಷಭ್ ಮಾತ್ರವಲ್ಲ ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಕೂಡ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾಂತೆ. ಇವರ ಮಗನ ಪಾತ್ರದಲ್ಲಿ ರಿಷಭ್ ನಟಿಸಿದ್ದಾರೆ. ತಪಸ್ವಿನಿ ಮತ್ತು ರಚನಾ ಇಂದರ್ ಇಬ್ಬರು ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

  • ಬೆಟ್ಟದ ಹೂವು ಚಿತ್ರದಲ್ಲಿ ನಟನೆ ಮಾಡಲ್ಲವೆಂದು ಅಪ್ಪು ಹಠಮಾಡಿದ್ದರು: ಹೊನ್ನಾವಳ್ಳಿ ಕೃಷ್ಣ

    ಬೆಟ್ಟದ ಹೂವು ಚಿತ್ರದಲ್ಲಿ ನಟನೆ ಮಾಡಲ್ಲವೆಂದು ಅಪ್ಪು ಹಠಮಾಡಿದ್ದರು: ಹೊನ್ನಾವಳ್ಳಿ ಕೃಷ್ಣ

    ದಾವಣಗೆರೆ: ಬೆಟ್ಟದ ಹೂವು ಚಿತ್ರದಲ್ಲಿ ಬಾಲನಟನಾಗಿ ಅಪ್ಪು ನಟನೆ ಮಾಡಲ್ಲ ಎಂದು ಹಠಮಾಡಿದ್ರು ಎಂದು ಹಿರಿಯ ನಟ ಹೊನ್ನಾವಳ್ಳಿ ಕೃಷ್ಣ ಹಳೇಯ ನೆನಪು ಮೆಲುಕು ಹಾಕಿದರು.

    ದಾವಣಗೆರೆ ಜಿಲ್ಲೆಯ ಹೊನ್ನಾಳ್ಳಿ ಪಟ್ಟಣದಲ್ಲಿ ಅಪ್ಪುವಿಗೆ ಶ್ರದ್ಧಾಂಜಲಿ ಹಾಗೂ ನೇತ್ರದಾನದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು, ನಾನು ಓದಿದ್ದು 4ನೇ ತರಗತಿ ಮಾತ್ರ. ಅದ್ರೂ ಸಿನಿಮಾದಲ್ಲಿ ನಟಿಸಲು ಹೋದವನಲ್ಲ. ಪ್ರೇಮದ ಕಾಣಿಕೆ ಸಿನಿಮಾದಲ್ಲಿ ಮೊದಲು ನಾನು ಅಪ್ಪುನನ್ನು ನೋಡಿದ್ದೆ. ಸನಾದಿ ಅಪ್ಪಣ್ಣ, ವಸಂತ ಗೀತೆ, ಮೊದಲಾದ ಚಿತ್ರಗಳಲ್ಲಿ ಅವನ ಜೊತೆಗಿದ್ದೆ. ಬೆಟ್ಟದ ಹೂ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ನಾನು ಅಲ್ಲಿ ಇರಲಿಲ್ಲ ಎಂಬ ಒಂದೇ ಕಾರಣಕ್ಕೆ ಅಪ್ಪು ನಟನೆ ಮಾಡಲ್ಲ ಎಂದು ಹಠ ಹಿಡಿದಿದ್ರು ಎಂದು ನೆನಪಿಸಿಕೊಂಡು ಭಾವುಕರಾದರು. ಇದನ್ನೂ ಓದಿ: ರಾಜರತ್ನ ಅಪ್ಪು ಅಗಲಿ 12ನೇ ದಿನ – ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ

    ಅಪ್ಪು ಹಠಮಾಡಿದ್ದಕ್ಕೆ ಪಾರ್ವತಮ್ಮ ಅವರು ನನಗೆ ಕರೆ ಮಾಡಿ ನನ್ನನ್ನು ಚಿತ್ರೀಕರಣದ ಸ್ಪಾಟ್‍ಗೆ ಕರೆದ್ರು. ನೀನು ಇಲ್ಲದೇ ಪುನೀತ್ ನಟನೆ ಮಾಡಲು ಒಪ್ಪುತ್ತಿಲ್ಲ ಎಂದು ಹೇಳಿದರು. ಅದಕ್ಕೆ ನಾನು ಕಷ್ಟಪಟ್ಟು ಚಿತ್ರೀಕರಣದ ಸ್ಥಳಕ್ಕೆ ತಲುಪಿದೆ. ಅದು ಅಲ್ಲದೇ ಅವರಿಗೆ ನಾನು ನಟನೆ ಮಾಡಿ ತೋರಿಸಿ ಕೊಡಬೇಕಿತ್ತು. ನಾನು ನಟನೆ ಮಾಡಿ ತೋರಿಸಿದಂತೆ ಅಪ್ಪು ನಟನೆ ಮಾಡುತ್ತಿದ್ದರು ಎಂದು ಹಳೇಯ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು.

    ಭಕ್ತ ಪ್ರಹ್ಲಾದ ಚಿತ್ರೀಕರಣದಲ್ಲಿ ಮೈಮೇಲೆ ಹಾವು ಹಾಕಿಕೊಂಡು ನಟಿಸುವ, ಆನೆಗಳ ಸಾಗಿ ಬರುವ ದಾರಿಯಲ್ಲಿ ಮಲಗುವ ದೃಶ್ಯವನ್ನು ನಾನು ಮಾಡಿ ತೋರಿಸಿದ್ದೆ. ಡಾ.ರಾಜಕುಮಾರ್ ಅವರ ಹಿರಣ್ಯಕಶಿಪು ರೌದ್ರ ನರ್ತನಕ್ಕೆ ಪುನೀತ್ ಹೆದರಿದ್ದರು. ನಂತರ ರಾಜ್ ಕುಮಾರ್, ಇದು ಕೇವಲ ನಟನೆ ಮಾತ್ರ ಎಂದು ಅಪ್ಪುಗೆ ಸಮಾಧಾನ ಪಡಿದ್ರು. ಪುನೀತ್ ನಮ್ಮ ಮಧ್ಯೆ ಇಲ್ಲ ಎಂಬುದನ್ನೂ ಈಗಲೂ ನನಗೆ ನಂಬಲು ಆಗುತ್ತಿಲ್ಲ. ನಮ್ಮ ಮನಸ್ಸಿಗೆ ಸಮಾಧಾನವಾಗುವಂತೆ ಒಳ್ಳೆಯ ಕೆಲಸ ಮಾಡಿದ್ರೆ ಬದುಕು ಸುಂದರವಾಗುತ್ತದೆ ಎಂದು ಅಪ್ಪುನನ್ನು ಉದಾಹರಣೆಗೆ ತೆಗೆದುಕೊಂಡರು. ಇದನ್ನೂ ಓದಿ: ಕಾವೇರಿ ನದಿಗೆ ತರ್ಪಣ ಬಿಟ್ಟ ವಿನೋದ್ ರಾಜ್

    ಎಲ್ಲಿವರೆಗೂ ಭಯವಿರುತ್ತೋ, ಅಲ್ಲಿವರೆಗೆ ಜಯವಿರುತ್ತದೆ. ನನ್ನ ಮನಸ್ಸಿಗೆ ಸುಳ್ಳು ಹೇಳಬಾರದು ಎಂಬ ಭಯವಿದ್ದರೆ ಯಶಸ್ಸು ಖಂಡಿತ. ಈ ಗುಣಗಳಿಂದಲೇ ಪುನೀತ್ ಪವರ್ ಸ್ಟಾರ್ ಅಗಿ ಬೆಳೆದ್ರು ಎಂದು ಹಳೇ ನೆನಪುಗಳನ್ನು ಮೆಲುಕು ಹಾಕಿ ನೋವು ವ್ಯಕ್ತಪಡಿಸಿದರು.

  • ಸಂತು ಲವ್ಸ್ ಸಂಧ್ಯಾಗೆ ಹಾಡುಗಳ ಚಿತ್ರೀಕರಣ

    ಸಂತು ಲವ್ಸ್ ಸಂಧ್ಯಾಗೆ ಹಾಡುಗಳ ಚಿತ್ರೀಕರಣ

    ಬೆಂಗಳೂರು: ನೈಜ ಘಟನೆ ಆಧಾರಿತ ಸಿನೆಮಾ ಸಂತು ಲವ್ಸ್ ಸಂಧ್ಯಾ ಚಿತ್ರದ ಹಾಡಿನ ಚಿತ್ರೀಕರಣ ನಡೆಯಿತು. ಮನೋಜ್ ಮೂವಿ ಮೇಕರ್ಸ್ ಲಾಂಛನದಲ್ಲಿ ಶಿವಕುಮಾರ್, ದೇವರಾಜ್, ಶಬರೀಶ್ ನಿರ್ಮಿಸುತ್ತಿರುವ ಸಂತು ಲವ್ಸ್ ಸಂಧ್ಯಾ ಚಿತ್ರಕ್ಕೆ ಕಳೆದ ವಾರ ಮುಳಬಾಗಿಲು ಚಿಂತಾಮಣಿಯ ಕೈಲಾಸಗಿರಿ ಸುತ್ತಮುತ್ತ ನಾಯಕ ನಾಯಕಿಯ ಮಾತಿನ ಭಾಗ ಹಾಗೂ ಎರಡು ಹಾಡುಗಳ ಚಿತ್ರೀಕರಣ ನಡೆಯಿತು.

    ಊರಂದ್ರೆ ನಮ್ಮ ಊರು, ನಮ್ಮ ತವರು ಸ್ವರ್ಗದ ಹಾಗೆ ಇಲ್ಲಿದೆ ಹಾಗೂ ನನಮ್ಯಾಲೆ ಮನಸಿಟ್ಟು ಬಂದೀದಿ ನನ ಹಿಂದೆ… ಎಂಬ ಎರಡು ಹಾಡುಗಳಲ್ಲದೆ, ಮಾತಿನ ಭಾಗದ ಚಿತ್ರೀಕರಣ, ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. 4 ವರ್ಷಗಳ ಹಿಂದೆ ಶ್ರೀನಿವಾಸಪುರ ತಾಲೂಕಿನ ಯಲ್ದೂರು ಗ್ರಾಮದಲ್ಲಿ ನಡೆದ ನೈಜ ಘಟನೆಯೊಂದು ಚಲನಚಿತ್ರವಾಗಿ ಮೂಡಿಬರುತ್ತಿದೆ.

    ಈ ಚಿತ್ರಕ್ಕೆ ಆರ್.ಕೆ. ಗಾಂಧಿ ಈ ಚಿತ್ರಕ್ಕೆ ಕತೆ, ಚಿತ್ರಕತೆ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಪೌಲ್ ರಾಜು ಛಾಯಾಗ್ರಹಣ, ಗಂಟಾಡಿ ಕೃಷ್ಣ ಸಂಗೀತ, ಸುರೇಶ್ ಕಂಬಳಿ ಸಾಹಿತ್ಯ, ಶಂಕರ್ ಸಾಹಸ, ಸಾನ್ವಿ ನೃತ್ಯ ನಿರ್ದೇಶನ, ವಿನಯ್ ಜಿ. ಆಲೂರು ಸಂಕಲನವಿದೆ. ಜೈ ಸುಬ್ರಮಣಿ, ಬಲರಾಮ್, ಸುಶ್ಮಾ ಗೌಡ, ಕಿಲ್ಲರ್ ವೆಂಕಟೇಶ್, ಬ್ಯಾಂಕ್ ಜನಾರ್ಧನ್, ಹೊನ್ನವಳ್ಳಿ ಕೃಷ್ಣ, ಜ್ಯೋತಿ ಮೂರೂರು, ಕಾವ್ಯ ಪ್ರಕಾಶ್, ದಿಂಬಾಲ ಅಶೋಕ್, ಕೋಲಾರ ಬಾಬು, ಮಹೇಶ್ ಬ್ರೂಸ್ಲಿ, ತಿರುಪತಿ ರಾಜು, ನಾಗರಾಜ್ ಮುಂತಾದವರ ತಾರಾಬಳಗವಿದೆ.

  • ಕದ್ದುಮುಚ್ಚಿ: ಸ್ಟೀಲ್ ಉದ್ಯಮಿ ಮಂಜುನಾಥ್ ಮನಸಲ್ಲಿದ್ದದ್ದು ಉಕ್ಕಿನಂಥಾ ಸಿನಿಮಾಸಕ್ತಿ!

    ಕದ್ದುಮುಚ್ಚಿ: ಸ್ಟೀಲ್ ಉದ್ಯಮಿ ಮಂಜುನಾಥ್ ಮನಸಲ್ಲಿದ್ದದ್ದು ಉಕ್ಕಿನಂಥಾ ಸಿನಿಮಾಸಕ್ತಿ!

    ಬೆಂಗಳೂರು: ನಾದಬ್ರಹ್ಮ ಹಂಸಲೇಖ ಸಂಗೀತ ನಿರ್ದೇಶನದ ಸ್ಪರ್ಶದೊಂದಿಗೇ ಕದ್ದುಮುಚ್ಚಿ ಎಂಬ ಹೊಸಬರ ಚಿತ್ರವೊಂದು ಸುದ್ದಿಯಲ್ಲಿದೆ. ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ವಿಜಯ್ ಸೂರ್ಯ ಮತ್ತು ಬಿಗ್ ಬಾಸ್ ಫೇಮಿನ ಮೇಘಶ್ರೀ ಅಭಿನಯದ ಈ ಸಿನಿಮಾವೀಗ ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ಮೆಲುವಾಗಿ ತಾಕಿದೆ. ಬದುಕಿಗೆ ಹತ್ತಿರವಾದ, ಮನೋರಂಜನಾತ್ಮಕ ಅಂಶಗಳನ್ನೂ ಹೊಂದಿರುವ ಈ ಚಿತ್ರವನ್ನು ಅಕ್ಕರಾಸ್ಥೆಯಿಂದಲೇ ನಿರ್ಮಾಣ ಮಾಡಿರುವವರು ವಿ.ಜಿ ಮಂಜುನಾಥ್.

    ಸಿನಿಮಾ ಎಂಬುದರ ಸೆಳೆತವೇ ಮಾಯೆಯಂಥಾದ್ದು. ಅದು ಎತ್ತೆತ್ತಲ್ಲಿಂದಲೋ ಮನಸುಗಳನ್ನ ಸೆಳೆದು ಬಿಡುತ್ತದೆ. ಗೊತ್ತೇ ಆಗದಂತೆ ತನ್ನ ಭಾಗವಾಗಿಸಿಕೊಂಡು ಬಿಡುತ್ತದೆ. ಈ ಮಾತಿಗೆ ಹತ್ತಾರು ಉದಾಹರಣೆಗಳಿವೆಯಾದರೂ ಕದ್ದುಮುಚ್ಚಿ ಚಿತ್ರದ ನಿರ್ಮಾಪಕರಾದ ಮಂಜುನಾಥ್ ಅದಕ್ಕೆ ತಾಜಾ ಉದಾಹರಣೆಯಂಥವರು.

    ಆದಿಚುಂಚನಗಿರಿ ಸಮೀಪದ ವಡ್ಡರಹಳ್ಳಿಯವರಾದ ಮಂಜುನಾಥ್ ಅಪ್ಪಟ ರೈತಾಪಿ ವರ್ಗದಿಂದಲೇ ಬಂದವರು. ಈವತ್ತಿಗೂ ಅವರ ಬೇರುಗಳಿರೋದು ಅಲ್ಲಿಯೇ. ಆರಂಭ ಕಾಲದಲ್ಲಿ ಮಂಜುನಾಥ್ ಅವರ ಆಸಕ್ತಿಯಿದ್ದದ್ದು ಶಿಕ್ಷಣ ಕ್ಷೇತ್ರದತ್ತ. ಟಿಸಿಎಚ್ ಸೇರಿದಂತೆ ಅದಕ್ಕೆ ಬೇಕಾದ ತಯಾರಿ ಮಾಡಿಕೊಂಡಿದ್ದ ಅವರು ಅಚಾನಕ್ಕಾಗಿ ಇಂಡಸ್ಟ್ರಿಯಲ್ ವಲಯಕ್ಕೆ ಪಾದಾರ್ಪಣೆ ಮಾಡಿದ್ದ 2000ನೇ ಇಸವಿಯಲ್ಲಿ. ಆದಿತ್ಯ ಬಿರ್ಲಾ ಕಂಪೆನಿಯ ಸ್ಟೀಲ್ ಸರಬರಾಜು ಉದ್ಯಮ ಆರಂಭಿಸಿ ಅದರಲ್ಲಿಯೇ ಪರಿಶ್ರಮ ಪಟ್ಟು ಗೆದ್ದ ಮಂಜುನಾಥ್ ಅವರ ಪ್ರಧಾನ ಕನಸಾಗಿದ್ದದ್ದು ಸಿನಿಮಾ.

    ಆರಂಭ ಕಾಲದಿಂದಲೂ ಮಂಜುನಾಥ್ ಅವರಿಗೆ ಸಿನಿಮಾ ಎಂದರೆ ಎಲ್ಲಿಲ್ಲದ ಪ್ರೀತಿ. ಅವರ ಮನೋರಂಜನೆಯ ಮೂಲವಾಗಿದ್ದದ್ದೂ ಕೂಡಾ ಸಿನಿಮಾಗಳೇ. ಅವರೊಬ್ಬ ಉದ್ಯಮಿಯಾಗಿ ಬೆಳೆದ ನಂತರ ಒಂದೊಳ್ಳೆ ಸಿನಿಮಾ ಮಾಡ ಬೇಕೆಂಬ ಹಂಬಲ ತೀವ್ರವಾಗಿತ್ತು. ಮನೋರಂಜನೆಯ ಅಂಶಗಳ ಜೊತೆಗೆ ಈ ಸಮಾಜಕ್ಕೆ ಸಂದೇಶ ಸಾರುವಂಥಾ ಕಥೆಯೊಂದು ಸಿಕ್ಕರೆ ಸಿನಿಮಾ ಮಾಡೋ ನಿರ್ಧಾರದೊಂದಿಗೆ ಮಂಜುನಾಥ್ ಮುಂದುವರೆಯುತ್ತಿದ್ದರು. ಅದೇ ಕಾಲಕ್ಕೆ ಸರಿಯಾಗಿ ನಿರ್ದೇಶಕ ವಸಂತ್ ಮಂಜುನಾಥ್ ಅವರನ್ನು ಸಂಪರ್ಕಿಸಿದ್ದರು.

    ವಸಂತ್ ಹೇಳಿದ ಕಥೆ ಇಷ್ಟವಾಗಿ 2016ರಲ್ಲಿ ಅದು ಟೇಕಾಫ್ ಕೂಡಾ ಆಗಿತ್ತು. ಆದರೆ ಎಲ್ಲವೂ ಅಚ್ಚುಕಟ್ಟಾಗಿ ಮೂಡಿ ಬರಬೇಕೆಂಬ ಮನಸ್ಥಿತಿಯ ಮಂಜುನಾಥ್ ಎಲ್ಲದರಲ್ಲಿಯೂ ಅಕ್ಕರಾಸಕ್ತಿಯಿಂದಲೇ ಗಮನ ಹರಿಸಿದ್ದರು. ಆದ್ದರಿಂದಲೇ ಕೊಂಚ ತಡವಾದರೂ ಇಡೀ ಚಿತ್ರ ಚೆಂದಗೆ ಮೂಡಿ ಬಂದಿದೆ ಎಂಬ ಆತ್ಮತೃಪ್ತಿ ಮಂಜುನಾಥ್ ಅವರಲ್ಲಿದೆ.

    ನಗರ ಜೀವನದ ಜಂಜಾಟಗಳಿಂದ ರೋಸತ್ತು ಮತ್ಯಾವುದೋ ಮಾಯೆಯ ಬೆಂಬಿದ್ದು ಹೊರಡೋ ಯುವಕನ ಸುತ್ತಾ ಈ ಚಿತ್ರದ ಕಥೆ ಬಿಚ್ಚಿಕೊಳ್ಳುತ್ತದೆಯಂತೆ. ಆ ಹುಡುಕಾಟದಲ್ಲಿಯೇ ಭರ್ಜರಿ ಮನೋರಂಜನೆಯೊಂದಿಗೆ ಬದುಕಿಗೆ ಹತ್ತಿರವಾದ ಅಂಶಗಳೂ ಅನಾವರಣಗೊಳ್ಳುತ್ತಾ ಸಾಗುತ್ತವೆ. ಕಡೆಗೊಂದು ಪರಿಣಾಮಕಾರಿಯಾದ ಸಂದೇಶವನ್ನೂ ನೀಡಲಾಗಿದೆ. ಒಟ್ಟಾರೆಯಾಗಿ ಇದು ಹೊಸಾ ಸಾಧ್ಯತೆಗಳನ್ನು ಕಾಣಿಸುವಂಥಾ ಪಕ್ಕಾ ಕಮರ್ಶಿಯಲ್ ಚಿತ್ರ.

    ಅದೇನೇ ಅಡೆತಡೆಗಳು ಎದುರಾದರೂ ಮಂಜುನಾಥ್ ಯಾವುದಕ್ಕೂ ಕೊರತೆ ಮಾಡದಂತೆ ಕದ್ದುಮುಚ್ಚಿ ಚಿತ್ರವನ್ನ ರೂಪಿಸಿದ್ದಾರೆ. ಇದರಲ್ಲಿ ಕಲಾವಿದರದ್ದೊಂದು ದೊಡ್ಡ ದಂಡೇ ಇದೆ. ಕಾಮಿಡಿಯೂ ಈ ಚಿತ್ರದ ಪ್ರಧಾನ ಅಂಶ. ಚಿಕ್ಕಣ್ಣ, ಹೊನ್ನವಳ್ಳಿ ಕೃಷ್ಣ, ಹಿರಿಯ ನಟ ದೊಡ್ಡಣ್ಣ ಸೇರಿದಂತೆ ಅನೇಕರ ಕಾಮಿಡಿ ಕಮಾಲ್ ಈ ಚಿತ್ರದಲ್ಲಿದೆ. ಇನ್ನುಳಿದಂತೆ ಬಿ.ವಿ ರಾಧಾ, ಸುಚೇಂದ್ರ ಪ್ರಸಾದ್ ಮುಂತಾದವರ ಅದ್ಧೂರಿ ತಾರಾಗಣವನ್ನ ಕದ್ದುಮುಚ್ಚಿ ಚಿತ್ರ ಹೊಂದಿದೆ.

    ಈ ಮೂಲಕ ಹೊಸಾ ಅಲೆಯ ಚೆಂದದ್ದೊಂದು ಚಿತ್ರವನ್ನ ನಿರ್ಮಾಣ ಮಾಡಿದ ಖುಷಿ ಮಂಜುನಾಥ್ ಅವರಿಗಿದೆ. ಈಗ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಿರೋದರಿಂದ ಇದೇ ತಿಂಗಳ ಇಪ್ಪತ್ತೆರಡನೇ ತಾರೀಕಿನಂದು ಈ ಚಿತ್ರವನ್ನ ತೆರೆಗಾಣಿಸುವ ಯೋಜನೆಯನ್ನೂ ಅವರು ಹಾಕಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv