Tag: honeytrap

  • ಫೇಸ್‍ಬುಕ್‍ನಲ್ಲಿ ಗೆಳೆತನ ಮಾಡ್ಕೊಂಡು ಉದ್ಯಮಿಯಿಂದ 2.45 ಲಕ್ಷ ರೂ. ದೋಚಿದ್ಳು!

    ಫೇಸ್‍ಬುಕ್‍ನಲ್ಲಿ ಗೆಳೆತನ ಮಾಡ್ಕೊಂಡು ಉದ್ಯಮಿಯಿಂದ 2.45 ಲಕ್ಷ ರೂ. ದೋಚಿದ್ಳು!

    – ನಕಲಿ ಫೇಸ್‍ಬುಕ್ ಖಾತೆಯಿಂದ ರಿಕ್ಷೆಸ್ಟ್

    ಅಹಮದಾಬಾದ್: ಫೇಸ್‍ಬುಕ್ ಮೂಲಕ ಮಹಿಳೆಯೊಬ್ಬಳು ಉದ್ಯಮಿಯನ್ನು ಪರಿಚಯಿಸಿಕೊಂಡು ಬೆದರಿಕೆಯೊಡ್ಡಿ 2.54 ಲಕ್ಷ ರೂ. ದೋಚಿರುವ ಘಟನೆ ಅಹಮದಾಬಾದ್‍ನ ಶೆಲಾದಲ್ಲಿ ನಡೆದಿದೆ.

    ಪೂಜಾ ಪ್ರಜಾಪತಿ ಹೆಸರಿನ ಪ್ರೊಫೈಲ್‍ನಿಂದ ಫೇಸ್‍ಬುಕ್‍ನಲ್ಲಿ ಬಂದಿರುವ ಫ್ರೆಂಡ್ ರಿಕ್ವೆಸ್ಟ್ ಅನ್ನು ಉದ್ಯಮಿ ಕಲ್ಪೇಶ್ ಸ್ವೀಕರಿಸಿದ್ದರು. ಸ್ವಲ್ಪ ಸಮಯದವರೆಗೆ ಚಾಟ್ ಮಾಡಿದ ನಂತರ ಪೂಜಾ, ಉದ್ಯಮಿಯನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದಾಳೆ. ಹಾಗೆಯೇ ಇಬ್ಬರೂ ಅಕ್ಟೋಬರ್ 19ರಂದು ಅವರ ವಿರಾಮಗಂ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಆಗ ಪೂಜಾ, ತನಗೆ ಸ್ವಲ್ಪ ನೀರು ಕೊಡುವಂತೆ ಕೇಳಿಕೊಂಡಿದ್ದಾಳೆ. ಅಂತೆಯೇ ನೀರು ತರಲು ಕಲ್ಪೇಶ್ ಅಡುಗೆ ಮನೆಗೆ ಹೋಗಿದ್ದಾನೆ. ಈ ವೇಳೆ ಪೂಜಾ ತನ್ನ ಫೋನ್‍ನಲ್ಲಿ ವೀಡಿಯೊ-ರೆಕಾಡಿರ್ಂಗ್ ಅನ್ನು ಆನ್ ಮಾಡಿದ್ದಳು. ಇತ್ತ ಅದೇ ಸಮಯದಲ್ಲಿ ನಾಲ್ಕು ಜನ ಪೂಜಾ ಕಡೆಯವರು ಮನೆಯೊಳಗೆ ನುಗ್ಗಿ ಕಲ್ಪೇಶ್‍ನನ್ನು ಹೊಡೆದಿದ್ದಾರೆ.

    ಮನೆಯೊಳಗೆ ನುಗ್ಗಿದ ನಾಲ್ವರು ಅತ್ಯಾಚಾರ ಪ್ರಕರಣದಲ್ಲಿ ಕಲ್ಪೇಶ್‍ನ ವಿರುದ್ಧ ಪ್ರಕರಣ ದಾಖಲು ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ವಿರಮ್‍ಗಮ್-ಸಚ್ನಾ ರಸ್ತೆಯಲ್ಲಿರುವ ಕಲ್ಪೇಶ್ ಕಾರಿನಲ್ಲಿ ಬಲವಂತವಾಗಿ ಕರೆದೊಯ್ದರು. ನಂತರ ಅಲ್ಲಿಂದ ಕಲ್ಪೇಶ್‍ನನ್ನು ಮತ್ತೊಂದು ಕಾರಿನಲ್ಲಿ ಕರೆದೊಯ್ದು ನಾಲ್ವರು 20 ಲಕ್ಷ ರೂ. ಕೊಡುವಂತೆ ಒತ್ತಾಯಿಸಿದ್ದಾರೆ. ಹಣವನ್ನು ನೀಡದಿದ್ದರೆ ವೀಡಿಯೊವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಗೊಂಡ ಕಲ್ಪೇಶ್ ಸುಮಾರು 2.45 ಲಕ್ಷ ರೂ. ನಗದು ಮತ್ತು ಒಟ್ಟು 3.5 ಲಕ್ಷ ರೂ.ಗಳ ಮೂರು ಚೆಕ್‍ಗಳನ್ನು ಕೊಟ್ಟಿದ್ದಾರೆ. ಕಲ್ಪೇಶ್‍ನನ್ನು ಅವನ ಕಾರಿನ ಬಳಿ ಇಳಿಸಿ ನಾಲ್ವರು ಪರಾರಿಯಾಗಿದ್ದಾರೆ.

    ಹನಿಟ್ರ್ಯಾಪ್ ಪ್ರಕರಣದಲ್ಲಿರುವ ಪೂಜಾ ಹಾಗೂ ಈಕೆಯೊಂದಿಗೆ ಭಾಗಿಯಾಗಿದ್ದ ಆರು ಜನರ ವಿರುದ್ಧ ವಿರಾಮಗಂ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಆಧಾರದ ಮೇಲೆ ಅಹಮದಾಬಾದ್ ಗ್ರಾಮೀಣ ಎಸ್‍ಒಜಿ ಸುರೇಂದ್ರನಗರ ನಿವಾಸಿ ಇರ್ಫಾನ್ ಮಲಾನಿಯನ್ನು ಬಂಧಿಸಲಾಗಿದೆ. ಪೊಲೀಸರು ಇನ್ನುಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಉದ್ಯಮಿ ಕಲ್ಪೇಶ್ ವಿರಮ್‍ಗ್ಯಾಮ್‍ನಲ್ಲಿ ವ್ಯವಹಾರವನ್ನು ಹೊಂದಿದ್ದಾನೆ. ಇಬ್ಬರು ಪುತ್ರರು ಸೇರಿದಂತೆ ತನ್ನ ಕುಟುಂಬದೊಂದಿಗೆ ಶೇಲಾದ ಆಪಲ್‍ವುಡ್ಸ್ ಟೌನ್‍ಶಿಪ್‍ನಲ್ಲಿ ವಾಸವಾಗಿದ್ದಾರೆ.

  • ಹನಿಟ್ರ್ಯಾಪ್- 5 ಲಕ್ಷಕ್ಕೆ ಬೇಡಿಕೆ ಇಟ್ಟವರ ಬಂಧನ

    ಹನಿಟ್ರ್ಯಾಪ್- 5 ಲಕ್ಷಕ್ಕೆ ಬೇಡಿಕೆ ಇಟ್ಟವರ ಬಂಧನ

    -ಮೂವರು ಮಹಿಳೆಯರು ಸೇರಿ ಐವರು ಅರೆಸ್ಟ್

    ಬೆಳಗಾವಿ: ಹನಿಟ್ರ್ಯಾಪ್ ಮೂಲಕ 5 ಲಕ್ಷ ರೂ.ಗೆ ಬೇಡಿಕೆ ಇರಿಸಿದ್ದ ಐವರ ತಂಡವನ್ನು ಜಿಲ್ಲೆಯ ಮಾಳಮಾರುತಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

    ಅಥಣಿ ತಾಲೂಕಿನ ಹುಲಗಬಾಳಿಯ ಸದಾಶಿವ ಚಿಪ್ಪಲಕಟ್ಟಿ, ಬೆಳಗಾವಿ ನೆಹರು ನಗರದ ರಘುನಾಥ ಧುಮ್ಮಾಳೆ, ಸವದತ್ತಿಯ ಮಂಜುಳಾ ಜತ್ತೆನ್ನವರ್, ಗೌರಿ ಲಮಾಣಿ ಮತ್ತು ಉಗರಗೋಳ ಗ್ರಾಮದ ಸಂಗೀತಾ ಕನಕಿಕೊಪ್ಪ ಬಂಧಿತ ಆರೋಪಿಗಳು. ಐವರು ಜಮಖಂಡಿ ಮೂಲದ ವ್ಯಕ್ತಿಯನ್ನು ಹನಿಟ್ರ್ಯಾಪ್ ಮೂಲಕ ತಮ್ಮ ಜಾಲಕ್ಕೆ ಬೀಳಿಸಿಕೊಂಡಿದ್ದರು. ಇದನ್ನೂ ಓದಿ: ಹನಿಟ್ರ್ಯಾಪ್ ಪ್ರಕರಣ- ಹಾಲಿ ಶಾಸಕರಿಂದ ಪೀಕಿದ್ರು ಬರೋಬ್ಬರಿ 1 ಕೋಟಿ

    ನ್ಯೂಸ್ ಯುಟ್ಯೂಬ್ ಚಾನೆಲ್ ಹೆಸರು ಹೇಳಿಕೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಖಚಿತ ಮಾಹಿತಿ ಮೇರೆಗೆ ಆರೋಪಿಗಳು ಉಳಿದುಕೊಂಡಿದ್ದ ಖಾಸಗಿ ಹೋಟೆಲ್ ಮೇಲೆ ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ. ಈ ಸಂಬಂಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಿಜೆಪಿ ಮಾಜಿ ಸಚಿವರ ಹನಿಟ್ರ್ಯಾಪ್ – 10 ಕೋಟಿ ನಿರೀಕ್ಷೆಯಲ್ಲಿದ್ದವನಿಗೆ ಕೋಳ

     

  • ಸೆಕ್ಸ್ ವಿಡಿಯೋ ಮೂಲಕ ನೌಕಾಪಡೆಯ ಮಾಹಿತಿ ಸಂಗ್ರಹಿಸ್ತಿದ್ದ ಪಾಕ್ ಮಹಿಳೆ ಅರೆಸ್ಟ್

    ಸೆಕ್ಸ್ ವಿಡಿಯೋ ಮೂಲಕ ನೌಕಾಪಡೆಯ ಮಾಹಿತಿ ಸಂಗ್ರಹಿಸ್ತಿದ್ದ ಪಾಕ್ ಮಹಿಳೆ ಅರೆಸ್ಟ್

    – ಫೇಸ್‍ಬುಕ್‍ನಲ್ಲಿ ಸಲುಗೆ ಬೆಳೆಸಿ ಬಲೆಗೆ ಬೀಳಿಸ್ತಿದ್ಲು
    – ಗೋವಾದಲ್ಲಿ ಯುವತಿಯರನ್ನ ಸೆಕ್ಸ್‌ಗಾಗಿ ಕಳುಹಿಸ್ತಿದ್ದಳು

    ಕಾರವಾರ: ಕದಂಬ ನೌಕಾನೆಲೆಯಲ್ಲಿ ಹನಿಟ್ರ್ಯಾಪ್ ಮೂಲಕ ನೌಕಾನೆಲೆಯ ಮಾಹಿತಿ ನೀಡಿದ್ದ ಮೂವರು ಸೇಲರ್ ಗಳೂ ಸೇರಿದಂತೆ 11 ಸೇಲರ್ ಗಳು ಮತ್ತು ಇಬ್ಬರು ಹವಾಲಾ ದಂದೆ ನಡೆಸುತಿದ್ದ ಉದ್ಯಮಿಗಳ ಬಂಧನಕ್ಕೆ ಹೊಸ ತಿರುವು ಸಿಕ್ಕಿದೆ. ಪಾಕಿಸ್ತಾನದಿಂದ ಭಾರತಕ್ಕೆ ನುಸುಳಿ ಇಲ್ಲಿಯೇ ಇದ್ದ ಮಹಿಳೆಯನ್ನು ಆಂಧ್ರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ಪ್ರಕರಣದಲ್ಲಿ ನೌಕಾಪಡೆಯ ಯುವ ಸೇಲರ್ ಗಳು ಹನಿಟ್ರ್ಯಾಪ್​ಗೆ ಒಳಗಾಗಿ ಭಾರತದ ವಿಮಾನ ವಾಹಕ ನೌಕೆ ಐಎನ್‍ಎಸ್ ವಿಕ್ರಮಾದಿತ್ಯ ಹಾಗೂ ಸಬ್ ಮೆರಿನ್‍ಗಳ ಗುಪ್ತ ಮಾಹಿತಿಯನ್ನು ವಾಟ್ಸಪ್ ಮೂಲಕ ಪಾಕಿಸ್ತಾನಕ್ಕೆ ರವಾನಿಸಿದ್ದರು. ಪಾಕಿಸ್ತಾನ ಗುಪ್ತಚರ ಏಜನ್ಸಿ ಐಎನ್‍ಎಸ್ ಕೆಲ ಮಹಿಳೆಯರನ್ನು ಒಳಗೊಂಡು ಈ ಕೃತ್ಯಕ್ಕೆ ಕೈ ಹಾಕಿತ್ತು.

    ಕದಂಬ ನೌಕಾನೆಲೆ ಸೇರಿದಂತೆ ಉಳಿದ ಸೇಲರ್ ಗಳನ್ನು ಫೇಸ್‍ಬುಕ್ ಮೂಲಕ ತನ್ನ ಮಾಯಾಜಾಲಕ್ಕೆ ಸೆಳೆದ ಮಹಿಳೆಯನ್ನು ಈಗ ಭಾರತದ ತನಿಖಾ ಸಂಸ್ಥೆಗಳು ಪತ್ತೆ ಹಚ್ಚಿದ್ದು, ಆಕೆಯನ್ನು ಶೇಖ್ ಶಾಹಿಸ್ತಾ ಎಂದು ಗುರುತಿಸಲಾಗಿದೆ. ಈಕೆ ಪಾಕಿಸ್ತಾನದ ಮಹಿಳೆಯಾಗಿದ್ದು, ಭಾರತದಲ್ಲಿ ಅಕ್ರಮವಾಗಿ ನುಸುಳಿ ಹಲವು ವರ್ಷಗಳಿಂದ ಇಲ್ಲಿಯೇ ನೆಲಸಿ ಈಗ ಆಂಧ್ರದ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

    ಫೇಸ್‍ಬುಕ್‍ನಲ್ಲಿ ಸ್ನೇಹ, ಬ್ಲಾಕ್‍ಮೇಲ್!
    ಈ ಮಹಿಳೆ ಫೇಸ್‍ಬುಕ್ ಮೂಲಕ ಸೇಲರ್ ಗಳನ್ನು ಪರಿಚಯಿಸಿಕೊಂಡು ಅವರೊಂದಿಗೆ ಸಲುಗೆ ಬೆಳಸಿದ್ದಾಳೆ. ನಂತರ ಸೇಲರ್ ಗಳು ಈಕೆಯ ಬಲೆಗೆ ಬಿದ್ದ ನಂತರ ಕಾರವಾರ ಹಾಗೂ ಗೋವಾದಲ್ಲಿ ಯುವತಿಯರನ್ನು ಸೆಕ್ಸ್‌ಗಾಗಿ ಇವರ ಬಳಿ ಕಳುಹಿಸಿ ಹನಿಟ್ಯ್ರಾಪ್ ಮಾಡಲಾಗಿದೆ. ಸೆಕ್ಸ್ ವಿಡಿಯೋ ಬಳಸಿ ಬ್ಲಾಕ್‍ಮೇಲ್ ಮಾಡಲಾಗಿತ್ತು. ಇದರಿಂದ ಹೆದರಿದ್ದ ಸೇಲರ್ ಗಳು ಬಲವಂತವಾಗಿ ನೌಕಾಪಡೆಯ ಸಬ್ ಮೆರಿನ್ ಹಡಗುಗಳ ಲಂಗುರು ಹಾಕಿರುವ ಸ್ಥಳಗಳ ಹಾಗೂ ಹಡಗಿನಲ್ಲಿ ನಡೆಯುವ ಎಲ್ಲಾ ಚಟುವಟಿಕೆಯ ಮಾಹಿತಿಯನ್ನು ಚಿತ್ರಗಳನ್ನು ಸಂಗ್ರಹಿಸಿ ಈಕೆಗೆ ವಾಟ್ಸಪ್ ಮಾಡುತಿದ್ದರು.

    ಈಕೆ ಅದನ್ನು ಪಾಕಿಸ್ತಾನದ ಏಜನ್ಸಿಗೆ ರವಾನೆ ಮಾಡುತಿದ್ದಳು. ಈ ಕೆಲಸಕ್ಕೆ ಬದಲಾಗಿ ಸೇಲರ್ ಗಳಿಗೆ ಹವಾಲಾ ದಂದೆ ಮಾಡುವ ಉದ್ಯಮಿಗಳ ಮೂಲಕ ಕಾಲಕಾಲಕ್ಕೆ ಹಣ ಜಮಾ ಮಾಡುತ್ತಿದ್ದರು. ಆಂಧ್ರ ಪ್ರದೇಶದ ಪೊಲೀಸರು ಹವಾಲಾ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಾಗ ಈ ಗೂಡಚಾರಿಕಾ ಪ್ರಕರಣ ಹೊರಬಂದು ಆಪರೇಷನ್ ಡಾಲ್ಪಿನ್ ನೋಸ್ ಎಂಬ ಕಾರ್ಯಾಚರಣೆಯಲ್ಲಿ ಈ ಹನ್ನೊಂದು ಸಿಬ್ಬಂದಿಗಳನ್ನು ಬಂಧಿಸಲಾಗಿತ್ತು. ಈಗ ಪಾಜಿಸ್ತಾನದ ಮಹಿಳೆಯನ್ನು ಬಂಧಿಸಿದ್ದು, ಆಂಧ್ರ ಪೊಲೀಸರು ಕಾರವಾರದ ಕದಂಬ ನೌಕಾನೆಲೆಯಲ್ಲಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

  • ಯುವತಿ ಜೊತೆ ಅಶ್ಲೀಲ ಭಂಗಿಯಲ್ಲಿ ನಿಲ್ಲಿಸಿ ಯುವಕನ ಫೋಟೋ

    ಯುವತಿ ಜೊತೆ ಅಶ್ಲೀಲ ಭಂಗಿಯಲ್ಲಿ ನಿಲ್ಲಿಸಿ ಯುವಕನ ಫೋಟೋ

    – ಬ್ಲಾಕ್‍ಮೇಲ್ ಮಾಡಿ ಹಣ ದೋಚಿದ್ರು

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮತ್ತೆ ಹನಿಟ್ರ್ಯಾಪ್ ಸದ್ದು ಕೇಳಿ ಬಂದಿದೆ. ಬಲವಂತವಾಗಿ ಯವತಿ ಜೊತೆ ಫೋಟೋ ಕ್ಲಿಕ್ಕಿಸಿ ಹುಡುಗರನ್ನು ಖೆಡ್ಡಾಕ್ಕೆ ಕೆಡವಿದ್ದಾರೆ. ಇದೇ ರೀತಿ ಸುಂದರವಾದ ಹುಡುಗಿಯರ ಆಸೆ ತೋರಿಸಿ ಖೆಡ್ಡಾಗೆ ಬೀಳಿಸಿರುವ ಘಟನೆ ಬೆಂಗಳೂರಿನ ಕಾಡುಗೊಂಡನಹಳ್ಳಿಯಲ್ಲಿ ನಡೆದಿದೆ.

    27 ವರ್ಷದ ಅಡುಗೆ ಕೆಲಸ ಮಾಡುತ್ತಿದ್ದವ ಹನಿಟ್ರಾಪ್ ಬಲೆಗೆ ಬಿದ್ದಿದ್ದಾನೆ. ಹನಿಟ್ರಾಪ್ ರೂವಾರಿ ಅಮ್ರಿನ್, ಪರಿಚಯಸ್ಥನಾಗಿದ್ದ ಸಂತ್ರಸ್ತ ಯುವಕನ ಜೊತೆ ಜ.22 ರಂದು ಮೂರ್ನಾಲ್ಕು ಸುಂದರ ಯುವತಿಯರ ಬಗ್ಗೆ ಮಾಹಿತಿಯನ್ನು ಕೇಳಿದ್ದಳಂತೆ. ಅಲ್ಲದೆ ಸುಂದರ ಯುವತಿಯರನ್ನು ಕಳುಹಿಸಿಕೊಡುತ್ತೇನೆಂದು ಕೂಡ ಹೇಳಿದ್ದಳು.

    ಸ್ವಲ್ಪ ಹೊತ್ತಲ್ಲೆ ಅದೇ ಮನೆಗೆ ಅಮ್ರಿನ್ ಸಹಚರರಾದ ಬೆಂಡ್ ಜಾವೇದ್, ಶಾಹಿದ್ ಹಾಗೂ ಸಮೀರ್ ಎಂಟ್ರಿ ಕೊಟ್ಟಿದ್ದಾರೆ. ಏಕಾಏಕಿ ಸಂತ್ರಸ್ತ ಯುವಕನ ತರಾಟೆಗೆ ತೆಗೆದುಕೊಂಡ ಅಮ್ರಿನ್ ಸಹಚರರು, ನೀನು ಅಮ್ರಿನ್ ಜೊತೆ ಸಂಬಂಧ ಇಟ್ಟುಕೊಂಡಿದ್ದಿಯಾ. ನೀನು ಅಮ್ರಿನ್ ಜೊತೆ ಮಾತನಾಡಿರುವ ಆಡಿಯೋ ರೆಕಾರ್ಡಿಂಗ್ ಇದೆ ಎಂದು ಸಂತ್ರಸ್ತ ಯವಕನಿಗೆ ಬೆದರಿಸಿದ್ದಾರೆ.

    ಅಮ್ರಿನ್ ಸಹಚರರು ಅಮ್ರಿನ್ ಜೊತೆ ಸಂತ್ರಸ್ತ ಯುವಕನನ್ನು ಅಶ್ಲೀಲ ಭಂಗಿಯಲ್ಲಿ ನಿಲ್ಲಿಸಿ ಫೊಟೋ ಕ್ಲಿಕ್ಕಿಸಿಕೊಂಡ ಆರೋಪಿಗಳು ಬಲವಂತವಾಗಿ ಫೋಟೋ ತೆಗೆದುಕೊಂಡು ಬ್ಲಾಕ್ ಮೇಲ್ ಮಾಡಿದ್ದಾರೆ. ಹಣ ಕೊಡದೇ ಇದ್ದರೆ ಅಮ್ರಿನ್ ಜೊತೆಗಿನ ಫೋಟೊಗಳು ವೈರಲ್ ಮಾಡುವುದಾಗಿ ಧಮ್ಕಿ ಹಾಕಿದ್ದಾರೆ. ಕೊನೆಗೆ ಮನೆಯಲ್ಲಿದ್ದ 2.25 ಲಕ್ಷ ಹಣ ದೋಚಿ ಎಸ್ಕೇಪ್ ಆಗಿದ್ದಾರೆ.

    ಪ್ರಕರಣ ಸಂಬಂಧ ಆರೋಪಿಗಳನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

  • ಹನಿಟ್ರ್ಯಾಪ್​ಗೆ ಬಿದ್ದು ಪಾಕಿಗೆ ಭಾರತೀಯ ನೌಕೆಯ ಮಾಹಿತಿ – ಕಾರವಾರದ ಇಬ್ಬರು ನಾವಿಕರು ಅರೆಸ್ಟ್

    ಹನಿಟ್ರ್ಯಾಪ್​ಗೆ ಬಿದ್ದು ಪಾಕಿಗೆ ಭಾರತೀಯ ನೌಕೆಯ ಮಾಹಿತಿ – ಕಾರವಾರದ ಇಬ್ಬರು ನಾವಿಕರು ಅರೆಸ್ಟ್

    ಕಾರವಾರ: ಹನಿಟ್ರ್ಯಾಪ್ ಹಾಗೂ ಹಣದ ಅಮಿಷಕ್ಕೆ ಒಳಗಾಗಿ ಭಾರತೀಯ ನೌಕಾದಳದ ಹಡಗುಗಳ ಚಲನವಲನ ಹಾಗೂ ಆಂತರಿಕ ಮಾಹಿತಿಯನ್ನು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಗೆ ಮಾಹಿತಿ ನೀಡುತ್ತಿದ್ದ ಕಾರವಾರದ ಕದಂಬ ನೌಕಾನೆಲೆಯ ರಾಜಸ್ಥಾನ, ಒಡಿಶಾ ಮೂಲದ ಇಬ್ಬರು ಸೈಲರ್ ಸಿಬ್ಬಂದಿ ಸೇರಿದಂತೆ ಎಂಟು ಜನರನ್ನು ಆಂಧ್ರದ ಸಿ.ಐ ಸೆಲ್ ಪೊಲೀಸರು ಇಂದು ಬಂಧಿಸಿದ್ದಾರೆ.

    ಆಂಧ್ರದ ಸಿ.ಐ ಸೆಲ್ ಪೊಲೀಸರು ಕಾರವಾರದ ಅರಗಾದ ಕದಂಬ ನೌಕಾನೆಲೆ, ಮುಂಬೈ, ವಿಶಾಖಪಟ್ಟಣದಲ್ಲಿ ಏಕ ಕಾಲಕ್ಕೆ ದಾಳಿ ನಡೆಸಿ ಬಂಧಿಸಿದ್ದಾರೆ. ಕಾರವಾರದ ಕದಂಬ ನೌಕಾನೆಲೆಯ ಇಬ್ಬರು, ವಿಶಾಖಪಟ್ಟಣದ ಮೂವರು, ಮುಂಬೈನ ಭೂಗತ ಲೋಕದ ನಂಟು ಹೊಂದಿರುವ ಹವಾಲ ಹಣ ವ್ಯವಹಾರದ ವ್ಯಕ್ತಿ ಸೇರಿ ಮೂವರು ಒಟ್ಟು ಎಂಟು ಜನರನ್ನು ರಾತ್ರೋರಾತ್ರಿ ವಶಕ್ಕೆ ಪಡೆದು ಬಂದಿಸಿದ್ದಾರೆ.

    ಬಂಧಿತರಿಂದ ಮೊಬೈಲ್, ಅಂತರಾಷ್ಟ್ರೀಯ ಬ್ಯಾಂಕ್ ವ್ಯವಹಾರ ಮಾಡಿದ ದಾಖಲೆ, ನೌಕಾನೆಲೆಯ ಆಂತರಿಕ ಸಿಗ್ನಲ್ ಮ್ಯಾಪ್ ಸೇರಿದಂತೆ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆಗಳಿಗೆ ಕಾರವಾರ ಸೇರಿದಂತೆ ದೇಶದ ಪ್ರಮುಖ ನೌಕೆಗಳ ಚಲನವಲನದ ಬಗ್ಗೆ ಹಾಗೂ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡುತಿದ್ದರು. ಇದಲ್ಲದೇ ಇವರೊಂದಿಗೆ ಹಲವು ಅಧಿಕಾರಿಗಳು ಹನಿಟ್ರ್ಯಾಪ್ ಆಗಿರುವ ಬಗ್ಗೆ ಆಂಧ್ರದ ಗುಪ್ತದಳ ಮಾಹಿತಿ ಪಡೆದಿದ್ದು, ಅವರನ್ನು ಬಂಧಿಸುವಲ್ಲಿ ಕಾರ್ಯೋನ್ಮುಕವಾಗಿದೆ. ಘಟನೆ ಸಂಬಂಧ ಆಂಧ್ರ ಪ್ರದೇಶದ ವಿಜಯವಾಡ ಇಂಟಲಿಜನ್ಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿಕ್ಕಿದ್ದು ಹೇಗೆ?
    ಆಂಧ್ರದ ಸಿ.ಐ ಸೆಲ್ ನ ಅಧಿಕಾರಿಗಳಿಗೆ ಮುಂಬೈನಲ್ಲಿರುವ ಹವಾಲ ಹಣ ವ್ಯವಹಾರ ಮಾಡುತಿದ್ದ ಭೂಗತ ಲೋಕದ ನಂಟು ಹೊಂದಿದ್ದ ವ್ಯಕ್ತಿಯನ್ನು ಆಂಧ್ರದ ವಿಜಯವಾಡದಲ್ಲಿ ಬಂಧಿಸಲಾಗಿತ್ತು. ಈತನನ್ನು ತನಿಖೆ ನಡೆಸಿದಾಗ ಹವಾಲ ಹಣ ಬಳಸಿ ಹಾಗೂ ಹನಿಟ್ರ್ಯಾಪ್ ಮಾಡುವ ಮೂಲಕ ಕಾರವಾರದ ಕದಂಬ ನೌಕಾನೆಲೆ, ವಿಶಾಖಪಟ್ಟಣ, ಮುಂಬೈ ನೌಕಾನೆಲೆಯ ನೌಕೆಯ ಸೈಲರ್ ಗಳ ಮೂಲಕ ಕಾರವಾರದ ಕದಂಬ ನೌಕಾನೆಲೆ, ವಿಶಾಖಪಟ್ಟಣಮ್, ಮುಂಬೈ ನೌಕಾನೆಯಲ್ಲಿ ಯುದ್ಧ ಹಡಗುಗಳ ಚಲನವಲನ, ಮ್ಯಾಪ್ ಗಳು, ಸಿಗ್ನಲ್ ಗಳ ಬಗ್ಗೆ ಮಾಹಿತಿ ಪಡೆಯಲಾಗುತಿತ್ತು. ಈ ಕುರಿತು ಮಾಹಿತಿಯನ್ನು ಆತ ಬಾಯಿ ಬಿಟ್ಟಿದ್ದು ತಕ್ಷಣ ಕಾರ್ಯಪ್ರವೃತ್ತರಾದ ಆಂಧ್ರ ಸಿ.ಐ ಸೆಲ್ ಅಧಿಕಾರಿಗಳು ಆತನ ಫೋನ್ ಸೇರಿದಂತೆ ಬ್ಯಾಂಕ್ ವ್ಯವಹಾರದ ದಾಖಲೆ ಪರಿಶೀಲಿಸಿದ್ದು ಈ ವೇಳೆ ವಿಷಯ ಹೊರಬಂದಿದೆ. ನಂತರ ಏಕ ಕಾಲದಲ್ಲಿ ದಾಳಿ ನಡೆಸಿ ಇಂದು ಏಳು ಜನ ನೌಕಾದಳದ ಸೈಲರ್ ಸಿಬ್ಬಂದಿಗಳನ್ನು ವಶಕ್ಕೆ ಪಡೆಯಲಾಗಿದೆ.

    ಗೋವಾದಲ್ಲಿ ಹನಿಟ್ರ್ಯಾಪ್!
    ಕಾರವಾರ, ಮುಂಬೈನ ನಾವಿಕರಿಗೆ ಹೆಣ್ಣಿನ ಆಸೆ ತೋರಿಸಿ ಪಾಕಿಸ್ತಾನದ ಗುಪ್ತದಳ ಸಂಸ್ಥೆ ಗೋವಾದ ಪ್ರತಿಷ್ಠಿತ ಹೋಟಲ್ ನಲ್ಲಿ ರೂಮ್ ಬುಕ್ ಮಾಡುವ ಮೂಲಕ ಹನಿಟ್ರ್ಯಾಪ್ ಮಾಡಿದೆ. ಇದಲ್ಲದೇ ಬಂಧಿತರಿಗೆ ಹಣ ಕೂಡ ನೀಡಲಾಗಿದ್ದು ಅವರ ಖಾತೆಗಳಿಗೆ ಅಂತರಾಷ್ಟ್ರೀಯ ಬ್ಯಾಂಕ್ ವ್ಯವಹಾರದ ದಾಖಲೆ ಸಹ ಸಿಕ್ಕಿದೆ. ಈ ಹನಿಟ್ರ್ಯಾಪ್ ಗೆ ಕೇವಲ ನೌಕೆಯ ಸೈಲರ್ ಗಳಲ್ಲದೇ ನೌಕಾ ನೆಲೆಯ ಪ್ರಮುಖ ಹುದ್ದೆಯಲ್ಲಿರುವ ದೆಹಲಿ ಸೇರಿದಂತೆ ಪ್ರಮುಖ ನೌಕಾ ಕಚೇರಿಯ ಅಧಿಕಾರಿಗಳು ಸಹ ಒಳಗಾಗಿರುವ ಕುರಿತು ತನಿಖೆ ನಡೆಸಲಾಗುತ್ತಿದ್ದು ವಿಚಾರಣೆ ಮುಂದುವರಿದಿದೆ.

  • ಆಡಳಿತ ಪಕ್ಷ ಮತ್ತು ವಿಪಕ್ಷಕ್ಕೂ ಬೇಡವಾಯ್ತು ಹನಿಟ್ರ್ಯಾಪ್ ತನಿಖೆ

    ಆಡಳಿತ ಪಕ್ಷ ಮತ್ತು ವಿಪಕ್ಷಕ್ಕೂ ಬೇಡವಾಯ್ತು ಹನಿಟ್ರ್ಯಾಪ್ ತನಿಖೆ

    ಬೆಂಗಳೂರು: ಸರ್ಕಾರಕ್ಕೆ ಮತ್ತು ವಿಪಕ್ಷಗಳಿಗೆ ಹನಿಟ್ರ್ಯಾಪ್ ತನಿಖೆ ಬೇಡವಾದ ಕಾರಣ ಸಿಸಿಬಿ ಈ ತನಿಖೆಯನ್ನು ನಿಲ್ಲಿಸಿದೆ. ಇಬ್ಬರಿಗೂ ಬೇಡವಾದ ತನಿಖೆ ನಮಗ್ಯಾಕೆ ಬೇಕು ಅಂತಾ ಪೊಲೀಸರು ಕೈ ಚೆಲ್ಲಿದ್ದಾರೆ.

    ಹನಿಟ್ರ್ಯಾಪ್ ಹಗರಣ ಬಯಲಿಗೆ ಬಂದಾಗ ಐದಾರು ಮಂದಿ ಶಾಸಕರು ‘ಹನಿ’ ಬಲೆಯೊಳಗೆ ಸಿಲುಕಿರುವ ಬಗ್ಗೆ ಮಾಹಿತಿಯಿತ್ತು. ಎಲ್ಲಿ ತನಿಖೆಗೆ ಸಹಕರಿಸಿದರೆ ಹೆಸರು ಬಯಲಾಗಿ ಮಾನ ಮರ್ಯಾದೆ ಹೋಗುತ್ತದೋ ಎನ್ನುವ ಭಯದಿಂದ ಯಾವ ಶಾಸಕರು ಈಗ ತನಿಖೆ ನಡೆಸಿ ಅಂತಾ ಮುಂದೆ ಬರುತ್ತಿಲ್ಲ.

    ನಮ್ಮನ್ನು ಬಿಟ್ಟರೆ ಸಾಕು, ನಮ್ಮ ಹೆಸರು ಬಾರದೇ ಇರುವ ರೀತಿ ನೋಡಿಕೊಳ್ಳಿ ಎಂದು ಗೃಹ ಸಚಿವರ ಮೂಲಕ ಪೊಲೀಸರ ಮೇಲೆ ಒತ್ತಡ ಹಾಕುವ ಕೆಲಸ ಮಾಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಹೀಗಾಗಿ ಕೇವಲ ಒಬ್ಬ ಶಾಸಕರ ದೂರಿಗೆ ಮಾತ್ರ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಹಾಕಲು ತಯಾರಿ ನಡೆಸಿದ್ದಾರೆ.

    ಒಬ್ಬ ಶಾಸಕರು ದೂರು ಕೊಟ್ಟು ಮಾನ ಕಳೆದುಕೊಳ್ಳುವಂತ ಪರಿಸ್ಥಿತಿ ಉದ್ಭವ ಮಾಡಿಕೊಂಡರು ಎನ್ನುವ ಮಾತುಗಳು ಕೇಳಿಬರತೊಡಗಿದೆ. ಆ ಶಾಸಕನ ಮಾನ ಹರಾಜಾಗಿರುವುದೇ ಸಾಕು. ನಮಗೆ ಯಾವ ತನಿಖೆಯೂ ಬೇಡ. ನಮ್ಮ ಹೆಸರು ಬರುವುದು ಬೇಡ ಎಂದು ನೋಡಿಕೊಳ್ಳುವಲ್ಲಿ ಕೆಲ ಹನಿ ಶಾಸಕರು ಯಶಸ್ವಿಯಾಗಿದ್ದಾರೆ.

  • ಹನಿಟ್ರ್ಯಾಪ್ ಕೇಸ್‍ನಲ್ಲಿ ಸ್ಯಾಂಡಲ್‍ವುಡ್ ನಟಿಯರು – ಶೀಘ್ರವೇ ಮೂವರ ವಿಚಾರಣೆ

    ಹನಿಟ್ರ್ಯಾಪ್ ಕೇಸ್‍ನಲ್ಲಿ ಸ್ಯಾಂಡಲ್‍ವುಡ್ ನಟಿಯರು – ಶೀಘ್ರವೇ ಮೂವರ ವಿಚಾರಣೆ

    ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬಂದಿದ್ದು, ಹನಿಟ್ರ್ಯಾಪ್ ಕೇಸ್‍ನಲ್ಲಿ ಸ್ಯಾಂಡಲ್‍ವುಡ್ ನಟಿಯರು ಭಾಗಿಯಾಗಿದ್ದಾರೆ ಎಂಬ ಮಾಹಿತಿಯೊಂದು ಬಯಲಾಗಿದೆ.

    ಸ್ಯಾಂಡಲ್‍ವುಡ್ ನಟಿಯರ ಪಾತ್ರದ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಒಬ್ಬರು ಒಂದು ಕಾಲದ ಸ್ಟಾರ್ ನಟಿ, ಇನ್ನಿಬ್ಬರು ಎರಡು ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡವರಾಗಿದ್ದಾರೆ. ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದರಲ್ಲಿ ಇವರು ಹೆಸರುವಾಸಿಯಾಗಿದ್ದಾರೆ. ಶೀಘ್ರವೇ ಈ ಮೂವರು ನಟಿಯರನ್ನು ವಿಚಾರಣೆ ಮಾಡಲಾಗುವುದು ಎಂಬ ಸ್ಫೋಟಕ ರಹಸ್ಯವನ್ನು ಪೊಲೀಸ್ ಕಮಿಷನರ್ ಬಯಲು ಮಾಡಿದ್ದಾರೆ.

    ಹನಿಟ್ರ್ಯಾಪ್‍ನಲ್ಲಿ ಸಿಲುಕಿರುವ ಓರ್ವಳು ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿದ್ದಳು. ಸುಮಾರು 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿದ್ದ ಈಕೆಗೆ ಇತ್ತೀಚೆಗೆ ಅವಕಾಶಗಳ ಕೊರತೆ ಕಂಡುಬಂತು. ಸ್ಟಾರ್ ಹೀರೋಗಳ ಜೊತೆಗೂ ಈಕೆ ನಟಿಸಿದ್ದಾಳೆ. ಅಲ್ಲದೆ ನಿರ್ಮಾಪಕರ ಜೊತೆಗೂ ಈಕೆ ನಂಟು ಹೊಂದಿದ್ದಾಳೆ. ಈಕೆ ಕನ್ನಡದ ನಟಿಯಲ್ಲ ಬದಲಾಗಿ ಪರರಾಜ್ಯ ನಟಿಯಾಗಿದ್ದಾಳೆ.

    ಎರಡನೇಯ ನಟಿ ಕೂಡ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾಳೆ. ಹೀರೋಯಿನ್ ಜೊತೆಗೆ ಸಹನಟಿಯಾಗಿ ಅಭಿನಯ ಮಾಡಿದ್ದಾಳೆ. ಈ ನಟಿ ಕರ್ನಾಟಕ ಮೂಲದವಳು ಎಂದು ಹೇಳಲಾಗುತ್ತಿದ್ದು, ರಿಯಾಲಿಟಿ ಶೋ, ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾಳೆ. ಬಹುಬೇಡಿಕೆ ನಟಿ ಅಲ್ಲದಿದ್ದರೂ ಈಕೆಗೆ ಬೇಡಿಕೆ ಬಹಳ ಇತ್ತು ಎನ್ನುವ ವಿಚಾರ ಬೆಳಕಿಗೆ ಬಂದಿದೆ.

    ಮೂರನೇಯವಳು ಒಂದು ರೀತಿ ಬಹುಭಾಷಾ ನಟಿಯಾಗಿದ್ದಾಳೆ. ಹಸಿಬಿಸಿ ದೃಶ್ಯಾವಳಿಗಳಿಗೆ ಈ ನಟಿ ಹೆಸರುವಾಸಿವಾಗಿದ್ದು, ಕನ್ನಡ ಮಾತ್ರವಲ್ಲದೆ ಪರಭಾಷಾ ಚಿತ್ರಗಳಲ್ಲೂ ನಟನೆ ಮಾಡಿದ್ದಾಳೆ. ಈಕೆಗೆ ಉದ್ಯಮಿಗಳು, ಅಧಿಕಾರಿಗಳ ಜೊತೆಗೂ ನಂಟಿದೆ. ಈ ಹಿಂದೆಯೂ ಈಕೆಯ `ವ್ಯವಹಾರ’ ಭಾರೀ ಸುದ್ದಿಯಾಗಿತ್ತು ಎಂಬುದಾಗಿ ತಿಳಿದುಬಂದಿದೆ.

  • ಎದೆ ಮೇಲೆ ಹಚ್ಚೆ, ಶಾಸಕನನ್ನ ಯಾಮಾರಿಸಿದ್ಳು ಚಿಟ್ಟೆ- ಬಗೆದಷ್ಟು ಬಯಲಾಗ್ತಿದೆ ‘ಹನಿ’ಕಹಾನಿ

    ಎದೆ ಮೇಲೆ ಹಚ್ಚೆ, ಶಾಸಕನನ್ನ ಯಾಮಾರಿಸಿದ್ಳು ಚಿಟ್ಟೆ- ಬಗೆದಷ್ಟು ಬಯಲಾಗ್ತಿದೆ ‘ಹನಿ’ಕಹಾನಿ

    ಬೆಂಗಳೂರು: ಮಧ್ಯಪ್ರದೇಶವನ್ನೇ ಮೀರಿಸುವಂತಿದೆ ಕರ್ನಾಟಕದ ಹನಿಟ್ರ್ಯಾಪ್ ಕೇಸ್. ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದಂತೆಯೇ ಸ್ಫೋಟಕ ಸತ್ಯಗಳು ಬಹಿರಂಗವಾಗುತ್ತಿವೆ.

    ಶಾಸಕರನ್ನು ಖೆಡ್ಡಾಕ್ಕೆ ಬೀಳಿಸಲು 200ಕ್ಕೂ ಹೆಚ್ಚು ನಟಿಯರ ಬಳಕೆ ಮಾಡಿಕೊಂಡಿದ್ದು, ಕಿರುತೆರೆ ನಟಿಯರೇ ಆರೋಪಿ ರಾಘವೇಂದ್ರನ ಟಾರ್ಗೆಟ್ ಎಂಬುದು ಬಯಲಾಗಿದೆ. ಅವಕಾಶ ಸಿಗದ ನಟಿಯರಿಗೆ ಖೆಡ್ಡಾ ತೊಡುವ ಮೂಲಕ ರಾಜಕಾರಣಿಗಳನ್ನು ಬಳಸಿಕೊಂಡು ಆರೋಪಿ ಹನಿ ಟ್ರ್ಯಾಪ್ ನಡೆಸುತ್ತಿದ್ದನು ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಹನಿಟ್ರ್ಯಾಪ್ ಪ್ರಕರಣ- ಹಾಲಿ ಶಾಸಕರಿಂದ ಪೀಕಿದ್ರು ಬರೋಬ್ಬರಿ 1 ಕೋಟಿ

    ಪೆನ್‍ಡ್ರೈವ್‍ನಲ್ಲಿ ಕೆಲವೊಂದು ಸ್ಫೋಟಕ ವಿಡಿಯೋ ಲಭ್ಯವಾಗಿದ್ದು, ಇದರಲ್ಲಿ ಕೆಲವು ಶಾಸಕರ ಖಾಸಗಿ ದೃಶ್ಯಗಳಿವೆ. ಕೆಲವೊಂದನ್ನು ದೃಶ್ಯಗಳನ್ನು ಈಗಾಗಲೇ ಡಿಲೀಟ್ ಮಾಡಲಾಗಿದೆ. ಈ ವಿಡಿಯೋಗಳ ನಕಲಿ ಪ್ರತಿಗಳ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಅಲ್ಲದೆ ಈ ವಿಡಿಯೋಗಳು ಎಲ್ಲಿದೆ ಎಂಬುದೂ ಸಿಕ್ಕಿಲ್ಲ. ಪೆನ್ ಡ್ರೈವ್, ಹಾರ್ಡ್ ಡಿಸ್ಕ್ ಮೊಬೈಲ್‍ಗಳಲ್ಲಿ ರಾಸಲೀಲೆ ಮಾಹಿತಿಗಳಿವೆ. ರಾಘವೇಂದ್ರನ ಮೊಬೈಲ್‍ಗಳಲ್ಲಿ ಹನಿಟ್ರ್ಯಾಪ್ ದೃಶ್ಯಾವಳಿಗಳು ದೊರೆತಿವೆ. ಶಾಸಕರು, ಸಂಸದರ ನೀಲಿಚಿತ್ರ ನೋಡಿ ಪೊಲೀಸರೇ ದಂಗಾಗಿದ್ದಾರೆ. ಇದನ್ನೂ ಓದಿ: ಬಿಜೆಪಿ ಮಾಜಿ ಸಚಿವರ ಹನಿಟ್ರ್ಯಾಪ್ – 10 ಕೋಟಿ ನಿರೀಕ್ಷೆಯಲ್ಲಿದ್ದವನಿಗೆ ಕೋಳ

    ರಾತ್ರಿ 10 ಗಂಟೆ ನಂತರ ಜನಪ್ರತಿನಿಧಿಗಳಿಗೆ ಕರೆ ಮಾಡಿ ಮಧ್ಯರಾತ್ರಿವರೆಗೆ ಅವರ ಜೊತೆ ಚೆಲ್ಲಾಟವಾಡುತ್ತಾರೆ. ಕುಡಿದ ಮತ್ತಿನಲ್ಲಿದ್ದ ಶಾಸಕರನ್ನು ಹನಿಟ್ರ್ಯಾಪ್ ಟೀಂ ಖೆಡ್ಡಾಗೆ ಬೀಳಿಸುತ್ತಿತ್ತು. ಮೊದಲು ಮಾತು ಆರಂಭಿಸಿ, ಆಮೇಲೆ ದೈಹಿಕ ಸಂಬಂಧಗಳ ಸಂಭಾಷಣೆ ನಡೆಸುತ್ತಿತ್ತು. ಒಬ್ಬರು ಮಾತಿನಲ್ಲಿ ಮಾತನಾಡಿ ಪ್ರೇರೆಪಿಸುತ್ತಿದ್ದರು. ಇನ್ನೊಬ್ಬರು ಹನಿಟ್ರ್ಯಾಪ್‍ಗೆ ಇಳಿಯುತ್ತಿದ್ದರು. ಹನಿಟ್ರ್ಯಾಪ್‍ಗೆ ಬೀಳಿಸಲು ಕಿರುತೆರೆ ನಟಿಯರು ತಮ್ಮ ಕೆಲವೊಂದು ಖಾಸಗಿ ದೃಶ್ಯಗಳನ್ನು ಶಾಸಕರ ಮೊಬೈಲ್‍ಗೆ ರವಾನೆ ಮಾಡುತ್ತಿದ್ದರು. ಈ ದೃಶ್ಯಗಳನ್ನು ನೋಡಿ ರಾಜಕಾರಣಿಗಳು ಪ್ರೇರೇಪಿತರಾಗುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ;ಮಾಜಿ ರಾಜ್ಯಪಾಲರು, ಮಾಜಿ ಸಿಎಂ, ಅಧಿಕಾರಿಗಳ ಸ್ಕ್ಯಾಂಡಲ್ – 40 ಕಾಲ್ ಗರ್ಲ್ಸ್‌ಗಳಿಂದ ಹನಿಟ್ರ್ಯಾಪ್

  • ಹನಿ ಮನಿ ಕಾಮಿನಿ ಸುಳಿಯಲ್ಲಿ ಶಾಸಕರು – ಹಾರ್ಡ್ ಡಿಸ್ಕ್ ನಲ್ಲಿತ್ತು  10 ಜನರ ವಿಡಿಯೋ

    ಹನಿ ಮನಿ ಕಾಮಿನಿ ಸುಳಿಯಲ್ಲಿ ಶಾಸಕರು – ಹಾರ್ಡ್ ಡಿಸ್ಕ್ ನಲ್ಲಿತ್ತು 10 ಜನರ ವಿಡಿಯೋ

    ಬೆಂಗಳೂರು: ಬಿಜೆಪಿಯ ಮಾಜಿ ಸಚಿವ, ಹಾಲಿ ಶಾಸಕರ ಹನಿಟ್ರ್ಯಾಪ್ ಪ್ರಕರಣ ಕ್ಷಣದಿಂದ ಕ್ಷಣಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಆರೋಪಿ ರಾಘವೇಂದ್ರ ಅಲಿಯಾಸ್ ರಘು ಮನೆಯಲ್ಲಿದ್ದ ಹಾರ್ಡ್ ಡಿಸ್ಕ್ ನಲ್ಲಿ ಇಬ್ಬರು ಶಾಸಕರು ಒಳಗೊಂಡಂತೆ 10 ಜನರ ಖಾಸಗಿ ವಿಡಿಯೋಗಳಿವೆ ಎಂಬ ಮಾಹಿತಿ ಲಭ್ಯವಾಗಿದೆ.

    ಇಬ್ಬರು ಶಾಸಕರನ್ನು ಸೇರಿದಂತೆ 10 ಜನರನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಲು ರಾಘವೇಂದ್ರ ತನ್ನ ಗೆಳತಿಯನ್ನು ಬಳಸಿಕೊಂಡಿದ್ದನು. ಈ ಕೆಲಸಕ್ಕೆ ಗೆಳತಿ ಮೊದಲು ಹಿಂದೇಟು ಹಾಕಿದ್ದಳು. ಆದರೆ ಹಣದಾಸೆಗಾಗಿ ಹನಿಟ್ರ್ಯಾಪ್ ಗೆ ರಘುಗೆ ಸಾಥ್ ನೀಡಿದ್ದಳು. ರಾಘವೇಂದ್ರನ ಗೆಳತಿ ಕಿರುತೆರೆಯ ನಟಿಯೆಂದು ಹೇಳಲಾಗುತ್ತಿದ್ದು, ಈಕೆ ಕಿರುತೆರೆಗಾಗಿ ತೆಗೆಸಿದ್ದ ಫೋಟೋಗಳನ್ನು ಬಳಸಿ ಪ್ರಭಾವಿ ವ್ಯಕ್ತಿಗಳನ್ನು ಬಲೆಗೆ ಬೀಳಿಸಲು ರಾಘವೇಂದ್ರ ಪ್ಲಾನ್ ಮಾಡಿಕೊಳ್ಳುತ್ತಿದ್ದನು.

    ರಾಘವೇಂದ್ರನ ಗೆಳತಿಯದ್ದು ಹೈದರಾಬಾದ್ ಮೂಲದ ಮುಸ್ಲಿಂ ಯುವಕನೊಂದಿಗೆ ಮದುವೆಯಾಗಿತ್ತು. ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ದರಿಂದ ಗಂಡನನ್ನು ತೊರೆದು ಬೆಂಗಳೂರು ಸೇರಿದ್ದಳು. ಇಲ್ಲಿಯೇ ಪರಿಚಯವಾದವನೇ ಮೇಕಪ್ ಆರ್ಟಿಸ್ಟ್ ರಾಘವೇಂದ್ರ. ಈಕೆಯ ಮೂಲಕವೇ ಇಬ್ಬರು ಶಾಸಕರು ಸೇರಿದಂತೆ 10 ಜನರನ್ನು ಹನಿಟ್ರ್ಯಾಪ್ ಬಲೆಯಲ್ಲಿ ಸಿಲುಕಿಸಿದ್ದನು.

    ಕಾಲೇಜು ಯುವತಿಯರ ಹೆಸರಿನಲ್ಲಿ ಹುಡುಗಿಯನರನ್ನು ರಘು ತಯಾರು ಮಾಡುತ್ತಿದ್ದನು. ಇದೇ ಯುವತಿಯರು ಶಾಸಕ ಬಳಿ ತೆರಳಿ ಅಧ್ಯಯನ ಮಾಡುತ್ತಿದ್ದೇವೆ. ವಾಸ್ತವ್ಯಕ್ಕೆ ಸ್ಥಳ ಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದರು. ಶಾಸಕರಿಗೆ ಹುಡುಗಿಯರ ನಂಬರ್ ಕೊಡಿಸಿ ಪರಿಚಯ ಸಹ ಮಾಡಿಸುತ್ತಿದ್ದನು. ಇತ್ತ ಶಾಸಕರ ನಂಬರ್ ಪಡೆದ ಯುವತಿಯರು ಪದೇ ಪದೇ ಕಾಲ್ ಮಾಡಿ ಬಣ್ಣದ ಮಾತುಗಳಿಂದ ತಮ್ಮ ಮೋಡಿಯ ವ್ಯೂಹದಲ್ಲಿ ಸಿಲುಕಿಸಿಕೊಳ್ಳುತ್ತಿದ್ದರು.

    ಶಾಸಕರು ತಮ್ಮ ಮೋಡಿಗೆ ಸಿಲುಕುತ್ತಿದ್ದಂತೆ ಐಷಾರಾಮಿ ಹೋಟೆಲ್ ಗಳಲ್ಲಿ ರೂಮ್ ಬುಕ್ ಮಾಡುತ್ತಿದ್ದರು. ಈ ವೇಳೆ ತಿಳಿಯದಂತೆ ಖಾಸಗಿ ದೃಶ್ಯಗಳನ್ನು ಸೆರೆ ಹಿಡಿದುಕೊಂಡು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಬಿಜೆಪಿಯ ಮಾಜಿ ಸಚಿವ, ಶಾಸಕರಿಗೆ ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣದಲ್ಲಿ ಆರೋಪಿ ರಾಘವೇಂದ್ರ ಮತ್ತು ಆತನ ಗೆಳತಿಯ ಬಂಧನವಾಗಿದೆ.

    ಇಷ್ಟು ಮಾತ್ರವಲ್ಲದೇ ಮೈ ಎಸ್‍ಎಂಎಸ್ ಆ್ಯಪ್ ಮೂಲಕ ಕಂಡವರ ಖಾಸಗಿತನಕ್ಕೆ ರಘು ಕನ್ನ ಹಾಕುತ್ತಿದ್ದನು. ಬೇರೆಯವರ ಮೊಬೈಲ್ ನಲ್ಲಿ ಮೈ ಎಸ್‍ಎಂಎಸ್ ಎಂಬ ಆ್ಯಪ್ ಹಾಕಿ ತನ್ನ ಮೊಬೈಲಿಗೆ ಅವರ ಮೆಸೇಜ್ ಗಳು ಬರುವಂತೆ ಮಾಡುತ್ತಿದ್ದನು. ಈ ಸಂಬಂಧ ರಘು ಮೇಲೆ ಸೈಬರ್ ಕ್ರೈಂನಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಖಾಸಗಿತನಕ್ಕೆ ಧಕ್ಕೆ ಆರೋಪದಡಿ ಮೈಸೂರಿನಲ್ಲಿಯೂ ರಘು ವಿರುದ್ಧ ಪ್ರಕರಣಗಳು ದಾಖಲಾಗಿವೆ.

  • ಬಿಜೆಪಿ ಮಾಜಿ ಸಚಿವರ ಹನಿಟ್ರ್ಯಾಪ್ – 10 ಕೋಟಿ ನಿರೀಕ್ಷೆಯಲ್ಲಿದ್ದವನಿಗೆ ಕೋಳ

    ಬಿಜೆಪಿ ಮಾಜಿ ಸಚಿವರ ಹನಿಟ್ರ್ಯಾಪ್ – 10 ಕೋಟಿ ನಿರೀಕ್ಷೆಯಲ್ಲಿದ್ದವನಿಗೆ ಕೋಳ

    – ಡೀಲ್ ಮಾಡಲು ಬಂದು ಖೆಡ್ಡಾಕೆ ಕೆಡವಿದ್ರು
    – 1 ವರ್ಷದಿಂದ ಬ್ಲ್ಯಾಕ್‍ಮೇಲ್

    ಬೆಂಗಳೂರು: ಬಿಜೆಪಿಯ ಮಾಜಿ ಸಚಿವರನ್ನು ಹನಿಟ್ರ್ಯಾಪ್ ಮಾಡಿ ಖಾಸಗಿ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಡುವುದಾಗಿ ಬೆದರಿಕೆಯೊಡ್ಡಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ರಾಘವೇಂದ್ರ ಬಂಧಿತ ಆರೋಪಿ. ರಾಘವೇಂದ್ರ ಬಿಜೆಪಿಯ ಮಾಜಿ ಸಚಿವರ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಬೇಡಿಕೆ ಇಟ್ಟಿದ್ದನು. ಕಳೆದ ಒಂದು ವರ್ಷದಿಂದ ಮಾಜಿ ಸಚಿವರ ವಿಡಿಯೋ ಸೆರೆ ಹಿಡಿಯಲು ರಾಘವೇಂದ್ರ ಕಾಯುತ್ತಿದ್ದನು. ಕೊನೆಗೆ ತನ್ನ ಗೆಳತಿ ಮೂಲಕ ಸಚಿವರ ವಿಡಿಯೋ ಸೆರೆ ಹಿಡಿದಿದ್ದನು. ವಿಡಿಯೋ ತೋರಿಸಿ ರಾಘವೇಂದ್ರ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದನು. ಈ ಸಂಬಂಧ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಲು ಪ್ಲಾನ್ ಮಾಡಿಕೊಂಡಿದ್ದರು.

    ಮೊದಲಿಗೆ ಆರೋಪಿ ಹಿನ್ನೆಲೆಯನ್ನು ಪರಿಶೀಲಿಸಿದಾಗ ರಾಘವೇಂದ್ರ ಮೊದಲಿನಿಂದಲೂ ಈ ರೀತಿಯ ಸೈಬರ್ ಕ್ರೈಂನಲ್ಲಿ ಭಾಗಿಯಾಗಿದ್ದನು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಹಾಗಾಗಿ ಶಾಸಕರ ಪರವಾಗಿ ಡೀಲ್ ಮಾಡುವ ರೀತಿ ಪೊಲೀಸರು ರಾಘವೇಂದ್ರನನ್ನು ಸಂಪರ್ಕಿಸಿದ್ದಾರೆ. ರಾಘವೇಂದ್ರ ಒಂದೇ ಕಂತಿನಲ್ಲಿ 10 ಕೋಟಿ ರೂ. ನೀಡಬೇಕೆಂದು ಡಿಮ್ಯಾಂಡ್ ಮಾಡಿದ್ದನು. ರಾಘವೇಂದ್ರ ಜೊತೆ ಮಾತನಾಡಿದ ಪೊಲೀಸರು ಆತನಿಗೆ ಹಣ ನೀಡುತ್ತೇವೆ ಎಂದು ನಂಬಿಸಿದ್ದರು. ಪೊಲೀಸರ ಮಾತನ್ನು ನಂಬಿದ್ದ ರಾಘವೇಂದ್ರ ಭೇಟಿಯಾದಾಗ ತೆರಳಿದಾಗ ಆತನನ್ನು ಬಂಧಿಸಿದ್ದಾರೆ.

    ಯಾರು ಈ ರಾಘವೇಂದ್ರ?: ಆರೋಪಿ ರಾಘವೇಂದ್ರ ಶಿವಮೊಗ್ಗ ಮೂಲದ ನಿವಾಸಿಯಾಗಿದ್ದು, ತಾಯಿಯೊಂದಿಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದನು. ಸೈಬರ್ ಕ್ರೈಂಗಳನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಪರಿಣಿತಿ ಹೊಂದಿದ್ದನು ಎಂಬುವುದು ಪೊಲೀಸ್ ತನಿಖೆಯ ವೇಳೆ ತಿಳಿದು ಬಂದಿದೆ. ಸಣ್ಣ ಪುಟ್ಟ ಕ್ರೈಂ ಮಾಡಿದ್ರೆ ಸ್ವಲ್ಪ ಹಣ ಸಿಗುತ್ತದೆ. ಹೆಚ್ಚು ಹಣಕ್ಕಾಗಿ ಹನಿಟ್ರ್ಯಾಪ್ ಮಾಡಲು ಮುಂದಾಗಿದ್ದನು. ತನ್ನ ಗೆಳತಿ ಮೂಲಕ ಶಾಸಕರ ಖಾಸಗಿ ವಿಡಿಯೋ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡತೊಡಗಿದ್ದನು ಎಂಬ ಆರೋಪ ಕೇಳಿ ಬಂದಿದೆ.

    ನನ್ನ ಮಗ ಅಂತವನಲ್ಲ: ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿರುವ ರಾಘವೇಂದ್ರ ತಾಯಿ, ನನ್ನ ಮಗ ಅಂತಹವನಲ್ಲ. ಮೊದಲಿಗೆ ಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಅಲ್ಲಿ ಕೆಲಸದಿಂದ ಹೊರಬಂದು ಬೇರೆ ಕಡೆ ಉದ್ಯೋಗ ಹುಡುಕುತ್ತಿದ್ದಾನೆ. ರಾತ್ರಿ ಮನೆಗೆ ಬಂದ ಪೊಲೀಸರು, ಮನೆ ಪರಿಶೀಲನೆ ನಡೆಸಿದರು. ರಾತ್ರಿಯೆಲ್ಲ ಮನೆಯಲ್ಲಿಯೇ ಕುಳಿತಿದ್ದರೂ, ನಮಗೆ ಏನೂ ಹೇಳಲಿಲ್ಲ. ಮೊಬೈಲ್ ಕಿತ್ತುಕೊಂಡು ಮಗನಿಗೆ ಬರುವಂತೆ ಹೇಳುವಂತೆ ಹೇಳಿದರು.

    ಮತ್ತೆ ಬಂದು ಮನೆಯಲ್ಲಿದ್ದ ಮೆಮೊರಿ ಕಾರ್ಡ್, ಪೆನ್‍ಡ್ರೈವ್ ರೀತಿಯಲ್ಲಿರುವ ಒಂದು ವಸ್ತು, ಚಿಕಿತ್ಸೆಗಾಗಿ ತೆಗೆದಿಟ್ಟಿದ್ದ 50 ಸಾವಿರ ರೂ. ಮತ್ತು ದೇವರ ಮನೆಯಲ್ಲಿಟ್ಟಿದ್ದ ಒಲೆಯನ್ನು ಮಹಿಳಾ ಪೇದೆ ತೆಗೆದುಕೊಂಡು ಹೋಗಿದ್ದಾರೆ. ಪಬ್ಲಿಕ್ ಟಿವಿ ಮೂಲಕ ಮಗನ ಬಂಧನ ಸುದ್ದಿ ತಿಳಿಯಿತು. ಮನೆಯಲ್ಲಿ ವಯಸ್ಸಾದ ತಾಯಿಯೊಂದಿಗೆ ಇದ್ದೇನೆ. ನಾವಿಬ್ಬರು ಹೆಣ್ಣು ಮಕ್ಕಳೇ ಮನೆಯಲ್ಲಿದ್ದೇವೆ. ನಾನು ಮುಗ್ಧ ಮತ್ತು ಅಮಾಯಕ. ಬೇರೆಯವರ ಸಂಚಿಗೆ ಮಗ ಬಲಿಯಾಗಿರಬೇಕು ಎಂದು ರಾಘವೇಂದ್ರ ತಾಯಿ ಅನುಮಾನ ವ್ಯಕ್ತಪಡಿಸಿದ್ದಾರೆ.

    ಆತ ಯಾರೊಂದಿಗೆ ಹೆಚ್ಚು ಸೇರಲ್ಲ. ನಮಗೆ ಇಲ್ಲಿ ಯಾರು ಸಂಬಂಧಿಕರಿಲ್ಲ. ಎಲ್ಲಿ ಹೋಗಬೇಕು ಮತ್ತು ಯಾರನ್ನ ಸಂಪರ್ಕಿಸಬೇಕು ಎಂಬುವುದು ನಮಗೆ ಗೊತ್ತಿಲ್ಲ. ಇರೋ ಒಬ್ಬ ಮಗ ಯಾರ ತಂಟೆಗೂ ಹೋಗದವನು. ಆತ ತಪ್ಪು ಮಾಡಿಲ್ಲ ಎಂಬುವುದು ನನ್ನ ನಂಬಿಕೆ. ಒಂದು ವೇಳೆ ಪೊಲೀಸ್ ತನಿಖೆ ವೇಳೆ ತಪ್ಪಿತಸ್ಥ ಎಂದು ಸಾಬೀತಾದ್ರೆ ಮಗನೊಂದಿಗಿನ ಸಂಬಂಧವನ್ನು ಕಳೆದುಕೊಂಡು, ಅನಾಥಳಂತೆ ಮುಂದಿನ ಜೀವನ ನಡೆಸುತ್ತೇನೆ ಎಂದು ರಾಘವೇಂದ್ರ ತಾಯಿ ಸ್ಪಷ್ಟಪಡಿಸಿದ್ದಾರೆ.