Tag: honeytrap

  • ಹನಿಟ್ರ್ಯಾಪ್‍ಗೆ ಬಲೆಗೆ ಬಿದ್ದು ಪಾಕಿಗೆ ಸೇನಾ ಮಾಹಿತಿ ರವಾನೆ

    ಹನಿಟ್ರ್ಯಾಪ್‍ಗೆ ಬಲೆಗೆ ಬಿದ್ದು ಪಾಕಿಗೆ ಸೇನಾ ಮಾಹಿತಿ ರವಾನೆ

    ಬೆಂಗಳೂರು: ಪಾಕಿಸ್ತಾನದ ಗೂಢಾಚಾರಿಯಾಗಿ ಕೆಲಸ ಮಾಡಿ ಬಂಧನಕ್ಕೆ ಒಳಗಾದ ವ್ಯಕ್ತಿ ಐಎಸ್‍ಐ ಬೀಸಿದ ಹನಿಟ್ರ್ಯಾಪ್‍ಗೆ ಒಳಗಾಗಿದ್ದ ವಿಚಾರ ಬೆಳಕಿಗೆ ಬಂದಿದೆ.

    ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾದ ರಾಜಸ್ಥಾನ ಮೂಲದ ಜೀತೇಂದ್ರ ಸಿಂಗ್ ಭಾರತೀಯ ಸೇನೆಗೆ ಸಂಬಂಧಿಸಿದ ಅಂತರಾಷ್ಟ್ರೀಯ ಗಡಿ ಪ್ರದೇಶದ ಫೋಟೊಗಳನ್ನು ಈತ ರವಾನಿಸುತ್ತಿದ್ದ. ಭಾರತೀಯ ಸೇನೆಯ ಯೂನಿಫಾರ್ಮ್ ಹಾಕಿಕೊಂಡು ತಾನೂ ಕಮಾಂಡೋ ಎಂಬಂತೆ ಪೋಸ್ ಕೊಡುತ್ತಿದ್ದ. ಇದನ್ನೂ ಓದಿ: ಸಿಎಂ ಬೊಮ್ಮಾಯಿ ಹಿಂದೊಮ್ಮೆ ಕಾಂಗ್ರೆಸ್ ಕದ ತಟ್ಟಿದ್ದರು: ವಿನಯ್ ಕುಮಾರ್ ಸೊರಕೆ

    ಗಡಿಯಲ್ಲಿ ಸಾರ್ವಜನಿರು, ಸೇನೆಯ ಅಧಿಕಾರಿಗಳನ್ನ ಟ್ರ್ಯಾಪ್ ಮಾಡಲು ಐಎಸ್‍ಐ ಬಲೆ ಬೀಸುತ್ತದೆ. ಸೈನಿಕರಿಗೆ, ಅಧಿಕಾರಿಗಳಿಗೆ ಹಣದ ಆಸೆ ತೋರಿಸಿ ಟ್ರ್ಯಾಪ್ ಮಾಡಿ ಬಲೆಗೆ ಬೀಳಿಸುತ್ತದೆ. ಜಿತೇಂದರ್ ಸಿಂಗ್‍ನನ್ನು ಕೂಡ ಹೆಣ್ಣು ಮತ್ತು ಹಣ ತೋರಿಸಿ ಟ್ರ್ಯಾಪ್ ಮಾಡಲಾಗಿತ್ತು. ಇದನ್ನೂ ಓದಿ:  ಮೊದಲ ಅವಾರ್ಡ್ ಅಪ್ಪನ ಫೋಟೋ ಮುಂದೆ ಇರಿಸಿದ ಅಭಿಷೇಕ್ ಅಂಬರೀಷ್

    ಐಎಸ್‍ಐ ಏಜೆಂಟ್ ಯುವತಿ ಜಿತೇಂದರ್ ಸಿಂಗ್ ಫೇಸ್‍ಬುಕ್‍ನಲ್ಲಿ ಫ್ರೆಂಡ್ ಆಗಿ ರಹಸ್ಯ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಳು.ಭಾರತೀಯ ಸೇನೆಯ ಬಗ್ಗೆ ವಾಟ್ಸಪ್ ಮೂಲಕ ಈತ ಮಾಹಿತಿ ನೀಡುತ್ತಿದ್ದ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಕಾಟನ್ ಪೇಟೆಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಈತ ಸೇನಾಧಿರಿಸು ಧರಿಸಿ ವಂಚನೆಗೆ ಇಳಿದಿದ್ದು, ಇಂದು ಮಿಲಿಟರಿ ಇಂಟಲಿಜೆನ್ಸ್ ಹಾಗೂ ಸಿಸಿಬಿ ಪೊಲೀಸರ ಜಂಟಿ ಕಾರ್ಯಾಚರಣೆಯ ವೇಳೆ ಸಿಕ್ಕಿಬಿದ್ದಿದ್ದಾನೆ.

  • ಸಕ್ಕರೆ ನಾಡಲ್ಲಿ ಹನಿಟ್ರ್ಯಾಪ್ ದಂಧೆ, ಯುವಕನಿಂದ ಹಣ ದೋಚಿದ್ದ ಗ್ಯಾಂಗ್ ಅಂದರ್

    ಸಕ್ಕರೆ ನಾಡಲ್ಲಿ ಹನಿಟ್ರ್ಯಾಪ್ ದಂಧೆ, ಯುವಕನಿಂದ ಹಣ ದೋಚಿದ್ದ ಗ್ಯಾಂಗ್ ಅಂದರ್

    ಮಂಡ್ಯ: ಬೆಂಗಳೂರು ಸೇರಿದಂತೆ ದೊಡ್ಡ ನಗರಗಳಲ್ಲಿ ನಡೆಯುತ್ತಿದ್ದ ಹನಿಟ್ರ್ಯಾಪ್ ದಂಧೆ ಸಕ್ಕರೆ ನಾಡು ಮಂಡ್ಯಕ್ಕೂ ಕಾಲಿಟ್ಟಿದೆ. ಮಹಿಳೆಯನ್ನು ಮುಂದಿಟ್ಟುಕೊಂಡು ಯುವಕರನ್ನು ವಂಚಿಸುತ್ತಿದ್ದ ಕತರ್ನಾಕ್ ಗ್ಯಾಂಗ್ ಅನ್ನು ಮಂಡ್ಯ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

    ಯುವತಿಯ ಮೋಹಕ್ಕೆ ಮರುಳಾಗಿ ವಂಚನೆಗೊಳಗಾಗಿದ್ದ ಗುತ್ತಲು ಬಡಾವಣೆಯ ಗಿರೀಶ್ ದೂರು ನೀಡಿದ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ ಪೊಲೀಸರು, ಓರ್ವ ಯುವತಿ ಹಾಗೂ ಆಕೆಯ ಪ್ರಿಯಕರ ರವಿಚಂದ್ರ ಅಲಿಯಾಸ್ ನಾಯಿ ರವಿ, ಕಾರ್ತಿಕ್, ಕಿರಣ್ ಮತ್ತು ಚೆನ್ನಪಟ್ಟಣ ಮೂಲದ ಮಂಜು ಸೇರಿ ಐವರನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.

    ಬಲೆ ಬೀಸಿದ್ದು ಹೇಗೆ?
    ಕಾರ್ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದ ಗಿರಿಶ್ ತನ್ನ ಸಂಬಂಧಿ ಕಿರಣ್ ಬಳಿ ನನಗೊಬ್ಬಳು ಹುಡುಗಿಯನ್ನು ಪರಿಚಯಿಸುವಂತೆ ಕೇಳಿಕೊಂಡಿದ್ದ. ಕಿರಣ್ ಯುವತಿಯ ನಂಬರ್ ನೀಡಿ ಪರಿಚಯ ಮಾಡಿಕೊಳ್ಳುವಂತೆ ಹೇಳಿದ್ದ. ಗಿರೀಶ್ ಪರಿಚಯ ಮಾಡಿಕೊಳ್ಳುತ್ತಿದ್ದಂತೆ ಆ ಯುವತಿ ಬಣ್ಣದ ಮಾತುಗಳನ್ನಾಡಿ, ಹಣ ನೀಡುವಂತೆ ಕೇಳಿದ್ದಾಳೆ. ಹಣ ನೀಡುವುದಕ್ಕೆ ಒಪ್ಪಿದ ಗಿರೀಶ್‍ನನ್ನು ಜುಲೈ 22ರಂದು ಮಂಡ್ಯ ತಾಲೂಕಿನ ಕೊತ್ತತ್ತಿ ಗ್ರಾಮದ ಜ್ವಾಲಾಮುಖಿ ದೇವಾಲಯ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದಿದ್ದಾಳೆ.

    ಮೊದಲೇ ಯುವತಿಯ ಸಂಘ ಬಯಸಿದ್ದ ಗಿರೀಶನಿಗೆ ನಿರ್ಜನ ಪ್ರದೇಶ ಕಂಡು ಲಾಡು ಬಂದು ಬಾಯಿಗೆ ಬಿತ್ತು ಎಂದುಕೊಂಡಿದ್ದ. ಆದರೆ ಮೊದಲೇ ಪ್ಲಾನ್ ಮಾಡಿದಂತೆ ಕೆಲಹೊತ್ತಿನಲ್ಲೇ ಯುವತಿಯ ಪ್ರಿಯಕರ ರವಿಚಂದ್ರ ಹಾಗೂ ಆತನ ಸ್ನೆಹಿತರು ಅಲ್ಲಿಗೆ ಬಂದು ಗಿರೀಶನ ಬಳಿಯಿದ್ದ 30 ಸಾವಿರ ಹಣ, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.

    ಹಣ ಮತ್ತು ಮೊಬೈಲ್ ಕಳೆದುಕೊಂಡ ಗಿರೀಶ್, ಮಂಡ್ಯ ಗ್ರಾಮಾಂತರ ಪೊಲೀಸರ ಮುಂದೆ ನಡೆದ ಅಷ್ಟೂ ವಿಚಾರವನ್ನು ವಿವರಿಸಿದ್ದ. ಬಳಿಕ ಆತನ ಹೇಳಿಕೆಯನ್ನು ದಾಖಲಿಸಿಕೊಂಡ ಪೊಲೀಸರು, ಹನಿಟ್ರ್ಯಾಪ್ ನಡೆಸಿದ್ದ ಯುವತಿ ಮತ್ತು ಆಕೆಯ ಗ್ಯಾಂಗ್ ಅನ್ನು ಬಂಧಿಸಿದ್ದಾರೆ. ಇನ್ನು ನಗರ ಪ್ರದೇಶಗಳಲ್ಲಿ ನಡೆಯುತ್ತಿದ್ದ ಹನಿಟ್ರ್ಯಾಪ್ ದಂಧೆ, ಹಳ್ಳಿಗಳಿಗೂ ವ್ಯಾಪಿಸುತ್ತಿರುವುದಕ್ಕೆ ಕೊತ್ತತ್ತಿ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

  • ಶ್ರೀಮಂತನ ಸ್ನೇಹ ಬೆಳೆಸಿ ಸುಲಿಗೆ – ಹನಿಟ್ರ್ಯಾಪ್ ಸಂಚುಕೋರರಿಗೆ ಜೀವಾವಧಿ ಶಿಕ್ಷೆ

    ಶ್ರೀಮಂತನ ಸ್ನೇಹ ಬೆಳೆಸಿ ಸುಲಿಗೆ – ಹನಿಟ್ರ್ಯಾಪ್ ಸಂಚುಕೋರರಿಗೆ ಜೀವಾವಧಿ ಶಿಕ್ಷೆ

    ಹುಬ್ಬಳ್ಳಿ: ಶ್ರೀಮಂತ ವ್ಯಕ್ತಿಯೊಂದಿಗೆ ಸಲುಗೆ ಬೆಳೆಸಿಕೊಂಡು ಆತನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಹಚರರೊಂದಿಗೆ ಚಾಕುವಿನಿಂದ ಇರಿದು ಸುಲಿಗೆ ಮಾಡಿದ ಯುವತಿ ಸೇರಿದಂತೆ ನಾಲ್ವರು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.

    ಹನಿಟ್ರ್ಯಾಪ್ ಹಾಗೂ ಸುಲಿಗೆ ಮಾಡಿದ ನಾಲ್ವರಿಗೆ ಹುಬ್ಬಳ್ಳಿಯ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದ್ದು, ಸುಲಿಗೆಕೋರರು ಕಂಬಿ ಪಾಲಾಗಿದ್ದಾರೆ.

    ಏನಿದು ಪ್ರಕರಣ?
    ಶ್ರೀಮಂತರನ್ನು ಪತ್ತೆ ಮಾಡಿ ಅವರೊಂದಿಗೆ ಸ್ನೇಹ ಬೆಳೆಸಿ ಸಲುಗೆಯಿಂದ ಹಣ ಕೀಳುವ ಉದ್ದೇಶದಿಂದ ಹುಬ್ಬಳ್ಳಿಯ ನಾಲ್ವರು ಹೊಂಚು ಹಾಕಿದ್ದರು. ಅನಘಾ ವಡವಿ ಎನ್ನುವ ಯುವತಿಯೊಂದಿಗೆ ಸ್ನೇಹ ಬೆಳೆಸಿದ ಬಲಬೀರ ದುರ್ಗಾಜಿರಾವ್ ಎಂಬವರನ್ನು 2017ರ ಜುಲೈ 30 ರಂದು ಅನಘಾ ಕಾರವಾರ ರಸ್ತೆಯ ಸೈನಿಕ ಶಾಲೆಯ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ಯಿದ್ದಳು. ಈ ವೇಳೆಗೆ ಅಲ್ಲಿಗೆ ಬಂದ ಅನಘಾ ಸಹಚರರಾದ ರಮೇಶ್ ಹಜಾರೆ, ಗಣೇಶ ಶೆಟ್ಟಿ, ವಿನಾಯಕ ಹಜಾರೆ, ಬಲಬೀರ ಮೇಲೆ ದಾಳಿ ಮಾಡಿದ್ದರು. ನಮ್ಮ ಹುಡುಗಿಯನ್ನ ರೇಪ್ ಮಾಡಲು ಬಂದಿದ್ದೀಯ ಎಂದು ಬೆದರಿಸಿ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಆದರೆ ಹನಿಟ್ರ್ಯಾಪ್ ಗೆ ಒಳಗಾದ ಬಲಬೀರ ತನ್ನ ಬಳಿ ಹಣವಿಲ್ಲ ಎಂದಾಗ ಸುಲಿಗೆಕೋರರು ಬಲಬೀರಗೆ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು.

    ಬಲಬೀರ ಬಳಿಯ ಇದ್ದ ಮೊಬೈಲ್ ಫೋನ್, ಎಟಿಎಂ ಕಾರ್ಡ್ ಕಿತ್ತುಕೊಂಡು ಹತ್ತಿರದ ಎಟಿಎಂಗೆ ಕರೆದುಕೊಂಡು ಹೋಗಿ 10 ಸಾವಿರ ರೂಪಾಯಿ ಡ್ರಾ ಮಾಡಿಸಿಕೊಂಡು ಬಲಬೀರನನ್ನ ಸಿದ್ಧಾರೂಢ ಮಠದ ಬಳಿ ಬಿಟ್ಟು ಪರಾರಿಯಾಗಿದ್ದರು. ಘಟನೆಯ ಕುರಿತು ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

    ಈ ಪ್ರಕರಣದ ವಿಚಾರಣೆ ನಡೆಸಿದ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎನ್. ಗಂಗಾಧರ್ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಲು ಆದೇಶಿಸಿದ್ದಾರೆ.

    ಆರೋಪಿಗಳಾದ ನಾಲ್ವರಿಗೆ ಜೀವಾವಧಿ ಶಿಕ್ಷೆ ಹಾಗೂ ರಮೇಶ್, ಗಣೇಶ್. ವಿನಾಯಕ್‍ಗೆ ತಲಾ 17,500 ರೂಪಾಯಿ ದಂಡ ಹಾಗೂ ಆರೋಪಿತಳಾದ ಯುವತಿ ಅನಘಾಗೆ 15,000 ಸಾವಿರ ದಂಡ ವಿಧಿಸಿದ್ದಾರೆ. ಇದನ್ನೂ ಓದಿ: ಕಂಟೇನರ್​ಗೆ ಲಾರಿ ಡಿಕ್ಕಿ – ಇಬ್ಬರ ದುರ್ಮರಣ

  • ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್

    ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್

    ಬೆಂಗಳೂರು: ಹನಿಟ್ರ್ಯಾಪ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ.

    ಹನಿಟ್ರ್ಯಾಪ್ ಗ್ಯಾಂಗ್ ನ ಕಿರುಕುಳಕ್ಕೆ ಬೇಸತ್ತು ಇತ್ತೀಚೆಗೆ ಕೆ.ಆರ್.ಪುರ ಬಳಿಯ ಭಟ್ಟರಹಳ್ಳಿಯ ಯುವಕ ಅವಿನಾಶ್ ಆತ್ಮಹತ್ಯೆಗೆ ಶರಣಾಗಿದ್ದ. ಯುವಕನ ಅಶ್ಲೀಲ ವಿಡಿಯೋ ಮಾಡಿಕೊಂಡಿದ್ದ ಗ್ಯಾಂಗ್, ಹಣ ನೀಡುವಂತೆ ಅವಿನಾಶ್ ಗೆ ಕಿರುಕುಳ ನೀಡುತ್ತಿತ್ತು. ಇದರಿಂದ ಬೇಸತ್ತು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದ.

    ಈ ಸಂಬಂಧ ಕೆ.ಆರ್.ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಇದೀಗ ಹನಿಟ್ರ್ಯಾಪ್ ಗ್ಯಾಂಗ್‍ನ ಇಬ್ಬರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

  • ಹನಿಟ್ರ್ಯಾಪ್‍ಗೆ ಸಿಲುಕಿ ಪರದಾಡಿದ ಮಾಜಿ ಶಾಸಕರ ಪುತ್ರ?

    ಹನಿಟ್ರ್ಯಾಪ್‍ಗೆ ಸಿಲುಕಿ ಪರದಾಡಿದ ಮಾಜಿ ಶಾಸಕರ ಪುತ್ರ?

    ಹುಬ್ಬಳ್ಳಿ: ರಾಜ್ಯ ರಾಜಕೀಯದಲ್ಲಿ ಈಗ ಸಿಡಿ ಪ್ರಕರಣ ಸದ್ದು ಮಾಡುತ್ತಿದೆ. ಮಾಜಿ ಸಚಿವರ ಸಿಡಿ ಸ್ಫೋಟದ ಬೆನ್ನಲ್ಲೇ ಮಾಜಿ ಶಾಸಕರ ಪುತ್ರನಿಗೆ ಹನಿಟ್ರ್ಯಾಪ್ ಮಾಡಿ ಬ್ಲ್ಯಾಕ್‍ಮೇಲ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಧಾರವಾಡ ಜಿಲ್ಲೆಯ ಮಾಜಿ ಶಾಸಕನ ಪುತ್ರನ ವಿಡಿಯೋ ಇಟ್ಟುಕೊಂಡಿರುವ ಯುವತಿ ಬ್ಲ್ಯಾಕ್‍ಮೇಲ್ ಮಾಡಿದ್ದಾಳೆ ಎಂದು ಮಾಜಿ ಶಾಸಕರ ಪುತ್ರ ಸೈಬರ್ ಕ್ರೈಂ ಠಾಣೆಗೆ ದೂರು ದಾಖಲಿಸಿದ್ದಾರೆ.

    ಧಾರವಾಡ ಜಿಲ್ಲೆಯ ಮಾಜಿ ಶಾಸಕ ಪುತ್ರನಿಗೆ ಫೇಸ್‍ಬುಕ್ ನಲ್ಲಿ ಪರಿಚಯವಾದ ಯುವತಿ ವೀಡಿಯೋ ಕಾಲ್ ಮಾಡುತ್ತ ಸಲುಗೆಯಿಂದ ಇದ್ದ ಯುವತಿ ಮಾಜಿ ಶಾಸಕನ ಪುತ್ರನನ್ನು ಬಲೆಗೆ ಹಾಕಿಕೊಂಡಿದ್ದಾಳೆ. ವಿಡಿಯೋ ಕಾಲ್ ಮಾಡಿದ ಬಳಿಕ ಮಾಜಿ ಶಾಸಕರ ಮಗನ ಫೋಟೋ ಎಡಿಟ್ ಮಾಡಿ ಈ ವಿಡಿಯೋದಿಂದ ಬ್ಲ್ಯಾಕ್‍ಮೇಲ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ.

    ಹಣ ಕೊಡದಿದ್ರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡುವದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಹೆದರಿದ ಮಾಜಿ ಶಾಸಕನ ಫೋನ್ ಪೇ ಮೂಲಕ 13,200 ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಪದೇ ಪದೇ ಹಣಕ್ಕೆ ಬೇಡಿಕೆ ಇಟ್ಟಾಗ ಮಾಜಿ ಶಾಸಕನ ಪುತ್ರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿ ಎಂದು ನಮೂದು ಮಾಡಿ ದೂರು ದಾಖಲಾಗಿದೆ.

    ಅವಳಿ ನಗರದಲ್ಲಿ ಆನ್‍ಲೈನ್ ವಂಚಕರ ಜಾಲ ಹೆಚ್ಚಾಗಿದೆ. ಏಳೆಂಟು ಜನರಿಗೆ ಇದೇ ರೀತಿ ಮೋಸ ಮಾಡಿ ತಂಡ ಸಾಕಷ್ಟು ಜನರಿಂದ ಹಣ ಎಗರಿಸಿದ್ದಾರೆ. ಸೈಬರ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಸುಂದರಿಗಾಗಿ ಸ್ಪಾಗೆ ಹೋದವರು ಹನಿಟ್ರ್ಯಾಪ್ ಖೆಡ್ಡಾಕ್ಕೆ

    ಸುಂದರಿಗಾಗಿ ಸ್ಪಾಗೆ ಹೋದವರು ಹನಿಟ್ರ್ಯಾಪ್ ಖೆಡ್ಡಾಕ್ಕೆ

    – ಶ್ರೀಮಂತರ ಮಕ್ಕಳೇ ಇವರ ಟಾರ್ಗೆಟ್

    ಬೆಳಗಾವಿ: ಹನಿಟ್ರ್ಯಾಪ್ ಗ್ಯಾಂಗ್ ಮೇಲೆ ಸಿಇಎನ್ ಪೊಲೀಸರು ದಾಳಿ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಕುಂದಾನಗರಿಯಲ್ಲಿ ನಡೆದಿದೆ.

    ಗ್ಯಾಂಗ್‍ವೊಂದು ಮಸಾಜ್ ಮತ್ತು ಸ್ಪಾ ಸೆಂಟರ್ ನಡೆಸುವುದಾಗಿ ಅನುಮತಿ ಪಡೆದು ಅನೈತಿಕ ಚಟುವಟಿಕೆ ನಡೆಸುತ್ತಿರುವುದು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಬೆಳಗಾವಿಯ ಕಾಂಗ್ರೆಸ್ ರಸ್ತೆಯಲ್ಲಿದ್ದ ನ್ಯೂ ಗೆಟ್ ವೇ ಯುನಿಸೆಕ್ಸ್ ಸ್ಪಾ ಹೆಸರಿನಲ್ಲಿರುವ ಮಸಾಜ್ ಸೆಂಟರ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಕೇದಾರಿ ಶಿಂಧೆ, ಪ್ರಕಾಶ್ ಯಳ್ಳೂರ್ಕರ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಬಳಿಕ ತನಿಖೆ ವೇಳೆ ಈ ಗ್ಯಾಂಗ್‍ನ ಪ್ರಮುಖ ಟಾರ್ಗೆಟ್ ಶ್ರೀಮಂತ ಯುವಕರು ಎಂದು ತಿಳಿದು ಬಂದಿದೆ. ಆನ್‍ಲೈನ್ ಮೂಲಕ ಬಣ್ಣ ಬಣ್ಣದ ಹುಡುಗಿಯರ ಫೋಟೋ ತೋರಿಸುವ ಮೂಲಕ ಶ್ರೀಮಂತ ಯುವಕರನ್ನು ಬಲೆಗೆ ಹಾಕಿಕೊಂಡು ಹನಿಟ್ರ್ಯಾಪ್ ನಡೆಸುತ್ತಿದ್ದರು ಎಂಬ ಅಸಲಿ ಸತ್ಯ ಬಯಲಾಗಿದೆ.

    ಇನ್ನೂ ಘಟನೆಯಲ್ಲಿ ಪೊಲೀಸರು ಮೂವರು ಯುವತಿಯರನ್ನು ರಕ್ಷಣೆ ಮಾಡಿ ಅವರನ್ನು ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಿದ್ದಾರೆ. ಇದೀಗ ಪ್ರಕರಣ ಕುರಿತಂತೆ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

  • ಫೇಸ್ಬುಕ್‍ನಲ್ಲಿ ಪರಿಚಯ, ಹನಿಟ್ರ್ಯಾಪ್- ಇಬ್ಬರು ಯುವತಿಯರು ಸೇರಿ ನಾಲ್ವರು ಅರೆಸ್ಟ್

    ಫೇಸ್ಬುಕ್‍ನಲ್ಲಿ ಪರಿಚಯ, ಹನಿಟ್ರ್ಯಾಪ್- ಇಬ್ಬರು ಯುವತಿಯರು ಸೇರಿ ನಾಲ್ವರು ಅರೆಸ್ಟ್

    ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿನ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ವಿವಿಧ ರೀತಿಯ ಮೋಸಗಳನ್ನು ಮಾಡಲಾಗುತ್ತಿದೆ. ಫೇಸ್ಬುಕ್‍ನಲ್ಲಿ ಫ್ರಂಡ್ ರಿಕ್ವೆಸ್ಟ್ ಕಳಿಸಿ, ರೂಮ್‍ಗೆ ಕರೆದು ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್‍ನ್ನು ಪೊಲೀಸರು ಬಂಧಿಸಿದ್ದಾರೆ.

    ಮಂಗಳೂರಿನ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇಬ್ಬರು ಯುವತಿಯರು ಸೇರಿ ನಾಲ್ವರ ಖತರ್ನಾಕ್ ಟೀಂ ನ್ನು ಮಂಗಳೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ರೇಶ್ಮಾನೀಮಾ ಮತ್ತು ಜೀನತ್ ಮುಬಿನ್ ತಮ್ಮ ವ್ಯವಹಾರಕ್ಕಾಗಿ ಮಂಗಳೂರಿನ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.

    ಈ ಗ್ಯಾಂಗ್‍ನಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವುದು ತಿಳಿದಿದ್ದು, ಬಂಧಿತರು ಈ ಅಪರಾಧ ಚಟುವಟಿಕೆಗಳ ಜೊತೆಗೆ ರೇಶ್ಮಾ ಬೀಡಿ ಕಟ್ಟುವ ವೃತ್ತಿ ನಡೆಸುತ್ತಿದ್ದರೆ, ಜೀನತ್ ಇನ್ಸೂರೆನ್ಸ್ ಹಾಗೂ ಇಕ್ಬಾಲ್ ಮತ್ತು ನಾಜೀಪ್ ಚಾಲಕ ವೃತ್ತಿ ನಡೆಸುತ್ತಿದ್ದರು. ಸದ್ಯ ಆರೋಪಿಗಳಿಂದ ಮೊಬೈಲ್ ಫೋನ್, ನಗದು, ಆಯುಧ, ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಬಂಧಿತರನ್ನು ಇನ್ನಷ್ಟು ವಿಚಾರಣೆ ನಡೆಸುತ್ತಿದ್ದು, ಪ್ರಕರಣ ಇನ್ನಷ್ಟು ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ.

    ಹೇಗೆ ಬಲೆ ಬೀಸುತ್ತಿದ್ದರು?
    ಸಾಮಾಜಿಕ ಜಾಲತಾಣದ ಮೂಲಕ ಯುವಕರನ್ನು ಪರಿಚಯಿಸಿಕೊಂಡು, ಬಳಿಕ ಒಂದು ದಿನ ತಾನು ಮನೆಯಲ್ಲಿ ಒಬ್ಬಂಟಿಯಾಗಿರುವುದಾಗಿ ನಂಬಿಸಿ ಮನೆಗೆ ಆಹ್ವಾನಿಸುತ್ತಿದ್ದರು. ಮನೆಗೆ ಬಂದವರನ್ನು ಉಳಿದ ಆರೋಪಿಗಳಾದ ಇಕ್ಬಾಲ್ ಮಹಮ್ಮದ್ ಮತ್ತು ನಾಸಿಫ್ ಯಾನೆ ಅಬ್ದುಲ್ ಖಾದರ್ ನಾಜೀಪ್ ಎಂಬುವರು ಬೆದರಿಸಿ, ಹಲ್ಲೆ ನಡೆಸಿ, ಬ್ಲಾಕ್ ಮೇಲ್ ಮಾಡಿ ಅವರಿಂದ ಹಣ ವಸೂಲಿ ಮಾಡುತ್ತಿದ್ದರು.

    ಅದೇ ರೀತಿ ಮಂಗಳೂರಿನ ಪಕ್ಕದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಂಬಳೆಯ ಯುವಕನನ್ನು ಜನವರಿ 14ರಂದು ಸುರತ್ಕಲ್‍ಗೆ ಕರೆಸಿಕೊಂಡಿದ್ದರು. ಕಾರಿನಲ್ಲಿ ಬಂದಿದ್ದ ಸಂತ್ರಸ್ತನನ್ನು ಮನೆಯೊಳಗೆ ಲಾಕ್ ಮಾಡಿ, ಹಾಕಿ ಸ್ಟಿಕ್ ಮೂಲಕ ಹಲ್ಲೆ ನಡೆಸಿ, ಐದು ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದರೆ ವಿಡಿಯೋ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತೇವೆ, ಅತ್ಯಾಚಾರ ದೂರು ನೀಡುತ್ತೇವೆ ಎಂದು ಬೆದರಿಸಿದ್ದಾರೆ.

    ಸಂತ್ರಸ್ತನ ಬಳಿ ಹಣ ಇಲ್ಲದ್ದರಿಂದ ಆತನ ಕಾರನ್ನು ತೆಗೆದುಕೊಂಡು, ಒಂದು ದಿನದ ಬಳಿಕ ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಕಂಗೆಟ್ಟ ಯುವಕ ಜನವರಿ 16ಕ್ಕೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಆರೋಪಿಗಳನ್ನು ಖೆಡ್ಡಾಕೆ ಬೀಳಿಸಿದ್ದಾರೆ. ವಿಚಾರಣೆ ಸಂದರ್ಭ ಈ ಗ್ಯಾಂಗ್ ಕಳೆದ ಏಳೆಂಟು ತಿಂಗಳಲ್ಲಿ ಐದಾರು ಮಂದಿಗೆ ಈ ರೀತಿ ಹನಿಟ್ರ್ಯಾಪ್ ಮಾಡಿರೋದು ಬೆಳಕಿಗೆ ಬಂದಿದೆ.

  • ಹನಿಟ್ರ್ಯಾಪ್ ಹೆಸರಿನಲ್ಲಿ ಸುಲಿಗೆ- 5 ಮಂದಿ ಅರೆಸ್ಟ್

    ಹನಿಟ್ರ್ಯಾಪ್ ಹೆಸರಿನಲ್ಲಿ ಸುಲಿಗೆ- 5 ಮಂದಿ ಅರೆಸ್ಟ್

    – ಇಬ್ಬರು ಮಹಿಳೆಯರು, ಮೂವರು ಪುರುಷರು ಭಾಗಿ
    – ಹಣ ಇದ್ದವರೇ ಇವರ ಟಾರ್ಗೇಟ್

    ಲಕ್ನೋ: ಹನಿಟ್ರ್ಯಾಪ್ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದ ತಂಡವೊಂದನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಗಳು ಲೈಂಗಿಕ ವೀಡಿಯೋಗಳನ್ನು ಮಾಡುವ ಮೂಲಕ ಜನರನ್ನು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದರು. ಇಬ್ಬರು ಮಹಿಳೆಯರು ಮತ್ತು ಮೂವರು ಪುರುಷರನ್ನೊಳಗೊಂಡ ಗ್ಯಾಂಗ್ ಅನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

    ಗ್ಯಾಂಗ್‍ನಲ್ಲಿರುವ ಮಹಿಳೆಯರು ಉದ್ಯಮಿಗಳು, ವೈದ್ಯರು ಸೇರಿದಂತೆ ಹಣ ಇರುವವರೆನ್ನೆ ಗುರಿಯಾಗಿಸಿಕೊಂಡಿದ್ದರು. ನಂತರ ಗ್ಯಾಂಗ್‍ನಲ್ಲಿ ಉಳಿದ ಸದಸ್ಯರು ಅವನಿಗೆ ಬೆದರಿಕೆ ಹಾಕುತ್ತಿದ್ದರು. ವೀಡಿಯೊಗಳನ್ನು ವೈರಲ್ ಮಾಡುತ್ತೇವೆ ಎಂದು ಬೆದರಿಕೆ ಹಾಕುವ ಮೂಲಕ ಭಾರೀ ಮೊತ್ತದ ಹಣವನ್ನು ಈ ಗ್ಯಾಂಗ್ ಸುಲಿಗೆ ಮಾಡುತ್ತಿತ್ತು.

    ಇತ್ತೀಚೆಗೆ ಈ ಗ್ಯಾಂಗ್ ಲಕ್ನೋದ ಲೋಹಿಯಾ ಇನ್ಸಿಟ್ಯೂಟ್ ವೈದ್ಯರನ್ನು ಬಲಿಪಶುವನ್ನಾಗಿ ಮಾಡಿಕೊಂಡಿತ್ತು. ಹೇಗಾದರೂ ವೈದ್ಯರನ್ನು ಟ್ರ್ಯಾಪ್ ಮಾಡಬೇಕು ಎಂದು ಗ್ಯಾಂಗ್ ಹೊಂಚು ಹಾಕುತ್ತಿರುವಾಗ. ವೈದ್ಯರು ಈ ಗ್ಯಾಂಗ್ ಹಿಡಿತದಿಂದ ತಪ್ಪಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

    ನಂತರ ಲಕ್ನೋದ ವಿಭೂತಿ ಖಾಂಡ್ ಪೊಲೀಸರು ಹನಿ ಟ್ರ್ಯಾಪ್ ಮಾಡಿ ಲೈಂಗಿಕ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ಅನ್ನು ಪತ್ತೆ ಮಾಡಿದರು. ಬಂಧಿತ ಎಲ್ಲಾ ಆರೋಪಿಗಳನ್ನು ಪೊಲೀಸರು ಪ್ರಶ್ನಿಸುತ್ತಿದ್ದಾರೆ. ಈ ಗ್ಯಾಂಗ್‍ನಲ್ಲಿ ಇದುವರೆಗೆ ಎಷ್ಟು ಜನರು ಸಿಲುಕಿಕೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿಯನ್ನು ಆರೋಪಿಗಳಿಂದ ಸಂಗ್ರಹಿಸಲಾಗುತ್ತಿದೆ.

  • ಯುವತಿಯನ್ನ ಬಳಸಿಕೊಂಡು ಹಣ ವಸೂಲಿಗೆ ಇಳಿದಿದ್ದ ಐವರ ಬಂಧನ

    ಯುವತಿಯನ್ನ ಬಳಸಿಕೊಂಡು ಹಣ ವಸೂಲಿಗೆ ಇಳಿದಿದ್ದ ಐವರ ಬಂಧನ

    ಮೈಸೂರು: ಜಿಲ್ಲೆಯಲ್ಲಿ ಬೃಹತ್ ಹನಿಟ್ರ್ಯಾಪ್ ಜಾಲವೊಂದು ಪತ್ತೆಯಾಗಿದೆ. ಯುವತಿಯನ್ನ ಬಳಸಿಕೊಂಡು ಹಣ ವಸೂಲಿಗೆ ಇಳಿದಿದ್ದ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

    ನವೀನ್, ಶಿವರಾಜು, ಹರೀಶ್ ಹಾಗೂ ವಿಜಿ ಬಂಧಿತ ಆರೋಪಿಗಳು. ಈ ನಾಲ್ವರು ಕೂಡ ಮೈಸೂರಿನ ಪಿರಿಯಾಪಟ್ಟಣ ನಿವಾಸಿಗಳು. ಅನಿತಾ ಎಂಬ ಯುವತಿಯನ್ನು ಬಳಸಿಕೊಂಡು ಈ ತಂಡ ಹನಿಟ್ರ್ಯಾಪ್‍ಗೆ ಇಳಿದಿದ್ದು, ಸದ್ಯ ಈಕೆಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

    ಮೈಸೂರಿನ ವೈದ್ಯರೊಬ್ಬರನ್ನ ಹನಿಟ್ರ್ಯಾಪ್ ಜಾಲಕ್ಕೆ ಬೀಳಿಸಿತ್ತು. ಯುವತಿ ಹಾಗೂ ನಾಲ್ವರು ಆರೋಪಿಗಳು ಖಾಸಗಿ ವಿಡಿಯೋ ಮಾಡಿಕೊಂಡು ಒಂದು ಕೋಟಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ವಿಡಿಯೋವನ್ನ ಸಾಮಾಜಿಕ ಜಾಲತಾಣಕ್ಕೆ ಹಂಚುವ ಬೆದರಿಕೆ ಹಾಕಿದ್ದರು.

    ಪ್ರಕಾಶ್ ಬಾಬು ಪಿರಿಯಾಪಟ್ಟಣದಲ್ಲಿ ವಾಸವಿದ್ದಾಗ ಆರೋಪಿಗಳು ಒಂದು ಕೋಟಿ ಹಣ ಕೇಳಿದ್ದರು. ಈವರೆಗೆ ಡಾ.ಪ್ರಕಾಶ್ ಬಾಬು ಅವರು 31 ಲಕ್ಷದ 30 ಸಾವಿರ ಹಣ ನೀಡಿದ್ದಾರೆ. 2019ರಿಂದ ಡಿಸೆಂಬರ್‍ನಿಂದ 2020 ಅಕ್ಟೋಬರ್ ತಿಂಗಳವರೆಗೂ ಹಣ ವಸೂಲಿ ಮಾಡಿದ್ದರು. ಪಿರಿಯಾಪಟ್ಟಣ ಬಿಟ್ಟು ಮೈಸೂರು ನಗರಕ್ಕೆ ಬಂದ ಡಾ.ಪ್ರಕಾಶ್ ಬಾಬು, ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ದೂರಿನ ಅನ್ವಯ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸರು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಡೇಟಿಂಗ್ ಆ್ಯಪ್‍ನಲ್ಲಿ ಪರಿಚಯ- ಟೆಕ್ಕಿಯನ್ನು ಮನೆಗೆ ಕರೆದು 5 ಲಕ್ಷ ಕೊಡು ಅಂದ್ಳು!

    ಡೇಟಿಂಗ್ ಆ್ಯಪ್‍ನಲ್ಲಿ ಪರಿಚಯ- ಟೆಕ್ಕಿಯನ್ನು ಮನೆಗೆ ಕರೆದು 5 ಲಕ್ಷ ಕೊಡು ಅಂದ್ಳು!

    ಮುಂಬೈ: ಮಹಿಳೆಯೊಬ್ಬಳು ಡೇಟಿಂಗ್ ಆ್ಯಪ್ ಮೂಲಕ ಟೆಕ್ಕಿಗೆ 6 ಲಕ್ಷ ರೂ.ಗಳ ಪಂಗನಾಮ ಹಾಕಿದ್ದು, ಬ್ಲಾಕ್ ಮೇಲ್ ಮಾಡಿ ಹಣ ಕಿತ್ತುಕೊಂಡಿದ್ದಾಳೆ.

    ಮುಂಬೈನ ಘಾಟ್ಕೋಪರ್ ಬಳಿ ಈ ಘಟನೆ ನಡೆದಿದ್ದು, ಮಹಿಳೆಯ ಮಾತು ನಂಬಿ ಸಾಫ್ಟ್‍ವೇರ್ ಎಂಜಿನಿಯರ್ ಮೋಸ ಹೋಗಿ, 6 ಲಕ್ಷ ರೂ. ಕಳೆದುಕೊಂಡಿದ್ದಾರೆ. ದೀಪಾಲಿ ಜೈನ್ ಡೆಟಿಂಗ್ ಆ್ಯಪ್ ಮೂಲಕ ಟೆಕ್ಕಿಯನ್ನು ಪರಿಚಯ ಮಾಡಿಕೊಂಡಿದ್ದು, ಕೆಲ ಕಾಲ ಚಾಟ್ ಮಾಡಿದ್ದಾಳೆ. ಬಳಿಕ ಭೇಟಿಯಾಗಲು ತಿಳಿಸಿದ್ದಾಳೆ. ಈ ವೇಳೆ ಟೆಕ್ಕಿ ದೀಪಾಲಿ ಮನೆಗೆ ತೆರಳಿದ್ದು, ಆಗ ಅವಳೊಂದಿಗಿದ್ದ ಫೋಟೋ ತೆಗೆದು ಬ್ಲಾಕ್ ಮೇಲ್ ಮಾಡಿದ್ದಾಳೆ. ಅಲ್ಲದೆ 6 ಲಕ್ಷ ರೂ. ಕಿತ್ತುಕೊಂಡಿದ್ದಾಳೆ.

    ಘಟನೆ ನಡೆಯುತ್ತಿದ್ದಂತೆ 45 ವರ್ಷದ ಭಿವಾಂಡಿಯ ಟೆಕ್ಕಿ ಶಾಂತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಡೇಟಿಂಗ್ ಆ್ಯಪ್‍ನಲ್ಲಿ ದೀಪಾಲಿ ಜೈನ್(50) ಪರಿಚಯವಾಗಿದ್ದು, ಬಳಿಕ ಅರಿಹಂತ್ ಸಿಟಿ ಕಾಂಪ್ಲೆಕ್ಸ್ ಬಳಿಯ ತನ್ನ ಮನೆಗೆ ಕರೆದಳು. ನಾನು ಸಹ ಮನೆಗೆ ಹೋದೆ ಎಂದು ತಿಳಿಸಿದ್ದಾರೆ.

    ಮನೆಯಲ್ಲಿ ದೀಪಾಲಿ ಹೊರತಾಗಿ ಇನ್ನೂ ಇಬ್ಬರು ಮಹಿಳೆಯರು ಸೇರಿ ಒಟ್ಟು ನಾಲ್ಕು ಜನ ಇದ್ದರು ಎಂಬುದು ನನಗೆ ಅರಿವಿರಲಿಲ್ಲ. ನಾನು ದೀಪಾಲಿ ಜೈನ್ ಜೊತೆಗಿರುವ ಚಿತ್ರಗಳನ್ನು ಅವರು ಕ್ಲಿಕ್ಕಿಸಿದ್ದರು. ಬಳಿಕ ನನ್ನನ್ನು ರೂಮ್‍ನಲ್ಲಿ ಕೂಡಿ ಹಾಕಿದರು. ನಂತರ ನನ್ನ ಮೊಬೈಲ್‍ನಲ್ಲಿ ಜೈನ್ ಜೊತೆ ಚಾಟ್ ಮಾಡಿದ ಮೆಸೇಜ್‍ಗಳನ್ನು ಡಿಲೀಟ್ ಮಾಡಿ, ಹಣಕ್ಕೆ ಬೇಡಿಕೆ ಇಟ್ಟರು. ಅಲ್ಲದೆ ಹಣ ಕೊಡದಿದ್ದರೆ, ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದರು ಎಂದು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ.

    ಇದರಿಂದ ಭಯಭೀತನಾಗಿ 4 ಲಕ್ಷ ರೂ.ಗಳನ್ನು ನನ್ನ ಮೂರು ಬ್ಯಾಂಕ್ ಖಾತೆಗಳಿಂದ ಜೈನ್ ಬ್ಯಾಂಕ್ ಖಾತೆಗೆ ವರ್ಗಾಯಿಸಿದೆ. ಇಷ್ಟಕ್ಕೆ ಸುಮ್ಮನಾಗದೆ ನನ್ನ ಕ್ರೆಡಿಟ್ ಕಾರ್ಡ್‍ನಿಂದ 2 ಲಕ್ಷ ರೂ.ಬೆಲೆ ಬಾಳುವ ಎಲೆಕ್ಟ್ರಾನಿಕ್ಸ್ ಹಾಗೂ ಚಿನ್ನದ ಒಡವೆಗಳನ್ನು ಕೊಡಿಸುವಂತೆ ಆದೇಶಿಸಿದರು. ಎಲ್ಲ ಕಸಿದುಕೊಂಡ ಬಳಿಕ ಬೆದರಿಕೆ ಹಾಕಿ ನನ್ನನ್ನು ಕಳುಹಿಸಿದರು ಎಂದು ಪೊಲೀಸರಿಗೆ ಟೆಕ್ಕಿ ವಿವರಿಸಿದ್ದಾರೆ.

    ಜೈನ್ ಮನೆಯಿಂದ ಹೊರಗೆ ಬರುತ್ತಿದ್ದಂತೆ ಟೆಕ್ಕಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪೊಲೀಸರು ತಕ್ಷಣವೇ ಮನೆಯ ಮೇಲೆ ದಾಳಿ ನಡೆಸಿ, ಜೈ ಹಾಗೂ ಇತರ ಮೂವರನ್ನು ಬಂಧಿಸಿದ್ದಾರೆ. ಬೆದರಿಕೆ ಒಡ್ಡಿರುವುದು ಹಾಗೂ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಐಪಿಸಿ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಲಾಗಿದೆ. ಐದನೇ ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.