Tag: homestay

  • ಹೋಂ ಸ್ಟೇ ಬಾತ್‌ ರೂಮ್‌ನಲ್ಲಿ ಯುವತಿ ಅನುಮಾನಾಸ್ಪದ ಸಾವು

    ಹೋಂ ಸ್ಟೇ ಬಾತ್‌ ರೂಮ್‌ನಲ್ಲಿ ಯುವತಿ ಅನುಮಾನಾಸ್ಪದ ಸಾವು

    ಚಿಕ್ಕಮಗಳೂರು: ಹೋಂ ಸ್ಟೇ (Homestay) ಬಾತ್ ರೂಂನಲ್ಲಿ ಸ್ನಾನಕ್ಕೆಂದು ತೆರಳಿದ್ದ ಯುವತಿ ಕುಸಿದು ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೂಡಿಗೆರೆ (Mudigere) ತಾಲೂಕಿನ ಹಾಂದಿ ಗ್ರಾಮದಲ್ಲಿ ನಡೆದಿದೆ.

    ಮೃತಳನ್ನ ಹಾಸನ (Hassan) ಜಿಲ್ಲೆಯ ಬೇಲೂರು ತಾಲೂಕಿನ ದೇವಾಲಾಪುರ ಗ್ರಾಮದ ರಂಜಿತಾ (27) ಎಂದು ಗುರುತಿಸಲಾಗಿದೆ. ಮೃತ ರಂಜಿತಾ ದಾವಣಗೆರೆ ಮೂಲದ ಗೆಳತಿ ರೇಖಾ ಅವರೊಂದಿಗೆ ಶುಕ್ರವಾರ ಸಂಜೆ ಹೋಂ ಸ್ಟೇನಲ್ಲಿ ತಂಗಿದ್ದರು. ಸ್ನೇಹಿತೆಯೊಬ್ಬಳ ನಿಶ್ಚಿತಾರ್ಥಕ್ಕಾಗಿ ರಂಜಿತಾ ಮತ್ತು ರೇಖಾ ಬೆಂಗಳೂರಿನಿಂದ ಬಂದಿದ್ದರು. ಇದನ್ನೂ ಓದಿ: ಜಗಳವಾಡಿ ನಾಲ್ಕು ಮಕ್ಕಳ ತಾಯಿಯ ಹತ್ಯೆಗೈದ ಲವ್ವರ್ – ಕೆಟ್ಟು ನಿಂತಿರೋ ಆಟೋದಲ್ಲಿ ಹೆಣ ಬಿಸಾಕಿ ಎಸ್ಕೇಪ್

    ಶನಿವಾರ (ಅ.25) ಬೆಳಗ್ಗೆ ರೇಖಾ ಸ್ನಾನ ಮಾಡಿ ಬಂದ ನಂತರ ರಂಜಿತಾ ಸ್ನಾನಕ್ಕೆ ತೆರಳಿದ್ದರು. ತುಂಬಾ ಹೊತ್ತಾದರೂ ಅವರು ಹೊರ ಬಾರದಿದ್ದಾಗ ಮತ್ತು ನಲ್ಲಿಯ ನೀರು ಹರಿಯುವ ಶಬ್ದ ನಿರಂತರವಾಗಿ ಕೇಳುತ್ತಿದ್ದಾಗ ರೇಖಾ ಅವರು ಬಾಗಿಲು ಬಡಿದಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಕಿಟಕಿಯಿಂದ ನೋಡಿದಾಗ ರಂಜಿತಾ ಸ್ನಾನಗೃಹದಲ್ಲಿ ಕುಸಿದು ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಹೋಂ ಸ್ಟೇ ಸಿಬ್ಬಂದಿಗೆ ಮಾಹಿತಿ ನೀಡಿ ಬಾಗಿಲು ಒಡೆದು ನೋಡಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಂಜಿತಾರನ್ನು ಮೂಡಿಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವೈದ್ಯರು ಯುವತಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

    ರಂಜಿತಾ ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ನಾನಗೃಹದಲ್ಲಿ ಗ್ಯಾಸ್ ಗೀಸರ್ ಇದ್ದಿದ್ದರಿಂದ ಗ್ಯಾಸ್ ಸೋರಿಕೆಯಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಸ್ನಾನಗೃಹದಲ್ಲಿ ಸೂಕ್ತ ವೆಂಟಿಲೇಟರ್ ವ್ಯವಸ್ಥೆ ಇದ್ದು, ಗ್ಯಾಸ್ ಸೋರಿಕೆಯ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.‌ ಯುವತಿ ಹೃದಯಾಘಾತದಿಂದ ಸಾವನ್ನಪ್ಪಿರಬಹುದಾ? ಅಥವಾ ಬೇರೇನು ಕಾರಣ ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಗೊತ್ತಾಗಬೇಕಿದೆ. ಈ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪತ್ನಿ ಜೊತೆ ಜಗಳ; ಅವಳಿ ಮಕ್ಕಳ ಕತ್ತು ಸೀಳಿ ಹತ್ಯೆ ಮಾಡಿದ ಪಾಪಿ

  • ನೈಟ್ ಕರ್ಫ್ಯೂ – ಸರ್ಕಾರದ ವಿರುದ್ಧ ಹೋಂಸ್ಟೇ, ರೆಸಾರ್ಟ್ ಮಾಲೀಕರ ಅಸಮಾಧಾನ

    ನೈಟ್ ಕರ್ಫ್ಯೂ – ಸರ್ಕಾರದ ವಿರುದ್ಧ ಹೋಂಸ್ಟೇ, ರೆಸಾರ್ಟ್ ಮಾಲೀಕರ ಅಸಮಾಧಾನ

    ಹಾಸನ: ನೈಟ್ ಕರ್ಫ್ಯೂ ಜಾರಿಗೊಳಿಸಿರುವ ಹಿನ್ನೆಲೆ ಸರ್ಕಾರದ ವಿರುದ್ಧ ಹೋಂಸ್ಟೇ ಹಾಗೂ ರೆಸಾರ್ಟ್ ಮಾಲೀಕರು ಅಸಮಾಧಾನ ಹೊರಹಾಕಿದ್ದಾರೆ.

    ಇಂದಿನಿಂದ ನೈಟ್ ಕರ್ಫ್ಯೂ ಎಂದು ಸರ್ಕಾರ ಫೋಷಿಸಿದ ಬೆನ್ನಲ್ಲೆ ಜನರು ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಅದರಲ್ಲಿಯೂ ಈಗಷ್ಟೇ ಸ್ವಲ್ಪ ಚೇತರಿಸಿಕೊಳ್ಳುತ್ತಿರುವ ಹೋಂಸ್ಟೇ ಹಾಗೂ ರೆಸಾರ್ಟ್ ಮಾಲೀಕರು ಸರ್ಕಾರದ ಕ್ರಮಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.

    ನೈಟ್ ಕರ್ಫ್ಯೂ ಹಿನ್ನೆಲೆ ಗ್ರಾಹಕರು ಹೋಂಸ್ಟೇ ಹಾಗೂ ರೆಸಾರ್ಟ್‍ನಲ್ಲಿ ಈಗಾಗಲೇ ಬುಕ್ಕಿಂಗ್‍ಗೆ ನೀಡಿದ್ದ ಹಣವನ್ನು ವಾಪಸ್ ಕೇಳುತ್ತಿದ್ದಾರೆ. ಈ ಪರಿಣಾಮ ಅನಿವಾರ್ಯವಾಗಿ ಮಾಲೀಕರು ಹಣವನ್ನು ವಾಪಸ್ ನೀಡಬೇಕಾದ ಸ್ಥಿತಿಯಲ್ಲಿ ಇದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಭೀತಿ – ಡಿ.30ರಿಂದ ಕೇರಳದಲ್ಲಿ ನೈಟ್ ಕರ್ಫ್ಯೂ

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಲೀಕರು, ಸರ್ಕಾರ ನೈಟ್ ಕರ್ಫ್ಯೂ ತಂದಿದೆ. ಇದರಿಂದ ತುಂಬಾ ನೋವಾಗಿದೆ. ಎರಡು ವರ್ಷದಿಂದ ಬ್ಯುಸಿನೆಸ್ ಇಲ್ಲದೆ ನಲುಗಿ ಹೋಗಿದ್ದೇವೆ. ಈಗ ಚೇತರಿಕೆ ಕಾಣುತ್ತಿರುವ ಸಂದರ್ಭದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿದ್ದಾರೆ. ಈಗಾಗಲೇ ನ್ಯೂ ಇಯರ್ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಅಡ್ವಾನ್ಸ್ ತೆಗೆದುಕೊಂಡು ಬುಕ್ಕಿಂಗ್ ಮಾಡಿಕೊಂಡಿದ್ದೇವೆ. ಈಗ ಏನು ಮಾಡುವುದು ಗೊತ್ತಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಎಲ್ಲರೂ ಹಣ ವಾಪಾಸ್ ಕೇಳ್ತಿದ್ದಾರೆ. ಆ ಹಣವನ್ನು ಸೆಲೆಬ್ರೇಷನ್ ಸಿದ್ಧತೆಗೆ ಉಪಯೋಗಿಸಿಕೊಂಡಿದ್ದೇವೆ. ಲೋನ್ ಕಟ್ಟಬೇಕು, ಕೆಲಸಗಾರರಿಗೆ ಸಂಬಳ ಕೊಡಬೇಕು. ಸರ್ಕಾರದ ಮಾರ್ಗಸೂಚಿ ನಿಯಮ ಮೀರಿ ಏನೂ ಮಾಡಲು ಆಗಲ್ಲ. ಈ ಬ್ಯುಸಿನೆಸ್ ಬಿಟ್ಟು ಬೇರೆ ಮಾಡೋಣ ಅಂದರೆ, ಇದಕ್ಕೆ ಸಾಲ ಮಾಡಿ ಬಂಡವಾಳ ಹಾಕಿದ್ದೀವಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸೆರಮ್ ಸಂಸ್ಥೆಯ 2ನೇ ಲಸಿಕೆ ಕೋವೊವ್ಯಾಕ್ಸ್‌ ತುರ್ತು ಬಳಕೆಗೆ ಶಿಫಾರಸು

  • ಕೊಡಗಿನಾದ್ಯಂತ ಹೋಂಸ್ಟೇ ರೆಸಾರ್ಟ್ ಬಂದ್ ಮಾಡಿ- ಜಿಲ್ಲಾಧಿಕಾರಿ ಅದೇಶ

    ಕೊಡಗಿನಾದ್ಯಂತ ಹೋಂಸ್ಟೇ ರೆಸಾರ್ಟ್ ಬಂದ್ ಮಾಡಿ- ಜಿಲ್ಲಾಧಿಕಾರಿ ಅದೇಶ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೊಡಗಿನಾದ್ಯಂತ ಇಂದಿನಿಂದ ಹೋಂಸ್ಟೇ ರೆಸಾರ್ಟ್ ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಮಾಡಿದ್ದಾರೆ.

    ಎರಡು ಸಾವಿರಕ್ಕೂ ಹೆಚ್ಚು ಹೋಂಸ್ಟೇ ರೆಸಾರ್ಟ್‍ಗಳು ಕೊಡಗಿನಲ್ಲಿವೆ. ಲಾಕ್ ಡೌನ್ ತೆರವು ಮಾಡಿದ ಬಳಿಕ ಇತ್ತೀಚೆಗಷ್ಟೇ ಅಂದರೆ ಜೂನ್ 8ರ ಬಳಿಕ ಹೋಂಸ್ಟೇ ರೆಸಾರ್ಟ್ ತೆರೆಯಲಾಗಿತ್ತು. ಬಳಿಕ ಪ್ರವಾಸಿಗರು ಜಿಲ್ಲೆಗೆ ಮತ್ತೆ ಬರಲಾರಂಭಿಸಿದ್ದರು.

    ಜೊತೆಗೆ ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಈಚೆಗಷ್ಟೇ ಕೊಡಗಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ತೀವ್ರಗೊಳ್ಳುತ್ತಿದ್ದು, ನೂರರ ಗಡಿ ಸಮೀಪಿಸಿವೆ. ಹೀಗಾಗಿ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಹೋಂಸ್ಟೇ, ರೆಸಾರ್ಟ್‍ಗಳು ಇಂದಿನಿಂದಲೇ ಬಂದ್ ಮಾಡುವಂತೆ ಆದೇಶ ಮಾಡಿದ್ದಾರೆ.

    ಈಗಾಗಲೇ ಹೋಂಸ್ಟೇ ರೆಸಾರ್ಟಿನಲ್ಲಿ ಪ್ರವಾಸಿಗರು ಇದ್ದರೆ, ಅವರ ಬುಕಿಂಗ್ ಅವಧಿ ಮುಗಿಯುತ್ತಿದ್ದಂತೆಯೇ ವಾಪಸ್ ಕಳುಹಿಸುವಂತೆ ಸೂಚಿಸಲಾಗಿದೆ. ಅಲ್ಲದೆ ಹೊಸ ಬುಕಿಂಗ್ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ನಿಯಮ ಮುಂದಿನ ಆದೇಶದವರೆಗೆ ಅನ್ವಯ ಆಗಲಿದ್ದು, ಉಲ್ಲಂಘನೆ ಆದರೆ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.

  • ನವವಧುವಿನಂತೆ ಕಂಗೊಳಿಸ್ತಿವೆ ಹೋಂಸ್ಟೇ, ರೆಸಾರ್ಟ್‌ಗಳು

    ನವವಧುವಿನಂತೆ ಕಂಗೊಳಿಸ್ತಿವೆ ಹೋಂಸ್ಟೇ, ರೆಸಾರ್ಟ್‌ಗಳು

    – ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ ಕಾಫಿನಾಡು

    ಚಿಕ್ಕಮಗಳೂರು: ಕೊರೊನಾ ವೈರಸ್‍ನಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಈ ಮಧ್ಯೆ ಲಾಕ್‍ಡೌನ್ ಸಡಿಲಿಕೆ ಆದ ಮೇಲೆ ಕಾಫಿನಾಡಿನ ಹೋಂಸ್ಟೇಗಳು, ರೆಸಾರ್ಟ್‌ಗಳು ಮುಂಜಾಗ್ರತಾ ಕ್ರಮದೊಂದಿಗೆ ನವವಧುವಿನಂತೆ ಸಿಂಗಾರಗೊಂಡಿದ್ದು, ಪ್ರವಾಸಿಗರ ಆಗಮನದ ನಿರೀಕ್ಷೆಯಲ್ಲಿವೆ.

    ಪಶ್ಚಿಮ ಘಟ್ಟಗಳ ತಟದಲ್ಲಿರೋ ಭೂಲೋಕದ ಸ್ವರ್ಗ, ಹಚ್ಚಹಸಿರಿನ ಸೊಬಗಿನ ಜಿಲ್ಲೆಗೆ ಪ್ರವಾಸಿಗರು ಜೇನು ನೊಣಗಳಂತೆ ಮುತ್ತಿಕೊಳ್ಳುತ್ತಿದ್ದರು. ಮಳೆ, ಚಳಿ, ಬೇಸಿಗೆ ಯಾವುದೇ ಕಾಲದಲ್ಲೂ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದರು. ಇದೆಲ್ಲಕ್ಕೂ ಕೊರೊನಾ ಮಹಾಮಾರಿ ಬ್ರೇಕ್ ಹಾಕಿಬಿಟ್ಟಿತ್ತು. ಸಾಲ-ಸೋಲ ಮಾಡಿ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದ ಜನ ನಷ್ಟ ಅನುಭವಿಸುವಂತೆ ಆಗಿತ್ತು. ಇದನ್ನೇ ನಂಬಿದ್ದ ಸಾವಿರಾರು ಕುಟುಂಬಗಳು ಬೀದಿಗೆ ಬಂದಿದ್ದವು. ಸದ್ಯ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಗ್ರೀನ್‍ಸಿಗ್ನಲ್ ಸಿಕ್ಕಿದ್ದು, ಹೋಂ ಸ್ಟೇ, ರೆಸಾರ್ಟ್, ಹೋಟೆಲ್ ಆತಿಥ್ಯ ನೀಡಲು ಕಾಯುತ್ತಿವೆ ಎಂದು ಹೋಂ ಸ್ಟೇ ಮಾಲೀಕ ಇಲಿಯಾಸ್ ಹೇಳಿದ್ದಾರೆ.

    ಹೋಂ ಸ್ಟೇ, ರೆಸಾರ್ಟ್, ಹೋಟೆಲ್‍ಗಳು ಆರಂಭವಾಗಿದರೂ ಪ್ರವಾಸಿಗರು ಇನ್ನೂ ಹೊರಬರಲು ಮನಸ್ಸು ಮಾಡುತ್ತಿಲ್ಲ. ಒಂದೆಡೆ ಕೊರೊನಾ ಭಯ, ಮತ್ತೊಂದೆಡೆ 2 ತಿಂಗಳಿಂದ ಕೆಲಸ, ಕಾರ್ಯ ಇಲ್ಲದೇ ಕೈ ಬರಿದು ಮಾಡಿಕೊಂಡಿರುವ ಜನ ಪ್ರವಾಸಕ್ಕೆ ಹಿಂದೇಟು ಹಾಕಿದ್ದಾರೆ. ಈ ಮಧ್ಯೆ ಹೋಂಸ್ಟೇ, ರೆಸಾರ್ಟ್ ಮಾಲೀಕರು ಕಾಟೇಜ್‍ಗಳನ್ನು ನವವಧುವಿನಂತೆ ಸಿಂಗರಿಸಿದ್ದಾರೆ. ಸ್ಯಾನಿಟೈಸರ್, ಮಾಸ್ಕ್, ಹ್ಯಾಂಡ್ ಗ್ಲೋಸ್‍ಗಳನ್ನ ರೆಡಿ ಮಾಡಿಕೊಂಡಿದ್ದಾರೆ. ಒಂದು ರೂಮಿಗೆ ಇಬ್ಬರಿಗಷ್ಟೆ ಅವಕಾಶ. 2 ದಿನದ ಮೇಲೆ ಯಾರಿಗೂ ರೂಂ ಕೊಡಲ್ಲ. ಗುರುತಿನ ಚೀಟಿ ಕಡ್ಡಾಯ ಮಾಡಿದ್ದಾರೆ.

    ಕಾಫಿನಾಡಲ್ಲಿ ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಚಾರ್ಮಾಡಿ ಘಾಟ್ ಸೇರಿದಂತೆ ಹತ್ತಾರು ಪ್ರವಾಸಿ ತಾಣಗಳಿವೆ. ಸದ್ಯ ಮುಂಗಾರು ಮಳೆಯೂ ಆರಂಭವಾಗಿದ್ದು, ಪ್ರವಾಸಿ ತಾಣಗಳು ಕೈಬೀಸಿ ಕರೆಯುತ್ತಿವೆ.

  • ಕೊಡಗಿನಲ್ಲಿ ಮತ್ತೆ 4 ದಿನ ಭಾರೀ ಮಳೆ- ಆ.31 ರವರೆಗೆ ಪ್ರವಾಸಿಗರಿಗೆ ನಿರ್ಬಂಧ

    ಕೊಡಗಿನಲ್ಲಿ ಮತ್ತೆ 4 ದಿನ ಭಾರೀ ಮಳೆ- ಆ.31 ರವರೆಗೆ ಪ್ರವಾಸಿಗರಿಗೆ ನಿರ್ಬಂಧ

    – ಆದೇಶ ನಿರಾಕರಿಸಿದ್ರೆ ಕೇಸ್ ಹಾಕಲು ಡಿಸಿ ಸೂಚನೆ

    ಮಡಿಕೇರಿ: ಪ್ರವಾಹ ಪೀಡಿತ ಕೊಡಗಿಗೆ ಕೆಲವು ದಿನಗಳ ಕಾಲ ತಪ್ಪಿದ್ದ ವರುಣನ ಕಾಟ ಮತ್ತೆ ಶುರುವಾಗಲಿದ್ದು, ಇತ್ತ ಕರ್ನಾಟಕ ಕಾಶ್ಮೀರಕ್ಕೆ ಪ್ರವಾಸಿಗರಿಗೆ ಆಗಸ್ಟ್ 31ರವರೆಗೆ ನಿರ್ಬಂಧ ಹಾಕಲಾಗಿದೆ.

    ಕೊಡಗು, ಕರಾವಳಿಯಲ್ಲಿ ಮತ್ತೆ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ ಮುಂಜಾಗೃತ ಕ್ರಮವಾಗಿ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇತ್ತ ಮಳೆ, ಪ್ರವಾಹ ಹಿನ್ನೆಲೆಯಲ್ಲಿ ಕೊಡಗಿಗೆ ಆಗಸ್ಟ್ 31ರವರೆಗೆ ಪ್ರವಾಸಿಗರಿಗೂ ನಿರ್ಬಂಧ ವಿಧಿಸಲಾಗಿದೆ.

    ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇರುವುದರಿಂದ ಆಗಸ್ಟ್ 31ರವರೆಗೆ ಕೊಡಗು ಪ್ರವಾಸಕ್ಕೆ ಬರಬೇಡಿ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ. ಒಂದು ವೇಳೆ ಅಧಿಕಾರಗಳ ಆದೇಶವನ್ನು ನಿರಾಕರಿಸಿ ಪ್ರವಾಸಿಗರ ವಾಸ್ತವ್ಯಕ್ಕೆ ಅನುವು ಮಾಡಿಕೊಡುವ ಹೋಟೆಲ್ ರೆಸಾರ್ಟ್ ಮತ್ತು ಹೋಂಸ್ಟೇಗಳ ಮೇಲು ಕೇಸ್ ಹಾಕುವಂತೆ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

    ಕೊಡಗಿಗೆ ಹೆಚ್ಚಿನ ಪ್ರವಾಸಿಗರು ಬಂದರೆ ರಸ್ತೆ ರಿಪೇರಿ ಕಷ್ಟವಾಗುತ್ತದೆ. ಅಷ್ಟೇ ಅಲ್ಲದೇ ಕಾರ್ಯಾಚರಣೆಗೂ ತೊಂದರೆ ಆಗುತ್ತದೆ. ಆದ್ದರಿಂದ ಯಾರು ಕೊಡಗು ಪ್ರವಾಸಕ್ಕೆ ಸ್ವಲ್ಪ ದಿನ ಬರಬೇಡಿ ಅಂತ ಡಿಸಿ ಮನವಿ ಮಾಡಿದ್ದಾರೆ. ಆದರೆ ಈ ಆದೇಶಕ್ಕೆ ಕೊಡಗು ಹೋಟೆಲ್ ಮತ್ತು ರೆಸಾರ್ಟ್ ಮಾಲೀಕರ ಸಂಘ ವಿರೋಧ ವ್ಯಕ್ತಪಡಿಸಿದೆ. ಕೊಡಗಿನ ಜೀವನಾಡಿಯ ಪ್ರವಾಸೋದ್ಯಮ. ಇದನ್ನ ನಿಲ್ಲಿಸಿದರೆ ಕೊಡಗು ಹೇಗೆ ಚೇತರಿಸಿಕೊಳ್ಳುವುದು. ಆದ್ದರಿಂದ ಕೂಡಲೇ ಆದೇಶ ಹಿಂಪಡೆಯಿರಿ ಎಂದು ಸಂಘ ಡಿ.ಸಿಗೆ ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಂಗನವಾಡಿಯನ್ನೇ ಹೋಂ ಸ್ಟೇ ಮಾಡಿದ ಟೀಚರ್- ರಾತ್ರೋ ರಾತ್ರಿ ಪ್ರವಾಸಿಗರನ್ನು ಹೊರಕಳಿಸಿದ ಸ್ಥಳೀಯರು

    ಅಂಗನವಾಡಿಯನ್ನೇ ಹೋಂ ಸ್ಟೇ ಮಾಡಿದ ಟೀಚರ್- ರಾತ್ರೋ ರಾತ್ರಿ ಪ್ರವಾಸಿಗರನ್ನು ಹೊರಕಳಿಸಿದ ಸ್ಥಳೀಯರು

    ಮಡಿಕೇರಿ: ಅಂಗನವಾಡಿ ಟೀಚರೊಬ್ಬರ ವಿರುದ್ಧ ಅಂಗನವಾಡಿಯಲ್ಲಿ ಹೋಂಸ್ಟೇ ನಡೆಸುತ್ತಿರುವ ಆರೋಪವೊಂದು ಕೊಡಗು ಜಿಲ್ಲೆಯಲ್ಲಿ ಕೇಳಿಬಂದಿದೆ.

    ಮಡಿಕೇರಿ ತಾಲೂಕಿನ ಉಡೋತ್ ಮೊಟ್ಟೆ ಅಂಗನವಾಡಿ ಕೇಂದ್ರದ ಟೀಚರ್ ಪಾರ್ವತಿ ಎಂಬವರ ಮೇಲೆ ಈ ಗಂಭೀರ ಆರೋಪ ಕೇಳಿಬಂದಿದೆ. ಶನಿವಾರ ಸಂಜೆ ವೇಳೆಗೆ ಸುಮಾರು 10 ಮಂದಿ ಪ್ರವಾಸಿಗರನ್ನು ಟೀಚರ್, ಅಂಗನವಾಡಿಯಲ್ಲಿ ತಂಗಲು ಅವಕಾಶ ಕಲ್ಪಿಸಿದ್ದರು ಎನ್ನಲಾಗಿದೆ.

    ಈ ಬಗ್ಗೆ ವಿಷಯವರಿತ ಸ್ಥಳೀಯರು ರಾತ್ರಿ ವೇಳೆಯಲ್ಲಿ ಅಂಗನವಾಡಿಯೊಳಕ್ಕೆ ತೆರಳಿ ಶಿಕ್ಷಕಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪ್ರವಾಸಿಗರನ್ನು ರಾತ್ರಿಯೇ ಹೊರಗೆ ಕಳುಹಿಸಿದ್ದಾರೆ. ಈ ಹಿಂದೆಯೂ ಒಂದೆರೆಡು ಬಾರಿ ಪ್ರವಾಸಿಗರು ಅಂಗನವಾಡಿಯಲ್ಲಿ ತಂಗಿದ್ದು, ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ತನ್ನ ಮೇಲಿನ ಆರೋಪವನ್ನು ಇದೀಗ ಅಂಗನವಾಡಿ ಟೀಚರ್ ತಳ್ಳಿ ಹಾಕಿದ್ದು, ಮಕ್ಕಳು ಇದ್ದಿದ್ದರಿಂದ ಬೇರೆ ಕಡೆ ಹೋಂಸ್ಟೇ ಸಿಗದಿದ್ದರಿಂದ ಅಂಗನವಾಡಿಯಲ್ಲಿ ಉಳಿಯಲು ಅವಕಾಶ ಕಲ್ಪಿಸಲಾಗಿತ್ತು. ಆದ್ರೆ ಹೋಂಸ್ಟೇ ದಂಧೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.