Tag: homes

  • 5.21 ಲಕ್ಷ ಮನೆ ಉದ್ಘಾಟನೆ, ಬಡವರ ಸಬಲೀಕರಣಕ್ಕಾಗಿ ಬಿಜೆಪಿ ಕೆಲಸ: ಮೋದಿ

    5.21 ಲಕ್ಷ ಮನೆ ಉದ್ಘಾಟನೆ, ಬಡವರ ಸಬಲೀಕರಣಕ್ಕಾಗಿ ಬಿಜೆಪಿ ಕೆಲಸ: ಮೋದಿ

    ನವದೆಹಲಿ: ಕೇಂದ್ರದ ಬಿಜೆಪಿ ಸರ್ಕಾರವಿರಲಿ, ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿರಲಿ, ಪಕ್ಷವು ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಎಂಬ ಮಂತ್ರದೊಂದಿಗೆ ನಡೆದುಕೊಳ್ಳುತ್ತಿದೆ. ಎಲ್ಲರೂ ಬಡವರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

    ಗ್ರಹ ಪ್ರವೇಶ ಕಾರ್ಯಕ್ರಮದ ಅಡಿಯಲ್ಲಿ ಮಧ್ಯಪ್ರದೇಶದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಿಗಾಗಿ ನಿರ್ಮಾಣವಾಗಿದ್ದ 5.21 ಲಕ್ಷ ಮನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ವೀಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಉಪಸ್ಥಿತರಿದ್ದರು. ಇದನ್ನೂ ಓದಿ: ಪರವಾನಿಗೆ ಇಲ್ಲದೆ ಬಂದೂಕುಗಳನ್ನು ಹೊಂದಲು ಕೊಡವರಿಗೆ ಅವಕಾಶ- ರಾಜ್ಯಕ್ಕೆ ಸುಪ್ರೀಂ ನೋಟಿಸ್‌

    ಕೆಲವು ರಾಜಕೀಯ ಪಕ್ಷಗಳು ಬಡತನವನ್ನು ತೊಡೆದುಹಾಕಲು ಸಾಕಷ್ಟು ಘೋಷಣೆಗಳನ್ನು ಎತ್ತಿದವು. ಆದರೆ ಬಡವರ ಸಬಲೀಕರಣಕ್ಕಾಗಿ ಸಾಕಷ್ಟು ಮಾಡಲಾಗಿಲ್ಲ. ಬಡವರು ಸಬಲೀಕರಣಗೊಂಡಾಗ ಬಡತನದ ವಿರುದ್ಧ ಹೋರಾಡುವ ಧೈರ್ಯವನ್ನು ನೀಡುತ್ತದೆ ಅಂತ ನಾನು ನಂಬುತ್ತೇನೆ. ಪ್ರಾಮಾಣಿಕ ಸರ್ಕಾರದ ಪ್ರಯತ್ನಗಳು ಸಶಕ್ತ ಬಡವರ ಜೊತೆ ಸೇರಿಕೊಂಡಾಗ, ಬಡತನ ನಿರ್ಮೂಲನೆ ಆಗುತ್ತದೆ ಎಂದು ಹೇಳಿದರು.

    ಹಿಂದಿನ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಳೆದ ಸರ್ಕಾರ ನನಗಿಂತ ಹಿಂದಿನ ಸರ್ಕಾರ ತಮ್ಮ ಅಧಿಕಾರಾವಧಿಯಲ್ಲಿ ಬಡವರಿಗೆ ಕೆಲವೇ ಲಕ್ಷ ಮನೆಗಳನ್ನು ನಿರ್ಮಿಸಿದೆ. ನಮ್ಮ ಸರ್ಕಾರ ಬಡವರಿಗೆ ಸುಮಾರು 2.5 ಕೋಟಿ ಮನೆಗಳನ್ನು ನೀಡಿದೆ. ಇವುಗಳಲ್ಲಿ 2 ಕೋಟಿ ಮನೆಗಳನ್ನು ಹಳ್ಳಿಗಳಲ್ಲಿ ನಿರ್ಮಿಸಲಾಗಿದೆ. ಎರಡು ವರ್ಷಗಳು, ಕೊರೊನಾವೈರಸ್‍ನಿಂದಾಗಿ ಅಡೆತಡೆಗಳ ಹೊರತಾಗಿಯೂ, ಕೆಲಸವು ನಿಧಾನವಾಗಲಿಲ್ಲ ಎಂದರು. ಇದನ್ನೂ ಓದಿ: ಭೂಮಾಫಿಯಾಗೆ ಆರ್.ಅಶೋಕ್ ರಕ್ಷಣೆ: ಆಪ್ ಆರೋಪ

    ಅನೇಕ ಮಹಿಳೆಯರಿಗೆ ಮನೆಗಳ ಮಾಲೀಕತ್ವದ ಹಕ್ಕು ನೀಡಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಸುಮಾರು 2 ಕೋಟಿ ಮನೆಗಳ ಮಾಲೀಕತ್ವದ ಹಕ್ಕುಗಳನ್ನು ಮಹಿಳೆಯರೂ ಹೊಂದಿದ್ದಾರೆ. ಈ ಹಕ್ಕು ಮನೆಯಲ್ಲಿ ಇತರ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಬಲಪಡಿಸಿದೆ. ಇದು ಪ್ರಪಂಚದಾದ್ಯಂತದ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನದ ವಿಷಯವಾಗಿದೆ ಎಂದು ನುಡಿದರು.

  • ಕೊಡಗಿನಲ್ಲಿ ಮಳೆ ಆರ್ಭಟ- ಮನೆಗಳಿಗೆ ಹಾನಿ

    ಕೊಡಗಿನಲ್ಲಿ ಮಳೆ ಆರ್ಭಟ- ಮನೆಗಳಿಗೆ ಹಾನಿ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬಿರುಗಾಳಿಯೊಂದಿಗೆ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಗ್ರಾಮೀಣ ಭಾಗದ ಕೆಲವೆಡೆ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಅಲ್ಲದೆ ಕೆಲ ಮನೆಗಳ ಹೆಂಚುಗಳು ಹಾರಿ ಹಾಗಿವೆ.

    ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಚಿಕ್ಕಬಂಡಾರ ಗ್ರಾಮದ ವಿಜಯಲಕ್ಷ್ಮೀ ಅವರ ಮನೆಯ ಮೇಲೆ ಭಾರೀ ಗಾತ್ರದ ಮರ ಬಿದ್ದು ಹಾನಿಯಾಗಿದೆ. ಯಡೂರು ಗ್ರಾಮದ ನೇತ್ರಾವತಿ, ತಣ್ಣೀರುಹಳ್ಳ ಗ್ರಾಮದ ರಾಜೇಶ್, ಮಸಗೋಡು ಗ್ರಾಮದ ಲೀಲಾ ಅವರ ಮನೆಗಳ ಮೇಲೆ ಸಹ ಮರ ಬಿದ್ದಿದೆ. ಕರ್ಕಳ್ಳಿ ಗ್ರಾಮದ ಮ್ಯಾಥ್ಯೂ ವರ್ಗೀಸ್ ಅವರ ಮನೆ ಬದಿಯ ಬರೆ ಕುಸಿದಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ

    ಕಳೆದ 24 ಗಂಟೆಗಳ ಅವಧಿಯಲ್ಲಿ ಶಾಂತಳ್ಳಿ ಹೋಬಳಿಗೆ 76.4 ಮಿಲಿ ಮೀಟರ್ ಮಳೆಯಾಗಿದೆ. ಕೊಡ್ಲಿಪೇಟೆ 53.2, ಸೋಮವಾರಪೇಟೆ 25.4, ಸುಂಟಿಕೊಪ್ಪ 30.9, ಶನಿವಾರಸಂತೆ 19 ಹಾಗೂ ಕುಶಾಲನಗರಕ್ಕೆ 8.6 ಮಿ.ಮೀ ಮಳೆಯಾಗಿದೆ.

    ವಿರಾಜಪೇಟೆ ತಾಲೂಕಿನಲ್ಲೂ ಮಳೆ ಆರ್ಭಟ ಮುಂದುವರಿದಿದ್ದು, ವಿರಾಜಪೇಟೆ ತಾಲೂಕಿನ ಕೆದಮುಳ್ಳೂರಿನಲ್ಲಿ ಮನೆಯೊಂದು ನೆಲಸಮವಾಗಿದೆ. ತೋರ ಗ್ರಾಮದ ಪಿ.ಟಿ.ಪಾರ್ವತಿ ಅವರ ಮನೆ ನೆಲಸಮವಾಗಿದೆ. ಕಳೆದ ಒಂದು ತಿಂಗಳಿನಿಂದ ಪಾರ್ವತಿ ಅವರು ಮಗಳ ಮನೆಯಲ್ಲಿ ವಾಸವಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಸ್ಥಳಕ್ಕೆ ವಿರಾಜಪೇಟೆ ತಹಶಿಲ್ದಾರ್ ಯೋಗನಂದ್ ಅವರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಆಕಸ್ಮಿಕವಾಗಿ ನಾಡಬಾಂಬ್ ಸ್ಫೋಟ- ಮನೆಗಳಿಗೆ ಸಿಡಿದ ಕಲ್ಲುಗಳು

    ಆಕಸ್ಮಿಕವಾಗಿ ನಾಡಬಾಂಬ್ ಸ್ಫೋಟ- ಮನೆಗಳಿಗೆ ಸಿಡಿದ ಕಲ್ಲುಗಳು

    ಶಿವಮೊಗ್ಗ: ಆಕಸ್ಮಿಕವಾಗಿ ನಾಡಬಾಂಬ್ ಸ್ಫೋಟಗೊಂಡ ಪರಿಣಾಮ ಪಕ್ಕದ ಮನೆಗಳಿಗೆ ಕಲ್ಲುಗಳು ಸಿಡಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಜಿಲ್ಲೆಯ ಸಾಗರ ತಾಲೂಕಿನ ಕಣ್ಣೂರಿನಲ್ಲಿ ಘಟನೆ ನಡೆದಿದ್ದು, ಕಣ್ಣೂರು ಗ್ರಾಮದ ಸಂಗಿ ಕರಿಯಪ್ಪ ಅವರಿಗೆ ಸೇರಿದ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕರಿಯಪ್ಪ ಪುತ್ರ ರವಿ ಪ್ರಾಣಿಗಳ ಶಿಕಾರಿಗಾಗಿ ತನ್ನ ಮನೆಯ ಬಾತ್ ರೂಮಿನಲ್ಲಿ ಸ್ವತಃ ತಾನೇ ನಾಡಬಾಂಬ್ ತಯಾರಿಸಿ ಸಂಗ್ರಹಿಸಿ ಇಟ್ಟಿದ್ದ ಎನ್ನಲಾಗಿದೆ.

    ಸ್ಫೋಟದ ರಭಸಕ್ಕೆ ಮನೆಯ ಮೇಲ್ಛಾವಣಿ ಸಹ ಹಾರಿ ಹೋಗಿದ್ದು, ಮನೆಗೆ ಹಾನಿ ಉಂಟಾಗಿದೆ. ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ತಿಳಿಸಿದ್ದು, ತಕ್ಷಣವೇ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಹೆಚ್ಚು ಸಂಭವಿಸಬಹುದಾದ ಅನಾಹುತ ತಪ್ಪಿಸಿದ್ದಾರೆ. ಘಟನೆ ಕುರಿತು ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಾವೇರಿಯಲ್ಲಿ ಧಾರಾಕಾರ ಮಳೆ- 30ಕ್ಕೂ ಹೆಚ್ಚು ಗುಡಿಸಲು, ಶೆಡ್‍ಗಳಿಗೆ ಹಾನಿ

    ಹಾವೇರಿಯಲ್ಲಿ ಧಾರಾಕಾರ ಮಳೆ- 30ಕ್ಕೂ ಹೆಚ್ಚು ಗುಡಿಸಲು, ಶೆಡ್‍ಗಳಿಗೆ ಹಾನಿ

    ಹಾವೇರಿ: ಜಿಲ್ಲೆಯಲ್ಲಿ ಹಲವೆಡೆ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ರಟ್ಟೀಹಳ್ಳಿ ತಾಲೂಕಿನ ಖಂಡೇಬಾಗೂರು ಗ್ರಾಮದಲ್ಲಿ ಬಿರುಗಾಳಿ ಮಳೆಗೆ 30ಕ್ಕೂ ಅಧಿಕ ಗುಡಿಸಲು ಹಾಗೂ ತಗಡಿನ ಶೆಡ್‍ನ ಮೇಲ್ಛಾವಣಿಗಳು ಹಾರಿ ಹೋಗಿವೆ.

    ಹಿರೇಕೆರೂರು ಪಟ್ಟಣ ಮತ್ತು ಭೋಗಾವಿ ಗ್ರಾಮದಲ್ಲೂ ಅರ್ಧ ಗಂಟೆಗಳ ಕಾಲ ಧಾರಾಕಾರ ಮಳೆಯಾಗಿದೆ. 30ಕ್ಕೂ ಅಧಿಕ ಗುಡಿಸಲು ಹಾಗೂ ಶೆಡ್ಡಿನ ಮೇಲ್ಛಾವಣಿಗಳು ಹಾರಿ ಹೋಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

    ಮೇಲ್ಛಾವಣಿ ಹಾರಿ ಹೋಗಿದ್ದರಿಂದ ಉಳಿದುಕೊಳ್ಳಲು ಸೂರಿಲ್ಲದೆ ಕುಟುಂಬದ ಸದಸ್ಯರು ದಿಕ್ಕು ತೋಚದಂತೆ ಕುಳಿತಿದ್ದಾರೆ. ತಾಲೂಕು ಹಾಗೂ ಜಿಲ್ಲಾಡಳಿತ 30 ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿ, ಶಾಶ್ವತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಗ್ಯಾಸ್ ಟ್ಯಾಂಕರ್ ಪಲ್ಟಿ – 40ಕ್ಕೂ ಹೆಚ್ಚು ಮನೆಗಳನ್ನು ಖಾಲಿ ಮಾಡಿಸಿದ ಪೊಲೀಸ್ರು

    ಗ್ಯಾಸ್ ಟ್ಯಾಂಕರ್ ಪಲ್ಟಿ – 40ಕ್ಕೂ ಹೆಚ್ಚು ಮನೆಗಳನ್ನು ಖಾಲಿ ಮಾಡಿಸಿದ ಪೊಲೀಸ್ರು

    – ಒಂದು ದಿನ ಹೆದ್ದಾರಿ ಸಂಚಾರ ಬಂದ್

    ಕಾರವಾರ: ಇಂದು ಬೆಳಗ್ಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ರಾಷ್ಟ್ರೀಯ ಹೆದ್ದಾರಿಯ 66ರ ಹಂದಿಗೋಣದಲ್ಲಿ ಗ್ಯಾಸ್ ತುಂಬಿದ್ದ ಟ್ಯಾಂಕರ್ ಪಲ್ಟಿಯಾಗಿತ್ತು. ಹೀಗಾಗಿ ಸುತ್ತಮುತ್ತಲಿನ 40ಕ್ಕೂ ಹೆಚ್ಚು ಮನೆಗಳನ್ನು ಪೊಲೀಸರು ಖಾಲಿ ಮಾಡಿಸಿದ್ದಾರೆ.

    ಹುಬ್ಬಳ್ಳಿಯಿಂದ ಮಂಗಳೂರಿಗೆ ತೆರಳುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾಗಿತ್ತು, ಈ ವೇಳೆ ಟ್ಯಾಂಕರ್ ಹಿಂಭಾಗದಲ್ಲಿ ಗ್ಯಾಸ್ ಸೋರಿಕೆಯಾಗುತಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಫೋಟಗೊಳ್ಳದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಈ ವೇಳೆ ಕಾರವಾರ-ಮಂಗಳೂರು ಚತುಷ್ಪತ ಹೆದ್ದಾರಿಯನ್ನು ಬಂದ್ ಮಾಡಿದ್ದು, ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಿದ್ದರು.

    ಆದರೇ ಸಂಜೆ ವೇಳೆಗೆ ಟ್ಯಾಂಕರ್ ನಲ್ಲಿ ಸೋರಿಕೆ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಕುಮಟಾ ತಾಲೂಕಿನ ಹಂದಿಗೊಣದ ಹೆದ್ದಾರಿ ಸುತ್ತಮುತ್ತಲ ಪ್ರದೇಶದ 40 ಮನೆಗಳಲ್ಲಿನ ನಿವಾಸಿಗಳನ್ನು ಮನೆಯಿಂದ ಖಾಲಿ ಮಾಡಿಸಲಾಗಿದೆ. ಇದಲ್ಲದೇ ಹೆದ್ದಾರಿ ಸಂಚಾರವನ್ನು ಸಹ ಒಂದು ದಿನದವರೆಗೆ ಬಂದ್ ಮಾಡಲಾಗಿದೆ.

    ಕುಮಟಾದ ಬರ್ಗಿಯಲ್ಲಿ ನಡೆದಿತ್ತು ದುರಂತ
    ಕಳೆದ ಐದು ವರ್ಷದ ಹಿಂದೆ ಕುಮಟಾದ ಬರ್ಗಿ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಸ್ಫೋಟಗೊಂಡಿತ್ತು. ಈ ವೇಳೆ ಬರ್ಗಿಯ ಹೆದ್ದಾರಿ ಬಳಿ ಇದ್ದ ಮನೆಗಳು ಸಂಪೂರ್ಣ ಹೊತ್ತಿ ಉರಿದಿದ್ದು 13 ಜನ ಸಾವನ್ನಪ್ಪಿದ್ದರು. ಹೀಗಾಗಿ ಮತ್ತೆ ಇದೇ ಮಾದರಿಯಲ್ಲಿ ದುರಂತ ನಡೆಯಬಾರದು ಎಂಬ ಮುನ್ನೆಚ್ಚರಿಕೆಯಿಂದ ಕುಮಟಾ ಪೊಲೀಸರು ಹಂದಿಗೋಣ ಗ್ರಾಮದ ಹೆದ್ದಾರಿ ಬಳಿಯ ಸುತ್ತಮುತ್ತಲ ನಿವಾಸಿಗಳಿಗೆ ಬೇರೆಡೆ ತೆರಳಲು ಸೂಚಿಸಿದರು. ಸುತ್ತಮುತ್ತಲ ಜನರು ಮನೆ ಖಾಲಿ ಮಾಡಿ ಸಂಬಂಧಿಕರ ಮನೆಗೆ ತೆರಳಿದ್ದಾರೆ.

  • ಉಡುಪಿಯಲ್ಲಿ ವರ್ಷಧಾರೆ- ಪದವಿ ಪರೀಕ್ಷೆ ಮುಂದೂಡಿಕೆ, ಮಾಳ ಘಾಟ್ ಬಂದ್

    ಉಡುಪಿಯಲ್ಲಿ ವರ್ಷಧಾರೆ- ಪದವಿ ಪರೀಕ್ಷೆ ಮುಂದೂಡಿಕೆ, ಮಾಳ ಘಾಟ್ ಬಂದ್

    – ಪುತ್ತಿಗೆ ವಿದ್ಯಾಪೀಠಕ್ಕೆ ನುಗ್ಗಿದ ನೀರು, ಗೋಶಾಲೆ ಜಲಾವೃತ

    ಉಡುಪಿ: ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಎಲ್ಲಾ ಹೊಳೆಗಳು, ನದಿಗಳು ತುಂಬಿ ಹರಿಯುತ್ತಿದ್ದು, ಜನವಸತಿ ಪ್ರದೇಶಗಳಲ್ಲಿ ಜಲದಿಗ್ಬಂಧನವಾಗಿದೆ. ಹೀಗಾಗಿ ನಾಳೆ ಅಂದರೆ ಸೋಮವಾರ ನಡೆಯಬೇಕಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಇತ್ತ ಮಾಳ ಫಾಟ್ ಬಂದ್ ಆಗಿದೆ.

    ಉಡುಪಿಯಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಕಾರ್ಕಳ ತಾಲೂಕಿನ ಮಾಳಘಾಟಿಯಲ್ಲಿ ಗುಡ್ಡ ಕುಸಿತವಾಗಿದೆ. ಕಾರ್ಕಳ ಎಸ್‍ಕೆ ಬಾರ್ಡರ್ ತಿರುವಿನಲ್ಲಿ ಕುಡ್ಡ ಗುಸಿತವಾಗಿದ್ದು, ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಮರಗಳು ಉರುಳಿ ಬಿದ್ದಿದ್ದವು. ನಂತರ ಸಿಬ್ಬಂದಿ ಮರಗಳನ್ನು ಕಡಿದು ತೆರವು ಮಾಡಿದ್ದಾರೆ. ಆದರೆ ಮರಗಳನ್ನು ತೆರವುಗೊಳಿಸಿದ ಕೆಲವೇ ಹೊತ್ತಿನಲ್ಲಿ ಗುಡ್ಡ ಕುಸಿದಿದೆ. ಹೀಗಾಗಿ ಸುಗಮ ಸಂಚಾರಕ್ಕೆ ಸ್ಥಳೀಯರು ವ್ಯವಸ್ಥೆ ಮಾಡುತ್ತಿದ್ದಾರೆ. ಆದರೆ ಸುಮಾರು ಮೂರು ಗಂಟೆಯಿಂದ ಮಾಳ ಘಾಟಿ ಸಂಪೂರ್ಣ ಸ್ತಬ್ಧವಾಗಿದೆ.

    ಜಿಲ್ಲೆಯ ಹಲವು ಭಾಗಗಳು ಮುಳುಗಡೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಪದವಿ ಅಂತಿಮ ವರ್ಷದ ಪರೀಕ್ಷೆಯನ್ನು ಮುಂದೂಡಿದೆ. ನಾಳೆ ನಡೆಯಬೇಕಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಈಗಾಗಲೇ ಕೊರೊನಾ ಕಾರಣದಿಂದಾಗಿ ಪರೀಕ್ಷೆಗೆ ಆರು ತಿಂಗಳು ವಿಳಂಬವಾಗಿತ್ತು. ಇದೀಗ ಮಳೆಯಿಂದಾಗಿ ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಬರಲು ಅಡಚಣೆ ಆಗಬಹುದು ಎಂಬ ಕಾರಣದಿಂದ ಮುಂದೂಡಿಕೆ ಮಾಡಲಾಗಿದೆ.

    ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿಯಲ್ಲಿ ದೇವಸ್ಥಾನಕ್ಕೆ ನೀರು ನುಗ್ಗಿದೆ. ಗಡಿಭಾಗದಲ್ಲಿರುವ ಶಾಂಭವಿ ನದಿ ಉಕ್ಕಿ ಹರಿಯುತ್ತಿದೆ. ನದಿ ಪಾತ್ರದ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮುಂದಿನ 24 ಗಂಟೆ ವಿಪರೀತ ಮಳೆ ಬೀಳುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದೆ. ಈಗಾಗಲೇ ಜಿಲ್ಲೆಯ ಎಲ್ಲಾ ಅಗ್ನಿಶಾಮಕ ದಳ ನೆರೆ ಪೀಡಿತ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಎನ್‌ಡಿಆರ್‌ಎಫ್ ತಂಡವನ್ನು ಕರೆಸಿಕೊಳ್ಳಲಾತ್ತಿದೆ.

    ಹಿರಿಯಡ್ಕ ಸಮೀಪ ಸುವರ್ಣ ನದಿ ಉಕ್ಕಿ ಹರಿಯುತ್ತಿದ್ದು, ನದಿ ತೀರದಲ್ಲಿ ನಿರ್ಮಿಸಲಾದ ವಿದ್ಯುತ್ ಉತ್ಪಾದನಾ ಘಟಕದ ಸುತ್ತಮುತ್ತ ಭಾರೀ ಪ್ರಮಾಣದ ಮಳೆ ನೀರು ಹರಿಯುತ್ತಿದೆ. ಉಡುಪಿ ಕುಡಿಯುವ ನೀರಿನ ಯೋಜನೆ ಸ್ವರ್ಣ ನದಿಯ ಬಜೆ ಅಣೆಕಟ್ಟು ತುಂಬಿ ಹರಿಯುತ್ತಿದ್ದು, ಸುತ್ತಮುತ್ತಲ ಗದ್ದೆ ತೋಟಗಳಿಗೆ ನೀರು ನುಗ್ಗಿದೆ. ರಾತ್ರೋರಾತ್ರಿ ಸುರಿದ ಭಾರೀ ಮಳೆಗೆ ಉದ್ಯಾವರ ಗ್ರಾಮದ ಪಿತ್ರೋಡಿಯ ಕೆಲ ಪ್ರದೇಶ ಜಲಾವೃತವಾಗಿದೆ. ಗಜನೆ, ಪಟ್ನಾ ಪರಿಸರದಲ್ಲಿ ಕೃತಕ ನೆರೆ ಉಂಟಾಗಿದ್ದು, ಅಪಾಯದ ಅಂಚಿನಲ್ಲಿದ್ದ ಮನೆಯವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

    ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಈಗಾಗಲೇ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಎಲ್ಲಾ ಅಗತ್ಯ ಪೂರೈಕೆಗಳನ್ನು ಉಡುಪಿ ಜಿಲ್ಲೆಗೆ ಮಾಡುವಂತೆ ಮನವಿ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಎನ್‌ಡಿಆರ್‌ಎಫ್ ತಂಡ ಉಡುಪಿಗೆ ಹೊರಟು ಕಾರ್ಯಾಚರಣೆ ನಡೆಸುತ್ತಿದೆ. ಹೆಲ್ಪ್ ಲೈನ್ ನಂಬರ್‌ಗಳನ್ನು ಸಹ ತೆರೆಯಲಾಗಿದ್ದು, ಜಿಲ್ಲಾಡಳಿತ ಜನರ ರಕ್ಷಣೆಗೆ ಬದ್ಧವಾಗಿದೆ ಎಂದರು.

    ಹಿರಿಯಡ್ಕ ಸಮೀಪದ ಪುತ್ತಿಗೆ ವಿದ್ಯಾಪೀಠಕ್ಕೆ ನೀರು ನುಗ್ಗಿದ್ದು, ಮಠದ ಗೋಶಾಲೆ ಜಲಾವೃತವಾಗಿದೆ. ತಕ್ಷಣ ಸ್ಥಳೀಯರ ನೆರವಿನೊಂದಿಗೆ ಗೋವುಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.

  • ಮತ್ತೆ ಮುಂದುವರಿದ ವರುಣನ ಅಬ್ಬರ – ಮನೆ, ರಸ್ತೆಗಳು ಜಲಾವೃತ

    ಮತ್ತೆ ಮುಂದುವರಿದ ವರುಣನ ಅಬ್ಬರ – ಮನೆ, ರಸ್ತೆಗಳು ಜಲಾವೃತ

    – ಉಡುಪಿಯಲ್ಲಿ ಮೂರು ದಿನ ಎಲ್ಲೋ ಅಲರ್ಟ್

    ತುಮಕೂರು/ಉಡುಪಿ: ರಾಜ್ಯದ ಕೆಲವೆಡೆ ಮತ್ತೆ ವರುಣನ ಆರ್ಭಟ ಮುಂದುವರಿದಿದೆ. ಮಂಗಳವಾರ ರಾತ್ರಿ ತುಮಕೂರು ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ ಸುರಿದಿದ್ದು, ಹಲವಾರು ಮನೆಗಳು ಜಲಾವೃತಗೊಂಡಿವೆ.

    ಮಧುಗಿರಿ ತಾಲೂಕಿನ ಕಡಗತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗೇನಹಳ್ಳಿ ಗ್ರಾಮದಲ್ಲಿ ಹಲವು ಮನೆಗಳು ಜಲಾವೃತಗೊಂಡಿದೆ. ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಹಲವು ಮನೆಗಳ ಛಾವಣಿ ಹಾಗೂ ಗೋಡೆಗಳಿಗೆ ಹಾನಿಯಾಗಿದ್ದು, ಮನೆಯಲ್ಲಿನ ವಸ್ತುಗಳು ನಷ್ಟವಾಗಿದೆ.

    ನಾಗೇನಹಳ್ಳಿಯಲ್ಲಿ ನೀರು ಹರಿದು ಹೋಗುವ ಪ್ರಮುಖ ಹಳ್ಳ ಮುಚ್ಚಿರೋದು ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ. ಇತ್ತ ಕೊಡಗು ಜಿಲ್ಲೆಯಲ್ಲಿ ಮತ್ತೊಂದು ವಾರ ಮಳೆ ಆಗುವ ಸಾಧ್ಯತೆ ಇದೆ.  ಎರಡು ದಿನಗಳಿಂದ ಜಿಲ್ಲೆಯ ಅಲ್ಲಲ್ಲಿ ಮಳೆ ಸುರಿಯುತ್ತಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲೇ ಎನ್‍ಡಿಆರ್‍ಎಫ್ ತಂಡ ಬೀಡುಬಿಟ್ಟಿದೆ.

    ಚಿತ್ರದುರ್ಗ ಜಿಲ್ಲೆಯಲ್ಲೂ ಹಲವೆಡೆ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ದೊಡ್ಡಹಳ್ಳ ಭರ್ತಿಯಾಗಿದೆ. ರಾತ್ರಿ ಸುರಿದ ಮಳೆಯಿಂದಾಗಿ ರಸ್ತೆ ಮೇಲೆ ನೀರು ನಿಂತಿದ್ದು, ರಸ್ತೆ ದಾಟಲಾಗದೇ ವಾಹನ ಸವಾರರ ಪರದಾಡಿದ್ದಾರೆ. ಇನ್ನೂ ಕೆಲಕಾಲ ರಸ್ತೆದಾಟಲಾಗದೆ ಅಂಬುಲೆನ್ಸ್ ನಿಂತಿತ್ತು. ನಂತರ ಸ್ಥಳೀಯ ಯುವಕರ ಸಹಾಯದಿಂದ ಅಂಬುಲೆನ್ಸ್ ರಸ್ತೆ ದಾಟಿದೆ.

    ಕರಾವಳಿಯಲ್ಲಿ ಮಖಾ ನಕ್ಷತ್ರ ಕಡಿಮೆ ಮಳೆ ತಂದಿದ್ದು, ಹುಬ್ಬಾ ನಕ್ಷತ್ರ ಹೆಚ್ಚು ಮಳೆ ತರುವ ಸಾಧ್ಯತೆ ಇದೆ. ಹೀಗಾಗಿ ಉಡುಪಿಯಲ್ಲಿ ಮೂರು ದಿನ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜ್ಯ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ನೀಡಿದ್ದು, ಸೆಪ್ಟೆಂಬರ್ 3 ರಿಂದ 5ರವರೆಗೆ ಭಾರೀ ಮಳೆ ಬೀಳಲಿದೆ ಎಂದು ವರದಿ ಕೊಟ್ಟಿದೆ.

    ಜಿಲ್ಲೆಯಾದ್ಯಂತ 65ರಿಂದ 115 ಮಿಲಿ ಮೀಟರ್ ನಷ್ಟು ಮಳೆ ಬೀಳುವ ಸಾಧ್ಯತೆ ಇದ್ದು, ಜನರು ಎಚ್ಚರಿಕೆಯಿಂದ ಇರಬೇಕು. ನದಿಪಾತ್ರ ಮತ್ತು ಸಮುದ್ರ ಪಾತ್ರದ ಜನರು ನೀರಿಗೆ ಇಳಿಯಬಾರದು ಎಂದು ಮುನ್ನೆಚ್ಚರಿಕೆ ರವಾನಿಸಿದೆ. ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಮೀನುಗಾರರು ಕೂಡ ಎಚ್ಚರಿಕೆಯಿಂದ ಇರಬೇಕು. ಜೊತೆಗೆ ಹವಾಮಾನ ಇಲಾಖೆ ಮುಂದೆ ನೀಡುವ ಎಲ್ಲಾ ಮುನ್ಸೂಚನೆಗಳನ್ನು ತಪ್ಪದೇ ಪಾಲಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

  • ರಾಯಚೂರಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ- ಜನಜೀವನ ಅಸ್ತವ್ಯಸ್ತ

    ರಾಯಚೂರಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ- ಜನಜೀವನ ಅಸ್ತವ್ಯಸ್ತ

    ರಾಯಚೂರು: ಜಿಲ್ಲೆಯಾದ್ಯಂತ ನಿನ್ನೆಯಿಂದ ಭರ್ಜರಿ ಮಳೆಯಾಗುತ್ತಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ರಾಯಚೂರು ಜನರ ಜೀವನ ಅಸ್ತವ್ಯಸ್ತವಾಗಿದೆ.

    ಬುಧವಾರ ದಿನಪೂರ್ತಿ ಸುರಿದ ಮಳೆಗೆ ರಾಯಚೂರಿನ ರಸ್ತೆಗಳು ಹಾಳಾಗಿವೆ. ನಗರದ ಪ್ರಮುಖ ರಸ್ತೆಗಳು ಸೇರಿದಂತೆ ಎಲ್ಲ ರಸ್ತೆಗಳಲ್ಲಿ ನೀರು ನಿಂತಿವೆ. ರಸ್ತೆಗಳಲ್ಲಿಯ ಗುಂಡಿಗಳಿಂದಾಗಿ ರಸ್ತೆಗಳು ಹೊಂಡಗಳಾಗಿವೆ. ಮಳೆಯಿಂದಾಗಿ ಚರಂಡಿ ನೀರು ಸಹ ರಸ್ತೆಯ ಮೇಲೆ ಹರಿದಿವೆ. ತಗ್ಗು ಪ್ರದೇಶಗಳಲ್ಲಿ ನಿಂತಿರುವ ನೀರಿನಿಂದ ಸಾಂಕ್ರಾಮಿಕ ರೋಗ ಹರಡುವ ಸಂಭವವಿದೆ. ಕೊರೊನಾದಿಂದ ತತ್ತರಿಸುತ್ತಿರುವಾಗ ಮಳೆಯಿಂದಾಗಿ ಮತ್ತೆ ಸಾಂಕ್ರಾಮಿಕ ರೋಗದ ಭೀತಿಯಲ್ಲಿರುವ ಜನ ನಗರಸಭೆಯ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

    ರಾಯಚೂರು ನಗರದ ಮಕ್ತಲಪೇಟೆಯ ಆಂಜನಮ್ಮ ಹಾಗೂ ಯಂಕಮ್ಮ ಎಂಬುವರಿಗೆ ಸೇರಿದ ಎರಡು ಮನೆಗಳು ಕುಸಿತಗೊಂಡಿದ್ದು, ಇನ್ನೂ ಅಧಿಕ ಮನೆಗಳ ಗೋಡೆಗಳು ನೀರಿನಿಂದಾಗಿ ನೆನೆದು ಬೀಳುವ ಹಂತಕ್ಕೆ ಬಂದಿವೆ. ನಿನ್ನೆ ಬೆಳಿಗ್ಗೆಯಿಂದ ಸುರಿಯುತ್ತಿರುವ ಮಳೆ ಇಂದು ಬೆಳಿಗ್ಗೆವರೆಗೂ ನಿಂತಿಲ್ಲ. ಈಗಲೂ ರಾಯಚೂರಿನಲ್ಲಿ ಜಿಟಿಜಿಟಿ ಮಳೆ ಬರುತ್ತಿದೆ. ಇದರಿಂದ ತಗ್ಗು ಪ್ರದೇಶದ ಮನೆಗಳಲ್ಲಿ ನೀರು ನುಗ್ಗುತ್ತಿರೋದು ಆತಂಕಕ್ಕೆ ಕಾರಣವಾಗಿದೆ. ಮನೆ ಕುಸಿತದಿಂದ ಯಾರಿಗೂ ಯಾವುದೇ ಪ್ರಾಣಾಪಾಯವಾಗಿಲ್ಲ ಆದರೆ ಇಂತಹ ಆರ್ಥಿಕ ಸಂಕಷ್ಟದ ನಡುವೆ ಮನೆ ಕುಸಿತದಿಂದ ಜನರು ಕಂಗಾಲಾಗಿದ್ದಾರೆ.

    ಬುಧವಾರದಿಂದ ಸುರಿದ ಭಾರಿ ಮಳೆ ಹಿನ್ನೆಲೆ ಶಕ್ತಿನಗರದಿಂದ ಕರೇಕಲ್ ಕಾಡ್ಲೂರು, ಗುರ್ಜಾಪುರಿಗೆ ಹೋಗುವ ಮಾರ್ಗ ಕಡಿತವಾಗಿದೆ. ರೈಲ್ವೆ ಮೇಲ್ಸೆತುವೆ ಕೆಳಗೆ ಎರಡುವರೆ ಅಡಿಯವರೆಗೂ ನೀರು ನಿಂತು ವಾಹನಗಳ ಓಡಾಟಕ್ಕೆ ಅಡ್ಡಿಯಾಗಿದೆ. ರಸ್ತೆ ಸಂಪರ್ಕ ಕಡಿತವಾದರೂ ಕೆಲವರು ನೀರಲ್ಲೇ ಹೋಗುವ ಪ್ರಯತ್ನ ನಡೆಸಿದ್ದಾರೆ. ಇಂದು ಸಹ ಮೋಡಕವಿದ ವಾತಾವರಣ ಮುಂದುವರೆದಿದ್ದು, ಅಲ್ಲಲ್ಲಿ ಜಿಟಿಜಿಟಿ ಮಳೆಯಾಗುತ್ತಿದೆ. ಮಳೆ ಆರ್ಭಟ ಹೀಗೆ ಮುಂದುವರಿದರೆ ಹೊಲಗದ್ದೆಗಳಲ್ಲಿ ನೀರು ನಿಂತು ಬಿತ್ತಿದ ಬೆಳೆಗಳಿಗೆ ಹಾನಿಯಾಗುವ ಸಂಭವವಿರುವುದರಿಂದ ರೈತರು ಆತಂಕದಲ್ಲಿದ್ದಾರೆ.

  • ಗದಗನಲ್ಲಿ ಧಾರಾಕಾರ ಮಳೆ- ಹಾರಿದ ಮನೆಗಳ ಮೇಲ್ಛಾವಣಿ

    ಗದಗನಲ್ಲಿ ಧಾರಾಕಾರ ಮಳೆ- ಹಾರಿದ ಮನೆಗಳ ಮೇಲ್ಛಾವಣಿ

    – ಮರ, ವಿದ್ಯುತ್ ಕಂಬಗಳು ಧರೆಗೆ

    ಗದಗ: ಜಿಲ್ಲೆಯ ಹಲವೆಡೆ ಬುಧವಾರ ತಡರಾತ್ರಿ ಧಾರಾಕಾರವಾಗಿ ಮಳೆ ಸುರಿದಿದ್ದು, ಭಾರೀ ಅವಾಂತರವನ್ನು ಸೃಷ್ಟಿಸಿದದೆ.

    ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಗದಗ ಜಿಲ್ಲೆಯ ಹಲವಡೆ ಅನೇಕ ಆಸ್ತಿಪಾಸ್ತಿ ಹಾನಿಯಾಗಿದೆ. ವರುಣನ ಆರ್ಭಟಕ್ಕೆ ನಗರದ ಬೆಟಗೇರಿ ನೇಕಾರ ಕಾಲೋನಿಲ್ಲಿ ಬೃಹತ್ ಮರ ಮನೆಯ ಮೇಲೆ ಅಪ್ಪಳಿಸಿದ್ದು, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ತಾಲೂಕಿನ ಹರ್ಲಾಪುರ ಗ್ರಾಮದ ಅನೇಕ ಮನೆಗಳ ಮೇಲ್ಛಾವಣಿ ಹಾರಿಹೋಗಿವೆ. ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಬಿರುಗಾಳಿಗೆ ಮೇವಿನ ಬಣವಿಗಳು ನಾಶವಾಗಿವೆ. ರಾತ್ರಿಯಿಡೀ ಸುರಿದ ಮಳೆಗೆ ಭಾರೀ ಹಾನಿಯುಂಟಾಗಿದ್ದು, ಅನೇಕ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಜಿಲ್ಲೆ ಅನೇಕ ಕಡೆಗಳಲ್ಲಿ ಬಿರುಗಾಳಿ ಮಳೆಗೆ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿ ಸಂಭವಿಸಿದೆ. ಕೊರೊನಾ ನಟುವೆ ಸುರಿಯುತ್ತಿರುವ ಭಾರೀ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ.

  • ಮನೆಗಳನ್ನು ಸುಟ್ಟುಕೊಳ್ಳದಿದ್ದರೆ ಸಾಕು- ಮೋದಿ ಕರೆಗೆ ಸಂಜಯ್ ರಾವತ್ ವ್ಯಂಗ್ಯ

    ಮನೆಗಳನ್ನು ಸುಟ್ಟುಕೊಳ್ಳದಿದ್ದರೆ ಸಾಕು- ಮೋದಿ ಕರೆಗೆ ಸಂಜಯ್ ರಾವತ್ ವ್ಯಂಗ್ಯ

    ಮುಂಬೈ: ಏಪ್ರಿಲ್ 5ರಂದು ಮನೆಯಲ್ಲಿ ದೀಪ ಬೆಳಗಿಸಿ ಎಂದು ಮೋದಿ ಅವರು ಕೊಟ್ಟಿರುವ ಕರೆಗೆ ಶಿವಸೇನೆ ಸಂಸದ ಸಂಜಯ್ ರಾವತ್ ವ್ಯಂಗ್ಯವಾಡಿದ್ದಾರೆ.

    ಶುಕ್ರವಾರ ದೇಶದ ಜನರಿಗಾಗಿ ವಿಡಿಯೋ ಸಂದೇಶವನ್ನು ನೀಡಿದ್ದ ಮೋದಿ, ಏಪ್ರಿಲ್ 5ಕ್ಕೆ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಎಲ್ಲರೂ ಲೈಟ್ ಆಫ್ ಮಾಡಿ ದೀಪ ಬೆಳಗಿಸಿ ಎಂದು ಸಂದೇಶ ನೀಡಿದ್ದರು. ಈ ವಿಚಾರವಾಗಿ ಟ್ವೀಟ್ ಮಾಡಿರುವ ಸಂಜಯ್ ರಾವತ್, ದೀಪ ಬೆಳಗಿಸುವ ವೇಳೆ ಜನರು ಅವರ ಮನೆಗಳನ್ನು ಸುಟ್ಟುಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಈ ಹಿಂದೆ ಜನತಾ ಕರ್ಫ್ಯೂ ದಿನ ಮೋದಿ ಅವರು ಚಪ್ಪಾಳೆ ತಟ್ಟಲು ಜನರಿಗೆ ಹೇಳಿದ್ದರು. ಆದರೆ ಅವರು ರಸ್ತೆಗಳಲ್ಲಿ ಕಿಕ್ಕಿರಿದು ಡ್ರಮ್‍ಗಳನ್ನು ಭಾರಿಸಿದ್ದರು. ಈಗ ಅವರು ತಮ್ಮ ಸ್ವಂತ ಮನೆಗಳನ್ನು ಸುಟ್ಟುಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಸರ್ ದೀಪಗಳನ್ನು ಬೆಳಗಿಸಿ ಆದರೆ ದಯವಿಟ್ಟು ಕೊರೊನಾ ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ ಏನು ಮಾಡುತ್ತಿದೆ ಎಂದು ನಮಗೆ ತಿಳಿಸಿ ಎಂದು ಸಂಸದ ಲೇವಡಿ ಮಾಡಿ ಟ್ವೀಟ್ ಮಾಡಿದ್ದಾರೆ.

    ಕಳೆದ ತಿಂಗಳು ಪ್ರಧಾನಿ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡಿದ್ದರು. ಈ ವೇಳೆ ಜನಸಾಮಾನ್ಯರನ್ನು ತಮ್ಮ ಮನೆಯ ಬಾಲ್ಕನಿಗಳಿಗೆ ಬಂದು ಚಪ್ಪಾಳೆ ತಟ್ಟುವ ಮೂಲಕ ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಮತ್ತು ವೈದ್ಯರಿಗೆ ಗೌರವ ಸಲ್ಲಿಸಲು ಹೇಳಿದ್ದರು. ಆದರೆ ಕೆಲವು ಕಡೆ ಜನರು ರಸ್ತೆಗೆ ಇಳಿದು ದೊಡ್ಡ ಮಟ್ಟದಲ್ಲಿ ಗುಂಪು ಸೇರಿ ಚಪ್ಪಾಳೆ ಮತ್ತೆ ಪಾತ್ರೆಗಳಿಂದ ಶಬ್ದ ಮಾಡಿದ್ದರು.

    ಈಗ ಏಪ್ರಿಲ್ 3 ರಂದು ವಿಡಿಯೋ ಸಂದೇಶ ಕಳುಹಿಸಿರುವ ಮೋದಿ, ಏಪ್ರಿಲ್ 5ಕ್ಕೆ ಎಲ್ಲರೂ ಒಟ್ಟಾಗೋಣ. ಏಪ್ರಿಲ್ 5ಕ್ಕೆ ಮಹಾ ಶಕ್ತಿಯ ಜಾಗೃತಿ ಆಗಬೇಕಿದೆ. ಹೀಗಾಗಿ ರಾತ್ರಿ 9 ಗಂಟೆಗೆ ದೀಪ, ಮೇಣದ ಬತ್ತಿ, ಟಾರ್ಚ್, ಮೊಬೈಲ್ ಟಾರ್ಚ್ ಬೆಳಗಿಸಬೇಕು. ಆ ಬೆಳಕಿನಲ್ಲಿ ನಮ್ಮ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು. ನಾವು ಎಲ್ಲರೂ ಒಗ್ಗಟಾಗಿದ್ದೇವೆ ಎನ್ನುವ ಸಂಕಲ್ಪ ಮಾಡಬೇಕು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮೋದಿ ಕರೆಕೊಟ್ಟಿದ್ದಾರೆ.