Tag: Home Quarantine

  • ದಲಿತರು ಮಾಡಿದ ಅಡುಗೆ ಎಂದು ಊಟ ನಿರಾಕರಿಸಿದ ಕ್ವಾರಂಟೈನ್‍ನಲ್ಲಿದ್ದ ಯುವಕ

    ದಲಿತರು ಮಾಡಿದ ಅಡುಗೆ ಎಂದು ಊಟ ನಿರಾಕರಿಸಿದ ಕ್ವಾರಂಟೈನ್‍ನಲ್ಲಿದ್ದ ಯುವಕ

    ಡೆಹ್ರಾಡೂನ್: ಇತ್ತೀಚೆಗೆ ನಡೆದ ಘಟನೆಯೊಂದು ಜಾತಿವಾದ ಇನ್ನೂ ಅಸ್ತಿತ್ವದಲ್ಲಿ ಇದೆ ಎಂಬುದನ್ನು ಬಹಿರಂಗಗೊಳಿಸಿದೆ. ದಲಿತರು ಮಾಡಿದ ಅಡುಗೆ ಎಂದು 23 ವರ್ಷದ ಯುವಕನೊಬ್ಬ ಊಟ ಮಾಡಲು ನಿರಾಕರಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.

    ಯುವಕ ದಿನೇಶ್ ಚಂದ್ರ ಮಿಲ್ಕನಿ ಕ್ವಾರಂಟೈನಲ್ಲಿದ್ದು, ದಲಿತರು ಮಾಡುವ ಅಡುಗೆಯೆಂದು ಯಾವುದನ್ನೂ ತಿನ್ನುತ್ತಿಲ್ಲ. ಈ ಹಿನ್ನೆಲೆಯಲ್ಲಿ ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದಿನೇಶ್, ಅಳಿಯ ಹಾಗೂ ಮತ್ತೆ ಮೂವರನ್ನು ಮೇ 15ರಿಂದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇಬ್ಬರಿಗೆ ಅಡುಗೆ ಮಾಡಿ ಕೊಡುವವರನ್ನು ಭವಾನಿ ದೇವಿ ಎಂದು ಗುರುತಿಸಲಾಗಿದೆ.

    ಭವಾನಿ ದೇವಿಯವರು ದಲಿತ ಸಮುದಾಯದ ಸದಸ್ಯರಾಗಿದ್ದಾರೆ. ಸದ್ಯ ಅವರು ಕ್ವಾರಂಟೈನ್ ನಲ್ಲಿ ಇರುವ ಎಲ್ಲರಿಗೂ ಅಡುಗೆ ಮಾಡಿಕೊಡುತ್ತಿದ್ದರು. ಹಾಗೆಯೇ ಮೇ 15ರಂದು ಕೂಡ ಎಲ್ಲರಿಗೂ ಅಡುಗೆ ಮಾಡಿಕೊಟ್ಟಿದ್ದರು. ಇದನ್ನು ಎಲ್ಲರೂ ಊಟ ಮಾಡಿದರೆ, ದಿನೇಶ್ ಮಾತ್ರ ತಿನ್ನಲು ನಿರಾಕರಿಸಿದ್ದಾನೆ. ಅಲ್ಲದೆ ನನಗೆ ಮನೆಯಿಂದ ಊಟ ಬರುತ್ತದೆ ಎಂದು ಹೇಳಿದ್ದಾನೆ.

    ಈ ವಿಚಾರ ಸ್ವಲ್ಪ ತಡವಾಗಿ ದೇವಿಯವರಿಗೆ ಗೊತ್ತಾಯಿತು. ನಾನು ನೀರು ಮುಟ್ಟಿದರೆ ದಿನೇಶ್ ಅದನ್ನು ಸ್ವೀಕರಿಸಲ್ಲ ಎಂದ ಸತ್ಯ ಅವರಿಗೆ ಅರಿವಾಯಿತು. ಇತ್ತ ಗ್ರಾಮದ ಮುಖ್ಯಸ್ಥ ಮುಕೇಶ್ ಚಂದ್ರ ಬುದ್ಧ್ ಅವರಿಗೂ ದಿನೇಶ್ ನಡತೆಯ ಬಗ್ಗೆ ತಿಳಿಯಿತು.

    ನಾವು ದಿನೇಶ್ ಬಳಿ ಊಟ ಮಾಡಲು ಹೇಳಿದಾಗ ಆತ ನನಗೆ ಮನೆಯಿಂದ ಊಟ ಬರುತ್ತದೆ ಎಂದು ಹೇಳಿ ತಪ್ಪಿಸಿಕೊಂಡನು. ಕೂಡಲೇ ನಾವು ದೇವಿ ಅವರ ಕೈಯಲ್ಲಿ ನೀರು ಕೊಟ್ಟು ಕುಡಿಯಲು ಹೇಳಿದೆವು. ಆಗ ಆತ ನೀರು ಕುಡಿಯಲು ಕೂಡ ನಿರಾಕರಿಸಿದ್ದಾನೆ. ಈ ವೇಳೆ ಆತ ಜಾತಿ ತಾರತಮ್ಯ ಮಾಡುತ್ತಿದ್ದಾನೆ ಎಂದು ತಿಳಿದು ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

    ಈ ಬಗ್ಗೆ ಪ್ರತಿಕ್ರಿಯಿಸಿರುವ ದಿನೇಶ್, ನಾನು ಯಾವತ್ತೂ ಮನೆಯಲ್ಲಿ ಮಾಡುವ ಆಹಾರವಷ್ಟೇ ಸೇವಿಸುತ್ತೇನೆ. ಹೊರಗಡೆ ಆಹಾರವನ್ನು ಸೇವಿಸಲ್ಲ ಎಂದು ತನ್ನ ಮೇಲಿನ ಆರೋಪಗಳನ್ನು ಅಲ್ಲಗೆಳೆದಿದ್ದಾನೆ.

  • ‘ಕ್ವಾರಂಟೈನ್ ಆಗಲು ನಾವು ಇಲ್ಲಿ ಬರ್ಬೇಕಿತ್ತಾ’- ದಿಲ್ಲಿಯಿಂದ ಬಂದವ್ರ ಆಕ್ರೋಶ

    ‘ಕ್ವಾರಂಟೈನ್ ಆಗಲು ನಾವು ಇಲ್ಲಿ ಬರ್ಬೇಕಿತ್ತಾ’- ದಿಲ್ಲಿಯಿಂದ ಬಂದವ್ರ ಆಕ್ರೋಶ

    ಬೆಂಗಳೂರು: ದೆಹಲಿಯಿಂದ ಇಂದು ಸುಮಾರು 1 ಸಾವಿರ ಮಂದಿ ಬೆಂಗಳೂರಿಗೆ ರೈಲಿನಲ್ಲಿ ಆಗಮಿಸಿದ್ದಾರೆ. ಇದೀಗ ಅವರನ್ನು ಕ್ವಾರಂಟೈನ್ ಮಾಡಲು ಸಿದ್ಧತೆ ನಡೆಸಲಾಗುತ್ತಿದ್ದು, ಪ್ರಯಾಣಿಕರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

    ನಮಗೆ ಕ್ವಾರಂಟೈನ್ ಮಾಡುವ ವಿಚಾರವೇ ಗೊತ್ತಿರಲಿಲ್ಲ. ಕ್ವಾರಂಟೈನ್ ಆಗಲು ನಾವು ಇಲ್ಲಿ ಬರಬೇಕಿತ್ತಾ ಇಂದು ಕಿಡಿಕಾರಿದ್ದಾರೆ.

    ದೆಹಲಿಯಿಂದ ಬಂದ ಟ್ರೈನ್‍ನಲ್ಲಿ ಕುಡಿಯೋಕೆ ನೀರಿಲ್ಲ. ಟಾಯ್ಲೆಟ್ ನಲ್ಲಿ ಕೂಡ ನೀರು ಇರಲಿಲ್ಲ. ಇದೀಗ ಕ್ವಾರೆಂಟೈನ್ ಅಂತಾ ಓಡಾಡ್ತಿದ್ದಾರೆ. ದೆಹಲಿಯಿಂದ ಇಲ್ಲಿಗೆ ಬರುವ ತನಕ ಹಿಂಸೆಯಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಊಟ, ತಿಂಡಿ ಕೊಡಲೇಬೇಡಿ. ಕ್ವಾರೆಂಟೈನ್ ಮಾಡ್ತಾರೆ ಅಂತ ಗೊತ್ತೇ ಇರಲಿಲ್ಲ. ನಾವು ಬಡವರು, 1,800-2,000 ರೂ. ಹೋಟೆಲ್ ಗೆ ಹೇಳುತ್ತಿದ್ದಾರೆ. ನಾವು ಎಲ್ಲಿಂದ ಹಣ ತರುವುದು ದೆಹಲಿಯಿಂದ ಬಂದ ಮಹಿಳಾ ಪ್ರಯಾಣಿಕರೊಬ್ಬರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಇಂದು ಬೆಳಗ್ಗೆ ಸುಮಾರು 6.40ಕ್ಕೆ ಬೆಂಗಳೂರು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಆಗಮಿಸಿದೆ. ಕೇಂದ್ರ ಸರ್ಕಾರ ದೇಶಾದ್ಯಂತ 30 ವಿಶೇಷ ರೈಲು ಸಂಚಾರ ಆರಂಭಿಸಲು ಅವಕಾಶ ಮಾಡಿಕೊಟ್ಟಿತ್ತು. ಹೀಗಾಗಿ ಮಂಗಳವಾರ ರಾತ್ರಿ ದೆಹಲಿಯಿಂದ ಬೆಂಗಳೂರಿಗೆ ವಿಶೇಷ ರೈಲು ಹೊರಟಿತ್ತು. ರೈಲಿನಲ್ಲಿ ಸುಮಾರು 1,000 ಪ್ರಯಾಣಿಕರು ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.

    ರೈಲು ಫ್ಲಾಟ್ ಫಾರಂ 1ಕ್ಕೆ ಬಂದಿದ್ದು, ಒಂದು ಬೋಗಿಯ ನಂತರ ಇನ್ನೊಂದು ಬೋಗಿಯಲ್ಲಿದ್ದ ಪ್ರಯಾಣಿಕರು ಇಳಿಯುವಂತೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಎಲ್ಲಾ ಪ್ರಯಾಣಿಕರಿಗೆ ವೈದ್ಯರು ಥರ್ಮಲ್ ಸ್ಕ್ರೀನಿಂಗ್ ಮಾಡಿದ್ದಾರೆ. ನಂತರ 11 ಬಿಎಂಟಿಸಿ ಬಸ್ಸುಗಳ ಮೂಲಕ ನಿಗದಿತ ಹೋಟೆಲ್‍ಗಳಿಗೆ ಕ್ವಾರಂಟೈನ್‍ಗೆ ಪೊಲೀಸರು ಕರೆದುಕೊಂಡು ಹೋಗಲಿದ್ದಾರೆ.

    ಪ್ರತಿ ಬಸ್ಸಿನಲ್ಲಿ 25 ಮಂದಿ ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಲ್ಲದೆ ಪ್ರತಿಯೊಬ್ಬ ಪ್ರಯಾಣಿಕರಿಗೂ 50 ರೂ. ಚಾರ್ಜ್ ನಿಗದಿಪಡಿಸಲಾಗಿದೆ. ಕ್ವಾರಂಟೈನ್ ಕರೆದುಕೊಂಡು ಹೋಗುವ ಬಸ್ ಚಾಲಕರಿಗೆ ಗ್ಲೌಸ್, ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಒಟ್ಟಿನಲ್ಲಿ ದೆಹಲಿಯಿಂದ ಬಂದ ಎಲ್ಲಾ ಪ್ರಯಾಣಿಕರು 14 ದಿನದವರೆಗೂ ಖಾಸಗಿ ಹೋಟೆಲ್‍ನಲ್ಲೇ ವಾಸ್ತವ್ಯ ಇರಬೇಕಾಗುತ್ತದೆ.

  • ಮಾತೃಭಾಷೆ ಕಲಿಯುವಲ್ಲಿ ಮಿಲ್ಕಿ ಬ್ಯೂಟಿ ಫುಲ್ ಬ್ಯುಸಿ

    ಮಾತೃಭಾಷೆ ಕಲಿಯುವಲ್ಲಿ ಮಿಲ್ಕಿ ಬ್ಯೂಟಿ ಫುಲ್ ಬ್ಯುಸಿ

    ಹೈದರಾಬಾದ್: ಲಾಕ್‍ಡೌನ್ ಅವಧಿಯಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಸಖತ್ ಬ್ಯುಸಿಯಾಗಿದ್ದು, ತಮಗಿಷ್ಟದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಹೋಮ್ ಕ್ವಾರಂಟೈನ್ ವಿಧಿಸಿಕೊಂಡಿದ್ದಾರೆ. ವಿವಿಧ ಚಟುವಟಿಕೆಗಳಲ್ಲಿ ತೊಡಗಿರುವ ತಮನ್ನಾ ಕುಟುಂಬದೊಂದಿಗೂ ಕಾಲ ಕಳೆಯುತ್ತಿದ್ದಾರೆ. ಈ ನಡುವೆ ಮಹತ್ವದ ಕೆಲಸವೊಂದನ್ನು ಮಾಡುತ್ತಿದ್ದಾರೆ.

    ಬಹುಭಾಷಾ ನಟಿ ತಮನ್ನಾ ಭಾಟಿಯಾ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ಮನೆಯಲ್ಲಿ ಇರುವುದೇ ಕಡಿಮೆಯಾಗಿತ್ತು. ಆದರೆ ಕೊರೊನಾ ವೈರಸ್‍ನಿಂದಾಗಿ ಇದೀಗ ಸ್ವಯಂ ದಿಗ್ಬಂಧನ ವಿಧಿಸಿಕೊಂಡಿದ್ದು, ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇದರೊಂದಿಗೆ ಮಹತ್ವದ ಕೆಲಸವೊಂದನ್ನು ಮಾಡುತ್ತಿದ್ದು, ತಮ್ಮ ಮಾತೃಭಾಷೆ ಕಲಿಯಲು ಮುಂದಾಗಿದ್ದಾರೆ.

    ತಮನ್ನಾ ಮಾತೃಭಾಷೆ ಸಿಂಧಿ, ಆದರೆ ಅವರಿಗೆ ಈ ಭಾಷೆ ಅಷ್ಟೇನು ಬರುವುದಿಲ್ಲ. ಹೀಗಾಗಿ ಲಾಕ್‍ಡೌನ್ ಸಮಯದಲ್ಲಿ ಸಿಂಧಿ ಭಾಷೆ ಕಲಿಯುವ ಪಣ ತೊಟ್ಟಿದ್ದಾರೆ. ಇದಕ್ಕಾಗಿಯೇ ಹೆಚ್ಚು ಸಮಯ ಕಳೆಯುತ್ತಿದ್ದಾರಂತೆ. ಈ ಹಿಂದೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕ ಬಡ ಜನರಿಗೆ ಆಹಾರ ಪದಾರ್ಥ ವಿತರಿಸಿದ್ದರು. ಲಾಕ್‍ಡೌನ್ ಅವಧಿಯಲ್ಲಿ ಮುಂಬೈನ ಸ್ಲಂ ನಿವಾಸಿಗಳಿಗೆ ಟನ್‍ನಷ್ಟು ಆಹಾರ ಒದಿಗಿಸಿದ್ದರು. ಈ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಇದೀಗ ತಮ್ಮ ಮಾತೃಭಾಷೆ ಕಲಿಯಲು ಒಲವು ತೋರಿದ್ದಾರೆ. ಇದಕ್ಕಾಗಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದು, ಹೆಚ್ಚು ಸಮಯ ಇದಕ್ಕೇ ಕಳಿಯುತ್ತಿದ್ದಾರೆ.

    ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ತಮನ್ನಾ ಸಹ ಒಬ್ಬರು. ತಮಿಳು, ತೆಲುಗಿನಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ. ಅಲ್ಲದೆ ಬಾಲಿವುಡ್ ಸಿನಿಮಾಗಳಲ್ಲಿಯೂ ನಟಿಸುವ ಮೂಲಕ ತಮ್ಮ ಸಾಮಥ್ರ್ಯವನ್ನು ತೋರಿಸಿದ್ದಾರೆ. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುತ್ತಿದ್ದ ತಮನ್ನಾ ಇತರೆ ಚಟುವಟಿಕೆಗಳನ್ನು ಮಾಡಲು ಸಮಯವಿರುತ್ತಿರಲಿಲ್ಲ. ಇದೀಗ ತಮಗಿಷ್ಟದ ಕೆಲಸದಲ್ಲಿ ತೊಡಗಿದ್ದು, ಇದರ ಭಾಗವಾಗಿ ಸಿಂಧಿ ಭಾಷೆ ಕಲಿಯುತ್ತಿದ್ದಾರಂತೆ.

    ಕನ್ನಡದಲ್ಲಿಯೂ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ತಮನ್ನಾ ಜಾಗ್ವಾರ್ ಹಾಗೂ ಕೆಜಿಎಫ್ ಚಿತ್ರಗಳಲ್ಲಿ ವಿಶೇಷ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಕನ್ನಡದಲ್ಲಿಯೂ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ.

  • ಲಾಕ್‍ಡೌನ್ ಎಫೆಕ್ಟ್- ಶ್ರೀಮನ್ನಾರಾಯಣನ ಹೊಸ ಅವತಾರ

    ಲಾಕ್‍ಡೌನ್ ಎಫೆಕ್ಟ್- ಶ್ರೀಮನ್ನಾರಾಯಣನ ಹೊಸ ಅವತಾರ

    ಬೆಂಗಳೂರು: ಲಾಕ್‍ಡೌನ್ ಹಿನ್ನೆಲೆ ಸಿನಿಮಾ ರಂಗ ಸಂಪೂರ್ಣ ಸ್ತಬ್ಧವಾಗಿದ್ದು, ನಟ, ನಟಿಯರು ಸಹ ತಮ್ಮದೇ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಹಲವರು ಬೇಜಾರಲ್ಲಿ ಸಮಯ ಕಳೆದರೆ, ಇನ್ನೂ ಹಲವರು ತಮ್ಮ ಮುಂದಿನ ಪ್ರಾಜೆಕ್ಟ್‍ಗೆ ಸಿದ್ಧತೆ ನಡೆಸಿದ್ದಾರೆ, ಇನ್ನೂ ಹಲವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದಾರೆ. ಹೀಗೆ ಎಲ್ಲ ತಾರೆಯರು ತಮ್ಮದೇ ಲೋಕದಲ್ಲಿ ಬ್ಯುಸಿಯಾಗಿದ್ದಾರೆ. ನಟ ರಕ್ಷಿತ್ ಶೆಟ್ಟಿ ಸಹ ತಮ್ಮದೇ ಕಾರ್ಯದಲ್ಲಿ ತೊಡಗಿದ್ದು, ತಮ್ಮ ಹೊಸ ಅವತಾರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    ಈ ಹಿಂದೆ ತಮ್ಮ ಎರಡ್ಮೂರು ಸಿನಿಮಾಗಳ ಕಾರ್ಯದಲ್ಲಿ ತೊಡಗಿರುವ ಕುರಿತು ಮಾಹಿತಿ ನೀಡಿದ್ದ ರಕ್ಷಿತ್ ಶೆಟ್ಟಿ, ಇದೀಗ ತಮ್ಮ ಸ್ಥಿತಿ ಕುರಿತು ಫೋಟೋ ಹಾಕಿದ್ದಾರೆ. ರಕ್ಷಿತ್ ಶೆಟ್ಟಿ ತಾವೇ ನಿರ್ದೇಶಿಸುತ್ತಿರುವ ಪುಣ್ಯಕೋಟಿ ಚಿತ್ರದ ಕಥೆ ಬರೆಯುವುದರಲ್ಲಿ ಬ್ಯುಸಿಯಾಗಿದ್ದು, ಇತ್ತೀಚೆಗೆ ಕಾಡಿಗೆ ಸಹ ಹೋಗಿದ್ದರು. ಇದೀಗ ಹೋಮ್ ಕ್ವಾರಂಟೈನ್‍ನಲ್ಲಿದ್ದು, ಇದರ ನಡುವೆಯೇ ಸಿನಿಮಾ ಕಾರ್ಯಗಳನ್ನು ಮಾಡುತ್ತಿದ್ದಾರೆ.

    ರಕ್ಷಿತ್ ಶೆಟ್ಟಿ ತಮ್ಮ ಮೂವರು ರೂಮ್ ಮೇಟ್ಸ್ ಜೊತೆಗೆ ಬೆಂಗಳೂರಿನ ಮನೆಯಲ್ಲಿ ಬ್ಯಾಚ್ಯುಲರ್ ಲೈಫ್ ಕಳೆಯುತ್ತಿದ್ದಾರೆ. ಈ ಮಧ್ಯೆ ಹತ್ತು ಹಲವು ಕೆಲಸಗಳಲ್ಲಿ ತೊಡಗಿದ್ದಾರೆ. ಕಥೆಗಳನ್ನು ಬರೆಯುವುದು, ಜೊತೆಗೆ ಚಾರ್ಲಿ ಸಿನಿಮಾದ ಕೆಲಸಗಳನ್ನು ಸಹ ಮಾಡುವುದು, ಪುಸ್ತಕ ಓದುವುದು, ಕಥೆ ಬರೆಯುವುದು ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿರುವುದಾಗಿ ಈ ಹಿಂದೆ ಲೈವ್‍ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದರು.

    ಚಾರ್ಲಿ ಚಿತ್ರೀಕರಣವನ್ನು ಸದ್ಯಕ್ಕೆ ನಿಲ್ಲಿಸಿದ್ದು, ಯಾವಾಗ ಪ್ರಾರಂಭವಾಗುತ್ತದೆ ತಿಳಿದಿಲ್ಲ. ವಾತಾವರಣ ಸರಿಯಾಗಿದೆ ಎಂದು ಸರ್ಕಾರ ಹೇಳುವವರೆಗೆ ಚಿತ್ರೀಕರಣ ಪ್ರಾರಂಭಿಸುವುದಿಲ್ಲ. ಎಲ್ಲರೂ ಅವರ ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಿದ್ದೇವೆ. ಕಿರಣ್ ರಾಜ್ ಅವರು ಚಾರ್ಲಿ ಸಿನಿಮಾದ ಫಸ್ಟ್ ಹಾಫ್‍ನ್ನು ಎಡಿಟ್ ಮಾಡಿ, ಬ್ಯಾಗ್ರೌಂಡ್ ಸ್ಕೋರ್ ಮಾಡುತ್ತಿದ್ದಾರೆ. ಡಬ್ಬಿಂಗ್ ಸಹ ಅರ್ಧ ಆಗಿದ್ದು, ಇನ್ನೂ ಅರ್ಧ ಬಾಕಿ ಇದೆ. ಇದೀಗ ಡಬ್ಬಿಂಗ್ ಮಾಡುವ ಹಾಗಿಲ್ಲ ಹೀಗಾಗಿ ಚಾರ್ಲಿ ಸಿನಿಮಾದ ಬ್ಯಾಗ್ರೌಂಡ್ ಸ್ಕೋರ್ ಕೆಲಸವನ್ನು ಮುಂದುವರಿಸಿದ್ದಾರೆ ಎಂದು ತಿಳಿಸಿದ್ದರು.

    ಹೇಮಂತ್ ರಾವ್ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾಗೆ ಕಥೆ ಬರೆಯುತ್ತಿದ್ದಾರೆ. ಇದೊಂದು ರೊಮ್ಯಾಂಟಿಕ್ ಸಿನಿಮಾ ಆಗಿದ್ದು, ಒಳ್ಳೆಯ ಚಿತ್ರ ಆಗಲಿದೆ ಎಂದು ಭರವಸೆ ನೀಡಿದ್ದಾರೆ. ಚಾರ್ಲಿ, ನಂತರ ಪುಣ್ಯಕೋಟಿ ಮಾಡುವ ಕುರಿತು ಯೋಚನೆ ಇದೆ. ಈ ಸಿನಿಮಾಗಳ ಕುರಿತು ಪ್ಲಾನ್ ಮಾಡಿಕೊಂಡಿದ್ದೇನೆ ಎಂದು ತಿಳಿಸಿದ್ದರು. ಅಲ್ಲದೆ ಪುಣ್ಯಕೋಟಿ ಕಥೆಗೆ ಪೂರಕವಾಗುವಂಥ ಪುಸ್ತಕಗಳನ್ನು ಓದುತ್ತಿರುವುದಾಗಿ ತಿಳಿಸಿದ್ದರು.

    ಇದೀಗ ಇದ್ದಕ್ಕಿದ್ದಂತೆ ಗಡ್ಡಬಿಟ್ಟಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಈ ಮೂಲಕ ಅಭಿಮಾನಿಗಳಿಗೆ ಅಚ್ಚರಿಯನ್ನುಂಟು ಮಾಡಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಹೇರ್ ಕಟಿಂಗ್ ಸಲೂನ್ ತೆರೆದಿಲ್ಲ. ಅಲ್ಲದೆ ಸಿನಿಮಾಗಳ ಸಿದ್ಧತೆಯಲ್ಲಿ ಬ್ಯುಸಿಯಾಗಿರುವ ರಕ್ಷಿತ್ ಶೆಟ್ಟಿ ಗಡ್ಡಕ್ಕೆ ಕತ್ತರಿ ಹಾಕಿಲ್ಲ. ಇದೇ ಚಿತ್ರಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್‍ಗೆ ಹ್ಯಾಶ್ ಟ್ಯಾಗ್‍ನೊಂದಿಗೆ ಲಾಕ್‍ಡೌನ್ ಎಫೆಕ್ಟ್ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಕಮೆಂಟ್ ಮಾಡಿ, ಇದು ನಿಮ್ಮ ಮುಂದಿನ ಚಿತ್ರದ ಓಪನಿಂಗ್ ಸೀನ್ ಲುಕ್ ಅನ್ಸುತ್ತೆ ಎಂದು ಕಮೆಂಟ್ ಮಾಡಿದ್ದಾರೆ.

     

    View this post on Instagram

     

    #lockdowneffect

    A post shared by Rakshit Shetty (@rakshitshetty) on

  • ಹೊರ ರಾಜ್ಯದಿಂದ ಬೆಂಗ್ಳೂರಿಗೆ ಬರುವವರಿಗೆ 14 ದಿನ ಹೋಂ ಕ್ವಾರಂಟೈನ್ ಫಿಕ್ಸ್

    ಹೊರ ರಾಜ್ಯದಿಂದ ಬೆಂಗ್ಳೂರಿಗೆ ಬರುವವರಿಗೆ 14 ದಿನ ಹೋಂ ಕ್ವಾರಂಟೈನ್ ಫಿಕ್ಸ್

    ಬೆಂಗಳೂರು: ಹೊರರಾಜ್ಯಗಳಿಂದ ಬೆಂಗಳೂರಿಗೆ ಸಾಕಷ್ಟು ಮಂದಿ ಬರುತ್ತಿರುವ ಹಿನ್ನೆಲೆ ಅವರಿಂದ ನಗರದಲ್ಲಿ ಕೊರೊನಾ ಸೋಂಕು ಹರಡಬಾರದು ಎಂದು ಬೆಂಗಳೂರು ಜಿಲ್ಲಾಡಳಿತ ಹೊಸ ಪ್ಲಾನ್ ಮಾಡಿದೆ.

    ಹೊರ ರಾಜ್ಯದಿಂದ ಸಿಲಿಕಾನ್ ಸಿಟಿಗೆ ಬರುವವರಿಗೆ ಕಡ್ಡಾಯವಾಗಿ ಕೈಗೆ ಸ್ಟಾಂಪಿಂಗ್ ಮಾಡಲಾಗುತ್ತದೆ. ಅವರು 14 ದಿನ ಕಡ್ಡಾಯವಾಗಿ ಹೋಂ ಕ್ವಾರಂಟೈನ್ ಇರಲೇಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ.

    ಹೊರ ರಾಜ್ಯದವರಿಂದ ನಗರದಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಬಾರದು ಎಂಬ ಕಾರಣಕ್ಕೆ ಅತ್ತಿಬೆಲೆ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ಬೇರೆ ರಾಜ್ಯದಿಂದ ಬಂದವರ ಕೈಗೆ ಸ್ಟಾಂಪಿಂಗ್ ಹಾಕಿ, ಥರ್ಮಲ್ ಸ್ಕ್ಯಾನಿಂಗ್ ಮಾಡಿ, 14 ದಿನ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು ಎಂದು ಸೂಚಿಸಲಾಗುತ್ತದೆ. ಬೈಕು, ಕಾರು ಯಾವುದೇ ಖಾಸಗಿ ವಾಹನದಲ್ಲೂ ಬಂದರೂ ಸೀಲ್ ಫಿಕ್ಸ್, ಕ್ವಾರಂಟೈನ್ ಕಡ್ಡಾಯ ಎಂದು ಬೆಂಗಳೂರು ಜಿಲ್ಲಾಡಳಿತ ಮಾಹಿತಿ ನೀಡಿದೆ.

    ಷರತ್ತು ಪಾಲಿಸಿ: ಲಾಕ್‍ಡೌನ್ ಘೋಷಣೆಗೂ ಮುನ್ನ ನೆರೆ ರಾಜ್ಯಕ್ಕೆ ಹೋಗಿರುವ ಕನ್ನಡಿಗರು ಪಾಸ್ ಪಡೆಯುವ ಮೂಲಕ ಮರಳಿ ಕರ್ನಾಟಕಕ್ಕೆ ಬರಬಹುದಾಗಿದೆ. ರಾಜ್ಯಕ್ಕೆ ಬರುವ ಕನ್ನಡಿಗರು ಸೇವಾ ಸಿಂಧು ವೆಬ್‍ಸೈಟ್‍ಗೆ ತೆರಳಿ ವಿವರಗಳನ್ನು ನೀಡಬೇಕಾಗುತ್ತದೆ. ಈ ಎಲ್ಲ ವಿವರಗಳು ಸರಿಯಾಗಿದ್ದರೆ ಇ ಪಾಸ್ ಡೌನ್‍ಲೋಡ್ ಮಾಡಬಹುದು.

    ಇ ಪಾಸ್ ಸಿಕ್ಕಿದ ದಿನದಿಂದ ಒಂದು ವಾರದ ವರೆಗೆ ಮಾತ್ರ ಈ ಪಾಸ್ ಉರ್ಜಿತದಲ್ಲಿರುತ್ತದೆ. ಸ್ವಂತ ವಾಹನ, ಬಾಡಿಗೆ ವಾಹನ ಅಥವಾ ಬಸ್ ಇವುಗಳ ಮೂಲಕ ಬರಬಹುದು. ವಾಹನದಲ್ಲಿ ಬರಬೇಕಾದರೆ ಸಾಮಾಜಿಕ ಅಂತರ ಕಾಪಾಡಿಕೊಂಡು ಕುಳಿತುಕೊಳ್ಳಬೇಕು. ಒಂದು ಕಾರಿನಲ್ಲಿ ಗರಿಷ್ಟ 3 ಮಂದಿ, ಎಸ್‍ಯುವಿ ವಾಹನದಲ್ಲಿ 5, ವ್ಯಾನ್ ನಲ್ಲಿ 10 ಮಂದಿ, ಬಸ್ ನಲ್ಲಿ ಗರಿಷ್ಟ 25 ಮಂದಿ ಪ್ರಯಾಣಿಸಬಹುದು. ಯಾವ ಚೆಕ್ ಪೋಸ್ಟ್ ಮೂಲಕ ಅನುಮತಿ ನೀಡಲಾಗಿದೆಯೋ ಆ ಚೆಕ್ ಪೋಸ್ಟ್ ಮೂಲಕ ಮಾತ್ರ ಪ್ರವೇಶ ನೀಡಲಾಗುತ್ತದೆ.

    ವೆಬ್‍ಸೈಟಿಗ್ ಭೇಟಿ ನೀಡಲು ಕ್ಲಿಕ್ ಮಾಡಿ: www.sevasindhu.karnataka.gov.in/

  • ಕ್ವಾರಂಟೈನ್ ಉಲ್ಲಂಘಿಸಿ ಮನೆಯಿಂದ ಹೊರ ಬಂದವರ ಮೇಲೆ ಎಫ್‍ಐಆರ್

    ಕ್ವಾರಂಟೈನ್ ಉಲ್ಲಂಘಿಸಿ ಮನೆಯಿಂದ ಹೊರ ಬಂದವರ ಮೇಲೆ ಎಫ್‍ಐಆರ್

    ಕಲಬುರಗಿ: ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಮನೆಯಿಂದ ಹೊರ ಬಂದ 8 ಜನರ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಎನ್ ಸತೀಶ್ ಕುಮಾರ್ ಆದೇಶಿಸಿದ್ದಾರೆ.

    ಕಲಬುರಗಿ ನಗರ, ಆರ್.ಜೆ.ನಗರ ಠಾಣೆ ವ್ಯಾಪ್ತಿಯಲ್ಲಿ ತಲಾ ಮೂವರು, ಎಂಬಿ ನಗರ ಮತ್ತು ರೋಜಾ ಠಾಣೆ ವ್ಯಾಪ್ತಿಯಲ್ಲಿ ತಲಾ ಒಬ್ಬರು ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಾರೆ. ಇವರೆಲ್ಲರಿಗೆ ಹೋಮ್ ಕ್ವಾರಂಟೈನ್ ವಿಧಿಸಲಾಗಿತ್ತು. 14 ದಿನ ಪೂರ್ಣಗೊಂಡ ನಂತ್ರ ವೈದ್ಯರ ಸಲಹೆ ಪಡೆದು ಮನೆಯಿಂದ ಹೊರ ಬರುವಂತೆ ಅಧಿಕಾರಿಗಳು ಸೂಚಿಸಿದ್ದರು. ಆದ್ರೆ ಕ್ವಾರಂಟೈನ್ ಅವಧಿ ಮುಗಿಯುವ ಮೊದಲೇ ಮನೆಯಿಂದ ಹೊರ ಬಂದಿದ್ದರು.

    ಸದ್ಯ ಎಲ್ಲರ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಕ್ವಾರಂಟೈನ್ ಅವಧಿ ಮುಗಿದ ಬಳಿಕ ಪೊಲೀಸರು ಕ್ರಮಕೈಗೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಮತ್ತು ನಗರ ಪೊಲೀಸ್ ಆಯುಕ್ತಾಲಯದ ಆದೇಶವನ್ನ ಉಲ್ಲಂಘಿಸಿದ್ದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

  • ಮದ್ವೆಯ ಮೊದಲ ರಾತ್ರಿಯೇ ವರ ಹೋಂ ಕ್ವಾರಂಟೈನ್

    ಮದ್ವೆಯ ಮೊದಲ ರಾತ್ರಿಯೇ ವರ ಹೋಂ ಕ್ವಾರಂಟೈನ್

    – ಮನೆ ಬಳಿ ಕಾದು ಕುಳಿತಿದ್ದ ಆಶಾ ಕಾರ್ಯಕರ್ತೆಯರು

    ಉಡುಪಿ: ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ನವ ವಿವಾಹಿತ ಜೋಡಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಹನಿಮೂನ್ ಕನಸು ಹೊತ್ತಿದ್ದ ಮದುಮಗ ನಾಲ್ಕು ಗೋಡೆಯ ನಡುವೆ ಲಾಕ್ ಆಗಿರುವ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ನಡೆದಿದೆ.

    ಕಾರ್ಕಳದ ಬೋಳ ಗ್ರಾಮದ ನವ ವಿವಾಹಿತ ಮತ್ತು ಮದುವೆಯಲ್ಲಿ ಭಾಗವಹಿಸಿದ್ದ 26ಮಂದಿಗೆ  ಹೋಂ ಕ್ವಾರಂಟೈನ್‍ಗೆ ಹಾಕಲಾಗಿದೆ. ಉಡುಪಿ ಜಿಲ್ಲಾ ಗಡಿ ಸಂಪೂರ್ಣ ಬಂದ್ ಮಾಡಿದೆ. ಆದರೂ ಒಳದಾರಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಜನರು ಉಡುಪಿಯ ಕಾರ್ಕಳ ತಾಲೂಕಿಗೆ ಬರುತ್ತಿದ್ದಾರೆ.

    ಉಡುಪಿಯಿಂದ ದಕ್ಷಿಣ ಕನ್ನಡಕ್ಕೆ ಹೋಗಿ ಬಂದವರನ್ನು ಕ್ವಾರಂಟೈನ್ ಮಾಡಿರುವ ಆರೋಗ್ಯ ಇಲಾಖೆ, ಕಾರ್ಕಳಕ್ಕೆ ಆಗಮಿಸಿದ ಹೊರ ಜಿಲ್ಲೆಯ ಜನರಿಗೂ ಕ್ವಾರಂಟೈನ್ ಮಾಡಿದ್ದಾರೆ. ಮಂಗಳೂರನಲ್ಲಿ ಖಾಸಗಿ ಉದ್ಯೋಗಿಯಾಗಿರುವ ಮದುಮಗ, ಕಾಪು ತಾಲೂಕು ಕುತ್ಯಾರಿನಲ್ಲಿ ಮದುವೆಯಾಗಿದ್ದರು. ಮದುವೆ ಮುಗಿಸಿ ಸಂಜೆ ಮನೆಗೆ ಬಂದ ವಿವಾಹಿತನಿಗೆ ಕ್ವಾರಂಟೈನ್ ಸೀಲ್ ಹಾಕಿ 28 ದಿನಗಳ ಗೃಹಬಂಧನಕ್ಕೆ ಒಳಪಡಿಸಲಾಗಿದೆ.

    ಮದುವೆಯ ಮೊದಲ ರಾತ್ರಿಯೇ ಹೋಮ್ ಕ್ವಾರಂಟೈನ್ ಹಾಕಿದ್ದು, ನವಜೋಡಿಗೆ ನಿರಾಶೆಯಾಗಿದೆ. ಮನೆ ಬಳಿ ಕಾದುಕುಳಿತಿದ್ದ ಆಶಾ ಕಾರ್ಯಕರ್ತೆಯರು ಕ್ವಾರಂಟೈನ್ ಮಾಡಲು ಸಿದ್ಧರಾಗಿದ್ದು, ಮದುವೆ ಮನೆಯವರ ಆತಂಕಕ್ಕೆ ಕಾರಣವಾಗಿತ್ತು.

    ಈ ನಡುವೆ ಬೆಂಗಳೂರು, ಮಂಗಳೂರು, ದಾವಣಗೆರೆ, ಬಂಟ್ವಾಳದಿಂದ ಬಂದಿದ್ದ ಒಟ್ಟು 20 ಜನಕ್ಕೆ ಗೃಹ ದಿಗ್ಬಂಧನ ವಿಧಿಸಲಾಗಿದೆ. ಕಾರ್ಕಳದ ಪರಿಸರದ ಜನರಿಂದ ಮಾಹಿತಿ ಪಡೆದ ಆಶಾ ಕಾರ್ಯಕರ್ತೆಯರು ಅಜೆಕಾರ್ ನಲ್ಲಿ ಮಂಗಳೂರಿಗೆ ಮದುವೆಗೆ ಹೋಗಿದ್ದ 8 ಮಂದಿಗೆ ಕ್ವಾರಂಟೈನ್ ವಿಧಿಸಲಾಗಿದೆ.

  • ಬಿಹಾರಿ ಕಾರ್ಮಿಕನ ಡೇಂಜರ್ ಟ್ರಾವೆಲ್ ಹಿಸ್ಟರಿ-ಅರ್ಧ ಬೆಂಗಳೂರು ಸುತ್ತಾಟ

    ಬಿಹಾರಿ ಕಾರ್ಮಿಕನ ಡೇಂಜರ್ ಟ್ರಾವೆಲ್ ಹಿಸ್ಟರಿ-ಅರ್ಧ ಬೆಂಗಳೂರು ಸುತ್ತಾಟ

    -ಕೆ.ಆರ್.ಪುರಂ ಮಹಿಳೆಗೆ ಕೊರೊನಾ

    ಬೆಂಗಳೂರು: ನಂಜನಗೂಡು ನೌಕರನ ಮಾದರಿ ಬೆಂಗಳೂರಿಗೂ ಹೊಂಗಸಂದ್ರದ ಸೋಂಕಿತ ಕೂಲಿ ಕಾರ್ಮಿಕನಿಂದ ಕಂಟಕ ಎದುರಾಗಿದೆ. ಕೂಲಿ ಕಾರ್ಮಿಕನಿಂದ ಇಂದೂ ಐವರಿಗೆ ಸೋಂಕು ಹರಡಿರುವುದು ಧೃಡಪಟ್ಟಿದ್ದು, ಈವರೆಗೂ ಈತನೊಬ್ಬನಿಂದಲೇ ಬೆಂಗಳೂರಿನ 14 ಮಂದಿಗೆ ಕೊರೊನಾ ತಗುಲಿದೆ.

    ಬಿಹಾರ ಮೂಲದ ಕೂಲಿ ಕಾರ್ಮಿಕನ ಟ್ರಾವೆಲ್ ಹಿಸ್ಟರಿ ಬಯಲಾಗುತ್ತಿದ್ದಂತೆ ಅರ್ಧ ಬೆಂಗಳೂರಿಗೆ ಈತ ಸೋಂಕು ಹಂಚಿರುವ ಸಾಧ್ಯತೆ ದಟ್ಟವಾಗಿದೆ. ಬೆಂಗಳೂರಿನ ಯಾವೆಲ್ಲಾ ಜಾಗಗಳಿಗೆ ಸೋಂಕಿತ ಹೋಗಿದ್ದ, ಯಾರೊಂದಿಗೆಲ್ಲಾ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

    ಅರ್ಧ ಬೆಂಗಳೂರು ಸುತ್ತಾಟ: ರೋಗಿ ನಂಬರ್ 419, ಬಿಹಾರ ಮೂಲದ ಕಾರ್ಮಿಕ ಮೊದಲಿಗೆ ನಾಲ್ಕು ಆಸ್ಪತ್ರೆಗಳಿಗೆ ಹೋಗಿದ್ದನು ಎಂದು ಹೇಳಲಾಗಿತ್ತು. ಆದ್ರೆ ಕಾರ್ಮಿಕ ಕಲಾಸಿಪಾಳ್ಯ, ಕಾಟನ್‍ಪೇಟೆ, ಕೆ.ಆರ್ ಮಾರ್ಕೆಟ್‍ನಲ್ಲೂ ಓಡಾಟ ನಡೆಸಿದ್ದಾನೆ. ತನ್ನ ಬಿಹಾರದ ಸ್ನೇಹಿತರ ಜೊತೆ ಅರ್ಧ ಬೆಂಗಳೂರು ಸುತ್ತಾಡಿದ್ದಾನೆ. ಹಣ್ಣು ಮತ್ತು ತರಕಾರಿಗಾಗಿ ಸಿಂಗಸಂದ್ರಕ್ಕೂ ಹೋಗಿ ಬಂದಿದ್ದಾನೆ. ಸ್ನೇಹಿತರು ಉಳಿದುಕೊಂಡಿದ್ದ ಮೆಜೆಸ್ಟಿಕ್ ಬಳಿಯ ಹಿಂದೂಸ್ತಾನ್ ಲಾಡ್ಜ್ ಗೂ ಭೇಟಿ ನೀಡಿದ್ದಾನೆ. ಲಾಡ್ಜ್ ನಲ್ಲಿದ್ದ ಸ್ನೇಹಿತರಿಗೂ ಪಾದರಾಯನಪುರಕ್ಕೂ ಲಿಂಕ್ ಇರುವ ಸಾಧ್ಯತೆಗಳಿವೆ.

    ಕೆ.ಆರ್.ಪುರಂ ಮಹಿಳೆಗೆ ಕೊರೊನಾ: ಸೇಫ್‍ಝೋನ್‍ನಲ್ಲಿದ್ದ ಬೆಂಗಳೂರಿನ ಏರಿಯಾಗಳಿಗೂ ಕೊರೊನಾ ವ್ಯಾಪಿಸಿದ್ದು, ಕೆ.ಆರ್.ಪುರಂ ಕ್ಷೇತ್ರದ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿದೆ. ಫೆಬ್ರವರಿ 20ರಂದೇ ಕೇರಳದಿಂದ ಮಹದೇವಪುರಕ್ಕೆ ಬಂದಿದ್ದ ಮಹಿಳೆಯಲ್ಲಿ ಮೂರ್ನಾಲ್ಕು ದಿನಗಳ ಹಿಂದೆ ಜ್ವರ, ಶೀತ, ತಲೆನೋವು ಕಾಣಿಸಿಕೊಂಡಿತ್ತು. 3 ದಿನಗಳ ಹಿಂದೆ ಸಿ.ವಿ. ರಾಮನ್ ನಗರದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯಲ್ಲಿ ಕೊರೊನಾ ಸೋಂಕಿದೆ ಎಂದು ಆರೋಗ್ಯ ಇಲಾಖೆ ಈಗ ಖಚಿತ ಪಡಿಸಿದೆ.

    ಮಹಿಳೆಯ ಮಗಳು-ಅಳಿಯ ಸೇರಿದಂತೆ ಕುಟುಂಬದ 6 ಮಂದಿ, ಆಕೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಒಟ್ಟು 20 ಮಂದಿಗೆ ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತ ಮಹಿಳೆ ವಾಸವಿದ್ದ ಅಪಾರ್ಟ್ ಮೆಂಟ್‍ನ 15 ಫ್ಲ್ಯಾಟ್‍ಗಳಲ್ಲಿ ನೆಲೆಸಿರುವವರಿಗೂ ಆತಂಕ ಎದುರಾಗಿದೆ.

  • ಹೋಂ ಕ್ವಾರಂಟೈನ್‍ಗೆ ರಾಜ್ಯದ ಐವರು ಮಾಧ್ಯಮ ಪ್ರತಿನಿಧಿಗಳು

    ಹೋಂ ಕ್ವಾರಂಟೈನ್‍ಗೆ ರಾಜ್ಯದ ಐವರು ಮಾಧ್ಯಮ ಪ್ರತಿನಿಧಿಗಳು

    ಹುಬ್ಬಳ್ಳಿ: ಐವರು ಮಾಧ್ಯಮ ಪ್ರತಿನಿಧಿಗಳು ಮುಂಜಾಗ್ರತಾ ಕ್ರಮವಾಗಿ ಸ್ವಯಂ ಪ್ರೇರಣೆಯಿಂದ ಹುಬ್ಬಳ್ಳಿಯಲ್ಲಿ ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.

    ನಗರದ ವಿವಿಧ ಮಾಧ್ಯಮ ಸಂಸ್ಥೆಗಳಿಗೆ ಸೇರಿದ ಐವರು ಮಾಧ್ಯಮ ಪ್ರತಿನಿಧಿಗಳು ತಮ್ಮಲ್ಲಿ ಕೊರೊನಾದ ಯಾವುದೇ ಲಕ್ಷಣಗಳಿಲ್ಲದಿದ್ದರೂ ಮುಂಜಾಗ್ರತಾ ಕ್ರಮವಾಗಿ ಸ್ವಯಂ ಪ್ರೇರಣೆಯಿಂದ ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ಇವರು ಏಪ್ರಿಲ್ 9ರಂದು ಶಬ್ ಎ ಬರಾತ್ ಆಚರಣೆಯ ಕುರಿತು ವರದಿಗಾರಿಕೆಗಾಗಿ ಹುಬ್ಬಳ್ಳಿಯ ತೊರವಿಹಕ್ಕಲದ ಖಬರಸ್ತಾನಕ್ಕೆ ತೆರಳಿದ್ದರು.

    ಈ ಸ್ಮಶಾನದ ಕಾವಲುಗಾರನಿಗೆ (ಪಿ- 363) ಕೊರೊನಾ ಸೋಂಕು ಇರುವುದು ಏಪ್ರಿಲ್ 18 ರಂದು ದೃಢಪಟ್ಟತ್ತು. ಈ ಹಿನ್ನೆಲೆಯಲ್ಲಿ ಈ ಎಲ್ಲ ಐವರು ಪ್ರತಿನಿಧಿಗಳನ್ನು ದ್ವಿತೀಯ ಹಂತದ ಸಂಪರ್ಕಿತರು ಎಂದು ಪರಿಗಣಿಸಲಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಹೋಂ ಕ್ವಾರಂಟೈನ್‍ಗೆ ಒಳಪಟ್ಟಿದ್ದಾರೆ. ಈ ಐದೂ ಜನ ಮಾಧ್ಯಮ ಪ್ರತಿನಿಧಿಗಳ ಆರೋಗ್ಯ ಸ್ಥಿರವಾಗಿದೆ.

  • ಹಾವೇರಿಗೆ ಬಂದಿದ್ದ ವಿಜಯಪುರದ ಕೊರೊನಾ ಸೋಂಕಿತರು

    ಹಾವೇರಿಗೆ ಬಂದಿದ್ದ ವಿಜಯಪುರದ ಕೊರೊನಾ ಸೋಂಕಿತರು

    – 21 ಜನಕ್ಕೆ ಹೋಮ್ ಕ್ವಾರಂಟೈನ್

    ಹಾವೇರಿ: ವಿಜಯಪುರ ಜಿಲ್ಲೆಯ ಕೊರೊನಾ ಸೋಂಕಿತರಿಬ್ಬರು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರಿಗೆ ಬಂದು ಹೋಗಿದ್ದಾರೆ ಎಂಬ ವಿಷಯ ಬಹಿರಂಗವಾಗಿದ್ದು, ಗ್ರಾಮದ 21 ಜನರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಹೋಮ್ ಕ್ವಾರಂಟೈನ್‍ನಲ್ಲಿಡಲಾಗಿದೆ.

    ವಿಜಯಪುರ ಜಿಲ್ಲೆಯ ರೋಗಿ ನಂಬರ್ 306 ಮತ್ತು 308 ಟ್ರಾವೆಲ್ ಹಿಸ್ಟರಿ ಪರಿಶೀಲಿಸಲಾಗಿದ್ದು, ಈ ವೇಳೆ ಆಡೂರಿಗೆ ಭೇಟಿ ನೀಡಿರುವುದು ಬಹಿರಂಗವಾಗಿದೆ. ಏಪ್ರಿಲ್ 5 ರಂದು ಆಡೂರಿನ ತಮ್ಮ ಸಂಬಂಧಿಕರ ಮನೆಗೆ ಬಂದು ಊಟ ಮಾಡಿ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸೋಂಕಿತರ ಟ್ರಾವೆಲ್ ಹಿಸ್ಟರಿ ಆಧಾರದ ಮೇಲೆ 21 ಜನರನ್ನು ಜಿಲ್ಲಾಸ್ಪತ್ರೆಗೆ ಕರೆತಂದು ತಪಾಸಣೆಗೆ ಒಳಪಡಿಸಲಾಗಿದೆ.

    ಈ 21 ಜನರಲ್ಲಿ ಯಾರಲ್ಲೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ. ಆದರೆ ಮುಂಜಾಗ್ರತಾ ಕ್ರಮವಾಗಿ ಇವರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅಲ್ಲದೆ ಇವರ ರಕ್ತ ಮತ್ತು ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷಿಸಲು ಲ್ಯಾಬ್‍ಗೆ ಕಳುಹಿಸಿದೆ. ಪರೀಕ್ಷೆ ನಂತರ 21 ಜನರನ್ನು ಆರೋಗ್ಯ ಇಲಾಖೆ ಕ್ವಾರಂಟೈನ್ ಮಾಡಿದೆ. ಲ್ಯಾಬ್ ವರದಿ ಸೋಮವಾರ ಸಂಜೆ ಅಥವಾ ಮಂಗಳವಾರ ಆರೋಗ್ಯ ಇಲಾಖೆಯ ಕೈ ಸೇರಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ ಮಾಹಿತಿ ನೀಡಿದ್ದಾರೆ.