Tag: Home Quarantine

  • ಕ್ವಾರಂಟೈನ್‌ ನಿಯಮ ಬ್ರೇಕ್‌ – 1.51ಲಕ್ಷ ಬೆಂಗಳೂರಿಗರಿಗೆ ಎಚ್ಚರಿಕೆ

    ಕ್ವಾರಂಟೈನ್‌ ನಿಯಮ ಬ್ರೇಕ್‌ – 1.51ಲಕ್ಷ ಬೆಂಗಳೂರಿಗರಿಗೆ ಎಚ್ಚರಿಕೆ

    ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಕೊರೊನಾ ರಾಕೆಟ್‌ ವೇಗದಲ್ಲಿ ಏರಿಕೆಯಾಗುತ್ತಿದ್ದು, ಇದಕ್ಕೆ ಕ್ವಾರಂಟೈನ್‌ಗಳು ಒಂದು ರೀತಿಯಲ್ಲಿ ಕಾರಣರಾಗಿದ್ದಾರೆ. ಇಲ್ಲಿಯವರೆಗೆ ಬರೋಬ್ಬರಿ 1.51 ಲಕ್ಷ ಮಂದಿ ಕ್ವಾರಂಟೈನ್‌ ನಿಯಮಗಳನ್ನು ಉಲ್ಲಂಘಿಸಿದ್ದಾರೆ.

    ಹೌದು. ಕೋವಿಡ್‌ 19 ಸೋಂಕಿತರ ಪ್ರಥಮ ಸಂಪರ್ಕ ಮತ್ತು ದ್ವಿತೀಯ ಸಂಪರ್ಕಿತರು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಆದರೆ ಕರ್ನಾಟಕದಲ್ಲಿ 2.25 ಲಕ್ಷ ಮಂದಿ ಈ ನಿಯಮವನ್ನು ಉಲ್ಲಂಘಿಸಿ ಸುತ್ತಾಟ ಮಾಡಿದ್ದಾರೆ.

    ಈ ಪೈಕಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅತಿ ಹೆಚ್ಚು 1.51 ಲಕ್ಷ ಮಂದಿ ಸುತ್ತಾಟ ಮಾಡಿದ್ದಾರೆ. ನಿಯಮ ಉಲ್ಲಂಘಿಸಿದವರಿಗೆ ಸರ್ಕಾರ ಎಚ್ಚರಿಕೆ ನೀಡಿದೆ. ಈಗಾಗಲೇ 1,645 ಮಂದಿಯ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಹೋಮ್‌ ಕ್ವಾರಂಟೈನ್‌ ಉಲ್ಲಂಘಿಸಿದ 2,205 ಮಂದಿಯನ್ನ ಸಾಂಸ್ಥಿಕ ಕ್ವಾರಂಟೈನ್‌ ಒಳಪಡಿಸಲಾಗಿದೆ.

    ಕ್ವಾರಂಟೈನಿಗಳ ಕೈಗೆ ಸೀಲ್, ಮನೆಗೆ ಭಿತ್ತಿಪತ್ರ ಅಂಟಿಸಲಾಗುತ್ತದೆ. ಅವರ ಚಟುವಟಿಕೆ, ಚಲನವಲನಗಳ ಮೇಲೆ ಅಕ್ಕಪಕ್ಕದವರು ನಿಗಾ ಇಡಬೇಕು. ಅವರು ಮನೆಯಿಂದ ಹೊರಬಂದರೆ ಪೊಲೀಸರಿಗೆ ಮಾಹಿತಿ ಕೊಡಬೇಕು. ಆಗ ಮಾತ್ರ ಕೊರೊನಾ ಹಬ್ಬುವುದನ್ನು ತಪ್ಪಿಸಬಹುದು.

    ಹೋಮ್‌ ಕ್ವಾರಂಟೈನ್‌ ನಿಯಮವನ್ನು ಪದೇ ಪದೇ ಉಲ್ಲಂಘಿಸಿ ಸ್ಥಳೀಯರು ದೂರು ನೀಡಿದರೆ ಸ್ಥಳಕ್ಕೆ ಪೊಲೀಸರು ಬಂದು ವ್ಯಕ್ತಿಯನ್ನು ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಾರೆ.

    ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದ್ದಕ್ಕೆ ಬೆಳಗಾವಿಯಲ್ಲಿ 124, ಕಲಬುರಗಿಯಲ್ಲಿ 106 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

  • ರಾಯಚೂರು: ಹೊರ ಜಿಲ್ಲೆಯಿಂದ ಬಂದವರಿಗೆ 14 ದಿನ ಕಡ್ಡಾಯ ಹೋಂ ಕ್ವಾರಂಟೈನ್

    ರಾಯಚೂರು: ಹೊರ ಜಿಲ್ಲೆಯಿಂದ ಬಂದವರಿಗೆ 14 ದಿನ ಕಡ್ಡಾಯ ಹೋಂ ಕ್ವಾರಂಟೈನ್

    -ಬೆಂಗಳೂರಿನಿಂದ ಬರುವವರಿಂದ ಹೆಚ್ಚಿದ ಆತಂಕ

    ರಾಯಚೂರು: ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಗುಳೆ ಹೋದವರು ಸ್ವಗ್ರಾಮಕ್ಕೆ ವಾಪಾಸ್ ಆಗಮಿಸುತ್ತಿದ್ದು, ಇಂತಹವರಿಗೆ ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.

    ಕೊರೊನಾ ಭೀತಿಯಿಂದ ಬೆಂಗಳೂರಿನಿಂದ ಬಂದವರಿಗೆ ಹೋಂ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲೂ ಬೆಂಗಳೂರಿನಿಂದ ವಾಪಸ್ ಆಗುವವರಿಗೆ ಹೋಂ ಕ್ವಾರಂಟೈನ್ ಸೂಚಿಸಲಾಗಿದೆ. ಗ್ರಾಮ ಪಂಚಾಯಿತಿಗಳ ಮೂಲಕ 14 ದಿನಗಳ ಹೋಂ ಕ್ವಾರಂಟೈನ್ ಬಗ್ಗೆ ಪ್ರತಿ ಗ್ರಾಮಗಳಲ್ಲಿ ಮೈಕ್ ಮೂಲಕ ಪ್ರಚಾರ ಮಾಡಿ ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗುತ್ತಿದೆ.

    ಬೆಂಗಳೂರಿನಿಂದ ಬಂದವರ ಜೊತೆ ಸಂಪರ್ಕ ಬೇಡ, ಅಂತರ ಕಾಯ್ದುಕೊಳ್ಳಿ ಎಂದು ಗ್ರಾಮ ಪಂಚಾಯತಿ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ. ಹೋಂ ಕ್ವಾರಂಟೈನ್ ಅವಧಿ ಮುಗಿಯುವವರೆಗೆ ಮನೆಯಿಂದ ಹೊರ ಬರದಂತೆ ಸೂಚನೆ ನೀಡಲಾಗಿದೆ. ಮತ್ತೊಂದೆಡೆ ಕೊರೊನಾ ಭೀತಿಯಿಂದ ಭಯದಲ್ಲಿರುವ ಗ್ರಾಮೀಣ ಭಾಗದ ಜನರು ಬೆಂಗಳೂರಿನಿಂದ ಬಂದವರಿಂದ ನಮಗೆ ಭಯ ಇದೆ ಎನ್ನುತ್ತಿದ್ದಾರೆ. ಗುಳೆ ಕೂಲಿ ಕಾರ್ಮಿಕರು ಸ್ವಗ್ರಾಮದಲ್ಲಿ ಇರಬೇಕಾದರೆ ಹೋಂ ಕ್ವಾರಂಟೈನ್ ನಿಯಮ ಪಾಲಿಸಬೇಕು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.

    ಜಿಲ್ಲೆಗೆ ಇಷ್ಟು ದಿನ ಮಹಾರಾಷ್ಟ್ರದ ನಂಟು ಕಂಟಕವಾಗಿತ್ತು. ಈಗ ಬೆಂಗಳೂರು, ಕಲಬುರ್ಗಿ ಸೇರಿದಂತೆ ಹೊರ ಜಿಲ್ಲೆಗಳಿಂದ ಬರುವವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಬೇರೆ ಜಿಲ್ಲೆಯಿಂದ ಬರುವವರ ಮೇಲೆ ಜಿಲ್ಲಾಡಳಿತ ನಿಗಾವಹಿಸಿದೆ. ಪ್ರತಿ ಗ್ರಾಮದಲ್ಲೂ ಹೊರ ಜಿಲ್ಲೆಯಿಂದ ಬಂದಿರುವವರ ಮಾಹಿತಿ ಕಲೆ ಹಾಕಲಾಗುತ್ತಿದೆ. ಬೆಂಗಳೂರಿನಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಕೂಲಿ ಕಾರ್ಮಿಕರು, ಬೇರೆ ಬೇರೆ ಉದ್ಯೋಗಿಗಳು ಕೆಲಸ ತೊರೆದು ಜಿಲ್ಲೆಗೆ ಮರಳುತ್ತಿದ್ದಾರೆ. ಹೀಗಾಗಿ ಹೊರ ಜಿಲ್ಲೆ ಹಾಗೂ ಹೊರರಾಜ್ಯದಿಂದ ಬಂದವರಿಗೆಲ್ಲರಿಗೂ ಕ್ವಾರಂಟೈನ್ ಮಾಡಲಾಗುತ್ತಿದೆ.

  • ಮಾಗಡಿ ಜೆಡಿಎಸ್ ಶಾಸಕ ಎ.ಮಂಜುನಾಥ್‍ಗೂ ಕೊರೊನಾ ಭೀತಿ

    ಮಾಗಡಿ ಜೆಡಿಎಸ್ ಶಾಸಕ ಎ.ಮಂಜುನಾಥ್‍ಗೂ ಕೊರೊನಾ ಭೀತಿ

    – ಹೋಂ ಕ್ವಾರಂಟೈನ್ ಆದ ಶಾಸಕ

    ರಾಮನಗರ: ಮಾಗಡಿ ಜೆಡಿಎಸ್ ಶಾಸಕ ಎ.ಮಂಜುನಾಥ್‍ಗೂ ಕೊರೊನಾ ಭೀತಿ ಶುರುವಾಗಿದೆ.

    ಶಾಸಕ ಎ.ಮಂಜುನಾಥ್ ಅವರ ಆಪ್ತ ಕಾರ್ಯದರ್ಶಿ ಹಾಗೂ ಮತ್ತೋರ್ವ ಸ್ನೇಹಿತ ಒಕ್ಕಲಿಗರ ಸಂಘದ ನಿರ್ದೇಶಕರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸೋಂಕು ಪಾಸಿಟಿವ್ ಬಂದಿರುವ ಇಬ್ಬರು ಕೂಡ ಶಾಸಕರ ಜೊತೆಗಿದ್ದವರು, ಈ ಹಿನ್ನೆಲೆಯಲ್ಲಿ ಎ.ಮಂಜುನಾಥ್ ಅವರು ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.

    ಶಾಸಕರ ಆಪ್ತ ಕಾರ್ಯದರ್ಶಿಗೆ ಬೆಂಗಳೂರಿನ ರಾಜರಾಜೇಶ್ವರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಈ ಬಗ್ಗೆ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿಕೊಳ್ಳುವ ಮೂಲಕ ತಾನು ಹೋಂ ಕ್ವಾರಂಟೈನ್ ಆಗಿರುವ ಬಗ್ಗೆ ತಿಳಿಸಿದ್ದಾರೆ. ಜೊತೆಗೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ನಾಳೆ ಶಾಸಕರ ಪರೀಕ್ಷಾ ವರದಿ ಬರುವ ಸಾಧ್ಯತೆಯಿದೆ. ಜೊತೆಗೆ ನಾನು ಕ್ವಾರಂಟೈನ್ ಆಗುತ್ತಿದ್ದು, ಜನರು ನನ್ನನ್ನು ದೂರವಾಣಿ ಮೂಲಕ ಸಂಪರ್ಕ ಮಾಡಬಹುದು ಎಂದು ಹೇಳಿದ್ದಾರೆ.

  • ಹೋಂ ಕ್ವಾರಂಟೈನ್‍ಲ್ಲಿದ್ರೂ ಕರ್ತವ್ಯ ನಿಭಾಯಿಸಿದ ಸಚಿವ ಸುಧಾಕರ್

    ಹೋಂ ಕ್ವಾರಂಟೈನ್‍ಲ್ಲಿದ್ರೂ ಕರ್ತವ್ಯ ನಿಭಾಯಿಸಿದ ಸಚಿವ ಸುಧಾಕರ್

    ಬೆಂಗಳೂರು: ಹೋಂ ಕ್ವಾರಂಟೈನ್‍ಲ್ಲಿದ್ದರೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು ಕೊರೊನಾ ನಿಯಂತ್ರಣ ಸಂಬಂಧ ಕರ್ತವ್ಯ ಮಾಡುತ್ತಿದ್ದಾರೆ.

    ಸುಧಾಕರ್ ಅವರ ತಂದೆ, ಪತ್ನಿ ಹಾಗೂ ಮಗಳಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಜೊತೆಗೆ ಅವರ ಮನೆಕೆಲಸದವರಿಗೂ ಸೋಂಕು ಇರುವುದು ಖಚಿತವಾಗಿತ್ತು. ಇವರೆಲ್ಲರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿ ಇದ್ದ ಸುಧಾಕರ್ ಅವರು ಸದ್ಯ ಹೋಂ ಕ್ವಾರಂಟೈನ್‍ನಲ್ಲಿ ಇದ್ದಾರೆ.

    ಹೋಂ ಕ್ವಾರಂಟೈನ್ ಅದರೂ ತನ್ನ ಕೊರೊನಾ ವಿರುದ್ಧದ ಹೋರಾಟ ನಿಲ್ಲಿಸದ ಸುಧಾಕರ್, ಸಾಮಾಜಿಕ ಜಾಲತಾಣವನ್ನು ಉಪಯೋಗಿಸಿಕೊಂಡು ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಗೃಹ ಕ್ವಾರಂಟೈನ್‍ನಲ್ಲಿರುವ ನಾನು ಇಂದು ಮನೆಯಿಂದಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ಪಾಲ್ಗೊಂಡಿದ್ದೆ. ಅನೇಕ ಮಹತ್ವಪೂರ್ಣ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿಸಿದ್ದಾರೆ.

    ಜೊತೆಗೆ ಹಿರಿಯ ಅಧಿಕಾರಿಗಳು ಮತ್ತು ವಿಕ್ಟೋರಿಯಾ, ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆ, ಬೌರಿಂಗ್ ಮೊದಲಾದ ಕೋವಿಡ್ ಆಸ್ಪತ್ರೆಗಳ ನಿರ್ದೇಶಕರ ಜೊತೆಗೆ ಮಂಗಳವಾರ ನನ್ನ ಮನೆಯಿಂದಲೇ ವಿಡಿಯೋ ಸಂವಾದ ನಡೆಸಿದ್ದೇನೆ. ರೋಗಿಗಳ ದಾಖಲಾತಿ, ಆಹಾರ, ಸ್ವಚ್ಛತೆ, ಚಿಕಿತ್ಸೆಗಳಲ್ಲಿ ಲೋಪಗಳ ದೂರು ಬಂದಲ್ಲಿ ನಿರ್ದೇಶಕರುಗಳನ್ನೇ ಹೊಣೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದೇನೆ ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.

  • 7 ದಿನ ಶೌಚಾಲಯದಲ್ಲಿ ಹೋಮ್ ಕ್ವಾರಂಟೈನ್ ಕಳೆದ ಯುವಕ

    7 ದಿನ ಶೌಚಾಲಯದಲ್ಲಿ ಹೋಮ್ ಕ್ವಾರಂಟೈನ್ ಕಳೆದ ಯುವಕ

    – ಕುಟುಂಬಸ್ಥರ ಸುರಕ್ಷತೆಗಾಗಿ ಟಾಯ್ಲೆಟ್ ಕ್ವಾರಂಟೈನ್

    ಭುವನೇಶ್ವರ: ಸಾಂಸ್ಥಿಕ ಕ್ವಾರಂಟೈನ್ ಬಳಿಕ ಹೋಮ್ ಕ್ವಾರಂಟೈನ್ ಆಗಬೇಕೆಂಬ ನಿಯಮವಿರುವುದರಿಂದ ವ್ಯಕ್ತಿಯೊಬ್ಬ ಮನೆಯಲ್ಲಿ ಜಾಗ ಇಲ್ಲದ್ದಕ್ಕೆ ಶೌಚಾಲಯದಲ್ಲೇ 7 ದಿನಗಳ ಹೋಮ್ ಕ್ವಾರಂಟೈನ್ ಅವಧಿಯನ್ನು ಕಳೆದಿರುವ ವಿಚಿತ್ರ ಘಟನೆ ನಡೆದಿದೆ.

    ಒಡಿಶಾದ ಜಗತ್‍ಸಿಂಗ್‍ಪುರ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, 28 ವರ್ಷದ ವ್ಯಕ್ತಿ ತಮಿಳುನಾಡಿನಿಂದ ಒಡಿಶಾಗೆ ತೆರಳಿದ್ದಾನೆ. ಒಡಿಶಾದಲ್ಲಿ ಸಹ 7 ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ 7 ದಿನ ಹೋಮ್ ಕ್ವಾರಂಟೈನ್ ಎಂಬ ನಿಯಮವಿದೆ. 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮುಗಿಸಿದ ವ್ಯಕ್ತಿ ಹೋಮ್ ಕ್ವಾರಂಟೈನ್ ಆಗಲು ಮನೆಗೆ ತೆರೆಳಿದ್ದು, ಮನೆ ಚಿಕ್ಕದಿರುವುದರಿಂದ ಶೌಚಾಲಯದಲ್ಲೇ 7 ದಿನ ಜೀವನ ಕಳೆದಿದ್ದಾನೆ.

    ಸುದುಕಂತಿ ಶಾಲೆಯಲ್ಲಿ ಏಳು ದಿನ ಸಾಂಸ್ಥಿಕ ಕ್ವಾರಂಟೈನ್ ಮುಗಿಯುತ್ತಿದ್ದಂತೆ ಮಾನಸ್ ಪಾತ್ರಾ ನುಗಾಂವ್ ಬ್ಲಾಕ್‍ನ ಜಮುಗಾಂವ್‍ನಲ್ಲಿರುವ ತಮ್ಮ ಮನೆಗೆ ತೆರಳಿದ್ದು, ಹೋಮ್ ಕ್ವಾರಂಟೈನ್ ಕಡ್ಡಾಯದ ಹಿನ್ನೆಲೆ ಈ ಏಳು ದಿನಗಳ ಅವಧಿಯನ್ನು ಶೌಚಾಲಯದಲ್ಲಿ ಕಳೆದಿದ್ದಾನೆ.

    ಮಾನಸ್ ಪಾತ್ರಾ ಅವರ ಮನೆ ಚಿಕ್ಕದಾಗಿದ್ದು, 6 ಜನ ವಾಸಿಸುತ್ತಿದ್ದಾರೆ. ಹೀಗಾಗಿ ಮನೆಯಲ್ಲಿರಲು ಅವಕಾಶ ನೀಡಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಬೇರೆ ದಾರಿ ಇಲ್ಲದೆ ಅನಿವಾರ್ಯವಾಗಿ ಮನೆಯ ಬಳಿ ಇರುವ ಸ್ವಚ್ಛ್ ಭಾರತ್‍ನ ಶೌಚಾಲಯದ ಶೆಲ್ಟರ್ ನಲ್ಲೇ ಕಾಲ ಕಳೆದಿದ್ದಾರೆ.

    ಮನೆಯವರ ಸುರಕ್ಷತೆಗಾಗಿ ಶೌಚಾಲಯದಲ್ಲೇ ಕಾಲ ಕಳೆಯಬೇಕು ಎಂದು ಒತ್ತಾಯಿಸಿದರು. ಹೀಗಾಗಿ ಅಲ್ಲೇ ಇದ್ದೆ ಎಂದು ತಿಳಿಸಿದ್ದಾರೆ. ಜೂ.9ರಿಂದ 15ರ ವರೆಗೆ ಶೌಚಾಲಯದಲ್ಲೇ ಕಾಲ ಕಳೆದಿದ್ದಾರೆ. ಇದೀಗ ರೋಗ ಲಕ್ಷಣಗಳು ಕಾಣದ ಹಿನ್ನೆಲೆ ಅವರನ್ನು ಬಿಡುಗಡೆ ಮಾಡಲಾಗಿದೆ.

  • ಹೋಮ್ ಕ್ವಾರಂಟೈನ್‍ನಲ್ಲಿದ್ದವರ ಓಡಾಟ- ಯಾದಗಿರಿ ನಗರಕ್ಕೆ ಕಾಲಿಟ್ಟ ಡೆಡ್ಲಿ ಕೊರೊನಾ

    ಹೋಮ್ ಕ್ವಾರಂಟೈನ್‍ನಲ್ಲಿದ್ದವರ ಓಡಾಟ- ಯಾದಗಿರಿ ನಗರಕ್ಕೆ ಕಾಲಿಟ್ಟ ಡೆಡ್ಲಿ ಕೊರೊನಾ

    – ನಗರದ ಜನರಲ್ಲಿ ಶುರುವಾಗಿದೆ ಢವ ಢವ

    ಯಾದಗಿರಿ: ಮಹಾರಾಷ್ಟ್ರ ಕಂಟಕದಿಂದ ಜಿಲ್ಲೆಯ ಜನತೆ ತತ್ತರಿಸಿ ಹೋಗಿದ್ದು, ಈಗ ಮತ್ತೊಂದು ಆತಂಕ ಎದುರಾಗಿದೆ. ವರದಿ ಬರುವ ಮುನ್ನವೇ ಕ್ವಾರಂಟೈನ್ ಕೇಂದ್ರದಲ್ಲಿದ್ದವರನ್ನು ಮನೆಗೆ ಕಳುಹಿಸಿದ ಪರಿಣಾಮ ಯಾದಗಿರಿ ನಗರದಲ್ಲಿ ಕೊರೊನಾ ಭೀತಿ ಶುರುವಾಗಿದೆ.

    ಕೊರೊನಾ ಪರೀಕ್ಷೆಯ ವರದಿ ಬರುವ ಮುನ್ನವೇ ಮಹಾರಾಷ್ಟ್ರದಿಂದ ಬಂದವರನ್ನು ಮನೆಗೆ ಕಳುಹಿಸಲಾಗಿದೆ. ನಗರದ ವಿವಿಧ ವಾರ್ಡ್ ಗಳಲ್ಲಿ ಹೋಮ್ ಕ್ವಾರಂಟೈನ್ ನಲ್ಲಿದ್ದ 18 ಜನರಿಗೆ, ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಸೋಂಕು ಪತ್ತೆಯಾದ 18 ಜನ ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ, ನಗರದ ವಿವಿಧೆಡೆ ಸಂಚಾರ ಮಾಡಿದ್ದಾರೆ. ಇದರಿಂದಾಗಿ ಜಿಲ್ಲಾಡಳಿತಕ್ಕೆ ಹೊಸ ತಲೆ ನೋವು ಶುರುವಾಗಿದೆ.

    ನಗರದ ವಾರ್ಡ್ ನಂ.9ರ ತಪಾಡಗೇರಾದಲ್ಲಿ ಒಂದೇ ಕುಟುಂಬದ 15 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದರ ಜೊತೆ ಕೋಳಿವಾಡದ ಇಬ್ಬರಿಗೆ, ವಾರ್ಡ್ ನಂ.25ರ ಲಕ್ಷ್ಮಿ ನಗರದ ಒಬ್ಬರಿಗೆ ಕೊರೊನಾ ಪತ್ತೆಯಾಗಿದೆ. ಇವರೆಲ್ಲರೂ ಹೋಮ್ ಕ್ವಾರಂಟೈನ್ ನಿಯಮ ಪಾಲಿಸದೆ ನಗರದಲ್ಲಿ ಸಂಚರಿಸಿದ್ದಾರೆ. ಹೀಗಾಗಿ ಇವರು ಎಲ್ಲೆಲ್ಲಿ ಓಡಾಡಿದ್ದಾರೋ ಎಂಬ ಭಯ ಇದೀಗ ಶುರುವಾಗಿದೆ.

    ಮುನ್ನೆಚ್ಚರಿಕಾ ಕ್ರಮವಾಗಿ ಲಕ್ಷ್ಮಿ ನಗರ ಹಾಗೂ ಕೋಳಿವಾಡ ಬಡವಾವಣೆಯ 100 ಮೀಟರ್ ವ್ಯಾಪ್ತಿಯನ್ನು ಕಂಟ್ಮೋನೆಂಟ್ ಝೋನ್ ಎಂದು ಘೋಷಣೆ ಮಾಡಿ, ಸೀಲ್ ಡೌನ್ ಮಾಡಲಾಗಿದೆ. ಹೀಗಾಗಿ ಹಳ್ಳಿ, ತಾಂಡಾಗಳಿಗಲ್ಲದೇ ಈಗ ನಗರ ಪ್ರದೇಶಕ್ಕೂ ಕೊರೊನಾ ಎಂಟ್ರಿ ಕೊಟ್ಟಿದ್ದು, ಯಾದಗಿರಿ ಜನ ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ.

  • ವಿವಾಹದಲ್ಲಿ ವೈದ್ಯ ಭಾಗಿ – ಸುಳ್ಯದಲ್ಲಿ 62 ಮಂದಿಗೆ ಕ್ವಾರಂಟೈನ್

    ವಿವಾಹದಲ್ಲಿ ವೈದ್ಯ ಭಾಗಿ – ಸುಳ್ಯದಲ್ಲಿ 62 ಮಂದಿಗೆ ಕ್ವಾರಂಟೈನ್

    ಮಂಗಳೂರು: ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ 62 ಮಂದಿಯನ್ನು ಕ್ವಾರೆಂಟೈನ್ ಮಾಡಲಾಗಿದೆ.

    ಮಲೇಷಿಯಾದಿಂದ ಮೇ.22ರಂದು ಬೆಂಗಳೂರಿಗೆ ಬಂದಿದ್ದ ವೈದ್ಯರು ಸರ್ಕಾರಿ ಕ್ವಾರೆಂಟೈನ್ ಮುಗಿಸಿ ಮಂಗಳೂರಿಗೆ ಬಂದಿದ್ದರು. ಭಾನುವಾರ ಅರಂತೋಡು ಗ್ರಾಮದ ಸಂಬಂಧಿಕರ ಮನೆಗೆ ಆಗಮಿಸಿ, ಬಳಿಕ ಯಜಮಾನನ ಕಾರಿನಲ್ಲಿ ತೆರಳಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಮಂಗಳೂರಿಗೆ ಬಂದ ಬಳಿಕ ಅವರಿಗೆ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಹೀಗಾಗಿ ಈ ವೈದ್ಯರ ಪ್ರಾಥಮಿಕ ಸಂಪರ್ಕಕ್ಕೆ ಬಂದ 62 ಮಂದಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.

    ದಕ್ಷಿಣ ಕನ್ನಡದಲ್ಲಿ ಒಟ್ಟು 129 ಮಂದಿಗೆ ಸೋಂಕು ಬಂದಿದ್ದು, 48 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 74 ಸಕ್ರಿಯ ಪ್ರಕರಣಗಳಿದ್ದು 6 ಮಂದಿ ಕೋವಿಡ್ 19ಗೆ ಮೃತಪಟ್ಟಿದ್ದಾರೆ.

  • ಹೋಮ್ ಕ್ವಾರಂಟೈನ್‍ನಲ್ಲಿದ್ದವರು ಹೊರಗಡೆ ಓಡಾಟ- ನಾಲ್ವರ ವಿರುದ್ಧ ಎಫ್‍ಐಆರ್

    ಹೋಮ್ ಕ್ವಾರಂಟೈನ್‍ನಲ್ಲಿದ್ದವರು ಹೊರಗಡೆ ಓಡಾಟ- ನಾಲ್ವರ ವಿರುದ್ಧ ಎಫ್‍ಐಆರ್

    ಯಾದಗಿರಿ: ಹೋಮ್ ಕ್ವಾರಂಟೈನ್‍ನಲ್ಲಿರುವಂತೆ ಸೂಚಿಸಿದರೆ ಹೊರಗಡೆ ಓಡಾಡುತ್ತಿದ್ದು, ನಾಲ್ವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

    ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ವಿವಿಧ ತಾಂಡಗಳ 4 ಜನರ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಭಾನು(42), ಲಕ್ಕರ್(52), ಶಂಕರ್(27), ರವಿ(26)ಯವರ ವಿರುದ್ಧ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರೆಲ್ಲರೂ ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದಿದ್ದು, ಈಗಾಗಲೇ ಹಾಸ್ಟೆಲ್ ಕ್ವಾರೆಂಟನ್ ಮುಗಿಸಿದ್ದಾರೆ. ಇನ್ನೂ 14 ದಿನಗಳ ಕಾಲ ಹೋಮ್ ಕ್ವಾರಂಟೈನ್‍ನಲ್ಲಿರುವಂತೆ ಜಿಲ್ಲಾಡಳಿತ ಸೂಚಿಸಿತ್ತು. ಆದರೆ ಬೇಕಾಬಿಟ್ಟಿಯಾಗಿ ಓಡಾಡಿದ್ದಾರೆ.

     

    ಜಿಲ್ಲಾಡಳಿತದ ಸೂಚನೆಯನ್ನು ನಿರ್ಲಕ್ಷಿಸಿ, ಲಾಕ್‍ಡೌನ್ ನಿಯಮಗಳನ್ನು ಮೀರಿ ತಮ್ಮ ತಾಂಡಗಳಲ್ಲಿ ತಿರುಗಾಟ ನಡೆಸಿದ್ದರು. ಈ ಹಿನ್ನೆಲೆ ಇವರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದೆ ಎಂದು ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

  • ಶಂಕಿತ ಸೋಂಕಿತರ ಮೇಲೆ ಕ್ವಾರಂಟೈನ್ ವಾಚ್ ಆ್ಯಪ್ ಕಣ್ಗಾವಲು

    ಶಂಕಿತ ಸೋಂಕಿತರ ಮೇಲೆ ಕ್ವಾರಂಟೈನ್ ವಾಚ್ ಆ್ಯಪ್ ಕಣ್ಗಾವಲು

    – ಮನೆಗಳ ಸುತ್ತ 200 ಮೀಟರ್ ಸೀಲ್

    ಉಡುಪಿ: ಜಿಲ್ಲೆಯಲ್ಲಿ ಹೋಟೆಲ್, ಸರ್ಕಾರಿ ಕ್ವಾರಂಟೈನನ್ನು ಏಳು ದಿನಗಳಿಗೆ ಮೊಟಕು ಮಾಡಿ ವರದಿ ಬರುವ ಮೊದಲೇ ಎಲ್ಲರನ್ನು ಹೋಂ ಕ್ವಾರಂಟೈನ್‍ಗೆ ಕಳುಹಿಸಲಾಗಿದೆ. ಹೋಂ ಕ್ವಾರಂಟೈನ್ ಹೋದವರ ಪೈಕಿ 13 ಜನಕ್ಕೆ ಕೊರೊನಾ ಆವರಿಸಿದೆ. ಇದರಿಂದ ಆತಂಕಗೊಂಡಿರುವ ಸರ್ಕಾರ ಹೊಸ ಆ್ಯಪ್ ಸಿದ್ಧ ಮಾಡಿದ್ದು, ಹೋಂ ಕ್ವಾರಂಟೈನ್‍ನಲ್ಲಿರುವವರ ಮೇಲೆ ಜಿಲ್ಲಾಡಳಿತ ಕಣ್ಗಾವಲು ಇಟ್ಟಿದೆ.

    ವಿದೇಶ, ಹೋರ ರಾಜ್ಯದಿಂದ ಬಂದು ಮನೆ ಸೇರಿರುವ 6,000 ಜನರಿದ್ದು, ಎಲ್ಲರೂ ಕ್ವಾರಂಟೈನ್ ವಾಚ್ ಅಪ್ಲಿಕೇಶನ್ ಡೌನ್‍ಲೋಡ್ ಮಾಡಿಕೊಳ್ಳಲು ಜಿಲ್ಲಾಡಳಿತ ಸೂಚಿಸಿದೆ. ಹೋಂ ಕ್ವಾರಂಟೈನ್ ಇರುವವರ ಮೇಲೆ ವಾಚ್ ಅಪ್ಲಿಕೇಷನ್ ಮೂಲಕ ಜಿಲ್ಲಾಡಳಿತ ಕಣ್ಗಾವಲು ಇಡಲಿದೆ.

    ತಂತ್ರಜ್ಞಾನದ ಮೊರೆ ಹೋದ ಜಿಲ್ಲಾಡಳಿತ, ಮನೆಯ ಸುತ್ತ ಕ್ವಾರಂಟೈನ್ ಆ್ಯಪ್ ಜೊತೆ ಫೆನ್ಸಿಂಗ್ ವ್ಯವಸ್ಥೆ ಜಾರಿ ಮಾಡಿದೆ. ಕ್ವಾರಂಟೈನ್ ಇರುವವರು ಹೊರಗಡೆ ಬಂದ್ರೆ ಜಿಲ್ಲಾಡಳಿತಕ್ಕೆ ತಕ್ಷಣ ಮಾಹಿತಿ ಬರಲಿದೆ. ಮನೆ ಬಿಟ್ಟು ಹೊರಗೆ ಬಂದರೆ ಪ್ರಕರಣ ದಾಖಲು ಮಾಡುವುದಾಗಿ ಡಿಸಿ ಎಚ್ಚರಿಕೆ ನೀಡಿದ್ದಾರೆ. ಹೋಂ ಕ್ವಾರಂಟೈನ್ ನಲ್ಲಿ ಇರುವ ವ್ಯಕ್ತಿ ವಿಎ, ಪಿಡಿಒ ಜೊತೆಗೆ ನಿಂತು ಸೆಲ್ಫಿ ರವಾನೆಗೆ ಸೂಚನೆ ಕೊಡಲಾಗಿದೆ.

    ಸ್ಮಾರ್ಟ್ ಫೋನ್ ಇರುವ ಮನೆಗಳಿಗೆ ಅಪ್ಲಿಕೇಷನ್ ಮೂಲಕ ಮೂಲಕ ಕಾವಲು ಇಟ್ಟಿರುವ ಜಿಲ್ಲಾಡಳಿತ, ಸ್ಮಾಟ್ ಫೋನ್‍ಗಳಿಲ್ಲದ ಮನೆಗಳ ಪಟ್ಟಿಯನ್ನು ನೀಡಿ ಗ್ರಾಮ ಪಂಚಾಯ್ ಮೂಲಕ ನಿಗಾ ವಹಿಸಲು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಎಸ್‍ಪಿ ವಿಷ್ಣುವರ್ಧನ್ ಸೂಚನೆ ನೀಡಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಹೊರನಾಡು ಕನ್ನಡಿಗರು ಉಡುಪಿಗೆ ಬಂದವರು 8 ಸಾವಿರಕ್ಕೂ ಹೆಚ್ಚು. 14 ದಿನ ಪೂರೈಸಿದರೂ ವರದಿ ಬಾರದ ಕಾರಣ ಮನೆಗೆ ಕಳುಹಿಸಲಾಗಿದೆ. ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ಬಹಳ ಒತ್ತಡ ಬಂತು. ಮನೆಯಲ್ಲಿ ಜಾಗರೂಕತೆಯಿಂದ ಇರಲು ಸೂಚನೆ ನೀಡಲಾಗಿದೆ. ಪಾಸಿಟಿವ್ ಬಂದವರನ್ನು ಕರೆತಂದು ಚಿಕಿತ್ಸೆ ಕೊಡಿಸಲಾಗುತ್ತದೆ ಎಂದರು.

  • ಸಾಂಸ್ಥಿಕ ಕ್ವಾರಂಟೈನ್ ಬೇಡ, ಮಲೆನಾಡಲ್ಲಿ ಹೋಂಕ್ವಾರಂಟೈನ್ ಮಾಡಿ: ಶೋಭಾ ಕರಂದ್ಲಾಜೆ

    ಸಾಂಸ್ಥಿಕ ಕ್ವಾರಂಟೈನ್ ಬೇಡ, ಮಲೆನಾಡಲ್ಲಿ ಹೋಂಕ್ವಾರಂಟೈನ್ ಮಾಡಿ: ಶೋಭಾ ಕರಂದ್ಲಾಜೆ

    ಚಿಕ್ಕಮಗಳೂರು: ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಕ್ವಾರಂಟೈನ್‍ಗೆ ಒಳಪಡಿಸುವವರನ್ನು ಹೋಂ ಕ್ವಾರಂಟೈನಲ್ಲಿ ಇರಿಸುವಂತೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಿಗೆ ಮುಂಬೈ ಸೇರಿದಂತೆ ಬೇರೆ ರಾಜ್ಯ ಹಾಗೂ ವಿದೇಶಗಳಿಂದ ಸಾಕಷ್ಟು ಜನ ಬರುತ್ತಿದ್ದಾರೆ. ಇಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಉಡುಪಿ-ಚಿಕ್ಕಮಗಳೂರು ಎರಡೂ ಜಿಲ್ಲೆಗಳು ಗ್ರೀನ್‍ಝೋನ್‍ನಲ್ಲಿದ್ದವು. ನಾವು ಯಾವಾಗ ಮುಂಬೈ ಮತ್ತು ದುಬೈನವರನ್ನು ಕರೆಸಿಕೊಂಡೆವೋ ಅಂದಿನಿಂದ ಕೊರೊನಾ ಪಾಸಿಟಿವ್ ಇರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ಎರಡು ಜಿಲ್ಲೆಗಳಲ್ಲಿ ಬಹಳ ದೊಡ್ಡ ಸಮಸ್ಯೆ ಎಂದರೆ ಕ್ವಾರಂಟೈನ್‍ಗೆ ಒಳಪಡಿಸುವುದು.

    ಮೂಡಿಗೆರೆಯಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಜನರನ್ನು ಕ್ವಾರಂಟೈನ್‍ಗೆ ಮಾಡಬೇಕಾಗುತ್ತೆ. ವೈದ್ಯರಿಗೂ ಪಾಸಿಟಿವ್ ಬಂದ ಕಾರಣ ಅವರ ಸಂಪರ್ಕಕ್ಕೆ ಬಂದಿದ್ದ ಸುಮಾರು 800 ಜನರನ್ನು ನಾವು ಗುರುತಿಸಿದ್ದೀವಿ. ಇವರೆಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡೋದು ಕಷ್ಟದ ಕೆಲಸ. ಅಷ್ಟೊಂದು ವ್ಯವಸ್ಥೆಗಳು ಮೂಡಿಗೆರೆ ತಾಲೂಕಿನಲ್ಲಿ ಇಲ್ಲ. ಹೋಟೆಲ್, ಸಿಂಗಲ್ ರೂಂಗಳು ಕೂಡ ಇಲ್ಲ. ಹಾಗಾಗಿ, ಉಡುಪಿ, ಚಿಕ್ಕಮಗಳೂರು, ಕೊಡಗು, ಮಂಗಳೂರು ಹಾಗೂ ಶಿವಮೊಗ್ಗದ ಕೆಲ ಭಾಗದಲ್ಲಿ ಸಾಂಸ್ಥಿಕ ಕ್ವಾರಂಟೈನ್‍ನಿಂದ ಅವರಿಗೆ ವಿನಾಯಿತಿ ಕೊಡಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರಿಗೆ ಮನವಿ ಮಾಡಿದ್ದಾರೆ.

    ಕೈಗೆ ಸೀಲ್ ಹಾಕಿ, ಮನೆಗೆ ಚೀಟಿ ಅಂಟಿಸಿ ಮನೆಯಲ್ಲೇ ಅವರಿಗೆ ಕ್ವಾರಂಟೈನ್ ಮಾಡಬೇಕು. ಸಾಂಸ್ಥಿಕ ಕ್ವಾರಂಟೈನ್ ಮನೆಗಿಂತ ಡೇಂಜರ್ ಆಗಿದೆ. ಒಂದೊಂದು ರೂಮಿನಲ್ಲಿ 10-20 ಜನ ಇರುತ್ತಾರೆ. ಆದ್ದರಿಂದ ಒಬ್ಬರಿಗೆ ಸೋಂಕು ಬಂದರೂ ಉಳಿದವರಿಗೆ ಬರುವ ಸಾಧ್ಯತೆ ಇದೆ. ಮಲೆನಾಡಿನ ಒಂಟಿ ಮನೆ ಹಾಗೂ ಮಲೆನಾಡು ಭಾಗದಲ್ಲಿ ಮನೆಗಳಲ್ಲೇ ಕ್ವಾರಂಟೈನ್ ಮಾಡಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ. ಇಲ್ಲಿ ಸಾಕಷ್ಟು ವ್ಯವಸ್ಥೆ ಇಲ್ಲ. ಆದ್ದರಿಂದ ವಿನಾಯಿತಿ ನೀಡಬೇಕೆಂದು ಸಂಸದರು ಮನವಿ ಮಾಡಿದ್ದಾರೆ.

    ಸಂಸದರ ಮನವಿಗೆ ಮುಖ್ಯ ಕಾರ್ಯದರ್ಶಿಗಳು ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಸಿಎಂ ಬಳಿಯೂ ಮಾತನಾಡುವುದಾಗಿ ಸಂಸದರು ಹೇಳಿದ್ದಾರೆ. ಇದರಿಂದ ಹೆಚ್ಚಿನ ಜನಕ್ಕೆ ಸಹಾಯವಾಗುತ್ತದೆ. ಅವರು ಮನೆಯಲ್ಲೇ ಇರಬೇಕು. ಆರೋಗ್ಯದ ಬಗ್ಗೆ ಜಾಗೃತಿ ವಹಿಸಬೇಕು. ಯಾರೂ ಮನೆಯಿಂದ ಆಚೆ ಬರಬಾರದೆಂದು ಜನಸಾಮಾನ್ಯರಿಗೂ ಮನವಿ ಮಾಡಿಕೊಂಡಿದ್ದಾರೆ.