Tag: home ministry

  • ಎಲ್ಲೆ ಇದ್ದರೂ ಅಕ್ರಮ ವಲಸಿಗರನ್ನು ಹುಡುಕಿ ದೇಶದಿಂದ ಹೊರ ಹಾಕ್ತೀವಿ: ಶಾ ಗುಡುಗು

    ಎಲ್ಲೆ ಇದ್ದರೂ ಅಕ್ರಮ ವಲಸಿಗರನ್ನು ಹುಡುಕಿ ದೇಶದಿಂದ ಹೊರ ಹಾಕ್ತೀವಿ: ಶಾ ಗುಡುಗು

    ನವದೆಹಲಿ: ದೇಶದ ಯಾವುದೇ ಮೂಲೆಯಲ್ಲಿದ್ದರೂ ಅಕ್ರಮ ವಲಸಿಗರನ್ನು ಸರ್ಕಾರ ಗುರುತಿಸಲಿದೆ. ಅಂತರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿ ನೆಲೆಸಿರುವವರನ್ನು ಮುಲಾಜಿಲ್ಲದೆ ದೇಶದಿಂದ ಹೊರ ಹಾಕಲಾಗುವುದು ಎಂದು ಗೃಹ ಸಚಿವ ಅಮಿತ್ ಗುಡುಗಿದ್ದಾರೆ.

    ರಾಜ್ಯಸಭೆಯ ಅಧಿವೇಶನದಲ್ಲಿ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ಜವೇದ್ ಅಲಿ ಖಾನ್ ಅವರು ಇತರ ರಾಜ್ಯಗಳಲ್ಲಿಯೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ) ಜಾರಿಯಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ತುಂಬಾ ಒಳ್ಳೆಯ ಪ್ರಶ್ನೆ. ಎನ್‍ಆರ್‍ಸಿ ಅಸ್ಸಾಂ ಒಪ್ಪಂದದ ಭಾಗವಾಗಿದೆ ಹಾಗೂ ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಇದೂ ಒಂದು ಅಂಶವಾಗಿತ್ತು. ಇದರ ಆಧಾರದ ಮೇಲೆಯೇ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ತಿಳಿಸಿದರು.

    ದೇಶದ ಪ್ರತಿ ಇಂಚೂ ಬಿಡದೇ, ಅನಧಿಕೃತವಾಗಿ ವಾಸವಿರುವ ಪ್ರತಿಯೊಬ್ಬ ವಿದೇಶಿಗರನ್ನು ಸರ್ಕಾರ ಗುರುತಿಸಲಿದೆ. ಅಂತರಾಷ್ಟ್ರೀಯ ಕಾನೂನಿನ ಅನ್ವಯ ಮುಲಾಜಿಲ್ಲದೆ ಪ್ರತಿಯೊಬ್ಬರನ್ನೂ ಹೊರ ಹಾಕಲಾಗುವುದು ಎಂದು ತಿಳಿಸಿದ್ದಾರೆ.

    ಎನ್​ಆರ್​ಸಿ ನೋಂದಣಿ ಗಡುವನ್ನು ವಿಸ್ತರಿಸುವಂತೆ ಅಸ್ಸಾಂನಿಂದ ಹೆಚ್ಚು ಮನವಿಗಳು ಕೇಂದ್ರ ಸರ್ಕಾರಕ್ಕೆ ಬರುತ್ತಿವೆ. ಈಗಾಗಲೇ 25 ಲಕ್ಷ ಅರ್ಜಿದಾರರು ಸಹಿ ಹಾಕಿದ್ದು, ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಎಲ್ಲ ತಪ್ಪುಗಳನ್ನು ಸರಿ ಪಡಿಸುವಂತೆ ರಾಷ್ಟ್ರಪತಿಗಳು ತಿಳಿಸಿದ್ದಾರೆ ಎಂದು ಇದೇ ವೇಳೆ ರಾಜ್ಯ ಗೃಹ ಸಚಿವ ನಿತ್ಯಾನಂದ ರೈ ತಿಳಿಸಿದರು.

    ಅನೇಕ ನೈಜ ಹೆಸರುಗಳನ್ನು ಕೈ ಬಿಡಲಾಗಿದೆ. ಅಲ್ಲದೆ ಅನೇಕ ನಕಲಿ ಹೆಸರುಗಳನ್ನು ನೋಂದಾಯಿಸಲಾಗಿರುವುದರಿಂದ ಕಾಲಾವಕಾಶವನ್ನು ವಿಸ್ತರಿಸುವಂತೆ ಸರ್ಕಾರ ಸುಪ್ರೀಂ ಕೋರ್ಟ್‍ಗೆ ಮನವಿ ಮಾಡಿದೆ. ಸ್ವಲ್ಪ ತಡವಾಗಬಹುದು ಆದರೆ, ಎನ್​ಆರ್​ಸಿಯನ್ನು ಯವುದೇ ದೋಶವಿಲ್ಲದೆ ಜಾರಿಗೊಳಿಸಲಾಗುವುದು. ಎನ್​ಆರ್​ಸಿಯಿಂದ ಯಾವುದೇ ನೈಜ ನಾಗರಿಕರು ಹೊರಗುಳಿಯಬಾರದು ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

    ದೇಶದಲ್ಲಿರುವ ರೊಹಿಂಗ್ಯಾ ಮುಸ್ಲಿಮರ ಕುರಿತು ಪ್ರತಿಕ್ರಿಯಿಸಿದ ಅವರು, ನಿರ್ಧಿಷ್ಟ ಅಂಕಿ ಅಂಶ ನಮ್ಮ ಬಳಿ ಇಲ್ಲ. ದೇಶಾದ್ಯಂತ ರೊಹಿಂಗ್ಯಾ ಮುಸ್ಲಿಮರು ಚದುರಿದ್ದಾರೆ. ಕೆಲವರು ಮರಳಿ ಬಾಂಗ್ಲಾ ದೇಶಕ್ಕೆ ಹೋಗಿದ್ದಾರೆ. ಶೀಘ್ರವೇ ಈ ಕುರಿತು ಅಂಕಿ ಅಂಶಗಳನ್ನು ಕಲೆ ಹಾಕಲಾಗುವುದು ಎಂದು ಉತ್ತರಿಸಿದರು.

  • 126 ಉಗ್ರರ ಹತ್ಯೆ, 27 ಮಂದಿ ಬಂಧನ: ಗೃಹ ಸಚಿವಾಲಯ

    126 ಉಗ್ರರ ಹತ್ಯೆ, 27 ಮಂದಿ ಬಂಧನ: ಗೃಹ ಸಚಿವಾಲಯ

    ನವದೆಹಲಿ: ಕಳೆದ ಮೂರು ವರ್ಷದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಭದ್ರತಾ ಪಡೆ ಮತ್ತು ರಕ್ಷಣಾ ಸಿಬ್ಬಂದಿ ಒಟ್ಟು 126 ಉಗ್ರರನ್ನು ಹತ್ಯೆಗೈದಿದ್ದಾರೆ ಎಂದು ಸರ್ಕಾರ ತಿಳಿಸಿದೆ.

    ಕಳೆದ ಮೂರೂವರೆ ವರ್ಷಗಳಲ್ಲಿ 400 ಉಗ್ರರು ಜಮ್ಮು ಕಾಶ್ಮೀರದಲ್ಲಿ ಒಳನುಸುಳಿದ್ದು ಅದರಲ್ಲಿ 126 ಉಗ್ರರನ್ನು ಹತ್ಯೆ ಮಾಡಿದ್ದರೆ, 27 ಮಂದಿಯನ್ನು ಬಂಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಇಂದು ರಾಜ್ಯಸಭೆಗೆ ತಿಳಿಸಿದೆ.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಉಗ್ರರು ಹಾಗೂ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದು ಲಿಖಿತ ಉತ್ತರ ನೀಡಿದೆ.

    2019ರಲ್ಲಿ ಜೂನ್‍ವರೆಗೆ ಅಂತರರಾಷ್ಟ್ರೀಯ ಕ್ರಿಮಿನಲ್ ಪೊಲೀಸ್ ಸಂಸ್ಥೆ ಮೂಲಕ 16 ಉಗ್ರರನ್ನು ಬಂಧಿಸಲಾಗಿದೆ. 2018ರಲ್ಲಿ 24 ಮಂದಿಯನ್ನು, 2017ರಲ್ಲಿ 35 ಮತ್ತು 2016 ರಲ್ಲಿ 36 ಮಂದಿಯನ್ನು ಬಂಧಿಸಲಾಗಿದೆ. ವಿದೇಶದಲ್ಲಿ ತಲೆ ಮರೆಸಿರುವ ಆರೋಪಿಗಳ ಬಂಧನಕ್ಕಾಗಿ 2019ರಲ್ಲಿ ಇಂಟರ್ ಪೋಲ್‍ಗೆ ಭಾರತವು 41 ರೆಡ್ ಕಾರ್ನರ್ ನೋಟಿಸ್ ಕಳುಹಿಸಿದೆ. ಅದರಲ್ಲಿ 32ಪ್ರಕಟವಾಗಿದೆ. 2016ರಲ್ಲಿ ಸಿಬಿಐ 91 ನೋಟಿಸ್ ಕಳುಹಿಸಿದ್ದು, ಅದರಲ್ಲಿ 87 ಪ್ರಕಟವಾಗಿದೆ, 2017 ರಲ್ಲಿ 94 ನೋಟಿಸ್‍ಗಳಲ್ಲಿ 87 ಪ್ರಕಟವಾಗಿದೆ, 2018ರಲ್ಲಿ 123 ನೋಟಿಸ್‍ಗಳನ್ನು ಪೈಕಿ ಕೇವಲ 76 ನೋಟಿಸ್‍ಗಳನ್ನು ಪ್ರಕಟಗೊಂಡಿದೆ ಎಂದು ಹೇಳಿದೆ.

    ಸೋಮವಾರ ರಾಜ್ಯ ರಕ್ಷಣಾ ಸಚಿವ ಶ್ರೀಪಾದ್ ನಾಯಕ್ ರಾಜ್ಯಸಭೆಗೆ, 2018 ರಲ್ಲಿ ಒಟ್ಟು 318 ಉಗ್ರರ ದಾಳಿ ನಡೆದಿದೆ ಎಂದು ಮಾಹಿತಿ ನೀಡಿದ್ದರು. ಅಲ್ಲದೆ 2017ರಲ್ಲಿ ನಡೆದಿದ್ದ ದಾಳಿಗೆ ಹೋಲಿಸಿದರೆ 2018ರಲ್ಲಿ ಉಗ್ರ ದಾಳಿ ಸಂಖ್ಯೆ 187 ಹೆಚ್ಚಾಗಿದೆ. ಆದರೆ 2014ರಲ್ಲಿ ಮೋದಿ ಸರ್ಕಾರ ಬಂದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಬರೋಬ್ಬರಿ 963 ಭಯೋತ್ಪಾದಕರನ್ನು ಹತ್ಯೆ ಮಾಡಿದೆ ಎಂದು ಲೋಕಸಭೆಯಲ್ಲಿ ಮಂಗಳವಾ ಗೃಹ ಸಚಿವಾಲಯ ಉತ್ತರ ನೀಡಿದೆ.

    2019ರಲ್ಲಿ ಭಾರತ ಹಲವಾರು ಉಗ್ರರ ದಾಳಿಗಳಿಗೆ ಸಾಕ್ಷಿಯಾಗಿದೆ. ಅದರಲ್ಲೂ ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಬೆಂಗಾವಲು ಪಡೆ ಮೇಲೆ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ ಆತ್ಮಾಹುತಿ ದಾಳಿಗೆ 40ಕ್ಕೂ ಹೆಚ್ಚು ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದರು.

  • ಕಳೆದ 3 ವರ್ಷದಲ್ಲಿ 700ಕ್ಕೂ ಹೆಚ್ಚು ಉಗ್ರರ ಹತ್ಯೆ – ಗೃಹ ಸಚಿವಾಲಯ

    ಕಳೆದ 3 ವರ್ಷದಲ್ಲಿ 700ಕ್ಕೂ ಹೆಚ್ಚು ಉಗ್ರರ ಹತ್ಯೆ – ಗೃಹ ಸಚಿವಾಲಯ

    ನವದೆಹಲಿ: ಕಳೆದ ಮೂರು ವರ್ಷದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 700 ಕ್ಕೂ ಹೆಚ್ಚು ಉಗ್ರರನ್ನು ಕೊಲ್ಲಲಾಗಿದೆ ಎಂದು ಭಾರತೀಯ ಗೃಹ ಸಚಿವಾಲಯ ಮಂಗಳವಾರ ತಿಳಿಸಿದೆ.

    ಈ ವರ್ಷ ಜನವರಿಯಿಂದ ಜೂನ್ 16 ನಡುವೆ ಸುಮಾರು 113 ಮಂದಿ ಭಯೋತ್ಪಾದಕರನ್ನು ಕೊಲ್ಲಲಾಗಿದೆ. 2018ರಲ್ಲಿ ಒಟ್ಟು 257 ಉಗ್ರರನ್ನು ಕೊಂದಿದ್ದೇವೆ. 2017ರಲ್ಲಿ 213 ಮತ್ತು 2016 ರಲ್ಲಿ 150 ಮಂದಿ ಉಗ್ರರನ್ನು ಕೊಲ್ಲಲಾಗಿದೆ. ಒಟ್ಟು ಮೂರು ವರ್ಷದಲ್ಲಿ ಸುಮಾರು 733 ಉಗ್ರರನ್ನು ಕೊಂದಿದ್ದೇವೆ ಎಂದು ಗೃಹ ಸಚಿವಾಲಯ ತಿಳಿಸಿದೆ.

    ಈ ಅವಧಿಯಲ್ಲಿ 112 ಭಾರತೀಯ ನಾಗರಿಕರೂ ಕೂಡ ಪ್ರಾಣ ಕಳೆದುಕೊಂಡಿದ್ದಾರೆ. 2016ರಲ್ಲಿ 15 ಜನ ಮತ್ತು 2017ರಲ್ಲಿ 40 ಜನ, 2018ರಲ್ಲಿ 39 ಜನ ಮತ್ತು ಈ ವರ್ಷ ಜನವರಿಯಿಂದ ಜೂನ್ 16 ರವರೆಗೆ 18 ಮಂದಿ ಸಾವನ್ನಪ್ಪಿದ್ದಾರೆ ಎಂದು ಗೃಹ ಸಚಿವಾಲಯ ಅಂಕಿ ಅಂಶವನ್ನು ಬಿಡುಗಡೆ ಮಾಡಿದೆ.

    ಭಯೋತ್ಪಾದನೆಯನ್ನು ತಡೆಗಟ್ಟಲು ಭಾರತೀಯ ಭದ್ರತಾ ಪಡೆಗಳು ಪರಿಣಾಮಕಾರಿಯಾಗಿ ನಿರಂತರ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಇದ್ದರಿಂದ ಕಳೆದ ಮೂರು ವರ್ಷದಲ್ಲಿ ಇಷ್ಟೊಂದು ಉಗ್ರರನ್ನು ಕೊಂದಿದ್ದೇವೆ ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಲೋಕಸಭೆಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ.

    ಭಾರತದಲ್ಲಿ ಭಯೋತ್ಪಾದಕರಿಗೆ ಬೆಂಬಲ ನೀಡುವ ವ್ಯಕ್ತಿಗಳ ಮೇಲೆ ಭದ್ರತಾ ಪಡೆಗಳು ನಿಗಾ ವಹಿಸಿವೆ. ಈ ರೀತಿಯ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಕೊಳ್ಳಲಾಗುತ್ತದೆ. ಭಯೋತ್ಪಾದಕ ಕೃತ್ಯಗಳಿಗೆ ಪರಿಣಾಮಕಾರಿಯಾದ ಪ್ರತೀಕಾರ ತೆಗೆದುಕೊಳ್ಳಲಾಗುತ್ತದೆ ಎಂದು ಕಿಶನ್ ರೆಡ್ಡಿ ಅವರು ತಿಳಿಸಿದರು.

  • ಮಳೆಗೆ ಕರ್ನಾಟಕದಲ್ಲಿ 166, ದೇಶದಲ್ಲಿ 1276 ಮಂದಿ ಬಲಿ

    ಮಳೆಗೆ ಕರ್ನಾಟಕದಲ್ಲಿ 166, ದೇಶದಲ್ಲಿ 1276 ಮಂದಿ ಬಲಿ

    ನವದೆಹಲಿ: ಈ ವರ್ಷ ಮಳೆ ಸಂಬಂಧಿ ದುರಂತಕ್ಕೆ ಕರ್ನಾಟಕದಲ್ಲಿ 166, ದೇಶದಲ್ಲಿ ಒಟ್ಟು 1,276 ಮಂದಿ ಮೃತಪಟ್ಟಿದ್ದಾರೆ ಎಂದು ಗೃಹಸಚಿವಾಲಯ ಹೇಳಿದೆ.

    ಈ ವರ್ಷದ ಆರಂಭದಿಂದ ಆಗಸ್ಟ್ 26 ವರೆಗಿನ ವರದಿಯನ್ನು ಪ್ರಕಟಿಸಿದ್ದು ಕೇರಳದಲ್ಲಿ ಅತಿ ಹೆಚ್ಚು 443 ಮಂದಿ ಮೃತಪಟ್ಟಿದ್ದಾರೆ. ಉತ್ತರಪ್ರದೇಶ(218), ಪಶ್ಚಿಮ ಬಂಗಾಳ(198), ಅಸ್ಸಾಂ(49) ಮೃತಪಟ್ಟಿದ್ದಾರೆ. ಭಾರೀ ಮಳೆಯಾದ ಕಾರಣ 17,14,863 ಮಂದಿ ಈಗ ಸಂತ್ರಸ್ತರ ಕೇಂದ್ರದಲ್ಲಿ ನೆಲೆಸಿದ್ದಾರೆ ಎಂದು ವರದಿ ತಿಳಿಸಿದೆ.

    ಭಾನುವಾರ ನಡೆದ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೇರಳ ಮತ್ತು ಮಳೆ ಪೀಡಿತ ರಾಜ್ಯಗಳ ಬಗ್ಗೆ ಮಾತನಾಡಿ ಕೇಂದ್ರದಿಂದ ಸಂಪೂರ್ಣ ಸಹಾಯ ಮಾಡುವುದಾಗಿ ತಿಳಿಸಿದ್ದರು.

    ಶುಕ್ರವಾರ ಕೊಡಗಿಗೆ ಭೇಟಿ ನೀಡಿದ್ದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‍ ಅತಿವೃಷ್ಟಿ ಪೀಡಿತ ಪ್ರದೇಶಗಳಲ್ಲಿ ಅಗತ್ಯ ಪರಿಹಾರ ಕಾರ್ಯಗಳನ್ನು ನಡೆಸುವುದಕ್ಕೆ ನೆರವಾಗುವಂತೆ ಡಿಫೆನ್ಸ್ ಪಬ್ಲಿಕ್ ಸೆಕ್ಟರ್ ಅಂಡರ್ ಟೇಕಿಂಗ್ಸ್‍ನ (ಡಿಪಿಎಸ್‍ಯು) ಮೂರು ಸಂಸ್ಥೆಗಳ ಮೂಲಕ ಕೊಡಗು ಜಿಲ್ಲೆಗೆ 7 ಕೋಟಿ ರೂ. ನೆರವು ಪ್ರಕಟಿಸಿದ್ದರು. ಅಲ್ಲದೇ ಸಂಸದರ ನಿಧಿಯಿಂದ ಒಂದು ಕೋಟಿ ರೂ. ಹಣ ನೀಡುವುದಾಗಿ ತಿಳಿಸಿದ್ದರು.

    ಜಿಲ್ಲೆಯಲ್ಲಾಗಿರುವ ಹಾನಿ ಕುರಿತಂತೆ ಕೇಂದ್ರ ಸರ್ಕಾರದ ನಷ್ಟ ಅಂದಾಜು ತಂಡ ಬಂದು ಪರಿಶೀಲನೆ ನಡೆಸಿ ವಿಸ್ತೃತ ವರದಿ ನೀಡಿದ ಬಳಿಕ ಹಾಗೂ ರಾಜ್ಯ ಸರ್ಕಾರದ ಪ್ರಸ್ತಾಪನೆಗಳನ್ನು ಆಧರಿಸಿ ಕೇಂದ್ರದಿಂದ ಪರಿಹಾರವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದರು.

    ನೆರೆಯಿಂದಾಗಿ ಕೇರಳಕ್ಕೆ 19,512 ಕೋಟಿ ರೂ. ನಷ್ಟವಾಗಿದ್ದು, ಈಗ ತುರ್ತಾಗಿ 2 ಸಾವಿರ ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಬೇಕೆಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದರು. ಆಗಸ್ಟ್ 17ರಂದು ವೈಮಾನಿಕ ಸಮೀಕ್ಷೆ ನಡೆಸಿದ್ದ ಪ್ರಧಾನಿ ಮೋದಿ 500 ಕೋಟಿ ರೂ. ಪ್ರಕಟಿಸಿದ್ದರು. ಬಳಿಕ ರಾಜನಾಥ್ ಸಿಂಗ್ 100 ಕೋಟಿ ರೂ. ಪರಿಹಾರ ಘೋಷಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಮಾನಾಥ್ ರೈ ಗೆ ಗೃಹ ಖಾತೆ ನೀಡಲು ಸಿಎಂ ಚಿಂತನೆ

    ರಮಾನಾಥ್ ರೈ ಗೆ ಗೃಹ ಖಾತೆ ನೀಡಲು ಸಿಎಂ ಚಿಂತನೆ

    ಬೆಂಗಳೂರು: ಗೃಹ ಖಾತೆ ವಹಿಸಿಕೊಳ್ಳಲು ಹಿರಿಯ ಸಚಿವರು ನಿರಾಕರಿಸಿದ ಬೆನ್ನಲ್ಲೆ ಅರಣ್ಯ ಸಚಿವ ರಮಾನಾಥ್ ರೈ ಅವರಿಗೆ ಗೃಹ ಖಾತೆ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ.

    ಮಂಗಳವಾರದಂದು ರಮಾನಾಥ್ ರೈ ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿರುವ ಸಿಎಂ, ಗೃಹ ಖಾತೆ ನೀಡಿದ್ರೆ ಅದನ್ನ ನಿರ್ವಹಿಸಲು ಸಿದ್ಧರಾಗಿರಿ ಅಂತಾ ಸೂಚನೆ ನೀಡಿದ್ದಾರೆ. ಕರಾವಳಿಯಲ್ಲಿ ಆರ್‍ಎಸ್‍ಎಸ್ ಮತ್ತು ಬಿಜೆಪಿಗೆ ತಿರುಗೇಟು ನೀಡಿ ಕಾಂಗ್ರೆಸ್ ಬಲ ಪಡಿಸಲು ಸಿಎಂ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

    ದಕ್ಷಿಣ ಕನ್ನಡದಲ್ಲಿ ರಮಾನಾಥ್ ರೈ ಅವರ ಕೈ ಬಲಪಡಿಸುವುದರೊಂದಿಗೆ ಕೋಮು ಗಲಭೆಗಳನ್ನ ಹತ್ತಿಕ್ಕಲು ರಮಾನಾಥ್ ರೈ ಅವರಿಗೇ ಗೃಹ ಖಾತೆ ನೀಡಿದ್ರೆ ಒಳ್ಳೆಯದು ಎಂಬ ಆಲೋಚನೆ ಸಿಎಂ ಸಿದ್ದರಾಮಯ್ಯ ಅವರದ್ದಂತೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜಕೀಯವಾಗಿ ಬಿಜೆಪಿಯನ್ನ ರಮಾನಾಥ್ ರೈ ಸಮರ್ಥವಾಗಿ ಎದುರಿಸಬಲ್ಲರು. ಗೃಹ ಖಾತೆ ನೀಡಿದ್ರೆ ಕೋಮು ಗಲಭೆಗಳನ್ನ ಹತ್ತಿಕ್ಕುವಲ್ಲಿ ರಮಾನಾಥ್ ರೈ ಅವರಿಗೆ ಸಹಕಾರಿ ಆಗಲಿದೆ ಎಂಬುದು ಸಿಎಂ ಲೆಕ್ಕಾಚಾರ.

    ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ.