Tag: Home minister

  • ಗೃಹ ಸಚಿವ ಎಂಬಿ ಪಾಟೀಲ್‍ಗೆ ಚಾಟಿ ಬೀಸಿದ ಸ್ಪೀಕರ್ ರಮೇಶ್ ಕುಮಾರ್

    ಗೃಹ ಸಚಿವ ಎಂಬಿ ಪಾಟೀಲ್‍ಗೆ ಚಾಟಿ ಬೀಸಿದ ಸ್ಪೀಕರ್ ರಮೇಶ್ ಕುಮಾರ್

    ಬೆಂಗಳೂರು: ದೋಸ್ತಿ ಸರ್ಕಾರದ ವಿಶ್ವಾತ ಮತಯಾಚನೆ ಮೇಲಿನ ಚರ್ಚೆ ಸದನದಲ್ಲಿ ಮುಂದುವರಿದಿದ್ದು, ಈ ಸಂದರ್ಭದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರು ಗೃಹ ಸಚಿವ ಎಂಬಿ ಪಾಟೀಲ್ ಅವರಿಗೆ ಖಾರವಾಗಿ ಚಾಟಿ ಬೀಸಿದ ಪ್ರಸಂಗ ನಡೆಯಿತು.

    ಸದನದಲ್ಲಿ ಮಾತನಾಡಿದ ಶಾಸಕ ಎಟಿ ರಾಮಸ್ವಾಮಿ ಅವರು ರಾಜೀನಾಮೆ ನೀಡಿ ತೆರಳಿದ ಅತೃಪ್ತರ ವಿರುದ್ಧ ಗುಡುಗಿದರು. ಶಾಸಕರು ಸ್ವಾಭಿಮಾನಿಗಳಾಗಿದ್ದರೆ, ಕರ್ನಾಟಕ ಬಿಟ್ಟು ಹೋಗುತ್ತಿರಲಿಲ್ಲ. ಇಂದು ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಮರ್ಯಾದೆ ತೆಗೆದಿದ್ದಾರೆ. ಮೈತ್ರಿಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಗೊತ್ತಿದೆ. ಅಧಿಕಾರ ಹಸ್ತಾಂತರದ ಬಗ್ಗೆಯೂ ಸಿಎಂ ಅವರಿಗೆ ಹೇಳಿದ್ದೆ ಎಂದರು.

    ರಾಜ್ಯದಲ್ಲಿ ಆಡಳಿತ ಪಕ್ಷಕ್ಕಿಂತ ಹೆಚ್ಚಿನ ಜವಾಬ್ದಾರಿ ವಿರೋಧ ಪಕ್ಷಕ್ಕಿದೆ. ಆದರೆ ಸೇವೆ ಮಾಡುವ ಉದ್ದೇಶ ಒಂದೇ ಆಗಿದ್ದರೆ ಅಲ್ಲೇ ಕೂರಬಹುದಲ್ವೇ. ಆ ಮೂಲಕ ಆಡಳಿತ ಪಕ್ಷವನ್ನು ಸರಿ ದಾರಿಗೆ ತರುವ ಕೆಲಸ ಮಾಡಬಹುದು. ಆದರೆ ನಿಮಗೆ ಬೇರೆ ಉದ್ದೇಶ ಇರಬಹುದು ಎಂದರು.

    ಇದೇ ಸಂದರ್ಭದಲ್ಲಿ ಅತೃಪ್ತ ಶಾಸಕರ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ ಅವರು, ಅತೃಪ್ತರಿಗೆ ರಾಕ್ಷಸಿಯ ಪ್ರವೃತ್ತಿ ಹೆಚ್ಚಾಗಿದೆ. ಆಡಳಿತ ಜೀವಂತವಾಗಿದೆಯೋ ಇಲ್ಲವೋ, ಅತೃಪ್ತರಿಗೆ ಝೀರೋ ಟ್ರಾಫಿಕ್ ನಲ್ಲಿ ಹೋಗೋಕೆ ಹೇಗೆ ಅನುಮತಿ ನೀಡಿದ್ರಿ ಎಂದು ಗೃಹ ಸಚಿವ ಎಂಬಿ ಪಾಟೀಲರ ವಿರುದ್ಧ ವಾಗ್ದಾಳಿ ನಡೆಸಿದರು.

    ಈ ನಡುವೆ ಅತೃಪ್ತರಿಗೆ ಝೀರೋ ಟ್ರಾಫಿಕ್ ಕೊಟ್ಟ ವಿಚಾರ ಗೃಹ ಸಚಿವರಿಂದ ಸ್ಪಷ್ಟನೆ ನೀಡಲು ಯತ್ನಿಸಿದರು. ರಾಜ್ಯಪಾಲರಿಂದ ಅತೃಪ್ತರಿಗೆ ರಕ್ಷಣೆ ಕೊಡಬೇಕು ಎಂದು ಪೊಲೀಸರಿಗೆ ಸೂಚನೆ ಇತ್ತು. ನೇರವಾಗಿ ಪೊಲೀಸರಿಗೆ ನಿರ್ದೇಶನ ನೀಡಲಾಗಿತ್ತು. ಶಾಸಕರಿಗೆ ಹೆಸರು ಬರೆದು ರಕ್ಷಣೆ ಕೊಡಬೇಕು ಎಂಬ ಆದೇಶ ನೀಡಲಾಗಿತ್ತು. ಅವರ ಚಲನವಲನಗಳಿಗೆ ಪೊಲೀಸ್ ಸೂಕ್ತ ಭದ್ರತೆಯನ್ನು ನೀಡಬೇಕಾಗಿ ಹೆಚ್‍ಎಎಲ್ ಪೊಲೀಸರಿಗೂ, ಕಮೀಷನರ್‍ಗೆ ಪತ್ರ ಬರೆಯಲಾಗಿತ್ತು ಎಂದರು.

    ಸಚಿವರ ಉತ್ತರಕ್ಕೆ ಸಮಾಧಾನಗೊಂಡ ಸ್ಪೀಕರ್ ಅವರು, ಝೀರೋ ಟ್ರಾಫಿಕ್ ಯಾರು ಯಾರಿಗೆ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಕೂಡಲೇ ತಮ್ಮ ಹೇಳಿಕೆ ಸ್ಪಷ್ಟನೆ ಕೊಟ್ಟ ಎಂಬಿ ಪಾಟೀಲ್ ಅವರು, ಅತೃಪ್ತರಿಗೆ ಝೀರೋ ಟ್ರಾಫಿಕ್ ಕೊಟ್ಟಿಲ್ಲ, ಸೂಚನೆಯೂ ಬಂದಿಲ್ಲ ಎಂದರು. ಈ ಮಾತಿಗೆ ಮತ್ತಷ್ಟು ಅಸಮಾಧಾನಗೊಂಡ ಅವರು, ನಿಮಗೇ ಈ ಹೇಳಿಕೆ ನೀಡಲು ಒಪ್ಪಿಗೆ ಇದೆಯಾ, ನಾಳೆ ಅಪರಾಧಿಗಳಿಗೆ ರಕ್ಷಣೆ ಕೊಡಿ. ಒಬ್ಬ ಗೃಹ ಸಚಿವರಾಗಿ ಈ ಹೇಳಿಕೆ ಕೊಡುತ್ತೀರಿ. ಇಡೀ ದೇಶ ನೋಡಿದೆ ಅವರಿಗೆ ಝೀರೋ ಟ್ರಾಫಿಕ್ ಕೊಟ್ಟಿರುವುದು ಎಂದರು.

    ತಮ್ಮ ವಾದವನ್ನು ಮುಂದುವರಿಸಿದ ಸಚಿವರು, ಅವರಿಗೆ ಝೀರೋ ಟ್ರಾಫಿಕ್ ಕೊಟ್ಟಿಲ್ಲ ಎಂದರು. ಇದರ ನಡುವೆ ಮಧ್ಯ ಪ್ರವೇಶ ಮಾಡಿದ ಹೆಚ್‍ಕೆ ಪಾಟೀಲ್ ಅವರು, ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಎಂದರು. ಬಳಿಕ ಮಾತನಾಡಿದ ಸ್ಪೀಕರ್, ಝೀರೋ ಟ್ರಾಫಿಕ್ ಕೊಟ್ಟಿದ್ದೀರಾ ಎಂಬುವುದು ನನಗೆ ಗೊತ್ತಿದೆ ಎಂದರು. ಆ ಬಳಿಕ ನಾನು ಈ ಬಗ್ಗೆ ವಿಡಿಯೋ ಕ್ಲೀಪಿಂಗ್ ನೀಡುತ್ತೇನೆ ಎಂದರು.

    ಗೃಹ ಸಚಿವರ ಉತ್ತರದಿಂದ ಮತ್ತಷ್ಟು ಅಸಮಾಧಾನಗೊಂಡ ಎಟಿ ರಾಮಸ್ವಾಮಿ ಅವರು, ಇಂತಹ ಉತ್ತರವನ್ನು ಗೃಹ ಸಚಿವರು ಕೊಡುತ್ತಾರೆ. ಇಂತಹ ಮಾತನ್ನ ಕೇಳಿ ನಾನು ಒಂದು ಕ್ಷಣವೂ ಇಲ್ಲಿ ಇರಲು ಸಾಧ್ಯವಿಲ್ಲ ಎಂದರು. ಕೂಡಲೇ ನಾನು ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ನಾಳೆ ವಿವರ ನೀಡುತ್ತೇನೆ ಎಂದರು.

  • 30 ವರ್ಷದಲ್ಲಿ ಫಸ್ಟ್ ಟೈಂ – ಗೃಹಮಂತ್ರಿ ಭೇಟಿ ವೇಳೆ ಬಂದ್ ಆಗದ ಕಾಶ್ಮೀರ

    30 ವರ್ಷದಲ್ಲಿ ಫಸ್ಟ್ ಟೈಂ – ಗೃಹಮಂತ್ರಿ ಭೇಟಿ ವೇಳೆ ಬಂದ್ ಆಗದ ಕಾಶ್ಮೀರ

    ಶ್ರೀನಗರ: 30 ವರ್ಷದ ಇತಿಹಾಸದಲ್ಲಿ ಪ್ರತಿ ಬಾರಿಯೂ ಗೃಹ ಸಚಿವರು ಕಾಶ್ಮೀರಕ್ಕೆ ಭೇಟಿ ನೀಡಿದಾಗ ಪ್ರತಿಭಟನೆ ಬಂದ್ ನಡೆಯುವುದು ಸಾಮಾನ್ಯವಾಗಿತ್ತು. ಆದರೆ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಎರಡು ದಿನದ ಪ್ರವಾಸಕ್ಕೆಂದು ಬುಧವಾರ ಕಾಶ್ಮೀರಕ್ಕೆ ಭೇಟಿ ನೀಡಿದ್ದು ,ಯಾವುದೇ ರೀತಿಯ ಬಂದ್ ಅಹಿತಕರ ಘಟನೆ ನಡೆದಿಲ್ಲ.

    ಕೇಂದ್ರ ಗೃಹ ಸಚಿವರಾದ ಮೇಲೆ ಮೊದಲ ಬಾರಿಗೆ ಅಮಿತ್ ಶಾ ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ್ದು ಭದ್ರತಾ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಇದೇ ವೇಳೆ ಕಾಶ್ಮೀರದಲ್ಲಿ ಭದ್ರತೆ ಮತ್ತು ಅಭಿವೃದ್ಧಿಯ ವಿಚಾರವಾಗಿ ಹಲವಾರು ಸಭೆಗಳಲ್ಲಿ ಭಾಗವಹಿಸಿದರು.

    ಈ ಎರಡು ದಿನಗಳಲ್ಲಿ ಕಾಶ್ಮೀರ ರಾಜ್ಯದ ಬಿಜೆಪಿ ಮುಖಂಡರು, ನಾಗರಿಕ ಸಮಾಜದ ಪ್ರತಿನಿಧಿಗಳು ಪಂಚಾಯತ್ ಸದಸ್ಯರಗಳನ್ನು ಅಮಿತ್ ಶಾ ಭೇಟಿ ಮಾಡಿದ್ದಾರೆ. ಇದರ ಜೊತೆಗೆ ಉನ್ನತ ಮಟ್ಟದ ಭದ್ರತಾ ಸಭೆ ನಡೆಸಿ ಅ ಸಭೆಯಲ್ಲಿ ಉಗ್ರರು ಮತ್ತು ಗಲಭೆಕೋರರ ವಿರುದ್ಧ ಕಠಿಣ ವಿಧಾನವನ್ನು ಮುಂದುವರಿಸಲು ಸೂಚಿಸಿದ್ದಾರೆ. ಅಷ್ಟೇ ಅಲ್ಲದೇ ಅಮರನಾಥ ತೀರ್ಥಯಾತ್ರೆಯ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲು ಸೂಚಿಸಿದ್ದಾರೆ.

    ಅಮಿತ್ ಶಾ ಅವರ ಈ ಕಾಶ್ಮೀರ ಭೇಟಿಯಲ್ಲಿ ಇನ್ನೊಂದು ವಿಶೇಷತೆ ಎಂದರೆ, ರಾಜ್ಯಕ್ಕೆ ಪ್ರಧಾನಿ ಭೇಟಿ ನೀಡಿದರೆ ಮಾತ್ರ ರಾಜ್ಯಪಾಲರು ಹೋಗಿ ಅವರನ್ನು ಬರ ಮಾಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಈ ಶಿಷ್ಟಾಚರವನ್ನು ಮುರಿದು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಎರಡು ದಿನಗಳ ರಾಜ್ಯ ಭೇಟಿಗೆ ಆಗಮಿಸಿದ ಗೃಹ ಸಚಿವರನ್ನು ಬರ ಮಾಡಿಕೊಂಡಿದ್ದರು.

    ಎಲ್ಲ ರೀತಿಯ ಶಿಷ್ಟಾಚಾರಗಳನ್ನು ಬದಿಗೊತ್ತಿದ ರಾಜ್ಯಪಾಲ ಸತ್ಯಪಾಲ್ ಮಲಿಕ್ ತಮ್ಮ ರಾಜಕೀಯ ಸಲಹೆಗಾರ ಮತ್ತು ಹಿರಿಯ ಅಧಿಕಾರಿಗಳ ಜತೆಗೆ ವಿಮಾನ ನಿಲ್ದಾಣಕ್ಕೆ ಹೋಗಿ ಅಮಿತ್ ಶಾ ಅವರನ್ನು ಬರ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೇ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಅಮಿತ್ ಶಾ ಉನ್ನತ ಮಟ್ಟದ ಸಭೆ ಸಹ ನಡೆಸಿದ್ದಾರೆ.

  • ವಾಜಪೇಯಿ ಬಂಗಲೆಗೆ ಚಾಣಕ್ಯ ಶಿಫ್ಟ್ – ನಿವಾಸದ ವಿಶೇಷತೆ ಏನು?

    ವಾಜಪೇಯಿ ಬಂಗಲೆಗೆ ಚಾಣಕ್ಯ ಶಿಫ್ಟ್ – ನಿವಾಸದ ವಿಶೇಷತೆ ಏನು?

    ನವದೆಹಲಿ: ದಿವಂಗತ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು 14 ವರ್ಷಗಳ ಕಾಲ ವಾಸವಿದ್ದ ದೆಹಲಿಯ ಕೃಷ್ಣ ಮೆನನ್ ರಸ್ತೆಯಲ್ಲಿರುವ ಬಂಗಲೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನೀಡಲಾಗಿದೆ.

    ವಾಜಪೇಯಿ ಅವರು ಈ ಬಂಗಲೆಯಲ್ಲಿ 2004ರ ವರೆಗೆ ಸುಮಾರು 14 ವರ್ಷ ತನ್ನ ಕುಟುಂಬದ ಜೊತೆ ವಾಸವಿದ್ದರು. 2018 ಆಗಸ್ಟ್ ತಿಂಗಳಿನಲ್ಲಿ ವಾಜಪೇಯಿ ಅವರ ನಿಧನದ ನಂತರ ಅವರ ಕುಟುಂಬ ನವೆಂಬರ್‍ನಲ್ಲಿ ಮನೆಯನ್ನು ಖಾಲಿ ಮಾಡಿತ್ತು.

    ಬಿಜೆಪಿಯ ಅಧ್ಯಕ್ಷರಾಗಿರುವ ಅಮಿತ್ ಶಾ ಅವರು ಇತ್ತೀಚಿಗೆ ಈ ಬಂಗಲೆಗೆ ಭೇಟಿ ನೀಡಿ ಕೆಲವು ಬದಲಾವಣೆ ಮಾಡುವಂತೆ ಸಲಹೆ ನೀಡಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.

    ಪ್ರಥಮ ಬಾರಿಗೆ ಕೇಂದ್ರ ಗೃಹ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಅಮಿತ್ ಶಾ ಅವರು ಪ್ರಸ್ತುತ 11 ಅಕ್ಬರ್ ರಸ್ತೆಯಲ್ಲಿರುವ ಮನೆಯಲ್ಲಿ ವಾಸವಾಗಿದ್ದಾರೆ. ಇನ್ನು ಒಂದು ಅಥವಾ ಎರಡು ತಿಂಗಳಲ್ಲಿ ಬಂಗಲೆಯ ನವೀಕರಣದ ಕಾರ್ಯ ಮುಗಿಯಲಿದ್ದು ನಂತರ ಅಟಲ್ ಬಂಗಲೆಗೆ ಬರಲಿದ್ದಾರೆ.

    2014ರಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೆಹಲಿಯಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ವಾಸವಿದ್ದ ನಾಯಕರು ಮರಣದ ನಂತರ ಆ ಮನೆಯನ್ನು ಸ್ಮಾರಕ ಮಾಡದೇ ಇರುವ ನಿರ್ಧಾರವನ್ನು ಕೈಗೊಂಡಿತ್ತು. ಈ ಕಾರಣಕ್ಕಾಗಿ ಸರ್ಕಾರ ಸ್ಮøತಿ ಸ್ಥಳದ ಸಮೀಪ ವಾಜಪೇಯೆ ಅವರ ನೆನಪಿಗಾಗಿ ‘ಸದೈವ್ ಅಟಲ್’ ಎಂಬ ಹೆಸರಿನಲ್ಲಿ ಸಮಾಧಿ ನಿರ್ಮಾಣ ಮಾಡಲಾಗಿದೆ.

    ಅಮಿತ್ ಶಾ ಸದ್ಯ ಇರುವ ಮನೆ 2.3 ಎಕರೆ ವಿಸ್ತೀರ್ಣದಲ್ಲಿದೆ. 2004ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾದ ಬಳಿಕ ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಕೊನೆಯುಸಿರೆಳೆಯುವವರೆಗೂ ಕೃಷ್ಣ ಮೆನನ್ ರಸ್ತೆಯಲ್ಲಿರುವ 3 ಎಕರೆ ವಿಸ್ತೀರ್ಣದಲ್ಲಿದ್ದ ಬಂಗಲೆಯಲ್ಲಿ ವಾಸವಾಗಿದ್ದರು. ಈ ನಿವಾಸದಲ್ಲಿ 7 ಮಲಗುವ ಕೊಠಡಿಗಳಿದ್ದು 2 ಡ್ರಾಯಿಂಗ್ ರೂಂಗಳಿವೆ. ಗೃಹ ಸಚಿವರಾಗಿರುವ ಅಮಿತ್ ಶಾ ಅವರಿಗೆ ಅವರಿಗೆ ಹೆಚ್ಚಿನ ಭದ್ರತೆಯ ಅಗತ್ಯ ನೀಡಬೇಕಾಗಿರುವ ಕಾರಣ ವಾಜಪೇಯಿ ಅವರಿದ್ದ ಮನೆಗೆ ಸ್ಥಳಾಂತರಿಸಲು ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ನಿರ್ಧರಿಸಿದೆ.

    ವಾಜಪೇಯಿ ಅವರಿಗಿಂತ ಮೊದಲು ಈ ಮನೆಯಲ್ಲಿ ಡಿಎಂಕೆಯ ಮುರಸೋಳಿ ಮಾರನ್ ವಾಸವಾಗಿದ್ದರು. ಆಗ ಇದು 8, ಕೃಷ್ಣ ಮೆನನ್ ಮಾರ್ಗ ಎಂಬ ವಿಳಾಸ ಹೊಂದಿತ್ತು. ಆದರೆ, ವಾಜಪೇಯಿ ಅವರು ಈ ಮನೆಗೆ ಸ್ಥಳಾಂತರಗೊಂಡ ನಂತರದಲ್ಲಿ ಈ ಮನೆಯ ವಿಳಾಸವನ್ನು 6ಎ, ಕೃಷ್ಣ ಮೆನನ್ ಎಂದು ಬದಲಿಸಲಾಗಿತ್ತು.

  • ಟಾಪ್ 10 ಉಗ್ರರ ಲಿಸ್ಟ್ ಪಡೆದ ಅಮಿತ್ ಶಾ

    ಟಾಪ್ 10 ಉಗ್ರರ ಲಿಸ್ಟ್ ಪಡೆದ ಅಮಿತ್ ಶಾ

    ನವದೆಹಲಿ: ಕಾಶ್ಮೀರದ ಕಣಿವೆ ಪ್ರದೇಶದಲ್ಲಿರುವ ಟಾಪ್ 10 ಉಗ್ರ ಪಟ್ಟಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಪಡೆದಿದ್ದಾರೆ.

    ಗೃಹ ಸಚಿವ ಖಾತೆಯ ಜವಾಬ್ದಾರಿ ಹೊತ್ತ ಅಮಿತ್ ಶಾ ಅವರು ದೇಶದ ಭದ್ರತೆಯ ಕುರಿತು ಅನೇಕ ತಂತ್ರಗಳನ್ನು ರೂಪಿಸಲು ಮುಂದಾಗಿದ್ದಾರೆ. ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿದ ಅವರು, ಮೋಸ್ಟ್ ವಾಂಟೆಡ್ 10 ಭಯೋತ್ಪಾದಕರ ಪಟ್ಟಿಯನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ.

    ಈ ಪಟ್ಟಿಯಲ್ಲಿ ರಿಯಾಜ್ ನಾಯ್ಕು, ಒಸಾಮಾ ಮತ್ತು ಅಶ್ರಫ್ ಮೌಲ್ವಿ ಸೇರಿದಂತೆ ಪ್ರಮುಖ ಭಯೋತ್ಪಾದಕರಿದ್ದಾರೆ. ಈ ಭಯೋತ್ಪಾದಕರೇ ಭದ್ರತಾ ಏಜೆನ್ಸಿಗಳ ಮುಂದಿನ ಪ್ರಮುಖ ಟಾರ್ಗೆಟ್ ಆಗಿದೆ. ಕಾಶ್ಮೀರದ ಕಣಿವೆ ಪ್ರದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿರುವ ಈ ಉಗ್ರರನ್ನು ಮಟ್ಟ ಹಾಕಲು ಸಕಲ ಸಿದ್ಧತೆ ನಡೆದಿದೆ ಎನ್ನಲಾಗಿದೆ.

    ಪಟ್ಟಿಯಲ್ಲಿ ಯಾರಿದ್ದಾರೆ?:
    ರಿಯಾಜ್ ನಾಯ್ಕು ಅಲಿಯಾಸ್ ಮೊಹಮ್ಮದ್ ಬಿನ್ ಕಾಸಿಮ್ ಟಾಪ್ ಒನ್ ಉಗ್ರ. ರಿಯಾಜ್ 2010ರಿಂದಲೂ ಕಾಶ್ಮೀರದ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದಾನೆ. ಇತ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು, ರಿಯಾಜ್ ಬಂಡಿಪೊರ್ ಕಮಾಂಡರ್ ಆಗಿದ್ದಾನೆ.

    ವಾಸಿಂ ಅಹ್ಮದ್ ಅಕಾ ಒಸಾಮಾ ಮತ್ತೊಬ್ಬ ಪ್ರಮುಖ ಉಗ್ರ. ಇವನು ಲಷ್ಕರ್-ಇ-ತೊಯ್ಬಾದ ಭಯೋತ್ಪಾದಕನಾಗಿದ್ದು, ಇತನು ಶೋಪಿಯನ್‍ನ ಜಿಲ್ಲಾ ಕಮಾಂಡರ್ ಆಗಿ ದಾಳಿಗಳನ್ನು ನಡೆಸುತ್ತಿದ್ದಾನೆ.

    ಮೊಹಮ್ಮದ್ ಅಶ್ರಫ್ ಖಾನ್ ಅಲಿಯಾಸ್ ಅಶ್ರಫ್ ಮೌಲ್ವಿ ಮೂರನೇ ಪ್ರಮುಖ ಭಯೋತ್ಪಾದಕ. ಅಶ್ರಫ್ ಮೌಲ್ವಿ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ ಜೊತೆಗೆ ಗುರುತಿಸಿಕೊಂಡಿದ್ದು, ಅನಂತ್‍ನಾಗ್ ಪ್ರದೇಶದಲ್ಲಿ ಭಯೋತ್ಪಾದನೆ ನಡೆಸುತ್ತಿದ್ದಾನೆ.

    ಟಾಪ್ 10 ಉಗ್ರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವುದು ಮೆಹ್ರಾಜ್-ಉದ್-ದಿನ್. ಇತನು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆ ಗುರುತಿಸಿಕೊಂಡಿದ್ದಾನೆ. ಮೆಹ್ರಾಜ್-ಉದ್-ದಿನ್ ಬಾರಾಮುಲ್ಲಾದಲ್ಲಿ ಹಿಜ್ಬುಲ್ ಮುಜಾಹಿದೀನ್ ಜಿಲ್ಲೆಯ ಕಮಾಂಡರ್ ಆಗಿದ್ದಾನೆ.

    ಡಾ. ಸೈಫುಲ್ಲಾ ಅಲಿಯಾಸ್ ಸೈಫುಲ್ಲಾ ಮಿರ್ ಅಲಿಯಾಸ್ ಡಾ. ಸೈಫ್ ಟಾಪ್ 5 ಉಗ್ರ. ಡಾ. ಸೈಫ್ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಸದಸ್ಯನಾಗಿದ್ದು, ಶ್ರೀನಗರದಲ್ಲಿದ್ದಾನೆ. ಇತನು ಭದ್ರತಾ ಸಿಬ್ಬಂದಿ ಹುಡುಕುತ್ತಿರುವ ಉಗ್ರರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾನೆ.

    ಅರ್ಷದ್ ಉಲ್ ಹಕ್ ಟಾಪ್ 6 ಉಗ್ರ. ಇವನು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಪುಲ್ವಾಮಾ ಜಿಲ್ಲಾ ಕಮಾಂಡರ್. ಭದ್ರತಾ ಪಡೆಯ ಹಿಟ್ ಲಿಸ್ಟ್ ನಲ್ಲಿ ಅರ್ಷದ್ ಉಲ್ ಹಕ್ ಹೆಸರು ಸೇರ್ಪಡೆಗೊಂಡಿದ್ದು, ಅವನನ್ನು ಶೀಘ್ರದಲ್ಲೇ ಮಟ್ಟಹಾಕಲು ಪ್ಲಾನ್ ರೂಪಿಸಲಾಗಿದೆಯಂತೆ.

    ಹಫಿಜ್ ಒಮರ್ ಪಾಕಿಸ್ತಾನ ಮೂಲದ ಉಗ್ರ. ಟಾಪ್ 10 ಹಿಸ್ಟ್ ಲಿಸ್ಟ್ ಉಗ್ರರ ಪಟ್ಟಿಯಲ್ಲಿ ಈತನಿಗೆ 7ನೇ ಸ್ಥಾನ ಸಿಕ್ಕಿದೆ. ಹಫಿಜ್ ಒಮರ್ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಸದಸ್ಯನಾಗಿದ್ದು, ಪಾಕ್ ಆಕ್ರಮಿತ ಕಾಶ್ಮೀರದ ಬಾಲಕೋಟ್ ಶಿಬಿರದಲ್ಲಿ ತರಬೇತಿ ಪಡೆದಿದ್ದಾನೆ. ಸದ್ಯ ಭಯೋತ್ಪಾದಕ ಕಾರ್ಯಾಚರಣೆಯ ಕಮಾಂಡರ್ ಗಳ ಮುಖ್ಯಸ್ಥನಾಗಿದ್ದಾನೆ.

    ಜಹೀದ್ ಶೇಖ್ ಅಲಿಯಾಸ್ ಓಮರ್ ಅಫ್ಘಾನಿ ಟಾಪ್ 8 ಉಗ್ರ. ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಸದಸ್ಯನಾಗಿದ್ದು, ಕಾಶ್ಮೀರದಲ್ಲಿ ತಾಲಿಬಾನ್ ಉಗ್ರಗಾಮಿಗಳೊಂದಿಗೆ ತರಬೇತಿ ಪಡೆದಿದ್ದ. ಇವನ ಬಂಧನಕ್ಕಾಗಿ ಭದ್ರತಾ ಏಜೆನ್ಸಿಗಳು ಬಲೆ ಬೀಸಿದ್ದಾರೆ.

    ಜಾವೆದ್ ಮಾತು ಅಲಿಯಾಸ್ ಫೈಸಲ್ ಅಲಿಯಾಸ್ ಷಕೀಬ್ ಅಲಿಯಾಸ್ ಮುಸಾಬ್ ಟಾಪ್ 9 ಉಗ್ರ. ಅಲ್-ಬ್ರದರ್ ಭಯೋತ್ಪಾದಕ ಸಂಘಟನೆಯ ಸದಸ್ಯನಾಗಿದ್ದು, ಉತ್ತರ ಕಾಶ್ಮೀರದ ಅಲ್ ಬದಾರ್ನ ವಿಭಾಗೀಯ ಕಮಾಂಡರ್ ಆಗಿದ್ದಾನೆ.

    ಎಝಾಝ್ ಅಹ್ಮದ್ ಮಲಿಕ್ ಭದ್ರತಾ ಪಡೆಯ ಹಿಟ್ ಪಟ್ಟಿಯ 10ನೇ ಉಗ್ರ. ಇತ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಸದಸ್ಯನಾಗಿದ್ದು, ಇತ್ತೀಚೆಗೆ ಕುಪ್ವಾರಾ ಜಿಲ್ಲಾ ಕಮಾಂಡರ್ ಆಗಿ ನೇಮಕಗೊಂಡಿದ್ದಾನೆ.

    ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಭದ್ರತಾ ಪಡೆಯು ಈವರೆಗೆ 25 ವಿದೇಶಿ ಮತ್ತು 76 ಕಾಶ್ಮೀರಿ ಭಯೋತ್ಪಾದಕರನ್ನು ಸೇರಿದಂತೆ 101 ಉಗ್ರರನ್ನು ಹತ್ಯೆ ಮಾಡಿದೆ. ಈ ಉಗ್ರರು ಜೈಷ್-ಎ-ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್, ಎಲ್.ಟಿ.ಟಿ ಮತ್ತು ಅಲ್-ಬದ್ರ್ ಸೇರಿದವರಾಗಿದ್ದಾರೆ.

  • ಪ್ರಚಾರದ ವೇಳೆ ಕೇಜ್ರಿವಾಲ್ ಹೇಳಿದ ಭವಿಷ್ಯ ನಿಜವಾಯ್ತು

    ಪ್ರಚಾರದ ವೇಳೆ ಕೇಜ್ರಿವಾಲ್ ಹೇಳಿದ ಭವಿಷ್ಯ ನಿಜವಾಯ್ತು

    ಬೆಂಗಳೂರು: ಲೋಕಸಭಾ ಚುನಾವಣಾ ಪ್ರಚಾರದ ವೇಳೆ ದೆಹಲಿಯ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ನುಡಿದಿದ್ದ ಭವಿಷ್ಯ ನಿಜವಾಗಿದೆ.

    ಎನ್‍ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಕೆಳಗೆ ಗೃಹ ಸಚಿವರಾಗಿ ಅಮಿತ್ ಶಾ ನೇಮಕವಾಗುತ್ತಾರೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದರು. ಇಂದು ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿದ್ದು ಅಮಿತ್ ಶಾ ಅವರಿಗೆ ಗೃಹ ಖಾತೆಯನ್ನು ನೀಡಲಾಗಿದೆ. ಇದನ್ನೂ ಓದಿ: ಅಮಿತ್ ಶಾಗೆ ಗೃಹ, ಸೀತಾರಾಮನ್‍ಗೆ ಹಣಕಾಸು – ಮೋದಿ ಸಂಪುಟದಲ್ಲಿ ಯಾರಿಗೆ ಯಾವ ಖಾತೆ? 

    ದಕ್ಷಿಣ ಗೋವಾದ ಮರ್ಮಗೋವಾದಲ್ಲಿ ಏಪ್ರಿಲ್ 14ರಂದು ನಡೆದ ಆಪ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಅವರು, ದೇಶದಲ್ಲಿ ಭಯಾನಕ ಆಟ ನಡೆಯುತ್ತಿದೆ. ನೀವು ಮತದಾನ ಮಾಡುವಾಗ ಈ ವಿಚಾರ ನಿಮಗೆ ತಿಳಿದಿರಲಿ. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗೃಹ ಸಚಿವರಾಗುತ್ತಾರೆ ಅಂತ ಎಲ್ಲರೂ ಹೇಳುತ್ತಿದ್ದಾರೆ. ಒಂದು ವೇಳೆ ಅಮಿತ್ ಶಾ ಅವರು ಗೃಹ ಸಚಿವರಾದರೆ ದೇಶದಲ್ಲಿ ಏನೆಲ್ಲ ಆಗಬಹುದು ಎಂದು ನೀವೇ ಯೋಚನೆ ಮಾಡಿ ಎಂದು ಕಾರ್ಯಕರ್ತರಿಗೆ ಹೇಳಿದ್ದರು.

    ಪಶ್ಚಿಮ ಬಂಗಾಳದ ರಾಯ್‍ಗಂಜ್‍ನಲ್ಲಿ ನಡೆದಿದ್ದ ಬಿಜೆಪಿ ಪ್ರಚಾರದ ವೇಳೆ ಮಾತನಾಡಿದ್ದ ಅಮಿತ್ ಶಾ ಅವರು, ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್ ಸಿ) ನಡೆಸಲಾಗುವುದು. ದೇಶದ ಒಳಗಡೆ ನುಸುಳಿರುವ ಪ್ರತಿಯೊಬ್ಬರನ್ನೂ ಹೊರಕ್ಕೆ ದಬ್ಬುತ್ತೇವೆ. ಆದರೆ ಪಶ್ಚಿಮ ಬಂಗಾಳದಲ್ಲಿರುವ ವಲಸಿಗರು ಚಿಂತಿಸಬೇಕಿಲ್ಲ. ಬೌದ್ಧರು, ಹಿಂದೂಗಳು ಮತ್ತು ಸಿಖ್ಖರನ್ನು ಬಿಟ್ಟು ಉಳಿದೆಲ್ಲ ವಲಸಿಗರನ್ನು ದೇಶದಿಂದ ಹೊರಗೆ ಹಾಕಲಾಗುವುದು ಎಂದು ಹೇಳಿದ್ದಾರೆ. ದೇಶದಲ್ಲಿ ವಾಸಿಸುವ ಕ್ರಿಶ್ಚಿಯನ್, ಮುಸ್ಲಿಂ, ಪಾರ್ಸಿ, ಜೈನ್ ಧರ್ಮದವರು ಭಾರತದ ಒಳಗೆ ನುಸುಳಿ ಬಂದವರು ಎಂದು ಅಮಿತ್ ಶಾ ಭಾವಿಸಿದ್ದಾರೆ. ಇದು ಭಾರೀ ಅಪಾಯಕಾರಿ ಹೇಳಿಕೆಯಾಗಿದೆ ಎಂದು ವಾಗ್ದಾಳಿ ನಡೆಸಿದ್ದರು.

    ಗೋವಾದಲ್ಲಿ 15 ಲಕ್ಷ ಜನರು ಮತ್ತು ಸುಮಾರು ಶೇ.40 ರಷ್ಟು ಮಂದಿ ಅಲ್ಪಸಂಖ್ಯಾತರಿದ್ದಾರೆ. ಅಮಿತ್ ಶಾ ಅವರು ಗೋವಾದಲ್ಲಿ ಹೇಗೆ ರಾಷ್ಟ್ರೀಯ ಪೌರತ್ವ ನೋಂದಣಿ ಅಳವಡಿಸಿಕೊಳ್ಳುತ್ತಾರೆ? ಆರು ಲಕ್ಷ ಜನರು ಏನು ಮಾಡಬೇಕು? ನೋಂದಣಿ ಪ್ರಕ್ರಿಯೆಯಿಂದ ಅಮಿತ್ ಶಾ ಅವರು ಗಲಭೆ ಸೃಷ್ಟಿಸುತ್ತಾರಾ ಎಂದು ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದರು.

    ದೆಹಲಿಯಲ್ಲಿ ಗುಜರಾತ್ ಮಾಡೆಲ್ ರಿಪೀಟ್ ಆಗಿದ್ದು, ನಂಬರ್ 1 ಸ್ಥಾನದಲ್ಲಿ ಮೋದಿಯವರು ಇದ್ದರೆ, ನಂಬರ್ 2 ಸ್ಥಾನದಲ್ಲಿ ಅಮಿತ್ ಶಾ ಇದ್ದಾರೆ. ಈ ಮೂಲಕ 2002ರ ಗುಜರಾತ್ ಸೀನ್ 2019ಕ್ಕೆ ದೆಹಲಿಯಲ್ಲಿ ರಿಪೀಟ್ ಆಗಿದ್ದು ರಾಜನಾಥ್ ಸಿಂಗ್ ಅವರು 3ನೇ ಸ್ಥಾನ ಪಡೆದಿದ್ದಾರೆ.

    ಅಮಿತ್ ಶಾ ಅವರಿಗೆ ಗೃಹ ಖಾತೆಯನ್ನು ಮೋದಿ ನೀಡಿದ್ದಾರೆ. ಈ ಹಿಂದೆ ಮೋದಿಯವರು ಗುಜರಾತ್ ನಲ್ಲಿ ಸಿಎಂ ಆಗಿದ್ದಾಗ ಅಮಿತ್ ಶಾ ಗೃಹಸಚಿವರಾಗಿದ್ದರು. ಕರ್ನಾಟಕದಿಂದ ಮಂತ್ರಿಯಾದ ನಿರ್ಮಲಾ ಸೀತಾರಾಮನ್ ಅವರಿಗೆ ಬಂಪರ್ ಆಫರ್ ಸಿಕ್ಕಿದ್ದು, ಅರುಣ್ ಜೇಟ್ಲಿ ನಿರ್ವಹಿಸುತ್ತಿದ್ದ ಹಣಕಾಸು ಖಾತೆ ದೊರಕಿದೆ. ಸೀತಾರಾಮನ್ ಅವರು ನಿರ್ವಹಿಸುತ್ತಿದ್ದ ರಕ್ಷಣಾ ಖಾತೆ ಈ ಬಾರಿ ರಾಜನಾಥ್ ಸಿಂಗ್ ಪಾಲಾಗಿದೆ.

  • ಮೋದಿ ಪ್ರಚಂಡ ಗೆಲುವಿನ ಹಿಂದಿನ ಶಕ್ತಿ ಅಮಿತ್ ಶಾಗೆ ಭರ್ಜರಿ ಗಿಫ್ಟ್

    ಮೋದಿ ಪ್ರಚಂಡ ಗೆಲುವಿನ ಹಿಂದಿನ ಶಕ್ತಿ ಅಮಿತ್ ಶಾಗೆ ಭರ್ಜರಿ ಗಿಫ್ಟ್

    ನವದೆಹಲಿ: 2019 ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಹಗಲಿರುಳು ಶ್ರಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಕೇಂದ್ರದ ಕ್ಯಾಬಿನೆಟ್‍ನಲ್ಲಿ ಪ್ರಮುಖ ಸ್ಥಾನ ಸಿಗುವ ಸಾಧ್ಯತೆ ಇದೆ.

    ಚುನಾವಣಾ ರಣ ಕಣದಲ್ಲಿ ನಿರಂತರವಾಗಿ ದುಡಿದಿದ್ದ ಅಮಿತ್ ಶಾ ಅವರು, ಬಿಜೆಪಿ 2ನೇ ಬಾರಿಗೆ ಅಧಿಕಾರ ಗಳಿಸಲು ಪ್ರಮುಖ ಕಾರಣರಾಗಿದ್ದಾರೆ. ಪರಿಣಾಮ ಈ ಬಾರಿಯ ಸರ್ಕಾರದಲ್ಲಿ ಅವರಿಗೆ ಗೃಹ ಖಾತೆ ಲಭಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭಿಸಿದೆ.

    ಅಮಿತ್ ಶಾ ಅವರು ಮೋದಿ ಗೆಲುವಿನ ಹಿಂದಿನ ಚಾಣಕ್ಯ ಎಂದೇ ಕರೆಯಿಸಿಕೊಂಡಿದ್ದು, ಚುನಾವಣಾ ಪ್ರಚಾರಕ್ಕಾಗಿ ಸುಮಾರು 1 ಲಕ್ಷ ಕಿಮೀ ಪ್ರಯಾಣವನ್ನು ನಡೆಸಿದ್ದರು. 54 ವರ್ಷದ ಶಾ ಅವರು ಮೋದಿ ಅವರು ದೇಶದ ಜನರಲ್ಲಿ ಹೊಂದಿರುವ ವರ್ಚಸ್ಸನ್ನು ಉತ್ತಮವಾಗಿ ಬಳಿಸಿಕೊಂಡಿದ್ದರು. ಅದರಲ್ಲೂ ಗೆಲುವಿನಲ್ಲಿ ಅವರು ಪ್ರಮುಖ ರಣತಂತ್ರ ರಚಿಸಿದ್ದರು. ಸುಮಾರು 1 ವರ್ಷದ ಹಿಂದೆಯೇ ರಚಿಸಿದ್ದ ಪ್ರಚಾರ ತಂತ್ರಗಳನ್ನು ಯಶಸ್ವಿಯಾಗಿ ಜಾರಿ ಮಾಡಿದ್ದರು.

    ಬಿಜೆಪಿ ಅಧ್ಯಕ್ಷರ ಅವಧಿ 3 ವರ್ಷವಿದ್ದು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾ ಅವಧಿಯನ್ನು ವಿಸ್ತರಿಸಲಾಗಿತ್ತು. ಈಗ ಮುಂದಿನ ಅಧ್ಯಕ್ಷ ಯಾರಾಗುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.

    ಇತ್ತ ಗುಜರಾತ್‍ನ ಗಾಂಧಿನಗರದಿಂದ ಸ್ಪರ್ಧೆ ಮಾಡಿದ್ದ ಅಮಿತ್ ಶಾ ಅವರು 5 ಲಕ್ಷ ಮತಗಳ ಅಂತರಗಳ ಗೆಲುವು ಪಡೆದಿದ್ದಾರೆ. ಆ ಮೂಲಕ ಇದೇ ಕ್ಷೇತ್ರದಲ್ಲಿ ಈ ಹಿಂದೆ ಸ್ಪರ್ಧೆ ನಡೆಸಿದ್ದ ಎಲ್‍ಕೆ ಆಡ್ವಾಣಿ ಅವರ (4.83 ಲಕ್ಷ ಮತ) ದಾಖಲೆಗಳನ್ನು ಮುರಿದಿದ್ದಾರೆ. ಅಮಿತ್ ಶಾ ಒಟ್ಟಾರೆ 8.74 ಲಕ್ಷ ಮತಗಳನ್ನು ಗಳಿಸಿದ್ದಾರೆ. ಇವರ ಪ್ರತಿ ಸ್ಪರ್ಧಿ ಚತುರ ಸಿನ್ಹಾ ಅವರು 3.30 ಲಕ್ಷ ಮತ ಪಡೆದಿದ್ದಾರೆ. 1989ರಿಂದಲೂ ಗಾಂಧಿ ನಗರ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. 1996ರಲ್ಲಿ ವಾಜಪೇಯಿ ಅವರು ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಪಡೆದಿದ್ದರು.

  • ಸೋನಿಯಾಗೆ ಎಂಬಿಪಿ ನಕಲಿ ಪತ್ರ: ಮತ್ತೋರ್ವ ಪತ್ರಕರ್ತ ಅರೆಸ್ಟ್

    ಸೋನಿಯಾಗೆ ಎಂಬಿಪಿ ನಕಲಿ ಪತ್ರ: ಮತ್ತೋರ್ವ ಪತ್ರಕರ್ತ ಅರೆಸ್ಟ್

    ಬೆಂಗಳೂರು: ಗೃಹ ಸಚಿವ ಎಂ.ಬಿ.ಪಾಟೀಲ್ ಲೆಟರ್ ಹೆಡ್ ನಕಲಿ ಮಾಡಿದ ಪ್ರಕರಣ ಸಂಬಂಧ ಪತ್ರಕರ್ತರೊಬ್ಬರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

    ಹಿರಿಯ ಪತ್ರಕರ್ತ ಹೇಮಂತ್ ಕುಮಾರ್ ಬಂಧಿತ ಆರೋಪಿ. ಈ ಪ್ರಕರಣದ ಸಂಬಂಧ ಈಗಾಗಲೇ ಪೋಸ್ಟ್ ಕಾರ್ಡ್ ಪತ್ರಿಕೆ ಸಂಪಾದಕ ಮಹೇಶ್ ವಿಕ್ರಮ್ ಹೆಗ್ಡೆಯ ಬಂಧನವಾಗಿತ್ತು. ವಿಚಾರಣೆ ವೇಳೆ ಹೇಮಂತ್ ಕುಮಾರ್ ಸಲಹೆಯಂತೆ ನಕಲಿ ಲೆಡರ್ ಹೆಡ್ ರಚಿಸಲಾಯಿತು ಎಂದು ಮಹೇಶ್ ಹೆಗ್ಡೆ ತಿಳಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಹೇಮಂತ್ ಕುಮಾರ್ ಬಂಧನವಾಗಿದೆ.

    ಹೇಮಂತ್ ಕುಮಾರ್ ಬಂಧನವನ್ನು ಬಿಜೆಪಿ ಖಂಡಿಸಿದ್ದು, ಶಾಸಕ ಸುರೇಶ್ ಕುಮಾರ್, ಬಿಜೆಪಿ ಮುಖಂಡ ಅಶ್ವಥ್ ನಾರಾಯಣ ಡಿಜಿಪಿ ಕಚೇರಿಗೆ ಭೇಟಿ ನೀಡಿ ದೂರು ನೀಡಿದ್ದಾರೆ.

    ಶಾಸಕ ಸುರೇಶ್ ಕುಮಾರ್ ಅವರು, ಒಡೆಯುವ-ಹೊಡೆಯುವ ಮಾತುಗಳನ್ನೇ ಆಡುವ ಬೇಳೂರು ಗೋಪಾಲಕೃಷ್ಣ,  ಪ್ರೊ. ಭಗವಾನ್ ರಂತಹವರನ್ನು ಬಿಟ್ಟು ನನ್ನ ಪತ್ರಕರ್ತ ಗೆಳೆಯ ಹೇಮಂತ್ ಕುಮಾರ್ ಅವರನ್ನು ಬಂಧಿಸಿರುವ ಗೃಹಸಚಿವರ Conditional ಕಾರ್ಯವೈಖರಿಯನ್ನು ಖಂಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಏನಿದು ಪ್ರಕರಣ?:
    ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ ಎನ್ನುವ ರೀತಿಯಲ್ಲಿ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಬಳಿಕ ಈ ಪತ್ರವು ವೈರಲ್ ಆಗಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಪತ್ರವನ್ನು ನಾನು ಬರೆದಿಲ್ಲ. ಯಾರೋ ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿ ಸಚಿವರು ವಿಜಯಪುರದ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು.

    ಈ ಪ್ರಕರಣದ ಹಿನ್ನೆಲೆಯಲ್ಲಿ ಪೋಸ್ಟ್ ಕಾರ್ಡ್ ಪತ್ರಿಕೆ ಸಂಪಾದಕ ಮಹೇಶ್ ವಿಕ್ರಮ್ ಹೆಗ್ಡೆ ಬಂಧನವಾಗಿತ್ತು. ಬಿಜೆಪಿ ಶಾಸಕ ಸಿ.ಟಿ.ರವಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಬಂಧನವನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.

  • ಮತ್ತೆ ಡಿಕೆಶಿ ವಿರುದ್ಧ ಪರೋಕ್ಷ ಸಿಟ್ಟು ಹೊರಹಾಕಿದ ಎಂಬಿಪಿ

    ಮತ್ತೆ ಡಿಕೆಶಿ ವಿರುದ್ಧ ಪರೋಕ್ಷ ಸಿಟ್ಟು ಹೊರಹಾಕಿದ ಎಂಬಿಪಿ

    ವಿಜಯಪುರ: ಗೃಹ ಖಾತೆ ಒಂದು ಪ್ರತಿಷ್ಠೆಯ ಖಾತೆ. ಮುಖ್ಯಮಂತ್ರಿ ಬಿಟ್ಟರೆ ಎರಡನೇ ಸ್ಥಾನದಲ್ಲಿರುವ ಖಾತೆ. ಆದರೆ ನನ್ನ ಹೃದಯದಲ್ಲಿರುವುದು ನೀರು. ಖಾತೆ ಹಂಚಿಕೆ ವಿಚಾರದಲ್ಲಿ ನನಗೂ ಮೋಸವಾಗಿದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಖಾತೆ ಹಂಚಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಖಾತೆ ಹಂಚಿಕೆಯಲ್ಲಿ ನನಗೆ ಮೋಸವಾಯ್ತು (more…)

  • ಐಟಿ ದಾಳಿ ರಾಜಕೀಯ ಪ್ರೇರಿತ, ಬಿಜೆಪಿ ಮೇಲೆ ಯಾಕಿಲ್ಲ: ಎಂಬಿ ಪಾಟೀಲ್

    ಐಟಿ ದಾಳಿ ರಾಜಕೀಯ ಪ್ರೇರಿತ, ಬಿಜೆಪಿ ಮೇಲೆ ಯಾಕಿಲ್ಲ: ಎಂಬಿ ಪಾಟೀಲ್

    ಬೆಂಗಳೂರು: ತೆರಿಗೆ ಇಲಾಖೆಗೆ ದಾಳಿ ಮಾಡುವ ಅವಕಾಶ ಇದೆ. ಆದರೆ ಸಮಯ ಸೂಕ್ತವಲ್ಲ ಎಂದು ಹೇಳುವ ಮೂಲಕ ಐಟಿ ರೇಡ್ ಬಗ್ಗೆ ಗೃಹ ಸಚಿವ ಎಂ.ಬಿ ಪಾಟೀಲ್ ಆಕ್ರೋಶ ಹೊರಹಾಕಿದ್ದಾರೆ.

    ಐಟಿ ಅಧಿಕಾರಿಗಳಿಗೆ ದಾಳಿ ಮಾಡುವ ಅವಕಾಶ ಇದೆ. ಆದರೆ ಚುನಾವಣಾ ಹೊಸ್ತಿಲಲ್ಲಿ, ನೀತಿ ಸಂಹಿತೆ ಬಂದಿದೆ, ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಐಟಿ ರೇಡ್ ಮಾಡುತ್ತಿರುವುದು ಉದ್ದೇಶಪೂರ್ವಕ, ರಾಜಕೀಯ ಪ್ರೇರಿತ ಎಂದು ಗೊತ್ತಾಗುತ್ತೆ. ಈ ಸಂದರ್ಭದಲ್ಲಿ ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್ – ಜೆಡಿಎಸ್ ಸಚಿವರ, ಶಾಸಕರ ಮೇಲೆ ದಾಳಿ ಸರಿಯಲ್ಲ ಎಂದು ಎಂಬಿಪಿ ಹೇಳಿದ್ದಾರೆ.

    ನನಗೆ ಐಟಿ ದಾಳಿ ನಡೆಯುವುದರ ಬಗ್ಗೆ ಮಾಹಿತಿ ಇಲ್ಲ. ನಾನು ಐಟಿ ಇಲಾಖೆಯಲ್ಲಿ ಇಲ್ಲ. ಸಿಎಂಗೆ ಯಾರೋ ಮಾಹಿತಿ ನೀಡಿರಬಹುದು. ಕಾಂಗ್ರೆಸ್ ಮೇಲೆ ಐಟಿ ದಾಳಿ ಆಗುತ್ತಾ ಎಂಬ ವಿಷಯ ನನಗೆ ಗೊತ್ತಿಲ್ಲ. ನಮ್ಮ ಕೆಪಿಸಿಸಿ ಅಧ್ಯಕ್ಷರು, ನಾವು ಸಮ್ಮಿಶ್ರ ಸರ್ಕಾರದಲ್ಲಿ ಇದ್ದೀವಿ. ಜೆಡಿಎಸ್ ಸಚಿವರಾಗಲಿ, ಸಂಸದನಾಗಲಿ, ಎಂಎಲ್‍ಸಿ ಆಗಲಿ ಯಾರ ಮೇಲೆ ಆಗಲಿ ನಾವು ಇದನ್ನು ಖಂಡಿಸುತ್ತೇವೆ ಎಂದರು.

    ದಾಳಿ ಕೇವಲ ಕಾಂಗ್ರೆಸ್ – ಜೆಡಿಎಸ್ ಮಾತ್ರವಲ್ಲ, ಬಿಜೆಪಿ ಅವರ ಮೇಲೂ ದಾಳಿ ಮಾಡಬಹುದಿತ್ತು. ಈಗ ಚುನಾವಣಾ ಸಮಯದಲ್ಲಿ ಐಟಿ ಇಲಾಖೆ ಕೀಳು ಮಟ್ಟಕ್ಕೆ ಕುಸಿದಿದೆ. ಕಾಂಗ್ರೆಸ್- ಜೆಡಿಎಸ್ ಸಚಿವರ ಬಗ್ಗೆ ಜನರಿಗೆ ತಪ್ಪು ಸಂದೇಶ ಹೋಗಲಿ ಎಂದು ಈ ರೀತಿ ಮಾಡಿದ್ದಾರೆ ಎಂದು ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

  • ನನಗೆ ಕಾಮನ್ ಸೆನ್ಸ್ ಇಲ್ಲ, ಕಲಿಸಿದ್ರೆ ಕಲಿಯುತ್ತೇನೆ: ಎಂಬಿಪಿಗೆ ಬಿಎಸ್‍ವೈ ತಿರುಗೇಟು

    ನನಗೆ ಕಾಮನ್ ಸೆನ್ಸ್ ಇಲ್ಲ, ಕಲಿಸಿದ್ರೆ ಕಲಿಯುತ್ತೇನೆ: ಎಂಬಿಪಿಗೆ ಬಿಎಸ್‍ವೈ ತಿರುಗೇಟು

    ಬೆಳಗಾವಿ (ಚಿಕ್ಕೋಡಿ): ನನಗೆ ಕಾಮನ್ ಸೆನ್ಸ್ ಇಲ್ಲ. ಅವರು ಕಲಿಸಿದರೆ ನಾನು ಕಲಿಯುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಗೃಹ ಸಚಿವ ಎಂ.ಬಿ.ಪಾಟೀಲ್ ಅವರಿಗೆ ತಿರುಗೇಟು ನೀಡಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಮಾತನಾಡಿದ ಅವರು, ಗೃಹ ಸಚಿವ ಎಂ.ಬಿ.ಪಾಟೀಲ್ ಬುದ್ಧಿವಂತರು. ಅವರಿಗೆ ಕಾಮನ್ ಸೆನ್ಸ್ ಇದೆ. ಸಚಿವರು ಟೀಚರ್ ಆಗಿ ಬಂದು ನನಗೆ ಪಾಠ ಮಾಡಿದರೆ ಕಲಿತುಕೊಳ್ಳಲು ಪ್ರಯತ್ನಿಸುತ್ತೇನೆ. ಅವರಿಂದ ಕಲಿಯುವುದು ಬಹಳಷ್ಟಿದೆ. ಕಲಿಸಿದರೆ ಕಲಿಯೋಣ ತೊಂದರೆ ಏನು ಇಲ್ಲ ಎಂದು ವ್ಯಂಗ್ಯವಾಡಿದರು.

    ಚಿಕ್ಕೋಡಿ ಕ್ಷೇತ್ರದಿಂದ ಬಿಜೆಪಿಯ ಯಾವ ಅಭ್ಯರ್ಥಿ ಕಣಕ್ಕೆ ಇಳಿಯುತ್ತಾರೆ ಎಂದು ಮಾಧ್ಯಮಗಳು ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾವುದೇ ಅಭ್ಯರ್ಥಿಯನ್ನು ಆಯ್ಕೆ ಮಾಡಲ್ಲ. ಇದು ಹೈಕಮಾಂಡ್‍ಗೆ ಬಿಟ್ಟ ನಿರ್ಧಾರವಾಗಿದೆ. ಪಕ್ಷದ ರಾಷ್ಟ್ರೀಯ ನಾಯಕರು ರಾಜ್ಯದ 28 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ. ಅಂತಿಮ ತೀರ್ಮಾನ ದೆಹಲಿಯಲ್ಲೇ ಆಗುತ್ತದೆ ಎಂದು ಹೇಳಿದರು.

    ಚಿಕ್ಕೋಡಿ ತಾಲೂಕಿನ ಚಂದೂರು ಗ್ರಾಮದ ಯೋಧ ಪ್ರವೀಣ ಹುತಾತ್ಮರಾಗಿದ್ದಾರೆ. ಯೋಧ ಪ್ರವೀಣ ಅವರ ಕುಟುಂಬಸ್ಥರಿಗೆ ಸ್ವಾಂತನ ಹೇಳಲು ಚಂದೂರಿಗೆ ಹೋಗುತ್ತಿರುವೆ. ಜೊತೆಗೆ ಚಿಕ್ಕೋಡಿಯಲ್ಲಿ ಆಯೋಜಿಸಿದ್ದ ಮೆರವಣಿಯನ್ನು ರದ್ದು ಮಾಡಲಾಗಿದ್ದು, ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv